ಘಟಾನುಘಟಿ ರಾಜಕಾರಣಿಗಳೊಂದಿಗೆ ರಂಗನಾಥ್ ಆತ್ಮವಿಶ್ವಾಸದಿಂದ ಚರ್ಚೆ ನಡೆಸುತ್ತಿದ್ದರು. ರಾಜಕಾರಣಿಗಳಿಂದ ಅಗತ್ಯ ಉತ್ತರಗಳನ್ನು ತೆಗೆಸುವಲ್ಲಿ ಅವರ ವೃತಿಪರತೆ, ಜಾಣ್ಮೆ , ಚಾಕಚಕ್ಯತೆ ಎದ್ದು ಕಾಣುತ್ತಿತ್ತು. ಅದರಲ್ಲೂ ಸಾಂವಿಧಾನಿಕ ಬಿಕ್ಕಟ್ಟು, ರಾಜಕೀಯ ಬಿಕ್ಕಟ್ಟಿನಂತಹ ಪರಿಸ್ಥಿತಿಯಲ್ಲಿ ರಂಗನಾಥ್ ಇಲ್ಲದೆ ಇದ್ದದ್ದು ಸುವರ್ಣ ವಾಹಿನಿಗೆ ದೊಡ್ಡ ನಷ್ಟ ಎಂದೇ ಹೇಳಬೇಕು.
ಸುವರ್ಣ 24/7 ಸುದ್ದಿ ವಾಹಿನಿ ನೋಡಿದರೆ ಈಗ ಪಿಚ್ ಅನಿಸುವುದಿಲ್ಲವೆ? ರಾಜಕೀಯ ಬಿಕ್ಕಟ್ಟು, ಪ್ರಚಲಿತ ವಿದ್ಯಾಮಾನಗಳ ಬಗ್ಗೆ ತಮ್ಮದೇ ಆದಂತಹ ವ್ಯಾಖ್ಯಾನ ನೀಡುತ್ತಿದ್ದ ಎಚ್ ಆರ್ ರಂಗನಾಥ್ ಇಲ್ಲದೆ ಬಣಬಣ ಎನ್ನುತ್ತಿದೆ. ಅವರು ಸುವರ್ಣ ವಾಹಿನಿಗೆ ಗುಡ್ ಬೈ ಹೇಳಿದ ಮೇಲೆ ಅದ್ಯಾಕೋ ಏನೋ ನ್ಯೂಸ್‍ಗಳು ಸಪ್ಪೆಯಾಗಿವೆ. ರಂಗನಾಥ್ ಅವರ ವೃತ್ತಿಪರತೆ ವೀಕ್ಷಕರಿಗೂ ಇಷ್ಟವಾಗಿತ್ತು.
ರಂಗನಾಥ್ ಕೊರತೆಯನ್ನು ಹಮೀದ್ ಪಾಳ್ಯ ಹಾಗೂ ಗೌರೀಶ್ ಅಕ್ಕಿ ಅಚ್ಚುಕಟ್ಟಾಗಿ ತುಂಬುತ್ತಿರುವುದು ಎದ್ದು ಕಾಣುತ್ತದೆ. ಆದರೂ ಎಲ್ಲೋ ಒಂದು ಕಡೆ ರಂಗನಾಥ್ ಗೈರುಹಾಜರಿ ಎದ್ದು ಕಾಣುತ್ತಿದೆ. ಅವರಿದ್ದರೆ ಚೆನ್ನಾಗಿತ್ತು ಎಂಬ ಭಾವನೆ ನನ್ನನ್ನು ಕಾಡುತ್ತಿದೆ. ಉಳಿದ ವಾಹಿನಿಗಳ ಪರಿಸ್ಥಿತಿಯೂ ಸುವರ್ಣ ವಾಹಿನಿಗಿಂತಲೂ ಭಿನ್ನವಾಗಿಲ್ಲ. ಅಲ್ಲೂ ಸಂಪಾದಕರು ಹಾಗೂ ಪತ್ರಕರ್ತರ ನಡುವೆ ಸೂಕ್ತ ಸಮನ್ವಯದ ಕೊರತೆ ಕಾಡುತ್ತಿದೆ.
ಸುದ್ದಿಯ ವಿಶ್ಲೇಷಣೆ, ಖಚಿತ ಮಾಹಿತಿ ನಿರೀಕ್ಷಿಸುತ್ತಿರುವ ಕನ್ನಡ ವೀಕ್ಷಕರೂ ಸಿಎನ್‌ಎನ್ ಐಬಿಎನ್, ಎನ್‌ಡಿಟಿವಿ, ಟೈಮ್ಸ್ ನೌ ಗಳನ್ನು ನೋಡಿ ತಮ್ಮ ಸುದ್ದಿ ದಾಹವನ್ನು ನೀಗಿಸಿಕೊಳ್ಳುವ ಪರಿಸ್ಥಿತಿ ತಲೆದೋರಿದೆ. ರಂಗನಾಥ್ ಅಂತ ನುರಿತ ಪತ್ರಕರ್ತರ ಅಗತ್ಯತೆ ಕನ್ನಡ ಸುದ್ದಿ ಮಾಧ್ಯಮಕ್ಕೆ ಹಿಂದೆ ಗಿಂತಲು ಹೆಚ್ಚಿನ ಅವಶ್ಯಕತೆ ಇಂದಿದೆ. ಆದರೆ ರಂಗನಾಥ್ ಎಲ್ಲಿ? ಇದೀಗ ಸಿಕ್ಕಿದೆ ಉತ್ತರ.
ಸುದ್ದಿ ವಿಶ್ಲೇಷಣೆ, ಮಾತಿನ ಸುರಿಮಳೆ ಇಷ್ಟಪಡುವ ಕೋಟ್ಯಂತರ ಕನ್ನಡ ವೀಕ್ಷಕರ ಮನೆ ಬಾಗಿಲಿಗೆ ಮತ್ತೊಂದು ಸುದ್ದಿ ವಾಹಿನಿ ಬರಲಿದೆ. ಈ ಸುದ್ದಿ ವಾಹಿನಿಯ ಹೆಸರು "ಕದಂಬ 24/7". ಈ ಹೊಸ ಚಾನಲ್ ಸೂತ್ರಧಾರ ಎಚ್ ಆರ್ ರಂಗನಾಥ್. ಸದ್ಯಕ್ಕೆ ಹೊಸ ವಾಹಿನಿಗೆ ಸಿಬ್ಬಂದಿ ಆಯ್ಕೆ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು ಶೀಘ್ರದಲ್ಲೆ "ಕದಂಬ 24/7" ಚಾನಲ್ ಆರಂಭವಾಗಲಿದೆ.
ಈ ಮೂಲಕ ಕನ್ನಡ ಎಲೆಕ್ಟ್ರಾನಿಕ್ ಮಾಧ್ಯಮ ಕ್ಷೇತ್ರಕ್ಕೆ ಮತ್ತೊಂದು ಚಾನಲ್ ಸೇರ್ಪಡೆಯಾಗಲಿದೆ. ಸುವರ್ಣ , ಸಮಯ , ಜನಶ್ರೀ ಹಾಗೂ ಟಿವಿ 9 ಸುದ್ದಿ ವಾಹಿನಿಗಳಿಗೆ ಪ್ರಬಲ ಸ್ಪರ್ಧಿಯಾಗಿ "ಕದಂಬ" ಉದಯವಾಗುತ್ತಿರುವುದು ವಿಶೇಷ.
ಅಂದಹಾಗೆ 'ಕದಂಬ' ವಂಶವು ಕನ್ನಡದ ಮೊಟ್ಟ ಮೊದಲ ರಾಜ ವಂಶ. ಕನ್ನಡದಲ್ಲಿ ದೊರೆತಿರುವ ಮೊಟ್ಟಮೊದಲ ಶಾಸನವಾದ ಹಲ್ಮಿಡಿ ಶಾಸನವು ಕದಂಬರ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ. ಉತ್ತರ ಕನ್ನಡ ಜಲ್ಲೆಯ ಬನವಾಸಿಯಿಂದ ಆಳುತ್ತಿದ್ದ ಕರ್ನಾಟಕದ ಒಂದು ಪುರಾತನ ರಾಜವಂಶ. ಕನ್ನಡವನ್ನು ರಾಜ್ಯಭಾಷೆಯಾಗಿ ಬಳಸಿದ ಪ್ರಪ್ರಥಮ ರಾಜವಂಶ ಕದಂಬರು. ಹೊಸ ವಾಹಿನಿಗೆ ಅವರ ಹೆಸರಿಟ್ಟಿರುವುದು ಗಮನಾರ್ಹ.ಬೇಗ ಚಾನೆಲ್ ಪ್ರಾರಂಭ ಪಡೆದು ರಂಗನಾಥ್ ಮತ್ತೆ ಕನ್ನಡಕ್ಕೆ ಸಿಗಲಿ ಅನ್ನುವದು ಎಲ್ಲರ ಆಶಯ, ಬೆಸ್ಟ್ ಆಫ್ ಲಕ್ ರಂಗನಾಥ್. (ಸಂಗ್ರಹದಿಂದ)
No comments:
Post a Comment