ಬಾಲ್ಯದಲ್ಲಿ ಮನೆ ಪಕ್ಕದ ಇಳಿಜಾರಿನಲ್ಲಿ ಜಾರುಬಂಡೆಯಾಟವಾಡಿ ಮೈಗೆ ಹತ್ತಿಸಿಕೊಂಡ ಧೂಳಿನ ಘಮಲು, ಮೊದಲ ಮಳೆ ಬಿದ್ದಾಗ ಇಡಿಯ ವಾತಾವರಣ ಹೊರಸೂಸುವ ಮಣ್ಣು ಮಿಶ್ರಿತ ವಾಸನೆ, ಮನೆಯಲ್ಲಿ ಶುಭ ಕಾರ್ಯಗಳೂ ನಡೆಯುವ ಮುಂದು ಗೋಡೆಗೆ ಹಚ್ಚಿದ ಸುಣ್ಣ ಬಣ್ಣ ಹೊರಸೂಸಿದ ವಾಸನೆ, ಮನೆಯನ್ನು ರಿಪೇರಿಗೊಳಪಡಿಸಿದಾಗ ಬಳಸಿದ ಜಲ್ಲಿ ಕಲ್ಲು ಸಿಮೆಂಟು ಮಿಶ್ರಣ ನೀಡಿದ ವಾಸನೆ,ಮನೆಯಲ್ಲಿ ದಿನವೂ ಅಪ್ಪ ನಡೆಸುವ ಪೂಜಾ ಕಾರ್ಯದಲ್ಲಿ ಬಳಸುವ ಊದುಕಡ್ಡಿ ಹೊರಸೂಸೊ ಪರಿಮಳ,ಬಾಲ್ಯದಲ್ಲಿ ಬಳಸುತಿದ್ದ ಹಮಾಮ್ ಸೋಪಿನ ವಾಸನೆ,ಮನೆಯ ಪಕ್ಕದ ಹಟ್ಟಿಯ ಬದಿಯಲ್ಲಿ ಅಘ್ರಾಣಿಸಿದ ವಾಸನೆ,ಅಮ್ಮ ಬಟ್ಟೆ ಒಗೆದು ಒಣಗಿಸಿ ಇಟ್ಟಾಗ ಅದು ಹೊರ ಸೂಸೊ ವಾಸನೆ,ಮಂಗಳೂರಿನ ಬಳಿ ಕರಾವಳಿ ತೀರದಲ್ಲಿ ಸಾಗಲೂ ಅಲ್ಲಿ ಸಿಗುವ ಮೀನಿನ ವಾಸನೆ,ದೀಪಾವಳಿಗೆ ಪಟಾಕಿ ಸಿಡಿಸಿದಾಗ ಅದು ನೀಡಿದ ವಾಸನೆ,ಮನೆಯ ತೋಟಕ್ಕೆ ನೀರು ಹಾಯಿಸುತಿದ್ದ ಆಕಾಲದ ಡಿಸೀಲ್ ಮೋಟಾರು ಚಾಲು ಮಾಡಿದಾಗ ಅದು ನೀಡಿದ ವಾಸನೆ,ತಂಗಿ, ತಮ್ಮ ಮಗುವಾಗಿರಬೇಕಾದರೆ ಸ್ನಾನ ಮಾಡಿಸಿ ಬಂದು ಜಾಸ್ಸನ್ ಪೌಡರ್ ಹಚ್ಚಿದಾಗ ಅದು ನೀಡಿದ ಘಮಲು, ಛಳಿಗಾಲದಲ್ಲಿ ಮನೆಯ ಸುತ್ತಲೂ ಇರುವ ಮರ ಗಿಡಗಳೂ ಬೆಳಿಗ್ಗೆ ಬೆಳಿಗ್ಗೆ ನೀಡುವ ಅದೆಂತದೊ ಪರಿಯ ಘಮಲು,ಸಗಣಿ ಸಾರಿಸಿದ ನೆಲದ ವಾಸನೆ,ಬಿರು ಬಿಸಿಲಿಗೆ ಥರಗುಟ್ಟುವ ಭೂಮಿ ಕಾದ ಮಣ್ಣು ನೀಡೊ ವಾಸನೆ,ರೇಷನ್ ಅಂಗಡಿಯಲ್ಲಿ ಸೀಮೆಯೆಣ್ಣೆ ಮಿಶ್ರಿತವಾದ ಒಂದು ತರದ ಘಮಲು,ಕೂಲಿ ಮುಗಿಸಿ ಬಂದು ಕೂರುವ ಕಾರ್ಮಿಕನ ಮೈ ಹೊರಸೂಸೊ ಬೆವರು ಮಿಶ್ರಿತ ವಾಸನೆ, ಮನೆಯಲ್ಲಿ ಧಗೆಗೆ ಬೆವೆತ ಮೈ ನೀಡೊ ವಾಸನೆ, ಶಿಕ್ಷಣಕ್ಕಾಗಿ ಶಾಲೆಗೆ ನಡೆದು ಹೋಗುತಿದ್ದ ಸಂದರ್ಭದಲ್ಲಿ ಹಳ್ಳದ ಬದಿಯ ನಾಣೀಲು ಹೂ ಹೊರಸೂಸೊ ಘಮಲು,ಹಳ್ಳದ ನೀರ ಬದಿಯ ಘಮಲು, ಶಾಲೆಯಲ್ಲಿ ಊಟದ ಹೊತ್ತಿನಲ್ಲಿ ಎಲ್ಲಾರು ಟಿಫಿನ್ ಬಾಕ್ಸ್ ಬಿಚ್ಚಿದಾಗ ಘಮಲುಗಳೆಲ್ಲಾ ಮಿಳಿತವಾಗಿ ಹೊಸ ಪರಿಯ ಘಮಲನ್ನೂ ಅಸ್ವಾದಿಸಿದ್ದು,ಅಮ್ಮನ ಅಡಿಗೆ ರೆಡಿಯಾದಾಗ ಅದರ ಮಸಾಲೆ ಇತರವೂ ಹೊರ ಸೂಸಿದ ಘಮಲು,ಮನೆ ಮಂದಿಯೆ ಅನ್ನುವಷ್ಟರ ಮಟ್ಟಿಗೆ ಮನೆಯಲ್ಲಿ ಕೆಲಸವಿದ್ದಾಗ ಬಂದು ತೊಡಗುವ ನಾರಾಯಣ, ಕೂಸ, ಕೊರಗಪ್ಪ, ಮಾದು ಮುಂತಾದವರು ಎಳೆಯುತ್ತಿದ್ದ ಬೀಡಿಯ ವಾಸನೆ,ಊರ ಶೆಟ್ಟರ ಹೊಟೇಲಿನ ನೀರ್ ದೋಸೆಯ ಘಮಲು,ಕಾದ್ರಿಬ್ಯಾರಿ ಹೊಟೇಲಿನ ಚಾ-ಕಲ್ತಪ್ಪಾ ಪರಿಮಳ....................................ಹೀಗೆ ವಿವಿಧ ವಾಸನೆಗಳು ನಮ್ಮ ನೆನಪಿನ ಬುಟ್ಟಿಯಲ್ಲಿ ಸದಾ ಭದ್ರ, ಪ್ರತಿಯೊಂದಕ್ಕು ಅದರದೆ ಆದ ನೆನಪುಗಳು ಜೊತೆಗಿರುತ್ತವೆ,.ಅದು ಕೆಟ್ಟದ್ದೂ ಆಗಿರಬಹುದು ಒಳ್ಳೆದು ಆಗಿರಬಹುದು.ಆದರೆ ನೆನಪುಗಳ ಜೊತೆ ಈ ವಾಸನೆಗಳ ಅವಿನಾಭಾವ ಸಂಬಂಧವಿರುವುದಂತು ಸತ್ಯ.
ಬಾಲ್ಯ ದಾಟಿ ಬೆಳೆದು ಬಂದಿರುತ್ತೇವೆ.ಅದೆಷ್ಟೊ ಪರಿಸ್ಥಿತಿಗಳ ಮಧ್ಯೆ ಮುಳುಗೇಳಿ ಒಂದು ಹಂತಕ್ಕೆ ತಲುಪಿರುತ್ತೇವೆ.ನವಿರು ನೆನಪುಗಳು ಬತ್ತಿರೋದಿಲ್ಲ,ಅದು ಗಮನಕ್ಕೆ ಬಂದಿರೋದಿಲ್ಲ ಅಷ್ಟೆ, ಹೀಗಿರಬೇಕಾದರೆ ಈ ವಾಸನೆಗಳೂ ಆ ನೆನಪುಗಳನ್ನು ಮರಳಿಸಬಲ್ಲುದು.ಈ ತೆರನಾಗಿ ಎಲ್ಲರಿಗೂ ಅನುಭವಕ್ಕೆ ನಿಲುಕಿದ ವಿಷಯಗಳನ್ನೆ ನಾನಿಲ್ಲಿ ಹೇಳಹೊರಟಿರುವದು.ಅದೊಂದು ವೃತ್ತಿ ಸಂಬಂಧಿ ಕನ್ ಸ್ಟ್ರಕ್ಷನ್ ಕೆಲಸದ ಜಾಗಕ್ಕೆ ಹೋದಾವಾಗ ಅಲ್ಲಿ ಆ ಸಿಮೆಂಟು ಮಣ್ಣು ಇಟ್ಟಿಗೆಗಳು ನೀಡಿದ ಘಮಲು ನನ್ನ ಮನೆಯ ರಿಪೇರಿಯ ಹಿಂದಿನ ಶ್ರಮ ಆವಾಗಿನ ಕಷ್ಟ ಕೆಲಸದ ವರಿಗೆ ಅಮ್ಮ ಬೇಯಿಸಿ ಹಾಕುವಲ್ಲಿ ಪಟ್ಟ ಶ್ರಮ, ಅವಳ ಎಡೆ ಬಿಡದ ದುಡಿತ, ಸಾಮಾಗ್ರಿ ಕೊಡಿಸುವಲ್ಲಿ ಅಪ್ಪನ ಓಡಾಟ ಅವರುಗಳ ಕಷ್ಟ, ದೂರದೂರಲ್ಲಿ ಕೂತು ಹಣ ಹೊಂಚಿ ಕೆಲಸಕ್ಕೆ ಸಮಾನಾಗಿ ಕಳಿಸಿಕೊಡುವಿನಲ್ಲಿನ ನನ್ನ ತಾಪತ್ರಯ ಇದೆಲ್ಲವನ್ನೂ ಮೀರಿ ಕೆಲಸ ಮುಗಿಸಿದ ಖುಷಿ ಆ ಬಗ್ಗೆ ನಮ್ಮೊಳಗೆ ಹುಟ್ಟೊ ಮೆಚ್ಚುಗೆ ಎಲ್ಲವೂ ನೆನಪಾದರೆ ಅದು ಆ ವಾಸನೆ ಕೊಟ್ಟ ಫಲ.ಆ ನೆನಪುಗಳು ನನ್ನ ಕೆಲಸದಲ್ಲಿ ತೊಡಗಲು ಸ್ಪೂರ್ತಿಯನ್ನು ಕೊಟ್ಟಿತೆಂದರೆ ಅದು ಆ ವಾಸನೆ ನನಗೊದಗಿಸಿದ ಲಾಭ.ಇದೆ ತೆರನಾದ ಇನ್ನೊಂದು ಅನುಭೂತಿಯೆಂದರೆ ವಾಸು ಅಗರಬತ್ತಿಯ ಘಮಲು ನನಗೆಲ್ಲಾದರು ಸಿಕ್ಕರೆ ಅದು ಇಂತದ್ದೆ ಅನ್ನುವಷ್ಟರ ಮಟ್ಟಿಗೆ ಆತ್ಮೀಯತೆ ಕಾರಣ ಅದು ನನ್ ಮನೆಯಲ್ಲಿ ನಿತ್ಯ ಉಪಯೋಗಿಸುವಂತದ್ದು,ಬರಿಯ ವಾಸನೆ ಅಲ್ಲದೆ ನನ್ನದೆ ಮನೆಯ ಅದೆಷ್ಟೊ ಸವಿ ನೆನಪುಗಳು ಒಂದು ಸಲ ಮನಪಟಲದಲ್ಲಿ ಸುಳಿದಾಡಿ ಆ ದಿನವನ್ನು ಮುದದಿಂದ ಕಳೆಯುವಲ್ಲಿ ಇದು ಸಹಕರಿಸುತ್ತದೆ ಎಂದಾದರೆ ಆ ಘಮಲಿಗೆ ಒಂದು ಸಲಾಂ ನೀಡಲೆಬೇಕು.
ಚಿಕ್ಕವನಿದ್ದಾಗಿನ ಆಟಗಳೂ ಅದರಲ್ಲಿನ ನೆನಪುಗಳೂ ಆ ಖುಷಿ ಎಲ್ಲವೂ ಧೂಳಿನ ವಾಸನೆಯಲ್ಲಿ ಮತ್ತೆ ನನಗೆ ನೆನಪಿಗೆ ಬಂದು ಖುಷಿಪಡಬಲ್ಲೆ,ನನಗೆ ನಾನೆ ಈ ಪರಿಗೆ ಅಚ್ಚರಿ ಪಡುವದುಂಟು. ಮೊದಲ ಮಳೆ ಬಿದ್ದಾಗ ವಾತಾವರಣದಲ್ಲಿ ಒಡಮೂಡುವ ಒಂದು ವಿಶಿಷ್ಟ ಘಮಲನ್ನು ಅಸ್ವಾದಿಸಲೂ ಕಾಯುತ್ತಿರುತ್ತೇನೆ ಯಾಕೆಂದರೆ ಆ ಘಮಲಿನ ಜೊತೆ ನವಿರು ನೆನಪುಗಳಿವೆ, ಅದು ನನಗೆ ಮುದವನ್ನು ಒದಗಿಸಬಲ್ಲುದು.ಮೊದಲ ಮಳೆ ಬರುವದರ ಮುಂಚಿನ ಅಮ್ಮನ ಸಿದ್ದತೆಗಳೂ ಒಂದಾ ಎರಡ. ಹಪ್ಪಳ ಸೆಂಡಿಗೆ ಮಾಂಬಳ ಮುಂತಾದುವನ್ನೂ ಮಳೆಗಾಲವನ್ನೂ ಸವಿಯಲೂ ಮಾಡಿಟ್ಟುಕೊಂಡು ಮಳೆಗಾಲಕ್ಕಾಗಿ ಕಾಯುವ ತಾಯಿ ಮೊದಲ ಮಳೆಯ ಮಣ್ಣಿನ ಘಮಲು ನೆನಪಿಸಿಕೊಡುವದು ಸಾಮಾನ್ಯ.ಹಳ್ಳಿಗರು ಮಳೆಗಾಲಕ್ಕಾಗಿ ಕಾಯುವ ಪರಿ ಅದೊಂದು ಸೊಬಗು, ಕೂಲಿ ನಾಲಿ ಮಾಡಿಕೊಂಡೆ ಬದುಕುವ ಒಂದಷ್ಟು ಮಂದಿಗೆ ಮಳೆಯ ಮೊದಲು ಮಳೆಗಾಲದಲ್ಲಿ ತಮ್ಮಲ್ಲಿದ್ದ ಜಮೀನಿನಲ್ಲಿ ಉತ್ತು ಬಿತ್ತು ಬೆಳೆಯಲೂ ಬೇಕಾಗುವ ಧಾನ್ಯಗಳನ್ನೂ ಸಂಗ್ರಹಿಸಬೇಕು,ಮಳೆಗಾಲ ಪೂರ್ತಿ ಕಳೆಯಲೂ ಬೇಕಾದ ಸೌದೆ ಮುಂತಾದುವನ್ನು ಹೊಂದಿಸಬೇಕು.ಮಳೆ ಬಂತೆಂದರೆ ಸಾಕು ಕೃಷಿ ಚಟುವಟಿಕೆಯಲ್ಲಿ ತೊಡಗುವ ಇವರು ಮಳೆಯನ್ನು ನೋಡುವ ಪರಿಯೆ ಬೇರೆ, ಹೀಗೆ ಈ ಎಲ್ಲಾ ಬದುಕುಗಳು ಪ್ರತಿ ಸಲ ಮೊದಲ ಮಳೆಯ ಮಣ್ಣಿನ ವಾಸನೆ ಜೊತೆಗೆ ನೆನಪಿಗೆ ಬರುವಂತದ್ದು.ಅದಾಕೊ ಏನೊ ನಾನಿನ್ನೂ ನನ್ನ ಹಳ್ಳಿಗರ ಜೊತೆಗೆನೆ ಈ ಎಲ್ಲಾ ಚಟುವಟಿಕೆಯಲ್ಲಿ ತೊಡಗಿದ್ದೇನೆ ಅನ್ನೊ ಭ್ರಮೆಯೊಡನೆಯ ಸವಿ ಅನುಭೂತಿ ಮೊದಲ ಮಳೆಯ ಮಣ್ಣಿನ ಘಮಲು ನನಗೊದಗಿಸುತ್ತವೆ.
ಕಡಲ ತೀರದಲ್ಲಿ ಸಂಚರಿಸುವಾಗಲೆಲ್ಲ ಕಾಡುವದು ನನ್ನ ಮಂಗಳೂರಿನ ಜೀವನ. ಕೆಲಸದ ನಿಮಿತ್ತ 15 ತಿಂಗಳೂ ನಾನಲ್ಲೆ ವಾಸವಾಗಿದ್ದೆ,ಅಲ್ಲಿ ಒಂದು ಮುಸ್ಲಿಂ ಕುಟುಂಬದ ಒಡನಾಟ,ನನ್ನ ಮನೆಮಗನಂತೆ ಅವರು ನೋಡಿಕೊಂಡಿದ್ದು, ವಾರಾಂತ್ಯದಲ್ಲಿ ಬೀಚ್ ನಲ್ಲಿ ಕುಳಿತು ಮುಂದಿನ ಗುರಿಗಳ ಬಗ್ಗೆ ಯೋಚಿಸಿದ್ದೂ ಕೈಯಲ್ಲಿ ಕಾಸಿಲ್ಲದೆ ಒದ್ದಾಡಿದ್ದು,ತುಳು ನಾಟಕ ರಂಗಭೂಮಿಯ ಒಡನಾಟ ದಕ್ಕಿದ್ದೂ ಎಲ್ಲವೂ ಈ ಕಾಲದಲ್ಲೆ, ಅದ್ಯಾವುದೆ ಜಾಗವಾಗಿರಲಿ ಕಡಲ ತೀರದ ಮೀನ ವಾಸನೆಯೂ ಮೂಗಿಗೆ ಬಡಿದರೆ ಸಾಕು ಈ ನೆನಪುಗಳು ನನ್ನಲ್ಲಿ ಜೀವ ಪಡೆಯುತ್ತವೆ.ಹೀಗೆ ಕೆಲಸದ ಮೇಲೆ ತಿರುವನಂತಪುರಕ್ಕೆ ಒಂದು ಭಾರಿ ಹೋಗಿದ್ದೆ ಮಳಿಯಾಳಿ ಭಾಷೆ ನನಗೆ ಬರಲೊಲ್ಲದು ಹಿಂದಿ ಇಂಗ್ಲೀಷ್ ಅಲ್ಲಿಯವರಿಗೆ ಅಷ್ಟಕಷ್ಟೆ. ಈ ಪಚೀತಿಗಳ ನಡುವೆ ನನ್ನ ಕೆಲಸವೂ 1 ವಾರಕ್ಕೆ ಮುಂದೂಡಲ್ಪಟ್ಟು ಒಬ್ಬಂಟಿಯಾಗಿ ವಸತಿ ಗೃಹದ ಕೋಣೆಯೊಳಗೆ ಬಂಧಿಯಾಗಬೇಕಿದ್ದ ನನ್ನನ್ನೂ ಅದರಿಂದ ಹೊರತಂದು ನೆನಪುಗಳ ಅವಲೋಕನದತ್ತ ನನ್ನ ನಾ ತೆರೆದುಕೊಳ್ಳುವಂತೆ ಮಾಡಿದ್ದು ಕೋವಳಂ ಬೀಚ್ ಮತ್ತು ಅಲ್ಲಿನ ಬೀಚ್ ಘಮಲು.ನನ್ನೆಲ್ಲ ಕಡಲ ಬದಿ ಜೀವನದ ನೆನಪುಗಳನ್ನು ಪುನರಪಿ ಕಡಲಾಗಿ ನೆನಪಿಸಿತ್ತು ನನ್ನಲ್ಲಿ ಒಬ್ಬಂಟಿತನವನ್ನೂ ನುಸುಳಲೂ ಬಿಡುಗೊಡಲಿಲ್ಲ ಅದು.ನೆನಪುಗಳೆ ಕೈ ಹಿಡಿದು ಸಾಗುತ್ತೆ ಅನ್ನೋದು ಇದಕ್ಕೆ ಇರಬಹುದು.
ಘಮಲಿನಲ್ಲೂ ಕೆಲವಾರು ತರಗಳಿವೆಯಲ್ಲವೆ? ಮಣ್ಣಿನ ವಾಸನೆ ಅಂತಂದೆ, ಬೆಂಗಳೂರಿನಲ್ಲಿ ಮಳೆ ಬಿದ್ದಾವಗ ಬರುವ ಮಣ್ಣಿನ ವಾಸನೆ ಹಳ್ಳಿಯಲ್ಲಿ ಮಳೆ ಬಿದ್ದಾವಾಗ ಬರುವ ಮಣ್ಣಿನ ವಾಸನೆ ಹುಟ್ಟುವ ರೀತಿ ಒಂದೆ ಆಗಿದ್ದರೂ ಸೂಕ್ಷ್ಮವಾಗಿ ಗಮನಿಸಿದಾಗ ವ್ಯತ್ಯಾಸಗಳು ಕಂಡು ಬರುತ್ತದೆ ಅಲ್ಲವೆ?ತಾಯಿ ಒಗೆದ ಬಟ್ಟೆ ನಾವೆ ಒಗೆದುಕೊಂಡಂತ ಬಟ್ಟೆ ಅದು ಹೊಮ್ಮಿಸೊ ಘಮಲಿನಲ್ಲಿ ವ್ಯತ್ಯಾಸವಿದೆಯಲ್ಲವೆ?ಅಷ್ಟೆ ಏಕೆ ಪ್ರತಿ ಮನೆ ಮನೆಗೂ ಅದರದ್ದೇ ಆದ ಘಮಲುಗಳಿವೆ ಅಲ್ಲವೆ?ನೀರ್ ದೋಸೆ ಅಂದಾವಾಗ ಶೆಟ್ಟರ ಹೊಟೇಲೆ ನೆನಪಿಗೆ ಬರಬೇಕು ಏಕೆ? ಟೀ ಅಂದಾವಾಗ ಕಾದ್ರಿ ಕಾಕ ನೆನಪಾಗೋದು ಯಾಕೆ?ಬೀಡಿ ವಾಸನೆ ಅಂದಾವಾಗ ಯಾಕೆ ನಾರಾಯಣ, ಕೂಸ, ಕೊರಗಪ್ಪ, ಮಾದು ಇವರುಗಳೆ ನೆನಪಾಗ್ತಾರೆ?ಇದೆಲ್ಲಕ್ಕೂ ಕಾರಣ ನಾವು ಆ ವಾಸನೆಗಳನ್ನು ಮೊದಲಾಗಿ ಅಲ್ಲೆ ಆಘ್ರಾಣಿಸಿ ಇಷ್ಟ ಪಟ್ಟಿದ್ದಕ್ಕೆ ಇರಬಹುದು ಅಲ್ಲವೆ? ಅದೇನೆ ಇರಲಿ ವಾಸನೆ ನೆನಪಿನ ಜೊತೆಗೆ ಸ್ವಾದಕ್ಕೆ ಬರುವದು ದಿಟ.ವಾಸನೆಗಳೊಂದಿಗೆ ನೆನಪುಗಳೂ ಅಡಗಿದೆ ಅಲ್ಲವೆ? ಸಂದರ್ಭಕ್ಕೆ ಅನುಗುಣವಾಗಿ ಬೇರೆ ಬೇರೆ ಘಮಲುಗಳು ಸ್ವಾದಕ್ಕೆ ಬಂದಾವಾಗ ಅದರ ಜೊತೆಗಿನ ನೆನಪುಗಳೂ ನಮ್ಮನ್ನ ತಾಕಿ ಮುದಗೊಳಿಸುವದಂತೂ ನಿಜ.ಘಮಲುಗಳು ಬರಿಯಾ ವಾಸನೆಗಳಲ್ಲ ಅದು ನಮ್ಮ ನೆನಪನ್ನೂ ಹೊತ್ತು ಸಾಗುವ ಬಂಡಿ.
ಅಹಾ ಎಂಭ ಹೆಸರಿನಲ್ಲಿ ಅವಧಿಯಲ್ಲಿ ಪ್ರಕಟವಾದ ಈ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ
ಅಹಾ ಎಂಭ ಹೆಸರಿನಲ್ಲಿ ಅವಧಿಯಲ್ಲಿ ಪ್ರಕಟವಾದ ಈ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ
ನನಗೂ ನೆನಪಿನ ಬುತ್ತಿಯ ಮುಚ್ಚಳ ತೆಗೆದ ಅನುಭವ ಇಲ್ಲಿ. ನಮ್ಮ "ಕುಡ್ವ"ರ ಗೋಳಿಬಜೆ ಘಮ ಘಮ, ಹೆಬ್ಬಾರರ ಮಸಾಲೆದೋಸೆಯ ಪರಿಮಳಕ್ಕೆ ಇನ್ನೂ ಮೂಗು ಒಗ್ಗಿಕೊಂಡಿದೆ. ವಸಂತ ಕಾಮತರ ಕೇಟಿ (ಕಡಕ್ ಚಾಯ್) ನೆನಪಲ್ಲೇ ನಾನೇ ಮಾಡಿದ ಚಾ ಹೀರುತ್ತಿದ್ದೇನೆ.
ReplyDeleteಸಾಯಂಕಾಲಕ್ಕೆ ಒಣಬಂಗುಡೆಯ ಬಾಲವಿದ್ದರೆ ಸುಟ್ಟು ಮತ್ತಷ್ಟೂ ಘಮಲು ಇಳಿಸಬಹುದಿತ್ತೇನೋ ಈ ಹಳದಿ ಕೋಣೆಯೊಳಗೆ ಇಲ್ಲಿ ಪಟ್ಟಣದಲ್ಲಿ.
ಘಮಲುಗಳೊಡಗಿನ ನೆನಪುಗಳನ್ನು ಭಾವನಾತ್ಮಕವಾಗಿ ಬಿಡಿಸಿಡುವ ಪ್ರಯತ್ನವಾಗಿದೆ ಈ ಲೇಖನದಲ್ಲಿ.. ನಿಮ್ಮೊಳಗಿನಲ್ಲಿರುವ ಒಬ್ಬ ಒಳ್ಳೆಯ ಬರಹಗಾರನನ್ನು ಕಂಡು ಹಿಂದೆ ಮನಸಾರೆ ಅಭಿನಂದಿಸಿದ್ದೆ, ಇಂದು ಈ ಲೇಖನಕ್ಕಾಗಿ ಮತ್ತೆ ಅಭಿನಂದಿಸುತ್ತೇನೆ.. ಘಮಲುಗಳೊಡನಿರುವ ನನ್ನ ಜೀವನದ ನೆನಪುಗಳನ್ನು ಕೆದಕಿತು ನಿಮ್ಮ ಲೇಖನ.. ಲೇಖನ ಬರೆಯುವ ಮೊದಲು ಬರಹಗಾರನ ಮಾಡಿಕೊಂಡಿರಬಹುದಾದ ತಯಾರಿ ಬೆರಗಾಗುವಂತದ್ದು.. ನಿಮ್ಮ ಲೇಖನಗಳಿಗೆ ಭಾವನಾತ್ಮಕ ಸ್ಪರ್ಶ ನೀಡುತ್ತೀರಿ ಅದು ಮನಸ್ಸನ್ನು ಸೆಳೆಯುತ್ತದೆ.. ಚೆಂದದ ಲೇಖನ ರಾಘಣ್ಣ..:)))
ReplyDeleteನಾರಾಯಣ, ಕೂಸ, ಕೊರಗಪ್ಪ, ಮಾದು ಇವರೆಲ್ಲರ ವಯಸ್ಸು ಏರುತ್ತಿದ್ದಂತೆ ರಟ್ಟೆಯ ಬಲ ಕಡಿಮೆಯಾಗಿ ನಮ್ಮ ಮನೆಯ ಸಣ್ಣ ಪುಟ್ಟ ಕೆಲಸಕ್ಕೆ ಬರುವುದನ್ನೇ ನಿಲ್ಲಿಸಿರಬಹುದು. ಆದರೆ ಇಂದಿಗೂ ಮನೆ ಹತ್ತಿರದ ಕಾಡಲ್ಲಿ ನರಿ ಊಳಿಟ್ಟರೆ, ಕಾಡು ಹಂದಿ ಓಡಾಡಿದರೆ ನನಗೆ ನೆನಪಾಗುವುದು ಕೂಸ ಕೊರಗಪ್ಪ ಮಾದುವಿನಂತಹ ಅಪ್ಪಟ್ಟ ಹುಟ್ಟು ಶಿಕಾರಿಗಳೇ. ನಮ್ಮ ಮನೆ ಪಕ್ಕದ ಕಾಡಲ್ಲಿನ ಶಿಕಾರಿ ಅನುಭವವನ್ನು ಹಂಚಿಕೊಳ್ಳಲು ಮರೆತರೂ ಲೇಖನ ಚೆನ್ನಾಗಿದೆ. ನಿನ್ನ ನೆನಪಿನೊಂದಿಗೆ ನನ್ನ ಹಲವು ನೆನಪುಗಳು ಸಮ್ಮಿಳಿತಗೊಂಡ ಕಾರಣಕ್ಕೋ ಏನೋ ಓದಿ ರೋಮಾಂಚನಗೊಂಡೆ. ಬಿಜೆಪಿ ಸರಕಾರ ಬೀಳಲು ಕಾಯುತ್ತಿರುವ ನನ್ನ ಉದ್ದೇಶ ಚುಣಾವಣೆ ಸಂದರ್ಭದಲ್ಲಿ ದೀಡಿರ್ ಪ್ರತ್ಯಕ್ಷವಾಗುವ ಕಾಸೀಂ ಕಾಕನ ಹೋಟೆಲ್ ಕಲ್ತಾಪ್ಪ ಮತ್ತು ಚಾ ಸವಿಯಲು.
Deleteಧನ್ಯವಾದಗಳು
ReplyDelete