Monday, February 6, 2012

ಕುರುಡು ಭಿಕ್ಷುಕ

ನನ್ನದೇ ತಾಳ , ನನ್ನದೇ ಹಾಡು
ಪೂಟ್ಪಾತ್ ಎಂಬ ರಂಗಮಂದಿರ
ಹಾಡು ರೂಢಿಸಿದೆ ನನಗೆ
ನಂಬಿದ ದೇವ ಕಣ್ಣು ಕಿತ್ತ ನಂತರ


ಇದ್ದೋಬ್ಬ ಮಗ ಇಲ್ಲದಾದ ಮೇಲೆ
ಚೂರು ಪಾರೂ ಸಾಕುತಿದ್ದ ಹೆಂಡಿರು
ಅಂತರಂಗಕ್ಕೆ ಕಾಣದಾದ ಮೇಲೆ
ಬದುಕಿಗಾಗಿ ಹಾಡುತ್ತಿರುವೆ ಶಿವ ನಾಮ
ದೇವರು ತೊರೆದ ಬದುಕ ನಡೆಸಲು


ಹಾಡು ಯಾವುದಾದರೇನು?
ತನ್ಮಯತೆ ಒಡಮೂಡಿದಾಗ
ಸೇವೆ ನೀಡದೆ ಭವತಿ ಎನ್ನಲಾರೆ
ಭಿಕ್ಷೆಯ ಋಣವ ಇರಿಸಿಕೊಳ್ಳಲಾರೆ


ಊರು ದಂಟೆಯ ಬಳಸುವದಿಲ್ಲ
ಹೋದರೆ ಹೋಗಲಿ ಈ ಜೀವ
ಕಾಲ ಚಕ್ರದಡಿಗೆ.......
ನೀವಿತ್ತ ಪೈಸೆಗಳಲ್ಲಿ
ಸಾಧ್ಯವಾದರೆ ಉಣ್ಣುವೆ ಕುಡಿಯುವೆ
ನಾಳೆಯ ನೆನೆಯದೆ ಅಡಿಗಡಿಗೆ


ಜಗವೆ ನನ್ನ ಸೂರು
ನಾನೆ ವಿಶ್ವದೊಡೆಯ
ಹಮ್ಮು ಬಿಮ್ಮು ಬಿಟ್ಟ ಬಾಳು
ಕಣ್ಣಿದ್ದು ಕುರುಡು ಮೆರೆವ ಲೋಕಕ್ಕಿಂತ
ನಂಗೆ ನನ್ನ ಜಗವೇ ಅಭೇದ್ಯ


ಅನಾಥ ಹೆಣವಾಗುವೆ ಒಂದು ದಿನ
ನನ್ನ ಚಿರನಿದ್ರಾ ಯಾತ್ರೆ ನಡೆಸಲು
ಸಿದ್ದವಿದೆ ಕಾರ್ಪೋರೇಷನ್ ವ್ಯಾನ್
ಅಲ್ಲಿವರೆಗೆ ಬಿಡದೆ ಹಾಡುವೆ ಶಿವ ನಾಮ
ಸಾವಿನ ದಿನ ನನ್ನ ಬದುಕ ಕಂಡು ದೇವ ಮರುಗಲೆಂದು.....!!!!

No comments:

Post a Comment