Sunday, February 19, 2012

ಹಾಸ್ಯಪ್ರಜ್ಞೆ



ಯಾಕೋ ಮೂಗ ತುದಿ ಕೆಂಪು,ಹಿಂಗೆ ಮಾಡ್ಬೇಡ್ವೋ ನನ್ನ ಕರುಳು ಕಿತ್ತು ಬರುತ್ತೆ ಅದಕ್ಕೆ ನಿನ್ನ ಹೆಸರ ಟ್ಯಾಗ್ ಪಟ ಬರೆದು ಹಾರ ಮಾಡಿ ಕುತ್ತಿಗೆಗೆ ಹಾಕೋಂಡು ಒಡಾಡ್ತೀನಿ ನೋಡು.ಅಷ್ಟಕ್ಕೂ ನಾನೆನಂದೆ? ಊರೂರು ಸುತ್ತೋದು ಬೇಡ, ಒಂದು ಕೆಲಸ ಹಿಡಿ. ಬಂದಿದ್ದೆಲ್ಲ ಅವಕಾಶನ ಕೈ ಚೆಲ್ಲಬೇಡ? ಇವತ್ತೇನೋ ನಡಿಯುತ್ತೆ ಮುಂದೆ ಹೆಂಗೆ? ನೀ ಹಿಂಗೆ ಆಡ್ತಾ ಇದ್ದರೆ ಬಾಲ ಸುಟ್ಟ ಬೆಕ್ಕಿನಂತೆ ರಪ್ಪನೆ ಓಡೋಗಿ ಗವ್ವನೆ ನಿನ್ ಸಹವಾಸನೆ ಬೇಡ ಅಂತ ಕೂರ್ತೀನಿ, ಆಗಲೂ ಹಾಳಾಗೋದು ನೀನೆ. ಒಸಿ ವಿಚಾರ ಮಾಡಪ್ಪ ಕತ್ತೆ ವಯಸ್ಸಾದರು ಬುದ್ದಿ ಹೇಳಿಸಿಕೊಬಾರದು, ನಮ್ದೇನೋ ಛಾಳಿ ಹೇಳ್ತಿವಿ ನೋಟೀಸ್ ಇಲ್ಲದೆ ಹಾಜರಾಗ್ತಿವಿ ಕಾರಣ ಇಷ್ಟೆನಲೆ ಏನೋ ನಿನ್ ಮೇಲೆ ಪಿರುತಿ ನೀನ್ ಓಳ್ಳೆದಾಗಿ ನಿನ್ನ ಚಂದದ ದಿನಗಳ ನೋಡೋ ಆಸೆ. ನಾವೇನೋ ಹೇಳೋಣ ಅಂತ ಬಂದ್ರೆ ಹಿಂಗೆ ಮೂಖ ಸಿಂಡರಿಸಿ ಕೂತರೆ ಹೆಂಗೆ? ಏಳು ನಾಳೆಗೆ ಅದಾವೊದೊ ಇಂಟರವ್ಯೂ ಇದೆಯಂದೆಯಲ್ಲ ಜಾಣ ಮರಿಯಂತೆ ರೆಡಿಯಾಗಿ ಹೋಗಿ ಕೆಲಸ ಗಿಟ್ಟಿಸಿಕೋ ಮೋಜು ಮಸ್ತಿಯೆಲ್ಲ ಆಮೇಲೆನೂ ಮಾಡ್ಕೋ ಬಹುದು. ಒಬ್ಬ ಪಾಲಿಗೆ ಬಂದ ಕೆಲಸವನ್ನೆಲ್ಲಾ ಕೈ ಚೆಲ್ಲುತ್ತಾ ಬುದ್ದಿ ಹೇಳೋರ ಮೇಲೆಲ್ಲಾ ಬಿಸಿ ರಕ್ತದ ದರ್ಪ ತೋರಿಸೋ ಯುವಕನಿಗೆ ಈ ತೆರನಾಗಿ ತಿಳಿ ಹೇಳುತ್ತಾ ಹೋದರೆ ಒಂದಷ್ಟು ಪರಿಣಾಮ ಖಂಡಿತಾ ಆಗಬಹುದು.ಒಂದು ನಸುನಗೆಯೊಂದಿಗೆ ಸಲಹೆ ಒಪ್ಪಿಕೊಳ್ಳೋ ಸಂದರ್ಭಗಳೆ ಹೆಚ್ಚು. ತಿಳಿ ಹೇಳುವದರಲ್ಲೂ ನವಿರಾದ ಹಾಸ್ಯ ಪ್ರಜ್ಞೆ ಮೆರೆದಿದ್ದು ಈ ಮಾತುಗಳನ್ನು ಆ ಯುವಕ ಒಪ್ಪಿಸಿಕೋಳ್ಳೊದಕ್ಕೆ ಕಾರಣ

ಕಿಕ್ಕಿರದ ಟ್ರಾಪಿಕ್ ನಲ್ಲಿ ಮನೆ ಸೇರೋ ಧಾವಂತ ,ಆಫೀಸು ಸೇರೋ ಧಾವಂತದೊಂದಿಗೆ ಬೈಕೇರಿ ಹೊರಟಿರುತ್ತೇವೆ,ಅದಾವೋದೋ ಸಿಗ್ನಲ್ ನಲ್ಲಿ ಬೈಕ ಮಿರರ್ ಇನ್ನಾವುದೋ ವಾಹನಕ್ಕೆ ತರಚುತ್ತದೆ. ಸಹಜವಾಗಿ ಆ ವಾಹನದವ ಗಂಭೀರನಾಗಿ ನಿಮ್ಮತ್ತ ಪ್ರಶ್ನೆಗಳೆನ್ನೆಸೆಯುವ ಮುಂದೆನೆ ಮುಗುಳ್ನಗೆಯೊಂದಿಗೆ ಒಂದು ಸಾರಿ ಅಂದುಬಿಡೋಣ, ಸಣ್ಣದಾದಾ ಆ ವಿಷಯವನ್ನು ಆತನೂ ಅಷ್ಟೆ ಸಣ್ಣದಾಗಿ ಸ್ವೀಕರಿಸಿ ನಸು ನಕ್ಕು ಐಟ್ಸ್ ಓಕೆ ಅನ್ನೋ ಸಂದರ್ಭನೆ ಹೆಚ್ಚು. ಇಲ್ಲಿ ಸಾರಿ ಪದಕ್ಕಿಂತಲೂ ಹೆಚ್ಚು ಕೆಲಸ ಮಾಡೋದು ಆ ಪದದೋಂದಿಗೆನೆ ನಸು ನಗೆ. ಅದೆ ಅದೆಷ್ಟೋ ನಾವು ಹೇಳಬೇಕಾದ ಮಾತುಗಳನ್ನು ಎದುರಿಗಿದ್ದವನಿಗೆ ಅರುಹಿ ಬಿಡುತ್ತದೆ.ಅದು ಬಿಟ್ಟು ನಮ್ಮ ಒತ್ತಡವನ್ನು ಸಿಟ್ಟಿನ ಕೈಗೆ ಕೊಟ್ಟು ಅನಾವಶ್ಯಕವಾಗಿ ಜಗಳ ಕಾಯೋಕೆ ನಿಂತರೆ ಅದೇ ಸಮಸ್ಯೆ ದೊಡ್ಡದಾಗಿ ನಮ್ಮ ಕೆಲಸಗಳೀಗೂ ವಿಳಂಬ, ಇತರರೀಗೂ ಕಿರಿ ಕಿರಿ, ಅವರದೊಂದಿಷ್ಟು ಶಾಪಗಳ ಸುರಿಮಳೆ ಹೆಗಲೇರಿಸಿಕೊಳ್ಳೋದು ಅನಿವಾರ್ಯ.ಹೀಗೆ ಪ್ರತಿ ಸಂದರ್ಭದಲ್ಲೂ ನಮ್ಮೋಳಗಿನ ಹಾಸ್ಯ ಪ್ರಜ್ಞೆ ಅದೆಷ್ಟೋ ರೀತಿಯಲ್ಲಿ ನಮ್ಮ ಕೈ ಹಿಡಿದು ಸಾಗುತ್ತೆ. ಆ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿರಬೇಕಷ್ಟೆ.

ಸುಲಭವಾಗಿ ನಾಲ್ಕು ಹಾಸ್ಯ ಸಾಲುಗಳನ್ನ ಗೀಚಿಬಿಡಬಹುದು,ಹಾಸ್ಯ ಗೋಷ್ಠಿಗಳಿಗೋಗಿ ನಕ್ಕೆದ್ದು ಬರಬಹುದು,ಗೆಳೆಯರೊಡನೆ ಕೂತು ಹಾಸ್ಯ ಚಟಾಕಿಯನ್ನೂ ಹೇಳಬಹುದು ಆದರೆ ನಿಜವಾಗಿಯೂ ಹಾಸ್ಯ ಪ್ರಜ್ಞೆ ಜಾಗೃತವಾಗಿ ಸದಾ ಕಾಲ ಮೈತುಂಬಿಕೊಳ್ಳೋದು ಕಷ್ಟ.ಇದು ರೂಢಿಯಿಂದ ಬರಬೇಕಾದ್ದು.ಒಂದು ಸೀರಿಯಸ್ ವಿಚಾರವನ್ನ ಹಾಸ್ಯದ ಲೇಪನ ಕೊಟ್ಟು ಯಾವುದೇ ರೀತಿಯ ವ್ಯಂಗ್ಯಕ್ಕೆ ಅವಕಾಶ ಇಲ್ಲದಂತೆ, ಮನಮುಟ್ಟುವಂತೆ ಹೇಳೋಕೆ ಸಾಧ್ಯನಾ? ಸಾಧ್ಯ ಆದರೆ ಬಹಳ ಮಂದಿಗೆ ಕಷ್ಟ.ಕಾರಣ ಇಷ್ಟೆ ನಮ್ಮೋಳಗಿನ ಹಾಸ್ಯಪ್ರಜ್ಞೆ ಇನ್ನೂ ಜಾಗೃತವಾಗಿಲ್ಲ, ಪ್ರತಿಯೊಂದರಲ್ಲೂ ಹಾಸ್ಯವಿದೆ ಅನ್ನೋದು ಅದನ್ನ ಗ್ರಹಿಸೋದಕ್ಕೆ ನಮ್ಮ ಒತ್ತಡಗಳು ನಮಗೆ ಅವಕಾಶವ ಕೊಟ್ಟಿಲ್ಲ ಅನ್ನೋದೆ ಸರಿ. 

ಅಪಧಮನಿ ಆಭಿಧಮನಿ ಎಲ್ಲೆಲ್ಲೋ ಹರಿಯೋ ರಕ್ತ,ನಮ್ಮೆಲ್ಲರ ಮೈತುಂಬಾ ಇದೆ. ಸುಮ್ಮನೆ ಹಳೆ ರಕ್ತ ಹರಿದು ಹೋಗೋ ತನಕ ನಮ್ಮ ದೇಹದ ರಕ್ತ ಉತ್ಪಾದನಾ ಕೇಂದ್ರವೂ ಸ್ಥಬ್ದವಾಗಿ ಕೆಲಸ ನಿಲ್ಲಿಸಿದೆ. ಆ ಯಂತ್ರಾಗಾರ ಅದೆಲ್ಲಿ ತುಕ್ಕು ಹಿಡಿದು ಹಾಳೋಗುತ್ತೋ ಅನ್ನೋ ಭಯದಲ್ಲಿ ಕುಯ್ಕೊಂಡು ರಕ್ತ ಹರಿಬಿಡಬೇಡಿ, ಸುಮ್ಮನೆ ವೇಷ್ಟ್.ಅದರ ಬದಲು ನಾಡಿದ್ದು ಇಲ್ಲೆ ಊರ ಬಯಲಲ್ಲಿ ದೊಡ್ಡಾಸ್ಪತ್ರೆಯವರು ಬಂದು ರಕ್ತದಾನ ಶಿಬಿರ ಮಾಡ್ತಾವ್ರೆ, ನಿಮ್ಮಲ್ಲಿ ಮಡುಗಟ್ಟಿ ಹಳೆಯದಾದ ರಕ್ತ ಇನ್ಯಾವುದೋ ಜೀವಕ್ಕೆ ಹೊಸಾದಾಗಿ ಸೇರಲಿ, ಬನ್ನಿ ರಕ್ತ ಕೊಡಿ, ನಿಮ್ಮ ಯಂತ್ರಾಗಾರಕ್ಕೆ ಕೆಲಸ ಕೊಡಿ. 

ರಕ್ತದಾನ ಶಿಬಿರಕ್ಕೆ ಹಿಂಗೊಂದು ಜಾಹಿರಾತು ಕೊಟ್ಟರೆ ಹೇಗಿರುತ್ತೆ? ಇಲ್ಲಿ ಎಲ್ಲೆಲ್ಲೂ ಮೂಲ ಕ್ರಿಯೆಗೆ ಅಭಾಸವಾಗಿಲ್ಲ ವ್ಯಂಗ್ಯವೂ ಬೆರೆತಿಲ್ಲ, ನಿಮ್ಮ ಕಳಕಳಿ ಸುಲಭವಾಗಿ ಜನದ ಮನ ಮುಟ್ಟುತ್ತದೆ ಅಂತಾದರೆ ಈ ಸಾಲುಗಳಿಲ್ಲುರುವ ಹಾಸ್ಯಪ್ರಜ್ಞೆಯೆ ಕಾರಣ.ಸುಮ್ಮನೆ ಒಂದು ಸ್ಯಾಂಪಲ್ ತೋರಗೊಡವಿದೆನಷ್ಟೆ.ಹಾಸ್ಯ ಪ್ರಜ್ಞೆಯೊಂದಿಗೆ ಇನ್ನಷ್ಟು ಅದ್ಬುತವಾಗಿ ಬಹಳಷ್ಟು ಸಂದರ್ಭಗಳಲ್ಲಿ ನಮ್ಮ ಕಳಕಳಿಗಳನ್ನು ತೋರಗೊಡಬಹುದಾದ ಸಾದ್ಯತೆಗಳಿವೆ.ಒತ್ತಡದ ಜೀವನದಲ್ಲಿ ಒಂದಷ್ಟು ರಿಲೀಫ್ ಗಳನ್ನು ಕಂಡುಕೊಳ್ಳಬಹುದು.ಸಾಂಧರ್ಬಿಕವಾಗಿ ಯಾರಿಗೂ ನೋವಾಗದಂತೆ ಹಾಸ್ಯಪ್ರಜ್ಞೆಯನ್ನು ಮೆರೆಯುತ್ತಿರೋಣ. ಇದರಲ್ಲಿ ಕಳಕೋಳ್ಳುವಂತದ್ದು ಎಳ್ಳಷ್ಟು ಇಲ್ಲವೆಂದಾದ ಮೇಲೆ ಪ್ರಯತ್ನ ಪಡಬಾರದೇಕೆ?

ನಾವು ನಗೋದು ಸತ್ಯ ಅಂತಾದಮೇಲೆ ನಮ್ಮಲ್ಲಿ ಹಾಸ್ಯಪ್ರಜ್ಞೆ ಇರೋದು ಸತ್ಯ.ಅದಾಕೋ ಏನೋ ಬಾಲ್ಯ ಕಳೆದಂತೆ ವಯಸ್ಸು ಅರೋಹಣವಾದಂತೆ ಈ ಪ್ರಜ್ಞೆ ನಮ್ಮೊಳಗೆ ಮುಸುಕಾಗುತ್ತಾ ಸಾಗುತ್ತೆ.ದಿನ ಕಳೆದಂತೆ ಚಿಂತೆಯ ಗೂಡು ಆ ಜಾಗವ ಆಕ್ರಮಿಸಿಕೊಳ್ಳುತ್ತೆ, ಆವೆ ಹೆಮ್ಮರವಾಗಿ ಖಿನ್ನತೆಗೆ ದಾರಿ ಮಾಡುತ್ತೆ. ಮನುಷ್ಯ ತೋರಿಕೆಗಲ್ಲದೆ ಮನತುಂಬಾ ನಗುತ್ತಿರಬೇಕು, ಅದು ಆತನ ಜೀವಂತಿಕೆಯ ಸಂಕೇತ.ನಗುವಿನಿಂದಾಗಿ ಅದೆಷ್ಟೋ ಕಷ್ಟಗಳೂ ಗೌಣವಾಗಿ ಕಾಣುತ್ತೆ ಅದೇ ಭಾರವಾಗಿ ಕಾಣಿಸುವ ಬದಲಾಗಿ ಅದನ್ನು ಪರಿಹರಿಸಿವಲ್ಲಿ ಮಹತ್ತರ ಕೊಡುಗೆಯನ್ನು ನೀಡುತ್ತೆ. ನಗುವು ನಮ್ಮೆಲ್ಲರೊಂದಿಗೆ ಸದಾ ಇದ್ದು ದುಗುಡವೆಲ್ಲವ ದೂರವಾಗಿಸುವದಕ್ಕೆ ನಮ್ಮೊಳಗಿರುವ ಹಾಸ್ಯಪ್ರಜ್ಞೆ ಅನುಕ್ಷಣ ಜಾಗೃತವಾಗಿರಲಿ ಅನ್ನೋದು ನನ್ನ ಆಶಯ.ನೀವೇನಂತಿರೋ?

No comments:

Post a Comment