Showing posts with label ಚಿತ್ರ ವಿಮರ್ಶೆ. Show all posts
Showing posts with label ಚಿತ್ರ ವಿಮರ್ಶೆ. Show all posts

Tuesday, February 12, 2013

ಪ್ರೆಶ್ ಪ್ರೆಶ್ ಪ್ರೇಮ್ ಕಾವ್ಯ - ಚಾರ್ ಮಿನಾರ್


ಪ್ರೀತಿಸುವ ಜೀವಕ್ಕೆ ಕುಷ್ಠರೋಗ ಬಂದಿದೆ ಅಂದ್ರೂ ಪ್ರೀತಿಸ್ಬೇಕ್ರಿ ಕೊನೆ ತನ್ಕ.!!!! 

ಏಲ್ಲೋ ಇದ್ದವ್ರನ್ನು ಏನೇನೆಲ್ಲಾಗಿಸಿ ಅವ್ರ ಒಳಿತನ್ನು ಕಣ್ಣು ತುಂಬುಕೊಂಡು ತಾವೂ ಮಾತ್ರ ಹಾಗೆ ಇರುವ ಏಕೈಕ ಜೀವ ಎಂದ್ರೆ ನಮ್ಮನ್ನು ತಿದ್ದಿ ತೀಡಿ ಬೆಳೆಸಿದ ಮೇಷ್ಟ್ರುಗಳು ಕಣ್ರಿ!!!! 
ಇಂತವೆ ಗಿರಕಿ ಹೊಡೆಯೋ ಡೈಲಾಗ್ ಮಧ್ಯೆ ವ್ಯಕ್ತಿಯೊಬ್ಬನ ಏಳ್ಗೆಗೆ ಬೇಕಾದ ನಾಲ್ಕು ಸಂಬಂಧಗಳ ಸುತ್ತನೆ ಒಂದು ಕಥೆ ಕಟ್ಟಿಕೊಡುವ ಪ್ರಯತ್ನ ಚಾರ್ ಮಿನಾರ್ ಚಿತ್ರದ್ದು. ಸುಭದ್ರ ಜೀವನಕ್ಕೆ ಬೇಕಾದ ಈ ನಾಲ್ಕೂ ಪಿಲ್ಲರ್ಗಳು ಒಬ್ಬ ವ್ಯಕ್ತಿಗೆ ಸರಿಯಾಗಿ ದೊರೆತಲ್ಲಿ ಆತ ಯಶಸ್ಸು ಕಾಣಬಲ್ಲ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಸಮರ್ಪಕವಾಗಿದೆ ಮತ್ತೂ ಗೆದ್ದಿದೆ. 

ಸಣ್ಣ ಪುಟ್ಟ ಕೊರತೆಗಳ ಹೊರತಾಗಿಯೂ ಚಿತ್ರವೊಂದು ಪ್ರೇಕ್ಷಕನ ಜೀಬಿಗೆ ಸಂದ ಖರ್ಚಿಗೆ ನ್ಯಾಯ ಒದಗಿಸುತ್ತದೆ, ಹಳ್ಳಿ ಪರಿಸರದ ಚಿತ್ತಾರವನ್ನ ಚಂದ ಬಿಡಿಸಿಕೊಟ್ಟಿದ್ದಾರೆ ನಿರ್ದೇಶಕ ಚಂದ್ರು.ಅಲ್ಲಲ್ಲಿ ಒಂದಷ್ಟೂ ಕಥೆ ಎಳೆದಂತೆ ಭಾಸವಾದರೂ ಚಿತ್ರ ಕಥೆಯ ಮೇಲಿನ ಬಿಗಿ ಹಿಡಿತ ಈ ಕೊರತೆಯ ತೀವ್ರತೆ ಮನತಟ್ಟದಂದೆ ಮಾಸಿ ಬಿಡುತ್ತದೆ. 

ಚಿತ್ರದ ನಾಯಕನ ವಿಭಿನ್ನ ಗೆಟಪ್ಪುಗಳು ಹಾಗು ನಾಯಕ ಪ್ರೇಮ್ ನ ನವಿರು ನಟನೆ ಪ್ರೇಕ್ಷಕನಿಗೆ ಖುಷಿಕೊಡುತ್ತದೆ, ಈ ಚಿತ್ರದ ಮೂಲಕ ಪ್ರೇಮ್ ಗೊಂದು ಗಟ್ಟಿ ಬ್ರೇಕ್ ಸಿಕ್ಕಿದೆ ಎಂದರೆ ಅತಿಶಯೋಕ್ತಿ ಅನಿಸಲಾರದು.ಚಿತ್ರದ ನಾಯಕಿ ಮೇಘನಾದ್ದು ಮೊದಮೊದಲು ಚೆಲ್ಲು ಚೆಲ್ಲು ಚೆಲುವಿನಾಟವಾಗಿದ್ದರೆ ಚಿತ್ರ ಕ್ಲೈಮ್ಯಾಕ್ಸ್ ತಲುಪುತಿದ್ದಂತೆ ಜೀವನದ ಏಳು ಬೀಳಿನ ಚಿತ್ರಣ ಕೊಡುವ ಗಂಭೀರತೆಗೆ ತಲುಪುವ ಚೆಲುವಿನ ಪಾತ್ರ.ತಮ್ಮ ತಮ್ಮ ಪಾತ್ರಕ್ಕಂತೂ ಇಬ್ಬರೂ ನ್ಯಾಯ ಒದಗಿಸಿದ್ದಾರೆ. 

ನಮ್ಮ ಉನ್ನತಿಗೆ ಮೂಲ ಕಾರಣೀಭೂತರಾದ ಗುರುಗಳು ಹಾಗೂ ತಾ ಕಲಿತ ಶಾಲೆಯು ಒಂದು ಅಂತಸ್ತು ತಲುಪಿದ ಮೇಲೆ ನೆನಪಾಗಿ ಆ ಮೂಲಕ ಹಳೆಯ ಸಹಪಾಠಿಗಳೆಲ್ಲ ಮತ್ತೆ ಸೇರುವ ಒಂದು ಕಾರ್ಯಕ್ರಮ ಈ ಚಾರ್ ಮಿನಾರ್ ಚಿತ್ರದ ಮೇಲ್ನೋಟದ ಒಂದೆಳೆಯ ಕಥೆ, ಸಹಜವಾಗಿ ಶಾಲ ದಿನಗಳ ಬಾಲ್ಯ,ಇಡ್ಲಿ ತಿನಿಸುವ ಅಜ್ಜಿ, ಕುರಿ ಕಾಯ್ವ ಚಿತ್ರದ ನಾಯಕನ ತಂದೆ,ಇದೆಲ್ಲವಕ್ಕಿಂತ ಮುಖ್ಯವಾಗಿ ತನ್ನ ಸಹಪಾಠಿ ಚಿತ್ರದ ನಾಯಕಿ ರಾಧೆ ಆಕೆಯ ಉತ್ತೇಜನದಿಂದ ನಾ ಪಡೆದ ಇಂದಿನ ಸ್ಥಾನ ಎಲ್ಲವೂ ಚಿತ್ರದ ನಾಯಕ ಮೋಹನನೀಗೆ ನೆನಪಾಗೋದು ಆ ಮೂಲಕ ಚಿತ್ರ ಪ್ರೇಕ್ಷಕನೆದುರು ತೆರೆದುಕೊಳ್ಳುವದು ಈ ಕಾರ್ಯಕ್ರಮಕ್ಕೆ ಅಮೇರಿಕದಾ ಕಂಪೆನಿಯೊಂದರಲ್ಲಿ ಸಿಇಓ ಆಗಿರುವ ಈತ ಬರುವ ದಾರಿಯಲ್ಲೆ…… ಮುಂದಿನದ್ದು ಶಾಲೆಯ ಆ ಕಾರ್ಯಕ್ರಮ ಬಾರದ ರಾಧೆ….., ಕೊನೆಗೂ ಒಂದಾಗೋ ರಾಧಾ-ಮೋಹನರ ಅತ್ಯದ್ಬುತ ಕ್ಲೈಮ್ಯಾಕ್ಸ್. ಪ್ರೀತಿ ಎಂತಿದ್ದರೂ ಪ್ರೀತಿನೆ ಎಂಬ ಚಂದ್ರು ಅಂಬೋಣಕ್ಕೆ ಪ್ರೇಕ್ಷಕ ಫುಲ್ ಖುಷ್, ತುಂತುರು ಮಳೆ ಒಮ್ಮಲೆ ಭೋರ್ಗರೆದು ನಿಂತ ಅನುಭವಕ್ಕೆ ಪ್ರೇಕ್ಷಕನ ಮೌನದುತ್ತರ. 

ನವಿರು ಗೀತೆಗೆ ಜೊತೆಯಾಗಿದ್ದು ಹರಿಕೃಷ್ಣರ ಸೊಗಸಾದ ಸಂಗೀತ. ಲೋಕೇಶರ ಸಾಹಿತ್ಯ ತುಸು ಹೊಸ ಬಗೆಯದ್ದು ಎನಿಸಿದರೂ ಪ್ರೇಕ್ಷಕನೆದೆಗೆ ನಾಟುವಂತದ್ದು.ಚಂದ್ರಶೇಖರ್ ಕೆಮಾರಾ ವರ್ಕ್ ಕೂಡ ಚೆಂದಕ್ಕಿದೆ. ಹಾಟ್ ಹಾಟ್ , ಹೈ ಫೈ ಲವ್ ಸ್ಟೋರಿ ಅಲ್ಲದಿರಬಹುದು ಆದರೆ ಪ್ರೀತಿಯ ಜೊತೆ ಜೊತೆಗೆ ಇದರ ಸುತ್ತಲೂ ಗುರುಗಳು ಹೆತ್ತವರೂ ಸ್ನೇಹಿತರೂ ಎಂಭ ಪಿಲ್ಲರ್ಗಳನ್ನೂ ಕಟ್ಟಿಕೊಟ್ಟು ಕಥೆಯಾಗಿಸಿದ ಚಾರ್ ಮಿನಾರ್ ಪ್ರೀತಿಯ ಹೊಸ ಆಯಾಮವನ್ನು ಕೊಡುವ ಪ್ರೇಮಕಾವ್ಯವಾಗಿ ದಕ್ಕುವದರಲ್ಲಿ ಸಂದೇಹವಿಲ್ಲ, ಪ್ರೇಮಿಗಳ ದಿನ ಬೇರೆ ಹತ್ತಿರದಲ್ಲಿದೆ. ಜೋಡಿಯಾಗಿ ಹೋಗಿ ನೋಡ್ಬನ್ನಿ,ಪ್ರೇಮಿಗಳು ಅಷ್ಟೆ ಏಕೆ? ಒಂದು ಪ್ರೆಶ್ ಕಥೆ ಬೇಕು ಎಂದು ಬಯಸೋ ಎಲ್ಲಾ ಮಂದಿ ಹೋಗಿ ಕುಳಿತು ಅನಂದ ಪಡೋ ಚಿತ್ರ ಚಾರ್ ಮಿನಾರ್. ಚಿತ್ರ ನೋಡುತ್ತಾ ನೀವು ನಿಮ್ಮ ಪ್ಲಾಶ್ ಬ್ಯಾಕ್ ಬಾಗಿಲನ್ನು ತೆರೆದುಕೊಂಡು ಚಿತ್ರ ಸವಿಯಲಾಗಲಿಲ್ಲ ಕಥೆ ಏನೆಂದು ತಿಳೀಲಿಲ್ಲ ಎಂದು ಕೊರಗಿಕೊಂಡೀರಿ ಜೋಕೆ.

Tuesday, July 10, 2012

"ಈಗ"- ಈಗ್ಲೆ ಅಲ್ಲಾಂದ್ರೂ ನೋಡ್ದೆ ಇರ್ಬೇಡಿ.


"ಈಗ" ನೊಣವೆ ಹೀರೋ ಆಗಿ ಕಾಣಿಸಿಕೊಂಡ ಚಿತ್ರ ಭರ್ಜರಿ ಯಶಸ್ಸಿನೊಂದಿಗೆ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದೆ. ಈ ಯಶಸ್ಸು ಸೂಕ್ತವಾಗಿದೆ ಮತ್ತು ಒಂದದ್ಬುತ ಪರಿಕಲ್ಪನೆಗೆ ಸಿಕ್ಕ ಉತ್ತಮ ಪ್ರತಿಕ್ರಿಯೆಯೂ ಹೌದು.ರಾಜಮೌಳಿಯವರ ಎಲ್ಲಾ ಹಿಂದಿನ ಯಶಸ್ವಿ ಚಿತ್ರಗಳನ್ನೆಲ್ಲ ಮೀರಿಸಿ ಈ ಚಿತ್ರ ನಿಂತಿದೆ ಅಂದರೂ ಅತಿಶಯೋಕ್ತಿಯಲ್ಲ.ಒಂದರೆಕ್ಷಣವೂ ಪ್ರೇಕ್ಷಕನ ಚಿತ್ತ ಚಿತ್ರದಿಂದ ದೂರ ಸರಿಯದಂತೆ ಹಿಡಿದಿಡುವ ರಾಜಮೌಳಿಯ ಗಟ್ಟಿ ನಿರ್ದೇಶನ, ಸುದೀಪ್ ರ ಪೂರ್ಣ ಪ್ರಮಾಣದ ಅದ್ಬುತ ಅಭಿನಯ, ಅತ್ಯದ್ಭುತ ಗ್ರಾಫಿಕ್ ತಂತ್ರಜ್ಞಾನದ ಬಳಕೆ,ಕೀರವಾಣಿಯವರ ಉತ್ತಮ ಸಂಗೀತ, "ಈಗ"ವನ್ನೂ ಶ್ರೀಮಂತಗೊಳಿಸಿದೆ. ಎಲ್ಲೂ ಅನಾವಶ್ಯಕವಾಗಿ ಎಳೆದುಕೊಳ್ಳದೆ, ಕಥೆಗೆ ಎಷ್ಟು ಬೇಕೋ ಅಷ್ಟಷ್ಟೆ ಸೂಕ್ತವೆನಿಸುವ ದೃಶ್ಯ ಸಂಯೋಜನೆಯೊಂದಿಗೆ ಎರಡೇ ಎರಡೂ ಉತ್ತಮ ದೃಶ್ಯ ಪರಿಕಲ್ಪನೆಯ ಜೊತೆಗಿರುವ ಹಾಡೂಗಳೊಂದಿಗೆ ಈ ಚಿತ್ರವೂ 2 ಘಂಟೆಯ ಸಮಯದಲ್ಲಿ ಉತ್ತಮ ಮನರಂಜನೆ ಸವಿಯನ್ನು ಕೊಡುವದೂ ಖಂಡಿತಾ ಮತ್ತೂ ಈ ಸವಿ ಬಹುದಿನದ ಮಟ್ಟಿಗೆ ಉಳಿದುಕೊಳ್ಳುವದೂ ಕೂಡ ಸತ್ಯ.

ಸುದೀಪ್ ಪೂರ್ಣ ಪ್ರಮಾಣದ, ಬಹುಶಃ ಹಿಂದಿನೆಲ್ಲಾ ಚಿತ್ರದ ಅಭಿನಯವನ್ನೂ ಮೀರಿಸಿದ ಅಭಿನಯ ಈ ಚಿತ್ರದಲ್ಲಿ ಬಂದಿದೆ ಎಂಬುದು ಚಿತ್ರ ನೋಡುಗ ಕಾಣುತ್ತಲೆ ಸುದೀಪ್ ರನ್ನೂ ಅರ್ಥೈಸಿಕೊಂಡು ರಾಜ್ ಮೌಳಿ ಸುದೀಪರನ್ನೂ ಈ ಮಟ್ಟಿಗೆ ಬಳಸಿಕೊಂಡಿರೋದು ಕೂಡ ಚಿತ್ರ ನೋಡಿ ಮುಗಿಸಿದ ಪ್ರೇಕ್ಷಕ ಮೆಚ್ಚುವ ಅಂಶಗಳಲ್ಲೊಂದು. ಇತ್ತೀಚೆಗೆ ಕನ್ನಡದ ಒಂದು ಸಂಘಟನೆ ಸುದೀಪ್ ರಿಗೆ 'ಅಭಿನವ ಚಕ್ರವರ್ತಿ' ಬಿರುದನ್ನೂ ಕೊಟ್ಟಿದ್ದೂ ನೆನಪಾಗಿ ಈ ಬಿರುದಿಗೆ ಸುದೀಪ್ ಸೂಕ್ತವಾದ ವ್ಯಕ್ತಿ ಹೌದೆನ್ನುವ ಅನುಮೋದನೆಯನ್ನೂ ಚಿತ್ರ ನೋಡಿದ ಪ್ರೇಕ್ಷಕನಲ್ಲಿ ಈ ಚಿತ್ರದ ಸುದೀಪ್ ಪಾತ್ರ ಮೂಡಿಸುತ್ತದೆ. ಕನ್ನಡದಲ್ಲೆ ಭಾಷೆಯಲ್ಲೆ ಪ್ರಾರಂಭವಾಗುವ ಚಿತ್ರ ಪ್ರಾರಂಭದಲ್ಲೆ ಪ್ರೇಕ್ಷಕನನ್ನೂ ಚಿತ್ರದತ್ತ ಸೆಳೆದು ಬಿಡುತ್ತೆ, ತದ ನಂತರ ಪ್ರೇಕ್ಷಕನ ಚಿತ್ತವೆಲ್ಲ ಚಿತ್ರದಲ್ಲೆ ತೊಡಗಿ ಬಣ್ಣದ ಚಿತ್ತಾರವ ಕಣ್ಣು ತುಂಬಿಕೊಳ್ಳುವಂತೆ ಮಾಡುತ್ತದೆ.ರಾಜ್ ಮೌಳಿಯವರ ಈ ವಿಶಿಷ್ಟ ಪರಿಕಲ್ಪನೆಯನ್ನೂ ಯಾವೂದೇ ಹಾಲಿವುಡ್ ಚಿತ್ರಗಳಿಗೂ ಕಡಿಮೆ ಇಲ್ಲದಂತೆ ನೋಡಿ ತನ್ನದಾಗಿಸಿಕೊಳ್ಳುವ ಅವಕಾಶವನ್ನೂ ಮಿಸ್ ಮಾಡ್ಕೊಳ್ಳದೆ ಇರುವದು ಉತ್ತಮ ಎಂಬುದನ್ನು ತಿಳಿಯಪಡಿಸುವದಕ್ಕಾಗಿ ಹಿಂಗೊಂದು ಬರಹ.

ಡೈನೋಸಾರ್ , ಆನಕೊಂಡ, ಆನೆ, ಹುಲಿ, ಸಿಂಹ, ಇಲಿ, ಮೊಲ, ನಾಯಿ ಇಂಥಹ ಪ್ರಾಣಿಗಳನ್ನೆಲ್ಲಾ ಬಳಸಿಕೊಂಡು ಚಿತ್ರಗಳೂ ಮೂಡಿಬಂದಿದ್ದು ನಾವೂ ನೋಡಿರುವಂತದ್ದೆ. ಬಹುಶಃ ಮೊದಲ ಭಾರಿಗೆ ಒಂದೆ ಚಪ್ಪಾಳೆ ಏಟಿಗೆ ಹೊಸಕಿ ಬಿಡಬಹುದಾದ, ಬರೀಯ ಕಣ್ಣ ದೃಷ್ಟಿಯ ಗಮನಕ್ಕೂ ಗಮನಿಸದ ಹೊರತಾಗಿ ಬರದ ನೊಣವೊಂದು ಚಿತ್ರದ ಹೀರೋವಾಗಿ ಕಾಣಿಸಿಕೊಂಡು ವಿಲನ್ ಮೇಲೆ ರಿವೇಂಜ್ ತೀರಿಸುವಂತ ಪರಿಕಲ್ಪನೆ ಹೇಗಿದ್ದೀತೂ???ಹೇಗೆ ನೊಣವೊಂದು ಸಂಭಾಷಿಸಬಹುದು?? ನೊಣವೊಂದು ಏನು ಮಹಾ ಕಾಟ ಕೊಡಲು ಸಾಧ್ಯ?? ಇಂತಹ ಕುತೂಹಲಗಳೆ "ಈಗ" ಚಿತ್ರದತ್ತ ಆ ಮೂಲಕ ಚಿತ್ರಮಂದಿರದತ್ತ ನನ್ನ ಸೆಳೆದಿದ್ದು.ನನ್ನೆಲ್ಲ ಕುತೂಹಲದ ಪ್ರಶ್ನೆಗಳಿಗೆ ಸಿಕ್ಕಿದ ಉತ್ತರವಂತೂ ಅದ್ಬುತ.ನೊಣವೆ ಹಾಸ್ಯ ಪಾತ್ರವಾಗಿ ಪ್ರೇಕ್ಷಕನನ್ನೂ ನಕ್ಕೂ ನಗಿಸಲೂಬಹುದೂ ಎಂಬುದೂ ಕೂಡ ಕಂಡುಕೊಂಡಾಗ ರಾಜಮೌಳಿಯ ನಿರ್ದೇಶನಕ್ಕೆ ಮನಸ್ಸಲ್ಲೆ ಒಂದು ಶಭಾಸ್ ಅಂದಿದ್ದೆ.ಇಂತದ್ದೊಂದು ಕಾನ್ಸೆಪ್ಟ್ ಹುಟ್ಟಿಸಿ ಅದಕ್ಕೆ ಸುದೀಪ್ ಸೂಕ್ತ ನಟ ಎಂಬುದಾಗಿ ರಾಜಮೌಳಿ ಆರಿಸಿದ್ದನ್ನ ನೋಡಿದರೆ ರಾಜಮೌಳಿಯವರಲ್ಲಿರುವ ಆ ನಿರ್ದೇಶಕನಿಗೆ ಒಂದು ಸಲಾಂ ನೀಡಲೇಬೇಕು.ಒಂದು ಮಿನಿಯೇಚರ್ ಆರ್ಟಿಷ್ಟ್ ಆಗಿ ಕಂಡುಬರುವ ಚಿತ್ರದ ನಾಯಕಿ ಶಮಂತಾ ಅವರ ಪಾತ್ರವೂ ಗಮನ ಸೆಳೆಯುವಂತದ್ದು.ಚಿತ್ರದ ಮೊದಲ ಕೆಲವೆ ಕೆಲವೂ ನಿಮಿಷಗಳಲ್ಲಿ ಚಿತ್ರದ ನಾಯಕನಾಗಿ ಕಂಡು ಬರುವ ನಾನಿ ಅವರ ಪಾತ್ರ ಗಮನಸೆಳೆಯುತ್ತಲೆ ಕೊನೆಗೊಂಡು ನೊಣ ಚಿತ್ರವನ್ನೂ ಆವರಿಸಿಕೊಂಡು ಬಿಡುತ್ತೆ.ಸೆಂಥಿಲ್ ಅವರ ಉತ್ತಮ ಕ್ಯಾಮಾರ ವರ್ಕ್ ಕೂಡ ಚಿತ್ರವನ್ನು ದೃಶ್ಯ ಕಾವ್ಯವಾಗಿ ಮೂಡಿಸುತ್ತೆ.

ಒಂದೊಳ್ಳೆ ಚಿತ್ರ "ಈಗ" ಅನ್ನುವದರಲ್ಲಿ ಎರಡೂ ಮಾತಿಲ್ಲ,ಚಿತ್ರದ ದೃಶ್ಯಗಳಲ್ಲಿ ಒಂದು ಸೂಜಿ ಬಿದ್ದರೂ, ನೀರು ಹಾಯಿಸುವ ಪೈಪ್ ಎಡವಿದರೂ ಇಂತಹ ಸಣ್ಣ ಪುಟ್ಟ ಹಲವು ಘಟನೆಗಳೂ ನಡೆದರೂ ಕೂಡ ಅದು ಕಥೆಯ ಹೊರತಾಗಿದ್ದು ಅಲ್ಲ ಬದಲಾಗಿ ಅದೊಂದು ಸಕಾರಣಕ್ಕೆ, ಇಂತಹುಗಳೆ "ಈಗ" ನಿರ್ದೇಶಕನ ಗಟ್ಟಿತನ.ಕಮರ್ಷಿಯಲ್ ಎಲಿಮೆಂಟ್ಸ್ ಗಳೂ ಬೇಕೆಂದು ಇಲ್ಲ ಸಲ್ಲದ್ದನ್ನೂ ಸೇರಿಸದೆ ಒಂದೊಳ್ಳೆ ಕಮರ್ಷಿಯಲ್ ಚಿತ್ರವಾಗಿ "ಈಗ" ಮೂಡಿಬಂದಿರುವದನ್ನು ಕಾಣಬಹುದು.ಒಟ್ಟಿನಲ್ಲಿ ಕುಟುಂಬ ಸಮೇತವಾಗಿ ಚಿತ್ರವನ್ನೂ ಅಸ್ವಾದಿಸಬಹುದಾದದ್ದು, ಅದರಲ್ಲೂ ಮುಖ್ಯವಾಗಿ ಮನೆಮಂದಿ ಮಕ್ಕಳ ಜೊತೆ ಈ ಚಿತ್ರವನ್ನೂ ನೋಡಿದಲ್ಲಿ ಇನ್ನಷ್ಟು ರುಚಿಯಾಗಬಲ್ಲುದಾದ ಚಿತ್ರವಿದು.ನೊಣದ ಆಟಾಟೋಪ ಮಕ್ಕಳನ್ನೂ ಕೂಡ ತನ್ನತ್ತ ಸೆಳೆಯಬಲ್ಲುದು. ಹಾಗಿದ್ದರೆ ಮತ್ಯಾಕೆ ತಡ, ಈಗ ಚಿತ್ರವನ್ನೂ ಈಗಲೇ ಅಲ್ಲದಿದ್ರೂ ನೋಡ್ದೆ ಇರ್ಬೇಡಿ.

Tuesday, March 13, 2012

ಕಾಕ್ ಟೈಲ್-ವಿವಾಹೇತರ ಸಂಬಂಧಗಳಿಗೊಂದು ಪಾಠ

ವೃತ್ತಿ ಸಹಜವಾಗೆ ಮುಡಿಗೇರಿಸಿದ ಅಹಂನೊಂದಿಗೆ ಮನೆಯಲ್ಲಿರುವ ತನ್ನ ಸುಂದರ ಸಂಸಾರವನ್ನು ಮರೆತು ತನ್ನ ಆಫೀಸ್ ಅಸಿಸ್ಟೆಂಟ್ ಜೊತೆ ಲಲ್ಲೆಗರೆವ ವಿವಾಹೇತರ ಅನಧಿಕೃತ ಸಂಬಂಧವನ್ನು ಹೊಂದಿ ತನ್ನವರೆ ತಮಗೆ ಪಾಠ ಕಲಿಸುವವರೆಗೆ ಇದೆ ಚಪಲದಲ್ಲಿ ಮುಂದುವರಿದು ಕಡೆಗೊಂದು ದಿನ ಪಶ್ಚಾತಾಪದ ಬೇಗುದಿಯನ್ನು ಸೆಳೆದಪ್ಪುವ ಕಥಾ ಹಂದರವುಳ್ಳ 2010 ರಲ್ಲಿ ತೆರೆ ಕಂಡ ಕಾಕ್ ಟೈಲ್ ಮಳಿಯಾಳಿ ಚಿತ್ರವನ್ನ ಕೆಲ ದಿನಗಳ ಹಿಂದೆ ಮತ್ತೆ ನೋಡಿದೆ.ಯಾಕೊ ಈ ಬಗ್ಗೆ ಬರೆಯಬೇಕೆಂದೆನಿಸಿತು.ಮಳೆಯಾಳಿ ಚಿತ್ರಗಳೆ ಹಾಗೆ ಭಾವನೆಗಳನ್ನು ಹಿಡಿಯಾಗಿಸಿ ಹೃದಯಕ್ಕೆ ಲಗ್ಗೆ ಇಡುತ್ತದೆ. ಕಾಕ್ ಟೈಲ್ ಚಿತ್ರವೂ ಇದಕ್ಕೆ ಹೊರತಾಗಿಲ್ಲ. ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಅನೂಪ್ ಮೆನನ್,ಸಮೃತಾ ಸುನೀಲ್,ಜಯಸೂರ್ಯರ ಮನೋಜ್ಙ ಅಭಿನಯದಿಂದ ಕೂಡಿದ ಈ ಚಿತ್ರ ಕೊನೆವರೆಗು ಸಸ್ಪೆನ್ಸ್ ಜೊತೆ ಪ್ರೇಕ್ಷಕನನ್ನ ಹಿಡಿದಿಟ್ಟುಕೊಂಡೆ ಸಾಗುತ್ತೆ.ಅರುಣ್ ಕುಮಾರ್ ಗಟ್ಟಿ ನಿರ್ದೇಶನ ಪ್ರದೀಪ್ ನಾಯರ್ ರ ಚೆಂದದ ಕ್ಯಾಮಾರ ಕೈಚಳಕ ಕೂಡ ಚಿತ್ರದ ಮೆರುಗನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. 2007 ರಲ್ಲಿ ತೆರೆ ಕಂಡ ಕೆನೆಡಿಯನ್ ಚಿತ್ರ "ಬಟರ್ ಪ್ಲೈ ಆಫ್ ದ ವೀಲ್ "ಅನ್ನು ಇದು ಹೋಲುವದು ಸತ್ಯ.

ಚಿತ್ರದ ನಾಯಕಿ ಪಾರ್ವತಿ ಶಾಪಿಂಗ್ ಮಾಲ್ ನಲ್ಲಿ ತನ್ನ ಮಗು ಅಮ್ಮು ಜೊತೆ ಶಾಪಿಂಗ್ ಜೊತೆ ದೂರವಾಣಿ ಸಂಭಾಷಣೆ ನಡೆಸುತ್ತಿರುವಾಗ ಮಗುವನ್ನು ಮಿಸ್ ಮಾಡಿಕೊಳ್ಳುತ್ತಾಳೆ, ಕ್ಷಣಕ್ಕೆ ಗಾಭರಿಗೊಳ್ಳೊ ತಾಯಿ ತನ್ನ ಮಗು ಯಾರೊ ಕೊಡಿಸಿದ ಗೊಂಬೆ ಜೊತೆ ಪತ್ತೆಯಾದಾವಾಗ ನಿಟ್ಟುಸಿರ ಬಿಡುತ್ತಾಳೆ, ಈ ಮೂಲಕ ಪ್ರಾರಂಭ ಪಡೆಯುವ ಚಿತ್ರ ಆರಂಭದಲ್ಲೆ ಒಂದು ಆತಂಕವನ್ನ ಪ್ರೇಕ್ಷಕರಲ್ಲಿ ಹುಟ್ಟುಹಾಕುತ್ತದೆ.ಗೊಂಬೆ ಕೊಡಿಸಿದ್ದು ಯಾರು? ಅನ್ನೊ ಪ್ರಶ್ನೆಯೊಂದು ಹುಟ್ಟು ಪಡೆದಿರುತ್ತೆ. ಗಂಡ ರವಿಗಾಗಿ ಮನೆಯಲ್ಲೆ ಕಾಯುವ ಪಾರ್ವತಿ ಪದೆ ಪದೆ ಗಂಡನ ಮೊಬೈಲಿಗೆ ರಿಂಗಣಿಸಿದರೂ ದೊರೆಯುವ ನಾಟ್ ರೀಚೆಬಲ್ ಉತ್ತರ, ಪಾರ್ವತಿಯ ಹುಟ್ಟು ಹಬ್ಬದ ದಿನ ಅಪರಾತ್ರಿಯಲ್ಲಿ ಕೇಕ್ ಒಂದಿಗೆ ಆಗಮಿಸೊ ಗಂಡ ಈ ತರ ಮಾಮೂಲಿಯಾಗಿ ಕಥೆ ಮುಂದುವರಿಯುತ್ತೆ.ಹೀಗಿರಲೊಂದು ದಿನ ಪಾರ್ವತಿ ತನ್ನ ಗೆಳೆತಿಯ ಬರ್ತಡೆ ಪಾರ್ಟಿಗೆ ಹೊರಟರೆ ನನಗೂ ಆ ದಿನ ಬಾಸ್ ಮೀಟಿಂಗ್ ಕರೆದಿದ್ದಾರೆ ಅಂಥ ರವಿ ಅನ್ನಲು ಮಗುವನ್ನು ನೋಡಿಕೊಳ್ಳಲು ಆಯಾ ಒಬ್ಬಳನ್ನ ಆ ದಿನದ ಮಟ್ಟಿಗೆ ನೇಮಿಸಿಕೊಂಡು ಒಂದೆ ಕಾರಲ್ಲಿ ಹೊರಡುತ್ತಾರೆ ಅಸಲಿಗೆ ರವಿ ತನ್ನ ವಿವಾಹೇತರ ಪ್ರೇಯಸಿ ಜೊತೆ ಕಾಲ ಕಳೆಯಲು ಹೊರಟಿದ್ದೆಂಬುದು ಪ್ರೇಕ್ಷಕರಿಗೆ ಚಿತ್ರದ ಕೊನೆವರೆಗೆ ತಿಳಿಯಲಾರದು.ಹೀಗೆ ಹೊರಟ ಗಂಡ ಹೆಂಡತಿ ಪಯಣದಲ್ಲೆ ಚಿತ್ರವೆಲ್ಲ ಅಡಗಿರುತ್ತೆ.ಈ ಪಯಣದ ಕೊನೆಯೆ ಚಿತ್ರದ ಕೊನೆಯಾಗುತ್ತೆ. ಹಾಗಾದರೆ ಈ ಪಯಣದುದ್ದ ನಡಿಯುವದು ಏನು ಎಂಬ ಕುತೂಹಲ ನಿಮ್ಮದಾಗಿದ್ದರೆ ಮುಂದೆ ಓದಿ.


ಕಾರು ಕೆಟ್ಟಿದೆಯೆಂದು ಇವರ ಕಾರಿಗೆ ಡ್ರಾಪ್ ಕೇಳೊ ವೆಂಕಟೇಶ್ ಪಾತ್ರ ಕಥೆಯೊಂದಿಗೆ ಸೇರೊದು ಈ ಪಯಣದ ಆರಂಭದಲ್ಲೆ.ಪ್ರಾರಂಭದಲ್ಲಿ ಸೌಮ್ಯವಾಗಿರುವ ಈ ಪಾತ್ರ ಸಲ್ಪದರಲ್ಲೆ ರೂಢ್ ಆಗಿ ವಿಶಿಷ್ಟವಾಗಿ ಕಾಣುತ್ತೆ.ತಲೆಗೆ ಪಿಸ್ತೂಲು ಹಿಡಿದು ನಿಮ್ಮ ಮಗುವನ್ನು ನೋಡಿಕೊಳ್ಳೊ ಆಯಾ ನಾನು ಕಳಿಸಿದವಳೆಂದು ಮಗುವಿನ ಪ್ರಾಣ ಬೇಕಾದಲ್ಲಿ ನಾ ಹೇಳುವಂತೆ ಕೇಳಿಯೆಂಬ ಪಾತ್ರ ದಂಪತಿ ಸಂಪಾದಿಸಿಟ್ಟ ಪೂರ್ಣ ಹಣವನ್ನು ಪಡೆದು ಬೆಂಕಿ ಹಚ್ಚಿ ನದಿಗೆ ಎಸೆಯುತ್ತೆ.ಊಟ ಮಾಡಲು ತನ್ನ ಲಕ್ಷ ರೂಪಾಯಿ ವಾಚನ್ನು ಬರಿಯ 6 ಸಾವಿರಕ್ಕೆ ಮಾರಿ ಹೋಟೆಲಿಗೆ ದಂಪತಿ ಬಂದಾವಾಗ 2ವರೆ ಸಾವಿರ ರುಪಾಯಿಯ ಆಹಾರವನ್ನು ಪಾರ್ಸೇಲ್ ಮಾಡಿ ಬಿಲ್ ತೋರಿಸುತ್ತೆ ಈ ಪಾತ್ರ. ಇದಷ್ಟನ್ನೂ ಎತ್ತಿಕೊಂಡು ವೆಂಕಟೇಶ್ ಜೊತೆ ಹೊರಟ ದಂಪತಿಗಳು ಒಣಿ ಮಧ್ಯೆ ಅದಷ್ಟು ಆಹಾರವನ್ನು ಬಡ ಮಕ್ಕಳಿಗೆ ಹಂಚಿದ ಪಾತ್ರದ ಪರಿಯನ್ನ ಕಂಡ ದಂಪತಿಗಳು ಮರು ಮಾತಿಲ್ಲದೆ ಕಾರು ಹತ್ತಿ ಕೂರೂವ ಈ ದೃಶ್ಯಗಳಲ್ಲಿ ಬಡತನದ ವಾಸ್ತವಗಳು, ಶ್ರೀಮಂತಿಕೆಯ ಮದವನ್ನು ಚಿಗುಟುವಂತೆ ವೆಂಕಟೇಶ್ ಪಾತ್ರದಲ್ಲಿ ರೋಷ ನಮಗೆ ಕಣ್ಣಿಗೆ ರಾಚಿದಲ್ಲಿ ಅದರ ಶ್ರೇಯ ನಿರ್ದೇಶಕ ಅರುಣ್ ಕುಮಾರ್ ಮತ್ತು ನಟ ಜಯಸೂರ್ಯರಿಗೆ ಸೇರಬೇಕು. 


ಕಾಸು ಕೊಟ್ಟು ಸೂಳೆಯನ್ನು ನಿನ್ನದಾಗಿಸುಕೊ ಎಂದು ಪಾತ್ರ ಎಂದಾಗ ಅಸಹ್ಯ ಪಡುವ ರವಿ ಕೀಳು ಮಟ್ಟದ ಕೆಲಸವೆಂದು ಪರಿಗಣಿಸಿ ತನ್ನ ಮಗುವ ಪ್ರಾಣವ ನೆನೆಸಿ ಪಾತ್ರದ ಅಣತಿಯಂತೆ ಸೂಳೆಯನ್ನು ತನ್ನ ಹೆಂಡತಿಯ ಮುಂದೆನೆ ಒಲಿಸಿ ಕಾರು ಹತ್ತಿಸುತ್ತಾನೆ, ತನ್ನ ಶ್ರೀಮಂತಿಕೆಯ ಮದದಲ್ಲಿನ ದಿನಗಳಲ್ಲಿ ತನ್ನ ಅಸಿಸ್ಟೆಂಟ್ ಜೊತೆ ವಿವಾಹಿತಳು ಎಂದು ಗೊತ್ತಿದ್ದು ಅನಧಿಕೃತ ಸಂಬಂಧ ಹೊಂದಿರಬೇಕಾದರು ರವಿ ಈ ಪರಿ ಅಸಹ್ಯಿಸಿಕೊಳ್ಳೊದಿಲ್ಲ,ಬಡತನದ ಲೇಪದ ಜೊತೆ ಸಭ್ಯತನವು ಇರುತ್ತದೆ ಎಂಬುದನ್ನು ಇಲ್ಲಿ ನಿರ್ದೇಶಕ ಹೇಳ ಹೊರಡುತ್ತಾನಾ? ಪ್ರೇಕ್ಷಕರೀಗೆ ಈ ಯೋಚನೆಯನ್ನು ಬಿಟ್ಟು ಚಿತ್ರ ಮುಂದೆ ಸಾಗುತ್ತೆ.ಮುಂದಿನ ಭಾಗದಲ್ಲಿ ವೆಂಕಟೇಶ್ ತನ್ನ ಹೆಂಡತಿಯ ಮೈಗೆ ಕೈ ಹಾಕಬೇಕಾದರೆ ರೋಷ ಉಕ್ಕಿ ಅವನೆದೆಗೆ ಒದೆಯೊ ನಾಯಕ ತಾನು ಈ ರೀತಿ ಕೃತ್ಯವನ್ನ ಕದ್ದು ಮಾಡುತಿದ್ದೆ ಅನ್ನೊದನ್ನ ಕೂಡ ನೆನಪಿಸಿಕೊಳ್ಳೊದಿಲ್ಲ,ಇಲ್ಲೆಲ್ಲು ನಿರ್ದೇಶಕ ಅಸಹ್ಯಿಸುವಂತೆ ನಿರ್ದೇಶಿಸಿಲ್ಲ, ಬದಲಾಗಿ ಸಭ್ಯತೆ ಮೆರೆದದ್ದೂ ನಿರ್ದೇಶಕನ ಜಾಣ್ಮೆಗೆ ಹಿಡಿದ ಕೈಗನ್ನಡಿ. ಪಶ್ಚಾತಾಪದೊಂದಿಗೆ ತನ್ನೆಲ್ಲಾ ತಪ್ಪು ನೆನಪಾಗುತ್ತೆ ನಾಯಕನಿಗೆ ಅದ್ಯಾವಾಗ ಎಂದರೆ ಆ ಪಯಣ ಮನೆಯೊಂದರ ಮುಂದೆ ನಿಂತಾಗ, ಕೈಯಲ್ಲಿ ಬಂದೂಕ ಕೊಟ್ಟು ಮನೆಯಲ್ಲಿದ್ದವಳನ್ನು ನಿನ್ನ ಮಗುವಿನ ಪ್ರಾಣಕ್ಕಾಗಿ ಕೊಲ್ಲು ಎಂದು ಕಳಿಸಿ ಕೊಟ್ಟಾಗ. ಆ ಮನೆ ಬೇರೆ ಯಾರದ್ದು ಆಗಿರದೆ ನಾಯಕ ರವಿಯ ವಿವಾಹೇತರ ಪ್ರೇಯಸಿ ದೇವಿಯದ್ದು ಆಗಿರುತ್ತದೆ,ವೆಂಕಟೇಶ್ ಕೊಲ್ಲು ಅಂದಿದ್ದು ಕೂಡ ಅವಳನ್ನೆ.ನಾಯಕ ರವಿಗೆ ಅಚ್ಚರಿ ಕೊಡೊ ಮತ್ತೊಂದು ವಿಷಯ ಏನೆಂದರೆ ಆ ಮನೆಯಲ್ಲಿ ಕಂಡ ಪೋಟೊ, ಅದು ತನ್ನ ಪ್ರೇಯಸಿ ಗಂಡನೊಂದಿಗೆ ಇರುವ ಪೋಟೊ,ಆಕೆಯ ಗಂಡನಾದ ಆ ಪೋಟೊದಲ್ಲಿರುವ ವ್ಯಕ್ತಿ ಬೇರಾರು ಆಗಿರದೆ ಇಷ್ಟು ದಿನ ಕಾಡಿದ ಪಾತ್ರ ವೆಂಕಟೇಶ್ ಆಗಿದ್ದ.ಇಷ್ಟಾಗಿಯು ಕೂಡ ತನ್ನ ಮಗುವಿಗಾಗಿ ಪ್ರೇಯಸಿಯ ಪ್ರಾಣ ತೆಗೆಯಲು ಪಿಸ್ತೂಲ ಟ್ರಿಗರ್ ಅದುಮುವ ನಾಯಕ ಪಿಸ್ತೂಲಿನಲ್ಲಿ ಗುಂಡೆ ಇರದ್ದನ್ನು ನೋಡಿ ಕುಸಿಯುತ್ತಾನೆ. ಮಾಂಸ ಮಾಂಸಗಳ ತುಮುಲಗಳಷ್ಟೆ ನಮ್ಮೊಳಗಿದ್ದಿದ್ದೂ ಅನ್ನೋದು ಇಬ್ಬರೀಗೂ ಅರಿವಾಗಿರುತ್ತದೆ. ಪ್ರೀತಿಸುವ ಗಂಡನ ಮುಖ ನೋಡಲಾಗದೆ ದೇವಿ ಕತ್ತೆತ್ತದೆ ಭೋರ್ಗರೆಯುತ್ತಾಳೆ ಇತ್ತ ರವಿ ಪಶ್ಚಾತಾಪದ ಬೇಗೆಯಲ್ಲಿ ಬೇಯುತ್ತ ತನ್ನ ಮಗಳಿಗೆ ಏನೇನೂ ಆಗಿಲ್ಲ ತನ್ನ ಮನೆಯಲ್ಲೆ ಆರಾಮವಾಗಿದ್ದಾಳೆ ಎಂಬುದನ್ನ ತಿಳಿದು ಮರಳುತ್ತಾನೆ.ತನ್ನ ಹೆಂಡತಿ ನನಗೆ ಬುದ್ದಿ ಕಲಿಸಲು ವೆಂಕಟೇಶ್ ಪಾತ್ರ ತನ್ನ ಹೆಂಡತಿಗೆ ಬುದ್ದಿ ಕಲಿಸಲು ಪರಸ್ಪರ ಕೈ ಮಿಲಾಯಿಸಿ ನಾಟಕವಾಡಿದ್ದು ಹಾಗು ತನ್ನ ಹಣಕ್ಕೆ ಬೆಂಕಿ ಹಚ್ಚಿ ಹೊಳೆಗೆಸೆದಿದ್ದು ಇತ್ಯಾದಿ ಬರಿಯ ನಾಟಕವಷ್ಟೆ ಅನ್ನೊದನ್ನ ತಿಳಿದು ಪಶ್ಚಾತಾಪದ ಬೇಗೆಯಿಂದ ತನಗೆ ಗುರುವಾದ ಹೆಂಡತಿ ಹಾಗು ವೆಂಕಟೇಶನನ್ನು ರವಿ ಮೆಚ್ಚುತ್ತಾನೆ ಹಾಗು ಸರಿ ದಾರಿಗೆ ಮರಳುತ್ತಾನೆ. ಹಾಗಾದರೆ ಚಿತ್ರದ ನಾಯಕಿ ಹಾಗು ವೆಂಕಟೇಶ್ ಪರಿಚಯವಾಗಿದ್ದೆಲ್ಲಿ ಅನ್ನೊ ಪ್ರಶ್ನೆಗೆ ಚಿತ್ರದ ಆರಂಭದಲ್ಲಿ ಹುಟ್ಟಿದ ಪ್ರಶ್ನೆ ಮಗುವಿಗೆ ಗೊಂಬೆ ಕೊಡಿಸಿದ್ದು ಯಾರು? ಅನ್ನೊ ಪ್ರಶ್ನೆಯ ಜೊತೆಗೆ ಉತ್ತರಿಸುತ್ತದೆ. 


ಚಿತ್ರದ ಕೊನೆಗೆ ಆಸ್ಪತ್ರೆಗೆ ದೇಣಿಗೆ ನೀಡೊ ರವಿ-ಪಾರ್ವತಿ ದಂಪತಿ,ಅದೆ ಆಸ್ಪತ್ರೆಯ ಮಂಚವೊಂದರ ಮೇಲೆ ಸುಸೈಡ್ ಪ್ರಯತ್ನ ಪಟ್ಟು ಜೀವಂತ ಹೆಣವಾಗಿ ಮಲಗಿರುವ ದೇವಿ ಮತ್ತವಳ ಆರೈಕೆಯಲ್ಲಿ ತೊಡಗಿರುವ ಆತಳ ಪತಿ ವೆಂಕಟೇಶ್ ನನ್ನು ನಿರ್ದೇಶಕ ತೋರಿಸೊ ರೀತಿ ನಮ್ಮ ಕರುಳ ಹಿಂಡುವುದಂತು ಸತ್ಯ.ಸ್ಪಷ್ಟವಾದ ಸಮಾಜಮುಖಿ ಸಂದೇಶ ಸಾರುವ ಚಿತ್ರ ನೋಡಿ ಮುಗಿಸಿದಾಗ ನನಗೆ ಕಂಡ ಪಾತ್ರಗಳೊಳ ದ್ವಂದ್ವ ಇಷ್ಟೆ ವಿಲನ್ ಅನ್ಕೊಂಡ ವೆಂಕಟೇಶ್ ಪಾತ್ರ ಚಿತ್ರದ ನಾಯಕನೊ?ಎಂದು.ಕೆಲವೆ ಸೀಮಿತ ಪಾತ್ರದಲ್ಲಿ ಕಟ್ಟಿಕೊಟ್ಟ ಕಾಕ್ ಟೈಲ್ ಚಿತ್ರ ವಿವಾಹೇತರ ಸಂಬಂಧಗಳಿಗೆ ಪಾಠದಂತೆ ಕಂಡರೆ ತಪ್ಪಿಲ್ಲ, ಸಿಕ್ಕಿದಲ್ಲಿ ಈ ಚಿತ್ರವನ್ನೊಮ್ಮೆ ನೋಡಿ.ನಿಮ್ಮ ಮುಂದೆ ಒಂದು ಚಿತ್ರವನ್ನು ಕಟ್ಟಿಕೊಡಲು ಎಷ್ಟು ಸರಕುಗಳು ಬೇಕೊ ಅದಷ್ಟನ್ನೆ ಬಳಸಿರುತ್ತೇನೆ, ಇದರ ಹೊರತಾಗಿಯೂ ಇನ್ನಷ್ಟು ವಿಷಯಗಳೊಂದಿಗೆ ಭಾಷೆಯ ಯಾವ ಹಂಬುಗಳೂ ಇಲ್ಲದೆ ಈ ಚಿತ್ರ ನಿಮ್ಮದಾಗಬಲ್ಲದು, ಒಂದೊಳ್ಳೆ ಚಿತ್ರ ನೋಡಿದ ಖುಷಿ ನಿಮ್ಮದು ಆಗಲಿ.