Saturday, September 15, 2012

ಹಾದಿಯೊಂದು ವರುಷ ಪೂರ್ತಿಗೊಳಿಸಿ ಮುಂದುವರೆದಿದೆ...


ಅಗಷ್ಟ್ ೮ ಕ್ಕೆ ಒಂದು ವರುಷವನ್ನು ಪೂರೈಸಿದ ಈ ಬ್ಲಾಗ್ ೨ ನೆ ವರುಷದಲ್ಲಿದೆ, ಬರೆದಿದ್ದೇನೆ ಏನನ್ನ ಅಂದ್ರೆ ಏನನ್ನೂ ಇಲ್ಲ ತೋಚಿದ್ದು ಬರೆದದ್ದು ಒಳ್ಳೆಯದೆಂದು ತಿಳಿದದ್ದನ್ನು ಸಂಗ್ರಹಿಸಿದ್ದು ಇಷ್ಟೂ ಬಿಟ್ಟರೆ ಬರವಣಿಗೆಯ ಮಟ್ಟಕ್ಕೆ ಹೇಳಿಕೊಳ್ಳುವಂತದ್ದು ಏನೂ ಮಾಡಿಲ್ಲ,ಎಲ್ಲೋ ಬರೆದಿದ್ದು ಎಲ್ಲೋ ಕಳೆದು ಹೋಗಿ ನನ್ನನ್ನು ತುಲನೆ ಮಾಡುವ ಅವಕಾಶವನ್ನು ಕೈ ಚೆಲ್ಲುತಿದ್ದ ದಿನಗಳಲ್ಲೆ ಗೆಳೆಯನೊಬ್ಬನ ಒತ್ತಾಸೆಗೆ ಮಣಿದು ಈ ಬ್ಲಾಗ್ ಹುಟ್ಟು ಕಂಡಿತು ವರುಷಗಳ ಹಿಂದೆ,ಕ್ರಮೇಣ ಒಂದಷ್ಟೂ ಬರಹಗಾರ ಗೆಳೆಯರು ಹಿತೈಷಿಗಳು ನನ್ನ ಬರಹಗಳನ್ನು ಮೆಚ್ಚಿಕೊಂಡರೆಂಬುದು ನನಗೆ ಈಗಲು ದೊಡ್ಡ ಕನಸೆ.ಅವರೆಲ್ಲರ ಪ್ರೀತಿಗೆ ನಾ ಅಭಾರಿ.ಹೀಗೊಂದು ಬರೆದುಕೊಳ್ಳುವುದರ ಅಗತ್ಯವಿತ್ತಾ ಅನ್ನುವುದು ಕಾಡುತ್ತಲೆ ನನ್ನೆಲ್ಲಾ ಸೋಮಾರಿತನದೊಂದಿಗೆ ಈ ಬ್ಲಾಗನ್ನು ಜತನವಾಗಿ ಇಲ್ಲಿವರೆಗೆ ನಿರ್ವಹಿಸುತ್ತಾ ಬಂದಿರುವದು ನನಗೆ ಸೋಜಿಗವೆನಿಸಿದೆ,ಇದನ್ನು ನಿಮ್ಮದುರು ಪ್ರಸ್ತುತಪಡಿಸಿ ಮತ್ತಷ್ಟು ಜವಬ್ದಾರಿಯನ್ನು ಹೊತ್ತು ಮುನ್ನಡೆಸಲು ಸಹಾಯವಾಗಬಹುದೆಂದು ಬಹಳ ದಿನ ಕಳೆದ ನಂತರ ಹೀಗೊಂದು ಪ್ರಕಟಣೆ ಬರೆವ ಮನ ತೋರಿದೆ.ಅದೇನಂದರು ಬರವಣಿಗೆ ಒಂದು ರೂಪದಲ್ಲಿ ಇರದಿದ್ದರು ಅದು ನನ್ನ ಏಕಾಂತವ ನೀಗಿದೆ, ಮನದ ಭಾವನೆಗಳ ವ್ಯಕ್ತಪಡಿಸಲು ಸಹಕಾರಿಯಾಗಿದೆ,ಎಲ್ಲಕ್ಕಿಂತಲೂ ಹೆಚ್ಚು ಪ್ರೀತಿಯ ಗೆಳೆಯರ ಸಮೂಹವನ್ನು ದೊರಕಿಸಿದೆ,ಪೇಸ್ ಬುಕ್ ಹಾಗೂ ಅದರಲ್ಲಿನ ನನ್ನ ಪ್ರೀಯ ಗುಂಪುಗಳು ಈ ನಿಟ್ಟಿನಲ್ಲಿ ಜೊತೆಯಾಗಿದ್ದನ್ನು ಮರೆವ ಹಂಗಿಲ್ಲ. ಈ ಪ್ರೀತಿಯ ಬಳಗವನ್ನು ನನ್ನೊಳಗೆ ಕಾಫಿಡಲು ಮತ್ತು ಬರಹ ಪ್ರಕಾರಗಳ ವಿದ್ಯಾರ್ಥಿಯಾಗಿ ಒಂದಷ್ಟು ಚೈತನ್ಯವನ್ನು ನನಗೆ ನಾನೆ ತುಂಬಿಕೊಳಲು ನಾ ಬರೆಯಬೇಕು ಎಂಭ ಒತ್ತಾಸೆಯಲ್ಲೆ ಮುಂದುವರಿಯುತ್ತೇನೆ ,ನಿಮ್ಮಲ್ಲರ ಪ್ರೀತಿ ನನ್ನೊಳಗಿದೆ.

ಧನ್ಯವಾದಗಳು.

ಇಂತೂ ನಿಮ್ಮವ
ರಾಘವೇಂದ್ರ ತೆಕ್ಕಾರ್

ಧ್ವನಿ ಮೂಡಲಿ..

ದಾರಿ ತುಂಬಾ
ನೆಂಟರ
ಗೌಜು ಗದ್ದಲದ
ನಡುವೆ
ದನಿ ಅಡಗಿದ
ಧ್ವನಿಗಳು
ಮರೆಯಾಗಿ
ಓಲಗ, ತಮ್ಮಟೆಯ
ದನಿ ಮಾರ್ದನಿಸುತ್ತಿದೆ

ಜನ್ಮ - ಮದುವೆ
ಮುಂಜಿ - ಸಾವು
ಎಲ್ಲದರ ಗದ್ದಲದ
ನಡುವೆ
ಬದುಕು ದಾರಿ
ಮಂಕಾಗಿದೆ
ಅಳುವದೋ
ಸಂಭ್ರಮಿಸೋದೊ
ತಿಳಿಯದಾಗಿ

ನಗೆಯೊಂದು
ದೊಡ್ಡ ಆಸ್ತಿಯೆಂದು
ಕೇಳಿ ತಿಳಿದಾಗ
ನಾನೊಬ್ಬನೆ ನಕ್ಕು
ಒಂದಷ್ಟು ಜನಕ್ಕೆ
ದನಿಯಡಗಿ
ದುಃಖ ದುಮ್ಮಾನ
ಎಂದಾದರೆ
ನನ್ನ ನಗೆಯ ಫಲ
ಎನಿತೊ ಎಂಭ
ಜಿಜ್ಞಾಸೆ
ನನ್ನೊಳಗೆ

ಜೀವಿಯ
ಸಹಜ
ಹುಟ್ಟು ಸಾವಿಗೆ
ನೆಂಟರೂ
ಇಷ್ಟರ ಓಲೈಕೆಗೆ
ಬದಲಾಗಿ
ದನಿ
ಮಾರ್ದನಿಸಬೇಕು
ಸಮಾನತೆಯತ್ತ
ದನಿ ಸತ್ತ
ಮಂದಿಗೆ
ದನಿಯಾಗಿ
ಧ್ವನಿ ಮೂಡಿಸುವತ್ತ.


Friday, September 14, 2012

ಕಪ್ಪು- ಬಿಳುಪು

ಅನಿರೀಕ್ಷಿತವಾಗಿ
ಎಡವಿದಾಗ
ತುಸು ಜಾರಿದ
ಕಪ್ಪು ಕನ್ನಡಕದ
ಫ್ರೇಮಿನೊಳಗಿಂದ
ಕಣ್ಣ ನೋಟ ತುಸು
ಹೊರ ಇಣುಕಿದಾಗಲೆ
ತಿಳಿದದ್ದೂ
ನಾ ನೋಡುವ ದೃಷ್ಟಿ
ಮಬ್ಬು ಮಬ್ಬೆಂದು.

ಮಬ್ಬು ಕತ್ತಲ
ತೊಳೆಯೋಣವೆಂದು
ಕಣ್ಣ ಮರೆಸಿದ್ದ
ಕಪ್ಪು ಕನ್ನಡಕವ
ಎತ್ತಿ ಎಸೆದಾಗಲೆ
ರಾಚಿದ್ದು
ಜಗದ ಪ್ರಖರ
ಬೆಳಕು
ಜೊತೆಗೆ ಒಂದಿಷ್ಟು
ಬೆಳಕರಿಯದ
ಬದುಕು-ಬವಣೆಗಳು
ಬಿಳುಪಿನಂತೆ

ಬೇರು ಸತ್ತ
ಜೀವಿಗಳೂ
ತಾವಿಲ್ಲದ
ಸೂರುಗಳು
ಸುಟ್ಟೆಲೆಯ
ಪೈರುಗಳು
ಎಲ್ಲವು ಎಲ್ಲವೂ
ದೃಷ್ಟಿ ಪರದೆಯಲ್ಲಿ
ನಿಂತಣಕಿಸಿ
ನಾಚುವಾಗ
ಮತ್ತದೆ ಮಬ್ಬು
ದೃಷ್ಟಿ ತುಂಬಿದ
ಕತ್ತಲು


ನಗ್ನತೆಯ
ಜಗದ ತುಂಬ
ಬಡವರ ಕೆಂಪು
ನೆತ್ತರ ಬಸಿದು
ಶೀಷೆಯೊಳಗೆ
ತುಂಬಿ ಗುಟುಕರಿಸುವ
ಮಂದಿಯರ ಕಂಡಾಗ
ನನಗದೆ ಮುಸುಕು
ಮುಗ್ಗಲು
ಕನ್ನಡಕದ ನೆನಪಾಗಿ
ಎತ್ತಿ ಕಣ್ಣಿಗೊತ್ತಿಕೊಂಡೆ
ಒಂದಿಷ್ಟು ದಿನ
ದೃಷ್ಟಿ ಮಾಸದಿರಲೆಂದು
ನೈಜತೆಯು
ಕಣ್ಣ ಸುಡದಿದ್ದರೆ
ಮಬ್ಬು ಬೆಳಕನ್ನೆ
ಬಿಳುಪಾಗಿಸೋಣವೆಂದು

ಕಣ್ಣಿಗೊತ್ತಿಕೊಂಡ
ಕನ್ನಡಕದ ಫ್ರೇಮೂ
ದೃಷ್ಟಿಗೊಂದು ಚೌಕಟ್ಟು
ಮೀರಗೊಡುವದಿಲ್ಲ
ನನಗೆಟಕುವ
ನೆಟ್ಟ ದೃಷ್ಟಿಯೊಳಗೆ
ಕಾಣುವ
ಕಪ್ಪು ಬಿಳುಪು
ಎಲ್ಲವೂ ಮಬ್ಬಾಗಿ
ಹೆಚ್ಚಿನ ವ್ಯತ್ಯಾಸವ
ನೋಡುವದನ್ನೆ
ತೊರೆಯಲಿಚ್ಚಿಸಿ

ಅಂದುಕೊಂಡೆ
ಮನಸಿನೊಳಗೆ
ಕತ್ತಲಿನ ಓರೆಹಚ್ಚಿ
ಬಿಳುಪಾಗುತ್ತಿರೋಣವೆಂದು.


Thursday, September 13, 2012

ಪ್ರಶಾಂತ ನೆನಪು...

ಅವನಿದ್ದಲ್ಲಿ ಹವಾ, ನಡೆಯೋ ಮಾತುಗಳೂ ಅವನದ್ದೆ, ತಾನೂ ಸರಿಯಿದ್ದಾಗ ಯಾರನ್ನೂ ಕ್ಯಾರ್ ಮಾಡದ ವ್ಯಕ್ತಿತ್ವ. ಒಂದ್ ವೇಳೆ ತಪ್ಪಿದ್ದೂ ಬೈಸಿಕೊಂಡಾಗ ನಗುತ್ತಲೆ ಬೈಗುಳನ್ನೂ ಸ್ವೀಕರಿಸಿ ಮುಗೂಳ್ನಗುತ್ತಾ ಸಾರಿ ಅಂದ್ರೆ ಬೈದವನೂ ಬೌಲ್ಡ್ ಬೈಸಿಕೊಂಡವನೀತ ನಗುತ್ತಾ ತನ್ನ ದಾರಿ ಹಿಡಿಯುತಿದ್ದ.ಪ್ರತಿ ದಿವಸ ಒಂದಲ್ಲಾ ಒಂದ್ ಕಿರಿಕ್ ಮಾಡಿಕೊಂಡು ಅದನ್ನೆ ಎಂಜಾಯ್ ಮಾಡೋ ಸ್ವಭಾವದವನೀತ ಸದಾ ಗದ್ದಲದಲ್ಲೆ ಸುದ್ದಿಯಾದರೂ ಈತ ಹೊತ್ತಿದ್ದ ವ್ಯತಿರಿಕ್ತ ಹೆಸರೂ ಪ್ರಶಾಂತ.(ಇವನಿದ್ದಲ್ಲಿ ಸುತ್ತಲಿನ ಮಂದಿಯ ಪ್ರಶಾಂತತೆಗೆ ಕುತ್ತು).ಅದೇನಿದ್ದರೂ ಈತನ ನನ್ನಯ ಗೆಳೆತನ ಬಾಲ್ಯದಿಂದ. ನೆನಪಿರುವಂತೆ ಅರೆ ಬರೆ ಬಾಲವಾಡಿ(ಅವನ್ನ ಕರೆತರುತಿದ್ದುದ್ದೆ ನೆಂಟರಂಗೆ ಅಪರೂಪ), ತದ ನಂತರ 4ನೆ ಕ್ಲಾಸ್ ತನಕ ಜೊತೆಗೆ ಓದಿದ್ವಿ, ಮತ್ತೆ ಜೊತೆಯಾಗಿದ್ದೂ 9ನೆ ಕ್ಲಾಸಲ್ಲಿ ಒಂದು ವರುಷ, ಆಮೇಲೆ ಜೊತೆಯಾಗಿದ್ದೂ ಕಾಲೇಜಲ್ಲಿ ಒಂದು ವರುಷ ,ಬಹುಶಃ ಅಲ್ಲಿಗೆ ಕೊನೆ ಮತ್ತೆಂದೂ ಒಬ್ಬರಿಗೊಬ್ಬರೂ ವಿದ್ಯಾಭ್ಯಾಸದ ಹೊರತಾಗಿಯೂ ನಾವಿಬ್ಬರೂ ಅಕ್ಕ ಪಕ್ಕದ ಮನೆಯವರಾದರೂ ಒಬ್ಬರಿಗೊಬ್ಬರೂ ಭೇಟಿಯಾಗಿಲ್ಲ!!!!!!.

ಸಣ್ಣ ವಯಸ್ಸಿನಲ್ಲೆ ರಾಜ್ಯ ರಾಷ್ಟ್ರಮಟ್ಟದಲ್ಲಿ ಕುಸ್ತಿ ಚಾಂಪಿಯನ್ನಾಗಿ ಬೆಳೆದು ಬಿಟ್ಟ, ಬಹಳಷ್ಟೂ ಪದಕಗಳೂ ಬಹುಮಾನಗಳೂ ಅವನದಾಗಿತ್ತೂ, ಅವನು ತನ್ನನ್ನೂ ಬಹಳ ಇಷ್ಟದಿಂದ ತೊಡಗಿಸಿಕೊಂಡಿದ್ದು ಬಹುಶಃ ಈ ಕುಸ್ತಿ ಕ್ರೀಡೆಯಲ್ಲೆ, ಬೆಳಿಗ್ಗೆ 6 ರಿಂದ ರಾತ್ರಿ 8 ರ ತನಕ ತಿಂಗಾಳಾನೂಗಟ್ಟಲೆ ಅಭ್ಯಾಸ ಶಿಬಿರಗಳಲ್ಲಿ ತನ್ನ ತಾನೂ ತೊಡಗಿಸಿಕೊಂಡು ದೇಹ ದಂಡಿಸಿಕೊಳ್ಳುತಿದ್ದುದನ್ನೂ ನೋಡಿದ್ದೆ.ಪ್ರತಿಫಲವೆಂಬಂತೆ ಹೊರ ದೇಶಗಳಲ್ಲೂ ದೇಶದ ಪರವಾಗಿ ರಾಜ್ಯದ ಪರವಾಗಿ ಕುಸ್ತಿ ಕ್ರೀಡೆಯಲ್ಲಿ ಭಾಗವಹಿಸಿ ಮಿಂಚಿದ್ದ. ಇಷ್ಟೂ ಬಿಟ್ಟರೆ ಉಳಿದದ್ದುರಲ್ಲಿ ಜಿದ್ದಿಗೆ ಬಿದ್ದು ಆಸಕ್ತಿ ವಹಿಸಿದ್ದೂ ಕಡಿಮೆನೆ.ಹಾಗೆ ನೋಡಿದಲ್ಲಿ ಇವನಿಗೆ ಏಕಾನತೆ ಅನ್ನೋದು ದೊಡ್ಡ ಭೂತದಂತೆ ಕಾಡುತಿತ್ತೂ, ಸ್ನೇಹಿತರೂ, ಕಲಿಯುವ ಶಾಲೆ, ಆಸಕ್ತಿಗಳೂ, ಶಾಲೆಗೆ ಬರೋ ದಾರಿಗಳೂ ಎಲ್ಲವೂ ಬಹಳ ದಿನ ಸಹಿಸಲಾರ, ಪದೆ ಪದೆ ಬದಲಾವಣೆಗಳೂ ಅತನ ಎಲ್ಲಾ ಚಟುವಟಿಕೆಗೆ ಅಂಟಿಕೊಂಡೆ ನಡೆದು ಬರುತಿತ್ತು.ಕುಸ್ತಿಯೊಂದರಲ್ಲಿ ಆಸಕ್ತಿ ಕಳೆದುಕೊಳ್ಳಲಾರ ಅಂದುಕೊಂಡಿದ್ದೆ ಬಹುಶಃ ಈ ದಿನಗಳಲ್ಲಿ ಆ ಆಸಕ್ತಿಯೂ ಗುಡ್ಡೆ ಹತ್ತಿರಬೇಕೂ.ಆದರೆ ಮತ್ತೆ ಮತ್ತೆ ಹಳೆ ಸ್ನೇಹಿತನರಸಿ ಬರುತಿದ್ದುದು ಈತನ ದೊಡ್ಡ ಗುಣ.ಬಹುಶಃ ಇದಕ್ಕಾಗೆ ಆತ ಬಂದು ನಮ್ಮ ಹೈಸ್ಕೂಲ್ ಸೇರಿದ್ದೂ, ಮೊದಲ ಭಾರಿಗೆ ಸೈಕಲ್ ಒಂದರಲ್ಲಿ ಬರುವ ವಿದ್ಯಾರ್ಥಿಯಾತ.ಜೊತೆಗಾರನೆನಿಸಿಕೊಂಡಿದ್ದು ಅದೆ ಬಾಲ್ಯ ಸ್ನೇಹಿತರಾಗಿದ್ದ ನಾನು ಮತ್ತೆ ಕುಳ್ಳಕೆ ಡುಮ್ ಡುಮ್ಮಕ್ಕೆ ಇದ್ದ ಹಂಝ.

ಹೊಸ ಸೈಕಲ್ಲಲ್ಲಿ ತ್ರಿಬ್ಬಲ್ ರೈಡ್ ಮಾಡುತ್ತಾ ತದ ನಂತರದ ಒಂದಷ್ಟೂ ದಿನ ನಾವ್ 3 ಮೈಲೂ ದೂರದ ಹೈಸ್ಕೂಲ್ ತಲುಪ್ತಾ ಇದ್ದಿದ್ದೂ ಪ್ರಶಾಂತನ ಕೃಪೆಯಿಂದಲೆ, ಸೈಕಲ್ ತುಳಿತಾ ಇದ್ದಿದ್ದೂ ಬಲಾಢ್ಯ ಪ್ರಶಾಂತನೆ, ಬಹಳಷ್ಟೂ ಸಲ ಹೊತ್ಕೊಂಡು ಬಿದ್ದಿದ್ದೂ ಆಗಿತ್ತೂ. ಕೆಲವೋಮ್ಮೆ ಬೇಕಂತಲೇ ಬೀಳಿಸೋದು, ಸೈಕಲ್ ಹಿಂದೆನೆ ಓಡಿ ಬರುವಂತೆ ಮಾಡೋದು, ಯಾಕ್ ಕೇಳ್ತಿರಾ ಇವ್ನ ಕಾಟನಾ?? ಒಟ್ಟಿನಲ್ಲಿ ಬೀಳಿಸಿದ್ರೂ ಏಳಿಸಿದ್ರೂ ದೂಸ್ರಾ ಮಾತಾಡಕ್ಕೆ ಅವಕಾಶನೆ ಇರ್ಲಿಲ್ಲ ಅವನ ಜೊತೆ ,ಜಗಳ ಅಂತೂ ಕನಸಿನ ಮಾತು. ಒಂದೋಮ್ಮೆ ಕೋಪ ಬಂದೂ ರೇಗಿದ್ದಕ್ಕೆ ನಂಗೆ ಮಾತಾಡ್ತೀಯಾ ಅಂತ ಮುಸುಡಿ ಬಾಪುವಂತೆ ನಾನು ಆತನಿಂದ ಹೊಡೆಸಿಕೊಂಡ ನಂತರ ನನ್ನ ಮಾತೆಲ್ಲಾ ಬಂದ್ ಆಗಿತ್ತೂ.ಆದರೂ ನಾವೂ ಮೂವರೂ ಬಿಟ್ಟಿರಲಾರದಂತೆ ಇದ್ದಿದ್ದೂ ಸತ್ಯ.ಕಲಿಯುವದರಲ್ಲಿ ಆತನಿಂದ ನಾ ಸ್ವಲ್ಪ ಉತ್ತಮನೆನಿಸಿಕೊಂಡಿದ್ದೆ ,ಹಂಝನೂ ಅಷ್ಟೆ ಉತ್ತಮವಾಗೆ ಪರೀಕ್ಷೆಗಳಲ್ಲಿ ತೇರ್ಗಡೆಯಾಗ್ತಿದ್ದ, ಶತ ದಡ್ಡ ಅನಿಸಿಕೊಂಡಿದ್ದೂ ಮಾತ್ರ ಪ್ರಶಾಂತನೆ, ಲೆಕ್ಕದಲ್ಲಂತೂ ಸೊನ್ನೆ ಸುತ್ತುತಿದ್ದ, ಲೆಕ್ಕದ ಮಿಸ್ ಗೆ ಅದಾಕೋ ಒಂದು ದಿನ ಇವನಿಗೆ ವಿಪರೀತ ಕೋಪದಿಂದ ದನ ಕಾಯಕ್ಕೆ ಲಾಯಕ್ಕೂ ನೀನು ಅಂದಿದ್ದಕ್ಕೆ ಬರುವ ತಿಂಗಳ ಅರ್ಧವಾರ್ಷಿಕ ಪರೀಕ್ಷೆಯಲ್ಲಿ 100 ಕ್ಕೆ 100 ಸ್ಕೋರ್ ಮಾಡ್ತೀನಿ ನನ್ನತ್ರ ಚಾಲೆಂಜ್ ಮಾಡ್ಬೇಡಿ ದನ ಕಾಯೋ ವಿಚಾರ ಆಮೇಲೆ ನೋಡೋಣವಂತೆ ಎಂದು ಅವಾಜ್ ಏರಿಸಿದ್ದೆ ಅಲ್ಲದೆ ಹಾಗೆ ಮಾಡಿ ತೋರಿಸಿದ್ದ, ನಮ್ಮ ಕ್ಲಾಸ್ ಗೆ ಮಾತ್ರವಲ್ಲದೆ ಇಡೀಯ ಹೈಸ್ಕೂಲಲ್ಲಿದೂ ದೊಡ್ಡ ಸುದ್ದಿ.ಸ್ಟಾಪ್ ರೂಮಲ್ಲೂ ಈ ಬಗ್ಗೆ ಗುಸು ಗುಸು, ಇದ್ದಕ್ಕಿದ್ದಂತೆ ಹೀರೋ ಆಗಿದ್ದ ,ಈ ಹೀರೋ ಗಿರಿ ಮುಂದಿನ ಕ್ಲಾಸ್ ಪರೀಕ್ಷೆಯೊರಗಷ್ಟೆ ಸೀಮಿತವಾಗಿ ಮತ್ತೆ ಸೊನ್ನೆ ಸುತ್ತಿ ಆತನೆ ತನ್ನ ಹೀರೋಗಿರಿಗೆ ಇತಿಶ್ರೀ ಹಾಡಿದ್ದ ತಾನೂ ಮನಸ್ಸಿಟ್ಟರೆ ಛಲವಿಟ್ಟರೆ ಏನನ್ನೂ ಮಾಡಬಲ್ಲೆ ಎಂಬುದನ್ನೂ ಎಲ್ಲರೀಗೂ ಸ್ಪಷ್ಟಪಡಿಸುತ್ತಾ.ಪರೀಕ್ಷೆ ಹಾಲ್ಗಳಲ್ಲಿ ತಾನೂ ಬರೆಯುತಿದ್ದುದರ ಹೊರತಾಗಿ ಇತರರ ಹಾವಭಾವವನ್ನೂ ನೋಡಿ ಈತ ನಗುತಿದ್ದೂದೆ ಹೆಚ್ಚು ಆದರೂ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಮತ್ತೆ ಹೈಸ್ಕೂಲ್ ಬದಲಿಸಿದ್ದ, ಯಾಕೋ ಪರೀಕ್ಷೆ ಅಂತ ಸಾಯ್ತೀರಿ, ಬೇಕಾದ ಪರೀಕ್ಷೆಗಳಿಗಷ್ಟೆ ಸಿದ್ದಗೊಳ್ಳಬೇಕೆ ಹೊರತಾಗಿ ನಮ್ಮನ್ನೂ ಇತರರೂ ಅಳೆಯುವ ಪರೀಕ್ಷೆಗಳಿಗಲ್ಲ, ಆ ಅಳೆತಗಳೂ ನಮಗಷ್ಟೆ ತಿಳಿದಿರಬೇಕೂ ಎನ್ನೂವ ಮಾತನ್ನೂ ಈತ ಕೊನೆಯದಾಗಿ ಹೇಳಬೇಕಾದರೆ ಬಾಯಿ ಮುಚ್ಚದೆ ಬಿಟ್ಟ ಬಾಯಿಯಿಂದ ಆತನ ಮುಖವನ್ನೂ ನಾನು ಬೆಪ್ಪನಂತೆ ನೋಡಿದ್ದೂ ಜೀವನದ ಪರೀಕ್ಷೆಗಳನ್ನೂ ಎದುರಿಸುವಾಗ ಈಗಲೂ ಒಂದೊಂದು ಸಲ ನೆನಪಿಗೆ ಬರುತ್ತದೆ.

ಈತ ನನಗೆ ಈಜು ಕಲಿಸಿದ ಗುರು, ಶನಿವಾರದ ಅರ್ಧ ದಿನದ ಶಾಲೆ ಮುಗಿಸಿ ಸೈಕಲ್ ಹತ್ತಿ ಈತನ ಜೊತೆಗೆ ಬಂದವೆಂದರೆ ದಾರಿಯಲ್ಲೆ ಸಿಗುವ ಹರಿಯುವ ಹಳ್ಳದ ಒಂದು ಗುಂಡಿಯಲ್ಲಿ ಈಜಾಡೂತ್ತಾ ಇದ್ವಿ, ಇಲ್ಲೆ ನನಗೆ ಈಜೂ ಕಲಿಸಿದ್ದೂ ಇವ.80ರಾಗೆ ತುಳಿತೀನಿ ನೋಡು (ಈ ಮಾತೂ ಇವತ್ತಿಗೂ ನನ್ನ ಬಾಯಲ್ಲಿದೆ) ಅಂತ ಸೈಕಲ್ ತುಳಿದು ಬಂದು ಸೇರ್ತಾ ಇದ್ವಿ ಈ ಹಳ್ಳಕ್ಕೆ,ಬೇಸಿಗೆಯ ಆ ಕಾಲದಲ್ಲಿ ನೀರಲ್ಲಿ ಬಿದ್ದು ಹೊರಳಾಡಿ ಮನೆ ತಲುಪಿದರೆ ವಿಪರೀತ ಹೊಟ್ಟೆ ಹಸಿವು ತಿಂದುಂಡು ಮಲಗಿದರೆ ಗಡದ್ ನಿದ್ದೆ. ನಾವೂ ವೀಕೆಂಡನ್ನೂ ಬರಮಾಡಿಕೊಳ್ಳುತಿದ್ದುದು ಈ ರೀತಿ, ಇದಕ್ಕಿಂತಲೂ ಮೊದಲೂ ಮಳೆಗಾಲದಲ್ಲಿ ತೊರೆ(ತೋಡು) ತುಂಬಾ ನೀರು, ನದಿಯ ಅರ್ಧದಷ್ಟೂ ಅಗಲವಿದ್ದ ಈ ಹಳ್ಳವನ್ನೂ ದಾಟೋದು ಸುಲಭದ ವಿಷಯವಲ್ಲ. ಬಹುಶಃ ಪ್ರಶಾಂತ ಸಿಗುವ ಮೊದಲೂ ಈ ಸಾಹಸಕ್ಕೆ ಕೈ ಹಾಕಿದ್ದೆ ಇಲ್ಲ.ಅಗಿದ್ದಾಗಲಿ ಎಂದು 1 ಮೈಲೂ ಹೆಚ್ಚಿಗೆ ನಡೆದೂ ಕಾಲು ಸೇತುವೆ ಇರುವ ಕಡೆಯ ಬೇರೆ ದಾರಿಯಿಂದ ಶಾಲೆ ಸೇರ್ತಾ ಇದ್ವಿ. ಆದರೆ ಈತ ಜೊತೆ ಸೇರಿದ ನಂತರ ಹುಚ್ಚು ಧೈರ್ಯ. ಒಂದು ಸಂಜೆ ಶಾಲೆಯಿಂದ ಮರಳುವಾಗ ಬಹಳವಲ್ಲದಿದ್ದರೂ ಮಳೆ ಸುರಿಯುತಿತ್ತು,ಹಳ್ಳದಲ್ಲಿ ನೀರು ಏರಿರಲಾರದೆಂದು ಮಾಮೂಲಿ ದಾರಿಯನ್ನೆ ಹಿಡಿದಿದ್ವಿ. ಮಳೆಗಾಲದಲ್ಲಿ ಹಳ್ಳ ದಾಟುವ ಕ್ರಮ ಸ್ವಲ್ಪ ಬೇರೆಯದೆ ಆಗಿತ್ತೂ. ಮೇಲೆಲ್ಲೋ ಇಳಿದು ನೀರಿನ ಪ್ರವಾಹದ ಜೋತೆನೆ ಬಂದು ಈ ಬದಿ ಸೇರಬೇಕಿತ್ತೂ, ಆ ದಿನವೂ ಹಾಗೆ ನೀರಿಗಿಳಿದು ಒಂದಷ್ಟೂ ದೂರ ಬರುತ್ತಿರಬೇಕಾದರೆನೆ ಕೆಂಪು ಪ್ರವಾಹ ನೀರೂ ಬಂದು ಮೊಣಕಾಲಿನೊರೆಗಿದ್ದ ನೀರೂ ಕುತ್ತಿಗೆ ಮಟ್ಟಕ್ಕೇರಿತ್ತೂ, ನನಗೆ ಈಜೂ ಬರದ ಕಾರಣ ಪ್ರವಾಹದಲ್ಲೆ ಅಕ್ಷರಶಃ ಕೊಚ್ಚಿ ಹೋಗುತ್ತಿರಬೇಕಾದರೆನೆ ಈತ ನನ್ನ ಜುಟ್ಟು ಹಿಡಿದು ಒಂದು ಮರದ ಆಸರೆಯ ಮೂಲಕ ಸೇರಬೇಕಾದಲ್ಲಿ ಸೇರದಿದ್ದರೂ ಒಟ್ಟು ದಡ ಸೇರಿಸಿದ್ದ.ನಾನೂ ಸಾಕಷ್ಟೂ ನೀರು ಕುಡಿದೂ ಕಂಗಾಲಾಗಿದ್ದೆ, ಸಾವರಿಸಿಕೊಳ್ಳುವಷ್ಟರಲ್ಲಿ ಈತ ನನ್ನ ಸ್ಕೂಲ್ ಬ್ಯಾಗ್ ನಲ್ಲಿ ತುಂಬಿದ್ದ ನೀರನ್ನೂ ಹಿಂಡುತಿದ್ದ,ಮುಖದಲ್ಲಿ ಅಟ್ಟಹಾಸದ ನಗು, ಬುಕ್ಸ್ ಎಲ್ಲವನ್ನೂ ಎರಡೆರಡೂ ಪ್ಲಾಷ್ಟಿಕ್ ಚೀಲದಲ್ಲಿ ಬಂದೋಬಸ್ತ್ ಮಾಡಿ ದಾರ ಕಟ್ಟಿದ್ದರಿಂದ ಅರೆ ಬರೆ ಒದ್ದೆಗೊಂಡರು ಅದು ಸೇಫಾಗಿತ್ತೂ .ಹಂಝ ಈಜುಗಾರನೆ ಅಗಿದ್ದುದರಿಂದ ನಾಣೀಲೂ ಬೀಳ ಆಸರೆಯೊಂದಿಗೆ ನಮ್ಮಿಂದ ಮೊದಲೆ ದಡ ತಲುಪಿ ನನ್ನನ್ನೂ ಮೇಲೆತ್ತಲೂ ಪ್ರಶಾಂತನಿಗೆ ಸಹಕರಿಸಿದ್ದನಂತೆ.ಇಷ್ಟರಲ್ಲಾಗಲೆ ಮನೆಗೆ ಸುದ್ದಿ ತಲುಪಿ ಮನೆಯಿಂದ ಹಳ್ಳದ ಬದಿಗೆ ಅಮ್ಮ ಓಡಿ ಬಂದಿದ್ದರೂ,ನಾನೂ ಸೇಫಾಗಿರೋದು ನೋಡಿ ಉಸುರು ಬಿಟ್ಟು ಮಾದರಿ ಬೀಳಿನ ಬೆತ್ತ ಮುರಿದು ಬಾಸುಂಡೆ ಬರುವಂತೆ ಛಡಿ ಏಟೂ ನೀಡಿದ್ದೂ ಎಲ್ಲಾ ಆಗಿತ್ತೂ,ಇದ ನೋಡಿ ಇದೆಲ್ಲದರ ರುವಾರಿ ಪ್ರಶಾಂತ ಓಟ ಕಿತ್ತಿದ್ದ, ಹಂಝ ಅದೆಲ್ಲಿ ಎರೆಹುಳುವಿನಂತೆ ನುಸುಳಿ ಮಾಯಕ ಆಗಿದ್ನೋ ಗೊತ್ತಿಲ್ಲ, ಇದಾದ ಮರುದಿನನೆ ಪ್ರಶಾಂತ ಹೇಳಿದ್ದ ಬೇಸಿಗೆ ಬರಲಿ ನಿನ್ನ ನೀರಿಗೆತ್ತಿ ಹಾಕುತ್ತೇನೆ,ನೀನು ಈಜದೆ ಅದೆಲ್ಲಿ ಹೋಗುತ್ತಿ ನೊಡೋಣವೆಂದು. ಅಂತೆಯೆ ಬೇಸಿಗೆ ಬಂದಂತೆ ಅದೆ ಹಳ್ಳದಲ್ಲಿ ಜೀವವುಳಿಸಿದವ ಜೀವವುಳಿಸುವ ವಿದ್ಯೆಯನ್ನೂ ಅಲ್ಲಿಯೆ ಕಲಿಸಿದ್ದ. 

ಅದಾಕೋ ಒಂದು ವರುಷ ಸ್ಕೂಲ್ ಬಿಟ್ಟು ಹಾಯಾಗಿದ್ದೂ ಮತ್ತೆ ನಮ್ಮ ಕಾಲೇಜಿಗೆ ಬಂದೂ ಕೂಡಿಕೊಂಡಿದ್ದ, ಒಂದೆ ಹಾಸ್ಟೇಲ್ ಕೂಡಾ ಹೌದು.ಹಾಷ್ಟೇಲ್ನಲ್ಲಿ ಸೀನಿಯರ್ಸ್ ಗಿರಿ ಆಗ ನಾನೂ ಈತನೀಗೆ ಸೀನಿಯರ್ರೆ,ಇದಾವೂದನ್ನೂ ಕ್ಯಾರ್ ಮಾಡದ ಈತ ತನ್ನ ಪಾಡಿಗೆ ತಾನಿರುತಿದ್ದ, ಬೋರಾಯಿತೆಂದರೆ ನನ್ ರೂಮಿಗೆ ಬಂದು ಹರಟೋದು ನನ್ನ ಕರಕೊಂಡು ಸುತ್ತೋದು ಅಷ್ಟಕ್ಕೆ ಅಲ್ಲಿನ ಪರಿಸರಕ್ಕೆ ಆತನ ಚಟುವಟಿಕೆ ಸೀಮಿತವಾಗಿತ್ತೂ.ಕೆಲವೊಂದು ಸೀನಿಯರ್ಸ್ಗಳೂ ಈತನಲ್ಲಿ ತನ್ನ ಸೀರಿಯರ್ ಗಿರಿಯನ್ನೂ ತೋರಿಸಲೂ ಬಂದಾಗ ಅಟ್ಟಾಡಿಸಿಕೊಂಡು ಹೊಡೆದಿದ್ದೂ ದೊಡ್ಡ ಮಟ್ಟಿನ ಪ್ರಕರಣವಾಗಿತ್ತೂ, ಸೀರಿಯರ್ಸ್ ಎಲ್ಲಾ ಒಂದಾಗಿ ಹಾಸ್ಟೇಲ್ ವಾರ್ಡನ್ ಹತ್ರ ಕಂಪ್ಲೈಂಟ್ ಕೊಡೋದು ಎಂದು ನಿರ್ಧಾರವಾದಾಗ ಕಸಿವಿಪಟ್ಟವ ನಾನು, ಪರವಾಗಿಲ್ಲ ಸೀನಿಯರ್ ಪರವಾಗಿ ನಿಲ್ಲೂ ಇಲ್ಲಾಂದ್ರೆ ನಿನಗೆ ತೊಂದ್ರೆ ನಾ ಹ್ಯಾಂಡಲ್ ಮಾಡ್ಕೋತೀನಿ ಅಂದು ನನ್ನ ಕಸಿವಿಸಿ ದೂರ ಮಾಡಿದವನೂ ಇವನೆ.ಹಾಗೆ ತೋರಿಕೆಗೆ ಇವನ ವಿರುಧ್ಧವಾಗಿ ನಿಂತಿದ್ದೂ ಆ ದಿನವೆ.ಹೀಗಿರಬೇಕಾದರೆನೆ ನಾವ್ ಎಕ್ಸಾಂ ಮುಗಿಸಿ ಮನೆ ತಲುಪಿದ್ದೂ ರಿಸಲ್ಟ್ ಗಾಗಿ ಕಾಯುತ್ತಾ ಕೂತಿದ್ದೂ. ಈತಂದೂ ಎಕ್ಸಾಂ ಮುಗಿದಿತ್ತೂ, ಒಂದೆ ಊರು ಬೇರೆ ಜೊತೆಗೆ ಕಾಲೇಜಿಂದ ಮರಳಿದ್ವಿ. ಹೀಗಿರಬೇಕಾದರೆನೆ ಒಂದು ಸಂಜೆ ಮನೆಯಲ್ಲಿ ತನ್ನ ಅಪ್ಪನೊಂದಿಗೆ ಅದೇನೋ ವಿಷಯಕ್ಕೆ ಜಗಳ ತೆಗೆದಿದ್ದ.ಅವರೂ ಕೋಪಗೊಂಡು ಎರಡೇಟೂ ಬಿಗಿದೂ ಮನೆಯಿಂದ ಹೊರಹಾಕ್ತೀನಿ ನೋಡು ಅಂತಂದ್ದಿದ್ದೂ, ಅಷ್ಟಕ್ಕೆ ಇವ ಉಟ್ಟ ಬಟ್ಟೆಯಲ್ಲೆ ಮನೆಯಿಂದ ಹೊರಗಡೆ ಬರುತ್ತಿರಬೇಕಾದರೆನೆ ಅಂಗಳದಲ್ಲಿದ್ದ ತಾಯಿ ಎಲ್ಲಿಗೋ? ಎಂದು ಕೇಳಿದ್ದಕ್ಕೆ ಸೌಮ್ಯವಾಗೆ ನೋಟ್ಸ್ ಬೇಕಿತ್ತೂ ರಾಘು ಮನೆಗೋಗಿ ಬರ್ತೇನೆ ಎಂದೇಳಿ ಹೊರಟಿದ್ದೂ, ಮರುದಿನ ಆತನ ಅಣ್ಣ ನನ್ನ ಹುಡುಕಿಕೊಂಡು ಬಂದು ಪ್ರಶಾಂತ ಬಂದಿದ್ನಾ? ಎಂದು ಕೇಳಿದಾಗ ನಾ ಇಲ್ಲವೆನ್ನಲೂ ಎಲ್ಲಾ ವಿಷಯವನ್ನೂ ಸಾಧ್ಯಂತವಾಗಿ ತಿಳಿಸಿದ್ದರೂ, ಅಮೇಲೆ ಅದೆಷ್ಟೂ ಪಚೀತಿ ಪಟ್ಟು ಹುಡುಕಿದರೂ ಆತ ಸಿಗಲಿಲ್ಲ,ನಾ ಜೀವಂತವಾಗಿದ್ದೀನಿ ಎಂಬ ಒಂದೆ ಒಂದು ಪೋನ್ ಕರೆ ಕಳೆದ ವರುಷ ತನ್ನ ಅಕ್ಕನಿಗೆ ಮಾಡಿದ್ದೂ ಬಿಟ್ಟರೆ ಇಲ್ಲಿವರೆಗೆ ಆತನ ಪತ್ತೆ ಇಲ್ಲ.ಅಂದ ಹಾಗೆ ಅತ ಮನೆ ಬಿಟ್ಟಿದ್ದೂ 18-19ರ ಹರೆಯದಲ್ಲಿ. ನನ್ನ ವಯಸ್ಸಿನವನೆ ಅವನೂ ನನಗೀಗ 32 ವರುಷ. 

ಯಾಕೊ ಪ್ರವಾಹದ ಕೆಂಪು ನೀರು ನೋಡಿದಾಗೆಲ್ಲ ನಿನ್ನ ನೆನಪು, ನೀ ಸೋಲೋ ಜಾಯಮಾನದವ ಅಲ್ಲವೆಂಬುದು ಗೊತ್ತು, ನೀ ಮರಳಿ ಬಂದಲ್ಲಿ ನಿನ್ನ ಸ್ವಾತಂತ್ರ್ಯಕ್ಕೆ ಭಂಗ ಬರಲಾರದೂ,ಮನೆಯಲ್ಲಿ ಬೊಗಸೆ ಹಿಡಿದೂ ನಿನ್ನ ಸ್ವಾಗತಿಸುವದಂತು ನಿಜ,ಸೋಲೆಂಬುದೂ ಗೊತ್ತಿರದ ನೀ ಜೀವನದಲ್ಲಿ ಗೆದ್ದಿರುತ್ತಿ, ನಿನಗಾಗಿ ಅಲ್ಲದಿದ್ದರೂ ನಮ್ಮಗಳ ಹಿಡಿ ಸಂತೋಷಕ್ಕಾಗಿ ನೀ ಬರುತ್ತೀಯಾ ಯಾಕೆಂದರೆ ಮತ್ತೆ ಮತ್ತೆ ಹಳೆ ಸ್ನೇಹಿತರನ್ನರಸಿ ಬರೋದು ನಿನ್ನ ದೊಡ್ಡ ಗುಣ. 


Tuesday, September 4, 2012

ಬದುಕೂ-ಒಂದಷ್ಟೂ ದೂರ..

ಜೀವನದ ದಾರಿ ತುಂಬಾ ಕಠಿಣ
ಎಳಸು ಎಳಸಾಗಿ ಸಾಗಿ ಬಂದಿರುವೆ
ಅದೆ ದಾರಿಯಲ್ಲಿ ಮುಂದುವರಿದು ಸಾಗಲು
ಬೇಕು ಒಂದಷ್ಟೂ ಚೈತನ್ಯದ ಸನಿಹ
ನಿನ್ನ ಇರುಹು ನನ್ನ ಚಲನೆ ಎಂದಾದ ಮೇಲೆ
ಜೊತೆಯಾಗಬಹುದೆ ಬದುಕಿನ ಒಂದಷ್ಟೂ ದೂರ

ಒಂದಷ್ಟೂ ಕನಸ ಕಂಡು
ಈಗಷ್ಟೆ ಅದ ಹೊತ್ತು ಎದ್ದಿರುವೆ
ಬದುಕ ತುಂಬಾ ಜೊತೆ ನಡೆಯಲಾರೆ
ಇದು ಗೊತ್ತಿದ್ದೆ ಕೇಳುವೆ,
ಕನಸು ನನಸಾಗಿ ಕೈ ಹಿಡಿಯೋವರೆಗೆ
ಜೊತೆಯಾಗಬಹುದೆ ಬದುಕಿನ ಒಂದಷ್ಟೂ ದೂರ

ಸಾಗಬೇಕಿರುವ ಹಾದಿ ದೊಡ್ಡದಿದೆ
ಇದು ನನ್ನೊಳಗಿನ ಆಸೆಗಳ ದೂರದೃಷ್ಟಿ
ಇಲ್ಲವೆಂದರೆ ನಾ ನಾಳೆಗಳ ಬಲ್ಲಿದನಲ್ಲ
ಅದ ಹಂಬಲಿಸುತ್ತಲೆ ಕೇಳುವೆ
ಬಾಳ್ವೆಯ ಕಠಿಣಗಳ ಸವಾಲ್ಗಳೆದುರಿಸಲು
ಜೊತೆಯಾಗಬಹುದೆ ಬದುಕಿನ ಒಂದಷ್ಟೂ ದೂರ

ಮುಂದೆಯೂ........
ನನ್ನ ನಡಿಗೆ ಅದೆ
ಸಾಗೋ ದಾರಿಯೂ ಅದೆ
ನನ್ನ ಬದುಕೂ ಅದೆ
ಬದುಕುವ ದಾರಿಯೂ ಅದೆ
ನನ್ನ ಜೀವನವೂ ಅದೆ
ದುಡಿತದ ದಾರಿಯೂ ಅದೆ
ಸಕಾರಣಕ್ಕೆ ಸಾಗೋ ಬದುಕಿನ ಬಂಡಿಯಲ್ಲಿ
ಹೊಸ ಭರವಸೆಯ ಚಲನೆಯ ನಾ ಕಾಣಲೂ
ಜೊತೆಯಾಗಬಹುದೆ ಬದುಕಿನ ಒಂದಷ್ಟೂ ದೂರ.

Saturday, September 1, 2012

ಬೇಸರಿಸದಿರಲೂ ನನ್ನ ಮುಂದು ಕಾರಣಗಳಿಲ್ಲ...

ಕೆಲವೊಮ್ಮೆ ಹಂಗಂಗೆ ಕಾಡೊ ಬೇಸರದ
ಗುಟ್ಟು ತಿಳಿಯಲೆತ್ನಿಸಿದಷ್ಟೂ ನಿಗೂಢ
ಇಂಚಿಂಚೆ ಬಿಗಿದಪ್ಪುವ ಬೇಸರ ಕಳೆಯೋಣವೆಂದು
ಸುತ್ತಲ ಜಗದ ಇಂಬು ಹಂಬಲಿಸಿ ನೋಡುತ್ತೇನೆ
ಆಸರೆ ದೊರೆಯದಾದಾಗ ನಾ ಅರಿತುಕೊಳ್ಳುತ್ತೇನೆ
ಜಗದ ಜೀವಿಗಳೆಲ್ಲವೂ ಹೊತ್ತಿದೆ ಅಗಾಧ ದುಃಖ
ಇಲ್ಲಿ ನನ್ನದಲ್ಲದ ನನ್ನ ಬೇಸರಕ್ಕೆ ತಾವಿಲ್ಲ.

ನನ್ನ ಮನ ಮಹಲಿನ ಗೋಡೆಗೆ ತಲೆಯಾನಿಸುತ್ತೇನೆ
ಅದು ತನ್ನ ತೆಕ್ಕೆಯಲ್ಲಿ ನನ್ನ ಒಪ್ಪಿಸಿಕೊಂಡು
ಬೇಸರಿಸದಿರೆಂದು ಸಂತೈಸುತ್ತದೆ, ಪಿಸುನುಡಿಯುತ್ತದೆ
ನೇವರಿಸುತ್ತಲೆ ಹೆಡೆಮುರಿಕಟ್ಟಿ ವಾಸ್ತವವದೆದುರು ನಿಲ್ಲಿಸುತ್ತದೆ
ನಿರ್ಜೀವ ಗೋಡೆಯೊಂದರ ಸ್ಪರ್ಷದೊಂದಿಗೆ ನಾನು ಸಜೀವ
ತಿಳಿಯಪಟ್ಟಿದ್ದು ನಾನೆದುರುಗೊಂಡಿದ್ದು ನನ್ನದೆ ಅತಃಶಕ್ತಿಯನ್ನ
ಮುಂದೆಂದೂ ನನ್ನೊಳಗೆ ಜಗದ ಸಂತೈಕೆಯ ಹಂಬಲವಿಲ್ಲ.

ಜಗದೆಲ್ಲವ ನೆನಪುಗಳೂ ಪೀಕಲಾಟಗಳೂ
ನನ್ನ ತಲುಪಿ ಭಾಧಿಸುತ್ತಲಿರುತ್ತದೆ
ನನ್ನ ನೇಸರ ರಂಗಿನ ಸಂಜೆಯನ್ನ ಕಪ್ಪಾಗಿಸುತ್ತದೆ
ಆವರಿಸುವ ಕತ್ತಲನ್ನೆ ಅಪ್ಪಿಕೊಳುತ್ತೇನೆ
ಬೆಳಗನ್ನೂ ಇದಿರುಗೊಳ್ಳುವದರ ಬಗ್ಗೆ ಸಿದ್ದನಾಗುತ್ತೇನೆ
ನಿರಾಕಾರವೆಂಬ ಮುಸುಕು ಆಕಾರ ನೀಡುತ್ತೆ
ಕತ್ತಲಲ್ಲಿ ಬೆಳಕನ್ನೂ ಕಾಣಬಹುದೆಂಬುದ ತಿಳಿದು
ನಿರಾಳನಾಗುತ್ತೇನೆ ಕಾರಣ ಕಪ್ಪು ಕತ್ತಲ ಭಯ ಮುಂದಿಲ್ಲ.

ಬೇಸರ, ಕಪ್ಪು, ಕತ್ತಲೂ ಜೊತೆಗಿರುವ ನನ್ನ ಮಹಲೊಳಗೆ
ಬೆಳಕೂ, ಉಸಿರೂ,ಸಂತಸವಷ್ಟೆ ಇರಬೇಕೆಂದುಕೊಂಡಿದ್ದೆ
ನನ್ನ ಮಹಲಿನ ನಿರ್ಮಾಣ ನನ್ನದಲ್ಲದ್ದಾಗಿರಬೇಕಾದರೆ
ಮಹಲೆಂಬ ತಿಜೋರಿಯೊಳಗಿಂದ ಒಳಿತನ್ನೂ ಆರಿಸಬಹುದಷ್ಟೆ
ಆಯ್ಕೆಯ ಕಲೆಯನ್ನೂ ಒಪ್ಪವಾಗಿ ಕಲಿಸಿ ನನ್ನ ರೂಪಿಸುವ
ನನ್ನ ಮಹಲಿನ ಋಣಾತ್ಮಕತೆಗೆ ಇಂಚಿಂಚೆ ಬಾಗಿ ಎದ್ದು ನಿಲ್ಲುತ್ತೇನೆ
ಜೀವನವದಲ್ಲೂ ಬಿದ್ದೆನೆಂಬಾಗ ಎದ್ದು ನಿಲ್ಲುವದನ್ನು ಅದು ಕಲಿಸಿದೆ
ಮುಂದೆ ಬೇಸರಿಸದಿರಲೂ ನನ್ನ ಮುಂದು ಕಾರಣಗಳಿಲ್ಲ.