Tuesday, February 14, 2012

ನೆನಪ ಪುಸ್ತಕ.



ಆ ದಿನಗಳು ಖುಷಿಯಾಗಿತ್ತಲ್ಲವೆ.ಮರೆಯಾಗದ ಮಧುರ ನೆನಪು ಹಂಗೆ ಹಿಡಿಗಟ್ಟಿ ಹೃದಯ ಮೂಲೆಯಲ್ಲಿ ಕಟ್ಟಿ ಇಟ್ಟಿರುವೆ,ಪ್ರೇಮಿಗಳ ದಿನ ಬಂದಾಗ ಬಿಚ್ಚಿ ಹರವಿ ಅದನ್ನೊಮ್ಮೆ ಅವಲೋಕಿಸಿ ಮರಳಿ ಧೂಳ ಕೆಡವಿ ಹೃದಯ ಗೂಡ ಸೇರಿಸುವೆ ,ಭಾವನೆ ಹಾಗೂ ಅದರಲ್ಲಿನ ನವಿರು ನೆನಪು ಸಾಯಬಾರದೆಂದು.

ದಿನದಿಂದ ದಿನಕ್ಕೆ ಪ್ರಬುದ್ದನಾಗುತ್ತಿರುವೆನೆ ಆ ನೆನಪುಗಳ ಅವಲೋಕಿಸಿ? ಹೌದು ಎನ್ನುವದೆ ಸೂಕ್ತ,ಕಾಲ ಬುಡದ ಭದ್ರತೆಯ ಅರಿವಿಲ್ಲದ ದಿನ ಜೀವನ ಸುಭದ್ರತೆಯ ಯೋಚನೆಯೆ ಶುರುವಾಗದ ದಿನಗಳಲ್ಲಿ ಪ್ರೀತಿ ಒಡಮೂಡಿತ್ತು ನಮ್ಮೊಳಗೆ.ಅದೊಂದು ದಿನ ವಿದಿತದಂತೆ ಪ್ರೀತಿ ತೊರೆದು ಆಗಿತ್ತು ಹಾಗಿದ್ದರೆ ಪ್ರೀತಿ ಪ್ರೀತಿ ಯಾಗಿರಲಿಲ್ಲವೆ?ಉತ್ತರ ಸಿಗದ ಪ್ರಶ್ನೆ ಕಾಡುತ್ತಿರುತ್ತದೆ,ಪ್ರೀತಿಗಿಂತ ಆಕರ್ಷಣೆ ಹೆಚ್ಚಿತ್ತು ಅನ್ನೋದನ್ನ ಒಪ್ಪಿಕೊಳ್ಳೋದು ಕಷ್ಟವಾಗಿದೆ ಮನಕ್ಕೆ. 

ನೀಲ ಮೇಘ ಗಾಳಿ ಬೀಸಿ ದೂರಾದ ಹಾಗೆ,ಚಂದ್ರ ತಾರೆ ತಂಪು ಕಾಂತಿ ಚೆಲ್ಲಾಡೊ ಹಾಗೆ ನೀ ದೂರಾದರು ಆ ನೆನಪುಗಳು ಬೆಳದಿಂಗಳಂತೆ ನನ್ನ ಬಾಳನ್ನ ಹಸನುಗೊಳಿಸುತ್ತ ಬೆಳಕು ತೋರುತ್ತಾ ಬಂದಿದೆ.ತಾಯಿ ತಂದೆ ತಮ್ಮ ತಂಗಿಯ ಪ್ರೀತಿ ಮಮತೆಯನ್ನು ಕಂಡ ನಂಗೆ ಪ್ರೀತಿಯ ಹೊಸ ಆಯಾಮ ತಂದು ತೋರಿದೋಳು ನೀನು. ನಿಂಗೊಂದು ವಿಷಯ ಗೊತ್ತಾ ನೀ ದೂರಾದ ನೋವನ್ನು ಬಹಳ ಬೇಗನೆ ಮರೆತೆ, ನಾ ಮಾಡಿದ್ದಿಷ್ಟೆ ಪ್ರೀತಿಯ ಹೊಸ ಸೆಲೆಯ ದಾರಿಯ ತೋರಿಸಿದ ನಿನ್ನ ದಾರಿಯಲ್ಲೆ ನಡೆದು ಮತ್ತಷ್ಟು ದಾರಿಯನ್ನು ಹುಡುಕಿದೆ, ಮನುಷ್ಯ ಮನುಷ್ಯರನ್ನ ಪ್ರೀತಿಸುವದ ಕಲಿತೆ, ಪ್ರಕೃತಿಯ ಪ್ರೀತಿಸೋದ ಕಲಿತೆ,ಪ್ರಾಣಿ ಪಕ್ಷಿಗಳ ಪ್ರೀತಿಸೋದ ಕಲಿತೆ, ಇವುಗಳೋಡ ಲೀನವಾಗಿ ಅವುಗಳೋಡನೆ ಮಾತಾಡೋದ ಕಲಿತೆ.... ಹೀಗೆ ಇನ್ನು ಏನೇನೋ. ಒಂದಂತು ಸತ್ಯ ನಮ್ಮ ಪ್ರೀತಿಯ ದಿನಗಳಿಂದ ಈಗ ನಾ ಕಂಡುಕೊಂಡಿರುವ ನನ್ನದಾಗಿಸಿರುವ ಪ್ರೀತಿ ಮಾಜಾವೆ ಚೆನ್ನಾಗಿದೆ. ಆದರೂ ನಿನ್ನೋಡ ಪ್ರೀತಿಯ ಮರೆಯಲಾರೆ ಕಾರಣ ಅದು ನನ್ನ ಅರಿವು ಮತ್ತೆ ಮತ್ತೆ ನನ್ನ ತಿದ್ದಿ ತೀಡಿ ನಡೆಸಬಹುದಾದ ನೆನಪ ಪುಸ್ತಕ.

ಇಂದು ಪ್ರೇಮಿಗಳ ದಿನ, ನನಗೂ ಸಂತಸದ ದಿನಾನೆ!!! ಆಶ್ಚರ್ಯವಾಯಿತಾ!! ಇಲ್ಲಾ ನಿನ್ನಂತೆ ಪ್ರೀತಿಸಲು ಇನ್ನೂ ಯಾರು ನನ್ನ ಬಾಳ ಪ್ರವೇಶಿಸಿಲ್ಲ, ನಾವಂದು ಈ ದಿನದಂದೆ ಸುತ್ತಾಡಿರೋ ಜಾಗಕ್ಕೆ ಪ್ರತಿ ವರುಷದಂತೆ ಮತ್ತೆ ಹೋಗುವೆ. ಗೊತ್ತಿದೆಯಲ್ಲಾ ಆ ಮರ ಕೆಳಗಿರೋ ಕಲ್ಲು ಬೆಂಚು, ಪಕ್ಕದಲ್ಲಿರೋ ಕೆರೆ, ಅದರಲ್ಲಿನ ಬಾತು ಕೋಳಿ,ಬೀಸೋ ಗಾಳಿ, ಚಿಲಿಪಿಲಿ ಹಕ್ಕಿ-ಪಕ್ಕಿ ಅದೆಲ್ಲ ಈಗಲೂ ಇದೆ, ನೀನಿಲ್ಲ ಅನ್ನೋದನ್ನ ಬಿಟ್ಟರೆ ಪ್ರೀತಿಸುವದಕ್ಕೆ ಅಷ್ಟು ಸಾಕು, ವ್ಯತ್ಯಾಸವೆಂದರೆ ನಾವು ಕೂರುತ್ತಿದ್ದ ಕಲ್ಲು ಬೆಂಚು ಹಾಗೂ ಆ ಪರಿಸರ ಇತರ ಜೋಡಿಗಳ ಪಾಲಾಗಿದೆ,ಆ ಪ್ರೇಮಿಗಳ ನೋಡಿ ಪ್ರೀತಿಯನ್ನ ಪ್ರೀತಿಸುತ್ತೇನೆ, ಮನದಾಳದಲ್ಲಿ ಹರಸುತ್ತಿರುತ್ತೇನೆ ನಿಮ್ಮ ಪ್ರೀತಿ ಹಸಿರಾಗಲೆಂದು....!!!ಪ್ರೀತಿ ಪ್ರೀತಿಯಾಗಿರಲಿ ಹುಚ್ಚುತನ ಪ್ರೀತಿಯ ಹೊರತಾಗದೆ ಇರಲಿ,ಬದುಕ ದಾರಿಯ ಕಂಡು ಪ್ರೀತಿ ಮೊಳಕೆ ಒಡೆದಿರಲೆಂದು. ಹಾಂ ನನಗೆ ನಿನ್ನದೇ ಪ್ರೀತಿ ಇವತ್ತು ಸಿಕ್ಕಿದ್ದರೆ ನಿನ್ನ ನೆನಪು ನನ್ನ ಮನದ ಪುಸ್ತಕ ಸೇರದೆ ಒಡಲು ಸೇರುತಿತ್ತು., ಇರಲಿ ಈಗ ನನ್ನಲ್ಲಿ ನಾನೇ...ಸಾಕಿದಾ ಗಿಣಿ ಹಾಡಿಗೆ ನೋ ಛಾನ್ಸ್. ಇದ್ದಷ್ಟು ದಿನ ಯಾರ ಅನುಕಂಪಕ್ಕೂ ಕಾಯದೆ ಕಳೆದು ಹೋದ ಪ್ರೀತಿಯನ್ನು ಮತ್ತೊಂದರಲ್ಲಿ ದಕ್ಕಿಸಿಕೊಳ್ಳುವುದು. ವಾಸ್ತವಕ್ಕೆ ಮುಖಾಮುಖಿಯಾಗುವುದು ಎಂಭ ಪಾಠ ನಿನ್ನ ನವಿರು ನೆನಪ ಪುಸ್ತಕ ಕಲಿಸಿ ಕೊಟ್ಟಿದೆ. ಆ ನೆನಪುಗಳು ಇರುವಷ್ಟು ದಿನ ನಾ ಸುಖಿ.ಆ ದಿನಗಳು ಖುಷಿಯಾಗಿತ್ತು ಈ ದಿನಗಳು ಖುಷಿಯಾಗಿವೆ, ಆಯಾಮಗಳು ಬೇರೆ ಬೇರೆಯಷ್ಟೆ. ಸರಿ ಹಾಗಾದರೆ ಮತ್ತೆ ಸಿಗೋಣ ಮತ್ತೋಮ್ಮೆ ಮನದ ನೆನಪ ಪುಸ್ತಕವ ಹರವಿ ಕೂತಾಗ..........!!!!!

ಸಾರಿ ಮುಖ್ಯವಾದುದನ್ನೆ ಮರೆತೆ, ನಾ ಪ್ರೀತಿಸೋ ಪ್ರೇಮಿಗಳೆ ನಿಮಗೆಲ್ಲರೀಗೂ ಹ್ಯಾಪಿ ವ್ಯಾಲೆಂನ್ಟೈಸ್ ಡೇ :):)

2 comments:

  1. Divya shree3:27 PM GMT+5:30

    chennagide.. yarappa aa hudugi ;)

    ReplyDelete
  2. ಕಲ್ಪನೆ ನನ್ನದು ಪ್ರೀತಿಯಲ್ಲಿ ಸೋತವರು ಕೊರಗದಿರಲೆಂದು :)

    ReplyDelete