ನಡೆಯ ಅರ್ಥ ನಾ ಹುಡುಕುವದಿಲ್ಲ
ನಿಮ್ಮಯ ಪ್ರತಿ ಹೆಜ್ಜೆಗಳು
ನನ್ನೊಳಗಿನ ದರ್ಪಣ
ಮೈ ಜಡ್ಡು ನನ್ನೊಳಗಿನ ಮಬ್ಬನ್ನ ನೋಡುತ್ತಿರುವೆ
ಅದಕ್ಕಾಗಿ ನಾ ವ್ಯಯಿಸುವದೇನಿಲ್ಲ
ಸೋತ ಕಾಲಿನ ಇಂಬು
ಅವಮಾನಗಳ ಸಹನೆ
ಹೊಸ ಜೀವನದ ಮುನ್ನುಡಿ ಎಂಬ ಕ್ಲೀಷೆ
ಎಲ್ಲವೂ ನಿಮ್ಮ ಹೆಜ್ಜೆ ಮೇಲೊಂದಿನ ಹೆಜ್ಜೆ
ಪ್ರತಿ ನಡೆಯು ನನ್ನದೆ ಹಿಡಿಯಾದ ಜೀವ
ಎಂದೊ ಬರಡಾಗಿದ್ದ ಈ ಮನವು
ನಿಮ್ಮಗಳ ಹೆಜ್ಜೆ ಮೇಲೆ ಟಿಸಿಲೊಡೆದಿದೆ
ಪ್ರತಿ ಹೆಜ್ಜೆಯಲ್ಲು ಒಂದೊಂದು ನೆನಪು
ನೆನೆಯಲು ಕಾರಣಗಳೆ ಅಲ್ಲದ ಹಲವು ಕಾರಣ
ಹೆಜ್ಜೆಗಳನ್ನು ಜೋಪಾನಗೊಳಿಸಬೇಕೆಂಬ ಬಯಕೆ.
ಅಚ್ಚೊತ್ತಿ ಫ್ರೇಮ್ ನೊಳಗೆ ಬಂಧಿಸಿ
ಗೋಡೆಗೆ ಮೊಳೆ ಹೊಡೆದು ನಿಮ್ಮ ಕೂಡಿಡಲಾರೆ
ದೂರ ನಡೆಯೋಣ ಬಹಳಷ್ಟು
ನಿಮ್ಮ ಪ್ರತಿ ಹೆಜ್ಜೆಗಳ ಮೇಲೆ ನನ್ನ ಕನಸುಗಳ ಪೋಣಿಸಿ
ಜೊತೆಯಾಗಿ ನಾನು ನಡೆದುಬಿಡುತ್ತೇನೆ
ಅದಕ್ಕಾಗಿ ನಾ ವ್ಯಯಿಸುವದೇನಿಲ್ಲ
ನಡೆಯೆಂಬ ಬದುಕಿನರ್ಥಕ್ಕೆ ಹುಡುಕಾಟವಿಲ್ಲ.
ಬದುಕೆಂದರೆ ನೀವು ನಾನು
ನಮ್ಮಗಳ ಹೆಜ್ಜೆಗುರುತು.
No comments:
Post a Comment