Monday, February 6, 2012

ಜಾಪಾರಿ..

ಯಾವ ಪರಿಯ ಸೊಬಗಿಗೂ ಸೊಪ್ಪು ಮುಟ್ಟಿಸದ 
ಇವನ ಹೆಸರು ಜಾಪಾರಿ..
ಹಮಾಲಿ ಜಗತ್ತಿನ ಲೈಟುಕಂಬದೆದುರು ಮಂಡಿಯೂರಿ

ಕುಳಿತ ಇವನೆದುರು ಗಸಗಸೆ ಹಣ್ಣಿನ ಗುಡ್ಡೆಗಳು..
ಆ ಮರ, ಈ ಮರ, ಗಸಗಸೆ ಬಿಡುವ ಯಾವ ಮರವಾದರೂ
ಜಾಪಾರಿಗೆ ಅದು ಅವನದ್ದೇ ಮರ..
ಕೊಂಬೆರೆಂಬೆಗಳ ಮೇಲೆಲ್ಲ ನಡೆದಾಡಿ ಕಿತ್ತ
ಗಸಗಸೆ ಹಣ್ಣುಗಳು ಎಂಟಾಣೆಯ ಕವರೊಳಗೆ ಜೋಪಾನ.
ನಾಲ್ಕುದಾರಿ ತಬ್ಬುವ ಕೂಡುಬಿಂದುವಿನ ಲೈಟುಕಂಬವೇ
ಜಾಪಾರಿಯ ವ್ಯಾಪಾರದ ಶಾಪಿಂಗಿನ ಮಾಲು.
ತಿಳಿಗೆಂಪಿಗೆ ಇಷ್ಟು, ಕಡುಕೆಂಪಿಗೆ ಇಷ್ಟು
ಮಾಗಿದವಕ್ಕೆ ಇಷ್ಟು, ಅಪ್ಪಚ್ಚಿಯಾಗವಕ್ಕೆ ಇಷ್ಟು..
ಎಲ್ಲದಕ್ಕೂ ಬೆಲೆಯುಂಟು ಜಾಪಾರಿ ಗುಡ್ಡೆಗಳಲಿ.
ಇವನ ವಯಸ್ಸಿನಂಥವೇ ಕೂಸುಗಳಿಗೆ
ಗುಡ್ಡೆಗಳ ತೋರಿಸಿ ಗಿರಾಕಿಗಳಾಗಲು ಪ್ರಚೋದಿಸುತ್ತ
ಮೊಣಕಲಾಲೂರಿದ ಜಾಪಾರಿಯ ಕಣ್ಣು ನಿಮೀಲಿತ.
ಎರಡು ಸಾಸುವೆಯಷ್ಟು ಹಿಂದಕ್ಕೆ ತಿರುಗುವುದಾದರೆ,
ಬಾಳೆಕಾಯಿ ಮಂಡಿಯೊಳಗೆ ವಿಟರ ಕೂಪದಲ್ಲಿ
ಅಕ್ಕಿಬೇಳೆಗೆ ದಾರಿ ಮಾಡಿಕೊಳ್ಳುತ್ತಿದ್ದ ಜಾಪಾರಿಯ
ತಾಯಿಯದ್ದು ಸಾವಾಗಿ ತಿಂಗಳು ಕಳೆದಿಲ್ಲ..
ಗಸಗಸೆಯ ಮರವೆಂದು ನೆಲದ ಮೇಲಿರುವತನಕ 
ಜಾಪಾರಿಯ ಬ್ರೆಡ್ಡು ಬನ್ನಿಗೇನೂ ಕೊರತೆಯಿಲ್ಲ..
ಆಗಾಗ್ಗೆ ಗಸಗಸೆ ಹಣ್ಣಿನ ಗುಡ್ಡೆಗಳ ಲಿಲಾವು ಜೋರಾದರೆ, 
ಐದತ್ತು ರುಪಾಯಿಗೆ ಮೊಟ್ಟೆದೋಸೆಯನ್ನೂ ತಿನ್ನುತ್ತಾನೆ.
ಹಿಪ್ಪುನೇರಳೆ ಮರದ ಪೊಟರೆಯೊಳಗೆ ದೇಹ ತೂರಿಸಿ
ಬೆಳಗಾನ ಕತ್ತಲೆಯ ಮೂಗಿಗೆ ಮೂಗು ಉಜ್ಜುತ್ತಾನೆ.
ಎಲ್ಲವನ್ನೂ ನಿಂತ ನಿಟ್ಟಿನಲ್ಲಿ ನಿರುಕಿಸುವ ಮಾಸುಕಪ್ಪು
ಕಾಗೆಯೊಂದು ಪುಟ್ಟ ಕಣ್ಣೊಳಗೆ ಎರಡು ಮಾತು
ಆಡಲು ಹಿಂದೆಮುಂದೆ ನೋಡುತ್ತಿದೆ.
ಪೊಟರೆಯೊಳಗಿನ ಜೀವಕ್ಕೆ ಇನ್ನೂ ಬಿಸಿಲು ತಾಕಿಲ್ಲ..
-ದಯಾನಂದ್ ಟಿ ಕೆ

No comments:

Post a Comment