Thursday, April 26, 2012

ನನ್ನೊಳಗೆ ಇಬ್ಬರು.

ಅವಳ ಮುಂದೆ
ನಾ ನಿಂತಾಗ
ನಾನೊಬ್ಬನೆ ಆದರೂ
ನನ್ನೊಳಗೆ ಇಬ್ಬರು,
ಭಾವದ ನೆರಳು ಬೆಳಕಿನಾಟ.

ಅದುಮಿಟ್ಟ ಮಾತುಗಳು
ನನ್ನೊಳಗೆ ಪಿಸುಗುಡುವಾಗ
ತುಟಿಯು ಕದವಿಕ್ಕಿ ಬೀಗಜಡಿದು
ಅಂಚಿಗೆ ಬಂದ ನುಡಿಗಳನ್ನ
ಮತ್ತೆ ನನ್ನೊಳಗೆ ದೂಡುತ್ತಲಿತ್ತು
ಮುಖದಿ ನಸುನಗೆಯ ಚೆಲ್ಲಿ.

ಆ ಕ್ಷಣದಲಿ ನಾನು ನನ್ನೊಳು
ಹೊರಗೊಬ್ಬ ಒಳಗೊಬ್ಬ.

ನಾನು?ಅಂದರಾರು?
ಕೇಳುತ್ತಲಿದ್ದ ಒಳಗಿನಾತ
ಅದರ ಗ್ರಹಿಕೆ ಇದ್ದಂತಿರಲಿಲ್ಲ ನನಗೆ
ನಸುನಗುತ್ತಲೆ ಮಾತರಳಿಸುತಿದ್ದೆ
ಒಂದಕ್ಕೊಂದು ಸಂಬಂಧವೆ ಇಲ್ಲದ
ಶಬ್ದಗಳ ಹಾರವ ಪೋಣಿಸುತ.

ನಾನೆಂದರೆ ಎರಡೆ
ಅಥವಾ ಅವೆರಡು ಸೇರಿ ನಾನೆ?

ನಾ ಮನದ ಸಪ್ತಸಾಗರವ ದಾಟಬೇಕು,
ಸೂತ್ರ ಹರಿದ ಪಟದಂತೆ ನಭಕ್ಕೆ ನೆಗೆಯಬೇಕು
ಮನದೊಳಗೆ ಒತ್ತಿಟ್ಟ ಮಾತುಗಳ
ಅವಳಿಗೊಪ್ಪಿಸಿ ಮೌನವಾಗಬೇಕು
ನನ್ನೆರಡು ಒಂದಾಗಿ ನಾನು ನಾನಾಗಬೇಕು.

ಒಳಗಿನಾತ ಪಿಸುಗುಡುತಿದ್ದ

ನೀ ಮನದ ನೆರಳ ನೀಗಿ
ಬೆಳಕ ಎದುರುಗೊಂಡೀಯೆ?
ಅಂದುಕೊಂಡೆ ಬಿಸುಟ ದೇಹವ
ಸಡಿಲಿಸಿ ನುಡಿಯೊಪ್ಪಿಸಿ ಹಗುರಾಗಿಸಬೇಕು
ನಾನೊಂದಾಗಿ ಅವಳೊಡೆ ಸೇರಿ
ಮತ್ತೆರಡಾಗಿ ಒಂದಾಗಬೇಕೆಂದು.

Tuesday, April 24, 2012

ಕನ್ನಡ ಸಾಹಿತ್ಯ ಲೋಕ ವಿಸ್ತರಿಸಿಕೊಳ್ಳಬೇಕೆ?

ಕನ್ನಡ ಸಾಹಿತ್ಯ ಲೋಕ ಓದುಗರ ಬರವನ್ನು ಎದುರಿಸುತ್ತಿದೆ, ಅಂಕಿ ಅಂಶಗಳ ಮೂಲಕ ಅವಲೋಕಿಸಿದಾಗ ಇದು ನಿಜವು ಹೌದು.ಕನ್ನಡ ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ.ಕಳವಳಕಾರಿಯಾದ ವಿಷಯ ಹೌದಾದರು ಇದನ್ನು ಸರಿಪಡಿಸಬಹುದಾದ ಜರೂರಿ ಕೆಲಸಗಳಾಗಬೇಕಿದೆ ಅದರ ಅಗತ್ಯತೆಯೂ ಇವತ್ತಿದೆ, ಇದು ಅಸಾಧ್ಯದ ಮಾತು ಸರಿಪಡಿಸಲು ಸಾಧ್ಯವಿಲ್ಲ ಅನ್ನುವದನ್ನು ನಾನು ನಂಬಲಾರೆ. ಜೊತೆಗೆ ಬದಲಾವಣೆ ಹೊಂದಿದ ಕಾಲದಲ್ಲಿ ಬದಲಾವಣೆಗೆ ತಕ್ಕುದಾಗಿ ಸಾಹಿತ್ಯಲೋಕವು ಬದಲಾಗಬೇಕಿದೆಯೆ? ಅನ್ನುವ ಜಿಜ್ಞಾಸೆಯು ನನ್ನಲ್ಲಿ ಸುಳಿದಾಡುತ್ತಿದೆ .

ಕನ್ನಡ ಸಾಹಿತ್ಯಲೋಕದ ಸಂಪ್ರದಾಯಿ ಓದುಗರೇನು ಬದಲಾಗಿಲ್ಲ, ಆ ಒಂದು ವರ್ಗ ಇವತ್ತೂ ಕೂಡ ಕನ್ನಡ ಸಾಹಿತ್ಯ ಲೋಕದ ಬೆನ್ನೆಲುಬಾಗಿ ನಿಂತಿದೆ.ಅದರೆ ಆ ಸಮೂಹ ಕ್ರಮೇಣ ಕಡಿಮೆಯಾಗುತ್ತಾ ಬರುತ್ತಿದೆ ಅನ್ನುವದಕ್ಕಿಂತ ಆ ಸಮೂಹ ಬೆಳೆಯುತ್ತಿಲ್ಲ ಎಂದೂ ಹೇಳುವದು ಸರಿಯೇನೊ!! ಇಂಟರ್ ನೆಟ್ ಜಮಾನದ ಈ ದಿನಗಳಲ್ಲಿ ಕೈಬೆರಳಿಗೆ ನಿಲುಕುವಂತೆ ಮಾಹಿತಿಗಳು ಮತ್ತೊಂದು ಸಿಗುತ್ತಿರಬೇಕಾದರೆ, ತಮ್ಮದೆ ಒತ್ತಡದ ಬದುಕಿನಲ್ಲಿ ಜನ ಸಮೂಹ ಪ್ರಹವಿಸುತ್ತಿರುವಾಗ ಪುಸ್ತಕ ಕೊಂಡು ಓದಿಕೊಳ್ಳುವಂತ ತಾಳ್ಮೆ ವ್ಯವಧಾನಗಳು ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಈ ವಿಷಯವನ್ನು ತೆಗೆದುಕೊಂಡಾಗ ಪುಸ್ತಕದ ಮೇಲಿನ ಪ್ರೀತಿಯೇನೂ ಜನ ಸಮೂಹಕ್ಕೆ ಕಡಿಮೆಯಾಗಿಲ್ಲ ಅನ್ನುವದೆ ಸೂಕ್ತ. ಆದರೆ ಸಾಹಿತ್ಯಲೋಕದ ನಿಜ ಬೆಳವಣಿಗೆಯು ಬೇರೆಲ್ಲ ಮಾಧ್ಯಮದ ಹೊರತಾಗಿಯು ಪುಸ್ತಕ ಲೋಕದಿಂದಲೆ ಆಗಿದ್ದು ಹಾಗು ಆಗಬೇಕಿರುವದು.ಹಾಗಿರಬೇಕಾದರೆ ಪುಸ್ತಕ ಮೇಲಿನ ಪ್ರೀತಿಯನ್ನು ಪುಸ್ತಕಗಳನ್ನು ಕೊಂಡು ಓದುವ ಒಲವನ್ನು ಇನ್ನೂ ಹೆಚ್ಚಾಗಿ ಅದರಲ್ಲೂ ಮುಖ್ಯವಾಗಿ ಯುವ ಸಮುದಾಯದಲ್ಲಿ ಈ ಅಭಿರುಚಿಯನ್ನು ಬೆಳೆಸಬೇಕಾಗಿದೆ.ಇದು ಪುಸ್ತಕ ಕೊಳ್ಳಲೇ ಬೇಕು ಓದಲೇಬೇಕು ಎಂಭ ಒತ್ತಾಸೆಯ ಒತ್ತಾಯದಿಂದ ಮೂಡುವಂತದ್ದಲ್ಲ ಅನ್ನುವದು ಸ್ಪಷ್ಟ, ಹಾಗಿದ್ದಾವಾಗ ಈ ಅಭಿರುಚಿಯನ್ನ ಬೆಳೆಸಬಹುದಾದ ಮಾರ್ಗಗಳ ಕುರಿತು ಒಂದಷ್ಟು ಚಿಂತನೆ ಮಾಡಬೇಕಿದೆ. 

ಸಾಹಿತ್ಯಲೋಕದಿಂದ ಹೊರತಾಗಿ ಬೇರೆ ಬೇರೆ ವೃತ್ತಿಜೀವನದಲ್ಲಿ ತೊಡಗಿಸಿಕೊಂಡವರು, ಹೊರದೇಶದಲ್ಲಿ ನೆಲೆಸಿ ಕನ್ನಡದೆಡಗಿನ ಪ್ರೀತಿ ತೋರಿಸುವವರು ಇಂತಹ ಬಹಳಷ್ಟು ಮಂದಿ ತಮ್ಮದೆ ಬ್ಲಾಗ್ , ಪೇಸ್ ಬುಕ್ ಅಂತ ಹಲವು ಸಾಮಾಜಿಕ ತಾಣದಲ್ಲಿ ಸಾಹಿತ್ಯ ಲೋಕದೆಡೆಗಿನ ಪ್ರೀತಿಯೋ! ತಮ್ಮ ಬಿಗು ಕೆಲಸಕಾರ್ಯದ ಮಧ್ಯ ಬೇಕಾಗಿರಬೇಕಾದ ರಿಪ್ರೆಶ್ ಮೆಂಟಿಗೊ! ಬರಹಗಳ ಬಗ್ಗೆ ಆಸಕ್ತಿ ಹೊಂದಿಯೊ! ತಮ್ಮದೆ ರೀತಿಯ ಸಾಹಿತ್ಯ ಕೃಷಿಯನ್ನು ಮಾಡುತ್ತಿರುವದನ್ನು ನೋಡುತ್ತಾ ಬಂದಿದ್ದೇವೆ.ಬಹಳಷ್ಟು ಅದ್ಭುತ ಬರಹಗಳು ಕವಿತೆ ಕಾವ್ಯ ಕತೆಗಳು ಬರಯಬಲ್ಲ ಈ ವರ್ಗ ಬರೀಯ ಇಂಟರ್ ನೆಟ್ ವಲಯಕ್ಕೆ ಅಷ್ಟೆ ಸೀಮಿತವಾಗದೆ ಸಾಹಿತ್ಯಲೋಕದ ಮೂಲವಾಹಿನಿಗೆ ಕರೆತರುವ ಕೆಲಸಗಳು ಆಗಬೇಕಿದೆ. ಆ ಮೂಲಕ ಆ ವರ್ಗದ ಗಮನವನ್ನು ಸಾಹಿತ್ಯ ಪ್ರಕಾರದೆಡೆಗೆ ಸೆಳೆದಲ್ಲಿ ಒಂದಷ್ಟು ಓದುಗರು ಸಿಗಬಲ್ಲರೆಂಬ ವಿಶ್ವಾಸ ನನಗಿದೆ. ಇನ್ನು ವಿಸ್ತರಿಸಿ ಉದಾಹರಣೆ ಮೂಲಕವಾಗಿ ಹೇಳಬೇಕೆಂದರೆ ಐಟಿಬಿಟಿ ಕ್ಷೇತ್ರದ ಕನ್ನಡ ಕೃಷಿಯನ್ನು ತಮಗೆ ಗೊತ್ತಿಲ್ಲದಂತೆ ಮಾಡುತ್ತಿರುವ ಒಂದಷ್ಟು ಮಂದಿಯನ್ನು ಗುರುತಿಸಿ ಅವರನ್ನು ಸಾಹಿತ್ಯದ ಮೂಲವಾಹಿನಿಗೆ ತಂದು ಪುಸ್ತಕ ರೂಪದಲ್ಲಿ ಅವರ ಬರಹಗಳನ್ನು ಹೊರತಂದಾಗ ಆ ಕ್ಷೇತ್ರದ ಒಂದಷ್ಟು ಓದುಗರು ಗೆಳೆಯರ ಪುಸ್ತಕವೆಂಬ ಆಸಕ್ತಿಯಿಂದಲೊ ಏನೊ ಪುಸ್ತಕ ಕೊಂಡು ಓದುವ ಹವ್ಯಾಸ ಬೆಳೆಸಬಲ್ಲರೇನೊ?ಅಂತೆಯೆ ಬೆನ್ನುತಟ್ಟುವವರಿದ್ದಾರೆ ಎಂಭ ವಿಶ್ವಾಸ ಮೂಡಿದಾಗ ಸಾಹಿತ್ಯ ಕ್ಷೇತ್ರದೆಡೆಗೆ ಬರವಣಿಗೆಯತ್ತ ಆಸಕ್ತಿ ತೋರಬಲ್ಲರೇನೊ? ಸಾಧ್ಯತೆಗಳು ಹೆಚ್ಚಿವೆ ಈ ನಿಟ್ಟಲ್ಲಿ ಕೆಲಸ ಕಾರ್ಯಗಳು ಆಗಬೇಕಿದೆ.ಎಲ್ಲಾ ಕ್ಷೇತ್ರದಲ್ಲು ಕನ್ನಡ ಬರಹಗಾರರು ಇದ್ದಾರೆ ಅನ್ನುವದನ್ನು ಗಮನಿಸಿಯೆ ಐಟಿಬಿಟಿ ಕ್ಷೇತ್ರವನ್ನು ಉದಾಹರಣೆಗಾಗಿ ಬಳಸಿ ಹೇಳಿದೆನಷ್ಟೆ. ಸೂಕ್ತರನ್ನು ಗುರುತಿಸಿ ಪ್ರೋತ್ಸಾಯಿಸುವ ಕೆಲಸಗಳು ಆಗಬೇಕಿದೆ. ಪ್ರೋತ್ಸಾಹಕನಲ್ಲಿ ತಾನೆ ಕನ್ನಡ ಸಾಹಿತ್ಯ ಲೋಕವನ್ನು ಬೆಳೆಸುತಿದ್ದೇನೆ ಎಂಭ ಹಮ್ಮುಗಳು,ಭ್ರಮೆಗಳು ಬರಬಾರದು ಅಷ್ಟೆ, ಒಂದು ವೇಳೆ ಹಾಗಾದಲ್ಲಿ ಈ ಪ್ರಕ್ರಿಯೆ ನಿರಂತರವಾಗಿ ಸಾಗಲಾರದು. 

ಯಾವುದೇ ಸಿನಿಮಾ ಆಥವಾ ಬೇರಾವುದೆ ಸಾಮಾಗ್ರಿಗಳನ್ನು ತೆಗೆದುಕೊಂಡರು ಅದು ಜಾಹಿರಾತಿನ ಮೂಲಕ ತನ್ನದೆ ಆದ ಮಾರುಕಟ್ಟೆಯನ್ನ ಸೃಷ್ಟಿಸುತ್ತದೆ. ಕನ್ನಡ ಪುಸ್ತಕ ಲೋಕಕ್ಕೆ ಇದನ್ನು ಹೋಲಿಸಿದಲ್ಲಿ ಈ ಕೆಲಸ ಅತಿ ವಿರಳ.ಲೋಕಾರ್ಪಣೆ ಸಮಾರಂಭ ಅದಕ್ಕಾಗಿ ಆಮಂತ್ರಣ ಪತ್ರಿಕೆ ಸಮಾರಂಭದಲ್ಲಿ ಪುಸ್ತಕದ ಬಗ್ಗೆ ಒಂದಷ್ಟು ನೆಚ್ಚಿನ ನುಡಿ ಇಂತಹ ಕಾರ್ಯಕ್ರಮಕ್ಕೆ ಸೇರಿದ ವಿರಳ ಮಂದಿಯಿಂದ ಒಂದಷ್ಟು ಪುಸ್ತಕ ಖರೀದಿ ಅಲ್ಲಿಗೆ ಬಿಡುಗಡೆಗೊಂಡ ಪುಸ್ತಕ ಪರಿಚಯ ಮುಕ್ತಾಯ, ತದ ನಂತರದ ಮಾರುಕಟ್ಟೆ ನಿಯಮಗಳ ಎಲ್ಲಾ ಹೊರೆಗಳು ಪ್ರಕಾಶನ ಸಂಸ್ಥೆಯ ಮೇಲೆ,ಮೊದಲೆ ಓದುಗರ ಬರ , ಈ ನಡುವೆ ಹಾಕಿದ ದುಡ್ಡು ಲಾಭ ಮೂಲಕ ಮರಳಲೆಂಬ ಪ್ರಕಾಶಕನ ಅಳಲು ಮಾತ್ರ ಆತನಿಗೇ ಪ್ರೀತಿ.ಹಾಗಿದ್ದರೆ ಇಷ್ಟೊಂದು ಪ್ರಕಾಶಕರು ಇದ್ದಾರಲ್ಲ ಅವ್ರೆಲ್ಲ ಲಾಭವಿಲ್ಲದೆ ಪುಸ್ತಕಗಳನ್ನು ಹೊರತರುತ್ತಾರೊ? ಅನ್ನೊ ಪ್ರಶ್ನೆ ಎದುರಾಗಬಹುದು.ಹೊಸ ಬರಹಗಾರರಿಗೆ ಅವಕಾಶ ಎಷ್ಟು ಸಿಗುತ್ತಿದೆ?ಅನ್ನೊ ಪ್ರಶ್ನೆಯು ಕೂಡ ಇದರ ಜೊತೆ ಸೇರಿದಾಗ ಉತ್ತರಗಳು ಪ್ರಶ್ನೆಗಳ ರೂಪದಲ್ಲೆ ಸಿಗುತ್ತವೆ.

ಪ್ರಕಾಶಕನಿಗೆ ಲಾಭ ಬೇಕು ಪುಸ್ತಕದ ವ್ಯಾಪಾರಿ ಅವ.ಲಾಭಾಂಶ ಮೂಲಕ ಇನ್ನಷ್ಟು ಪುಸ್ತಕಗಳನ್ನು ಹೊರತರಬೇಕಾದ ಜರೂರಿ ಅವನದ್ದು.ಅದರ್ಶವೆಂದು ಹೊಸಬರಿಗೆ ಅವಕಾಶ ಕೊಡುತ್ತಾ ಸಾಗಿದಲ್ಲಿ ತನ್ನ ಸಂಸ್ಥೆಗೆ ಕದವಿಕ್ಕಿ ತನಗೂ ಈ ಲೋಕಕ್ಕೂ ಸಂಬಂಧನೆ ಇಲ್ಲವೇನೊ ಎಂಬಂತೆ ವಿರಾಗಿಯಾಗಿ ಹೋಗಬೇಕಾದ ಪರಿಸ್ಥಿತಿ.ಕಾರಣ ಪುಸ್ತಕ ಕೊಂಡು ಓದುವವರ ಸಂಖ್ಯೆ ದಿನದಿಂದ ದಿನಕ್ಕೆ ವಿರಳ. ಪರಿಸ್ಥಿತಿ ಹೀಗಿದ್ದರೂ ಹೊಸಬರಿಗೆ ಅವಕಾಶ ಕೊಡುತ್ತಲೆ ತನ್ನ ಲಾಭಕ್ಕಾಗಿ ಪ್ರಮುಖ ಬರಹಗಾರರ ಬರಹಗಳನ್ನು ಪುಸ್ತಕ ರೂಪದಲ್ಲಿ ಹೊರತಂದು ಆದರ್ಶ ಮೆರೆಯುತ್ತಿರುವ ಪ್ರಕಾಶನ ಸಂಸ್ಥೆಗಳು ಇದೆ. ಬಹುಶಃ ಅಂತವರಿಂದಲೆ ಒಂದಷ್ಟು ಹೊಸಬರಿಗೆ ಅವಕಾಶ ಸಿಗುತ್ತಿವೆ.ಆದರೆ ಇಂಥ ಪ್ರಕಾಶನ ಸಂಸ್ಥೆಗಳು ಬೆರಳೆಣಿಕೆಗೆ ನಿಲುಕುವಷ್ಟು ಮಾತ್ರ.ಇದೆಲ್ಲವನ್ನೂ ನೋಡಿದಾಗ ಕನ್ನಡ ಸಾಹಿತ್ಯ ಲೋಕಕ್ಕೆ ಓದುಗರನ್ನು ಸೆಳೆಯಬೇಕಾದ ಅವಶ್ಯಕತೆ ಇದೆ,ನಾನಿಲ್ಲಿ ಓದುಗರನ್ನು ಸೆಳೆಯುವದು ಎಂದೆನ್ನುತ್ತಿರುವದು ಬೇರೆಲ್ಲಾ ಕ್ಷೇತ್ರಕ್ಕೂ ಕನ್ನಡ ಸಾಹಿತ್ಯ ಲೋಕವನ್ನು ವಿಸ್ತರಿಸಬೇಕು ಅನ್ನುವ ನಿಟ್ಟಿನಲ್ಲಿ.ಅದಕ್ಕಿರುವದು ಒಂದೆ ಮಾರ್ಗ ಸಾಹಿತ್ಯ ಕ್ಷೇತ್ರದಿಂದ ಹೊರತಾಗಿದ್ದು ಸಾಹಿತ್ಯ ಅಭಿರುಚಿ ಹೊಂದಿರುವ ಗುಮ್ಮನ ಗುಸುಕಿನಂತೆ ಅದ್ಬುತ ಬರಹಗಳನ್ನು ಉಣಿಸುತ್ತಾ ತೊಡಗಿರುವ ಇತರೆ ಕ್ಷೇತ್ರದ, ಬರಹಗಾರರೆಂದು ಅನಿಸಿಕೊಳ್ಳದ ಪ್ರತಿಭೆಗಳನ್ನು ಕನ್ನಡ ಸಾಹಿತ್ಯ ಲೋಕದ ಮೂಲವಾಹಿನಿಗೆ ಕರೆತರುವದು. ಆಗಾದರು ಓದುಗ ಸಮೂಹ ಬೆಳೆದೀತು ಅನ್ನೋದು ನನ್ನ ಅಸೆ. ಆದರೆ ಈ ಕೆಲಸ ಮಾಡೋರು ಯಾರು? ಬೆಕ್ಕಿನ ಕೊರಳಿಗೆ ಘಂಟೆ ಕಟ್ಟೋರು ಯಾರು?!!!!! ಉತ್ತರಗಳಿಲ್ಲದ ಪ್ರಶ್ನೆಗಳೆ ಇಲ್ವಂತೆ, ಮುಂದಿನ ದಿನಗಳಲ್ಲಿ ಉತ್ತರ ಕಂಡುಕೊಂಡೇವು ಅನ್ನುವ ನಿರೀಕ್ಷೆ ನನ್ನದು. 




Sunday, April 15, 2012

ನಿನ್ನ ನೆನಪುಗಳೊಂದಿಗೆ.....

"ಸಾವಿಗೇಕೆ ಭಯ, ಸಾವು ನಿಶ್ಚಿತವೆಂದಾದ ಮೇಲೆ,ಇರುವ ಕೆಲವೆ ದಿನಗಳಲ್ಲಿ ಬದುಕನ್ನು ಬದುಕಾಗಿಸೋಣ ನಡಿ."

-ಗೆಳೆಯನೊಬ್ಬನ ಮಾತು.
ಪ್ರೀಯ ಗೆಳೆಯ,

ದಿನಗಳ ಹಿಂದೆ ಭೂಮಿ ಕಂಪಿಸಿತ್ತು ಗೆಳೆಯ,ಆಫ್ರೀನ್ ಅನ್ನೊ ಹಸಿಗೂಸು ಹುಟ್ಟಿಸಿದ ಅಪ್ಪನಿಂದಲೆ ಕೊಲೆಯಾದಳು ಗೆಳೆಯ,ಆತ್ಮೀಯನೊಬ್ಬ ಕರುಳ ಕ್ಯಾನ್ಸರ್ ಮಹಾಮಾರಿಯ ಜೊತೆ ಜಗಳಕ್ಕೆ ನಿಂತು ಬಿಟ್ಟಿದ್ದಾನೆ, ಹೀಗೆ ಏನೇನೊ ಸಂಕಟಗಳು, ನಿನ್ನೊಡೆ ಹಂಚಿಕೊಳ್ಳಬೇಕಿತ್ತು, ಅದರೆ ಹಂಚಿಕೊಳ್ಳಲು ನೀನಿವತ್ತು ಜೊತೆಗಿಲ್ಲ,ಕಾಲದ ಉರುಳಿನೊಳಗೆ ಬಂಧಿ ನಾನು, ನೀನೋ ಇದೆಲ್ಲವ ತೊರೆದು ನೀಲ ಆಗಸದಿ ನನ್ನ ನೋಡಿ ನಗುತ್ತಿದ್ದಿಯಾ?. ಇರಲಿ ಒಂದಷ್ಟು ನೋವು ಸಂಕಟದೊಂದಿಗೆ ನಿನಗೊಂದು ಓಲೆಯ ಗೀಚುತಿದ್ದೆನೆ, ಕಣ್ಣುಗಳು ತೇವಗೊಂಡಿವೆ ಕಣ್ಣ ಹನಿಗಳ ಗುರುತು ಈ ಪತ್ರದಲ್ಲಿ ಗೋಚರಿಸಿದರೆ ಒಪ್ಪಿಕೊ, ನಿನ್ನನು ಏಡ್ಸ್ ಎಂಭ ಮಹಾಮಾರಿ ಆಹುತಿ ತೆಗೆದುಕೊಂಡು ನೀ ಚಿತೆಗೇರಿ ಇವತ್ತಿಗೆ ಒಂದು ವರುಷವಾಯಿತಲ್ಲ, ಬರಿಯ ಆ ಕಹಿ ನೆನಪು ಮತ್ತೆ ಮತ್ತೆ ಒತ್ತರಿಸಿ ಬರುತ್ತಿರಲು ಒಂದಷ್ಟು ನಮ್ಮಯ ಸಿಹಿ ನೆನಪುಗಳು ಈ ಪತ್ರದ ಮೂಲಕವಾದರು ನೆನಪಾಗಲೆಂದು ಬರೆಯುತಿದ್ದೇನೆ.ನೆನಪಾಗೋ ಸಂಭವಗಳು ಕಡಿಮೆ ಆದರೂ ಸಣ್ಣದೊಂದು ಪ್ರಯತ್ನ.

ನಿನಗೆ ಈ ಖಾಹಿಲೆ ಬಂದಿದೆಯೆಂದು ಮೊದಲು ನನಗೆ ತಿಳಿಸಿದಿ ನೋಡು, ಅದಾಕೊ ಏನೊ ಒಂದು ಕ್ಷಣ ನಿನ್ನನು ಅನುಮಾನದಿಂದ ನೋಡಿದೆ, ಆಮೇಲೆ ಪಿಚ್ಚೆನಿಸಿಕೊಂಡಿದ್ದೆ, ನಿನ್ನ ಒಡನಾಡಿಯಾಗಿದ್ದ ನಾನೆ ಈ ಪರಿ ನಿನ್ನ ಸ್ವೀಕರಿಸಿದನೆಂದರೆ ಈ ಸಮಾಜ ನಿನ್ನ ಹೇಗೆ ಸ್ವೀಕರಿಸಿರಬೇಡ? ಹೌದು ನೀ ಬಹಳ ಅವಮಾನಿತನಾದೆ, ಅದರು ನಿನ್ನ ಬದುಕುವ ಛಲ ಅದಕ್ಕಾಗಿ ನಿನ್ನ ಪ್ರಯತ್ನಗಳ ನೆನೆದು ಅದ ನಾನಿವತ್ತು ಮೆಲುಕು ಹಾಕುತಿದ್ದೇನೆ,ಒಂದೆಂಟು ವರುಷ ಖಾಹಿಲೆಯೆ ಅರಿವನ್ನೆ ತಿಪ್ಪೆಗೆಸೆದು ನಾಳೆ ಎಂಬುದು ನನಗಿಲ್ಲ ನಾನೇನೆ ಮಾಡೋದಿದ್ದರು ಇವತ್ತೆ ಮಾಡಿ ಮುಗಿಸ್ತೀನಿ ಅಂತ ನಿರಂತರ ಕ್ರೀಯಾಶೀಲತೆಯಲ್ಲಿ ಬರಿಯ ಎಂಟು ವರುಷದಲ್ಲೆ ಬದುಕ ಗೆದ್ದು ಬಿಟ್ಟೀಯಲ್ಲ ಗೆಳೆಯ,ನಿನ್ನ ನಾ ಮರೆಯೋದಾದರು ಎಂತು? ಸರ್ಜಾಪುರ ರೋಡಿನಲ್ಲಿ ನಿನಗೆ ಬಾಧಿಸಿದ ಖಾಹಿಲೆಯ ಬಾಧಿತ ಮಂದಿಗೆ ಆಶ್ರಯವಾಗಲೆಂದು ನೀ ಕಟ್ಟಿದ ಸಂಸ್ಥೆಯ ಕಟ್ಟಡದ ಮೆಟ್ಟಿಲಿಗೊರಗಿ ನಿನ್ನ ಧ್ಯಾನಿಸುತ್ತಲೆ ಇರುತ್ತೇನೆ,ಅದಾಕೊ ಏನೊ ಊರಲ್ಲಿ ಕಾಡ ಮಧ್ಯದ ಎತ್ತರದ ಕಲ್ಲಿನಲ್ಲಿ ಕುಳಿತು ಹರಟುತಿದ್ದೆವಲ್ಲ ಅವೆಲ್ಲ ನೆನಪುಗಳೊಡೆ ಬಹಳ ಹೊತ್ತು ನಿನ್ನೊಳು ಅಲ್ಲಿ ನಾನಿರುತ್ತೇನೆ.ಸಾರ್ವಜನಿಕರು ಅದೇನೊ ದೆವ್ವ ಬಂಗಲೆನೊ ಎಂಭ ತರ ನೋಡುತ್ತಾರೆ ಕಾರಣ ಏಡ್ಸ್ ಭಾದಿತರು ಇದ್ದಾರೆ ಎಂಭ ಭೀತಿ ಅವರಿಗೆ,ಇಲ್ಲ ಗೆಳೆಯ ಮಾತಿಗೆ ಸಮಾಜ ಬದಲಾಗಿದೆ ಅನ್ನುತ್ತೇವೆ ಕೆಲ ವಿಷಯದಲ್ಲಿ ಅದು ಇನ್ನೂ ಕೂಡ ಕೊಳದ ನೀರೆ, ಹರಿವ ಸಾಮರ್ಥ್ಯ ತನಗಿದೆ ಎಂಬುದನ್ನು ಅದು ಮರೆತಿದೆ.

ಅದೊಂದು ಖಾಹಿಲೆ ಅದೇಗೊ ಬರುತ್ತೆ ಅದಕ್ಕೆ ಅದೆಷ್ಟೋ ಕಾರಣಗಳು, ಅದರೆ ಮಂದಿ ತಲೆಗೆ ಖಾಹಿಲೆಯ ಹೆಸರು ಕೇಳಿದೊಡನೆ ಅವರ ಯೋಚನೆ ನಿಲುಕುವದು ಆ ಮೂಲದೆಡೆಗೆ, ಪಾಪ ಅದೆಷ್ಟೋ ಪಾಪುಗಳು ಖಾಹಿಲೆಯೊಂದಿಗೆ ಜನ್ಮ ತೆಳೆಯುತ್ತದಲ್ಲ ಗೆಳೆಯ, ತಾಯಿಗೂ ಗೊತ್ತಿಲ್ಲದ ಆ ಖಾಹಿಲೆ ಹೊಕ್ಕುಳ ಬಳ್ಳಿ ಮೂಲಕ ಕಂದಮ್ಮನಿಗೆ ಪ್ರಸರಿಸಿಬಿಡುತ್ತದಲ್ಲ,ಪಾಪ ಕಂದಮ್ಮನದೇನು ತಪ್ಪಿದೆ? ಆದರೂ ಆ ಕಂದಮ್ಮ ಸಮಾಜದಿಂದ ದೂರ,ನಿನ್ನಂತೆ ತಿಳಿಯುವಿಕೆಯಿಲ್ಲದೆ ಖಾಹಿಲೆ ಬರಿಸಿಕೊಂಡವರು ಅದೆಷ್ಟೋ ಮಂದಿ, ಅದೊಂದು ಬೈಕಲ್ಲಿ ನೀ ಮಗುಚಿಕೊಂಡಿಲ್ಲದಿದ್ದರೆ ಅದಕ್ಕಾಗಿ ರಕ್ತ ಪಡೆಯದೆ ಇರುತಿದ್ದರೆ ನೀನು ಇವತ್ತೂ ಕೂಡ ನನ್ನೊಂದಿಗಿರುತಿದ್ದಿ, ಆದರೆ ಈ ಪರಿ ನಿನ್ನ ಹೆಸರು ಉಳಿಸುವಂತ ಕಾರ್ಯಗಳನ್ನು ಮಾಡುತಿದ್ದಿಯೋ?ಬಹುಶಃ ಇಲ್ಲ, ನಿಶ್ಚಿತ ಸಾವು ಕಣ್ಮುಂದೆ ಸುಳಿದಾಡಕ್ಕೆ ಪ್ರಾರಂಭಿಸಿದಾಗ ನೀ ಕಾರ್ಯಪ್ರವರ್ತನಾದೆ.ಸಾವು ,ಸಾವು........... ಅನ್ನೋದ ಬಿಟ್ಟು "ಬದುಕನ್ನು ಚಂದಗೊಳಿಸಿ ಬದುಕಿದಾಗ ಸಾವು ಕೂಡ ಆನಂದಿತವಾಗಿ ಬದುಕಿನ ಸಾರ್ಥಕತೆಯ ಅನುಭೂತಿ ಕೊಡಬಲ್ಲುದು"ಎಂಬುದನ್ನು ಅದಾಕೊ ಹೇಳುತ್ತಲೆ ಆ ಸಾವನ್ನು ನಿನ್ನದಾಗಿಸಿದೆ.ಕಲಿತೆ ಗೆಳೆಯ ಬಹಳಷ್ಟು ನಿನ್ನಿಂದ,ಇತ್ತೀಚೆಗೆ ಆ ನಿನ್ನ ಸಂಸ್ಥೆಯ ಮಕ್ಕಳನ್ನು ಕರಕೊಂಡು ಬನ್ನೇರುಘಟ್ಟಕ್ಕೆ ಹೋಗಿದ್ದೆ, ಕುಣಿದಾಡಿ ನಲಿದಾಡಿ ಬಂದಿದ್ದೆ ಆ ಕ್ಷಣಗಳಲ್ಲಿ ನನ್ನೊಳು ನೀನಿದ್ದಿಯೊ? ಗೊತ್ತಿಲ್ಲ, ನಿನ್ನ ಸಾಮಿಪ್ಯವ ಅನುಭವಿಸಿದಂತಿತ್ತು , ಭ್ರಮೆ ಇರಬಹುದು ಅಂದುಕೊಂಡೆ ಇಲ್ಲ ಹಾಗೊಪ್ಪಿಸಿಕೊಳ್ಳಲಾಗುತ್ತಿಲ್ಲ.

ಭೂಮಿ ಕಂಪಿಸುತ್ತಿದೆ, ಪ್ರಳಯವಾಗುತ್ತೆ ಎಂಭ ಗುಲ್ಲು ಹಬ್ಬಿದೆ,ವರುಷದ ಹಿಂದೆ ಪ್ರಳಯ ಅನೂಭೂತಿ ಪಡೆಯಬೇಕು, ಅಲ್ಲಿವರೆಗಾದರು ಬದುಕಿರಬೇಕು ಅನ್ನುತಿದ್ದೆ, ಯಾಕೋ ಆ ಮೊದಲೆ ಸಾವಿನ ಕರೆಗೆ ಓಗೊಟ್ಟು ಜಗವ ತೊರೆದೆ, ಆದರೆ ನನ್ನ ಮುಂದೆ ನೀ ಕಟ್ಟಿಕೊಟ್ಟ ಪ್ರಪಂಚವಿದೆಯಲ್ಲ ಅದು ಅಭೇಧ್ಯ,ನನಗೂ ಅಷ್ಟೆ ಸಾವಿನ ಭಯ ನಿನ್ನ ನೋಡಿದ ಮೇಲೆ ಇವತ್ತಿಲ್ಲ,ಹಾಗಂತ ಸಾವು ಕಣ್ಮುಂದೆ ಸುಳಿಯತ್ತಲೂ ಇಲ್ಲ, ಇರೋವಷ್ಟು ದಿನ ಸಮಾಜ ಸೇವೆ ಅಂತ ಕೆಲಸದಲ್ಲಿ ಭಾಗಿಯಾಗಲು ನೀ ಬಿಟ್ಟು ಹೋದ ಕೆಲಸಗಳೆ ಇವೆ, ಸದ್ಯಕ್ಕೆ ನನ್ಮುಂದೆ ಬೇರೆ ಯಾವುದೆ ಯೋಜನೆಗಳು/ಯೋಚನೆಗಳಿಲ್ಲ.ಹಿಂಗನ್ನುತ್ತಿರುವದಕ್ಕೆ ಬೈತಿದ್ದೆ ನೀನಿದ್ದರೆ, ಹೊಸದೇನಾದರು ಕ್ರೀಯಾಶೀಲತೆಯಲ್ಲಿ ತೊಡಗಿಕೊಳ್ಳದೆ ಇನ್ನೊಬ್ಬರ ಕೆಲಸದಲ್ಲಿ ಜೋತು ಬಿದ್ದು ಮುಂದುವರಿಸುವದನ್ನು ನಿನಗೆ ನೋಡಿದರಾಗದು!! ಈ ನಿನ್ನ ನಿಲುವುಗಳಿಗೆ ಆದಷ್ಟು ಬದ್ದನಾಗೆ ಇರುವೆ ಗೆಳೆಯ,ಆದರೆ ನಿನ್ನ ಸನಿಹವ ಬಿಟ್ಟು ನಾನು ಮುಂದುವರಿಯಲಾರೆ ಇದು ನನ್ನ ವೀಕ್ ನೆಸ್ಸು, ಅದಕ್ಕೆ ನಿನ್ನ ಕಾರ್ಯಗಳನ್ನು ನನ್ನದೆ ಆದ ರೀತಿಯಲ್ಲಿ ಮುನ್ನಡೆಸುವೆ, ಒಪ್ಪಲೇಬೇಕಾಗಿದೆ ನೀನಿದನ್ನ.ಬೆಳಿಗ್ಗೆ ಟೀವಿ ಹಚ್ಚಿದೆ, ಆಫ್ರೀನ್ ಎಂಭ ಮುಗ್ದ ಬಾಲೆಯ ಸಾವು ಹುಟ್ಟಿಸಿದ ಅಪ್ಪನಿಂದಲೆ ಆಗಿದೆ, ತಾಯಿಯ ತೊಳಲಾಟ ಹುದುಗಿದ ನೋವು ಕಣ್ಣೀರಾಗಿ ಹರಿಯುತ್ತಿರಲು ನನ್ನದೂ ಕಣ್ಣು ಮಂಜು, ಯಾಕೊ ನೋಡಲಾಗಲಿಲ್ಲ, ಸುಮ್ಮನೆ ಮತ್ತೆ ಬೆಡ್ ಮೇಲುರುಳಿ ಮನಸಾರೆ ಅತ್ತೆ, ನೀನರಬೇಕಿತ್ತು ಗೆಳೆಯ ದುಃಖ ಹಂಚಿಕೊಳ್ಳಲು,ಈ ಪರಿಯ ಸಮಾಜವನ್ನು ನಿನ್ನದೆ ಮಾತುಗಳಿಂದ ಅವಲೋಕಿಸಿ ನನಗೊದಗಿದ ದುಃಖ ನೀಗಲು, ನಿನ್ನ ಸಾವಿನ ದಿನ ಹಸುಳೆಯ ಸಾವಿನ ಸುತ್ತಲಿನ ಸುದ್ದಿ!!!!,ನಿಂತ ನೀರನ್ನು ಹರಿಸುವ ಕೆಲಸವಾಗ ಬೇಕು, ನಡಿ ನಮ್ಮಿಂದಾದ ಪ್ರಯತ್ನ ಮಾಡೋಣ ಎಂದು ಹುರಿದುಂಬಿಸಿ ಸಂತೈಸುತಿದ್ದಿ, ಆದರೆ ಇವತ್ತು ನೀನು ಭೌತಿಕವಾಗಿ ನನ್ನಿಂದ ದೂರ.............

ಸಿಹಿ ನೆನಪುಗಳ ಹುಡುಕಾಟಕ್ಕಾಗಿ ಪತ್ರ ಬರೆಯಲು ಶುರು ಹಚ್ಚಿಕೊಂಡೆ, ಮುಂದೆ ಬೇರೆ ಯಾವುದೆ ನೆನಪುಗಳು ನೆನಪೆ ಆಗದಷ್ಟು ತಲೆ ಗಿಮ್ಮೆನ್ನುತ್ತಿದೆ,"ಕಹಿ ನೆನಪುಗಳನ್ನೆ ನೆನಪಾಗಿಸಿಕೊಂಡು ಸಿಹಿ ಅರಸಬೇಕು" ಅಂದಿದ್ದೆ ನೀನೊಮ್ಮೆ, ಅದೆ ಸರಿ ಅಂದುಕೊಂಡು ಪತ್ರವನ್ನು ಕೊನೆಯಾಗಿಸುತ್ತೆನೆ, ಹೃದಯ ಭಾರ ಹಗುರಾದಾಗ ಮತ್ತೆ ಮರಳಿ ನನೆನಪಿಸಿಕೊಳ್ಳುವೆ ನಿನ್ನ ಒಡನಾಟದ ಸಿಹಿ ನೆನಪುಗಳನ್ನ.......!!!!


ಇಂತಿ ನಿನ್ನ ನೆನಪುಗಳೊಂದಿಗೆ..................

Wednesday, April 4, 2012

ಸೃಷ್ಟಿ.

ಮನುಜನೆಂಬುದ ಮರೆತ
ಮನದ ತುಂಬೆಲ್ಲ
ನಿನ್ನದೆ ಭಕ್ತಿ ತುಂಬಿರಲು
ನೀನು ಮರೀಚಿಕೆ
ಕೈಗೆ ಸಿಗಲಾರದ ದೇವ

ಕಲ್ಲಿನ ರೂಪದಲ್ಲೂ
ಜೀವಂತಿಕೆಯ ಕಾಂಬ
ಭಕ್ತನ ಕಣ್ಣಲ್ಲಿ
ನಿನ್ನೆಡೆಗಿನ ದೀನ ಭಾವ
ಕಷ್ಟದ ಹೊದಿಕೆ ಕಳಚಲು
ನಿನಗಿರಿಯುತಿಪ್ಪ ದೈನ್ಯ ಮೊರೆ

ಕೇಳಿಸಲಾರೆ ಗೊತ್ತವನಿಗೆ
ಆದರೂ ತುಂಬೊಡಲ ಭಕುತಿ
ಅವನ ಬೇಡಿಕೆ ಭಾವ
ನೀನರಿವೆ ಎಂಭ ಭ್ರಾಂತು
ನಿನ್ನ ಬರಿದೆ ಕಲ್ಲೆಂಬುದನು
ಯಾಕೊ ಅವನೊಪ್ಪಲಾರ

ತಿರುಕರೆಲ್ಲರು ಜಗದೊಳಗೆ
ಅವರಿದ್ದರೆ ನಿನ್ನ ಅಸ್ತಿತ್ವ
ನಿನಗಷ್ಟು ಪೂಜೆ ಪುನಸ್ಕಾರ
ಹಸಿವ ಬೇಗೆಯ ನಡುವೆ
ಕುದಿವ ದೇಹಗಳು ಕೂಡ
ನಿನ್ನತ್ತ ಕೈ ಚಾಚಿರುತ್ತವೆ
ಇದೆಂತಹ ವಿಪರ್ಯಾಸ

ಆತ್ಮ ಎಂಭ ಅರಿವ
ಅರಿಯದಿರ ಮನುಜ
ಗುಡಿ ದೇವಳವ ಸುತ್ತಿ
ಕಲ್ಲು ದೇವ ನಿನ್ನ ಸ್ತುತಿಪುವರು
ಅಂತರಾಳದೊಳಗೆ
ಒಂದಿನಿತು ಇಣುಕಲಾರರು

ನಂಬುಗೆಯ ಇಂಬು
ಅಷ್ಟೆ ಸಾಕೆನ್ನುವ ಭಾವ

ಧರ್ಮದ ತಳಕು ಬಳುಕಿನೊಂದಿಗೆ
ದೇವ ನಿನ್ನ ಹೆಸರು.
ಜನಕೋಟಿ ನಂಬಿಗೆಗಾದರು
ಕಲ್ಲೆ ನೀ ಜೀವ ತಳೆ
ತೊಳೆದು ಬಿಡು ಜಾತಿ ಧರ್ಮವ
ಮೆರೆಸಿ ಬಿಡು ಮನುಜತೆಯ
ಸೃಷ್ಟಿಸು ನೀ ಹೊಸತೊಂದನು.




Tuesday, April 3, 2012

ಹೊಸ ಹುಟ್ಟು.

ಭಾವನೆಗಳ ಒಡಂಬಡಿಕೆಯು
ಮನದ ತೊಳಲಾಟವು
ಮಿಳಿತವಾಗಿ ಅಕ್ಷರ ರೂಪದಿ
ಹೊಸ ಹುಟ್ಟು ಪಡೆದಿದೆ
ಚಾಮರದ ಬೀಸು ಗಾಳಿಯಂತೆ

ಓದುಗ ಕವಿತೆ ಎಂದರೂ ಸರಿ
ಕವನ ಕಾವ್ಯವೆಂದರು ಸೈ
ಬರೆದಿಪ್ಪ ಬರಿದೆ ಸಾಲುಗಳನ್ನು
ಅವರವರ ಗ್ರಹಿಕೆಯೊಳ
ಒಪ್ಪಿ ಹೆಸರಿತ್ತಿದ್ದೆಲ್ಲವೂ ಸಿಹಿ.

ಮುದ ನೀಡಿದ ಅನುಭವಗಳು
ಮತ್ತೆ ಮೊಗೆದಪ್ಪಿಕೊಳಲೆಂದು
ಬರಿದೆ ಬರೆದ ಸಾಲುಗಳೊಳೆ
ಅದ ನೆನಪಿಸಿ ಮತ್ತೆ ಮೆಲುಕಿದೆ
ಹೊಸ ಸಂತೋಷವನ್ನಪ್ಪುವ
ಸ್ಪೂರ್ತಿ ಹೊಸದಾಗೆ ಜನಿಸಲೆಂದು

ಮನದ ಪುಟದ ಸಾಲುಗಳು
ಅಚ್ಚಾಗಬೇಕಿಲ್ಲ ಪತ್ರಿಕೆಯೊಳ
ತೊರೆದು ಹೋದ ಪ್ರೇಯಸಿ
ಮತ್ತೆ ಅರಸಿ ಬರಬೇಕಿಲ್ಲ
ಭಾವದ ಮುತ್ತಿನಕ್ಷರಗಳು ಮೂಡಿದಾಗ
ಹಣದಂಚಿಗೆ ನಿಂತು ನೋಡೆ ಇಲ್ಲ.

ನನ್ನರಿವುಗಳು ನನಗರಿಯಲು
ಸಾಲುಗಳು ಹುಟ್ಟಬೇಕಿದೆ ನನ್ನಿಂದ
ನನ್ನೊಳಗಿನೋದುಗ ಈ ಸಾಲುಗಳ
ಹುಟ್ಟನ್ನು ಯಾಕೆಂದು ಪರೀಕ್ಷಿಸಿ
ನವ ತಿಳಿವನ್ನು ಮಸ್ತಕದಿ ಅಚ್ಚೈಸಿ
ನೀತವಾಗಿ ನನ್ನ ಬೆಳಗಿದರೆ ಸಾಕು
ಮನದ ತಿಳಿವಿನ ಪರಿಧಿಯೊಳಗೆ
ನಾ ನನ್ನ ನಿಲುಕಿಗೆ ನಿಲುಕಿದರೆ ಸಾಕು.

Sunday, April 1, 2012

ಮೊದಲ ಚಾರಣ ಅನುಭವ ಉಣಿಸಿದ ಕುಮಾರಪರ್ವತ

ಕಾಡ ಪ್ರವೇಶಿಸಿದ ದಿನದ ಬೆಳಗು ಪ್ರಕರ ಬಿಸಿಲ್ಲನ್ನೇನು ಹೊತ್ತುಕೊಂಡಿರಲಿಲ್ಲ, ಬಿಸಿಲೇರುವ ಮೊದಲೆ ಕಾಡು ಸೇರಿದ್ದರಿಂದ ಜನವರಿಯ ಬಿಸಿಲ ಪ್ರಕರತೆ ಮೈತಾಕಿರಲಿಲ್ಲ, ಒತ್ತಟ್ಟಿಗೆ ಬೆಳೆದ ಮರದಕೊಂಬೆಗಳ ಹಸಿರೆಲೆಯೊಂದಿಗಿನ ಹಂದರ ಬಿಸಿಲಿಂದ ನಮ್ಮ ಕಾಯ್ದಿತ್ತು, ಒಂದಷ್ಟು ದೂರ ಸಾಗುತ್ತಿದ್ದಂತೆ ಕಾಲ ಹೆಜ್ಜೆ ಸಪ್ಪಳ ಸ್ಪಷ್ಟವಾಗಿ ನಮಗೆ ಕೇಳುವಷ್ಟು ಸನಿಹ, ಅದೇನೊ ಗೋಯ್ ಅನ್ನೊ ಮೌನದೊಂದಿಗಿನ ಸದ್ದು, ಕಾಲ ಕೆಳಗೆ ಸಿಲುಕಿದ ತರಗೆಲೆಗಳ ನುಲುಕಾಟದೊಂದಿಗಿನ ಸದ್ದು,ಮಂಗಗಳ ಮರಕೋತಿಯಾಟದ ನಡುವೆ ಅವುಗಳು ಮಾಡುತಿದ್ದ ಕ್ರೀ ಸದ್ದು,ಅದೆಲ್ಲಿಂದಲೊ ಕೇಳಿಬರುತಿದ್ದ ಹಕ್ಕಿಗಳ ಚಿಲಿಪಿಲಿಯೊಂದಿಗಿನ ಕ್ಷೀಣ ಸದ್ದು, ದೂರದ ತೊರೆಯೊಂದರ ನೀರ ಸದ್ದು, ಒಂದೆರಡು ಭಾರಿ ಹಾವುಗಳು ತರಗೆಲೆ ಮೇಲೆ ತರಚಿಕೊಂಡು ಓಡಾಡುವ ಸದ್ದುಗಳು,ನಮ್ಮೊದೊಂದಿಷ್ಟು ಮಾತುಗಳು ಇವೆಲ್ಲದರ ನಡುವೆಯೂ ಕಾಡು ತನ್ನ ಘಂಭೀರತೆಯನ್ನು ತೋರಿಸುತ್ತಾ ನಿಶ್ಯಬ್ದದೊಂದಿಗೆ ಬಾಹ್ಯದಿಂದ ನಮ್ಮನ್ನು ಕೊಂಚ ಕೊಂಚನೆ ದೂರಾಗಿಸುತಿತ್ತು.ದಣಿವು ಒತ್ತರಿಸಿ ಬಂದರು ನೀವಾರಿಸಿಕೊಳ್ಳಲು ಕಾಡ ನೆಲದ ಹಾಸಿಗೆ,ಅಲ್ಲಲ್ಲಿ ಸಿಗುವ ನೀರ ಝರಿ, ಅದುಣಿಸುವ ತಂಪು ತಣಿಪ ನೀರು ನಮ್ಮ ನೀರಡಿಕೆಯನ್ನು, ಕೈಯಲ್ಲಿರು ವಾಟರ್ ಬಾಟಲ್ ನನ್ನೂ ತುಂಬುತಿತ್ತು.ದಾರಿಯೆಂದು ಹೆಸರಿರ್ಪ ದಾರಿಯೆಂದುಕೊಳ್ಳದ ದಾರಿಯ ನಡುವೆ ಈ ಸಾಮಿಪ್ಯದೊಂದಿಗಿನ ನಮ್ಮ ಪಯಣ ಕೈಯಲ್ಲೊಂದು ದಂಟೆ ಹಿಡಿದು, ಬೆನ್ನಿಗೊಂದು ದೊಡ್ಡ ಬ್ಯಾಗೇರಿಸಿ ಸಾಗಿದ್ದು ಸುಬ್ರಮಣ್ಯದ ಬಲಭಾಗದ ರಸ್ತೆಯಲ್ಲಿ ಕೊಂಚ ದೂರ ನಡೆದು ಕಾಡ ಹಾದಿ ಹಿಡಿದ ಅದೊಂದು ದಿನ.ಇಂತಿಪ್ಪ ಕುಮಾರ ಪರ್ವತದ ಮೊದಲ ಕೆಲ ಘಂಟೆಗಳ ಈ ಚಾರಣ ಹಾದಿ ನಮ್ಮನ್ನು ಒಲವಿನಿಂದಲೆ ಸ್ವೀಕರಿಸಿ ತನ್ನ ತೆಕ್ಕೆಗೆ ತೆಗೆದುಕೊಂಡಾಗಿತ್ತು.

ಏರು ಮುಖವಾಗಿ ಸಾಗಿದ ದಾರಿ ಒಂದು ಹಂತಕ್ಕೆ ಬಂದು ನಿಲ್ಲಬೇಕಾದರೆನೆ ದಟ್ಟ ಕಾಡು ತನ್ನ ಕೆಲಸ ಮುಗಿಯಿತೆಂದು ನಮ್ಮ ತೊರೆದಿದ್ದು, ಎದುರಿಗೆ ಕುರುಚಲು ಗಿಡ ತುಂಬಿದ, ಹುಲ್ಲು ಬೆಳೆದ ಹಸಿರಸಿರು ದಿಣ್ಣೆಗಳು, ಜೊತೆಗೆ ಅಲ್ಲಲ್ಲಿ ಕಂಡು ಬರುವ ಮರಗಳು ಆ ಮರಗಳ ಜೊತೆಗೆ ಸಾಕಷ್ಟು ಬೆಳೆದಿದ್ದ ಚೇಪೆ ಕಾಯಿ, ನೆಲ್ಲಿ ಕಾಯಿ ಮರಗಳು.ಬಿಡಲಾದೀತೆ? ಸಾಕಷ್ಟು ಹೊಟ್ಟೆಗಿಳಿಸಿ ,ದಾರಿ ಖರ್ಚಿಗಿರಲೆಂದು ಬ್ಯಾಗ್ ಕೂಡ ಸೇರಿತ್ತು ಇವು. ಹರಳು ಕಲ್ಲು ತುಂಬಿದ ಏರು ದಾರಿ ನಮ್ಮಗಳ ಕಾಲಲ್ಲಿದ್ದ ಹೆಸರಾಂತ ಕಂಪೆನಿಗಳ ಶೂಗಳಿಗು ಚಾಲೆಂಜ್ ಎಸಿಯಲು ನಿಂತಿತ್ತು, ಕೆಲವೊಮ್ಮೆ ಅವುಗಳ ಸೋಲುವಿಕೆ ನಮ್ಮನ್ನು ಜಾರಿ ಬೀಳಿಸುತಿದ್ದವು.ಬಿಸಿಲೆ ಕಾಣದೆ ಸಾಗಿದ ಮೊದಲ ಕೆಲ ಹೊತ್ತಿನ ಪಯಣ ಬಿಸಿಲಿಗೆ ಬೀಳಿಸಿ ನಮ್ಮ ಸಾಗುವಿಕೆಗೂ ನಮಗು ಕಾವೇರಿಸತೊಡಗಿತ್ತು.ಇದೆಲ್ಲವನ್ನೂ ದಾಟಿ ಮುಂದಡಿಯಿಟ್ಟಾಗಲೆ ಕಾಣಿಸಿದ್ದು ವಿಶಾಲ ಬಯಲಿನಂತ ಹಸಿರು ಹುಲ್ಲುತುಂಬಿದ ಪ್ರದೇಶ.ಎದುರಿಗೆ ಕಾಣುತಿದ್ದ ಪರ್ವತ ಸಾಲುಗಳ, ಇವುಗಳ ಮಧ್ಯೆ ನಾವು ತುದಿ ತಲುಪಬೇಕಾದ ಪರ್ವತ ಯಾವುದೂ? ಎಂಬ ಎಣಿಕೆಗಳಿಗೆ ಉತ್ತರವೆ ಸಿಗುತ್ತಿರಲಿಲ್ಲ.ಕತ್ತಲು ತುಂಬಿದ ಪಿಕ್ಚರ್ ಹಾಲ್ ನಲ್ಲಿ ಪರದೆ ಮೇಲೆ ಪ್ರಕರ ಬೆಳಕಿನೊಂದಿಗೆ ಚಿತ್ರ ಮೂಡಿದಂತೆ ಪರ್ವತ ಸಾಲು ಹಾಗು ಅದರ ರಮಣೀಯತೆ ಕಾಣ ಸಿಗುವ ಜಾಗ ತಲುಪಿ ಕಣ್ಣಿಗೆ ಪ್ರಕೃತಿ ನೀಡುವ ಹಬ್ಬವನ್ನ ಸವಿಯುತ್ತ ನಿಂತಿದ್ದು, ವಿರಮಿಸಿ ಮತ್ತೆ ಬ್ಯಾಗನ್ನು ಬೆನ್ನಿಗೇರಿಸಿದ್ವಿ ದೂರದ ಬೆಟ್ಟದ ತುದಿಯರಸಿ.

ಕಿಚ್ಚು ತರಿಸಿದ್ದು ಬೆಟ್ಟದಲ್ಲೊಂದು ಮನೆಯ ಮಾಡಿ ನಿಸರ್ಗದೊಂದಿಗೆ ಆಕಳು ಕರುಗಳೊಂದಿಗೆ ಬದುಕುವ ಭಟ್ಟರ ಮನೆಯಂಗಳದಲ್ಲಿ ನಿಂತಾಗ.ವರುಷ ಪೂರ್ತಿ ಬತ್ತದೆ ಇರುವ ನೀರ ಝರಿಗೆ ಪೈಪ್ ತೊಡಿಸಿ ಮನೆ ಮುಂದೆ ಸದಾ ನೀರು ಹರಿಯುವಂತೆ ಮಾಡಿದ ಭಟ್ಟರ ಕಾರ್ಯ ಅದರಿಂದಲೆ ಬೆಳೆಯುವ ಬೆಳೆ, ದಿವಸಲು ಹಾಲು ಕೊಡಲು ಸುಬ್ರಮಣ್ಯ ನಗರಕ್ಕಿಳಿದು ಹಾಲು ಕೊಟ್ಟು ಮತ್ತೆ ನಾವೇನು ಸಾಹಸ ಮಾಡಿ ಹತ್ತಿ ಬಂದಿದ್ವೊ ಅದೆ ದಾರಿ ಹತ್ತಿ ಬಂದು ತನ್ನ ಕೆಲಸ ಕಾರ್ಯದಲ್ಲಿ ತೊಡಗುವ ಭಟ್ಟರೆದುರು ನಮ್ಮ ಏದುಸಿರು ಅದಾಗೆ ನಿಂತಿತ್ತು, ಮನೆಯಂಗಳದಲ್ಲೆ ಬೆಳೆದ ನಿಂಬೆ ಹಣ್ಣನ್ನು ಕೊಯ್ದು ಭಟ್ಟರೆ ಮಾಡಿ ಕೊಟ್ಟ ಜ್ಯೂಸನ್ನು ಕುಡಿದು ದಾರಿ ಹಾಗು ರಾತ್ರಿ ಉಳಕೊಳ್ಳಲು ಮಾಡಬೇಕಾದ ಮುಂಜಾಗ್ರತೆ ಕ್ರಮಗಳನ್ನು ಕೇಳಿಕೊಂಡು ಹೊರಟಾಗ ನಗು ಮುಖದಿಂದಲ್ಲೆ ಭಟ್ಟರು ನಮ್ಮ ತಂಡವ ಬೀಳ್ಕೊಟ್ಟಿದ್ದರು.ಮುಂಚಿತವಾಗಿ ತಿಳಿಯಪಡಿಸಿದ್ದರೆ ಊಟದ ವ್ಯವಸ್ಥೆ ಅಲ್ಲಿಯೆ ಆಗುತಿತ್ತು ಆದರೆ ಮದ್ಯಾಹ್ನದ ಊಟಕ್ಕೆ ಬೇಕಾದ ರೆಡಿ ಪುಡ್ ಬ್ಯಾಗಲ್ಲೆ ರೆಡಿ ಇದ್ದುದರಿಂದ ಸಮಸ್ಯೆ ಇರಲಿಲ್ಲ.ಹಾಗೆ ಅಲ್ಲಿಂದ ಹೊರಟ ನಾವುಗಳು ಒಂದರ್ಧ ಗಂಟೆ ಸಾಗಿ ಕಲ್ಲು ಮಂಟಪದ ಬಳಿ ಸಾಗಿದ್ದೆವು, ಪಕ್ಕದಲ್ಲೆ ತೊರೆ ಇತ್ತು, ತೆಕ್ಕಿನ ಮರದ ತೆಕ್ಕಿನೆಲೆ ಊಟದ ಬಟ್ಟಲಾಗಿ,ಪ್ರತಿ ಬ್ಯಾಗಲ್ಲು ಶೇರ್ ಮಾಡಿ ಇಟ್ಟುಕೊಂಡ ಮಧ್ಯಾಹ್ನದೂಟವ ಹೊರತೆಗೆದು ಹೊಟ್ಟೆ ಹಸಿವನ್ನು ನೀಗಿಸಿದ್ವಿ.ಪ್ರಕೃತಿ ಮಡಿಲಿನೂಟ ಅದೇಕೊ ಅವತ್ತು ಬಹಳ ರುಚಿಯಾಗಿ ಕಂಡಿತ್ತು.

ಮತ್ತೆ ಸಾಗಿತ್ತು ಏರು ಪಯಣ.ವಿಸ್ಮಯ ಸುಂದರತೆಯ ಜೀವಂತ ದೃಶ್ಯಗಳು ಕಣ್ಣೋಟದ ಪರಿವೆ ದಾಟಿ ಎದುರೆ ನಿಂತಿದ್ದಾವಾಗ ನಡು ನೆತ್ತಿಯ ಸೂರ್ಯನ ತಾಪವು ಬೀಸು ಗಾಳಿಯೊಡೆ ತೇಲುತಿತ್ತು.ಬೀಸು ನಡಿಗೆ ಕೊನೆಗೊಂಡು ದೇಹ ತನ್ನೊಳಗಿನ ಕಸುವ ತೊರ್ಪಡಿಕೆಗೆ ಮೊದಲ್ಗೊಂಡಿತ್ತು.ದಾರಿ ಮಧ್ಯದ ವಿರಮಿಕೆಗಳು, ಹರಟೆಗಳು ಮತ್ತದೆ ಹುರುಪುಗಳನ್ನು ತಂದುಕೊಡುತಿತ್ತು, ಆಳ ಪ್ರಪಾತಗಳು ಅಲ್ಲಿಂದೇಳುವ ಮೋಡಗಳು, ಮೋಡದ ಮೇಲೆ ನಾವು ನಿಂತಿದ್ದೇವೆ ಅನ್ನೊ ನಮ್ಮ ಭ್ರಮೆಗಳು, ಆ ದೃಶ್ಯಗಳ ಸವಿ, ತುದಿ ಮೊದಲಿಲ್ಲದೆ ಸಾಗಿತ್ತು.ಹೀಗೆ ಸಾಗಿದ ಪಯಣ ಸಂಜೆಯ ಅನಿರೀಕ್ಷಿತ ಬೆಳವಣಿಗೆಗೆ ಎದುರುಗೊಳ್ಳಬೇಕಾಯಿತು. ಸಂಜೆ 4 ರ ಸಮಯ ಇರಬಹುದು.ಇದ್ದಕ್ಕಿಂದ್ದಂತೆ ವಾತಾವರಣ ಮಬ್ಬಾಗತೊಡಗಿತು.ಗಾಳಿ ಜೋರಾಗಿ ಬೀಸಿದಾಗ ಮಬ್ಬು ಸರಿಯೋದು ಮತ್ತೆ ಮಬ್ಬು ಕವಿಯೋದು ಈ ಕಣ್ಣಾಮುಚ್ಚಾಲೆ ಮಧ್ಯೆ ನಮ್ಮ ಪಯಣ ಸಾಗಿತ್ತು.ಈ ಸನ್ನಿವೇಷ ವಾಹನದ ವೈಪರ್ ಹಾಗು ಮಳೆಯನ್ನು ನೆನಪಿಸಿದ್ದು, ಅದಾಕೋ ಏನೋ ಶಕ್ತಿಯನ್ನೆಲ್ಲ ಒಟ್ಟಾಗಿಸಿ ಕೂಗಿದ್ವಿ, ಸಿಕ್ಕಿದ ಸಂತೋಷವನ್ನು ಮನ ತುಂಬಿಸಿಕೊಳ್ಳಲು ಮನದೊಳಗೆ ಜಾಗವೆ ಸಾಲದೆ ಕೂಗಿನ ರೂಪದಲ್ಲಿ ಹೊರಹಾಕುತಿದ್ದೆವೊ? ತಿಳಿಯೆ.ಮಗದೊಂದು ಘಂಟೆಯಲ್ಲಿ ಮಂಜು ಅದೆಷ್ಟು ಕವಿದಿತ್ತೆಂದರೆ ನಡೆಯೊ ದಾರಿ ಅಸ್ಪಷ್ಟ,ಪರಸ್ಪರ ಬೆನ್ನಿಗಂಟಿ ಒಬ್ಬರಿಗೊಬ್ಬರ ಶರ್ಟ್ ಹಿಡಿದು ಮುಂದಡಿ ಇಟ್ಟಿದ್ವಿ.ಮುಂದೆ ಸಾಗಲಾಗದು ಎಂಭ ಪರಿಸ್ಥಿತಿಯ ಎದುರುಗೊಂಡ ನಾವು ಏರು ದಾರಿಯ ಮುಗಿಸಿ ಸಮತಟ್ಟಾದ ಜಾಗಕ್ಕೆ ತಲುಪಲೆಬೇಕಾದ ಅನಿವಾರ್ಯತೆಯನ್ನ ತಂದೊಡ್ಡಿತು.ಸ್ವಲ್ಪ ಹೊತ್ತಿಗೆ ಮುಂಚೆ ಮುದ ನೀಡಿದ್ದ ಮಂಜು ಭಯ ಹುಟ್ಟಿಸತೊಡಗಿತ್ತು.ಅಂತೂ ಇಂತೂ ಸಣ್ಣಗಿನ ಸಮತಟ್ಟು ಜಾಗಕ್ಕೆ ಬಂದು ತಲುಪಿದ್ವಿ.ಸರಂಜಾಮುಗಳನ್ನು ಹೊತ್ತು ಹಾಕಿ,ಕೆಲವರು ಟೆಂಟ್ ಕಟ್ಟಲು ಶುರು ಮಾಡಿದರೆ , ಕೆಲವರು ಅಡುಗೆಗೆ ನೀರರಸಿ ಮತ್ತು ಶೀಘ್ರವಾಗಿ ಬೆಂಕಿ ಹಾಕುವ ಅನಿವಾರ್ಯತೆ ಇದ್ದುದರಿಂದ ಕಟ್ಟಿಗೆಗಾಗಿ ಕಾಡೊಳಗೆ ಇಳಿದಿದ್ದರು.

ಮಂಜಿನೊಡನೆ ಸಮರಕ್ಕೆ ಬಿದ್ದ ನಾವು ಕ್ಯಾಂಪ್ ಫಯರ್ ಅಸ್ತ್ರಕ್ಕೆ ಮೊರೆಹೋಗಿದ್ವಿ, ಒಂದಷ್ಟು ಬೆಳಕು ಮೂಡಿದ್ದೇ ಆವಾಗ, ಮೂರು ಕಲ್ಲು ಜೋಡಿಸಿ ನಡುವೆ ಬೆಂಕಿ ಹಾಕಿ ಅರೆ ಬೆಂದ ಅನ್ನ ಮಾಡಿ, ಒಂದೆರಡು ಟೊಮೇಟೊ ಕಿವುಚಿ ಮಾಡಿದ ಸಾರಿನ ಜೊತೆ ನೆಂಚಿಕೊಂಡು ತಿನ್ನಬೇಕಾದರೆ ಪರಮಾನಂದ, ಒಂದಷ್ಟು ಹಾಡು ನೃತ್ಯಗೊಳೊಳಗೆ ನಿದ್ದೆಗೆ ಆ ದಿನ ಜಾರಿದ್ವಿ,ಬೆಳಿಗಿನ ಜಾವ 4 ಕ್ಕೆಲ್ಲ ಮಂಜು ಸರಿದಿತ್ತು.ಆವಾಗಲೆ ಎದುರಿಗಿದ್ದ ಕುಮಾರ ಪರ್ವತ ಕಂಡಿದ್ದು ಹಾಗು ನಮ್ಮ ಯಡವಟ್ಟು ಗೋಚರಿಕೆಗೆ ಬಂದಿದ್ದು. ಸ್ಥಳ ಪರಿಚಯ ಸರಿಯಾಗಿ ಇಲ್ಲದೆ ನಾವು ಟೆಂಟ್ ಹಾಕಿದ ಜಾಗದ ಹಿಂಬದಿ 10 ಹೆಜ್ಜೆ ನಡೆದರೆ ಆಳ ಪ್ರಪಾತ.ಹೌದು ನಾವು ಉಳಿದುಕೊಂಡಿದ್ದು ಶೇಷ ಪರ್ವತದ ತುದಿ.ಚಾರಣದಲ್ಲಿ ಶಿಸ್ತನ್ನ ಹೊಂದಿದ್ದ ನಮ್ಮ ತಂಡ ಮಧ್ಯಪಾನ ಇಂತ ಚಟಗಳಿಗೆ ಮಾರುಹೋಗುವಂತದ್ದಾಗಿರಲಿಲ್ಲ, ಪ್ರಕೃತಿ ರಮಣೀಯತೆ ಹಾಗೆ ಇರಬೇಕೆಂದು ಬಯಸುವವರಾದ್ದರಿಂದ ಪ್ಲಾಷ್ಟಿಕ್,ಬಾಟಲಿಗಳಿಗೆ ನಿಷೇಧ ಹೇರಿದ್ವಿ, ಬಹುಶಃ ಅದಕ್ಕೆ ಇರಬೇಕೇನೊ ಪ್ರಕೃತಿ ಏನೊಂದು ಅವಘಡ ಸಂಭವಿಸದಂತೆ ನಮ್ಮ ಆ ದಿನ ಕಾಯ್ದಿದ್ದು.ಒಂದು ಬಿಸಿ ಚಹಾ ಕಾಯ್ಸಿ ಹಿಗ್ಗಿ ಸರಂಜಾಮುಗಳನ್ನ ಹೇರಿಕೊಂಡು ಆ ಜಾಗ ಬಿಟ್ಟಿದ್ವಿ.

ಶೇಷಪರ್ವತ ಮತ್ತು ಕುಮಾರಪರ್ವತವನ್ನು ಬೇರ್ಪಡಿಸುತಿದ್ದುದು ಕಾಡು, ಶೇಷ ಪರ್ವತದಿಂದ ಕಾಡೊಳಗೆ ಇಳಿದು ಮತ್ತೆ ಹತ್ತಬೇಕಿತ್ತು,ಬಹಳ ದೂರವಿಲ್ಲದಿದ್ದರು ಕಾಡು ಮುಗಿಸಿ ಹತ್ತಲು ಶುರು ಮಾಡುತಿದ್ದಂತೆ ರಾಕ್ ಕ್ಲೈಬಿಂಗ್ ನ ಸಣ್ಣ ಅನುಭವ ದೊರಕೋದು ಈ ಚಾರಣದ ಹೊಸ ತೆರ.ಪಾಚಿ ಹಿಡಿದ ಜಾರು ಬಂಡೆ ಒಡ್ಡಿದ ಕಷ್ಟ ಊಫ್...........!!!! ಜಾರೋದು, ಹತ್ತೊದು, ಜಾರಿದವರನ್ನ ಹಿಡಿದೆಳೆಯೋದು, ಕೊನೆಗೆ ಒಂದಿಬ್ಬರನ್ನು ಮೇಲೆಳೆಯಲು ರೋಫ್ ಕೂಡ ಬಳಸಿದ ನೆನಪು.ಆಮೇಲೆ ಸುಲಭದ ಪಯಣ, ನಡೆದಿದ್ವಿ ಅನ್ನೋದಕ್ಕಿಂತ ಓಡೋಡಿನೆ ತಲುಪಿದ್ವಿ ಕುಮಾರ ಪರ್ವತದ ತುದಿ. ಏನೊ ಗೆದ್ದ ಸಾಧನೆಗೈದ ಅನುಭವ, ವಿಶಾಲ ಬಯಲನ್ನು ಹೊಂದಿದ ಪರ್ವತದ ತುದಿಯಿಂದ ಕಣ್ಣು ತುಂಬಿಸಿಕೊಂಡ ಪ್ರಕೃತಿ ಸೌಂದರ್ಯವನ್ನು ನಾ ಮಾತಿನಲ್ಲಿ ಪಟ್ಟಿಯಾಗಿಸಿ ಅಕ್ಷರವಾಗಿಸಿ ಇಲ್ಲಿ ಹೇಳಲಾರೆ,ಸುಮ್ಮನೆ ಓಡುತಿದ್ವಿ, ಕೇಕೆ ಹಾಕುತಿದ್ವಿ, ಕುಣಿಯುತಿದ್ವಿ ಯಾಕೆ ಹೀಗಾಡುತಿದ್ವಿ? ಉಹೂಂ ಆ ಅನುಭವಗಳು ಹೀಗೆಯೆ ಇತ್ತು ಅನ್ನೊದನ್ನು ವಿವರಿಸಲಾರೆ, ಬಹುಶಃ ಈ ತೆರನಾಗಿ ಇಂಥ ಅನುಭವ ನಿಲುಕಿದವರಿಗೆಲ್ಲ ಇದು ವೇದ್ಯ.

ಅಂದ ಹಾಗೆ ಇದು ನನ್ನ 18 ವರುಷದ ಹಿಂದಿನ ಮೊದಲ ಚಾರಣ ಅನುಭವ,ಈ ಅನುಭವ ನನ್ನಲ್ಲಿ ಚಾರಣ ಆಸಕ್ತಿಯನ್ನು ಬೆಳೆಸಲು ನೀರೆರೆದಿದ್ದು.ಸುಮಾರು 40-45 ಚಾರಣಗಳನ್ನು ಮುಗಿಸಿದ್ದರೂ ಕೂಡ ನನ್ನ ಮೊದಲ ಚಾರಣದ ನೆನಪುಗಳು ಮರೆಯಾಗಿಲ್ಲ. ಇದೆ ಕುಮಾರ ಪರ್ವತಕ್ಕೆ ಒಟ್ಟು ಸುಮಾರು 12 ಭಾರಿ ಚಾರಣ ಗೈದಿದ್ದರು ಪ್ರತಿ ಸಲವು ಹೊಸ ಅನುಭವಗಳನ್ನು ತುಂಬಿಕೊಂಡೆ ಮರಳಿದ್ದೇವೆ,ಮೊದಲ ಚಾರಣ ಸುಬ್ರಮಣ್ಯದಿಂದ ಮತ್ತಲ್ಲಿಗೆ ಮರಳಿದುದಾದರು ಆಮೇಲಿನದ್ದೆಲ್ಲ ಕುಮಾರ ಪರ್ವತದ ಚಾರಣಗಳು ಮಡಿಕೇರಿ ಜೊತೆಗೆ ತಳುಕು ಹಾಕಿಕೊಂಡಿತ್ತು, ಮಡಿಕೇರಿ ಕಡೆಯಿಂದ ಅಥವಾ ಸುಬ್ರಮಣ್ಯದಿಂದ ಪ್ರಾರಂಭಗೊಳ್ಳುತಿದ್ದ ಇವುಗಳು ಕೊನೆಗೊಳ್ಳುತಿದ್ದುದು ಪರಸ್ಪರ ಈ ಎರಡು ವಿರುದ್ದ ಊರೊಳಗೆ.ಚಾರಣಗಳೆ ಹಾಗೆ ಆ ಹೊತ್ತಿಗೆ ಸಾಕೆನಿಸಿದರು ದಣಿವಾರಿದ ನಂತರ ಮತ್ತೆ ನೆನಪಾಗಿ ಹೊಸತೊಂದು ಚಾರಣಕ್ಕೆ ಪ್ರೇರೇಪಿಸುವಂತದ್ದು ಎಂಬುದು ನನ್ನ ಮಟ್ಟಿಗೆ ನಿಜ.ಹೀಗೆ ಸುಮ್ಮನೆ ಮೊದಲ ಚಾರಣಗಳ ನೆನಪುಗಳನ್ನು ಅಕ್ಷರ ರೂಪಕ್ಕಿಳಿಸಿದಾಗ ಬರೆದಿದ್ದು ಇಷ್ಟು.ಇನ್ನಷ್ಟು ಮತ್ತಷ್ಟು ನೆನಪುಗಳನ್ನು ಅನುಭವಿಸಲು ಈ ಬರಹ ಕಾರಣವಾಯಿತು.ಅದಕ್ಕೆ ಅನ್ನೋದೇನೊ ನೆನಪುಗಳು ಸದಾ ಹಸಿರು. :)