ನಾ ಬರೆಯೋದು ನನಗಲ್ಲ
ಮೂಡುವ ಸಾಲುಗಳೂ ನನದಲ್ಲ
ವಸ್ತು ಅದಾಗೆ ಅದು ಬರೆಸಿಕೊಂಡು
ನಾನದರ ಮಾಧ್ಯಮ ಆಗೋ ಆಸೆ.
ಸಾಲುಗಳೋದಿ ಕವಿತೆ ಕಥೆ ಅಂದಿರೆಲ್ಲ
ವಿಷಯಗಳೂ ನನದಲ್ಲವೆಂದು ಒಪ್ಪಿರೆಲ್ಲ
ಗ್ರಹಿಕೆಗೆ ಬಂದದ್ದೂ ಅದಾಗೆ
ಗೀಚಿದೆ ಅದ ನಾ ನಿಮಗಾಗೆ
ಗೆಳೆಯ ಹೇಳಿದ ಬರೆದದ್ದನ್ನೂ ಕೂಡಿಡೆಂದು
ನನಗೆ ಕ್ಲೀಷೆ ನನದಲ್ಲದರ ಮೇಲೆ...........
ತನ್ನದೆಂದು ಹಕ್ಕಸಾಧಿಸಿ ಕೂಡಿಡುವದು ಎಂತೆಂದು?
ಅನುಭವಕ್ಕೆ ಬಂದದ್ದನ್ನು ಜನ ತಿಳಿಯಲೆಂದು ಬರೆದೆ
ಬೇಕಾದರೆ ನೀನೆ ಕೂಡಿಟ್ಟುಕೋ ಎಂದು ಗೆಳೆಯನಿಗಂದೆ.
ನನ್ನ ಬಗ್ಗೆ ನಾನೆ ಬರೆದರೆ ಅಸಹ್ಯಿಸಿಕೊಳ್ಳುತ್ತೇನೆ
ಹಸಿವು,ಬಡತನಕ್ಕೆ ತುಟಿಯಾಡಿಸ ಬಯಸುತ್ತೇನೆ
ನಿನ್ನ ಅನುಭವಗಳನ್ನು ನಿನ್ನದೆಂದು ಬರಿ
ಬದುಕ ವ್ಯಥೆ ಕಥೆಗಳ ಕಟ್ಟಿಡು ನಿನ್ನ ಕಥೆಯೊಂದಿಗೆ ಸೇರಿ
ಬಂಧು ಗೆಳೆಯನ ಮಾತ ಕೇಳಿ ಜಿಜ್ಞಾಸೆ ಮೂಡಿದೆ
ನಾ ಏನ ಬರೆಯಲಿ?ಹೆಂಗೆ ಬರೆಯಲಿ? ಎಂದು ಮನ ಕಾಡಿದೆ.
ಬರೆಯುತ್ತಾ ಬರೆಯುತ್ತಾ ಉತ್ತರ ಸಿಗಬಹುದೇನೋ?
ನನ್ನದೇ ವಿಭಿನ್ನ ಶೈಲಿ ನನ್ನದಾಗಬಹದೇನೋ?
ಮಾತುಗಳ ರೂಪದ ವಾಕ್ಯವೂ ಕವಿತೆಯಾಗಬಲ್ಲುದೆ?
ಭಾವನೆಗಳೆ ಜೀವಾಳವಾಗಬೇಕಾದ ಕವಿತಾ ಶೈಲಿ ನನಗೊಗ್ಗಬಲ್ಲುದೆ?
ಪ್ರಶ್ನೆಗಳ ಬಗ್ಗೆ ನಾನಂದುಕೊಳ್ಳೋದಿಷ್ಟೆ.....
ಮನದಲ್ಲಿ ಪ್ರಶ್ನೆಗಳೂ ಹೀಗೆ ಒಡಮೂಡಲಿ
ನನ್ನ ಬರವಣಿಗೆ ಇದರಿಂದ ಪಕ್ವತೆಯ ಪಡೆಯಲಿ.
No comments:
Post a Comment