ಮೊದ ಮೊದಲು ಸೈಕಲ್ ಕಲಿತ ನೆನಪುಗಳನ್ನ ಸ್ನೇಹಿತರೆಲ್ಲ ಸೇರಿ ಹಂಚಿಕೊಂಡಿದ್ದು ಕೆಳಗಿನಂತೆ, ಅವರವರ ಮಾತುಗಳಲ್ಲೆ ಅವರವರ ಅನುಭವಗಳನ್ನ ಕೇಳಿ, ಇಷ್ಟವಾಗಬಹುದು ಹಾಗು ಈ ನೆನಪುಗಳು ನಿಮ್ಮದೆ ಆಗಿರಲೂಬಹುದು.. :) :)
ಅದಿತಿ:-ನಂಗೆ ಸೈಕಲ್ ಕಲಿಸಿದ್ದು ಅಮ್ಮ ನೆ , ನನ್ನಮ್ಮನಿಗೆ ಸೈಕಲ್ ಬರ್ತಿತ್ತು ಅವ್ರೆ ಗೈಡ್ ಮಾಡ್ತಿದ್ರು, ಹಠ ಮಾಡಿ ಅಮ್ಮ ನ ಕರ್ಕೊಂಡ್ ಹೋಗ್ತಿದ್ದ್ವಿ ಫೀಲ್ಡ್ ಗೆ . ಅಮ್ಮ ನೆ ಆ ಒಂದ್ ಅಭ್ಯಾಸ ಮಾಡ್ಸಿದ್ದು ,ಸಮ್ಮರ್ ಹಾಲಿಡೇಸ್ ಬಂದ್ರೆ ಸಾಕು ಅಮ್ಮ ನ ಬೋರ್ ಹೊಡಿತಿದೆ ಅಂತ ಪ್ರಾಣ ತಿಂತಿದ್ವಿ ಆವಾಗ್ಲೆ ಅಮ್ಮ ಸೈಕಲ್ ಕಲಿಸೊ ಐಡಿಯಾ ಮಾಡಿದ್ದು. ಪ್ರತಿ ಸಂಡೆ ಅಮ್ಮ 2ರೂ ಕೊಡೋರು ಆ ಎರಡು ರುಪಾಯಿಗೆ 1ಘಂಟೆ ಸೈಕಲ್ ಬಾಡಿಗೆಗೆ ತೆಗೊಂತಾ ಇದ್ವಿ, ನಾನು ನನ್ ತಂಗಿ ಆಮೇಲೆ ಅಮ್ಮ ನ ಫ್ರೆಂಡ್ ಮಕ್ಕಳು ಸ್ಟೂಡೆಂಟ್ಸ್ ಅಮ್ಮನಿಗೆ , 2 ಸೈಕಲ್ ತಗೊಂಡು ಒಂದ್ ರೋಡ್ ಸುತ್ಕೊಂಡು ಬಂದು ಇನ್ನೊಬ್ಬರಿಗೆ ಕೊಡೋದು ರೂಲ್ಸು. ನಾ ಹೋದರೆ ದೊಡ್ಡ ರೌಂಡ್ ಹೋಗಿ ಬರ್ತಿದ್ದೆ. ಸೈಕಲ್ ಕೆಟ್ಟೋಗಿತ್ತು ಹಾಗೆ ಹೀಗೆ ಅಂತ ತಂಗಿಗೆ ಸುಳ್ಳು ಹೇಳ್ತಿದ್ದೆ ಒಟ್ಟಿನಲ್ಲಿ ಮಜಾ ಹೊಡೆದಿದ್ದನಪ್ಪ ಸೈಕಲ್ ನಲ್ಲಂತು.ಸೈಕಲ್ ಕಲಿತ ಮೇಲಿನ ಅನುಭವಗಳು ಖುಷಿಗಳು ಕೂಡಾ ಹಲವು, ಕೆಲವೊಂದು ಹೀಗೆ ನೆನಪಿಗೆ ಬರ್ತಾ ಇದೆ.......................
ನನ್ ಕಸಿನ್ ಒಬ್ಳು ಸೈಕಲ್ ಕಲಿತಿದ್ಲು ,ಅವ್ಳಿಗೆ ಅರ್ಧಂಬರ್ಧ ಸೈಕಲ್ ಬಿಡಕ್ಕೆ ಬರ್ತಿತ್ತು. ಅಂತದ್ರಲ್ಲಿ ಒಮ್ಮೆ ಡಬಲ್ ರೈಡ್ ಮಾಡ್ತೀನಿ ಬಾ ಕೂತ್ಕೋ ಅಂತ ಕೂರಿಸ್ಕೊಂಡು ಮೋರಿಯೊಳಗೆ ಬೀಳಿಸಿದ್ಳು, ಸೈಕಲ್ ನಮ್ ಮೈ ಮೇಲೆ ಬಿದ್ದಿತ್ತು.ಎದ್ಕೊಂಡು ಬಂದ್ವಿ ಬಿಡಿ.ಆಮೇಲೆ ನಾ ಹೈಸ್ಕೂಲ್ ನಲ್ಲಿ ಇದ್ದಾಗ ಎನ್ ಸಿ ಸಿ, ಸ್ಪೋರ್ಟ್ಸ್ ಅಂತ ಮಧ್ಯಾಹ್ನ 2 ಪಿರೆಡ್ ಮೇಲೆ ಹೊರಗೆ ಇರ್ತಿದ್ದೆ ..... ಎನ್ ಸಿ ಸಿ ಇರೋವಾಗ ಬೆಳಿಗ್ಗೆ ತಿಂಡಿ ತರೋಕೆ ಅಂತ ನಾವ್ ಒಂದ್ 4 ಜನ ಹುಡ್ಗಿರು ಫ್ರೆಂಡ್ಸ್ ಸೈಕಲ್ ತಗೊಂಡ್ ಹೋಗಿ ಹೋಟೆಲ್ ನಲ್ ಚನ್ನಾಗ್ ತಿಂದು ಆಮೇಲೆ ಬೇರೆ ಹುಡ್ಗಿರ್ಗೆ ತಿಂಡಿ ತರ್ತಿದ್ವಿ, ಆಗಲು ನಮ್ದು ಖುಷಿಯ ಸೈಕಲ್ ಸವಾರಿ.ವಾರ್ಷಿಕ ಸ್ಪೋರ್ಟ್ಸ್ ಡೇ ನಲ್ಲಿ ಸ್ಲೋ ಸೈಕಲಿಂಗ್ ಸ್ಫರ್ಧೆ ಇರೋದು , ನಂಗೆ ಬರ್ತಾನೆ ಇರಲಿಲ್ಲ.... ಸೈಕಲ್ ಟ್ಯೂಬ್ ಗಾಳಿ ತೆಗದು ಓಡ್ಸೋರಪ್ಪ ನಮ್ ಹುಡ್ಗಿರು .ಬೇರೆ ಇವೆಂಟ್ನಲ್ಲಿ ವಿನ್ ಆಗೋಳು ಆದರೆ ಸ್ಲೋ ಸೈಕಲಿಂಗ್ ಸ್ಫರ್ಧೆ ಯಲ್ಲಿ ಮಾತ್ರ ಪ್ರೈಜ್ ಬರ್ತಾ ಇರಲಿಲ್ಲ.ಅಪ್ಪನ ಹತ್ರ ಸೈಕಲ್ ಇತ್ತು, ಒಂದ್ಸಲ ಏನೊ ತರಕ್ಕೆ ಅಂತ ನಾನು ಅಪ್ಪ ನನ್ ತಂಗಿ ಮೂವರು ಆ ಸೈಕಲ್ ನಲ್ಲಿ ಕೂತಿದ್ವಿ ನಾ ಮುಂದೆ ನನ್ ತಂಗಿ ಹಿಂದೆ, ಅವಳು ಸರ್ಯಾಗಿ ಕಾಲ್ ಇಟ್ಟುಕೊಳ್ಳದೆ ಸೈಕಲ್ ಚಕ್ರಕ್ಕೆ ಕಾಲ್ಕೊಟ್ಟು ಕಾಲ್ ಗೆ ಏಟ್ ಮಾಡ್ಕೊಂಡಿದ್ಳು, ಆಮೇಲೆ ಡಾಕ್ಟರ ಹತ್ರ ಕರ್ಕೊಂಡ್ ಹೋದರು ನಮ್ಮಪ್ಪ,.ನನಗೇನು ಗೊತ್ತಾಗದೆ ಮಿಕ ಮಿಕ ಅಂತ ಡಾಕ್ಟರ್ ಶಾಪ್ ನ ನೋಡ್ತಿದ್ದೆ ಪ್ರತಿ ಸಲ ಸೈಕಲ್ ಕೊಡಿಸಿ ಅಂತ ಅಪ್ಪ ಅಮ್ಮನ್ನ ಕಾಡಿಸ್ತಾನೆ ಇದ್ದೆ, ಓಳ್ಳೆ ಮಾರ್ಕ್ಸ್ ತೆಗಿ ಈ ಸಲ ಕೊಡಿಸ್ತೀನಿ ಅನ್ನೊ ಸೇಮ್ ಡೈಲಾಗೆ ಬರ್ತಿತ್ತು ಪ್ರತಿ ಸಲ. 10 ನೆ ವರೆಗು ಇದೆ ಹೇಳೋರು.ಅದು ಆಯ್ತು ಆದರೆ ಸೈಕಲ್ ಬರಲೆ ಇಲ್ಲ, ಕೊನೆಗೆ ಕೇಳೋದನ್ನು ನಾನೆ ಬಿಟ್ಟೆ.
ಈಶ್ವರ ಕಿರಣ ಭಟ್ :- ನಾನು ೫ ನೇ ಕ್ಲಾಸಲ್ಲಿರಬೇಕಾದರೆ ನಮ್ಮೂರಿನ ಪೋಸ್ಟ್ ಮ್ಯಾನ್ ನನ್ನನ್ನ ಸೈಕಲ್ ಹಿಂದುಗಡೆ ಕೂರಿಸ್ಕೊಂಡು ಊರಿಗೆ ಡ್ರಾಪ್ ಕೊಡ್ತಾ ಇದ್ರು . ಅದು ಹೇಗೋ ಗೊತ್ತಿಲ್ಲ ನನ್ನ ಎಡಗಾಲು ಹಿಂದಿನ ಚಕ್ರಕ್ಕೆ ಸಿಲುಕಿ, ಒಳ್ಳೆ ಎಳನೀರು ಕೆತ್ತಿದಾಂಗೆ ಅಗೋಗಿತ್ತು.. ಆಮೇಲಿಂದ ಶುರುವಾದ ನನ್ನ ಸೈಕಲ್ ದ್ವೇಷ, ಪಿಯುಸಿ ಮುಗಿಯುವವರೆಗೂ ಇತ್ತು.. ನಾನು ಡಿಗ್ರಿಯಲ್ಲೇ ಸೈಕಲ್ ಕಲಿತದ್ದು... ಮೂಸೆಬ್ಯಾರಿಯ ರೆಂಟೆಡ್ ಸೈಕಲ್ ಓಡಿಸುವ ಮಜಾ ಯಾರಿಗುಂಟು ಯಾರಿಗಿಲ್ಲ ಹೇಳಿ.. ಘಂಟೆಗೆ ಕೇವಲ ೨ ರೂಪಾಯಿ ಚಾರ್ಜು !ಬಾಡಿಗೆ ಸೈಕಲ್ ಪಡೆದು ಅದುನ ಓಡ್ಸೋ ಮಜಾನೆ ಬೇರೆ.. ಸೈಕಲ್ ಕಲಿತ ಖುಷಿಯಲ್ಲಿ ಅಜ್ಜಿಗೆ ಲಿಫ್ಟ್ ಕೊಡಲು ಹೋಗಿ ಅಜ್ಜಿ ಜೊತೆಗೆ ತೋಡಿಗೆ (ಹಳ್ಳಕ್ಕೆ) ಬಿದ್ದದ್ದು.. ಈಗಲೂ ಅಜ್ಜಿ ಇದ್ದಾರೆ ಎನ್ನುವಲ್ಲಿಗೆ ಸುಖಾಂತ್ಯ !ಹೀಗೆಲ್ಲಾ ಇರಬೇಕಾದರೆ ಸ್ಲೋ ಸೈಕಲ್ ರೇಸು ಇದ್ದಾಗ, ಅದರ ನಿಯಮ ಗೊತ್ತಿಲ್ಲದೆ ಎಲ್ಲರಿಗಿಂತ ಮೊದಲು ರೀಚ್ ಆಗಿ ಗೆದ್ದೆ ಎನ್ನುವ ಅಹಂಕಾರಕ್ಕೆ, ಕೊನೆಗೆ ಬಂದವನಿಗೆ ಪ್ರೈಜು ಕೊಟ್ಟಾಗ ಆದ ಗೊಂದಲಕ್ಕೆ ಸೈಕಲ್ಲೇ ಕಾರಣ ! ಊರಿಗೆ ಒಂದೇ ರಸ್ತೆ, ಅಲ್ಲಿ ಜನರಿರುವುದಿಲ್ಲ.. ಅಲ್ಲೋ ಇಲ್ಲೋ ಒಬ್ಬಬ್ಬರು ಕಾಣಸಿಗುವುದು.. ಕಾಲೇಜು ಬಿಟ್ಟು ಬಸ್ಸಲ್ಲಿ ಬಂದು ಆ ದಾರಿಯಲ್ಲಿ ಒಬ್ಬಂಟಿ, ಅಥವಾ ಇಬ್ಬರು ಜೊತೆಯಾಗಿ ನಡೆಯುವ ಹುಡುಗಿಯರನ್ನ ಟ್ರಿಣ್ ಟ್ರಿಣ್ ಮಾತಾಡಿಸುವ ಖುಷಿ ಸೈಕಲ್ಲೇ!ಟ್ರಿಣ್ ಟ್ರಿಣ್ ನೆನಪುಗಳು, ಹುಸಿಕೋಪಗಳು.. ಮಗನೇ ಕಲಿಸುತ್ತೇನೆ ಎನ್ನುವ ಡೈಲಾಗುಗಳು ! :) ಬರೀ ಸೈಕಲ್ ನೆನಪು ! ಈಗ ಬೈಕು ಬಂದು ಮಿತಿಮೀರಿದ ವೇಗ, ಹುಡುಗಿಯರ ಶಾಲು ಕೂಡಾ ಕಾಣಿಸದಿರುವದು ವಿಪರ್ಯಾಸ !! ಶಾಲೆಯಲ್ಲಿ, ಯಾರೆಲ್ಲಾ ನಮಗೆ ವಿಲನ್ ಗೆಳೆಯರೋ ಅವರ ಸೈಕಲ್ ಪಂಚರ್ ಮಾಡೋದರಲ್ಲಿದ್ದ ಅಮಿತಾನಂದ ಈಗಿನ ಜಗಳದಲ್ಲಿದೆಯೇ..?? :) ಸೈಕಲ್ ಜೊತೆ ಒಳ್ಳೆಯ ನೆನಪುಗಳು ಜೊತೆಗಿವೆಯಪ್ಪ :).
ಮೊಹಮ್ಮದ್ ಇಮ್ತಿಯಾಜ್ :- ಸೈಕಲ್ ಕಲಿತ ಅನುಭವ ಕೇಳಿದಾಗ ಮನಸ್ಸು ಒಮ್ಮೆ ಬಾಲ್ಯದ ಆ ಸವಿ ದಿನಗಳ ಎಡೆಗೆ ವಾಲಿತು .. ಏನು ಆ ದಿನಗಳು .. ಆಗ ಸ್ವಂತ ಸೈಕಲ್ ಇರೋ ಜನ ಅಂದ್ರೆ ಅವರು ಬಾರಿ ದೊಡ್ಡ ಜನ ಎಂದು ಅರ್ಥ .. ನಮಗೆಲ್ಲಿ ಸ್ವಂತ ಸೈಕಲ್ ಹೇಳಿ ... ಬಾಡಿಗೆ ಸೈಕಲ್ ನಲ್ಲಿಯೇ ನಮ್ಮ ಸವಾರಿ .. ಘಂಟೆ ಗೆ ಮೂರೂ ರುಪಾಯಿ .. ವಾರಕ್ಕೆ ಒಮ್ಮೆ ಪಾಕೆಟ್ ಮನಿ ತೆಗೆದಿಟ್ಟು, ಶನಿವಾರ ಮಧ್ಯಾಹ್ನ ಸೈಕಲ್ ಬಾಡಿಗೆ ತೆಗೆದು ಓಡಿಸುವುದರ ಮಜಾ ಇದೆಯಾಲ್ಲ .. ಅದು ಅನುಭವಿಸಿದವರಿಗೆ ಗೊತ್ತು. ಸೈಕಲ್ ಅಂಗಡಿಯವ ಎಲ್ಲಾರಿಗೂ ಸೈಕಲ್ ಬಾಡಿಗೆಗೆ ಕೊಡುತ್ತಿರಲಿಲ್ಲ ... ಬಾಡಿಗೆ ಕೊಡಬೇಕಾದರೆ ಅವನ ಎದುರು ಒಮ್ಮೆ ಸರಿ ಬ್ಯಾಲೆನ್ಸ್ ನಲ್ಲಿ ಸೈಕಲ್ ಓಡಿಸಿರಬೇಕು .. ನಾನ್ ಸೈಕಲ್ ಕಲಿಯುವಾಗ ನನ್ನ ಫ್ರೆಂಡ್ ಗುರುತಿನಲ್ಲಿ ಸೈಕಲ್ ಬಾಡಿಗೆಗೆ ಪಡೆಯುತ್ತಿದ್ದೆ . (ಸೈಕಲ್ ಬಾಡಿಗೆ ಕೊಡುವವನ ಮಗ ನನ್ನ ಫ್ರೆಂಡ್ , ನನ್ನ ಪುಣ್ಯಕ್ಕೆ ) ಇಬ್ಬರು ಮೂವರು ಗೆಳೆಯರು ಒಟ್ಟಾಗಿ ಸೇರಿ ಸೈಕಲ್ ಬಾಡಿಗೆ ಪಡೆದು , ಹೀಗೆ ದೂರ ಸವಾರಿ ಹೊರಡ್ತ ಇದ್ದೆವು ..ಆಗ ನಮ್ಮ ನಡುವೆ ರೇಸ್ ಕೂಡಾ ನಡೆಯುತ್ತಿತ್ತು .. ಅದರಲ್ಲಿ ಗೆದ್ದ ಬಗ್ಗೆ ಚರ್ಚೆ ಮುಂದಿನ ಒಂದು ವಾರ ಪೂರ್ತಿ ಸ್ಕೂಲ್ ನಲ್ಲಿ ನಡೆಯುತ್ತಿತ್ತು . ಸೈಕಲ್ ಬಾಡಿಗೆ ತಂದಾಗ , ಒಂದು ರೈಡ್ ಕೊಡೊ , ಒಂದು ರೈಡ್ ಕೊಡೊ , ಎಂದು ಗೆಳೆಯರ ಗೋಳು , ಅವರ ಕಣ್ಣು ತಪ್ಪಿಸಿ ಸೈಕಲ್ ಬಿಡಲು ಮಾಡೋ ಪರದಾಟ ...ಇವೆಲ್ಲ ಕಷ್ಟ ನಮುಗೆ ಗೊತ್ತು. ಏನ್ ಆ ದಿನಗಳು .......ಭಲೇ ಭಲೇ ನೆನಪುಗಳು.
ಮೊಹಮದ್ ಹನೀಫ್ ಸೈತ್:- ನನಗೆ ಸೈಕಲ್ ಕಳಿಸಿದ್ದು ನನ್ನ ಚಿಕ್ಕಪ್ಪ.ನಾನಾಗ ಐದನೇ ತರಗತಿಯಲ್ಲಿ ಓದುತ್ತಿದ್ದೆ.ನನ್ನ ತಂದೆ,ನನ್ನ ಚಿಕ್ಕಪ್ಪ ಎಲ್ಲರೂ ಸೈಕಲ್ ಓಡಿಸುತ್ತಿದ್ದುದು ನನಗೆ ಬಹಳ ಆಶ್ಚರ್ಯ ಮತ್ತು ಆಸಕ್ತಿಯ ಸಂಗತಿಯಾಗಿತ್ತು.ಹೇಗಾದರೂ ಸೈಕಲ್ ಕಲಿಯಬೇಕೆಂದು ಹಠ ಹಿಡಿದಾಯಿತು.ತಂದೆಯ ಸೈಕಲ್ ಅನ್ನು ತಳ್ಳುತ್ತಾ ಹೋಗಿ ಅನೇಕ ಸಲ ಬಿದ್ದಿದ್ದೆ.ತಂದೆಯಿಂದ ಬಿದ್ದ ಪೆಟ್ಟಿಗೆ ಲೆಕ್ಕವಿಲ್ಲ. ಅದೇ ಸಮಯದಲ್ಲಿ ನಮ್ಮ ಊರಿನ ಸೈಕಲ್ ಮೊಯ್ದುಚ್ಚ ತಮ್ಮ ಅಂಗಡಿಗೆ ಹೊಸತಾದ ಅನೇಕ ಸೈಕಲ್ ಗಳನ್ನು ತಂದಿದ್ದರು.ಅದರಲ್ಲಿ ಒಂದು ಮುದ್ದಾದ ಪುಟಾಣಿ ಸೈಕಲ್ ಕೂಡ ಇತ್ತು.ಅದರ ಮೇಲೆ ನನಗೇನೋ ಬಹಳ ವ್ಯಾಮೋಹ.ಚಿಕ್ಕಪ್ಪನನ್ನು ಪುಸಲಾಯಿಸಿ ಸೈಕಲ್ ಕಲಿಸಲು ತಂದೆಯಿಂದ ಪರ್ಮಿಶನ್ ತೆಗೆಸಿಕೊಂಡೆ.ಅದೇ ಮುದ್ದಾದ ಸೈಕಲ್ ನಲ್ಲಿ ಕೂತು ಚಿಕ್ಕಪ್ಪ ಕಲಿಸುತ್ತಿರಬೇಕಾದರೆ ಏನೋ ಒಂತರಾ ಪುಳಕ.ಕಲಿಯುವಾಗ ಒಂದೇ ಕಡೆಗೆ ವಾಲಿಬಿಡುತ್ತಿದ್ದೆ.ಮುಂದೆ ನೋಡದೆ ಫೆಡಲ್ ನೋಡುತ್ತಿದ್ದೆ.ಖರ್ಚಿಗೆ ಇರಲಿ ಅಂತ ಚಿಕ್ಕಪ್ಪನೂ ಸ್ವಲ್ಪ ಪೆಟ್ಟು ಕೊಟ್ಟ.ಎರಡು ದಿನದಲ್ಲಿ ನಾನೊಬ್ಬ ಪರ್ಫೆಕ್ಟ್ ಸೈಕಲ್ ಸವಾರನಾಗಿದ್ದೆ.ನಂತರದ್ದು ಹೇಳುವುದೇ ಬೇಡ.ಸೈಕಲ್ ತುಳಿಯಲು ಕಾಸಿಗಾಗಿ ಚಿಕ್ಕಪ್ಪ,ಮಾವಂದಿರತ್ತಿರ ಸಾಕ್ಷಾತ್ ಭಿಕ್ಷುಕನಾಗಿದ್ದೆ.ಸೈಕಲ್ನಲ್ಲಿ ಬಿದ್ದು ಮಾಡಿಕೊಂಡ ಗಾಯಗಳು ಅದೆಷ್ಟೋ.
ಜಯಪಾಲ್ ಹಿರಿಯಾಳು:- ಒಂದು ಸಾರಿ ನಮ್ ಮನೆಗೆ ಬಂದ್ದಿದ್ದ ಪರಿಚಿತರ ಬೈಸಿಕಲ್ ಕೇಳಿ ಇಸ್ಕೊಂಡು ಸಂಜೆ ಹೊಡಿವಾಗ, ಚರಂಡಿಗೆ ಬಿದ್ದ ರಭಸಕ್ಕೆ ಚರಂಡಿಯ ಕಾಂಕ್ರಿಟ್ lining ನನ್ನ ಕಾಲಿಗೆ ತಾಗಿ ಸರಿ ಗಾಯ ಆಯಿತು. ಇನ್ನು ಅದರ ಕಲೆ ಹಾಗೆ ಇದೆ. ನಾನು SSLC ಓದುವಾಗ ಕಾಡಿ ಬೇಡಿ Hero Jet second hand ಸೈಕಲ್ ತೆಗಿಸಿಕೊಂಡೆ, ಅಪ್ಪ ನನ್ನ ಅಮ್ಮ ಅದಕ್ಕೆ ದೊಡ್ಡ ಆಕ್ಷೇಪಣೆ ಎತ್ತಿದ್ದರು. ಅವರ ಪ್ರಕಾರ ನಾವು ಪೋಲಿ ಬಿದ್ದೋಗುತ್ತೇವೆ ಅಂಥ ಅವರ ಅಂದಾಜು... Even ನಾನು M A ಓದುವಾಗಲೂ ಸೈಕಲ್ ತುಳಿದುಕೊಂಡೇ ಹಾಸ್ಟೆಲ್ ನಿಂದ್ ಪಡುವಾರಹಳ್ಳಿ, ಅಲ್ಲಿಂದ ಗಂಗೋತ್ರಿಗೆ ಹೋಗುತ್ತಿದ್ದೆವು... ಮಾಸದ ಗಾಯದ ಜೊತೆ ಸೈಕಲ್ ನೆನಪು ನನ್ನಲ್ಲಿ ಸದಾ ಹಸಿರು.
ಪ್ರವೀಣ್ ಸೂಡ:- ನನಗೆ 5ನೆ ಕ್ಲಾಸ್ ಅಲ್ಲಿ ನವೀನ ಅಂತ ಕ್ಲೋಸ್ ಫ್ರೆಂಡ್ ಇದ್ದ, ಸೈಕಲ್ ಹುಚ್ಚ ನನ್ನ ಹಿಂದೆ ಕೂರಿಸ್ಕೊಂಡು ಊರೆಲ್ಲ ಸುತ್ತೋನು, ಒಂದು ಸಾರಿ ಸ್ಪೀಡಾಗಿ ಸೈಕಲ್ ಓಡಿಸಬೇಕಾದ್ರೆ,ಹಂಪ್ಸ್ ಬಂತು ನಾನು ಎಗರಿದೆ ಸೈಕಲ್ ಮೂವ್ ಆಯ್ತು ನಾನು ಮತ್ತೆ ಬ್ಯಾಕ್ ಸೀಟಲ್ಲಿ ಕೂರೊ ಅಷ್ಟ್ರಲ್ಲಿ ಸೈಕಲ್ ಮುಂದೆ ಹೋಗಿ ನಾನು ರೋಡಿಗೆ ಬಿದ್ದೆ.. ಹಾಳಾದ್ದು ಆ ವಯ್ಯಸ್ಸಲ್ಲೆ ನನ್ ಬ್ಯಾಕಿಗೆ ಸರಿ ಏಟು ಬಿತ್ತು..
ಅಲೀರ ಅಬ್ದುಲ್ ಜಮೀರ್ :- ನಾನು ಚಯಕಲ್ ಕಲಿಬೇಕು ಅಂತ ಆಸೆ ಇಂದ ಅಪ್ಪ ಹತ್ರ ಸೈಕಲ್ ಕೊಡಿಸೊಕೆ ಕೇಳಿದೆ, ಅವರು ಮೊದಲು ಸೈಕಲ್ ಕಲಿ ಆಮೇಲೆ ಕೊಡಿಸ್ತೀನಿ ಅಂತ ಹೇಳಿದ್ರು ಸೈಕಲ್ ಇಲ್ಲದೆ ಸೈಕಲ್ ಕಲಿಯೋದು ಹೇಗೆ? ಅದಕ್ಕೆ ಒಮ್ಮೆ ಸ್ಕೂಲ್ ಅಲ್ಲಿ ಇದ್ದಾಗ ಒಂದು ಸೈಕಲ್ ಕದ್ದೆ, ಅದು ಪ್ರಿಸಿಪಾಲ್ ಮಗಳ ಸೈಕಲ್, ಸಂಜೆ ತನಕ ತಗೊಂಡು ಹೋಗಲೆ ಇಲ್ಲ, ಸಂಜೆ ತಿಳಿತು ಅದು ಪ್ರಿಸಿಪಾಲ್ ಮಗಳ ಸೈಕಲ್ ಅಂತ, ಕೊನೆಗೆ ಸೈಕಲ್ ಎಲ್ಲೊ ಬಿಸಾಕಿ ಮನೆಗೆ ಹೋದೆ, ಮಾರನೆ ದಿನ ಅಲ್ಲಿ ಸೈಕಲ್ ಇರಲೆ ಇಲ್ಲ, ಸೈಕಲ್ ಕದ್ದಿದ್ದು ನಾನು ಅಂತ ತಿಳಿಲೆ ಇಲ್ಲ.. ಕೊನೆಗೆ ಸೈಕಲ್ ಕಾಯೊಕೆ ಸೆಕ್ಯುರಿಟಿ ನೇಮಿಸಿದ್ರು ಸ್ಕೂಲಿಂದ....:) :)
ಅನುಪಮ ಗೌಡ:-ನಾನ್ ಕೂಡ ಡ್ಯಾಡಿ ಮನೇಲಿ ಸೈಕಲ್ ಓಡ್ಸಿದೀನಿ, ಅಲ್ಲಿ ಪಾಪ ನನ್ ತಮ್ಮಂದಿರು ಕಲಿಸಿಕೊಟ್ಟಿದ್ದು, ಅವರಿಬ್ರೂ ಹಿಡ್ಕೊಂಡಿದ್ರೆ ನಾನು ಅವ್ರಿಬ್ರ ಮೇಲೆ ಬ್ಯಾಲೆನ್ಸ್ ಬಿಟ್ಟು ಆರಾಮಾಗಿ ಸೈಕಲ್ ಓಡಿಸ್ತಿದ್ದೆ,ಪಾಪ ತಮ್ಮಂದಿರು ಆ ಬಿಸಿಲಲ್ಲಿ ಬಳಲಿ ಬೆಂಡಾಗಿ ಬಿಡ್ತಿದ್ರು, ಒಂದಿನ ನನ್ನಿಂದಾಗಿ ಅವರು ಮೋರಿಗೆ ಹೋಗಿ ಬಿದ್ದಿದ್ರೂ,ನೆನಸಿ ಕೊಂಡ್ರೆ ಇವತ್ತು ಕೂಡ ನಗು ತಡಿಯಾಕ್ಕಾಗೋದೆ ಇಲ್ಲ,ಬಟ್ ನಾನಂತೂ ಸೇಫ್ ಆಗಿದ್ದೆ. :)
ತ್ರಿವೇಣಿ ಟಿ ಸಿ:- ತುಮಕೂರಿನ ಶ್ರೀರಾಮನಗರದ ದೊಡ್ಡಮ್ಮನ ಮನೆಗೆ ಹೋದಾಗಲೆಲ್ಲ , ೨ರೂ ಕೊಟ್ಟು ಸೈಕಲ್ ಬಾಡಿಗೆ ತಗೊಂಡು ನಮ್ಮಕ್ಕ ನಿರ್ಮಲ (ನಿಂಬೆಕಾಯಿ ) ಸಂಜೆ ಕರ್ಕೊಂಡು ಹೋಗುವವಳು, ಅವಳ್ ಯಾರೋ ಹುಡುಗನ ಜೊತೆ ಮಾತಾಡ್ತಾ ನಿಲ್ಲೋಳು, ಯಾರು ಏನು ಯಾಕೆ ಎತ್ತ ಅಂತ ಗೊತ್ತಾಗಿದ್ದು ಅವ್ರು ನನ್ ಭಾವ ಆದ ಮೇಲೆನೆ. ನಮ್ಮಭಾವನೆ ಸೈಕಲ್ ಬಾಡಿಗೆ ತೆಗೊಳಕ್ಕೆ ದುಡ್ಡು ಕೊಡ್ತಾ ಇದ್ರು ಅಂತ , ಕೆರೆ ರೋಡ್ ಅಂಚಿಗೆ ಅವರ ಮನೆ , ಒಮ್ಮೊಮ್ಮೆ ಸೀಬೇಕಾಯಿ ಕೊಡುವವರು, ನನ್ನಿಂದಲೆ ಅವರ ಲವ್ ಸ್ಟೋರಿ ಕೂಡ ಗೊತ್ತಾಗಿ ಅವರ ಮಾಡುವೆ ಮಾಡ್ಸಿದ ಪಾಪನೋ ,ಪುಣ್ಯನೊ ಗೊತ್ತಿಲ್ಲ . ಅಂತು ಮದ್ವೆ ಆಗಿತ್ತು ನಮ್ಮ ನಿಂಬೆಕಾಯಿದು :) . . . . . !!!!ಹೀಗೆ ಈ ಲವ್ ಪುರಾಣದ ಫಲವಾಗಿ ನಾನು ಸೈಕಲ್ ಕಲಿತೆ. ಸೈಕಲ್ ಕಲಿತ ಖುಷಿನಲ್ಲಿ ಅಜ್ಜಿ ಮನೆಗೆ ಹೋಗಿ , ಮಾಮನ ಟಿವಿಎಸ್ ಸ್ಕೂಟರ್ ತಗೊಂಡು ತೋಟಕ್ಕ್ ಹೋಗ್ತಾ ಇದ್ದೆ . ಒಂದು ಎಮ್ಮೆ ದಾರಿಗೆ ಅಡ್ಡ ಬಂದು ನಾನು ಹೋಗಿ , ಬೇಲಿಗೆ ದಬ್ಬಾಕೊಂಡಿರ್ಬೇಕಾದ್ರೆ, ಯಾರೋ ಬಂದು ಹೆಲ್ಪ್ ಮಾಡಿ ಕರ್ಕೊಂಡು ಹೋಗಿ ಮತ್ತೆ ಅಜ್ಜಿ ಮನೆಗೆ ಬಿಟ್ಟರು ಅವತ್ತಿಂದ ಮತ್ತೆ ಸೈಕಲ್ & ಮೋಟಾರ್ ಸಹವಾಸಕ್ಕೆ ಹೋಗಿಲ್ಲ . . . .!!!!
ಮಲ್ಲಿ ಸಾಗರ್:- ಬ್ರೇಕ್ ಇಲ್ಲದ ಸೈಕಲ್ ಓಡ್ಸಿ ಬಟ್ಟೆ ಒಗೀತಾ ಇದ್ದ ಒಂದು ಹೆಂಗಸಿಗೆ ಸೈಕಲಿಂದ ಗುದ್ದಿದ್ದೆ,,,,,,,, ನಮ್ಮ ಫ್ಯಾಮಿಲಿ ಹೆಸರು ಗೊತ್ತಾದ ಮೇಲೆ ಸುಮ್ಮನೆ ಬಿಟ್ಟಳು !!!!!!!!!!! ಸೈಕಲ್ ಜೊತೆ ಒಂದು ನಿಕಟವಾದ ಸಂಬಂಧ ಈಗಲೂ ಇದೆ ,,,, ಈಗಲೂ ಸೈಕಲ್ ಓಡಿಸೋದು ಅಂದ್ರೆ ತುಂಬಾ ಮಜಾನೆ,,,,,,,,,,,,
ಜಾವೇದ್ ಹುಸೇನ್:- ಬೆಂಗಳೂರಿನಲ್ಲಿದ್ದಾಗ ನಾನು ನನ್ ಗೆಳೆಯರು ಸಂಡೇ ಬಂದಾಗೆಲ್ಲ ನೆಲಮಂಗಲ ವರೆಗೂ ಸೈಕಲ್ ನಲ್ಲಿ ಹೋಗಿ ಮತ್ತೆ ವಾಪಸ್ಸ್ ಬರೋವಾಗ ಪಡ್ತಿದ್ದ ಪಛೀತಿ ಈಗಲೂ ನೆನಪಿದೆ. ಹೀಗಿರಬೇಕಾದರೆ ನಾನ್ ಒಂದು ಸಾರಿ ಹಳ್ಳಿನಲ್ಲಿ ಇದ್ದಾಗ ನಮ್ಮ ದೊಡ್ಡಪ್ಪನ ಅಟ್ಲಾಸ್ ಸೈಕಲ್ I mean ದೊಡ್ಡ ಸೈಕಲ್ ತಗೊಂಡು ಅಡ್ಡ ಕಾಲ್ ಹಾಕಿ ತುಳಿಯುವಾಗ ಬಿದ್ದು ಕಾಲ್ ಮುರಕೊಂಡು 1 ವೀಕ್ ಕುಂಟುಕೋತಾ ನಡೀತಾ ಇದ್ದೆ. ಆಗ್ಲೇ ನಂಗು ಸೈಕಲ್ ಗೆ ಬಿಡಿಸಲಾಗದ ದ್ವೇಷ ಬಂದಿದ್ದು......
ಚಂದು ಎಸ್ ಆಚಾರ್:- ನಾನು ಆಗ ಮೂರನೇ ಕ್ಲಾಸು, ಸೈಕಲ್ ಅಂದ್ರೆ ಪ್ರಾಣ. ಆದರೆ ಸ್ವಲ್ಪ ಕುಳ್ಳ ಇದ್ದೆ, ಸೈಕಲ್ ಹೊಡ್ಯೋಕೆ ಕಾಲು ಸಿಗ್ತಾ ಇರ್ಲಿಲ್ಲ. ನನ್ನ ಅಪ್ಪ ಟೀಚರ್ ಆಗಿದ್ರು, ಅವರು ಕೆಲ್ಸ ಮಾಡ್ತಿದ್ದ ಸ್ಕೂಲ್ ನಾಲ್ಕು ಕಿ,ಮಿ ದೂರ ಇತ್ತು. ಒಂದು ದಿನ ಅಮ್ಮ ಊಟದ ಬಾಕ್ಸ್ ಕೊಟ್ಟು, ಹತ್ತು ರೂ ಕೊಟ್ಟು ಬಸ್ಸಲ್ಲಿ ಹೋಗಿ ಅಪ್ಪಂಗೆ ಊಟ ಕೊಟ್ಟು ಬಾ ಅಂದಿದ್ರು. ಸಿಕ್ಕಿದ್ದೆ ಚಾನ್ಸ್ ಅಂತ ಸೀದ ಹೋಗಿ ಬಾಡಿಗೆ ಸೈಕಲ್ ತಗೊಂಡು ಹೊರಟೆ, ಎಷ್ಟು ತುಳಿದ್ರು ಊರು ಸಿಗ್ತಾನೆ ಇಲ್ಲ. ಆದ್ರು ಕಷ್ಟಪಟ್ಟು ತಲುಪಿದೆ. ತುಂಬ ಸುಸ್ತಾಗಿದ್ದೆ. ನನ್ನ ಅಪ್ಪಾಜಿ ಗೆ ತುಂಬಾ ಸಂತೋಷ ಆಗಿತ್ತು, ಆದ್ರು ತುಂಬ ಬೈದಿದ್ರು. ಊಟ ಕೊಟ್ಟು ವಾಪಸ್ ಮನೆಗೆ ಬಂದೆ ಜ್ವರ ಬಂದು ಮಲಗ್ಬಿಟ್ಟೆ. ಆದ್ರು ಏನೊ ಖಷಿ, ಅಷ್ಟು ದೂರ ಸೈಕಲ್ ಅಲ್ಲಿ ಹೋಗ್ಬಂದೆ ಅಂತ.ನನ್ನ ಅಪ್ಪಾಜಿನೂ ಅವರ ಸ್ನೇಹಿತರತ್ರ ಹೇಳ್ಕೊತಿದ್ರು. ಅವರ ಕಣ್ಣಲ್ಲಿ ಏನೊ ಒಂದು ತರ ಖುಷಿ ಕಾಣುಸ್ತಿತ್ತು. ಈಗ ಸೈಕಲ್ ಮೂಲೆ ಸೇರಿದೆ, ಅಪ್ಪಾಜಿ ನು ಇಲ್ಲ... i miss my dad n also my cycle....
ಚಂದನಾ ರಾವ್:- ನನಗೆ ಸೆಕೆಂಡ್ ಸ್ಟಾಂಡರ್ಡ್ ನಲ್ಲಿ ಕೊಡಿಸಿರೊ ಸೈಕಲ್ ಈಗಲೂ ಇದೆ ..ದಿನ ಅದರಲ್ಲೇ ಸ್ಕೂಲ್ಗೆ ಹೋಗ್ತಿದ್ದೆ ...ನನ್ ಸೈಕಲ್ ಹೆಸರು ಐರಾವತ ಅಂತ ..:)
ಸರ್ವೇಶ್ ಕೂಮಾರ್ ಎಂ ವಿ:-
ಎಂಬತ್ತರ ದಶಕದಲ್ಲಿ ನಮ್ಮ ಮನೆಯಲ್ಲಿ ಇರಲಿಲ್ಲ ಸೈಕಲ್ಲು
ಐದನೆ ವಯಸ್ಸಿನಲ್ಲೆ ಮನ ಹಾತೊರೆಯುತ್ತಿತ್ತು ಕಲಿಯಲು ಬೈಸಿಕಲ್ಲು
ಅಂತು ಇಂತು ಕಾಡಿ ಬೇಡಿ ಪಡೆದಿದ್ದೆ ಕಲಿಯಲು ಸ್ನೇಹಿತನ ಸೈಕಲ್ಲು
ಮೊದಲ ದಿನ ಸೀಟನ್ನು ಹತ್ತಿ ಬಡಿದಿತ್ತು ಸೈಕಲ್ಲಿಗೆ ಸೈಜುಗಲ್ಲು
ಬಡಿತದ ರಭಸಕ್ಕೆ ಹಾರಿ ಬಿದ್ದು ಹರಿದಿತ್ತು ನನ್ನ ಮಂಡಿ ಕಾಲು
ಮನೆಯಲ್ಲಿ ಕೇಳಿದಾಗ ಉತ್ತರಿಸಿದ್ದೆ ಪೊಣಿಸಿ ಸುಳ್ಳುಗಳ ಸಾಲು
ಕೊನೆಗು ಕಾಟ ತಾಳಲಾರದೆ ಕೊಡಿಸಿದ್ದರು ಮನೆಯಲ್ಲೊಂದು ಪುಟ್ಟ ಸೈಕಲ್ಲು
ತಳ್ಳಾಡಿ ಕಷ್ಟ ಪಟ್ಟು ಅಣ್ಣನ ಮಾರ್ಗದರ್ಶನದಿ ವಾರದಲ್ಲಿ ಕಲಿತಿದ್ದೆ ಕತ್ತರಿ ಕಾಲು
ಕಲಿತ ಮೇಲೆ ಎಲ್ಲೆಂದರಲ್ಲಿ ಮಾಡುತ್ತಿದ್ದೆ ಸವಾರಿಯ ಮೈಲಿಗಲ್ಲು
ವಿವಿಧ ಶೋಕಿ ಮಾಡಲು ಹೋಗಿ ಮತ್ತೊಮ್ಮೆ ಮುರಿದಿತ್ತು ಕೈ ಕಾಲು
ತುಳಿದು ತುಳಿದು ಬೆಂಡಾಗಿ ನನ್ನ ಸೈಕಲ್ಲು ಪಾವತಿ ಮಾಡಿಸಿತ್ತು ರಿಪೇರಿಗೆ ಹೆಚ್ಚು ಬಿಲ್ಲು
ಬೆಸತ್ತು ಬರಡಾಗಿದ್ದ ಮನ ಯೋಚಿಸಿತ್ತು ಕೊಂಡರೆ ಹೇಗೆ ಒಂದು ಮೋಟಾರ್ ಸೈಕಲ್ಲು!!!!
ರಾಘವೇಂದ್ರ ತೆಕ್ಕಾರ್:- ನನ್ನೊಬ್ಬ ಸೈಕಲ್ ಕಲಿಸಿದ ಮೊದಲ ಗುರು ಇದ್ದ ನಾರಾಯಣ ಅಂತ ಮೊದಲ ದಿನ ಮೊದಲ ಸೈಕಲ್ ಏರಿದ ದಿನದ ಗುರು,2 ರೌಂಡ್ ಕ್ಯಾರಿಯರ್ ಹಿಡ್ಕೊಂಡು ಸೈಕಲ್ ಹಿಂದೆ ಹಿಡ್ಕೊಂಡು ಓಡಿದ, ಮೂರನೆ ರೌಂಡಿಗೆ ಅವನಿಗೆ ಆಯಾಸ ಆಗಿ ದಬಾರ್ ಅಂತ ದೂಡಿ ಬಿಟ್ಟ ನನಗೆ ಬ್ಯಾಲೆಂಸ್ ಇಲ್ಲ ಸೈಕಲ್ ಸಮೇತ ಹೊತ್ಕೊಂಡು ಬಿದ್ದೆ, ಅವನೊ ನನ್ ಮನೆಯಲ್ಲಿ ಅಮ್ಮ ಬೈತಾರೆ ಅಂತ ಓಡಿ ಹೋಗಿದ್ದ, ನಾನ್ ಮನೆಗೆ ಬಂದು ಅಮ್ಮನತ್ರ ಬೈಸ್ಕೊಂಡಿದ್ದೆ, ರಾತ್ರಿ ಪೂರ್ತ ಜ್ವರ, ಹಾ ಸೈಕಲ್ ತೆಗೊಂತಾ ಇದ್ದಿದ್ದು ಲತೀಫ್ ಹತ್ರ.ಅಮೇಲೆ ವಾರ ಕಳೆದ ಮೇಲೆನೆ ನಾರಾಯಣ ಪತ್ತೆಯಾಗಿದ್ದು.ಅಮೇಲೆ ನಾವೆ ನಮುಗೆ ಗುರುಗಳು, ನಮ್ದು ಸೈಕಲ್ ಬಾಡಿಗೆಗೆ ಪಡೆಯೋಕೆ ಲೆಡ್ಜರ್ ಸೈನ್ ಏನೂ ಇಲ್ಲ, ಅರ್ಧ ಘಂಟೆಗೆ ತೆಗೊಂಡಿದ್ದು ಅಂತಾದರೆ 2-3 ರೌಂಡ್ ಹೋಗಿ ಬರ್ಬೇಕಾದರೆ ಟೆನ್ಷನ್, ಎಲ್ಲಿ ಟೈಮ್ ಮೀರುತ್ತೊ ಅಂತ, ಟೈಮ್ ಮೀರಿದ್ರೆ ಜೇಬಲ್ಲಿ ಕಾಸು ಇರ್ತಾ ಇರಲಿಲ್ಲ, ಅದುಕ್ಕೆ ಪದೆ ಪದೆ ಅಂಗಡಿಯನತ್ರ ಅಥವಾ ಅವನ ಮುಂದೆನೆ ಸೈಕಲ್ ಹೊಡೀತಿದ್ದೆ, ಟೈಮಾದರೆ ಅವ್ನೆ ಕರೀತಾನೆ ಅಂತ, ಜೇಬಲ್ಲಿ ದುಡ್ಡಿದ್ದಾವಾಗ ಅಷ್ಟೆ ದೂರ ಹೋಗ್ತಾ ಇದ್ದಿದ್ದು.ಹಾಗಿದ್ರು ಕೆಲವೊಮ್ಮೆ ಸಾಲ ಆಗಿದ್ದು ಉಂಟು, ಸಾಲ ತೀರಿಸಲು ಮತ್ತೆ ದುಡ್ಡು ಹೊಂದಿಕೆ ಆಗೋ ವರೆಗೆ ಸೈಕಲ್ ಒಡಿಸೋ ಆಸೆ ಆದರು ಸುಮ್ನೆ ಕೂರ್ತಿದ್ದೆ. ಬಾಡಿಗೆ ಸೈಕಲ್ ಅಂಗಡಿ ಇದ್ದಿದ್ದು ಅಪ್ಪನ ಬ್ಯಾಂಕ್ ಪಕ್ಕ ಚೆನ್ನಾಗಿರೊ ರೋಡ್ ಕಡೆ ಹೊಡಿಯೋಣವೆಂದರೆ ಮನೆ, ಆ ಕಡೆ ಹೊಡೆದರೆ ಅಪ್ಪಂಗೆ ಗೊತ್ತಾಗುತ್ತೆ ಈ ಕಡೆ ಹೊಡೆದರೆ ಅಮ್ಮಂಗೆ ಗೊತ್ತಾಗುತ್ತೆ, ಏಟು ಬೀಳೋದು ಗ್ಯಾರೆಂಟಿ, ಅದುಕ್ಕೆ ರೊಡಲ್ಲದ ರೋಡಲ್ಲಿ ಸೈಕಲ್ ಶಾಫ್ ಹಿಂದ್ಗಡೆ ರೋಡಲ್ಲಿ ಮೊದ ಮೊದಲು ಸೈಕಲ್ ಹೊಡೀತಾ ಇದ್ದೆ, ಅಪ್ಪನಿಗೆ ಗೊತ್ತಾಗಬಾರದು ಅನ್ನೊದನ್ನ ಶಾಪ್ ನವನಿಗೆ ಮೊದಲೆ ಹೇಳ್ತಿದ್ದೆ,ಈ ಎಲ್ಲದರ ಮಧ್ಯೆ ಟೈಮ್ ಟೆನ್ಷನ್, ಸೈಕಲ್ ಶಾಫ್ ನವನ ಕಣ್ಣಿಗೆ ಕಾಣುವಂತೆ ಆಗಾಗೆ ಬಂದು ಹೋಗ್ಬೇಕಾದ ಪಛೀತಿ, ಅಂತೂ ಇಂತು ಕಲಿತೆ, ಆಮೇಲೆನೆ ಮನೆಗೆ ಬಾಡಿಗೆ ಸೈಕಲ್ ಹೊಡ್ಕೊಂಡು ಹೋಗಿ ಅಮ್ಮನೆದುರು ನಿಲ್ಲಿಸಿದ್ದು, ಅಮ್ಮ ನೀನ್ ಯಾವಾಗ ಕಲಿತಿದ್ದು ಅಂತ ಕೇಳಿದ್ರು. ಪುಣ್ಯಕ್ಕೆ ಏಟೇನು ತಿಂದಿರಲಿಲ್ಲ ಆ ದಿನ. :)
ಎಂತೆಂಥ ಅನುಭವ, ನೆನಪುಗಳು ಅಲ್ಲವೆ, ಬಹುಶಃ ನನ್ನ ಅನುಭವ ಅಷ್ಟನ್ನೆ ಬರೆದುಕೊಂಡಿದ್ದರೆ ಇಷ್ಟೆಲ್ಲಾ ಅನುಭವಗಳು ದಕ್ಕುತ್ತಿರಲಿಲ್ಲ.ಪ್ರತಿಯೊಬ್ಬರದು ವಿಭಿನ್ನ ಅನುಭವ ಅದರ ಜೊತೆ ನೆನಪುಗಳ ಮಹಾ ಪೂರಣ. ಈ ಎಲ್ಲಾ ಅನುಭವ ಹಂಚಿಕೆಯು ಖುಷಿಕೊಟ್ಟಿದ್ದು ಬಹಳ, ಈ ಖುಷಿಯನ್ನು ಎಲ್ಲರೊಡೆ ಹಂಚಿಕೊಳ್ಳೋಣವೆಂದು ದಾಖಲಿಸಿದೆ. ಇವತ್ತು ನಮಗೆ ಸೈಕಲ್ ಒಂದು ದೊಡ್ಡ ವಿಷಯ ಅಲ್ಲದಿರಬಹುದು, ಆದರೆ ಆ ದಿನಗಳ ಈ ನಿಟ್ಟಿನ ತುಡಿತ,ನೋವು ಏಟುಗಳನ್ನು ಲೆಕ್ಕಿಸದೆ ಕಲಿತೆ ತೀರಬೇಕೆಂಬ ಹಂಬಲ, ಒಂದು ದಿನ ದಕ್ಕಿದ ಗೆಲುವು ಇತ್ಯಾದಿ ನೆನಪುಗಳ ಮೆಲುಕುಗಳು ನಮ್ಮ ಇಂದಿನ ಕಾರ್ಯಗಳಿಗೆ ಸ್ಪೂರ್ತಿಯಾದರು ಅಚ್ಚರಿಯಿಲ್ಲ.ಏನಾಗದಿದ್ದರೇನಂತೆ ಖುಷಿಯನ್ನಾದರು ತರಬಲ್ಲುದಲ್ಲವೆ, ಅದೆ ದೊಡ್ಡ ಗೆಲುವು.
ಅವಧಿಯಲ್ಲಿ ಪ್ರಕಟವಾದ ಈ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ.
ಹ್ಹ ಹ್ಹಾ.. ತುಂಬಾ ಆತ್ಮೀಯ ಧನ್ಯವಾದಗಳು :)
ReplyDelete