Tuesday, July 3, 2012

ಗೆಳೆಯನಿಗೆ ಒಲಿದ ಪಿ ಸಾಯಿನಾಥ್ ಪ್ರಶಸ್ತಿ ಮೂಲಕ ಪತ್ರಿಕೋದ್ಯಮದತ್ತ ಸಣ್ಣದೊಂದು ನಿರೀಕ್ಷೆ!!!

ಹಿಂದಿ, ಒರಿಯಾ ಮತ್ತು ತೆಲುಗು ಭಾಷೆಗೆ ಒಲಿದ ಪಿ. ಸಾಯಿನಾಥ್ ಪ್ರಶಸ್ತಿ ಈ ಸಾರಿ ಕನ್ನಡಕ್ಕೆ ಲಭಿಸಿದೆ. ಕೃಷಿ ರಂಗದಲ್ಲಿ ಆಕ್ಟಿವಿಸಂ ಜೊತೆ ಜೊತೆಗೆ ಬರಹ ಮೂಲಕವಾಗಿ ಕೆಲಸ ಮಾಡುತ್ತಿರುವ ಗಾಯತ್ರಿ ಹಾಗೂ ಮಲ ಹೊರುವ ಪದ್ದತಿಯ ವಿರುದ್ದ ಕೆಲಸ ಮಾಡುತ್ತಿರುವ ಪತ್ರಕರ್ತ ಸಂಶೋಧಕ ಮಿತ್ರ ದಯಾನಂದ್ ಮಡಿಲಿಗೆ ಈ ಪ್ರಶಸ್ತಿ ಸಂದಿದೆ. ದಾಖಲೆ ಕಾನೂನಿನ ಮೂಲಕ ಸತ್ತೆ ಹೋಗಿದೆ ಎಂದು ತೋರಿಸಲ್ಪಟ್ಟ ಮಲ ಹೊರುವ ಪದ್ದತಿಯು ಇನ್ನೂ ಜೀವಂತವಿರುವದನ್ನು ತೋರಿಸಿಕೊಟ್ಟ ದಯಾನಂದ್ ಹಾಗೂ ಬಳಗದವರ ಕಾರ್ಯವೈಖರಿಯನ್ನು ಹತ್ತಿರದಲ್ಲೆ ಬಲ್ಲೆನಾದ್ದುದ್ದರಿಂದ ಪಿ. ಸಾಯಿನಾಥ್ ಪ್ರಶಸ್ತಿಯ ಆಶಯಗಳಿಗೆ ಪೂರಕವಾದ ವ್ಯಕ್ತಿಗಳಿವರು ಅನ್ನುವದರಲ್ಲಿ ಎರಡು ಮಾತಿಲ್ಲ. ನಾನು ದೂರದಿಂದಲೆ ನೋಡಿ ಗೌರವಿಸುತಿದ್ದ ಮೇರು ವ್ಯಕ್ತಿ ದೇವನೂರು ಮಹಾದೇವ್ ಅವರು ಈ ಪ್ರಶಸ್ತಿಯನ್ನು ಕೊಡಮಾಡಿದ್ದು ಕೂಡ ಹೆಮ್ಮೆಯ ವಿಷಯವೆ ಸರಿ.


"ಪುಸ್ತಕ ಕೊಳ್ಳಲು ಬೇಕಾದ 300 ರೂ ಇಲ್ಲದ ಜರ್ನಲಿಸಂ ಕಲಿಕೆಯ ದಿನಗಳಲ್ಲಿ ರೂಮಿಂದ ರೂಮಿಗೆ ಸರಿದಾಡುತಿದ್ದ ಹಾಗೂ ಕೆಲವೋಮ್ಮೆ ಕದ್ದು ಓದುತಿದ್ದ ಪುಸ್ತಕ ಅಂದ್ರೆ ಪಿ. ಸಾಯಿನಾಥ್ ಅವರ "Everybody loves a good drought " ಪುಸ್ತಕ. ಸುಮಾರು ೩೪ ಬಾರಿ ಮುದ್ರಣಗೊಂಡು ಹಲವಾರು ಭಾಷೆಗೆ ಅನುವಾದಗೊಂಡಿರುವ ಈ ಪುಸ್ತಕ ಪತ್ರಿಕೋದ್ಯಮ ಮಂದಿಗೆ ದಾರಿ ತೋರುವ ಒಂದು ಪಠ್ಯ ಅಂದರೆ ತಪ್ಪಿಲ್ಲ, ಜರ್ನಲಿಷ್ಟ್ ಅಂತಾದರೆ ಪಿ ಸಾಯಿನಾಥ್ ತರದಲ್ಲಿ ಮುಂದುವರಿಯಬೇಕು", ದಯಾ ಯಾವತ್ತೂ ಹೇಳುತಿದ್ದ ಮಾತಿದು.ತನ್ನ ಮುಂದಿನ ನಡೆಯನ್ನೂ ಆಯ್ದುಕೊಂಡಿದ್ದು ಈ ನಿಟ್ಟಿನಲ್ಲೆ, ಬಹುಶಃ ತನ್ನ ಮಾರ್ಗದರ್ಶಿಯ ಹೆಸರಲ್ಲೆ ಇರುವ ತನ್ನ ಮಾರ್ಗದರ್ಶಿ ಪುಸ್ತಕದಿಂದಾಗಿ ಬಂದ ದುಡ್ಡಲ್ಲೆ ಹುಟ್ಟಿರುವ ಪಿ. ಸಾಯಿನಾಥ್ ಪ್ರಶಸ್ತಿ ತನಗೆ ಮುಂದೊಂದು ದಿನ ಸಿಗಲಿದೆಯೆಂದು ನಿರೀಕ್ಷೆ ಮಾಡಿರಲಾರರು.ಇಂತಿರಬೇಕಾದರೂ ಹುಡುಕಿಕೊಂಡು ಬಂದ ಪ್ರಶಸ್ತಿಯನ್ನ ಪಡೆಯುವ ಗೆಳೆಯನ ಖುಷಿಯಲ್ಲಿ ನಾವೂ ಭಾಗಿಯಾಗಿರಬೇಕಿದ್ದದ್ದೂ ಕರ್ತವ್ಯ ಅನಿಸಿಯೆ ಜುಲೈ 1 ಪತ್ರಿಕೋದ್ಯಮ ದಿನದ ಆ ಸುಂದರ ಕಾರ್ಯಕ್ರಮದಲ್ಲಿ ನಾವೂ ಭಾಗಿಯಾಗಿದ್ದೂ ಹಾಗೂ ದೇವನೂರು ಮಹಾದೇವ್ ಹಾಗೂ ಪಿ ಸಾಯಿನಾಥ್ ಅವರಂತಹ ಲೆಜೆಂಡ್ ಗಳನ್ನು ಕಣ್ತುಂಬಿಕೊಂಡಿದ್ದು.

ಯಾವುದೋ ಒಂದು ಮಾಧ್ಯಮ ಸಂಸ್ಥೆಗೆ ಸೇರಿಕೊಂಡು ದುಡಿದು ಸಂಪಾದನೆ ಮಾಡುವಂತದ್ದು ಅತ್ಯಂತ ಸೇಫ್ ವೇ ಫಾರ್ ಲೀಡಿಂಗ್ ಲೈಫ್ ಅಂತ ತಿಳುಕೊಂಡು ಹೆಜ್ಜೆ ಇಡುತ್ತಿರುವ ಪತ್ರಕರ್ತರ ಬಳಗಾನೆ ದೊಡ್ಡದು. ಹೀಗಿರಬೇಕಾದರೆ ಪ್ರೀ ಲಾನ್ಸ್ ಜರ್ನಲಿಸಂ ಮೂಲಕ ತಾನು ಮಾಡ ಹೊರಟಿರುವ ಕಾರ್ಯಗಳಿಗೆ ಎಲ್ಲೂ ತೊಡಕಾಗದಂತೆ ಹೇಳಬೇಕಾದ ಮಾತು ಕಟ್ಟುಪಾಡುಗಳಿಗೊಳಪಟ್ಟು ಮರೆಯಾಗಬಾರದೆಂಬ ಸ್ಪಷ್ಟತೆಯೊಳಗೆ ಹಣದ ಮೋಹವ ಬದಿಗಿಟ್ಟು ಸಾಮಾಜಿಕ ದೃಷ್ಟಿಕೋನದೊಂದಿಗೆ ಆಕ್ಟಿವಿಸಂ ಜೊತೆ ಜೊತೆಗೆ ಕೆಲಸ ಮಾಡುವ ಪತ್ರಕರ್ತರ ಬಳಗ ಬೆರಳೆಣಿಕೆಯಷ್ಟು.ದಯಾ ಆರಿಸಿಕೊಂಡಿದ್ದು ಪ್ರೀ ಲಾನ್ಸ್ ಜರ್ನಲಿಸಂ ಅನ್ನು. ಪಿ ಸಾಯಿನಾಥ್ ಹೇಳುವಂತೆ ಅವರೂ ಕೂಡ ೧೩ ವರುಷ ಮಾಡಿದ್ದು ಪ್ರೀ ಲಾನ್ಸ್ ಜರ್ನಲಿಸಂನನ್ನೆ.ಬಹುಶಃ ಇವತ್ತು ಕೋರ್ಟ್ ಸರ್ಕಾರಕ್ಕೆ ಸಫಾಯಿ ಕರ್ಮಾಚಾರಿ ವಿಷಯದಲ್ಲಿ ಅಧಿಕಾರಿ ಬಳಗವನ್ನು ಮ್ಯಾನ್ ಹೋಲ್ಗಳ ಒಳಗಿಳಿದು ಚಿತ್ರಿಕರಿಸಿ ಅಂತ ಛೀಮಾರಿ ಹಾಕುತ್ತಿರುವದರ ಹಿಂದೆ ದಯಾ ಮತ್ತು ಅವರ ಬಳಗದವರ ಶ್ರಮ ದೊಡ್ಡದು.ತಾರ್ಕಿಕವಾಗಿ ಅಂತ್ಯ ಕಾಣುವವರೆಗೆ ನಾವೂ ಈ ಬಗ್ಗೆ ಮುಂದುವರಿಯಲೆ ಬೇಕಾಗಿದೆ ರಾಘೂ, ಯಾಕೋ ನನ್ನ ಸುಖ ಸಂತೋಷಗಳಿಗಾಗಿ ಆ ಜನಗಳ ಕಷ್ಟಗಳನ್ನೂ ಅವರುಗಳ ಜೊತೆಗೆ ಇದ್ದೂ ನಮ್ಮವ ಅನಿಸಿಕೊಂಡ ಮೇಲೆ ಬಿಟ್ಟು ಕೊಡಲಾಗುತ್ತಿಲ್ಲ. ಕನಿಷ್ಟ ೩ ರಿಂದ ೪ ವರುಷ ನಾನು ನನ್ನ ಬಳಗ ಈ ನಿಟ್ಟಲ್ಲಿ ಕೆಲಸ ಮಾಡಲೇಬೇಕು ಅನ್ನುವ ದಯಾ ಮಾತುಗಳನ್ನು ಕೇಳಿದಾಗ ನನ್ನಲ್ಲಿ ಪ್ರತಿಕ್ರಿಯೆಗಂತ ಉಳಿಯೋದು ಒಂದು ಮೆಚ್ಚುಗೆಯ ನೋಟವಷ್ಟೆ. ಈ ಪ್ರಶಸ್ತಿ ನನ್ನ ಟೀಂ ಗೆ ಸಂದಿದ ಗೌರವ ಅನ್ನುತ್ತಲೆ ನನ್ನ ಜವಬ್ದಾರಿ ಬದ್ದತೆ ಕಾಯ್ದುಕೊಳ್ಳುವಲ್ಲಿ ಈ ಪ್ರಶಸ್ತಿ ಸಹಕಾರಿಯಾಗಲಿದೆ ಅನ್ನುವ ದಯಾ ಮಾತುಗಳಲ್ಲಿ ನನಗೆ ಕಾಣುವದು ಸಂತಸಕ್ಕಿಂತಲೂ ಮಿಗಿಲಾದದ್ದೂ ಪಿ ಸಾಯಿನಾಥ್ ಅವರೆಡೆಗಿರುವ ಗೌರವದ ಗುರು ಸಮರ್ಪಣಾ ಭಾವ ಹಾಗೂ ಸರಳತೆ.

ಸಂಪಾದಕೀಯ, ವರ್ತಮಾನದಂತ ಬ್ಲಾಗ್ ಮೂಲಕ ಸಣ್ಣದಾಗಿ ತೊಡಗಿಕೊಂಡು ಎಲ್ಲಾ ಮಹತ್ತರ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಕ್ಕೆ ತನ್ನ ಕೆಲಸ ಕಾರ್ಯಗಳನ್ನೂ ತಲುಪಿಸುವಲ್ಲಿ ದಯಾ ಯಶಸ್ವಿಯಾಗಿದ್ದು ನಮಗೆಲ್ಲರೀಗೂ ಗೊತ್ತೆ ಇರುವಂತದ್ದೂ ಅಷ್ಟೇ ಏಕೆ ಪೇಸ್ ಬುಕ್ ಅಂತ ಸಾಮಾಜಿಕ ತಾಣವನ್ನು ಮಾಧ್ಯಮವಾಗಿ ಬಳಸಿಕೊಂಡು CNN-IBN ಅಂತ ರಾಷ್ಟ್ರೀಯಾ ಛಾನಲ್ಗಳಿಗೆ ಈ ಮಲಹೊರುವ ಪದ್ದತಿ ಇಶ್ಯೂ ಅನ್ನು ತೆಗೆದುಕೊಂಡು ಹೋಗಿ ಚರ್ಚೆಯನ್ನು ಹುಟ್ಟು ಹಾಕಿದವರೂ ದಯಾ. ಕೆಂಡಸಂಪಿಗೆ ಎಂಬ ಬ್ಲಾಗಿನಲ್ಲಿ ರಸ್ತೆ ನಕ್ಷತ್ರ ಅನ್ನೋ ಕಾಲಂ ಮೂಲಕ ಹಲವು ಲೈಫುಗಳನ್ನು ಕಟ್ಟಿ ಕೊಟ್ಟ ದಯಾ, ನಮ್ಮನ್ನೆ ನಾಚಿಸುವಂತೆ ಮಾಡಿದ್ದೂ ನಾವೆಂತ ಸಮಾಜದಲ್ಲಿದ್ದೇವೆ ಅನ್ನುವ ಯೋಚನೆಗೆ ತೆರೆದಿಟ್ಟಿದ್ದು ಹಳೆಯ ಮಾತು. ಪ್ರಶಸ್ತಿ ದಿನದ ಸಂತೋಷಕ್ಕೆ ಉಡುಗೋರೆ ಅಂತಲೋ ಏನೋ ಅದೆ "ರಸ್ತೆ ನಕ್ಷತ್ರ" ಪುಸ್ತಕ ರೂಪದಲ್ಲಿ ಪ್ರಕಟಿಸಲು ಸಹೃದಯರೊಬ್ಬರು ಕೇಳಿಕೊಂಡಿದ್ದು ದಯಾ ಸಮ್ಮತಿ ಸೂಚಿಸಿದ್ದು ನಡೆಯಿತು.ಗೆಳೆಯರಾಗಿ ನಾವುಗಳು ಖುಷಿಪಡಲು ಇಷ್ಟಿಷ್ಟೆ ಹಿಡಿಯಾದ ವಿಷಯಗಳೆ ಸಾಕು.ಯಾವನಿಗೊತ್ತು ರಸ್ತೆ ನಕ್ಷತ್ರ ಬದುಕುಗಳ ತೆರೆದಿಡುವ ದಯಾರ ಹಿಂದಿರುವ ಕಳಕಳಿಯು ಇನ್ನೆಷ್ಟು ಬದುಕುಗಳಿಗೆ ಆಸರೆಯಾಗಬಲ್ಲದೋ ಏನೊ?. ಇವೆಲ್ಲವನ್ನೂ ಹೇಳಿದ ಕಾರಣ ಇಷ್ಟೆ, ದಯಾ ಒಬ್ಬ ಪತ್ರಕರ್ತನಾಗಿ ತನ್ನ ಆಶಯಗಳಿಗೆ ಮಾಧ್ಯಮವನ್ನು ಬಳಸಿಕೊಂಡ ರೀತಿ ಅಚ್ಚರಿಪಡಿಸುವಂತದ್ದೂ.ಯಾವುದೇ ಮಾಧ್ಯಮವಾಗಲಿ ಬಳಸಿಕೊಳ್ಳುವಂತೆ ಬಳಸಿಕೊಂಡರೆ ವಿಷಯ ತಲುಪಬೇಕಾದ್ದಲ್ಲಿ ತಲುಪುತ್ತದೆ ಅನ್ನುವದನ್ನು ಮೇಲಿನೆಲ್ಲವುದರಿಂದ ನಾನು ದಯಾರನ್ನ ನೋಡಿ  ತಿಳಿದುಕೊಂಡೆ ಅನ್ನುವದು ಸತ್ಯ

ಮಾಧ್ಯಮ ಚೌಕಟ್ಟಿನೊಳಗೆ ಇದ್ದುಕೊಂಡು ಹಲವು ಉತ್ತಮ ಕೆಲಸ ಮಾಡುವ ಪತ್ರಕರ್ತರೂ ಇಲ್ಲವೆಂದಲ್ಲ.ಆದರೆ ಮಾಧ್ಯಮ ಸಂಸ್ಥೆಗೆ ಈ ಬಗ್ಗೆ ಎಷ್ಟೂ ಕಾಳಾಜಿ ಇರುತ್ತೆ ಅನ್ನುವದೂ, ವರುಷಾನುಗಟ್ಟಲೆ ನ್ಯಾಯಾಲಯ ಸುತ್ತಾಟ ನ್ಯಾಯ ಕೊಡಿಸುವಲ್ಲಿನ ಬದ್ಧತೆಯನ್ನೂ ಈ ಸಂಸ್ಥೆಗಳೂ ಎಷ್ಟರ ಮಟ್ಟಿಗೆ ಹೊಂದಿವೆ ಎಂಬುದರ ಮೇಲೆ ಪತ್ರಕರ್ತರ ಈ ತೆರನಾದ ಕೆಲಸ ನಿರ್ಧಾರಗೊಳ್ಳುತ್ತದೆ. ಈ ತರದ ಸಂಸ್ಥೆಗಳ ಸಂಖ್ಯೆಯು ಹಾಗೂ ಈ ತರನಾದ ಮನೋಭಾವ ಹೊಂದಿರುವ ಪತ್ರಕರ್ತರ ಬಳಗನೂ ವಿರಳವಾಗುತ್ತಿದೆ ಅನ್ನುವದೂ ಸತ್ಯ.ಈ ರೀತಿಯಲ್ಲಿ ಬದಲಾವಣೆಯನ್ನು ನಿರಿಕ್ಷಿಸಿದಾಗ ದಯಾ ಮೂಲಕ, ಗಾಯತ್ರಿ ಅವರ ಮೂಲಕ ಕನ್ನಡದ ಮೊತ್ತ ಮೊದಲ ಪಿ ಸಾಯಿನಾಥ್ ಪ್ರಶಸ್ತಿ ಮೂಲಕ ಕೊಂಚವಾದರೂ ಬದಲಾವಣೆಯತ್ತ ಇವುಗಳು ಸ್ಪೂರ್ತಿಯಾಗಬಲ್ಲುದೇನೊ?ಈ ರೀತಿಯ ಒಂದು ಆಶಾವಾದವನ್ನು ಇಟ್ಟು ಕೊಳ್ಳಬಹುದೇನೊ!!!. ಬಹುಶಃ ಪಿ. ಸಾಯಿನಾಥ್ ಪ್ರಶಸ್ತಿಯಲ್ಲದೆ ಬೇರಾವುದೇ ಮೀಡಿಯಾ ಪ್ರಶಸ್ತಿ ಬಗ್ಗೆ ಮೇಲಿನ ಆಶಾವಾದವನ್ನು ತೋರ್ಪಡಿಸಿದ್ದರೆ ಅಭಾಸವೆನಿಸುತಿತ್ತು. ಆದರೆ ಪಿ. ಸಾಯಿನಾಥ್ ಪತ್ರಿಕೋದ್ಯಮದ ಮಂದಿಯ ದಾರಿದೀಪ.ಆ ಪ್ರಶಸ್ತಿಗೆ ಸಲ್ಲುವ ಗೌರವ ಅಂತದ್ದೂ ಅನ್ನುವದೂ ನಮ್ಮೆಲ್ಲರಿಗೂ ತಿಳಿದ ವಿಚಾರ. ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ಅವರು ಈ ಪ್ರಶಸ್ತಿಯು ಪ್ರತಿ ವರುಷ ಸಿಗುವಂತೆ ಕನ್ನಡಕ್ಕೆ ಅನುವಾದಗೊಂಡಿರುವ "Everybody loves a good drought "(ಬರ ಅಂದ್ರೆ ಎಲ್ಲಾರೀಗೂ ಇಷ್ಟ)ಪ್ರತಿಗೆ ಸಾಯಿನಾಥ್ ಅವರಿಗೆ  ಕೊಡಬೇಕಾಗಿದ್ದ ಗೌರವಧನದ ಮೂಲಕ ಕರ್ನಾಟಕದಲ್ಲಿ ಸ್ಥಾಪಿತಗೊಳ್ಳುತ್ತಿದೆ ಅಂದಿದ್ದು ಕನ್ನಡದ ಪತ್ರಿಕೋದ್ಯಮಕ್ಕೆ ಒಂದು ಟಾನಿಕ್ ಆಗಿ ಒದಗಲಿ. ಬಡವರ ಹಸಿವೂ, ಕಷ್ಟ, ಸಾಮಾಜಿಕ ದೃಷ್ಟಿಕೋನದಡಿಯಲ್ಲಿ ಎಲ್ಲಾ ಪತ್ರಕರ್ತರೂ ತಮ್ಮನ್ನೂ ತಾವೂ ತೊಡಗಿಸಿಕೊಳ್ಳುವಲ್ಲಿ  ಇದು ಸಹಕಾರಿಯಾಗಲೆಂದು ಆಶಿಸೋಣ.


ಚಿತ್ರ ಕೃಪೆ:-ಅವಧಿ
 ಅವಧಿಯಲ್ಲಿ ಪ್ರಕಟವಾದ ಈ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ

2 comments:

  1. ತಡವಾಗಿ ಆದರೂ ಕೊನೆಗೂ ರಾಘಣ್ಣನಿಂದ ದಯಾ ಕುರಿತು ಲೇಖನ ಬಂದಿತು.. ನಿಮ್ಮ ಮತ್ತು ದಯಾ ಗೆಳೆತನ ನೂರ್ಕಾಲ ಹೀಗೆ ಇರಲಿ.. ಶುಭವಾಗಲಿ.

    ReplyDelete