Sunday, August 28, 2011

ಪ್ರಜಾಪ್ರಭುತ್ವದ ಗೆಲುವು



ಕಡೆಗೂ ಅಣ್ಣಾ ಹಜಾರೆ ನೇತ್ರತ್ವದಲ್ಲಿ ನಡೆದ ಜನ ಲೋಕ್ಪಾಲ್ ಪರವಾದ ಈ ದೇಶದ ಜನತೆಯ ಹೋರಾಟಕ್ಕೆ ಗೆಲುವು ಲಭಿಸಿದೆ.ನಿನ್ನೆ ಸಂಜೆ ಸರ್ಕಾರದ ಒಪ್ಪಿಗೆ ಪತ್ರ ಅಣ್ಣಾ ಕೈಗೆ ಸಿಕ್ಕಿ ಸೂರ್ಯೋದಯದ ವರೆಗೆ ಕಾದ ಅವರು ಇಂದು ಉಪವಾಸ ಅಂತ್ಯಗೊಳಿಸಿದ್ದಾರೆ,ತನ್ಮೂಲಕ ದೇಶದ ಅಬಿವೃದ್ಧಿ ದಿಸೆಗೆ ಹೊಸ ಉದಯವನ್ನು ಕೊಟ್ಟಿದ್ದಾರೆ.ದೇಶದ ಯುವಕರು ಜಾಗ್ರತಿಗೊಂಡಾಗ ಸಮಾಜದ ಅಬಿವೃದ್ಧಿ   ಸಾದ್ಯ ಎಂಬುದು ಈ ಹೋರಾಟ ಮನವರಿಕೆ ಮಾಡಿ ಕೊಟ್ಟಿದೆ.




 ಒಂದು ಸಾಮಾಜಿಕ ಕಳಕಳಿಯ ವಿಷಯಕ್ಕಾಗಿ ದೇಶವೇ ಒಂದು ದ್ವನಿಯಾಗಿದ್ದು,ಹೋರಾಟದ ಹಾದಿಯಲ್ಲಿ ಸಂಪೂರ್ಣ ಗಾಂಧೀಜಿ ತೋರಕೊಟ್ಟ ಅಹಿಂಸ ಮಾರ್ಗ ಮೆರೆದಿದ್ದು,ಎಲ್ಲೂ ಕೂಡ ಸಣ್ಣ ಅಹಿತಕರ ಘಟನೆ ನಡೆಯದೆ ಗೆಲುವು ಪಡೆದಿದ್ದು, ವಿಶ್ವಕ್ಕೆ ಮತ್ತೊಮ್ಮೆ ಅಹಿಂಸಾ  ಹೋರಾಟದ ವಿರಾಟ ದರ್ಶನ ಹೇಗಿರುತ್ತೆ ಎಂಬ ಅರಿವು ಮೂಡಿಸಿದ್ದು,ಮತದಾನದಲ್ಲಿ ಪಾಲ್ಗೊಂಡು ತಮ್ಮ ಕಾರ್ಯಗಳನ್ನು ಸರಕಾರದಿಂದ ಮಾಡಿಸಿಕೊಳ್ಳುವದಷ್ಟಕ್ಕೆ ಮಾತ್ರ ಸೀಮಿತವಾಗಿದ್ದ  ಜನರ ಮನೋಭಾವವನ್ನು ಬದಲಿಸಿ ನಿಜವಾದ ಪ್ರಜಾಪ್ರಭುತ್ವದಲ್ಲಿ ಪ್ರಜೆ ಹೇಗಿರಬೇಕು ಅನ್ನುವ ಅರಿವನ್ನು ದೇಶದ ಜನಸಾಮಾನ್ಯನಲ್ಲು  ಮುಡಿಸಿದ್ದು ,ಈ ಹೋರಾಟದ ವಿಶೇಷತೆಗಳು.ಇಷ್ಟೇ ಅಲ್ಲದೆ ನಿನ್ನೆ ನಡೆದ ಸಂಸತ್ ಅಧಿವೇಶನ, ಒಂದು ಪ್ರಜಾಪ್ರಭುತ್ವ  ದೇಶದ ಪಾರ್ಲಿಮೆಂಟು ಹೇಗೆ ನಡೆದುಕೊಳ್ಳಬೇಕೆಂಬ ಎಲ್ಲ ಅರಿವು ವಿಶ್ವಕ್ಕೆ ತೋರಿಸಿದಂತಿತ್ತು. ಹಿಂದಿನದೇನು ಇರಬಹುದು ಆದರೆ ನಿನ್ನೆ ನಡೆದ ಅಧಿವೇಶನದಲ್ಲಿ ಎಲ್ಲೂ ಕಹಿ ಭಾವನೆಗಳು ವ್ಯಕ್ತವಾಗದೇ ಒಕ್ಕೊರಲಿನ ಅಭಿಪ್ರಾಯ ದೇಶದ ಹಿತಕ್ಕಾಗಿ ವ್ಯಕ್ತವಾಯಿತಲ್ಲ ಇದನ್ನು ಪ್ರಜಾಪ್ರಭುತ್ವದ ಗೆಲುವು ಅನ್ನುತ್ತೇನೆ.
        
ಹೋರಾಟವೆಂದರೆ ಹೇಗಿರಬೇಕು ಅನ್ನುವ ದಾರಿ ದೊರೆತಾಗಿದೆ,ಈ ದಾರಿಯನ್ನು ಮುನ್ನಡೆಸಬೇಕಾಗಿದೆ.ಬ್ರಷ್ಟಾಚಾರ ವಿರುದ್ದ ಹೋರಾಟಕ್ಕೆ ಈ ಗೆಲುವು ಒಂದು ಹೆಜ್ಜೆ ಮುನ್ನಡೆ ಅಷ್ಟೆ, ಕ್ರಮಿಸಬೇಕಾದ ದಾರಿ ದೊಡ್ಡದಿದೆ.ದೇಶದ ಬ್ರಷ್ಟಾಚಾರದ ಬುಡವಾದ ಮತದಾನ ವ್ಯವಸ್ಥೆ ಸರಿಪಡಿಸಬೇಕಿದೆ,ದೇಶದ ಹಳ್ಳಿಗಳ ಅಬಿವೃದ್ಧಿಗಾಗಿ ಗ್ರಾಮ ಪಂಚಾಯತ್ ವ್ಯವಸ್ಥೆ ಬಲಪಡಿಸಬೇಕಿದೆ,ಕೃಷಿ ಪ್ರಧಾನ ದೇಶವಾದ ನಮ್ಮಲ್ಲಿ ದೇಶದ ರೈತರಿಗೆ ಅನುಕೂಲ ಒದಗಿಸಿ ಕೃಷಿ ಪ್ರಧಾನವೆಂಬುದರ ನಿಜ ಅರ್ಥವನ್ನು ಕಂಡುಕೊಳ್ಳಬೇಕಾಗಿದೆ.ದೇಶದ ನ್ಯಾಯಾಂಗ ವ್ಯವಸ್ಥೆಗೆ ಚುರುಕು ಮುಟ್ಟಿಸಬೇಕಾಗಿದೆ.ಅದಕ್ಕಾಗಿ ಮತ್ತಿನ್ನೊಂದಿಷ್ಟು ಹೋರಾಟದ ಅಗತ್ಯತೆಗಳು ಈ ದೇಶಕ್ಕೆ ಇವೆ.

 ಈ ದೇಶದ ಯುವ ಜನತೆ ಗಾಂಧೀಜಿ ಅವರನ್ನು ಅಣ್ಣಾ ಹಜಾರೆಯವರಲ್ಲಿ ಕಂಡರು.ಕೆಲವರು ಅದನ್ನು ಅತಿಷಯೋಕ್ತಿ ಎಂದು ಕರೆದರೂ ಕೂಡ, ಗಾಂಧೀಜಿ ಹಾದಿಯಲ್ಲಿ ನಡೆಯುತ್ತೇನೆ ಎಂದ ಅಣ್ಣಾ ಅವರು ಈ ಹೋರಾಟದ ಮಟ್ಟಿಗೆ ಅದ ನನಸಾಗಿಸಿದರು.ಒಟ್ಟಿನಲ್ಲಿ ದೇಶದ ಸಮಸ್ತ ಜನತೆಯಲ್ಲಿ ದೇಶಾಭಿಮಾನದ ಕಿಚ್ಚು ಉದ್ದೀಪನ ಗೊಳಿಸುವಲ್ಲಿ ಸಫಲರಾದರು,ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೊಸ್ಕರ ಇರುವ ವ್ಯವಸ್ಥೆಯಲ್ಲಿ ಪ್ರಜೆಯೆ ಪ್ರಭು ಎಂಬುದನ್ನು ವಿಶ್ವಕ್ಕೆ ಈ ಹೋರಾಟ ಸಂದೇಶ ರವಾನಿಸಿತು.ಒಟ್ಟಿನಲ್ಲಿ ಪ್ರಜಾಪ್ರಭುತ್ವದ  ಗೆಲುವಾಯಿತು.ಇಂತಹ ಪ್ರಜಾಪ್ರಭುತ್ವದ ಗೆಲುವಿಗೆ ಅಣ್ಣಾ ಹಜಾರೆ,ಸಂತೋಷ್ ಹೆಗ್ಡೆ ಅಂತವರ ಮಾರ್ಗದರ್ಶನ ಸದಾ ಈ ದೇಶಕ್ಕೆ ಲಭಿಸಲಿ ಎಂಬ ಆಶಯ ನನ್ನದು.
ನಿಮ್ಮವ,
ರಾಘವೇಂದ್ರ ತೆಕ್ಕಾರ್.




No comments:

Post a Comment