ತೆಕ್ಕಾರು ಇದು ನನ್ನ ಊರು. ಬೌಗೋಳಿಕವಾಗಿ ನೇತ್ರಾವತಿ ನದಿ ತಟದಲ್ಲಿದ್ದು ಬೆಳ್ತಂಗಡಿ ತಾಲೂಕ ಆದರು ಕೂಡ ಬಂಟ್ವಾಳ ಮತ್ತು ಪುತ್ತೂರು ತಾಲೂಕಿನ ಗಡಿಗಳಿಗೆ ಹೊದಿಕೊಂದಿರುವಂತ ಊರು ನನ್ನದು.
೧೯೮೦ ರ ಕಾಲದ ನನ್ನೂರಿನ ಸ್ಥಿತಿ ಗತಿ ಬಗ್ಗೆ ಹೇಳುವುದಾದರೆ ಆಗ ಊರಿನ ಹೊಳೆ ದಾಟಿ ೨ ಮೈಲಿ ಮುಂದಕ್ಕೆ ಸಾಗಿ ಉಪ್ಪಿನಂಗಡಿ ಸಮೀಪದ ಪೆರ್ನೆ ನಮ್ಮೂರಿನ ಜನ ಬಸ್ಸು ಹಿಡಿಯುವ ಸ್ತಳ.ಸಾರಿಗೆ ಅನ್ನುವುದು ತಿಳಿಯದ ಊರು, ಅಪ್ಪ ಹೆಗಲ ಮೇಲೆ ಕುರಿಸಿಕೊಂಡೆ ದೋಣಿಯಲ್ಲಿ ಹೊಳೆ ದಾಟುವ ಅಲ್ಪ ನೆನಪು ನನ್ನಲಿ ಈಗಲೂ ಜೀವಂತವಿದೆ. ೧೯೮೪ ರಲ್ಲಿ ನಮ್ಮುರಿನಲ್ಲೊಬ್ಬರು ಬಾಡಿಗೆ ಜೀಪ್ ಹಾಕಿದ್ದರು ಇದೊಂದೇ ಏಕೈಕ ಸಂಪರ್ಕ ಸಾದನವಾಗಿ ನಮ್ಮದೇ ಅನ್ನುವ ರೀತಿಯಲ್ಲಿ ಜನರು ಉಪಯೋಗ ಪಡೆಯಲು ಪ್ರಾರಂಭ ಮಾಡಿದ್ದರು ಅಲ್ಲದೆ ನಮ್ಮುರಿಗರ ಪೇಟೆ ಕೂಡ ಉಪ್ಪಿನಂಗಡಿ ಗೆ ಬದಲಾಯಿತು, ಮುಂದೆ ವರ್ಷಗಳು ಕಳೆದಂತೆ ೨-೩ ಜೀಪ್ ಸಂಪರ್ಕ ಗಳು ಪ್ರಾರಂಭ ಪಡೆದು ನಮ್ಮೂರಿನ ರೋಡಿನಲ್ಲಿ ಏದುಸಿರು ಬಿಡುತ್ತ ಸೇವೆ ಒದಗಿಸುತಿದ್ದವು, ಎಸ್ಟೋ ಸಲ ಜೀಪಲ್ಲಿ ಕುಳಿತಿದ್ದವರು ಇಳಿದು ಜೀಪ ಮುಂದುಡಬೇಕಾದ ಪರಿಸ್ತಿತಿಯು ಇತ್ತು.ಒಂದು ಜೀಪಲ್ಲಿ ೨೦ ರಿಂದ ೨೫ ಜನ ಪ್ರಯಾಣಿಸಬೇಕದ ಅನಿವಾರ್ಯತೆ ಅವತ್ತಿನದ್ದು.ಮಳೆಗಾಲದ ಪ್ರಯಾಣದ ಪರಿಯನ್ನು ವಿವರಿಸಲೇ ಬೇಕಿಲ್ಲ ಅಂದುಕೊಂಡಿರುವೆ. ಮಳೆಗಾಲ ಕಳೆದಂತೆ ಹೊಳೆತ್ತಿದ ನಾಲೆಯಂತಿರುವ ರಸ್ತೆ ಯನ್ನು ಪಂಚಾಯತ್ ಕೊಡುವ ಪುಡಿ ಕಾಸಿನೊಂದಿಗೆ ಊರವರ ಶ್ರಮದಾನದ ಮೂಲಕವಾಗಿ ಮತ್ತೆ ರೆಪೇರಿ ಅಗುತಿದ್ದವು.
ಸಾರಿಗೆ ಸಂಪರ್ಕದಲ್ಲಿ ನನ್ನೂರು ಆ ವರ್ಷಗಳಲ್ಲಿ ಹಾಗಿದ್ದರು ಕೂಡ ಉಳಿದ ಹಲವಾರು ಮೂಲಬೂತ ಸೌಕರ್ಯಗಳನ್ನು ಹೊಂದಿತ್ತು, ಅದೆಂದರೆ ವಿದ್ಯುತ್, ಪ್ರಾಥಮಿಕ ಶಾಲೆ, ವ್ಯವಸಾಯ ಸೇವಾ ಸಹಕಾರಿ ಸಂಘ,ಪಡಿತರ ಅಂಗಡಿ,ಯುವಕ ಮಂಡಲ, ಮಹಿಳ ಮಂಡಲ ಅಂತಹ ಆ ಕಾಲದಲ್ಲಿ ನೈಜ ಸಾಮಾಜಿಕ ಕಳಕಳಿ ಇದ್ದ ಸಂಸ್ಥೆ, ಇತ್ಯಾದಿ..
ವರ್ಷಕ್ಕೊಮ್ಮೆ ನಾಟಕ, ವಾರಕೊಮ್ಮೆ ನಡೆಯುತ್ತಿದ್ದ ಯಕ್ಷಗಾನ ತಾಳಮದ್ದಲೆ,ಪ್ರತಿ ಶನಿವಾರ ಜಾತಿ ಬೇದವಿಲ್ಲದೆ ಸೇರುತಿದ್ದ ಭಜನ ಕಾರ್ಯಕ್ರಮ, ವರ್ಷಕ್ಕೊಮೆ ಒಂದು ತಿಂಗಳು ಗ್ರಾಮದ ಪ್ರತಿ ಮನೆಗೆ ನಡೆದು ಕೈಗೊಳ್ಳುತ್ತಿದ್ದ ನಗರ ಭಜನೆ,ಪ್ರತಿ ಸಂಜೆ(ಮಳೆಗಾಲದ ಹೊರತಾಗಿ) ಶಾಲೆಯ ಮೈದಾನ ದಲ್ಲಿ ಎಲ್ಲರೂ ಕೂಡ ಸೇರಿ ನಡೆಯುತಿದ್ದ ವಾಲಿಬಾಲ್ ಪಂದ್ಯಾಟಗಳು , ಶಾಲೆಯಲ್ಲಿ ಊರಿನ ಹಬ್ಬದಂತೆ ನಡೆಯುತಿದ್ದ ಸ್ವಾತಂತ್ರ್ಯ ದಿನಾಚರಣೆ, ಇತ್ಯಾದಿ ನಮ್ಮೂರಿನ ಲವಲವಿಕೆಗಳನ್ನು ಜೇವಂತವಾಗಿ ಇಟ್ಟಿದ್ದವು.
ಅವತ್ತಿನ ದಿನಗಳಲ್ಲಿ ನಮ್ಮ ಸಂಸ್ಕೃತಿ ಆಚರಣೆಯನ್ನು ಜೇವಂತವಾಗಿರಿಸಿ ಅದರ ಜ್ಞಾನವನ್ನು ವೃದ್ಡಿಸಿಕೊಳ್ಳುವಲ್ಲಿ ಹಾಗು ಜಾತೀಯತೆ ಮೂಡದೆ ನಮ್ಮ ಗ್ರಾಮದ ಸುಂದರತೆಗೆ ಮುಖ್ಯವಾಗಿ ನಮ್ಮ ಶಾಲೆಯ ಗುರುಗಳ ಪ್ರಭಾವ ಅಪಾರ.ಗುರುಗಳಾಗಿದ್ದು ಮುಂದಿನ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳಿಗೆ ಬರಿಯ ಬೋಧನೆ ಅಲ್ಲದೆ ಹೆತ್ತವರಿಗೂ ಮಾರ್ಗದರ್ಶಕರಾಗಿ ಊರಿನ ಸಮಸ್ತ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳ ಮುಂದಾಳು ಆಗಿದ್ದರು. ಒಬ್ಬ ಒಳ್ಳೆಯ ಗುರು ಆದರ್ಶ ಸಮಾಜವನ್ನು ಕಟ್ಟಬಲ್ಲ ಎಂಬ ನುಡಿಯಂತೆ ೫ ಜನ ಗುರುಗಳಿಂದ ಹಾಗು ನಂತರದ ಅವರ ಉತ್ತರಾಧಿಕಾರಿ ಗುರುಗಳಿಂದ ಅಸಾದರಣ ಮಾರ್ಪಾಡುಗಳು ನಮ್ಮ ಗ್ರಾಮದಲ್ಲಿ ಆಗಿದೆ ಎಂಬುದನ್ನು ಪ್ರತಿ ಒಬ್ಬರು ಒಪ್ಪಿಕೊಳ್ಳುತ್ತಾರೆ.ನಮ್ಮ ಶಾಲೆಯಲ್ಲಿ ಕಲಿತು ಇವತ್ತು ಸಮಾಜಕ್ಕೆ ಅದರ್ಶ ಆಗಿರುವವರ ದೊಡ್ಡ ಪಟ್ಟಿಯೇ ಸಿಗುತ್ತದೆ,ಅದರಲ್ಲಿ ನ್ಯಾಯಧಿಶರಿದ್ದಾರೆ, ವಕೀಲರಿದ್ದಾರೆ,ಪದವಿಗಳನ್ನು ಪಡೆದು ವಿದೇಶದಲ್ಲಿ ನೆಲೆಸಿದವರಿದ್ದಾರೆ,ವಿದ್ಯಾಸಂಸ್ಥೆ ಸ್ಥಾಪಕರಿದ್ದಾರೆ,ಸ್ವಂತ ಉದ್ಯಮ ಸ್ಥಾಪಕರಿದ್ದರೆ,ವಿಜ್ಞಾನಿಗಳಿದ್ದಾರೆ, ಉಪನ್ಯಾಸಕರುಗಳಿದ್ದಾರೆ ಹೀಗೆ ಪಟ್ಟಿ ಬೆಳೆಯುತ್ತದೆ.
ಈಗಿನವರ ಇಂಗ್ಲಿಷ್ ಶಾಲೆ, ಕಾನ್ವೆಂಟ್ ಶಾಲಾ ಸಂಸ್ಕೃತಿ ನಡುವೆ ನಮ್ಮೂರಿನ ಖಾಸಗಿ ಸರ್ಕಾರಿ ಶಾಲೆಯ ಸಾದನೆ ವಿಬಿನ್ನವಾಗಿ ನಿಂತಿರುವುದು ಅಷ್ಟೇ ಸತ್ಯ.ಮುಂದಿನ ಕೆಲವು ವರ್ಷಗಳಲ್ಲಿ ನಮ್ಮ ಗ್ರಾಮದಲ್ಲೇ ಮತ್ತೆರಡು ಸರ್ಕಾರಿ ಪ್ರಾಥಮಿಕ ಶಾಲೆಗಳು ಪ್ರಾರಂಭ ಪಡೆದಿದ್ದವು.
೧೯೯೫ ರ ಹೊತ್ತಿಗೆ ೨ ಟ್ರಿಪ್ಪಿನ ಖಾಸಗಿ ಬಸ್ ಸೇವೆ ಪಡೆದ ನನ್ನೂರು ರಸ್ತೆ ವಿಚಾರಕ್ಕೆ ಬಂದಾಗ ಹೆಚ್ಚಿನ ಮಾರ್ಪಾಡುಗಳನ್ನು ಪಡೆದಿಲ್ಲವಿತ್ತು. ಬಸ್ ಡ್ರೈವರ್ ಮಲೆಯಾಲಿ ಗಳಾದ ಉಣ್ಣು ಖುನ್ಜ್ಹ, ಮೋಹನ್ ಇವರುಗಳು ಊರವರ ಮೆಚ್ಚುಗೆಗೆ ಕಾರಣವಾಗಿದ್ದರು ಕಾರಣ ಆ ರಸ್ತೆಯಲ್ಲೂ ಅವರು ಬಸ್ ಓಡಿಸುವ ಪರಿ ಹಾಗಿತ್ತು.ಕೆಸರು ಮಣ್ಣು, ಧೂಳು, ಲೆಕ್ಕಿಸದೆ ಸುಸೂತ್ರವಾಗಿ ಬಸ್ ಸೇವೆ ಪಡೆಯಲು ಈ ಚಾಲಕರ ಪಾತ್ರ ಮಹತ್ವ ಪಡೆದಿತ್ತು.
೧೯೯೮-೧೯೯೯ ರ ವರ್ಷಗಳಲ್ಲಿ ಊರಿನಲ್ಲಿ ಟೆಲಿಫೋನ್ ಲಗ್ಗೆ ಇಟ್ಟಿತ್ತು.
ಪ್ರಾರಂಭದಲ್ಲಿ ಸುಮಾರು ೫೨೦ ಮನೆಗಳಿಗೆ ಸಂಪರ್ಕ ದೊರೆತು ಆಧುನಿಕತೆಯತ್ತ ಸಾಗಲು ನನ್ನೂರು ಹೊರಳಿತ್ತು.ಅವಾಗ ನನ್ನೂರ ಯುವಕ ಮಂಡಲದ ಪರವಾಗಿ ಹೊರಡಿಸಿದ "ಹಲ್ಲೋ ತೆಕ್ಕಾರ್" ಫೋನ್ ಡೈರೆಕ್ಟೊರಿ, ಅದ ನಿರ್ಮಿಸುವಲ್ಲಿ ನನ್ನ ಪಾತ್ರಗಳು, ಅದಕ್ಕೊಂದು ಸಂಪಾದಕೀಯ ಲೇಖನ ಇದೆಲ್ಲ ಕೆಲಸಗಳು ನನ್ನ ತನವನ್ನು ವೃದ್ದಿಸುವಲ್ಲಿ ಹಾಗು ಸಂಘಟನ ಕೌಶಲ್ಯ ಪಡೆದು ನನ್ನ ವೃತಿ ಜೀವನದಲ್ಲಿ ಮೇರು ಮಟ್ಟ ಪಡೆಯುವದರಲ್ಲಿ ಸಹಕಾರಿ ಆಗಬಹುದೆಂದು ಆ ದಿನಗಳಲ್ಲಿ ಖಂಡಿತ
ಅಂದುಕೊಡಿರಲಿಲ್ಲ.ಹೀಗೆ ನನ್ನೂರಿನ ಸೊಗಡು ನನ್ನನ್ನು ಕಟ್ಟಿಕೊಡುವಲ್ಲಿ ಅದರದೇ ಪಾತ್ರ ಪಡೆದಿದೆ ಅನ್ನುವದಕ್ಕೆ ಮೇಲಿನ ಮಾತನ್ನು ಹೇಳಬೇಕಾಯ್ತು .
೨೦೦೫ ರಲ್ಲಿ ವಿಶ್ವ ಬ್ಯಾಂಕ್ ನಿದಿಯಿಂದಾಗಿ ಒಂದು ಸಮಗ್ರ ನೀರಾವರಿ ಯೋಜನೆ ನನ್ನೂರಿಗೆ ರೂಪುಗೊಂಡು ಸಂಬಧಿಸಿದ ಕೆಲಸ ಕಾರ್ಯ ಗಳು ಪ್ರಾರಂಭ ಪಡೆದಿತ್ತು. ಇದು ೨೦೦೮ ರ ಹೊತ್ತಿಗೆ ಮೊದಲ ಹಂತವಾಗಿ ಸೇವೆ ಪ್ರಾರಂಭ ಪಡೆದು ಕೆಲವರು ಫಲನುಭಾವಿಗಳದರು, ಇದು ೨೦೧೦-೨೦೧೧ ಕ್ಕೆ ವಿಸ್ತರಿಸಲಾಗಿ ಪ್ರತಿ ಮನೆಗೆ ತಲುಪುವ ಗುರಿ ಪೂರ್ಣ ಗೊಳಿಸಿತ್ತು.
ಇನ್ನೊಂದು ಅನಿರೀಕ್ಷಿತ ಬದಲಾವಣೆ ನನ್ನುರಿನದ್ದು ಎಂದರೆ ರಸ್ತೆ.ಪ್ರಾರಂಭ ದಲ್ಲಿ ನಾ ಹೇಳಿದಂತೆ, ಬಂಟ್ವಾಳ ತಾಲೂಕ ಮತ್ತು ಪುತ್ತೂರು ತಾಲೂಕಿನ ಮಧ್ಯದ ಗ್ರಾಮ ನನ್ನದು. ನನ್ನೂರು ಇವೆರಡು ತಾಲೂಕಿಗು ಕೊಂಡಿಯಾಗಬಹುದಿತ್ತು. ಆದರೆ ರಸ್ತೆ ಅದಕ್ಕೆ ಅಡ್ಡ ಕಾಲು ಹಾಕಿತ್ತು, ಹೀಗಿರಬೇಕಾದರೆ ೨೦೦೮ ರಲ್ಲಿ ರಾಷ್ಟ್ರಿಯಾ ಗ್ರಾಮ ಸಡಕ್ ಯೋಜನೆ ನನ್ನ ಗ್ರಾಮದ ಚಿತ್ರಣವನ್ನೇ ಬದಲಿಸಿತ್ತು.ಸುಸಜ್ಜಿತ ೨೨ ಕಿಲೋ ಮೀಟರ್ ನ ರಸ್ತೆ ಉಪ್ಪಿನಂಗಡಿ ಹಾಗು ಕಲ್ಲೇರಿ (ಉಪ್ಪಿನಂಗಡಿ ಮತ್ತು ಬೆಳ್ತಂಗಡಿ ಮಾರ್ಗದಲ್ಲಿ ಸಿಗುವ ಪಟ್ಟಣ) ಸಂಧಿಸುವ ೨ ರಸ್ತೆ ಯೋಜನೆ ಪ್ರಾರಂಭ ಪಡೆದಿತ್ತು.ಹಲವರು ತಮ್ಮ ಜಮೀನನ್ನು ಈ ಯೋಜನೆಗೆ ಸಂಪೂರ್ಣ ಸಮ್ಮತಿ ಇಂದ ಬಿಟ್ಟು ಕೊಟ್ಟಿದ್ದರು.ಹೇಗೆ ಒಂದು ಸುಸ್ಸಜ್ಜಿತ ರಸ್ತೆ ೨೦೧೦ ರಲ್ಲಿ ನನ್ನೂರಿಗೆ ಪೂರ್ಣ ಪ್ರಮಾಣದಲ್ಲಿ ದೊರಕಿತ್ತು. ಈಗ ನನ್ನೂರಿಗೆ ಬಸ್ಸು, ಆಟೋ ರಿಕ್ಷ, ಹಿಗೆ ಸಾರಿಗೆ ಸಂಪರ್ಕದ ಕೊರತೆ ನೀಗಿಸಿದೆ.ಊರಿನ ಜನಗಳಲ್ಲು ಬದಲಾವಣೆಯಾಗಿದೆ.ಊರಿನ ಮಕ್ಕಳು ಕಾನ್ವೆಂಟ್ ಶಾಲೆಗಳತ್ತ ವಾಲುತಿದ್ದಾರೆ, ಮೊಬೈಲ್ ಫೋನ್ ಸರ್ವೇಸಾಮಾನ್ಯವಾಗಿದೆ, ಪ್ರತಿ ಮನೆಯಲ್ಲಿ ಟು ವ್ಹೀಲರ್ , ಫೋರ್ ವ್ಹೀಲರ್ ವಾಹನಗಳು ಸಾಮಾನ್ಯವಾಗಿದೆ.
ಆದರೆ ಮೇಲೆ ಹೇಳಿದಂಥ ಸಾಮಾನ್ಯ ಚಟುವಟಿಕೆ, ಸಾಂಸ್ಕೃತಿಕ ನಡೆಗಳು ನಿಧಾನವಾಗಿ ಕಣ್ಮರೆಯಾಗುತ್ತಿದೆ.ಜ್ಞಾನದ ರಹದಾರಿಯಗಿದ್ದ ನನ್ನ ಶಾಲೆ ಮಕ್ಕಳ ಬರದಿಂದ ಬಡವಾಗುತ್ತಿದೆ.ಜಾತೀಯತೆಯ ಅಲ್ಪ ಕಿಚ್ಚು ಹಬ್ಬ ಪ್ರಾರಂಭಿಸಿದೆ, ಗದ್ದೆ ಹೊಲ ಕಂಗಿನ ತೋಟಗಳು ರಬ್ಬರ್ ತೋಟಗಳಾಗಿ ಮಾರ್ಪಾಡುತ್ತಿದೆ, ಜನಗಳ ಸ್ವಾರ್ಥತೆ ಬಲಿಯುತ್ತಿದೆ,ರಾಜಕೀಯತೆ ಕಿಚ್ಚು ಬಲಿಯುತ್ತಿದೆ,ಅಭಿವೃದ್ಧಿಗಾಗಿ ಕೆಲವೊದನ್ನು ನನ್ನೂರು ಕೂಡ ಬಲಿದಾನಗಳನ್ನು ಕೊಡುತ್ತಿದೆ.
ನನ್ನೂರಿನ ಸಂಪೂರ್ಣ ಅಭಿವೃದ್ಧಿ ಪಡೆದಿದೆ ಎನ್ನಲಾರೆ. ಸ್ತಳಿಯ ಉದ್ಯೋಗ ಅವಕಾಶಗಳು ಇನ್ನು ನನ್ನೂರಿನ ಯುವ ಪೀಳಿಗೆಗೆ ದೊರಕಿಲ್ಲ.ಇದರಿಂದಾಗಿ ಯುವ ಜನತೆ ಮಂಗಳೊರು, ಬೆಂಗಳೂರು ಇಂಥ ಪಟ್ಟಣದ ಕಡೆಗೆ ಉದ್ಯೋಗವಕಾಶಕ್ಕಾಗಿ ಮುಖ ಮಾಡಿದೆ. ಒಂದು ಪ್ರಾಥಮಿಕ ಅರೋಗ್ಯ ಕೇಂದ್ರ, ಪಶು ವ್ಯಧ್ಯಕೀಯ ಶಾಲೆ,ಒಂದು ಪ್ರೌಢ ಶಿಕ್ಷಣ ಶಾಲೆ, ಮೇಲೆ ಹೇಳಿದಂತೆ ತಾಲೂಕ ಜೋಡಿಕೆಗೆ ಬೇಕಾದ ೧-೨ ಕಿಲೋ ಮಿಟರಿನ ರಸ್ತೆಗಳ ಅಭಿವೃದ್ದಿ ,ಇತ್ಯಾದಿ ನನ್ನೂರಿ ಅವಶ್ಯ ಕತೆಗಳಲ್ಲಿ ಕೆಲವೊಂದು.ಇವುಗಳ ಬಗ್ಗೆ ಹಿಂದೆಂದಿಗಿಂತಲೂ ವಿಸ್ತಾರವಾಗಿ ಚರ್ಚೆಗಳು ಮತ್ತು ಕೆಲಸಗಳು ನಡೆದಿದೆ.ಅಭಿವೃದ್ದಿ ಜನಗಳ ಮನಸನ್ನು ಕೂಡ ಚಿಂತನಶೀಲರನ್ನಾಗಿ ಮಾಡಿದೆ.ಹಿಂದೆ ನಡೆಯುತಿದ್ದ ಹಲವು ಕಾರ್ಯಕ್ರಮಗಳನ್ನು ನಡೆಸುವ ದಿಕ್ಕಿನಲ್ಲೂ ಕೂಡ ಯೋಚನೆಗಳು ಹರಿದಿದೆ.
ಒಂದು ಶಾಲೆ, ಶಾಲೆಯ ಅಧ್ಯಾಪಕ ವೃಂಧ, ಕೆಲವೊಂದು ಸಾಮಾಜಿಕ ಸಂಸ್ಥೆಗಳು ಹೇಗೆ ಒಂದು ಊರಿನ ತಳಹದಿಯನ್ನು ಕಟ್ಟಿ ಕೊಡಬಲ್ಲುದು. ಒಂದು ಹಳ್ಳಿ ಶಾಲೆ ಹಾಗು ಅದರ ಅದ್ಯಾಪಕರ ಪ್ರಭಾವ ನಮ್ಮಲ್ಲಿ ಈ ಮಟ್ಟಿಗೆ ಉಳಕೊಂಡ ರೀತಿ !!!ಶಾಲೆಯೆಂದರೆ ಹೇಗಿರಬೇಕು ಶಾಲಾ ಗುರುಗಳು ಒಂದು ಊರೂ ಹಾಗು ಅದರ ಸಂಸ್ಕೃತಿ ಹೇಗೆ ಕಟ್ಟಿ ಕೊಡಬಲ್ಲರು? ದೊರದ ಬೆಂಗಳುರಿನಲ್ಲಿದ್ದು ದಿನವಿಡೀ ಕೆಲಸದಿಂದ ಒತ್ತಡ ದಿಂದ ಬದುಕುವ ನನ್ನಂಥ ಹಲವು ಜೀವಕ್ಕೆ ಊರಿನಲ್ಲಿರುವ ೨ ದಿನ ಮತ್ತೆ ೬ ತಿಂಗಳು ಉಲ್ಲಾಸದಿಂದ ಕೆಲಸಕ್ಕೆ ಮರಳುವಂತೆ ಮಾಡುವ ಪ್ರಶಾಂತ ಶಕ್ತಿ ಎಂತದ್ದು? ಅಭಿವೃದ್ದಿ ಎನ್ನುವದು ಹೇಗೆ ಒಂದು ಜನಜೀವನ ವ್ಯವಸ್ಥೆಯನ್ನು ಬದಲೈಸಬಲ್ಲುದು ಎಂಬುದು ಒಂದು ಕಡೆಯಾದರೆ ಅದರಿಂದ ಬದಲಾಗ ಬಲ್ಲ ಹಲವು ಸಂಸ್ಕೃತಿ ವಿಚಾರಗಳೇನು? ಒಂದು ಹಳ್ಳಿ ಕೂಡ ಹೇಗೆ ಸಮಾಜಕ್ಕೆ ಕೊಡುಗೆಯಾಗಬಲ್ಲುದು? ಸಂಸ್ಕೃತಿ ಬದಲಾಗುತ್ತದೆ ಎಂದು ಅಭಿವೃದ್ದಿ ಬೇಡ ಎನ್ನಲಾಗುತ್ತದೆಯೇ ? ಒಂದು ಹಳ್ಳಿಗೆ ಸಮೀಪದ ಪಟ್ಟಣ ಹೇಗೆ ಅಗತ್ಯತೆ ಪಡೆದಿದೆ?ಹಳ್ಳಿಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳೇನು ಹಾಗು ಅದು ಹೇಗೆ ಅವಶ್ಯಕ ? ಬಾರತದ ಕೃಷಿ ಸಂಪ್ರದಾಯ ಬದ್ದತನದಿಂದ ನಡೆಯುತ್ತಿಲ್ಲ ಯಾಕೆ? ಇತ್ಯಾದಿ ಪ್ರಶ್ನೆಗಳಲ್ಲಿ ನನ್ನೂರು ಹಲವಕ್ಕೆ ಉತ್ತರ ಕಂಡುಕೊಂಡಿದೆ,
ಮೇಲಿನ ಎಲ್ಲ ಪ್ರಶ್ನೆಗಳು ಭಾರತದ ಸಾವಿರಾರು ಹಳ್ಳಿಗಳಲ್ಲಿ ಉಳಕೊಂಡಿದೆ.ಅವೆಲ್ಲದರ ಮೇಲೆ ಬೆಳಕು ಚೆಲ್ಲುವದಕ್ಕಾಗಿ ನನ್ನೂರಿನ ಕಥೆಯಾ ಮೂಲಕ ಸಣ್ಣ ಪ್ರಯತ್ನ. ತಪ್ಪಿದ್ದರೆ ಕ್ಷಮಿಸಿ.
No comments:
Post a Comment