Saturday, February 25, 2012

ನಾರಿಯೊಬ್ಬಳ ನೋಟ………!!!!


ಮೌನಗೌರಿ ,ಕತ್ತು ಬಗ್ಗಿಸಿ ನಡೆವ ನಾರಿ
ತನ್ನ ಕಲಿಕೆಗಾಗಿ ಬಸ್ಸ ಹಿಡಿವ ಮಿತ ಸಂಚಾರಿ
ತನ್ನ ಎಂದಿನಂತೆ ಹಿಂಬಾಲಿಸುವ ಜೋಡಿ ಕಣ್ಣ ನೋಟ
ಅದರ ಪರಿವೆ ಇಲ್ಲದೆ ಆ ನೋಟದೊಳಗೆ ಹಾಯಿಸದೆ ಕಣ್ಣೋಟ
ಸಾಗುತಿತ್ತು ಈಕೆಯ ಪಯಣ ಒಲವ ಗೆಳೆತಿಯರೊಂದಿಗೆ

ಕಣ್ಣ ನೋಟ ನಾರಿಯ ಅರಿಯುತಿತ್ತು ದೂರದಿಂದಲೆ
ಹೃದಯದಿ ಪ್ರೇಮವು ಕುಡಿಯೊಡದಿತ್ತು ಅದಾಗಲೆ
ಪ್ರೇಮದ ನೀವೇದನೆಗೆ ಬಯಸುತಿದ್ದ ಆ ನೋಟ
ಕುಟುಂಬ ಸದಸ್ಯರ ಪರಿಚಯಿಸಿ ಕೊಂಡು
ತನ್ಮೂಲಕ ಹಂಬಲಿಸಿತು ನಾರಿಯ ಒಡನಾಟ.

ಅದೊಂದು ವರುಷದ ಮೊದಲನೆ ದಿನ
ನೋಟವು ಅರುಹಿತು ನಾರಿಗೆ ತನ್ನೊಲವ ಆ ದಿನ
ಇದ ಬಯಸದ ನಾರಿ ಮನದಲ್ಲೆ ಕಂಪಿಸಿದಳೂ
ಈ ಭಾಗ್ಯವ ನನದಾಗಿಸಿಕೊಳ್ಳಲಾಗುತ್ತಿಲ್ಲವೆಂದೂ ಅತ್ತಳೂ!!!
ತಾಯಿಯ ಕಳಕೊಂಡ ಒಂಟಿತನ,
ಮಲತಾಯಿಯೆಂಬ ಭೂತ ಹೊರೆಸಿದ್ದ ಹಗೆತನ
ಓದೊಂದೆ ಉತ್ತರವಾಗಿ ಜೀವನಕ್ಕೆ ಕಂಡು
ನಾರಿ ನಿರಾಕರಿಸಿದ್ದಳೂ ನಯವಾಗಿ ತನ್ನ ಮನದ ನೋವ ತಾನುಂಡು

ನಾರಿಯು ಕಲಿಕೆಯ ಅಂಚು ತಲುಪಿದಳು
ಕೆಲಸಕ್ಕಾಗಿ ಯಾರ ಆಸರೆಯ ಬಯಸದೆ ಅಲೆದಾಡಿದಳು
ಅದು ಮರೀಚಿಕೆ ಅನ್ನೋದಿವಸದಲ್ಲಿ ………………!!!
ಆ ನೋಟ ಮತ್ತೆ ದುತ್ತೆಂದು ನಾರಿಯೆದುರು ನಿಂತಿತ್ತು.
ನಾರಿಯ ನಿಲುವನ್ನು ನೋಟ ಅರಿತಿತ್ತು
ಮನೆಯ ಗೋಡೆಯ ಮೇಲೆ ನೇತು ಹಾಕಿದ ಪಟದ ಮೇಲೆ
ಬರೆದಿತ್ತು ನಾ ಆಸರೆಯಾಗಬಲ್ಲೆ ನಿನ್ನ ಸ್ವಾವಲಂಭಿತನಕ್ಕೆ
ದುಗುಡವ ಗೀಚು ಬಾ ನನ್ನ ಮನದ ಪುಟದ ಮೇಲೆ…….!!

ಇಷ್ಟು ವರುಷವ ನನಗಾಗಿ ಕಳೆದ ನೋಟಕ್ಕೆ ಮನಸೋತು
ನೋಟವು ತನಗಾಸೆರೆಗೆ ನಿಂತು ಕೊಡಿಸಿದ ಕೆಲಸವ ಬರಸೆಳೆದು
ತನ್ನ ಸ್ವಾವಲಂಭಿತನಕ್ಕೆ ಇಂಬುಕೊಟ್ಟ ಆ ಮನಕ್ಕೆ ಕೈ ಮುಗಿದು
ತನ್ನ ಸ್ವಾತಂತ್ರ್ಯವ ಮರಳಿ ಪಡೆದುದಕ್ಕೆ ಮುದಗೊಂಡು ನೆಗೆದು
ಕಣ್ಣಾಲಿಗೆಯಲ್ಲಿ ಒಸರುತಿದ್ದ ಹನಿಯಂಚ ಸವರಿ
ಮನದ ಆದೇಶದಂತೆ ಹಿತದೊಂದಿಗೆ ಬಾಳುವದೇ ಸರಿ
ಗಟ್ಟಿ ನಿರ್ಧಾರದೊಂದಿಗೆ ನೋಟದೊಂದಿಗೆ ತನ್ನ ಕಣ್ಣೋಟ ಹರಿಬಿಟ್ಟಿದ್ದಳು ನಾರಿ
ನಿರ್ಧಾರ ಟಿಸಿಲೊಡೆದು ಸತಿ- ಪತಿಯೆಂಬ ಸಂಭಂದದೊಂದಿಗೆ ಆರಂಭ ಪಡೆದಿತ್ತು
ನಗುವೊಂದಿಗೆ ನಾರಿಯ ಜೀವನದ ಮಗದೊಂದು ದಾರಿಯು ಮಜಲೊಡೆದಿತ್ತು...


No comments:

Post a Comment