ಖಾಸಗಿ ದೂರವಾಣಿ ಸಂಸ್ಥೆಗಳು ಗ್ರಾಹಕರನ್ನು ಸೆಳೆಯಲು ವಿವಿಧ ಕಸರತ್ತು ನಡೆಸುತ್ತಿರುವ ಉದಾಹರಣೆಗಳು ನಮ್ಮ ಮುಂದಿರುವಾಗಲೇ, ಎರಡು ಸರ್ಕಾರಿ ದೂರವಾಣಿ ಸಂಸ್ಥೆಗಳ ಆದಾಯ ಸ್ಥಿತಿ ತೀರಾ ಸಂಕಷ್ಟಕ್ಕೆ ಸಿಲುಕಿದ್ದು, ಇದೀಗ ಹಣಕಾಸು ನೆರವಿಗಾಗಿ ಕೈಚಾಚುವಂತೆ ಮಾಡಿದೆ.
ಈ ವಿಚಾರವನ್ನು ಬುಧವಾರ ಲೋಕಸಭೆಯಲ್ಲಿ ತಿಳಿಸಿದ ದೂರಸಂಪರ್ಕ ಖಾತೆ ರಾಜ್ಯ ಸಚಿವ ಮಿಲಿಂದ್ ಡಿಯೋರಾ, 2009-10 ನೇ ಸಾಲಿನಲ್ಲಿ ಭಾರತ ಸಂಚಾರ ನಿಗಮ (ಬಿಎಸ್ಸೆನ್ನೆಲ್) 1,823 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದರೆ, ಮಹಾನಗರ ಟೆಲಿಫೋನ್ ನಿಗಮ (ಎಂಟಿಎನ್ನೆಲ್) 2,611 ಕೋಟಿ ನಷ್ಟ ಅನುಭವಿಸಿರುವುದಾಗಿ ತಿಳಿಸಿದರು.
ಎರಡು ದೂರವಾಣಿ ಸಂಸ್ಥೆಗಳನ್ನು ವಿಲೀನಗೊಳಿಸುವುದು ಸೇರಿದಂತೆ ಸಂಸ್ಥೆಯ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಈಗಾಗಲೇ ಉಭಯ ಸಂಸ್ಥೆಗಳು ಸಲ್ಲಿಸಿರುವ ಹಲವಾರು ಪ್ರಸ್ತಾವನೆಗಳು ಪರಿಶೀಲನೆಯಲ್ಲಿವೆ. ಇದಲ್ಲದೆ ನಷ್ಟ ಅನುಭವಿಸುತ್ತಿರುವ ಭಾರತೀಯ ದೂರವಾಣಿ ಕೈಗಾರಿಕಾ ಸಂಸ್ಥೆ (ಐಟಿಐ)ಯನ್ನು ಬಿಎಸ್ಸೆನ್ನೆಲ್ ಜೊತೆ ವಿಲೀನಗೊಳಿಸುವ ಪ್ರಸ್ತಾಪವೂ ಇದೆ ಎಂದು ಅವರು ಹೇಳಿದ್ದಾರೆ.
ಬೃಹತ್ ಖಾಸಗಿ ದೂರವಾಣಿ ಸಂಸ್ಥೆಗಳು ಅತೀ ಹೆಚ್ಚು ಗ್ರಾಹಕರನ್ನು ಹೊಂದುತ್ತಿರುವ ವೇಳೆಯಲ್ಲಿ ಕೇವಲ ಈ ಎರಡು ಸಂಸ್ಥೆಗಳ ಚಂದಾದಾರರ ಸಂಖ್ಯೆಯಲ್ಲಿ ಅಲ್ಪಪ್ರಮಾಣದ ಏರಿಕೆ ಮಾತ್ರ ಕಂಡುಬಂದಿರುವ ಹಿನ್ನೆಲೆಯಲ್ಲಿ ಡಿಯೋರಾ ಸಂಸತ್ತಿನಲ್ಲಿ ಈ ಹೇಳಿಕೆ ನೀಡಿದ್ದಾರೆ.(ಸಂಗ್ರಹ ವೆಬ್ ದುನಿಯಾದಿಂದ)
No comments:
Post a Comment