Monday, August 29, 2011

ನುಡಿ ನಮನ,ರಾಮಕೃಷ್ಣ ಹೆಗಡೆಯವರ ನೆನಪಲ್ಲಿ, ಇಂದು ಅವರ ಜನ್ಮದಿನ .

 ಮಹಾಬಲೇಶ್ವರ ಹೆಗ್ಡೆ ಹಾಗು ಸರಸ್ವತಿ ಹೆಗ್ಡೆ ದಂಪತಿಗಳಿಗೆ ಆಗಸ್ಟ್ -೨೯-೧೯೨೬ ರಲ್ಲಿ ಹುಟ್ಟಿದ ಪುತ್ರ ರಾಮಕೃಷ್ಣ ಹೆಗ್ಡೆ.ರಾಜ್ಯ ಕಂಡ ಅತ್ಯಂತ ಸಜ್ಜನಿಕೆಯ ಹಾಗು ಮೌಲ್ಯಾದಾರಿತ ರಾಜಕಾರಣಿಯಲ್ಲಿ ಒಬ್ಬರು.ಉತ್ತರ ಕನ್ನಡದ ಸಿದ್ದಾಪುರ ಇವರ ಹುಟ್ಟಿದ ಊರು.ಪ್ರಾಥಮಿಕ ಶಿಕ್ಷಣ ಶಿರಸಿಯಲ್ಲಿ, ಮುಂದೆ ಇವರು ಕಾಶಿ ವಿದ್ಯಾಪೀಠ, ಬನಾರಸ್ ಹಾಗು ಲಕ್ನೋ ಯುನಿವರ್ಸಿಟಿ ಗಳಲ್ಲಿ ಓದಿ LLB ಪದವಿ ಪಡೆದಿದ್ದರು.ಅತಿ ಸಣ್ಣ ವಯಸಲ್ಲೇ ಹೋರಾಟದ ಕಡೆಗೆ ಬಾಗಿದ ಇವರು ೧೯೪೨ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಬಾಗವಹಿಸಿದ್ದರು,ತನ್ನ ೨೦ನೇ ವಯಸಲ್ಲೇ ರೈತ ಚಳುವಳಿಯನ್ನು ರಾಜ್ಯದಲ್ಲಿ ರೂಪಿಸಿದ ಕೀರ್ತಿ ರಾಮಕೃಷ್ಣ ಹೆಗಡೆಯವರಿಗೆ ಸಲ್ಲುತ್ತದೆ. ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ೧೯೫೪ ರಲ್ಲಿ ರಾಜಕೀಯಕ್ಕೆ  ಪ್ರವೇಶವಾದ ಇವರು ೧೯೫೭ರಲ್ಲಿ ಮೊದಲ ಬಾರಿಗೆ ಕರ್ನಾಟಕ ವಿಧಾನ ಸಭೆಗೆ ಆಯ್ಕೆಯಾದರು. ಇ೦ದಿರಾಗಾ೦ಧಿ ೧೯೭೫ ರಲ್ಲಿ ರಾಷ್ಟ್ರದ ಮೇಲೆ ಹೇರಿದ ತುರ್ತು
ಪರಿಸ್ಥಿತಿಯನ್ನು ವಿರೋಧಿಸಿ, ಜೈಲುವಾಸವನ್ನು ಕ೦ಡು, ಹೊರಬಂದ ನಂತರ ಜನತಾ ಪಾರ್ಟಿಯನ್ನು ಸೇರಿದ್ದರು. ೧೯೮೩ರಲ್ಲಿ ರಾಜ್ಯಾದ ಭಾರತೀಯ ಜನತಾ ಪಾರ್ಟಿಯ ೧೮ ಶಾಸಕರ ಬೆಂಬಲದೊಂದಿಗೆ ರಾಜ್ಯದ  ಮುಖ್ಯಮಂತ್ರಿಯಾದ ಇವರು ದೇಶದ  ಮೊದಲ ಕಾಂಗ್ರೆಸ್ಸ್ಯೇತರ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು.೧೯೮೫ರಲ್ಲಿ  ನಡೆದ ರಾಜ್ಯದ ಸ್ಥಳೀಯಾ ಸಂಸ್ಥೆಗಳ ಚುನಾವಣೆಗಳಲ್ಲಿ ತನ್ನ ಪಕ್ಷದ ಸಾಮಾನ್ಯ ಗೆಲುವನ್ನು ಕಂಡ ರಾಮಕೃಷ್ಣ ಹೆಗಡೆ ಪಕ್ಷದ ಸೋಲಿನ ನೈತಿಕ ಜವಾಬ್ದಾರಿಯನ್ನು ಹೊತ್ತು ತನ್ನ ಸ್ಥಾನಕ್ಕೆ  ರಾಜೀನಾಮೆ ಕೊಟ್ಟರು ಹಾಗು ಆ ವರ್ಷ ನಡೆದ ವಿದಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಆರಿಸಿ ಬಂದ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕಿಸಿದರು, ಹೇಳಿ ಕುರ್ಚಿಗಾಗಿ ಬಡಿದಾಡುವ ಇಂದಿನ ರಾಜಕಾರಣಿಗಳಲ್ಲಿ ರಾಮಕೃಷ್ಣ ಹೆಗ್ಡೆ ಅವರ ಈ ನಡೆಯನ್ನು ನಿರೀಕ್ಷಿಸಲು ಸಾದ್ಯವೇ?ಪಂಚಾಯತ್ ರಾಜ್ ಕಾನೂನಿನಲ್ಲಿ ಹೆಗಡೆಯವರ ಪಾತ್ರ,ಲೋಕಾಯುಕ್ತ ವ್ಯವಸ್ಥೆಯನ್ನು ರಾಜ್ಯಕ್ಕೆ ಒದಗಿಸಿದ ರಾಮಕೃಷ್ಣ ಹೆಗಡೆಯವರ ಪಾತ್ರ, ರೈತರಿಗೆ ಸಾಲ  ಮನ್ನ, ಕಡಿಮೆ ಬಡ್ಡಿ ಸಾಲ ಮುಂತಾದವು  ರಾಜಕಾರಣ ಅಂದ ಕೂಡಲೇ ನನ್ನ ನೆನಪಿಗೆ ಬರುವಂತದ್ದು.
ಪತ್ರಕರ್ತ ಆಗಬಯಸಿದ್ದರು
ಹೆಗಡೆ ಅವರಿಗೆ ಪತ್ರಕರ್ತ ಆಗಬೇಕೆಂಬ ಮಹದಾಸೆ ವಿದ್ಯಾರ್ಥಿ ದೆಸೆಯಿಂದಲೂ ಇತ್ತು. ಶಿರಸಿ ಮಾರಿಕಾಂಬ ಹೈಸ್ಕೂಲ್‌ನಲ್ಲಿ ಕಲಿಯುತ್ತಿದ್ದಾಗ ಕೈಬರಹದ ಪತ್ರಿಕೆ ‘ಹೂವಿನ ಸರ’ಕ್ಕೆ ಲೇಖನ ಬರೆಯುತ್ತಿದ್ದರು. ಬನಾರಸ್‌ವಿದ್ಯಾಪೀಠದಲ್ಲಿ ಪದವಿ ವ್ಯಾಸಂಗ ಮಾಡುವಾಗಲೂ ಸ್ಥಳೀಯ ಪತ್ರಿಕೆಗಳಲ್ಲಿ ಅವರ ಲೇಖನ ಪ್ರಕಟವಾಗುತ್ತಿದ್ದವು. ಕರ್ನಾಟಕಕ್ಕೆ ಮರಳಿದ ಹೆಗಡೆ ನಂತರ ಕಾಲದ ಹೊರಳಿಗೆ ಸಿಕ್ಕು, ರಾಜಕೀಯದತ್ತ ಮುಖ ಮಾಡಿದರು. ಪತ್ರಕರ್ತನಾಗಲಿಲ್ಲ ಎಂದು ಬಹಳ ಸಾರಿ ನೊಂದುಕೊಂಡಿದ್ದೂ ಉಂಟು. ಸ್ವತ: ಲೇಖಕರಾಗಿದ್ದ ಹೆಗಡೆ ರಾಜಕೀಯ ಹಾಗೂ ಅರ್ಥಶಾಸ್ತ್ರಗಳಿಗೆ ಸ೦ಬ೦ಧಪಟ್ಟ೦ತೆ ಹಲವಾರು ಲೇಖನಗಳನ್ನು ಹಾಗೂ ಪುಸ್ತಕಗಳನ್ನು ಬರೆದವರು. “ ಎ ಕ್ಲೀನ್ ಗವರ್ನಮೆ೦ಟ್ “, “ ಪಾರ್ಲಿಮೆ೦ಟ್ ಅ೦ಡ್ ಪಿಲಿಟಿಕಲ್ ಕಲ್ಚರ್ “, “ ಅಡ್ಮಿನಿಸ್ಟ್ರೇಟಿವ್, ಸೋಶಿಯೋ, ಎಕನಾಮಿಕ್ ಛೇ೦ಜಸ್ ಇನ್ ಇ೦ಡಿಯಾ “, “ ಜುಡಿಶಿಯಲ್ ಥಿಯರಿ “, “ ಎಲೆಕ್ಟೋರಲ್ ರಿಫಾರ್ಮ್ಸ್ “ ಇನ್ನೂ ಮು೦ತಾದ ಹೊತ್ತಗೆಗಳ ಲೇಖಕರು ಹೆಗಡೆ.


 ತನ್ನ ರಾಜಕೀಯ ಅವಧಿಯಲ್ಲಿ ಸರಿ ಸುಮಾರು ಎಲ್ಲಾ ಖಾತೆಗಳನ್ನೂ ನಿರ್ವಹಿಸಿದ  ಅವರು,ಮೇಲೆ ಹೇಳಿದಂತೆ  ಎರಡು ಬಾರಿ ಮುಖ್ಯಮ೦ತ್ರಿಯಾಗಿ ಹಾಗೂ ಕೇ೦ದ್ರ ಸಚಿವರಾಗಿ, ಕೇ೦ದ್ರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಾಜಪೇಯಿ ಸರ್ಕಾರದಲ್ಲಿ  ಕೇ೦ದ್ರ ವಾಣಿಜ್ಯ ಸಚಿವರಾಗಿದ್ದವರು. ಹೆಗಡೆ ಕರ್ನಾಟಕ ರಾಜ್ಯದ ಅತ್ಯ೦ತ ಉತ್ತಮ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು. ಕರ್ನಾಟಕದ ರಾಜಕೀಯದಲ್ಲಿ ೧೩ ಬಾರಿ ರಾಜ್ಯ ಆಯವ್ಯಯವನ್ನು ಮ೦ಡಿಸಿದ ಏಕೈಕ ಅರ್ಥ ಸಚಿವ!!! ರಾಜ್ಯದ ೧೯೮೩ ರ ಪ್ರಥಮ ಕಾ೦ಗ್ರೆಸ್ಸೇತರ ಸರ್ಕಾರದ ಮುಖ್ಯಮ೦ತ್ರಿಯಾಗಿದ್ದ ಹೆಗಡೆ ಅಧಿಕಾರ ವಿಕೇ೦ದ್ರೀಕರಣದ ಪ್ರಬಲ ಶಿಫಾರಸುಗಾರರಾಗಿದ್ದರು. ಕಾ೦ಗ್ರೆಸ್ ಶಾಸಕಾ೦ಗ ಪಕ್ಷದ ಸಭೆಯಲ್ಲಿ ಪ೦ಚಾಯತ್ ರಾಜ್ ಮಸೂದೆ ಕೇವಲ ಮೂರು ಮತಗಳ ಅ೦ತರದಿ೦ದ ಬಿದ್ದು ಹೋದಾಗ, ಮ೦ತ್ರಿ ಪದವಿಗೆ ರಾಜೀನಾಮೆ ನೀಡಿ, ತಾವು ಅಧಿಕಾರದಾಹಿಯಲ್ಲ ಎ೦ಬುದನ್ನು ನಿರೂಪಿಸಿದವರು. ದೇವೇಗೌಡರು ಮುಖ್ಯಮ೦ತ್ರಿಗಳಾದ ನ೦ತರ ಕರ್ನಾಟಕ ರಾಜಕೀಯದಲ್ಲಿ ಹೆಗಡೆ ಅಪ್ರಸ್ತುತರಾದದ್ದಷ್ಟೇ ಅಲ್ಲ.. ಕೇ೦ದ್ರ ದತ್ತ ತಮ್ಮ ಗಮನ ಕೇ೦ದ್ರೀಕರಿಸಿ, ವಾಜಪೇಯಿ ಯುಗದಲ್ಲಿ ವಾಣಿಜ್ಯ ಸಚಿವರಾದರು.ರಾಜಕಾರಣಿ ಆರೋಪಗಳಿಗೆ ಹೊರತಲ್ಲ ಎಂಬಂತೆ, ಟೆಲಿಫೋನ್ ಕದ್ದಾಲಿಕೆ ಮುಂತಾದ ಆರೋಪಗಳು ಕೂಡ ಹೆಗಡೆಯವರನ್ನು ಸುತ್ತುವರಿದಿತ್ತು.  ಹೆಗಡೆಯವರಿಗೆ ತನ್ನ  ಕೊನೆಗಾಲದಲ್ಲಿ ಅರೋಗ್ಯ ಕೆಟ್ಟಿತ್ತು.ಜನವರಿ ೧೨-೨೦೦೪ ರಲ್ಲಿ ನಿಧನರಾದರು,ಆದೆರೆ ಅವರ ರಾಜಕೀಯ ಮೌಲ್ಯಗಳು ಇಂದಿಗೂ ಹಸಿರಾಗಿದೆ,ಅದಕ್ಕೆ ಸಾವಿಲ್ಲ.


ರಾಮಕೃಷ್ಣ ಹೆಗಡೆಯವರ ಪತ್ನಿ ಶಕುಂತಲಾ ಹೆಗಡೆ


ಹೆಗಡೆಯವರ ಜನ್ಮನಕ್ಷತ್ರವನ್ನೇ ಹೆಸರಾಗಿಸಿಕೊಂಡ ‘ಕೃತ್ತಿಕಾ’ ನಿವಾಸದಲ್ಲಿ ಶಕುಂತಲಾ ಹೆಗಡೆ ಅವರದು ಈಗ  ಒಬ್ಬಂಟಿ ವಾಸ. ಎಂತಹ ವಿಪರ್ಯಾಸ ನೋಡಿ ಬೆಂಗಳೂರು ಸದಾಶಿವನಗರದಲ್ಲಿರುವ ಈ ಮನೆ ಒಂದು ಕಾಲದಲ್ಲಿ ಪ್ರಮುಖ ರಾಜಕೀಯ ತೀರ್ಮಾನಗಳಿಗೆ ಸಾಕ್ಷಿಯಾಗಿತ್ತು. ಹೆಗಡೆ ಅವರಿಂದ ರಾಜಾಶ್ರಯ ಪಡೆದವರು, ನೇತಾರರಾದವರು, ಅಧಿಕಾರ-ಅಂತಸ್ತು ಗಳಿಸಿದವರು, ಇವತ್ತಿಗೂ ಅದನ್ನು ಅನುಭವಿಸುತ್ತಿರುವವರು, ಬೇರೆ-ಬೇರೆ ರೀತಿ ಉಪಕೃತರಾದವರು ಯಾರೊಬ್ಬರೂ ಇತ್ತ ಕಡೆ ಸುಳಿಯುತ್ತಿಲ್ಲ. ಅಷ್ಟಕ್ಕೂ ಹೆಗಡೆ ಅವರ ಅಧಿಕಾರ ಹೋದಾಗಲೇ ಸುಳಿಯದಿದ್ದವರು, ಇನ್ನು ಅವರು ಈ ಲೋಕ ಬಿಟ್ಟು ಹೋದ ಮೇಲೆ ಬರುತ್ತಾರೆಯೇ?
ಈ ಎಲ್ಲ ವೈರುಧ್ಯಗಳಿಗೆ ಮೌನಸಾಕ್ಷಿಯಾದ ‘ಕೃತ್ತಿಕಾ’ ನಾಮಫಲಕ ಸುತ್ತಲಿನ ಕಾಪೌಂಡ್ ಗೋಡೆ ಬಿರುಕು ಬಿಟ್ಟಿದೆ. ಸುಣ್ಣ-ಬಣ್ಣ ಕಂಡು ಬಹಳ ದಿನಗಳೇ ಆಗಿದ್ದರೂ ಮನೆ ಒಪ್ಪ-ಓರಣವಾಗಿದೆ. ಹೆಗಡೆ ಬೃಹತ್ ಫೋಟೊ ಹೊತ್ತ ವಿಶಾಲ ಹಜಾರ, ಅವರು ಬಹುವಾಗಿ ಇಷ್ಟಪಡುತ್ತಿದ್ದ ನಾಟ್ಯ ಗಣಪತಿ ವಿಗ್ರಹ, ತಿರುವು ಮೆಟ್ಟಿಲು ಒಳಗೊಂಡ ಮೇಲಿನ ಮಹಡಿಯಲ್ಲಿ ಮತ್ತೊಂದು ವಿಶಾಲ ಹಜಾರ, ಹೆಗಡೆ ಜೀವಸಮಾನ ಗ್ರಂಥಾಲಯ ಎಲ್ಲವೂ ಹಾಗೆ ಇವೆ.

ಮಾಜಿ ಮುಖ್ಯಮಂತ್ರಿಯವರ ಪತ್ನಿಗೆ ಅಗತ್ಯಾನುಸಾರ ಸರಕಾರದಿಂದಲೇ ಭದ್ರತೆ ಒದಗಿಸುವ ಪರಿಪಾಠ ಇದೆ. ಆದರೆ ಬಹಳಷ್ಟು ಮನವಿ ಸಲ್ಲಿಸಿದರೂ ಪ್ರಯೋಜನ ಆಗಿರಲಿಲ್ಲ. ಕೊನೆಗೆ ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದಾಗ, ನಾಳೆ ನಾವೂ ಮಾಜಿ ಆದಾಗ ಇದೇ ಪರಿಸ್ಥಿತಿ ಬರಬಾರದು ಎಂದು ‘ಕೃತ್ತಿಕಾ’ಗೆ ಸೆಕ್ಯುರಿಟಿ ವ್ಯವಸ್ಥೆ ಮಂಜೂರು ಮಾಡಿದರು. ತತ್ಪರಿಣಾಮ ಬೆಳಗ್ಗೆ ಎಂಟಕ್ಕೆ ಬರುವ ಪೇದೆ ಮಧ್ಯಾಹ್ನ ಮೂರಕ್ಕೆ ಮರಳುತ್ತಾರೆ. ಹೆಚ್ಚುವರಿ ಭದ್ರತೆ ಕೋರಿ ನಂತರದ ಸರಕಾರಗಳಿಗೆ ಮಾಡಿದ ಮನವಿ ಪ್ರಯೋಜನಕ್ಕೆ ಬಂದಿಲ್ಲ. ಕೊನೆಗೆ ಶಕುಂತಲಾ ಅವರೇ ಒಬ್ಬ ಖಾಸಗಿ ಸೆಕ್ಯುರಿಟಿ ನೇಮಿಸಿಕೊಂಡಿದ್ದಾರೆ.
ಹೆಗಡೆ ಅವರ ಮಕ್ಕಳ ಪೈಕಿ, ಮಮತಾ ಮತ್ತು ಸಮತಾ ಇಬ್ಬರೂ ಸೇರಿ ಸದಾಶಿವನಗರದ ಬಿಡಿ‌ಎ ಕಾಂಪ್ಸೆಕ್ಸ್‌ನ ಬಾಡಿಗೆ ಮಳಿಗೆಯೊಂದರಲ್ಲಿ ಯಾತ್ರಿಕ್ ನೆಟ್‌ವರ್ಕ್ ಎಂಬ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದಾರೆ. ಭರತ್ ಹೆಗಡೆ ಹೆಸರುಘಟ್ಟದಲ್ಲಿರವ ಫಾರಂ ಹೌಸ್ ನೋಡಿಕೊಳ್ಳು ತ್ತಿದ್ದಾರೆ. ಮಮತಾ ಪುತ್ರಿ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಾಕ್ಟಿಸ್ ಮಾಡುತ್ತಿದ್ದರೆ, ಸಮತಾ ಮತ್ತು ಭರತ್ ಅವರ ತಲಾ ಇಬ್ಬರು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅಶ್ಚರ್ಯವೆಂದರೆ ಹೆಗಡೆ ಅವರ ಮೂವರು ಮಕ್ಕಳಿಗೂ ಬೆಂಗಳೂರಲ್ಲಿ ಒಂದು ಬಿಡಿ‌ಎ ನಿವೇಶನ ಇಲ್ಲ.
ಇವತ್ತಿನ ಮುಖ್ಯಮಂತ್ರಿಗಳು ತಾವು, ತಮ್ಮ ಪತ್ನಿ ಮತ್ತು ಮಕ್ಕಳ ಹೆಸರಲ್ಲಿ ಮಾಡಿರುವ ಆಸ್ತಿ-ಪಾಸ್ತಿಗಳಿಂದ, ಈ ಆಸ್ತಿ ಸಂಪಾದನೆ ಹಿಂದಿನ ಅವ್ಯವಹಾರಗಳಿಂದಲೇ (ಕು)ಖ್ಯಾತರಾಗಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಮುಖ್ಯಮಂತ್ರಿ ಎಂದು ಗುರುತಿಸಿಕೊಂಡಿದ್ದಾರೆ. ಹೆಗಡೆ ಅವರು ಕಟ್ಟಿಸಿದ ‘ಕೃತ್ತಿಕಾ’ ಹಾಗೂ ಹೆಸರುಘಟ್ಟದ ಫಾರಂ ಹೌಸ್ ಬಿಟ್ಟರೆ ಬೇರೆ ಆಸ್ತಿ-ಪಾಸ್ತಿ ಏನೂ ಇಲ್ಲ. ಹೆಂಡತಿ, ಮಕ್ಕಳ ಹೆಸರಲ್ಲಿ ಆಸ್ತಿ ಮಾಡುವ ವಿಷಯ ಪಕ್ಕಕ್ಕಿರಲಿ, ಒಂದೇ ಒಂದು ಕಿಲುಬು ಕಾಸನ್ನೂ ಇಡಲಿಲ್ಲ.
‘ಹೆಗಡೆಯವರು ಕೂಡ ಆಸ್ತಿ ಮಾಡಬೇಕಿತ್ತು, ಮಕ್ಕಳನ್ನು ರಾಜಕೀಯದಲ್ಲಿ ಬೆಳೆಸಬೇಕಿತ್ತು ಎಂದು ನಿಮಗೆ ಯಾವಾಗಲಾದರೂ ಅನಿಸಿದಿದ್ದೆಯೇ’ ಎಂದು ಕೇಳಿದಾಗ ಶಕುಂತಲಾ ಅವರನ್ನು ಕೇಳಿದರೆ ಸಿಗುವ ಉತ್ತರ.
  ‘ಹೆಗ್ಡೆ ಅವರು ಮುಖ್ಯಮಂತ್ರಿಯಾದ ಮೊದಲ ದಿನವೇ ಕುಟುಂಬ ಸದಸ್ಯರೆಲ್ಲರನ್ನೂ ಮನೆಯಲ್ಲಿ ಒಟ್ಟಿಗೆ ಸೇರಿಸಿ ಒಂದು ಮಾತು ಹೇಳಿದರು. ಇವತ್ತಿಂದ ನೀವ್ಯಾರೂ ವಿಧಾನಸೌಧದ ಕಡೆ ತಲೆ ಹಾಕುವಂತಿಲ್ಲ. ನೌಕರಿ, ವರ್ಗಾವಣೆ, ಯೋಜನೆ, ಕಾಮಗಾರಿ ಗುತ್ತಿಗೆ ಅಂತ ಶಿಫಾರಸ್ಸು ಮಾಡುವಂತಿಲ್ಲ. ಸರಕಾರಿ ಕೆಲಸದಲ್ಲಿ ಮೂಗು ತೂರಿಸುವಂತಿಲ್ಲ. ಹಾಗೇನಾದರೂ ತಲೆ ಹಾಕಿದ್ದು ಗೊತ್ತಾದರೆ ಆ ಕ್ಷಣದಿಂದ ನನಗೂ ಮತ್ತು ನಿಮಗೂ ಸಂಬಂಧ ಇರುವುದಿಲ್ಲ.’
    ನೀವು ಎಷ್ಟೋ ಮಂದಿನಾ ಎಂಎಲ್‌ಎ, ಎಂಎಲ್‌ಸಿ ಮಾಡಿದ್ದೀರಿ. ಮಂತ್ರಿಗಳನ್ನಾಗಿಸಿದ್ದೀರಿ. ಬೇರೆ-ಬೇರೆ ಪದವಿ ಕೊಡಿಸಿದ್ದೀರಿ. ನನ್ನನ್ನೂ ಎಂಎಲ್‌ಸಿ ಮಾಡಿ ಎಂದು ಮಗಳು ಕೇಳಿದಾಗ  ಹೆಗ್ಡೆ ಅವರ ಉತ್ತರ,  
ಒಂದು ಕೆಲಸ ಮಾಡು. ನೀನು ಯಾವುದಾದರೂ ಹಳ್ಳಿಗೆ ಹೋಗಿ ಒಂದೆರಡು ವರ್ಷ ಅಲ್ಲಿನ ಜನರ ಸೇವೆ ಮಾಡು ಉತ್ತರ. ಆಮೇಲೆ ಚುನಾವಣೆಗೆ ಸ್ಪರ್ಧಿಸು. ನೀನು ಚನ್ನಾಗಿ ಕೆಲಸ ಮಾಡಿದ್ದರೆ ಅವರೇ ನಿನ್ನನ್ನು ಗೆಲ್ಲಿಸುತ್ತಾರೆ.
ಇವತ್ತೇ ಕೊನೆ, ಇನ್ನೆಂದಿಗೂ ನನ್ನ ನೆರಳಲ್ಲಿ ರಾಜಕೀಯ ಮಾಡುವ ಕನಸು ಕಾಣಬೇಡ. ನಾನು ಬದುಕಿರುವವರೆಗೂ ನೀವ್ಯಾರು ರಾಜಕೀಯಕ್ಕೆ ಬರುವಂತಿಲ್ಲ. ನಿಮ್ಮ ರಾಜಕೀಯ ಏನಿದ್ದರೂ ನಾನು ಸತ್ತ ನಂತರವಷ್ಟೇ.’
ಹೌದು. ಹೆಗಡೆಯವರ ಇಚ್ಛೆಯಂತೆ ಅವರು ಬದುಕಿರುವವರೆಗೂ ಪತ್ನಿ, ಮಕ್ಕಳು ರಾಜಕೀಯಕ್ಕೆ ಬರಲಿಲ್ಲ. 
 ರಾಮಕೃಷ್ಣ   ಹೆಗ್ಡೆ ಅವರ ಕುಟುಂಬ ಹೆಗಡೆ ಅವರ ಹೆಸರು ಹೇಳಿಕೊಂಡು ಏನು ಬೇಕಾ ದರೂ ಮಾಡಬಹುದಿತ್ತು. ರಾಜಕೀಯ ನೆಲೆ ಅರಸಬಹುದಿತ್ತು. ಆರ್ಥಿಕವಾಗಿ ಬೆಳೆಯಬಹುದಿತ್ತು. ಆದರೆ ಅವರೆಂದೂ ಹೆಗಡೆ ಅವರ ತತ್ವ-ಆದರ್ಶಗಳನ್ನು ಬಿಡಲಿಲ್ಲ. ‘ಯಾರಾದರೂ ಬಂದು ನಮ್ಮ ಯೋಗಕ್ಷೇವು ವಿಚಾರಿಸಬೇಕು ಎಂದು ನಾನು ಯಾವತ್ತೂ ಬಯಸಿಲ್ಲ. ಬಯಸುವುದೂ ಇಲ್ಲ. ಅಷ್ಟೇ ಅಲ್ಲ ನಾನಾಗಲಿ, ನನ್ನ ಮಕ್ಕಳಾಗಲಿ ಯಾರ ಮನೆ ಬಾಗಿಲಿಗೂ ಹೋಗಿಲ್ಲ, ಹೋಗುವುದೂ ಇಲ್ಲ’ ಎಂಬ ಶಕುಂತಲಾ ಅವರ ಹೇಳಿಕೆಯಲ್ಲೇ ಹೆಗಡೆ ಅವರ ಆದರ್ಶ ಮನೆ ಮಾಡಿದೆ.
     ಈ ದಿನ ಹೆಗಡೆಯವರು ಇದ್ದಿದ್ದರೆ ಅವರಿಗೆ ೮೫ ವರ್ಷ ತುಂಬುತ್ತಿತ್ತು.ಹೆಗ್ಡೆ  ಅವರ ಜನ್ಮದಿನವಾದ ಇಂದು ಈ   ಲೇಖನದ ಮೂಲಕ ರಾಜಕೀಯ ಇಚ್ಚಾಶಕ್ತಿ ಹೊಂದಿದ್ದ ಹಾಗು ಮೌಲ್ಯಗಳಿಗೆ ಮಹತ್ವ ಕೊಡುತಿದ್ದ ರಾಜಕಾರಣಿಗೆ ನನ್ನ ನಮನಗಳನ್ನು ಸಲ್ಲಿಸುತ್ತಾ,ಇಂದಿನ ರಾಜಕಾರಣಿಗಳಿಗೆ  ಅವರ ಮೌಲ್ಯಗಳು ಅದರ್ಶವಾಗಲೆಂದು ಆಶಿಸುವ..........

ನಿಮ್ಮಯ
ರಾಘವೇಂದ್ರ ತೆಕ್ಕಾರ್ 

No comments:

Post a Comment