Saturday, October 27, 2012

ಮತ್ತೆ ಮತ್ತೆ ನೆನಪಾಗೋ ಬಾಲ್ಯ.



ಅಂಬಿಗನ ಹಂಗಿಲ್ಲದ , ತೂಫಾನೆಂಬುದನ್ನೆ ಕಾಣದ ಅಷ್ಟೇ ಏಕೆ ಅಸಲಿ ದಡವೇ ಇಲ್ಲದ, ಮನಸೆಲ್ಲಾ ಸಂತಸವನ್ನೆ ಸಮುದ್ರದಂತೆ ಹೊದ್ದು ಮಲಗಿದ್ದ ಬಾಲ್ಯ ಕಳೆದಿದೆ.ಬಾಲ್ಯವೆಂಬುದು ಬದುಕಿನ ಮೊಟ್ಟ ಮೊದಲ ಮಳೆಗಾಲ,ಆ ದಿನಗಳ ಮೋಡದ ತುಂಬ ಸಂತಸವೆಂಬ ತುಂತುರ ಪನಿ, ಕೆಲವೊಮ್ಮೆ ರಭಸದಿಂದ ಸುರಿದು ಹಿಪ್ಪೆಯಾಗಿಸಿದರೆ ಕೆಲವೊಮ್ಮೆ ಹಿಡಿದಿಟ್ಟುಕೊಳಬಹುದಾದಷ್ಟೆ ಮೋಡದಿಂದ ಜಾರುವ ಹನಿ, ಅಸಲಿಗೆ ಇವೆಲ್ಲ ಗೊತ್ತಾಗಿದ್ದು ಬಾಲ್ಯವೆಂಬ ಮಳೆಗಾಲದ ಮೋಡ ಸರಿದು ನೆತ್ತಿಗೆ ಇಂಚಿಂಚೆ ಬಿಸಿಲು ತಾಕಿದ ನಂತರ.ಮಂಜು ಕವಿದ ಮುಂಜಾವೂ ನುಸುಳುವ ಸುಳಿಗಾಳಿಯ ಜೊತೆ ತುಂತುರು ಸೋನೆ ಮಳೆಯು ತಂಪೆರೆದು ನೇಸರನ ಕಿರಣಗಳಿಗೆ ಚೂರು ಚೂರೆ ಕರಗಿದಂತೆ ನಮ್ಮ ಬಾಲ್ಯವೂ ಕಳೆದಿದೆ.

ಮೂಡಣದಿ ನೇಸರನ ನಗೆ ಮೊಗದಾ ಶ್ರೀಕಾಂತಿ 
ಬಿಳಿಯಾ ಮೋಡದ ಹಿಂದೆ ಹೊಳೆಯುತಿತ್ತು 
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ

ದಡವೇ ಇಲ್ಲದ ನಮ್ಮದೆ ಸಮುದ್ರದಲ್ಲಿ ಹೊಸ ಹೊಸ ಗುರಿಯೆಂಬ ದಡಗಳು ಹುಟ್ಟಲಾರಂಬಿಸಿದವು,ಅಂಬಿಗನಂತೆ ದಾರಿ ತೋರುವ ಶಿಕ್ಷಣ ವ್ಯವಸ್ಥೆಯನ್ನ ತಬ್ಬಿಕೊಂಡು ಮುಂದುವರಿಯಲಾರಂಭಿಸಿದೆವು,ಸಂತಸದ ಜಾಗದೊಳಗೆ ಖಿನ್ನತೆ ಭಾವಗಳೂ ಒಂದಿಂಚೂ ಆಕ್ರಮಿಸಿ ಸೂರು ಪಡಕೊಂಡವೂ.ಗೊತ್ತಿದ್ದೋ ಗೊತ್ತಿಲ್ಲದೆಯೋ ಸಹನೆ,ಉನ್ಮಾದ,ಕೋಪ, ದ್ವೇಷ,ನಾನು,ಎಂಭಿತ್ಯಾದಿ ಬಿಳಿಮೋಡದೊಳಗಿನ ಕಪ್ಪು ಕಲೆಗಳನ್ನೂ ಮೈದಡವಲಾರಂಭಿಸಿದೆವು ಅದು ನಮ್ಮೊಳಗೆ ಹುಟ್ಟಿದ ಬಿಳಿ ಪದರದ ಹೊದಿಕೆ ಹೊಂದಿದ ಕಾರ್ಮುಗಿಲು.ಇವೆಲ್ಲವದರ ಮದ್ಯೆಯೂ ಆಗಾಗ ನೆನಪಾಗೊ ಆ ಮೊದಲ ಮಳೆಗಾಲ ಮುದವೆನಿಸುವ ತುಂತುರು ಸುಳಿಗಾಳಿಯೊಡಲಿನ ಮುಂಜಾವೂ ತುಂಬುತಿತ್ತು ಚೈತನ್ಯ . ಮುಂದುವರಿದಂತೆ ಇದ್ದುದರ ಬಗ್ಗೆ ಒಂತರಾ ಜಿಗುಪ್ಸೆ, ಹೊಸತೊಂದನ್ನು ನಮ್ಮದಾಗಿಸುವ ಆಸೆಗಳು.ಯಾಕೋ ತಾಯೆ ಬಂಧನದಲ್ಲಿರಿಸಿದ ಭಾವ, ಬಂಧನ ಬಿಡಿಸಿಕೊಂಡು ನಭಕ್ಕೆ ನೆಗೆಯುವ ತುಡಿತ. 

ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ, 
ಅಡಗಲಿ ಎಷ್ಟು ದಿನ..? 
ದೂಡು ಹೊರಗೆ ನನ್ನ 
ಓಟ ಕಲಿವೆ ಒಳ-ನೋಟ ಕಲಿವೆ 
ನಾ ಕಲಿವೆ ಉರ್ಧ್ವಗಮನ 
ಓ ಅಗಾಧ ಗಗನ. 

ರೆಕ್ಕೆ ಬಿಚ್ಚಿದ ಹಕ್ಕಿ ಹಾರುತ್ತದೆಯೆ ಆದರೂ ಹಾರುವ ಕಲೆ ಕರಗತವಾಗಿರುವದಿಲ್ಲ ಈ ಕ್ಷಣಗಳಲ್ಲೆ ಒಂದಷ್ಟು ಯೌವನದ ಎಡವಟ್ಟುಗಳು ನಡೆದುಬಿಡುತ್ತದೆ ಅಮ್ಮನ ಮಡಿಲು ಬಿಟ್ಟಿದ್ದು ರೂಢಿಯಿಲ್ಲದವನೀಗೆ ಒಳನೋಟ ಕಲಿಯಲು ತನ್ನವರೆನಿಸಿಕೊಂಡವರ ಹುಡುಕಾಟದಲ್ಲಿ ತೊಡಗಿರುತ್ತೇವೆ, ಯಾಕೋ ನಿಂಗಿ ಪದ ಕಿವಿಗಪ್ಪಳಿಸುತ್ತದೆ... 

ನಿಂಗಿ ನಿಂಗಿ ನಿಂಗಿ ನಿಂಗಿ 
ನಿದ್ದಿ ಕದ್ದೀಯಲ್ಲೆ ನಿಂಗಿ 
ನಿಂಗಿ ನಿಂಗಿ ನಿಂಗಿ ನಿಂಗಿ 
ಆಸಿ ಎದ್ದೀತಲ್ಲೆ ನಿಂಗಿ 
ಚಂದಾನ ಚಂದ್ರ – ಹೊಯ್ಯಾರೆ ಹೊಯ್ಯ 
ಭೂಮಿಗ ಲಾಂದ್ರ – ಹೊಯ್ಯಾರೆ ಹೊಯ್ಯ 
ಆಗ್ಯಾನ ನೋಡಲ್ಲಿ 

ಹಿಂಗೆ ಮುಂದುವರಿದೂ ಜಾಲಿ ಬಾರಿನಲ್ಲಿ ಮೂರು ಪೋಲಿ ಗೆಳೆಯರು ಗೋಪಿಯನ್ನೂ ಗೋಳು ಹೊಯ್ಕೊಳೋದು, ಹೆಂಡ ಹೆಂಡತಿ ಕನ್ನಡದ ರತ್ನನ್ ಪದಗಳೂ ನೆನಪಾದರೂ ಆದೀತೂ :) ಕಾಲಾಯೈ ತಸ್ಮೈ ನಮಃ ......(ಕಫಾಲಿ ಟಾಕೀಸ್ ನಲ್ಲಿ ನೇತಾಕಿದ್ದ ಪಿಚ್ಚರ್ ಪೋಷ್ಟರ್ ನೆನಪಿಗೆ ಬಂತು. :) ). 

ಅಮ್ಮನ ರಕ್ಷೆಯ ಗೂಡೂ ಬೇಡೆಂದು ಹೊರಬಂದಾದ ಮೇಲೂ ಮಗದೊಬ್ಬರ ಪ್ರೀತಿಯ ಕಕ್ಷೆಯೊಳಗೆ ಸೇರಿಕೊಂಡು ತಿರುಗಲಾರಂಭಿಸುತ್ತೇವೆ, ಬಾಳೆಂಬುದು ಬಂಧನದಿಂದ ಮುಕ್ತವಾದುದಲ್ಲವೆಂಬುದರ ಸತ್ಯ ಬಹಳ ಸಲ ಅರಿವಿಗೆ ಬಂದಿರುವದೆ ಇಲ್ಲ.ಈಗೀಗ ಮನಸ್ಸು ಬದುಕು ತಂದೊಡ್ಡುವ ತೂಫಾನನ್ನು ಎದುರುಗೊಳ್ಳುತ್ತದೆ ಹೆಚ್ಚಿನೆಲ್ಲಾ ಏಟು ತಿಂದು ಬಿಕ್ಕಳಿಸಿ ಸುಮ್ಮನಾಗಿ ಮಲಗಿಬಿಡುವ ಮಗುವಿನಂತೆ ಸೋಲೊಪ್ಪಿಕೊಳ್ಳುತ್ತದೆ, ರಚ್ಚೆ ಹಿಡಿದು ಹಠ ಹಿಡಿವ ಸ್ವಭಾವವನ್ನೂ ರೂಢಿಸಿಕೊಳ್ಳುತ್ತದೆ,ಎಷ್ಟೋ ಸಲ ಬದುಕಲ್ಲಿ ಮುಖ್ಯವಾದುದನ್ನೂ ಕಳೆದುಕೊಳ್ಳುತ್ತಾ ಇದ್ದೀನಿ ಎಂಭ ಭಯದಲ್ಲೆ ಹಿಡಿದಿಟ್ಟುಕೊಳ್ಳಬೇಕೆಂಬ ಛಲದಲ್ಲೆ ಎಲ್ಲವನ್ನೂ ಕಳೆದುಕೊಂಡಿರುತ್ತೇವೆ.ಮತ್ತೆ ಕಳೆದ ಸಂತಸದ ಕಡಲು ಬಾಲ್ಯ ನೆನಪಾಗಿರುತ್ತದೆ. 

ಕಾಣದ ಕಡಲಿಗೆ ಹಂಬಲಿಸಿದೆ ಮನ 
ಕಾಣಬಲ್ಲೆನೆ ಒಂದು ದಿನ 
ಕಡಲನು ಕೂಡಬಲ್ಲೆನೆ ಒಂದುದಿನ!!!! 

ಬರಬರುತ್ತಾ ಬದುಕು ಪಕ್ವವಾಗುತ್ತೆ , ಸ್ವ ಸಾಮರ್ಥ್ಯದಿಂದ ರೆಕ್ಕೆ ಬಿಚ್ಚಿ ಹಾರುವ ಕಲೆಯೂ ರೂಢಿಯಾಗುತ್ತೆ, ಏಟೂ ತಿಂದ ಮನಸ್ಸು ಹೊಸತೊಂದರತ್ತ ಹೊರಳಿರುತ್ತದೆ, ನಿಜ ಹೇಳಲಾ ಸಂಗಾತಿ ದೊರೆತ ಈ ಕಾಲದಲ್ಲೆ ಅಮ್ಮ ಮತ್ತೆ ನೆನಪಾಗ್ತಾಳೆ, ಮನಸ್ಸು ಅಮ್ಮ ಮತ್ತು ಸಂಗಾತಿ ಪ್ರೀತಿಯನ್ನೂ ಬೇಡವೆಂದರೂ ಅಳತೆ ಮಾಡಿಯೇ ಸಿದ್ದವೆಂದು ರಚ್ಚೆ ಹಿಡಿದು ನಿಲ್ಲುತ್ತೆ. ತಾಯಿ ಪ್ರೀತಿಯೆ ಗೆಲ್ಲುತ್ತೆ ಆದರೂ ಸಂಗಾತಿ ಪ್ರೀತಿಯ ಆಸರೆಯೊಂದಿಗೆ ಮತ್ತೆ ತಾಯಿ ಮಡಿಲು ನೆನಪಾಗುತ್ತೆ, ಅದಕ್ಕೆ ಇರಬೇಕು ಆಕೆಯ ಪ್ರೀತಿಯನ್ನೂ ತಾಯಿ ಪ್ರೀತಿಗೆ ಹೋಲಿಸಿಕೊಂಡು ಆಕೆಯನ್ನು ಸಂಗಾತಿಯೆಂದು ಒಪ್ಪಿಕೊಳೋದು, ಪ್ರೀತಿಯೂ ಒಂದು ಉಪಾಸನೆಯಾಗಿ ಕಾಣೋದು. 

ನಿನ್ನ ಸವಿನೆನಪೆ ಮನದಲ್ಲಿ 
ಆರಾಧನೆ............ 
ಪ್ರೀತಿಯ ಸವಿಮಾತೆ ಉಪಾಸನೆ 

ಮಡಿಲ ಬಯಸುವ ಮನ ಮತ್ತೆ ಬಾಲ್ಯದತ್ತ ಹೊರಳೋದು ಸಹಜ, ಪ್ರೌಢತೆಯ ಮದ್ಯೆ ಬಾಲ್ಯ ತುಂಟಾಟ ಅಲ್ಲಲ್ಲಿ ನುಸುಳುತ್ತದೆ,ಹುಟ್ಟು ತರಲೆ ಗುಣ ಸುಟ್ಟರೂ ಹೋಗದಂತೆ,ಮನುಷ್ಯನ ಜೀವಿತಾವಧಿ ತುಂಬಾ ಬಾಲ್ಯದ ನೆನಪುಗಳು ಎಡೆ ಬಿಡದೆ ಕಾಡುತ್ತೆ, ಹೊಸ ಚೈತನ್ಯಗಳನ್ನು ಹುದುಗಿಸಿ ಇಟ್ಟು ಕೊಂಡಿರುವ ಆ ಖಜಾನೆ ಯಾವತ್ತೂ ಬರಿದಾದುದಲ್ಲ, ಮುಪ್ಪು ಮತ್ತೊಂದು ಬಾಲ್ಯದತ್ತ ನಡೆಯೊ ಹೆಜ್ಜೆ ಎಂಬುದು ತಿಳಿದವರ ಅಂಬೋಣ, ನನ್ನ ಅಜ್ಜ -ಅಜ್ಜಿಯ ಮುಪ್ಪಿನ ದಿನಗಳನ್ನೂ ನೆನಪಿಸಿಕೊಂಡಾಗ ಈ ಮಾತನ್ನೂ ಸಾರಸಗಟಾಗಿ ತಳ್ಳಿಹಾಕುವದೂ ಕೂಡ ನನ್ನಿಂದ ಸಾಧ್ಯವಿಲ್ಲ, 

ಏ ದುನಿಯಾವಾಲೇ ಪೂಛೇಂಗೇ 
ಮುಲಾಖಾತ್ ಹುಯೀ? 
ಕ್ಯಾ ಬಾತ್ ಹುಯೀ? 

ಮುಪ್ಪು ಬಾಲ್ಯದ ತುಂತುರ ಹನಿಯ ಮೋಡವನ್ನು ಜೀವನದಲ್ಲಿ ಮತ್ತೊಮ್ಮೆ ಸಂಧಿಸುವ ಕಾಲವೆಂದಾದಲ್ಲಿ ಮುಪ್ಪೆಂಬುದು ನಮ್ಮದೆ ಜೀವನದ ಏಳೂ ಬೀಳನ್ನೂ ಅವಲೋಕಿಸಿ ಅಜ್ಜಿ ತಾತ ಎಂದೆನ್ನುವ ಮಕ್ಕಳೊಂದಿಗೆ ಮಕ್ಕಳಾಗಿ ಮಾರ್ದಗರ್ಶಿಯಾಗುವ ಕಾಲ.ಜೀವವೊಂದರ ಕೊನೆ ಮಗದೊಂದು ಜೀವದ ಹುಟ್ಟೆ ಆದರೆ ಮತ್ತದೆ ಬಾಲ್ಯ ಮರುಕಳಿಸೀತೂ ಎಂಭ ಆಸೆಯೊಂದಿಗೆ ಗುನುಗಲಡ್ಡಿಯಿಲ್ಲ ಕೆಳಗಿನ ಹಾಡು..... 

ಕರೆದು ಬಿಡು, 
ಬಂದುಬಿಡುವೆನೆಲ್ಲಿಂದಲೆ ಆಗಲಿ 
ಬೆಟ್ಟ ಹತ್ತಿ ಹೊಳೆಯ ದಾಟಿ 
ಯಾರೆ ನನ್ನ ತಡೆಯಲಿ....

Friday, October 26, 2012

ಕನಸಿನ ಬಣ್ಣ......

ಹೃದಯ ಜೋಪಡಿಯೊಳಗೆ
ಅವಿತಿಟ್ಟ ಭಾವನೆಗಳ ರೂಪವೆ
ನನ್ನ ಮಾತು.

ಮನದ ಸಂದಿಯೊಳಗೆ
ಅಡಗಿರುವ ಋಣಾಂಶವೆ
ನನ್ನೊಳಗಿನ ಅಸಹನೆ.

ನಾ ಪಡೆವ ಒಲವೂ
ಅದರತ್ತಲಿನ ತುಡಿತವೇ
ನನ್ನುಸಿರು.

ಅರ್ಥವಿಲ್ಲದ ನಾನು ಎಂಬೊಳಗೆ
ಎಲ್ಲಾವೂ ನೀನಾದರೆ
ಅದೆ ನನ್ನ ನಿಟ್ಟುಸಿರು.

ನೋವ ಕಾರ್ಮುಗಿಲ ದಿನದಲ್ಲಿ
ಮೌನಕ್ಕೆ ಶರಣಾಗುವದೆ
ನನ್ನ ಏಕಾಂತ.

ನನ್ನ ಬಣ್ಣ ಬಿಚ್ಚಿಡುತ್ತಲೆ
ನಿನ್ನವನಾಗುವ ಕನಸು
ನನ್ನ ಬಯಕೆ

ನೀನು ನಾನು ಭೇಧವಿಲ್ಲದೆ
ಎಲ್ಲವೂ ನಾವೆಂದಾದಲ್ಲಿ
ಸಂಶಯ ಬೇಡ
ನೀನೆ ಎನ್ನ ಅರಸಿ.

Sunday, October 21, 2012

ತನ್ನೊಳಗಿನ ಪ್ರಶ್ನೋತ್ತರ

ಪ್ರಶ್ನೆ ಎದುರಿಸಬೇಕಾ? ಹೌದು ಪ್ರಶ್ನೆಗಳೂ ನಮ್ಮಲ್ಲಿ ಹುಟ್ಟಿಕೊಳ್ಳುತ್ತಲೆ ಇರಬೇಕು ಉತ್ತರ ಕಂಡುಕೊಳ್ಳುತ್ತಲೆ ಇರಬೇಕು ಆ ಮೂಲಕ ಮಗದೊಂದು ಮಜಲಿನ ಪ್ರಶ್ನೆಗಳ ಎಡತಾಕಲು ಸಿದ್ದತೆ ನಡೆಯುತ್ತಲೆ ಇರಬೇಕು, ಇದೆ ಜೀವನದ ಚಲನಶೀಲತೆ, ಸುಲಭಾರ್ಥದಲ್ಲಿ ಜೀವನೋತ್ಸಾಹದ ಜೀವಂತಿಕೆಯನ್ನು ಸಜೀವವಾಗಿರುಸುವಲ್ಲಿನ ರಹದಾರಿ. ಉತ್ತರವಿಲ್ಲದ ಪ್ರಶ್ನೆಗಳೆ ಇಲ್ಲವೆಂದಾದ ಮೇಲೆ ಉತ್ತರಕ್ಕಾಗಿ ನಡೆಯುವ ನಮ್ಮೊಳಗಿನ ಹುಡುಕಾಟ ನಮ್ಮನ್ನು ನಾವು ಜಾಡ್ಯದ ಬಲೆಗೆ ಬೀಳದಂತೆ ಕಾಯೊ ರಿಪ್ರೆಶ್ ಮೆಂಟ್ ಕ್ರಿಯೆ ಹಾಗೂ ಪ್ರೌಢತೆಯತ್ತ ಸಾಗುವ ಸುಲಭದ ಬೆಳವಣಿಗೆ.

ಪ್ರಶ್ನೆಗಳು ಇತರರಿಂದಲೂ ಬರಬಹುದು, ಸ್ವಿಕರಿಸಬಹುದಾದ ಆಯ್ಕೆ ನಮ್ಮದೆ, ಇದು ನನ್ನ ಒಳಿತಿಗಾಗಿನ ಪ್ರಶ್ನೆಯೆ? ಉತ್ತರಿಸಬೇಕಾದ ಜರೂರಿಗಳಿವೆಯೆ? ಪ್ರಶ್ನೆಕಾರನ ಕಾಳಾಜಿ ಎಂತದ್ದೂ? ಎಂಭಿತ್ಯಾದಿ ವಿಮರ್ಶೆ ನಮ್ಮಲ್ಲಿ ಹುಟ್ಟಬೇಕಾಗುತ್ತದೆ, ಈ ಪ್ರೌಢತೆಯನ್ನೂ ಗಳಿಸಬಲ್ಲುದಾದ ನಮ್ಮೊಳಗಿನ ಸಿದ್ದತೆ ಮೇಲೆ ಹೇಳಿದಂತೆ ನಮ್ಮನ್ನೆ ನಾವೂ ಪ್ರಶ್ನೆ ಮಾಡಿಕೊಳ್ಳುವದರಿಂದ ಹುಟ್ಟಿಕೊಳ್ಳುವಂತದ್ದು.ಪ್ರಶ್ನೆಗಳು ಕೆಲವೊಮ್ಮೆ ಸಲಹೆಗಳಾಗಿಯು ರೂಪುಗೊಳ್ಳುತ್ತದೆ ಅಥವಾ ಪ್ರಶ್ನೆಗಳ ಕೊನೆಯಲ್ಲಿ ಮಾರ್ಗದರ್ಶಿ ಸಲಹೆಗಳು ಅಡಗಿಕೊಂಡಿರುತ್ತದೆ ಇದ ಗುರುತಿಸಬಹುದಾದ ಮೆಚ್ಯೂರಿಟಿ ನಮ್ಮಲ್ಲಿ ಬೇಕಷ್ಟೆ. ಒಂದು ಮಗು ಪ್ರಶ್ನೆ ಮಾಡುತ್ತನೆ ಬೆಳೆಯುತ್ತೆ, ಬಾಲ್ಯ ಕಳೆದು ಪ್ರೌಢತೆಯನ್ನು ಪಡೆಯುತ್ತೆ ಅನ್ನುವದನ್ನು ನಾವು ಮರೆಯಬಾರದು.

ಇದಷ್ಟೆ ಅಲ್ಲದೆ ಪ್ರಶ್ನೆಗಳು ತನ್ನ ಜೊತೆ ಹಲವು ಭಾವಗಳನ್ನೂ ಹೊರ ಸೂಸುತ್ತವೆ, ಪ್ರಮುಖವಾದುವುಗಳೆಂದರೆ ಕೋಪ, ದರ್ಪ, ಅಹಂಕಾರ,ಸಹನೆ, ಕರುಣೆ ಇತ್ಯಾದಿ, ಇವುಗಳಲ್ಲಿ ಸೂಕ್ತವಾದುದಕ್ಕೆ ಉತ್ತರಿಸಬೇಕಾದಕ್ಕೆ ಉತ್ತರಿಸಿ ಮೌನಕ್ಕೆ ಶರಣಾಗುವದೂ ಮಾನಸಿಕ ನೆಮ್ಮದಿ ದೃಷ್ಟಿಯಿಂದ ನಮ್ಮ ಚೈತನ್ಯಗಳನ್ನೂ ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಸೂಕ್ತ. ಕೆಲ ಪ್ರಶ್ನೆಗಳಿಗೆ ಮೌನ ಕೂಡ ಸೂಕ್ತ ಉತ್ತರವಾಗಬಲ್ಲುದು.ಪ್ರಶ್ನೆಗಳಿಗೆ ಉತ್ತರಿಸಬೇಕಾದಲ್ಲಿ ಪ್ರಮುಖವಾಗಿ ಅಳವಡಿಸಿಕೊಳ್ಳಬೇಕಾದುದು ಏನೆಂದರೆ "ಕಡಿಮೆ ಮಾತು ಸ್ಪಷ್ಟ ಸಂದೇಶ", ಈ ಸೂತ್ರ ಅಳವಡಿಸಿಕೊಂಡಿದ್ದೆ ಆದರೆ ಇದು ಕೊಡಬಲ್ಲುದಾದ ಉತ್ತರದ ಮೌಲ್ಯವನ್ನ ಹೆಚ್ಚಿಸುತ್ತದೆ ಮತ್ತು ಅನಾವಶ್ಯಕ ಕಿರಿ ಕಿರಿಯನ್ನೂ ಮನ ತಾಕದಂತೆ ದೂರವಿರಿಸುತ್ತದೆ,

ಕೆಲವೊಂದು ಉತ್ತರಗಳೂ ಪ್ರಶ್ನೆಯ ರೂಪದಲ್ಲೆ ಇದ್ದು ಅದರೆ ಅದು ಪ್ರಶ್ನೆಯಾಗಿರದೆ ಉತ್ತರವಾಗಿರುತ್ತದೆ. ಉದಾಹರಣೆಗೆ ನನಗೆ ಗೊತ್ತಿಲ್ಲ ಅನ್ನುವದಕ್ಕೆ ಯಾವನಿಗೊತ್ತು?ಯಾರಿಗೊತ್ತು? ಹಂಗೆ ಆದ್ರೆ ಒಳ್ಳೇದು, ಹಾಗೆಯೆ ಅಗ್ಬೇಕೂ ಅನ್ನೋದಕ್ಕೆ ಯಾಕೆ ಆಗ್ಬಾರ್ದೂ? ಇತ್ಯಾದಿ........ ಅದರೆ ಇವುಗಳಲ್ಲಿ ಒಂದು ಸ್ಪಷ್ಟ ಸಂದೇಶ ಇದ್ದೆ ಇರುತ್ತದೆ, ಅದು ಎದುರಿಗಿದ್ದವನ ಮೈಂಡ್ ರೀಚ್ ಅಗುವಂತದ್ದೂ.ಈ ಸ್ಪಷ್ಟತೆ ಪ್ರಶ್ನೆಯಲ್ಲಾಗಲಿ ಕೊಡುವ ಉತ್ತರದಲ್ಲಾಗಲಿ ಇದ್ದಲ್ಲಿ ಮಾತ್ರ ಯಾವುದೆ ವಿಚಾರ ಮನದಟ್ಟಾಗಬಲ್ಲುದು ಅಥವಾ ತಾರ್ಕಿಕ ಅಂತ್ಯ ಪಡೆಯಬಲ್ಲುದು.ಒಂದು ವೇಳೆ ಉತ್ತರ ಅಥವಾ ಪ್ರಶ್ನೆಗಳಲ್ಲಿ ಸ್ಪಷ್ಟ ಸಂದೇಶವಿಲ್ಲವೆಂದಾದಲ್ಲಿ ತಪ್ಪು ತಿಳುವಳಿಕೆಗೆ ಕಾರಣವಾಗುತ್ತದೆ ಅಥವಾ ಇನ್ನಷ್ಟೂ ಪ್ರಶ್ನೆ -ಉತ್ತರಗಳ ಹುಟ್ಟುವಿಕೆಗೆ ಕಾರಣವಾಗುತ್ತದೆ, ಇದು ಸುಲಭದಲ್ಲಿ ಗುಣವಾಗುವ ವೃಣವೊಂದನ್ನೂ ಕೆರೆದು ದೊಡ್ಡದಾಗಿಸಿದಂತೆ.ಹೀಗಾಗಬಾರದೆಂದರೆ ನಾವು ಕೇಳುವ/ಹೇಳುವ - ಉತ್ತರ/ಪ್ರಶ್ನೆಗಳಲ್ಲಿ ಸಾಚಾತನವಿರಬೇಕು ಅಲ್ಲದೆ ನಮ್ಮ ಮಾತಿನಲ್ಲೊಂದು ತೂಕವಿರಬೇಕು, ಈ ಪ್ರೌಢತೆ ನಮ್ಮಲ್ಲಿ ಬರಬೇಕಾದರೆ ನಾವೂ ನಮ್ಮಲ್ಲೆ ಪ್ರಶ್ನೋತ್ತರ ಕ್ರಿಯೆಯಲ್ಲಿ ತೊಡಗಿರಬೇಕು, ಇನ್ನೊಬ್ಬರು ಹೇಳಿಕೊಟ್ಟು ಬರಲಾರದ , ಪ್ರೌಢತೆಯನ್ನೂ ಸಂಪಾದಿಸುವ ಈ ದಾರಿ ನಮ್ಮನ್ನೂ ನಾವೂ ಅವಲೋಕಿಸುವ ನಿಟ್ಟಿನಲ್ಲಿ ಅತ್ಯಂತ ಸುಲಭದ್ದೂ ಹೌದು.

ಅವನಿಗೆ ಟೈಮ್ ಸೆನ್ಸ್ ಇಲ್ಲಾ! ಹಣಕಾಸು ವ್ಯವಹಾರದಲ್ಲಿ ವೆರಿ ಪುವರ್!! ಶುದ್ದ ಬಾಯಿ ಹರುಕ!! ಅಹಂಕಾರಿ!!! ಮನೆಹಾಳ!!!!ಮುಂತಾದ ಅಪಾದನೆಗಳೂ ಸಮಾಜದಲ್ಲಿ ಸುಲಭವಾಗಿ ನಮ್ಮ ಬೆನ್ನೇರಿಬಿಡಬಹುದು.ಈ ಅಪಾದನೆಗಳಲ್ಲಿ ಹುರುಳಿರಬೇಕೆಂದೇನಿಲ್ಲ,ಅದ್ದರಿಂದ ಅನಗತ್ಯವಾಗಿ ತಲೆಕೆಡಿಸಿಕೊಳ್ಳಬೇಕೆಂದೇನಿಲ್ಲ, ಅಪಾದನೆ ಹೊರಿಸಬಲ್ಲವನಿಗೆ ಅವನದೆ ಅದ ಲಾಭದಾಯಕ ಅಥವಾ ಹವ್ಯಾಸದ ಕಾರಣಗಳಿರಬಹುದು.ಹಾಗಂತ ಈ ಅಪಾದನೆಗಳನ್ನೂ ಏಕಾಏಕಿ ದೂರ ಮಾಡದೆ ಒಂದು ಸಲ ನಮ್ಮದೆ ಮನಸಾಕ್ಷಿಯನ್ನು ಸವರಿ ಬಂದಲ್ಲಿ ಋಣಾತ್ಮಕ ಅಂಶಗಳನ್ನೂ ಧನಾತ್ಮಕವಾಗಿ ಬದಲಾಯಿಸಿಕೊಂಡು ನಾವೂ ಬೆಳೆಯಲು ಪೂರಕವಾಗಿ ಈ ಅಪಾದನೆಗಳು ಸಹಕಾರಿಯಾಗಬಹುದು.ಮನಸಾಕ್ಷಿಗೆ ವಿರುದ್ದವಾಗಿ ಯಾವೂದೆ ಕೆಲಸ ನಮ್ಮಿಂದ ಆಗಿದೆ ಅನ್ನುವ ತೀರ್ಪು ಮನಸಾಕ್ಷಿ ಕೊಟ್ಟಲ್ಲಿ, ಆ ಕ್ಷಣದಲ್ಲೆ ತಪ್ಪನ್ನು ಸರಿಪಡಿಸಿಕೊಂಡರೆ ಒದಗಬಹುದಾದ ದೊಡ್ಡ ಅಪಾಯವನ್ನೂ ಜೀವಂತಿಕೆಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಪ್ಪಿಸಿದಂತೆ. ಈ ಮನಸಾಕ್ಷಿಯನ್ನೂ ಎದುರುಗೊಳ್ಳುವ ದಾರಿಯೂ ಮತ್ತೇನಲ್ಲ ಅದು ನಮ್ಮನ್ನೆ ನಾವೂ ನಮ್ಮ ಬೆಳೆವಣಿಗೆ ನಿಟ್ಟಿನಲ್ಲಿ ಪ್ರಶ್ನಿಸಿಕೊಳ್ಳುವದೆ ಆಗಿರುತ್ತದೆ.

ತಪ್ಪುಗಳನ್ನೂ ಒಪ್ಪಿ ತಿದ್ದಿಕೊಳ್ಳೋದಕ್ಕೆ ಬೇಕಾದ ಮನೋಸ್ಥೈರ್ಯ , ತಪ್ಪೆಂದು ಅರಿವಾಗಬಲ್ಲ ಅರಿವುಗಳು, ನಮ್ಮೊಳಗೆ ನಡೆಯುವ ಪ್ರಶ್ನೊತ್ತರ ಕ್ರಿಯೆಯು ನಮಗೆ ಕೊಡಬಲ್ಲುದು.ನಮ್ಮ ನಡೆವಳಿಕೆಗಳಲ್ಲಿನ ಹುಳುಕುಗಳನ್ನೂ ಸರಿಡಿಸಿಕೊಳ್ಳಬೇಕಾದ್ದೂ ನಾವೆ ಹೊರತಾಗಿ ಇನ್ಯಾರಲ್ಲ. ಈ ನಿಟ್ಟಿನಲ್ಲಿ ಇತರರ ಸಲಹೆಗಿಂತ ಹೆಚ್ಚಿಗೆ ಲಾಭದಾಯಕವೆನಿಸುವದು ನಮಗೆ ನಾವೆ ಒಡ್ಡಿಕೊಳ್ಳಬಹುದಾದ ಪ್ರಶ್ನೆಗಳೂ ಮತ್ತು ಉತ್ತರ ಹುಡುಕಾಟ ಕ್ರಿಯೆಯಲ್ಲಿ ದೊರೆವ ಅರಿವು.ತನ್ನ ಜೀವನವೂ ತನಗೆ ಆದರ್ಶವಾಗಿದ್ದೂ ಹಾಗೂ ತೃಪ್ತಭಾವ ಹೊಂದಿರಬೇಕಾದ್ದೂ ಮೊದಲೂ ತದ ನಂತರವೇ ಉಳಿದದ್ದೆಲ್ಲ, ಹೀಗಿರಬೇಕಾದರೆ ನಮ್ಮ ನಡೆ ನಮ್ಮ ಮನಸಾಕ್ಷಿ ಒಪ್ಪುವಂತಿರಬೇಕು.ಮನಸಾಕ್ಷಿಯನ್ನೂ ತಿಳಿಯುವ ಕ್ರಿಯೆಯೆ ನಮ್ಮೊಳಗೆ ನಡೆವ ಪ್ರಶ್ನೋತ್ತರ.ಒಳ್ಳೆ ಕಾಲಗಳೂ , ಒಳ್ಳೆ ಮಂದಿ ನಮ್ಮ ಜೀವನದಲ್ಲಿ ಬಂದಿದ್ದೂ ಗೊತ್ತಾಗಲ್ಲ ಮುಂದುವರಿದಿದ್ದೂ ಗೊತ್ತಾಗಲ್ಲ ಗೊತ್ತಾಗಬೇಕಾದರೆ ವರುಷಗಳು ಉರುಳಿರುತ್ತವೆ.ಹೀಗಾಗಬಾರದೆಂದರೆ ತನ್ನೊಳಿತಿಗೆ ತನ್ನನ್ನೆ ತಾನೂ ತನ್ನೊಳಗೆ ಪ್ರಶ್ನಿಸಿ ಅವಲೋಕಿಸಿಕೊಳ್ಳುವದು ಶುಭ, ಮನುಷ್ಯ ಮಾತ್ರನಿಂದ ಸಾಧ್ಯವಾಗಬಲ್ಲ ಈ ಕ್ರಿಯೆಯಿಂದ ವಿಮುಖನಾಗುವದಷ್ಟೆ ಅಶುಭ.ಆಯ್ಕೆಯಂತು ನಮ್ಮದೆ. :) :)

Tuesday, October 2, 2012

ದೃಷ್ಟಿ

ಅಕಾರ ಹೀನ
ನಿರಾಕಾರವಾದ
ದೃಷ್ಟಿಯೂ
ಚೆಂದವಾಗಿ
ರೂಪುಗೊಳ್ಳುವದು
ಸುಂದರ ಕಣ್ಣುಗಳ
ಅಪ್ಪುಗೆಯಲ್ಲಿ
ಎಂಬುದು
ನಿರ್ವಿವಿವಾದ
ದೃಷ್ಟಿಯು
ಸುಂದರವೆ ?
ಎಂಬುದು
ನಿಲುಕಿಗೆ
ನಿಲುಕದ್ದು.

ಇಂತದೆ
ಕಣ್ಣುಗಳ
ನಾ ನೋಡಿದ
ಕ್ಷಣದಿಂದ
ಆ ನೇತ್ರಗಳ
ಸೌಂದರ್ಯ
ದೃಷ್ಟಿ ಸುಂದರತೆಯ
ಎಡತಾಕದೆ
ಒಟ್ಟಾರೆ
ಚಂದವಷ್ಟೆ
ಚಂದವಾಗಿ
ಮನದೊಳಗೆ
ಮನೆಮಾಡಿತು

ಮುಂದುವರಿದು
ಆ ಬೊಗಸೆ ತುಂಬೊ
ಬಟ್ಟಲು ಕಣ್ಣೊಳಗೆ
ಮೂಡಿದ ನನ್ನ ಪಡಿಯಚ್ಚು
ನನ್ನನೆ ಮಾಸಿ
ನನ್ನ ಗಮನಿಸಿದ
ದೃಷ್ಟಿಯೊಂದೆ
ತುಂಬಿತು
ನನ್ನೊಳಗೆ.

Photo: ದೃಷ್ಟಿ
----------------

ಅಕಾರ ಹೀನ
ನಿರಾಕಾರವಾದ
ದೃಷ್ಟಿಯೂ
ಚೆಂದವಾಗಿ
ರೂಪುಗೊಳ್ಳುವದು
ಸುಂದರ ಕಣ್ಣುಗಳ
ಅಪ್ಪುಗೆಯಲ್ಲಿ
ಎಂಬುದು
ನಿರ್ವಿವಿವಾದ
ದೃಷ್ಟಿಯು
ಸುಂದರವೆ ?
ಎಂಬುದು
ನಿಲುಕಿಗೆ
ನಿಲುಕದ್ದು.

ಇಂತದೆ
ಕಣ್ಣುಗಳ
ನಾ ನೋಡಿದ
ಕ್ಷಣದಿಂದ
ಆ ನೇತ್ರಗಳ
ಸೌಂದರ್ಯ
ದೃಷ್ಟಿ ಸುಂದರತೆಯ
ಎಡತಾಕದೆ
ಒಟ್ಟಾರೆ 
ಚಂದವಷ್ಟೆ
ಚಂದವಾಗಿ
ಮನದೊಳಗೆ
ಮನೆಮಾಡಿತು

ಮುಂದುವರಿದು
ಆ ಬೊಗಸೆ ತುಂಬೊ
ಬಟ್ಟಲು ಕಣ್ಣೊಳಗೆ
ಮೂಡಿದ ನನ್ನ ಪಡಿಯಚ್ಚು
ನನ್ನನೆ ಮಾಸಿ
ನನ್ನ ಗಮನಿಸಿದ
ದೃಷ್ಟಿಯೊಂದೆ
ತುಂಬಿತು
ನನ್ನೊಳಗೆ.