Saturday, March 8, 2014

ನಮ್ಮದೆ ವಿನಾಶದ ಘೋರಿಗೆ ಮಗದೊಂದು ಕಲ್ಲು!

ಜೀವ ಸಂಕುಲವೆಂಬುದು ಪ್ರಕೃತಿ ಎಂಬ ತಾಯ ಗರ್ಭದಿಂದ ಜನಿಸಲಾರದ್ದು.ಅದೇನಿದ್ದರೂ ಅಲ್ಲೆ ಹುಟ್ಟಿ ಅದರೊಳಗೆ ಜೀವಿಸಿ ಅಲ್ಲೆ ಲೀನವಾಗಬೇಕೆಂಬುದು ನಮ್ಮ ಸಲಹುವ ಪ್ರಕೃತಿಯ ನಿಯಮ, ಜೀವಗಳು ಗರ್ಭ ಮುರಿದುಕೊಂಡು ಜನಿಸಲಿಚ್ಚಿಸಿದಷ್ಟು ತಾಯ ಗರ್ಭ ಸೀಳುತ್ತದೆ, ಜೀವ ಸಂಕುಲವನ್ನು ಸಲಹೊ ತಾಯ ಅಳಿವು ವಿನಾಶವನ್ನು ತಂದೊಡ್ಡುತ್ತದೆ. ಈ ಸಮಾಧಿಯನ್ನು ನಾವು ಕಟ್ಟಲು ಶುರು ಮಾಡಿ ಬಹಳ ವರುಷಗಳೆ ಕಳೆದಿದೆ. ನಮ್ಮನ್ನು ನಾವು ಅಂತ್ಯಗೊಳಿಸುವದಕ್ಕೆ ಬೇಕಾದ ಸರ್ವ ವಿಧದ ತಯಾರಿಯಲ್ಲು ನಾವು ತೊಡಗಿದ್ದೇವೆ. ವಿನಾಶವೆಂಬ ಈ ಸಮಾಧಿಗೆ ಮತ್ತೊಂದು ಕಲ್ಲು ಪೇರಿಸಿದ್ದು ಮೊನ್ನೆ ನಮ್ಮ ಮುಖ್ಯಮಂತ್ರಿಗಳು. ‘ಎತ್ತಿನ ಹೊಳೆ ಯೋಜನೆ’ ಎಂಬುದು ಆ ಸಮಾಧಿ ಕಲ್ಲಿನ ಹೆಸರು.

ಪ್ರಕೃತಿಯೊಡಲ ಕರುಳ ಬಳ್ಳಿ ಪಶ್ಚಿಮ ಘಟ್ಟವನ್ನು ಘಾಸಿಗೊಳಿಸಿ ನದಿಯೊಂದರ ಉಪನದಿಯನ್ನು ಹುಟ್ಟಿನ ಸ್ಥಳದಲ್ಲೆ ಮುರುಟಿ ಆ ಮೂಲಕ ಅದರ ವಿನಾಶಕ್ಕೂ ಅಡಿಗಲ್ಲಿಕ್ಕುವ ಯೋಜನೆಯೆ ಎತ್ತಿನ ಹೊಳೆ ಯೋಜನೆ ಎನ್ನುವದು ಒಂದು ವಾಕ್ಯದ ವಿವರಣೆಯಾದರೆ ಇನ್ನಷ್ಟು ಸ್ಥೂಲವಾಗಿ ವಿವರಿಸುವದಿದ್ದರೆ…… ಎತ್ತಿನ ಹಳ್ಳ ಎಂಬುದು ಕೆಂಪುಹೊಳೆಯೊಂದಕ್ಕೆ ಬಂದು ಸೇರುವ ಒಂದು ಹಳ್ಳವಷ್ಟೆ. ಅದ್ಯಾಕೊ ಇದು ಇತ್ತೀಚೆಗೆ ಪ್ರಮೋಷನ್ ಪಡೆದು ಹೊಳೆಯಾಗಿದೆ.ಈ ಹಳ್ಳದಿಂದ ಪ್ರಕೃತಿ ನಿಯಮ ಮೀರಿ 24 ಟಿ ಎಂಸಿ ನೀರು ತುಮಕೂರು, ಬೆಂಗಳೂರು ಗ್ರಾಮಾಂತರ,ಚಿಕ್ಕಬಳ್ಳಾಪುರ ಮೂಲಕ ಕೋಲಾರಕ್ಕೆ ಹರಿಯಬೇಕು ಇದಕ್ಕಾಗಿ ವ್ಯಯ ಮಾಡುವ ವಿದ್ಯುತ್ 350 ಮೆಗಾ ವ್ಯಾಟ್ .ಯೋಜನಾ ಗಾತ್ರ ಸುಮಾರು 2900 ಕೋಟಿ ರುಪಾಯಿ.ಈ ಮೂಲಕ ಹಲವು ಜಿಲ್ಲೆ, ಹಳ್ಳಿ, ಪಟ್ಟಣ ಗಳಿಗೆ ಕುಡಿಯುವ ನೀರು ಒದಗಿಸುವದು ಸರ್ಕಾರದ ಯೋಜನೆ. ಕೇಳುವದಕ್ಕೂ ಸರ್ಕಾರದ ಈ ಬಗ್ಗಿನ ನಾಟಕ ನೋಡುವದಕ್ಕೂ ಬಹಳ ಠಾಕೂ ಠೀಕಿನ ಮಸ್ತ್ ಯೋಜನೆಯಾಗಿ ನಮಗೆ ದಕ್ಕುತ್ತಿರುವದು ಸುಳ್ಳಲ್ಲ, ಹಲವರೂ ಹೀಗೆ ಅಂತ ನಂಬಿದ್ದಾರೆ ಕೂಡ. ಆದರೆ ವಾಸ್ತವ ಇದಲ್ಲ ಅನ್ನುವದು ಅಷ್ಟೆ ಸತ್ಯ.

ಎತ್ತಿನ ಹೊಳೆಯಲ್ಲಿ ಮಾರ್ಚ್ ಎಪ್ರೀಲ್ ಮೇ ತಿಂಗಳಲ್ಲಿ ದೊರಕಬಹುದಾದ ನೀರಿನ ಪ್ರಮಾಣ ಏನು? ನಾಶವಾಗುವ ಅರಣ್ಯ ಸಂಪತ್ತಿನ ಅಂದಾಜು ಏನು? ರಚಿಸಬಹುದಾದ ಸಣ್ಣ ಸಣ್ಣ ಚೆಕ್ ಡ್ಯಾಂ ಗಳಿಂದ ಮಳೆಗಾಲದಲ್ಲಿ ಪಂಪ್ ಮಾಡಿದ ನೀರಲ್ಲಿ ವರುಷ ಪೂರ್ತಿ ಬಯಲು ಸೀಮೆಗೆ ನೀರುಣಿಸಲು ಸಾಧ್ಯವೆ? ( ಅಸಂಬದ್ದವಾಗಿ ಮಳೆಗಾಲದಲ್ಲಿ ಮಾತ್ರ ಪಂಪ್ ಮಾಡಲಾದ ನೀರನ್ನು ಹರಿಸಲಾಗುವದು ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತಿದೆ ). ಸದನದಲ್ಲಿ ಎಂಸಿ ನಾಣಯ್ಯ ಎತ್ತಿನ ಹೋಳೆ ಯೋಜನೆಯ ಶಂಕುಸ್ಥಾಪನೆ ಮೊದಲು ಕರಾವಳಿ ಜನರ ಅಭಿಪ್ರಾಯ ಕೇಳಿಲ್ಲ ಅನ್ನುವ ಮಾತಿಗೆ ಸರ್ಕಾರದ ನೀರಾವರಿ ಸಚಿವರೆ ಹೌದು ಅಂದಿದ್ದರು.ಹಾಗಿದ್ದಲ್ಲಿ ಈ ನಿಟ್ಟಲ್ಲಿ ಕನಿಷ್ಟ ಸೌಜನ್ಯವನ್ನೂ ಸರ್ಕಾರ ಮೀರಿತೆ? ಈ ತರಾತುರಿಯ ನಿರ್ಧಾರಗಳು ಸರ್ಕಾರದಿಂದ ಬಂದಿದ್ದಾದರೂ ಏಕೆ?ಹೋಗಲಿ ಇಷ್ಟು ದೊಡ್ಡ ಮಟ್ಟದ ಯೋಜನೆಯೊಂದಕ್ಕೆ DPR (Detailed Project Report) ಇನ್ನೂ ಸಿದ್ದವಾಗಿಲ್ಲ.ಈ ಯೋಜನೆಯ ಉಸ್ತುವಾರಿಯನ್ನು ಕರ್ನಾಟಕ ನೀರಾವರಿ ನಿಗಮಕ್ಕೆ ವಹಿಸಲಾಗಿದ್ದು ಯೋಜನೆಯ ಜಾರಿಗೆ ಅದು ಅವಲಂಬಿಸಿರುವದು ಖಾಸಗಿ ಸಂಸ್ಥೆಗಳ ದಾಖಲೆಯ ಮಳೆ ಪ್ರಮಾಣದ ಲೆಕ್ಕಾಚಾರ, ಕಾರಣ ತನ್ನದೆ ಜಲಸಂಪನ್ಮೂಲ ಇಲಾಖೆಯ 22 ವರುಷಗಳ ಮಳೆಯ ಪ್ರಮಾಣದ ದಾಖಲೆಗಿಂತ ಖಾಸಗಿ ಸಂಸ್ಥೆಯ ಮಳೆ ಪ್ರಮಾಣದ ದಾಖಲೆ ಹೆಚ್ಚಿರುವದು. ಧಾಖಲೆಗಳು ಇಂತಿವೆ…..(ಮಾಹಿತಿ www.sundararao.blogspot.com)


1.ಕನೀನಿನಿಯ ಭದ್ರಾ ಮೇಲ್ದಂಡೆ ಯೋಜನಾವಲಯದ ಮುಖ್ಯ ಎಂಜಿನಿಯರ್ ದೆಹಲಿಗೆ ಬರೆದ ಪತ್ರದಲ್ಲಿ: 6500 ಮಿ.ಮೀ.
2. ಕನೀನಿನಿಯ ಯೋಜನಾ ವರದಿಯಲ್ಲಿ: 6280 ಮಿ.ಮೀ
3. ಕನೀನಿನಿಯ ತಪ್ಪು ಲೆಕ್ಕಾಚಾರವನ್ನು ತಿದ್ದಿದಾಗ: 6210 ಮಿ.ಮೀ
4. ನಾಲ್ಕೂ ಖಾಸಗಿ ಮಳೆಮಾಪನ ಕೇಂದ್ರಗಳನ್ನು ಪರಿಗಣಿಸಿದಾಗ : 5695 ಮಿ.ಮೀ
5. ಜಲಸಂಪನ್ಮೂಲ ಇಲಾಖೆಯ 22 ವರ್ಷಗಳ ಅಂಕಿಅಂಶದ ಸರಾಸರಿ: 3072 ಮಿ.ಮೀ.
6. http://www.samsamwater.com/climate/ ಎಂಬ ಜಾಲತಾಣದ ಪ್ರಕಾರ ಸುಮಾರು 3000 ಮಿ.ಮೀ. 


ಯಾಕೀ ಗೊಂದಲ???? ಇಷ್ಟು ದೊಡ್ಡ ಮೊತ್ತದ ಯೋಜನೆಯ ಅನುಷ್ಠಾನದ ಮೊದಲು ಸಣ್ಣದಾಗಿ ಕಾಣುವ ದೊಡ್ಡ ಗೊಂದಲಗಳು ಪರಿಹಾರವಾಗಬೇಕಲ್ವೆ? ಹಾಗಾದರೆ 24 ಟಿ ಎಂಸಿ ನೀರು ಬರೀಯ ಬಾಯಿ ಮಾತೆ?ಎತ್ತಿನ ಹೊಳೆ ಬಗ್ಗೆ ಬಹಳಷ್ಟು ತಜ್ಞರ ಅಭಿಪ್ರಾಯವ 5 ಟಿ ಎಂ ಸಿ ಗಿಂತ ಜಾಸ್ತಿ ನೀರು ದೊರೆಯುವದು ಕಷ್ಟವೇ ಸರಿ ಎಂಬುದು.ಹಾಗಿದ್ದರೆ ಈ ಯೋಜನೆಯ ಸಾರ್ಥಕಥೆ ಏನು? ಅತ್ತ ಪರಿಸರ ನಾಶ, ಇತ್ತ ನದಿಯೊಂದರ ಮೂಲಕ್ಕೆ ಕೊಡಲಿಯೇಟು. ಅಷ್ಟು ಬಿಟ್ಟರೆ ಮುಂದೇನೂ ಕಾಣುವದಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳದ ಸರ್ಕಾರ ಯೋಜನೆಯೊಂದರ ಮುಂದುವರಿದ ಭಾಗವಾಗಿ ಕೆಂಪು ಹೊಳೆಗೆ ಕೈ ಯಿಕ್ಕುತ್ತದೆ,ತದ ನಂತರ ಕುಮಾರಧಾರ,ಕರಿ ಹೊಳೆ ಇತ್ಯಾದಿ ಇತ್ಯಾದಿ ಮುಂದುವರಿದು ನೇತ್ರಾವತಿಯ ಮೂಲಗಳೆಲ್ಲ ಅಳಿದು ನದಿಯೊಂದು ಅಳಿಯುವ ತನಕ ಸರ್ಕಾರದ ಯೋಜನೆ ಮುಗಿಯಲ್ಲ. ಅಲ್ಲಿಗೆ ಬರ ಹೋಗಲಾಡಿಸಲು ಹರಿವ ನದಿ ತಿರುಗಿಸಿದ ಸರ್ಕಾರ ಮಗದೊಂದು ಬರ ನಾಡನ್ನು ಸೃಷ್ಠಿಗೊಳಿಸುವದು ಖರೆ. ಕರಾವಳಿಯ ಜನತೆಯ ಆತಂಕ ಈ ಸಂದಿಗ್ದತೆಯಲ್ಲಿ ನಿಂತಿದೆ. ಸರ್ಕಾರ ಈ ಗೊಂದಲಗಳನ್ನು ಪರಿಹರಿಸಬೇಕಿತ್ತು ಆದರೆ ಈಗ ಲೋಕಸಭಾ ಚುನಾವಣೆ ಘೋಷಣೆಯಾಗಿದೆ…ಸೋ ನೀತಿ ಸಂಹಿತೆಯೆಂಬ ಬೀಗ ಸರ್ಕಾರಕ್ಕೆ ಬಿದ್ದಿದೆ, ಅಲ್ಲಿಗೆ ಗೊಂದಲಗಳು ಗೊಂದಲಗಳಾಗೆ ಮುಂದುವರಿಯಬೇಕಾದ್ದು ಅನಿವಾರ್ಯ.ಹಾಗು ಈ ನಿಟ್ಟಲ್ಲಿ ತರಾತುರಿಯ ಶಂಕುಸ್ಥಾಪನೆಯ ಸರ್ಕಾರದ ಹಿಂದಿನ ಉದ್ದೇಶ ಸ್ಪಷ್ಟ.

ಮಂಗಳೂರಿನಂತ ಪಟ್ಟಣ ಇನ್ನು 2-3 ವರುಷಗಳಲ್ಲಿ ಇನ್ನಷ್ಟು ಬೆಳೆಯಲಿದೆ. ನೇತ್ರಾವತಿಗೆ ಅಡ್ಡಲಾಗಿ ಕಟ್ಟಿರುವ ಬಂಟ್ವಾಳ ಬಳಿಯ ತುಂಬೆ ಢ್ಯಾಂ ಮಂಗಳೂರು ಪಟ್ಟಣಕ್ಕೆ ಕುಡಿಯುವ ನೀರೊದಗಿಸುತ್ತದೆ. ಸದ್ಯಕ್ಕೆ ಮಾರ್ಚ್ ನಂತರ ಪೂರ್ಣ ಪ್ರಮಾಣದಲ್ಲಿ ಅವಶ್ಯಕತೆಗಳಿಗೆ ತಕ್ಕಂತೆ ನೀರೊದಗಿಸಲು ಸರ್ಕಸ್ ಮಾಡಬೇಕಾಗಿ ಬಂದಿದೆ. ಅರೆ ನಿಮಗೇನು 6 ರಿಂದ 12 ಮೀಟರ್ ಆಳ ತೆಗೆದರೆ ನೀರು ಸಿಗುತ್ತದೆ ಎಂಬ ಮಾತು ಕೇಳಿ ಬರಬಹುದು. ಅದರೆ ಕರಾವಳಿ ತೀರದ ಶೇಕಡಾ 60 ರಷ್ಟು ನೀರು ಉಪ್ಪು ಹಾಗು ಬಳಕೆಗೆ ಯೋಗ್ಯವಲ್ಲದ್ದು.ಇಲ್ಲದಿದ್ದಲ್ಲಿ 40 ಕಿ ಮಿ ಮೊದಲೆ ಡ್ಯಾಂ ಕಟ್ಟ ಬೇಕಾದ ಅವಶ್ಯಕತೆ ಇರಲಿಲ್ಲ. ಪರಿಸ್ಥಿತಿ ಈ ತೆರನಾಗಿರಬೇಕಾದರೆ ಕರಾವಳಿಯ ಲೈಪ್ ಲೈನ್ ನೇತ್ರಾವತಿಯೆಂಬ ನದಿಗೆ ಘಾಸಿಗೊಳಿಸುವ ಸರ್ಕಾರದ ಯೋಜನೆ ಸಮರ್ಪಕವಾದುದಲ್ಲ ಎಂಬುದು ಅರಿವಾಗುತ್ತದೆ. 

ನೀರು ದೇಶದ ಆಸ್ತಿ, ನೀರು ಕೆಳಗೆ ಹರಿಯಬೇಕೆಂದರೆ ಮೇಲಿನವರೇನು ಸಾಯೋದ? ಎಂಭ ಮಾತುಗಳು ಕೇಳಿ ಬರುತ್ತವೆ. ಖಂಡಿತ ಯಾರು ಹಾಗಂದುಕೊಂಡಿಲ್ಲ. ಬಯಲು ಸೀಮೆಯಲ್ಲಿ ಇವರೇನು ಎತ್ತಿನ ಹೊಳೆಯ ನೀರ ಮೂಲಕ ತುಂಬಿಸಬೇಕೆಂದುಕೊಂಡಿರುವ 311 ಕೆರೆಗಳೂ ಸೇರಿ ಒಟ್ಟು ಸುಮಾರು 528 ಕೆರೆಗಳಿಗೆ ಮರು ಜೀವ ಕೊಡುವ ಮತ್ತೊಂದು ಸಲಹೆ ಸರ್ಕಾರದ ಮುಂದಿದೆ. ಇದಕ್ಕೆ ತಗಲುವ ವೆಚ್ಚ ಬರೀಯ ಮುನ್ನೂರರಿಂದ ನಾಲ್ಕೂನೂರು ಕೋಟಿಗಳು. ಸರ್ಕಾರಕ್ಕೆ ಯಾಕೊ ಈ ಪರಿಹಾರ ಯೋಜನೆ ಪಥ್ಯವಾಗಿಲ್ಲ. ಅದಕ್ಕೇನಿದ್ದರೂ ದೊಡ್ಡೆತ್ತಿನ ಬಾಲವೆ ಬೇಕು. ಎತ್ತಿನ ಹೊಳೆ ಮುಂದುವರಿದು ಕೆಂಪು ಹೊಳೆ ಇತ್ಯಾದಿ ಇತ್ಯಾದಿ ಯೋಜನೆ ಎಂಬ ಚಿನ್ನದ ಮೊಟ್ಟೆ ಇಡುವ ಕೋಳಿ ಯನ್ನು ಉದ್ದೇಶ ಪೂರ್ವಕವಾಗೆ ಅಪ್ಪಿಕೊಂಡಿದೆ.ಇದಕ್ಕಾಗಿ ವಿಶ್ವ ಪರಂಪರೆಗೆ ಸೇರಬಹುದಾದ ಪಶ್ಚಿಮ ಘಟ್ಟವನ್ನೂ ಸರ್ಕಾರ ಗಣ್ಯವಾಗಿಸಿಲ್ಲ. ಪವರ್ ಪ್ರಾಜೆಕ್ಟ್, ಪೆಟ್ರೋಲಿಯಂ ಸಾಗಾಟಕ್ಕೆ ಪೈಪ್ ಲೈನ್ ಇತ್ಯಾದಿ ಕಾರಣಗಳಿಗೆ ನಾಶವಾದ ಕಾಡಿನ ಪರಿಣಾಮದಿಂದ ಇಲ್ಲಿನ ಜನತೆ ಹೊರ ಬಂದಿಲ್ಲ. ಪ್ರಾಣಿಗಳು ತಾವಿಲ್ಲದೆ ನಾಡಿಗೆ ಬರ ತೊಡಗಿದೆ. ಮುಗಿದಂತ ಪ್ರೊಜೆಕ್ಟ್ ಗಳ ಇಪೆಕ್ಟ್ ಎಂಬಂತೆ ಆನೆಗಳ ಧಾಳಿಗೆ ಸುತ್ತಲಿನ ಜನತೆ ವಾರಕ್ಕೊಬ್ಬರಂತೆ ಆಹುತಿಯಾಗುತಿದ್ದಾರೆ. ಇದರ ಪರಿಣಾಮ ಆನೆ ಕಾರಿಡಾರಿಗೆ ಒಂದಷ್ಟು ಜಾಗವನ್ನು ಸಕಲೇಶಪುರ ಸುತ್ತಲಿನ ಮಂದಿ ನೀಡಬೇಕಾಗಿದೆ. ಬದುಕೆಂಬುದು ಪ್ರಕೃತಿಯೊಡಲಲ್ಲೆ ಎಂಬುದಾದ ಮೇಲೆ ಅದರ ಅತೀ ಸಾಮಿಪ್ಯತನವನ್ನು ಅನುಭವಿಸುವ ಈ ಮಂದಿ ತಮ್ಮ ಜೀವಸೆಲೆಗಳೆ ಘಾಸಿಗೀಡಾಗುತ್ತಿದೆ ಎಂಬುದಕ್ಕಾದರೂ ಈ ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಬೇಕಾಗಿದೆ.ಬೇಕು ಬೇಕೆಂದಂತೆ ಆಡಲು ಪ್ರಕೃತಿಯೆಂಬುದು ಆಟಿಕೆಯಲ್ಲ, ನದಿಯೊಂದು ಹರಿದು ಸಮುದ್ರ ಸೇರುತ್ತದೆ ಎಂದರೆ ಅದಕ್ಕೆ ತನ್ನದೆ ಆದ ಕಾರಣ ಗಳಿರುತ್ತದೆ. ಈ ಪ್ರಕೃತಿ ನಿಯಮವನ್ನು ನಾವರಿತಿರಬೇಕು ಅಷ್ಟೆ. ಯಾವುದೋ ರಾಜಕೀಯ ಹಿತಾಸಕ್ತಿಗಾಗಿ ಪ್ರಕೃತಿಯನ್ನು ಆಟಿಕೆ ಮಾಡಿಕೊಳ್ಳುವದು ಸರಿಯಲ್ಲ.ಒಬ್ಬರ ಬದುಕನ್ನು ಕಸಿದು ಮಗದೊಬ್ಬರಿಗೆ ಬದುಕು ಕೊಡುತ್ತೇವೆ ಎಂಬುದು ಬರೀಯ ಸುಳ್ಳು. ಮನುಷ್ಯ ಏನು ಬೇಕಾದರೂ ಸೃಷ್ಟಿಸಬಲ್ಲ,ಅದರೆ ಪ್ರಕೃತಿಯ ಅಳಿವು ಆತನನ್ನೂ ಅಳಿಸುತ್ತದೆ. ಒಂದು ಸೌಧವಳಿದರೆ ನೂರು ಸೌಧ ಕಟ್ಟಬಹುದು, ಒಂದು ನದಿಯಳಿದರೆ ಮತ್ತೆಲ್ಲಿಂದ ತರೋದು.ಬಯಲು ಸೀಮೆಗಿಂತಲೂ ದೊಡ್ಡ ಬರವನ್ನು ಉತ್ತರ ಕರ್ನಾಟಕದ ಮಂದಿ ಅನುಭವಿಸುತಿದ್ದಾರೆ ಅತ್ತ ಯಾವ ನದಿ ತಿರುಗಿಸೋಣ???? ಹೀಗೆ ಮಾಡುತ್ತಾ ಹೋದರೆ ಇದಕ್ಕೆ ಕೊನೆಯೆಂದು? ಅದುದರಿಂದ ಸ್ಥಳೀಯ ಜಲಮೂಲಗಳನ್ನು ಅಭಿವೃದ್ದಿ ಪಡಿಸುವತ್ತ ಗಮನ ಹರಿಸಬೇಕು. ಮಳೆ ನೀರನ್ನು ಹಿಡಿದಿಟ್ಟು ಅದ ಇಂಗಿಸುವ ಕಾರ್ಯಕ್ಕೆ ಒತ್ತು ಕೊಡಬೇಕು.ಮಳೆ ಕೊಯ್ಲು ಮುಂತಾದ ಕಾರ್ಯಗಳು ಸಮಾರೋಪಾದಿಯಲ್ಲಿ ಇಂತಲ್ಲಿ ನಡೆಯಬೇಕು., ಇಂತಹ ಕಾರ್ಯಗಳು ನಡೆಯುತ್ತದೆ ಕಾರಣಬಯಲು ಸೀಮೆ ಮಳೆ ಇಲ್ಲದ ನಾಡೇನಲ್ಲ, ಇನ್ನಾದರೂ ಅಳಿದುಳಿದ ಕೆರೆಯನ್ನೂ ತನ್ನ ಜೀವ ಸೆಲೆ ಎಂಬ ಕಾರಣಕ್ಕಾದರೂ ತ್ಯಾಜ್ಯದಿಂದ ಮುಕ್ತವಾಗಿಸಿ ಅದ ಪುನಶ್ಚೇತನ ಗೊಳಿಸಬೇಕು.ಅಂತರ್ಜಲ ಹೆಚ್ಚಿಸುವ ನಿಟ್ಟಲ್ಲಿ ಸರ್ಕಾರದ ಪ್ರಾಯೋಜಕತ್ವದಲ್ಲಿ ಸಮರೋಪಾದಿಯಲ್ಲಿ ಕೆಲಸ ನಡೆದರೆ ಒಂದೈದು ವರುಷದೊಳಗೆ ನೀರ ಸಮಸ್ಯೆಯಿಂದ ಮುಕ್ತವಾಗಬಹುದು. ಇಂತಹ ಯೋಜನೆಗಳನ್ನು ಕೈಗೊಳ್ಳುವದ ಬಿಟ್ಟು ಪರಿಸರವ ಆಹುತಿ ಪಡೆದು ಸಾವಿರಾರು ಕಿ ಮಿ ನೀರು ಹರಿಸುತ್ತೇವೆ ಎಂಭ ಯೋಜನೆ ಅತಾರ್ಕಿಕವಾಗಿ ಕಾಣುತ್ತದೆ. ಇಷ್ಟರ ಮೇಲು ಎತ್ತಿನ ಹೊಳೆ ಯೋಜನೆ ಕಾರ್ಯರೂಪಕ್ಕೆ ಬರುತ್ತದೆ ಎಂದಾದಲ್ಲಿ ನಾವೆ ಕಟ್ಟುತ್ತಿರುವ ವಿನಾಶದ ಘೋರಿಗೆ ಮತ್ತೊಂದು ಕಲ್ಲು ಸೇರ್ಪಡೆಗೊಂಡಿತೆಂಬುದೆ ಸರಿ.