Tuesday, February 7, 2012

ಮುನಿಯವ್ವ......

ಮೊನ್ನೆ ಡಾಬಾಬದಿಯ ಎಕ್ಕದಹೂವುಗಳನ್ನು ನೇವರಿಸುತ್ತಿದ್ದಾಗ,
ಆಕೆ ತಂಬುಲದ ಬಾಯೊಳಗೆ ನಗುವನ್ನು ತುಂಬಿಕೊಂಡು
ಅವಳೂರ ಕಥೆ ಹೇಳುತ್ತಿದ್ದಳು.

 
ಅಲ್ಲಿ ಯಾವ ರಾಜನೂ ಆಳಿರಲಿಲ್ಲವಂತೆ, ದೇವರುಗಳೂ ಗೈರುಹಾಜರು..
ಕಲ್ಲುಕಲ್ಲು ಸೇರಿದ ಗೂಡುಗಳೇ ಮನೆಯಾದ, ಊರಲ್ಲದ ಊರಂತೆ..
ಬಿಚ್ಚೆಸೆದ ನೂಲಿನುಂಡೆಯಂತೆ ಊರಪಕ್ಕವೇ ನದಿಯಂತೆ..
ತೊಡರು ಹಾಕುವ ಹೂಟಕ್ಕೆ ನದಿಯೂ ಬಿಮ್ಮೆಂದು ಎದ್ದಿದ್ದು ಅಣೆಕಟ್ಟೆ..
ಪೇರಿಸಿಟ್ಟ ಕಲ್ಲುಗಳಿಗೆ ಮನೆಯೆಂದು ಹೆಸರೇ? 

ಊರಿಗೂರನ್ನೇ ಬೀಸಿ ಒಗೆದ ಮೇಲೆ ಬಿದ್ದಿದ್ದೇ ದೇಶ, ಹೆಸರು ಹೈವೇ.
ಆಗಿನಿಂದ ಇವಳ ಬಾಯೊಳಗೆ ರಕುತವೋ ತಂಬುಲವೋ..
ಅಲ್ಲಲ್ಲ ಮಕಾಡೆ ಕವುಚಿಕೊಂಡ ಅವಳದ್ದೇ ಬದುಕೋ ಎಂಬಂಥ ಕೆಂಪುದ್ರವ..
ಹೈವೇಯ ಮೇಲೆ ಯಾರೋ ಅಟ್ಟಿಸಿಕೊಂಡಂಡು ಬಂದಂತೆ ಓಡುವ
ವಾಹನಗಳತ್ತ ಸಕಾರಣವಾಗಿ ದುರುಗುಟ್ಟಿ ಪಿಚಕ್ಕೆನ್ನುತ್ತಾಳೆ,
ಕರ್ರಗೆ ಮಲಗಿದ ಡಾಂಬರುದಾರಿ ತನ್ನದೇ ಹೊಟ್ಟೆಯೇನೋ ಎಂಬಂತೆ
ಕಸಿವಿಸಿಗೊಳ್ಳುತ್ತಾಳೆ. 

ಮುಂದೆಂದಾರೊಂದು ದಿನ.. ಅವಳು ಮತ್ತೆ ಸಿಗಬಹುದು..
ನೂಲಂತೆ ಹರಿಯುವ ನೀರಿಗೇಕೆ ಈ ಜನ ಬಾಗಿಲು ಕಟ್ಟುತ್ತಾರೆ ಅಂತ
ಕಣ್ಣೊಳಗೆ ಕಣ್ಣು ಬಿಸುಟು ಕೇಳಬಹುದು..
 
ಗೊತ್ತಿರುವ ಸತ್ಯವನ್ನು ಮಾತಾಡುತ್ತೇನೇನೋ ಎಂಬ ಭಯದಿಂದ
ರಾಚುವ ಸಿಡಿಲಿನ ರೆಂಬೆಕೊಂಬೆಗಳಲ್ಲಿ ಒಂದನ್ನು ನಾಜೂಕಾಗಿ ಮುರಿದಿಟ್ಟುಕೊಂಡಿದ್ದೇನೆ.
ಮೆಟ್ಟು ಹೊಲೆಯುವ ಮುನಿಯವ್ವಳ ರಂಪಿ ಚೂಪುಮಾಡುವ ಕಲ್ಲ ಮೇಲೆ
ಸಿಡಿಲಿನ ಚೂರನ್ನು ಕಂಡೂ ಕಾಣದೆಷ್ಟು ಮಸೆದು,

ಸೂಜಿಯಂಥ ಸೂಜಿಯೇ ನಿಬ್ಬೆರಗಾಗೋ ಥರದಿ ಸಿಡಿಲ ಸೂಜಿಯೊಂದ
ಅಂಗೈಯೊಳಗಿಟ್ಟುಕೊಂಡಿದ್ದೇನೆ..
ಅವಳು ಅಂಥಹದೊಂದು ಪ್ರಶ್ನೆ ಕೇಳುತ್ತಿದ್ದಂತೆ..
ಮುಲಾಜಿಲ್ಲದೆ ನನ್ನ ಬಾಯಿಯನ್ನು ನಾನೇ ಹೊಲೆದುಕೊಳ್ಳುತ್ತೇನೆ.



-ದಯಾನಂದ್ ಟಿ ಕೆ

No comments:

Post a Comment