Tuesday, March 20, 2012

ಕಾಡು ಹಕ್ಕಿಯ ಹಾಡು ಕವನ ಸಂಕಲನದ ಲೋಕಾರ್ಪಣೆಯೊಂದಿಗೆ ಸಣ್ಣಗಿನ ನಮ್ಮಗಳ ಕಲರವ.


ಕವಿತೆಗಳು ಅಂದರೆ ಭಾವನೆಗಳ ಅಕ್ಷರ ರೂಪ ಹಾಗೂ ಅದರ ಅಭಿವ್ಯಕ್ತಿ. ಕವಿಯೊಬ್ಬ ತುಂಬಾ ಸರಳವಾಗಿ ಭಾವನೆಗಳ ಅಭಿವ್ಯಕ್ತಿಗೆ ಎಲ್ಲೂ ಧಕ್ಕೆಯಾಗದಂತೆ ತನ್ನೂರಿನ ನಿಸರ್ಗದಿಂದ ಪ್ರೇರಿತನಾಗಿ ಬರೆದ ಸಾಲು ಸಾಲು ಕವನಗಳು ಪುಸ್ತಕ ರೂಪ ಪಡೆದು ಲೋಕಾರ್ಪಣೆಗೊಂಡಾಗಿನ ಕ್ಷಣಗಳ ಸಂಭ್ರಮವನ್ನು ಅನುಭವಿಸುವ ಪರಿಯನ್ನು ಮೊನ್ನೆ ಮೊನ್ನೆ ಕಣ್ಣಾರೆ ಕಂಡೆ.ಡಿ ಡಿ ಉಮೇಶ್ ಸಕಲೇಶಪುರ ತಾಲೂಕಿನ ಪಶ್ಚಿಮ ಘಟ್ಟದ ಕಾಡೊಳಗಿನ ಪುಟ್ಟ ಊರಾದ ಹೊಂಗಡಹಳ್ಳ ಹಳ್ಳಿಯ ಕವಿ.ತನ್ನೂರಲ್ಲೆ ತನ್ನ ಮೊದಲ ಕವನ ಸಂಕಲನ ಬಿಡುಗಡೆಗೊಳ್ಳಬೇಕೆಂಬ ಸದಾಭಿಲಾಷೆಯ ಫಲವಾಗಿ ಆ ಪುಟ್ಟ ಊರಿನ ತಾ ಕಲಿತ ಪ್ರಾಥಮಿಕ ಶಾಲೆಯಲ್ಲೆ ಲೋಕಾರ್ಪಣೆಗೊಂಡ ಅವರ ಕವನ ಸಂಕಲನದ ಹೆಸರು “ಕಾಡು ಹಕ್ಕಿಯ ಹಾಡು”.ಗೆಳೆಯರಾದ ಜೆಕೆ ಮತ್ತು ಡಿಕೆ ಇಂಥ ಕಾರ್ಯಕ್ರಮದಲ್ಲಿ ಭಾಗಿಯಾಗೋಣ ಬಾ ಎಂದಾಗ ವೀಕ್ ಎಂಡ್ ಆದುದರಿಂದಲೋ ಏನೊ ಅದಕ್ಕಿಂತಲೂ ಹೆಚ್ಚಾಗಿ ಸಕಲೇಶಪುರ ಎಂದಾಗ ನೆನಪಾಗೋದು ಅಲ್ಲಿನ ಪರಿಸರ ಹಾಗೂ ಕಾಡು, ಅದು ಕಾಡೊಳಗಿನ ಊರಲ್ಲಿ ಈ ತರದ ಒಂದು ಕಾರ್ಯಕ್ರಮ ಅಂದಾಗ ಸಂತೋಷದಿಂದಲೆ ಹೊರಟು ನಿಂತಿದ್ದೆ.

ಪತ್ರಕರ್ತ ಗೆಳೆಯ ಮೆಹೆಬೂಬ್ ರ ಆತ್ಮೀಯ ಬೆಚ್ಚಗಿನ ಸ್ವಾಗತ ಪಡೆದು ಗೆಳೆಯರಾದ ಮಂಜು, ವಿಶ್ವರೊಂದಿಗೆ ನಮ್ಮ ಪಯಣ ಸಕಲೇಶಪುರದಿಂದ 58 ಕಿ ಮೀ ದೂರವಿರುವ ಹೊಂಗಡಹಳ್ಳ ಹಳ್ಳಿ ಕಡೆ ಹೊರಟು ನಿಂತಾಗ ಬೆಳಿಗ್ಗೆ ಘಂಟೆ 10 ರ ಸಮಯ.ದಾರಿ ಮಧ್ಯೆ ಸಿಗುವ ಸುಂದರ ತಾಣಗಳು ಬಹಳಷ್ಟು, ಕೆಲವೊಂದು ವಿಶಿಷ್ಟ ಮರಗಳ ಪರಿಚಯ, ತಾಣಗಳ ಪರಿಚಯ ಅದರ ಹಿನ್ನಲೆ ಇತರವವನ್ನು ಮೆಹಬೂಬ್ ವಿವರಿಸುತ್ತಲೆ ಜೊತೆಗೊಂದಿಷ್ಟು ಹೊಟ್ಟೆ ಹುಣ್ಣಾಗಿಸಿ ನಗುವ ಹಾಸ್ಯದೊಂದಿಗೆ 11ರ ಸಮಯಕ್ಕೆ ವಾಹನ ಕವನ ಸಂಕಲನ ಬಿಡುಗಡೆಯಾಗುವ ವೇದಿಕೆಯೆದುರು ನಿಂತಿತ್ತು. ವೇದಿಕೆಯ ಮುಂಬಾಗದ ಶಾಲಾ ಮೈದಾನಕ್ಕೆ ಶಾಮಿಯಾನ ಹಾಕಿಸಿದ ಬಯಲು ಸಭಾಂಗಣ ರೆಡಿಯಾಗಿತ್ತು, ಹಳ್ಳಿಗರಲ್ಲಿ ಅದೆಂತೊದೊ ಸಂಭ್ರಮ ನಮ್ಮೂರ ಹುಡುಗ ಸಾಧನೆ ಎಂದೆ ತಿಳಿದಿದ್ದ ಅವರಿಗೆ ಅದು ಫಲಿತವಾಗಬಲ್ಲ ಸಮಾರಂಭದೆಡೆಗೆ ನೋಡುವ ಕಾತರಿಕೆಗಳು ಸ್ಪಷ್ಟವಾಗಿ ಗೋಚರಿಸುತಿತ್ತು.ಬೆಂಗಳೂರಿನಂತ ನಗರದಲ್ಲಿ ಕವನ ಸಂಕಲ ಬಿಡುಗಡೆ ಎಂದರೆ 20 ರಿಂದ 25 ಮಂದಿ ಸೇರುವದೆ ಹೆಚ್ಚು,ಕೆಲ ಘಂಟೆಯ ಕಾರ್ಯಕ್ರಮ, ಒಂದಷ್ಟು ಸಾಕ್ಷಿಗಾಗಿ ಪೊಟೋಗ್ರಾಪಿ,ಹೆಚ್ಚೆಂದರೆ ಕೊನೆಗೆ ಬಿಸ್ಕೇಟ್ ಜೊತೆ ಒಂದರ್ಧ ಕಫ್ ಟೀ ಇಷ್ಟಕ್ಕೆ ಸೀಮೀತವಾಗಿ ನೋಡಿದ್ದ ಕಾರ್ಯಕ್ರಮಗಳ ಮುಂದೆ ಈ ಹೊಸ ತರ,ಕಾರ್ಯಕ್ರಮದೊಂದಿಗಿನ ಹಳ್ಳಿಗರ ಭಾವನೆಗಳು, ಇಂತಹ ಕಾರ್ಯಕ್ರಮವನ್ನು ಹಬ್ಬದಂತೆ ಆಚರಿಸಲು ನಿಂತಿದ್ದನ್ನು ನೋಡಿ ಅಚ್ಚರಿಯೊಂದಿಗೆ ಅವರ ಖುಷಿಯೊಂದಿಗೆ ನಾವೂ ಖುಷಿ ಪಟ್ವಿ.ಈ ಬಗ್ಗೆ ನಾ ಬರೆದುಕೊಳ್ಳುತ್ತಿರೋದು ಕೂಡ ಇದೆ ಕಾರಣಕ್ಕೆ.

ಸಭಾ ಕಾರ್ಯಕ್ರಮ 11.30 ಕ್ಕೆಲ್ಲ ಪ್ರಾರಂಭ ಪಡೆದು ಮಾಜಿ ಶಾಸಕರಾದ ವಿಶ್ವನಾಥ್ ಎಚ್ ಎಂ ಅವರಿಂದ ಕವನ ಸಂಕಲನ ಲೋಕಾರ್ಪಣೆಯನ್ನು ಪಡೆಯಿತು, ಹಾಲಿ ಶಾಸಕರಾದ ಕುಮಾರಸ್ವಾಮಿ ಕೂಡ ಮುಖ್ಯ ಅತಿಥಿಯಾಗಿದ್ದ ಈ ಕಾರ್ಯಕ್ರಮದಲ್ಲಿ ರಾಜಕೀಯ ಕ್ಷೇತ್ರದ ಸಣ್ಣ ನುಡಿಯನ್ನು ಬಳಸದೆ ಬರಿಯ ಕವಿಯ ಸ್ಪೂರ್ತಿಯನ್ನು ಹೆಚ್ಚಿಸುವ ಮಾತನ್ನಾಡಿದ್ದು,ಒಂದಷ್ಟು ಪುಸ್ತಕವನ್ನ ಸ್ಥಳದಲ್ಲೆ ಖರೀದಿಯನ್ನು ಮಾಡಿ ಪುಸ್ತಕದೆಡೆಗಿನ ಪ್ರೇಮ ತೋರಿಸಿದ್ದು ಕೂಡ ಖುಷಿಯನ್ನು ತಂದಿತ್ತು.ಹಾಸನದ ಸೈಂಟ್ ಜೋಸೆಪ್ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕಿ ಸಾಹಿತಿಯೂ ಆದ ಭಾರತಿ ಹಾದಿಗೆ ಅವರ ಕೃತಿ ಪರಿಚಯ ಚೆಂದಗಿನ ಒಕ್ಕಣೆ ಅಲ್ಲಲ್ಲಿ ವಿಶಿಷ್ಟ ಭಾಷೆಯೊಂದಿಗೆ ಚಂದವಾಗಿ ಮೂಡಿ ಬಂದಿತ್ತು.ಡಿ ಡಿ ಉಮೇಶ್ ಮಾತಾಡುತ್ತ ಊರ ಮಂದಿಯ ಪ್ರೇಮವನ್ನು ಕಂಡು ಭಾವುಕರಾಗಿದ್ದು ಸಭೆಯನ್ನು ಒಂದು ಕ್ಷಣ ಭಾವುಕರಾಗಿಸಿತ್ತು. ಕೊನೆಯಲ್ಲಿ ದಿನೇಶ್ ಕುಮಾರ್ ನೀಡಿದ ಕವಿ ಪರಿಚಯದೊಂದಿಗಿನ ಚಿಕ್ಕ ಚೊಕ್ಕವಾದ ಎರಡೂ ಮಾತು ಕೂಡ ಸಭೆಯ ಅಂದದ ಪೂರ್ಣತೆಗೆ ಸಹಕಾರಿಯಾಗಿತ್ತು,ಡಿ ಡಿ ಉಮೇಶ್ ಇಲ್ಲಿವರೆಗೆ ಗಳಿಸಿದ್ದಕ್ಕಿಂತ ಕಳಕೊಂಡಿದ್ದೆ ಹೆಚ್ಚು ಗಳಿಸುವ ಕಾರ್ಯ ಇವತ್ತಿಂದ ಪ್ರಾರಂಭವಾಗಿದೆ ಇದು ಹೀಗೆ ಮುಂದುವರಿಯಲಿ ಎಂಭ ಮಾತು ನರೆದವರ ಎಲ್ಲರ ಆಶಯವನ್ನು ಅವರೆ ಹೇಳಿದಂತಿತ್ತು, ಅದಾಗಲೆ 2 ಘಂಟೆ ಆಗಿದ್ದರಿಂದ ಹೊಟ್ಟೆ ಚುರುಕ್ ಅನ್ನುತ್ತಿರಲು ಸಭಾ ಕಾರ್ಯಕ್ರಮಕ್ಕೂ ತೆರೆ ಬಿದ್ದಿತ್ತು, ನೆರೆದವರಿಗೆಲ್ಲರೀಗೂ ಊಟ ಉಪಹಾರ ವ್ಯವಸ್ಥೆ ನನಗೆ ಯಾವುದೊ ಮದುವೆ ಸಮಾರಂಭವನ್ನ ನೆನಪಿಸಿತು.ಒಟ್ಟಿನಲ್ಲಿ ಊರ ಹಬ್ಬದಂತೆ ಆಚರಿಸಿದ ಈ ಕಾರ್ಯಕ್ರಮವನ್ನ ನಾನು ನನಗೆ ಗೊತ್ತಿಲ್ಲದಂತೆ ಹಳ್ಳಿಯ ಕಾರ್ಯಕ್ರಮಕ್ಕೂ ಪಟ್ಟಣದ ಕಾರ್ಯಕ್ರಮಕ್ಕೂ ತಾಳೆ ಹಾಕುವಂತೆ ಮಾಡಿದ್ದಂತೂ ಸತ್ಯ.

ಅಶ್ರಫ್ ಮಾಂಜ್ರಾಬಾದ್ ಅವರೊಂದಿಗೆ
ಹೀಗೆ ಒಂದು ಅಂದವಾದ ಕಾರ್ಯಕ್ರಮ ಮುಗಿಸಿ ಸಕಲೇಶಪುರಕ್ಕೆ ಮರಳಿತ್ತು ನಮ್ ಟೀಮ್, ಪತ್ರಕರ್ತರಾದ ಜಯಕುಮಾರ್ ದಾರಿಪೂರ್ತಿ ಹಾಡಿದ ಹಾಡುಗಳು ಆ ಹಾಡಿನ ಮದ್ಯದ ಮೆಹಬೂಬ್ ಅವರ ಅನೌಂಸ್ ಮೆಂಟ್ಗಳು ಇತರವೂ ಗಟ್ಟಿ ಊಟ ಸಹಜವಾಗಿ ಒದಗಿಸಿದ ನಿದ್ದೆ ಮಂಪರನ್ನು ಓಡಿಸಿತ್ತು, ಹೀಗೆ ಬಂದು ವಸತಿ ಗೃಹ ಹೊಕ್ಕ ನಾವುಗಳು ಒಂದಷ್ಟು ವಿಶ್ರಾಂತಿಯ ಬಳಿಕ ಸಣ್ಣಗಿನ ಸುತ್ತಾಟ ಮುಗಿಸಿ ರಾತ್ರಿ ಊಟಕ್ಕೆ ರೆಡಿಯಾಗಿದ್ವಿ. ನಾನು ನಿರೀಕ್ಷಿಸದೆ ಇದ್ದ ಅತಿಥಿ ಹಾಗು ನಾ ಮೆಚ್ಚುವ ಆಶ್ರಪ್ ಮಾಂಜ್ರಾಬಾದ್ ರನ್ನ ಭೆಟ್ಟಿಯಾಗಿದ್ದು ಆಗಲೆ.ನನ್ನ ಬೆನ್ನು ತಟ್ಟುತ್ತಲೆ ಬಂದಿರುವ ಇವರನ್ನು ಒಂದು ದಿನ ಭೆಟ್ಟಿಯಾಗುತ್ತೇನೆ ಅನ್ನೋದು ನಾನು ಊಹಿಸದಿರದ ವಿಷಯ,ಸಕಲೇಶಪುರದವರಾದರು ಹೊರದೇಶದಲ್ಲಿ ಇರುವವರಾದ್ದರಿಂದ ಭೆಟ್ಟಿಯಾಗಬಲ್ಲೆ ಎಂಭ ನಿರೀಕ್ಷೆಗಳು ಇರಲಿಲ್ಲ.ಈ ಕಾರ್ಯಕ್ರಮಗಳ ಮಧ್ಯೆ ಇದು ಒಂದು ಖುಷಿ ನನಗೊದಗಿ ಬಂದಿದ್ದು ಈ ಪ್ರಯಾಣದ ನೆನಪನ್ನು ಹಸಿರಾಗಿಟ್ಟುಕೊಳ್ಳುವಂತೆ ಮಾಡುವುದಂತು ದಿಟ. ಊಟದ ಮಧ್ಯೆದ ಪತ್ರಿಕಾರಂಗದ ನಿಲುವುಗಳ ಚರ್ಚೆ ಅದರ ಹೊರತಾಗಿಯೂ ಸ್ನೇಹಕ್ಕೆ ನೀಡುವ ಬೆಲೆಗಳು, ಪತ್ರಿಕಾರಂಗದಲ್ಲಿರಬೇಕಾದ ಗಟ್ಟಿ ನಿಲುವುಗಳು ಈ ಬಗ್ಗೆಯ ಆಸಕ್ತಿದಾಯಾಕ ಚರ್ಚೆಗಳ ಮುಗಿಸಿ ಮೆಹಬೂಬ್, ಆಶ್ರಫ್ ಹಾಗೂ ಇತರ ಸ್ನೇಹಿತರನ್ನ ಬೀಳ್ಕೊಟ್ಟು ದಿಂಬಿಗೆ ತಲೆಯಾನಿಸ ಬೇಕಾದರೆ ತಡ ರಾತ್ರಿಯೆ ಆಗಿತ್ತು.ಅಂತೆಯೆ ಅಲ್ಪಾವಧಿಯ ನಿದ್ದೆ ಮುಗಿಸಿ ಮೋರೆಗೊಂದಷ್ಟು ನೀರ ಹಾಕಿಕೊಂಡು ಪ್ರೆಶ್ ಆಗಿ ಬೆಳಗ್ಗಿನ ಜಾವಕ್ಕೆ ಸಕಲೇಶಪುರದ ಮಂಜಿನ ಮಧ್ಯ ಬೆಂಗಳೂರ ದಾರಿ ಹಿಡಿದಿದ್ದೆವು. ಪ್ರಯಾಣ ಮಧ್ಯೆ ನೆನಪಾಗುತ್ತಿದ್ದುದು ಅದೆ ಹೊಂಗಡಹಳ್ಳ ಹಳ್ಳಿ, ಕಾಡು ಹಕ್ಕಿ ಡಿಡಿ ಉಮೇಶ್ ಅವರು, ಇದೆ ನೆನಪಿನೊಂದಿಗೆ ಓದಿದ ಅವರ ಕವನದ ಸಾಲು ಹೀಗಿತ್ತು..........

ನನ್ನೂರ ಬೆಟ್ಟದಲಿ
ನವಿಲುಗಳು ನರ್ತಿಸುತ್ತಿದೆ
ನಾ ಹ್ಯಾಂಗೆ ನೋಡಲಿ
ಕುರುಡ ನಾನು!

ನನ್ನೂರ ಮಾಮರದಿ
ಕೋಗಿಲೆಯ ರಾಗ ಮಿಡಿಯುತ್ತಿದೆ
ನಾ ಹ್ಯಾಂಗ ಆಲಿಸಲಿ
ಕಿವುಡ ನಾನು!

ನನ್ನೂರ ಹೂ ಬನದಲಿ
ಗಿಳಿಯೊಂದು ಉಲಿಯುತಿದೆ
ನಾ ಹ್ಯಾಂಗ ಉಲಿಯಲಿ
ಮೂಕ ನಾನು!

ನನ್ನೂರ ಸುಗ್ಗಿಯಲಿ
ನವಿಲೊಂದು ಕುಣಿಯುತ್ತಿದೆ
ನಾ ಹ್ಯಾಂಗ ಕುಣಿಯಲಿ
ಕುಂಟ ನಾನು!

ಈ ಜಗದಿ ನರರಿಗಿಂತ 
ನನ್ನವರ ಸಂಖ್ಯೆ ಮೇಲು
ನೀವು ತಿಳಿದ್ಹಾಂಗೆ
ನಾನು ಯಾರು?

ಬೇಸಿಗೆಯಲಿ ಬಿಸಿ ಎನ್ನದೆ
ಮಳೆಯಲಿ ಚಳಿ ಎನ್ನದೆ
ನಿಂತಲ್ಲೆ ನಿಲ್ಲುವ 
ಕಲ್ಲು ನಾನು!

ಯಾಕೊ ನಗರದಲ್ಲಿ ಖುಷಿ ಮರೆತು ಸಣ್ಣ ಸಣ್ಣ ಖುಷಿಯನ್ನು ಹಿಡಿಯಾಗಿಸದೆ ಕೈ ಚೆಲ್ಲುವ ನಾವು ಕಲ್ಲೆ?ಗೊತ್ತಿಲ್ಲ ಕವಿತೆ ಓದಿ ಮುಗಿಸಿದಾಗ ಹಿಂಗಂದುಕೊಂಡಿದ್ದು ಸತ್ಯ.ಒಂದಷ್ಟು ಖುಷಿ ಈ ಪಯಣದಿಂದಾದರು ಸಿಕ್ಕಿತಲ್ಲ ಎಂಭ ನಿಟ್ಟುಸಿರಿನೊಂದಿಗೆ ಸೀಟಿಗೊರಗಿದ್ದೆ.



No comments:

Post a Comment