Sunday, February 5, 2012

ಅವ್ವ.

ಭೂಮಿಗೂ ಮೋಡಕೂ ನಡುವೆ
ಹರಿದ ಸೆರಗನ್ನೇ ಇನ್ನೊಂದಷ್ಟು ತುಂಡರಿಸಿ
ಪರದೆ ಕಟ್ಟಿದ ಜೀವ ಇವಳು.

ನೇಗಿಲಿನ ನಾಲಿಗೆಗೆ ನೆಲ ಚೂರಾದ ಹೊತ್ತು
ಒಡಲ ಬೀಜಗಳನ್ನೇ ನೆಲದೊಳಗೆ ಅವಿತಿಡುತ್ತ
ಇನ್ನಾವಾಗಲೋ ಮೊಳೆಯುವ ಭತ್ತವನ್ನು ಧೇನಿಸಿದವಳು.

ಎಲೆಯಡಿಕೆಯ ಚೀಲದೊಳಗೆ ಬದುಕನ್ನೇ
ಮಡಚಿಟ್ಟ ಮಾಯದಂಥ ಜೀವದ
ಹೊಗೆಸೊಪ್ಪಿನ ಘಾಟೂ, ಊದುವ ಒಲೆಯ ಹೊಗೆಯೂ
ಏಕತ್ರಗೊಂಡ ಚಣದಲ್ಲೇ ಗಂಜಿ ಬೇಯಿಸುವ ಜೀವ.

ಮೇಲೆ ರವರವನೆ ಉರಿಯೋ ಚೆಂಡನ್ನೇ ರೆಪ್ಪೆಯೊಳಗೆ ಅವಿತಿಟ್ಟ
ಈ ಜೀವ.. ನನಗೆ ಕೊಟ್ಟಿದ್ದು ಹಿಡಿ ಉಸಿರಿನ ಸಾಲ,
ಯಾವತ್ತೂ ಕರೆ ತಾಗದ ಈ ಅಬೋಧ ಜೀವಕ್ಕೆ
ಬಣ್ಣಬಳಿದ ಮಾತುಗಳ್ಯಾವೂ ಬೇಕಿರದೆ
ನನ್ನ ನೆದರಿಗೆ ಅಂಟಿಕೊಂಡಿದ್ದು ಎರಡೇ ಪದವು,
ಹರವಿ ಹೇಳುವುದಾರೆ.. ಅವ್ವ.

-ದಯಾನಂದ್ ಟಿ ಕೆ

2 comments:

  1. ಬಹು ಮುದ್ದಾದ ಕವಿತೆ ಇದು.ಓದಲು,ಆಸ್ವಾದಿಸಲು.ಅರ್ಥೈಸಲು ಸುಂದರವಾದ ಪ್ರತಿಮೆ ಮತ್ತು ಆಶಯವನ್ನು ಹೊದ್ದು ನಿಂತಿದೆ,ಅಭಿನಂದನೆಗಳು. ಮಾನ್ಯ ದಯಾನಂದ ಅವರ ಕವಿತೆಯನ್ನು ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಿ ಸಹೃದಯತೆಯನ್ನು ಮೆರೆದಿರುವಿರಿ.ತುಂಬಾ ಸಂತೋಷವಾಯಿತು.ಇದಕ್ಕೆ ಅನ್ನೋದು ಆಸ್ವಾದನೆ ಅಂತ.ನಿಮ್ಮ ಮನೋಭಿಲಾಷೆ ಇಷ್ಟವಾಯಿತು.

    ReplyDelete