ಸ್ಮಾರ್ಟ್ ಪೋನ್ ಯುಗದ ಈ ದಿನಗಳಲ್ಲಿ ಬದುಕೆಂಬುದು ಸೆಲ್ಫಿ ಮಯವಾಗಿದೆ. ಇತ್ತೀಚಿನ ದಿನಗಳಲ್ಲಿ ಏನೇನೊ ಕಾರಣಗಳಿಂದ ಈ ಸೆಲ್ಫಿ ಅನ್ನೊದು ಪ್ರಚಲಿತದಲ್ಲಿರೊ ಸುದ್ದಿ. ಆದೇನೆ ಇರಲಿ ಹೊರ ಚಿತ್ರ ಚೆನ್ನಾಗಿರಬೇಕು ಎಂಬ ತುಡಿತದಲ್ಲಿ ಮನಸ್ಸಿಗೆ ಸೆಲ್ಫಿ ಹಿಡಿಯುವ ದಿನಗಳು ಕಳೆದೆ ಹೋಗಿವೆಯೇನು? ಎಂಬ ಆತಂಕ ಇಂದಿನ ಯುವ ಸಮೂಹವನ್ನು ನೋಡಿದಾಗ ಅನಿಸುತ್ತಿದೆ. ಒಬ್ಬ ಗೆಳೆಯ, ಅಕ್ಕ, ತಮ್ಮ, ಸಂಬಂಧಿಕ, ಗುರು ಹೀಗೆ ಎಲ್ಲಾ ಸಂಬಂಧಗಳ ರುಜುವಾತು ಸೆಲ್ಫಿ ಮೂಲಕನೆ ಧೃಢಿಕರಣಗೊಳ್ಳಬೇಕೆನಿಸುವ ಈ ಯುಗದಲ್ಲಿ ಮೇಲಿನ ಆತಂಕವು ಸಹಜ. ಇಲ್ಲಿ ಸೆಲ್ಫಿಯನ್ನು ದೂಷಿಸುವ, ಒಲ್ಲೆ ಎನ್ನುವ ಯಾವ ಒತ್ತಾಯ, ತಕರಾರು ನನ್ನದಲ್ಲ ಬದಲಾಗಿ ಅತಿ ವ್ಯಾಮೋಹ ಮತ್ತು ಅದರ ಅತಿ ಪರಿಣಾಮಗಳ ಬಗ್ಗೆ ಇಲ್ಲಿ ಒಂದು ಕ್ಲುಪ್ತ ಚಿಂತನೆ.
ಸೆಲ್ಫಿ ಬಗ್ಗೆ ಇಷ್ಟೊಂದು ವ್ಯಾಮೋಹಕ್ಕೆ ಒಳಗೊಳ್ಳುವಲ್ಲಿ ಸಾಮಾಜಿಕ ಜಾಲತಾಣಗಳ ಕೊಡುಗೆ ಬಹಳವಿದೆ. ಇದಕ್ಕೆ ತಕ್ಕುದಾಗಿ ಕೈಗೆಟಗುವ ಬೆಲೆಯಲ್ಲಿ ಇಂದು ಡಿಜಿಟಲ್ ಕ್ಯಾಮಾರಗಳು, ಸ್ಮಾರ್ಟ್ ಪೋನ್ಗಳು ನಮಗೆ ದೊರಕುತ್ತಿದೆ. ತಾವೆ ಅಪ್ ಲೋಡ್ ಮಾಡಿದ ತನ್ನದೆ ಚಿತ್ರವನ್ನು ಎಲ್ಲರೂ ಮೆಚ್ಚಬೇಕು, ಗರಿಷ್ಠ ಲೈಕ್ ಪಡೆಯಬೇಕು, ಇತರರ ಗಮನ ಸೆಳೆಯಬೇಕು, ಇಂತದೆ ನೂರು ಯೋಚನೆಯಲ್ಲಿ ಈ ಸೆಲ್ಫಿ ಜಗತ್ತು ಮುಳುಗೇಳುತ್ತಿದೆ. ಅಯ್ಯೊ ನಿನಗ್ಯಾಕಪ್ಪ ಹೊಟ್ಟೆ ಉರಿ ? ಅವ್ರ ಸೆಲ್ಫಿ ಅವ್ರ ಲೈಕ್ಸ್ ನಿನ್ದೇನು ಮಧ್ಯದಲ್ಲಿ ಅಂತೀರ? ಹಿಂಗೊಂದು ಯೋಚನೆ ಬರೋದು ಸಹಜನೆ ಅದ್ರೆ ನಾಳಿನ ಸಮಾಜದ ಬಗ್ಗೆ ಅದುನ್ನ ಕಟ್ಟಿ ಕೊಡೋರು ಇಂದಿನ ಯುವ ಸಮೂಹ ಅಂತಾಗಬೇಕಾದ್ರೆ ಈ ಸೆಲ್ಫಿ ಸಿಂಡ್ರೋಮ್ ನನ್ನು ಹಾಗೆ ಇರಲಿ ಬಿಡು ಎಂದು ಸರಿಸಿ ಬಿಡಬಹುದಾದ್ದು ಖಂಡಿತ ಅಲ್ಲ. ಇದು ಸ್ವ ಪ್ರತಿಷ್ಟೆಯ ಗೀಳಾಗಿ, ಸೆಲ್ಫಿಯೊಂದರಿಂದ ವ್ಯಕ್ತಿತ್ವವನ್ನ ಅಳೆವಂತಾಗಿ ನಿಜವಾದ ಮಾನವ ಸಂಬಂಧಗಳು, ಅದರ ಸಂವೇದನೆಗಳು ಮರೆಯಾಗುತ್ತಿರುವದನ್ನು ಗಮನಿಸದೆ ಹೋದಲ್ಲಿ ಇದರಿಂದ ಮುಂದೊಂದು ದಿನ ಮಗದೊಂದಷ್ಟು ಕಷ್ಟಗಳನ್ನು ನಾವು ಎದುರುಗೊಳ್ಳಬೇಕಾದ್ದು ಕಟ್ಟಿಟ್ಟ ಬುತ್ತಿ.
ನಾನು ಬಾಲಿವುಡ್ ಹೀರೋಯಿನ್ ತರ ಕಾಣಿಸ್ಬೇಕು, ನನ್ನ ಮೂಗು ಚೂಪಾಗಿಲ್ಲ, ನನ್ನ ತುಟಿಗಳು ಅಂದವಾಗಿಲ್ಲ, ಯುವಕರಲ್ಲಾದರೆ ನನ್ಗೆ ರಫ್ ಲುಕ್ ಇಲ್ಲ ಗುಳಿ ಬೀಳುವ ಕೆನ್ನೆಗಳಿಲ್ಲ ಹೀಗೆ ತರೆವಾರಿ ಕಂಪ್ಲೆಂಟ್ ಗಳನ್ನ ಹೊತ್ತು ಕೊಂಡು ಸರ್ಜರಿ ಕಡೆಗೆ ಯುವ ಸಮುದಾಯ ಹೊರಳುತ್ತಿರೋದು ನೋಡಿದರೆ ಈ ಸೆಲ್ಫಿ ಸಿಂಡ್ರೋಮ್ ತನ್ನ ವ್ಯಾಪಕತೆಯನ್ನು ಹೇಗೆ ಹಬ್ಬಿಸಿಕೊಂಡಿದೆ ಎನ್ನುವದು ನಮಗರಿವಾಗಬಹುದು.5000 ದಿಂದ 150000 ವರೆಗಿನ ಪ್ಲಾಸ್ಟಿಕ್ , ಕಾಸ್ಮೇಟಿಕ್ ಸರ್ಜರಿಗಳು ಈ ದಿನಗಳಲ್ಲಿದ್ದು ಎಲ್ಲವು ಲಾಭದಾಯಕವಾಗಿ ನಡೆಯುವಂತೆ ಮಾಡುವಲ್ಲಿ ಈ ಸೆಲ್ಫಿ ಜಗತ್ತು ತನ್ನ ಗಣನೀಯ ಪಾತ್ರವನ್ನು ನಿರ್ವಹಿಸುತ್ತಿದೆ ಎಂದರೆ ತಪ್ಪಿಲ್ಲ.ಒಂದು ಅಂಕಿ ಅಂಶದ ಪ್ರಕಾರ ಶೇಕಡ 35 ಮಂದಿ ಹದಿ ಹರೆಯದವರು ಪ್ಲಾಸ್ಟಿಕ್/ ಕಾಸ್ಮೋಟಿಕ್ ಸರ್ಜರಿಯನ್ನ ಮಾಡಿಸಿಕೊಳ್ಳುತಿದ್ದಾರೆ. ತಮ್ಮ ಅಂಗ ಭಂಗಿಗಳು ಯುನಿಕ್ ಆಗಿರಬೇಕು ಎಂಬ ಭರದಲ್ಲಿ ಪ್ರಕೃತಿ ತನಗೊದಗಿಸಿದ ಸಹಜ ಸೌಂದರ್ಯವನ್ನು ವಿರೂಪಗೊಳಿಸುತ್ತಿದ್ದೇವೆ, ಆ ಮೂಲಕ ಜೀವನ ಪೂರ್ತಿ ಕಾಸ್ಮಿಟಿಕ್ ಗಳನ್ನೆ ಅವಲಂಬಿಸಬೇಕಾದ ಅನಿವಾರ್ಯತೆಗಳೆಡೆಗೆ ನಮ್ಮನ್ನು ನಾವಾಗೆ ದೂಡಿಸಿಕೊಳ್ಳುತಿದ್ದೇವೆ.
ಒಂದು ಸೆಲ್ಫಿಯನ್ನು ತಂತ್ರಜ್ಞಾನದ ಫಲದಿಂದ ಮತ್ತಷ್ಟು ಉತ್ತಮಗೊಳಿಸಿ ಸಾಮಾಜಿಕ ಜಾಲ ತಾಣದಲ್ಲಿ ಅಪ್ ಲೋಡ್ ಮಾಡಿದ ಮರುಕ್ಷಣದಿಂದ ಮನಸ್ಸು ಖಿನ್ನತೆ ಕಡೆ ವಾಲುತ್ತದೆ. ಎಷ್ಟು ಜನ ಲೈಕಿಸಿರಬಹುದು, ಪ್ರತಿಕ್ರಿಯೆಗಳು ಎಷ್ಟಿರಬಹುದು, ಇವುಗಳಲ್ಲಿ ಪರಿಚಿತರು ಯಾರು? ಅಪರಿಚಿತರು ಯಾರು ಇವೆ ಇತ್ಯಾದಿ ಯೋಚನೆಯೊಳಗೆ ಮುಳುಗಿ ಮಾಡಬೇಕಾದ ಕೆಲಸಗಳತ್ತ ಉದಾಸೀನ. ಒಂದಷ್ಟು ಲೈಕ್ ಕಮೆಂಟ್ ಸಿಕ್ಕಿದ್ದೆ ತಡ ಈ ಸೆಲ್ಫಿ ಹುಚ್ಚು ಚೂರು ಚೂರೆ ಚಿಗಿತುಕೊಳ್ಳುತ್ತದೆ, ಸಾಲು ಸಾಲು ಸೆಲ್ಫಿ ತೆಗೆಸಿಕೊಂಡು ಮತ್ತಷ್ಟು ಮಗದಷ್ಟು ಪ್ರತಿಕ್ರಿಯೆ, ಲೈಕ್ ಗಳ ನಿರೀಕ್ಷೆಯಲ್ಲಿ ಯಾವ ಸೆಲ್ಫಿಗಳು ಮೆಚ್ಚುಗೆಯಾಗದೆ ಒಂದು ಉತ್ತಮ ಸೆಲ್ಫಿಗಾಗಿ ಹುಡುಕುತ್ತಲೆ ಅಸಹನೆಯೊಂದಿಗೆ ಸ್ಟಂಟ್ ಮಾಡಲೋಗಿ ಕೈ ಕಾಲು ಮುರಿದುಕೊಂಡ ಉದಾಹರಣೆಗಳು ಈ ಸೆಲ್ಫಿ ಜಗತ್ತಿನಲ್ಲಿದೆ. ಹಲವಷ್ಟು ಮೊಬೈಲ್ ಪುಡಿಗೊಂಡಿದ್ದು ಇದೆ. ಕೆಲವೊಮ್ಮೆ ಹೀಗೂ ಆಗುತ್ತದೆ…..ಅದು ಹೇಗೆಂದರೆ ನಿರೀಕ್ಷಿತ ಪ್ರತಿಕ್ರಿಯೆ ಮೆಚ್ಚುಗೆಗಳು ಸೆಲ್ಫಿಗೆ ಬಾರದೆ ಹೋದಲ್ಲಿ ನಿರಾಶೆ, ಹತಾಶೆ, ಕೀಳರಿಮೆ ತುಂಬಿಕೊಂಡು ಮನಃಕ್ಲೇಶಗಳನ್ನು ತಂದುಕೊಂಡು ಮಬ್ಬಾಗುವವರನ್ನು ತನ್ನೊಳಗೆ ಇರಿಸಿಕೊಂಡಿದೆ ಈ ಸೆಲ್ಫಿ ಜಗತ್ತು. ಸಮೀಕ್ಷೆಯ ಪ್ರಕಾರ ಶೇಕಡ 80 ರಷ್ಟು ಮಂದಿ ಸೆಲ್ಫಿ ತೆಗೆದುಕೊಳ್ಳುವವರಿದ್ದು ನಾವೇನು ಸೆಲ್ಫಿ ಸಿಂಡ್ರೋಮ್ ಅಂತ ಮಾತಾಡ್ತ ಇದ್ದೇವೊ ಅದು ಈ 80% ದಲ್ಲಿ ಸೂಮಾರು 60% ದಷ್ಟು ಜನರಿಗಿದೆ.ಈಗ ಹೇಳಿ ಬರೀಯ ಸೆಲ್ಫಿ ಎಂದು ಸರಿಸಿಬಿಡಬಹುದಾದ ವಿಷಯನಾ ಇದು? ಒಂದಿಡಿ ಸಮುದಾಯ ಸೆಲ್ಫಿಯ ಹಿಂದೆ ಬಿದ್ದು ಕ್ರೀಯಾಶೀಲತೆಯನ್ನು ಮರೆತು ಖಿನ್ನತೆ, ಅಕ್ರೋಶದಿಂದ,ಅತ್ಮ ವಿಶ್ವಾಸವನ್ನು ಕೊಂದುಕೊಂಡು ಬದುಕುತ್ತಿದೆ ಎಂದರೆ ಅದರ ಮುಂದಿನ ಪರಿಣಾಮ ಎಂತದ್ದಿರಬಹುದು? ಅದು ಸೆಲ್ಫಿ ಕಡೆ ಹೆಚ್ಚಿನ ಆಕರ್ಷಣೆ ಹೊಂದಿದವರು ಯಾರು ಅಂತೀರಿ? ಅಧ್ಯನಗಳು ಧೃಡಪಡಿಸಿದಂತೆ 16 ರಿಂದ 26 ವರುಷದವರೆಗಿನ ಮಂದಿ!!! ಯಾರು ಜೀವನ ರೂಪಿಸಿಕೊಳ್ಳಬೇಕಾದ ಹಂತದಲ್ಲಿರುತ್ತಾರೊ ಅವರುಗಳು.ಅಂದ್ರೆ ಸೆಲ್ಫಿ ಅನ್ನೊ ಗೀಳು ಮದ್ಯಪಾನ, ಧೂಮಪಾನ, ಜೂಜಿನಂತೆಯೆ ಒಂದು ಮಾರಕ ಚಟವಾಗಿ ಬಾಧಿಸಬಹುದು ಎನ್ನುವದನ್ನು ನಿರಾತಂಕವಾಗಿ ಹೇಳಬಹುದಾಗಿದೆ.
ತನ್ನ ಅಂಗಾಂಗಗಳು ಹಾಗಿರಬೇಕಿತ್ತು ಹೀಗಿರಬೇಕಿತ್ತು ಕಲರ್ರು ಬೇಳ್ಳಗಿರಬೇಕಿತ್ತು ಹೀಗೆ ಏನೇನು ಅವಾಸ್ತವಿಕ ನಿರೀಕ್ಷೆಗಳು,ಅಸ್ವಾಭಾವಿಕ ಹೋಲಿಕೆಗಳು, ಅನಿಯಂತ್ರಿತ ಬಯಕೆಗಳನ್ನು ಹುಟ್ಟು ಹಾಕೊ ಸೆಲ್ಫಿ ಗೀಳು, ಊಟ ಪಾಠ ನೆಮ್ಮದಿ ಯನ್ನು ಕಳಕೊಂಡು ಖಿನ್ನತೆಯನ್ನು ತರಬಹುದಾದ ಸೆಲ್ಫಿ ಜಗತ್ತಿನ ಬಗ್ಗೆ ತುಸು ಅರಿವು ಎಚ್ಚರಗಳು ಹಾಗು ಅದರ ಮೆಲೊಂದು ನಿಯಂತ್ರಣ ನಮಗಿರೋದು ಉತ್ತಮ.ನಾ ಹೇಗಿದ್ದೇನೊ ಹಾಗೆ ಬೇರೆಯವರಿಗೆ ಒಪ್ಪಿಸಿಕೊಳ್ಳೊ ಮೊದಲು ತನಗೆ ತಾನೆ ಒಪ್ಪಿಸಿ ಸಂಭ್ರಮ ಪಡಬೇಕಿರೋದು ಮುಖ್ಯ. ಇನ್ಮುಂದೆ ಸೆಲ್ಫಿಗಳು ಬೇಡ ಎಂದು ಹೇಳುವದು ಅವಾಸ್ತವಿಕ. ಸೆಲ್ಫಿಗಳ ಗೀಳು ಹಚ್ಚಿಕೊಳ್ಳದೆ ಸೆಲ್ಫಿಗಳು ಪ್ರದರ್ಶನಕ್ಕಿರದೆ ನಮ್ಮ ನೆನಪಿಗಾಗಿ ನಮ್ಮಗಳಿಗಾಗಿಯಷ್ಟೆ ಒಳಿತಾಗಿ ಬಳಕೆಯಾಗೋದು ಮುಖ್ಯ.ಮಕ್ಕಳೊಂದಿಗೆ ಆತ್ಮೀಯರಾಗಿ ಗೆಳೆಯರಾಗಿದ್ದುಕೊಂಡು ಅವರನ್ನ ಕುಟುಂಬಕ್ಕೆ ಹತ್ತಿರವಾಗಿರುವಂತೆ ನೋಡಿಕೊಳ್ಳೋದು ಮುಖ್ಯ, ಕಾರಣ ತನ್ನವರಿಂದ ದೂರಾದವರು ತನ್ನವರೆನಿಸಿಕೊಳ್ಳೊ ಮಂದಿಯ ಹುಡುಕಾಡೊ ದಾರಿಯಲ್ಲಿ ಈ ಸೆಲ್ಫಿಯು ಸುಲಭ ರಹದಾರಿಯ ಹಾಗೆ ಕಾಣುತ್ತದೆ.ಕ್ರಮೇಣ ಸೆಲ್ಫಿ ಗೀಳನ್ನು ಹಚ್ಚಿಕೊಳ್ಳಬಹುದು. ಚೆನ್ನಾಗಿರೊ ಕುಟುಂಬ, ಗೆಳೆಯರೊಂದಿಗೆ ಉತ್ತಮ ಸಂವಹನ, ಹಿರಿಯರಾದವರು ಕಿರಿಯರ ಬಗ್ಗೆ ಒಂಚೂರು ತೋರಬಲ್ಲ ಕಾಳಾಜಿ ಇವೆಲ್ಲವು ಒಳ್ಳೆಯದಾಗಿದ್ದರೆ ಈ ಸೆಲ್ಫಿ ಹುಚ್ಚು ಅತಿಯಾಗದೆ ಹಿತವಾಗಿ ನೆನಪುಗಳನ್ನು ಅವಲೋಕಿಸಲು ಸುಲಭದ ಹಾದಿಯಾಗಿ ಮೆದುಳಿಗೆ ಚೈತನ್ಯದಾಯಕವಾಗಿ ಆಗರವಾಗಬಲ್ಲುದಾದ ಕ್ರಿಯೆ ಎಂದು ತಜ್ಞರು ಸೆಲ್ಫಿ ಬಗ್ಗೆ ವಿಶ್ಲೇಶಿಸುತ್ತಾರೆ.
ನಮ್ಗೊಂದು ಖಾಯಿಲೆಯಲ್ಲದ ರೋಗವಿದೆ ಅದ್ಯಾವುದೆಂದರೆ ಯಾವದು ಕೂಡ ನಮ್ಮರಿವಿಗೆ ಬರೊ ಮುಂಚೆ ನಾವೆಚ್ಚೆತ್ತುಕೊಳ್ಳದಿರೊದು. ಈ ಸೆಲ್ಫಿ ಸಿಂಡ್ರೋಮ್ ಕೂಡ ಅದೆ ತರದ್ದು. ಬಹುಶಃ ಈ ಸೆಲ್ಫಿ ಬಗ್ಗೆ ಇಷ್ಟು ಬರೆದುಕೊಳ್ಳಬೇಕಿತ್ತ??ಎಂದು ತಮ್ಮಲ್ಲಿ ಪ್ರಶ್ನೆಗಳಿದ್ದರೆ ಉತ್ತರಿಸಿದ್ದೇನೆ ಎಂದೆನ್ನುಕೊಳ್ಳುತ್ತೇನೆ. ಸಾಮಾಜಿಕ ಜಾಲ ತಾಣಗಳಿಂದಾಗಿಯೆ ಈ ಸೆಲ್ಫಿ ಗೀಳು ವಿಪರೀತವಾಗಿದೆ ಎಂಬ ವಾದವು ಒಪ್ಪ ತಕ್ಕದ್ದೆ ಆದರೆ ಸೆಲ್ಫಿಯನ್ನು ಒಳಿತಾಗಿ ಬಳಸಬಹುದಾದ ನಿಯಂತ್ರಣತೆ ನಮಗೆ ಸಾಮಾಜಿಕ ತಾಣಗಳ ಮೇಲಿಲ್ಲ. ಅದು ಎಲ್ಲವನ್ನೂ ಸ್ವಿಕರಿಸುವಂತದ್ದು. ಬಳಕೆದಾರರಾದ ನಮಗೆ ಎಚ್ಚರವಿರಬೇಕಷ್ಟೆ. ನಾ ಸೆಲ್ಫಿ ಗೀಳಿನ ದ್ವೇಷಿಯೆ ಹೊರತು ಸೆಲ್ಫಿಯದ್ದಲ್ಲ ಎಂಬುದನ್ನು ಮಗದೊಮ್ಮೆ ನೆನೆಪಿಸುತ್ತಾ ಮತ್ತೆ ಸಿಕ್ಕಾಗ ನನ್ಜೊತೆ ಒಂದು ಸೆಲ್ಫಿ ಪ್ಲೀಸ್….ನಿಮ್ಮ ನೆನಪಿಗಾಗಿ ನನ್ನ ತಿಜೋರಿಯಲ್ಲಿ ಜಾಗವಿರಿಸಿಕೊಳ್ಳುವೆ.
*****
No comments:
Post a Comment