ಭಾವಗೀತೆಗಳು.

ಕುರಿಗಳು ಸಾರ್ ಕುರಿಗಳು.............
ರಚನೆ : ಕೆ.ಎಸ್. ನಿಸಾರ್ ಅಹಮದ್
ಕವನ ಸಂಕಲನ: ನೆನೆದವರ ಮನದಲ್ಲಿ

ಕುರಿಗಳು ಸಾರ್ ಕುರಿಗಳು;
ಸಾಗಿದ್ದೇ
ಗುರಿಗಳು.
ಮಂದೆಯಲಿ ಒಂದಾಗಿ, ಸ್ವಂತತೆಯೆ ಬಂದಾಗಿ
ಇದರ ಬಾಲ ಅದು ಮತ್ತೆ ಅದರ ಬಾಲ ಇದು ಮೂಸಿ
ದನಿ ಕುಗ್ಗಿಸಿ, ತಲೆ ತಗ್ಗಿಸಿ
ಹುಡುಕಿ ಹುಲ್ಲು ಕಡ್ಡಿ ಮೇವು, ಅಂಡಲೆಯುವ ನಾವು ನೀವು -
ಕುರಿಗಳು ಸಾರ್ ಕುರಿಗಳು;
ನಮಗೊ ನೂರು ಗುರಿಗಳು.

ಎಡ ದಿಕ್ಕಿಗೆ ಬಲ ದಿಕ್ಕಿಗೆ, ಒಮ್ಮೆ ದಿಕ್ಕು ಪಾಲಾಗಿ,
ಒಮ್ಮೆ ಅದೂ ಕಳೆದುಕೊಂಡು ತಾಟಸ್ಥ್ಯದಿ ದಿಕ್ಕೆಟ್ಟು
ಹೇಗೆ ಹೇಗೊ ಏಗುತಿರುವ,
ಬರೀ ಕಿರುಚಿ ರೇಗುತಿರುವ,
ನೊಣ ಕೂತರೆ ಬಾಗುತಿರುವ,
ತಿನದಿದ್ದರು ತೇಗುತಿರುವ,
ಹಿಂದೆ ಬಂದರೊದೆಯದ, ಮುಂದೆ ಬಂದರೆ ಹಾಯದ
ಅವರು, ಇವರು ನಾವುಗಳು
ಕುರಿಗಳು ಸಾರ್ ಕುರಿಗಳು.

ಮಂದೆಯಲ್ಲಿ ಎಲ್ಲವೊಂದೆ ಆದಾಗಲೆ ಸ್ವರ್ಗ ಮುಂದೆ
ಅದಕಿಲ್ಲವೆ ನಾವುತ್ತರ?
ಮೆದುಳಿನಲ್ಲಿ ತಗ್ಗೆತ್ತರ,
ಹಿರಿದು, ಕಿರಿದು ಮಾಯಿಸಿ,
ಒಬ್ಬೊಬ್ಬರಿಗಿರುವ ಮೆದುಳ ಸ್ವಾರ್ಥದ ಉಪಯೋಗದಿಂದ
ಇಡಿ ಮಂದೆಗೆ ಹಾಯಿಸಿ,
ಹೊಟ್ಟೆಬಟ್ಟೆಗೊಗ್ಗದಂಥ ಕಲೆಯ ಕರ್ಮಕಿಳಿಯದಂತೆ
ತಲೆಬೆಲೆಯ ಸುಧಾರಿಸಿ,
ಬಿಳಿಕಪ್ಪಿನ ದ್ವಂದ್ವಗಳಿಗೆ ಮಾಡಿಸಿ ಸಮಜಾಯಿಷಿ;
ನಮ್ಮ ಮೆದುಳು ಶುದ್ಧಿಯಾಗಿ, ಬುದ್ಧಿ ನಿರ್ಬುದ್ಧಿಯಾಗಿ,
ಕೆಂಬಣ್ಣವನೊಂದೆ ಪೂಸಿ,
ಅದರ ಬಾಲ ಇದು ಮತ್ತೆ ಇದರ ಬಾಲ ಅದು ಮೂಸಿ
ನಡೆವ ನಮ್ಮೊಳೆಲ್ಲಿ ಬಿರುಕು?

ನಮ್ಮ ಕಾಯ್ವ ಕುರುಬರು:
ಪುಟಗೋಸಿಯ ಮೊನ್ನೆ ತಾನೆ ಕಿತ್ತು ಪಂಚೆಯುಟ್ಟವರು.
ಶಾನುಭೋಗ ಗೀಚಿದ್ದಕ್ಕೆ ಹೆಬ್ಬೆಟ್ಟನು ಒತ್ತುವವರು.
ಜಮಾಬಂದಿಗಮಲ್ದಾರ ಬರಲು, ನಮ್ಮೊಳೊಬ್ಬನನ್ನ
ಮೆಚ್ಚಿ, ಮಸೆದ ಮಚ್ಚಹಿರಿದು ಕಚಕ್ಕೆಂದು ಕೊಚ್ಚಿ ಕತ್ತ,
ಬಿರಿಯಾನಿಯ ಮೆಹರುಬಾನಿ ಮಾಡಿ ಕೈಯ ಜೋಡಿಸುತ್ತ
ಕಿಸೆಗೆ ಹಸಿರುನೋಟು ತುರುಕಿ, ನುಡಿಗೆ ಬೆಣ್ಣೆ ಹಚ್ಚುವವರು.
ಬಿಸಿಲಲ್ಲಿ ನಮ್ಮದೂಡಿ, ಮರದಡಿಯಲಿ ತಾವು ಕೂತು
ಮಾತು, ಮಾತು, ಮಾತು, ಮಾತು:
ಮಾತಿನ ಗೈರತ್ತಿನಲ್ಲೆ ಕರಾಮತ್ತು ನಡೆಸುವವರು.
ನಮ್ಮ ಮೈಯ ತುಪ್ಪಟವ ರವಷ್ಟು ಬಿಡದ ಹಾಗೆ ಸವರಿ
ಕಂಬಳಿಗಳ ನೇಯುವಂಥ ಯೋಜನೆಗಳ ಹಾಕುವವರು.
ಮಾರಮ್ಮನ ಮುಡಿಗೆ ಕೆಂಪು ದಾಸವಾಳ ಆಯುವವರು
ಬೆಟ್ಟಾ ದಾಟಿ ಕಿರುಬ ನುಗ್ಗು, ನಮ್ಮೊಳಿಬ್ಬರನ್ನ ಮುಗಿಸಿ,
ನಾವು 'ಬ್ಯಾ, ಬ್ಯಾ' ಎಂದು ಬಾಯಿ ಬಾಯಿ ಬಡಿದುಕೊಂಡು
ಬೊಬ್ಬೆ ಹಾಕುತಿದ್ದರೂ
ಚಕ್ಕಭಾರ ಆಟದಲ್ಲೆ ಮಗ್ನರು ಇವರೆಲ್ಲರು-
ನಮ್ಮ ಕಾಯ್ವ ಗೊಲ್ಲರು.

ದೊಡ್ಡಿಯಲ್ಲಿ ಕೂಡಿಹಾಕಿ ನಿಲ್ಲಲಿಲ್ಲ, ಕೂರಲಿಲ್ಲ,
ಎದ್ದರೆ ಸರಿದಾಡಲಿಲ್ಲ, ಬಿದ್ದರೆ ಹರಿದಾಡಲಿಲ್ಲ,
ದೀಪದ ದೌಲತ್ತು ಇಲ್ಲ,
ಗಾಳಿಯ ಗಮ್ಮತ್ತು ಇಲ್ಲ.
ಕಿಂಡಿಯಿಂದ ತೆವಳಿಬಂದ ಗಾಳಿಕೂಡ ನಮ್ಮದೇನೆ:
ನಮ್ಮ ಮಂದೆ ಕುರಿಯ ಸುಲಿದು, ಆಚೆ ಅಲ್ಲಿ ಉಪ್ಪುಸವರಿ
ಒಣಗಲಿಟ್ಟ ಹಸಿತೊಗಲಿನ ಬಿಸಿಬಿಸಿ ಹಬೆವಸನೆ
ಇರಿಯುತಿಹುದು ಮೂಗನೆ!
ಕೊಬ್ಬಿರುವೀ ಮಬ್ಬಿನಲ್ಲಿ, ಮೈನಾತದ ಗಬ್ಬಿನಲ್ಲಿ,
ಇದರ ಉಸಿರು ಅದು ಮತ್ತೆ ಅದರ ಉಸಿರು ಇದು ಮೂಸಿ
ಹೇಸಿದರು ನಿಭಾಯಿಸಿ,
ತಾಳ್ಮೆಯನೆ ದಬಾಯಿಸಿ,
ನಮ್ಮನಾವೆ ಅಂದುಕೊಂಡೊ, ಉಗುಳುನುಂಗಿ ನೊಂದುಕೊಡೊ,
ನಂಬಿಕೊಂಡು ಏಗುತಿರುವ ನಾವು, ನೀವು, ಇಡೀ ಹಿಂಡು
ಕುರಿಗಳು ಸಾರ್ ಕುರಿಗಳು.

ತಳವೂರಿದ ಕುರುಬ ಕಟುಕನಾದ; ಅವನ ಮಚ್ಚೊ ಆಹ!
ಏನು ಝಳಪು, ಏನು ಹೊಳಪು, ಏನು ಜಾದು, ಏನು ಮೋಹ!
ಆ ಹೊಳಪಿಗೆ ದಂಗಾಗಿ, ಕಣ್ಣಿಗದೇ ರಂಗಾಗಿ,
ಒಳಗೊಳಗೇ ಜಂಗಾಗಿ,
ಕಣ್ಣುಕುಕ್ಕಿ ಸೊಕ್ಕಿರುವ, ಹೋಗಿಹೋಗಿ ನೆಕ್ಕಿರುವ,
ಕತ್ತನದಕೆ ತಿಕ್ಕಿರುವ
ನಾವು, ನೀವು, ಅವರು, ಇವರು
ಕುರಿಗಳು ಸಾರ್ ಕುರಿಗಳು.

ಮಚ್ಚಿನ ಆ ಮೆಚ್ಚಿನಲ್ಲಿ, ಅದರಾಳಾದ ಕಿಚ್ಚಿನಲ್ಲಿ
ಮನೆಮಾಡಿವೆ ಹುಚ್ಚಿನಲ್ಲಿ
ನಮ್ಮೆಲ್ಲರ ಗುರಿಗಳು!
ಕುರಿಗಳು, ಸಾರ್, ಕುರಿಗಳು...

ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ 
*******************************************************************
ಒಂದು ಮುಂಜಾವಿನಲಿ ..........
ಗಾಯನ: ಬಿ.ಆರ್.ಛಾಯ 
ಸಂಗೀತ: ಸಿ. ಅಶ್ವಥ್ 
ರಚನೆ: ಚನ್ನವೀರ ಕಣವಿ 

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ 
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು || 
ಅದಕೇ ಹಿಮ್ಮೇಳವನೆ ಸೂಸಿಪಹ ಸುಳಿಗಾಳಿ 
ತೆಂಗು ಗರಿಗಳ ನಡುವೆ ನುಸುಳುತಿತ್ತು ||ಪ||ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ || 
ಇಳೆವೆಣ್ಣು ಮೈದೊಳೆದು ಮಕರಂದದರಿಶಣದಿ ಹೂ ಮುಡಿದು ಮದುಮಗಳ ಹೋಲುತಿತ್ತು ||೨|| 
ಮೂಡಣದಿ ನೇಸರನ ನಗೆ ಮೊಗದಾ ಶ್ರೀಕಾಂತಿ 
ಬಿಳಿಯಾ ಮೋಡದ ಹಿಂದೆ ಹೊಳೆಯುತಿತ್ತು|| 
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ || 
ಹುಲ್ಲೆಸಳು ಹೂಪಕಳೆ ಮುತ್ತು ಹನಿಗಳ ಮಿಂಚು ||೨|| 
ಸೊಡರಿನಲಿ ಆರತಿಯ ಬೆಳಗುತಿತ್ತು ಕೊರಲುಕ್ಕಿ ಹಾಡುತಿಹ ಚಿಕ್ಕಪಕ್ಕಿಯ ಬಳಗ ||೨|| 
ಶುಭಮಸ್ತು ಶುಭಮಸ್ತು ಎನ್ನುತಿತ್ತು|| ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ || 
ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ ದುಂಬಿಗಳ ಓಂಕಾರ ಹೊಮ್ಮುತಿತ್ತು ||೨|| 
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ ಚಿಟ್ಟೆ ರಿಂಗಣ ಗುಣಿತ ಹಾಕುತಿತ್ತು|| ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ || 
ಉಷೆಯ ನುಙ್ಗದಪಿನಲಿ ಹರ್ಷಬಾಷ್ಪಗಳಂತೆ ಮರದ ಹನಿ ತಟಪಟನೆ ಉದುರುತಿತ್ತು ||೨|| 
ಸೃಷ್ಠಿಲೀಲೆಯೊಳಿಂತು ತಲ್ಲೀನವಾದ ಮನ ಮುಂಬಾಳ ಸವಿಗನಸ ನೆನೆಯುತಿತ್ತು|| 
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ಆ.. ಆ….. ಆ… ಆ…..ಆ.. ಆ….. ಆ…
ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ.
********************************************************************************
ಹಾಡು ಹಳೆಯದಾದರೇನು ಭಾವ ನವನವೀನ.....................
ಚಿತ್ರ :- ಮಾನಸ ಸರೋವರ.(1983) 
ಸಾಹಿತ್ಯ :ಡಾ| ಜಿ.ಎಸ್.ಶಿವರುದ್ರಪ್ಪನವರು 
ಸಂಗೀತ :ವಿಜಯಭಾಸ್ಕರ್ 
ಗಾಯನ :ವಾಣಿ ಜಯರಾಂ
 ಹಾಡು...ಹಾಡು ...ಹಾಡು ಹಳೆಯದಾದರೇನು ಭಾವ ನವನವೀನ.. 
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ.....{ಪಲ್ಲವಿ}
 ಹಳೆಯ ಹಾಡು ಹಾಡು ಮತ್ತೆ ಅದನೆ ಕೇಳಿ ತಣಿಯುವೆ
 ಹಳೆಯ ಹಾಡಿನಿಂದ ಹೊಸತು ಜೀವನಾ ಕಟ್ಟುವೆ.....{ಪಲ್ಲವಿ}
 ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು ಹೃದಯ ತೆರೆದಿದೆ
 ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ......{ಪಲ್ಲವಿ}
ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ.
*********************************************************************************
ಮುಚ್ಚು ಮರೆ ಇಲ್ಲದೆಯೇ...................

ರಚನೆ:-ಕುವೆಂಪು. 
ಸಂಗೀತ: ಮೈಸೂರು ಅನಂತಸ್ವಾಮಿ 

ಮುಚ್ಚು ಮರೆ ಇಲ್ಲದೆಯೇ
ನಿನ್ನ ಮುಂದೆಲ್ಲವನು ಬಿಚ್ಚಿಡುವೆ ಓ ಗುರುವೆ ಅಂತರಾತ್ಮ
ಪಾಪವಿದೆ ಪುಣ್ಯವಿದೆ , ನರಕವಿದೆ ನಾಕವಿದೆ...
ಸ್ವೀಕರಿಸು ಓ ಗುರುವೆ ಅಂತರಾತ್ಮ...........
ರವಿಗೆ ಕಾಂತಿಯನೀವ ನಿನ್ನ ಕಣ್ವೀಕ್ಷಿಸಲು
ಪಾಪತಾನುಳಿಯುವುದೇ ಪಾಪವಾಗಿ ..........
ಗಂಗೆ ತಾನುದ್ಭವಿಪ ಈ ಪರಿಯ ಸೋಂಕಿಂಗೆ
ನರಕ ತಾನುಳಿಯುವುದೇ ನರಕವಾಗಿ...........
ಶಾಂತರೀತಿಯ ನಿಮ್ಮಿ ಕದಡಿರುವುದೆನ್ನಾತ್ಮ
ಶಾಂತರೀತಿಯು ಅದೆಂತೊ ಓ ಅನಂತ.............
ನನ್ನ ನೀತಿಯ ಕುರುಡಿನಿಂದೆನ್ನ ರಕ್ಷಿಸೈ ನಿನ್ನ ಪ್ರೀತಿಯ ಬೆಳಕಿನ ಆನಂದಕೊಯ್.........
********************************************************************************
ಎದೆ ತುಂಬಿ ಹಾಡಿದೆನು ಅಂದು ನಾನು...............


ರಚನೆ : ಜಿ.ಎಸ್.ಶಿವರುದ್ರಪ್ಪ
ಸಂಗೀತ:- ಮೈಸೂರ್ ಅನಂತ ಸ್ವಾಮಿ 
ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು|೨| ಎದೆ ತುಂಬಿ ಹಾಡಿದೆನು ಅಂದು ನಾನು 
ಇಂದು ನಾ ಹಾಡಿದರೂ ಅಂದಿನಂತೆಯೆ ಕುಳಿತು 
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ |೨| 
ಹಾಡು ಹಕ್ಕಿಗೆ ಬೇಕೆ ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ? ಎದೆ ತುಂಬಿ ಹಾಡಿದೆನು ಅಂದು ನಾನು 
ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ 
ಹಾಡುವುದು ಅನಿವಾರ್ಯ ಕರ್ಮ ನನಗೆ |೨| 
ಕೇಳುವವರಿಹರೆಂದು ಕೇಳುವವರಿಹರೆಂದು ನಾ ಬಲ್ಲೆ ಅದರಿಂದ 
ಹಾಡುವೆನು ಮೈದುಂಬಿ ಎಂದಿನಂತೆ
 ಯಾರು ಕಿವಿ ಮುಚ್ಚಿದರೂ ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ 
ಎದೆ ತುಂಬಿ ಹಾಡಿದೆನು ಅಂದು ನಾನು ಮನವಿಟ್ಟು ಕೇಳಿದಿರಿ ಅಲ್ಲಿ ನೀವು  
ಎದೆ ತುಂಬಿ , ಮನ ತುಂಬಿ, ತನು ತುಂಬಿ ಹಾಡಿದೆನು ಅಂದು ನಾನು... ನಾನು....
*********************************************************************************
ನೇಗಿಲ ಯೋಗಿ..............
ರಚನೆ :- ಕುವೆಂಪು.
ಗಾಯಕ :- ಸಿ ಅಶ್ವಥ್
ಸಂಗೀತ :- ಉಪೇಂದ್ರ ಕುಮಾರ್.


ನೇಗಿಲ ಹಿಡಿದ ಹೊಲವನು ಹಾರುತ ಉಳುವ ಯೋಗಿಯ ನೋಡಲ್ಲಿ
ಫಲವನು ಬಯಸದ ಸೇವೆಯ ಪೂಜೆಯು ಕರ್ಮವೇ ಇಹಪರ ಸಾದನವೋ
ಕಷ್ಟದೊಳು ಅನ್ನವ ದುಡಿವವ ತ್ಯಾಗಿ ಸುಸ್ತಿನಿ ಅವನೋಳಗವನೆ ಬೋಗಿ
ಉಳುವ ಯೋಗಿಯ ನೋಡಲ್ಲಿ ....... ಉಳುವ ಯೋಗಿಯ ನೋಡಲ್ಲಿ .
ದ್ರೋವಪದಲೇನೆ ನಡೆಯುತಲಿರಲಿ ತನ್ನಿ ಕಾರ್ಯವ ಬಿಡನೆಂದು
ರಾಜ್ಯ ಗಂಜಿಸಲಿ ರಾಜ್ಯಗಳಲಿಯಲಿ ಹಾರಲಿ ಗದ್ದುಗೆ ಮುಕುಟಗಳು
ಮುತ್ತಿಗೆ ಹಾಕಲಿ ಸೈನಿಕರೆಲ್ಲ ಬಿತ್ತು ಉಳುವದವ ಬಿಡುವದೆ ಇಲ್ಲ..... ಬಿತ್ತು ಉಳುವದವ ಬಿಡುವದೆ ಇಲ್ಲ.
ಉಳುವ ಯೋಗಿಯ ನೋಡಲ್ಲಿ ....... ಉಳುವ ಯೋಗಿಯ ನೋಡಲ್ಲಿ .
ಯಾರು ಅರಿಯದ ನೇಗಿಲ ಯೋಗಿಯೇ ಲೋಕಕೆ ಅನ್ನವ ನೀಡುವನು (೨)
ಹೆಸರನು ಬಯಸದೆ ಅತಿ ಸುತ ನೆಲಸದೆ ದುಡಿವನು ಗೌರವಕಾಶಿಸದೆ
ನೇಗಿಲ ಕುಲದೊಳು ಅಡಗಿದೆ ಕರ್ಮಾ.....
ನೇಗಿಲ ಕುಲದೊಳು ಅಡಗಿದೆ ಕರ್ಮ ನೇಗಿಲ ಮೇಲೆಯೇ ನಿಂತಿದೆ ಧರ್ಮ.......ನೇಗಿಲ ಮೇಲೆಯೇ ನಿಂತಿದೆ ಧರ್ಮ.
ಉಳುವ ಯೋಗಿಯ ನೋಡಲ್ಲಿ ....... ಉಳುವ ಯೋಗಿಯ ನೋಡಲ್ಲಿ .
*********************************************************************************

ಕನ್ನಡವೇ ಸತ್ಯ ..............
ರಚನೆ: ಕುವೆಂಪು 
ಭಾವಗೀತೆ ಸಂಕಲನ: ಕನ್ನಡವೇ ಸತ್ಯ 
ಗಾಯನ: ಡಾ.ರಾಜ್‍ಕುಮಾರ್ 
ಸಂಗೀತ: ಸಿ.ಅಶ್ವಥ್ 
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು 
ಕನ್ನಡವೇ ಸತ್ಯ ಕನ್ನಡವೇ ನಿತ್ಯ 
ಕನ್ನಡ ಗೋವಿನ ಓ ಮುದ್ದಿನ ಕರು 
ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು ಕನ್ನಡವೇ ಸತ್ಯ ಕನ್ನಡವೇ ನಿತ್ಯ 
ನೀ ಮುಟ್ಟುವ ನೆಲ ಅದೆ ಕರ್ನಾಟಕ 
ನೀನೇರುವ ಮಲೆ ಸಹ್ಯಾದ್ರಿ 
ನೀ ಮುಟ್ಟುವ ಮರ ಶ್ರೀಗಂಧದ ಮರ 
ನೀ ಕುಡಿಯುವ ನೀರ್ ಕಾವೇರಿ 
ಪಂಪನೋದುವ ನಿನ್ನಾ ನಾಲಗೆ ಕನ್ನಡವೇ ಸತ್ಯ 
ಕುಮಾರವ್ಯಾಸನನಾಲಿಪ ಕಿವಿಯದು ಕನ್ನಡವೇ ನಿತ್ಯ 
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು 
ಹರಿಹರ ರಾಘವರಿಗೆ ಎರಗುವ ಮನ 
ಹಾಳಾಗಿಹ ಹಂಪೆಗೆ ಕೊರಗುವ ಮನ 
ಪಿಂಪಿನ ಬನವಾಸಿಗೆ ಕರಗುವ ಮನ 
ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ 
ಜೊಗದ ಜಲಪಾತದಿ ಧುಮುಕುವ ಮನ 
ಮಲೆನಾಡಿಗೆ ಒಂಪುಳಿಹೋಗುವ ಮನ ಕನ್ನಡವೇ ಸತ್ಯ  ಕನ್ನಡವೇ ನಿತ್ಯ 
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು 
ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ 
ಮಲ್ಲಿಗೆ ಸಂಪಿಗೆ ಕೇದಗೆ ಕಂಪಿಗೆ 
ಮಾವಿನ ಹೊಂಗೆಯ ತಳಿರಿನ ತಂಪಿಗೆ 
ರಸರೋಮಾಂಚನಗೊಳುವಾತನಾ ಮನ 
ಎಲ್ಲಿದ್ದರೆ ಏನ್ ಎಂತಿದ್ದರೆ ಏನ್ ಎಂದೆಂದಿಗು ತಾನ್ ಕನ್ನಡವೇ ಸತ್ಯ ಕನ್ನಡವೇ ನಿತ್ಯ 
ಅನ್ಯವೆನಲದೇ ಮಿತ್ಯ ಕನ್ನಡವೇ ಸತ್ಯ ಕನ್ನಡವೇ ನಿತ್ಯ 
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಕನ್ನಡವೇ ಸತ್ಯ ಕನ್ನಡವೇ ನಿತ್ಯ
************************************************************************************************************
ಆವು ಈವಿನ ನಾವು ನೀವಿಗೆ.................
ರಚನೆ:- ದ ರಾ ಬೇಂದ್ರೆ (ಅಂಬಿಕಾತನಯದತ್ತ)
ಆವು ಈವಿನ ನಾವು ನೀವಿಗೆ
ಆನು ತಾನಾದ ತನನನ
ನಾವು ನೀನಿನ ಈನೀನಾನಿಗೆ
ಬೇನೆ ಏನೋ? ಜಾಣೆ ನಾ
ಚಾರು ತಂತ್ರಿಯ ಚರಣ ಚರಣದ
ಘನಘನಿತ ಚತುರಸ್ವನಾ
ಹತವೊ ಹಿತವೊ ಆ ಅನಾಹತಾ
ಮಿತಿ ಮಿತಿಗೆ ಇತಿ ನನನನಾ
ಬೆನ್ನಿನಾನಿಕೆ ಜನನ ಜಾನಿಕೆ
ಮನನವೇ ಸಹಿತಸ್ತನಾ.


ಗೋವಿನ ಕೊಡುಗೆಯ ಹಡಗದ ಹುಡುಗಿ
ಬೆಡಗಿಲೆ ಬಂದಳು ನಡುನಡುಗಿ;
ಸಲಿಗೆಯ ಸುಲಿಗೆಯು ಬಯಕೆಯ ಒಲುಮೆ
ಬಯಲಿನ ನೆಯ್ಗೆಯ ಸಿರಿಯುಡುಗಿ;
ನಾಡಿಯ ನಡಿಗೆಯ ನಲುವಿನ ನಾಲಿಗೆ
ನೆನೆದಿರೆ ಸೋಲುವ ಸೊಲ್ಲಿನಲಿ;
ಮುಟ್ಟದ ಮಾಟದ ಹುಟ್ಟದ ಹುಟ್ಟಿಗೆ
ಜೇನಿನ ಥಳಿಮಳಿ ಸನಿಹ ಹನಿ;
ಬೆಚ್ಚಿದ ವೆಚ್ಚವು ಬಸುರಿನ ಮೊಳಕೆ
ಬಚ್ಚಿದ್ದಾವುದೊ ನಾ ತಿಳಿಯೆ
ಭೂತದ ಭಾವ ಉದ್ಬವ ಜಾವ
ಮೊಲೆ ಊಡಿಸುವಳು ಪ್ರತಿಭೆ ನವ.


ಚಿತ್ತೀಮಳಿ, ತತ್ತಿ ಹಾಕತ್ತಿತ್ತು ಸ್ವಾತಿಮುತ್ತೀನೊಳಗ
ಸತ್ತಿಯೋ ಮಗನ ಅಂತ ಕೂಗಿದರು
ಸಾವೀ ಮಗಳು, ಭಾವಿ ಮಗಳು ಕೂಡಿ
ಈ ಜಗ ಅಪ್ಪಾ ಅಮ್ಮನ ಮಗ
ಅಮ್ಮನೊಳಗ ಅಪ್ಪನ ಮೊಗ

ಅಪ್ಪನ ಕತ್ತಿಗೆ ಅಮ್ಮನ ನೊಗ
ನಾ ಅವರ ಕಂದ ಶ್ರೀ ಗುರುದತ್ತ ಅಂದ


‘ನಾನು’ ‘ನೀನು’ ‘ಆನು’ ‘ತಾನು’
ನಾಕು ನಾಕೇ ತಂತಿ.
ಸೊಲ್ಲಿಸಿದರು ನಿಲ್ಲಿಸಿದರು
ಓಂ ದಂತಿ!
ಗಣನಾಯಕ ಮೈ ಮಾಯಕ
ಸೈ ಸಾಯಕ ಮಾಡಿ
ಗುರಿಯ ತುಂಬಿ ಕುರಿಯ ಕಣ್ಣು
ಧಾತು ಮಾತು ಕೂಡಿ.
************************************************************************************************************
ನೀನಿಲ್ಲದೇ ನನಗೇನಿದೇ..............
ರಚನೆ:-ಎಂ ಯನ್ ವ್ಯಾಸರಾವ್ 

ನೀನಿಲ್ಲದೇ ನನಗೇನಿದೇ
ಮನಸ್ಸೆಲ್ಲಾ ನಿನ್ನಲ್ಲಿ ನೆಲೆಯಾಗಿದೆ
ಕನಸ್ಸೆಲ್ಲಾ ಕಣ್ಣಲ್ಲೇ ಸೆರೆಯಾಗಿದೇ


ನಿನಗಾಗಿ ಕಾದು ಕಾದು ಪರಿತಪಿಸಿ ನೊಂದೇ ನಾನು
ಕಹಿಯಾದ ವಿರಹದ ನೋವೂ ಹಗಲಿರುಳು ತಂದೇ ನೀನು
ಎದೆಯಾಸೆ ಏನೋ ಎಂದೂ ನೀ ಕಾಣದಾದೇ
ನಿಶೆಯೊಂದೆ ನನ್ನಲ್ಲೀ ನೀ ತುಂಬಿದೇ
ಬೆಳಕೊಂದೆ ನಿನ್ನಿಂದಾ ನಾ ಬಯಸಿದೇ


ನೀನಿಲ್ಲದೇ ನನಗೇನಿದೇ...


ಒಲವೆಂಬ ಕಿರಣಾ ಬೀರೀ ಒಳಗಿರುವ ಬಣ್ಣಾ ತೆರೆಸೀ
ಒಣಗಿರುವ ಎದೆಬಿಲದಲ್ಲಿ ಭರವಸೆಯ ಜೀವ ಹರಿಸಿ
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು
ಹೊಸ ಜೀವ ನಿನ್ನಿಂದಾ ನಾ ತಾಳುವೇ
ಹೊಸ ಲೋಕ ನಿನ್ನಿಂದಾ ನಾ ಕಾಣುವೇ


ನೀನಿಲ್ಲದೇ ನನಗೇನಿದೇ ...
************************************************************************************************************
ಜಾಲಿ ಬಾರಿನಲ್ಲಿ............

ಬಿ.ಆರ್.ಲಕ್ಷಣ್ ರಾವ್ ಅವರ ಕವನ,

ಜಾಲಿ ಬಾರಿನಲ್ಲಿ
ಕೂತು ಪೋಲಿ ಗೆಳೆಯರು
ಗೋಪಿಯನ್ನು ಪಾಪ
ಗೇಲಿ ಮಾಡುತ್ತಿದ್ದರು
ಗುಂಡು ಹಾಕೊ ಗೋಪಿ
...
ಚಿಕನ್ ಬಿರಿಯಾನಿ
ಏಕ್ ಲೋಟ ತಂಡಾಪಾನಿ
....
ಚೊಂಬು ಕೆನ್ನೆ ಮೇಲೆ
ಚುಂಬಿಸಿದಳು ಬಾಲೆ :)
ಬುರ ಬುರ ಊದಿ ಬೋಂಡವಾದನು
ಮಾದ್ರಿಯಪ್ಪಿದಾಗ ಆದ ಪಾಂಡುವಾದನು...

************************************************************************************************************
ಅಮ್ಮಾ.. ನಿನ್ನ ಎದೆಯಾಳದಲ್ಲಿ...........
ರಚನೆ:-ಬಿ.ಆರ್. ಲಕ್ಷ್ಮಣ ರಾವ್
ಅಮ್ಮಾ.. ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು..
ಅಮ್ಮಾ..ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು..


ಕಡಿಯಲೊಲ್ಲೆ ನೀ ಕರುಳ ಬಳ್ಳಿ
ಒಲವೂಡುತಿರುವ ತಾಯೆ
ಬಿಡದ ಭುವಿಯ ಮಾಯೆ..
ಅಮ್ಮಾ.. ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು..ಪ


ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆಅಡಗಲಿ ಎಷ್ಟು ದಿನ..? ದೂಡು ಹೊರಗೆ ನನ್ನ
ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆಅಡಗಲಿ ಎಷ್ಟು ದಿನ..? ದೂಡು ಹೊರಗೆ ನನ್ನ
ಓಟ ಕಲಿವೆ ಒಳ-ನೋಟ ಕಲಿವೆ
ಓಟ ಕಲಿವೆ ಒಳ-ನೋಟ ಕಲಿವೆ
ನಾ ಕಲಿವೆ ಉರ್ಧಗಮನ
ಓ ಅಗಾಧ ಗಗನ..ಓ ಅಗಾಧ ಗಗನ.. ೧


ಅಮ್ಮಾ ನಿನ್ನ..


ಮೇಲೆ ಹಾರಿ ನಿನ್ನ ಸೆಳೆತ ಮೀರಿ
ನಿರ್ಭಾರ ಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಹೋ ಮೇಲೆ ಹಾರಿ ನಿನ್ನ ಸೆಳೆತ ಮೀರಿ
ನಿರ್ಭಾರ ಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು ಬಂದೇ ಬರುವೆನು
ಇಂಧನ ತೀರಲು ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ
ಮೂರ್ತ ಪ್ರೇಮದೆಡೆಗೆ..
ಮೂರ್ತ ಪ್ರೇಮದೆಡೆಗೆ..೨


ಅಮ್ಮಾ.. ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು..
ಅಮ್ಮಾ..ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು..


ಕಡಿಯಲೊಲ್ಲೆ ನೀ ಕರುಳ ಬಳ್ಳಿ
ಒಲವೂಡುತಿರುವ ತಾಯೆ
ಬಿಡದ ಭುವಿಯ ಮಾಯೆ..
ಅಮ್ಮಾ..ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು..
ಮಿಡುಕಾಡುತಿರುವೆ ನಾನು..
ಮಿಡುಕಾಡುತಿರುವೆ ನಾನು..
************************************************************************************************************

ಯೆಂಡ ಯೆಡ್ತಿ ಕನ್ನಡ್ ಪದಗೊಳ್...........
ರಚನೆ :- ಜೆ ಪಿ ರಾಜರತ್ನಂ 
ಯೆಂಡ ಯೆಡ್ತಿ ಕನ್ನಡ್ ಪದಗೊಳ್
ಅಂದ್ರೆ ರತ್ನಂಗ್ ಪ್ರಾಣ!
ಬುಂಡೇನ್ ಎತ್ತಿ ಕುಡದ್ಬುಟ್ಟಾಂಡೆದ್ರೆ-
ತಕ್ಕೊ! ಪದಗೊಳ್ ಬಾಣ!

ಬಗವಂತ್ ಏನ್ರ ಬೂಮೀಗ್ ಇಳದು
ನನ್ ತಾಕ್ ಬಂದಾಂತ್ ಅನ್ನು;
ಪರ್ ಗಿರೀಕ್ಸೆ ಮಾಡ್ತಾನ್ ಔನು-
ಬಕ್ತನ್ ಮೇಲ್ ಔನ್ ಕಣ್ಣು!

'ಯೆಂಡ ಕುಡಿಯಾದ್ ಬುಟ್ ಬುಡ್ ರತ್ನ!'
ಅಂತ್ ಔನ್ ಏನಾರ್ ಅಂದ್ರೆ-
ಮೂಗ್ ಮೂರ್ ಚೂರಾಗ್ ಮುರಸ್ಕೋಂತೀನಿ
ದೇವರ್ ಮಾತ್ಗ್ ಅಡ್ಬಂದ್ರೆ!

'ಯೆಂಡ ಬುಟ್ಟೆ. ಯೆಡ್ತೀನ್ ಬುಟ್ ಬುಡ್!'
ಅಂತ್ ಔನ್ ಏನಾರ್ ಅಂದ್ರೆ-
ಕಳದೋಯ್ತ್ ಅಂತ ಕುಣದಾಡ್ತೀನಿ
ದೊಡ್ಡ್ ಒಂದ್ ಕಾಟ! ತೊಂದ್ರೆ!

'ಕನ್ನಡ ಪದಗೊಳ್ ಆಡೋದ್ನೆಲ್ಲ
ನಿಲ್ಲೀಸ್ ಬುಡಬೇಕ್ ರತ್ನ!'
ಅಂತ್ ಔನ್ ಅಂದ್ರೆ - ದೇವ್ರ್ ಆದ್ರ್ ಏನು!
ಮಾಡ್ತೀನ್ ಔನ್ಗೆ ಖತ್ನ!

ಆಗ್ನೆ ಮಾಡೋ ಐಗೋಳ್ ಎಲ್ಲಾ
ದೇವ್ರೆ ಆಗ್ಲಿ - ಎಲ್ಲ!
ಕನ್ನಡ್ ಸುದ್ದೀಗ್ ಏನ್ರ ಬಂದ್ರೆ
ಮಾನಾ ಉಳಸಾಕಿಲ್ಲ!

ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ
ಬಾಯ್ ಒಲಿಸಾಕಿದ್ರೂನೆ-
ಮೂಗ್ನಲ್ ಕನ್ನಡ್ ಪದವಾಡ್ತೀನಿ!
ನನ್ ಮನಸನ್ನ್ ನೀ ಕಾಣೆ!

ಯೆಂಡ ಓಗ್ಲಿ! ಯೆಡ್ತಿ ಓಗ್ಲಿ!
ಎಲ್ಲಾ ಕೊಚ್ಕೊಂಡ್ ಓಗ್ಲಿ!
ಪರ್ಪಂಚ್ ಇರೋ ತನಕ ಮುಂದೆ
ಕನ್ನಡ್ ಪದಗೊಳ್ ನುಗ್ಲಿ!
ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ.
*****************************************************************************************
ತನುವು ನಿನ್ನದು ಮನವು ನಿನ್ನದು
ರಚನೆ:-ಕುವೆಂಪು
ರಾಗ ಸಂಯೊಜಿಸಿ ಹಾಡಿದವರು:- ಮೈಸೂರು ಅನಂತಸ್ವಾಮಿ
ತನುವು ನಿನ್ನದು ಮನವು ನಿನ್ನದು
ಎನ್ನ ಜೀವನ ಧನವು ನಿನ್ನದು |
ನಾನು ನಿನ್ನವನೆಂಬ ಹೆಮ್ಮೆಯ
ಋಣವು ಮಾತ್ರವೇ ನನ್ನದು ||

ನೀನು ಹೊಳೆದರೆ ನಾನು ಹೊಳೆವೆನು
ನೀನು ಬೆಳೆದರೆ ನಾನು ಬೆಳೆವೆನು |
ನನ್ನ ಹರಣದ ಹರಣ ನೀನು
ನನ್ನ ಮರಣದ ಮರಣವು ||

ನನ್ನ ಮನದಲಿ ನೀನೆ ಯುಕ್ತಿ
ನನ್ನ ಹೃದಯದಿ ನೀನೆ ಭಕ್ತಿ |
ನೀನೆ ಮಾಯಾ ಮೋಹ ಶಕ್ತಿಯು
ನನ್ನ ಜೀವನ ಮುಕ್ತಿಯು ||

ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ
****************************************************************************************************
ಮೌನ ತಬ್ಬಿತು
ರಚನೆ:-ಗೋಪಾಲ ಕೃಷ್ಣ ಅಡಿಗ
ಸಂಗೀತ ರಾಗರಚನೆ:- ಸಿ. ಅಶ್ವಥ್
ಮೌನ ತಬ್ಬಿತು ನೆಲವ; ಜುಮ್ಮೆನೆ ಪುಳಕಗೊಂಡಿತು ಧಾರಿಣಿ
ನೋಡಿ ನಾಚಿತು ಬಾನು; ಸೇರಿತು ಕೆಂಪು ಸಂಜೆಯ ಕದಪಲಿ
ಹಕ್ಕಿಗೊರಲಿನ ಸುರತಗಾನಕೆ ಬಿಗಿಯು ನಸುವೆ ಸಡಿಲಿತು
ಬೆಚ್ಚಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು||

ಇರುಳ ಸೆರಗಿನ ನೆಳಲು ಚಾಚಿತು, ಬಾನು ತೆರೆಯಿತು ಕಣ್ಣನು;
ನೆಲವು ತಣಿಯಿತು, ಬೆವರು ಹನಿಯಿತು; ಭಾಷ್ಪ ನೆನೆಸಿತು ಹುಲ್ಲನು
ಮೌನ ಉರುಳಿತು, ಹೊರಳಿತೆದ್ದಿತು; ಗಾಳಿ ಭೋರನೆ ಬೀಸಿತು,
ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು||
ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ
***************************************************************************************************
ನಿಂಗಿ ನಿಂಗಿ
ಹೂವು ಹಣ್ಣು -೧೯೯೬
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯಕ: ಸಿ. ಅಶ್ವಥ್ ಮತ್ತು ಸಂಗಡಿಗರು


ಹೊಯ್ಯಾರೆ ಹೊಯ್ಯ ಹೊಯ್ಯಾರೆ ಹೊಯ್ಯ
ಹೊಯ್ಯಾರೆ ಹೊಯ್ಯಾರೆ ಹೊಯ್

ನಿಂಗಿ ನಿಂಗಿ ನಿಂಗಿ ನಿಂಗಿ
ನಿದ್ದಿ ಕದ್ದೀಯಲ್ಲೆ ನಿಂಗಿ
ನಿಂಗಿ ನಿಂಗಿ ನಿಂಗಿ ನಿಂಗಿ
ಆಸಿ ಎದ್ದೀತಲ್ಲೆ ನಿಂಗಿ
ಚಂದಾನ ಚಂದ್ರ – ಹೊಯ್ಯಾರೆ ಹೊಯ್ಯ
ಭೂಮಿಗ ಲಾಂದ್ರ – ಹೊಯ್ಯಾರೆ ಹೊಯ್ಯ
ಆಗ್ಯಾನ ನೋಡಲ್ಲಿ |

ವಾರಿ ನೋಟ ಬೀರುವಾಕಿ
ನಾಚಿಕೊಂಡು ನಿಂತಿ ಯಾಕ ?
ಬಾಳಿ ದಿಂಡ ಹೋಲುವಾಕಿ ಬಾಗಿಲಾಗ ಇರಬೇಕ ?
ಯಾಕ ಹಿಂಗ ಕಾಡುತಿ?
ನೋಯುಹಂಗೆ ಮಾಡುತಿ?
ಬಿಲ್ಲಿನಂಗ ತಾಗುತಿ
ಹೆಣ್ಣ ಬಾಣ ಹೂಡುತಿ
ಲಾ ಲ ಲ ಲಾಲ ಲಲ್ಲಲಲ್ಲ……. ಲಾಲ

ನಿದ್ದಿಯೆಂಬುದು ಒಂದು ದೇವತಿ
ಪ್ರೇಮಿಗಳಿಗಾಕಿ ಸವತಿ
ಏನ ಗರತಿ ನಿನ್ನ ಸವತಿ
ಬಂದರೀಗ ಏನ ಮಾಡುತಿ?
ಯಾಕ ತಡ ಮಾಡುತಿ?
ವ್ಯಾಳಿ ಮುಖ ನೋಡುತಿ?
ಚಂದ್ರಮುಖಿ ಹೋಲುತಿ
ಯಾವ ಸುಖ ಬೇಡುತಿ
ಲಾ ಲ ಲಾಲ ಲಲ್ಲಲಲ್ಲ……. ಲಾ

*********************************************************************************************************
ಒಂದಿರುಳು ಕನಸಿನಲಿ
ರಚನೆ: ಕೆ. ಎಸ್. ನರಸಿಂಹಸ್ವಾಮಿ
ಕವನ ಸಂಕಲನ: ಮೈಸೂರು ಮಲ್ಲಿಗೆ
ಸಂಗೀತ: ಸಿ. ಅಶ್ವಥ್


ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು
ಚಂದ ನಿನಗಾವುದೆಂದು
ನಮ್ಮುರು ಹೊನ್ನೂರು ನಿಮ್ಮೂರು ನವಿಲೂರು
ಚಂದ ನಿನಗಾವುದೆಂದು

ನಮ್ಮೂರು ಚಂದವೊ
ನಿಮ್ಮೂರು ಚಂದವೊ
ಎಂದೆನ್ನ ಕೇಳಲೇಕೆ
ನಮ್ಮೂರ ಮಂಚದಲಿ
ನಿಮ್ಮೂರ ಕನಸಿದನು
ವಿಸ್ತರಿಸಿ ಹೇಳಬೇಕೆ

ನಮ್ಮೂರು ಚೆಂದವೊ
ನಿಮ್ಮೂರು ಚಂದವೊ
ಎಂದೆನ್ನ ಕೇಳಲೇಕೆ
ಎನ್ನರಸ ಸುಮ್ಮನಿರಿ
ಎಂದಳಾಕೆ |ಪಲ್ಲವಿ|

ತವರೂರ ದಾರಿಯಲಿ ತೆಂಗುಗಳು ತಲೆದೂಗಿ
ಬಾಳೆಗಳು ತೋಳ ಬೀಸಿ
ಮಲ್ಲಿಗೆಯ ಮೊಗ್ಗುಗಳು ಮುಳ್ಳ ಬೇಲಿಯ ಬರಿಸಿ
ಬಳಕುತಿವೆ ಕಂಪ ಸೂಸಿ

ನಗುನಗುತ ನಮ್ಮೂರ ಹೆಣ್ಣುಗಳು ಬರುತಿರಲು
ನಿಮ್ಮೂರ ಸಂತೆಗಾಗಿ,
ನವಿಲೂರಿಗಿಂತಲೂ ಹೊನ್ನುರೆ ಸುಖವೆಂದು
ನಿಲ್ಲಿಸಿತು ಪ್ರೇಮ ಕೂಗಿ

ನಮ್ಮೂರು ಚೆಂದವೊ
ನಿಮ್ಮೂರು ಚಂದವೊ
ಎಂದೆನ್ನ ಕೇಳಲೇಕೆ
ಎನ್ನರಸ ಸುಮ್ಮನಿರಿ
ಎಂದಳಾಕೆ

ನಿಮ್ಮೂರ ಬಂಡಿಯಲಿ ನಮ್ಮೂರ ಬಿಟ್ಟಾಗ
ಓಡಿದುದು ದಾರಿ ಬೇಗ
ಪುಟ್ಟ ಕಂದನ ಕೇಕೆ ತೊಟ್ಟಿಲನು ತುಂಬಿತ್ತು
ನಿಮ್ಮೂರ ಸೇರಿದಾಗ

ಊರ ಬೇಲಿಗೆ ಬಂದು
ನೀವು ನಮ್ಮನು ಕಂಡು ಕುಶಲವನು ಕೇಳಿದಾಗ
ತುಟಿಯಲೇನೋ ನಿಂದು ಕಣ್ಣಲೇನೋ ಬಂದು
ಕೆನ್ನೆ ಕೆಂಪಾದುದಾಗ

ನಮ್ಮೂರು ಚೆಂದವೊ
ನಿಮ್ಮೂರು ಚಂದವೊ
ಎಂದೆನ್ನ ಕೇಳಲೇಕೆ
ಎನ್ನರಸ ಸುಮ್ಮನಿರಿ
ಎಂದಳಾಕೆ


ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ
*********************************************************************************
ಕಾಣದ ಕಡಲಿಗೆ ಹಂಬಲಿಸಿದೆ ಮನ
ರಚನೆ:-ಜಿ ಎಸ್ ಶಿವರುದ್ರಪ್ಪ
ಸಂಗೀತ:- ಸಿ ಆಶ್ವಥ್

ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೆ ಒಂದುದಿನ
ಕಡಲನು ಕೂಡಬಲ್ಲೆನೆ ಒಂದುದಿನ ||ಪ||

ಕಾಣದ ಕಡಲಿನ ಮೊರೆತದ ಜೋಗುಳ ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ ಚಿತ್ರಿಸಿ ಚಿಂತಿಸಿ ಸುರಿಯುತಿದೆ
ಎಲ್ಲಿರುವುದೊ ಅದು , ಎಂತಿರುವುದೊ ಅದು
ನೋಡಬಲ್ಲೆನೆ ಒಂದುದಿನ ಕಡಲನು ಕೂಡಬಲ್ಲೆನೆ ಒಂದುದಿನ....||೧||

ಸಾವಿರ ಹೊಳೆಗಳು ತುಂಬಿ ಹರಿದರು ಒಂದೇಸಮನಾಗಿಹುದಂತೆ
ಸುನೀಲ ವಿಸ್ತರ ತರಂಗಶೋಭಿತ ಗಂಭಿರಾಂಬುಧಿ ತಾನಂತೆ
ಮುನ್ನೀರಂತೆ , ಅಪಾರವಂತೆ
ಕಾಣಬಲ್ಲೆನೆ ಒಂದುದಿನ,ಅದರೊಳು ಕರಗಲಾರೆನೆ ಒಂದುದಿನ ..... ||೨||

ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು
ಎಂದಿಗಾದರು ಕಾಣದ ಕಡಲನು ಸೇರಬಲ್ಲೆನೇನು
ಸೇರಬಹುದೆ ನಾನು,ಕಡಲ ನೀಲಿಯೊಳು, ಕರಗಬಹುದೆ ನಾನು.....||೩||

ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ.
*********************************************************************************ದೀಪವು ನಿನ್ನದೆ
ಸಾಹಿತ್ಯ: ಕೆ. ಎಸ್. ನರಸಿಂಹಸ್ವಾಮಿ
ಸಂಗೀತ: ಸಿ. ಎಸ್. ಅಶ್ವಥ್
ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು
ಕಡಲೂ ನಿನ್ನದೆ, ಹಡಗೂ ನಿನ್ನದೆ
ಮುಳುಗದಿರಲಿ ಬದುಕು
ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು

ಬೆಟ್ಟವು ನಿನ್ನದೆ, ಬಯಲೂ ನಿನ್ನದೆ
ಹಪ್ಪಿನದಲಿ ಪ್ರೀತಿ
ನೆಳಲೋ ಬಿಸಿಲೋ ಎಲ್ಲವೂ ನಿನ್ನವೆ
ನೆಳಲೋ ಬಿಸಿಲೋ ಎಲ್ಲವೂ ನಿನ್ನವೆ
ಇರಲಿ ಏಕ ರೀತಿ
ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು

ಆಗೊಂದು ಸಿಡಿಲು ಈಗೊಂದು ಮುಗಿಲು
ನಿನಗೆ ಅಲಂಕಾರ
ಅಲ್ಲೊಂದು ಹಕ್ಕಿ ಇಲ್ಲೊಂದು ಮುಗುಳು
ಅಲ್ಲೊಂದು ಹಕ್ಕಿ ಇಲ್ಲೊಂದು ಮುಗುಳು
ನಿನಗೆ ನಮಸ್ಕಾರ
ಕಡಲೂ ನಿನ್ನದೆ, ಹಡಗೂ ನಿನ್ನದೆ
ಮುಳುಗದಿರಲಿ ಬದುಕು

ಅಲ್ಲಿ ರಣದುಂದುಭಿ, ಇಲ್ಲೊಂದು ವೀಣೆ
ನಿನ್ನ ಪ್ರತಿಧ್ವನಿ
ಆ ಮಹಾ ಕಾವ್ಯ, ಈ ಭಾವ ಗೀತೆ
ನಿನ್ನ ಪದಧ್ವನಿ...
ದೀಪವು ನಿನ್ನದೆ ಗಾಳಿಯು ನಿನ್ನದೆ
ಆರದಿರಲಿ ಬೆಳಕು
ಕಡಲೂ ನಿನ್ನದೆ, ಹಡಗೂ ನಿನ್ನದೆ
ಮುಳುಗದಿರಲಿ ಬದುಕು

*********************************************************************************
ಸದಾ ಗುಪ್ತಗಾಮಿನಿ..... ನನ್ನ ಶಾಲ್ಮಲಾ
ಸಾಹಿತ್ಯ : ಚಂದ್ರಶೇಖರ ಪಾಟೀಲ್
ಸಂಗೀತ : ಸಿ. ಅಶ್ವಥ್
ಗಾಯನ : ಸಿ. ಅಶ್ವಥ್
ಆಲ್ಬಂ : ಭಾವಬಿಂದು


ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಒಳಗೊಳಗೆ ಹರಿಯುವವಳು
ಜೀವ ಹಿಂಡಿ ಹಿಪ್ಪೆ ಮಾಡಿ ಒಳಗೊಳಗೆ ಕೊರೆಯುವವಳು
ಸದಾ ಗುಪ್ತಗಾಮಿನಿ..... ನನ್ನ ಶಾಲ್ಮಲಾ
ಸದಾ ಗುಪ್ತಗಾಮಿನಿ......ನನ್ನ ಶಾಲ್ಮಲಾ

ಹಸಿರು ಉರಿವ ಎಲೆಗಳಲ್ಲಿ ಬಸಿರ ಬಯಕೆ ಒಸರುವವಳು
ತುಟಿ ಬಿರಿವ ಹೂಗಳಲ್ಲಿ ಬೆಂಕಿ ಹಾಡು ಉಸುರುವವಳು
ಸದಾ ತಪ್ತ ಕಾಮಿನಿ......ನನ್ನ ಶಾಲ್ಮಲಾ
ಸದಾ ತಪ್ತ ಕಾಮಿನಿ.....ನನ್ನ ಶಾಲ್ಮಲಾ

ಭೂಗರ್ಭದ ಮೌನದಲ್ಲಿ ಜುಮ್ಮೆನುತ ಬಳುಕುವವಳು
ಅರಿವಿಲ್ಲದೆ ಮೈಯ ತುಂಬಿ ಕನಸಿನಲ್ಲಿ ತುಳುಕುವವಳು
ಸದಾ ಸುಪ್ತಮೋಹಿನಿ......ನನ್ನ ಶಾಲ್ಮಲಾ
ಸದಾ ಸುಪ್ತಮೋಹಿನಿ....ನನ್ನ ಶಾಲ್ಮಲಾ

ನನ್ನ ಬದುಕ ಭುವನೇಶ್ವರಿ ನನ್ನ ಶಾಲ್ಮಲಾ
ನನ್ನಹೃದಯ ರಾಜೇಶ್ವರಿ ನನ್ನ ಶಾಲ್ಮಲಾ
ಸದಾ ಗುಪ್ತಗಾಮಿನಿ.....ನನ್ನ ಶಾಲ್ಮಲಾ
ಸದಾ ಗುಪ್ತಗಾಮಿನಿ.....ನನ್ನ ಶಾಲ್ಮಲಾಮೊದಲು

*******************************************************************************
ಮುನಿಸು ತರವೇ ಮುಗುದೆ 
ರಚನೆ :- ಸುಬ್ರಾಯ ಚೊಕ್ಕಾಡಿ
ಸಂಗೀತ:- ಸಿ ಅಶ್ವಥ್


ಮುನಿಸು ತರವೇ ಮುಗುದೆ
ಹಿತವಾಗಿ ನಗಲೂ ಬಾರದೆ ||

ಕರಿಮುಗಿಲ ಬಾನಿನಲ್ಲಿ ಮಿಂಚರಳಲು
ತಾರೆಗಳು ಮೈಯ ಬಳಸಿ ಜುಮ್ಮೆನ್ನಲು |
ನವ ಭಾವ ತುಂಬಿ ತುಂಬಿ ಮನ ಹಾಡಲು
ತೆರದಂತಿದೆ ಭಾಗ್ಯದ ಬಾಗಿಲು ||ಮುನಿಸು||

ಎಷ್ಟೊಂದು ಕಾಲದಿಂದ ಹಂಬಲಿಸಿದೆ
ನೀ ಬಂದು ಸೇರಿ ನನ್ನ ಮುದಗೊಳಿಸಿದೆ |
ಜೀವನದ ನೂರು ಕನಸು ನನಸಾಗಿದೆ
ಮುನಿಸೇತಕೆ ಈ ಬಗೆ ಮೂಡಿದೆ ||ಮುನಿಸು||

ಹೊಸ ಬಲ ಬಾಗಿಲಲ್ಲಿ ನಾವೀದಿನ
ನಿಂತಿರುವ ವೇಳೆಯಲ್ಲಿ ಏಕೀ ಮನ |
ವಾಗರ್ಥದಂತೆ ನಮ್ಮ ಈ ಮೈಮನ
ಜತೆ ಸೇರಲು ಜೀವನ ಪಾವನ ||ಮುನಿಸು||

********************************************************************************
ಯಾವುದೀ ಪ್ರವಾಹವು
ರಚನೆ:- ಜಿ ಎಸ್ ಶಿವರುದ್ರಪ್ಪ
ಸಂಗೀತ, ಗಾಯನ: ಸಿ ಅಶ್ವಥ್ 

ಯಾವುದೀ ಪ್ರವಾಹವು
ಮನೆ ಮನಗಳ ಕೊಚ್ಚಿ ಕೊರೆದು
ಬುಸುಗುಡುತ್ತ ಧಾವಿಸುತಿದೆ

ಗುಡಿ ಗೋಪುರ ಉರುಳುತಿವೆ
ಹಳೆಯ ಪ್ರತಿಮೆ ತೇಲುತಿವೆ
ದೀಪವಾರಿ ತಂತಿ ಹರಿದು
ವಾದ್ಯ ವೃಂದ ನರಳುತಿದೆ

ಎದೆ ಎದೆಗಳ ನಡುವೆ ಇರುವ
ಸೇತುವೆಗಳು ಮುರಿದಿವೆ
ಭಯ ಸಂಶಯ ತಲ್ಲಣಗಳ
ಕಂದರಗಳು ತೆರೆದಿವೆ

ಮುಖ ಮುಖವು ಮುಖವಾಡವ
ತೊಟ್ಟು ನಿಂತ ಹಾಗಿವೆ
ಆಡುತಿರುವ ಮಾತಿನೊಳಗೆ
ಹೃದಯ ಕಾಣದಾಗಿದೆ
ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ ಪಟ್ಟಿಯಲ್ಲಿ ಸಿಗುವ 14 ಕ್ರಮಸಂಖ್ಯೆಯಲ್ಲಿ ಪ್ಲೇ ಕೊಡಿ.
*********************************************************************************