Friday, April 5, 2013

ತಂತ್ರ

ಪಂಜು ಮ್ಯಾಗಝೀನ್ ನಲ್ಲಿ ಪ್ರಕಟಗೊಂಡಿದೆ.ಅವನು ಎಲ್ಲರಂತಿರಲಿಲ್ಲ, ಕುರುಚಲು ಗಡ್ಡಧಾರಿಯಾಗಿ ಹರಕಲು ಉಡುಪುಗಳ ಜೊತೆ ನನ್ನ ಮುಂದು ನಿಂತಿದ್ದ.

ಏನು? ಎಂದಿದ್ದೆ.

ಭಿಕ್ಷುಕ ವೇಷಧಾರಿಯಂತೆ ಕಾಣುವ ಆತ ಭಿಕ್ಷುಕನೆಂದು ಒಪ್ಪಿಕೊಳ್ಳದಂತೆ ಮಾಡಿದ್ದು ಆತನ ದೃಷ್ಟಿಯಲ್ಲಿದ್ದ ಹರಿತ.

ಚಿಂಗಾಣಿ ಬೆಟ್ಟದ ಕಡೆ ಹೋಗ್ಬೇಕು ದಾರಿಯೆಂತು ? ಎಂದು ತನ್ನ ಗೊಗ್ಗರು ದನಿಯಲ್ಲಿ ಕೇಳಿದ.

ನನ್ನ ಎಡಕ್ಕೆ ಕಾಣುವ ದೊಡ್ಡ ಬೆಟ್ಟದ ಕಡೆ ಕೈ ತೋರಿ ನೀ ಕೇಳುತ್ತಿರುವ ಬೆಟ್ಟ ಅದೆ ಎಂದು ಕೈ ತೋರಿದ್ದೆ.

ಆತ ನನ್ನೆಡೆಗೆ ಒಂದು ಕ್ಷಣ ನೋಡಿ ನಸು ನಕ್ಕು ಮರುಕ್ಷಣವೇ ಅತ್ತ ಕಡೆ ಹೊರಟಿದ್ದ.

ಚಿಂಗಾಣಿ ಬೆಟ್ಟದ ಕಡೆ ನಡೆಯಲು ಇವನ್ಯಾರೂ? ಅಷ್ಟಕ್ಕೂ ಅಲ್ಲಿ ದೊಡ್ಡ ಗೌಡರ ಸಮಾಧಿಯ ಹೊರತಾಗಿ ಮತ್ತೇನೂ ಇಲ್ಲ. ಹಾಗಾದರೆ ಆ ಗೌಡರಿಗೂ ಈತನೀಗೂ ಇರಬಹುದಾದ ಸಂಬಂಧ !? ಊಹುಂ.. ಏನೊಂದೂ ತಿಳಿಯದೇ ಯೋಚಿಸುತ್ತಲೇ ಮುನ್ನಡೆದೆ.

ಮರುದಿನ ಮುಂಜಾನೆ ಕಾದ್ರಿ ಬ್ಯಾರಿಯ ಹೋಟೆಲ ಜಗಲಿಯ ಮೇಲೆ ಕುಂತು ಕಲ್ತಪ್ಪ ಜೊತೆ ಚಾ ಹೀರುತ್ತಾ ಕುಳಿತ ಮಂದಿಗೆ ಚಿಂಗಾಣಿ ಬೆಟ್ಟದ ತುದಿಯಿಂದ ಘಂಟಾ ನಾದದ ಸದ್ದು ಕೇಳಿತ್ತು. ಹೂಂ ಅಲ್ಲಿ ನಾನು ಇದ್ದೆ!! ಎಲ್ಲರಂತೆ ನನಗೂ ಆ ಸದ್ದು ಕೇಳಿತ್ತು. ಎಲ್ಲರೂ ಆಶ್ಚರ್ಯಭರಿತರಾಗಿ ಆತ್ತ ನೋಡುತ್ತಲೆ ಸದ್ದು ಕೇಳಿಸತೊಡಗಿದರೆ ನನಗೆ ಹಿಂದಿನ ದಿನ ಚಿಂಗಾಣಿ ಬೆಟ್ಟದ ದಾರಿ ಕೇಳಿದ ಫಕೀರನ ಮುಖ ಎದುರಿಗೆ ಬಂದು ನಿಂತಿತ್ತು. ಹಾಗಾದರೆ ಈತ ಸಾಧುನಾ? ಆತನೀಗೆ ಈ ಚಿಂಗಾಣಿ ಬೆಟ್ಟದ ಪ್ರೇರೆಪಣೆ ಬಂದಿದ್ದೆಂತು? ಹಾಗೊಂದು ಪ್ರೇರೇಪಣೆ ಬಂದಿದ್ದೇ ಆದಲ್ಲಿ ಆತ ಅತ್ತ ಹೋಗುವ ದಾರಿ ಮಧ್ಯೆ ನಾನೇಕೆ ಸಿಕ್ಕಿದೆ? ಆತನಿಗೆ ನಿಜವಾಗಲೂ ಆ ದಾರಿ ಗೊತ್ತಿರಲಿಲ್ಲವೇ? ಒಂದು ವೇಳೆ ಉದ್ದೇಶಪೂರ್ವಕವೇ ನನ್ನ ಕೇಳಿದ್ದೇ ಆದರೆ ಈ ಕಥೆಯಲ್ಲಿ ನನ್ನ ಪಾತ್ರವೇನು? ಯೋಚನೆಗಳ ಸುಳಿ ಸುತ್ತಡತೊಡಗಿತ್ತು. ಒಂದಿನಿತು ಕಾದು ನೋಡಿ ಉತ್ತರ ಹುಡುಕೋಣ ಎಂದುಕೊಂಡು ಸುಮ್ಮನಾದೆ, ಅಷ್ಟರಲ್ಲಿ ಘಂಟಾನಾದದ ಸದ್ದು ಕೂಡ ನಿಂತಿತ್ತು. ಬ್ಯಾರಿ ಹೋಟೇಲಿನ ತುಂಬಾ ಊಹಾಪೋಹ, ತರೇವಾರಿ ಚರ್ಚೆ ಪ್ರಾರಂಭಗೊಂಡಿತ್ತು.

ಅದೊಂದು ದಿನ ಸಂಜೆ ಊರ ತಾಂಡದ ಹಟ್ಟಿ ಮಾದ ನನ್ನ ಮನೆಯಂಗಳದಲ್ಲಿ ನಿಂತಿದ್ದ.

ಏನ್ ಸಮಾಚಾರನೊ? ಇತ್ತಿತ್ಲಾಗೆ ಕಾಣಿಸಿಕೊಳ್ತಿಲ್ಲ.. ಎಂದೆ.

’ಸಮಾಧಿನಾಥ ಸ್ವಾಮೀಜಿ ಕ್ಷೇತ್ರ’ ದಾಗ ಕೆಲ್ಸ ಅಯ್ಯೋರ ಎಂದ, ನಮ್ ತಾಂಡದ ಅಷ್ಟೂ ಮಂದಿ ದುಡಿತಿರೊ ಬಗ್ಗೆ ಮಾಹಿತಿ ಒಂದೆ ಗುಕ್ಕಿನಾಗೆ ವದರಿದ.

ನಾ ಬೆಪ್ಪಾದೆ! ಈ ಹಳ್ಳಿನಾಗೆ ಇಂಥದೊಂದು ಹೊಸ ಹೆಸ್ರೂ ಸ್ವಾಮಿ ಇತ್ಯಾದಿ ವಿಷಯ ಕೇಳಿ…

ಎಂತದ್ಲಾ ಅದು? ಇದೇನೋ ಹೊಸ್ದೂ? ಎಂದೆ.

ಅದೆ ಅಯ್ಯೋರಾ, ಚಿಂಗಾಣಿ ಬೆಟ್ಟದ ಮೇಲೆ ಹೊಸ ಸಾಮ್ಯೋರು ಹಿಮಾಲಯದಿಂದ ಬಂದೋರೆ. ಗೌಡ್ರ ಸಮಾಧಿ ವಿಶೇಷ ಸಕ್ತಿ ಹೊಂದಿದ್ಯಂತೆ, ಅದುಕ್ಕೆ ಪೂಜೆ ಮಾಡ್ತಾವ್ರೆ, ಅಷ್ಟೆ ಅಲ್ದೆ ನಮ್ ತಾಂಡ್ಯಾದಲ್ಲೇ ಭಿಕ್ಷೆ ಎತ್ತಿ ಸಾಮ್ಯೋರು ಊಟ ಮಾಡ್ತಾರೆ, ನಮ್ ಹಾಡಿ ಜನಗಳ ತುತ್ತು ತಿನ್ನೋ ಸ್ವಾಮೀಜಿನ ಇಲ್ಲಿ ವರ್ಗೂ ಕಂಡಿದ್ದೆ ಇಲ್ಲ. ಇಷ್ಟ್ರಲ್ಲೆ ನಮ್ ತಾಂಡ್ಯ ಮಂದಿಗೆ ಒಳ್ಳೆದಾಗ್ತೈತಂತೆ, ಸಮಾಧಿಗೊಂದು ಚಪ್ರ, ಒಂದು ಸಣ್ಣ ಗುಡಿ ಕಟ್ಟಿಸೋದ್ರೋಳಗೆ ನಮ್ಗಳ ಬದುಕು ಬಂಗಾರವಾಗ್ತೈತಂತೆ. ಅದುಕ್ಕೆ ಎಲ್ರೂ ಸ್ವಾಮಿಗಳು ಹೇಳ್ದಂಗೆ ದುಡಿಯಕ್ಕೆ ನಿಂತೀವಿ. ನೀವೂ ಒಂದ್ ಕಿತ ಬಂದು ಸ್ವಾಮಿಗಳ ದರುಶನ ಮಾಡಿ, ನಿಮ್ಗೂ ಒಳ್ಳೆದಾಗ್ತೈತೆ ಎಂದು ಅಷ್ಟೂದ್ದ ಭಾಷಣ ಬಿಗಿದ.

ಹೂಂ ಸರಿ ಸರಿ ಎದ್ದೋಗು, ಅಡಿಕೆ ಗೊನೆ ಕೆಂಪಗಾಗೈತೆ, ತೆಂಗು ಒಣಗಿ ಬೀಳಕ್ಕೆ ಹತ್ತಾವೂ ಒಂದ್ ಕಿತ ಈ ಕಡೆ ಬಂದು ಎಲ್ಲಾ ಸಜ್ಜಿ ಮಾಡಿ ಕೊಟ್ಟೋಗ್ಲಾ ಮಾದ, ಆ ಮ್ಯಾಕೆ ಸ್ವಾಮಿ ಗುಡಿ ಬಗ್ಗೆ ಚಿಂತಿಸ್ಬಾರ್ದಾ ಎಂದೆ.

ಹೂಂ ಅಯ್ಯೋರಾ, ನಾಳೆ ಬೆಳಿಗ್ಗಿನ ಪೂಜೆ ಮುಗುಸ್ಕೊಂಡು ನಿಮ್ಮಲ್ಲಿ ದುಡಿಯಕ್ಕೆ ಬಂದೇನೂ ಎನ್ನೂತ್ತಾ ಮಾದ ತಾಂಡ್ಯಾ ದಾರಿ ಹಿಡಿದಿದ್ದ.

ಆ ಹರಿತ ದೃಷ್ಟಿಯ ಫಕೀರ ಮತ್ತೆ ನೆನಪಾಗಿದ್ದ. ಬಂದಿನ್ನೂ ಕೆಲ ತಿಂಗಳುಗಳಲ್ಲೇ ಆತಂದೂ ಇಷ್ಟೆಲ್ಲಾ ಸೌಂಡ್, ಸ್ವಾಮಿ ಪಾಮಿಗಳ ಬಗ್ಗೆ ಯಾವೂದೇ ಭಯ ಭಕ್ತಿ ನನಗಿಲ್ಲದಿದ್ದರೂ ಒಂದೊಮ್ಮೆ ಚಿಂಗಾಣಿ ಬೆಟ್ಟದ ತುದಿಯ ಬೆಳವಣಿಗೆಯನ್ನೂ ಕಣ್ಣಾರೆ ಕಂಡು ಬರಬೇಕೆಂಬ ಆಸೆ ಮನದಲ್ಲಿ ಆ ಕ್ಷಣದಲ್ಲಿ ಮೊಳೆತಿತ್ತು.

ದಿನ ಕಳೆದಂತೆ ಚಿಂಗಾಣಿ ಬೆಟ್ಟದ ಗೌಜು ಗದ್ದಲಗಳು ಹೆಚ್ಚಾಗತೊಡಗಿದವು. ಬರಿಯ ತಾಂಡ್ಯದ ಹಾಗೂ ಊರ ಮಂದಿಯಲ್ಲದೆ ಪರವೂರ ಮಂದಿಯೂ ಸಮಾಧಿನಾಥ ಕ್ಷೇತ್ರದ ಭಕ್ತರಾಗಿದ್ದಾರೆ. ಚಿಂಗಾಣಿ ಬೆಟ್ಟದ ಬುಡದಲ್ಲಿ ಸೌಪರ್ಣಿಕಾ ಬೆಟ್ಟವೆಂಬ ಬೋರ್ಡ್ ರಾರಾಜಿಸುತ್ತಿದೆ. ಬೆಟ್ಟದ ಬುಡ ತಳದಿಂದ ತುದಿಯವರೆಗೂ ಸುಸಜ್ಜಿತ ರಸ್ತೆ ರೂಪುಗೊಂಡಿದೆ. ರಾಜಕಾರಣಿಯಾದಿಯಾಗಿ ಶ್ರೀಮಂತರೆಲ್ಲ ತಮ್ಮ ನಾಲ್ಕು ಚಕ್ರದ ವಾಹನದಲ್ಲಿ ದರುಶನಕ್ಕಾಗಿ ಬರುತಿದ್ದಾರೆ್. ಧ್ಯಾನ, ಯೋಗ ಕೇಂದ್ರ ಇತ್ಯಾದಿ ದೊಡ್ಡ ದೊಡ್ಡ ಕಟ್ಟಡಗಳು ಬುಡ ತಳದಲ್ಲಿ ವಸತಿ ಗೃಹಗಳೂ ರೂಪುಗೊಂಡಿವೆ. ಸಾವಿರಕ್ಕೂ ಮಿಗಿಲಾದ ಸ್ವಾಮಿ ಸೇವಕರೂ ಅತಿಥಿ ಸತ್ಕಾರಕ್ಕಾಗಿ ಸಜ್ಜುಗೊಡಿರುತ್ತಾರೆ. ಜಾತ್ರೆ ಮಹೋತ್ಸವಗಳು ನಡೆಯಲೂ ಪ್ರಾರಂಭಿಸಿದೆ. ಕಾದ್ರಿ ಬ್ಯಾರಿ ಹೋಟೇಲಿನ ಕಲ್ತಪ್ಪಾ ಹಾಗೂ ಟೀ ಗ್ರಾಹಕರ ಹೆಚ್ಚಳದಿಂದ ತನ್ನ ಮೊದಲಿನ ರುಚಿಯನ್ನೂ ಕಳೆದುಕೊಂಡಿದೆ, ಇದರ ಜೊತೆಗೆ ಹಲವೂ ಹೋಟೆಲುಗಳು ತಲೆಯೆತ್ತಿದೆ, ಒಟ್ಟಿನಲ್ಲಿ ಹಳ್ಳಿ ತನ್ನತನ ಕಳೆದುಕೊಂಡು ಯಾಂತ್ರಿಕ ನಗರವಾಗಿದೆ, ಹಳ್ಳಿಯು ಬರಿಯ ಚಿಂಗಾಣಿಬೆಟ್ಟದ ಕೃಪೆಯಿಂದಲೇ ಉಸಿರು ಹಿಡಿದಂತೆ ಭಾಸವಾಗತೊಡಗಿದೆ. ಬೆಟ್ಟದ ಮೇಲಿನ ಪವಾಡಗಳು, ಸಮಾಧಿನಾಥನ ಬಗೆಗಿನ ತರೇವಾರಿ ಕಥೆಗಳು ದಿನಕ್ಕೊಂದರಂತೆ ಜನರ ಬಾಯಲ್ಲಿ ನಲಿದಾಡತೊಡಗಿದೆ. ಇವೆಲ್ಲ ಬದಲಾವಣೆ ನಡೆದಿದ್ದು ಕೇವಲ 3-4 ವರುಷಗಳಲ್ಲೇ ಆದರೂ ನಾನು ಇನ್ನೂ ಆ ಚಿಂಗಾಣಿಬೆಟ್ಟದ ಕಡೆ ತಲೆ ಹಾಕಿರಲಿಲ್ಲ. ಆದರೆ ಆ ಹರಿತ ದೃಷ್ಟಿಯ ಫಕೀರ (ನನ್ನ ದೃಷ್ಟಿಯಲ್ಲಷ್ಟೆ ಫಕೀರನಾಗಿದ್ದುಕೊಂಡವ) ಅವನು ನನ್ನೊಳಗೆ ಹುಟ್ಟು ಹಾಕಿದ ಪ್ರಶ್ನೆಗಳು ಈ ಎಲ್ಲಾ ಗೌಜು ಗದ್ದಲಗಳ ನೋಡುತ್ತಿರಬೇಕಾದರೆ ಮತ್ತೆ ಮತ್ತೆ ಪುಟಿದೇಳುತಿತ್ತು. ಉತ್ತರ ಕಂಡುಕೊಳ್ಳುವ ಸಲುವಾಗಿಯಾದರೂ ನಾ ಆತನನ್ನು ಭೆಟ್ಟಿಯಾಗಲೇ ಬೇಕಿತ್ತು. ಅದಕ್ಕಾಗಿ ನಾನು ಒಂದಿನ ಚಿತ್ರಣವೇ ಬದಲಾದ ಬೆಟ್ಟದ ಕಡೆ ಮುಖ ಮಾಡಿದೆ.

ವಿಶಾಲವಾದ ಹಾಲ್ನಲ್ಲಿ ಸಿಂಹಾಸನ ಪೀಠಾಧಾರಿಯಾಗಿ ಫಕೀರ ಕುಂತು ಸರದಿ ಸಾಲಲ್ಲಿ ಬರುತಿದ್ದ ಭಕ್ತರಿಗೆ ಆಶೀರ್ವಾದವ ನೀಡುತಿದ್ದ. ಕಾಲಿಗೆ ಬೀಳೋ ಭಕ್ತರಿಗೆ ಸೇಬು ಕಿತ್ತಳೆ ಇತರ ಹಣ್ಣುಗಳನ್ನು ನೀಡುತಿದ್ದ, ಎಡ ಬಲದಲ್ಲಿ ಶಿಷ್ಯಗಣ ಈತನ ಸೇವೆಗೆ ನಿಂತಿತ್ತು್. ಪಕ್ಕದಲ್ಲಿ ಗೌಡರ ಸಮಾಧಿಗೆ ಬಂದ ಭಕ್ತರು ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸುತಿದ್ದರು. ಆ ಸಮಾಧಿಯೆದುರು ಒಂದು ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಎಲ್ಲೆಲ್ಲೂ ಹಚ್ಚಿಟ್ಟ ಊದುಬತ್ತಿಯ ಘಮಲು ನೆತ್ತಿಗೆ ಹತ್ತಿ ಅಮಲು ತರಿಸಿತ್ತು. ನಾ ನೋಡಿದ ಫಕೀರ ಹಾಗೂ ಬದಲಾದ ವೇಷದೊಳಗಿದ್ದ ಫಕೀರನೀಗೂ ಅಜಗಜಾಂತರ ವ್ಯತ್ಯಾಸ. ಇದಷ್ಟೆ ಅಲ್ಲದೆ ಕಾಡಿನಿಂದ ತುಂಬಿದ್ದ ಚಿಂಗಾಣಿ ಬೆಟ್ಟದ ಸಮಾಧಿಯ ಮೊದಲಿನ ಚಿತ್ರಣ ಹಾಗೂ ನಾ ನೋಡುತ್ತಿರುವ ಈಗಿನ ಚಿತ್ರಣಕ್ಕೂ ಒಂದಕ್ಕೊಂದು ಸಂಬಂಧವೇ ಕಾಣಿಸದೆ ಬೆಪ್ಪರು ಬೆರಗಾಗಿ ಈ ಫಕೀರನನ್ನು ನೋಡಲು ಸರತಿಯಲ್ಲಿ ನಿಲ್ಲುವುದೋ ಬಿಡುವದೊ ಯೋಚಿಸುತ್ತಿರಬೇಕಾದರೆ ಸ್ವಾಮಿಯ ಶಿಷ್ಯನೊಬ್ಬ ಬಂದು ತಾವು ದಯಮಾಡಿಸಬೇಕು… ನೀವು ನಮ್ಮ ಅತಿಥಿ, ಸ್ವಾಮಿಗಳು ತಮ್ಮ ವಿಶ್ರಾಂತಿ ಗೃಹದಲ್ಲಿ ನಿಮ್ಮನ್ನು ಕುಳ್ಳಿರಿಸಲು ಅಪ್ಪಣಿಸಿದ್ದಾರೆ, ದಯವಿಟ್ಟು ಬನ್ನಿ… ಎನ್ನಲು, ಏನಪ್ಪ ಇದು !! ನಾ ಯಾವ ಸೀಮೆಯ ಅತಿಥಿ ? ನನ್ನನ್ಯಾಕೆ ಈತ ಇಷ್ಟೂ ಜನರೊಳಗೆ ಗುರುತಿಸಿದ ? ಅಷ್ಟಕ್ಕೂ ಈತನ್ಯಾರು ಎಂದು ಸಿಂಹಾಸನಾಧೀಶನ ಬಗ್ಗೆ ಯೋಚಿಸುತ್ತಾ ಆತನ ಶಿಷ್ಯನ ಜೊತೆ ಹೆಜ್ಜೆ ಹಾಕಿದೆ…

ಭವ್ಯವಾದ ಕೋಣೆಯೊಳಗೆ ಪ್ರಶ್ನೆಗಳೊಂದಿಗೆ ಗಿರಕಿ ಹೊಡೆಯುತಿದ್ದ ತಲೆಯನ್ನು ತಹಬಂದಿಗೆ ತರಲು ಪ್ರಯತ್ನಿಸುತಿದ್ದ ನನ್ನನ್ನು …

ಬಂದ್ಯಾ? ಅದೆಷ್ಟು ದಿನಗಳಿಂದ ಕಾದಿದ್ದೆ..? ಎಂಬ ಗೊಗ್ಗರು ದನಿ ವಾಸ್ತವಕ್ಕೆ ಎಳೆತಂದಿತ್ತು.

ಎದುರಿಗಿದ್ದಿದ್ದು ಆತನೇ, ಅದೇ ಪ್ರಖರ ದೃಷ್ಟಿಯಿಂದ ನನ್ನ ದಿಟ್ಟಿಸುತ್ತಾ ನಿಂತಿದ್ದ.

ನೀನ್ಯಾರು?? ಎನ್ನಲಷ್ಟೆ ನನ್ನೊಳಗೆ ದನಿ ಇದ್ದಿದ್ದು.

ಗುರುತಿಸು ಎಂದ,

ಊಹೂಂ ತಿಳಿಲಿಲ್ಲ ಎಂದೆ.

ನಗುತ್ತಾ ನೀನ್ಯಾರು ಎಂದು ನನ್ನೇ ಮರು ಪ್ರಶ್ನಿಸಿದ.

ನಾನು ಈ ಊರ ಗೌಡರ ಕೆಲಸದಾಳು, ಹೆತ್ತವರನ್ನೂ ನೋಡದ ನನ್ನನ್ನು ಸಾಕಿ ಬೆಳಸಿದ್ದು ಗೌಡರು್. ಗೌಡರ ಸಾಕು ಮಗನೆಂದೇ ಊರ ಜನ ನನ್ನ ಗುರುತಿಸುತ್ತಾರೆ.

ಆ ನಿಮ್ಮ ಗೌಡರಿಗೆ ಸಿದ್ದಪ್ಪ ಎನ್ನುವ ತಮ್ಮನಿದ್ದ ಗೊತ್ತೆ?

ಹೂಂ ಮನೆಹಾಳ, ಗೌಡರ ಸಂಸಾರವನ್ನೆ ಹಾಳುಗೆಡವಿದ್.

ತಪ್ಪು! ತಣ್ಣಗೆ ಹಿಂಗೆಂದು ಅರಚಿ ಮುಂದುವರಿದು… ಆತನಿಗೆ ತನ್ನಣ್ಣ ಸರ್ವಸ್ವ, ಆತ ತನ್ನಣ್ಣನಿಗೆ ತಪ್ಪು ಬಗೆದಿಲ್ಲ, ಆ ತಾಂಡ್ಯದ ಹುಡುಗಿಯ ಮಾನದೊಂದಿಗೆ ಚೆಲ್ಲಾಟವಾಡಿದ್ದು, ಎಲ್ಲರೂ ಹಂಗಂದುಕೊಂಡಿದ್ದು ಆತನ ಹುಡುಗುತನದಿಂದಷ್ಟೆ, ಆದರೆ ಅದು ತನ್ನಣ್ಣನನ್ನ ಬಲಿ ತೆಗೆದುಕೊಂಡೀತು ಎಂಬ ಅರಿವೂ ಆ ಸಮಯದಲ್ಲಿ ಆತನಿಗಿರಲಿಲ್ಲ ಎಂದು ಕಣ್ಣಂಚಿನ ನೀರನ್ನೂ ಒರೆಸುತ್ತ ತಣ್ಣಗೆ ನುಡಿದಿದ್ದ…

ನಾನರೆಕ್ಷಣ ವಿಚಲಿತನಾಗಿ ಅಂದರೆ ನೀನು….!!

ಹೂಂ ಅದೇ ಸಿದ್ದಪ್ಪ. ಎಂದಿದ್ದ ಮುಖದಲ್ಲಿ ಅದೇ ನಿರ್ಲಿಪ್ತ ಭಾವ.

ನಾನು ವಿಚಲಿತನಾದರೂ ತೋರಗೊಡದೆ ಕೋಪದಿಂದ, ಅವತ್ತು ನಿನ್ನ ಘನ ಕಾರ್ಯಕ್ಕಾಗಿ ಕೋಪಗೊಂಡ ಹಾಡಿ ಮಂದಿ ನಿನ್ನ ಮನೆಗೆ ಬೆಂಕಿ ಇಡಬೇಕಾದರೆ ಗೌಡ್ರು ಮತ್ತು ಅವರ ಸಂಸಾರ ಅಚಾನಕ್ ಆಗಿ ಅದರಲ್ಲಿ ಸಿಲುಕಿ ಉರಿದಾಗ ಆ ಚೀರಾಟವನ್ನು ನೋಡಿಯೂ ನೀ ಪರಾರಿಯಾದೆ್. ಈಗ ಇಷ್ಟು ವರುಷದ ನಂತರ ಈ ವೇಷದೊಂದಿಗೆ ಬಂದೀಯಲ್ಲೋ, ನಿನ್ನ ಉದ್ದೇಶವಾದರೂ ಏನೂ?

ದ್ವೇಷ !

ಯಾರ ಮೇಲೆ?

ನನ್ನನ್ನು ಅಕ್ಷರಶಃ ಭಿಕ್ಷುಕನನ್ನಾಗಿ ಮಾಡಿದ ವ್ಯವಸ್ಥೆಯ ಮೇಲೆ ಹಾಗೂ ಇದಕ್ಕೆ ಕಾರಣವಾದ ತಾಂಡ್ಯ ಮಂದಿ ಮೇಲೆ.

ಮತ್ತೆ ಅಣ್ಣನ ಸಂಸಾರ ಬೆಂಕಿಯಲ್ಲಿ ಉರಿತಿದ್ದುದನ್ನು ನೋಡಿಯೂ ಪರಾರಿಯಾಗಿದ್ದು??

ಜೀವಭಯ!! ನಾನುಳಿಯೋದಷ್ಟೆ ಆ ಹೊತ್ತಿಗೆ ನನಗೆ ಮುಖ್ಯವಾಗಿತ್ತು. ಇಲ್ಲದಿದ್ದಲ್ಲಿ ನಾನು ಅಣ್ಣನೊಂದಿಗೆ ಸಮಾಧಿಯಾಗುತಿದ್ದೆ, ತುಸು ತಡೆದು ನನ್ನೇ ಬೆಂಕಿಯಂತೆ ದಿಟ್ಟಿಸಿ ನೋಡುತ್ತಾ ಕೇಳಿದ್ದ…

ಯಾಕೆ ನೀ ಬಯಸಿದ್ದು ಅದೇನಾ?? ಪ್ರಶ್ನೆ ಕೆಂಡದಂತೆ ನನ್ನೆಡೆಗೆ ಜಿಗಿದಿತ್ತು.

ಹೌದು, ನಾನು ಆ ಪ್ರಕರಣಕ್ಕೊಂದು ಪ್ರಮುಖ ಪಾತ್ರಧಾರಿ. ಆದರೆ ತೆರೆಯ ಹಿಂದಿದ್ದೆ ಅಷ್ಟೆ. ಸಿದ್ದಪ್ಪ ತಾಂಡ್ಯ ಹುಡುಗಿಯನ್ನು ಹುಚ್ಚನಂತೆ ಪ್ರೇಮಿಸಿದ್ದ. ನಾ ಗೌಡರ ಮನವೊಲಿಸಿ ಇದಕ್ಕೊಂದು ಇತಿಶ್ರೀ ಹಾಡಬಹುದಾಗಿದ್ದರೂ ನಾ ಹಾಗೆ ಮಾಡಿರಲಿಲ್ಲ. ಹುಚ್ಚು ಹುಡುಗ ಸಿದ್ದಪ್ಪನ ಬುದ್ದಿ ಆಕೆಯ ಮಾನವನ್ನು ತನ್ನದಾಗಿಸಿ ಹಾಡಿ ಜನರ ಮುಂದೆ ಈ ವಿಷಯ ಬರುವಂತಾಗಿ ತೋರಿಕೆಗೆ ಬಲವಂತವಾಗಿ ಮದುವೆಯಾಗಿಸುವಂತೆ ಮಾಡಿ ಮದುವೆಯಾಗುವದಾಗಿತ್ತು. ಆದರೆ ಈ ಪ್ರಯೋಗಗಳಿಗೆ ಕೊಳ್ಳಿ ಇಟ್ಟೋನೆ ನಾನು. ಹಾಡಿ ಮಂದಿಯ ಕಿವಿ ಚುಚ್ಚಿದೋನು ನಾನೇ. ಫಲಶ್ರುತಿ ನಾನೆಂದುಕೊಂಡಂತೆ ಗೌಡರ ಸಂಸಾರ ನಾಶ. ಬದಲಾಗಿ ನನಗೆ ಗೌಡರ ಆಸ್ತಿಯ ಉತ್ತರಾಧಿಕಾರತ್ವ. ಅಂದುಕೊಂಡಂತೆ ಎಲ್ಲವೂ ಆಗಿತ್ತು ಆದರೆ ಈತನೊಬ್ಬ ತಪ್ಪಿಸಿಕೊಳ್ಳುವದ ಹೊರತಾಗಿ…

ನಾ ಏನೊಂದು ಉತ್ತರಿಸದೆ ಮೌನವಾಗಿದ್ದೆ, ಮುಖ ಬಿಳುಚಿಕೊಳ್ಳುತ್ತಲಿತ್ತು , ಆತನೆ ಮುಂದುವರಿಸಿದ…

ಇಷ್ಟೂ ವರುಷಗಳಲ್ಲಿ ಅಕ್ಷರಶಃ ನಾ ಅಲೆದೆ, ನಮ್ಮ ಸೌಧದಲ್ಲಿ ನಿನ್ನರಮನೆ ಬೆಳೆದು ನಿಂತಿದ್ದನ್ನೂ ನಾ ನೋಡುತ್ತಲಿದ್ದರೂ ಕಾಲಕ್ಕಾಗಿ ಕಾದೆ. ನೀನೇ ದಾರಿ ತೋರಿದ ಈ ಚಿಂಗಾಣಿ ಬೆಟ್ಟದಲ್ಲಿ ಅಣ್ಣನ ಸಮಾಧಿಯನ್ನೇ ನನ್ನದಾಗಿಸಿ ಕುಂತು ನಮ್ಮ ಸ್ಥಾವರವಕ್ಕೆ ಬೆಂಕಿ ಇಟ್ಟ ಮಂದಿಯಿಂದಲೇ ಮತ್ತೆ ಕಟ್ಟಿ ಅಡಿಯಾಳಾಗಿಸಿದೆ. ನೀನೊಬ್ಬ ಸಿಗುವದನ್ನೆ ಕಾಯುತಿದ್ದೆ, ಈ ದಿನ ಆ ಕಾಯುವಿಕೆಗೂ ಕೊನೆ ನಿನ್ನಿಂದಲೇ ಇಟ್ಟೆ್. ನಾ ಅನ್ನ ಹಾಕಿದ ಮನೆಗೆ ಕನ್ನವಿಟ್ಟೆ ಎಂದು ನಿನ್ನ ದೂಷಿಸಲಾರೆ, ಆದರೆ ಇನ್ನೊಂದಿಷ್ಟು ಕೊನೆಯಾಗಬೇಕಿದೆ.. ಅದು ಕೂಡ ನಿನ್ನಿಂದಲೇ ಆಗಬೇಕಿರೋ ಕಾರ್ಯ ಎಂದು ಸುಮ್ಮನಾಗಿ ನನ್ನ ನೋಡಿದ್. ಆತನ ಹರಿತ ದೃಷ್ಟಿ ಇಂಚಿಂಚೇ ನನ್ನ ಕೊಯ್ಯುತ್ತಲಿತ್ತು…

ಏನೆಂಬಂತೆ ಆತನತ್ತ ನೋಡಿದೆ.

ಪತ್ರವೊಂದನ್ನು ನನ್ನ ಮುಂದಡಿ ಇಟ್ಟು ಸಹಿ ಹಾಕೆಂದ.

ಅದು ತನ್ನದೆಂದು ನಾ ಅನುಭವಿಸುತ್ತಲಿದ್ದ ಅತನ ಕುಟುಂಬಿಕರ ಸಮಸ್ತ ಆಸ್ತಿಯನ್ನೂ ಆತನ ಹೆಸರಿಗೆ ಮರಳಿಸುವದಾಗಿತ್ತು.

ಮಾತಾಡಲೂ ಪ್ರಶ್ನಿಸಲೂ ಇನ್ನೇನೂ ಉಳಿಸಿಕೊಳ್ಳದ ನಾನು ಸಹಿ ಮಾಡಿ ಎದ್ದಿದ್ದೆ್. ಆತ ನಸು ನಗುತ್ತಾ…

ಮುಂದೇನೂ? ಎಂದ.

ಕಾಲಚಕ್ರದೊಳಗೆ ನೀ ಸ್ಥಾವರಾಧೀಶ ನಾ ಫಕೀರ ಎಂದುತ್ತರಿಸುತ್ತಾ… ಕೊನೆಯದೊಂದು ಪ್ರಶ್ನೆ ಎಂದೆ

ಕೇಳು ಎಂದ

ದ್ವೇಷ ಸಾಧನೆಗೆ ಇನ್ಯಾವ ಮಾರ್ಗನೂ ಇರಲಿಲ್ವ, ಈ ಸ್ವಾಮಿ ವೇಷನೇ ಬೇಕಿತ್ತಾ ಎಂದೆ

ದ್ವೇಷ ಸಾಧನೆಯ ಇನ್ನೆಲ್ಲಾ ಮಾರ್ಗಗಗಳು ಕೂಡ ಮತ್ತದೇ ದ್ವೇಷದ ಉರುಳಿಗೆ ಉರುಳಿಸಿ ಫಕೀರನಾಗಿಸುವ ಸಂಭವ ಇದೆಯೆಂದರಿತು ಈ ಮಾರ್ಗವ ನನ್ನದಾಗಿಸಿದೆ, ನೀ ಈ ವಿಷಯವನ್ನೂ ಸಾಧ್ಯಂತವಾಗಿ ಇಂದು ಜಗತ್ತಿಗೆ ತಿಳಿಸಿದರೂ ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ, ಹೆಚ್ಚೆಂದರೆ ಕೆಲ ಪ್ರಶ್ನೆಗಳು ನನ್ನೆದುರು ಬರಬಹುದು, ಉತ್ತರವಾಗಿಸಿ ನೀನೊಬ್ಬ ಹುಚ್ಚನೆಂದು ಬಹಳ ಸುಲಭವಾಗಿ ನಿನಗೆ ಪಟ್ಟ ಕಟ್ಟಬಲ್ಲೆ, ಜಗತ್ತು ನನ್ನ ಮಾತನ್ನೆ ಒಪ್ಪೊದು ಹೊರತಾಗಿ ನಿನ್ನದಲ್ಲ, ನಾ ನೀನೆ ಕಾರಣನಾದ ಕಪಟಿಯಷ್ಟೆ, ನಿನಗಷ್ಟೆ ಗೊತ್ತು ನನ್ನ ಮಂತ್ರದೊಳಗಿನ ತಂತ್ರ. ಆದರೆ ಜಗತ್ತಿಗೆ ನಾ ಕಾವಿಧಾರಿ, ಜಗತ್ತೂ ಈ ತಾಂಡ್ಯದ ಮಂದಿಯಂತೆ ಮುಗ್ದ, ನೀನಿನ್ನೂ ಹೋಗಬಹುದು… ಎಂದು ಬಿಡುಸಾಗಿ ನುಡಿದಿದ್ದ.

ಚಿಂಗಾಣಿ ಬೆಟ್ಟವಿಳಿಯುತ್ತಾ ಕತ್ತಲು ಇಂಚಿಂಚೆ ತಬ್ಬಿಕೊಳ್ಳುತಿತ್ತು, ನನ್ನ ಜೀವನದೊಳಗೆ ಕವಿಯುವ ಕತ್ತಲಿನ ಸೂಚಕದಂತೆ. ರೈಲ್ವೆ ಸ್ಟೇಷನ್ನಿನ ದಾರಿ ಹಿಡಿದು ಹೊರಟಿದ್ದೆ, ತಲೆಯೊಳಗೆ ಆತನ ಮಾತೇ ತುಂಬಿತ್ತು, ಹೊಸ ಬಗೆಯ ಸ್ಥಾವರಧೀಶನಾಗುವ ಬಗೆಯನ್ನು ಆತ ಆತನರಿವಿಗಿಲ್ಲದೆ ನನಗೆ ಕಲಿಸಿಕೊಟ್ಟಿದ್ದ. ಕತ್ತಲು ಕಳೆದು ಬೆಳಗು ಮೂಡುವುದು ದಿಟವೆಂದು ಮನ ಹೇಳುತಿತ್ತು. ಯಾಕೊ ಮೊದಲ ಬಾರಿಗೆ ಸುಮ್ಮನೆ ನನ್ನ ಪಾಡಿಗೆ ನನ್ನನ್ನು ಬಿಟ್ಟ ಆ ಸಮಾಧಿನಾಥ ಸ್ವಾಮಿ ನನ್ನ ದೃಷ್ಟಿಯಲ್ಲಿ ಸಾಧು ಎನಿಸಿಕೊಂಡ.

Sunday, February 17, 2013

ಹಣದುಬ್ಬರ

ಈ ದಿನಗಳಲ್ಲಿ…..

ಹೊತ್ತಿನ ಕೂಳಿಗೆ

ಬೆಳೆದ ಧಾನ್ಯ,ಬೇಳೆ,ಕಾಳು

ದಾಸ್ತಾನು ಮಳಿಗೆಗೆ ಸೇರಿ

ಬೆಳೆದ ಆತನದೆ ಮಡಿಲಿಗೆ

ಮತ್ತೆ ತಲುಪುವಲ್ಲಿ ಕಾಡುತಿದೆ ಹಣದುಬ್ಬರ


ಈ ದಿನಗಳಲ್ಲಿ……

ತಿನ್ನೋ ಕೂಳಿಗೆ ಮಾತ್ರವಲ್ಲ

ಬೆಲೆಯೇರಿದ ಬೆಳೆಯ ತಿಂದ

ಮಾನವನ ಮಸ್ಥಿಷ್ಕಕ್ಕೂ ಮದವೇರಿದೆ

ಕಾಂಚಾಣದೆಡೆಗೆ ಒಲವು ತೋರಿಪ ಅವನಿಗೆ

ಕುಳಿತೆದ್ದುನಿಂತರೂ ಕಾಡುತಿದೆ ಹಣದುಬ್ಬರ


ಈ ದಿನಗಳಲ್ಲಿ……..

ಮಾನವೀಯತೆಯೊಳಗೆ ಮಡಿವಂತಿಕೆಯ ಸೆರಗು

ಅವನೆಷ್ಟರ ಮಟ್ಟಿಗೆ ಉಪಕಾರಿ ಎಂಬುದರೊಳಗೆ

ನಿಂತಿದೆ ಸ್ನೇಹ ಸಂಬಂಧ…

ಸ್ವಾರ್ಥತೆಯತ್ತ ಕತ್ತು ಹಿಡಿದು ದಬ್ಬುತ್ತಿದೆ

ಸೆರಗೊಳಗೆ ಕಾಡುತಿದೆ ಹಣದುಬ್ಬರ.


ಈ ದಿನಗಳಲ್ಲಿ…….

ಎತ್ತರದ ಕನಸು ಎತ್ತರೆತ್ತರಕ್ಕೆ ಜಿಗಿದಿದೆ

ಅಗತ್ಯ ಖರ್ಚು ಹೊಂದಿಸುವದರಲ್ಲೆ ದಿನ ಮುಗಿದಿದೆ

ಬಡವನ ನೆತ್ತರು ಮತ್ತಷ್ಟೂ ಬಸಿಯುತ್ತಿದೆ

ಬಲ್ಲಿದನ ತೊಗಲು ತುಂಬಾ ಆತನದೆ ನೆತ್ತರು

ಕಣ್ಣೀರಲ್ಲಿ ತೊಯ್ದ ಆತನುಸಿರಲ್ಲೆ ಮೈ ಕಾಯಿಸಿಕೊಂಡು

ಗಹಗಹಿಸಿ ಕಾಡುತಿದೆ ಹಣದುಬ್ಬರ


ಈ ದಿನಗಳಲ್ಲಿ…..

ಪ್ರೀತಿ ತುಂಬಿದಾ ಆ ದಿನಗಳು ನೆನಪಾಗಿ ಉಳಿದಿದೆ

ಕಷ್ಟಗಳಿಗೆ ಜೊತೆಯಾಗೊ ಮಂದಿ ಮೋರೆ ತುಂಬಾ ಪರದೆ

ಮಾನವೀಯತೆ ಇಂಚಿಂಚೆ ಸಾಯುವ ಇಂದುಗಳಲ್ಲಿ

ಯೋಚಿಸುತ್ತಿರುವೆ ಹೊಟ್ಟೆಯ ಹಿಟ್ಟಿಗೆ ಹೊಡೆದಾಡೋ

ಶಿಲಾಯುಗ ಮತ್ತೆ ಬಂದಿದೆಯೆ ಎಂದು!!!


ಸಂಪಾದನೆ ಏರದ ಈ ದಿನಗಳಲ್ಲಿ ಶರವೇಗ ಪಡೆದಿದೆ ಹಣದುಬ್ಬರ

ಹಣವು ನಿಯಂತ್ರಿಸುವ ಮಾನವನ ಮಾನವೀಯತೆ

ಪೂರ್ತಿ ಅಳಿಯುವ ಮುನ್ನವಾದರೂ


ಇಳಿತ ಕಂಡೀತೆ ಈ ಹಣದುಬ್ಬರ????

Thursday, February 14, 2013

ನಿನ್ನ ಪ್ರೇಮದ ಪರಿಯ….

ಪ್ರೇಮಿಗಳ ದಿನದ ವಿಶೇಷ ಸಂಚಿಕೆಗಾಗಿ ಪಂಜು ಮ್ಯಾಗಝೀನ್ ಗಾಗಿ ಬರೆದದ್ದು..

ಓಯ್,
ಮೊದಲಿಗೆ ಹೇಳಿ ಬಿಡ್ತೀನಿ ಕೇಳು, ನಾ ಸುಮಾರಾಗಿ ಒಂದಷ್ಟು ಪ್ರೇಮ ಪತ್ರಗಳನ್ನ ಹಿಂದೆಯೂ ಬರೆದಿದ್ದೇನೆ, ಆದರೆ ಆ ಎಲ್ಲಾ ಪತ್ರ ಬರಿಯೋದಕ್ಕೂ ಮೊದಲು ಯೋಚಿಸುತಿದ್ದುದು ಇದನ್ನ ಯಾರಿಗೆ ಬರೀಲಿ ಎಂದು, ಕಾರಣ ಇಲ್ಲದಿಲ್ಲ ಕೊಡೋದಕ್ಕೆ ಕಲ್ಪಿತ ಸುಂದರಿಯರೆ ನನ್ನ ಮುಂದಿದ್ದದ್ದು….ಆದರೆ ಈ ಭಾರಿ ಈ ವಿಷಯದಲ್ಲಿ ನಾ ಅದೃಷ್ಟವಂತನೆ ಸರಿ, ಬರೆದಿಟ್ಟಿದ್ದನ್ನು ಕೊಡಲು ನೀನಿದ್ದಿ, ಜತನದಿಂದ ಪತ್ರವನ್ನು ಎತ್ತಿಟ್ಟು ನಿನ್ನ ತೆಕ್ಕೆಯಲ್ಲಿ ನನ್ನ ಬಂಧಿಸಿ “ಐ ಲವ್ ಯೂ” ಎನ್ನುತ್ತಿ ಎಂಬುದು ಗೊತ್ತಿರುವ ಕಾರಣ ನಿನ್ನದೊಂದು ಹೂ ಮುತ್ತಿನ ಆಸೆಯಲ್ಲಿ ಒಂದಷ್ಟು ನೆನಪನ್ನು ನೆನಪಿಸುವ ಪ್ರಯತ್ನ ನಡೆಸುತ್ತೇನೆ ಗೆಳತಿ, ವಿಶೇಷವೆಂಬ ಯಾವೊಂದು ನಿರೀಕ್ಷೆಗಳಿಲ್ಲದೆ ನನ್ನ ಹಂಗಂಗೆ ಒಪ್ಪಿಸಿಕೊಂಡು ಬಿಡು, ನಿನ್ನ ಮನದ ಹೂದೋಟದಲ್ಲಿ  ಚಂಗನೆ ನೆಗೆಯೊ ದುಂಬಿಯಾಗಿ ನಿನ್ನೊಳಗೆ ಅರಳಿ ನಿಂತ ಕುಸುಮಗಳನ್ನು ಹಂಗಂಗೆ ಅಘ್ರಾಣಿಸಿ ಸುತ್ತಿ ಬಿಡುವೆ.

ತಮಾಷೆಗೆ ಒಂದು ಮಾತು ಯಾವತ್ತೂ ಹೇಳುತ್ತಿರುವಂತೆ ಮತ್ತೆ ಹೇಳುತ್ತೇನೆ ಕೋಪಿಸಿಕೋಬೇಡ, ಅಲ್ಲೋ ಇಷ್ಟೊಂದು ಹುಡುಗರ ಮಧ್ಯೆ ನಾನೆ ನಿನಗಿಷ್ಟವಾಗಿದ್ದು ಏಕೆ? ಮತ್ಯಾಕೆ ಇದೆ ಕೇಳುತ್ತಿ ಅದು ವಿಧಿ ಬರಹ, ನನಗಿಷ್ಟವಾಯಿತು ಅಷ್ಟೆ ಎಂದೆನ್ನುತ್ತಿ ಎಂದು ಗೊತ್ತಿದ್ದರೂ ಈ ಪ್ರಶ್ನೆಯೊಂದು ಪ್ರಶ್ನೆಯಾಗೆ ಉಳಿದು ಬಿಟ್ಟಿದೆ ಕಣೆ, ಅನಗತ್ಯ ಪ್ರಶ್ನೆ ಅದರ ಚಿಂತನೆ ಆರೋಗ್ಯಕ್ಕೆ ಒಳ್ಳೇದಲ್ಲ ಬಿಡು, ಸರಿ ಮತ್ತೊಮ್ಮೆ ಕೇಳುವದಿಲ್ಲ. ನಿನ್ನ ನೋಡಿದ ಮೊದಲ ದಿನ ಗಂಭೀರ ವದನನಾಗಿ ಕೈ ಕಟ್ಟಿ ಕುಳಿತಿದ್ದೆ, ಕೊಬ್ಬಿನಾಂಶ ಜಾಸ್ತಿ ಎಂದು ತೋರಬಹುದಾದ ದೊಡ್ಡ ಹೊಟ್ಟೆ ಕಾಣದಿರಲೆಂದು ಪಡಿಪಾಟಲೂ ಪಟ್ಟಿದ್ದನ್ನೂ ಕಣ್ಣಂಚಿನಲ್ಲೆ ನೋಡಿ ಮನದಟ್ಟು ಮಾಡಿಕೊಂಡರೂ ನಿನಗೆ ನಾನೆ ಇಷ್ಟವಾಗಿ ಬಿಟ್ಟೆ. ಇದ್ದಿಲು ಕಪ್ಪಿನ ನನ್ನನ್ನೂ ಶ್ವೇತ ವರ್ಣದ ನೀನು ಅದೆಂಗೆ ಒಪ್ಪಿದೆಯೋ ತಿಳಿಯೆ. ಇದಕ್ಕಾಗೆ ನೀನು ಇತರರಿಗಿಂತ ವಿಭಿನ್ನವಾಗಿ ನನ್ನೆದುರು ನಿಲ್ಲುತ್ತಿ, ನನ್ನ ಸಂಪಾದನೆ ಬಗ್ಗೆ ನೀ ಕೇಳಿಲ್ಲ, ನನ್ನ ಬಾಹ್ಯಾಕಾರ, ಕಲರ್ ಬಗ್ಗೆ ಎಳ್ಳಷ್ಟೂ ಗಮನಹರಿಸಲಿಲ್ಲ. ಬದಲಾಗಿ ನನ್ನ ಕನಸುಗಳ ಬಗ್ಗೆ ಕೇಳಿದೆ, ನಿನ್ನ ಜೀವನದಲ್ಲಿ ನನ್ನ ಪಾತ್ರವೇನೆಂಬುದ ಕೇಳಿ ನನ್ನ ಅಭಿಪ್ರಾಯ ತಿಳಿದೆ, ಸುಖವಾಗಿಡಬಲ್ಲೆನೆ ನಾನು ಎಂಬುದನ್ನು ಖಾತ್ರಿ ಪಡಿಸಿಕೊಂಡೆ, ನಿನ್ನ ಸ್ವಾತಂತ್ರ್ಯಕ್ಕೆ ನಾ ಧಕ್ಕೆಯಾಗಲಾರೆನೆಂದು ನಿನಗನಿಸಿದ ಮರುಕ್ಷಣವೆ ನನ್ನ ಒಪ್ಪಿಸಿಕೊಂಡೆ. ಇದೆಲ್ಲವೂ ನನಗಿನ್ನು ಕನಸಿನ ಅರಮನೆಯ ಪಯಣ. ಒಳಗಣ್ಣನ್ನು ತೆರೆದು ನೋಡೊ ನಿನ್ನಂತ ಹೆಣ್ಣು ಜಗವೆಲ್ಲ ಇರಬಾರದೇಕೆ? ಹೆಣ್ಣು ಜಗವ ಪೊರೆಯುವ ಜೀವ ಎಂದು ನನ್ನಂತವ ಅಂದುಕೊಂಡಿದ್ದರಿಂದಲೆ ಇಂತಹ ಪ್ರಶ್ನೆ ನನ್ನೊಳಗೆ ಹುಟ್ಟೋದು. ಹೌದೋ ತಾಯಿಯೊಂದೆ ಸರ್ವಸ್ವ ಎನ್ನುತ್ತಾ ಇರುತಿದ್ದ ಕಾಲದಲ್ಲೆ ನೀ ಬಂದೆ ನನ್ನ ತಾಯಿ-ತಂದೆಗೆ ಮಗದೊಂದು ಹೆಣ್ಣು ಮಗಳಾಗಿ ನನ್ನ ತಂಗಿ ತಮ್ಮನೀಗೆ ಅಕ್ಕನಾಗಿ ನನ್ನ ಬಾಳಿನ ಅರ್ಧಾಂಗಿಯಾಗಿ, ನಿನ್ನಾರೈಕೆಯ ಪರಿಯ ನೋಡಿ ಒಮ್ಮೊಮ್ಮೆ ಅಂದುಕೊಳ್ಳುತ್ತೇನೆ ನನಗೀಗ ಈರ್ವರೂ ತಾಯಂದಿರೆಂದು., ಹಿರಿಯರು ಹೇಳಿದ ಮಾತು ಅವಾಗೆಲ್ಲಾ ನೆನಪಾಗುತ್ತದೆ “ಹೆಣ್ಣು ಮಾತೃ ಸ್ವರೂಪಿಯೆಂದು”.
ಇವತ್ತು ಪ್ರೇಮಿಗಳ ದಿನ, ಹರಿವ ನೀರಿಗೆ ಹೇಗೆ ಬಂಡೆಯ ಜಾತಿ ತಿಳಿದಿಲ್ಲವೊ, ಮರದ ಆಶ್ರಯ ಪಡೆದ ಹಕ್ಕಿಗೆ ಮರದ ಜಾತಿ ಹೆಂಗೆ ತಿಳಿದಲ್ಲವೊ ಅಂತೆಯೆ ಪ್ರೇಮಿಗಳ ಆಸ್ತಿಯಾದ ಈ ಪ್ರೀತಿಗೂ ಕೂಡ ಅದರ ಹುಟ್ಟು/ಜಾತಿ ತಿಳಿದಿಲ್ಲ!!!. ಅದಕ್ಕಾಗೆ ಪ್ರೀತಿಗೆ ಸಮಾಜದ ವರ್ಣಾಶ್ರಮವನ್ನು ಮೆಟ್ಟಿ ನಿಲ್ಲುವ ಹಲವು ವರ್ಣಗಳು ಇದೆ ಎಂದರೆ ನನ್ನ ಮಾತು ನಿನಗೆ ಅತೀ ಎನಿಸಲಾರದು ಮತ್ತಿದನ್ನು ಅರ್ಥೈಸಿಕೊಳ್ಳಬಲ್ಲೆ ಎಂಬ ಭರವಸೆ ನನಗಿದೆ. ಸಂಬಂಧಗಳೊಳಗಿನ ಪ್ರೀತಿ, ಸಂಬಂಧಗಳನ್ನಾಗಿಸುವ ಪ್ರೀತಿ ಹಾಗೂ ಹೊಸ ಸಂಬಂಧಗಳು ಏರ್ಪಟ್ಟು ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಜೀವನದಲ್ಲಿ ಒಂದಾಗಿ ನಡೆಯೋ ಪ್ರೀತಿ ಎಂಬುದಾಗಿ ಪ್ರೀತಿಯನ್ನು ವಿಭಜಿಸಿಕೊಂಡಲ್ಲಿ ನಾವೀಗ ಇರೋದು ಹೊಸ ಸಂಬಂಧಗಳು ಏರ್ಪಟ್ಟ ಪ್ರೀತಿ ಕೆಟಗರಿಯಲ್ಲಿ, ಈ ಮೂಲಕ ನಾವು ಸಂಬಂಧಗಳಾಗಿಸುವ ಪ್ರೀತಿಯ ಮೇಲೇರಿ ನಿಂತಿದ್ದೇವೆ ಹಾಗೂ ನನ್ನ ನಿನ್ನಯ ಪೂರ್ವಾಶ್ರಮದ ಸಂಬಂಧಗಳು ಅವರ ಪ್ರೀತಿಯನ್ನು ನನ್ನದು ನಿನ್ನದೆನ್ನದೆ ನಮ್ಮದಾಗಿಸಿ ಸಂಸಾರವೆಂಬ ಈ ಬಾಳನೌಕೆಯನ್ನ ಸುಖವೆಂಬ ದಡಕ್ಕೆ ಸೇರಿಸಬೇಕಾಗಿದೆ, ಅದರತ್ತ ನನ್ನ ನೀ ಕೈ ಹಿಡಿದು ನಡೆಸೀಯೆಂಬ ಭರವಸೆ ನನಗಿದೆ. ಅಷ್ಟಕ್ಕೂ ಪ್ರೀತಿ ಎನ್ನೋದು “ನಾನು ಎಂಬುದನ್ನು ಬದಿಗಿಟ್ಟು ನನ್ನದೆಲ್ಲವೂ ನಿನ್ನದೆ ಎಂದು ಸಮರ್ಪಿಸಿಕೊಂಡು ನಿನ್ನೊಳು ನನ್ನನ್ನು ಕಾಣುವ ಹಂಬಲ” ಎಂಬುದು ನಮಗೆ ನಾವೆ ಪ್ರೀತಿಗೆ ಕೊಟ್ಟ ಹೊಸ ವ್ಯಾಖ್ಯಾನವೆಂದಾದ ಮೇಲೆ ಎಲ್ಲವೂ ಸಾಧ್ಯವೆನ್ನುವ ಭರವಸೆ ಮೂಡಿದೆ. ಅದಕ್ಕೆ ಇರಬೇಕು ಹಿರಿಯರು ಹೇಳಿರೋದು ಪುರುಷನ ಯಶಸ್ಸಿನ ಹಿಂದೆ ಹೆಣ್ಣು ಇರುತ್ತಾಳೆ ಎಂದು, ಆದರೆ ನಾವೂಂಚೂರು ಬದಲಾವಣೆ ಮಾಡ್ಕೊಳ್ಳೋಣ ನಿನ್ನ ಯಶಸ್ಸಿಗೆ ನಾ ಬೆನ್ನಲುಬಾಗಿರ್ತೀನಿ ನನ್ನ ಯಶಸ್ಸಿನ ಹಿಂದೆ ಎಂತೂ ನೀನಿರ್ತಿ ಅಲ್ಲವೆ. ಈ ಬದಲಾವಣೆ ನಿನಗೊಪ್ಪಿಗೆನಾ? ಒಪ್ಪಿಗೆಯೆಂದಾದಲ್ಲಿ ಒಂದ್ ಸ್ಮೈಲ್ ಬಿಸಾಕು ನೋಡುವ!!!! ನಿನ್ನ ಆ ಮುಗುಳ್ನಗೆಯನ್ನ ಹಂಗಂಗೆ ಕ್ಯಾಚ್ ಹಿಡಿಯೋ ಪ್ರಯತ್ನ ನನ್ನಿಂದ ನಡೆದೆ ಬಿಡಲಿ…… ಇನ್ನೇನು ಬೇಕು ನನಗೆ!!! ನಿನ್ನ ಮೊಗದಲ್ಲಿ ಮುಗುಳ್ನಗೆಯೊಂದು ಲಾಸ್ಯವಾಡುತ್ತಿದ್ದರೆ ಸಾಕು ಅದೆ ನನ್ನ ಜೀವ ಚೈತನ್ಯ.

ಏನು ಕೋರಿತಾನಪ್ಪ ಎಂದನ್ನುಕೊಳ್ಳುತಿದ್ದಿಯಾ? ಸಹಜ ಬಿಡು ಫಿಲಾಸಫಿ ಬಗ್ಗೆ ಮಾತಾಡೋದಕ್ಕೆ ಇನ್ನೂ ಟೈಮಿದೆ, ನಾವಿನ್ನೂ ಶಿಶುಗಳು ಎಂಬ ಭ್ರಮೆಯೊಳಗೆ ಬದುಕುತ್ತಿರೋರು ಈ ಭ್ರಮೆ ಒಂದಷ್ಟೂ ದಿನ ಹಂಗಂಗೆ ಮುಂದುವರೀಲಿ… ನೀನೊಪ್ಪಿದರೆ ಪ್ರೇಮಿಗಳ ಈ ದಿನದಂದು ಒಂದು ಜಾಲಿ ರೈಡ್ ಹೋಗ್ ಬರೋಣ, ಹಕ್ಕಿಯಂತೆ ಮುದ್ದಾಡೊ ಹಾರಾಡೊ ಪ್ರೇಮಿಗಳ ಕಂಡು ಅವರ ಕಣ್ಣಾಸೆಗಳ ದಿಟ್ಟೈಸಿ ಮನತುಂಬಿಕೊಳೋಣ, ಪ್ರೇಮಿಸುವದರ ವಿವಿಧ ಆಯಾಮಗಳನ್ನು ಕಂಡುಕೊಳೋಣ, ಹೊಸದನ್ನು ಪ್ರಯೋಗಿಸುತ್ತಾ ಕೂತು ಕಲಿಯೋಕೆ ನಾವೇನೂ ಪ್ರಯೋಗ ಶಿಶುಗಳೆ? ಅಲ್ಲವೆಂದಾದ ಮೇಲೆ ಕಂಡು ಕಲಿಯೋಣ, ಹೀಗನ್ನುತ್ತೇನೆ!!! ಆದರೂ ನಂಗೊತ್ತಿದೆ ನಮ್ಮ ಪ್ರೇಮವೆ ದೊಡ್ಡದೆಂದು ಅದು ಹೇಗೆಂದರೆ ಉಳಿದೆಲ್ಲರಕ್ಕಿಂತಲೂ ನೀನೆ ಸುಂದರವಾಗಿ ನನ್ನ ಕಣ್ಣಿಗೆ ಕಂಡಂತೆ. ಏನೂ ಗಿಪ್ಟ್ ಕೊಡಿಸುತ್ತೀಯೆಂದು ಕೇಳಿದೆಯಾ???? ಹೂಂ ನನ್ನನ್ನೆ ನಿನಗರ್ಪಿಸಿದ ಮೇಲೆ ಇನ್ನೆಂತದೂ ಗಿಪ್ಟ್ ಮಣ್ಣಂಗಟ್ಟಿ ಎಂದರೆ ಏನ್ ಜಿಪುಣನಪ್ಪಾ? ಎಂದು ನೀ ಮುನಿಸಿಕೊಳ್ಳಬಹುದು ಆದರೂ ಏಕಾಂತದಲ್ಲಿ ಕೂತು ಯೋಚಿಸಿದಾಗ ಇದು ಹೌದಲ್ಲವೆ ಎಂದು ಎನಿಸೋಸು ಸತ್ಯ ಅಲ್ವೆ. ಇರಲಿ ನಿನಗಿಷ್ಟವಾದ ಬೇಯಿಸಿದ ಜೋಳ, ಕಡ್ಲೆ ಕಾಯಿ ಕೊಡಿಸಿಯೇನೂ, ಸಂಜೆ ಒಂದೊಳ್ಳೆ ಮಸಾಲೆ ದೋಸೆ ಅರ್ಧ ಕಫ್ ಟೀ ಮೆಲ್ಲುತ್ತಾ ನೀನ್ಯಾವಾಗಲೂ ಆಶಿಸುವ ಟೆಡ್ಡಿಬೇರ್ ಒಂದನ್ನು ನೆನಪಿಗೋಸ್ಕರ ಕೊಡಿಸಿಯೇನೂ. ಸದ್ಯಕ್ಕೆ ನಿನ್ನವನಾದ ನನಗೆ ಇದಕ್ಕಿಂತಲೂ ಹೆಚ್ಚಿನದೇನೂ ಹೊಳೆಯುತ್ತಿಲ್ಲ, ಪ್ರೇಮಿಗಳ ಪಾಲಿನ ಈ ದಿನಕ್ಕೆ ಮಾತ್ರ ನಮ್ಮಲ್ಲಿಯ ಪ್ರೀತಿ ಸೀಮೀತವಾಗದೆ ಪ್ರತಿದಿನದ್ದಾಗಲಿ ಈ ಹಿಂದಿನಂತೆ ಕೊನೆಯವರೆಗೂ ಎನ್ನೂತ್ತಾ ನಿನ್ನ ಜೊತೆಗೂಡಿ ಪ್ರೇಮಿಗಳೆಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯ ಕೋರುತಿದ್ದೇನೆ.

ಕೊನೆ ಮಾತು:- ಪ್ರೀತಿಗೊಂದು ಅಳತೆ ಮಾಪನ ಇಲ್ಲದ ಇಂದುಗಳಲ್ಲಿ ಪ್ರಶ್ನೆ ಮಾಡ್ತೀಯಾ? ನನ್ನೆಷ್ಟೂ ಪ್ರೀತಿಸುತ್ತೀಯೆಂದು?
ಉಂಗುಷ್ಟದಿಂದ ನೆತ್ತಿವರೆಗೆ, ನನ್ನ ಹೃದಯವನ್ನೆ ನಿನ್ನದೆಂದು ಬರೆಸಿ, ಈ ಜೀವವ ನಿನಗಾಗಿಸುವಷ್ಟು ಪ್ರೀತಿಸುವೆ, ಒಪ್ಪಿಸಿಕೋ ಎಂಬುದಷ್ಟೆ ನನ್ನುತ್ತರ.

ಅತಿಯಾಯಿಯಿತು ಎನ್ನುತ್ತೀಯೇನೋ? ಸಮಸ್ಯೆಯೇನಿಲ್ಲ ನನ್ನ ಕಲ್ಪಿತ ಸುಂದರಿ ಲವರ್ಸೂ ಹಿಂದೆ ಕನಸಲ್ಲಿ ಕಾಡಿ ಹಿಂಗೆ ಅನುತಿದ್ದರೂ. ನೀನು ನನ್ನ ಪಾಲಿಗೆ ಕನಸನ್ನು ನನಸಾಗಿಸಿದ ಅರ್ಧಾಂಗಿ. ಅದುಕ್ಕಾಗೆ ನಾ ನಿನ್ನ ಹೇಳೋದು ನೀ ನನ್ನ ಹಳೆ ಲವರ್ರೂ ಹೊಸ ಹೆಂಡ್ತಿ ಎಂದು, ರೇಗಿಸದಂಗಾತ ಚಿಂತಿಸ್ಬೇಡ, ಕೆ ಎಸ್ ಎನ್ ರ ಈ ಗೀತೆಯ ಸಾಲನ್ನು ಗುನುಗುತಿದ್ದೇನೆ ಕೇಳಿಸಿಕೊಂಡು ನಸು ನಕ್ಕು ಬಿಡು….

ನಿನ್ನ ಪ್ರೇಮದ ಪರಿಯ
ನಾನರಿಯೆ ಕನಕಾಂಗಿ
ನಿನ್ನೊಳಿದೆ ನನ್ನ ಮನಸು…
ಹುಣ್ಣಿಮೆಯ ರಾತ್ರಿಯಲಿ
ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡು
ನಿನ್ನೊಳಿದೆ ನನ್ನ ಮನಸು…

ಇಂತು…
ನಿನ್ನ ಅನುದಿನದ ಪ್ರೇಮಿ.

-ರಾಘವೇಂದ್ರ ತೆಕ್ಕಾರ್

 


Tuesday, February 12, 2013

ಪ್ರೆಶ್ ಪ್ರೆಶ್ ಪ್ರೇಮ್ ಕಾವ್ಯ - ಚಾರ್ ಮಿನಾರ್


ಪ್ರೀತಿಸುವ ಜೀವಕ್ಕೆ ಕುಷ್ಠರೋಗ ಬಂದಿದೆ ಅಂದ್ರೂ ಪ್ರೀತಿಸ್ಬೇಕ್ರಿ ಕೊನೆ ತನ್ಕ.!!!! 

ಏಲ್ಲೋ ಇದ್ದವ್ರನ್ನು ಏನೇನೆಲ್ಲಾಗಿಸಿ ಅವ್ರ ಒಳಿತನ್ನು ಕಣ್ಣು ತುಂಬುಕೊಂಡು ತಾವೂ ಮಾತ್ರ ಹಾಗೆ ಇರುವ ಏಕೈಕ ಜೀವ ಎಂದ್ರೆ ನಮ್ಮನ್ನು ತಿದ್ದಿ ತೀಡಿ ಬೆಳೆಸಿದ ಮೇಷ್ಟ್ರುಗಳು ಕಣ್ರಿ!!!! 
ಇಂತವೆ ಗಿರಕಿ ಹೊಡೆಯೋ ಡೈಲಾಗ್ ಮಧ್ಯೆ ವ್ಯಕ್ತಿಯೊಬ್ಬನ ಏಳ್ಗೆಗೆ ಬೇಕಾದ ನಾಲ್ಕು ಸಂಬಂಧಗಳ ಸುತ್ತನೆ ಒಂದು ಕಥೆ ಕಟ್ಟಿಕೊಡುವ ಪ್ರಯತ್ನ ಚಾರ್ ಮಿನಾರ್ ಚಿತ್ರದ್ದು. ಸುಭದ್ರ ಜೀವನಕ್ಕೆ ಬೇಕಾದ ಈ ನಾಲ್ಕೂ ಪಿಲ್ಲರ್ಗಳು ಒಬ್ಬ ವ್ಯಕ್ತಿಗೆ ಸರಿಯಾಗಿ ದೊರೆತಲ್ಲಿ ಆತ ಯಶಸ್ಸು ಕಾಣಬಲ್ಲ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಸಮರ್ಪಕವಾಗಿದೆ ಮತ್ತೂ ಗೆದ್ದಿದೆ. 

ಸಣ್ಣ ಪುಟ್ಟ ಕೊರತೆಗಳ ಹೊರತಾಗಿಯೂ ಚಿತ್ರವೊಂದು ಪ್ರೇಕ್ಷಕನ ಜೀಬಿಗೆ ಸಂದ ಖರ್ಚಿಗೆ ನ್ಯಾಯ ಒದಗಿಸುತ್ತದೆ, ಹಳ್ಳಿ ಪರಿಸರದ ಚಿತ್ತಾರವನ್ನ ಚಂದ ಬಿಡಿಸಿಕೊಟ್ಟಿದ್ದಾರೆ ನಿರ್ದೇಶಕ ಚಂದ್ರು.ಅಲ್ಲಲ್ಲಿ ಒಂದಷ್ಟೂ ಕಥೆ ಎಳೆದಂತೆ ಭಾಸವಾದರೂ ಚಿತ್ರ ಕಥೆಯ ಮೇಲಿನ ಬಿಗಿ ಹಿಡಿತ ಈ ಕೊರತೆಯ ತೀವ್ರತೆ ಮನತಟ್ಟದಂದೆ ಮಾಸಿ ಬಿಡುತ್ತದೆ. 

ಚಿತ್ರದ ನಾಯಕನ ವಿಭಿನ್ನ ಗೆಟಪ್ಪುಗಳು ಹಾಗು ನಾಯಕ ಪ್ರೇಮ್ ನ ನವಿರು ನಟನೆ ಪ್ರೇಕ್ಷಕನಿಗೆ ಖುಷಿಕೊಡುತ್ತದೆ, ಈ ಚಿತ್ರದ ಮೂಲಕ ಪ್ರೇಮ್ ಗೊಂದು ಗಟ್ಟಿ ಬ್ರೇಕ್ ಸಿಕ್ಕಿದೆ ಎಂದರೆ ಅತಿಶಯೋಕ್ತಿ ಅನಿಸಲಾರದು.ಚಿತ್ರದ ನಾಯಕಿ ಮೇಘನಾದ್ದು ಮೊದಮೊದಲು ಚೆಲ್ಲು ಚೆಲ್ಲು ಚೆಲುವಿನಾಟವಾಗಿದ್ದರೆ ಚಿತ್ರ ಕ್ಲೈಮ್ಯಾಕ್ಸ್ ತಲುಪುತಿದ್ದಂತೆ ಜೀವನದ ಏಳು ಬೀಳಿನ ಚಿತ್ರಣ ಕೊಡುವ ಗಂಭೀರತೆಗೆ ತಲುಪುವ ಚೆಲುವಿನ ಪಾತ್ರ.ತಮ್ಮ ತಮ್ಮ ಪಾತ್ರಕ್ಕಂತೂ ಇಬ್ಬರೂ ನ್ಯಾಯ ಒದಗಿಸಿದ್ದಾರೆ. 

ನಮ್ಮ ಉನ್ನತಿಗೆ ಮೂಲ ಕಾರಣೀಭೂತರಾದ ಗುರುಗಳು ಹಾಗೂ ತಾ ಕಲಿತ ಶಾಲೆಯು ಒಂದು ಅಂತಸ್ತು ತಲುಪಿದ ಮೇಲೆ ನೆನಪಾಗಿ ಆ ಮೂಲಕ ಹಳೆಯ ಸಹಪಾಠಿಗಳೆಲ್ಲ ಮತ್ತೆ ಸೇರುವ ಒಂದು ಕಾರ್ಯಕ್ರಮ ಈ ಚಾರ್ ಮಿನಾರ್ ಚಿತ್ರದ ಮೇಲ್ನೋಟದ ಒಂದೆಳೆಯ ಕಥೆ, ಸಹಜವಾಗಿ ಶಾಲ ದಿನಗಳ ಬಾಲ್ಯ,ಇಡ್ಲಿ ತಿನಿಸುವ ಅಜ್ಜಿ, ಕುರಿ ಕಾಯ್ವ ಚಿತ್ರದ ನಾಯಕನ ತಂದೆ,ಇದೆಲ್ಲವಕ್ಕಿಂತ ಮುಖ್ಯವಾಗಿ ತನ್ನ ಸಹಪಾಠಿ ಚಿತ್ರದ ನಾಯಕಿ ರಾಧೆ ಆಕೆಯ ಉತ್ತೇಜನದಿಂದ ನಾ ಪಡೆದ ಇಂದಿನ ಸ್ಥಾನ ಎಲ್ಲವೂ ಚಿತ್ರದ ನಾಯಕ ಮೋಹನನೀಗೆ ನೆನಪಾಗೋದು ಆ ಮೂಲಕ ಚಿತ್ರ ಪ್ರೇಕ್ಷಕನೆದುರು ತೆರೆದುಕೊಳ್ಳುವದು ಈ ಕಾರ್ಯಕ್ರಮಕ್ಕೆ ಅಮೇರಿಕದಾ ಕಂಪೆನಿಯೊಂದರಲ್ಲಿ ಸಿಇಓ ಆಗಿರುವ ಈತ ಬರುವ ದಾರಿಯಲ್ಲೆ…… ಮುಂದಿನದ್ದು ಶಾಲೆಯ ಆ ಕಾರ್ಯಕ್ರಮ ಬಾರದ ರಾಧೆ….., ಕೊನೆಗೂ ಒಂದಾಗೋ ರಾಧಾ-ಮೋಹನರ ಅತ್ಯದ್ಬುತ ಕ್ಲೈಮ್ಯಾಕ್ಸ್. ಪ್ರೀತಿ ಎಂತಿದ್ದರೂ ಪ್ರೀತಿನೆ ಎಂಬ ಚಂದ್ರು ಅಂಬೋಣಕ್ಕೆ ಪ್ರೇಕ್ಷಕ ಫುಲ್ ಖುಷ್, ತುಂತುರು ಮಳೆ ಒಮ್ಮಲೆ ಭೋರ್ಗರೆದು ನಿಂತ ಅನುಭವಕ್ಕೆ ಪ್ರೇಕ್ಷಕನ ಮೌನದುತ್ತರ. 

ನವಿರು ಗೀತೆಗೆ ಜೊತೆಯಾಗಿದ್ದು ಹರಿಕೃಷ್ಣರ ಸೊಗಸಾದ ಸಂಗೀತ. ಲೋಕೇಶರ ಸಾಹಿತ್ಯ ತುಸು ಹೊಸ ಬಗೆಯದ್ದು ಎನಿಸಿದರೂ ಪ್ರೇಕ್ಷಕನೆದೆಗೆ ನಾಟುವಂತದ್ದು.ಚಂದ್ರಶೇಖರ್ ಕೆಮಾರಾ ವರ್ಕ್ ಕೂಡ ಚೆಂದಕ್ಕಿದೆ. ಹಾಟ್ ಹಾಟ್ , ಹೈ ಫೈ ಲವ್ ಸ್ಟೋರಿ ಅಲ್ಲದಿರಬಹುದು ಆದರೆ ಪ್ರೀತಿಯ ಜೊತೆ ಜೊತೆಗೆ ಇದರ ಸುತ್ತಲೂ ಗುರುಗಳು ಹೆತ್ತವರೂ ಸ್ನೇಹಿತರೂ ಎಂಭ ಪಿಲ್ಲರ್ಗಳನ್ನೂ ಕಟ್ಟಿಕೊಟ್ಟು ಕಥೆಯಾಗಿಸಿದ ಚಾರ್ ಮಿನಾರ್ ಪ್ರೀತಿಯ ಹೊಸ ಆಯಾಮವನ್ನು ಕೊಡುವ ಪ್ರೇಮಕಾವ್ಯವಾಗಿ ದಕ್ಕುವದರಲ್ಲಿ ಸಂದೇಹವಿಲ್ಲ, ಪ್ರೇಮಿಗಳ ದಿನ ಬೇರೆ ಹತ್ತಿರದಲ್ಲಿದೆ. ಜೋಡಿಯಾಗಿ ಹೋಗಿ ನೋಡ್ಬನ್ನಿ,ಪ್ರೇಮಿಗಳು ಅಷ್ಟೆ ಏಕೆ? ಒಂದು ಪ್ರೆಶ್ ಕಥೆ ಬೇಕು ಎಂದು ಬಯಸೋ ಎಲ್ಲಾ ಮಂದಿ ಹೋಗಿ ಕುಳಿತು ಅನಂದ ಪಡೋ ಚಿತ್ರ ಚಾರ್ ಮಿನಾರ್. ಚಿತ್ರ ನೋಡುತ್ತಾ ನೀವು ನಿಮ್ಮ ಪ್ಲಾಶ್ ಬ್ಯಾಕ್ ಬಾಗಿಲನ್ನು ತೆರೆದುಕೊಂಡು ಚಿತ್ರ ಸವಿಯಲಾಗಲಿಲ್ಲ ಕಥೆ ಏನೆಂದು ತಿಳೀಲಿಲ್ಲ ಎಂದು ಕೊರಗಿಕೊಂಡೀರಿ ಜೋಕೆ.

Saturday, February 2, 2013

ನಾನು ಬರೆದೇನೂ!!! (ದೊಡ್ಡ ಬರಹಗಾರನಲ್ಲದೋನ ಮಾತುಗಳು)

ಎಷ್ಟೊ ದಿನಗಳ ನಂತರ ಲೇಖನಿ ಹಿಡಿದಿದ್ದೆ ಒಂದಷ್ಟೂ ಏನನ್ನೋ ಬರೆದೆ ಕೂಡ. ಆದರೆ ಯಾಕೊ ಮನಸಿಗೊಪ್ಪುವಂತದ್ದೇನೂ ಬರೆಯಲೆ ಆಗುತ್ತಿರಲಿಲ್ಲ.ಭಯ ಶುರುವಾಯಿತು ಎಲ್ಲ ಮರೆತೆ ಬಿಟ್ಟನೆಂದು. ಮತ್ತೊಮ್ಮೆ ಕೊನೆಯ ಭಾರಿಗೆ ಪ್ರಯತ್ನಿಸೋಣವೆಂದು ಏನೋ 2 ಸಾಲು ಗೀಚಿದೆ, ಅದು ಹಾಗೆ ಮುಂದುವರಿಯೋದ,….. ಒಂದರ್ಧ ಘಂಟೆ ಹಂಗೆ ಬರಿಯುತ್ತಾನೆ ಹೋದೆ ಕೊನೆಗೆ ನೋಡುತ್ತೇನೆ ತಕ್ಕ ಮಟ್ಟಿಗೆ ನನಗೆ ಹಿಡಿಸುವಂತಹ ಒಂದು ಸಣ್ಣ ಕಥೆ ಬರೆದು ಮುಗಿಸಿದ್ದೆ.ನನಗೆ ಆಶ್ಚರ್ಯ… ಕಾರಣ ನಾ ಕಥೆ ಬರೆಯಲೆಂದಾಗಲಿ ಲೇಖನ ಬರೆಯಲೆಂದಾಗಲಿ ಕುಳಿತಿರಲಿಲ್ಲ ಆದರೂ ಒಂದು ಪ್ರಕಾರದಲ್ಲಿ ಬರೆದು ಮುಗಿಸಿದ್ದೆ, ಆ ಬರವಣಿಗೆಯ ರೀತಿ ಹೀಗಿತ್ತು…. 

ಉದಾಹರಣೆಗಾಗಿ ಮಾತ್ರ ಹಿಂಗೊಂದು ಸಂಭವವನ್ನು ನೀಡುತ್ತಿರುವೆ,,,,,, 

ಸುಮ್ಮನೆ ಒಂದು ಸಾಲು ಬರೆದೆ ಅದೆನೆಂದರೆ “ಅವನು ಕಾಡಿಗೆ ಹೋದ” 

ಹಿಂಗೆ ಬರೆದಾಗ ಮತ್ತೊಂದು ಪ್ರಶ್ನೆ ಕೇಳಿಕೊಂಡೆ ಅವನು ಹೇಗಿದ್ದ? 

ಸ್ಥುರದ್ರೂಪಿಯಾಗಿದ್ದರೂ ನೀಟಾಗಿ ಉಡುಪು ಧರಿಸಿರಲಿಲ್ಲ, ತಲೆ ಬಾಚದೆ ಅದೆಷ್ಟೋ ವರುಷವಾಗಿತ್ತು, 

ಅಬ್ಬ 2 ಲೈನ್ ಬರೆದು ಮುಗಿಸಿದೆ, ಸ್ವಲ್ಪ ಖುಷಿಯಾಯಿತು, ಅಷ್ಟೆ ಸಾಕೆ? ಮುಂದುವರಿಸಬೇಕಲ್ಲ, ಹೆಂಗೆ ಮುಂದುವರಿಸಲಿ, ಸರಿ ಅವನು ಯಾರು? ಅನ್ನೊದನ್ನ ಕಟ್ಟಿಕೊಡೋಣ ಎಂದುಕೊಂಡೆ.. 

ಆತನ ಬಗ್ಗೆ ತಿಳಿದರೆ ಆಶ್ಚರ್ಯವಾದೀತೂ, ಆತ ಆ ಊರ ಶ್ರೀಮಂತ ಮನೆತನದ ಒಬ್ಬ ಹುಡುಗ, ಹೆಸರು ಆದಿತ್ಯ…. 

ಇಷ್ಟು ಬರೆದು ಮುಗಿಸಿದಾವಾಗ ತಲೆಯಲ್ಲಿ ಹೆಂಗೆಲ್ಲಾ ಕಥೆ ಹೆಣಿಯಬಹುದು ಎಂಬ ಚಿತ್ರಣ ರೂಪುಗೊಂಡಿತು. ಕಾಡಿಗೆ ಹೋದ ಉದ್ದೇಶ? ಹೋಗಿ ಮಾಡುವಂತ ಕಾರ್ಯ? ಹೋಗಲು ಕಾರಣವಾದ ಅಂಶ?ಶ್ರಿಮಂತಿಕೆಯ ಬಗ್ಗೆ ಬೇಸರ ಹುಟ್ಟಿದ್ದಕ್ಕೋ?ಕೈ ಕೊಟ್ಟ ಪ್ರೀತಿ ಸಂಬಂಧವೋ? ಇವೆಲ್ಲದರ ಜೊತೆಗೆ ಕಥೆಯಿಂದ ಓದುಗನಿಗೆ ಏನು ಮೆಸೇಜ್ ಕೊಡಬಹುದು?ಎಂಬಿತ್ಯಾದಿ ಪ್ರಶ್ನೆ ನನ್ನೊಳಗೆ ರೂಪುಗೊಂಡವು. ಬಹುಶಃ ಈ ಪ್ರಶ್ನೆಗಳಿಗೆ ಉತ್ತರವೆಂಬಂತೆ ಬರೆಯುತ್ತಾ ಹೋದಲ್ಲಿ ಸೊಗಸಾದ ಕಥೆ ರೂಪ ಪಡೆಯೋದು ಗ್ಯಾರೆಂಟಿ. ಮೊದಲಿಗೆ ನಾನೊಂದು ಕಥೆ ಬರೆದೆ ಎಂದೆನಲ್ಲ? ಅದು ಈ ರೀತಿಯಾಗೆ ರೂಪುಗೊಂಡಿದ್ದು. 

ನನಗೊತ್ತಿಲ್ಲ ಬರೆಯೋದು ಎಂತೆಂದು? ಆದರೆ ನಾ ಬರೆಯೋದು ಇಂತು, ಸಿದ್ದತೆ ಮೂಲಕ ಬರೆಯೋದು ಒಂದು ತೆರನಾದಲ್ಲಿ ನಮ್ಮ ಬರವಣಿಗೆಯೆ ನಮ್ಮನ್ನ ಬರೆಸಿಕೊಂಡು ಸಾಗೋದು ಇಂತು ಎಂಬುದಷ್ಟನ್ನೆ ಹೇಳುತ್ತಲಿರುವೆ.ಬರವಣಿಗೆ ಇಷ್ಟು ಸುಲಭವೆ? ಹೌದು ಬರವಣಿಗೆಯ ಕಲೆ ಒಂದು ಸಲ ರೂಡಿಸಿಕೊಂಡರೆ ಬರವಣಿಗೆ ಕಷ್ಟದಾಯಕವಾದುದೇನಲ್ಲ, ಮೊದ ಮೊದಲಿಗೆ ಓದುಗನಿಗೆ ತುಂಬಾ ಹತ್ತಿರವಾಗುವಂತ ಬರಹವನ್ನು ಆ ಬಗೆಯ ವಿಷಯ ಇದ್ದಾಗಿಯೂ ಕೊಡಲು ಕಷ್ಟವಾದರೂ ಬರೆಯುತ್ತಾ ಬರೆಯುತ್ತಾ ಬರವಣಿಗೆ ಪಕ್ವತೆಯ ಪಡೆಯುವದನ್ನು ನಮಗೆ ನಾವೆ ಕಾಣಬಹುದು. ನಮ್ಮ ಸುತ್ತಲಿನ ಆಗು ಹೋಗುಗಳ ಬಗ್ಗೆ ನಮ್ಮೊಳಗೆ ಕೆಲವು ವಿಚಾರಧಾರೆಗಳು ನಮ್ಮದೆ ಆದ ಅಭಿಪ್ರಾಯಗಳು ರೂಪುಗೊಳ್ಳುತ್ತಿರುತ್ತದೆ, ಆ ನಮ್ಮ ಮನಸ್ಥಿತಿಯನ್ನೆ ಬರವಣಿಗೆಗೆ ಇಳಿಸಿದರಾಯಿತು, ಒಂದಷ್ಟು ಓದೊ ಹವ್ಯಾಸ ಜೊತೆಗಿದ್ದರೆ ಬರವಣಿಗೆ ಇನ್ನೂ ಸುಲಭ. 

ಬರವಣಿಗೆ ಎಂದರೆ ಮನದಲ್ಲಿ ನಡೆಯೋ ಪ್ರಶ್ನೋತ್ತರದ ಒಟ್ಟು ಪರಿಕಲ್ಪನೆ.ಒಂದು ಲೇಖನ ಬರೆದು ಮುಗಿಸಬೇಕಾದರೆ ಮನದೊಳಗೆ ಹತ್ತು ಹಲವು ಪ್ರಶ್ನೋತ್ತರ ನಡೆಯುತ್ತೆ ಈ ಮೂಲಕ ನಮ್ಮ ಚಿಂತನೆ ಒಂದು ಸ್ಪಷ್ಟತೆಯನ್ನು ಪಡೆಯುತ್ತದೆ ಎಂದರೂ ಅತಿಶಯೋಕ್ತಿ ಆಗಲಾರದು.ಆದರೆ ಈ ಪ್ರಶ್ನೋತ್ತರಕ್ಕೆ ವಿಷಯ ಸಂಬಂಧಿತವಾಗಿ ಒಂದು ಚೌಕಟ್ಟು ನಮಗೆ ನಾವೆ ಹಾಕಿಕೊಂಡು ಬರೆಯಬೇಕಾಗುತ್ತದೆ, ಇಲ್ಲವೆಂದಾದಲ್ಲಿ ಲೇಖನದ ವಿಷಯ ಯಾವ ಸಂಬಂಧಿತವಾಗಿ ಬರೆಯುತಿದ್ದೇವೊ ಅದು ಹೈಲೈಟ್ ಆಗದೆ ಲೇಖನಕ್ಕೊಂದು ಸ್ಪಷ್ಟ ರೂಪ ಸಿಗೋದು ಅಸಾಧ್ಯ ಯಾವುದೇ ಪ್ರಕಾರದ ಬರವಣಿಗೆಯೆ ಆಗಿರಲಿ ಬರೆದು ಮುಗಿಸಿದಾಗ ಮನಸ್ಸು ನಿರಾಳಗೊಳ್ಳುತ್ತದೆ, ಕಾರಣ ಇಷ್ಟೆ ನಮ್ಮ ಮನದೊಳಗಿನ ವಿಚಾರಗಳು ಪ್ರಶ್ನೋತ್ತರಗಳ ಮೂಲಕ ನಮ್ಮೊಳಗೆ ಚರ್ಚಿತಗೊಂಡು ಒಂದು ಅಂತ್ಯವನ್ನು ಕಂಡಿರುತ್ತದೆ , ಅಂದರೆ ಆ ವಿಚಾರ ಹಾಗೂ ಅದು ಕೊನೆಯಾಗಬೇಕಾದ ಬಗೆ ಎರಡೂ ಸ್ಪಷ್ಟಗೊಂಡಿರುತ್ತದೆ .ಇದೆಲ್ಲದರ ಒಟ್ಟು ಫಲಿತಾಂಶವೆ ನಿಮ್ಮ ಮನ ನಿರಾಳತೆ ಪಡೆಯುವದು ಆ ಮೂಲಕ ಪ್ರಪುಲ್ಲಗೊಳ್ಳುವದು. ಆದುದರಿಂದ ನಮ್ಮಯ ಬರವಣಿಗೆ ಇತರರೀಗೆ ಎಷ್ಟು ಹಿಡಿಸುತ್ತೋ ಬಿಡುತ್ತೊ ಅದು ಆಮೇಲಿನ ಪ್ರಶ್ನೆ ಆದರೆ ನಮಗೆ ಲಾಭದಾಯಕವಾಗಿ ಉಪಕಾರಿಯಾಗುವದಂತು ದಿಟ.ಒಂದು ವೇಳೆ ಓದುಗನಿಗೆ ಹಿಡಿಸಿಲ್ಲವೆಂದರೆ ಏನೂ? ಬರವಣಿಗೆ ನಿಮ್ಮನ್ನೊಮ್ಮೆ ಕೈ ಹಿಡಿಯೋದಷ್ಟೆ ಬೇಕಾಗಿರೋದು ಆಮೇಲಿದ್ದು ಓದುಗ ನಿಮ್ಮ ಬರವಣಿಗೆಯನ್ನು ಎದುರು ನೋಡೊದಷ್ಟೆ ಉಳಿಯೋದು. ನಾನು ಬರೆಯೋದು ನನಗಾಗಿ ಎಂದು ನಾ ಬಹಳಷ್ಟು ಸಾರಿ ಹೇಳಿಕೊಂಡಿರೋದು ಮೇಲಿನ ಕಾರಣಗಳಿಗಾಗಿ. 

ಪ್ರಾಥಮಿಕ ಶಿಕ್ಷಣ ಪಡೆಯುತ್ತಿರಬೇಕಾದರೆನೆ ನಮ್ಮ ಶಾಲೆಯ ಟೀಚರ್ಗಳು ಪ್ರಬಂಧ,ಕಥೆ ಅದಕ್ಕಾಗಿ ಅಲ್ಲಿ ಇಲ್ಲಿ ನಡೆಯುವ ಸ್ಪರ್ಧೆಗಳಿಗೆ ನಮ್ಮನ್ನು ಸಿದ್ದಗೊಳಿಸಿ ಕರೆದುಕೊಂಡು ಹೋಗೊ ಪರಿಪಾಠಗಳಿತ್ತು. ಇಂದು ಈ ನಿಟ್ಟಿನ ಶಿಕ್ಷಣ ಎಷ್ಟರ ಮಟ್ಟಿಗೆ ಜೀವಂತವಿದೆ ಅನ್ನೊದು ನಾ ತಲೆ ಕೆಡಿಸಿಕೊಳ್ಳದ ವಿಚಾರ.ಬಹುಶಃ ಆ ರೀತಿಯ ಅಂದಿನ ನಮ್ಮ ಚಟುವಟಿಕೆಗಳು ಇಂದು ಕೂಡ ನಮ್ಮೊಳಗೆ ಹಾಸುಹೊಕ್ಕಾಗಿರೊ ಫಲಿತಾಂಶವೆ ನಮ್ಮ ಬರವಣಿಗೆಗಳು. ಇಂದೆನಾದರೂ ಪುಸ್ತಕ ಓದೊ ಹವ್ಯಾಸ,ಬರವಣಿಗೆಯ ಆಸಕ್ತಿ ನನ್ನಲ್ಲಿದ್ದರೆ ಇದರ ಕ್ರೆಡಿಟ್ ಸೇರಬೇಕಾಗಿರೋದು ನನ್ನನ್ನು ಈ ರೀತಿಯಾಗಿ ರೂಪಿಸಿದ ನನ್ನ ಗುರುಗಳಿಗೆ ಹಾಗೂ ದಂಡಿಯಾಗಿ ಪುಸ್ತಕ ತಂದು ಸುರಿದು ಓದೆನ್ನುತಿದ್ದ ನನ್ನ ಹೆತ್ತವರೀಗೆ.ಸಾಮಾನ್ಯ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೆ ಓದಿರಬಹುದು, ಹೈ ಪೈ ಶಾಲೆಯ ಬಾಗಿಲು ಕೂಡ ಮುಟ್ಟಿ ನೋಡದಿರಬಹುದು ಆದರೆ ಅದುಕ್ಕಿಂತ ಹೆಚ್ಚಿನದನ್ನು ಈ ಶಾಲೆ ನಮಗೆ ಕೊಟ್ಟಿದೆ, ನಾ ಪಡೆದ ಶಿಕ್ಷಣ ಇಂಜಿನಿಯರ್ ಡಾಕ್ಟರ್ ಗಿರಿ ಸಂಪಾದಿಸಲು ( ನನ್ನ ಮಟ್ಟಿಗೆ ಮಾತ್ರ, ಕನ್ನಡ ಶಾಲೆಯಲ್ಲಿ ಕಲಿತ ಅತೀ ಹೆಚ್ಚಿನ ಮಂದಿ ಈ ಗಿರಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ) ಕಷ್ಟದಾಯಕವಾಗಿದ್ದಿರಬಹುದು ಆದರೆ ನಾ ಪಡೆದ ಶಿಕ್ಷಣ ನನಗೆ ಜೀವನ ಕ್ರಮ ಕಲಿಸಿಕೊಟ್ಟಿದೆ, ಅದರ ಫಲವೆ ನಮ್ಮೊಳಗೆ ಹುಟ್ಟುವ ವಿಚಾರಧಾರೆ, ಅದ ಪ್ರಸ್ತುತಪಡಿಸಲು ನಾ ಕಂಡುಕೊಂಡಿರೊ ಮಾರ್ಗವೆ ಬರವಣಿಗೆ. 

ನಮ್ಮಯ ಕಿರಿಯರೀಗೆ, ನಮ್ಮ ಮಕ್ಕಳೀಗೆ ಆಸ್ತಿ ಮಾಡಿ ಕೊಡಲಾಗಲಿಲ್ಲವೆಂದರೂ ಸರಿ ಜ್ಞಾನ ಆ ಮೂಲಕ ಚಿಂತನೆಗೆ ತೆರೆಯಬಲ್ಲುದಾದ ಮನಸ್ಸು ಅವರಿಗೆ ಮೂಡುವಂತೆ ಮಾಡೋಣ, ಆ ಮೂಲಕ ದೊಡ್ಡ ಆಸ್ತಿಯನ್ನಾಗಿ ಅವರನ್ನೆ ರೂಪಿಸೋಣ. ಹೆಚ್ಚೆಚ್ಚು ಪುಸ್ತಕ ಓದುವ ಹವ್ಯಾಸ ಅವರಲ್ಲಿ ಮೂಡುವಂತೆ ಮಾಡೋದು ಇದಕ್ಕಿರುವ ಸುಲಭ ದಾರಿ. 

ನೀವೇನೊ ತಿಳುಕೊಂಡಿದ್ದೀರಿ!!! ಬರೀತೀರಿ, ನಾವ್ ಲೋಕಲ್. ಅಂತ ನನ್ನ ಗೆಳೆಯನೊಬ್ಬ ನೀ ಇಷ್ಟೆಲ್ಲಾ ಮಾತಾಡ್ತಿ ಏನಾದರೂ ಬರಿಯಕ್ಕೆ ಟ್ರೈ ಮಾಡ್ಬಾರ್ದಾ ಎಂದು ನಾ ಹೇಳಿದಾಗ ನನ್ನ ಕಿಂಡಲ್ ಮಾಡಿದ ರೀತಿ… 

ನನ್ನುತ್ತರ ಹೀಗಿತ್ತು ಲೋಕಲ್ ಜೊತೆ ಲೋಕಲ್ ಆಗಿ ಚಿಂತಿಸಿದಾವಾಗಲೆ ಬರವಣಿಗೆ ಸುಲಭ ಸಾಧ್ಯ ಎಂದು.. 

ನನ್ನ ಮಟ್ಟಿಗೆ ನಾನೇನೋ ಜೀನಿಯಸ್ ಎಂದು ಮನುಷ್ಯ ಸಂಬಂಧದಿಂದ ದೂರವಾಗಿ ಏನನ್ನೊ ಬರೆಯಲು ಸಾಧ್ಯವಿಲ್ಲ, ಏನಾದರೂ ಬರೆಯೋದಾದರೆ ಫಿಲಾಸಫಿ ಬರೆದಾನೂ ಎಂದನ್ನುಕೊಳ್ಳುವಂತಲೂ ಇಲ್ಲ ಕಾರಣ ಅದು ಬರೆಯಕ್ಕೂ ಜಗತ್ತಿನೊಳಗೆ ಬೆರೆತ ಅನುಭವವಿರಬೇಕು, ಆದುದರಿಂದ ಬರವಣಿಗೆ ಎಂಬುದು ಎಲ್ಲರೊಂದಿಗೆ ಒಂದಾದೋರ ಆಸ್ತಿ,ಅದೇನೂ ಹಂಗಂಗೆ ಮಳೆಯಂತೆ ಮೇಲಿಂದ ಉದುರೋವಂತದ್ದಲ್ಲ.ಬರಹಗಾರ,ದೊಡ್ಡ ಹೆಸರು ಮಾಡಬೇಕು ಎಂದೆಲ್ಲಾ ಇಲ್ಲದ್ದು ಅನಿಸಿಕೊಳ್ಳುವ ಹಂಬಲ ಬಿಟ್ಟು ಮನದೊಳಗಿನ ತುಮುಲಗಳನ್ನು ಹೊರಗೆಡವುತ್ತಾ ರಿಪ್ರೆಶ್ ಆಗುವದಕ್ಕಾದರೂ ಬರೆಯೋಣ, ಸಮಾಜದಲ್ಲಿನ ಜನತೆ ಹೆಚ್ಚೆಚ್ಚು ಪುಸ್ತಕ ಓದುವಂತಾಗಲಿ ಬರೆಯಲಾರೆ ಎಂದು ಕೂತೋರು ನಾನು ಬರೆದೇನೂ!!! ಕೊನೆ ಪಕ್ಷ ಸಣ್ಣ ಪ್ರಯತ್ನ ಆ ಬಗ್ಗೆ ಮಾಡೋಣ ಎಂದು ಕಾರ್ಯೋನ್ಮುಖವಾದಾರೂ!!! ಎಂಭ ಆಶಯ ನನ್ನದು.ಹೌದು ಬರವಣಿಗೆ ಎನ್ನೋದು ಬರಿಯುತ್ತಾ ಹೋದಂತೆ ಬೆಳೆಯುತ್ತೆ ಜೊತೆ ಜೊತೆಗೆ ನಮ್ಮನ್ನೂ ಬೆಳೆಸುತ್ತೆ.

Wednesday, January 30, 2013

ಹಳ್ಳಿ ರುಚಿ.....

ಕುಂಟಾಲ ಚಿಗುರು, ನೇರಳೆ ಚಿಗುರು, ಎಂಜಿರದ ಚಿಗುರು,ಪೇರಳೆ ಚಿಗುರು,ಮಾದರಿ ಚಿಗುರು ಹೀಗೆ ಒಂದಷ್ಟು ಚಿಗುರು ತಂದು ಬೇಯಿಸಿ ಮಾಡಿದ ಚಟ್ನಿಯ ಜೊತೆ ಮರಳು ಮರಳಾದ ದನದ ತುಪ್ಪ ಸೇರಿಸಿ ಕಲಿಸಿದ ಅನ್ನದ ತುತ್ತ ತಿಂದ ಬಾಯಿ ರುಚಿ ಪೇಟೆಯ ಹೈ ಫೈ ಊಟವನ್ನೂ ಉಣ್ಣೆಂದಾವಾಗ ಒತ್ತಾಸೆಗೆ ಮಣಿದು ಹಸಿವ ನೀಗಿಸ ಸಲುವಾಗಿ ಅಷ್ಟೆ ಒಂದಷ್ಟನ್ನೂ ಕಷ್ಟದಿಂದ ತಿನ್ನುತ್ತೆ.ಮಜ್ಜಿಗೆ ಹುಳಿ, ಪುನಾರ್ಪುಳಿ ಸಾರು,ಕಾಯಿ ಸಾಂಬಾರ್, ದಾಳಿ ತೋವೆ,ಬೋಳು ಹುಳಿ ರುಚಿಕಟ್ಟಿನ ಎದುರು ನಾರ್ತ್, ಸೌತ್ ಇಂಡಿಯನ್ , ಚೈನೀಸ್ ಇತರ ತರೆವಾರಿ ವೆಚ್ಚಭರಿತ ಫೈವ್ ಸ್ಟಾರ್ ಹೋಟೇಲ್ ಊಟಗಳೂ ಕೂಡ ಸಪ್ಪೆ ಎನಿಸಿ ಬಿಡುತ್ತವೆ.ತರೇವಾರಿ ತಂಬಳಿಗಳು,ವಿಧವಿಧವಾದ ಚಟ್ನಿಗಳು,ಬಾಳೆದಿಂಡು, ಬಾಳೆಕಾಯಿ, ಕುಂಬಳಕಾಯಿ ಸಿಪ್ಪೆಯನ್ನೂ ಬಿಡದ ಪಲ್ಯಗಳು ಹೀಗೆ ತರೇವಾರಿ ಹಳ್ಳಿ ಊಟದ ಡಿಶ್ ಗಳು ಇತರ ಎಲ್ಲಾ ಆಧುನಿಕ ಸಸ್ಯಾಹಾರಿ ಊಟಗಳನ್ನೂ ಮೀರಿಸಿ ನಿಲ್ಲುತ್ತವೆ.ಪತ್ರೋಡೆ, ಪುಂಡಿ, ಗಟ್ಟಿ, ಸೆಕೆ ಉಂಡೆ,ಕೊಟ್ಟಿಗೆ, ಕಡುಬು,ನೀರ್ ದೋಸೆ,ಸೇಮಿಗೆ ಹೀಗೆ ವಿಧ ವಿಧವಾದ ಬ್ರೇಕ್ ಪಾಷ್ಟ್ ಅಕ್ಕಿ ತಿಂಡಿಗಳೂ ಕೂಡ ಕಡಿಮೆ ರುಚಿಕಟ್ಟಿದ್ದೆನಲ್ಲ,ಸೀಸನ್ ಗೆ ತಕ್ಕಂತೆ ಬದಲಾಗೋ ಈ ತಿಂಡಿಗಳು ಅರೋಗ್ಯದ ಕಡೆಗೆ ಗಮನ ಕೊಟ್ಟು ಸಂಪ್ರದಾಯಿಕವಾಗಿ ರೂಪುಗೊಂಡಂತವು ಎನ್ನುವದನ್ನು ನಾವು ಗಮನಿಸಬೇಕಾದ ಅವಶ್ಯಕತೆಗಳಲ್ಲೊಂದು. ಇದೆಲ್ಲವೂ ಕರಾವಳಿಯ ಊಟ ತಿಂಡಿಯ ಮೆನುಗಳ ಸ್ಯಾಂಪಲ್ಗಳು. 

ಕರಾವಳಿಯ ಹಳ್ಳಿಗಳು ಎಂದರೆ ಸುಮ್ಮನೆ ಒಂದು ಎತ್ತರದ ಗುಡ್ಡ ಹತ್ತಿ ನೋಡಿದಲ್ಲಿ ಕಾಣಸಿಗುವ ಅಡಿಕೆ ತೆಂಗು ತೋಟಗಳು ಎಂದು ಮೇಲ್ನೋಟಕ್ಕೆ ಬಣ್ಣಿಸಬಹುದೇನೊ. ಆದರೆ ಆ ತೋಟದೊಳಗಿನ ಹಲಸು, ಮಾವು, ನುಗ್ಗೆ, ಗೇರು, ಬಿಂಬಳೆ, ಜಾಯಿಕಾಯಿ, ಬೇರು ಹಲಸು, ಅಮಟೆ, ಚಿಕ್ಕು, ನುಗ್ಗೆ, ಪಪಾಯ, ಸಾಂಬಾರ ಬೇವು ಮುಂತಾದ ಹಸಿರ ಸಮ್ಮೇಳನದೊಳಗೆ ದೊಡ್ಡ ಮರಗಳು ಆವರಿಸಿಕೊಂಡ ಕಾಳು ಮೆಣಸು, ವೀಳ್ಯದೆಲೆ ಬಳ್ಳಿಗಳು, ಮಟ್ಟಕೆಸ, ಸಿಹಿ ಗೆಣಸು, ಮರಗೆಣಸು, ನೇಗಿಲ ಗೆಣಸು, ಕೆಂಪು ಗೆಣಸು, ಬಿಳೆ ಗೆಣಸು, ಹೆಡಗೆ ಗೆಣಸು, ಪಂಜರ ಗಡ್ಡೆ, ಕರಿ ಕೆಸ, ಬಾಂಬೆ ಕೆಸ, ಊರ ಕೆಸ, ಬಿಳಿ ಕೆಸ, ಚೀಪು ಹೀಗೆ ಬೇರು ಬಿಟ್ಟ ಗೆಡ್ಡೆಗಳು ತೊಟದುದ್ದಕ್ಕೂ ಕಾಣ ಸಿಗುವಂತದ್ದೂ , ಇದೆಲ್ಲದರ ಉಪಯುಕ್ತತೆಯೂ ಬರೀಯ ಆರ್ಥಿಕ ವೃದ್ದಿಯಲ್ಲದೆ ಮೇಲೆ ಹೇಳಿದ ತಿಂಡಿ ತಿನಿಸು ಆಹಾರಗಳು ರೂಪುಗೊಳ್ಳಲು ಕಾರಣವಾಗಿದೆ ಅಂದರೆ ತಪ್ಪಿಲ್ಲ.ಎಲ್ಲಿ ನೋಡಿದರಲ್ಲಿ ಕಾಣಸಿಗುವ ಈರುಳ್ಳಿ, ಮೂಲಂಗಿ, ಟೊಮೆಟೋ, ಎಲೆಕೋಸು, ಹೂಕೋಸು, ಬಟಾಟೆಯ ಬಳಗದ ನಡುವೆ ಕರಾವಳಿಯ ಈ ಬೆಳೆಗಳು ವಿಶಿಷ್ಟವಾಗಿ ನಿಲ್ಲುತ್ತೆ ಮತ್ತು ಇದರಿಂದ ರೂಪಿತವಾದಂತ ಅಹಾರ ಪದಾರ್ಥಗಳು ವಿಶೇಷವಾಗಿ ನಮ್ಮ ರುಚಿಗೆ ಸಿಗುತ್ತೆ ಅನ್ನೊದು ನನ್ನ ಅನಿಸಿಕೆ ಮತ್ತು ಅನುಭವ.

ಬೇಸಿಗೆ ಉರಿ ಬಿಸಿಲಲ್ಲಿ ದೇಹ ತಂಪಾಗಿಸಲು ಒಂದೆಲಗ ಸೊಪ್ಪಿನ ಚಟ್ನಿ, ಶೀತ ಜ್ವರ ಶಮನ ಮಾಡಲು ಸಾಂಬಾರ್ ಬಳ್ಳಿ ಸೊಪ್ಪಿನ ತಂಬಳಿ,ದೇಹ ಬೆಚ್ಚಗಾಗಿಸಲು ಬಿದಿರ ಮೊಳಕೆ ಕಣಿಲೆಯ ವಿಧ ವಿಧವಾದ ತಿನಿಸು ಪಲ್ಯಗಳು ಇತ್ಯಾದಿ ತರೆವಾರಿ ಅಹಾರ ಪದಾರ್ಥಗಳು ವಾತಾವರಣದ ಏರು ಪೇರಿಗೆ ಅನುಗುಣವಾಗಿ ಕರಾವಳಿಗಳ ಮನೆ ಮನೆಯಲ್ಲಿ ದಿನಕ್ಕೊಂದು ರೀತಿಯಂತೆ ಮಾಮೂಲಿ ಬದನೆ, ಬೆಂಡೆ, ತೊಂಡೆ, ಹಾಗಲ, ಸವತೆ ಎಂಬ ಅದೇ ಹತ್ತಿಪ್ಪತ್ತು ತರಕಾರಿಗಳ ಬದಲಾಗಿ ಬೇಯುವಂತದ್ದು.ಹೆಚ್ಚಾಗಿ ಕೃಷಿ ಚಟುವಟಿಕೆಯಲ್ಲಿ ಇರುವ ಇಲ್ಲಿನ ಮಂದಿ ತಮ್ಮ ಕೆಲಸ ಮುಗಿದು ಹಿಂತಿರುಗುವ ದಾರಿಯಲ್ಲಿ ಸಿಗುವ ಮಾವಿನಕಾಯಿ, ಒಂದೆಲಗ, ಬಿಲ್ವಪತ್ರೆ, ಕವಲು ಕುಡಿ, ಮುಟ್ಟಿದರೆ ಮುನಿ ಕುಡಿ, ಕೆಂದಿಗೆ ಬಳ್ಳಿಯ ಚಿಗುರು, ಮುರುಗಲು ಕಾಯಿ, ಮಾವಿನ ಸೊಪ್ಪು, ಕರಡಿ ಸೊಪ್ಪು, ಮಜ್ಜಿಗೆ ಹುಲ್ಲು, ದೂರ್ವೆ ಹೀಗೆ ಕೈಗೆ ಸಿಕ್ಕಿದ ಎಲ್ಲವೂ ಸೊಗಸಾದ ಸಾಂಬಾರು, ಗೊಜ್ಜು, ಚಟ್ನಿ, ಪಲ್ಯಗಳಾಗಿ ರೂಪಿತವಾಗುತ್ತದೆ ಎಂಬುದು ತಿಳಿದಲ್ಲಿ ಈ ಬಗ್ಗೆ ಗೊತ್ತೆ ಇರದ ಪೇಟೆ ಮಂದಿ ಹುಬ್ಬೇರಿಸಿದರೆ ಆಶ್ಚರ್ಯವಿಲ್ಲ.(ಇನ್ನು ನಮೂನೆವಾರು ಸೆಂಡಿಗೆ ಹಪ್ಪಳ ಉಪ್ಪಿನಕಾಯಿಯ ಬಗ್ಗೆ ನಾನಿಲ್ಲಿ ಏನನ್ನೂ ಹೇಳಿಲ್ಲ, ಸಾಧ್ಯವಾದರೆ ಅವಕಾಶ ಸಿಕ್ಕಲ್ಲಿ ಇದನ್ನೂ ರುಚಿಸಿಯೆ ಅನುಭವಿಸೋದು ಒಳಿತು.)ಎಲ್ಲವೂ ವಿಷಮಯವಾದ ಈ ದಿನಗಳಲ್ಲಿ ಇಂತಹ ಹಲವು ಅಡವಿ ತರಕಾರಿಗಳು ದೇಹಕ್ಕೆ ಅರೋಗ್ಯವಲ್ಲದೆ ವಿಶಿಷ್ಟ ರುಚಿಯನ್ನು ನಮಗೊದಗಿಸುವದು ಖಂಡಿತ.ಒಂದಷ್ಟು ಜೇಬು ಬರಿದಾಗುವದನ್ನು ತಪ್ಪಿಸಬಹುದು. 

ಹೌದು, 100 ರೂಪಾಯಿ ವೆಚ್ಚದಲ್ಲಿ ತಿಂಗಳೂ ಪೂರ್ತಿ ಹೊಟ್ಟೆ ತುಂಬಾ ಉಂಡೇನೂ ಮಗ, ನಿಮ್ ಪೇಟೆಯಲ್ಲಿ ಇದು ಸಾಧ್ಯಾನಾ? ಎಂದು ನನ್ನಮ್ಮ ನೀ ಬೆಂಗಳೂರಿಗೆ ಬಂದು ನನ್ ಜೊತೆ ಇದ್ದು ಬಿಡು ಎಂದಾಗ ಹೇಳಿದ ಮಾತು.ಹಳ್ಳಿ ಜೀವನನೇ ಹಾಗೆ, ಪರಸ್ಪರ ನೆರವಿಗೆ ನಿಲ್ಲುವ ಜನರಿರುತ್ತಾರೆ,ಊಟ ತಿಂಡಿಗೆ ಕೈ ಹಾಕಿದಲ್ಲಿ ಸೊಪ್ಪು ಸಗಡ ಏನಾದರೊಂದು ಇದ್ದೆ ಇರುತ್ತದೆ,ಆರೋಗ್ಯ ಕೆಟ್ಟಲ್ಲಿ ಹಿತ್ತಿಲಲ್ಲೆ ಮದ್ದಿನ ಕಣಜವಿರುತ್ತೆ,ಅಸ್ಪತ್ರೆ ಮದ್ದು ಮತ್ತೊಂದು ಅಪರೂಪದ ಮಾತು.ಎಲ್ಲಕ್ಕಿಂತ ಮುಖ್ಯವಾಗಿ ಜೀವನ ಅತ್ಯಂತ ನೆಮ್ಮದಿಯಿಂದ ಕೂಡಿರುತ್ತೆ. ಇಂತಹ ವಿಷಯಗಳು ಪೇಟೆ ಜೀವನಕ್ಕೆ ಒಗ್ಗಿ ಹೋದ ನನ್ನಂತವರಿಗೆ ಅಷ್ಟು ಸುಲಭಕ್ಕೆ ಅರ್ಥವಾಗುವದಿಲ್ಲ.ಸಂಪಾದನೆಯ ಮುಂದೆ ಎಲ್ಲವೂ ಗೌಣವೆಂಬ ಗುಣ ನಮಗೆ ನಾವೆ ಅಳವಡಿಸಿಕೊಂಡಿರಬೇಕಾದರೆ ಹಳ್ಳಿ-ಪಳ್ಳಿ ವಿಷಯಗಳು ತಲೆಗೆ ಹತ್ತೋದು ದೂರದ ಮಾತೆ ಸರಿ.ಆದರೂ ಹಳ್ಳಿಯಿಂದ ಬಂದ ನನ್ನಂತವರಿಗೆ ಅತ್ತ ಕಡೆ ಒಂದು ಸೆಳೆತವಿದ್ದೆ ಇದೆ, ಅಲ್ಲಿನ ವಿಶಿಷ್ಟ ಊಟ ತಿಂಡಿಯ ಪಾಲೂ ಈ ಸೆಳೆತಕ್ಕೊಂದು ಕಾರಣ.ಒಂದು ಸಲ ರುಚಿ ಕಂಡ ನಾಲಗೆ ಅಷ್ಟು ಸುಲಭವಾಗಿ ಆ ರುಚಿಯನ್ನೂ ಮರೆಯೋದು ಕಷ್ಟ. ಬಾಳೆ ಎಲೆಯೊಂದಕ್ಕೆ 1 ರೂಪಾಯಿ ಪೇಟೆಯಲ್ಲಿ ಕೊಡಬೇಕೆಂಬುದ ಕೇಳಿ ನಮ್ಮೂರ ಮಂದಿ ಗೊಳ್ಳಂತ ನಗ್ತಾರೆ ಅಂದರೆ ನಂಬಲೇಬೇಕು. ಅದೇನೆ ಇರಲಿ ಹಳ್ಳಿ ಎಂದು ಮೂದಲಿಸುವ ಪೇಟೆ ಮಂದಿಗೊಂದು ನಿಜ ವಿಷಯ ಹೇಳಲಾ??? ಮತ್ತೇನಿಲ್ಲ ಪೇಟೆ ಎಂದರೆ ಹಳ್ಳಿಗರಿಗೆ ಮಾಯಾಲೋಕವೇನೊ ಹೌದು ಆದರೆ ಆ ಮಾಯೆಯೊಳ ತಾಕಿದರೆ ಕಾಣೋದು ಪೇಟೆಯತ್ತ ಹಳ್ಳಿಗರಿಗಿರುವ ಅಗತ್ಯ ತಾತ್ಸರತನ. ನೀವೂ ತಾತ್ಸಾರ ಪದ ಪ್ರಯೋಗವನ್ನು ಒಪ್ಪದಿರಲೂಬಹುದು ಆದರೆ ನಿಮ್ಮ ಅನುಭವಕ್ಕೆ ಬಂದಲ್ಲಿ ಹೀಗೊಂದು ಭಾವನೆಯನ್ನೂ ಅಲ್ಲಗಳೆಯಲಾರಿರಿ.ಕರಾವಳಿ ಹಳ್ಳಿ ರುಚಿಯೆ ಅಂತದ್ದು ಕಾರಣ ಈ ರುಚಿಯೊಂದಿಗೆ ಇಲ್ಲಿನ ಸಂಸ್ಕೃತಿ ಮತ್ತು ಜೀವನಕ್ರಮದ ಬೆಸುಗೆಯಿದೆ.

ಇತ್ತೀಚಿಗಿನ ಒಂದು ತಿಂಗಳ ಕಾಲದ ಊರ ವಾಸ್ಥವ್ಯದ ಗುಂಗಿನಿಂದ ಇನ್ನೂ ಹೊರಬರದ ನಾನೂ ಅಲ್ಲಿನ ತಿಂಡಿ ಊಟದ ಸವಿಯನ್ನೂ ನೆನೆಸುತ್ತಲೆ ಬೆಂಗಳೂರ ಊಟ ತಿಂಡಿಯ ಸವಿಯುತಿದ್ದೇನೆ.ಬೆಂಗಳೂರ ಊಟ ತಕ್ಕ ಮಟ್ಟಿಗೆ ಮೊದಲಿನಿಂದ ಸವಿಯಾಗಿದೆ ಕಾರಣ ಗೊತ್ತಿರೋದೆ ಮೊದಲ ಭಾರಿಗೆ ಹೆಂಡತಿಯ ಕೈ ರುಚಿಯ ಭಾಗ್ಯ ನನ್ನದಾಗಿದೆ :).ಪತ್ನಿ ಊಟದ ಕೈ ರುಚಿ ಸಿಗದವರೀಗೆ ಬೇಗ ಸಿಗುವಂತಾಗಲಿ, ಸಿಕ್ಕವರೀಗೆ ಹೆಚ್ಚು ಹೆಚ್ಚು ಮನೆಯೂಟನೆ ಸಿಗುವಂತಾಗಲಿ ಎನ್ನುತ್ತಾ... ಸುಮಾರು 2 ತಿಂಗಳ ಕಾಲ ಏನೋಂದು ಬರೆಯದೆ ಸುಮ್ಮನಿದ್ದ ನಾನು ಈ ಮೂಲಕ ಬರೆಯಲು ಶುರು ಹಚ್ಚಿದ್ದೇನೆ, ನನಗೆ ಒಳ್ಳೆದಾಗಲಿ:), ಕರಾವಳಿ ಹಳ್ಳಿಯೂಟದ ಸವಿ ಒಂದಲ್ಲ  ಒಂದು ದಿನ ಎಲ್ಲರೀಗೂ ದಕ್ಕಲಿ ಎಂದು ಶುಭ ಹಾರೈಸುತ್ತಾ, ಹೊಟ್ಟೆ ಹಸೀತಿದೆ, ಮನೆ ಕಡೆ ಹೆಜ್ಜೆ ಹಾಕ್ತಿದೇನೆ,ನಿಮ್ಮದೂ ಊಟ ಆಯ್ತಾ???

ಬೈ ಮತ್ತೆ ಸಿಗೋಣ
ನಿಮ್ಮವ.....
ರಾಘವೇಂದ್ರ ತೆಕ್ಕಾರ್.

ನಮ್ ಕನ್ನಡ ಆಲ್ದ ಮರ ಇದ್ದಂಗೆ..

ಕಹಳೆಯಲ್ಲಿ ಪ್ರಕಟವಾದ ಲೇಖನದ ಯಥಾವತ್ ಪ್ರತಿ:-


 ಸೋಮವಾರ 12 ನವೆಂಬರ್ 2012 / 
"ತಮ್ಮಾ ಬಾ ಇಲ್ಲಿ, ಹೆಂಗಿದ್ದೀ..? ಆರಾಮಾ..?"

"ಲೋ.. ನಿನ್ ಮುಖಾ ಕುಟ್ಟಾ!! ಹೆಂಗಿದ್ದೀಯಲೆ..?"

ಹಿಂಗೆ ಕ್ಷೇಮವೇ ಕುಶಲವೇ ಅನ್ನೋ ಜಾಗದಲ್ಲಿ ಈ ತರದ ಮಾತುಗಳು ಕನ್ನಡದೊಳಗೆ ಜಾಗ ಪಡೆದಿವೆ ಮತ್ತು ಯುವ ಜನಾಂಗದ ಮಾತುಕತೆಯೊಗೆ/ಬರಹದೊಳಗೆ ಇಂತದ್ದೂ ಈಗೀಗ ಸಾರ್ವತ್ರಿಕವಾಗಿದೆ. ಸೂಕ್ಷ್ಮವಾಗಿ ಒಂದು ಸಲ ಈಗೀಗ ಬಳಕೆಯಾಗುತ್ತಿರುವ ಕನ್ನಡವನ್ನ ಸುಮ್ಮನೆ ಕೇಳಿಸಿಕೊಂಡು ನೋಡಿ; ಅಲ್ಲಿ ಗ್ರಾಮ್ಯ ಶಬ್ದಗಳಿವೆ, ಇತರೆ ಭಾಷೆಯ ಶಬ್ದಗಳ ಬಳಕೆಯಿದೆ, ಗತ್ತು ಗೌಲತ್ತುಗಳನ್ನೂ ತೊಡೆದುಹಾಕಿ ಆತ್ಮೀಯತೆ ನೆಲೆಸಿದೆ, ವ್ಯವಹಾರಿಕತೆಯಿದೆ, ಹೊಸ ಪೀಳಿಗೆಯ ಒಲವಿನ ದೋತ್ಯಕಗಳಿವೆ, ಹೀಗೆ ಏನೇನೋ ಇರುವುಗಳ ನಡುವೆ ಒಂದಿಲ್ಲ - ಅದುವೇ 'ನಾಟಕೀಯತೆ'. ನಾ ಹೀಗಂತೀನಿ ಅಂತ ಸಂಪ್ರದಾಯಿಕವಾದಿಗಳು ಮೂಗು ಮುರಿಯಬೇಡಿ, ಭಾಷೆ ಕುಲಗೆಟ್ಟು ಹೋಯಿತು ಎಂದೆನ್ನಬೇಡಿ, ಭಾಷೆಯನ್ನು ನೆಚ್ಚಿನಿಂದ ತಮ್ಮದಾಗಿಸುತ್ತಾ ಆತ್ಮೀಯವಾಗಿಸುತ್ತಾ ಯುವಜನತೆ ಸಾಗಿದೆ, ಅದು ಹಿರಿಯರಿಗೆ ಕುಲಗೆಡಿಸಿದಂತೆ ಕಂಡರೆ ತಪ್ಪು ಯುವಜನತೆಯದ್ದಲ್ಲ. ಅಸಲಿಗೆ ಅಂಥಾ ಯಾವ ಉದ್ದೇಶವಾಗಲೀ ಆ ಬಗ್ಗೆಯ ಅರಿವುಗಳಾಗಲೀ ಯುವ ಜನತೆಗಿಲ್ಲ, ಅದು ತನ್ನ ಪಾಡಿಗೆ ತಾನು ಮುನ್ನಡೆಯುತ್ತಿದೆ, ಈ ಕನ್ನಡ ಸರಳೀಕರಣದ ಬಗ್ಗೆ ಅಪಸ್ವರ ಇರುವವರು ಒಂದಂತೂ ಒಪ್ಪಲೇಬೇಕು - ಭಾಷೆಯ ಉಳಿಕೆ ಮತ್ತು ಬೆಳವಣಿಗೆಗೆ ಚಲನಶೀಲತೆ ಇರಬೇಕು, ಹೊಸ ಪ್ರಯೋಗಗಳಿಗೆ ಭಾಷೆಗಳು ಎದುರಾಗಬೇಕು, ಮೂಲ ಸೊಗಡನ್ನು ಕಳೆದುಕೊಂಡಿದೆ ಎಂದರೂ ಸರಿ ಕುಲಗೆಟ್ಟಿತೆಂದರೂ ಸರಿ ಯುವಜನತೆಯ ಬಾಯಲ್ಲಿ ಕುಣಿದಾಡುವ ಕನ್ನಡದ ನವೀನತೆ ಕನ್ನಡವನ್ನೂ ಆತ್ಮೀಯವಾಗಿಸುವಲ್ಲಿ ಗೆದ್ದಿದೆ.

ಯುವ ಜನತೆಯಲ್ಲಿ ಕನ್ನಡ - ಕರ್ನಾಟಕದ ಬಗ್ಗೆ ಅಸಡ್ಡೆ ಇರುವ ದಿನಗಳಿತ್ತು, ಇದು ಇನ್ನೂ ಕೂಡ ಪೂರ್ತಿಯಾಗಿ ಪರಿಹಾರವಾಗಿರದ ಸಮಸ್ಯೆ. ಕಾರ್ಪೊರೇಟ್ ವಲಯದ ಲಗ್ಗೆಯಿಂದ ಹೆಚ್ಚೆಚ್ಚು ಯುವ ಜನತೆ ಉದ್ಯೋಗಕ್ಕಾಗಿ ಅತ್ತ ವಾಲಿತು, ಪರಿಣಾಮ ಇಂಗ್ಲೀಷ್ ಒಂದೇ ಎಲ್ಲದಕ್ಕೂ ಪರಿಹಾರವೆಂಬ ಭ್ರಮೆಯೊಳಗೆ ಸಿಲುಕಿ ಮೂಲ ಭಾಷೆಯತ್ತ ಅಸಡ್ಡೆ, ಮಾತಾಡಲೂ ಕೂಡ ಮುಜುಗರ ಪಡುವಂತ ಸನ್ನಿವೇಶದೊಳಗೆ ಸಿಲುಕಿತು. ಇದರಿಂದ ಹೊರಬರುವಲ್ಲಿ ದಾರಿಯಾಗಿದ್ದು ಯುವಜನತೆಯೊಳಗೆ ಹಾಸುಹೊಕ್ಕಾಗಿರುವ ಈಗಿನ ನವೀನ ಕನ್ನಡ. ಮಾತೃಭಾಷೆ ಇನ್ನಷ್ಟು ಇಷ್ಟವಾಗುವಂತೆ, ಕನ್ನಡದಲ್ಲಿ ಮಾತಾಡಿದಲ್ಲಿ ಇನ್ನಷ್ಟೂ ಆತ್ಮೀಯವಾಗಬಹುದೆಂಬ ಅರಿವು ಈ ಮೂಲಕ ಯುವಜನತೆಗೆ ಬಂದಿದೆ ಅಂದರೆ ತಪ್ಪಿಲ್ಲ. ಹಾಗಂತ ಇದು ಯಾರೋ ಕಂಡುಕೊಂಡ ಸೂತ್ರವಲ್ಲ, ಇದು ಕಂಡುಕೊಳ್ಳುವಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲಸ ಮಾಡಿದ್ದು ಯುವಜನತೆಯೊಳಗಿನ ಕನ್ನಡ ಮನಸ್ಸು. ಯುವ ಜನತೆಯ ಆಸೆ ಅಭಿಲಾಷೆಗಳು ಯಾವತ್ತೂ ಚೌಕಟ್ಟು ಮೀರಿ ಬೆಳೆಯಲು ಹವಣಿಸುತ್ತಿರುತ್ತವೆ. ಅದೇ ಅಭಿಲಾಷೆಯ ಫಲ ಭಾಷೆಯ ಮೇಲೂ ಅಗಿದೆ; ಪರಿಣಾಮ - ವ್ಯಾಕರಣ, ಛಂದಸ್ಸು, ಮಾತ್ರೆ-ಗಣ ಮುಂತಾದವುಗಳ ಹಂಗನ್ನೂ ಮೀರಿ  ಆತ್ಮೀಯತೆಯೊಂದೇ ಸೂತ್ರವಾಗಿ ನವೀನ ಕನ್ನಡವನ್ನು ಯುವಜನತೆ ತನ್ನದಾಗಿಸಿಕೊಂಡಿದೆ. ಭಾಷೆಯೊಂದು ಹೆಚ್ಚು ಆತ್ಮೀಯವಾಗೋದು ಮುಖ್ಯವೆಂಬುದಾದಾಗ ಕುಲಗೆಟ್ಟು ಹೋಯಿತು, ಭಾಷೆಗೊಂದು ಹೊಸ ಸೊಗಡು ದೊರೆಯಿತೆಂದಾದಾಗ ಮೂಲ ಸೊಗಡನ್ನು ಕಳಕೊಂಡಿತು ಎಂಬುದಕ್ಕೆ ಅರ್ಥವಿಲ್ಲ. ನೆಲವಿಲ್ಲವೆಂದಾದಲ್ಲಿ ಮೆಟ್ಟಿಲುಗಳು ಇರಲ್ಲ, ಏರುವ ಅವಕಾಶನೂ ಇರಲ್ಲಾ ಅಲ್ವೆ? ಸಂಪ್ರದಾಯಿ ಕನ್ನಡ ಸೊಗಡು ನವೀನತೆಗೊಂದು ದಾರಿ ಮಾಡಿಕೊಟ್ಟಿದೆ ಎಂದು ಅಂದುಕೊಳ್ಳುವುದೇ ಸರಿ.

ಡಿ. ಎನ್. ಶಂಕರ ಭಟ್ ಅವರ ಹೆಸರು ಕೆಲವರಾದರೂ ಕೇಳಿರಬಹುದು, ಇವರ ಹೆಸರು ಕೇಳಿದಲ್ಲಿ ಕೆಲವರು ಉರಿದು ಬೀಳುವವರೂ ಇರಬಹುದು, ಕಾರಣ ಇವರು ಕನ್ನಡ ಲಿಪಿಯ ಬಗ್ಗೆ ಮುಂದಿಟ್ಟ ಕೆಲವು ಸೂತ್ರಗಳ ಬಗ್ಗೆ ಒಮ್ಮತವಿಲ್ಲದಿರುವುದು. ಅಷ್ಟಕ್ಕೂ ಇವರು ಪ್ರತಿಪಾದಿಸುತ್ತಿರುವುದು ತುಂಬಾ ಸರಳ - ಅದಾವುದೇ ಭಾಷೆಯಾಗಿರಲಿ ಭಾಷೆಯು ಮೂಲತಃ ಶಬ್ದ ಸಂಕೇತಗಳು, ಇಲ್ಲಿ ಉಚ್ಛಾರದಂತೆ ಲಿಪಿ ಇದ್ದರೆ ಬರವಣಿಗೆಯಲ್ಲಿ ಸಂಶಯ ಜಾಗ ಪಡೆಯುವದಿಲ್ಲ; ಹಾಗೂ ಭಾಷೆಯೊಂದು ಕಠಿಣವಾಗಲಾರದು ಎಂದು. ಕನ್ನಡದಲ್ಲಿ ಈ ರೀತಿ ಗೊಂದಲಗಳಿವೆಯೇ ಎಂಬುದು ನಿಮ್ಮ ಪ್ರಶ್ನೆಯಾದರೆ, ಹೌದು ಎಂಬುದೇ ಉತ್ತರವಾಗಿರುತ್ತದೆ. ಉದಾಹರಣೆಗೆ 'ಷ' ಮತ್ತು 'ಶ' ಅಕ್ಷರಗಳ ಉಚ್ಚಾರದಲ್ಲಿ ಏನೊಂದು ವ್ಯತ್ಯಾಸವಿಲ್ಲ, ಆದರೂ 2 ಅಕ್ಷರಗಳಿವೆ. ರುಣ ಎಂದು ಬರೆದರೂ, ಋಣ ಎಂದರೂ ಉಚ್ಚಾರ ರೀತಿ ಒಂದೇ. ಹಾಗಾದಾಗ 'ಋ' ಅಕ್ಷರದ ಜರೂರಿ ಇದೆಯೆ? ಒತ್ತಕ್ಷರವಾಗಿ 'ಞ' ದ ಬದಲು 'ನ' ವನ್ನೆ ಬಳಸಬಹುದಾದಾಗ 'ಞ' ದ ಅವಶ್ಯಕತೆ ಇದೆಯೆ? ಇಂತವೇ ಹಲವು ಪ್ರಶ್ನೆಗಳನ್ನು ಮುಂದಿಟ್ಟಿವೆ ಇವರ ವಿಚಾರಧಾರೆಗಳು. ಭಾಷೆ ಮತ್ತು ಅದರ ಲಿಪಿ ಸರಳವಾದಷ್ಟೂ ಜನಜನಿತವಾಗಬಲ್ಲುದು,  ಉಚ್ಚಾರದಂತೆ ಲಿಪಿಯಿದ್ದರೆ ಕನ್ನಡ ಕಲಿಯುವವರಿಗೂ ಇನ್ನಷ್ಟು ಸುಲಭವಾಗಿ ಭಾಷೆಯ ಬಗ್ಗೆ ಇನ್ನೂ ಹೆಚ್ಚಿನ ಒಲವೂ ಮೂಡಬಹುದು ಎಂಬುದು ಮೂಲ ಕಾಳಜಿ. ಭಾಷೆ ಬೆಳವಣಿಗೆ ಪಡೆಯಬೇಕೆಂದರೆ ಹೊಸ ಪ್ರಯೋಗಕ್ಕೆ ಒಳಪಡಲೇಬೇಕು; ಇದು ಕನ್ನಡಕ್ಕೆ ಮಾತ್ರ ಸೀಮಿತವಾದುದಲ್ಲ. ಹಾಗಂತ ಇಂತಹ ಪ್ರಯೋಗಗಳನ್ನು ವಿರೋಧಿಸುವವರದ್ದು ತಪ್ಪೇನೂ ಇಲ್ಲ , ಎಲ್ಲಿ ಭಾಷೆಗೆ ಧಕ್ಕೆಯಾಗಿಬಿಡುತ್ತದೋ ಎಂಬ ಮೂಲ ಕಾಳಾಜಿಯೇ ವಿರೋಧಕ್ಕೆ ಕಾರಣ. ಆದುದರಿಂದ ನವೀನತೆಯನ್ನು ಬಯಸುವವರೂ ಹಾಗೂ ಸಂಪ್ರದಾಯಿ ಕನ್ನಡಪರರ ಕನ್ನಡೀಯತೆಯ ಬಗ್ಗೆ ಯಾವುದೇ ಪ್ರಶ್ನೆ, ಸಂಶಯಗಳು ಸಲ್ಲದು. ಆದರೆ ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಹೊಸತೊಂದರತ್ತ ಮುನ್ನಡೆಯುವಾಗ ಚರ್ಚೆಗೆ ತೆರೆದುಕೊಳ್ಳುವ ಮನಸ್ಸು ನಮಗಿರಬೇಕು, ಒಪ್ಪುವದು ಬಿಡುವದು ಆಮೇಲಿನ ಪ್ರಶ್ನೆ. ಕನ್ನಡಿಗರು ಹೃದಯವೈಶಾಲ್ಯರು, ಭಾಷೆಯ ಉಳಿವು ಬೆಳವಿನ ಹಾದಿಯಲ್ಲೂ ನಮ್ಮ ಮನಸ್ಸು ತೆರೆದಿರಲಿ ಎಂಬುದಷ್ಟೆ ನನ್ನ ಆಶಯ.

ಭಾಷೆಯ ಉಳಿವಿಗೆ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳಬೇಕೆ? ಬೆಳವಣಿಗೆಯ ಜರೂರಿಗಳಿವೆಯೆ? ಇಂತಹ ಪ್ರಶ್ನೆ ಕಾಡುತಿದ್ದರೆ ಇತಿಹಾಸವನ್ನೊಮ್ಮೆ ನೋಡಿದಲ್ಲಿ ಉತ್ತರ ಸಿಗುತ್ತದೆ. ಕನ್ನಡದ ಎಲ್ಲೆ ದೂರದ ಮಹರಾಷ್ಟ್ರದವರೆಗೂ, ಇತ್ತ ಕಡೆ ಕಾಸರಗೋಡಿನವರೆಗೂ ಬೆಳೆದು ನಿಂತಿತ್ತು. ಆದರೀಗ ಅದೇ ಕನ್ನಡ ಭಾಷೆಯ ಗಡಿ (ರಾಜ್ಯದ ಗಡಿಯ ಹೊರತಾಗಿ) ಎಲ್ಲಿದೆ ಅನ್ನುವದನ್ನೂ ಅವಲೋಕಿಸುವುದು ಒಳಿತು. ಕರ್ನಾಟಕದ ರಾಜಧಾನಿ ಬೆಂಗಳೂರೇ ಕನ್ನಡ ಪರವಾಗಿಲ್ಲ ಅನ್ನುವದನ್ನು ಒಪ್ಪುವುದು ಕಷ್ಟವಾದರೂ ವಾಸ್ತವವನ್ನು ತಿರಸ್ಕರಿಸುವದೆಂತು? ಹೀಗಿರಬೇಕಾದರೆ ಕನ್ನಡವನ್ನು ಸರಳೀಕರಿಸಿ ಇನ್ನಷ್ಟು ಅತ್ಮೀಯವಾಗಿಸುವ ವಾದಕ್ಕೆ ತೂಕ ಬರುವುದಲ್ಲವೆ? ಸಂಪ್ರದಾಯತ್ವ ಕನ್ನಡವೇ ಬರಲಿ, ನವೀನ ಆಡು ಭಾಷೆಯಾಗಿ ಚಾಲ್ತಿಗೆ ವಿಭಿನ್ನ ರೀತಿಯಲ್ಲಿ ತೆರೆದುಕೊಂಡಿರುವ ಕನ್ನಡವೇ ಆಗಲಿ ಕನ್ನಡ ಪರವಾದ ವಾತಾವರಣ ಬೆಳೆಯೋದು ಮುಖ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಕನ್ನಡಕ್ಕೆ ಹೊಸ ಪ್ರಯೋಗಗಳು ಎದುರಾದಾಗ ನಾವು ಚರ್ಚೆಗೆ, ಆ ಮೂಲಕ ಬೆಳವಣಿಗೆಗೆ ನಾವು ತೆರೆದುಕೊಳ್ಳಬೇಕಿರುವದು. ಮೂಲ ತಳಹದಿಯ ಮೇಲೆ ಹೊಸದೊಂದನ್ನು ಕಂಡುಕೊಳ್ಳಬೇಕಷ್ಟೆ. ಆದುದರಿಂದ ಕನ್ನಡದ ವಿರೂಪ ಇತ್ಯಾದಿಗಳು ವಾಸ್ತವ ನಿಟ್ಟಿನ ವಾದಗಳಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ಅಯ್ಯೋ ಲೇ.. ಏನ್ ಕೊರಿತೀಯಾ ಕನ, ಆವಾಗಿಂದ ನೋಡ್ತಾ ಇವ್ನಿ.. ಬರೀಯ ಕಥೆನೇ ಹೇಳ್ಕೊಂಡು ಕೂತಿಯಲ್ಲೊ ಮಾರಾಯ. ನಿಂದೇನು ಗೋಳು? ಎಂದುಕೊಂಡು ಮನಸಲ್ಲೆ ಬೈದಾಡ್ತೀರಾ ನನ್ ಬಗ್ಗೆ.. ಬೈಕೋ ಬೇಡಿ ಪಿಲೀಸು, ಏನೋ ಸಣ್ ತಮ್ಮ ಹೋಯ್ದಾಡ್ತಾವ್ನೆ ಹೊಟ್ಟೆಗಾಕ್ಕೋಳ್ಳಿ ಇಲ್ಲಾಂದ್ರೆ ಸ್ಯಾನೆ ಬೇಜಾರಾಗುತ್ತೆ ನಂಗೆ. ಏನೋ ನಮುಗೆ ತಿಳಿದಂಗೆ ನಾವ್ ನೋಡ್ತಿರೊ ಹಂಗೆ ಬರಿಯಕ್ಕೆ ಬರುತ್ತೆ ಅನ್ಕೊಂಡು (ಹಂಗೆ ಅನ್ಕೊಂಡಿದೀನಿ, ಆ ಬಗ್ಗೆ ನಂಗೆ ಕೊಂಬೇನೂ ಇಲ್ಲ) ಬರ್ದೀನಿ ಅಷ್ಟೆ; ಒಪ್ಪೋದು ಬಿಡೋದು ನಿಮ್ಗೆ ಬಿಟ್ಟೀರೋದು, ಅಲ್ವೂರಾ? ಕನ್ನಡ ಆಲ್ದ ಮರ ಇದ್ದಂಗೆ, ಹೊಸತನ್ನು ಹುಡುಕುತ್ತಾ ಪೋಷಿಸೋದು ಆ ಮರಕ್ಕೆ ನೀರುಣಿಸಿದಂತೆ. ಕನ್ನಡದ ಜೊತೆ ಜೊತೆಗೆ ಇರುವ ಇತರ ಭಾಷೆನೂ ಕನ್ನಡಕ್ಕೆ ಬೇರುಗಳಿದ್ದಂಗೆ, ಈ ಮರದ ನೆರಳಲ್ಲಿ ಅದು ಬೆಳಿಬೇಕು, ಜೊತೆಗೆ ಕನ್ನಡ ಬೆಳಿಬೇಕು ಎಂಬುದು ನನ್ನಾಸೆ. ಇಷ್ಟೇ.. ಇದುಕ್ಕೆ ಇಷ್ಟೂದ್ದ ಹೇಳ್ಕೋತಾ ಬಂದೆ. ಏನಂದುಕೊಂಡ್ರೋ ಏನೋ? ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳೋಣ, ಕನ್ನಡವನ್ನು ಬೆಳೆಸೋಣ. 57ನೇ ರಾಜ್ಯೋತ್ಸವದ ಈ ತಿಂಗಳಿನಲ್ಲಿ ಈಟಾದ್ರೂ ಚಿಂತನೆ ನಮ್ಮಲ್ಲಿ ಮೂಡ್ಲಿ. "ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ" ಎಂದು ಹಾಡುತ್ತಾ ಹೆಂಗಾದ್ರೂ ಸರಿ ಕನ್ನಡವನ್ನೇ ದಿನನಿತ್ಯ ಬಳಸೋಣ, ಆ ಮೂಲಕ ಭಾಷೆಯನ್ನು ಬೆಳೆಸೋಣ.

ಲೇಖಕರ ಕಿರುಪರಿಚಯ
ಶ್ರೀ ರಾಘವೇಂದ್ರ ತೆಕ್ಕಾರ್

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ತೆಕ್ಕಾರ್ ಎಂಬ ಪುಟ್ಟ ಹಳ್ಳಿಯವರಾದ ಇವರು ಕಳೆದ ಒಂಭತ್ತು ವರ್ಷಗಳಿಂದ ಬೆಂಗಳೂರಿನಲ್ಲಿಯೇ ನಲೆಸಿದ್ದಾರೆ.

ಟೆಲಿಕಾಂ ಕ್ಷೇತ್ರದಲ್ಲಿ ವೃತ್ತಿನಿರತರಾಗಿರುವ ಇವರಿಗೆ ಬರವಣಿಗೆಯು ಹವ್ಯಾಸ ಮತ್ತು ಮನದ ಭಾವನೆಯನ್ನು ಹೊರಗೆಡುವುತ್ತಾ, ಆಲೋಚನೆಗೊಂದು ದಿಕ್ಕು ತೋರುವ ಪ್ರವೃತ್ತಿಯಾಗಿ ತಾನಾಗಿಯೇ ಇವರ ಜೊತೆಗೆ ಬೆಳೆದು ಬಂದಿದೆ.

Blog  |  Facebook  |  Twitter

3 comments:

Nataraju S M } on: 12 ನವೆಂಬರ್ 2012 09:19 AM ಹೇಳಿದರು...
ರಾಘಣ್ಣ, ನಿಮ್ ಮೊಕ ಕುಟ್ಟಾ.. ಲೇಖನ ಚಂದಾಗಿದೆ.. :)
ಗುರುರಾಜ } on: 12 ನವೆಂಬರ್ 2012 10:09 AM ಹೇಳಿದರು...
ಬಹಳ ಸರಳ ಹಾಗು ಅರ್ಥಪೂರ್ಣ ವಾದ ಲೇಖನ.. ನೀವು ಹೇಳಿರುವ points ಗಳು ಸರಿಯಾಗಿವೆ..
ಡಾ. ಸಿ-ಕೇ-ಮೂರ್ತಿ } on: 12 ನವೆಂಬರ್ 2012 08:29 PM ಹೇಳಿದರು...
ಶ್ರೀ ರಾಘವೇಂದ್ರ ತೆಕ್ಕಾರ್ ರವರು ಹೇಳಿರುವಂತೆ, ಈ ಕನ್ನಡದ ಆಲದಮರದ ಕೆಳಗೆ ಹಳ್ಳೀ ಭಾಷೆಯ ಸೊಗಡು ಪಟ್ಟಣದ ಹೈಕಳ ನಾಲಿಗೆಯಲ್ಲಿ ಹೇಗೆ ಸುಲಲಿತವಾಗಿ ಹರಿದಾಡುವುದನ್ನು ನಾವು ಅಲ್ಲಲ್ಲಿ ಕಾಣಬಹುದು .ಅದು ಒಂದು ಈಗಿನ ಪೀಳಿಗೆಯವರ ಹವ್ಯಾಸವಾಗಿ ಬೆಳೆಯುತ್ತಿದೆ ಎಂದರೂ ತಪ್ಪಾಗಲಾರದು .