Friday, April 10, 2020

ಅಪ್ಪ


ಅಮ್ಮನ ಸೆರಗಂಚು ಹಿಡಿದು
ಅಪ್ಪನಿಂಬ ಜೊತೆ ಜಗವ ನೋಡುವ ಕಾಲದಲ್ಲಿ
ಅಪ್ಪನ ಎದೆ ತುಂಬಾ ನನ್ನ ಪುಟ್ಟ ಕೈ ಬಳಸಿ
ಆತನ ನೇವರಿಪ ತೋಳಲ್ಲಿ ನಾ ನಿದ್ರಿಸಲು
ಅಪ್ಪ ಪಟ್ಟ ಸಂತ್ರುಪ್ತಿಯ ಆಳ ತಿಳಿಯಲು
ನಾನೂ ಅಪ್ಪನಾಗಬೇಕಾಯಿತು.

ನನ್ನಯ ತುಂಟಾಟಗಳು ಹದ್ದು ಮೀರಿದಾಗ
ಅಮ್ಮನ ಒಂದೇಟಿನ ಬಿಸಿ ನನ್ನ ತಾಕಲು
ರಂಪುಗೊಂಡ ನನ್ನ ಅಳುವನ್ನು
ಕೋಪಗೊಂಡ ಅಮ್ಮನ ಬೈಗುಳದಾರ್ಭಟವನ್ನು
ಸಹಿಸಿ ಸಂತೈಸಿ ತನ್ನ ಮಾತನ್ನು ನುಂಗಿ ನಗೆ ಬೀರಿದ್ದು………

ಜಾತ್ರೆ ಯಾತ್ರೆಗಳಲ್ಲಿ
ನನ್ನ ಮಗುವಿಗಾಗಿ ಇದಿರಲಿ ಎಂದು
ಜೋಬು ತಡಕಾಡಿ ಕೊಂಡ ಆಟಿಕೆಯಲ್ಲಿ
ನನ್ನಾಟವ ಕಂಡು  ಜೊತೆಯಾಟವಾಡುತ್ತಾ
ತಾನೂ ಮಗುವಾಗಿದ್ದು….

ಒಂದಷ್ಟು ದೂರದ ನಡೆಗೆ
ನನ್ನ ಕಾಲು ಸೋಲಬಹುದೆಂಬ ಕಾಳಾಜಿಗೆ
ತನ್ನ ತಲೆ ಮೇಲೆ ಕೂರಿಸಿ
ದೇವರೆಂದು ನನ್ನ ಕೊಂಡಾಡಿ
ನನ್ನ ಹೊತ್ತೊಯ್ಯುತ್ತಿದ್ದಿದ್ದು…….

ನನ್ನ ಗದರಿಸಿದ್ದು, ಬೆದರಿಸಿದ್ದು
ತದ ನಂತರ ಸಂಕಟ ಪಟ್ಟು
ನನ್ನ ಮುದ್ದಾಡಿದ್ದು..
ಅಡುಗೆ ಮನೆಯ ಡಬ್ಬಗಳ ತಡಕಾಡಿ
ನನ್ನ ಬಾಯಿಗೆ ಸಿಹಿ ತುರುಕಿ
ಪಟ್ಟ ಸಂಕಟಕ್ಕೊಂದು ಪರಿಹಾರವೆಂಬಂತೆ
ನನ್ನ ಸಿಹಿಯನ್ನೆ ರುಚಿಸಿಕೊಂಡಿದ್ದು…

ನನ್ನಯ ಕುಡಿಗಳ ಆಟ ಪಾಠಗಳು
ಇಂತಹ ಇನ್ನಷ್ಟು,ಬಹಳಷ್ಟನ್ನು
ನೆನಪಿಸುವ ಮಸ್ತಕದಲ್ಲಿ ಮಾಸದೆ
ನಡೆಯಲ್ಲಿ ಅಚ್ಚುಗೊಂಡ
ಅಪ್ಪನೊಂದಿಗಿನ ನನ್ನ ಬಾಲ್ಯ.

ನನ್ನಪ್ಪ ನನ್ನ ದಾರಿದೀಪ
ನನ್ನಯ ಕುಡಿಗಳಿಗೂ ನಾನೆ ಆದರ್ಶ ಎಂಬ ಎಚ್ಚರ
ನಾನು ನನ್ನಪ್ಪನಂತಿರಬೇಕೆಂಬ ಪ್ರಜ್ನೆಯನ್ನು ಅಳಿಯಲು ಬಿಡುತಿಲ್ಲ
ಅಪ್ಪ ಪದಗಳೆ ಇಲ್ಲದ ವರ್ಣನೆ, ಎಣಿಕೆ ಕಾಣದ ಲೆಕ್ಕ
ಈ ಪರಿಯ ಅಪರಿಮಿತ ಅಮಿತತೆಯ ತಿಳಿಯಲು
ನಾನೂ ಅಪ್ಪನಾಗಬೇಕಾಯಿತು.




Sunday, April 5, 2020

ಕಾಣದ ವೈರಾಣು ಕಾಣಿಸಿದ್ದು


ಉಳಿದೆಲ್ಲಾ ಪ್ರಕೃತಿ ವಿಕೋಪ ಗಳಿಗಿಂತಲೂ ಭೀಕರವಾದ ಪರಿಣಾಮಗಳನ್ನು ಮನುಷ್ಯ ಯಕಶ್ಚಿತ್ ಕಣ್ಣಿಗೆ ಕಾಣದ ಕೊರೋನ ವೈರಾಣುವಿನಿಂದಾಗಿ ಅನುಭವಿಸುತ್ತಿದ್ದಾನೆ. ತನ್ನೆಲ್ಲ ಆಡಂಭರ ಸೊಗಸುಗಳಿಗೆ ಕಡಿವಾಣ ಹಾಕಿಕೊಂಡು ಮನೆಯೊಳಗೆ ಬಂದಿಯಾಗಿದ್ದಾನೆ, ಪ್ರತಿ ನಿತ್ಯದ ಸಾವು, ನೋವು, ಸೋಂಕಿತರು ಇಂತಹ ಋಣಾತ್ಮಕತೆಯನ್ನು ಎಣಿಸುವದೆ ದಿನಚರಿಯಾಗಿ ಬಿಟ್ಟಿದೆ. ಮನುಷ್ಯನೆಂಬ ಪ್ರಾಣಿಯ ಚಪಲವೆಂಬುದು ಈ ಮಟ್ಟಿನ ಹೊಡೆತ ನೀಡಿದೆ ಎಂಬುದು ನಾವೆಲ್ಲರೂ ಅರಗಿಸಿಕೊಳ್ಳಲೆ ಬೇಕಾದ ಸತ್ಯ. ಪ್ರಕೃತಿಯ ಮೇಲಿನ ಹಿಡಿತಕ್ಕೆ ಮನುಷ್ಯ ಮುಂದಾದಷ್ಟು ಇಂತಹ ವಿಕೋಪಗಳು ಜರುಗುತ್ತಲೆ ಇರುತ್ತದೆ ಆದರೆ ಮನುಷ್ಯ ಮಾತ್ರ ಬುದ್ದಿ ಕಲಿಯುತ್ತಲೆ ಇಲ್ಲ. ಇದೆ ಕಾರಣಕ್ಕೆ ಮನುಷ್ಯ ಕುಲಕ್ಕೆ ಮಾರಿಯಾದ ಇಂತಹ ಭಾದೆ ಪರೀಕ್ಷೆಗಳನ್ನು ಪ್ರಕೃತಿ ತಂದೊಡ್ಡುತ್ತೆ ತನ್ಮೂಲಕ ತನ್ನ ಸಮತೋಲನವನ್ನು ಕಾಯ್ದುಕೊಳ್ಳು ತ್ತಲೆ  ಎಚ್ಚರಿಕೆಯನ್ನು ರವಾನಿಸುತ್ತಿರುತ್ತದೆ ಮನುಷ್ಯ ಎಚ್ಚರಗೊಂಡಂತೆ ಕಂಡರೂ ಮತ್ತೆ ಮಗದೊಮ್ಮೆ ಮಾಡಿದ ತಪ್ಪನ್ನೆ ಮಾಡಿ ತನಗಾಗಿ ಕೂಪ ತೋಡುತ್ತಿರುತ್ತಾನೆ, ತಾನೆ ಅದರೊಳಗೆ ಸಮಾಧಿಯಾಗುವೆನೆಂದು ಗೊತ್ತಿದ್ದರೂ ಬುದ್ದಿಯ ಪರಿಮಿತಿ ಅಷ್ಟಕಷ್ಟೆ.

ವಿಚಿತ್ರ ನೋಡಿ, ಕೊರೋನಾ ವೈರಾಣುವಿನ COVID-19 ಎನ್ನುವ ಈ ಪ್ರಬೇಧ ಕೊಟ್ಯಾನುಕೋಟಿ ಜೀವ ರಾಶಿ ಹೊಂದಿರುವ ಈ ಭುವಿಯಲ್ಲಿ ಈ ಪರಿಯಲ್ಲಿ ಭಾಧಿಸುತ್ತಿರುವದು ಮನುಷ್ಯನನ್ನು ಮಾತ್ರ. ಅದಕ್ಕಾಗೆ ನಾನು ಈ ವೈರಾಣುವಿನ ಜೊತೆ ಪ್ರಕೃತಿಯ ಎಚ್ಚರ ಎಂಭ ಮಾತನ್ನು ಎಳೆದು ತಂದೆ.ಮನುಷ್ಯನೆಂಬ ಕ್ರೂರಿ ಬಿಲ ಸೇರಿದ್ದೆ ತಡ ಪ್ರಕೃತಿ ನಲಿಯತೊಡಗಿದೆ ಅಂತೆಯೆ ಭುವಿಯಲ್ಲಿನ ಇತರೆ ಜೀವಿ ನೆಮ್ಮದಿಯ ಉಸಿರುಬಿಟ್ಟಿದೆ ಒಟ್ಟಾಗಿ ಹೇಳಬೇಕೆಂದರೆ ಈ ಇಳೆ ನವಿರುಗೊಳ್ಳುತ್ತಿದೆ.  ಹೌದು ನಾವೆಲ್ಲರೂ  ಒಪ್ಪಲೇಬೇಕಾದ , ಬೆರಗಿನಿಂದ ನೋಡಬೇಕಾದ ತನ್ಮೂಲಕ ನಮ್ಮನ್ನು ನಾವೆ ತುಲನೆ ಮಾಡಿಕೊಳ್ಳಲೆ ಬೇಕಾದ ಸತ್ಯವಿದು. ಯಾವ ಪ್ರಾಣಿಗಳು ಅತ್ತ ಕಾಡಲ್ಲೂ ಇರಲಾಗದೆ ನಾಡತ್ತಲೂ ಸುಳಿಯಲಾಗದೆ ಚಡಪಡಿಸುತಿದ್ದವೊ ಅವೆಲ್ಲ ಇವತ್ತು ಸ್ವಚ್ಚಂದವಾಗಿ ಯಾವುದೆ ಭಯ ಶಬ್ದಗಳ ಕಾಟವಿಲ್ಲದೆ ತಿರುಗಾಡುತ್ತಿವೆ, ಮನುಷ್ಯನ ರಹದಾರಿಯೆಂಬ ರಸ್ತೆಗಳಲ್ಲು ನಿರ್ಭಯವಾಗಿ ಓಡಾಡುತ್ತಿವೆ.ಇಲ್ಲಿ ಗಮನಿಸಲೇ ಬೇಕಾದ ಇನ್ನೊಂದು ಅಂಶ ವೆಂದರೆ ಮನುಷ್ಯ ನಿರ್ಬೀತತೆಯಿಂದಿದ್ದಾಗ ಕಾಡುಪ್ರಾಣಿಗಳ ಹಾವಳಿ ಇತ್ಯಾದಿ ನ್ಯೂಸ್ ಗಳನ್ನು ಕೇಳುತ್ತಲೆ ಇದ್ದೆವು ಆದರೆ ಈಗ ಕಾಡಿನಿಂದ ನಾಡಿಗೆ ಕಾಲಿಡುವ ಪ್ರಮೇಯವೆ ಅವಕ್ಕಿಲ್ಲ ಕಾರಣ ಅವುಗಳ ಜಾಗದ ಅತಿಕ್ರಮಿಸುವ,, ತಂಟೆಗೈಯುವ ಜನ ಮಂದಿ ಮನೆಯೆಂಬ ಬಿಲ ಸೇರಿದ್ದಾನೆ. ಈಜಿಪ್ಟ್ ನ ವಿಮಾನ ನಿಲ್ದಾಣದ ರನ್ ವೇಗಳಲ್ಲಿ ಬಾತುಕೋಳಿಗಳು ಓಡಾಡುತ್ತಿವೆ. ಇಟಲಿಯ ಸಾರ್ಡಿನಿಯಾ ಕಾಲುವೆಗಳಲ್ಲಿ ಡಾಲ್ಲಿನ್ಗಳು ನರ್ತಿಸುತ್ತಿವೆ.ನೆನಪಿರಲಿ ಡಾಲ್ಪಿನ್ಗಳು ಸ್ವಚ್ಚಂದ ಶುದ್ದವಾದ ನೀರಲ್ಲಷ್ಟೆ ಕಾಣಿಸಿಕೊಳ್ಳುತ್ತದೆ. ಸದಾ ಪ್ರವಾಸಿಗರಿಂದಲೆ ತುಂಬಿ ತುಳುಕುತಿದ್ದ ಸಿಂಗಾಪುರದ ಕಡಲಂಚುಗಲ್ಲಿ ಮನುಷ್ಯ ಸಂಚಾರ ಸ್ತಬ್ದತೆಯಿಂದಾಗಿ ನೀರು ನಾಯಿಗಳು ಕಾಣಿಸಿಕೊಳ್ಳುತ್ತಿದೆ.ತನ್ನ ಮೂಲಸ್ಥಾನಕ್ಕೆ ಮರಳಿದುದರ ನೆಮ್ಮದಿ ಅವಕ್ಕಿರಬಹುದು ಅಲ್ಲವೆ. ಮರೆಯಾಗುತ್ತಿದ್ದ ರಾಜಹಂಸಗಳು ಮತ್ತೆ ಕಾಣಿಸಿಕೊಳ್ಳುತ್ತಿವೆ.ಎಲ್ಲವೂ ಶುಭ ಸೂಚನೆಗಳೆ ಆದರೆ ಮನುಷ್ಯನಿಗಷ್ಟೆ ಹೆಮ್ಮಾರಿ

ನಾಸದ ವರದಿಯೊಂದರ ಪ್ರಕಾರ ಬರೋಬ್ಬರಿ 2 ತಿಂಗಳಿಂದಲೂ ಹೆಚ್ಚಿನ ಲಾಕ್ ಡೌನ್ ಕಾರಣದಿಂದ ಸದಾ ಮಬ್ಬು ಹೊಗೆಯಿಂದ ಕೂಡಿದ್ದ ಚೀನಾದ ಆಗಸಗಳು ತಿಳಿ ನೀಲವಾಗುತ್ತಿದೆ ಅಂದರೆ ವಾತಾವರಣದಲ್ಲಿನ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣ ತಗ್ಗಿ ಶುಚಿಗೊಳ್ಳುತ್ತಿದೆ. ವಾಶಿಂಗ್ಟನ್ ಪೋಷ್ಟ್ ವರದಿಯ ಪ್ರಕಾರ ಉತ್ತರ ಇಟೆಲಿಯ ವಾಯು ಮಾಲಿನ್ಯವೂ ಗಣನೀಯ ಪ್ರಮಾಣದಲ್ಲಿ ಸುಮಾರು 70 ಪ್ರತಿಶತದಷ್ಟು ಕಡಿಮೆಯಾಗಿದೆ. ಈ ಪರಿಯ ವಾತಾವರಣದ ಕಲುಷಿತೆಯೂ ವಿಶ್ವದೆಲ್ಲೆಡೆ ತಿಳಿಗೊಳ್ಳುತ್ತಿದೆ ಪರಿಣಾಮ ವಿಶ್ವದ ತಾಪಮಾನ  ಗ್ಲೋಬಲ್ ವಾರ್ಮಿಂಗ್ ಸಮಸ್ಯೆಯ ಬಗ್ಗೆ ಇಷ್ಟು ದಿನ ಬಡುಕೊಳ್ಳುತಿದ್ದವೊ ಅದೀಗ ಸಹಜತೆಯತ್ತ ಮುಖ ಮಾಡಿದೆ. ಉಳಿದವುಗಳೇಕೆ ವಾಯುಮಾಲಿನ್ಯದಿಂದ ಜರ್ಜರಿತವಾಗಿದ್ದ ನಮ್ಮದೆ ದೇಶದ ರಾಜಧಾನಿ ದಿಲ್ಲಿಯಲ್ಲೀಗ ವಾತಾವರಣ ಸಹಜತೆಯತ್ತ ಮರಳುತ್ತಿದೆ. ಕಾರ್ಖಾನೆಗಳು ಬಂದ್ ಆಗಿವೆ, ಕಸಾಯಿಕಖಾನೆಗಳಲ್ಲಿನ  ಪ್ರಾಣಿ ವಧೆ ಕಡಿಮೆಯಾಗಿ ಅವುಗಳಿಂದಾಗುವ ಕೊಚ್ಚೆ ತಹಬಂದಿಗೆ ಬಂದಿದೆ, ಇವೆಲ್ಲವಿಂದಲೂ ನದಿ ನೀರಿನ ಸೆಲೆಗಳಿಗೆ ಸೇರುತಿದ್ದ ತಾಜ್ಯಗಳು ಇಲ್ಲವಾಗಿದೆ ಪರಿಣಾಮ ಇಟೆಲಿಯ ವೆನಿಸ್ ಕಾಲುವೆಗಳಿಂದ ಹಿಡಿದು ನಮ್ಮ ದೇಶದ ದೊಡ್ಡ ದೊಡ್ಡ ನದಿಗಳು ತನ್ನಿಂದ ತಾನೆ ತನ್ನೊಳಗಿರುವ ಮೀನುಗಳ ಓಡಾಟವನ್ನು, ತನ್ನ ಪ್ರತಿಬಿಂಬವನ್ನು ಸ್ಟಷ್ಟವಾಗಿ ತೋರಿಸುವ ಮಟ್ಟಿಗೆ ಸ್ವಚ್ಚಗೊಳ್ಳುತ್ತಿದೆ. ವಾಹನಗಳು, ಕಾರ್ಖಾನೆಯ ದೈತ ಚಿಮಿಣಿಗಳು ಎಲ್ಲವೂ ಬಂದ್…. ಬಂದ್…. ಪರಿಣಾಮ ವಾಯುಮಾಲಿನ್ಯ, ಶಬ್ದ ಮಾಲಿನ್ಯ ಪ್ರಮಾಣ ಹಿಂದಿನ 20 ವರುಷಗಳಲ್ಲಿ ಕಂಡರಿಯದ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಕೋರೋನ ವೈರಾಣುವಿನ ಪ್ರಭಾವವನ್ನು ಮಗದೊಂದು ಮಗ್ಗುಲಿನಿಂದ ನೋಡಬಹುದಾದ ಚಿತ್ರವಿದು.

ಮನುಷ್ಯ ತಾನೆ ಶ್ರೇಷ್ಠವೆಂದು ಬೀಗುತ್ತಿರಬೇಕಾದರೆನೆ ಪ್ರಕೃತಿ ಎದುರಿಟ್ಟ ವೈಚಿತ್ರವಿದು. ತಾನೆಷ್ಟು ನಿಕೃಷ್ಟ, ತನ್ನ ಯೋಜನೆಗಳು ತನ್ನ ಕಾರ್ಯಗಳೆಷ್ಟು ಪ್ರಕೃತಿ ನಿಯಮಗಳಿಗೆ ಬಾಹಿರವಾದದ್ದು. ತಾನೆಲ್ಲ ಜಯಿಸಿಬಿಡಬಲ್ಲೆ, ಪ್ರಕೃತಿ ರಹಸ್ಯಗಳನ್ನು ತಿಳಿದು ಬಿಡಬಲ್ಲೆ ಎಂಬ ದುಡುಕುತನದ ಓಟದ ಓಗದಲ್ಲಿ ನಾ ಮರೆತಿದ್ದು ಏನನ್ನ? ತನ್ನ ಇತಿ ಮಿತಿಗಳೇನು? ಪ್ರಕೃತಿಯಲ್ಲಿ ನಾನಿರಬೇಕಾದ ಪರಿಮಿತಿಗಳೇನು?ನಾ ಏನನ್ನ ಎಷ್ಟನ್ನ ಆಹಾರಕ್ಕಾಗಿ ಬಳಸಿಕೊಳ್ಳಬೇಕು?ಇಂತಹ್ದ್ದೆ ಹತ್ತಾರು ಪ್ರಶ್ನೆಗಳಿಗೆ ಉತ್ತ ಕಂಡುಕೊಳ್ಳಬೇಕಾದ ಜರೂರಿ ಮನುಷ್ಯ ಸಂಕುಲಕ್ಕಿದೆ. ಕೊರೋನ ದಿಂದ ನಾವೆಲ್ಲರೂ ಪಾರಾಗುತ್ತೇವೆ, ಮುಂದಕ್ಕೆ ಲಸಿಕೆಯೂ ಸಿಗುತ್ತೆ ಇಂತಹ ಹಲವು ವೈರಾಣುಗಳನ್ನು ಮನುಷ್ಯ ಎದುರಿಸಿಯೂ ಇದ್ದಾನೆ ಆದರೆ ನಾವು ಪದೆ ಪದೆ ಎಡವುತ್ತಿರುವುದು ಯಾಕೆ ಎನ್ನುವದನ್ನು ತಿಳಿಯದೆ ಹೋದರೆ,ಪ್ರಕೃತಿಯ ಮೇಲಿನ ಸವಾರಿ ಯನ್ನು ನಾವು ನಿಲ್ಲಿಸದೆ ಹೋದರೆ ಇಂತಹ ಬಗೆ ಬಗೆಯ ವೈರಾಣು ಗಳು ನಮ್ಮೆದುರು ಬಂದು ನಿಂತು ಹೆಮ್ಮಾರಿಯಂತೆ ಕಾಡುತ್ತವೆ, ಮನುಷ್ಯ ಸಂಕುಲದ ಜೀವ ಹಿಂಡುತ್ತದೆ ಅನ್ನುವದು ಶತಸಿದ್ದ. ಬಹುಶಃ ಈ ನಿಟ್ಟಿನಲ್ಲಿ ಯೋಚಿಸುವದು COVID-19 ಗೆ ಲಸಿಕೆ ಕಂಡುಹಿಡಿಯುವಷ್ಟೆ ಅಗತ್ಯ ವಿಷಯವಾಗ ಬೇಕಿದೆ ನಮಗೆ.

ಮನೆಯಲ್ಲಿರೋಣ, ಕ್ಷೇಮವಾಗಿರೋಣ, ಪರಿಸರವ ಉನ್ನತೀಕರಿಸೋಣ
ನಿಮ್ಮವ…
ರಾಘವೇಂದ್ರ ತೆಕ್ಕಾರ್