ಈ ದಿನ ಶಿವರಾತ್ರಿ ಯಾಕೋ ಶಿವ ಶರಣರು ಅದರಲ್ಲೂ ಮುಖ್ಯವಾಗಿ ಬಸವಣ್ಣ ನೆನಪಾಗ್ತಾ ಇದ್ದಾರೆ. ಜಡ್ಡುಗಟ್ಟಿ ಮೌಢ್ಯತೆಯತ್ತಾ ತಿರುಗುತಿದ್ದ ಸಮಾಜವನ್ನ ಧಿಕ್ಕರಿಸಿ ಸಕಲರಿಗು ದೇವನನ್ನು ತನ್ನಲ್ಲೇ ಕಾಣುವ ನೀತಿಯನ್ನು ತೋರಿಸಿಕೊಟ್ಟ ಸಂಕ್ರಮಣ ಕಾಲವಾಗಿ ಇತಿಹಾಸದಲ್ಲಿ ದಾಖಲಾದ ಹನ್ನೆರಡನೆ ಶತಮಾನದ ಧಾರ್ಮಿಕ, ಸಾಮಾಜಿಕ, ಸಾಹಿತ್ಯಿಕ ವಿಚಾರ ಕ್ರಾಂತಿ ನೆನಪಿಗೆ ಬರುತ್ತಿದೆ.ಒಬ್ಬ ಮೇಲ್ವರ್ಗದಲ್ಲಿ ಹುಟ್ಟಿದ ಬಸವಣ್ಣ ಅದೆಲ್ಲವನ್ನೂ ಧಿಕ್ಕರಿಸಿ ನೊಂದರವರ, ತುಳಿಯಲ್ಪಟ್ಟವರನ್ನ ಸಮಾಜದಲ್ಲಿ ಎದ್ದು ನಿಲ್ಲುವಂತೆ ಮಾಡುತ್ತಾರಲ್ಲ, ಮೇಲು ಕೀಳನ್ನು ತೊರೆದು ಎಲ್ಲರೂ ಶಿವಸ್ವರೂಪಿಗಳು ಅನ್ನೋ ವಿಚಾರ ತುಂಬುತ್ತಾರಲ್ಲ, ಸಾಮಾನ್ಯ ಮಾತ್ರರಿಂದ ಸಾಧ್ಯವಾಗದ ಪರಿವರ್ತನೆಯನ್ನು ಸಮಾಜಮುಖಿಯಾಗಿ, ಪ್ರಕೃತಿಮುಖಿಯಾಗಿ ತರುತ್ತಾರಲ್ಲಾ ಇದು ಬೆರಗು ಕಣ್ಣುಗಳಿಂದ ಅವರನ್ನು ಈಗಲೂ ನೋಡುವಂತೆ ಮಾಡುತ್ತದೆ.
ಹೌದು ಬಸವಣ್ಣರ ತತ್ವಗಳು ಪ್ರಕೃತಿಮುಖಿಯಾಗಿ ಇತ್ತು ಇದು ನನಗೆ ಬಸವಣ್ಣರ ಬಗ್ಗೆ ತಿಳಿಯಲು ಪ್ರೇರೇಪಿಸಿದ ಬಹು ಮುಖ್ಯ ವಿಚಾರ.‘ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ’ಅಂತ ಬಸವಣ್ಣ ಹೇಳ್ತಾರೆ, ನೆಲವನ್ನು ನೆಲವಾಗಿ ನೋಡು ಅದರ ಬದಲು ದೇವರಾಗಿ ನೋಡಿದರೆ ಭಾವನಾತ್ಮಕವಾಗುತ್ತೇವೆ ಹೊರತಾಗಿ ಬದುಕಿಗೆ ಉತ್ತರವಾಗಲಾರದು,ಜಲವನ್ನು ಜಲವಾಗಿ ನೋಡಿದಾಗ ಅದರಲ್ಲಿ ಮಿಂದೆದ್ದರೆ ಪಾಪ ಕಳೆದು ಹೋಗುವದೆಂಬ ಭ್ರಾಂತಿ ಹುಟ್ಟಿ ಜಲ ಕಲುಷಿತ ಗೋಳ್ಳೋದನ್ನ ಬಸವಣ್ಣ ಸ್ಪಷ್ಟವಾಗಿ ತಿರಸ್ಕರಿಸಿದ್ದ.ಜಲವು ದೇವತೆಯಾದಾಗ ಜನ ಅದರೋಳಗೆ ಮುಳುಗಿ ಉಪಯೋಗಕ್ಕೆ ಬರದಂತೆ ಮಾಡುತ್ತಾರೆಂಬ ಆತಂಕ ಬಸವಣ್ಣನಲ್ಲಿತ್ತು.ಅಗ್ನಿಯು ದೇವತೆ ಅಂತ ತಿಳಿದಂದಿನಿಂದ ಯಜ್ಞ ಯಾಗಾದಿಗಳು ಮೊದಲುಗೊಂಡವು. ಮೂಲ ಅಗ್ನಿ ನಿರಾಕಾರ ಅನ್ನೋ ತತ್ವದಲ್ಲಿ ಅಗ್ನಿ ಉಪಾಸನೆ ಮೊದಲ್ಗೊಂಡರೂ ಕೂಡ ಬರಬರುತ್ತಾ ದುಂಡಾವರ್ತಿತನ ಪಡೆದು ಅರಣ್ಯ ನಾಶಕ್ಕೆ ನಾಂದಿ ಹಾಡಿತು.ವರ್ಷಗಟ್ಟಲೆ ನಡೆಯುತಿದ್ದ ಯಜ್ಞ ಯಾಗಾದಿಗಳಿಗೆ ಅದೆಷ್ಟೋ ಪ್ರಾಣಿ ಜೀವಸಂಕುಲವು ನಾಶ ಗೊಂಡದ್ದನ್ನ ತಿಳಿದ ಬಸವಣ್ಣ ವೈಧಿಕವಾಗಿ ಅಗ್ನಿ ಎಂದು ಕರೆಸಿಕೊಳ್ಳುತಿದ್ದ ಪದಕ್ಕೆ ಕಿಚ್ಚು ಎಂದು ಕರೆದರು, ಅದು ಹೀಗೆ.....
ಕಿಚ್ಚು ದೈವವೆಂದು ಹವಿಯನಿಕ್ಕುವ ಹಾರುವರ ಮನೆಯಲು
ಕಿಚ್ಚೆದ್ದು ಸುಡುವಾಗ
ಬಚ್ಚಲ ನೀರು, ಬೀದಿಯ ಧೂಳ ಹೊಯ್ದು
ಬೊಬ್ಬಿಟ್ಟೆಲ್ಲರ ಕರೆವರಯ್ಯಾ
ಕೂಡಲಸಂಗಮದೇವಾ
ಮನುಷ್ಯನ ಮನ ಮತ್ತು ದೇಹವನ್ನು ಶುಚಿಯಾಗಿ ಇಟ್ಟುಕೋ ಅನ್ನೋ ದೃಷ್ಟಿಕೋನದಲ್ಲಿ "ದೇಹವೆ ದೇಗುಲ ಶಿರವೆ ಹೊನ್ನ ಕಳಸ" ಅನ್ನೋದಲ್ಲದೆ ಆ ವಿಚಾರ ಸದಾ ಮನದಲ್ಲಿರುವಂತೆ ನೋಡಿಕೊಳ್ಳುವದಕ್ಕಾಗಿ ದೇವಾಲಯ ಗರ್ಭಗುಡಿಗೆ ಸೀಮಿತವಾಗಿದ್ದ ಲಿಂಗವನ್ನು ಪ್ರತಿ ಮನುಷ್ಯನಿಗೂ ನಿಲುಕಬೇಕೆಂಬ ಉದ್ದೇಶವ ಹೊಂದಿ ಕತ್ತಿಗೆ ಕಟ್ಟಿಕೊಳ್ಳುವ ಸಂಪ್ರದಾಯಕ್ಕೆ ನಾಂದಿ ಹಾಡಿದರು.ಯಾವ ವೈಧಿಕತೆಯು ಒಂದಷ್ಟು ವರ್ಗವನ್ನು ತುಳಿಸಲ್ಪಟ್ಟಿತ್ತೋ ಆ ವರ್ಗಕ್ಕೆ ಲಿಂಗಗಳನ್ನು ಕೊಟ್ಟು ಸ್ಥಾವರ ಸಂಸ್ಕೃತಿಯನ್ನು ಆ ಮೂಲಕ ಗುಡಿಗುಂಡಾರವನ್ನು ಸ್ಪಷ್ಟವಾಗಿ ನಿರಾಕರಿಸಿ ಸಮಾಜಮುಖಿಯಾಗಿ ನೊಂದವರನ್ನು ಮೇಲೆತ್ತುವ ಮಹತ್ತರ ಪಾತ್ರವನ್ನು ಕೈಗೊಂಡು ವೈಚಾರಿಕತೆಯನ್ನು ಸಮಾಜದಲ್ಲಿ ತುಂಬಿದ ಬಸವಣ್ಣ.ಬಡವರು ದೇವಾಲಯ ದೇವರ ಕಾರ್ಯದಲ್ಲೆ ತಮ್ಮ ಸಂಪಾದನೆಯನ್ನು ಹಾಳುಗೆಡವುತ್ತಾರೆ ಆ ಮೂಲಕ ಜೀವನವನ್ನು ಕಷ್ಟಕ್ಕೆ ದೂಕಿಕೊಳ್ಳುತ್ತಾರೆ ಎಂದರಿತ ಬಸವಣ್ಣ ದೇವರು ಏನನ್ನೂ ಬಯಸುವದಿಲ್ಲ "ಬರಿಯ ಪತ್ರೆಯ ತಂದು ಪೂಜಿಸು ಎನ್ನ ಕೂಡಲ ಸಂಗಮ ದೇವನ" ಎಂಬ ಕರೆಯ ನೀಡುತ್ತಾರೆ. ಇಂತಹ ಕಾರ್ಯಗಳಿಂದಲೆ ಬಸವಣ್ಣ ಇಂದಿಗೂ ಎಂದಿಗೂ ದಾರ್ಶನಿಕ.
ಬಸವಣ್ಣರ ಈ ತತ್ವಗಳನ್ನು ಅನುಸರಿಸುತ್ತಲೆ ಈ ವಿಚಾರಗಳ ಪ್ರಚುರಪಡಿಸಲು ಅನುಯಾಯಿಗಳು ಬಂದರು ಇವರೆ ಶಿವ ಶರಣರು, ಅವಾಗಾವಾಗ ಎಲ್ಲಾ ಸೇರಿ ಶಿವಾನುಭವ ಅನ್ನೋ ಗೋಷ್ಟಿಯನ್ನು ಮಾಡುತಿದ್ದರೂ ,ಪರಂಪರೆಯನ್ನು ಕುರಿತು, ಧರ್ಮವನ್ನು ಕುರಿತು, ದೇವರನ್ನು ಕುರಿತು, ತಮ್ಮ ಸುತ್ತಣ ಸಾಮಾಜಿಕ ಪರಿಸರವನ್ನು ಕುರಿತು, ಎಲ್ಲಕ್ಕೂ ಮಿಗಿಲಾಗಿ ತಮ್ಮನ್ನೇ ಕುರಿತು ವಸ್ತುನಿಷ್ಠವಾಗಿ ವಿಮರ್ಶೆ ನಿಷ್ಠುರವಾಗಿ ಮಾಡುತಿದ್ದರೂ, ಈ ಮೂಲಕ ವಿಮರ್ಶೆ ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ಆ ಮೂಲಕ ಸಮಾಜಮುಖಿಯಾಗಿ ಬೆಳೆಯಬೇಕಾದ ಶರಣ ಪರಂಪರೆ ಹಾದಿ ತಪ್ಪಬಾರದೆಂಬ ಮಹತ್ತರ ಕಾಳಾಜಿ ಹೊಂದಿದ್ದರು ಮತ್ತು ಆ ಮಾರ್ಗದಲ್ಲಿ ಸಫಲತೆಯನ್ನು ಪಡೆದರೂ, ಅದುಕ್ಕಾಗಿ ಇಂದಿಗೂ ಇದು ಉಳಕೊಂಡು ನಮಗೆ ಮಾರ್ಗದರ್ಶನವಾಗಿರೋದು.ಹಾಗಾದರೆ ಇಷ್ಟೆಲ್ಲಾ ವೈಚಾರಿಕತೆಯನ್ನು ತಂದಿತ್ತವರು ಪಂಡಿತರೋ ಖಂಡಿತಾ ಅಲ್ಲಾ ಇವರೆಲ್ಲಾ ಸಾಮಾನ್ಯರಲ್ಲಿ ಸಾಮಾನ್ಯರು ಗಂಡೆನ್ನದೆ ಹೆಣ್ಣೆನ್ನದೆ ಆ ಜಾತಿ ಈ ಜಾತಿಯೆನ್ನದೆ ಬಸವಣ್ಣನ ತತ್ವಗಳನ್ನು ನಾವೆಂತ ವೈಚಾರಿಕತೆಯನ್ನ ಹುಟ್ಟು ಹಾಕುತಿದ್ದೇವೆ ಅನ್ನೋದನ್ನೂ ಕೂಡ ಅರಿಯದೆ ವಚನ ಮೂಲಕ ಸಾಹಿತ್ಯಮೂಲಕ ಪ್ರಚುರಪಡಿಸಲು ನಿಂತವರು.ಹೀಗೆ ಬಸವಣ್ಣ ಹಾಗೂ ಶರಣರ ಬಗ್ಗೆ ಮುಗಿಯದಷ್ಟೂ ಬರೆಯಬಹುದಾದ ದಾರ್ಶನಿಕ ವಿಚಾರಗಳಿವೆ.
ಅಂದರೆ ಬಸವಣ್ಣನ ಕನಸುಗಳಲ್ಲಿ, ಆಚಾರದಲ್ಲಿ, ತತ್ವದಲ್ಲಿ ದೇವಾಲಯ(ಸ್ಥಾವರ)ಸ್ಪಷ್ಟ ನಿರಾಕರಣೆ ಇತ್ತು,ಜಾತೀಯತೆಗೆ ಆಸ್ಪದ ಇರಲಿಲ್ಲ ನೊಂದವರ ಮೇಲೆತ್ತುವದು ವ್ಯಕ್ತಿಗತವಾಗಿ ಪ್ರತಿಯೊಭ್ಬನೂ ಕೀಳರಿಮೆಯ ತೊಡೆದು ಸಮಾನರು ಎಂಭ ಸಮಾನತೆಯ ಭಾವನೆಯನ್ನ ತೋರಗೊಡುವದಾಗಿತ್ತು.ಇವೆಲ್ಲವನ್ನೂ ಸಾಧಿಸಲು ವಿಚಾರಗಳನ್ನು ಪ್ರಚುರಪಡಿಸಲು ವಚನಗಳು ಬಂದವು, ೧೫ ನೆ ಶತಮಾನದಲ್ಲಿ ಬಸವಣ್ಣನವರ ಹೆಸರಿನ ಮೇಲೆ ಮಠ ಮಾನ್ಯಗಳು ಹುಟ್ಟಿಕೊಂಡವು,ವಿರಕ್ತಿ ಮಠಗಳೆಂದು ಇವನ್ನು ಕರೆಯಲಾಯಿತು. ತದ ನಂತರ ಸಾಕಷ್ಟು ಮಠ ಮಾನ್ಯಗಳು ಹುಟ್ಟಿ ಸ್ಥಾವರಗಳಾಗಿ ಬೆಳೆದು ನಿಂತಿದೆ.ಬಸವ ಪೂರ್ವದ ಈ ಮಠ, ದೇವಾಲಯ ಸಂಸ್ಕತಿಯನ್ನ ಧಿಕ್ಕರಿಸಿ ಯಾವ ಮೂಲ ತಳಹದಿ ಮೇಲೆ ಶರಣ ಸಂಸ್ಕೃತಿ ಜನ್ಮ ತೆಳೆಯಿತು ಅದಕ್ಕೆ ಸಂಪೂರ್ಣ ಭಿನ್ನವಾಗಿ ಇವತ್ತು ಬಸವಣ್ಣರ ತತ್ವಗಳನ್ನೆ ಬಂಡವಾಳವಾಗಿಟ್ಟುಕೊಂಡು ಆ ಮೂಲಕ ಮಠ ಮಾನ್ಯ ಸ್ಥಾವರಗಳು ರೂಪುಗೊಂಡಿವೆ.ಬಸವಣ್ಣನವರು ಮೂಲತಃ ಜಂಗಮರು. ಜಂಗಮ ಪದದ ಅರ್ಥವೆ ಚಲನ ಶೀಲತೆ.ಅಂದರೆ ಯಾವುದೋ ಒಂದು ಸ್ಥಾವರಕ್ಕೆ ಕಟ್ಟು ಬಿದ್ದವರಲ್ಲಾ. ಬಸವಣ್ಣನವರೆ ಹೇಳಿದಂತೆ "ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!".ಮಠ ಮಾನ್ಯಗಳೂ ಮೂಲತಃ ಯಥಾಸ್ಥಿತಿ ಮತ್ತು ಸ್ವ ಅಭಿವೃದ್ದಿಯನ್ನು ಮಾತ್ರ ಗಮನಕೋಡುತ್ತವೆ, ಇದರಿಂದ ಯಾವ ಪರಿವರ್ಥನೆಯೂ ಅಗೋದನ್ನ ನಿರೀಕ್ಷಿಸುವದು ನಮ್ಮನ್ನು ನಾವೆ ಆತ್ಮವಂಚನೆಗೆ ದೂಕಿದಂತೆ. ಯಾವ ಜಾತಿಯತೆಯನ್ನು ತೊಡೆಯಲು ಬಸವಣ್ಣ ಶ್ರಮಿಸಿದ್ದರೋ ಅದೇ ತತ್ವವನ್ನು ಬಂಡವಾಳವನ್ನಾಗಿ ಮಾಡಿಕೊಂಡ ಮಂದಿ ಇವತ್ತು ಸ್ವಜಾತಿ ಪ್ರೇಮಿಗಳಾಗಿದ್ದಾರೆ.ಬಸವಣ್ಣ ತತ್ವಗಳನ್ನು ಪ್ರಚುರಪಡಿಸುತ್ತೇವೆ ನಮ್ಮದು ದೇವಾಲಯ ಅಲ್ಲ ಮಠ ನಾವು ಜಂಗಮರೆ ಈ ತೆರನಾದ ವಾದಗಳೂ ಕಂಡುಬರುತ್ತದೆ. ಆದರೆ ಈ ಕಾರ್ಯವನ್ನು ಮಾಡೋ ಮುಖ್ಯಸ್ಥ ಸ್ವಾಮಿಯೆಂಬ ಹಣೆಪಟ್ಟಿಯನ್ನ ಹಾಕಿಕೊಂಡಿರುತ್ತಾನೆ,ಸ್ವಾಮಿ ಪದದ ಅರ್ಥವೆ ಒಡೆಯ.ಬಸವ ತತ್ವಗಳ ಪರಿಪಾಲಿಸುವದೇ ಆಗಿದ್ದಲ್ಲಿ ಎಲ್ಲರೂ ಸಮಾನಾರು ಬರಿಯ ಮಾನವತೆಯತ್ತ ಅಷ್ಟೆ ಬೆಳಕು ಬೀರುವ ಬಸವಣ್ಣ ತತ್ವಕ್ಕೆ ಇದು ಸಂಪೂರ್ಣ ವಿರುದ್ದವಾದುದು.ಈ ಎಲ್ಲಾ ತರ್ಕಗಳಿಗೆ ಹೊರತಾಗಿ ಕೆಲವರೂ ಸಿಕ್ಕರೂ ಸಿಗಬಹುದು, ಆದರೆ ಇದು ಅಲ್ಲೊ ಇಲ್ಲೊ ಒಂದೊಂದು ಅಥವಾ ಇಲ್ಲಾ ಎಂಬುದಷ್ಟೆ ಉತ್ತರ.
ಬಸವಣ್ಣನವರ ಮೊದಲೆ ವೀರಶೈವ ಮತ ಇತ್ತು,ಶಿವ ಸಂಸ್ಕೃತಿಗೆ ವಾರಾಸುದಾರರೆಂದು ಹೇಳಿಕೊಳ್ಳುವವರ ಬಳಗ ಆಗಲೂ ಇತ್ತು. ಬಸವಣ್ಣ ಶಿವ ಸಂಸ್ಕೃತಿಯನ್ನ ಒಪ್ಪಿಕೊಂಡಿದ್ದವನಾಗಿದ್ದರೂ ಆ ಮೂಲಕ ನಡೆಯುತಿದ್ದ ವೈದಿಕತೆಗೆ ಸ್ಪಷ್ಟ ತಿರಸ್ಕಾರ ಅವರಲ್ಲಿತ್ತು.ಬಸವ ಪೂರ್ವ ಯುಗ ಹಾಗೂ ಬಸವ ಯುಗವನ್ನು ವೀಶ್ಲೇಷಿಸ ಹೊರಟರೆ ಅದು ಮತ್ತೋಂದು ಆಯಾಮವನ್ನು ತಂದುಕೊಡುತ್ತದೆ.ಸಂಕ್ಷಿಪ್ತವಾಗಿ ಹೇಳೋದಾದರೆ ಶಿವ ಹಾಗೂ ಲಿಂಗಕ್ಕಿರುವ ಸೂಕ್ಷ ಅಂತರವನ್ನು ಗೋಚರಿಸುತ್ತದೆ.ಲಿಂಗಧಾರಣೆ ಒಂದು ಸಾಮಾಜಿಕ ಚಳುವಳಿ ಆಗಿತ್ತು ಅನ್ನೋದನ್ನ ಗಮನಿಸದಿದ್ದರೆ ಈ ವಿಚಾರ ಕೂಡ ವೈಧಿಕತೆಯತ್ತಾ ವಾಲುತ್ತದೆ.ಪಂಚ ಪೀಠದ ಗುರುವರ್ಯಗಳೂ ಇವತ್ತೂ ಕೂಡ ಬಸವಣ್ಣರನ್ನ ಗುರುವಾಗಿ ಕಾಣುವದಿಲ್ಲ.ಬಸವಣ್ಣರನ್ನ ತಮ್ಮ ಶಿಷ್ಯರೆಂದೆ ವಾಸ್ತವಕ್ಕೆ ದೂರವಾದ ಮಾತನ್ನ ಆಡುತ್ತಾರೆ.ಅದೊಂದು ವೇಳೆ ನಿಜವೆ ಆಗಿದ್ದರೆ ಬಸವಣ್ಣ ಕಾಲಗಟ್ಟದಲ್ಲಿ ಪರ್ಯಾಯ ವೀರಶೈವ ಮತವನ್ನ ಹುಟ್ಟು ಹಾಕಿದರೂ ಅನ್ನುವದೇ ಸೂಕ್ತ. ಶಿವಸಂಸ್ಕೃತಿಯ ಕುರಿತಾಗಿ ಎಂ.ಜಿ.ನಾಗರಾಜ್ ಡಾ.ಜಚನಿ ಮುಂತಾದವರೂ ಬರೆದ ಪುಸ್ತಕಗಳಲ್ಲಿ ಹೆಚ್ಚಿನ ಮಾಹಿತಿಗಳೂ ಲಭ್ಯ. ಶಿವರಾತ್ರಿಯ ಈ ದಿನ ಬಸವಣ್ಣರ-ಶಿವ ಶರಣರ ಒಂದಿಷ್ಟು ವಿಚಾರಗಳು ತಿಳಿಯುತ್ತಾ ವೈಚಾರಿಕತೆಯತ್ತಾ ಒಲವು ತೋರುತ್ತಾ ಹಬ್ಬನಾ ಆಚರಿಸೋದು ಸೂಕ್ತವೆಂಬ ನಿಟ್ಟಿನಲ್ಲಿ ಈ ವಿಷಯಗಳನ್ನ ಪ್ರಸ್ತಾಪಿಸಿದೆ. ಎಂದೆಂದಿಗೂ ಎಲ್ಲಾ ಕಾಲಘಟ್ಟದಲ್ಲೂ ದಾರಿ ತೋರುವ ಮಾನವತೆಯನ್ನ ಎತ್ತಿ ತೋರಿಸುವ ಶರಣ ತತ್ವಗಳೂ ನಮಗೆ ಲಭಿಸಲಿ ಅನ್ನೋ ಆಶಯ ನನ್ನದು.
ಚಿತ್ರ ಕೃಪೆ:-karavenalnudi.blogspot.com
( ಕೆಲ ಮಾಹಿತಿ ಒದಗಿಸಿದ ಗುರುಸಮಾನ ದಿ ನೂ ಸ ಚಂ ಅವರಿಗೂ ವಂದನೆಗಳೂ)
ಶಿವಶರಣ ಪರಂಪರೆಯ ಸೂಕ್ಷ್ಮತೆಗಳನ್ನು ಚೊಕ್ಕದಾಗಿ ವಿವರಿಸಿ ಚಿಂತನೆಗೆ ಎಡೆಮಾಡಿಕೊಟ್ಟಿರುವಿರಿ. ಚರ್ಚೆಗಳಿಗೆ ಗ್ರಾಸವಾಗುವ ವಿಚಾರ ಯೋಗ್ಯ ಲೇಖನ. ಅನುಭವ ಮಂಟಪದ ಮೂಲಕ ಬಸವಣ್ಣನವರ ತತ್ವಗಳು ವಚನಗಳು ಪ್ರಚುರಕ್ಕೆ ಬಂದವು. ಆದರೆ ಜಾತಿ ಎಂಬುದಿರಬಾರದು ಎಲ್ಲರು ಶಿವನ ಆರಾಧಕರಾಗಿರೋಣ ಎಂದು ಶಿವ ಶರಣ ಪರಂಪರೆಗೆ ನಾಂದಿ ಹಾಡಿದ ಬಸವಣ್ಣನವರ ತತ್ವಗಳನ್ನು ಆಚರಿಸುವ ಗುಂಪು ಕ್ರಮೇಣ ಜಾತಿಯ ಹೆಸರಲ್ಲಿ ಗುರುತಿಸಿಕೊಂಡದ್ದು ವಿಪರ್ಯಾಸ. ೧೨ನೆ ಶತಮಾನದ ದಾರ್ಶನಿಕ ಬಸವಣ್ಣವರ ಬಗ್ಗೆ ಉಪಯುಕ್ತ ಲೇಖನ.
ReplyDeleteಧನ್ಯವಾದ ಸತ್ಯರವರೆ :)
ReplyDelete