Thursday, November 1, 2012

ಏನ ಬರೀಯಲಿ ರಾಜ್ಯೋತ್ಸವದ ಬಗ್ಗೆ?

ಕಾವೇರಿ ಬಗ್ಗೆ ಬರಿಯೋದಾ? ಉತ್ತರ ಕರ್ನಾಟಕದ ಬಗ್ಗೆ ಬರೀಯೋದಾ? ಕರ್ನಾಟಕ ಸರ್ಕಾರದ ನಾಡು ನುಡಿಯ ಪರ/ ವಿರೋಧ ಬಗ್ಗೆ ಬರಿಯೋದಾ? ಕರ್ನಾಟಕ ಏಕೀಕರಣ, ಗೋಕಾಕ್ ಚಳುವಳಿ, ಹೈದರಾಬಾದ್ ನಿಜಾಮಗಿರಿ ಬಗ್ಗೆ ಬರಿಯೋದಾ?ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಬರಿಯೋದಾ?ಕರಾವಳಿ ಕರ್ನಾಟಕದ ಬಗ್ಗೆ ಬರಿಯೋದಾ?ಮೈಸೂರು ಸಂಸ್ಥಾನ, ವಿಜಯನಗರದ ಬಗ್ಗೆ ಬರಿಯೋದಾ?ಹೊಸದಾಗಿ ಹುಟ್ಟಿದ ಉತ್ತರ ಕರ್ನಾಟಕ ರಾಜ್ಯ, ಹಳೆಯದಾಗಿ ಹುಟ್ಟಿ ಮುಸುಲಾದ ಕೊಡಗೂ ರಾಜ್ಯದ ಕೂಗೂಗಳ ಬಗ್ಗೆ ಬರೀಯೋದಾ?ಕನ್ನಡ ಭಾಷೆ ಬಗ್ಗೆ ಬರಿಯೋದಾ? ಕರ್ನಾಟಕ ಹಾಗೂ ಕನ್ನಡ ನುಡಿಸಿರಿಗಳನ್ನು ಎತ್ತಿ ಹಿಡಿದ ಕವಿ ಬರಹಗಾರರೂ ಗಣ್ಯರ ಬಗ್ಗೆ ಬರೀಯೋದಾ?ಕನ್ನಡ ರಕ್ಷಣೆಗೆ ಟೊಂಕ ಕಟ್ಟಿ ನಿಂತ ಸಂಘಟನೆಗಳ ಬಗ್ಗೆ ಪರ/ವಿರೋಧಗಳ ಬಗ್ಗೆ ಬರೀಯೋದಾ?ಏನ ಬರೀಯಲಿ ಕನ್ನಡ ರಾಜ್ಯೋತ್ಸವದ ಬಗ್ಗೆ? ಹೀಗೆಂದು ಕೇಳಿದ್ದೆ ಗೆಳೆಯನೋರ್ವ ರಾಜ್ಯೋತ್ಸವಕ್ಕೊಂದು ಅಕ್ಷರಗಳ ಕೊಡುಗೆಯೊಂದನ್ನೂ ನೀಡೆಂದಾವಾಗ.ಬರೀ ಸಂಭ್ರಮವನ್ನಷ್ಟೆ ಬರೆಯುವದೂ ನನಗೆ ಸಾಧ್ಯವಿಲ್ಲವೆಂದಾಗ ಇಂತಹದೊಂದು ದ್ವಂದ್ವ ನನ್ನೊಳಗೆ ಕಾಡತೊಡಗಿತು.

ವೈವಿಧ್ಯತೆಯಲ್ಲಿ ಏಕತೆ ಅನ್ನೋದು ದೇಶದ ಮೂಲಮಂತ್ರವಾಗಿದ್ದರೂ ಕೂಡ ಅದೇನೆಂದೂ ತಿಳಿಯಲೂ ದೇಶದ ಉದ್ದಗಲಕ್ಕೂ ತಿರುಗಬೇಕಾದ ಅವಶ್ಯಕತೆಯಿಲ್ಲ ಕರ್ನಾಟಕವನ್ನೊಮ್ಮೆ ಸುತ್ತಿದರೆ ಅದರ ಸ್ಥೂಲ ಪರಿಚಯ ದಕ್ಕಬಲ್ಲುದು. ಸಾಂಸ್ಕೃತಿಕವಾಗಿ,ಭೌಗೋಳಿಕವಾಗಿ,ಜೀವನ ಕ್ರಮಗಳಲ್ಲಿ,ಆಹಾರ ಶೈಲಿಗಳಲ್ಲಿ ಹೀಗೆ ಪ್ರತಿಯೊಂದರಲ್ಲೂ ವೈವಿಧ್ಯತೆಯನ್ನು ಹೊಂದಿರುವ ರಾಜ್ಯ ನಮ್ಮದೂ. ಇಷ್ಟೆಲ್ಲಾ ವೈವಿಧ್ಯತೆಗಳೂ ಇದ್ದರೂ ಭಾವನೀಯವಾಗಿ ಒಟ್ಟಾಗಿ ಹಿಡಿದಿಡಬಹುದಾದ್ದು ಎಂದರೆ ಅದು ನಮ್ಮ ನುಡಿ, ಅದೆ ಕನ್ನಡ.ಬ್ಯಾರಿ, ತುಳು,ಕೊಡವ, ಲಂಬಾಣಿ, ಕೊಂಕಣಿ,ಅಲ್ಲದೆ ಇತರ ರಾಜ್ಯದ ಭಾಷೆಗಳ ಭಾಷಿಕರೂ ಈ ರಾಜ್ಯದಲ್ಲಿ ಇದ್ದರೂ ಕೂಡ ಕನ್ನಡ ಎಂಬ ಐಕ್ಯ ಮಂತ್ರ ಇವರೆಲ್ಲರನ್ನೂ ಒಂದುಗೂಡಿಸಿದೆ ಅಂದರೆ ತಪ್ಪಿಲ್ಲ (ಈ ಮಾತಿನ ಬಗ್ಗೆ ನನ್ನಲ್ಲೆ ಕೆಲ ಭಿನ್ನಾಭಿಪ್ರಾಯ ಇದ್ದು ಸದ್ಯಕ್ಕೆ ಐಕ್ಯ ಮಂತ್ರ ಕನ್ನಡವೆ ಅನ್ನುತ್ತಾ ಮುಂದುವರಿಯುವೆ).ಕನ್ನಡ ಎಲ್ಲಾ ಭಾಷೆಗಳ ರೀತಿಯಲ್ಲಿ ಪ್ರಾದೇಶಿಕವಾಗಿ ಪರಿಸರಕ್ಕೆ ಅನುಗುಣವಾಗಿ ಮಾತನಾಡುವ ಶೈಲಿಗಳು ಬೇರೆ ಬೇರೆ ಯಾಗಿ ವೈವಿಧ್ಯತೆ ಹೊಂದಿದ್ದನ್ನೂ ನೋಡುತಿದ್ದೇವೆ, ಅದೆಷ್ಟರ ಮಟ್ಟಿಗೆ ಅಂದರೆ ದಾವಣಗೆರೆ ಕನ್ನಡ ಹರಿಹರದ್ದಲ್ಲ, ಹರಿಹರದ ಕನ್ನಡ ರಾಣಿಬೆನ್ನೂರಿನದ್ದಲ್ಲ ಆದರೆ ಈ ಊರುಗಳು ಬೆಸೆದಿರೋದು ಬರೀಯ ೫೦ ಕಿ ಮೀ ಮದ್ಯದಂತರದಲ್ಲಿ.ಹುಬ್ಬಳ್ಳಿ- ಧಾರವಾಡ ಕನ್ನಡ, ಶಿವಮೊಗ್ಗ ಕನ್ನಡ, ಮಂಗಳೂರು ಕನ್ನಡ, ಕುಂದಾಪುರ ಕನ್ನಡ, ಮೈಸೂರು ಕನ್ನಡ, ಬೆಂಗಳೂರ ಕನ್ನಡ, ಬಯಲು ಸೀಮೆ ಕನ್ನಡ,ಬೀದರ್ ಕನ್ನಡ ಹೀಗೆ ತರೇವಾರಿ ಕನ್ನಡ ರಾಜ್ಯದ ಉದ್ದಗಲಕ್ಕೂ ಇದೆ.ಹತ್ತಿರದ ರಾಜ್ಯ ಭಾಷೆಗಳ ಪ್ರಭಾವವೂ ಕನ್ನಡ ಭಾಷಿಕರ ಮೇಲೆ ಭಾಷೆಯ ಮೇಲಾಗಿದೆ ಅದು ರಾಜ್ಯದ ರಾಜಧಾನಿ ಬೆಂಗಳೂರನ್ನು ಹೊರತಾಗಿಸಿಲ್ಲ.ಇಲ್ಲೊಂದು ಸೂಕ್ಷ್ಮ ವಿಚಾರವನ್ನೂ ಪ್ರಸ್ತಾಪಿಸಲು ಇಚ್ಚಿಸುತ್ತೇನೆ.ಕನ್ನಡ ನಮ್ಮುಸಿರು ನಿಜ ಆದರೆ ಕರ್ನಾಟಕದೊಳಗಿನ ಇತರ ಭಾಷೆಯ ತುಚ್ಚೀಕರಣ ಕನ್ನಡ ಬೆಳೆಸುವ ನಿಟ್ಟಿನಲ್ಲಿ ಸಲ್ಲದೂ, ಇದರ ಅಪಾಯ ತುಚ್ಚೀಕರಿಸುವ ಭಾಷೆಯಿಂದಲೂ ಹೆಚ್ಚಾಗಿ ಕನ್ನಡಕ್ಕೆ ಆಗುವ ಸಂಭವಗಳಿವೆ, ತಲ ತಲಾಂತರದಿಂದ ಕನ್ನಡ ಜೊತೆಗೆ ಈ ಭಾಷೆಗಳು ಅಸ್ತಿತ್ವ ಉಳಿಸಿಕೊಂಡು ಬಂದುದರಿಂದ ಅದನ್ನೂ ಗೌರವಿಸುವದನ್ನೂ ರೂಢಿಸಿಕೊಳ್ಳುವದು ಕನ್ನಡ ಭಾಷೆಯ ಒಳಿತಿನ ದೃಷ್ಟಿಯಿಂದ ಒಳ್ಳೆಯದು.ಉದಾಹರಣೆಗೆ ತುಳು ಭಾಷೆಯನ್ನೆ ತೆಗೆದುಕೊಳ್ಳೋಣ, ಕನ್ನಡದಂತೆ ಇದೂ ಒಂದು ದ್ರಾವಿಡ ಭಾಷೆ, ಒಂದು ವಾದದ ಪ್ರಕಾರ ಕೆಲವೊಂದು ಪುರಾವೆಗಳ ಪ್ರಕಾರ ತುಳು ಕೂಡ ಲಿಪಿ ಹೊಂದಿದ ಭಾಷೆ, ಮಲೆಯಾಳಿ ಭಾಷೆಯ ಲಿಪಿ ತುಳು ಭಾಷೆ ಲಿಪಿಯ ಎರವಲೂ ಕಾಲ ಕ್ರಮೇಣ ನಶಿಸುತ್ತಾ ಬಂದಿರುವ ಈ ಭಾಷೆ ಕೇವಲ ಆಡುಭಾಷೆಯಾಗಿ ಮಾರ್ಪಟ್ಟು ಅಸ್ತಿತ್ವ ಉಳಿಸಿಕೊಂಡಿದೆ.ಹೀಗಿರಬೇಕಾದಲ್ಲಿ ಈ ತುಳು ಮೇಲಿನ ದೌರ್ಜನ್ಯ ಕನ್ನಡ ಭಾಷೆಯ ಹೇರಿಕೆಯಿಂದಾಗಿದೆ ಎಂಭ ವಾದವೂ ಹಿಂದಿನಿಂದಲೂ ಕೇಳಿ ಬರುತ್ತಿದೆ, ಇಂತಹ ವಾದಗಳೂ ಈ ಪರಿಯ ಅನುಮಾನಗಳೂ ಮುಂದೊಂದು ದಿನ ನಮ್ಮಯ ಸಮಗ್ರತೆಗೆ ಹೊಡೆತ ಕೊಡುವಂತದ್ದೂ.ಆದುದರಿಂದ ಕನ್ನಡವೆಂಬ ಮೂಲ ಮಂತ್ರದೊಳಗೆ ಕರ್ನಾಟಕದ ಸಮಗ್ರತೆ ಉಳಿಯಲು ಈ ರೀತಿಯ ಉಳಿದೆಲ್ಲಾ ಭಾಷೆಗೆ ಗೌರವಿಸುತ್ತಾ ಎಲ್ಲರೊಂದೊಳಗಾಗಿ ಎತ್ತರಕ್ಕೆ ಬೆಳೆಯುವದೇ ಆಗಿರುತ್ತದೆ, ಆದಷ್ಟೂ ಈ ರೀತಿಯ ಅನುಮಾನಗಳನ್ನೂ ಪರಿಹರಿಸುತ್ತಾ ಎಲ್ಲವನ್ನೂ ಬೆಳೆಸುತ್ತಾ ಬೆಳೆಯುವದೆ ಆಗಿರುತ್ತದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ತುಂಗಭದ್ರಾ, ನೇತ್ರಾವತಿ, ಕಾವೇರಿ,ಅಘನಾಶಿನಿ, ಕುಮಾರಧಾರ, ಫಲ್ಗುಣಿ,ಕಬಿನಿ, ಕಾಳಿ, ಗುರುಪುರ ನದಿ,ಕೇದಕ, ಅರ್ಕಾವತಿ,ಘಟಪ್ರಭಾ, ಮಲಪ್ರಭ,ಯಗಚಿ ನದಿ,ಹೇಮಾವತಿ,ಸೌಪರ್ಣಿಕಾ,ವಾರಾಹಿ,ವರದ,ಶಿಂಶಾ,ಶಾಂಭವಿ,ಶಾಲ್ಮಲಾ,ಶರಾವತಿ, ಕೃಷ್ಣ, ಭೀಮಾ ಹೀಗೆ ಸುಂದರ ಹೆಸರನ್ನೂ ಹೊಂದಿರುವ ಈ ನಾಡಿನ ನದಿಗಳೂ ತನ್ನ ಸುತ್ತಲೂ ಒಂದು ಜನಜೀವನವನ್ನೂ ಈ ನಾಡಿನ ಸುಂದರತೆಯನ್ನೂ ಪೊರೆಯುತ್ತಾ ಬಂದಿದೆ. ನಾಡಿನ ಜಲದ ವಿಷಯ ಬಂದಾಗ ಕಾವೇರಿ ಕೃಷ್ಣೆಗಷ್ಟೆ ನಮ್ಮಯ ಕಾಳಾಜಿಗಳು ಸೀಮಿತವಾಗದೆ ಎಲ್ಲ ನದಿಗಳೂ ಕೂಡ ಮುಖ್ಯವೆ ಅಗಿರಬೇಕಿದೆ. ಜೀವನದಿಯೆಂಬ ಹೆಸರೂ ಎಲ್ಲಾ ನದಿಗಳೀಗೂ ಅನ್ವಯವಾಗುವಂತದ್ದೂ ಕಾರಣ ಜೀವ ಸಂಕುಲವನ್ನೂ ಎಲ್ಲಾ ನದಿಯೂ ಪೊರೆಯುವಂತದ್ದೆ ಆಗಿರುವದರಿಂದ.ಒಂದಷ್ಟೂ ವಿಶಾಲ ಮನೋಭಾವನೆಗಳು ನಾಡಿನ ಜಲ ಸಂರಕ್ಷಣೆಯ ವಿಷಯದಲ್ಲಿ ನಮ್ಮೆಲ್ಲರಲ್ಲೂ ಆಗಿರಬೇಕಿರುವದು ಅವಶ್ಯಕ.ನದಿಗಳ ವಿಷಯ ಬಂದಾಗಲೆಲ್ಲ ನನಗೆ ನೆನಪಿಗೆ ಬರೋದು ನಮ್ಮೂರ ನದಿ ನೇತ್ರಾವತಿ, ನೇತ್ರಾವತಿ ನದಿಗೆ ಬಂದು ಕೂಡುವ ಕುಮಾರಧಾರ ಸಂಗಮ ಸ್ಥಳ ಉಪ್ಪಿನಂಗಡಿ.ನೇತ್ರಾವತಿಯೊಳ ಬಿದ್ದಿದ್ದೇನೆ ಎದ್ದೀದ್ದೇನೆ ಮನ ತನು ತಣಿಸಿದ್ದೇನೆ ದಡದ ಜಾತ್ರೆ ಸಂಭ್ರಮಗಳನ್ನೂ ನೋಡಿದ್ದೇನೆ,ಕೆಂಪಾಗಿ ರೌದ್ರವಾಗುವದನ್ನೂ ಕಂಡಿದ್ದೇನೆ ಇವೆಲ್ಲದರ ಜೊತೆ ಜೊತೆಗೆ ನನ್ನ ಬದುಕನ್ನೂ ಕಟ್ಟಿಕೊಂಡಿದ್ದೇನೆ ಆದ್ದರಿಂದ ಜೀವ ನದಿಯೆಂಬುದನ್ನು ಯಾವುದೋ ಒಂದು ನದಿಗೆ ಸೀಮೀತವಾಗಿರಿಸುವದು ತಪ್ಪು ಎಂಬುದು ನನ್ನ ಆಕ್ಷೇಪ, ಬಹುಶಃ ಇದು ನದಿ ಪಾತ್ರದಲ್ಲಿರುವ ಮಂದಿಯೆಲ್ಲರದೂ, ಅದ ಕಂಡೆ ಬೆಳೆದ ಮಂದಿಯೆಲ್ಲರದೂ ಅಭಿಪ್ರಾಯಗಳಾಗಿರಬಹುದು.ಅದೇನೆ ಇರಲಿ ನಾಡಿನ ಸಮಗ್ರತೆಯ ದೃಷ್ಟಿಯಿಂದ ಜಲವೆನ್ನುವ ಎಲ್ಲವೂ ಪ್ರಾಮುಖ್ಯತೆ ಪಡೆಯುವಂತದ್ದೂ ಎಂಬುದನ್ನಷ್ಟೆ ನಾ ಹೇಳ ಬಯಸಿರುವದು.ಪ್ರಾಕೃತಿಕ ರಮ್ಯತೆಗೆ ನಾಡಿನ ಸುಂದರತೆಗೆ ಈ ನದಿಗಳ ಪಾತ್ರ ಬಹಳ ದೊಡ್ಡದು. 

ನಮ್ಮೂರು ತೆಕ್ಕಾರು ೭೦೦ ರಿಂದ ೮೦೦ ಮನೆ ಹೊಂದಿದ ಸುಂದರ ಹಳ್ಳಿ, ನಾ ನನ್ನ ಹಳ್ಳಿಯ ಬಗ್ಗೆ ಇಲ್ಲಿ ಪ್ರಸ್ತಾಪಿಸುದಕ್ಕೆ ಕಾರಣವಿದೆ.ಸರಾಸರಿ ಮನೆಯೊಂದರಂತೆ ಒಬ್ಬರೂ ನನ್ನನ್ನು ಸೇರಿಸಿ ಬೆಂಗಳೂರು ಹಾಗೂ ಇತರ ಮಹಾ ನಗರವನ್ನೂ ಸೇರಿಕೊಂಡಿದ್ದೇವೆ.ಕಾರಣವಿಷ್ಟೆ ಮೂಲ ನೆಲೆಯಲ್ಲಿ ಉದ್ಯೋಗವಕಾಶಗಳಿಲ್ಲ, ನನ್ನ ಹಳ್ಳಿಯೊಂದರದೆ ಈ ಪರಿಸ್ಥಿತಿಯಾದರೆ ರಾಜ್ಯದ ಪೂರ್ತಿ ಪರಿಸ್ಥಿತಿಯೂ ಬೇರೆಯದಾಗಿಲ್ಲ, ಮಂಗಳೂರು, ಮೈಸೂರು,ಹುಬ್ಬಳ್ಳಿ, ಗುಲ್ಬರ್ಗಾ,ಶಿವಮೊಗ್ಗ ಹೀಗೆ ಎಲ್ಲಾ ಪಟ್ಟಣಗಳು ಬೆಂಗಳೂರಂತೆ ಬೆಳೆದಲ್ಲಿ(ನಾ ಹೇಳುತ್ತಿರುವದು ಉದ್ಯೋಗವಕಾಶದ ನೆಲೆಯಲ್ಲಿ)ರಾಜ್ಯದ ಕ್ಷಿಪ್ರ ಬೆಳವಣಿಗೆಗೆ ಸಹಕಾರಿಯಾಗಬಲ್ಲುದು.ಮೈಸೂರು, ಶಿವಮೊಗ್ಗೆ, ಮಂಗಳೂರು,ಒಂದಷ್ಟೂ ಹುಬ್ಬಳ್ಳಿ ಈ ನಿಟ್ಟಲ್ಲಿ ಬೆಳೆಯುತಿದ್ದರೂ ಗುಲ್ಬಾರ್ಗಾ ಬೀದರ್ ಬಿಜಾಪುರ ಬಾಗಲಕೋಟೆ ಮುಂತಾದ ನಗರಗಳನ್ನೂ ನೋಡಿದಲ್ಲಿ ಇಲ್ಲಿ ಪ್ರಾಥಮಿಕ ಮೂಲ ಸೌಲಭ್ಯ ಪೂರೈಸುವಲ್ಲೆ ಪೂರ್ತ ಯಶಸ್ಸು ನಾವು ಕಂಡುಕೊಂಡಿಲ್ಲ.ಈ ನಿಟ್ಟಲ್ಲಿ ಯೋಚಿಸಿದಾಗ ರಾಜಕೀಯ ಇಚ್ಚಾ ಶಕ್ತಿಯ ಕೊರತೆ ಎದ್ದು ಕಾಣುತ್ತದೆ ಇದರ ಪರಿಣಾಮಗಳೆ ಆಗಾಗೆ ನಮ್ಮಯ ಸಮಗ್ರತೆಯ ಮದ್ಯೆ ಹುಟ್ಟುವ ಅಪಸ್ವರಗಳು.ಅಪಾಯ ಎದುರುಗೊಂಡಾಗ ತಂತ್ರ ಹೂಡುತ್ತಾ ಕೂರುವ ಬದಲು ಕರ್ನಾಟಕವನ್ನೂ ಉತ್ತರ ದಕ್ಷಿಣ ಎಂಬುದಾಗಿ ವಿಭಜಿಸಿಕೊಳ್ಳದೆ ಸಮಗ್ರ ಅಭಿವೃದ್ದಿ ದೃಷ್ಟಿಯಿಂದ ರಾಜಕೀಯ ಇಚ್ಚಾ ಶಕ್ತಿಗಳು ಕೆಲಸ ಕೈಗೊಳ್ಳುವ ಕೈಂಕರ್ಯ ತೊಟ್ಟಲ್ಲಿ ಕರ್ನಾಟಕಕ್ಕೆ ಒಳಿತು.ಅದರೆ 2700 ಕನ್ನಡ ಶಾಲೆಯನ್ನು ಮುಚ್ಚಲು ಹೊರಟ ರಾಜಕೀಯ ಇಚ್ಚಾಶಕ್ತಿಯ ಎದುರು ಇದು ಸಾಧ್ಯವೇ?ಯಕ್ಷ ಪ್ರಶ್ನೆ ಅಂದರೆ ಇದೆ ಇರಬೇಕು.

ನಾವು ಸ್ನೇಹಪರರೂ ಬಹಳ ಬೇಗ ಎಲ್ಲರೊಳಗೆ ಒಂದಾಗಿ ಬಿಡುತ್ತೇವೆ ,ಹೌದು ಇದು ಒಳ್ಳೆಯದೆ ಆದರೆ ಎಲ್ಲರೊಂದಿಗೆ ಒಂದಾಗಿ ಬಿಡುವುದೆಂದರೆ ನಾವೂ ನಮ್ಮನ್ನೂ ಕೊಂದುಕೊಂಡು ಅವರಾಗುವದಲ್ಲ.ಕೆಲವೊಮ್ಮೆ ಅತೀ ಒಳ್ಳೆಯದೂ ಕೆಟ್ಟದ್ದೆ ಮಾಡುತ್ತದೆ, ಮೊನ್ನೆ ಹೀಗೆ ತರಕಾರಿ ಪಡೆಯಲೆಂದು ಹೋಗಿದ್ದೆ ಅಂಗಡಿಯವ ತಮಿಳಿನಲ್ಲಿ ಮಾತಾಡಿಸಿದ ನಾನು ಕನ್ನಡದಲ್ಲೆ ಉತ್ತರಿಸಿದೆ, ಅಯ್ಯೋ ನೀವೂ ಕನ್ನಡ ಕಲಿತು ಬಿಟ್ಟೀರಾ?ಎಂದ, ನಾ ಕಲಿಯುವದೆಲ್ಲಿಂದ ಬಂತು ನಾ ಕನ್ನಡದವನೆ ಅಂದರೂ ಅವ ಒಪ್ಪಲೂ ರೆಡಿ ಇರಲೇ ಇಲ್ಲ. ಹೂಂ ಇದು ಹೀಗಾದರಾಗಲ್ಲ ಎಂದೆನಿಸಿ ನಾನು ತುಸು ವರಸೆ ಬದಲಿಸಿದೆ ನಾ ಪರಭಾಷಿಕ ಸರಿ ನೀನು? ನಾನು ಇದೇ ಊರು ಅಂದಿದ್ದ, ಹಾಗಿದ್ದ ಮೇಲೆ ನೀ ತಾನೆ ಕನ್ನಡ ಕಲಿಸಬೇಕಿರೋದು ,ಅದಕ್ಕಾಗಿ ನೀನು ಕನ್ನಡದಲ್ಲಿ ಮಾತಾಡಬೇಕು ತಾನೆ ಬದಲಾಗಿ ನಾ ಕನ್ನಡದಲ್ಲೆ ಮಾತಾಡಿಸಿದ್ರೂ ತಮಿಳಲ್ಲಿ ಮಾತಾಡ್ತೀಯಲ್ಲೊ ಮಾರಾಯ? ಇಲ್ಲೆ ಹುಟ್ಟಿದ್ದು ಅಂತಿ ಕನ್ನಡಕ್ಕಾಗಿ ಇಷ್ಟಾದ್ರೂ ಮಾಡ್ಬಾರ್ದಾ ಅಂದಿದ್ದೆ.ಪೆಚ್ಚಾಗಿ ನೀವೂ ನೋಡಕ್ಕೆ ತಮಿಳಿಯನ್ ತರ ಕಂಡ್ರಿ ಅದುಕ್ಕೆ ತಮಿಳಲ್ಲಿ ಮಾತಾಡಿಸಿದೆ, ಅವರ ಭಾಷೆಯಲ್ಲಿ ಮಾತನಾಡಿ ಆತ್ಮೀಯತೆ ಕುದುರಿಸಿಕೊಂಡ್ರೆ ವ್ಯಾಪಾರ ಕುದುರುತ್ತೆ ಅನ್ನೋದು ನಮ್ ಅನುಭವ ಸ್ವಾಮಿ ಅಂದ, ಅಯ್ಯೊ ಅಂದ್ಕೊಂಡು ಅವನಿಗೆ ಕಾಣುವಂತೆ ತಲೆ ಚಚ್ಕೊಂಡು ದುಡ್ಡೆಣಿಸಿ ಕೊಟ್ಟು ಮುಂದುವರಿದೆ, ಪೆಚ್ಚಾಗಿ ನೋಡೋ ಅವನ ದೃಷ್ಟಿ ನನ್ನ ಒಂದಷ್ಟು ದೂರ ಹಿಂಬಾಲಿಸಿತ್ತು. ನಾವೂ ಬದಲಾಗಬೇಕಿರೋದು ಇಲ್ಲಿಯೆ, ನುಡಿಯ ಬಗ್ಗೆ ,ನಮ್ಮಯ ಬಗ್ಗೆ ನಮ್ಮೊಳಗಿರುವ ಕೀಳರಿಮೆಯ ತೊಡೆದು ಹಾಕುತ್ತಾ ಕನ್ನಡ ಬೆಳೆಸಬೇಕಿದೆ, ದಿನ ನಿತ್ಯದ ಕಾರ್ಯಗಳಿಗೆ ನಮಗಾತ್ಮೀಯವಾದ ಕನ್ನಡವನ್ನೂ ಉಪಯೋಗಿಸುತ್ತಲೆ ಬಂದಲ್ಲಿ ಪರಿಸರವೂ ಕನ್ನಡ ಮಯವಾಗುತ್ತೆ ಆ ಮೂಲಕ ನಾವೂ ಬೆಳೆಯುತ್ತೇವೆ, ಹೀಗಿರಬೇಕಾದರೆ ಇಷ್ಟು ಸುಲಭದ ಕೆಲಸ ಮಾಡುವದರಲ್ಲಿ ನಾವೂ ಎಡವಬಾರದೂ ಅಲ್ಲವೆ?, ಈ ಮೂಲಕ ಪರಭಾಷಿಕರೂ ಕನ್ನಡ ಕಲಿಯುವಂತಾದರೆ ಒಳಿತೂ ನಮಗೆ ಅಲ್ಲವೆ, ಜ್ಞಾನದ ದೃಷ್ಟಿಯಿಂದ ಎಲ್ಲಾ ಭಾಷೆ ಕಲಿಯೋಣ ಆದರೆ ನಾವೆ ಬೇರೆ ಭಾಷಿಗರಾಗಿ ಬದಲಾಗೋದು ನಮ್ಮನ್ನೂ ನಾವೇ ಕೊಂದುಕೊಂಡಂತೆ ಸರಿ.

ರಾಜ್ಯ ಭಾಷೆ ನಮ್ಮಯ ಬಗ್ಗೆ ಬರೆಯುತ್ತಾ ಕೂತರೆ ಕೊನೆ ಎಲ್ಲಿ? ಬರೆಯುವದಿದೆ ಸಾಕಷ್ಟೂ , ಒಂದಷ್ಟೂ ಚಿಂತನೆಗೆ ನಾವೇ ತೆರೆದುಕೊಳ್ಳಬೇಕೂ ಅನ್ನೊದು ನನ್ನ ಆಶಯವಾದುದರಿಂದ ಸಂಕ್ಷಿಪ್ತ ರೂಪದಲ್ಲೆ ಕೆಲವನ್ನೂ ಕಟ್ಟಿಕೊಟ್ಟಿರುವೆ, ಬರೆಯುವದೂ ಮೂಲ ಉದ್ದೇಶ ಅಲ್ಲವಾದುದರಿಂದ ಇದಿಷ್ಟನ್ನೆ ಹೇಳಿದ್ದೇನೆ, ಕೊನೆಯದಾಗಿ ಬರೆಯುವದೂ ಇಷ್ಟೆ... ಕನ್ನಡ ಚಿಂತನೆ , ಸಂಭ್ರಮಗಳೂ ರಾಜ್ಯೋತ್ಸವ ದಿನಕ್ಕೆ ನವೆಂಬರ್ ತಿಂಗಳಿಗಷ್ಟೆ ಸೀಮಿತವೇ? ಅದು ಪ್ರತಿ ದಿನವಿರಲಿ ಅನ್ನುವದೂ ಎಲ್ಲರ ಅಭಿಪ್ರಾಯ,ಆದರೆ ರಾಜ್ಯೋತ್ಸವದ ಈ ದಿನ ಇಲ್ಲದಿದ್ದರೆ ಕನ್ನಡ ದಿನಗಳೆ ನಮ್ಮದಾಗಿರಲಿ ಎಂದು ಹೇಳುವದಕ್ಕೆ ನಾವೂ ಮುಂದೆ ಬರುತಿದ್ದೆವಾ?ಕನ್ನಡ ಚಿಂತನೆ ಅವಲೋಕನಗಳಿಗೆ ಇಷ್ಟೊಂದು ತೆರೆದುಕೊಳ್ಳುತಿದ್ದೇವಾ?ಎಂಬುದು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಗಳೂ,ಯಾರು ಮರೆಯಲಿ ಬಿಡಲಿ ಕನ್ನಡಕ್ಕಾಗಿ ಪ್ರತಿದಿನ ಚಿಂತಿಸುವ ಮನಸ್ಸು ಇದ್ದೇ ಇದೆ ಇದರ ಹೊರತಾಗಿಯೂ ಕನ್ನಡಕ್ಕೊಂದು ಹಬ್ಬ, ಆ ಮೂಲಕ ಒಂದಷ್ಟೂ ನಾಡು ನುಡಿಯ ಚಿಂತನೆ, ಸಂಭ್ರಮದೊಳಗೆ ಕನ್ನಡದ ಹೊರತಾದವರನ್ನೂ ಸೇರಿಸಿಕೊಂಡು ಸಂಭ್ರಮಿಸಿ ಖುಷಿ ಹಂಚಿಕೊಂಡರೆ ತಪ್ಪೇನೂ ಇಲ್ಲ,ಈ ಮೂಲಕವೂ ಕನ್ನಡಿಗರ ಹೃದಯ ವೈಶಾಲ್ಯ ಹೊರ ಜಗತ್ತಿಗೆ ಪಸರಿಸಿದಲ್ಲಿ ಒಳಿತು ಕನ್ನಡಕ್ಕೆ ಅ ಮೂಲಕ ಕನ್ನಡ ಜನತೆಗೆ.ಈ ಕಾರಣಕ್ಕಾಗಿ ರಾಜ್ಯೋತ್ಸವದ ಈ ದಿನ ಸಂಭ್ರಮಿಸುತಿದ್ದೇನೆ,ಹಂಚಿಕೊಳ್ಳುವ ಆಶಯದಿಂದ ಎಲ್ಲರೀಗೂ ಸಂಭ್ರಮದ 57ನೇ ವರುಷದ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತಾ ಖುಷಿಯಿಂದ ಮುಗಿಸುತಿದ್ದೇನೆ . ಧನ್ಯವಾದಗಳು... :)

Saturday, October 27, 2012

ಮತ್ತೆ ಮತ್ತೆ ನೆನಪಾಗೋ ಬಾಲ್ಯ.



ಅಂಬಿಗನ ಹಂಗಿಲ್ಲದ , ತೂಫಾನೆಂಬುದನ್ನೆ ಕಾಣದ ಅಷ್ಟೇ ಏಕೆ ಅಸಲಿ ದಡವೇ ಇಲ್ಲದ, ಮನಸೆಲ್ಲಾ ಸಂತಸವನ್ನೆ ಸಮುದ್ರದಂತೆ ಹೊದ್ದು ಮಲಗಿದ್ದ ಬಾಲ್ಯ ಕಳೆದಿದೆ.ಬಾಲ್ಯವೆಂಬುದು ಬದುಕಿನ ಮೊಟ್ಟ ಮೊದಲ ಮಳೆಗಾಲ,ಆ ದಿನಗಳ ಮೋಡದ ತುಂಬ ಸಂತಸವೆಂಬ ತುಂತುರ ಪನಿ, ಕೆಲವೊಮ್ಮೆ ರಭಸದಿಂದ ಸುರಿದು ಹಿಪ್ಪೆಯಾಗಿಸಿದರೆ ಕೆಲವೊಮ್ಮೆ ಹಿಡಿದಿಟ್ಟುಕೊಳಬಹುದಾದಷ್ಟೆ ಮೋಡದಿಂದ ಜಾರುವ ಹನಿ, ಅಸಲಿಗೆ ಇವೆಲ್ಲ ಗೊತ್ತಾಗಿದ್ದು ಬಾಲ್ಯವೆಂಬ ಮಳೆಗಾಲದ ಮೋಡ ಸರಿದು ನೆತ್ತಿಗೆ ಇಂಚಿಂಚೆ ಬಿಸಿಲು ತಾಕಿದ ನಂತರ.ಮಂಜು ಕವಿದ ಮುಂಜಾವೂ ನುಸುಳುವ ಸುಳಿಗಾಳಿಯ ಜೊತೆ ತುಂತುರು ಸೋನೆ ಮಳೆಯು ತಂಪೆರೆದು ನೇಸರನ ಕಿರಣಗಳಿಗೆ ಚೂರು ಚೂರೆ ಕರಗಿದಂತೆ ನಮ್ಮ ಬಾಲ್ಯವೂ ಕಳೆದಿದೆ.

ಮೂಡಣದಿ ನೇಸರನ ನಗೆ ಮೊಗದಾ ಶ್ರೀಕಾಂತಿ 
ಬಿಳಿಯಾ ಮೋಡದ ಹಿಂದೆ ಹೊಳೆಯುತಿತ್ತು 
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ

ದಡವೇ ಇಲ್ಲದ ನಮ್ಮದೆ ಸಮುದ್ರದಲ್ಲಿ ಹೊಸ ಹೊಸ ಗುರಿಯೆಂಬ ದಡಗಳು ಹುಟ್ಟಲಾರಂಬಿಸಿದವು,ಅಂಬಿಗನಂತೆ ದಾರಿ ತೋರುವ ಶಿಕ್ಷಣ ವ್ಯವಸ್ಥೆಯನ್ನ ತಬ್ಬಿಕೊಂಡು ಮುಂದುವರಿಯಲಾರಂಭಿಸಿದೆವು,ಸಂತಸದ ಜಾಗದೊಳಗೆ ಖಿನ್ನತೆ ಭಾವಗಳೂ ಒಂದಿಂಚೂ ಆಕ್ರಮಿಸಿ ಸೂರು ಪಡಕೊಂಡವೂ.ಗೊತ್ತಿದ್ದೋ ಗೊತ್ತಿಲ್ಲದೆಯೋ ಸಹನೆ,ಉನ್ಮಾದ,ಕೋಪ, ದ್ವೇಷ,ನಾನು,ಎಂಭಿತ್ಯಾದಿ ಬಿಳಿಮೋಡದೊಳಗಿನ ಕಪ್ಪು ಕಲೆಗಳನ್ನೂ ಮೈದಡವಲಾರಂಭಿಸಿದೆವು ಅದು ನಮ್ಮೊಳಗೆ ಹುಟ್ಟಿದ ಬಿಳಿ ಪದರದ ಹೊದಿಕೆ ಹೊಂದಿದ ಕಾರ್ಮುಗಿಲು.ಇವೆಲ್ಲವದರ ಮದ್ಯೆಯೂ ಆಗಾಗ ನೆನಪಾಗೊ ಆ ಮೊದಲ ಮಳೆಗಾಲ ಮುದವೆನಿಸುವ ತುಂತುರು ಸುಳಿಗಾಳಿಯೊಡಲಿನ ಮುಂಜಾವೂ ತುಂಬುತಿತ್ತು ಚೈತನ್ಯ . ಮುಂದುವರಿದಂತೆ ಇದ್ದುದರ ಬಗ್ಗೆ ಒಂತರಾ ಜಿಗುಪ್ಸೆ, ಹೊಸತೊಂದನ್ನು ನಮ್ಮದಾಗಿಸುವ ಆಸೆಗಳು.ಯಾಕೋ ತಾಯೆ ಬಂಧನದಲ್ಲಿರಿಸಿದ ಭಾವ, ಬಂಧನ ಬಿಡಿಸಿಕೊಂಡು ನಭಕ್ಕೆ ನೆಗೆಯುವ ತುಡಿತ. 

ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ, 
ಅಡಗಲಿ ಎಷ್ಟು ದಿನ..? 
ದೂಡು ಹೊರಗೆ ನನ್ನ 
ಓಟ ಕಲಿವೆ ಒಳ-ನೋಟ ಕಲಿವೆ 
ನಾ ಕಲಿವೆ ಉರ್ಧ್ವಗಮನ 
ಓ ಅಗಾಧ ಗಗನ. 

ರೆಕ್ಕೆ ಬಿಚ್ಚಿದ ಹಕ್ಕಿ ಹಾರುತ್ತದೆಯೆ ಆದರೂ ಹಾರುವ ಕಲೆ ಕರಗತವಾಗಿರುವದಿಲ್ಲ ಈ ಕ್ಷಣಗಳಲ್ಲೆ ಒಂದಷ್ಟು ಯೌವನದ ಎಡವಟ್ಟುಗಳು ನಡೆದುಬಿಡುತ್ತದೆ ಅಮ್ಮನ ಮಡಿಲು ಬಿಟ್ಟಿದ್ದು ರೂಢಿಯಿಲ್ಲದವನೀಗೆ ಒಳನೋಟ ಕಲಿಯಲು ತನ್ನವರೆನಿಸಿಕೊಂಡವರ ಹುಡುಕಾಟದಲ್ಲಿ ತೊಡಗಿರುತ್ತೇವೆ, ಯಾಕೋ ನಿಂಗಿ ಪದ ಕಿವಿಗಪ್ಪಳಿಸುತ್ತದೆ... 

ನಿಂಗಿ ನಿಂಗಿ ನಿಂಗಿ ನಿಂಗಿ 
ನಿದ್ದಿ ಕದ್ದೀಯಲ್ಲೆ ನಿಂಗಿ 
ನಿಂಗಿ ನಿಂಗಿ ನಿಂಗಿ ನಿಂಗಿ 
ಆಸಿ ಎದ್ದೀತಲ್ಲೆ ನಿಂಗಿ 
ಚಂದಾನ ಚಂದ್ರ – ಹೊಯ್ಯಾರೆ ಹೊಯ್ಯ 
ಭೂಮಿಗ ಲಾಂದ್ರ – ಹೊಯ್ಯಾರೆ ಹೊಯ್ಯ 
ಆಗ್ಯಾನ ನೋಡಲ್ಲಿ 

ಹಿಂಗೆ ಮುಂದುವರಿದೂ ಜಾಲಿ ಬಾರಿನಲ್ಲಿ ಮೂರು ಪೋಲಿ ಗೆಳೆಯರು ಗೋಪಿಯನ್ನೂ ಗೋಳು ಹೊಯ್ಕೊಳೋದು, ಹೆಂಡ ಹೆಂಡತಿ ಕನ್ನಡದ ರತ್ನನ್ ಪದಗಳೂ ನೆನಪಾದರೂ ಆದೀತೂ :) ಕಾಲಾಯೈ ತಸ್ಮೈ ನಮಃ ......(ಕಫಾಲಿ ಟಾಕೀಸ್ ನಲ್ಲಿ ನೇತಾಕಿದ್ದ ಪಿಚ್ಚರ್ ಪೋಷ್ಟರ್ ನೆನಪಿಗೆ ಬಂತು. :) ). 

ಅಮ್ಮನ ರಕ್ಷೆಯ ಗೂಡೂ ಬೇಡೆಂದು ಹೊರಬಂದಾದ ಮೇಲೂ ಮಗದೊಬ್ಬರ ಪ್ರೀತಿಯ ಕಕ್ಷೆಯೊಳಗೆ ಸೇರಿಕೊಂಡು ತಿರುಗಲಾರಂಭಿಸುತ್ತೇವೆ, ಬಾಳೆಂಬುದು ಬಂಧನದಿಂದ ಮುಕ್ತವಾದುದಲ್ಲವೆಂಬುದರ ಸತ್ಯ ಬಹಳ ಸಲ ಅರಿವಿಗೆ ಬಂದಿರುವದೆ ಇಲ್ಲ.ಈಗೀಗ ಮನಸ್ಸು ಬದುಕು ತಂದೊಡ್ಡುವ ತೂಫಾನನ್ನು ಎದುರುಗೊಳ್ಳುತ್ತದೆ ಹೆಚ್ಚಿನೆಲ್ಲಾ ಏಟು ತಿಂದು ಬಿಕ್ಕಳಿಸಿ ಸುಮ್ಮನಾಗಿ ಮಲಗಿಬಿಡುವ ಮಗುವಿನಂತೆ ಸೋಲೊಪ್ಪಿಕೊಳ್ಳುತ್ತದೆ, ರಚ್ಚೆ ಹಿಡಿದು ಹಠ ಹಿಡಿವ ಸ್ವಭಾವವನ್ನೂ ರೂಢಿಸಿಕೊಳ್ಳುತ್ತದೆ,ಎಷ್ಟೋ ಸಲ ಬದುಕಲ್ಲಿ ಮುಖ್ಯವಾದುದನ್ನೂ ಕಳೆದುಕೊಳ್ಳುತ್ತಾ ಇದ್ದೀನಿ ಎಂಭ ಭಯದಲ್ಲೆ ಹಿಡಿದಿಟ್ಟುಕೊಳ್ಳಬೇಕೆಂಬ ಛಲದಲ್ಲೆ ಎಲ್ಲವನ್ನೂ ಕಳೆದುಕೊಂಡಿರುತ್ತೇವೆ.ಮತ್ತೆ ಕಳೆದ ಸಂತಸದ ಕಡಲು ಬಾಲ್ಯ ನೆನಪಾಗಿರುತ್ತದೆ. 

ಕಾಣದ ಕಡಲಿಗೆ ಹಂಬಲಿಸಿದೆ ಮನ 
ಕಾಣಬಲ್ಲೆನೆ ಒಂದು ದಿನ 
ಕಡಲನು ಕೂಡಬಲ್ಲೆನೆ ಒಂದುದಿನ!!!! 

ಬರಬರುತ್ತಾ ಬದುಕು ಪಕ್ವವಾಗುತ್ತೆ , ಸ್ವ ಸಾಮರ್ಥ್ಯದಿಂದ ರೆಕ್ಕೆ ಬಿಚ್ಚಿ ಹಾರುವ ಕಲೆಯೂ ರೂಢಿಯಾಗುತ್ತೆ, ಏಟೂ ತಿಂದ ಮನಸ್ಸು ಹೊಸತೊಂದರತ್ತ ಹೊರಳಿರುತ್ತದೆ, ನಿಜ ಹೇಳಲಾ ಸಂಗಾತಿ ದೊರೆತ ಈ ಕಾಲದಲ್ಲೆ ಅಮ್ಮ ಮತ್ತೆ ನೆನಪಾಗ್ತಾಳೆ, ಮನಸ್ಸು ಅಮ್ಮ ಮತ್ತು ಸಂಗಾತಿ ಪ್ರೀತಿಯನ್ನೂ ಬೇಡವೆಂದರೂ ಅಳತೆ ಮಾಡಿಯೇ ಸಿದ್ದವೆಂದು ರಚ್ಚೆ ಹಿಡಿದು ನಿಲ್ಲುತ್ತೆ. ತಾಯಿ ಪ್ರೀತಿಯೆ ಗೆಲ್ಲುತ್ತೆ ಆದರೂ ಸಂಗಾತಿ ಪ್ರೀತಿಯ ಆಸರೆಯೊಂದಿಗೆ ಮತ್ತೆ ತಾಯಿ ಮಡಿಲು ನೆನಪಾಗುತ್ತೆ, ಅದಕ್ಕೆ ಇರಬೇಕು ಆಕೆಯ ಪ್ರೀತಿಯನ್ನೂ ತಾಯಿ ಪ್ರೀತಿಗೆ ಹೋಲಿಸಿಕೊಂಡು ಆಕೆಯನ್ನು ಸಂಗಾತಿಯೆಂದು ಒಪ್ಪಿಕೊಳೋದು, ಪ್ರೀತಿಯೂ ಒಂದು ಉಪಾಸನೆಯಾಗಿ ಕಾಣೋದು. 

ನಿನ್ನ ಸವಿನೆನಪೆ ಮನದಲ್ಲಿ 
ಆರಾಧನೆ............ 
ಪ್ರೀತಿಯ ಸವಿಮಾತೆ ಉಪಾಸನೆ 

ಮಡಿಲ ಬಯಸುವ ಮನ ಮತ್ತೆ ಬಾಲ್ಯದತ್ತ ಹೊರಳೋದು ಸಹಜ, ಪ್ರೌಢತೆಯ ಮದ್ಯೆ ಬಾಲ್ಯ ತುಂಟಾಟ ಅಲ್ಲಲ್ಲಿ ನುಸುಳುತ್ತದೆ,ಹುಟ್ಟು ತರಲೆ ಗುಣ ಸುಟ್ಟರೂ ಹೋಗದಂತೆ,ಮನುಷ್ಯನ ಜೀವಿತಾವಧಿ ತುಂಬಾ ಬಾಲ್ಯದ ನೆನಪುಗಳು ಎಡೆ ಬಿಡದೆ ಕಾಡುತ್ತೆ, ಹೊಸ ಚೈತನ್ಯಗಳನ್ನು ಹುದುಗಿಸಿ ಇಟ್ಟು ಕೊಂಡಿರುವ ಆ ಖಜಾನೆ ಯಾವತ್ತೂ ಬರಿದಾದುದಲ್ಲ, ಮುಪ್ಪು ಮತ್ತೊಂದು ಬಾಲ್ಯದತ್ತ ನಡೆಯೊ ಹೆಜ್ಜೆ ಎಂಬುದು ತಿಳಿದವರ ಅಂಬೋಣ, ನನ್ನ ಅಜ್ಜ -ಅಜ್ಜಿಯ ಮುಪ್ಪಿನ ದಿನಗಳನ್ನೂ ನೆನಪಿಸಿಕೊಂಡಾಗ ಈ ಮಾತನ್ನೂ ಸಾರಸಗಟಾಗಿ ತಳ್ಳಿಹಾಕುವದೂ ಕೂಡ ನನ್ನಿಂದ ಸಾಧ್ಯವಿಲ್ಲ, 

ಏ ದುನಿಯಾವಾಲೇ ಪೂಛೇಂಗೇ 
ಮುಲಾಖಾತ್ ಹುಯೀ? 
ಕ್ಯಾ ಬಾತ್ ಹುಯೀ? 

ಮುಪ್ಪು ಬಾಲ್ಯದ ತುಂತುರ ಹನಿಯ ಮೋಡವನ್ನು ಜೀವನದಲ್ಲಿ ಮತ್ತೊಮ್ಮೆ ಸಂಧಿಸುವ ಕಾಲವೆಂದಾದಲ್ಲಿ ಮುಪ್ಪೆಂಬುದು ನಮ್ಮದೆ ಜೀವನದ ಏಳೂ ಬೀಳನ್ನೂ ಅವಲೋಕಿಸಿ ಅಜ್ಜಿ ತಾತ ಎಂದೆನ್ನುವ ಮಕ್ಕಳೊಂದಿಗೆ ಮಕ್ಕಳಾಗಿ ಮಾರ್ದಗರ್ಶಿಯಾಗುವ ಕಾಲ.ಜೀವವೊಂದರ ಕೊನೆ ಮಗದೊಂದು ಜೀವದ ಹುಟ್ಟೆ ಆದರೆ ಮತ್ತದೆ ಬಾಲ್ಯ ಮರುಕಳಿಸೀತೂ ಎಂಭ ಆಸೆಯೊಂದಿಗೆ ಗುನುಗಲಡ್ಡಿಯಿಲ್ಲ ಕೆಳಗಿನ ಹಾಡು..... 

ಕರೆದು ಬಿಡು, 
ಬಂದುಬಿಡುವೆನೆಲ್ಲಿಂದಲೆ ಆಗಲಿ 
ಬೆಟ್ಟ ಹತ್ತಿ ಹೊಳೆಯ ದಾಟಿ 
ಯಾರೆ ನನ್ನ ತಡೆಯಲಿ....

Friday, October 26, 2012

ಕನಸಿನ ಬಣ್ಣ......

ಹೃದಯ ಜೋಪಡಿಯೊಳಗೆ
ಅವಿತಿಟ್ಟ ಭಾವನೆಗಳ ರೂಪವೆ
ನನ್ನ ಮಾತು.

ಮನದ ಸಂದಿಯೊಳಗೆ
ಅಡಗಿರುವ ಋಣಾಂಶವೆ
ನನ್ನೊಳಗಿನ ಅಸಹನೆ.

ನಾ ಪಡೆವ ಒಲವೂ
ಅದರತ್ತಲಿನ ತುಡಿತವೇ
ನನ್ನುಸಿರು.

ಅರ್ಥವಿಲ್ಲದ ನಾನು ಎಂಬೊಳಗೆ
ಎಲ್ಲಾವೂ ನೀನಾದರೆ
ಅದೆ ನನ್ನ ನಿಟ್ಟುಸಿರು.

ನೋವ ಕಾರ್ಮುಗಿಲ ದಿನದಲ್ಲಿ
ಮೌನಕ್ಕೆ ಶರಣಾಗುವದೆ
ನನ್ನ ಏಕಾಂತ.

ನನ್ನ ಬಣ್ಣ ಬಿಚ್ಚಿಡುತ್ತಲೆ
ನಿನ್ನವನಾಗುವ ಕನಸು
ನನ್ನ ಬಯಕೆ

ನೀನು ನಾನು ಭೇಧವಿಲ್ಲದೆ
ಎಲ್ಲವೂ ನಾವೆಂದಾದಲ್ಲಿ
ಸಂಶಯ ಬೇಡ
ನೀನೆ ಎನ್ನ ಅರಸಿ.

Sunday, October 21, 2012

ತನ್ನೊಳಗಿನ ಪ್ರಶ್ನೋತ್ತರ

ಪ್ರಶ್ನೆ ಎದುರಿಸಬೇಕಾ? ಹೌದು ಪ್ರಶ್ನೆಗಳೂ ನಮ್ಮಲ್ಲಿ ಹುಟ್ಟಿಕೊಳ್ಳುತ್ತಲೆ ಇರಬೇಕು ಉತ್ತರ ಕಂಡುಕೊಳ್ಳುತ್ತಲೆ ಇರಬೇಕು ಆ ಮೂಲಕ ಮಗದೊಂದು ಮಜಲಿನ ಪ್ರಶ್ನೆಗಳ ಎಡತಾಕಲು ಸಿದ್ದತೆ ನಡೆಯುತ್ತಲೆ ಇರಬೇಕು, ಇದೆ ಜೀವನದ ಚಲನಶೀಲತೆ, ಸುಲಭಾರ್ಥದಲ್ಲಿ ಜೀವನೋತ್ಸಾಹದ ಜೀವಂತಿಕೆಯನ್ನು ಸಜೀವವಾಗಿರುಸುವಲ್ಲಿನ ರಹದಾರಿ. ಉತ್ತರವಿಲ್ಲದ ಪ್ರಶ್ನೆಗಳೆ ಇಲ್ಲವೆಂದಾದ ಮೇಲೆ ಉತ್ತರಕ್ಕಾಗಿ ನಡೆಯುವ ನಮ್ಮೊಳಗಿನ ಹುಡುಕಾಟ ನಮ್ಮನ್ನು ನಾವು ಜಾಡ್ಯದ ಬಲೆಗೆ ಬೀಳದಂತೆ ಕಾಯೊ ರಿಪ್ರೆಶ್ ಮೆಂಟ್ ಕ್ರಿಯೆ ಹಾಗೂ ಪ್ರೌಢತೆಯತ್ತ ಸಾಗುವ ಸುಲಭದ ಬೆಳವಣಿಗೆ.

ಪ್ರಶ್ನೆಗಳು ಇತರರಿಂದಲೂ ಬರಬಹುದು, ಸ್ವಿಕರಿಸಬಹುದಾದ ಆಯ್ಕೆ ನಮ್ಮದೆ, ಇದು ನನ್ನ ಒಳಿತಿಗಾಗಿನ ಪ್ರಶ್ನೆಯೆ? ಉತ್ತರಿಸಬೇಕಾದ ಜರೂರಿಗಳಿವೆಯೆ? ಪ್ರಶ್ನೆಕಾರನ ಕಾಳಾಜಿ ಎಂತದ್ದೂ? ಎಂಭಿತ್ಯಾದಿ ವಿಮರ್ಶೆ ನಮ್ಮಲ್ಲಿ ಹುಟ್ಟಬೇಕಾಗುತ್ತದೆ, ಈ ಪ್ರೌಢತೆಯನ್ನೂ ಗಳಿಸಬಲ್ಲುದಾದ ನಮ್ಮೊಳಗಿನ ಸಿದ್ದತೆ ಮೇಲೆ ಹೇಳಿದಂತೆ ನಮ್ಮನ್ನೆ ನಾವೂ ಪ್ರಶ್ನೆ ಮಾಡಿಕೊಳ್ಳುವದರಿಂದ ಹುಟ್ಟಿಕೊಳ್ಳುವಂತದ್ದು.ಪ್ರಶ್ನೆಗಳು ಕೆಲವೊಮ್ಮೆ ಸಲಹೆಗಳಾಗಿಯು ರೂಪುಗೊಳ್ಳುತ್ತದೆ ಅಥವಾ ಪ್ರಶ್ನೆಗಳ ಕೊನೆಯಲ್ಲಿ ಮಾರ್ಗದರ್ಶಿ ಸಲಹೆಗಳು ಅಡಗಿಕೊಂಡಿರುತ್ತದೆ ಇದ ಗುರುತಿಸಬಹುದಾದ ಮೆಚ್ಯೂರಿಟಿ ನಮ್ಮಲ್ಲಿ ಬೇಕಷ್ಟೆ. ಒಂದು ಮಗು ಪ್ರಶ್ನೆ ಮಾಡುತ್ತನೆ ಬೆಳೆಯುತ್ತೆ, ಬಾಲ್ಯ ಕಳೆದು ಪ್ರೌಢತೆಯನ್ನು ಪಡೆಯುತ್ತೆ ಅನ್ನುವದನ್ನು ನಾವು ಮರೆಯಬಾರದು.

ಇದಷ್ಟೆ ಅಲ್ಲದೆ ಪ್ರಶ್ನೆಗಳು ತನ್ನ ಜೊತೆ ಹಲವು ಭಾವಗಳನ್ನೂ ಹೊರ ಸೂಸುತ್ತವೆ, ಪ್ರಮುಖವಾದುವುಗಳೆಂದರೆ ಕೋಪ, ದರ್ಪ, ಅಹಂಕಾರ,ಸಹನೆ, ಕರುಣೆ ಇತ್ಯಾದಿ, ಇವುಗಳಲ್ಲಿ ಸೂಕ್ತವಾದುದಕ್ಕೆ ಉತ್ತರಿಸಬೇಕಾದಕ್ಕೆ ಉತ್ತರಿಸಿ ಮೌನಕ್ಕೆ ಶರಣಾಗುವದೂ ಮಾನಸಿಕ ನೆಮ್ಮದಿ ದೃಷ್ಟಿಯಿಂದ ನಮ್ಮ ಚೈತನ್ಯಗಳನ್ನೂ ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಸೂಕ್ತ. ಕೆಲ ಪ್ರಶ್ನೆಗಳಿಗೆ ಮೌನ ಕೂಡ ಸೂಕ್ತ ಉತ್ತರವಾಗಬಲ್ಲುದು.ಪ್ರಶ್ನೆಗಳಿಗೆ ಉತ್ತರಿಸಬೇಕಾದಲ್ಲಿ ಪ್ರಮುಖವಾಗಿ ಅಳವಡಿಸಿಕೊಳ್ಳಬೇಕಾದುದು ಏನೆಂದರೆ "ಕಡಿಮೆ ಮಾತು ಸ್ಪಷ್ಟ ಸಂದೇಶ", ಈ ಸೂತ್ರ ಅಳವಡಿಸಿಕೊಂಡಿದ್ದೆ ಆದರೆ ಇದು ಕೊಡಬಲ್ಲುದಾದ ಉತ್ತರದ ಮೌಲ್ಯವನ್ನ ಹೆಚ್ಚಿಸುತ್ತದೆ ಮತ್ತು ಅನಾವಶ್ಯಕ ಕಿರಿ ಕಿರಿಯನ್ನೂ ಮನ ತಾಕದಂತೆ ದೂರವಿರಿಸುತ್ತದೆ,

ಕೆಲವೊಂದು ಉತ್ತರಗಳೂ ಪ್ರಶ್ನೆಯ ರೂಪದಲ್ಲೆ ಇದ್ದು ಅದರೆ ಅದು ಪ್ರಶ್ನೆಯಾಗಿರದೆ ಉತ್ತರವಾಗಿರುತ್ತದೆ. ಉದಾಹರಣೆಗೆ ನನಗೆ ಗೊತ್ತಿಲ್ಲ ಅನ್ನುವದಕ್ಕೆ ಯಾವನಿಗೊತ್ತು?ಯಾರಿಗೊತ್ತು? ಹಂಗೆ ಆದ್ರೆ ಒಳ್ಳೇದು, ಹಾಗೆಯೆ ಅಗ್ಬೇಕೂ ಅನ್ನೋದಕ್ಕೆ ಯಾಕೆ ಆಗ್ಬಾರ್ದೂ? ಇತ್ಯಾದಿ........ ಅದರೆ ಇವುಗಳಲ್ಲಿ ಒಂದು ಸ್ಪಷ್ಟ ಸಂದೇಶ ಇದ್ದೆ ಇರುತ್ತದೆ, ಅದು ಎದುರಿಗಿದ್ದವನ ಮೈಂಡ್ ರೀಚ್ ಅಗುವಂತದ್ದೂ.ಈ ಸ್ಪಷ್ಟತೆ ಪ್ರಶ್ನೆಯಲ್ಲಾಗಲಿ ಕೊಡುವ ಉತ್ತರದಲ್ಲಾಗಲಿ ಇದ್ದಲ್ಲಿ ಮಾತ್ರ ಯಾವುದೆ ವಿಚಾರ ಮನದಟ್ಟಾಗಬಲ್ಲುದು ಅಥವಾ ತಾರ್ಕಿಕ ಅಂತ್ಯ ಪಡೆಯಬಲ್ಲುದು.ಒಂದು ವೇಳೆ ಉತ್ತರ ಅಥವಾ ಪ್ರಶ್ನೆಗಳಲ್ಲಿ ಸ್ಪಷ್ಟ ಸಂದೇಶವಿಲ್ಲವೆಂದಾದಲ್ಲಿ ತಪ್ಪು ತಿಳುವಳಿಕೆಗೆ ಕಾರಣವಾಗುತ್ತದೆ ಅಥವಾ ಇನ್ನಷ್ಟೂ ಪ್ರಶ್ನೆ -ಉತ್ತರಗಳ ಹುಟ್ಟುವಿಕೆಗೆ ಕಾರಣವಾಗುತ್ತದೆ, ಇದು ಸುಲಭದಲ್ಲಿ ಗುಣವಾಗುವ ವೃಣವೊಂದನ್ನೂ ಕೆರೆದು ದೊಡ್ಡದಾಗಿಸಿದಂತೆ.ಹೀಗಾಗಬಾರದೆಂದರೆ ನಾವು ಕೇಳುವ/ಹೇಳುವ - ಉತ್ತರ/ಪ್ರಶ್ನೆಗಳಲ್ಲಿ ಸಾಚಾತನವಿರಬೇಕು ಅಲ್ಲದೆ ನಮ್ಮ ಮಾತಿನಲ್ಲೊಂದು ತೂಕವಿರಬೇಕು, ಈ ಪ್ರೌಢತೆ ನಮ್ಮಲ್ಲಿ ಬರಬೇಕಾದರೆ ನಾವೂ ನಮ್ಮಲ್ಲೆ ಪ್ರಶ್ನೋತ್ತರ ಕ್ರಿಯೆಯಲ್ಲಿ ತೊಡಗಿರಬೇಕು, ಇನ್ನೊಬ್ಬರು ಹೇಳಿಕೊಟ್ಟು ಬರಲಾರದ , ಪ್ರೌಢತೆಯನ್ನೂ ಸಂಪಾದಿಸುವ ಈ ದಾರಿ ನಮ್ಮನ್ನೂ ನಾವೂ ಅವಲೋಕಿಸುವ ನಿಟ್ಟಿನಲ್ಲಿ ಅತ್ಯಂತ ಸುಲಭದ್ದೂ ಹೌದು.

ಅವನಿಗೆ ಟೈಮ್ ಸೆನ್ಸ್ ಇಲ್ಲಾ! ಹಣಕಾಸು ವ್ಯವಹಾರದಲ್ಲಿ ವೆರಿ ಪುವರ್!! ಶುದ್ದ ಬಾಯಿ ಹರುಕ!! ಅಹಂಕಾರಿ!!! ಮನೆಹಾಳ!!!!ಮುಂತಾದ ಅಪಾದನೆಗಳೂ ಸಮಾಜದಲ್ಲಿ ಸುಲಭವಾಗಿ ನಮ್ಮ ಬೆನ್ನೇರಿಬಿಡಬಹುದು.ಈ ಅಪಾದನೆಗಳಲ್ಲಿ ಹುರುಳಿರಬೇಕೆಂದೇನಿಲ್ಲ,ಅದ್ದರಿಂದ ಅನಗತ್ಯವಾಗಿ ತಲೆಕೆಡಿಸಿಕೊಳ್ಳಬೇಕೆಂದೇನಿಲ್ಲ, ಅಪಾದನೆ ಹೊರಿಸಬಲ್ಲವನಿಗೆ ಅವನದೆ ಅದ ಲಾಭದಾಯಕ ಅಥವಾ ಹವ್ಯಾಸದ ಕಾರಣಗಳಿರಬಹುದು.ಹಾಗಂತ ಈ ಅಪಾದನೆಗಳನ್ನೂ ಏಕಾಏಕಿ ದೂರ ಮಾಡದೆ ಒಂದು ಸಲ ನಮ್ಮದೆ ಮನಸಾಕ್ಷಿಯನ್ನು ಸವರಿ ಬಂದಲ್ಲಿ ಋಣಾತ್ಮಕ ಅಂಶಗಳನ್ನೂ ಧನಾತ್ಮಕವಾಗಿ ಬದಲಾಯಿಸಿಕೊಂಡು ನಾವೂ ಬೆಳೆಯಲು ಪೂರಕವಾಗಿ ಈ ಅಪಾದನೆಗಳು ಸಹಕಾರಿಯಾಗಬಹುದು.ಮನಸಾಕ್ಷಿಗೆ ವಿರುದ್ದವಾಗಿ ಯಾವೂದೆ ಕೆಲಸ ನಮ್ಮಿಂದ ಆಗಿದೆ ಅನ್ನುವ ತೀರ್ಪು ಮನಸಾಕ್ಷಿ ಕೊಟ್ಟಲ್ಲಿ, ಆ ಕ್ಷಣದಲ್ಲೆ ತಪ್ಪನ್ನು ಸರಿಪಡಿಸಿಕೊಂಡರೆ ಒದಗಬಹುದಾದ ದೊಡ್ಡ ಅಪಾಯವನ್ನೂ ಜೀವಂತಿಕೆಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಪ್ಪಿಸಿದಂತೆ. ಈ ಮನಸಾಕ್ಷಿಯನ್ನೂ ಎದುರುಗೊಳ್ಳುವ ದಾರಿಯೂ ಮತ್ತೇನಲ್ಲ ಅದು ನಮ್ಮನ್ನೆ ನಾವೂ ನಮ್ಮ ಬೆಳೆವಣಿಗೆ ನಿಟ್ಟಿನಲ್ಲಿ ಪ್ರಶ್ನಿಸಿಕೊಳ್ಳುವದೆ ಆಗಿರುತ್ತದೆ.

ತಪ್ಪುಗಳನ್ನೂ ಒಪ್ಪಿ ತಿದ್ದಿಕೊಳ್ಳೋದಕ್ಕೆ ಬೇಕಾದ ಮನೋಸ್ಥೈರ್ಯ , ತಪ್ಪೆಂದು ಅರಿವಾಗಬಲ್ಲ ಅರಿವುಗಳು, ನಮ್ಮೊಳಗೆ ನಡೆಯುವ ಪ್ರಶ್ನೊತ್ತರ ಕ್ರಿಯೆಯು ನಮಗೆ ಕೊಡಬಲ್ಲುದು.ನಮ್ಮ ನಡೆವಳಿಕೆಗಳಲ್ಲಿನ ಹುಳುಕುಗಳನ್ನೂ ಸರಿಡಿಸಿಕೊಳ್ಳಬೇಕಾದ್ದೂ ನಾವೆ ಹೊರತಾಗಿ ಇನ್ಯಾರಲ್ಲ. ಈ ನಿಟ್ಟಿನಲ್ಲಿ ಇತರರ ಸಲಹೆಗಿಂತ ಹೆಚ್ಚಿಗೆ ಲಾಭದಾಯಕವೆನಿಸುವದು ನಮಗೆ ನಾವೆ ಒಡ್ಡಿಕೊಳ್ಳಬಹುದಾದ ಪ್ರಶ್ನೆಗಳೂ ಮತ್ತು ಉತ್ತರ ಹುಡುಕಾಟ ಕ್ರಿಯೆಯಲ್ಲಿ ದೊರೆವ ಅರಿವು.ತನ್ನ ಜೀವನವೂ ತನಗೆ ಆದರ್ಶವಾಗಿದ್ದೂ ಹಾಗೂ ತೃಪ್ತಭಾವ ಹೊಂದಿರಬೇಕಾದ್ದೂ ಮೊದಲೂ ತದ ನಂತರವೇ ಉಳಿದದ್ದೆಲ್ಲ, ಹೀಗಿರಬೇಕಾದರೆ ನಮ್ಮ ನಡೆ ನಮ್ಮ ಮನಸಾಕ್ಷಿ ಒಪ್ಪುವಂತಿರಬೇಕು.ಮನಸಾಕ್ಷಿಯನ್ನೂ ತಿಳಿಯುವ ಕ್ರಿಯೆಯೆ ನಮ್ಮೊಳಗೆ ನಡೆವ ಪ್ರಶ್ನೋತ್ತರ.ಒಳ್ಳೆ ಕಾಲಗಳೂ , ಒಳ್ಳೆ ಮಂದಿ ನಮ್ಮ ಜೀವನದಲ್ಲಿ ಬಂದಿದ್ದೂ ಗೊತ್ತಾಗಲ್ಲ ಮುಂದುವರಿದಿದ್ದೂ ಗೊತ್ತಾಗಲ್ಲ ಗೊತ್ತಾಗಬೇಕಾದರೆ ವರುಷಗಳು ಉರುಳಿರುತ್ತವೆ.ಹೀಗಾಗಬಾರದೆಂದರೆ ತನ್ನೊಳಿತಿಗೆ ತನ್ನನ್ನೆ ತಾನೂ ತನ್ನೊಳಗೆ ಪ್ರಶ್ನಿಸಿ ಅವಲೋಕಿಸಿಕೊಳ್ಳುವದು ಶುಭ, ಮನುಷ್ಯ ಮಾತ್ರನಿಂದ ಸಾಧ್ಯವಾಗಬಲ್ಲ ಈ ಕ್ರಿಯೆಯಿಂದ ವಿಮುಖನಾಗುವದಷ್ಟೆ ಅಶುಭ.ಆಯ್ಕೆಯಂತು ನಮ್ಮದೆ. :) :)

Tuesday, October 2, 2012

ದೃಷ್ಟಿ

ಅಕಾರ ಹೀನ
ನಿರಾಕಾರವಾದ
ದೃಷ್ಟಿಯೂ
ಚೆಂದವಾಗಿ
ರೂಪುಗೊಳ್ಳುವದು
ಸುಂದರ ಕಣ್ಣುಗಳ
ಅಪ್ಪುಗೆಯಲ್ಲಿ
ಎಂಬುದು
ನಿರ್ವಿವಿವಾದ
ದೃಷ್ಟಿಯು
ಸುಂದರವೆ ?
ಎಂಬುದು
ನಿಲುಕಿಗೆ
ನಿಲುಕದ್ದು.

ಇಂತದೆ
ಕಣ್ಣುಗಳ
ನಾ ನೋಡಿದ
ಕ್ಷಣದಿಂದ
ಆ ನೇತ್ರಗಳ
ಸೌಂದರ್ಯ
ದೃಷ್ಟಿ ಸುಂದರತೆಯ
ಎಡತಾಕದೆ
ಒಟ್ಟಾರೆ
ಚಂದವಷ್ಟೆ
ಚಂದವಾಗಿ
ಮನದೊಳಗೆ
ಮನೆಮಾಡಿತು

ಮುಂದುವರಿದು
ಆ ಬೊಗಸೆ ತುಂಬೊ
ಬಟ್ಟಲು ಕಣ್ಣೊಳಗೆ
ಮೂಡಿದ ನನ್ನ ಪಡಿಯಚ್ಚು
ನನ್ನನೆ ಮಾಸಿ
ನನ್ನ ಗಮನಿಸಿದ
ದೃಷ್ಟಿಯೊಂದೆ
ತುಂಬಿತು
ನನ್ನೊಳಗೆ.

Photo: ದೃಷ್ಟಿ
----------------

ಅಕಾರ ಹೀನ
ನಿರಾಕಾರವಾದ
ದೃಷ್ಟಿಯೂ
ಚೆಂದವಾಗಿ
ರೂಪುಗೊಳ್ಳುವದು
ಸುಂದರ ಕಣ್ಣುಗಳ
ಅಪ್ಪುಗೆಯಲ್ಲಿ
ಎಂಬುದು
ನಿರ್ವಿವಿವಾದ
ದೃಷ್ಟಿಯು
ಸುಂದರವೆ ?
ಎಂಬುದು
ನಿಲುಕಿಗೆ
ನಿಲುಕದ್ದು.

ಇಂತದೆ
ಕಣ್ಣುಗಳ
ನಾ ನೋಡಿದ
ಕ್ಷಣದಿಂದ
ಆ ನೇತ್ರಗಳ
ಸೌಂದರ್ಯ
ದೃಷ್ಟಿ ಸುಂದರತೆಯ
ಎಡತಾಕದೆ
ಒಟ್ಟಾರೆ 
ಚಂದವಷ್ಟೆ
ಚಂದವಾಗಿ
ಮನದೊಳಗೆ
ಮನೆಮಾಡಿತು

ಮುಂದುವರಿದು
ಆ ಬೊಗಸೆ ತುಂಬೊ
ಬಟ್ಟಲು ಕಣ್ಣೊಳಗೆ
ಮೂಡಿದ ನನ್ನ ಪಡಿಯಚ್ಚು
ನನ್ನನೆ ಮಾಸಿ
ನನ್ನ ಗಮನಿಸಿದ
ದೃಷ್ಟಿಯೊಂದೆ
ತುಂಬಿತು
ನನ್ನೊಳಗೆ.

Saturday, September 15, 2012

ಹಾದಿಯೊಂದು ವರುಷ ಪೂರ್ತಿಗೊಳಿಸಿ ಮುಂದುವರೆದಿದೆ...


ಅಗಷ್ಟ್ ೮ ಕ್ಕೆ ಒಂದು ವರುಷವನ್ನು ಪೂರೈಸಿದ ಈ ಬ್ಲಾಗ್ ೨ ನೆ ವರುಷದಲ್ಲಿದೆ, ಬರೆದಿದ್ದೇನೆ ಏನನ್ನ ಅಂದ್ರೆ ಏನನ್ನೂ ಇಲ್ಲ ತೋಚಿದ್ದು ಬರೆದದ್ದು ಒಳ್ಳೆಯದೆಂದು ತಿಳಿದದ್ದನ್ನು ಸಂಗ್ರಹಿಸಿದ್ದು ಇಷ್ಟೂ ಬಿಟ್ಟರೆ ಬರವಣಿಗೆಯ ಮಟ್ಟಕ್ಕೆ ಹೇಳಿಕೊಳ್ಳುವಂತದ್ದು ಏನೂ ಮಾಡಿಲ್ಲ,ಎಲ್ಲೋ ಬರೆದಿದ್ದು ಎಲ್ಲೋ ಕಳೆದು ಹೋಗಿ ನನ್ನನ್ನು ತುಲನೆ ಮಾಡುವ ಅವಕಾಶವನ್ನು ಕೈ ಚೆಲ್ಲುತಿದ್ದ ದಿನಗಳಲ್ಲೆ ಗೆಳೆಯನೊಬ್ಬನ ಒತ್ತಾಸೆಗೆ ಮಣಿದು ಈ ಬ್ಲಾಗ್ ಹುಟ್ಟು ಕಂಡಿತು ವರುಷಗಳ ಹಿಂದೆ,ಕ್ರಮೇಣ ಒಂದಷ್ಟೂ ಬರಹಗಾರ ಗೆಳೆಯರು ಹಿತೈಷಿಗಳು ನನ್ನ ಬರಹಗಳನ್ನು ಮೆಚ್ಚಿಕೊಂಡರೆಂಬುದು ನನಗೆ ಈಗಲು ದೊಡ್ಡ ಕನಸೆ.ಅವರೆಲ್ಲರ ಪ್ರೀತಿಗೆ ನಾ ಅಭಾರಿ.ಹೀಗೊಂದು ಬರೆದುಕೊಳ್ಳುವುದರ ಅಗತ್ಯವಿತ್ತಾ ಅನ್ನುವುದು ಕಾಡುತ್ತಲೆ ನನ್ನೆಲ್ಲಾ ಸೋಮಾರಿತನದೊಂದಿಗೆ ಈ ಬ್ಲಾಗನ್ನು ಜತನವಾಗಿ ಇಲ್ಲಿವರೆಗೆ ನಿರ್ವಹಿಸುತ್ತಾ ಬಂದಿರುವದು ನನಗೆ ಸೋಜಿಗವೆನಿಸಿದೆ,ಇದನ್ನು ನಿಮ್ಮದುರು ಪ್ರಸ್ತುತಪಡಿಸಿ ಮತ್ತಷ್ಟು ಜವಬ್ದಾರಿಯನ್ನು ಹೊತ್ತು ಮುನ್ನಡೆಸಲು ಸಹಾಯವಾಗಬಹುದೆಂದು ಬಹಳ ದಿನ ಕಳೆದ ನಂತರ ಹೀಗೊಂದು ಪ್ರಕಟಣೆ ಬರೆವ ಮನ ತೋರಿದೆ.ಅದೇನಂದರು ಬರವಣಿಗೆ ಒಂದು ರೂಪದಲ್ಲಿ ಇರದಿದ್ದರು ಅದು ನನ್ನ ಏಕಾಂತವ ನೀಗಿದೆ, ಮನದ ಭಾವನೆಗಳ ವ್ಯಕ್ತಪಡಿಸಲು ಸಹಕಾರಿಯಾಗಿದೆ,ಎಲ್ಲಕ್ಕಿಂತಲೂ ಹೆಚ್ಚು ಪ್ರೀತಿಯ ಗೆಳೆಯರ ಸಮೂಹವನ್ನು ದೊರಕಿಸಿದೆ,ಪೇಸ್ ಬುಕ್ ಹಾಗೂ ಅದರಲ್ಲಿನ ನನ್ನ ಪ್ರೀಯ ಗುಂಪುಗಳು ಈ ನಿಟ್ಟಿನಲ್ಲಿ ಜೊತೆಯಾಗಿದ್ದನ್ನು ಮರೆವ ಹಂಗಿಲ್ಲ. ಈ ಪ್ರೀತಿಯ ಬಳಗವನ್ನು ನನ್ನೊಳಗೆ ಕಾಫಿಡಲು ಮತ್ತು ಬರಹ ಪ್ರಕಾರಗಳ ವಿದ್ಯಾರ್ಥಿಯಾಗಿ ಒಂದಷ್ಟು ಚೈತನ್ಯವನ್ನು ನನಗೆ ನಾನೆ ತುಂಬಿಕೊಳಲು ನಾ ಬರೆಯಬೇಕು ಎಂಭ ಒತ್ತಾಸೆಯಲ್ಲೆ ಮುಂದುವರಿಯುತ್ತೇನೆ ,ನಿಮ್ಮಲ್ಲರ ಪ್ರೀತಿ ನನ್ನೊಳಗಿದೆ.

ಧನ್ಯವಾದಗಳು.

ಇಂತೂ ನಿಮ್ಮವ
ರಾಘವೇಂದ್ರ ತೆಕ್ಕಾರ್

ಧ್ವನಿ ಮೂಡಲಿ..

ದಾರಿ ತುಂಬಾ
ನೆಂಟರ
ಗೌಜು ಗದ್ದಲದ
ನಡುವೆ
ದನಿ ಅಡಗಿದ
ಧ್ವನಿಗಳು
ಮರೆಯಾಗಿ
ಓಲಗ, ತಮ್ಮಟೆಯ
ದನಿ ಮಾರ್ದನಿಸುತ್ತಿದೆ

ಜನ್ಮ - ಮದುವೆ
ಮುಂಜಿ - ಸಾವು
ಎಲ್ಲದರ ಗದ್ದಲದ
ನಡುವೆ
ಬದುಕು ದಾರಿ
ಮಂಕಾಗಿದೆ
ಅಳುವದೋ
ಸಂಭ್ರಮಿಸೋದೊ
ತಿಳಿಯದಾಗಿ

ನಗೆಯೊಂದು
ದೊಡ್ಡ ಆಸ್ತಿಯೆಂದು
ಕೇಳಿ ತಿಳಿದಾಗ
ನಾನೊಬ್ಬನೆ ನಕ್ಕು
ಒಂದಷ್ಟು ಜನಕ್ಕೆ
ದನಿಯಡಗಿ
ದುಃಖ ದುಮ್ಮಾನ
ಎಂದಾದರೆ
ನನ್ನ ನಗೆಯ ಫಲ
ಎನಿತೊ ಎಂಭ
ಜಿಜ್ಞಾಸೆ
ನನ್ನೊಳಗೆ

ಜೀವಿಯ
ಸಹಜ
ಹುಟ್ಟು ಸಾವಿಗೆ
ನೆಂಟರೂ
ಇಷ್ಟರ ಓಲೈಕೆಗೆ
ಬದಲಾಗಿ
ದನಿ
ಮಾರ್ದನಿಸಬೇಕು
ಸಮಾನತೆಯತ್ತ
ದನಿ ಸತ್ತ
ಮಂದಿಗೆ
ದನಿಯಾಗಿ
ಧ್ವನಿ ಮೂಡಿಸುವತ್ತ.


Friday, September 14, 2012

ಕಪ್ಪು- ಬಿಳುಪು

ಅನಿರೀಕ್ಷಿತವಾಗಿ
ಎಡವಿದಾಗ
ತುಸು ಜಾರಿದ
ಕಪ್ಪು ಕನ್ನಡಕದ
ಫ್ರೇಮಿನೊಳಗಿಂದ
ಕಣ್ಣ ನೋಟ ತುಸು
ಹೊರ ಇಣುಕಿದಾಗಲೆ
ತಿಳಿದದ್ದೂ
ನಾ ನೋಡುವ ದೃಷ್ಟಿ
ಮಬ್ಬು ಮಬ್ಬೆಂದು.

ಮಬ್ಬು ಕತ್ತಲ
ತೊಳೆಯೋಣವೆಂದು
ಕಣ್ಣ ಮರೆಸಿದ್ದ
ಕಪ್ಪು ಕನ್ನಡಕವ
ಎತ್ತಿ ಎಸೆದಾಗಲೆ
ರಾಚಿದ್ದು
ಜಗದ ಪ್ರಖರ
ಬೆಳಕು
ಜೊತೆಗೆ ಒಂದಿಷ್ಟು
ಬೆಳಕರಿಯದ
ಬದುಕು-ಬವಣೆಗಳು
ಬಿಳುಪಿನಂತೆ

ಬೇರು ಸತ್ತ
ಜೀವಿಗಳೂ
ತಾವಿಲ್ಲದ
ಸೂರುಗಳು
ಸುಟ್ಟೆಲೆಯ
ಪೈರುಗಳು
ಎಲ್ಲವು ಎಲ್ಲವೂ
ದೃಷ್ಟಿ ಪರದೆಯಲ್ಲಿ
ನಿಂತಣಕಿಸಿ
ನಾಚುವಾಗ
ಮತ್ತದೆ ಮಬ್ಬು
ದೃಷ್ಟಿ ತುಂಬಿದ
ಕತ್ತಲು


ನಗ್ನತೆಯ
ಜಗದ ತುಂಬ
ಬಡವರ ಕೆಂಪು
ನೆತ್ತರ ಬಸಿದು
ಶೀಷೆಯೊಳಗೆ
ತುಂಬಿ ಗುಟುಕರಿಸುವ
ಮಂದಿಯರ ಕಂಡಾಗ
ನನಗದೆ ಮುಸುಕು
ಮುಗ್ಗಲು
ಕನ್ನಡಕದ ನೆನಪಾಗಿ
ಎತ್ತಿ ಕಣ್ಣಿಗೊತ್ತಿಕೊಂಡೆ
ಒಂದಿಷ್ಟು ದಿನ
ದೃಷ್ಟಿ ಮಾಸದಿರಲೆಂದು
ನೈಜತೆಯು
ಕಣ್ಣ ಸುಡದಿದ್ದರೆ
ಮಬ್ಬು ಬೆಳಕನ್ನೆ
ಬಿಳುಪಾಗಿಸೋಣವೆಂದು

ಕಣ್ಣಿಗೊತ್ತಿಕೊಂಡ
ಕನ್ನಡಕದ ಫ್ರೇಮೂ
ದೃಷ್ಟಿಗೊಂದು ಚೌಕಟ್ಟು
ಮೀರಗೊಡುವದಿಲ್ಲ
ನನಗೆಟಕುವ
ನೆಟ್ಟ ದೃಷ್ಟಿಯೊಳಗೆ
ಕಾಣುವ
ಕಪ್ಪು ಬಿಳುಪು
ಎಲ್ಲವೂ ಮಬ್ಬಾಗಿ
ಹೆಚ್ಚಿನ ವ್ಯತ್ಯಾಸವ
ನೋಡುವದನ್ನೆ
ತೊರೆಯಲಿಚ್ಚಿಸಿ

ಅಂದುಕೊಂಡೆ
ಮನಸಿನೊಳಗೆ
ಕತ್ತಲಿನ ಓರೆಹಚ್ಚಿ
ಬಿಳುಪಾಗುತ್ತಿರೋಣವೆಂದು.


Thursday, September 13, 2012

ಪ್ರಶಾಂತ ನೆನಪು...

ಅವನಿದ್ದಲ್ಲಿ ಹವಾ, ನಡೆಯೋ ಮಾತುಗಳೂ ಅವನದ್ದೆ, ತಾನೂ ಸರಿಯಿದ್ದಾಗ ಯಾರನ್ನೂ ಕ್ಯಾರ್ ಮಾಡದ ವ್ಯಕ್ತಿತ್ವ. ಒಂದ್ ವೇಳೆ ತಪ್ಪಿದ್ದೂ ಬೈಸಿಕೊಂಡಾಗ ನಗುತ್ತಲೆ ಬೈಗುಳನ್ನೂ ಸ್ವೀಕರಿಸಿ ಮುಗೂಳ್ನಗುತ್ತಾ ಸಾರಿ ಅಂದ್ರೆ ಬೈದವನೂ ಬೌಲ್ಡ್ ಬೈಸಿಕೊಂಡವನೀತ ನಗುತ್ತಾ ತನ್ನ ದಾರಿ ಹಿಡಿಯುತಿದ್ದ.ಪ್ರತಿ ದಿವಸ ಒಂದಲ್ಲಾ ಒಂದ್ ಕಿರಿಕ್ ಮಾಡಿಕೊಂಡು ಅದನ್ನೆ ಎಂಜಾಯ್ ಮಾಡೋ ಸ್ವಭಾವದವನೀತ ಸದಾ ಗದ್ದಲದಲ್ಲೆ ಸುದ್ದಿಯಾದರೂ ಈತ ಹೊತ್ತಿದ್ದ ವ್ಯತಿರಿಕ್ತ ಹೆಸರೂ ಪ್ರಶಾಂತ.(ಇವನಿದ್ದಲ್ಲಿ ಸುತ್ತಲಿನ ಮಂದಿಯ ಪ್ರಶಾಂತತೆಗೆ ಕುತ್ತು).ಅದೇನಿದ್ದರೂ ಈತನ ನನ್ನಯ ಗೆಳೆತನ ಬಾಲ್ಯದಿಂದ. ನೆನಪಿರುವಂತೆ ಅರೆ ಬರೆ ಬಾಲವಾಡಿ(ಅವನ್ನ ಕರೆತರುತಿದ್ದುದ್ದೆ ನೆಂಟರಂಗೆ ಅಪರೂಪ), ತದ ನಂತರ 4ನೆ ಕ್ಲಾಸ್ ತನಕ ಜೊತೆಗೆ ಓದಿದ್ವಿ, ಮತ್ತೆ ಜೊತೆಯಾಗಿದ್ದೂ 9ನೆ ಕ್ಲಾಸಲ್ಲಿ ಒಂದು ವರುಷ, ಆಮೇಲೆ ಜೊತೆಯಾಗಿದ್ದೂ ಕಾಲೇಜಲ್ಲಿ ಒಂದು ವರುಷ ,ಬಹುಶಃ ಅಲ್ಲಿಗೆ ಕೊನೆ ಮತ್ತೆಂದೂ ಒಬ್ಬರಿಗೊಬ್ಬರೂ ವಿದ್ಯಾಭ್ಯಾಸದ ಹೊರತಾಗಿಯೂ ನಾವಿಬ್ಬರೂ ಅಕ್ಕ ಪಕ್ಕದ ಮನೆಯವರಾದರೂ ಒಬ್ಬರಿಗೊಬ್ಬರೂ ಭೇಟಿಯಾಗಿಲ್ಲ!!!!!!.

ಸಣ್ಣ ವಯಸ್ಸಿನಲ್ಲೆ ರಾಜ್ಯ ರಾಷ್ಟ್ರಮಟ್ಟದಲ್ಲಿ ಕುಸ್ತಿ ಚಾಂಪಿಯನ್ನಾಗಿ ಬೆಳೆದು ಬಿಟ್ಟ, ಬಹಳಷ್ಟೂ ಪದಕಗಳೂ ಬಹುಮಾನಗಳೂ ಅವನದಾಗಿತ್ತೂ, ಅವನು ತನ್ನನ್ನೂ ಬಹಳ ಇಷ್ಟದಿಂದ ತೊಡಗಿಸಿಕೊಂಡಿದ್ದು ಬಹುಶಃ ಈ ಕುಸ್ತಿ ಕ್ರೀಡೆಯಲ್ಲೆ, ಬೆಳಿಗ್ಗೆ 6 ರಿಂದ ರಾತ್ರಿ 8 ರ ತನಕ ತಿಂಗಾಳಾನೂಗಟ್ಟಲೆ ಅಭ್ಯಾಸ ಶಿಬಿರಗಳಲ್ಲಿ ತನ್ನ ತಾನೂ ತೊಡಗಿಸಿಕೊಂಡು ದೇಹ ದಂಡಿಸಿಕೊಳ್ಳುತಿದ್ದುದನ್ನೂ ನೋಡಿದ್ದೆ.ಪ್ರತಿಫಲವೆಂಬಂತೆ ಹೊರ ದೇಶಗಳಲ್ಲೂ ದೇಶದ ಪರವಾಗಿ ರಾಜ್ಯದ ಪರವಾಗಿ ಕುಸ್ತಿ ಕ್ರೀಡೆಯಲ್ಲಿ ಭಾಗವಹಿಸಿ ಮಿಂಚಿದ್ದ. ಇಷ್ಟೂ ಬಿಟ್ಟರೆ ಉಳಿದದ್ದುರಲ್ಲಿ ಜಿದ್ದಿಗೆ ಬಿದ್ದು ಆಸಕ್ತಿ ವಹಿಸಿದ್ದೂ ಕಡಿಮೆನೆ.ಹಾಗೆ ನೋಡಿದಲ್ಲಿ ಇವನಿಗೆ ಏಕಾನತೆ ಅನ್ನೋದು ದೊಡ್ಡ ಭೂತದಂತೆ ಕಾಡುತಿತ್ತೂ, ಸ್ನೇಹಿತರೂ, ಕಲಿಯುವ ಶಾಲೆ, ಆಸಕ್ತಿಗಳೂ, ಶಾಲೆಗೆ ಬರೋ ದಾರಿಗಳೂ ಎಲ್ಲವೂ ಬಹಳ ದಿನ ಸಹಿಸಲಾರ, ಪದೆ ಪದೆ ಬದಲಾವಣೆಗಳೂ ಅತನ ಎಲ್ಲಾ ಚಟುವಟಿಕೆಗೆ ಅಂಟಿಕೊಂಡೆ ನಡೆದು ಬರುತಿತ್ತು.ಕುಸ್ತಿಯೊಂದರಲ್ಲಿ ಆಸಕ್ತಿ ಕಳೆದುಕೊಳ್ಳಲಾರ ಅಂದುಕೊಂಡಿದ್ದೆ ಬಹುಶಃ ಈ ದಿನಗಳಲ್ಲಿ ಆ ಆಸಕ್ತಿಯೂ ಗುಡ್ಡೆ ಹತ್ತಿರಬೇಕೂ.ಆದರೆ ಮತ್ತೆ ಮತ್ತೆ ಹಳೆ ಸ್ನೇಹಿತನರಸಿ ಬರುತಿದ್ದುದು ಈತನ ದೊಡ್ಡ ಗುಣ.ಬಹುಶಃ ಇದಕ್ಕಾಗೆ ಆತ ಬಂದು ನಮ್ಮ ಹೈಸ್ಕೂಲ್ ಸೇರಿದ್ದೂ, ಮೊದಲ ಭಾರಿಗೆ ಸೈಕಲ್ ಒಂದರಲ್ಲಿ ಬರುವ ವಿದ್ಯಾರ್ಥಿಯಾತ.ಜೊತೆಗಾರನೆನಿಸಿಕೊಂಡಿದ್ದು ಅದೆ ಬಾಲ್ಯ ಸ್ನೇಹಿತರಾಗಿದ್ದ ನಾನು ಮತ್ತೆ ಕುಳ್ಳಕೆ ಡುಮ್ ಡುಮ್ಮಕ್ಕೆ ಇದ್ದ ಹಂಝ.

ಹೊಸ ಸೈಕಲ್ಲಲ್ಲಿ ತ್ರಿಬ್ಬಲ್ ರೈಡ್ ಮಾಡುತ್ತಾ ತದ ನಂತರದ ಒಂದಷ್ಟೂ ದಿನ ನಾವ್ 3 ಮೈಲೂ ದೂರದ ಹೈಸ್ಕೂಲ್ ತಲುಪ್ತಾ ಇದ್ದಿದ್ದೂ ಪ್ರಶಾಂತನ ಕೃಪೆಯಿಂದಲೆ, ಸೈಕಲ್ ತುಳಿತಾ ಇದ್ದಿದ್ದೂ ಬಲಾಢ್ಯ ಪ್ರಶಾಂತನೆ, ಬಹಳಷ್ಟೂ ಸಲ ಹೊತ್ಕೊಂಡು ಬಿದ್ದಿದ್ದೂ ಆಗಿತ್ತೂ. ಕೆಲವೋಮ್ಮೆ ಬೇಕಂತಲೇ ಬೀಳಿಸೋದು, ಸೈಕಲ್ ಹಿಂದೆನೆ ಓಡಿ ಬರುವಂತೆ ಮಾಡೋದು, ಯಾಕ್ ಕೇಳ್ತಿರಾ ಇವ್ನ ಕಾಟನಾ?? ಒಟ್ಟಿನಲ್ಲಿ ಬೀಳಿಸಿದ್ರೂ ಏಳಿಸಿದ್ರೂ ದೂಸ್ರಾ ಮಾತಾಡಕ್ಕೆ ಅವಕಾಶನೆ ಇರ್ಲಿಲ್ಲ ಅವನ ಜೊತೆ ,ಜಗಳ ಅಂತೂ ಕನಸಿನ ಮಾತು. ಒಂದೋಮ್ಮೆ ಕೋಪ ಬಂದೂ ರೇಗಿದ್ದಕ್ಕೆ ನಂಗೆ ಮಾತಾಡ್ತೀಯಾ ಅಂತ ಮುಸುಡಿ ಬಾಪುವಂತೆ ನಾನು ಆತನಿಂದ ಹೊಡೆಸಿಕೊಂಡ ನಂತರ ನನ್ನ ಮಾತೆಲ್ಲಾ ಬಂದ್ ಆಗಿತ್ತೂ.ಆದರೂ ನಾವೂ ಮೂವರೂ ಬಿಟ್ಟಿರಲಾರದಂತೆ ಇದ್ದಿದ್ದೂ ಸತ್ಯ.ಕಲಿಯುವದರಲ್ಲಿ ಆತನಿಂದ ನಾ ಸ್ವಲ್ಪ ಉತ್ತಮನೆನಿಸಿಕೊಂಡಿದ್ದೆ ,ಹಂಝನೂ ಅಷ್ಟೆ ಉತ್ತಮವಾಗೆ ಪರೀಕ್ಷೆಗಳಲ್ಲಿ ತೇರ್ಗಡೆಯಾಗ್ತಿದ್ದ, ಶತ ದಡ್ಡ ಅನಿಸಿಕೊಂಡಿದ್ದೂ ಮಾತ್ರ ಪ್ರಶಾಂತನೆ, ಲೆಕ್ಕದಲ್ಲಂತೂ ಸೊನ್ನೆ ಸುತ್ತುತಿದ್ದ, ಲೆಕ್ಕದ ಮಿಸ್ ಗೆ ಅದಾಕೋ ಒಂದು ದಿನ ಇವನಿಗೆ ವಿಪರೀತ ಕೋಪದಿಂದ ದನ ಕಾಯಕ್ಕೆ ಲಾಯಕ್ಕೂ ನೀನು ಅಂದಿದ್ದಕ್ಕೆ ಬರುವ ತಿಂಗಳ ಅರ್ಧವಾರ್ಷಿಕ ಪರೀಕ್ಷೆಯಲ್ಲಿ 100 ಕ್ಕೆ 100 ಸ್ಕೋರ್ ಮಾಡ್ತೀನಿ ನನ್ನತ್ರ ಚಾಲೆಂಜ್ ಮಾಡ್ಬೇಡಿ ದನ ಕಾಯೋ ವಿಚಾರ ಆಮೇಲೆ ನೋಡೋಣವಂತೆ ಎಂದು ಅವಾಜ್ ಏರಿಸಿದ್ದೆ ಅಲ್ಲದೆ ಹಾಗೆ ಮಾಡಿ ತೋರಿಸಿದ್ದ, ನಮ್ಮ ಕ್ಲಾಸ್ ಗೆ ಮಾತ್ರವಲ್ಲದೆ ಇಡೀಯ ಹೈಸ್ಕೂಲಲ್ಲಿದೂ ದೊಡ್ಡ ಸುದ್ದಿ.ಸ್ಟಾಪ್ ರೂಮಲ್ಲೂ ಈ ಬಗ್ಗೆ ಗುಸು ಗುಸು, ಇದ್ದಕ್ಕಿದ್ದಂತೆ ಹೀರೋ ಆಗಿದ್ದ ,ಈ ಹೀರೋ ಗಿರಿ ಮುಂದಿನ ಕ್ಲಾಸ್ ಪರೀಕ್ಷೆಯೊರಗಷ್ಟೆ ಸೀಮಿತವಾಗಿ ಮತ್ತೆ ಸೊನ್ನೆ ಸುತ್ತಿ ಆತನೆ ತನ್ನ ಹೀರೋಗಿರಿಗೆ ಇತಿಶ್ರೀ ಹಾಡಿದ್ದ ತಾನೂ ಮನಸ್ಸಿಟ್ಟರೆ ಛಲವಿಟ್ಟರೆ ಏನನ್ನೂ ಮಾಡಬಲ್ಲೆ ಎಂಬುದನ್ನೂ ಎಲ್ಲರೀಗೂ ಸ್ಪಷ್ಟಪಡಿಸುತ್ತಾ.ಪರೀಕ್ಷೆ ಹಾಲ್ಗಳಲ್ಲಿ ತಾನೂ ಬರೆಯುತಿದ್ದುದರ ಹೊರತಾಗಿ ಇತರರ ಹಾವಭಾವವನ್ನೂ ನೋಡಿ ಈತ ನಗುತಿದ್ದೂದೆ ಹೆಚ್ಚು ಆದರೂ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಮತ್ತೆ ಹೈಸ್ಕೂಲ್ ಬದಲಿಸಿದ್ದ, ಯಾಕೋ ಪರೀಕ್ಷೆ ಅಂತ ಸಾಯ್ತೀರಿ, ಬೇಕಾದ ಪರೀಕ್ಷೆಗಳಿಗಷ್ಟೆ ಸಿದ್ದಗೊಳ್ಳಬೇಕೆ ಹೊರತಾಗಿ ನಮ್ಮನ್ನೂ ಇತರರೂ ಅಳೆಯುವ ಪರೀಕ್ಷೆಗಳಿಗಲ್ಲ, ಆ ಅಳೆತಗಳೂ ನಮಗಷ್ಟೆ ತಿಳಿದಿರಬೇಕೂ ಎನ್ನೂವ ಮಾತನ್ನೂ ಈತ ಕೊನೆಯದಾಗಿ ಹೇಳಬೇಕಾದರೆ ಬಾಯಿ ಮುಚ್ಚದೆ ಬಿಟ್ಟ ಬಾಯಿಯಿಂದ ಆತನ ಮುಖವನ್ನೂ ನಾನು ಬೆಪ್ಪನಂತೆ ನೋಡಿದ್ದೂ ಜೀವನದ ಪರೀಕ್ಷೆಗಳನ್ನೂ ಎದುರಿಸುವಾಗ ಈಗಲೂ ಒಂದೊಂದು ಸಲ ನೆನಪಿಗೆ ಬರುತ್ತದೆ.

ಈತ ನನಗೆ ಈಜು ಕಲಿಸಿದ ಗುರು, ಶನಿವಾರದ ಅರ್ಧ ದಿನದ ಶಾಲೆ ಮುಗಿಸಿ ಸೈಕಲ್ ಹತ್ತಿ ಈತನ ಜೊತೆಗೆ ಬಂದವೆಂದರೆ ದಾರಿಯಲ್ಲೆ ಸಿಗುವ ಹರಿಯುವ ಹಳ್ಳದ ಒಂದು ಗುಂಡಿಯಲ್ಲಿ ಈಜಾಡೂತ್ತಾ ಇದ್ವಿ, ಇಲ್ಲೆ ನನಗೆ ಈಜೂ ಕಲಿಸಿದ್ದೂ ಇವ.80ರಾಗೆ ತುಳಿತೀನಿ ನೋಡು (ಈ ಮಾತೂ ಇವತ್ತಿಗೂ ನನ್ನ ಬಾಯಲ್ಲಿದೆ) ಅಂತ ಸೈಕಲ್ ತುಳಿದು ಬಂದು ಸೇರ್ತಾ ಇದ್ವಿ ಈ ಹಳ್ಳಕ್ಕೆ,ಬೇಸಿಗೆಯ ಆ ಕಾಲದಲ್ಲಿ ನೀರಲ್ಲಿ ಬಿದ್ದು ಹೊರಳಾಡಿ ಮನೆ ತಲುಪಿದರೆ ವಿಪರೀತ ಹೊಟ್ಟೆ ಹಸಿವು ತಿಂದುಂಡು ಮಲಗಿದರೆ ಗಡದ್ ನಿದ್ದೆ. ನಾವೂ ವೀಕೆಂಡನ್ನೂ ಬರಮಾಡಿಕೊಳ್ಳುತಿದ್ದುದು ಈ ರೀತಿ, ಇದಕ್ಕಿಂತಲೂ ಮೊದಲೂ ಮಳೆಗಾಲದಲ್ಲಿ ತೊರೆ(ತೋಡು) ತುಂಬಾ ನೀರು, ನದಿಯ ಅರ್ಧದಷ್ಟೂ ಅಗಲವಿದ್ದ ಈ ಹಳ್ಳವನ್ನೂ ದಾಟೋದು ಸುಲಭದ ವಿಷಯವಲ್ಲ. ಬಹುಶಃ ಪ್ರಶಾಂತ ಸಿಗುವ ಮೊದಲೂ ಈ ಸಾಹಸಕ್ಕೆ ಕೈ ಹಾಕಿದ್ದೆ ಇಲ್ಲ.ಅಗಿದ್ದಾಗಲಿ ಎಂದು 1 ಮೈಲೂ ಹೆಚ್ಚಿಗೆ ನಡೆದೂ ಕಾಲು ಸೇತುವೆ ಇರುವ ಕಡೆಯ ಬೇರೆ ದಾರಿಯಿಂದ ಶಾಲೆ ಸೇರ್ತಾ ಇದ್ವಿ. ಆದರೆ ಈತ ಜೊತೆ ಸೇರಿದ ನಂತರ ಹುಚ್ಚು ಧೈರ್ಯ. ಒಂದು ಸಂಜೆ ಶಾಲೆಯಿಂದ ಮರಳುವಾಗ ಬಹಳವಲ್ಲದಿದ್ದರೂ ಮಳೆ ಸುರಿಯುತಿತ್ತು,ಹಳ್ಳದಲ್ಲಿ ನೀರು ಏರಿರಲಾರದೆಂದು ಮಾಮೂಲಿ ದಾರಿಯನ್ನೆ ಹಿಡಿದಿದ್ವಿ. ಮಳೆಗಾಲದಲ್ಲಿ ಹಳ್ಳ ದಾಟುವ ಕ್ರಮ ಸ್ವಲ್ಪ ಬೇರೆಯದೆ ಆಗಿತ್ತೂ. ಮೇಲೆಲ್ಲೋ ಇಳಿದು ನೀರಿನ ಪ್ರವಾಹದ ಜೋತೆನೆ ಬಂದು ಈ ಬದಿ ಸೇರಬೇಕಿತ್ತೂ, ಆ ದಿನವೂ ಹಾಗೆ ನೀರಿಗಿಳಿದು ಒಂದಷ್ಟೂ ದೂರ ಬರುತ್ತಿರಬೇಕಾದರೆನೆ ಕೆಂಪು ಪ್ರವಾಹ ನೀರೂ ಬಂದು ಮೊಣಕಾಲಿನೊರೆಗಿದ್ದ ನೀರೂ ಕುತ್ತಿಗೆ ಮಟ್ಟಕ್ಕೇರಿತ್ತೂ, ನನಗೆ ಈಜೂ ಬರದ ಕಾರಣ ಪ್ರವಾಹದಲ್ಲೆ ಅಕ್ಷರಶಃ ಕೊಚ್ಚಿ ಹೋಗುತ್ತಿರಬೇಕಾದರೆನೆ ಈತ ನನ್ನ ಜುಟ್ಟು ಹಿಡಿದು ಒಂದು ಮರದ ಆಸರೆಯ ಮೂಲಕ ಸೇರಬೇಕಾದಲ್ಲಿ ಸೇರದಿದ್ದರೂ ಒಟ್ಟು ದಡ ಸೇರಿಸಿದ್ದ.ನಾನೂ ಸಾಕಷ್ಟೂ ನೀರು ಕುಡಿದೂ ಕಂಗಾಲಾಗಿದ್ದೆ, ಸಾವರಿಸಿಕೊಳ್ಳುವಷ್ಟರಲ್ಲಿ ಈತ ನನ್ನ ಸ್ಕೂಲ್ ಬ್ಯಾಗ್ ನಲ್ಲಿ ತುಂಬಿದ್ದ ನೀರನ್ನೂ ಹಿಂಡುತಿದ್ದ,ಮುಖದಲ್ಲಿ ಅಟ್ಟಹಾಸದ ನಗು, ಬುಕ್ಸ್ ಎಲ್ಲವನ್ನೂ ಎರಡೆರಡೂ ಪ್ಲಾಷ್ಟಿಕ್ ಚೀಲದಲ್ಲಿ ಬಂದೋಬಸ್ತ್ ಮಾಡಿ ದಾರ ಕಟ್ಟಿದ್ದರಿಂದ ಅರೆ ಬರೆ ಒದ್ದೆಗೊಂಡರು ಅದು ಸೇಫಾಗಿತ್ತೂ .ಹಂಝ ಈಜುಗಾರನೆ ಅಗಿದ್ದುದರಿಂದ ನಾಣೀಲೂ ಬೀಳ ಆಸರೆಯೊಂದಿಗೆ ನಮ್ಮಿಂದ ಮೊದಲೆ ದಡ ತಲುಪಿ ನನ್ನನ್ನೂ ಮೇಲೆತ್ತಲೂ ಪ್ರಶಾಂತನಿಗೆ ಸಹಕರಿಸಿದ್ದನಂತೆ.ಇಷ್ಟರಲ್ಲಾಗಲೆ ಮನೆಗೆ ಸುದ್ದಿ ತಲುಪಿ ಮನೆಯಿಂದ ಹಳ್ಳದ ಬದಿಗೆ ಅಮ್ಮ ಓಡಿ ಬಂದಿದ್ದರೂ,ನಾನೂ ಸೇಫಾಗಿರೋದು ನೋಡಿ ಉಸುರು ಬಿಟ್ಟು ಮಾದರಿ ಬೀಳಿನ ಬೆತ್ತ ಮುರಿದು ಬಾಸುಂಡೆ ಬರುವಂತೆ ಛಡಿ ಏಟೂ ನೀಡಿದ್ದೂ ಎಲ್ಲಾ ಆಗಿತ್ತೂ,ಇದ ನೋಡಿ ಇದೆಲ್ಲದರ ರುವಾರಿ ಪ್ರಶಾಂತ ಓಟ ಕಿತ್ತಿದ್ದ, ಹಂಝ ಅದೆಲ್ಲಿ ಎರೆಹುಳುವಿನಂತೆ ನುಸುಳಿ ಮಾಯಕ ಆಗಿದ್ನೋ ಗೊತ್ತಿಲ್ಲ, ಇದಾದ ಮರುದಿನನೆ ಪ್ರಶಾಂತ ಹೇಳಿದ್ದ ಬೇಸಿಗೆ ಬರಲಿ ನಿನ್ನ ನೀರಿಗೆತ್ತಿ ಹಾಕುತ್ತೇನೆ,ನೀನು ಈಜದೆ ಅದೆಲ್ಲಿ ಹೋಗುತ್ತಿ ನೊಡೋಣವೆಂದು. ಅಂತೆಯೆ ಬೇಸಿಗೆ ಬಂದಂತೆ ಅದೆ ಹಳ್ಳದಲ್ಲಿ ಜೀವವುಳಿಸಿದವ ಜೀವವುಳಿಸುವ ವಿದ್ಯೆಯನ್ನೂ ಅಲ್ಲಿಯೆ ಕಲಿಸಿದ್ದ. 

ಅದಾಕೋ ಒಂದು ವರುಷ ಸ್ಕೂಲ್ ಬಿಟ್ಟು ಹಾಯಾಗಿದ್ದೂ ಮತ್ತೆ ನಮ್ಮ ಕಾಲೇಜಿಗೆ ಬಂದೂ ಕೂಡಿಕೊಂಡಿದ್ದ, ಒಂದೆ ಹಾಸ್ಟೇಲ್ ಕೂಡಾ ಹೌದು.ಹಾಷ್ಟೇಲ್ನಲ್ಲಿ ಸೀನಿಯರ್ಸ್ ಗಿರಿ ಆಗ ನಾನೂ ಈತನೀಗೆ ಸೀನಿಯರ್ರೆ,ಇದಾವೂದನ್ನೂ ಕ್ಯಾರ್ ಮಾಡದ ಈತ ತನ್ನ ಪಾಡಿಗೆ ತಾನಿರುತಿದ್ದ, ಬೋರಾಯಿತೆಂದರೆ ನನ್ ರೂಮಿಗೆ ಬಂದು ಹರಟೋದು ನನ್ನ ಕರಕೊಂಡು ಸುತ್ತೋದು ಅಷ್ಟಕ್ಕೆ ಅಲ್ಲಿನ ಪರಿಸರಕ್ಕೆ ಆತನ ಚಟುವಟಿಕೆ ಸೀಮಿತವಾಗಿತ್ತೂ.ಕೆಲವೊಂದು ಸೀನಿಯರ್ಸ್ಗಳೂ ಈತನಲ್ಲಿ ತನ್ನ ಸೀರಿಯರ್ ಗಿರಿಯನ್ನೂ ತೋರಿಸಲೂ ಬಂದಾಗ ಅಟ್ಟಾಡಿಸಿಕೊಂಡು ಹೊಡೆದಿದ್ದೂ ದೊಡ್ಡ ಮಟ್ಟಿನ ಪ್ರಕರಣವಾಗಿತ್ತೂ, ಸೀರಿಯರ್ಸ್ ಎಲ್ಲಾ ಒಂದಾಗಿ ಹಾಸ್ಟೇಲ್ ವಾರ್ಡನ್ ಹತ್ರ ಕಂಪ್ಲೈಂಟ್ ಕೊಡೋದು ಎಂದು ನಿರ್ಧಾರವಾದಾಗ ಕಸಿವಿಪಟ್ಟವ ನಾನು, ಪರವಾಗಿಲ್ಲ ಸೀನಿಯರ್ ಪರವಾಗಿ ನಿಲ್ಲೂ ಇಲ್ಲಾಂದ್ರೆ ನಿನಗೆ ತೊಂದ್ರೆ ನಾ ಹ್ಯಾಂಡಲ್ ಮಾಡ್ಕೋತೀನಿ ಅಂದು ನನ್ನ ಕಸಿವಿಸಿ ದೂರ ಮಾಡಿದವನೂ ಇವನೆ.ಹಾಗೆ ತೋರಿಕೆಗೆ ಇವನ ವಿರುಧ್ಧವಾಗಿ ನಿಂತಿದ್ದೂ ಆ ದಿನವೆ.ಹೀಗಿರಬೇಕಾದರೆನೆ ನಾವ್ ಎಕ್ಸಾಂ ಮುಗಿಸಿ ಮನೆ ತಲುಪಿದ್ದೂ ರಿಸಲ್ಟ್ ಗಾಗಿ ಕಾಯುತ್ತಾ ಕೂತಿದ್ದೂ. ಈತಂದೂ ಎಕ್ಸಾಂ ಮುಗಿದಿತ್ತೂ, ಒಂದೆ ಊರು ಬೇರೆ ಜೊತೆಗೆ ಕಾಲೇಜಿಂದ ಮರಳಿದ್ವಿ. ಹೀಗಿರಬೇಕಾದರೆನೆ ಒಂದು ಸಂಜೆ ಮನೆಯಲ್ಲಿ ತನ್ನ ಅಪ್ಪನೊಂದಿಗೆ ಅದೇನೋ ವಿಷಯಕ್ಕೆ ಜಗಳ ತೆಗೆದಿದ್ದ.ಅವರೂ ಕೋಪಗೊಂಡು ಎರಡೇಟೂ ಬಿಗಿದೂ ಮನೆಯಿಂದ ಹೊರಹಾಕ್ತೀನಿ ನೋಡು ಅಂತಂದ್ದಿದ್ದೂ, ಅಷ್ಟಕ್ಕೆ ಇವ ಉಟ್ಟ ಬಟ್ಟೆಯಲ್ಲೆ ಮನೆಯಿಂದ ಹೊರಗಡೆ ಬರುತ್ತಿರಬೇಕಾದರೆನೆ ಅಂಗಳದಲ್ಲಿದ್ದ ತಾಯಿ ಎಲ್ಲಿಗೋ? ಎಂದು ಕೇಳಿದ್ದಕ್ಕೆ ಸೌಮ್ಯವಾಗೆ ನೋಟ್ಸ್ ಬೇಕಿತ್ತೂ ರಾಘು ಮನೆಗೋಗಿ ಬರ್ತೇನೆ ಎಂದೇಳಿ ಹೊರಟಿದ್ದೂ, ಮರುದಿನ ಆತನ ಅಣ್ಣ ನನ್ನ ಹುಡುಕಿಕೊಂಡು ಬಂದು ಪ್ರಶಾಂತ ಬಂದಿದ್ನಾ? ಎಂದು ಕೇಳಿದಾಗ ನಾ ಇಲ್ಲವೆನ್ನಲೂ ಎಲ್ಲಾ ವಿಷಯವನ್ನೂ ಸಾಧ್ಯಂತವಾಗಿ ತಿಳಿಸಿದ್ದರೂ, ಅಮೇಲೆ ಅದೆಷ್ಟೂ ಪಚೀತಿ ಪಟ್ಟು ಹುಡುಕಿದರೂ ಆತ ಸಿಗಲಿಲ್ಲ,ನಾ ಜೀವಂತವಾಗಿದ್ದೀನಿ ಎಂಬ ಒಂದೆ ಒಂದು ಪೋನ್ ಕರೆ ಕಳೆದ ವರುಷ ತನ್ನ ಅಕ್ಕನಿಗೆ ಮಾಡಿದ್ದೂ ಬಿಟ್ಟರೆ ಇಲ್ಲಿವರೆಗೆ ಆತನ ಪತ್ತೆ ಇಲ್ಲ.ಅಂದ ಹಾಗೆ ಅತ ಮನೆ ಬಿಟ್ಟಿದ್ದೂ 18-19ರ ಹರೆಯದಲ್ಲಿ. ನನ್ನ ವಯಸ್ಸಿನವನೆ ಅವನೂ ನನಗೀಗ 32 ವರುಷ. 

ಯಾಕೊ ಪ್ರವಾಹದ ಕೆಂಪು ನೀರು ನೋಡಿದಾಗೆಲ್ಲ ನಿನ್ನ ನೆನಪು, ನೀ ಸೋಲೋ ಜಾಯಮಾನದವ ಅಲ್ಲವೆಂಬುದು ಗೊತ್ತು, ನೀ ಮರಳಿ ಬಂದಲ್ಲಿ ನಿನ್ನ ಸ್ವಾತಂತ್ರ್ಯಕ್ಕೆ ಭಂಗ ಬರಲಾರದೂ,ಮನೆಯಲ್ಲಿ ಬೊಗಸೆ ಹಿಡಿದೂ ನಿನ್ನ ಸ್ವಾಗತಿಸುವದಂತು ನಿಜ,ಸೋಲೆಂಬುದೂ ಗೊತ್ತಿರದ ನೀ ಜೀವನದಲ್ಲಿ ಗೆದ್ದಿರುತ್ತಿ, ನಿನಗಾಗಿ ಅಲ್ಲದಿದ್ದರೂ ನಮ್ಮಗಳ ಹಿಡಿ ಸಂತೋಷಕ್ಕಾಗಿ ನೀ ಬರುತ್ತೀಯಾ ಯಾಕೆಂದರೆ ಮತ್ತೆ ಮತ್ತೆ ಹಳೆ ಸ್ನೇಹಿತರನ್ನರಸಿ ಬರೋದು ನಿನ್ನ ದೊಡ್ಡ ಗುಣ. 


Tuesday, September 4, 2012

ಬದುಕೂ-ಒಂದಷ್ಟೂ ದೂರ..

ಜೀವನದ ದಾರಿ ತುಂಬಾ ಕಠಿಣ
ಎಳಸು ಎಳಸಾಗಿ ಸಾಗಿ ಬಂದಿರುವೆ
ಅದೆ ದಾರಿಯಲ್ಲಿ ಮುಂದುವರಿದು ಸಾಗಲು
ಬೇಕು ಒಂದಷ್ಟೂ ಚೈತನ್ಯದ ಸನಿಹ
ನಿನ್ನ ಇರುಹು ನನ್ನ ಚಲನೆ ಎಂದಾದ ಮೇಲೆ
ಜೊತೆಯಾಗಬಹುದೆ ಬದುಕಿನ ಒಂದಷ್ಟೂ ದೂರ

ಒಂದಷ್ಟೂ ಕನಸ ಕಂಡು
ಈಗಷ್ಟೆ ಅದ ಹೊತ್ತು ಎದ್ದಿರುವೆ
ಬದುಕ ತುಂಬಾ ಜೊತೆ ನಡೆಯಲಾರೆ
ಇದು ಗೊತ್ತಿದ್ದೆ ಕೇಳುವೆ,
ಕನಸು ನನಸಾಗಿ ಕೈ ಹಿಡಿಯೋವರೆಗೆ
ಜೊತೆಯಾಗಬಹುದೆ ಬದುಕಿನ ಒಂದಷ್ಟೂ ದೂರ

ಸಾಗಬೇಕಿರುವ ಹಾದಿ ದೊಡ್ಡದಿದೆ
ಇದು ನನ್ನೊಳಗಿನ ಆಸೆಗಳ ದೂರದೃಷ್ಟಿ
ಇಲ್ಲವೆಂದರೆ ನಾ ನಾಳೆಗಳ ಬಲ್ಲಿದನಲ್ಲ
ಅದ ಹಂಬಲಿಸುತ್ತಲೆ ಕೇಳುವೆ
ಬಾಳ್ವೆಯ ಕಠಿಣಗಳ ಸವಾಲ್ಗಳೆದುರಿಸಲು
ಜೊತೆಯಾಗಬಹುದೆ ಬದುಕಿನ ಒಂದಷ್ಟೂ ದೂರ

ಮುಂದೆಯೂ........
ನನ್ನ ನಡಿಗೆ ಅದೆ
ಸಾಗೋ ದಾರಿಯೂ ಅದೆ
ನನ್ನ ಬದುಕೂ ಅದೆ
ಬದುಕುವ ದಾರಿಯೂ ಅದೆ
ನನ್ನ ಜೀವನವೂ ಅದೆ
ದುಡಿತದ ದಾರಿಯೂ ಅದೆ
ಸಕಾರಣಕ್ಕೆ ಸಾಗೋ ಬದುಕಿನ ಬಂಡಿಯಲ್ಲಿ
ಹೊಸ ಭರವಸೆಯ ಚಲನೆಯ ನಾ ಕಾಣಲೂ
ಜೊತೆಯಾಗಬಹುದೆ ಬದುಕಿನ ಒಂದಷ್ಟೂ ದೂರ.

Saturday, September 1, 2012

ಬೇಸರಿಸದಿರಲೂ ನನ್ನ ಮುಂದು ಕಾರಣಗಳಿಲ್ಲ...

ಕೆಲವೊಮ್ಮೆ ಹಂಗಂಗೆ ಕಾಡೊ ಬೇಸರದ
ಗುಟ್ಟು ತಿಳಿಯಲೆತ್ನಿಸಿದಷ್ಟೂ ನಿಗೂಢ
ಇಂಚಿಂಚೆ ಬಿಗಿದಪ್ಪುವ ಬೇಸರ ಕಳೆಯೋಣವೆಂದು
ಸುತ್ತಲ ಜಗದ ಇಂಬು ಹಂಬಲಿಸಿ ನೋಡುತ್ತೇನೆ
ಆಸರೆ ದೊರೆಯದಾದಾಗ ನಾ ಅರಿತುಕೊಳ್ಳುತ್ತೇನೆ
ಜಗದ ಜೀವಿಗಳೆಲ್ಲವೂ ಹೊತ್ತಿದೆ ಅಗಾಧ ದುಃಖ
ಇಲ್ಲಿ ನನ್ನದಲ್ಲದ ನನ್ನ ಬೇಸರಕ್ಕೆ ತಾವಿಲ್ಲ.

ನನ್ನ ಮನ ಮಹಲಿನ ಗೋಡೆಗೆ ತಲೆಯಾನಿಸುತ್ತೇನೆ
ಅದು ತನ್ನ ತೆಕ್ಕೆಯಲ್ಲಿ ನನ್ನ ಒಪ್ಪಿಸಿಕೊಂಡು
ಬೇಸರಿಸದಿರೆಂದು ಸಂತೈಸುತ್ತದೆ, ಪಿಸುನುಡಿಯುತ್ತದೆ
ನೇವರಿಸುತ್ತಲೆ ಹೆಡೆಮುರಿಕಟ್ಟಿ ವಾಸ್ತವವದೆದುರು ನಿಲ್ಲಿಸುತ್ತದೆ
ನಿರ್ಜೀವ ಗೋಡೆಯೊಂದರ ಸ್ಪರ್ಷದೊಂದಿಗೆ ನಾನು ಸಜೀವ
ತಿಳಿಯಪಟ್ಟಿದ್ದು ನಾನೆದುರುಗೊಂಡಿದ್ದು ನನ್ನದೆ ಅತಃಶಕ್ತಿಯನ್ನ
ಮುಂದೆಂದೂ ನನ್ನೊಳಗೆ ಜಗದ ಸಂತೈಕೆಯ ಹಂಬಲವಿಲ್ಲ.

ಜಗದೆಲ್ಲವ ನೆನಪುಗಳೂ ಪೀಕಲಾಟಗಳೂ
ನನ್ನ ತಲುಪಿ ಭಾಧಿಸುತ್ತಲಿರುತ್ತದೆ
ನನ್ನ ನೇಸರ ರಂಗಿನ ಸಂಜೆಯನ್ನ ಕಪ್ಪಾಗಿಸುತ್ತದೆ
ಆವರಿಸುವ ಕತ್ತಲನ್ನೆ ಅಪ್ಪಿಕೊಳುತ್ತೇನೆ
ಬೆಳಗನ್ನೂ ಇದಿರುಗೊಳ್ಳುವದರ ಬಗ್ಗೆ ಸಿದ್ದನಾಗುತ್ತೇನೆ
ನಿರಾಕಾರವೆಂಬ ಮುಸುಕು ಆಕಾರ ನೀಡುತ್ತೆ
ಕತ್ತಲಲ್ಲಿ ಬೆಳಕನ್ನೂ ಕಾಣಬಹುದೆಂಬುದ ತಿಳಿದು
ನಿರಾಳನಾಗುತ್ತೇನೆ ಕಾರಣ ಕಪ್ಪು ಕತ್ತಲ ಭಯ ಮುಂದಿಲ್ಲ.

ಬೇಸರ, ಕಪ್ಪು, ಕತ್ತಲೂ ಜೊತೆಗಿರುವ ನನ್ನ ಮಹಲೊಳಗೆ
ಬೆಳಕೂ, ಉಸಿರೂ,ಸಂತಸವಷ್ಟೆ ಇರಬೇಕೆಂದುಕೊಂಡಿದ್ದೆ
ನನ್ನ ಮಹಲಿನ ನಿರ್ಮಾಣ ನನ್ನದಲ್ಲದ್ದಾಗಿರಬೇಕಾದರೆ
ಮಹಲೆಂಬ ತಿಜೋರಿಯೊಳಗಿಂದ ಒಳಿತನ್ನೂ ಆರಿಸಬಹುದಷ್ಟೆ
ಆಯ್ಕೆಯ ಕಲೆಯನ್ನೂ ಒಪ್ಪವಾಗಿ ಕಲಿಸಿ ನನ್ನ ರೂಪಿಸುವ
ನನ್ನ ಮಹಲಿನ ಋಣಾತ್ಮಕತೆಗೆ ಇಂಚಿಂಚೆ ಬಾಗಿ ಎದ್ದು ನಿಲ್ಲುತ್ತೇನೆ
ಜೀವನವದಲ್ಲೂ ಬಿದ್ದೆನೆಂಬಾಗ ಎದ್ದು ನಿಲ್ಲುವದನ್ನು ಅದು ಕಲಿಸಿದೆ
ಮುಂದೆ ಬೇಸರಿಸದಿರಲೂ ನನ್ನ ಮುಂದು ಕಾರಣಗಳಿಲ್ಲ.


Friday, August 24, 2012

ಒಂದು ಹಾದಿ ಪಯಣ


ಅದೊಂದು ಪಯಣದ ಹರಳು ಕಲ್ಲಿನ ಹಾದಿಯಲ್ಲಿ ಜೋಪಾನವಾಗಿ ಅಂಗೈ ಹಿಡಿದು ನಿನ್ನ ಕರೆದೊಯ್ಯುತ್ತಿರುವಾಗ ಅಯಾಸದಿಂದ ನೀನು ಉಸ್ಸಂತ ಉಸಿರೆತ್ತಿ ಕೂತಿದ್ದೆ,ಚಪ್ಪಲಿ ಇಲ್ಲದ ಕಾಲ ತುಂಬಾ ಬೊಬ್ಬೆಗಳ ಮರೆಮಾಚಿ ಮಣ್ಣು ಮೆತ್ತಿಕೊಂಡಿದ್ದೆ,ನೀರ ಉಣಿಸಿ ದಾಹ ತೀರಿಸೋಣವೆಂದು,ಅಲ್ಲೆ ಪಕ್ಕದಲ್ಲೆ ಕಲ್ಲು ಬಂಡೆ ಮೇಲೆ ಕೂರಿಸಿ ಹಳ್ಳದ ಕಡೆಗೋಡಿ ತೆಕ್ಕೆ ಎಲೆಯನ್ನೆ ಬಟ್ಟಲು ಮಾಡಿ ಹರಿಯುವ ಆ ನೀರನ್ನು ತುಂಬಿಕೊಂಡು ಬರುತ್ತಿರಬೇಕಾದರೆನೆ ಎಕ್ಕದ ಹೂವೊಂದನ್ನು ಕಿತ್ತು ತಂದಿದ್ದೆ, ಇನ್ನೇನೂ ನೀರು ಕುಡಿದು ದಾಹ ತೀರಿ ನಿನ್ನ ಮುಖದಲ್ಲಿ ನಗು ಒಸರುತ್ತೆ ಅನ್ನೋ ಹೊತ್ತಲ್ಲೆ ಎಕ್ಕದ ಹೂವ ಫಟ್ ಅನಿಸಿ ತುದಿ ಮುರುದು ಬಟ್ಟಲು ತುದಿಯನ್ನೂ ನಿನ್ನ ಮೂಗುತಿಯಾಗಿಸಿ ನಿನ್ನ ಮುಗುಳ್ನಗೆಗೆ ಕಾದಿದ್ದೆ, ಒಸರಿದ ಮೂಗುತಿಯೊಂದಿಗಿನ ಆ ನಿನ್ನ ನಗು ನನ್ನ ಮನ ತುಂಬಿ ಅಯಾಸ ನೀಗಿತ್ತು.

ಹಾದಿ ಹತ್ತಿರದ್ದೇನಲ್ಲ, ಸಾಗಬೇಕಾದ ದೂರ ಬಹಳಿಷ್ಟಿತ್ತು ಅಲ್ವಾ?ಒಂದು ಅರ್ಧ ದಾರಿಯಷ್ಟೆ ಕ್ರಮಿಸಿಯಾಗಿತ್ತು, ದಾರಿಯುದ್ದಕ್ಕೂ ನೀನು ಕೇಪುಳ ಹೂವ ಕೊಯ್ದು ತುಟಿಗಾನಿಸಿ ಸಿಹಿ ಚೀಪಿ ಎತ್ತೆಸಿದದ್ದನ್ನೆ ಆಯ್ದೂಕೊಂಡು ನಿನಗೆ ಗೊತ್ತಿಲ್ಲದಂತೆ ಚೀಲ ತುಂಬಿಸಿದ್ದೆ,ಹಾರವಾಗಿ ಪೋಣಿಸುವದಕ್ಕಾ ಎತ್ತಿ ಆಯ್ದುಕೊಂಡಿದ್ದು??ಏನಕ್ಕೆ ಅನ್ನೋದು ನನಗೆ ಗೊತ್ತಿರಲಿಲ್ಲ ಆದರೂ ನಿನ್ನ ಹಿಂದೆಯೆ ನಿನ್ನ ಹೆಜ್ಜೆಯಾನಿಸಿ ನಡೆಯೋದು, ಕಠಿಣ ಹಾದಿಯಲ್ಲಿ ಕೈ ಹಿಡಿದು ನಡೆಯೋದು, ನಿನ್ನ ಜೊತೆ ಜೊತೆಯಾಗಿದ್ದುದೆ ಮುದ ಕೊಡುತಿದ್ದ ಕ್ಷಣಗಳವೂ, ಕಲ್ಲು ದಾರಿ ಮುಗಿದು ಗದ್ದೆ ಏರಿ ಮೇಲೆ ಮುಂದಿನ ದಾರಿ ಅಂದಾಗ ಮತ್ತೆ ಅದೆ ಜೋತಾಟ ಸಮತೋಲಿತ ನಡಿಗೆ,ಏರಿ ಪಕ್ಕದ ಎರಡೂ ಬದಿಯ ನೀರ ಮಿಳಿತದ ಗಾಳಿ ಪಾದದಿಂದಲೆ ಚಳಿಯೇರಿಸುತಿತ್ತು ದೇಹ ತುಂಬಾ.ನಿನಗೆಲ್ಲಿತ್ತೋ ಆ ಶಕ್ತಿ ಮೈಯೆಲ್ಲಾ ಗಾಳಿ ತುಂಬಿದಂತೆ ಓಡೆ ಬಿಟ್ಟೆ ನಾನೂ ನಿನ್ನ ಅನಿರೀಕ್ಷಿತ ಈ ನಡಿಗೆಯ ಹಿಂಬಾಲಿಸಿ ಸಮತೋಲನ ತಪ್ಪಿ ಗದ್ದೆ ಕೆಸರಲ್ಲಿದ್ದೆ, ಮೈ ಮುಖದ ಕೆಸರು ತುಂಬಿ ಕಣ್ಣೊರೆಸಿಕೊಂಡು ನಿನ್ನೆದುರು ನಿಂತಾಗಲೆ ನೀ ನನ್ನ ನೋಡಿ ಹೊಟ್ಟೆ ತುಂಬಾ ಬಿದ್ದೂ ಬಿದ್ದೂ ನಕ್ಕಿದ್ದು.ನಾನೂ ನಕ್ಕೆನಾ?ಉಹೂಂ ನೆನಪಿಲ್ಲ.

ಹಾದಿ ಕ್ರಮಿಸುತಿದ್ದಂತೆ ಅದೆಕೊ ನೀನೂ ಚೂರು ಚೂರು ಬದಲಾಗುತ್ತಾ ನಡೆದೆ, ಆಯಾಸವಿರಬೇಕೆಂದೂ ನಾನೂ ಸುಮ್ಮನಾದೆ,ಚೇಪೆ ಕಾಯಿ ಕಿತ್ತು ಹಸಿವ ನೀಗಿಸ ನಾ ಹೊರಟೆ ನೀನು ತಿಂದಿದ್ದು ಕಾಲು ಎಸೆದಿದ್ದು ಮುಕ್ಕಾಲು ಯಾಕೊ ಆ ಎಸೆತ ನನ್ನ ಮುಖಕ್ಕೆ ಎಸೆದಂಗಿತ್ತು.ಆದರೂ ನಿನ್ನ ಮೊಗದಲ್ಲಿ ಕಿರು ನಗು,ಅದ ನೋಡಿ ಸಂಶಯಕ್ಕೆ ಮದ್ದಿಲ್ಲವೆಂದು ನನಗೆ ನಾನೆ ಅಂದುಕೊಂಡೆ ಕಾರಣ ನಿನ್ನ ನಗೆಯಲ್ಲಿ ನನಗೆ ಕಪಠ ಕಾಣೋ ಕಠೋರತೆ ಬಂದಿರಲಿಲ್ಲ.ನೀನೊಮ್ಮೆ ಎಡವಿದೆ ಮಾಮೂಲಿನಂತೆ ಕೈ ಚಾಚಿದೆ ಇಲ್ಲಾ ನನ್ನತ್ತ ನೀನು ತಿರುಗಿಯೂ ನೋಡಲಿಲ್ಲ, ಏನಾಯ್ತೂ ನಿನಗೆ?? ಊಹೂಂ ಅರ್ಥವಾಗುತ್ತಿಲ್ಲ, ಬಹಳಷ್ಟು ಕ್ರಮಿಸಿದ ಹಾದಿ ಮುಂದೆ ಕಿಂಚಿತ್ತೂ ಆದರೆ ಅದೂ ಧೀರ್ಘವಾಗಿ ಅನಿಸತೊಡಗಿತು, ಹೀಗಿರಬೇಕಾದರೆನೆ ನಾವು ಆ ಡಾಂಬಾರು ರಸ್ತೆ ತಲುಪಿದ್ದು ಅಲ್ಲಿ ನಮಗಾಗಿ ಕಾರೊಂದು ಕಾಯುತಿದ್ದುದು ನೀನು ನಾನು ಅದನೇರಿದ್ದು, ಸಾಗಿದ ಕಾರು ಯಾರದೋ ಮನೆಯಂಗಳದಲ್ಲಿ ನಿಂತಿದ್ದು,ನೀನು ಜಿಂಕೆಯಂತೆ ಕಣ್ಣಂಚನ್ನು ಸರಿದು ಮನೆಯೊಳು ಸೇರಿದ್ದೆ,ನಾನಿನ್ನೂ ಅಂಗಳದಲ್ಲಿ ಒಂದು ತಿಳಿಯದೆ ಬಾನ ದಿಟ್ಟಿಸಿ ನಿಂತಿದ್ದೆ, ನಾವೂ ಈ ಊರ ತೊರೆಯೋಣ ಎಲ್ಲಾದರೂ ದೂರ ಹೋಗಿ ಹೊಸ ಜೀವನ ಪ್ರಾರಂಭಿಸೋಣ,ನನ್ನ ಹೊಸ ಜೀವನಕ್ಕೆ ಸಾಥ್ ಕೊಡುತ್ತೀಯಾ? ಎಂದಾಗ ದೂಸ್ರಾ ಮಾತಾಡದೆ ಉಟ್ಟ ಬಟ್ಟೆಲೆ ನಿನ್ ಜೊತೆ ಹೊರಟು ನಿಂತಿದ್ದೆ ನಿನ್ನಂಗೆ, ಆದರೆ ಇಲ್ಲೇನಾಗ್ತಿದೆ ನಾನು ಪರಕೀಯಾ ಎಂಬ ಭಾವನೆ ಅದಾಕೆ ನನ್ನೊಳಗೆ ಗಿರಕಿ ಹೊಡಿತಿದೆ ಉಹೂಂ ತಿಳಿಯದೆ ನಿಂತೆ ಇದ್ದೆ.ಸುಮ್ಮನೆ ಹಂಗೆಲ್ಲಾ ಭಾವನೆಗಳೂ ಹುಟ್ಟಲಾರವೂ ಎಂದುಕೊಳ್ಳುತ್ತಿರಬೇಕಾದರೆನೆ ಮತ್ತೆ ಕಿಲ ಕಿಲ ನಿನ್ನ ನಗೂ ಸಾಥ್ ಗೆ ಮತ್ತೊಂದು ಗಂಡು ಗಡಸು ನಗು ಕಿವಿಗೆ ರಪ್ಪಂತ ಬಡಿದಿದ್ದು, ಆಗಲೆ ನನಗೆ ಮಿಂಚಿನ ಆಘಾತ ನಿಂತಲ್ಲೆ ಗರ ಬಡಿದು, ಮನೆ ಹೊರಗೆ ಬಂದ ನೀನು ಸಂಪೂರ್ಣ ಬದಲಾಗಿದ್ದೆ , ಲಂಗ ದಾವಣಿ ಬದಲಾಗಿ ಜೀನ್ಸ್ ಟೀ ಶರ್ಟ್ ಚಪ್ಪಲಿ ಇಲ್ಲದ ಪಾದಕ್ಕೆ ಹೈಹೀಲ್ಡ್ ಆಕ್ರಮಿಸಿತ್ತು,ನಿನ್ನಾಸರೆಗೆ ಅವನ ತೋಳ್ಗಳಿತ್ತು,ಈತನನ್ನೂ ಸೇರಿಸೋದಕ್ಕೆ ಸಹಕರಿಸಿದ್ದಕ್ಕೆ ಥ್ಯಾಂಕ್ಸ್ ಎಂಬ ಒಂದೆ ಪದವಾಖ್ಯವನ್ನುಸುರಿ ಮತ್ತೆ ಕಾರೇರಿದ್ದಿ ಮುಂದಿನ ಪಯಣಕ್ಕೆ ನೀ ಆತನ ಜೊತೆ ಸಿದ್ದಗೊಂಡಿದ್ದಿ, ನಾನೂ ಗುಡುಗು ಬಡಿಸಿಕೊಂಡವನಂತೆ ಹೆಜ್ಜೆಯ ಮರೆತು ಅದಾರದೊ ಮನೆಯಂಗಳದಲ್ಲೆ ಕುಸಿದಿದ್ದೆ,ಕಾರು ಸ್ಟಾರ್ಟ್ ಆಗೋ ಭರದಲ್ಲಿ ರಾಚಿದ ದೂಳು ಮತ್ತೆ ಮುಖ ಸವರಿತ್ತು.ನಾನು ನನ್ನ ಗುರುತನ್ನೆ ಮರೆತ ಕ್ಷಣ.ಆ ಪರಿಸ್ಥಿತಿಯಲ್ಲೂ ಗಟ್ಟಿಯಾದ ಒಂದು ನಿರ್ಧಾರ ಮೂಡಿದ್ದು ಏನೆಂದರೆ ನಾನಿನ್ನೂ ಏಮಾರಬಾರದೂ ಈ ಏಮಾರುವಿಕೆಯ ಶಕೆ ನನ್ನ ಜೀವನದಲ್ಲಿ ಇಂದಿಗೆ ಕೊನೆಯಾಗಬೇಕು!!!.ಚೀಲದಲ್ಲಿ ಇವಳು ಚೀಪಿ ಎಸೆದಿದ್ದನ್ನೂ ಆಯ್ದು ಇಟ್ಟುಕೊಂಡಿದ್ದ ಕೇಪುಳದ ಕೆಂಪು ಹೂವು ಬಾಡಿ ಮುರುಟಿ ಕಪ್ಪಗಾಗಿತ್ತು.

ಎಲ್ಲೋ ಸೈಕಲ್ ಬೆಲ್ ಸದ್ದು ಕಿವಿಗೆ ಬಿದ್ದು ಮತ್ತೆ ಸ್ಥಬ್ದ ಒಂದರೆಕ್ಷಣದಲ್ಲಿ ಮನೆ ಕಾಲಿಂಗ್ ಬೆಲ್ಲು ರಿಂಗಣಿಸತೊಡಗಿತು.ಹೌದು ಅದು ನಸುಕು ನಾನಿಷ್ಟೂ ಹೊತ್ತು ಕಂಡಿದ್ದು ಕನಸು, ಹಾಲಿನವನೂ ಬಂದು ಸೈಕಲ್ ಬೆಲ್ ಹೊಡಿಯೋದು ನಾನು ಎದ್ದು ಮನೆಕೆಳಗಿಳಿದು ಬಂದು ಹಾಲು ಪಡೆದು ಬರೋದು ಪದ್ದತಿ, ಇವತ್ಯಾಕೋ ನಾ ಬಾರದ್ದನ್ನು ಕಂಡು ಮನೆ ಬಾಗಿಲಿಗೆ ಬಂದು ಬೆಲ್ ಹೊಡೆದಿದ್ದ, ದಡಬಡಾಯಿಸಿ ಹೊದಿಕೆ ಬಿಸುಟು ಹಂಗಂಗೆ ಬೆಡ್ ಮೇಲೆ ಹರವಿ ಎದ್ದು ಹಾಲಿನವನನ್ನ ಎದುರುಗೊಂಡಿದ್ದೆ.ಅಯ್ಯೋ ಕನಸೂ ಕೂಡ ಏಮಾರೋದೆ ಬೀಳುತ್ತಲ್ಲ, ಹಳ್ಳಿಗನಾಗೆ ಗುರುತಿಸೋದು ನನ್ನ ಕನಸುಗಳಿಗೂ ಇಷ್ಟನೆ ಅಲ್ವಾ ಎಂದು ನೆನೆದು ನಸು ನಗುತ್ತಾ, ನಸುಕಿನಲ್ಲಿ ಬಿದ್ದ ಕನಸು ನನಸಾಗುತ್ತೆ ಅನ್ನೋದು ಯಾರೋ ಹೇಳಿದ್ದು ನೆನಪಾಗಿ...... ನನಸಾಗೊದಿದ್ದರೆ ಕನಸಿನ ಕೊನೆ ನಾ ಏಮಾರುವ ನನ್ನ ಜೀವನದ ಶಕೆ ಇಲ್ಲಿಗೆ ಕೊನೆಯಾಗಲಿ ಎಂಬ ಕನಸ ನಿರ್ಧಾರವೆ ನನಸಾಗಲಿ ಎಂದೆಣಿಸುತ್ತಾ ಜಗ್ ತುಂಬಾ ನೀರೆತ್ತಿ ಮುಖಕ್ಕೆ ಚಿಮುಕಿಸಿದೆ.ವಾಸ್ತವಕ್ಕೆ ಕೊಂಚ ಕೊಂಚವೆ ಹಿಂದುರಿಗಿದೆ ಕನಸ ಕೊನೆಗೆ ಹೊರಳಿದಂತೆ. 

ಚಿತ್ರ ಕೃಪೆ :- ಗೂಗಲ್

Tuesday, August 21, 2012

ಈಗೇನ್ ಮಾಡೋಣ?

ಧೋ ಎಂದು ಧರೆಗುರುಳೋ ಮಳೆಯ ನಡುವೆ
ಜೇಬಲ್ಲಿ ಮೊಬೈಲಿನ ಕಿಣ ಕಿಣ, ವೈಬ್ರೆಷನ್ ಕಚಕುಳಿ
ಸಮಯವದೂ ಮಾಮೂಲಿ ಕರೆಯೊಂದರದೂ
ಮೊಬೈಲೆತ್ತಿದರೆ ಮಳೆ ನೀರಿಗೆ ತೊಪ್ಪೆ
ಸುಮ್ಮನಿದ್ದರೆ ಮನಸು ತುಂಬಾ ಹೊಯ್ದಾಟ
ಈಗೇನೂ ಮಾಡೋಣ?

ಮಳೆಯೂ ನನ್ನಿಷ್ಟದ್ದೆ, ಜೊತೆಗೆ ಬಂದ ಕರೆಯೂ ಕೂಡ
ಇಷ್ಟಗಳ ನಡುವೆ ಇವೆರಡನ್ನೂ ಅಪ್ಪಿಕೊಳಲು
ಮಗದೊಂದಿಷ್ಟದ ನನ್ನ ಮೊಬೈಲನ್ನೂ ಆಹುತಿ ಕೊಡಲೆ
ಇಲ್ಲಾ ಒಂದಿಷ್ಟವನ್ನೂ ಒಲ್ಲದೆಯೆ!! ದಕ್ಕಿದ್ದೆ ಇಷ್ಟೆಂದೂ ಬಿಟ್ಟುಕೊಡಲೆ
ಎಲ್ಲವೂ ಬೇಕೆಂಬ ಮನಸ್ಥಿತಿಯೊಳಗೆ ಯೋಚನೆಗೆ ಬಿದ್ದೆ
ಈಗೇನೂ ಮಾಡೋಣ?

ಕರೆ ರಿಂಗಣಿಸಿ ನಿಂತರೂ ಮಳೆ ನಿಂತಿಲ್ಲ
ಮಳೆ ನಿಂತಾಗ ತೊಪ್ಪೆಯಾದ ಜೇಬು ತಡಕಿ ನೊಡಿದರೆ ಮೊಬೈಲೂ ನೆನೆದಿದೆ.
ದಡ್ಡ ನಾನೂ ಕರೆ ಸ್ವಿಕರಿಸಿಯಾದರೂ ತೊಪ್ಪೆಗೊಳಿಸಬಹುದಿತ್ತು
ಆಹುತಿಯಾಗುತ್ತೆ ಉಳಿಸಿಕೊಳ್ಳಬೇಕೆಂಬ ಆಸೆಗೆ ಬಿದ್ದು ಎಡವಿದೆ
ಯಾಕೋ ಸತ್ತು ಮಲಗಿದೆ ರಿಂಗಣಿಪ ಕರೆ ಎಂದುಕೊಂಡಿದ್ದೆ
ಅಯ್ಯೋ ಸಿವ ಸತ್ತಿದ್ದು ಒಂದಿಷ್ಟದ ನನ್ ಮೊಬೈಲೂ
ಈಗೇನೂ ಮಾಡೋಣ?

ಅತ್ತ ಕರೆಯೂ ಸತ್ತಿತೂ, ಇತ್ತ ಮೊಬೈಲೂ ಕೆಟ್ಟಿತೂ
ಮಳೆ ಮತ್ತೆ ಬಂದು ನಿಂತು ತಣಿಸಿ ಆಟವಾಡಿ ಅದೂ ನಿಂತಿತು,
ಹೊಸತೊಂದು ಮೊಬೈಲೂ ಖರೀದಿಸಿದರೂ ಬರಲಾರದ ದೂರ
ಕ್ರಮಿಸಿಯಾಗಿತ್ತು ನವಿರು ನೀಡುತ್ತಲಿದ್ದ ದಿನವೂ ರಿಂಗಣಿಸುತಿದ್ದ ಕರೆ.
ನಾನೆಲ್ಲವೂ ದಕ್ಕಿಸಿಕೊಳ್ಳಬೇಕೆಂಬುದರೊಳಗೆ ಕಳಕೊಂಡಿದ್ದು ಬಹಳ
ಎಲ್ಲದಕ್ಕೂ ಹೆಳೆ ಮಾತ್ರ ಮಳೆ,
ಫಟಾಫಟ್ ನಿರ್ಧಾರ ಶಕ್ತಿ ದೂರಾದಾಗ ಹಿಂಗೆ ಆಗೋದು
ಮಿಂಚಿ ಹೋದ ಕಾಲವಂತೆ ಚಿಂತಿಸಬಾರದಂತೆ.
ಇದನೆಲ್ಲಾ ಹೇಳಿ ಈಗೇನ್ ಮಾಡೋಣ?

ಮುಗ್ದನ ಇಣುಕು

ಮುಗ್ದತೆ ಎಂದರೆ ಎಲ್ಲವೂ ಒಪ್ಪಿಕೊಳ್ಳುವ ಮನಸ್ಥಿತಿ
ಬೆನ್ನಿಗೆ ಬಾಕು ತುದಿ ತಗುಲಿದ್ದರೂ
ಇನ್ನೂ ಒಂದೊತ್ತಲ್ಲಿ ನಂಬಿದವನೆ ಇರಿದು ಕೊಲ್ಲಬಹುದಾಗಿದ್ದರೂ
ನಮ್ಮವರೆಂಬ ವ್ಯಾಮೋಹದೊಳಗೆ ತನ್ನನ್ನೆ ಮರೆತ ನಗಣ್ಯತೆ

ಅರಿವಾಗುವಾಗ ಆತನೆ ಜಗಕೆ ಸಲಾಮು ಹೊಡೆದಿರುತ್ತಾನೆ
ಜೊತೆಗಾರನಾತ ವಿಕಟಹಾಸದಿ ನಗುತ್ತಿರುತ್ತಾನೆ
ಜಗವೆ ಇಷ್ಟೂ ಮನದೊಳಗೆ ಸ್ವಾರ್ಥತೆ ,ಸಭ್ಯತೆ ತೋರ್ಪಡಿಕೆಯ ಕಳಕಳಿ
ಆಗಲೂ ಧರ್ಮಾರ್ಥ ಸತ್ತ ಆತನ ಕಣ್ಣಲ್ಲಿ ನಂಬಿಕೆಯ ಇಣುಕು ಮುಸುಕು ಮುಸುಕು

ಎಲ್ಲಾ ಭ್ರಮೆ, ಆತ ಸಾಯಲ್ಲ ಇದೆಲ್ಲಾ ಕಲ್ಪನೆ
ಸಾಯಬೇಕಾದ್ದೂ ಆತನಿಗೆ ಕಫಟ ಮಾಡಿದ ಮನಸುಗಳೂ
ನಂಬಿಕೆ ಘಾತಕಗಳೂ, ಎರ್ರಾ ಬಿರ್ರಿ ನಂಬುವ ಆತನದೆ ಮುಗ್ದತೆ
ವ್ಯಕ್ತಿಗಳಲ್ಲದೆ ನೆಚ್ಚಿದ ವ್ಯಕ್ತಿ ಗುಣ ಅಣಕಿಣಂತೆ ಕಂಡರೂ ಅದು ಬದುಕಬೇಕು.

ಇಲ್ಲಾ!!! ಕಪಟದೊಳಗಿನ ಮನಸುಗಳಿಗೆ ಬದುಕಿಲ್ಲ
ದಿನವೊಂದು ಕಾದಿರುತ್ತೆ ಕುಳಿತು ದುಃಖಿಸಲು
ಸಂತೈಸಲೂ ನರ ಹುಳವೂ ಇಲ್ಲದ ಪರಿಸ್ಥಿತಿಯೊಳಗೆ
ಬದುಕು ತುಂಬಾ ಕತ್ತಲನ್ನೆ ಹೊದ್ದು ಮಲಗಬೇಕೂ, ಬದುಕು ಮುಗಿಸಲೂ.

ನೈತಿಕೆಯೊಳಗೆ ಅನೈತಿಕತೆ ಹೊದ್ದು ಮಲಗಿದವರೆ
ಎಚ್ಚೆತ್ತೂಕೊಳ್ಳಿ ಎಲ್ಲವ ಕಳಕೊಳ್ಳುವ ಮೊದಲೂ,
ನೈತಿಕತೆ ಅನ್ನೋದು ಮಾರಾಟಕ್ಕಿಡೋ ವಸ್ತುವಲ್ಲ
ಅರಿತರೆ ಜೊತೆಗಿದ್ದವರೊಂದಿಗೆ ಎಲ್ಲರದೂ ಬಾಳು ಸ್ವರ್ಗ
ಇದಲ್ಲದಿದ್ದರೆ ಕೊಲೆಗಾರನಿಗೂ ಇವರೀಗೂ ವ್ಯತ್ಯಾಸ ನಾ ಹುಡುಕಲಾರೆ
ಕಾರಣ ಜೀವ ಕೊಲೆಗಿಂತ ಜೀವಂತಿಕೆಯ ಕೊಲೆ ಭರ್ಭರ.

Friday, August 3, 2012

ನೋವ ರಂಗಿನಾಟ.

ಮಾತೆಂಬುದು ಕರುಳ ಸುತ್ತ ಮುರುಟಿದಾಗ
ನಾಲಗೆಯ ಬುಡದಲ್ಲಿ ನೋವೆದ್ದು ಎಲ್ಲವೂ ಸ್ಥಬ್ದ
ಹಿಡಿದಿಟ್ಟ ಗಂಟಲ ಪಸೆಯಾರಿ ಅದು ಬರಡು .

ಯೋಚನೆಗಳು ನೆತ್ತಿ ಸುತ್ತ ಹುಟ್ಟುತ್ತಲೆ ಸತ್ತಾಗ
ನರನಾಡಿಯೆಲ್ಲ ಹಿಡಿದು ಬಿಗಿದಪ್ಪಿದ ಅನುಭವ
ನೋವು ಕಂಡ ಹಣೆ ತುಂಬಾ ಬೆವರ ಪನಿ .

ವಿಶ್ರಾಂ
ತಿ ಬಯಸಿದ ಬೆನ್ನ ಅಡ್ಡವಾಗಿಸಿದಾಗ
ಬೆನ್ನು ಮೂಳೆಯಲ್ಲೆ ಮುರಿದ ನೋವು
ಕೀಲಸಂಧಿಯ ನೇರವಾಗಿಸಲಾಗದೆ ನಾನೆ ವಕ್ರ.

ಪಾದದಡಿಯ ಧೃಡ ಹೆಜ್ಜೆಯಲ್ಲೂ
ಬೆಂಕಿಯ ಉರಿ, ಬೆಳೆಯುತ್ತೆ ತೊಡೆಯೆತ್ತರಕ್ಕೆ
ಕುಸಿದರೆ ಮತ್ತೇಳಕೊಡದ ಮೊಣಗಂಟು.

ಕೂತಲ್ಲಿ ನಿಂತಲ್ಲಿ ಇದ್ದಕ್ಕಿದ್ದಂತೆ ಕಾಡುವ ನೋವ
ಹೊಕ್ಕುಳ ಸುತ್ತಲೂ ಹೊತ್ತು ನಾ ವಿಲ ವಿಲ
ನರ ಎಳೆದು ಹೃದಯ ಬಡಿತವ ಕೊಂದಂತ ಘಳಿಗೆ

ದೇಹದ ತುಂಬಾ ಇಂಚಿಂಚೂ ಗಾಯ
ಅದು ದೈಹಿಕ ನೋವಾದರೂ ನೋವಲ್ಲ
ಭಾಧಿಸದೆ ಅವು ಗುಣಗೊಂಡು ಪ್ರಶಾಂತ.
ಹೆಣ ಭಾರವೆನಿಸಿದ್ದೂ ನೋವುಗಳ ಮೂಲ
ಅದು ಮನಸಿನೊಳಗೆ ನಡೆವ ತುಮುಲ
ಹೃದಯವ ಬಾಧಿಸಿದ ನನ್ನ ಸುತ್ತಲಿನ ಪ್ರವರ.




Tuesday, July 31, 2012

ಕನಸಿನೊಂದಿಗಿನ ಜೀವ.

ಎಡ ಬಲ ತಿರುಗಿದರೆ ಏಟು
ಮೈ ಕಸುವೂ ಜಾರುತ್ತಿದೆ
ನಂಬಿಕೆ ಎಂಬುದು ನನ್ನನ್ನೆ ನೋಡಿ
ಗಹಗಹಿಸಿ ನಗುತ್ತಿದೆ
ಆದರೂ ನಾನು ಬದುಕುತ್ತಿದ್ದೆನೆ
ಥುತ್ತ್ ಎಂದು ನನಗೆ ಉಗಿದುಕೊಂಡು

ನನ್ನದೆ ಜೀವನದ ತಿರುವುಗಳು
ನನಗೆ ಗೊತ್ತಿಲ್ಲದಂತೆ ಇತರವೂ ಆದಾಗ
ಭಾಸವಾಗುವುದೆನಗೆ ನಾ ತಿರುಗುವ ಬುಗರಿ
ತಿರುಗಿಸುವ ಸೂತ್ರದಾರ
ಅಡ್ಡ ಬಿದ್ದು ನಗುತಿಪ ಖುಷಿಯೊಂದಿಗೆ
ಗಾಳಿಯಲ್ಲಿ ದಾರವ ಬೀಸುತ್ತಾ.

ಇಷ್ಟೆನಾ ಬದುಕು ಸಂಬಂಧ?
ಹೆತ್ತವರಿಂದ ಹೆಚ್ಚು ಅಂದುಕೊಂಡದ್ದು
ಮರೀಚಿಕೆಯಾ................
ತಾಳಲಾಗುತ್ತಿಲ್ಲ ಒತ್ತರಿಪ ದುಃಖ ಬೇರೆ ಜೊತೆಗೆ
ಕರ್ಮ ನಾ ಪಡೆದಿದ್ದೆ ಇಷ್ಟಾ ?

ಎಲ್ಲವನ್ನೂ ಕಳೆಯಲೂ ನಾ
ಚಿಂತೆ ಪಡಲಿಲ್ಲ....
ಸಲಹಬೇಕಿತ್ತು ನಾ ಹೊಸತೊಂದು ಸಂಬಂಧಗಳನ್ನ
ಒಡ ಹುಟ್ಟಿದ ಸ್ಥಾನದಲ್ಲಿ ಎತ್ತಿ ಕೂರಿಸಿದೆ
ಬೇರೆ ಮಾತುಗಳೆ ಇರಲಿಲ್ಲಾ
ಆದರೆ ನಾನೀಗ ಪರಕೀಯ ಜೊತೆಗೆ ಶತ್ರು
ಮಾಡಿದ ತಪ್ಪೇನೂ ??? ಗೊತ್ತಿಲ್ಲ
ಆದರೂ ನಾ ಅಪರಾಧಿ, ಪ್ರೀತಿ ವಂಚಿತ.

ಜೀವಂತ ಮನುಷ್ಯನ ಗ್ರಹಿಕೆ ಮರೆತು
ಕಲ್ಲು ಬೆಂಚು ಅಳುತ್ತಿರುವದರ ಗ್ರಹಿಸಬಲ್ಲರೂ,
ತಾನೆ ಮಾಡಿದ್ದೂ ಸರಿ..
ತನ್ನದೆ ಹಠ ಮೇಲೂ ಅನ್ನೋರರ ಒಳಗೆ
ಈ ಜೀವ ತನಗೊಂದು ತಾವ ಬಯಸಿ
ನಿರೀಕ್ಷಿಸೋದ ಗುರುತಿಸಕ್ಕೆ ಗ್ರಹಿಕೆಗಳ ಕಣ್ಣೆ ಕುರುಡು

ಬಿರುಗಾಳಿಲೆದ್ದ ಸಣ್ಣ ಧೂಳ ಕಣ
ಕಣ್ಣ ಪಾಪೆಗೆ ಸಿಲುಕಿ ಎಲ್ಲಾ ಮಬ್ಬು ಮಬ್ಬು
ಒಂದು ಬಿಂದಿಗೆ ನೀರ ತಂದು
ಕಣ್ಣ ಸಲಹುವವರೂ ಯಾರೂ ಇಲ್ಲ
ಸದ್ಯಕ್ಕೆ ನಾನು ಕುರುಡ
ಎಲ್ಲವೂ ಕಂಡರೂ ನಾನು ಅಸ್ಪಷ್ಟ
ಜಗವೆಲ್ಲವ ಮರೆತ ನನ್ನದೆ ಲೋಕದೊಳಗೆ
ನಾನೊಬ್ಬ ಭ್ರಾಮಕ ಜೀವಿ
ಕನಸುಗಳ ಹೊತ್ತ ಕನಸುಗಾರ.

ಬುದ್ಧಿವಂತರ ಕೂಪ

ಬೆಳೆಯುತ್ತಾ ಸಂಬಂಧಗಳ
ಕವಲುಗಳನ್ನು ಬೆಳೆಸಿಕೊಂಡಿರುವೆ
ಕವಲುಗಳು ಬೇರುಗಳಾಗಿ
ನನ್ನ ಪೋಷಿಸುತ್ತಲಿತ್ತು.
ತಾಯಿ ಬೇರು ಮೂಲವಾದರೆ
ಕವಲೂ ಬೇರೂಗಳು ನನ್ನ ಅಸ್ಥಿತ್ವ
ತೊರೆಯಬಹುದಾದ ಮಾತೆ ಇಲ್ಲ.

ಸುತ್ತಲೂ ಗಲೀಜು
ಅದರಲ್ಲೂ ಸ್ವಚ್ಚ ನೀರ ಹುಡುಕಾಡಿ
ಉಣ ಬಡಿಸುತಲಿತ್ತು ನನ್ನ ಬೇರುಗಳು
ಕ್ರಮೇಣ ಗಲೀಜನ್ನ ಮೆತ್ತಿಸಿಕೊಂಡ
ಬೇರುಗಳಿಗೆ ನೀರ ದಾಹ
ಉಪಾಯವಿಲ್ಲದೆ ಗಟಾರದ ನೀರ ಪಾನ
ನನ್ನ ಅಸ್ತಿತ್ವವೆ ಕೊಚ್ಚೆಯಾದಾಗ
ನಾನೂ ಕೊಚ್ಚೆ ..ಮೈಹತ್ತಿಸಿಕೊಳ್ಳಲಾಗದೆ
ನನ್ನೊಳಗೆ ಹುಟ್ಟಿದ್ದು ಒಂದಷ್ಟು ಆಕ್ರೋಶ.

ಧರ್ಮವೆಂಬ ನೆತ್ತಿ ಶೂಲ
ಜೊತೆಗೊಂದಿಷ್ಟು ಒಣ ಸಂಸ್ಕೃತಿಯ ಭಾರ
ಈ ಕೊಳಕಿನೊಳಗೆ ಹೆಣ್ಣು ಮಾತ್ರ
ಸಂಸ್ಕೃತಿಯ ಹರಿಕಾರಳಾದ ತಮಾಷೆ,
ಯಾವುದೋ ಸಿದ್ದಾಂತ
ಅಸಂಬದ್ದ ನೀತಿ ನಿಯಮ ತರ್ಕದೊಳಗೆ
ಕಣ್ಣು ಮುಚ್ಚಿ ಹೆಣ್ಣ ಭೋಗಿಸಿದ್ದು
ತಮ್ಮ ತೃಷೆಯ ತೀರಿಸಿಕೊಂಡಿದ್ದು
ಲೋಕಕ್ಕೆ ತಿಳಿಯಲಿಲ್ಲವೆಂಬ ಭ್ರಮೆಯಲ್ಲಿ
ಮುಳುಗಿ ಎದ್ದಾಗ ಹುಟ್ಟಿದ ಹೆಸರು ಸಂಸ್ಕೃತಿ.

ಬುದ್ದಿವಂತರು ಎನಿಸಿಕೊಂಡು
ಬುದ್ದಿಹೀನರಾಗಿ ಕೂಪದೊಳಗೆ ಬಿದ್ದೀವಿ
ಮೋರಿಗಳೊಂದಷ್ಟು ಗಟಾರವ ಹೊತ್ತು
ಕೂಪಕ್ಕೆ ಬಂದು ಸೇರುತ್ತೆ
ನಮಗದುವೆ ಅಮೃತ
ಮೊಗೆದಪ್ಪಿ ಕುಡಿಯುತಿದ್ದೇವೆ
ಕೊಳಚೆ ಯಾವೂದೂ ಶುದ್ದ ಯಾವೂದು
ತಿಳಿಯಲಾರದ ಮನಸ್ಥಿತಿ ನಮ್ಮದೂ
ನಮ್ಮ ತಲೆ ತುಂಬಾ ಬುದ್ದಿವಂತರೆಂಬ ಜೊಳ್ಳು.

ತೊಳೆಯಬೇಕಿದೆ ನನ್ನ ಅಸ್ತಿತ್ವದ ಬೇರ ಕೊಳಚೆ
ಅಳಿಯಬೇಕಿದೆ ಸ್ವಾರ್ಥ ಸಾಧಕರು ಹೆಣ್ಣ ಬದುಕ ಮುಂದೆ
ಮಡಿಯಾಗಬೇಕಿದೆ ಸುತ್ತಲೂ ಹಬ್ಬಿರುವ ಗಲೀಜು ಸರಿಸಿ
ಶುದ್ದಿಕರಿಸಬೇಕಿದೆ ನನ್ನ ಉಸಿರು, ನೆಲ, ಜಲವನ್ನೂ
ಅಸ್ತಿತ್ವವನ್ನೂ ಕೊಂದುಕೊಳ್ಳದೆ ಬದುಕಬೇಕಿದೆ
ಅಲ್ಲಿವರೆಗೆ ..........................

ನನ್ನ ಮೇಲಿನ ಅಸಹ್ಯವನ್ನು ನಾನೆ ಸಹಿಸಿಕೊಳ್ಳಬೇಕಿದೆ.

Monday, July 30, 2012

ನಗೆಪಾಟಲಿಗೀಡಾದ ಬುದ್ದಿವಂತರೆಂದು ಕರೆಸಿಕೊಂಡ ಮೂರ್ಖನಾಡು

ಥೋ ದರ್ಬೇಸಿಗಳ ನಿಮ್ಗೇನಾದ್ರೂ ಮಾನ ಮರ್ಯಾದೆ ಇದೆಯಾ, ಅಲ್ಲಾ ಆ ಹುಡುಗರು ನಿಮ್ಮ ಅಕ್ಕ ತಂಗಿರ ಹೊತ್ತೊಯ್ದಿದ್ರಾ?ಅಲ್ಲಾ ಬೀದಿಲಿ ಬಿದ್ದು ಇತರರಿಗೆ ತೊಂದರೆ ಮಾಡ್ತಿದ್ರಾ?ಅವ್ರೆನೂ ಬಿಕಿನಿಯಲ್ಲಿ ಅಥವಾ ಬೆತ್ತಲೆಯಾಗಿ ನಿಂತಿದ್ರಾ? ನಿಮ್ಮ ಅಕ್ಕ ತಂಗಿ, ಮದುವೆ ಆಗಿದ್ರೆ ನಿಮ್ಮಗಳ ಹೆಂಡತಿ ತೊಡುವ ಬಟ್ಟೆನೆ ಹಾಕೊಂಡಿದ್ರು, ಅದುಕ್ಕೆ ಶೂರ್ಪನಕಿ ಅನ್ನೊ ಪಟ್ಟ ಕಟ್ತಿರಾ??? ನಿಮ್ಮಗಳ ಮನೆ ಹಾಳಾಗೋಗ. ಅಲ್ಲಾ ಸಂಸ್ಕೃತಿ ಅಂತಾ ವರಾತ ಶುರುವಿಟ್ರಲ್ಲ ಯಾವ ಮನೆ ಹಾಳು ಸಂಸ್ಕೃತಿ ನಿಮ್ದು?ಇದು ತಾಲಿಬಾನ್ ರಾಷ್ಟ್ರಾನಾ ಮುಖ ಮುಚ್ಕೊಂಡು ದೇಹ ಮುಚ್ಕೋಂಡು ಬುರ್ಕಾ ಹಾಕಿ ಓಡಾಡಕ್ಕೆ?ಕಚ್ಚೆ ಹರುಕರಾ ಕೇಳಿ ಇಲ್ಲಿ ಸ್ವ ಇಚ್ಚೆಯಿಂದ ಭಾಗಿಯಾಗಬಹುದಾದ ಕಾಮ ಕೇಳಿ ಕೂಡ ವ್ಯಭಿಚಾರ ಅತ್ಯಾಚಾರ ಅನ್ನೋ ಹೆಸರು ಪಡೆಯಲಾರದು.ಅಂತಿದ್ದಲ್ಲಿ ಏನೂ ನಡೆಯದೆ ಇರುವಲ್ಲಿ ರೇವ್ ಪಾರ್ಟಿಯೆಂದು ಹೆಸರು ಕೊಟ್ಟರಲ್ಲ ಷಂಡರೆ??? ನಿಮ್ಮಗಳನ್ನು ಹೆಣ್ಣೂ ಮಕ್ಕಳಿರಿರುವ ಮನೆಗೆ ಬಿಟ್ಟು ಕೊಳ್ಳುವದೆ ಅಸಹ್ಯ, ಯಾಕೆಂದರೆ ನಿಮ್ಮೊಳಗಿರುವದು ಹೆಣ್ಣೆಂಬುದು ಭೋಗ ವಸ್ತು, ಹೆಣ್ಣು ಪ್ರೀತಿ ವಂಚಿತ ಪ್ರೇತಾತ್ಮ ನಿಮ್ಮಗಳದ್ದು.ಹೆಣ್ಣನ್ನು ಕಾಮ ದೃಷ್ಟಿಯಿಂದ ನೋಡೋ ಕಾಮ ಪಿಪಾಸುಗಳು ನೀವು, ಅಪ್ಪ ಅಮ್ಮ ಅಕ್ಕ ತಂಗಿ ಸಂಬಂಧಗಳನ್ನೆ ಕಾಣದ ಹೊಲಸು ಜೀವ ನಿಮ್ಮದಿರಬಹುದು. ನೀತಿ ಕೆಟ್ಟ ಮತೀಯಾವಾದಿಗಳೆ ಕೇಳಿಲ್ಲಿ ನಿಮ್ಮಗಳ ಜನ್ಮ ಸಾರ್ಥಕಾವಾಗಬೇಕಿದ್ದರೆ ಪುರುಷ ಪೌರುಷವ ಕೈಬಿಡಿ ಹೆಣ್ಣಿಗೂ ಸಂಪೂರ್ಣ ಸ್ವಾತಂತ್ರ್ಯವ ಕೊಟ್ಟು ನೋಡಿ, ಆಕೆಗೂ ಉಸಿರಾಡಲೂ ಬಿಡಿ. ಆಕೆ ಬಿಕಿನಿ ಮತ್ತೊಂದು ಡ್ರೆಸ್ ಮಾಡೊ ಹಂತಕ್ಕೆ ಬಂದರೆ ಅದು ನಿನ್ನ/ನಿಮ್ಮ ಮನೆ ಬೆಳೆಸಿದ ಸಂಸ್ಕೃತಿಯ ಹೊರ ಸೂಸುತ್ತದೆಯೆ ಹೊರತಾಗಿ ಆಕೆಯದ್ದಲ್ಲ ಅನ್ನುವ ನಿಜವನ್ನು ಅರಿ.
ಏನ್ ಹಿಂದೂ ?ಮನುಷ್ಯತ್ವವನ್ನು ಹೊರತಾಗಿರೋ ಧರ್ಮ ನಿಮ್ದು?ಸಮರ್ಥಿಸಿಕೊಳ್ತೀರಾ ಹಲ್ಕಟ್ ಗಳಾ??? ನಾಳೆ ನಿಮ್ಗಳ ಹೆತ್ತಾಕೆಯೆ ಪಾರ್ಟಿಯಲ್ಲಿ ಕುಂತಿದ್ದರೆ ಆಕೆಗೆ ಹೊಡೆಯುವದನ್ನೂ ಸಮರ್ಥಿಸಿಕೊಳ್ತೀರಾ??? ಆವಾಗಲೂ ಮೈಸೂರಲ್ಲಿ ಹಿಂದೂ ಹುಡುಗಿಯನ್ನೂ ರೈಲಿಂದ ತಳ್ಳಿದರೂ ಹಾಗೆ ಅಸ್ಸಾಂ ಘಟನೆಯನ್ನೂ ಮುಂದಿಟ್ಟು ಪ್ರಶ್ನಿಸುತ್ತೀರಾ???ಈ ಘಟನೆಗಳನ್ನೂ ಯಾರು ಸಮರ್ಥಿಸಿಕೊಂಡಿಲ್ಲ ಅಥವಾ ಅದರಿಂದ ವಿಕೃತ ಆನಂದವನ್ನೂ ಯಾರು ಪಟ್ಟಿಲ್ಲ ಮೂರುಕಾಸು ಚಿಲ್ರೆಗಳಾ?? ನೂರಾರು ಮೈಲುಗಳ ದೂರ ಕುಳಿತು ಪ್ರಶ್ನಿಸದೆ ಏನೂ ಮಾಡ್ತೀರಾ ಸ್ವಾಮಿ. ದಕ್ಷಿಣ ಕನ್ನಡದ ಪರಿಸ್ಥಿತಿ ನೋಡಿ ಅಲ್ಲೆ ಬಾಳಿ ಬದುಕಿದವರಿಗೆ ಗೊತ್ತು. ಸಮರ್ಥಿಸಿ ಮಾರುದ್ದ ಬರೆಯುವ ಬಿಕನಾಸಿಗೇನ್ ಗೊತ್ತು.ನಿಮ್ಮಗಳ ಈ ರಂಪಾಟದ ಫಲವೆಂಬಂತೆ ಎಲ್ಲಾ ಮೂಲಭೂತ ಸೌಲಭ್ಯವಿದ್ದಾಗಿಯೂ, ನಮ್ಮೂರಿಗೆ ಒಂದೆ ಒಂದು ಔದ್ಯೋದಿಕ ಉದ್ದಿಮೆಗಳೂ ಬರಲ್ಲ, ಮೂಲ ನೆಲೆಯಲ್ಲಿ ಉದ್ಯೋಗ ಸೃಷ್ಟಿಯಾಗ್ತಿಲ್ಲ, ಹೋಗಲಿ ಸಾಂಪ್ರಾದಾಯಿಕ ಕೃಷಿ ವಿಧಾನಗಳಾದರೂ ಉಳುಕೊಂಡಿದೆಯೋ? ಅದೂ ಇಲ್ಲ,ಇದ್ದ ಬದ್ದ ಫಲವತ್ತೂ ಜಮೀನೂಗಳನ್ನೂ ರಬ್ಬರ್ ಬೆಳೆ ಆಕ್ರಮಿಸಿಕೊಂಡಿದೆ ಅಲ್ಲಿಗೆ ಆ ಜಮೀನಿನ ಸಾವೂ. ಮುಂದೆಂದೂ ಒಂದು ಹುಲ್ಲು ಹುಟ್ಟದಾದ ಪರಿಸ್ಥಿತಿ.ಇಲ್ಲಾ ಇದೇನಾದರೂ ಮಾಡದಿದ್ದರೆ ದೂರದ ಊರಿಗೆ ಎಲ್ಲವನ್ನೂ ಬಿಟ್ಟು ಪಯಣಿಸಬೇಕೂ ಉದ್ಯೋಗ ಅರಸುತ್ತಾ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಇಟ್ಟುಕೊಳ್ಳಬಹುದಾದ ಶೋಕಿ ಜೀವನ ಮಂಗಳೂರಿಗರದ್ದು. ರಿಬಕ್ ಶೂ ಬೇಕೂ ಲಿವಿನ್ಸ್ ಪ್ಯಾಂಟ್ ಶರ್ಟ್ ಬೇಕೂ ಹೀಗೆ ಬ್ರಾಂಡ್ ಮೇಲೆ ಜೀವನ,ಈಡೀಯಾ ಪೇಟೆಯಲ್ಲಿ ಒಂದು ಸೈಕಲ್ ಕಾಣಲ್ಲ, ಸ್ಕೂಟಿ ಆಕ್ಟಿವ್ ಹೊಂಡಗಳದೆ ಕಾರುಬಾರು. ಬಡವನಿಗೆ ಜೀವನ ದೂರಾಗಿದೆ!!! ಈ ಬಗ್ಗೆ ತಲೆ ಕೆಡಿಸಿಕೊಂಡಿರಾ ಷಂಡ ಸಂಸ್ಕೃತಿ ಭಕ್ಷಕ/ರಕ್ಷಕರೆ?? ಇವೆಲ್ಲಾ ನಿಮಗೆ ಸಂಸ್ಕೃತಿ, ಆದರೆ ಹುಡುಗೀರೂ ಮಾಡರ್ನ್ ಆಗದೆ ಹಣೆಗೆ ತಿಲಕವಿಟ್ಟು ಮೈ ತುಂಬಾ ಸೀರೆಯುಟ್ಟು ಓಡಾಡಬೇಕೂ ಎಂದೂ ಬಯೋಸೋದು, ದಿನ ಪೂರ್ತಿ ಟೈಟಾಗಿ ಬಾರು ದೊಂಬಿ ಅಂತಾ ಕಾಲಕಳೆಯೋದು, ಮಾತೆತ್ತಿದರೆ ರೌಡಿಸಂ ಅಂಥ ಅವನಿಗೆ ಹೊಡೆದೆ ಆತನ್ನ ನೋಡ್ಕೋತೀನಿ ಅನ್ನೋ ವಿಚಾರದಲ್ಲೆ ಮುಳುಗೀರೋದು, ಪುಂಡು ಪೋಕರಿಗಳಾಗಿ ತಿರುಗುತ್ತಿರುವ, ಸಾವಿರಗಟ್ಟಲೆ ಯುವ ಸಮುದಾಯ ಪೋಷಿಸೋದು ಬೆಳೆಸೋದು ಸಂಸ್ಖೃತಿ ರಕ್ಷಕರೆನ್ನುವ ಸಂಸ್ಥೆಗಳ ಇವತ್ತಿನ ಕಾರ್ಯಾಭಾರ, ಅವರಾದರೂ ಏನ್ ಮಾಡ್ತಾರೆ ಅವುಗಳು ರಾಜಕೀಯ ಹಿತಾಸಕ್ತಿಯನ್ನು ಬೆಳೆಸಲು ಇಂಥಹಃ ಸಮೂದಾಯವನ್ನು ಬೆಳೆಸಲೆಬೇಕಾದ ದರ್ದು.ಮೂರ್ಖ ಶಿಖಾಮಣಿಗಳು ಇವರ ಬಲೆಗೆ ಬೀಳೋರು, ಅತ್ಯಂತ ಎಜುಕೇಟೆಡ್ ಶ್ರೇಣಿಯಲ್ಲೀರೋರನ್ನೂ ಕೂಡ ಬಲೆ ಕೊಡವಿಕೋಳ್ಳುವಲ್ಲಿ ನಿಸ್ಸೀಮಾವಾಗಿ ಬಿಟ್ಟೀವೆ ಈ ಪಾಖಾಂಡಿ ಸಂಸ್ಥೆಗಳು.ಅತ್ಯಂತ ಬುದ್ದಿವಂತರ ನಾಡು ಅಂತ ಕರೆಸಿಕೊಳ್ಳುತಿತ್ತು ಒಂದೊಮ್ಮೆ ನಗೆಯು ಬರುತಿದೆ ಅದ ನೆನಸಿ ಈ ದಿನ ನನಗೆ.

ಬಟ್ಟೆಯನ್ನೆಲ್ಲಾ ಎಳೆದೂ ಬಳೀದು ಚಂದ ನೋಡಿ ಕಥೆ ಕಟ್ತೀರಾ???ಕೈ ಬಿಡಬಹುದಾದಷ್ಟು ಬಿಟ್ಟು ಸಂಸ್ಕೃತಿ ಬಗ್ಗೆ ಮಾತಾಡ್ತೀರಾ? ನೀವೆಲ್ಲೋ ಕಾಡು ಮೃಗಗಳಾಗಿರಬೇಕಷ್ಟೆ, ಇದ ಪೋಟೊ ಹಚ್ಚಿ ಸಮರ್ತಿಸಿಕೊಳ್ಳುವವರೂ ಕೂಡ ಇವರಿಂದ ಹೊರತಲ್ಲ, ಮಂಗಳೂರೇನೂ ಗೋವಾ ಅಗ್ತಿದೆಯಾ??? ಸಂತೋಷ ಪಡ್ತಿದ್ದೆ ಹಂಗಾದರೆ ಹೊಟ್ಟೆಪಾಡಿಗಾಗಿ ನಾನಿಷ್ಟೂ ದೂರ ಬರಬೇಕಾಗಿರಲಿಲ್ಲ, ಗೋವಾದಲ್ಲೇನೂ ಬೆತ್ತಲೆ ಮಲಗ್ತಾರೋ? ಹಂಗಾದ್ರೆ ಗೋಕರ್ಣ, ಓಮ್ ಬೀಚ್ ಗಳನ್ನೂ, ಇತರ ಇದೆ ತರದ ಕರ್ನಾಟಕದ ಸ್ಥಳಗಳನ್ನೂ ಏನಂತ ಕರೀಬೇಕೂ ಹಲ್ಕಟ್ ಸಂಸ್ಕೃತಿಗರೆ.ಯಾಕೆ ಮಂಗಳೂರು ಮಾತ್ರ ನಿಮ್ಮಪ್ಪನ ಊರು, ಖರೀದಿ ಮಾಡಿ ಬಿಟ್ಟಿರೋ? ಮನೆಯೋಳಗೆ ನುಗ್ತೀರಾ?? ಮಾನ ಕೇಡಿಗಳೆ??? ನಿಮ್ಮಗಳ ಕಟ್ಟಿಕೊಂಡು ಬದುಕು ನಡೆಸೋದು ಸಾಧ್ಯನಾ?? ತಂಗಿ, ಅಣ್ಣ, ಅಕ್ಕ, ತಮ್ಮ ಜೊತೆಗೆ ಮನೆಯಿಂದ ಹೊರಬರುವದಕ್ಕೂ ಸಾಧ್ಯವಿಲ್ಲದ ಸ್ಥಿತಿಗೆ ತಳ್ಳುತಿದ್ದೀರಲ್ಲ ಮತಾಂಧ ಬಿಕನಾಸಿಗಳೆ, ಹೊಟ್ಟೆಗೆ ಏನ್ ತಿನ್ತೀರೋ ಏನೊ. ಒಬ್ಬ ಸೂಳೆಯನ್ನೂ ಹೆಣ್ಣೆಂಬ ಕಾರಣಕ್ಕೆ ಕೈ ಎತ್ತಲಾರದ ಮಾನವೀಯತೆ ಕಂಡುಕೊಂಡವರು ನಾವು.ಅಂತದ್ದರಲ್ಲಿ ನೀವುಗಳೂ ಅತೀ ಕೀಳರಲ್ಲಿ ಕೀಳು.ಮನುಷತ್ವದ ಅರ್ಥವೆ ಗೊತ್ತಿಲ್ಲದ ಥರ್ಡ್ ಕ್ಲಾಸ್ಗಳು.ವ್ಯಾಕ್ ಥೂಊಊ ನಿಮ್ಮ ಜನ್ಮಕ್ಕಿಷ್ಟು....

ತೋರಿಸಬೇಕಾದಲ್ಲಿ ತೋರಿಸ್ರಿ ಹೆತ್ತ ಅಡ್ನಾಡಿ ಪೌರುಷವ, ಅಲ್ಲಾ!!! ಎಂದಾದರೂ ಭಾಷೆ ನೆಲದ ಬಗ್ಗೆ ಮಾತೆತ್ತಿದ್ದೂ ಐತಾ?ಭ್ರಷ್ಟಾಚಾರ (ಸಂಘ ಕೃಪಾಪೋಷಿತವಲ್ಲದ್ದೂ) ವಿರೋಧಿ ಹೋರಾಟದಲ್ಲಿ ಸ್ವಂತಿಕೆಯಿಂದ ಭಾಗಿಯಾಗೋ ಪೌರುಷನಾ ನಿಮ್ದು?ಸಾಮಾಜಿಕ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಿ ಹೋರಾಟ ನಡೆಸಿದಾ ಮೂತಿನಾ ನಿಮ್ದು?ಇಲ್ಲಾ ಎಲ್ಲಾ ಒಳ್ಳೆ ವಿಷಯ, ಸ್ಪಂದಿಸಬಹುದಾದ ವಿಷಯದಲ್ಲೂ ನಮ್ಮಗಳ( ನಾನು ದಕ್ಷಿಣ ಕನ್ನಡದವನೆ ಆದುದರಿಂದ ನಮ್ಮಗಳ ಅನ್ನಬೇಕಾಯ್ತು)ನಿಲುವು ಸತ್ತ ಹೆಣದಂತೂ ಅಲ್ಲ ಕೊಳೆತ ಹೆಣದಂತೆ, ಇದೇನಪ್ಪಾ ಈ ಮಂಗಳೂರಿಗರೂ ಹಿಂಗೆ ಅಂತ ದೇಶವೆಲ್ಲಾ ಮಾತಾಡುತಿದ್ದರೂ ನಮ್ಮಗಳ ಜೀವದಲ್ಲಿ ಚಲನೆಯೆ ಇಲ್ಲ.ಅದೆ ಮುಸ್ಲಿಮರೊಬ್ಬ ಗಾಡಿ ತುಂಬಾ ದನ ಸಾಗಿಸಿದ , ಎಲ್ಲೋ ಮಸೀದಿ, ಚರ್ಚು , ದೇವಾಲಯಗಳಿಗೆ ಕಲ್ಲು ಬಿತ್ತು, ಯಾವನೋ ಅಂತರ್ಧರ್ಮೀಯಾ ಹುಡುಗ ಹುಡುಗಿ ಜೊತೆಗಿದ್ದಾರೆ(ಪರಸ್ಪರ ಒಪ್ಪಿಗೆಯಿದ್ದೂ) ಎನ್ನುವ ಪರಿಸ್ಥಿತಿಯಲ್ಲಿ ಸೆಟೆದುಕೊಳ್ಳುತ್ತೇವೆ ನಿಮಿಷದಲ್ಲೆ ಸಾವಿರಾರು ಮಂದಿ ಸೇರಿ ಬಿಡುತ್ತೇವೆ,ಹೊತ್ತಿನ ಊಟಕ್ಕೆ ದುಡಿಯಲಾಗದ, ಬಡವನನ್ನು ಬಾಳಿಸಲಾಗದ, ಸಮಾನತೆಯನ್ನೂ ಕಾಪಾಡಲಾರದ, ಸಹೋದರತೆಯನ್ನೂ ಎತ್ತಿ ಹಿಡಿಯಲಾಗದ ಈ ನಿಗುರುವಿಕೆ ಯಾವ ಕರ್ಮಕ್ಕೆ ."ಬೇಲೆ ಇಜ್ಜಂದಿ ಆಚಾರಿ ಬಾಲೆದ ಪೀಂಕಾನ್ ಕೆತ್ತಿಯೆ" ಅನ್ನೋ ತುಳು ಗಾದೆಯಂತೆ ಕೆಲಸವಿಲ್ಲದವನು, ಇನ್ನೊಬ್ಬರ ಅಣತಿಯಂತೆ ಬದುಕುವವ, ಸ್ವಂತಿಕೆ ಕಳಕೊಂಡ ವ್ಯಕ್ತಿ ಸಮೂಹ ಇನ್ನೇನನ್ನೂ ಮಾಡಲೂ ಸಾಧ್ಯ. ಪುಂಡಾಡಿಕೆಯಲ್ಲಿ ಹೆಸರು ಗಳಿಸೋ ಆಸೆಯನ್ನ ಸಂಘ ಪರಿವಾರಗಳೂ ಮಂಗಳೂರಿನ ಯುವ ಜನತೆಯಲ್ಲಿ ಬಿತ್ತಿದೆ. ಮಂಗಳೂರಿನಲ್ಲಿರುವ ವೈಚಾರಿಕ ನೆಲೆಗಟ್ಟಿನಲ್ಲಿ ಯೋಚಿಸುವ ಎಲ್ಲಾ ಮಂದಿಯೂ ಹೇಳುವ ಮಾತಿದು.ದೇಶಕ್ಕೊಂದು ಪ್ರಜಾಪ್ರಭುತ್ವ ವ್ಯವಸ್ಥೆಯಿದೆ, ಕಾನೂನುಗಳಿವೆ ಎಂಬುದನ್ನೂ ಮರೆತೂ ಅಥವಾ ಅವೆಲ್ಲವನ್ನೂ ತಮ್ಮ ತೆಕ್ಕೆಗೆ ತೆಗೆದುಕೊಂಡು ದಾಂಧಲೆ ಎಬ್ಬಿಸುವ ಈ ಮಂದಿಗೆ ಒಂದು ಖಾರ ಎದ್ದು ನಿಲ್ಲಲಾಗದ ಮೆಸೇಜ್ ತಲುಪಲೇಬೇಕೂ. ಆದರೆ ಸರ್ಕಾರ ಇದೆ ಮತಾಂದ ವ್ಯವಸ್ಥೆಗೆ ಸಿಕ್ಕಿ ನಿರ್ವಿರ್ಯವಾಗಿ ಕುಂತಿದೆ. ಉಪ ಮುಖ್ಯಮಂತ್ರಿಯೆ, ಆಕ್ರೋಶ ಸಹಜ!!! ಅನ್ನಬೇಕಾದರೆ ಈ ಷಂಡರಿಂದ ಹೆಚ್ಚಿನ ಆಸೆ ಇಟ್ಟುಕೊಳ್ಳುವಂತಿಲ್ಲ. ಬರುವ ಚುನಾವಣೆಯನ್ನು ಈ ನಿಟ್ಟಿನಲ್ಲಿ ಯೋಚಿಸಬೇಕಾದುದು ನಮ್ಮೆಲ್ಲ ಪ್ರಜ್ಞಾವಂತರ ಕರ್ತವ್ಯ ಅಲ್ಲಿವರೆಗೆ .................!!!!!!! ಗೊತ್ತಿಲ್ಲ, ವ್ಯವಸ್ಥೆ ಸುಧಾರಣೆಯಾಗುತ್ತೋ ಬಿಡುತ್ತೋ ಮಾತು ದಾಖಲಿಸಬೇಕಷ್ಟೆ. ಇಷ್ಟೊಂದನ್ನ ಬರೆದಿದ್ದೂ ಅದಕ್ಕಾಗೆ ಕಿಂಚಿತ್ತು ಮನದ ಆಕ್ರೋಶಗಳನ್ನ ಹೊರಚೆಲ್ಲುವದಕ್ಕಾಗಿ ಅಷ್ಟೆ.ಬಹಳಷ್ಟೂ ಹೇಳಲಿದ್ದರೂ ಹೆಚ್ಚೇನೂ ಹೇಳುವಂತಿಲ್ಲ ಕಾರಣ ನಾನೂ ನಗೆಪಾಟಲಿಗೀಡಾದ ಬುದ್ದಿವಂತರೆಂದೂ ಕರೆಸಿಕೊಂಡ ಮೂರ್ಖನಾಡಿನ ಸಾಮಾನ್ಯ ಪ್ರಜೆಯಲ್ಲಿ ಅತೀ ಸಾಮಾನ್ಯನಷ್ಟೆ.

ನೇವರಿಕೆ...


ನಿಮ್ಮ ಸಣ್ಣ ಮೈಮುರಿತವೂ
ನೋವು-ಕದಲಿಕೆಯೂ
ನನ್ನ ಹೃದಯ ಬಡಿತದ
ಏರಿಳಿತದಿಂದ ನನ್ನದೆ ಸನಿಹ
ಆದರೂ ಒಮ್ಮೊಮ್ಮೆ..........
ನನ್ನೊಳಗೆ ಇಬ್ಬಂದಿತನ!.

ನಿಮ್ಮೆದೆಗೆ ಕಿವಿಯಾನಿಸುತ್ತೇನೆ
ಮನದೇರಿಳಿತವ ಅರಿಯುತ್ತೇನೆ
ಆದಾಕೊ ಏನೋ ನಿಮ್ಮೊಂದಿಗೆ
ನನ್ನೆಲ್ಲಾ ಭಾವನೆಗಳು ತಾಳೆಯಾಗುತ್ತೆ
ನಿಮ್ಮ ಹೃದಯ ಬಡಿತದ ತಾಳದಲ್ಲೆ
ನಾನು ಮಿಡಿಯುತ್ತಿರುತ್ತೇನೆ.

ನನ್ನೊಳಗೆ ಆಗಾಗ್ಗೆ ಬೆಳೆವ
ಇಬ್ಬಂದಿತನದ ಬಗ್ಗೆ ಯೋಚಿಸುತ್ತೇನೆ
ಯಾಕೆಂದು ಉತ್ತರ ಸಿಗದಾಗ
ನಿಮ್ಮ ತೊಡೆಯನ್ನೆ ದಿಂಬಾಗಿಸಿ
ಹಿತ ನೇವರಿಕೆಯ ಆಸೆಯಲ್ಲಿ ಮಲಗಿರುತ್ತೇನೆ
ನಿರೀಕ್ಷೆಗೂ ಮೀರಿದ ತಂದೆ ಪ್ರೀತಿ
ಸಿಕ್ಕಾಗ ನನ್ನ ಕಣ್ಣು ಮನದ ತುಂಬಾ ಗಾಢ ನಿದ್ರೆ.

ನನ್ನ ಬಿಟ್ಟು ಹೆಜ್ಜೆ ಮುಂದಿಟ್ಟರೆ ಚಿಂತೆಯಿಲ್ಲ,
ನಾ ನಿರ್ಧರಿಸಿಯಾಗಿದೆ.........
ಕೈ ಆಸರೆ ಸಿಕ್ಕರೆ ಜೊತೆಗೆ ನಡೆಯುತ್ತೇನೆ
ಇಲ್ಲವಾದರೆ ನೀವು ನಡೆದ ಹೆಜ್ಜೆ ಗುರುತು
ಹುಡುಕಿ ಅದೆ ಹೆಜ್ಜೆ ಮೇಲೆ
ಹೆಜ್ಜೆಯಿಟ್ಟು ಹಿಂಬಾಲಿಸುತ್ತೇನೆ,
ನಾ ಬೆನ್ನು ಬಿದ್ದ ಬೀತಾಳನಲ್ಲ!
ನಕ್ಷತ್ರಿಕನಂತೂ ಅಲ್ಲವೇ ಅಲ್ಲ!
ನಾನು ನನಗಾಗಿ ನಿಮ್ಮ ಹಿಂಬಾಲಕ
ಎಚ್ಚರ ನಾನು ಅದರ ಗೊಡವೆ ನಿಮಗೆ ಬರದಷ್ಟು
ಹೆಜ್ಜೆ ಸದ್ದು ಅಹಿತವಾಗಿ ಮಾರ್ದನಿಸದಷ್ಟು.

ನಿಮ್ಮಲ್ಲಿ ನಾ ಮಗುವಾಗುವದ ಕಲಿತೆ
ಹಮ್ಮ ಬಿಮ್ಮುಗಳ ಬೀಸಿ ಎಸಿಯುವದ ಕಲಿತೆ
ನಾ ಮೌನದಲ್ಲೆ ನಿಮ್ಮೊಡೆ ಮಾತನಾಡಬಲ್ಲೆ
ಮನುಷ್ಯ ಸಂವೇದನತೆಗಳ ಅರಿಯಬಲ್ಲೆ
ಹೃದಯದೊಳಗೆ ಅದಾಕೊ ಒಂದು ಸ್ಥಾನ
ನಿಮಗಾಗಿ ಮೀಸಲಿಟ್ಟಾಗಿದೆ....!!!
ತಾಳೆಯಾಗುವ ನಮ್ಮೀರ್ವವ ಹೃದಯ ಬಡಿತವ
ಸಂಬಂಧಗಳೊಡೆ ವಿಶ್ಲೇಷಿಸಬಹುದಾದ್ದು
ಅಪ್ಪಟ ತಂದೆ- ಮಗನ ಪ್ರೀತಿ
ಇನ್ನೇನೂ ಬೇಕು,ಈ ಜನ್ಮಕ್ಕಿಷ್ಟು ಸಾಕು.

Thursday, July 26, 2012

ಬದುಕ ಮುಂದಿನ ಹೆಜ್ಜೆ


ಬಾಲ್ಯವೆಂಬುದು ಸೈಕಲ್ ಚಕ್ರ
ಹಿಡಿಕೋಲನ್ನೆ ಸಾಧನವಾಗಿಸಿ
ಓಡಿಸುವದೂ ಸಲೀಸಾಗಿ.
ಆದರೆ ಬೆಳೆಯುತ್ತಾ ಬಂದು ನಿಂತಿದೆ ಬದುಕು
ಹೋಲಿಸಬಹುದಾದ ಲಾರಿ ಚಕ್ರಕ್ಕೆ
ಓಡಿಸಬೇಕೂ ಬರೀಯ ಕೈಯನ್ನೆ ಸಾಧನವಾಗಿಸಿ
ಬದುಕನ್ನೆ ಮುಡುಪಾಗಿಸಿ.



ಮದುವೆಯೆಂಬ ಇಳಿಜಾರು ಮುಂದಿದೆ
ಸೈಕಲ್ ಚಕ್ರವನ್ನಾದರೆ ದಕ್ಕಿಸಿಬಿಡುತಿದ್ದೆ, ಆದರೆ
ಸಲೀಸಲ್ಲ ಲಾರಿ ಚಕ್ರ ಇಳಿಜಾರಿನಲ್ಲಿ ಇಳಿಬಿಡೋದು
ವೇಗ ನಿಯಂತ್ರಿಸಲು ಗೋಡೆ ಕಟ್ಟೆಗಳಿರಬೇಕು ,.
ನಿಯಂತ್ರಣವಿಲ್ಲದೆ, ಚಕ್ರದೊಂದು ದಿಕ್ಕು
ನಾನೋಂದು ದಿಕ್ಕಿಗೆ ಹೊರಳುವದನ್ನು ತಡೆಯಲು
ಎಡತಾಕುತ್ತಿರಬೇಕು ಹಿರಿಕರ ಮಾತಿನೊಲುಮೆಯನ್ನ.

ಗೋಡೆ ಕಟ್ಟೆಗಳೂ ಕೊಲ್ಲುವದಿಲ್ಲ
ಬದಲಾಗಿ ನೋವ ತಂದರೂ, ನಮ್ಮನ್ನೆ ತಿರುಚಿ
ನೆಟ್ಟಗೊಳಿಸಿ, ಸಂಬಂಧಗಳ ಅರಿವನ್ನು
ತಂದೀಯುವ ತಾಕತ್ತು ಅದರೊಳಗಿದೆ
ಇದು ನಮ್ಮ ನರವ್ಯೂಹದ ಒಳಹೊಕ್ಕಷ್ಟು....
ಮೊಳಕೆಯೊಡದೀತು ಹಸಿರ ಭವಿಷ್ಯದ ಬಾಳು

ಅಷ್ಟಕ್ಕೂ ನೋವಾದರೇನಂತೆ ನೆತ್ತಿ ಸವರಿ
ನೋವ ಹೀರಲು ನನ್ನದೆ ಜೀವವೊಂದು ಬರುವಾಗ
ಸ್ವೀಕರಿಸಬೇಕು ನಾಜೂಕಾಗಿ ಒರಟು ಮುರಿದು
ತೋರಬೇಕು ನಾಜೂಕುತನವನ್ನ ಇವಳೊಡೆ
ಕಾರಣ ಮುಂದೆ ನಾನವಳ ಕೂಸು,
ಅವಳೋ ತಾಯ ಪ್ರೀತಿಯನ್ನೀವ ನನ್ನದೆ ಜೀವ.

ಮಾತು ಸ್ವೀಕರಿಸುವ ಕಲೆಯರಿತಾಗ
ಯಾವೂದೋ ವ್ಯೂಹ,ಯಾರದ್ದೋ ನಡೆ
ಎಂಭ ಅನುಮಾನಗಳು ನನ್ನ ಎಡತಾಕುವದಿಲ್ಲ
ಹೊಸ ಬದುಕನ್ನೊಂದು ಮೆಚ್ಚುವಂತೆ ಬದುಕೋದಷ್ಟೆ
ಗುರಿಯಾದಾಗ ಮಾತಿನ ಅಪಮಾನಗಳಿಗೆ ಇಲ್ಲಿ ತಾವಿಲ್ಲ

ಇವಳೋ ಅಂಗೈ ಮೇಲೆ ಗುಲಾಬಿ ಹೂವ ಗಿಡ ನೆಟ್ಟಿದ್ದಾಳೆ
ಹೂವುಗಳನ್ನಷ್ಟೆ ಆಯ್ದು ಹೃದಯದಿ ಪೋಣಿಸುತ್ತಿರುವೆ
ಮುಳ್ಳುಗಳು ಇದೆಯೆಂದು ಹೂವ ತ್ಯಜಿಸುವದೆಂತು.
ಹೂವ ತುಂಬಾ ತುಂಬಿದ ಪ್ರೇಮದ ಘಮಲನ್ನೆ
ಬದುಕ ಪೂರ್ತಿ ಉಸಿರಾಡಿ ಬಿಡುತ್ತೇನೆ
ಮುಳ್ಳು ಚುಚ್ಚಿದರೆ ಆಸರೆಗೆ ಒಬ್ಬರೊಬ್ಬರಿದ್ದಾಗ
ಮುಳ್ಳಿನ ಬಗ್ಗೆ ಫಿಕರ್ ನಹಿ.

ಮನುಷತ್ವವೆಂಬೊ ಅಮಲೊಳಗೆ ಕೊಲ್ಲು ಬಡಿ
ಕಫಾಲ ಮೋಕ್ಷದ ಮಾತು ಬರದು ನನ್ನಿಂದ
ಬದುಕೆಂಬ ಲಾರಿ ಚಕ್ರಕ್ಕೆ ತೇರ ಕಟ್ಟಿ
ಅದರಲ್ಲಿ ಇವಳನ್ನೆ ಕೂರಿಸಿ ಬದುಕ ನಡೆಸಿ ಬಿಡುತ್ತೇನೆ
ಅದ ನೋಡಿ,ಮನತುಂಬುತ್ತಾ ,
ಹೊಸ ಬದುಕಿಗೆ ಮುನ್ನುಡಿಯನಿತ್ತ
ಕಟ್ಟೆ ಗೋಡೆಗಳು ನೆಮ್ಮದಿಯ ಉಸಿರಾಡಲಿ.
ಆ ನೆಮ್ಮದಿಯಲ್ಲೆ ನನ್ನ ನೆಮ್ಮದಿಯನ್ನ ದಕ್ಕಿಸಿಕೊಳುವೆ.

Friday, July 20, 2012

ರಕ್ತದಾಟ...............

ಭಾರದುಸಿರು ಹಿಡಿದಿಡುವದೆಂತೆಂದೂ
ಗಂಟಲ ಸೆರೆಯ ತೆರೆದು
ಉಸಿರ ಬಿಟ್ಟೆ
ಬಾಯಿ ಮೂಗೆಲ್ಲ ಕೆಂಪು ರಕ್ತ

ಪಾಪದ ನೆತ್ತರ ಕಲೆ ಮೈಗಂಟಿದಾಗ
ಅದ ಸವರಿ ಅಂದೊಮ್ಮೆ ನಕ್ಕ
ಉಸಿರ ಕಟ್ಟಿಸಿದ
ವಿಜಯೋತ್ಸವದ
ನಗೆಯ ಫಲವೆಂಬಂತೆ
ಎದುರುಗಿದ್ದ ಕನ್ನಡಿ
ಪ್ರತಿರೂಪ ತೋರಿಸಿ
ಅಣಕಿಸಿ ನಗೆಯಾಡುತಿತ್ತು,

ಬೆಚ್ಚಿ ಬಿದ್ದೇನೂ ಒಂದು ದಿನ
ನನ್ನದೆ ರಕ್ತ ನೋಡಿದಾಗೆಂದು
ಗೊತ್ತಿರಲಿಲ್ಲ ನನಗೆ
ರಕ್ತದೋಕುಳಿ ಹರಿಸುವಾಗ
ಕೆಂಪ ನೋಡಿ
ಕೆಂಪಾಗಾಗಿ ರೋಷಗೊಳ್ಳುವಾಗ
ಆದರಿಂದು ಬೆಚ್ಚಿ ಬೆವರುತಿದ್ದೇನೆ
ಮೈಯೆಲ್ಲ ಕಮಟು ವಾಸನೆ
ಯಾರೂ ಇರಿಯದಿದ್ದರೂ
ಮೈಯೆಲ್ಲಾ ಆಳ ಸೀಳಿನ ನೋವು.

ಪಿತೂರಿಗಳು ಹೊಸದಲ್ಲ ನನಗೆ
ನರ ಮೀಟಿ ಉಸಿರು ನಿಲ್ಲಿಸಿದ್ದೆ
ಜೊತೆಗಾರರೆನಿಸಿಕೊಂಡ ನನ್ನವರನ್ನೆ
ಆಗೆಲ್ಲ ವಿಕೃತ ಅಟ್ಟಹಾಸ
ಕೈಯಲ್ಲಿ ಶೀಷೆಯ ಜೊತೆ ವಿಕಟಹಾಸ
ಆದರಿಂದೂ ನಿಮಿತ್ತ ಪಿತೂರಿಗೆ ಬಲಿ
ಗೆದ್ದು ಬಿಡುವ ಸಂಭವವೆ ಇಲ್ಲ
ಕಾರಣ ಇದು ವ್ಯಕ್ತಿ ಪಿತೂರಿಯಲ್ಲ
ನಾ ಮಾಡಿದ ಪಿತೂರಿಗಳ ಸಿಕ್ಕಿನೊಳಗೆ
ಫಲ ಉಣ್ಣೆಂಬ ವಿಧಿಯ ಆಟ-ಪಾಠ.

ಸುತ್ತಲೂ ಗಹಗಹಿಪ ನಗೂ
ಘೋರತೆ ಕಾಡಿದೆ ಇಂಚಿಂಚೂ ಮನದೊಳಗೆ
ಗಳಿಸಿದ್ದೂ ಒಂದು ಹಿಡಿಯೂ ಇಲ್ಲ
ಮಣ್ಣಲ್ಲಿ ಮಣ್ಣಾಗಿಸಲು
ನನ್ನ ಹಿಂದೂ ಮುಂದೂ ಯಾರಿಲ್ಲ
ತೊಟ್ಟು ವಿಷ ಕೂಡ ನನ್ನ ಅಮೃತ ಪಾನ
ಗಬ್ಬು ನಾರುವ ಪಾದಗಳು
ಹೆಜ್ಜೆ ಮರೆತಿದೆ, ಇನ್ನೆಲ್ಲಿಯದೂ ಅಮೃತ ಪಾನ?

ಸಾವಿನ ಅರ್ತನಾದವ ಕಂಡು
ಕುಣಿಯುತಿದ್ದೆ, ಮಚ್ಚೆತ್ತಿ ನಲಿಯುತಿದ್ದೆ
ಆದರಿಂದೂ ಸಾವಿಗಾಗಿ
ಮೊರೆಯಿಡುತಿದ್ದರೂ ಅದು ದೂರ ದೂರ
ರಕ್ತ ಮೈಯೊಳಗೆ ಕೊಳೆತು ನಾರುತ್ತಿದೆ
ಜೀವಂತವಿದ್ದೂ ಸತ್ತಂತೆ
ಸಾವಿಗೂ ವಾಕರಿಕೆ ನನ್ನ ಮೈ ಮುಟ್ಟಲೂ.

ಮೈತೊಳೆದು ಶುಚಿಯಾಗಿಸಿ
ರಕ್ತವರೆಸಿ ಕೆಂಪಡಗಿಸಿ
ಸಾವ ಸ್ವಾಗತಿಸಬೇಕಿದೆ

ಕೊನೆಯ ಸಾರಿಯೆಂದು
ಮತ್ತದೆ ಹಳೆ ಪಿತೂರಿ ಹೆಣೆದೂ
ಹೊಸ ತಯಾರಿಯೊಂದಿಗೆ!!!!

ನನ್ನ ಹೆಜ್ಜೆ ನಾನೇರಿದ ಮೆಟ್ಟಿಲು

ಜೀವನದ ಎತ್ತರಕ್ಕೇರಿ
ನೋಡಬೇಕಾದುದು ಹತ್ತಿ ಬಂದ
ಮೆಟ್ಟಲುಗಳನ್ನಲ್ಲ,
ಹಿಂತುರಿಗಿ ನೋಡಬೇಕಾದ್ದು
ನಡೆದು ಬಂದ
ಹೆಜ್ಜೆ ಗುರುತುಗಳನ್ನಲ್ಲ,

ಬದಲಾಗಿ
ಅರ್ಥೈಸಿಕೊಳಬೇಕಾದ್ದು
ನನ್ನೆತ್ತರಕ್ಕೇರಲು
ಸಹಕರಿಸುವದರೊಂದಿಗೆ
ಆ ಮೆಟ್ಟಲುಗಳು, ಹೆಜ್ಜೆಗಳು
ನನಗಾಗಿ ಸಹಿಸಿಕೊಂಡ
ನನ್ನದೆ ಭಾರವನ್ನ.

ಭಾರ ಹೊರುವದಕ್ಕೆ ನಾ
ಸಿದ್ದನಾಗಿರುವಾಗ,
ಅವುಗಳು
ಇನ್ನಾದರೂ ಹಗುರಾಗಲಿ
ತಂಪಾಗಿ ಹಸಿರಾಗಲಿ.

Tuesday, July 10, 2012

"ಈಗ"- ಈಗ್ಲೆ ಅಲ್ಲಾಂದ್ರೂ ನೋಡ್ದೆ ಇರ್ಬೇಡಿ.


"ಈಗ" ನೊಣವೆ ಹೀರೋ ಆಗಿ ಕಾಣಿಸಿಕೊಂಡ ಚಿತ್ರ ಭರ್ಜರಿ ಯಶಸ್ಸಿನೊಂದಿಗೆ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದೆ. ಈ ಯಶಸ್ಸು ಸೂಕ್ತವಾಗಿದೆ ಮತ್ತು ಒಂದದ್ಬುತ ಪರಿಕಲ್ಪನೆಗೆ ಸಿಕ್ಕ ಉತ್ತಮ ಪ್ರತಿಕ್ರಿಯೆಯೂ ಹೌದು.ರಾಜಮೌಳಿಯವರ ಎಲ್ಲಾ ಹಿಂದಿನ ಯಶಸ್ವಿ ಚಿತ್ರಗಳನ್ನೆಲ್ಲ ಮೀರಿಸಿ ಈ ಚಿತ್ರ ನಿಂತಿದೆ ಅಂದರೂ ಅತಿಶಯೋಕ್ತಿಯಲ್ಲ.ಒಂದರೆಕ್ಷಣವೂ ಪ್ರೇಕ್ಷಕನ ಚಿತ್ತ ಚಿತ್ರದಿಂದ ದೂರ ಸರಿಯದಂತೆ ಹಿಡಿದಿಡುವ ರಾಜಮೌಳಿಯ ಗಟ್ಟಿ ನಿರ್ದೇಶನ, ಸುದೀಪ್ ರ ಪೂರ್ಣ ಪ್ರಮಾಣದ ಅದ್ಬುತ ಅಭಿನಯ, ಅತ್ಯದ್ಭುತ ಗ್ರಾಫಿಕ್ ತಂತ್ರಜ್ಞಾನದ ಬಳಕೆ,ಕೀರವಾಣಿಯವರ ಉತ್ತಮ ಸಂಗೀತ, "ಈಗ"ವನ್ನೂ ಶ್ರೀಮಂತಗೊಳಿಸಿದೆ. ಎಲ್ಲೂ ಅನಾವಶ್ಯಕವಾಗಿ ಎಳೆದುಕೊಳ್ಳದೆ, ಕಥೆಗೆ ಎಷ್ಟು ಬೇಕೋ ಅಷ್ಟಷ್ಟೆ ಸೂಕ್ತವೆನಿಸುವ ದೃಶ್ಯ ಸಂಯೋಜನೆಯೊಂದಿಗೆ ಎರಡೇ ಎರಡೂ ಉತ್ತಮ ದೃಶ್ಯ ಪರಿಕಲ್ಪನೆಯ ಜೊತೆಗಿರುವ ಹಾಡೂಗಳೊಂದಿಗೆ ಈ ಚಿತ್ರವೂ 2 ಘಂಟೆಯ ಸಮಯದಲ್ಲಿ ಉತ್ತಮ ಮನರಂಜನೆ ಸವಿಯನ್ನು ಕೊಡುವದೂ ಖಂಡಿತಾ ಮತ್ತೂ ಈ ಸವಿ ಬಹುದಿನದ ಮಟ್ಟಿಗೆ ಉಳಿದುಕೊಳ್ಳುವದೂ ಕೂಡ ಸತ್ಯ.

ಸುದೀಪ್ ಪೂರ್ಣ ಪ್ರಮಾಣದ, ಬಹುಶಃ ಹಿಂದಿನೆಲ್ಲಾ ಚಿತ್ರದ ಅಭಿನಯವನ್ನೂ ಮೀರಿಸಿದ ಅಭಿನಯ ಈ ಚಿತ್ರದಲ್ಲಿ ಬಂದಿದೆ ಎಂಬುದು ಚಿತ್ರ ನೋಡುಗ ಕಾಣುತ್ತಲೆ ಸುದೀಪ್ ರನ್ನೂ ಅರ್ಥೈಸಿಕೊಂಡು ರಾಜ್ ಮೌಳಿ ಸುದೀಪರನ್ನೂ ಈ ಮಟ್ಟಿಗೆ ಬಳಸಿಕೊಂಡಿರೋದು ಕೂಡ ಚಿತ್ರ ನೋಡಿ ಮುಗಿಸಿದ ಪ್ರೇಕ್ಷಕ ಮೆಚ್ಚುವ ಅಂಶಗಳಲ್ಲೊಂದು. ಇತ್ತೀಚೆಗೆ ಕನ್ನಡದ ಒಂದು ಸಂಘಟನೆ ಸುದೀಪ್ ರಿಗೆ 'ಅಭಿನವ ಚಕ್ರವರ್ತಿ' ಬಿರುದನ್ನೂ ಕೊಟ್ಟಿದ್ದೂ ನೆನಪಾಗಿ ಈ ಬಿರುದಿಗೆ ಸುದೀಪ್ ಸೂಕ್ತವಾದ ವ್ಯಕ್ತಿ ಹೌದೆನ್ನುವ ಅನುಮೋದನೆಯನ್ನೂ ಚಿತ್ರ ನೋಡಿದ ಪ್ರೇಕ್ಷಕನಲ್ಲಿ ಈ ಚಿತ್ರದ ಸುದೀಪ್ ಪಾತ್ರ ಮೂಡಿಸುತ್ತದೆ. ಕನ್ನಡದಲ್ಲೆ ಭಾಷೆಯಲ್ಲೆ ಪ್ರಾರಂಭವಾಗುವ ಚಿತ್ರ ಪ್ರಾರಂಭದಲ್ಲೆ ಪ್ರೇಕ್ಷಕನನ್ನೂ ಚಿತ್ರದತ್ತ ಸೆಳೆದು ಬಿಡುತ್ತೆ, ತದ ನಂತರ ಪ್ರೇಕ್ಷಕನ ಚಿತ್ತವೆಲ್ಲ ಚಿತ್ರದಲ್ಲೆ ತೊಡಗಿ ಬಣ್ಣದ ಚಿತ್ತಾರವ ಕಣ್ಣು ತುಂಬಿಕೊಳ್ಳುವಂತೆ ಮಾಡುತ್ತದೆ.ರಾಜ್ ಮೌಳಿಯವರ ಈ ವಿಶಿಷ್ಟ ಪರಿಕಲ್ಪನೆಯನ್ನೂ ಯಾವೂದೇ ಹಾಲಿವುಡ್ ಚಿತ್ರಗಳಿಗೂ ಕಡಿಮೆ ಇಲ್ಲದಂತೆ ನೋಡಿ ತನ್ನದಾಗಿಸಿಕೊಳ್ಳುವ ಅವಕಾಶವನ್ನೂ ಮಿಸ್ ಮಾಡ್ಕೊಳ್ಳದೆ ಇರುವದು ಉತ್ತಮ ಎಂಬುದನ್ನು ತಿಳಿಯಪಡಿಸುವದಕ್ಕಾಗಿ ಹಿಂಗೊಂದು ಬರಹ.

ಡೈನೋಸಾರ್ , ಆನಕೊಂಡ, ಆನೆ, ಹುಲಿ, ಸಿಂಹ, ಇಲಿ, ಮೊಲ, ನಾಯಿ ಇಂಥಹ ಪ್ರಾಣಿಗಳನ್ನೆಲ್ಲಾ ಬಳಸಿಕೊಂಡು ಚಿತ್ರಗಳೂ ಮೂಡಿಬಂದಿದ್ದು ನಾವೂ ನೋಡಿರುವಂತದ್ದೆ. ಬಹುಶಃ ಮೊದಲ ಭಾರಿಗೆ ಒಂದೆ ಚಪ್ಪಾಳೆ ಏಟಿಗೆ ಹೊಸಕಿ ಬಿಡಬಹುದಾದ, ಬರೀಯ ಕಣ್ಣ ದೃಷ್ಟಿಯ ಗಮನಕ್ಕೂ ಗಮನಿಸದ ಹೊರತಾಗಿ ಬರದ ನೊಣವೊಂದು ಚಿತ್ರದ ಹೀರೋವಾಗಿ ಕಾಣಿಸಿಕೊಂಡು ವಿಲನ್ ಮೇಲೆ ರಿವೇಂಜ್ ತೀರಿಸುವಂತ ಪರಿಕಲ್ಪನೆ ಹೇಗಿದ್ದೀತೂ???ಹೇಗೆ ನೊಣವೊಂದು ಸಂಭಾಷಿಸಬಹುದು?? ನೊಣವೊಂದು ಏನು ಮಹಾ ಕಾಟ ಕೊಡಲು ಸಾಧ್ಯ?? ಇಂತಹ ಕುತೂಹಲಗಳೆ "ಈಗ" ಚಿತ್ರದತ್ತ ಆ ಮೂಲಕ ಚಿತ್ರಮಂದಿರದತ್ತ ನನ್ನ ಸೆಳೆದಿದ್ದು.ನನ್ನೆಲ್ಲ ಕುತೂಹಲದ ಪ್ರಶ್ನೆಗಳಿಗೆ ಸಿಕ್ಕಿದ ಉತ್ತರವಂತೂ ಅದ್ಬುತ.ನೊಣವೆ ಹಾಸ್ಯ ಪಾತ್ರವಾಗಿ ಪ್ರೇಕ್ಷಕನನ್ನೂ ನಕ್ಕೂ ನಗಿಸಲೂಬಹುದೂ ಎಂಬುದೂ ಕೂಡ ಕಂಡುಕೊಂಡಾಗ ರಾಜಮೌಳಿಯ ನಿರ್ದೇಶನಕ್ಕೆ ಮನಸ್ಸಲ್ಲೆ ಒಂದು ಶಭಾಸ್ ಅಂದಿದ್ದೆ.ಇಂತದ್ದೊಂದು ಕಾನ್ಸೆಪ್ಟ್ ಹುಟ್ಟಿಸಿ ಅದಕ್ಕೆ ಸುದೀಪ್ ಸೂಕ್ತ ನಟ ಎಂಬುದಾಗಿ ರಾಜಮೌಳಿ ಆರಿಸಿದ್ದನ್ನ ನೋಡಿದರೆ ರಾಜಮೌಳಿಯವರಲ್ಲಿರುವ ಆ ನಿರ್ದೇಶಕನಿಗೆ ಒಂದು ಸಲಾಂ ನೀಡಲೇಬೇಕು.ಒಂದು ಮಿನಿಯೇಚರ್ ಆರ್ಟಿಷ್ಟ್ ಆಗಿ ಕಂಡುಬರುವ ಚಿತ್ರದ ನಾಯಕಿ ಶಮಂತಾ ಅವರ ಪಾತ್ರವೂ ಗಮನ ಸೆಳೆಯುವಂತದ್ದು.ಚಿತ್ರದ ಮೊದಲ ಕೆಲವೆ ಕೆಲವೂ ನಿಮಿಷಗಳಲ್ಲಿ ಚಿತ್ರದ ನಾಯಕನಾಗಿ ಕಂಡು ಬರುವ ನಾನಿ ಅವರ ಪಾತ್ರ ಗಮನಸೆಳೆಯುತ್ತಲೆ ಕೊನೆಗೊಂಡು ನೊಣ ಚಿತ್ರವನ್ನೂ ಆವರಿಸಿಕೊಂಡು ಬಿಡುತ್ತೆ.ಸೆಂಥಿಲ್ ಅವರ ಉತ್ತಮ ಕ್ಯಾಮಾರ ವರ್ಕ್ ಕೂಡ ಚಿತ್ರವನ್ನು ದೃಶ್ಯ ಕಾವ್ಯವಾಗಿ ಮೂಡಿಸುತ್ತೆ.

ಒಂದೊಳ್ಳೆ ಚಿತ್ರ "ಈಗ" ಅನ್ನುವದರಲ್ಲಿ ಎರಡೂ ಮಾತಿಲ್ಲ,ಚಿತ್ರದ ದೃಶ್ಯಗಳಲ್ಲಿ ಒಂದು ಸೂಜಿ ಬಿದ್ದರೂ, ನೀರು ಹಾಯಿಸುವ ಪೈಪ್ ಎಡವಿದರೂ ಇಂತಹ ಸಣ್ಣ ಪುಟ್ಟ ಹಲವು ಘಟನೆಗಳೂ ನಡೆದರೂ ಕೂಡ ಅದು ಕಥೆಯ ಹೊರತಾಗಿದ್ದು ಅಲ್ಲ ಬದಲಾಗಿ ಅದೊಂದು ಸಕಾರಣಕ್ಕೆ, ಇಂತಹುಗಳೆ "ಈಗ" ನಿರ್ದೇಶಕನ ಗಟ್ಟಿತನ.ಕಮರ್ಷಿಯಲ್ ಎಲಿಮೆಂಟ್ಸ್ ಗಳೂ ಬೇಕೆಂದು ಇಲ್ಲ ಸಲ್ಲದ್ದನ್ನೂ ಸೇರಿಸದೆ ಒಂದೊಳ್ಳೆ ಕಮರ್ಷಿಯಲ್ ಚಿತ್ರವಾಗಿ "ಈಗ" ಮೂಡಿಬಂದಿರುವದನ್ನು ಕಾಣಬಹುದು.ಒಟ್ಟಿನಲ್ಲಿ ಕುಟುಂಬ ಸಮೇತವಾಗಿ ಚಿತ್ರವನ್ನೂ ಅಸ್ವಾದಿಸಬಹುದಾದದ್ದು, ಅದರಲ್ಲೂ ಮುಖ್ಯವಾಗಿ ಮನೆಮಂದಿ ಮಕ್ಕಳ ಜೊತೆ ಈ ಚಿತ್ರವನ್ನೂ ನೋಡಿದಲ್ಲಿ ಇನ್ನಷ್ಟು ರುಚಿಯಾಗಬಲ್ಲುದಾದ ಚಿತ್ರವಿದು.ನೊಣದ ಆಟಾಟೋಪ ಮಕ್ಕಳನ್ನೂ ಕೂಡ ತನ್ನತ್ತ ಸೆಳೆಯಬಲ್ಲುದು. ಹಾಗಿದ್ದರೆ ಮತ್ಯಾಕೆ ತಡ, ಈಗ ಚಿತ್ರವನ್ನೂ ಈಗಲೇ ಅಲ್ಲದಿದ್ರೂ ನೋಡ್ದೆ ಇರ್ಬೇಡಿ.

Friday, July 6, 2012

ಹುಟ್ಟು-ಸಾವೂ ಜೊತೆಗೆ ಹಿಡಿ ಬದುಕು.

ದಿನದ ಬೆಳಕಿನ  ಹುಟ್ಟು
ಕತ್ತಲೆ ಎಂಭ ಸಾವಿನ ಜೊತೆ ದಿನಾಂತ್ಯಗೊಂಡಂತೆ
ಜೀವದ ಹುಟ್ಟಿನ ಜೊತೆ ಮಗದೊಂದು ಹುಟ್ಟಿದೆ
ಅದು ಆ ಜೀವದ ಸಾವು.


ಹುಟ್ಟಿಗಾಗಿ ಸಂಭ್ರಮಿಸಿದಾಗಲೆಲ್ಲ ಮರೆತಿದ್ದು
ಜೊತೆಗೆ ಹುಟ್ಟಿದ ಸಾವಿಗೂ ಸಂಭ್ರಮಿಸುತ್ತೆವೆಂದು.
ಸಂಭ್ರಮ ಬರೀಯ ಹುಟ್ಟಿಗಾಗಿ ಅಷ್ಟೆ
ಸಾವೂ ವಾಸ್ತವ ಆದರೂ ಸಂಭ್ರಮದಿಂದ ದೂರ ದೂರ.


ಪ್ರತಿ ವರುಷ ಮತ್ತೆ ಮತ್ತೆ ಜನಿಸುವದಲ್ಲ ಸತ್ಯ
ವಾಸ್ತವ ಅಷ್ಟಷ್ಟೆ ಬದುಕ ಕಳೆದು ಸಾವ ಕಡೆ ನಡೆಯುವದು.
ಜನುಮ ದಿನದ ಸಂಭ್ರಮಾಚರಣೆ ಎಂದರೆ???
ಸಾವ ಪಯಣ  ಹಾದಿಯ ಒಂದೊಂದೆ ಮೆಟ್ಟಲೇರಿ
ವಿರಮಿಸಿ ಸಂಭ್ರಮಿಸಿ ಮತ್ತೆ ಮುನ್ನುಗ್ಗಲು
ಸಂಭ್ರಮಿಸಿ ಸ್ಪೂರ್ತಿ ಪಡೆಯುವ ಆಚರಣೆ


ಹುಟ್ಟು,ಬದುಕು,ಸಾವೂ ಒಬ್ಬರಿಗೊಬ್ಬರೂ ಸಂಬಂಧಿತರೂ
ಆದರೂ ಬದುಕೊಂದನ್ನೂ ಬಿಟ್ಟು ಉಳಿದೆರಡರ ಮೇಲೆ
ಜೀವದ ಹಿಡಿತ ಶೂನ್ಯ.


ಬದುಕೆಂದರೆ ಅದು ಸಾವು ನೀಡಿದ ಭಿಕ್ಷೆ
ಹುಟ್ಟು ನೀಡಿದ ಕರುಣೆ.
ಸಾವ ನೆನಪಿನ ಕೊಡುಗೆ....
ವಾಸ್ತವದರಿವು,ಚಂದದ ಬದುಕು
ಹುಟ್ಟಿನ ಕರುಣೆಗೊಂದು ಸಂಭ್ರಮದ ಅರ್ಥ.




Thursday, July 5, 2012

ವೇರ್ ಆರ್ ಯೂ ಸಂಪಾದಕೀಯಾ??????

ಕನ್ನಡಪ್ರಭದ ಸಂಪಾದಕರೂ ಆದ ವಿಶ್ವೇಶ್ ಭಟ್ ರವರು ಇತ್ತೀಚೆಗೆ ಆರೆಷ್ಟ್ ಆಗಿದ್ದರೂ.ಮಾಧ್ಯಮಗಳಲ್ಲಿ ಅದು ದೊಡ್ಡ ಸುದ್ದಿಯೆ ಆಗಿಲ್ಲ ಬಿಡಿ, ಬದಲಾಗಿ ರವಿ ಬೆಳೆಗೆರೆಯವರಿಗೆ ಆಹಾರ ಸಿಕ್ಕಿಂದಂತಾಗಿತ್ತು.ಇರಲಿ!!! ಇವತ್ತೂ ಮೀಡೀಯಾ ಅನ್ನುವದೂ ಕೆಲವೂ ಮೂಲಭೂತ ಹಿತಾಸಕ್ತಿಗಳ ಕೈಗೆ ಸಿಕ್ಕಿ ನಲುಗುತ್ತಿದೆಯೋ ಅನ್ನುವದೂ ಯಾಕೋ ಪದೆ ಪದೆ ಬರುವ ಸಂದೇಹ.ಹೀಗಿರಬೇಕಾದರೇನೆ ಮೀಡಿಯಾ ವಿಷಯ ಬಂದಾಗ ಯಾಕೋ ಮತ್ತೆ ಮತ್ತೆ ನೆನಪಾಗೋದು ಇತ್ತೀಚೆಗೆ ಮಂಕಾಗಿ ಕುಳಿತಿರುವ ಸಂಪಾದಕೀಯಾ ಬ್ಲಾಗ್. ವಿಷಯ ಸತ್ಯಾ ಸತ್ಯತೆಯನ್ನೂ ಎಳೆದು ತರುತಿದ್ದ ರೀತಿಯೆ ಅಂತಿದ್ದ ಬ್ಲಾಗ್ ನೆನಪಾಗೋದು ಸಹಜವೆ ಹೌದು. ವರ್ತಮಾನ , ಕಾಲಂ ೯ ಅನ್ನುವ ಬ್ಲಾಗ್ ಗಳೂ ಇದ್ದರೂ ಕೂಡ ಸಂಪಾದಕೀಯ ನೆನಪಾಗೋದು ಯಾಕೆಂದರೆ ಮೀಡೀಯಾದೊಳಗಿನ ಹುಳುಕುಗಳನ್ನು ಎಳೆತರುವದಕ್ಕೆ ಪ್ರಾಧಾನ್ಯತೆ ಕೊಟ್ಟುದುದರಿಂದ.ಇದೊಂದು ತರ ಭೂತಕನ್ನಡಿಯೊಳಗಿನ ಹುಳುಕಿನ ಕಣಗಳನ್ನು ಹುಡುಕುವ ಕನ್ನಡಿಯಾಗಿತ್ತೂ.ಸಂಪಾದಕೀಯ ಮಂಕಾದ ದಿನಗಳಿಂದ ಮೀಡೀಯಾ ಹೇಳಿದ್ದೆ ನಿಜ ಎಂದು ನಂಬುವ ಪರಿಸ್ಥಿತಿಗೂ ಒಗ್ಗದೆ ಈ ಕಡೆ ಅದರೊಳಗಿನ ಹುಳುಕುಗಳನ್ನೂ ಪರಾಂಬರಿಸಲೂ ಆಗದೆ ನನ್ನಂತವನೂ ಮಂಕು. ಕೆಲವೊಂದು ಹುಳುಕುಗಳೂ ನಮ್ಮರಿವಿಗೆ ಬಂದರೂ ಬಿಚ್ಚಿಲಿಡಲಾಗದ ಪರಿಸ್ಥಿತಿ, ನೇರಾ ನೇರಾ ಎದುರು ಹಾಕಿಕೊಳ್ಳಲಾಗದ ನಮ್ಮೊಳಗಿನ ಕಪಟತನ,ಸ್ವಾರ್ಥತೆಯ ಮೆರೆಯುವಿಕೆ ಅಂತಲಾದರೂ ಅಂದುಕೊಳ್ಳೋಣವೆ??.ಇರಬಹುದು.


ಅನಾಮಿಕನಾಗಿದ್ದೂಕೊಂಡೆ ಸಂಪಾದಕೀಯಾ ಬ್ಲಾಗ್ ತೆರೆದಿಟ್ಟ ಸತ್ಯಗಳೆಲ್ಲವೂ ನಿರ್ಭಿಯತೆಯಿಂದ ಕೂಡಿದ್ದೂ ಮತ್ತು ವಾಸ್ತವ ಸತ್ಯಗಳಾಗಿತ್ತು.ಬಹುಶಃ ಆ ಅನಾಮಿಕತನ ಈ ಶಕ್ತಿಯನ್ನೂ ಅದರ ಬ್ಲಾಗ್ ನಿರ್ವಾಹಕನೀಗೆ ಕೊಟ್ಟಿರಬಹುದು, ನಾನೂ ಯಾವಾಗಲೂ ಹೇಳುತಿದ್ದ ಮತ್ತು ನಂಬಿಕೊಂಡಿದ್ದು.... ಮೀಡಿಯಾ ತನ್ನ ಹಿಂದಿರುವ ಕೈಗಳನ್ನೂ ತೋರಿಸದೆ ಆ ಮೀಡಿಯಾ ವಿಷಯಗಳು ಗ್ರಾಸಗೊಳ್ಳಲಾರವೂ ಎಂದು. ಆದರೆ ಇದೂ ಸಂಪೂರ್ಣ ಸುಳ್ಳು ಎಂಬುದನ್ನೂ ತೋರಿಸಿಕೊಟ್ಟಿದ್ದೂ ಸಂಪಾದಕೀಯಾ!!! ಕಾರಣ ವಿಷಯ ಸಾರಯುತವಾಗಿದ್ದಾಗ ವಿಷಯ ಪ್ರಾಮುಖ್ಯತೆ ಪಡೆಯುವದೆ ಹೊರತಾಗಿ ಅದರ ಹಿಂದಿರುವ ಕೈಗಳು ಕೇವಲ ಮೆಚ್ಚುವದಕ್ಕೆ ತಿಳಿದುಕೊಳ್ಳುವ ಕುತೂಹಲಕ್ಕಾಗಿ ಮಾತ್ರ ಸೀಮಿತಗೊಳ್ಳುತ್ತದೆ. ಸಂಪಾದಕೀಯದಿಂದ ನಾನು ಈಗಲೂ ನಿರೀಕ್ಷಿಸೋದು ಅದು ತೆರೆದಿಡಬಹುದಾದ ಸತ್ಯಗಳಿಗೆ ಮತ್ತೂ ಚರ್ಚೆಗಳಿಗಾಗಿಯೆ ಹೊರತು ಅದರ ಹಿಂದಿರುವ ಕೈಗಳನ್ನೂ ನೋಡುವದಕ್ಕಾಗಿಯಲ್ಲ. ಆದರೇನೂ ಮಾಡೋಣ ಇದು ಹಂಬಲವಾಗಿ ಉಳಿದಿದೆ ಹಾಗೂ ಈ ಹಂಬಲ ಅಳಿಯದೆ ಇರುತ್ತೆ ಕೂಡ.

೨೨ ಡಿಸೆಂಬರ್ 2011 ನಲ್ಲಿ ತನ್ನ ಒಂದು ವರುಷವನ್ನು ಪೂರೈಸುದುದಕ್ಕಾಗಿ ಸಂಪಾದಕೀಯದಲ್ಲಿ ಒಂದು ಪೋಷ್ಟ್ ಬೀಳುತ್ತೆ ಇದಾದ ನಂತರ ಕೊನೆಯ ಪೋಷ್ಟ್ ಕಂಡಿದ್ದು ೨ ಫೆಬ್ರವರಿ ೨೦೧೨. ಅಲ್ಲಿಂದ ನಂತರ ಒಂದೆ ಒಂದು ಪೋಷ್ಟ್ ಬಿದ್ದಿಲ್ಲ!!! ಕಾರಣಗಳೂ ಗೊತ್ತಿಲ್ಲ.ವರುಷದ ಪೋಷ್ಟಲ್ಲಿ ಸಂಪಾದಕೀಯನೆ ಹೇಳಿಕೊಂಡಂತೆ "ಸಾರ್ವಜನಿಕ ವಿಮರ್ಶೆ, ಟೀಕೆ, ಟಿಪ್ಪಣಿಗಳಿಂದ ಮೀಡಿಯಾ ಕ್ಷೇತ್ರವೊಂದು ಹೊರಗೆ ಉಳಿಯಬಾರದು ಎಂಬುದು ನಮ್ಮ ಕಾಳಜಿಯಾಗಿತ್ತು. ಆತ್ಮವಿಮರ್ಶೆ-ವಿಮರ್ಶೆಗಳಿಲ್ಲದ ಕ್ಷೇತ್ರಗಳು ಸರ್ವಾಧಿಕಾರದ ರೋಗವನ್ನು, ಮೂಲಭೂತವಾದಿ ಗುಣಗಳನ್ನು ಆವಾಹಿಸಿಕೊಂಡುಬಿಡುತ್ತವೆ. ಅದು ಸಮಾಜಕ್ಕೆ ಯಾವತ್ತೂ ಅಪಾಯಕಾರಿ. ಮೀಡಿಯಾವನ್ನು ಮೀಡಿಯಾಗಳೇ ವಿಮರ್ಶಿಸುವ ಆರೋಗ್ಯಕರ ಪರಿಪಾಠವೂ ಎಲ್ಲೂ ಕಾಣದ ಹಿನ್ನೆಲೆಯಲ್ಲಿ ನಾವು ಒಂದು ಸಣ್ಣ ಪ್ರಯತ್ನ ಶುರು ಮಾಡಿದೆವು".ಎಂದು ತನ್ನುದ್ದೇಶವನ್ನೂ ತಿಳಿಸುತ್ತಾ...........
"ಒಂದು ಸಮಾಧಾನದ ಸಂಗತಿಯೆಂದರೆ ಎಷ್ಟೋ ಸಂದರ್ಭಗಳಲ್ಲಿ ನಾವು ಬರೆದದ್ದು, ನೀವು ಬರೆದದ್ದು ಸಂಬಂಧಪಟ್ಟವರನ್ನು ನೇರವಾಗಿ ತಲುಪಿದವು. ಕ್ರಿಯೆಗೆ ಪ್ರತಿಕ್ರಿಯೆಗಳು ಆರಂಭಗೊಂಡವು. ಸಣ್ಣಪುಟ್ಟ ಬದಲಾವಣೆಗಳು ನಮ್ಮ ಕಣ್ಣೆದುರಿಗೇ ಘಟಿಸಿದವು. ಸಂಪಾದಕೀಯದ ಚರ್ಚೆಗಳು ಮೀಡಿಯಾ ಸಂಸ್ಥೆಗಳ ಮ್ಯಾನೇಜ್ ಮೆಂಟ್ ಸಭೆಗಳಲ್ಲೂ ಚರ್ಚೆಯಾಗತೊಡಗಿದವು.
ಇದೆಲ್ಲ ನಡೆಯುತ್ತಿದ್ದಂತೆ ನಮ್ಮ ಜವಾಬ್ದಾರಿಗಳೂ ಹೆಚ್ಚುತ್ತ ಹೋದವು. ಈ ಒಂದು ವರ್ಷದಲ್ಲಿ ನಾವು ಬರೆದ ಒಂದೇ ಒಂದು ಲೇಖನವನ್ನೂ ಡಿಲೀಟ್ ಮಾಡಿಲ್ಲ. ವೈಯಕ್ತಿಕ ತೇಜೋವಧೆ, ಕಪೋಲ ಕಲ್ಪಿತ ಆರೋಪಗಳು, ಪೂರ್ವಾಗ್ರಹ ಪೀಡಿತ ನಿಲುವುಗಳಿಂದ ಮುಕ್ತವಾಗಿಯೇ ಬರೆದ ಪರಿಣಾಮ ನಾವು ಬರೆದ ಯಾವುದನ್ನೂ ಹಿಂದಕ್ಕೆ ಪಡೆದುಕೊಳ್ಳುವಂಥ ಸಂದರ್ಭವೇ ಸೃಷ್ಟಿಯಾಗಲಿಲ್ಲ. ಈ ಎಚ್ಚರ ಮತ್ತು ಪ್ರಜ್ಞೆ ಇದ್ದ ಪರಿಣಾಮವಾಗಿಯೇ ಇದನ್ನು ನೀವು ನಿಮ್ಮದೆಂದು ಭಾವಿಸಿದಿರಿ. ಸದಾ ನಮ್ಮ ಜತೆ ಹೆಗಲಿಗೆ ಹೆಗಲು ಕೊಟ್ಟು ನಿಂತಿರಿ.
ಮೀಡಿಯಾ ವಿಶ್ಲೇಷಣೆ ಒಮ್ಮೊಮ್ಮೆ ಮಗ್ಗುಲು ಬದಲಿಸಿ ಸಾಮಾಜಿಕ ಸಮಸ್ಯೆಗಳ ಕುರಿತ ಸಾಕಷ್ಟು ಚರ್ಚೆಗಳೂ ಇಲ್ಲಿ ನಡೆದಿವೆ. ಒಮ್ಮೊಮ್ಮೆ ಇದು ಪ್ರಜ್ಞಾಪೂರ್ವಕವಾಗಿಯೂ, ಮತ್ತೆ ಕೆಲವೊಮ್ಮೆ ಅಪ್ರಜ್ಞಾಪೂರ್ವಕವಾಗಿಯೂ ನಡೆದಿದೆ. ಒಟ್ಟು ಫಲಿತ ಸಮಾಧಾನ ತಂದಿದೆ. ಕಪಟ ಜ್ಯೋತಿಷಿಗಳ ವಿರುದ್ಧ ನಡೆದ ಅಭಿಯಾನ, ಮಲ ಹೊರುವ ಪದ್ಧತಿ ವಿರುದ್ಧ ನಡೆದ ಜಾಗೃತಿ ಕಾರ್ಯ, ಮಡೆಸ್ನಾನ-ಪಂಕ್ತಿಬೇಧ-ಪ್ರಾಣಿಬಲಿ-ಭ್ರಷ್ಟಾಚಾರ ಇತ್ಯಾದಿ ವಿಷಯಗಳ ಕುರಿತ ಚರ್ಚೆಯೂ ಆರೋಗ್ಯಕರವಾಗಿ ನಡೆಯಿತು. ಕೆಲವೊಮ್ಮೆ ನಾವು ಬರೆದದ್ದನ್ನು ಆ ಕ್ಷಣಕ್ಕೆ ಒಪ್ಪಿಕೊಳ್ಳಲು ಸಿದ್ಧರಿಲ್ಲದ ಓದುಗರು ಕ್ರಮೇಣ ಹೌದು, ನೀವು ಬರೆದಿದ್ದು ಸರಿಯಾಗಿತ್ತು ಎಂದು ಒಪ್ಪಿಕೊಂಡದ್ದನ್ನು ನಾವು ಗಮನಿಸಿದ್ದೇವೆ". ಎಂದೂ ತನ್ನ ಸಫಲತೆಯನ್ನೂ ಈ ತೆರನಾಗಿ ಈ ಪೋಷ್ಟ್ ತೆರೆದಿಡುತ್ತದೆ.

ಮೀಡಿಯಾ ಕುರಿತು ಸಾಕಷ್ಟು ಚರ್ಚೆಗಳನ್ನೂ ಮಾಡಿದ್ದೇವೆ ಇತರ ವಿಷಯಗಳನ್ನೂ ಕೈಗೆತ್ತಿಕೊಳ್ಳುತ್ತೇವೆ ಆದರೆ ನಮ್ಮ ಅದ್ಯತೆ ಮೀಡಿಯಾ ಅಗಿರುತ್ತದೆ ಅಂದ ಸಂಪಾದಕೀಯದ ಆ ಪೋಷ್ಟಿನಲ್ಲಿ ನನ್ನಂತವ ಕಂಡ ನಿರೀಕ್ಷೆಗಳೂ ಹಲವಾರೂ!!!, ಆದರೆ  ೨ ತಿಂಗಳ ನಂತರದಲ್ಲಿ ಯಾಕೋ ಸಂಪಾದಕೀಯಾ ಪತ್ತೆನೆ ಇಲ್ಲ, ಹೀಗಾಗಬಾರದಿತ್ತು. ಆದರೆ ಒಂದಂತೂ ಸತ್ಯ ಸಂಪಾದಕೀಯಾ ಹುಟ್ಟು ಹಾಕಿದ ಚರ್ಚೆಗಳೂ ಅದು ಸೂಚಿಸಿದ ದೃಷ್ಟಿಕೋನ ಸಾಯಲ್ಲ. ಮತ್ತೆ ಕೊಡವೆದ್ದು ಬಾ ಸಂಪಾದಕೀಯಾ ಅನ್ನುತ್ತಲೆ ಈ ತೆರನಾದ ಶಕ್ತಿಯುತ ಪರ್ಯಾಯ ಮಾಧ್ಯಮ ಸಮಾಜದ ಒಳಿತಿಗಾಗಿ ಇನ್ನಷ್ಟೂ ಮತ್ತಷ್ಟೂ ಹುಟ್ಟಲಿ ಅನ್ನುವದನ್ನೂ ಆಶಿಸೋಣ.


ಕೊನೆ ಪಂಚ್:-"ಸಂಪಾದಕೀಯದ ಗಂಭೀರ ಲೇಖನಗಳನ್ನು ಪುಸ್ತಕರೂಪದಲ್ಲಿ ತರುವ ಯೋಜನೆಯೂ ಇದೆ. ಇದಕ್ಕಾಗಿ ಪ್ರಕಾಶಕರ ಬೆಂಬಲವನ್ನು ಯಾಚಿಸುತ್ತಿದ್ದೇವೆ. ಪ್ರಕಾಶಕರು ಮುಂದೆ ಬಂದಲ್ಲಿ ಈ ಕಾರ್ಯವೂ ನಡೆಯಲಿದೆ."
-ಸಂಪಾದಕೀಯ.
ಪುಸ್ತಕ ಬಿಡುಗಡೆಯ ದಿನವಾದರೂ ತಮ್ಮ ಮುಖಾರವಿಂದದ ದರ್ಶನ, ಆ ಕೀ ಬೋರ್ಡ್ ಕುಟ್ಟುವಿಕೆಯ ಕೈಗಳ ಸ್ಪರ್ಷವನ್ನು ನಿರೀಕ್ಷಿಸಬಹುದೇನೊ??.ಸಂಪಾದಕೀಯ ಎಚ್ಚರ!!!ಆ ದಿನ ನಿಮ್ಮ ಕೈ ಬೆಚ್ಚಗಾಗಿಸುವ ಜನರೂ ಇರಬಹುದು :)


ಸಂಪಾದಕೀಯಾ ಬ್ಲಾಗ್ ಕೊಂಡಿಗೆ ಇಲ್ಲಿ ಕ್ಲಿಕ್ಕಿಸಿ

Wednesday, July 4, 2012

Jump Towards the joy :) -----------------------------------

ನೊಂದಿದೆ ಮನವೆಂದು
ಹೊಟ್ಟೆಗೆ ಹಿಟ್ಟಿಲ್ಲದೆ ಕೂರಕ್ಕಾಗುತ್ತಾ??
ನಂಬಿಕೆಯ ಕಳಕೊಂಡ ಮೇಲೆ
ಸಂಬಂಧವ ಪೊರೆಯಲಿಕ್ಕಾಗುತ್ತಾ??
ಅನಗತ್ಯ ಬಂಧನವ ಕಳಚಿ
ನಭಕ್ಕೆ ಜಿಗಿಯಲು
ಗಟ್ಟಿ ನಿರ್ಧಾರವ ತಳೆಯದೆ
ಕೊರಗುವದಕ್ಕಾಗುತ್ತಾ?
ದುಗುಡವ ಸರಿಸಿ.....
ನೆಮ್ಮದಿಯತ್ತ ನೆಗೆಯ ಬೇಕು ನಾ
ಇದ್ದುದನ್ನು ಉಳಿಸಿಕೊಂಡಾದರೂ ಸೈ.
ಕಡಿದುಕೊಂಡಾದರೂ ಸೈ.


Tuesday, July 3, 2012

ಗೆಳೆಯನಿಗೆ ಒಲಿದ ಪಿ ಸಾಯಿನಾಥ್ ಪ್ರಶಸ್ತಿ ಮೂಲಕ ಪತ್ರಿಕೋದ್ಯಮದತ್ತ ಸಣ್ಣದೊಂದು ನಿರೀಕ್ಷೆ!!!

ಹಿಂದಿ, ಒರಿಯಾ ಮತ್ತು ತೆಲುಗು ಭಾಷೆಗೆ ಒಲಿದ ಪಿ. ಸಾಯಿನಾಥ್ ಪ್ರಶಸ್ತಿ ಈ ಸಾರಿ ಕನ್ನಡಕ್ಕೆ ಲಭಿಸಿದೆ. ಕೃಷಿ ರಂಗದಲ್ಲಿ ಆಕ್ಟಿವಿಸಂ ಜೊತೆ ಜೊತೆಗೆ ಬರಹ ಮೂಲಕವಾಗಿ ಕೆಲಸ ಮಾಡುತ್ತಿರುವ ಗಾಯತ್ರಿ ಹಾಗೂ ಮಲ ಹೊರುವ ಪದ್ದತಿಯ ವಿರುದ್ದ ಕೆಲಸ ಮಾಡುತ್ತಿರುವ ಪತ್ರಕರ್ತ ಸಂಶೋಧಕ ಮಿತ್ರ ದಯಾನಂದ್ ಮಡಿಲಿಗೆ ಈ ಪ್ರಶಸ್ತಿ ಸಂದಿದೆ. ದಾಖಲೆ ಕಾನೂನಿನ ಮೂಲಕ ಸತ್ತೆ ಹೋಗಿದೆ ಎಂದು ತೋರಿಸಲ್ಪಟ್ಟ ಮಲ ಹೊರುವ ಪದ್ದತಿಯು ಇನ್ನೂ ಜೀವಂತವಿರುವದನ್ನು ತೋರಿಸಿಕೊಟ್ಟ ದಯಾನಂದ್ ಹಾಗೂ ಬಳಗದವರ ಕಾರ್ಯವೈಖರಿಯನ್ನು ಹತ್ತಿರದಲ್ಲೆ ಬಲ್ಲೆನಾದ್ದುದ್ದರಿಂದ ಪಿ. ಸಾಯಿನಾಥ್ ಪ್ರಶಸ್ತಿಯ ಆಶಯಗಳಿಗೆ ಪೂರಕವಾದ ವ್ಯಕ್ತಿಗಳಿವರು ಅನ್ನುವದರಲ್ಲಿ ಎರಡು ಮಾತಿಲ್ಲ. ನಾನು ದೂರದಿಂದಲೆ ನೋಡಿ ಗೌರವಿಸುತಿದ್ದ ಮೇರು ವ್ಯಕ್ತಿ ದೇವನೂರು ಮಹಾದೇವ್ ಅವರು ಈ ಪ್ರಶಸ್ತಿಯನ್ನು ಕೊಡಮಾಡಿದ್ದು ಕೂಡ ಹೆಮ್ಮೆಯ ವಿಷಯವೆ ಸರಿ.


"ಪುಸ್ತಕ ಕೊಳ್ಳಲು ಬೇಕಾದ 300 ರೂ ಇಲ್ಲದ ಜರ್ನಲಿಸಂ ಕಲಿಕೆಯ ದಿನಗಳಲ್ಲಿ ರೂಮಿಂದ ರೂಮಿಗೆ ಸರಿದಾಡುತಿದ್ದ ಹಾಗೂ ಕೆಲವೋಮ್ಮೆ ಕದ್ದು ಓದುತಿದ್ದ ಪುಸ್ತಕ ಅಂದ್ರೆ ಪಿ. ಸಾಯಿನಾಥ್ ಅವರ "Everybody loves a good drought " ಪುಸ್ತಕ. ಸುಮಾರು ೩೪ ಬಾರಿ ಮುದ್ರಣಗೊಂಡು ಹಲವಾರು ಭಾಷೆಗೆ ಅನುವಾದಗೊಂಡಿರುವ ಈ ಪುಸ್ತಕ ಪತ್ರಿಕೋದ್ಯಮ ಮಂದಿಗೆ ದಾರಿ ತೋರುವ ಒಂದು ಪಠ್ಯ ಅಂದರೆ ತಪ್ಪಿಲ್ಲ, ಜರ್ನಲಿಷ್ಟ್ ಅಂತಾದರೆ ಪಿ ಸಾಯಿನಾಥ್ ತರದಲ್ಲಿ ಮುಂದುವರಿಯಬೇಕು", ದಯಾ ಯಾವತ್ತೂ ಹೇಳುತಿದ್ದ ಮಾತಿದು.ತನ್ನ ಮುಂದಿನ ನಡೆಯನ್ನೂ ಆಯ್ದುಕೊಂಡಿದ್ದು ಈ ನಿಟ್ಟಿನಲ್ಲೆ, ಬಹುಶಃ ತನ್ನ ಮಾರ್ಗದರ್ಶಿಯ ಹೆಸರಲ್ಲೆ ಇರುವ ತನ್ನ ಮಾರ್ಗದರ್ಶಿ ಪುಸ್ತಕದಿಂದಾಗಿ ಬಂದ ದುಡ್ಡಲ್ಲೆ ಹುಟ್ಟಿರುವ ಪಿ. ಸಾಯಿನಾಥ್ ಪ್ರಶಸ್ತಿ ತನಗೆ ಮುಂದೊಂದು ದಿನ ಸಿಗಲಿದೆಯೆಂದು ನಿರೀಕ್ಷೆ ಮಾಡಿರಲಾರರು.ಇಂತಿರಬೇಕಾದರೂ ಹುಡುಕಿಕೊಂಡು ಬಂದ ಪ್ರಶಸ್ತಿಯನ್ನ ಪಡೆಯುವ ಗೆಳೆಯನ ಖುಷಿಯಲ್ಲಿ ನಾವೂ ಭಾಗಿಯಾಗಿರಬೇಕಿದ್ದದ್ದೂ ಕರ್ತವ್ಯ ಅನಿಸಿಯೆ ಜುಲೈ 1 ಪತ್ರಿಕೋದ್ಯಮ ದಿನದ ಆ ಸುಂದರ ಕಾರ್ಯಕ್ರಮದಲ್ಲಿ ನಾವೂ ಭಾಗಿಯಾಗಿದ್ದೂ ಹಾಗೂ ದೇವನೂರು ಮಹಾದೇವ್ ಹಾಗೂ ಪಿ ಸಾಯಿನಾಥ್ ಅವರಂತಹ ಲೆಜೆಂಡ್ ಗಳನ್ನು ಕಣ್ತುಂಬಿಕೊಂಡಿದ್ದು.

ಯಾವುದೋ ಒಂದು ಮಾಧ್ಯಮ ಸಂಸ್ಥೆಗೆ ಸೇರಿಕೊಂಡು ದುಡಿದು ಸಂಪಾದನೆ ಮಾಡುವಂತದ್ದು ಅತ್ಯಂತ ಸೇಫ್ ವೇ ಫಾರ್ ಲೀಡಿಂಗ್ ಲೈಫ್ ಅಂತ ತಿಳುಕೊಂಡು ಹೆಜ್ಜೆ ಇಡುತ್ತಿರುವ ಪತ್ರಕರ್ತರ ಬಳಗಾನೆ ದೊಡ್ಡದು. ಹೀಗಿರಬೇಕಾದರೆ ಪ್ರೀ ಲಾನ್ಸ್ ಜರ್ನಲಿಸಂ ಮೂಲಕ ತಾನು ಮಾಡ ಹೊರಟಿರುವ ಕಾರ್ಯಗಳಿಗೆ ಎಲ್ಲೂ ತೊಡಕಾಗದಂತೆ ಹೇಳಬೇಕಾದ ಮಾತು ಕಟ್ಟುಪಾಡುಗಳಿಗೊಳಪಟ್ಟು ಮರೆಯಾಗಬಾರದೆಂಬ ಸ್ಪಷ್ಟತೆಯೊಳಗೆ ಹಣದ ಮೋಹವ ಬದಿಗಿಟ್ಟು ಸಾಮಾಜಿಕ ದೃಷ್ಟಿಕೋನದೊಂದಿಗೆ ಆಕ್ಟಿವಿಸಂ ಜೊತೆ ಜೊತೆಗೆ ಕೆಲಸ ಮಾಡುವ ಪತ್ರಕರ್ತರ ಬಳಗ ಬೆರಳೆಣಿಕೆಯಷ್ಟು.ದಯಾ ಆರಿಸಿಕೊಂಡಿದ್ದು ಪ್ರೀ ಲಾನ್ಸ್ ಜರ್ನಲಿಸಂ ಅನ್ನು. ಪಿ ಸಾಯಿನಾಥ್ ಹೇಳುವಂತೆ ಅವರೂ ಕೂಡ ೧೩ ವರುಷ ಮಾಡಿದ್ದು ಪ್ರೀ ಲಾನ್ಸ್ ಜರ್ನಲಿಸಂನನ್ನೆ.ಬಹುಶಃ ಇವತ್ತು ಕೋರ್ಟ್ ಸರ್ಕಾರಕ್ಕೆ ಸಫಾಯಿ ಕರ್ಮಾಚಾರಿ ವಿಷಯದಲ್ಲಿ ಅಧಿಕಾರಿ ಬಳಗವನ್ನು ಮ್ಯಾನ್ ಹೋಲ್ಗಳ ಒಳಗಿಳಿದು ಚಿತ್ರಿಕರಿಸಿ ಅಂತ ಛೀಮಾರಿ ಹಾಕುತ್ತಿರುವದರ ಹಿಂದೆ ದಯಾ ಮತ್ತು ಅವರ ಬಳಗದವರ ಶ್ರಮ ದೊಡ್ಡದು.ತಾರ್ಕಿಕವಾಗಿ ಅಂತ್ಯ ಕಾಣುವವರೆಗೆ ನಾವೂ ಈ ಬಗ್ಗೆ ಮುಂದುವರಿಯಲೆ ಬೇಕಾಗಿದೆ ರಾಘೂ, ಯಾಕೋ ನನ್ನ ಸುಖ ಸಂತೋಷಗಳಿಗಾಗಿ ಆ ಜನಗಳ ಕಷ್ಟಗಳನ್ನೂ ಅವರುಗಳ ಜೊತೆಗೆ ಇದ್ದೂ ನಮ್ಮವ ಅನಿಸಿಕೊಂಡ ಮೇಲೆ ಬಿಟ್ಟು ಕೊಡಲಾಗುತ್ತಿಲ್ಲ. ಕನಿಷ್ಟ ೩ ರಿಂದ ೪ ವರುಷ ನಾನು ನನ್ನ ಬಳಗ ಈ ನಿಟ್ಟಲ್ಲಿ ಕೆಲಸ ಮಾಡಲೇಬೇಕು ಅನ್ನುವ ದಯಾ ಮಾತುಗಳನ್ನು ಕೇಳಿದಾಗ ನನ್ನಲ್ಲಿ ಪ್ರತಿಕ್ರಿಯೆಗಂತ ಉಳಿಯೋದು ಒಂದು ಮೆಚ್ಚುಗೆಯ ನೋಟವಷ್ಟೆ. ಈ ಪ್ರಶಸ್ತಿ ನನ್ನ ಟೀಂ ಗೆ ಸಂದಿದ ಗೌರವ ಅನ್ನುತ್ತಲೆ ನನ್ನ ಜವಬ್ದಾರಿ ಬದ್ದತೆ ಕಾಯ್ದುಕೊಳ್ಳುವಲ್ಲಿ ಈ ಪ್ರಶಸ್ತಿ ಸಹಕಾರಿಯಾಗಲಿದೆ ಅನ್ನುವ ದಯಾ ಮಾತುಗಳಲ್ಲಿ ನನಗೆ ಕಾಣುವದು ಸಂತಸಕ್ಕಿಂತಲೂ ಮಿಗಿಲಾದದ್ದೂ ಪಿ ಸಾಯಿನಾಥ್ ಅವರೆಡೆಗಿರುವ ಗೌರವದ ಗುರು ಸಮರ್ಪಣಾ ಭಾವ ಹಾಗೂ ಸರಳತೆ.

ಸಂಪಾದಕೀಯ, ವರ್ತಮಾನದಂತ ಬ್ಲಾಗ್ ಮೂಲಕ ಸಣ್ಣದಾಗಿ ತೊಡಗಿಕೊಂಡು ಎಲ್ಲಾ ಮಹತ್ತರ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಕ್ಕೆ ತನ್ನ ಕೆಲಸ ಕಾರ್ಯಗಳನ್ನೂ ತಲುಪಿಸುವಲ್ಲಿ ದಯಾ ಯಶಸ್ವಿಯಾಗಿದ್ದು ನಮಗೆಲ್ಲರೀಗೂ ಗೊತ್ತೆ ಇರುವಂತದ್ದೂ ಅಷ್ಟೇ ಏಕೆ ಪೇಸ್ ಬುಕ್ ಅಂತ ಸಾಮಾಜಿಕ ತಾಣವನ್ನು ಮಾಧ್ಯಮವಾಗಿ ಬಳಸಿಕೊಂಡು CNN-IBN ಅಂತ ರಾಷ್ಟ್ರೀಯಾ ಛಾನಲ್ಗಳಿಗೆ ಈ ಮಲಹೊರುವ ಪದ್ದತಿ ಇಶ್ಯೂ ಅನ್ನು ತೆಗೆದುಕೊಂಡು ಹೋಗಿ ಚರ್ಚೆಯನ್ನು ಹುಟ್ಟು ಹಾಕಿದವರೂ ದಯಾ. ಕೆಂಡಸಂಪಿಗೆ ಎಂಬ ಬ್ಲಾಗಿನಲ್ಲಿ ರಸ್ತೆ ನಕ್ಷತ್ರ ಅನ್ನೋ ಕಾಲಂ ಮೂಲಕ ಹಲವು ಲೈಫುಗಳನ್ನು ಕಟ್ಟಿ ಕೊಟ್ಟ ದಯಾ, ನಮ್ಮನ್ನೆ ನಾಚಿಸುವಂತೆ ಮಾಡಿದ್ದೂ ನಾವೆಂತ ಸಮಾಜದಲ್ಲಿದ್ದೇವೆ ಅನ್ನುವ ಯೋಚನೆಗೆ ತೆರೆದಿಟ್ಟಿದ್ದು ಹಳೆಯ ಮಾತು. ಪ್ರಶಸ್ತಿ ದಿನದ ಸಂತೋಷಕ್ಕೆ ಉಡುಗೋರೆ ಅಂತಲೋ ಏನೋ ಅದೆ "ರಸ್ತೆ ನಕ್ಷತ್ರ" ಪುಸ್ತಕ ರೂಪದಲ್ಲಿ ಪ್ರಕಟಿಸಲು ಸಹೃದಯರೊಬ್ಬರು ಕೇಳಿಕೊಂಡಿದ್ದು ದಯಾ ಸಮ್ಮತಿ ಸೂಚಿಸಿದ್ದು ನಡೆಯಿತು.ಗೆಳೆಯರಾಗಿ ನಾವುಗಳು ಖುಷಿಪಡಲು ಇಷ್ಟಿಷ್ಟೆ ಹಿಡಿಯಾದ ವಿಷಯಗಳೆ ಸಾಕು.ಯಾವನಿಗೊತ್ತು ರಸ್ತೆ ನಕ್ಷತ್ರ ಬದುಕುಗಳ ತೆರೆದಿಡುವ ದಯಾರ ಹಿಂದಿರುವ ಕಳಕಳಿಯು ಇನ್ನೆಷ್ಟು ಬದುಕುಗಳಿಗೆ ಆಸರೆಯಾಗಬಲ್ಲದೋ ಏನೊ?. ಇವೆಲ್ಲವನ್ನೂ ಹೇಳಿದ ಕಾರಣ ಇಷ್ಟೆ, ದಯಾ ಒಬ್ಬ ಪತ್ರಕರ್ತನಾಗಿ ತನ್ನ ಆಶಯಗಳಿಗೆ ಮಾಧ್ಯಮವನ್ನು ಬಳಸಿಕೊಂಡ ರೀತಿ ಅಚ್ಚರಿಪಡಿಸುವಂತದ್ದೂ.ಯಾವುದೇ ಮಾಧ್ಯಮವಾಗಲಿ ಬಳಸಿಕೊಳ್ಳುವಂತೆ ಬಳಸಿಕೊಂಡರೆ ವಿಷಯ ತಲುಪಬೇಕಾದ್ದಲ್ಲಿ ತಲುಪುತ್ತದೆ ಅನ್ನುವದನ್ನು ಮೇಲಿನೆಲ್ಲವುದರಿಂದ ನಾನು ದಯಾರನ್ನ ನೋಡಿ  ತಿಳಿದುಕೊಂಡೆ ಅನ್ನುವದು ಸತ್ಯ

ಮಾಧ್ಯಮ ಚೌಕಟ್ಟಿನೊಳಗೆ ಇದ್ದುಕೊಂಡು ಹಲವು ಉತ್ತಮ ಕೆಲಸ ಮಾಡುವ ಪತ್ರಕರ್ತರೂ ಇಲ್ಲವೆಂದಲ್ಲ.ಆದರೆ ಮಾಧ್ಯಮ ಸಂಸ್ಥೆಗೆ ಈ ಬಗ್ಗೆ ಎಷ್ಟೂ ಕಾಳಾಜಿ ಇರುತ್ತೆ ಅನ್ನುವದೂ, ವರುಷಾನುಗಟ್ಟಲೆ ನ್ಯಾಯಾಲಯ ಸುತ್ತಾಟ ನ್ಯಾಯ ಕೊಡಿಸುವಲ್ಲಿನ ಬದ್ಧತೆಯನ್ನೂ ಈ ಸಂಸ್ಥೆಗಳೂ ಎಷ್ಟರ ಮಟ್ಟಿಗೆ ಹೊಂದಿವೆ ಎಂಬುದರ ಮೇಲೆ ಪತ್ರಕರ್ತರ ಈ ತೆರನಾದ ಕೆಲಸ ನಿರ್ಧಾರಗೊಳ್ಳುತ್ತದೆ. ಈ ತರದ ಸಂಸ್ಥೆಗಳ ಸಂಖ್ಯೆಯು ಹಾಗೂ ಈ ತರನಾದ ಮನೋಭಾವ ಹೊಂದಿರುವ ಪತ್ರಕರ್ತರ ಬಳಗನೂ ವಿರಳವಾಗುತ್ತಿದೆ ಅನ್ನುವದೂ ಸತ್ಯ.ಈ ರೀತಿಯಲ್ಲಿ ಬದಲಾವಣೆಯನ್ನು ನಿರಿಕ್ಷಿಸಿದಾಗ ದಯಾ ಮೂಲಕ, ಗಾಯತ್ರಿ ಅವರ ಮೂಲಕ ಕನ್ನಡದ ಮೊತ್ತ ಮೊದಲ ಪಿ ಸಾಯಿನಾಥ್ ಪ್ರಶಸ್ತಿ ಮೂಲಕ ಕೊಂಚವಾದರೂ ಬದಲಾವಣೆಯತ್ತ ಇವುಗಳು ಸ್ಪೂರ್ತಿಯಾಗಬಲ್ಲುದೇನೊ?ಈ ರೀತಿಯ ಒಂದು ಆಶಾವಾದವನ್ನು ಇಟ್ಟು ಕೊಳ್ಳಬಹುದೇನೊ!!!. ಬಹುಶಃ ಪಿ. ಸಾಯಿನಾಥ್ ಪ್ರಶಸ್ತಿಯಲ್ಲದೆ ಬೇರಾವುದೇ ಮೀಡಿಯಾ ಪ್ರಶಸ್ತಿ ಬಗ್ಗೆ ಮೇಲಿನ ಆಶಾವಾದವನ್ನು ತೋರ್ಪಡಿಸಿದ್ದರೆ ಅಭಾಸವೆನಿಸುತಿತ್ತು. ಆದರೆ ಪಿ. ಸಾಯಿನಾಥ್ ಪತ್ರಿಕೋದ್ಯಮದ ಮಂದಿಯ ದಾರಿದೀಪ.ಆ ಪ್ರಶಸ್ತಿಗೆ ಸಲ್ಲುವ ಗೌರವ ಅಂತದ್ದೂ ಅನ್ನುವದೂ ನಮ್ಮೆಲ್ಲರಿಗೂ ತಿಳಿದ ವಿಚಾರ. ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ಅವರು ಈ ಪ್ರಶಸ್ತಿಯು ಪ್ರತಿ ವರುಷ ಸಿಗುವಂತೆ ಕನ್ನಡಕ್ಕೆ ಅನುವಾದಗೊಂಡಿರುವ "Everybody loves a good drought "(ಬರ ಅಂದ್ರೆ ಎಲ್ಲಾರೀಗೂ ಇಷ್ಟ)ಪ್ರತಿಗೆ ಸಾಯಿನಾಥ್ ಅವರಿಗೆ  ಕೊಡಬೇಕಾಗಿದ್ದ ಗೌರವಧನದ ಮೂಲಕ ಕರ್ನಾಟಕದಲ್ಲಿ ಸ್ಥಾಪಿತಗೊಳ್ಳುತ್ತಿದೆ ಅಂದಿದ್ದು ಕನ್ನಡದ ಪತ್ರಿಕೋದ್ಯಮಕ್ಕೆ ಒಂದು ಟಾನಿಕ್ ಆಗಿ ಒದಗಲಿ. ಬಡವರ ಹಸಿವೂ, ಕಷ್ಟ, ಸಾಮಾಜಿಕ ದೃಷ್ಟಿಕೋನದಡಿಯಲ್ಲಿ ಎಲ್ಲಾ ಪತ್ರಕರ್ತರೂ ತಮ್ಮನ್ನೂ ತಾವೂ ತೊಡಗಿಸಿಕೊಳ್ಳುವಲ್ಲಿ  ಇದು ಸಹಕಾರಿಯಾಗಲೆಂದು ಆಶಿಸೋಣ.


ಚಿತ್ರ ಕೃಪೆ:-ಅವಧಿ
 ಅವಧಿಯಲ್ಲಿ ಪ್ರಕಟವಾದ ಈ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ