Friday, April 5, 2013

ತಂತ್ರ

ಪಂಜು ಮ್ಯಾಗಝೀನ್ ನಲ್ಲಿ ಪ್ರಕಟಗೊಂಡಿದೆ.



ಅವನು ಎಲ್ಲರಂತಿರಲಿಲ್ಲ, ಕುರುಚಲು ಗಡ್ಡಧಾರಿಯಾಗಿ ಹರಕಲು ಉಡುಪುಗಳ ಜೊತೆ ನನ್ನ ಮುಂದು ನಿಂತಿದ್ದ.

ಏನು? ಎಂದಿದ್ದೆ.

ಭಿಕ್ಷುಕ ವೇಷಧಾರಿಯಂತೆ ಕಾಣುವ ಆತ ಭಿಕ್ಷುಕನೆಂದು ಒಪ್ಪಿಕೊಳ್ಳದಂತೆ ಮಾಡಿದ್ದು ಆತನ ದೃಷ್ಟಿಯಲ್ಲಿದ್ದ ಹರಿತ.

ಚಿಂಗಾಣಿ ಬೆಟ್ಟದ ಕಡೆ ಹೋಗ್ಬೇಕು ದಾರಿಯೆಂತು ? ಎಂದು ತನ್ನ ಗೊಗ್ಗರು ದನಿಯಲ್ಲಿ ಕೇಳಿದ.

ನನ್ನ ಎಡಕ್ಕೆ ಕಾಣುವ ದೊಡ್ಡ ಬೆಟ್ಟದ ಕಡೆ ಕೈ ತೋರಿ ನೀ ಕೇಳುತ್ತಿರುವ ಬೆಟ್ಟ ಅದೆ ಎಂದು ಕೈ ತೋರಿದ್ದೆ.

ಆತ ನನ್ನೆಡೆಗೆ ಒಂದು ಕ್ಷಣ ನೋಡಿ ನಸು ನಕ್ಕು ಮರುಕ್ಷಣವೇ ಅತ್ತ ಕಡೆ ಹೊರಟಿದ್ದ.

ಚಿಂಗಾಣಿ ಬೆಟ್ಟದ ಕಡೆ ನಡೆಯಲು ಇವನ್ಯಾರೂ? ಅಷ್ಟಕ್ಕೂ ಅಲ್ಲಿ ದೊಡ್ಡ ಗೌಡರ ಸಮಾಧಿಯ ಹೊರತಾಗಿ ಮತ್ತೇನೂ ಇಲ್ಲ. ಹಾಗಾದರೆ ಆ ಗೌಡರಿಗೂ ಈತನೀಗೂ ಇರಬಹುದಾದ ಸಂಬಂಧ !? ಊಹುಂ.. ಏನೊಂದೂ ತಿಳಿಯದೇ ಯೋಚಿಸುತ್ತಲೇ ಮುನ್ನಡೆದೆ.

ಮರುದಿನ ಮುಂಜಾನೆ ಕಾದ್ರಿ ಬ್ಯಾರಿಯ ಹೋಟೆಲ ಜಗಲಿಯ ಮೇಲೆ ಕುಂತು ಕಲ್ತಪ್ಪ ಜೊತೆ ಚಾ ಹೀರುತ್ತಾ ಕುಳಿತ ಮಂದಿಗೆ ಚಿಂಗಾಣಿ ಬೆಟ್ಟದ ತುದಿಯಿಂದ ಘಂಟಾ ನಾದದ ಸದ್ದು ಕೇಳಿತ್ತು. ಹೂಂ ಅಲ್ಲಿ ನಾನು ಇದ್ದೆ!! ಎಲ್ಲರಂತೆ ನನಗೂ ಆ ಸದ್ದು ಕೇಳಿತ್ತು. ಎಲ್ಲರೂ ಆಶ್ಚರ್ಯಭರಿತರಾಗಿ ಆತ್ತ ನೋಡುತ್ತಲೆ ಸದ್ದು ಕೇಳಿಸತೊಡಗಿದರೆ ನನಗೆ ಹಿಂದಿನ ದಿನ ಚಿಂಗಾಣಿ ಬೆಟ್ಟದ ದಾರಿ ಕೇಳಿದ ಫಕೀರನ ಮುಖ ಎದುರಿಗೆ ಬಂದು ನಿಂತಿತ್ತು. ಹಾಗಾದರೆ ಈತ ಸಾಧುನಾ? ಆತನೀಗೆ ಈ ಚಿಂಗಾಣಿ ಬೆಟ್ಟದ ಪ್ರೇರೆಪಣೆ ಬಂದಿದ್ದೆಂತು? ಹಾಗೊಂದು ಪ್ರೇರೇಪಣೆ ಬಂದಿದ್ದೇ ಆದಲ್ಲಿ ಆತ ಅತ್ತ ಹೋಗುವ ದಾರಿ ಮಧ್ಯೆ ನಾನೇಕೆ ಸಿಕ್ಕಿದೆ? ಆತನಿಗೆ ನಿಜವಾಗಲೂ ಆ ದಾರಿ ಗೊತ್ತಿರಲಿಲ್ಲವೇ? ಒಂದು ವೇಳೆ ಉದ್ದೇಶಪೂರ್ವಕವೇ ನನ್ನ ಕೇಳಿದ್ದೇ ಆದರೆ ಈ ಕಥೆಯಲ್ಲಿ ನನ್ನ ಪಾತ್ರವೇನು? ಯೋಚನೆಗಳ ಸುಳಿ ಸುತ್ತಡತೊಡಗಿತ್ತು. ಒಂದಿನಿತು ಕಾದು ನೋಡಿ ಉತ್ತರ ಹುಡುಕೋಣ ಎಂದುಕೊಂಡು ಸುಮ್ಮನಾದೆ, ಅಷ್ಟರಲ್ಲಿ ಘಂಟಾನಾದದ ಸದ್ದು ಕೂಡ ನಿಂತಿತ್ತು. ಬ್ಯಾರಿ ಹೋಟೇಲಿನ ತುಂಬಾ ಊಹಾಪೋಹ, ತರೇವಾರಿ ಚರ್ಚೆ ಪ್ರಾರಂಭಗೊಂಡಿತ್ತು.

ಅದೊಂದು ದಿನ ಸಂಜೆ ಊರ ತಾಂಡದ ಹಟ್ಟಿ ಮಾದ ನನ್ನ ಮನೆಯಂಗಳದಲ್ಲಿ ನಿಂತಿದ್ದ.

ಏನ್ ಸಮಾಚಾರನೊ? ಇತ್ತಿತ್ಲಾಗೆ ಕಾಣಿಸಿಕೊಳ್ತಿಲ್ಲ.. ಎಂದೆ.

’ಸಮಾಧಿನಾಥ ಸ್ವಾಮೀಜಿ ಕ್ಷೇತ್ರ’ ದಾಗ ಕೆಲ್ಸ ಅಯ್ಯೋರ ಎಂದ, ನಮ್ ತಾಂಡದ ಅಷ್ಟೂ ಮಂದಿ ದುಡಿತಿರೊ ಬಗ್ಗೆ ಮಾಹಿತಿ ಒಂದೆ ಗುಕ್ಕಿನಾಗೆ ವದರಿದ.

ನಾ ಬೆಪ್ಪಾದೆ! ಈ ಹಳ್ಳಿನಾಗೆ ಇಂಥದೊಂದು ಹೊಸ ಹೆಸ್ರೂ ಸ್ವಾಮಿ ಇತ್ಯಾದಿ ವಿಷಯ ಕೇಳಿ…

ಎಂತದ್ಲಾ ಅದು? ಇದೇನೋ ಹೊಸ್ದೂ? ಎಂದೆ.

ಅದೆ ಅಯ್ಯೋರಾ, ಚಿಂಗಾಣಿ ಬೆಟ್ಟದ ಮೇಲೆ ಹೊಸ ಸಾಮ್ಯೋರು ಹಿಮಾಲಯದಿಂದ ಬಂದೋರೆ. ಗೌಡ್ರ ಸಮಾಧಿ ವಿಶೇಷ ಸಕ್ತಿ ಹೊಂದಿದ್ಯಂತೆ, ಅದುಕ್ಕೆ ಪೂಜೆ ಮಾಡ್ತಾವ್ರೆ, ಅಷ್ಟೆ ಅಲ್ದೆ ನಮ್ ತಾಂಡ್ಯಾದಲ್ಲೇ ಭಿಕ್ಷೆ ಎತ್ತಿ ಸಾಮ್ಯೋರು ಊಟ ಮಾಡ್ತಾರೆ, ನಮ್ ಹಾಡಿ ಜನಗಳ ತುತ್ತು ತಿನ್ನೋ ಸ್ವಾಮೀಜಿನ ಇಲ್ಲಿ ವರ್ಗೂ ಕಂಡಿದ್ದೆ ಇಲ್ಲ. ಇಷ್ಟ್ರಲ್ಲೆ ನಮ್ ತಾಂಡ್ಯ ಮಂದಿಗೆ ಒಳ್ಳೆದಾಗ್ತೈತಂತೆ, ಸಮಾಧಿಗೊಂದು ಚಪ್ರ, ಒಂದು ಸಣ್ಣ ಗುಡಿ ಕಟ್ಟಿಸೋದ್ರೋಳಗೆ ನಮ್ಗಳ ಬದುಕು ಬಂಗಾರವಾಗ್ತೈತಂತೆ. ಅದುಕ್ಕೆ ಎಲ್ರೂ ಸ್ವಾಮಿಗಳು ಹೇಳ್ದಂಗೆ ದುಡಿಯಕ್ಕೆ ನಿಂತೀವಿ. ನೀವೂ ಒಂದ್ ಕಿತ ಬಂದು ಸ್ವಾಮಿಗಳ ದರುಶನ ಮಾಡಿ, ನಿಮ್ಗೂ ಒಳ್ಳೆದಾಗ್ತೈತೆ ಎಂದು ಅಷ್ಟೂದ್ದ ಭಾಷಣ ಬಿಗಿದ.

ಹೂಂ ಸರಿ ಸರಿ ಎದ್ದೋಗು, ಅಡಿಕೆ ಗೊನೆ ಕೆಂಪಗಾಗೈತೆ, ತೆಂಗು ಒಣಗಿ ಬೀಳಕ್ಕೆ ಹತ್ತಾವೂ ಒಂದ್ ಕಿತ ಈ ಕಡೆ ಬಂದು ಎಲ್ಲಾ ಸಜ್ಜಿ ಮಾಡಿ ಕೊಟ್ಟೋಗ್ಲಾ ಮಾದ, ಆ ಮ್ಯಾಕೆ ಸ್ವಾಮಿ ಗುಡಿ ಬಗ್ಗೆ ಚಿಂತಿಸ್ಬಾರ್ದಾ ಎಂದೆ.

ಹೂಂ ಅಯ್ಯೋರಾ, ನಾಳೆ ಬೆಳಿಗ್ಗಿನ ಪೂಜೆ ಮುಗುಸ್ಕೊಂಡು ನಿಮ್ಮಲ್ಲಿ ದುಡಿಯಕ್ಕೆ ಬಂದೇನೂ ಎನ್ನೂತ್ತಾ ಮಾದ ತಾಂಡ್ಯಾ ದಾರಿ ಹಿಡಿದಿದ್ದ.

ಆ ಹರಿತ ದೃಷ್ಟಿಯ ಫಕೀರ ಮತ್ತೆ ನೆನಪಾಗಿದ್ದ. ಬಂದಿನ್ನೂ ಕೆಲ ತಿಂಗಳುಗಳಲ್ಲೇ ಆತಂದೂ ಇಷ್ಟೆಲ್ಲಾ ಸೌಂಡ್, ಸ್ವಾಮಿ ಪಾಮಿಗಳ ಬಗ್ಗೆ ಯಾವೂದೇ ಭಯ ಭಕ್ತಿ ನನಗಿಲ್ಲದಿದ್ದರೂ ಒಂದೊಮ್ಮೆ ಚಿಂಗಾಣಿ ಬೆಟ್ಟದ ತುದಿಯ ಬೆಳವಣಿಗೆಯನ್ನೂ ಕಣ್ಣಾರೆ ಕಂಡು ಬರಬೇಕೆಂಬ ಆಸೆ ಮನದಲ್ಲಿ ಆ ಕ್ಷಣದಲ್ಲಿ ಮೊಳೆತಿತ್ತು.

ದಿನ ಕಳೆದಂತೆ ಚಿಂಗಾಣಿ ಬೆಟ್ಟದ ಗೌಜು ಗದ್ದಲಗಳು ಹೆಚ್ಚಾಗತೊಡಗಿದವು. ಬರಿಯ ತಾಂಡ್ಯದ ಹಾಗೂ ಊರ ಮಂದಿಯಲ್ಲದೆ ಪರವೂರ ಮಂದಿಯೂ ಸಮಾಧಿನಾಥ ಕ್ಷೇತ್ರದ ಭಕ್ತರಾಗಿದ್ದಾರೆ. ಚಿಂಗಾಣಿ ಬೆಟ್ಟದ ಬುಡದಲ್ಲಿ ಸೌಪರ್ಣಿಕಾ ಬೆಟ್ಟವೆಂಬ ಬೋರ್ಡ್ ರಾರಾಜಿಸುತ್ತಿದೆ. ಬೆಟ್ಟದ ಬುಡ ತಳದಿಂದ ತುದಿಯವರೆಗೂ ಸುಸಜ್ಜಿತ ರಸ್ತೆ ರೂಪುಗೊಂಡಿದೆ. ರಾಜಕಾರಣಿಯಾದಿಯಾಗಿ ಶ್ರೀಮಂತರೆಲ್ಲ ತಮ್ಮ ನಾಲ್ಕು ಚಕ್ರದ ವಾಹನದಲ್ಲಿ ದರುಶನಕ್ಕಾಗಿ ಬರುತಿದ್ದಾರೆ್. ಧ್ಯಾನ, ಯೋಗ ಕೇಂದ್ರ ಇತ್ಯಾದಿ ದೊಡ್ಡ ದೊಡ್ಡ ಕಟ್ಟಡಗಳು ಬುಡ ತಳದಲ್ಲಿ ವಸತಿ ಗೃಹಗಳೂ ರೂಪುಗೊಂಡಿವೆ. ಸಾವಿರಕ್ಕೂ ಮಿಗಿಲಾದ ಸ್ವಾಮಿ ಸೇವಕರೂ ಅತಿಥಿ ಸತ್ಕಾರಕ್ಕಾಗಿ ಸಜ್ಜುಗೊಡಿರುತ್ತಾರೆ. ಜಾತ್ರೆ ಮಹೋತ್ಸವಗಳು ನಡೆಯಲೂ ಪ್ರಾರಂಭಿಸಿದೆ. ಕಾದ್ರಿ ಬ್ಯಾರಿ ಹೋಟೇಲಿನ ಕಲ್ತಪ್ಪಾ ಹಾಗೂ ಟೀ ಗ್ರಾಹಕರ ಹೆಚ್ಚಳದಿಂದ ತನ್ನ ಮೊದಲಿನ ರುಚಿಯನ್ನೂ ಕಳೆದುಕೊಂಡಿದೆ, ಇದರ ಜೊತೆಗೆ ಹಲವೂ ಹೋಟೆಲುಗಳು ತಲೆಯೆತ್ತಿದೆ, ಒಟ್ಟಿನಲ್ಲಿ ಹಳ್ಳಿ ತನ್ನತನ ಕಳೆದುಕೊಂಡು ಯಾಂತ್ರಿಕ ನಗರವಾಗಿದೆ, ಹಳ್ಳಿಯು ಬರಿಯ ಚಿಂಗಾಣಿಬೆಟ್ಟದ ಕೃಪೆಯಿಂದಲೇ ಉಸಿರು ಹಿಡಿದಂತೆ ಭಾಸವಾಗತೊಡಗಿದೆ. ಬೆಟ್ಟದ ಮೇಲಿನ ಪವಾಡಗಳು, ಸಮಾಧಿನಾಥನ ಬಗೆಗಿನ ತರೇವಾರಿ ಕಥೆಗಳು ದಿನಕ್ಕೊಂದರಂತೆ ಜನರ ಬಾಯಲ್ಲಿ ನಲಿದಾಡತೊಡಗಿದೆ. ಇವೆಲ್ಲ ಬದಲಾವಣೆ ನಡೆದಿದ್ದು ಕೇವಲ 3-4 ವರುಷಗಳಲ್ಲೇ ಆದರೂ ನಾನು ಇನ್ನೂ ಆ ಚಿಂಗಾಣಿಬೆಟ್ಟದ ಕಡೆ ತಲೆ ಹಾಕಿರಲಿಲ್ಲ. ಆದರೆ ಆ ಹರಿತ ದೃಷ್ಟಿಯ ಫಕೀರ (ನನ್ನ ದೃಷ್ಟಿಯಲ್ಲಷ್ಟೆ ಫಕೀರನಾಗಿದ್ದುಕೊಂಡವ) ಅವನು ನನ್ನೊಳಗೆ ಹುಟ್ಟು ಹಾಕಿದ ಪ್ರಶ್ನೆಗಳು ಈ ಎಲ್ಲಾ ಗೌಜು ಗದ್ದಲಗಳ ನೋಡುತ್ತಿರಬೇಕಾದರೆ ಮತ್ತೆ ಮತ್ತೆ ಪುಟಿದೇಳುತಿತ್ತು. ಉತ್ತರ ಕಂಡುಕೊಳ್ಳುವ ಸಲುವಾಗಿಯಾದರೂ ನಾ ಆತನನ್ನು ಭೆಟ್ಟಿಯಾಗಲೇ ಬೇಕಿತ್ತು. ಅದಕ್ಕಾಗಿ ನಾನು ಒಂದಿನ ಚಿತ್ರಣವೇ ಬದಲಾದ ಬೆಟ್ಟದ ಕಡೆ ಮುಖ ಮಾಡಿದೆ.

ವಿಶಾಲವಾದ ಹಾಲ್ನಲ್ಲಿ ಸಿಂಹಾಸನ ಪೀಠಾಧಾರಿಯಾಗಿ ಫಕೀರ ಕುಂತು ಸರದಿ ಸಾಲಲ್ಲಿ ಬರುತಿದ್ದ ಭಕ್ತರಿಗೆ ಆಶೀರ್ವಾದವ ನೀಡುತಿದ್ದ. ಕಾಲಿಗೆ ಬೀಳೋ ಭಕ್ತರಿಗೆ ಸೇಬು ಕಿತ್ತಳೆ ಇತರ ಹಣ್ಣುಗಳನ್ನು ನೀಡುತಿದ್ದ, ಎಡ ಬಲದಲ್ಲಿ ಶಿಷ್ಯಗಣ ಈತನ ಸೇವೆಗೆ ನಿಂತಿತ್ತು್. ಪಕ್ಕದಲ್ಲಿ ಗೌಡರ ಸಮಾಧಿಗೆ ಬಂದ ಭಕ್ತರು ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸುತಿದ್ದರು. ಆ ಸಮಾಧಿಯೆದುರು ಒಂದು ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಎಲ್ಲೆಲ್ಲೂ ಹಚ್ಚಿಟ್ಟ ಊದುಬತ್ತಿಯ ಘಮಲು ನೆತ್ತಿಗೆ ಹತ್ತಿ ಅಮಲು ತರಿಸಿತ್ತು. ನಾ ನೋಡಿದ ಫಕೀರ ಹಾಗೂ ಬದಲಾದ ವೇಷದೊಳಗಿದ್ದ ಫಕೀರನೀಗೂ ಅಜಗಜಾಂತರ ವ್ಯತ್ಯಾಸ. ಇದಷ್ಟೆ ಅಲ್ಲದೆ ಕಾಡಿನಿಂದ ತುಂಬಿದ್ದ ಚಿಂಗಾಣಿ ಬೆಟ್ಟದ ಸಮಾಧಿಯ ಮೊದಲಿನ ಚಿತ್ರಣ ಹಾಗೂ ನಾ ನೋಡುತ್ತಿರುವ ಈಗಿನ ಚಿತ್ರಣಕ್ಕೂ ಒಂದಕ್ಕೊಂದು ಸಂಬಂಧವೇ ಕಾಣಿಸದೆ ಬೆಪ್ಪರು ಬೆರಗಾಗಿ ಈ ಫಕೀರನನ್ನು ನೋಡಲು ಸರತಿಯಲ್ಲಿ ನಿಲ್ಲುವುದೋ ಬಿಡುವದೊ ಯೋಚಿಸುತ್ತಿರಬೇಕಾದರೆ ಸ್ವಾಮಿಯ ಶಿಷ್ಯನೊಬ್ಬ ಬಂದು ತಾವು ದಯಮಾಡಿಸಬೇಕು… ನೀವು ನಮ್ಮ ಅತಿಥಿ, ಸ್ವಾಮಿಗಳು ತಮ್ಮ ವಿಶ್ರಾಂತಿ ಗೃಹದಲ್ಲಿ ನಿಮ್ಮನ್ನು ಕುಳ್ಳಿರಿಸಲು ಅಪ್ಪಣಿಸಿದ್ದಾರೆ, ದಯವಿಟ್ಟು ಬನ್ನಿ… ಎನ್ನಲು, ಏನಪ್ಪ ಇದು !! ನಾ ಯಾವ ಸೀಮೆಯ ಅತಿಥಿ ? ನನ್ನನ್ಯಾಕೆ ಈತ ಇಷ್ಟೂ ಜನರೊಳಗೆ ಗುರುತಿಸಿದ ? ಅಷ್ಟಕ್ಕೂ ಈತನ್ಯಾರು ಎಂದು ಸಿಂಹಾಸನಾಧೀಶನ ಬಗ್ಗೆ ಯೋಚಿಸುತ್ತಾ ಆತನ ಶಿಷ್ಯನ ಜೊತೆ ಹೆಜ್ಜೆ ಹಾಕಿದೆ…

ಭವ್ಯವಾದ ಕೋಣೆಯೊಳಗೆ ಪ್ರಶ್ನೆಗಳೊಂದಿಗೆ ಗಿರಕಿ ಹೊಡೆಯುತಿದ್ದ ತಲೆಯನ್ನು ತಹಬಂದಿಗೆ ತರಲು ಪ್ರಯತ್ನಿಸುತಿದ್ದ ನನ್ನನ್ನು …

ಬಂದ್ಯಾ? ಅದೆಷ್ಟು ದಿನಗಳಿಂದ ಕಾದಿದ್ದೆ..? ಎಂಬ ಗೊಗ್ಗರು ದನಿ ವಾಸ್ತವಕ್ಕೆ ಎಳೆತಂದಿತ್ತು.

ಎದುರಿಗಿದ್ದಿದ್ದು ಆತನೇ, ಅದೇ ಪ್ರಖರ ದೃಷ್ಟಿಯಿಂದ ನನ್ನ ದಿಟ್ಟಿಸುತ್ತಾ ನಿಂತಿದ್ದ.

ನೀನ್ಯಾರು?? ಎನ್ನಲಷ್ಟೆ ನನ್ನೊಳಗೆ ದನಿ ಇದ್ದಿದ್ದು.

ಗುರುತಿಸು ಎಂದ,

ಊಹೂಂ ತಿಳಿಲಿಲ್ಲ ಎಂದೆ.

ನಗುತ್ತಾ ನೀನ್ಯಾರು ಎಂದು ನನ್ನೇ ಮರು ಪ್ರಶ್ನಿಸಿದ.

ನಾನು ಈ ಊರ ಗೌಡರ ಕೆಲಸದಾಳು, ಹೆತ್ತವರನ್ನೂ ನೋಡದ ನನ್ನನ್ನು ಸಾಕಿ ಬೆಳಸಿದ್ದು ಗೌಡರು್. ಗೌಡರ ಸಾಕು ಮಗನೆಂದೇ ಊರ ಜನ ನನ್ನ ಗುರುತಿಸುತ್ತಾರೆ.

ಆ ನಿಮ್ಮ ಗೌಡರಿಗೆ ಸಿದ್ದಪ್ಪ ಎನ್ನುವ ತಮ್ಮನಿದ್ದ ಗೊತ್ತೆ?

ಹೂಂ ಮನೆಹಾಳ, ಗೌಡರ ಸಂಸಾರವನ್ನೆ ಹಾಳುಗೆಡವಿದ್.

ತಪ್ಪು! ತಣ್ಣಗೆ ಹಿಂಗೆಂದು ಅರಚಿ ಮುಂದುವರಿದು… ಆತನಿಗೆ ತನ್ನಣ್ಣ ಸರ್ವಸ್ವ, ಆತ ತನ್ನಣ್ಣನಿಗೆ ತಪ್ಪು ಬಗೆದಿಲ್ಲ, ಆ ತಾಂಡ್ಯದ ಹುಡುಗಿಯ ಮಾನದೊಂದಿಗೆ ಚೆಲ್ಲಾಟವಾಡಿದ್ದು, ಎಲ್ಲರೂ ಹಂಗಂದುಕೊಂಡಿದ್ದು ಆತನ ಹುಡುಗುತನದಿಂದಷ್ಟೆ, ಆದರೆ ಅದು ತನ್ನಣ್ಣನನ್ನ ಬಲಿ ತೆಗೆದುಕೊಂಡೀತು ಎಂಬ ಅರಿವೂ ಆ ಸಮಯದಲ್ಲಿ ಆತನಿಗಿರಲಿಲ್ಲ ಎಂದು ಕಣ್ಣಂಚಿನ ನೀರನ್ನೂ ಒರೆಸುತ್ತ ತಣ್ಣಗೆ ನುಡಿದಿದ್ದ…

ನಾನರೆಕ್ಷಣ ವಿಚಲಿತನಾಗಿ ಅಂದರೆ ನೀನು….!!

ಹೂಂ ಅದೇ ಸಿದ್ದಪ್ಪ. ಎಂದಿದ್ದ ಮುಖದಲ್ಲಿ ಅದೇ ನಿರ್ಲಿಪ್ತ ಭಾವ.

ನಾನು ವಿಚಲಿತನಾದರೂ ತೋರಗೊಡದೆ ಕೋಪದಿಂದ, ಅವತ್ತು ನಿನ್ನ ಘನ ಕಾರ್ಯಕ್ಕಾಗಿ ಕೋಪಗೊಂಡ ಹಾಡಿ ಮಂದಿ ನಿನ್ನ ಮನೆಗೆ ಬೆಂಕಿ ಇಡಬೇಕಾದರೆ ಗೌಡ್ರು ಮತ್ತು ಅವರ ಸಂಸಾರ ಅಚಾನಕ್ ಆಗಿ ಅದರಲ್ಲಿ ಸಿಲುಕಿ ಉರಿದಾಗ ಆ ಚೀರಾಟವನ್ನು ನೋಡಿಯೂ ನೀ ಪರಾರಿಯಾದೆ್. ಈಗ ಇಷ್ಟು ವರುಷದ ನಂತರ ಈ ವೇಷದೊಂದಿಗೆ ಬಂದೀಯಲ್ಲೋ, ನಿನ್ನ ಉದ್ದೇಶವಾದರೂ ಏನೂ?

ದ್ವೇಷ !

ಯಾರ ಮೇಲೆ?

ನನ್ನನ್ನು ಅಕ್ಷರಶಃ ಭಿಕ್ಷುಕನನ್ನಾಗಿ ಮಾಡಿದ ವ್ಯವಸ್ಥೆಯ ಮೇಲೆ ಹಾಗೂ ಇದಕ್ಕೆ ಕಾರಣವಾದ ತಾಂಡ್ಯ ಮಂದಿ ಮೇಲೆ.

ಮತ್ತೆ ಅಣ್ಣನ ಸಂಸಾರ ಬೆಂಕಿಯಲ್ಲಿ ಉರಿತಿದ್ದುದನ್ನು ನೋಡಿಯೂ ಪರಾರಿಯಾಗಿದ್ದು??

ಜೀವಭಯ!! ನಾನುಳಿಯೋದಷ್ಟೆ ಆ ಹೊತ್ತಿಗೆ ನನಗೆ ಮುಖ್ಯವಾಗಿತ್ತು. ಇಲ್ಲದಿದ್ದಲ್ಲಿ ನಾನು ಅಣ್ಣನೊಂದಿಗೆ ಸಮಾಧಿಯಾಗುತಿದ್ದೆ, ತುಸು ತಡೆದು ನನ್ನೇ ಬೆಂಕಿಯಂತೆ ದಿಟ್ಟಿಸಿ ನೋಡುತ್ತಾ ಕೇಳಿದ್ದ…

ಯಾಕೆ ನೀ ಬಯಸಿದ್ದು ಅದೇನಾ?? ಪ್ರಶ್ನೆ ಕೆಂಡದಂತೆ ನನ್ನೆಡೆಗೆ ಜಿಗಿದಿತ್ತು.

ಹೌದು, ನಾನು ಆ ಪ್ರಕರಣಕ್ಕೊಂದು ಪ್ರಮುಖ ಪಾತ್ರಧಾರಿ. ಆದರೆ ತೆರೆಯ ಹಿಂದಿದ್ದೆ ಅಷ್ಟೆ. ಸಿದ್ದಪ್ಪ ತಾಂಡ್ಯ ಹುಡುಗಿಯನ್ನು ಹುಚ್ಚನಂತೆ ಪ್ರೇಮಿಸಿದ್ದ. ನಾ ಗೌಡರ ಮನವೊಲಿಸಿ ಇದಕ್ಕೊಂದು ಇತಿಶ್ರೀ ಹಾಡಬಹುದಾಗಿದ್ದರೂ ನಾ ಹಾಗೆ ಮಾಡಿರಲಿಲ್ಲ. ಹುಚ್ಚು ಹುಡುಗ ಸಿದ್ದಪ್ಪನ ಬುದ್ದಿ ಆಕೆಯ ಮಾನವನ್ನು ತನ್ನದಾಗಿಸಿ ಹಾಡಿ ಜನರ ಮುಂದೆ ಈ ವಿಷಯ ಬರುವಂತಾಗಿ ತೋರಿಕೆಗೆ ಬಲವಂತವಾಗಿ ಮದುವೆಯಾಗಿಸುವಂತೆ ಮಾಡಿ ಮದುವೆಯಾಗುವದಾಗಿತ್ತು. ಆದರೆ ಈ ಪ್ರಯೋಗಗಳಿಗೆ ಕೊಳ್ಳಿ ಇಟ್ಟೋನೆ ನಾನು. ಹಾಡಿ ಮಂದಿಯ ಕಿವಿ ಚುಚ್ಚಿದೋನು ನಾನೇ. ಫಲಶ್ರುತಿ ನಾನೆಂದುಕೊಂಡಂತೆ ಗೌಡರ ಸಂಸಾರ ನಾಶ. ಬದಲಾಗಿ ನನಗೆ ಗೌಡರ ಆಸ್ತಿಯ ಉತ್ತರಾಧಿಕಾರತ್ವ. ಅಂದುಕೊಂಡಂತೆ ಎಲ್ಲವೂ ಆಗಿತ್ತು ಆದರೆ ಈತನೊಬ್ಬ ತಪ್ಪಿಸಿಕೊಳ್ಳುವದ ಹೊರತಾಗಿ…

ನಾ ಏನೊಂದು ಉತ್ತರಿಸದೆ ಮೌನವಾಗಿದ್ದೆ, ಮುಖ ಬಿಳುಚಿಕೊಳ್ಳುತ್ತಲಿತ್ತು , ಆತನೆ ಮುಂದುವರಿಸಿದ…

ಇಷ್ಟೂ ವರುಷಗಳಲ್ಲಿ ಅಕ್ಷರಶಃ ನಾ ಅಲೆದೆ, ನಮ್ಮ ಸೌಧದಲ್ಲಿ ನಿನ್ನರಮನೆ ಬೆಳೆದು ನಿಂತಿದ್ದನ್ನೂ ನಾ ನೋಡುತ್ತಲಿದ್ದರೂ ಕಾಲಕ್ಕಾಗಿ ಕಾದೆ. ನೀನೇ ದಾರಿ ತೋರಿದ ಈ ಚಿಂಗಾಣಿ ಬೆಟ್ಟದಲ್ಲಿ ಅಣ್ಣನ ಸಮಾಧಿಯನ್ನೇ ನನ್ನದಾಗಿಸಿ ಕುಂತು ನಮ್ಮ ಸ್ಥಾವರವಕ್ಕೆ ಬೆಂಕಿ ಇಟ್ಟ ಮಂದಿಯಿಂದಲೇ ಮತ್ತೆ ಕಟ್ಟಿ ಅಡಿಯಾಳಾಗಿಸಿದೆ. ನೀನೊಬ್ಬ ಸಿಗುವದನ್ನೆ ಕಾಯುತಿದ್ದೆ, ಈ ದಿನ ಆ ಕಾಯುವಿಕೆಗೂ ಕೊನೆ ನಿನ್ನಿಂದಲೇ ಇಟ್ಟೆ್. ನಾ ಅನ್ನ ಹಾಕಿದ ಮನೆಗೆ ಕನ್ನವಿಟ್ಟೆ ಎಂದು ನಿನ್ನ ದೂಷಿಸಲಾರೆ, ಆದರೆ ಇನ್ನೊಂದಿಷ್ಟು ಕೊನೆಯಾಗಬೇಕಿದೆ.. ಅದು ಕೂಡ ನಿನ್ನಿಂದಲೇ ಆಗಬೇಕಿರೋ ಕಾರ್ಯ ಎಂದು ಸುಮ್ಮನಾಗಿ ನನ್ನ ನೋಡಿದ್. ಆತನ ಹರಿತ ದೃಷ್ಟಿ ಇಂಚಿಂಚೇ ನನ್ನ ಕೊಯ್ಯುತ್ತಲಿತ್ತು…

ಏನೆಂಬಂತೆ ಆತನತ್ತ ನೋಡಿದೆ.

ಪತ್ರವೊಂದನ್ನು ನನ್ನ ಮುಂದಡಿ ಇಟ್ಟು ಸಹಿ ಹಾಕೆಂದ.

ಅದು ತನ್ನದೆಂದು ನಾ ಅನುಭವಿಸುತ್ತಲಿದ್ದ ಅತನ ಕುಟುಂಬಿಕರ ಸಮಸ್ತ ಆಸ್ತಿಯನ್ನೂ ಆತನ ಹೆಸರಿಗೆ ಮರಳಿಸುವದಾಗಿತ್ತು.

ಮಾತಾಡಲೂ ಪ್ರಶ್ನಿಸಲೂ ಇನ್ನೇನೂ ಉಳಿಸಿಕೊಳ್ಳದ ನಾನು ಸಹಿ ಮಾಡಿ ಎದ್ದಿದ್ದೆ್. ಆತ ನಸು ನಗುತ್ತಾ…

ಮುಂದೇನೂ? ಎಂದ.

ಕಾಲಚಕ್ರದೊಳಗೆ ನೀ ಸ್ಥಾವರಾಧೀಶ ನಾ ಫಕೀರ ಎಂದುತ್ತರಿಸುತ್ತಾ… ಕೊನೆಯದೊಂದು ಪ್ರಶ್ನೆ ಎಂದೆ

ಕೇಳು ಎಂದ

ದ್ವೇಷ ಸಾಧನೆಗೆ ಇನ್ಯಾವ ಮಾರ್ಗನೂ ಇರಲಿಲ್ವ, ಈ ಸ್ವಾಮಿ ವೇಷನೇ ಬೇಕಿತ್ತಾ ಎಂದೆ

ದ್ವೇಷ ಸಾಧನೆಯ ಇನ್ನೆಲ್ಲಾ ಮಾರ್ಗಗಗಳು ಕೂಡ ಮತ್ತದೇ ದ್ವೇಷದ ಉರುಳಿಗೆ ಉರುಳಿಸಿ ಫಕೀರನಾಗಿಸುವ ಸಂಭವ ಇದೆಯೆಂದರಿತು ಈ ಮಾರ್ಗವ ನನ್ನದಾಗಿಸಿದೆ, ನೀ ಈ ವಿಷಯವನ್ನೂ ಸಾಧ್ಯಂತವಾಗಿ ಇಂದು ಜಗತ್ತಿಗೆ ತಿಳಿಸಿದರೂ ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ, ಹೆಚ್ಚೆಂದರೆ ಕೆಲ ಪ್ರಶ್ನೆಗಳು ನನ್ನೆದುರು ಬರಬಹುದು, ಉತ್ತರವಾಗಿಸಿ ನೀನೊಬ್ಬ ಹುಚ್ಚನೆಂದು ಬಹಳ ಸುಲಭವಾಗಿ ನಿನಗೆ ಪಟ್ಟ ಕಟ್ಟಬಲ್ಲೆ, ಜಗತ್ತು ನನ್ನ ಮಾತನ್ನೆ ಒಪ್ಪೊದು ಹೊರತಾಗಿ ನಿನ್ನದಲ್ಲ, ನಾ ನೀನೆ ಕಾರಣನಾದ ಕಪಟಿಯಷ್ಟೆ, ನಿನಗಷ್ಟೆ ಗೊತ್ತು ನನ್ನ ಮಂತ್ರದೊಳಗಿನ ತಂತ್ರ. ಆದರೆ ಜಗತ್ತಿಗೆ ನಾ ಕಾವಿಧಾರಿ, ಜಗತ್ತೂ ಈ ತಾಂಡ್ಯದ ಮಂದಿಯಂತೆ ಮುಗ್ದ, ನೀನಿನ್ನೂ ಹೋಗಬಹುದು… ಎಂದು ಬಿಡುಸಾಗಿ ನುಡಿದಿದ್ದ.

ಚಿಂಗಾಣಿ ಬೆಟ್ಟವಿಳಿಯುತ್ತಾ ಕತ್ತಲು ಇಂಚಿಂಚೆ ತಬ್ಬಿಕೊಳ್ಳುತಿತ್ತು, ನನ್ನ ಜೀವನದೊಳಗೆ ಕವಿಯುವ ಕತ್ತಲಿನ ಸೂಚಕದಂತೆ. ರೈಲ್ವೆ ಸ್ಟೇಷನ್ನಿನ ದಾರಿ ಹಿಡಿದು ಹೊರಟಿದ್ದೆ, ತಲೆಯೊಳಗೆ ಆತನ ಮಾತೇ ತುಂಬಿತ್ತು, ಹೊಸ ಬಗೆಯ ಸ್ಥಾವರಧೀಶನಾಗುವ ಬಗೆಯನ್ನು ಆತ ಆತನರಿವಿಗಿಲ್ಲದೆ ನನಗೆ ಕಲಿಸಿಕೊಟ್ಟಿದ್ದ. ಕತ್ತಲು ಕಳೆದು ಬೆಳಗು ಮೂಡುವುದು ದಿಟವೆಂದು ಮನ ಹೇಳುತಿತ್ತು. ಯಾಕೊ ಮೊದಲ ಬಾರಿಗೆ ಸುಮ್ಮನೆ ನನ್ನ ಪಾಡಿಗೆ ನನ್ನನ್ನು ಬಿಟ್ಟ ಆ ಸಮಾಧಿನಾಥ ಸ್ವಾಮಿ ನನ್ನ ದೃಷ್ಟಿಯಲ್ಲಿ ಸಾಧು ಎನಿಸಿಕೊಂಡ.