Wednesday, January 30, 2013

ಹಳ್ಳಿ ರುಚಿ.....

ಕುಂಟಾಲ ಚಿಗುರು, ನೇರಳೆ ಚಿಗುರು, ಎಂಜಿರದ ಚಿಗುರು,ಪೇರಳೆ ಚಿಗುರು,ಮಾದರಿ ಚಿಗುರು ಹೀಗೆ ಒಂದಷ್ಟು ಚಿಗುರು ತಂದು ಬೇಯಿಸಿ ಮಾಡಿದ ಚಟ್ನಿಯ ಜೊತೆ ಮರಳು ಮರಳಾದ ದನದ ತುಪ್ಪ ಸೇರಿಸಿ ಕಲಿಸಿದ ಅನ್ನದ ತುತ್ತ ತಿಂದ ಬಾಯಿ ರುಚಿ ಪೇಟೆಯ ಹೈ ಫೈ ಊಟವನ್ನೂ ಉಣ್ಣೆಂದಾವಾಗ ಒತ್ತಾಸೆಗೆ ಮಣಿದು ಹಸಿವ ನೀಗಿಸ ಸಲುವಾಗಿ ಅಷ್ಟೆ ಒಂದಷ್ಟನ್ನೂ ಕಷ್ಟದಿಂದ ತಿನ್ನುತ್ತೆ.ಮಜ್ಜಿಗೆ ಹುಳಿ, ಪುನಾರ್ಪುಳಿ ಸಾರು,ಕಾಯಿ ಸಾಂಬಾರ್, ದಾಳಿ ತೋವೆ,ಬೋಳು ಹುಳಿ ರುಚಿಕಟ್ಟಿನ ಎದುರು ನಾರ್ತ್, ಸೌತ್ ಇಂಡಿಯನ್ , ಚೈನೀಸ್ ಇತರ ತರೆವಾರಿ ವೆಚ್ಚಭರಿತ ಫೈವ್ ಸ್ಟಾರ್ ಹೋಟೇಲ್ ಊಟಗಳೂ ಕೂಡ ಸಪ್ಪೆ ಎನಿಸಿ ಬಿಡುತ್ತವೆ.ತರೇವಾರಿ ತಂಬಳಿಗಳು,ವಿಧವಿಧವಾದ ಚಟ್ನಿಗಳು,ಬಾಳೆದಿಂಡು, ಬಾಳೆಕಾಯಿ, ಕುಂಬಳಕಾಯಿ ಸಿಪ್ಪೆಯನ್ನೂ ಬಿಡದ ಪಲ್ಯಗಳು ಹೀಗೆ ತರೇವಾರಿ ಹಳ್ಳಿ ಊಟದ ಡಿಶ್ ಗಳು ಇತರ ಎಲ್ಲಾ ಆಧುನಿಕ ಸಸ್ಯಾಹಾರಿ ಊಟಗಳನ್ನೂ ಮೀರಿಸಿ ನಿಲ್ಲುತ್ತವೆ.ಪತ್ರೋಡೆ, ಪುಂಡಿ, ಗಟ್ಟಿ, ಸೆಕೆ ಉಂಡೆ,ಕೊಟ್ಟಿಗೆ, ಕಡುಬು,ನೀರ್ ದೋಸೆ,ಸೇಮಿಗೆ ಹೀಗೆ ವಿಧ ವಿಧವಾದ ಬ್ರೇಕ್ ಪಾಷ್ಟ್ ಅಕ್ಕಿ ತಿಂಡಿಗಳೂ ಕೂಡ ಕಡಿಮೆ ರುಚಿಕಟ್ಟಿದ್ದೆನಲ್ಲ,ಸೀಸನ್ ಗೆ ತಕ್ಕಂತೆ ಬದಲಾಗೋ ಈ ತಿಂಡಿಗಳು ಅರೋಗ್ಯದ ಕಡೆಗೆ ಗಮನ ಕೊಟ್ಟು ಸಂಪ್ರದಾಯಿಕವಾಗಿ ರೂಪುಗೊಂಡಂತವು ಎನ್ನುವದನ್ನು ನಾವು ಗಮನಿಸಬೇಕಾದ ಅವಶ್ಯಕತೆಗಳಲ್ಲೊಂದು. ಇದೆಲ್ಲವೂ ಕರಾವಳಿಯ ಊಟ ತಿಂಡಿಯ ಮೆನುಗಳ ಸ್ಯಾಂಪಲ್ಗಳು. 

ಕರಾವಳಿಯ ಹಳ್ಳಿಗಳು ಎಂದರೆ ಸುಮ್ಮನೆ ಒಂದು ಎತ್ತರದ ಗುಡ್ಡ ಹತ್ತಿ ನೋಡಿದಲ್ಲಿ ಕಾಣಸಿಗುವ ಅಡಿಕೆ ತೆಂಗು ತೋಟಗಳು ಎಂದು ಮೇಲ್ನೋಟಕ್ಕೆ ಬಣ್ಣಿಸಬಹುದೇನೊ. ಆದರೆ ಆ ತೋಟದೊಳಗಿನ ಹಲಸು, ಮಾವು, ನುಗ್ಗೆ, ಗೇರು, ಬಿಂಬಳೆ, ಜಾಯಿಕಾಯಿ, ಬೇರು ಹಲಸು, ಅಮಟೆ, ಚಿಕ್ಕು, ನುಗ್ಗೆ, ಪಪಾಯ, ಸಾಂಬಾರ ಬೇವು ಮುಂತಾದ ಹಸಿರ ಸಮ್ಮೇಳನದೊಳಗೆ ದೊಡ್ಡ ಮರಗಳು ಆವರಿಸಿಕೊಂಡ ಕಾಳು ಮೆಣಸು, ವೀಳ್ಯದೆಲೆ ಬಳ್ಳಿಗಳು, ಮಟ್ಟಕೆಸ, ಸಿಹಿ ಗೆಣಸು, ಮರಗೆಣಸು, ನೇಗಿಲ ಗೆಣಸು, ಕೆಂಪು ಗೆಣಸು, ಬಿಳೆ ಗೆಣಸು, ಹೆಡಗೆ ಗೆಣಸು, ಪಂಜರ ಗಡ್ಡೆ, ಕರಿ ಕೆಸ, ಬಾಂಬೆ ಕೆಸ, ಊರ ಕೆಸ, ಬಿಳಿ ಕೆಸ, ಚೀಪು ಹೀಗೆ ಬೇರು ಬಿಟ್ಟ ಗೆಡ್ಡೆಗಳು ತೊಟದುದ್ದಕ್ಕೂ ಕಾಣ ಸಿಗುವಂತದ್ದೂ , ಇದೆಲ್ಲದರ ಉಪಯುಕ್ತತೆಯೂ ಬರೀಯ ಆರ್ಥಿಕ ವೃದ್ದಿಯಲ್ಲದೆ ಮೇಲೆ ಹೇಳಿದ ತಿಂಡಿ ತಿನಿಸು ಆಹಾರಗಳು ರೂಪುಗೊಳ್ಳಲು ಕಾರಣವಾಗಿದೆ ಅಂದರೆ ತಪ್ಪಿಲ್ಲ.ಎಲ್ಲಿ ನೋಡಿದರಲ್ಲಿ ಕಾಣಸಿಗುವ ಈರುಳ್ಳಿ, ಮೂಲಂಗಿ, ಟೊಮೆಟೋ, ಎಲೆಕೋಸು, ಹೂಕೋಸು, ಬಟಾಟೆಯ ಬಳಗದ ನಡುವೆ ಕರಾವಳಿಯ ಈ ಬೆಳೆಗಳು ವಿಶಿಷ್ಟವಾಗಿ ನಿಲ್ಲುತ್ತೆ ಮತ್ತು ಇದರಿಂದ ರೂಪಿತವಾದಂತ ಅಹಾರ ಪದಾರ್ಥಗಳು ವಿಶೇಷವಾಗಿ ನಮ್ಮ ರುಚಿಗೆ ಸಿಗುತ್ತೆ ಅನ್ನೊದು ನನ್ನ ಅನಿಸಿಕೆ ಮತ್ತು ಅನುಭವ.

ಬೇಸಿಗೆ ಉರಿ ಬಿಸಿಲಲ್ಲಿ ದೇಹ ತಂಪಾಗಿಸಲು ಒಂದೆಲಗ ಸೊಪ್ಪಿನ ಚಟ್ನಿ, ಶೀತ ಜ್ವರ ಶಮನ ಮಾಡಲು ಸಾಂಬಾರ್ ಬಳ್ಳಿ ಸೊಪ್ಪಿನ ತಂಬಳಿ,ದೇಹ ಬೆಚ್ಚಗಾಗಿಸಲು ಬಿದಿರ ಮೊಳಕೆ ಕಣಿಲೆಯ ವಿಧ ವಿಧವಾದ ತಿನಿಸು ಪಲ್ಯಗಳು ಇತ್ಯಾದಿ ತರೆವಾರಿ ಅಹಾರ ಪದಾರ್ಥಗಳು ವಾತಾವರಣದ ಏರು ಪೇರಿಗೆ ಅನುಗುಣವಾಗಿ ಕರಾವಳಿಗಳ ಮನೆ ಮನೆಯಲ್ಲಿ ದಿನಕ್ಕೊಂದು ರೀತಿಯಂತೆ ಮಾಮೂಲಿ ಬದನೆ, ಬೆಂಡೆ, ತೊಂಡೆ, ಹಾಗಲ, ಸವತೆ ಎಂಬ ಅದೇ ಹತ್ತಿಪ್ಪತ್ತು ತರಕಾರಿಗಳ ಬದಲಾಗಿ ಬೇಯುವಂತದ್ದು.ಹೆಚ್ಚಾಗಿ ಕೃಷಿ ಚಟುವಟಿಕೆಯಲ್ಲಿ ಇರುವ ಇಲ್ಲಿನ ಮಂದಿ ತಮ್ಮ ಕೆಲಸ ಮುಗಿದು ಹಿಂತಿರುಗುವ ದಾರಿಯಲ್ಲಿ ಸಿಗುವ ಮಾವಿನಕಾಯಿ, ಒಂದೆಲಗ, ಬಿಲ್ವಪತ್ರೆ, ಕವಲು ಕುಡಿ, ಮುಟ್ಟಿದರೆ ಮುನಿ ಕುಡಿ, ಕೆಂದಿಗೆ ಬಳ್ಳಿಯ ಚಿಗುರು, ಮುರುಗಲು ಕಾಯಿ, ಮಾವಿನ ಸೊಪ್ಪು, ಕರಡಿ ಸೊಪ್ಪು, ಮಜ್ಜಿಗೆ ಹುಲ್ಲು, ದೂರ್ವೆ ಹೀಗೆ ಕೈಗೆ ಸಿಕ್ಕಿದ ಎಲ್ಲವೂ ಸೊಗಸಾದ ಸಾಂಬಾರು, ಗೊಜ್ಜು, ಚಟ್ನಿ, ಪಲ್ಯಗಳಾಗಿ ರೂಪಿತವಾಗುತ್ತದೆ ಎಂಬುದು ತಿಳಿದಲ್ಲಿ ಈ ಬಗ್ಗೆ ಗೊತ್ತೆ ಇರದ ಪೇಟೆ ಮಂದಿ ಹುಬ್ಬೇರಿಸಿದರೆ ಆಶ್ಚರ್ಯವಿಲ್ಲ.(ಇನ್ನು ನಮೂನೆವಾರು ಸೆಂಡಿಗೆ ಹಪ್ಪಳ ಉಪ್ಪಿನಕಾಯಿಯ ಬಗ್ಗೆ ನಾನಿಲ್ಲಿ ಏನನ್ನೂ ಹೇಳಿಲ್ಲ, ಸಾಧ್ಯವಾದರೆ ಅವಕಾಶ ಸಿಕ್ಕಲ್ಲಿ ಇದನ್ನೂ ರುಚಿಸಿಯೆ ಅನುಭವಿಸೋದು ಒಳಿತು.)ಎಲ್ಲವೂ ವಿಷಮಯವಾದ ಈ ದಿನಗಳಲ್ಲಿ ಇಂತಹ ಹಲವು ಅಡವಿ ತರಕಾರಿಗಳು ದೇಹಕ್ಕೆ ಅರೋಗ್ಯವಲ್ಲದೆ ವಿಶಿಷ್ಟ ರುಚಿಯನ್ನು ನಮಗೊದಗಿಸುವದು ಖಂಡಿತ.ಒಂದಷ್ಟು ಜೇಬು ಬರಿದಾಗುವದನ್ನು ತಪ್ಪಿಸಬಹುದು. 

ಹೌದು, 100 ರೂಪಾಯಿ ವೆಚ್ಚದಲ್ಲಿ ತಿಂಗಳೂ ಪೂರ್ತಿ ಹೊಟ್ಟೆ ತುಂಬಾ ಉಂಡೇನೂ ಮಗ, ನಿಮ್ ಪೇಟೆಯಲ್ಲಿ ಇದು ಸಾಧ್ಯಾನಾ? ಎಂದು ನನ್ನಮ್ಮ ನೀ ಬೆಂಗಳೂರಿಗೆ ಬಂದು ನನ್ ಜೊತೆ ಇದ್ದು ಬಿಡು ಎಂದಾಗ ಹೇಳಿದ ಮಾತು.ಹಳ್ಳಿ ಜೀವನನೇ ಹಾಗೆ, ಪರಸ್ಪರ ನೆರವಿಗೆ ನಿಲ್ಲುವ ಜನರಿರುತ್ತಾರೆ,ಊಟ ತಿಂಡಿಗೆ ಕೈ ಹಾಕಿದಲ್ಲಿ ಸೊಪ್ಪು ಸಗಡ ಏನಾದರೊಂದು ಇದ್ದೆ ಇರುತ್ತದೆ,ಆರೋಗ್ಯ ಕೆಟ್ಟಲ್ಲಿ ಹಿತ್ತಿಲಲ್ಲೆ ಮದ್ದಿನ ಕಣಜವಿರುತ್ತೆ,ಅಸ್ಪತ್ರೆ ಮದ್ದು ಮತ್ತೊಂದು ಅಪರೂಪದ ಮಾತು.ಎಲ್ಲಕ್ಕಿಂತ ಮುಖ್ಯವಾಗಿ ಜೀವನ ಅತ್ಯಂತ ನೆಮ್ಮದಿಯಿಂದ ಕೂಡಿರುತ್ತೆ. ಇಂತಹ ವಿಷಯಗಳು ಪೇಟೆ ಜೀವನಕ್ಕೆ ಒಗ್ಗಿ ಹೋದ ನನ್ನಂತವರಿಗೆ ಅಷ್ಟು ಸುಲಭಕ್ಕೆ ಅರ್ಥವಾಗುವದಿಲ್ಲ.ಸಂಪಾದನೆಯ ಮುಂದೆ ಎಲ್ಲವೂ ಗೌಣವೆಂಬ ಗುಣ ನಮಗೆ ನಾವೆ ಅಳವಡಿಸಿಕೊಂಡಿರಬೇಕಾದರೆ ಹಳ್ಳಿ-ಪಳ್ಳಿ ವಿಷಯಗಳು ತಲೆಗೆ ಹತ್ತೋದು ದೂರದ ಮಾತೆ ಸರಿ.ಆದರೂ ಹಳ್ಳಿಯಿಂದ ಬಂದ ನನ್ನಂತವರಿಗೆ ಅತ್ತ ಕಡೆ ಒಂದು ಸೆಳೆತವಿದ್ದೆ ಇದೆ, ಅಲ್ಲಿನ ವಿಶಿಷ್ಟ ಊಟ ತಿಂಡಿಯ ಪಾಲೂ ಈ ಸೆಳೆತಕ್ಕೊಂದು ಕಾರಣ.ಒಂದು ಸಲ ರುಚಿ ಕಂಡ ನಾಲಗೆ ಅಷ್ಟು ಸುಲಭವಾಗಿ ಆ ರುಚಿಯನ್ನೂ ಮರೆಯೋದು ಕಷ್ಟ. ಬಾಳೆ ಎಲೆಯೊಂದಕ್ಕೆ 1 ರೂಪಾಯಿ ಪೇಟೆಯಲ್ಲಿ ಕೊಡಬೇಕೆಂಬುದ ಕೇಳಿ ನಮ್ಮೂರ ಮಂದಿ ಗೊಳ್ಳಂತ ನಗ್ತಾರೆ ಅಂದರೆ ನಂಬಲೇಬೇಕು. ಅದೇನೆ ಇರಲಿ ಹಳ್ಳಿ ಎಂದು ಮೂದಲಿಸುವ ಪೇಟೆ ಮಂದಿಗೊಂದು ನಿಜ ವಿಷಯ ಹೇಳಲಾ??? ಮತ್ತೇನಿಲ್ಲ ಪೇಟೆ ಎಂದರೆ ಹಳ್ಳಿಗರಿಗೆ ಮಾಯಾಲೋಕವೇನೊ ಹೌದು ಆದರೆ ಆ ಮಾಯೆಯೊಳ ತಾಕಿದರೆ ಕಾಣೋದು ಪೇಟೆಯತ್ತ ಹಳ್ಳಿಗರಿಗಿರುವ ಅಗತ್ಯ ತಾತ್ಸರತನ. ನೀವೂ ತಾತ್ಸಾರ ಪದ ಪ್ರಯೋಗವನ್ನು ಒಪ್ಪದಿರಲೂಬಹುದು ಆದರೆ ನಿಮ್ಮ ಅನುಭವಕ್ಕೆ ಬಂದಲ್ಲಿ ಹೀಗೊಂದು ಭಾವನೆಯನ್ನೂ ಅಲ್ಲಗಳೆಯಲಾರಿರಿ.ಕರಾವಳಿ ಹಳ್ಳಿ ರುಚಿಯೆ ಅಂತದ್ದು ಕಾರಣ ಈ ರುಚಿಯೊಂದಿಗೆ ಇಲ್ಲಿನ ಸಂಸ್ಕೃತಿ ಮತ್ತು ಜೀವನಕ್ರಮದ ಬೆಸುಗೆಯಿದೆ.

ಇತ್ತೀಚಿಗಿನ ಒಂದು ತಿಂಗಳ ಕಾಲದ ಊರ ವಾಸ್ಥವ್ಯದ ಗುಂಗಿನಿಂದ ಇನ್ನೂ ಹೊರಬರದ ನಾನೂ ಅಲ್ಲಿನ ತಿಂಡಿ ಊಟದ ಸವಿಯನ್ನೂ ನೆನೆಸುತ್ತಲೆ ಬೆಂಗಳೂರ ಊಟ ತಿಂಡಿಯ ಸವಿಯುತಿದ್ದೇನೆ.ಬೆಂಗಳೂರ ಊಟ ತಕ್ಕ ಮಟ್ಟಿಗೆ ಮೊದಲಿನಿಂದ ಸವಿಯಾಗಿದೆ ಕಾರಣ ಗೊತ್ತಿರೋದೆ ಮೊದಲ ಭಾರಿಗೆ ಹೆಂಡತಿಯ ಕೈ ರುಚಿಯ ಭಾಗ್ಯ ನನ್ನದಾಗಿದೆ :).ಪತ್ನಿ ಊಟದ ಕೈ ರುಚಿ ಸಿಗದವರೀಗೆ ಬೇಗ ಸಿಗುವಂತಾಗಲಿ, ಸಿಕ್ಕವರೀಗೆ ಹೆಚ್ಚು ಹೆಚ್ಚು ಮನೆಯೂಟನೆ ಸಿಗುವಂತಾಗಲಿ ಎನ್ನುತ್ತಾ... ಸುಮಾರು 2 ತಿಂಗಳ ಕಾಲ ಏನೋಂದು ಬರೆಯದೆ ಸುಮ್ಮನಿದ್ದ ನಾನು ಈ ಮೂಲಕ ಬರೆಯಲು ಶುರು ಹಚ್ಚಿದ್ದೇನೆ, ನನಗೆ ಒಳ್ಳೆದಾಗಲಿ:), ಕರಾವಳಿ ಹಳ್ಳಿಯೂಟದ ಸವಿ ಒಂದಲ್ಲ  ಒಂದು ದಿನ ಎಲ್ಲರೀಗೂ ದಕ್ಕಲಿ ಎಂದು ಶುಭ ಹಾರೈಸುತ್ತಾ, ಹೊಟ್ಟೆ ಹಸೀತಿದೆ, ಮನೆ ಕಡೆ ಹೆಜ್ಜೆ ಹಾಕ್ತಿದೇನೆ,ನಿಮ್ಮದೂ ಊಟ ಆಯ್ತಾ???

ಬೈ ಮತ್ತೆ ಸಿಗೋಣ
ನಿಮ್ಮವ.....
ರಾಘವೇಂದ್ರ ತೆಕ್ಕಾರ್.

ನಮ್ ಕನ್ನಡ ಆಲ್ದ ಮರ ಇದ್ದಂಗೆ..

ಕಹಳೆಯಲ್ಲಿ ಪ್ರಕಟವಾದ ಲೇಖನದ ಯಥಾವತ್ ಪ್ರತಿ:-


 ಸೋಮವಾರ 12 ನವೆಂಬರ್ 2012 / 
"ತಮ್ಮಾ ಬಾ ಇಲ್ಲಿ, ಹೆಂಗಿದ್ದೀ..? ಆರಾಮಾ..?"

"ಲೋ.. ನಿನ್ ಮುಖಾ ಕುಟ್ಟಾ!! ಹೆಂಗಿದ್ದೀಯಲೆ..?"

ಹಿಂಗೆ ಕ್ಷೇಮವೇ ಕುಶಲವೇ ಅನ್ನೋ ಜಾಗದಲ್ಲಿ ಈ ತರದ ಮಾತುಗಳು ಕನ್ನಡದೊಳಗೆ ಜಾಗ ಪಡೆದಿವೆ ಮತ್ತು ಯುವ ಜನಾಂಗದ ಮಾತುಕತೆಯೊಗೆ/ಬರಹದೊಳಗೆ ಇಂತದ್ದೂ ಈಗೀಗ ಸಾರ್ವತ್ರಿಕವಾಗಿದೆ. ಸೂಕ್ಷ್ಮವಾಗಿ ಒಂದು ಸಲ ಈಗೀಗ ಬಳಕೆಯಾಗುತ್ತಿರುವ ಕನ್ನಡವನ್ನ ಸುಮ್ಮನೆ ಕೇಳಿಸಿಕೊಂಡು ನೋಡಿ; ಅಲ್ಲಿ ಗ್ರಾಮ್ಯ ಶಬ್ದಗಳಿವೆ, ಇತರೆ ಭಾಷೆಯ ಶಬ್ದಗಳ ಬಳಕೆಯಿದೆ, ಗತ್ತು ಗೌಲತ್ತುಗಳನ್ನೂ ತೊಡೆದುಹಾಕಿ ಆತ್ಮೀಯತೆ ನೆಲೆಸಿದೆ, ವ್ಯವಹಾರಿಕತೆಯಿದೆ, ಹೊಸ ಪೀಳಿಗೆಯ ಒಲವಿನ ದೋತ್ಯಕಗಳಿವೆ, ಹೀಗೆ ಏನೇನೋ ಇರುವುಗಳ ನಡುವೆ ಒಂದಿಲ್ಲ - ಅದುವೇ 'ನಾಟಕೀಯತೆ'. ನಾ ಹೀಗಂತೀನಿ ಅಂತ ಸಂಪ್ರದಾಯಿಕವಾದಿಗಳು ಮೂಗು ಮುರಿಯಬೇಡಿ, ಭಾಷೆ ಕುಲಗೆಟ್ಟು ಹೋಯಿತು ಎಂದೆನ್ನಬೇಡಿ, ಭಾಷೆಯನ್ನು ನೆಚ್ಚಿನಿಂದ ತಮ್ಮದಾಗಿಸುತ್ತಾ ಆತ್ಮೀಯವಾಗಿಸುತ್ತಾ ಯುವಜನತೆ ಸಾಗಿದೆ, ಅದು ಹಿರಿಯರಿಗೆ ಕುಲಗೆಡಿಸಿದಂತೆ ಕಂಡರೆ ತಪ್ಪು ಯುವಜನತೆಯದ್ದಲ್ಲ. ಅಸಲಿಗೆ ಅಂಥಾ ಯಾವ ಉದ್ದೇಶವಾಗಲೀ ಆ ಬಗ್ಗೆಯ ಅರಿವುಗಳಾಗಲೀ ಯುವ ಜನತೆಗಿಲ್ಲ, ಅದು ತನ್ನ ಪಾಡಿಗೆ ತಾನು ಮುನ್ನಡೆಯುತ್ತಿದೆ, ಈ ಕನ್ನಡ ಸರಳೀಕರಣದ ಬಗ್ಗೆ ಅಪಸ್ವರ ಇರುವವರು ಒಂದಂತೂ ಒಪ್ಪಲೇಬೇಕು - ಭಾಷೆಯ ಉಳಿಕೆ ಮತ್ತು ಬೆಳವಣಿಗೆಗೆ ಚಲನಶೀಲತೆ ಇರಬೇಕು, ಹೊಸ ಪ್ರಯೋಗಗಳಿಗೆ ಭಾಷೆಗಳು ಎದುರಾಗಬೇಕು, ಮೂಲ ಸೊಗಡನ್ನು ಕಳೆದುಕೊಂಡಿದೆ ಎಂದರೂ ಸರಿ ಕುಲಗೆಟ್ಟಿತೆಂದರೂ ಸರಿ ಯುವಜನತೆಯ ಬಾಯಲ್ಲಿ ಕುಣಿದಾಡುವ ಕನ್ನಡದ ನವೀನತೆ ಕನ್ನಡವನ್ನೂ ಆತ್ಮೀಯವಾಗಿಸುವಲ್ಲಿ ಗೆದ್ದಿದೆ.

ಯುವ ಜನತೆಯಲ್ಲಿ ಕನ್ನಡ - ಕರ್ನಾಟಕದ ಬಗ್ಗೆ ಅಸಡ್ಡೆ ಇರುವ ದಿನಗಳಿತ್ತು, ಇದು ಇನ್ನೂ ಕೂಡ ಪೂರ್ತಿಯಾಗಿ ಪರಿಹಾರವಾಗಿರದ ಸಮಸ್ಯೆ. ಕಾರ್ಪೊರೇಟ್ ವಲಯದ ಲಗ್ಗೆಯಿಂದ ಹೆಚ್ಚೆಚ್ಚು ಯುವ ಜನತೆ ಉದ್ಯೋಗಕ್ಕಾಗಿ ಅತ್ತ ವಾಲಿತು, ಪರಿಣಾಮ ಇಂಗ್ಲೀಷ್ ಒಂದೇ ಎಲ್ಲದಕ್ಕೂ ಪರಿಹಾರವೆಂಬ ಭ್ರಮೆಯೊಳಗೆ ಸಿಲುಕಿ ಮೂಲ ಭಾಷೆಯತ್ತ ಅಸಡ್ಡೆ, ಮಾತಾಡಲೂ ಕೂಡ ಮುಜುಗರ ಪಡುವಂತ ಸನ್ನಿವೇಶದೊಳಗೆ ಸಿಲುಕಿತು. ಇದರಿಂದ ಹೊರಬರುವಲ್ಲಿ ದಾರಿಯಾಗಿದ್ದು ಯುವಜನತೆಯೊಳಗೆ ಹಾಸುಹೊಕ್ಕಾಗಿರುವ ಈಗಿನ ನವೀನ ಕನ್ನಡ. ಮಾತೃಭಾಷೆ ಇನ್ನಷ್ಟು ಇಷ್ಟವಾಗುವಂತೆ, ಕನ್ನಡದಲ್ಲಿ ಮಾತಾಡಿದಲ್ಲಿ ಇನ್ನಷ್ಟೂ ಆತ್ಮೀಯವಾಗಬಹುದೆಂಬ ಅರಿವು ಈ ಮೂಲಕ ಯುವಜನತೆಗೆ ಬಂದಿದೆ ಅಂದರೆ ತಪ್ಪಿಲ್ಲ. ಹಾಗಂತ ಇದು ಯಾರೋ ಕಂಡುಕೊಂಡ ಸೂತ್ರವಲ್ಲ, ಇದು ಕಂಡುಕೊಳ್ಳುವಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲಸ ಮಾಡಿದ್ದು ಯುವಜನತೆಯೊಳಗಿನ ಕನ್ನಡ ಮನಸ್ಸು. ಯುವ ಜನತೆಯ ಆಸೆ ಅಭಿಲಾಷೆಗಳು ಯಾವತ್ತೂ ಚೌಕಟ್ಟು ಮೀರಿ ಬೆಳೆಯಲು ಹವಣಿಸುತ್ತಿರುತ್ತವೆ. ಅದೇ ಅಭಿಲಾಷೆಯ ಫಲ ಭಾಷೆಯ ಮೇಲೂ ಅಗಿದೆ; ಪರಿಣಾಮ - ವ್ಯಾಕರಣ, ಛಂದಸ್ಸು, ಮಾತ್ರೆ-ಗಣ ಮುಂತಾದವುಗಳ ಹಂಗನ್ನೂ ಮೀರಿ  ಆತ್ಮೀಯತೆಯೊಂದೇ ಸೂತ್ರವಾಗಿ ನವೀನ ಕನ್ನಡವನ್ನು ಯುವಜನತೆ ತನ್ನದಾಗಿಸಿಕೊಂಡಿದೆ. ಭಾಷೆಯೊಂದು ಹೆಚ್ಚು ಆತ್ಮೀಯವಾಗೋದು ಮುಖ್ಯವೆಂಬುದಾದಾಗ ಕುಲಗೆಟ್ಟು ಹೋಯಿತು, ಭಾಷೆಗೊಂದು ಹೊಸ ಸೊಗಡು ದೊರೆಯಿತೆಂದಾದಾಗ ಮೂಲ ಸೊಗಡನ್ನು ಕಳಕೊಂಡಿತು ಎಂಬುದಕ್ಕೆ ಅರ್ಥವಿಲ್ಲ. ನೆಲವಿಲ್ಲವೆಂದಾದಲ್ಲಿ ಮೆಟ್ಟಿಲುಗಳು ಇರಲ್ಲ, ಏರುವ ಅವಕಾಶನೂ ಇರಲ್ಲಾ ಅಲ್ವೆ? ಸಂಪ್ರದಾಯಿ ಕನ್ನಡ ಸೊಗಡು ನವೀನತೆಗೊಂದು ದಾರಿ ಮಾಡಿಕೊಟ್ಟಿದೆ ಎಂದು ಅಂದುಕೊಳ್ಳುವುದೇ ಸರಿ.

ಡಿ. ಎನ್. ಶಂಕರ ಭಟ್ ಅವರ ಹೆಸರು ಕೆಲವರಾದರೂ ಕೇಳಿರಬಹುದು, ಇವರ ಹೆಸರು ಕೇಳಿದಲ್ಲಿ ಕೆಲವರು ಉರಿದು ಬೀಳುವವರೂ ಇರಬಹುದು, ಕಾರಣ ಇವರು ಕನ್ನಡ ಲಿಪಿಯ ಬಗ್ಗೆ ಮುಂದಿಟ್ಟ ಕೆಲವು ಸೂತ್ರಗಳ ಬಗ್ಗೆ ಒಮ್ಮತವಿಲ್ಲದಿರುವುದು. ಅಷ್ಟಕ್ಕೂ ಇವರು ಪ್ರತಿಪಾದಿಸುತ್ತಿರುವುದು ತುಂಬಾ ಸರಳ - ಅದಾವುದೇ ಭಾಷೆಯಾಗಿರಲಿ ಭಾಷೆಯು ಮೂಲತಃ ಶಬ್ದ ಸಂಕೇತಗಳು, ಇಲ್ಲಿ ಉಚ್ಛಾರದಂತೆ ಲಿಪಿ ಇದ್ದರೆ ಬರವಣಿಗೆಯಲ್ಲಿ ಸಂಶಯ ಜಾಗ ಪಡೆಯುವದಿಲ್ಲ; ಹಾಗೂ ಭಾಷೆಯೊಂದು ಕಠಿಣವಾಗಲಾರದು ಎಂದು. ಕನ್ನಡದಲ್ಲಿ ಈ ರೀತಿ ಗೊಂದಲಗಳಿವೆಯೇ ಎಂಬುದು ನಿಮ್ಮ ಪ್ರಶ್ನೆಯಾದರೆ, ಹೌದು ಎಂಬುದೇ ಉತ್ತರವಾಗಿರುತ್ತದೆ. ಉದಾಹರಣೆಗೆ 'ಷ' ಮತ್ತು 'ಶ' ಅಕ್ಷರಗಳ ಉಚ್ಚಾರದಲ್ಲಿ ಏನೊಂದು ವ್ಯತ್ಯಾಸವಿಲ್ಲ, ಆದರೂ 2 ಅಕ್ಷರಗಳಿವೆ. ರುಣ ಎಂದು ಬರೆದರೂ, ಋಣ ಎಂದರೂ ಉಚ್ಚಾರ ರೀತಿ ಒಂದೇ. ಹಾಗಾದಾಗ 'ಋ' ಅಕ್ಷರದ ಜರೂರಿ ಇದೆಯೆ? ಒತ್ತಕ್ಷರವಾಗಿ 'ಞ' ದ ಬದಲು 'ನ' ವನ್ನೆ ಬಳಸಬಹುದಾದಾಗ 'ಞ' ದ ಅವಶ್ಯಕತೆ ಇದೆಯೆ? ಇಂತವೇ ಹಲವು ಪ್ರಶ್ನೆಗಳನ್ನು ಮುಂದಿಟ್ಟಿವೆ ಇವರ ವಿಚಾರಧಾರೆಗಳು. ಭಾಷೆ ಮತ್ತು ಅದರ ಲಿಪಿ ಸರಳವಾದಷ್ಟೂ ಜನಜನಿತವಾಗಬಲ್ಲುದು,  ಉಚ್ಚಾರದಂತೆ ಲಿಪಿಯಿದ್ದರೆ ಕನ್ನಡ ಕಲಿಯುವವರಿಗೂ ಇನ್ನಷ್ಟು ಸುಲಭವಾಗಿ ಭಾಷೆಯ ಬಗ್ಗೆ ಇನ್ನೂ ಹೆಚ್ಚಿನ ಒಲವೂ ಮೂಡಬಹುದು ಎಂಬುದು ಮೂಲ ಕಾಳಜಿ. ಭಾಷೆ ಬೆಳವಣಿಗೆ ಪಡೆಯಬೇಕೆಂದರೆ ಹೊಸ ಪ್ರಯೋಗಕ್ಕೆ ಒಳಪಡಲೇಬೇಕು; ಇದು ಕನ್ನಡಕ್ಕೆ ಮಾತ್ರ ಸೀಮಿತವಾದುದಲ್ಲ. ಹಾಗಂತ ಇಂತಹ ಪ್ರಯೋಗಗಳನ್ನು ವಿರೋಧಿಸುವವರದ್ದು ತಪ್ಪೇನೂ ಇಲ್ಲ , ಎಲ್ಲಿ ಭಾಷೆಗೆ ಧಕ್ಕೆಯಾಗಿಬಿಡುತ್ತದೋ ಎಂಬ ಮೂಲ ಕಾಳಾಜಿಯೇ ವಿರೋಧಕ್ಕೆ ಕಾರಣ. ಆದುದರಿಂದ ನವೀನತೆಯನ್ನು ಬಯಸುವವರೂ ಹಾಗೂ ಸಂಪ್ರದಾಯಿ ಕನ್ನಡಪರರ ಕನ್ನಡೀಯತೆಯ ಬಗ್ಗೆ ಯಾವುದೇ ಪ್ರಶ್ನೆ, ಸಂಶಯಗಳು ಸಲ್ಲದು. ಆದರೆ ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಹೊಸತೊಂದರತ್ತ ಮುನ್ನಡೆಯುವಾಗ ಚರ್ಚೆಗೆ ತೆರೆದುಕೊಳ್ಳುವ ಮನಸ್ಸು ನಮಗಿರಬೇಕು, ಒಪ್ಪುವದು ಬಿಡುವದು ಆಮೇಲಿನ ಪ್ರಶ್ನೆ. ಕನ್ನಡಿಗರು ಹೃದಯವೈಶಾಲ್ಯರು, ಭಾಷೆಯ ಉಳಿವು ಬೆಳವಿನ ಹಾದಿಯಲ್ಲೂ ನಮ್ಮ ಮನಸ್ಸು ತೆರೆದಿರಲಿ ಎಂಬುದಷ್ಟೆ ನನ್ನ ಆಶಯ.

ಭಾಷೆಯ ಉಳಿವಿಗೆ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳಬೇಕೆ? ಬೆಳವಣಿಗೆಯ ಜರೂರಿಗಳಿವೆಯೆ? ಇಂತಹ ಪ್ರಶ್ನೆ ಕಾಡುತಿದ್ದರೆ ಇತಿಹಾಸವನ್ನೊಮ್ಮೆ ನೋಡಿದಲ್ಲಿ ಉತ್ತರ ಸಿಗುತ್ತದೆ. ಕನ್ನಡದ ಎಲ್ಲೆ ದೂರದ ಮಹರಾಷ್ಟ್ರದವರೆಗೂ, ಇತ್ತ ಕಡೆ ಕಾಸರಗೋಡಿನವರೆಗೂ ಬೆಳೆದು ನಿಂತಿತ್ತು. ಆದರೀಗ ಅದೇ ಕನ್ನಡ ಭಾಷೆಯ ಗಡಿ (ರಾಜ್ಯದ ಗಡಿಯ ಹೊರತಾಗಿ) ಎಲ್ಲಿದೆ ಅನ್ನುವದನ್ನೂ ಅವಲೋಕಿಸುವುದು ಒಳಿತು. ಕರ್ನಾಟಕದ ರಾಜಧಾನಿ ಬೆಂಗಳೂರೇ ಕನ್ನಡ ಪರವಾಗಿಲ್ಲ ಅನ್ನುವದನ್ನು ಒಪ್ಪುವುದು ಕಷ್ಟವಾದರೂ ವಾಸ್ತವವನ್ನು ತಿರಸ್ಕರಿಸುವದೆಂತು? ಹೀಗಿರಬೇಕಾದರೆ ಕನ್ನಡವನ್ನು ಸರಳೀಕರಿಸಿ ಇನ್ನಷ್ಟು ಅತ್ಮೀಯವಾಗಿಸುವ ವಾದಕ್ಕೆ ತೂಕ ಬರುವುದಲ್ಲವೆ? ಸಂಪ್ರದಾಯತ್ವ ಕನ್ನಡವೇ ಬರಲಿ, ನವೀನ ಆಡು ಭಾಷೆಯಾಗಿ ಚಾಲ್ತಿಗೆ ವಿಭಿನ್ನ ರೀತಿಯಲ್ಲಿ ತೆರೆದುಕೊಂಡಿರುವ ಕನ್ನಡವೇ ಆಗಲಿ ಕನ್ನಡ ಪರವಾದ ವಾತಾವರಣ ಬೆಳೆಯೋದು ಮುಖ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಕನ್ನಡಕ್ಕೆ ಹೊಸ ಪ್ರಯೋಗಗಳು ಎದುರಾದಾಗ ನಾವು ಚರ್ಚೆಗೆ, ಆ ಮೂಲಕ ಬೆಳವಣಿಗೆಗೆ ನಾವು ತೆರೆದುಕೊಳ್ಳಬೇಕಿರುವದು. ಮೂಲ ತಳಹದಿಯ ಮೇಲೆ ಹೊಸದೊಂದನ್ನು ಕಂಡುಕೊಳ್ಳಬೇಕಷ್ಟೆ. ಆದುದರಿಂದ ಕನ್ನಡದ ವಿರೂಪ ಇತ್ಯಾದಿಗಳು ವಾಸ್ತವ ನಿಟ್ಟಿನ ವಾದಗಳಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ಅಯ್ಯೋ ಲೇ.. ಏನ್ ಕೊರಿತೀಯಾ ಕನ, ಆವಾಗಿಂದ ನೋಡ್ತಾ ಇವ್ನಿ.. ಬರೀಯ ಕಥೆನೇ ಹೇಳ್ಕೊಂಡು ಕೂತಿಯಲ್ಲೊ ಮಾರಾಯ. ನಿಂದೇನು ಗೋಳು? ಎಂದುಕೊಂಡು ಮನಸಲ್ಲೆ ಬೈದಾಡ್ತೀರಾ ನನ್ ಬಗ್ಗೆ.. ಬೈಕೋ ಬೇಡಿ ಪಿಲೀಸು, ಏನೋ ಸಣ್ ತಮ್ಮ ಹೋಯ್ದಾಡ್ತಾವ್ನೆ ಹೊಟ್ಟೆಗಾಕ್ಕೋಳ್ಳಿ ಇಲ್ಲಾಂದ್ರೆ ಸ್ಯಾನೆ ಬೇಜಾರಾಗುತ್ತೆ ನಂಗೆ. ಏನೋ ನಮುಗೆ ತಿಳಿದಂಗೆ ನಾವ್ ನೋಡ್ತಿರೊ ಹಂಗೆ ಬರಿಯಕ್ಕೆ ಬರುತ್ತೆ ಅನ್ಕೊಂಡು (ಹಂಗೆ ಅನ್ಕೊಂಡಿದೀನಿ, ಆ ಬಗ್ಗೆ ನಂಗೆ ಕೊಂಬೇನೂ ಇಲ್ಲ) ಬರ್ದೀನಿ ಅಷ್ಟೆ; ಒಪ್ಪೋದು ಬಿಡೋದು ನಿಮ್ಗೆ ಬಿಟ್ಟೀರೋದು, ಅಲ್ವೂರಾ? ಕನ್ನಡ ಆಲ್ದ ಮರ ಇದ್ದಂಗೆ, ಹೊಸತನ್ನು ಹುಡುಕುತ್ತಾ ಪೋಷಿಸೋದು ಆ ಮರಕ್ಕೆ ನೀರುಣಿಸಿದಂತೆ. ಕನ್ನಡದ ಜೊತೆ ಜೊತೆಗೆ ಇರುವ ಇತರ ಭಾಷೆನೂ ಕನ್ನಡಕ್ಕೆ ಬೇರುಗಳಿದ್ದಂಗೆ, ಈ ಮರದ ನೆರಳಲ್ಲಿ ಅದು ಬೆಳಿಬೇಕು, ಜೊತೆಗೆ ಕನ್ನಡ ಬೆಳಿಬೇಕು ಎಂಬುದು ನನ್ನಾಸೆ. ಇಷ್ಟೇ.. ಇದುಕ್ಕೆ ಇಷ್ಟೂದ್ದ ಹೇಳ್ಕೋತಾ ಬಂದೆ. ಏನಂದುಕೊಂಡ್ರೋ ಏನೋ? ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳೋಣ, ಕನ್ನಡವನ್ನು ಬೆಳೆಸೋಣ. 57ನೇ ರಾಜ್ಯೋತ್ಸವದ ಈ ತಿಂಗಳಿನಲ್ಲಿ ಈಟಾದ್ರೂ ಚಿಂತನೆ ನಮ್ಮಲ್ಲಿ ಮೂಡ್ಲಿ. "ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ" ಎಂದು ಹಾಡುತ್ತಾ ಹೆಂಗಾದ್ರೂ ಸರಿ ಕನ್ನಡವನ್ನೇ ದಿನನಿತ್ಯ ಬಳಸೋಣ, ಆ ಮೂಲಕ ಭಾಷೆಯನ್ನು ಬೆಳೆಸೋಣ.

ಲೇಖಕರ ಕಿರುಪರಿಚಯ
ಶ್ರೀ ರಾಘವೇಂದ್ರ ತೆಕ್ಕಾರ್

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ತೆಕ್ಕಾರ್ ಎಂಬ ಪುಟ್ಟ ಹಳ್ಳಿಯವರಾದ ಇವರು ಕಳೆದ ಒಂಭತ್ತು ವರ್ಷಗಳಿಂದ ಬೆಂಗಳೂರಿನಲ್ಲಿಯೇ ನಲೆಸಿದ್ದಾರೆ.

ಟೆಲಿಕಾಂ ಕ್ಷೇತ್ರದಲ್ಲಿ ವೃತ್ತಿನಿರತರಾಗಿರುವ ಇವರಿಗೆ ಬರವಣಿಗೆಯು ಹವ್ಯಾಸ ಮತ್ತು ಮನದ ಭಾವನೆಯನ್ನು ಹೊರಗೆಡುವುತ್ತಾ, ಆಲೋಚನೆಗೊಂದು ದಿಕ್ಕು ತೋರುವ ಪ್ರವೃತ್ತಿಯಾಗಿ ತಾನಾಗಿಯೇ ಇವರ ಜೊತೆಗೆ ಬೆಳೆದು ಬಂದಿದೆ.

Blog  |  Facebook  |  Twitter

3 comments:

Nataraju S M } on: 12 ನವೆಂಬರ್ 2012 09:19 AM ಹೇಳಿದರು...
ರಾಘಣ್ಣ, ನಿಮ್ ಮೊಕ ಕುಟ್ಟಾ.. ಲೇಖನ ಚಂದಾಗಿದೆ.. :)
ಗುರುರಾಜ } on: 12 ನವೆಂಬರ್ 2012 10:09 AM ಹೇಳಿದರು...
ಬಹಳ ಸರಳ ಹಾಗು ಅರ್ಥಪೂರ್ಣ ವಾದ ಲೇಖನ.. ನೀವು ಹೇಳಿರುವ points ಗಳು ಸರಿಯಾಗಿವೆ..
ಡಾ. ಸಿ-ಕೇ-ಮೂರ್ತಿ } on: 12 ನವೆಂಬರ್ 2012 08:29 PM ಹೇಳಿದರು...
ಶ್ರೀ ರಾಘವೇಂದ್ರ ತೆಕ್ಕಾರ್ ರವರು ಹೇಳಿರುವಂತೆ, ಈ ಕನ್ನಡದ ಆಲದಮರದ ಕೆಳಗೆ ಹಳ್ಳೀ ಭಾಷೆಯ ಸೊಗಡು ಪಟ್ಟಣದ ಹೈಕಳ ನಾಲಿಗೆಯಲ್ಲಿ ಹೇಗೆ ಸುಲಲಿತವಾಗಿ ಹರಿದಾಡುವುದನ್ನು ನಾವು ಅಲ್ಲಲ್ಲಿ ಕಾಣಬಹುದು .ಅದು ಒಂದು ಈಗಿನ ಪೀಳಿಗೆಯವರ ಹವ್ಯಾಸವಾಗಿ ಬೆಳೆಯುತ್ತಿದೆ ಎಂದರೂ ತಪ್ಪಾಗಲಾರದು .