Tuesday, February 7, 2012

ಒಂದು ಮಿದುಳಿನ ಸಾವು...

ದೂರ ದೂರ ಇನ್ನೂ ದೂರ, ಇಷ್ಟಲ್ಲ ಅಷ್ಟಲ್ಲ ಇಂಚಲ್ಲ ಅಡಿಯಲ್ಲ
ದೂರದಾಚೆಗಿನ ದೂರದಲ್ಲಿ ಅಗೋ ಆ ಮಿದುಳು ನೆಲಕ್ಕೊರಗಿದೆ..

ಬಿದ್ದ ನೆಲದ ಪಾರ್ಶ್ವಗಳು ತೇವಗೊಂಡು ಹಸಿರಲ್ಲದ ಹಸಿರಿಗೆ ಗೊಬ್ಬರವಾಗುತ್ತ
ನರನರವೂ ಛಟಛಟನೆ ಛಿದ್ರಗೊಳ್ಳುವಾಗ
ಪಕ್ಕದಲ್ಲಿನ ಕಳ್ಳಿಹೂವು ಇಷ್ಟಿಷ್ಟೇ ಬೆತ್ತಲಾಗುತ್ತಿದೆ..

ಪಿತಗುಡುವ ಮಿದುಳನರಗಳ ಸಂತೆಯೊಳಗೆ ಎಷ್ಟೊಂದು ಪದಗಳು
ಸಂಜೆ ದೂಕಾನಿನ ಶೈಲಿಯಲ್ಲಿ ಸಿಕ್ಕಸಿಕ್ಕರೇಟಿಗೆ ಮಾರಲ್ಪಡುತ್ತಿವೆ

ಅಲ್ಲಿ ಲೈಟುಕಂಬದ ಮೇಲೆ ಕೊಕ್ಕು ಮಸೆಯುತ್ತ ಕುಳಿತ ಖಾಕಿ ಬಣ್ಣದ ಹದ್ದಿಗೆ ಮೈ ತುಂಬ ರಕುತ,
ಬಿಚ್ಚಲೇ ಆಗಸಷ್ಟು ನೆಂದ ರೆಕ್ಕೆಗಳು.. ಬೀಸುತ್ತಿದೆ ಮಿದುಳ ವಾಸನೆ ಹದ್ದಿನೆಡೆಗೆ

ಮಿದುಳು ಒರಗಿದ ಜಾಗದಲ್ಲಿ ಮಂಡರಗಪ್ಪೆಗಳ ಮಂತ್ರಘೋಷ,
ಕಪ್ಪುಚೇಳುಗಳಿಗೂ ಸುದ್ದಿ ಮುಟ್ಟಿ ಕೊಂಡಿ ಕೊಂಬುಗಳ ಝಳಪಿಸುತ್ತ
ಕೇರೆಹಾವುಗಳೊಟ್ಟಿಗೆ ಇಳಿದಿದೆ ಖೂಳರ ದಿಬ್ಬಣ

ನೋಡಲು ಕಣ್ಣಿಲ್ಲ, ಮಾತಾಡೆ ಬಾಯಿಲ್ಲ ಬಿದ್ದಲ್ಲೇ ಬಿದ್ದಿದೆ ಮಿದುಳಿನ ಕಳೇಬರವು
ಉಸಿರಾಡೆ ಮೂಗಿಲ್ಲ,, ಒಂದೇ ಸಮಾಧಾನ ಜೀವಕ್ಕೆ ಲುಕ್ಸಾನಿಲ್ಲ..

ಗೊರಸುಗಳು, ಬೂಟುಗಳು, ಟೊಪ್ಪಿಗಳು, ಹಾಳೆಗಳು, ಪೆನ್ನುಗಳು
ಕರ್ರನೆಯ ನಿಲುವಂಗಿಗಳಿಗೆ ತಲುಪಿದೆ ಕೊಡಲಿಯೊಂದು ರವಾನಿಸಿದ ತಂತಿ
ಸರಭರನೆ ಸಿದ್ದಗೊಳ್ಳುತ್ತಿದೆ ಶವಪರೀಕ್ಷಕರ ಪಡೆ

ಅಷ್ಟರಲ್ಲಿ ಮಿದುಳಿನ ನರವೊಂದು ಹೊರನೆಗೆದು ನಾಲಿಗೆ ಸವರಿಕೊಳ್ಳುತ್ತಿದೆ,
ಹಳದಿಎಲೆಗಳನ್ನು ಬಾಚಿಬಾಚಿ ತಿನ್ನುವ ಸಫಲ ಪ್ರಯತ್ನ

ಧೂಳಿನ ತಂಡಗಳು ಮಾತಾಡಿಕೊಂಡು ಕವುಚಿಬಿದ್ದ ತೇವಕ್ಕೆ ಅಡರಿಕೊಂಡು
ಇಷ್ಟಿಷ್ಟೇ ಒಣಗುತ್ತ, ಏನೇನೋ ಗುನುಗುತ್ತ
ಆವರಿಸುತ್ತಾವರಿತ್ತಾವರಿಸುತ್ತಿರಲು..

ಮಿಸುಕಾಡದೆ ಬಿದ್ದಿದ್ದ ಮಿದುಳಬಳ್ಳಿಗೊಂಡು ದೊಡ್ಡ ಸೈಜಿನ ಬಯಕೆ..
ಬಂದಾರೂ ಬಂದಾರೂ ಬದುಕಿದ್ದಾರಿನ್ನೂ ಕೈ ಕಾಲು ಎದೆ ಭುಜಗಳು
ಬಂದಾರೂ.. ಬಂದಾರೂ..

ಗೊರಸು, ಬೂಟು, ಟೊಪ್ಪಿ, ಹಾಳೆಗಳು ಬಿರಬಿರನೆ ಬಂದವು..
ಒಂದೊಂದು ಕೈಯಲ್ಲಿ ಎರಡೆರಡು ತಟ್ಟೆ.. ಜೇಬುಗಳು ತುಳುಕುತ್ತಿವೆ ಚಮಚೆಗಳ ಜಾತ್ರೆ,
ಗಹಗಹಿಸುತ್ತ ಬಂದವು ಕೊಡಲಿಯೊಟ್ಟಿಗೆ ನಾಲಿಗೆಯ ತೇವದ ಜೊತೆಜೊತೆಗೇ..

ಇದಾವುದೂ ಅರಿಯದ ಪೆದ್ದು ಮಿದುಳು ಕಾಯುತ್ತಿತ್ತು.. ಬಂದಾರು ಬಂದಾರು..
ಅವಯವಗಳ ಒಡೆಯರು ಬಂದಾರು ಬಂದಾರು.. ತನ್ನೆಲ್ಲ ತಾಕತ್ತನ್ನು
ಕಾಯುವತ್ತಲೇ ಚೆಲ್ಲಿ ಕಾಯುತ್ತ ಕಾಯುತ್ತ ಕಾಯುತ್ತಲೇ ಇತ್ತು,

ಇತ್ತಲಾಗಿ ತಟ್ಟೆಗಳ ಮೆರವಣಿಗೆಯೊಟ್ಟಿಗೆ ಬಂದಿಳಿದ ತಂಡದ ಮುಂದೆ..
ಕೈ, ಕಾಲು, ಭುಜ ಬೆನ್ನುಗಳು ಭೋಪರಾಕು ಕೂಗುತ್ತಿವೆ..
ತಟ್ಟೆಗಳಿಗೆ ಜಯವಾಗಲಿ, ಚಮಚೆಗಳಿಗೆ ಜಯವಾಗಲಿ.. ತಳದಲ್ಲಿ ಅಂಟಿದ್ದು ನಮ್ಮದಾದರೂ ಆಗಲಿ,

ಇದೆಲ್ಲದರ ಮಧ್ಯೆ ಭೋಪರಾಕುಗಳು ಮಿದುಳಿಗೂ ತಾಗಿ, ಸಾವು ಇಂಚಿಂಚು ತಿನ್ನತೊಡಗಿ
ಕಡೆಗೇನೂ ಉಳಿಯಲಿಲ್ಲ.. ಆದರೆ ಅವಯವದ ಸಂದಿಯೊಳಗಿಂದ ಕಣ್ಣೊಂದು ಮಾತ್ರ ದೂರ ಸರಿದು
ಕೈ, ಕಾಲು, ಎದೆ, ಬೆನ್ನುಗಳನತ್ತ ಮಣ್ಣು ತೂರತೊಡಗಿತು.


-ದಯಾನಂದ್ ಟಿ ಕೆ

No comments:

Post a Comment