ಕನ್ನಡ ಸಾಹಿತ್ಯ ಲೋಕ ಓದುಗರ ಬರವನ್ನು ಎದುರಿಸುತ್ತಿದೆ, ಅಂಕಿ ಅಂಶಗಳ ಮೂಲಕ ಅವಲೋಕಿಸಿದಾಗ ಇದು ನಿಜವು ಹೌದು.ಕನ್ನಡ ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ.ಕಳವಳಕಾರಿಯಾದ ವಿಷಯ ಹೌದಾದರು ಇದನ್ನು ಸರಿಪಡಿಸಬಹುದಾದ ಜರೂರಿ ಕೆಲಸಗಳಾಗಬೇಕಿದೆ ಅದರ ಅಗತ್ಯತೆಯೂ ಇವತ್ತಿದೆ, ಇದು ಅಸಾಧ್ಯದ ಮಾತು ಸರಿಪಡಿಸಲು ಸಾಧ್ಯವಿಲ್ಲ ಅನ್ನುವದನ್ನು ನಾನು ನಂಬಲಾರೆ. ಜೊತೆಗೆ ಬದಲಾವಣೆ ಹೊಂದಿದ ಕಾಲದಲ್ಲಿ ಬದಲಾವಣೆಗೆ ತಕ್ಕುದಾಗಿ ಸಾಹಿತ್ಯಲೋಕವು ಬದಲಾಗಬೇಕಿದೆಯೆ? ಅನ್ನುವ ಜಿಜ್ಞಾಸೆಯು ನನ್ನಲ್ಲಿ ಸುಳಿದಾಡುತ್ತಿದೆ .
ಕನ್ನಡ ಸಾಹಿತ್ಯಲೋಕದ ಸಂಪ್ರದಾಯಿ ಓದುಗರೇನು ಬದಲಾಗಿಲ್ಲ, ಆ ಒಂದು ವರ್ಗ ಇವತ್ತೂ ಕೂಡ ಕನ್ನಡ ಸಾಹಿತ್ಯ ಲೋಕದ ಬೆನ್ನೆಲುಬಾಗಿ ನಿಂತಿದೆ.ಅದರೆ ಆ ಸಮೂಹ ಕ್ರಮೇಣ ಕಡಿಮೆಯಾಗುತ್ತಾ ಬರುತ್ತಿದೆ ಅನ್ನುವದಕ್ಕಿಂತ ಆ ಸಮೂಹ ಬೆಳೆಯುತ್ತಿಲ್ಲ ಎಂದೂ ಹೇಳುವದು ಸರಿಯೇನೊ!! ಇಂಟರ್ ನೆಟ್ ಜಮಾನದ ಈ ದಿನಗಳಲ್ಲಿ ಕೈಬೆರಳಿಗೆ ನಿಲುಕುವಂತೆ ಮಾಹಿತಿಗಳು ಮತ್ತೊಂದು ಸಿಗುತ್ತಿರಬೇಕಾದರೆ, ತಮ್ಮದೆ ಒತ್ತಡದ ಬದುಕಿನಲ್ಲಿ ಜನ ಸಮೂಹ ಪ್ರಹವಿಸುತ್ತಿರುವಾಗ ಪುಸ್ತಕ ಕೊಂಡು ಓದಿಕೊಳ್ಳುವಂತ ತಾಳ್ಮೆ ವ್ಯವಧಾನಗಳು ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಈ ವಿಷಯವನ್ನು ತೆಗೆದುಕೊಂಡಾಗ ಪುಸ್ತಕದ ಮೇಲಿನ ಪ್ರೀತಿಯೇನೂ ಜನ ಸಮೂಹಕ್ಕೆ ಕಡಿಮೆಯಾಗಿಲ್ಲ ಅನ್ನುವದೆ ಸೂಕ್ತ. ಆದರೆ ಸಾಹಿತ್ಯಲೋಕದ ನಿಜ ಬೆಳವಣಿಗೆಯು ಬೇರೆಲ್ಲ ಮಾಧ್ಯಮದ ಹೊರತಾಗಿಯು ಪುಸ್ತಕ ಲೋಕದಿಂದಲೆ ಆಗಿದ್ದು ಹಾಗು ಆಗಬೇಕಿರುವದು.ಹಾಗಿರಬೇಕಾದರೆ ಪುಸ್ತಕ ಮೇಲಿನ ಪ್ರೀತಿಯನ್ನು ಪುಸ್ತಕಗಳನ್ನು ಕೊಂಡು ಓದುವ ಒಲವನ್ನು ಇನ್ನೂ ಹೆಚ್ಚಾಗಿ ಅದರಲ್ಲೂ ಮುಖ್ಯವಾಗಿ ಯುವ ಸಮುದಾಯದಲ್ಲಿ ಈ ಅಭಿರುಚಿಯನ್ನು ಬೆಳೆಸಬೇಕಾಗಿದೆ.ಇದು ಪುಸ್ತಕ ಕೊಳ್ಳಲೇ ಬೇಕು ಓದಲೇಬೇಕು ಎಂಭ ಒತ್ತಾಸೆಯ ಒತ್ತಾಯದಿಂದ ಮೂಡುವಂತದ್ದಲ್ಲ ಅನ್ನುವದು ಸ್ಪಷ್ಟ, ಹಾಗಿದ್ದಾವಾಗ ಈ ಅಭಿರುಚಿಯನ್ನ ಬೆಳೆಸಬಹುದಾದ ಮಾರ್ಗಗಳ ಕುರಿತು ಒಂದಷ್ಟು ಚಿಂತನೆ ಮಾಡಬೇಕಿದೆ.
ಸಾಹಿತ್ಯಲೋಕದಿಂದ ಹೊರತಾಗಿ ಬೇರೆ ಬೇರೆ ವೃತ್ತಿಜೀವನದಲ್ಲಿ ತೊಡಗಿಸಿಕೊಂಡವರು, ಹೊರದೇಶದಲ್ಲಿ ನೆಲೆಸಿ ಕನ್ನಡದೆಡಗಿನ ಪ್ರೀತಿ ತೋರಿಸುವವರು ಇಂತಹ ಬಹಳಷ್ಟು ಮಂದಿ ತಮ್ಮದೆ ಬ್ಲಾಗ್ , ಪೇಸ್ ಬುಕ್ ಅಂತ ಹಲವು ಸಾಮಾಜಿಕ ತಾಣದಲ್ಲಿ ಸಾಹಿತ್ಯ ಲೋಕದೆಡೆಗಿನ ಪ್ರೀತಿಯೋ! ತಮ್ಮ ಬಿಗು ಕೆಲಸಕಾರ್ಯದ ಮಧ್ಯ ಬೇಕಾಗಿರಬೇಕಾದ ರಿಪ್ರೆಶ್ ಮೆಂಟಿಗೊ! ಬರಹಗಳ ಬಗ್ಗೆ ಆಸಕ್ತಿ ಹೊಂದಿಯೊ! ತಮ್ಮದೆ ರೀತಿಯ ಸಾಹಿತ್ಯ ಕೃಷಿಯನ್ನು ಮಾಡುತ್ತಿರುವದನ್ನು ನೋಡುತ್ತಾ ಬಂದಿದ್ದೇವೆ.ಬಹಳಷ್ಟು ಅದ್ಭುತ ಬರಹಗಳು ಕವಿತೆ ಕಾವ್ಯ ಕತೆಗಳು ಬರಯಬಲ್ಲ ಈ ವರ್ಗ ಬರೀಯ ಇಂಟರ್ ನೆಟ್ ವಲಯಕ್ಕೆ ಅಷ್ಟೆ ಸೀಮಿತವಾಗದೆ ಸಾಹಿತ್ಯಲೋಕದ ಮೂಲವಾಹಿನಿಗೆ ಕರೆತರುವ ಕೆಲಸಗಳು ಆಗಬೇಕಿದೆ. ಆ ಮೂಲಕ ಆ ವರ್ಗದ ಗಮನವನ್ನು ಸಾಹಿತ್ಯ ಪ್ರಕಾರದೆಡೆಗೆ ಸೆಳೆದಲ್ಲಿ ಒಂದಷ್ಟು ಓದುಗರು ಸಿಗಬಲ್ಲರೆಂಬ ವಿಶ್ವಾಸ ನನಗಿದೆ. ಇನ್ನು ವಿಸ್ತರಿಸಿ ಉದಾಹರಣೆ ಮೂಲಕವಾಗಿ ಹೇಳಬೇಕೆಂದರೆ ಐಟಿಬಿಟಿ ಕ್ಷೇತ್ರದ ಕನ್ನಡ ಕೃಷಿಯನ್ನು ತಮಗೆ ಗೊತ್ತಿಲ್ಲದಂತೆ ಮಾಡುತ್ತಿರುವ ಒಂದಷ್ಟು ಮಂದಿಯನ್ನು ಗುರುತಿಸಿ ಅವರನ್ನು ಸಾಹಿತ್ಯದ ಮೂಲವಾಹಿನಿಗೆ ತಂದು ಪುಸ್ತಕ ರೂಪದಲ್ಲಿ ಅವರ ಬರಹಗಳನ್ನು ಹೊರತಂದಾಗ ಆ ಕ್ಷೇತ್ರದ ಒಂದಷ್ಟು ಓದುಗರು ಗೆಳೆಯರ ಪುಸ್ತಕವೆಂಬ ಆಸಕ್ತಿಯಿಂದಲೊ ಏನೊ ಪುಸ್ತಕ ಕೊಂಡು ಓದುವ ಹವ್ಯಾಸ ಬೆಳೆಸಬಲ್ಲರೇನೊ?ಅಂತೆಯೆ ಬೆನ್ನುತಟ್ಟುವವರಿದ್ದಾರೆ ಎಂಭ ವಿಶ್ವಾಸ ಮೂಡಿದಾಗ ಸಾಹಿತ್ಯ ಕ್ಷೇತ್ರದೆಡೆಗೆ ಬರವಣಿಗೆಯತ್ತ ಆಸಕ್ತಿ ತೋರಬಲ್ಲರೇನೊ? ಸಾಧ್ಯತೆಗಳು ಹೆಚ್ಚಿವೆ ಈ ನಿಟ್ಟಲ್ಲಿ ಕೆಲಸ ಕಾರ್ಯಗಳು ಆಗಬೇಕಿದೆ.ಎಲ್ಲಾ ಕ್ಷೇತ್ರದಲ್ಲು ಕನ್ನಡ ಬರಹಗಾರರು ಇದ್ದಾರೆ ಅನ್ನುವದನ್ನು ಗಮನಿಸಿಯೆ ಐಟಿಬಿಟಿ ಕ್ಷೇತ್ರವನ್ನು ಉದಾಹರಣೆಗಾಗಿ ಬಳಸಿ ಹೇಳಿದೆನಷ್ಟೆ. ಸೂಕ್ತರನ್ನು ಗುರುತಿಸಿ ಪ್ರೋತ್ಸಾಯಿಸುವ ಕೆಲಸಗಳು ಆಗಬೇಕಿದೆ. ಪ್ರೋತ್ಸಾಹಕನಲ್ಲಿ ತಾನೆ ಕನ್ನಡ ಸಾಹಿತ್ಯ ಲೋಕವನ್ನು ಬೆಳೆಸುತಿದ್ದೇನೆ ಎಂಭ ಹಮ್ಮುಗಳು,ಭ್ರಮೆಗಳು ಬರಬಾರದು ಅಷ್ಟೆ, ಒಂದು ವೇಳೆ ಹಾಗಾದಲ್ಲಿ ಈ ಪ್ರಕ್ರಿಯೆ ನಿರಂತರವಾಗಿ ಸಾಗಲಾರದು.
ಯಾವುದೇ ಸಿನಿಮಾ ಆಥವಾ ಬೇರಾವುದೆ ಸಾಮಾಗ್ರಿಗಳನ್ನು ತೆಗೆದುಕೊಂಡರು ಅದು ಜಾಹಿರಾತಿನ ಮೂಲಕ ತನ್ನದೆ ಆದ ಮಾರುಕಟ್ಟೆಯನ್ನ ಸೃಷ್ಟಿಸುತ್ತದೆ. ಕನ್ನಡ ಪುಸ್ತಕ ಲೋಕಕ್ಕೆ ಇದನ್ನು ಹೋಲಿಸಿದಲ್ಲಿ ಈ ಕೆಲಸ ಅತಿ ವಿರಳ.ಲೋಕಾರ್ಪಣೆ ಸಮಾರಂಭ ಅದಕ್ಕಾಗಿ ಆಮಂತ್ರಣ ಪತ್ರಿಕೆ ಸಮಾರಂಭದಲ್ಲಿ ಪುಸ್ತಕದ ಬಗ್ಗೆ ಒಂದಷ್ಟು ನೆಚ್ಚಿನ ನುಡಿ ಇಂತಹ ಕಾರ್ಯಕ್ರಮಕ್ಕೆ ಸೇರಿದ ವಿರಳ ಮಂದಿಯಿಂದ ಒಂದಷ್ಟು ಪುಸ್ತಕ ಖರೀದಿ ಅಲ್ಲಿಗೆ ಬಿಡುಗಡೆಗೊಂಡ ಪುಸ್ತಕ ಪರಿಚಯ ಮುಕ್ತಾಯ, ತದ ನಂತರದ ಮಾರುಕಟ್ಟೆ ನಿಯಮಗಳ ಎಲ್ಲಾ ಹೊರೆಗಳು ಪ್ರಕಾಶನ ಸಂಸ್ಥೆಯ ಮೇಲೆ,ಮೊದಲೆ ಓದುಗರ ಬರ , ಈ ನಡುವೆ ಹಾಕಿದ ದುಡ್ಡು ಲಾಭ ಮೂಲಕ ಮರಳಲೆಂಬ ಪ್ರಕಾಶಕನ ಅಳಲು ಮಾತ್ರ ಆತನಿಗೇ ಪ್ರೀತಿ.ಹಾಗಿದ್ದರೆ ಇಷ್ಟೊಂದು ಪ್ರಕಾಶಕರು ಇದ್ದಾರಲ್ಲ ಅವ್ರೆಲ್ಲ ಲಾಭವಿಲ್ಲದೆ ಪುಸ್ತಕಗಳನ್ನು ಹೊರತರುತ್ತಾರೊ? ಅನ್ನೊ ಪ್ರಶ್ನೆ ಎದುರಾಗಬಹುದು.ಹೊಸ ಬರಹಗಾರರಿಗೆ ಅವಕಾಶ ಎಷ್ಟು ಸಿಗುತ್ತಿದೆ?ಅನ್ನೊ ಪ್ರಶ್ನೆಯು ಕೂಡ ಇದರ ಜೊತೆ ಸೇರಿದಾಗ ಉತ್ತರಗಳು ಪ್ರಶ್ನೆಗಳ ರೂಪದಲ್ಲೆ ಸಿಗುತ್ತವೆ.
ಪ್ರಕಾಶಕನಿಗೆ ಲಾಭ ಬೇಕು ಪುಸ್ತಕದ ವ್ಯಾಪಾರಿ ಅವ.ಲಾಭಾಂಶ ಮೂಲಕ ಇನ್ನಷ್ಟು ಪುಸ್ತಕಗಳನ್ನು ಹೊರತರಬೇಕಾದ ಜರೂರಿ ಅವನದ್ದು.ಅದರ್ಶವೆಂದು ಹೊಸಬರಿಗೆ ಅವಕಾಶ ಕೊಡುತ್ತಾ ಸಾಗಿದಲ್ಲಿ ತನ್ನ ಸಂಸ್ಥೆಗೆ ಕದವಿಕ್ಕಿ ತನಗೂ ಈ ಲೋಕಕ್ಕೂ ಸಂಬಂಧನೆ ಇಲ್ಲವೇನೊ ಎಂಬಂತೆ ವಿರಾಗಿಯಾಗಿ ಹೋಗಬೇಕಾದ ಪರಿಸ್ಥಿತಿ.ಕಾರಣ ಪುಸ್ತಕ ಕೊಂಡು ಓದುವವರ ಸಂಖ್ಯೆ ದಿನದಿಂದ ದಿನಕ್ಕೆ ವಿರಳ. ಪರಿಸ್ಥಿತಿ ಹೀಗಿದ್ದರೂ ಹೊಸಬರಿಗೆ ಅವಕಾಶ ಕೊಡುತ್ತಲೆ ತನ್ನ ಲಾಭಕ್ಕಾಗಿ ಪ್ರಮುಖ ಬರಹಗಾರರ ಬರಹಗಳನ್ನು ಪುಸ್ತಕ ರೂಪದಲ್ಲಿ ಹೊರತಂದು ಆದರ್ಶ ಮೆರೆಯುತ್ತಿರುವ ಪ್ರಕಾಶನ ಸಂಸ್ಥೆಗಳು ಇದೆ. ಬಹುಶಃ ಅಂತವರಿಂದಲೆ ಒಂದಷ್ಟು ಹೊಸಬರಿಗೆ ಅವಕಾಶ ಸಿಗುತ್ತಿವೆ.ಆದರೆ ಇಂಥ ಪ್ರಕಾಶನ ಸಂಸ್ಥೆಗಳು ಬೆರಳೆಣಿಕೆಗೆ ನಿಲುಕುವಷ್ಟು ಮಾತ್ರ.ಇದೆಲ್ಲವನ್ನೂ ನೋಡಿದಾಗ ಕನ್ನಡ ಸಾಹಿತ್ಯ ಲೋಕಕ್ಕೆ ಓದುಗರನ್ನು ಸೆಳೆಯಬೇಕಾದ ಅವಶ್ಯಕತೆ ಇದೆ,ನಾನಿಲ್ಲಿ ಓದುಗರನ್ನು ಸೆಳೆಯುವದು ಎಂದೆನ್ನುತ್ತಿರುವದು ಬೇರೆಲ್ಲಾ ಕ್ಷೇತ್ರಕ್ಕೂ ಕನ್ನಡ ಸಾಹಿತ್ಯ ಲೋಕವನ್ನು ವಿಸ್ತರಿಸಬೇಕು ಅನ್ನುವ ನಿಟ್ಟಿನಲ್ಲಿ.ಅದಕ್ಕಿರುವದು ಒಂದೆ ಮಾರ್ಗ ಸಾಹಿತ್ಯ ಕ್ಷೇತ್ರದಿಂದ ಹೊರತಾಗಿದ್ದು ಸಾಹಿತ್ಯ ಅಭಿರುಚಿ ಹೊಂದಿರುವ ಗುಮ್ಮನ ಗುಸುಕಿನಂತೆ ಅದ್ಬುತ ಬರಹಗಳನ್ನು ಉಣಿಸುತ್ತಾ ತೊಡಗಿರುವ ಇತರೆ ಕ್ಷೇತ್ರದ, ಬರಹಗಾರರೆಂದು ಅನಿಸಿಕೊಳ್ಳದ ಪ್ರತಿಭೆಗಳನ್ನು ಕನ್ನಡ ಸಾಹಿತ್ಯ ಲೋಕದ ಮೂಲವಾಹಿನಿಗೆ ಕರೆತರುವದು. ಆಗಾದರು ಓದುಗ ಸಮೂಹ ಬೆಳೆದೀತು ಅನ್ನೋದು ನನ್ನ ಅಸೆ. ಆದರೆ ಈ ಕೆಲಸ ಮಾಡೋರು ಯಾರು? ಬೆಕ್ಕಿನ ಕೊರಳಿಗೆ ಘಂಟೆ ಕಟ್ಟೋರು ಯಾರು?!!!!! ಉತ್ತರಗಳಿಲ್ಲದ ಪ್ರಶ್ನೆಗಳೆ ಇಲ್ವಂತೆ, ಮುಂದಿನ ದಿನಗಳಲ್ಲಿ ಉತ್ತರ ಕಂಡುಕೊಂಡೇವು ಅನ್ನುವ ನಿರೀಕ್ಷೆ ನನ್ನದು.
ರಾಘವೇಂದ್ರ ಅವರೇ,ನಿಮ್ಮ ಆಸೆ ಮತ್ತು ಆಶಯಗಳೇನೋ ಚೆನ್ನಾಗಿವೆ.ಆದರೆ ನಾವು ಕೆಲವೊಂದು ವಿಷಯಗಳನ್ನು ಗಮನಿಸಿದಂತಿಲ್ಲ.
ReplyDeleteಪುಸ್ತಕ ಖರೀದಿಸುವವರ ಸಂಖ್ಯೆ ಯಾಕೆ ಕಡಿಮೆಯಾಗುತ್ತಿದೆ ಅನ್ನುವದು ನಿಮ್ಮ ಪ್ರಶ್ನೆ.Well,ಕಡಿಮೆಯಾಗುತ್ತಿಲ್ಲ.ಹಾಗಂತ ಓದುಗರ ಬಳಿ ದುಡ್ಡಿಲ್ಲ ಅಂತ ಅಲ್ಲ.ಮೊದಲಿಗಿಂತ ಜಾಸ್ತಿ ದುಡ್ಡಿದೆ.
ಆದರೆ ಹಾಗೆ ಕೊಡುವ ದುಡ್ಡಿಗೆ ಮೋಸವಾಗಬಾರದಲ್ಲ? ವೈಯಕ್ತಿಕವಾಗಿ ನಾನು ವರ್ಷಕ್ಕೆ ಇಂತಿಷ್ಟು ಅಂತ ಪುಸ್ತಕ ಖರೀದಿಸುತ್ತೇನೆ.ಅದರಲ್ಲಿ,ಈಗಾಗಲೇ ಹೆಸರು ಮಾಡಿರುವ ಸಾಹಿತಿಗಳ ಪುಸ್ತಕಗಳೂ ಸೇರಿದಂತೆ ಹೊಸಬರ ಪುಸ್ತಕಗಳನ್ನೂ ಕೊಳ್ಳುತ್ತೇನೆ.ಹಳಬರ ಪುಸ್ತಕಗಳ ಬಗ್ಗೆ ನಾನು 'ವಿಶ್ವಾಸ' ಅಥವಾ 'ನಂಬಿಕೆ'ಯಿಂದ ಖರೀದಿಸಿದರೆ,ಹೊಸಬರ ಪುಸ್ತಕವನ್ನು 'ಪ್ರೀತಿ'ಯಿಂದ ಖರೀದಿಸುತ್ತೇನೆ.ಹೊಸಬರ output ಚೆನ್ನಾಗಿದ್ದರೆ ಖುಷಿಯಾದೀತು.ಇಲ್ಲದಿದ್ದರೆ ಇಲ್ಲ.ಆದರೆ ಹಳಬರ ಬಗ್ಗೆ ನಂಬಿಕೆ ಇಟ್ಟು ಖರೀದಿಸಿದ ನನ್ನಂಥವರು ಅಂಥ ಪುಸ್ತಕ ಓದಿದ ಮೇಲೆ ಸಾಹಿತ್ಯಾಸಕ್ತಿಯನ್ನೇ ಕುಂದತೊಡಗಿದರೆ ಏನು ಮಾಡುವದು? ನಮ್ಮಲ್ಲಿನ ಅನೇಕ ದೊಡ್ಡ ಪ್ರಕಾಶಕರು ಅಷ್ಟೇ ದೊಡ್ಡ ದೊಡ್ಡ ಹೆಸರಿನ ಸಾಹಿತಿಗಳ ಕೆಟ್ಟ ಪುಸ್ತಕಗಳನ್ನೇ ಮುದ್ರಿಸತೊಡಗಿದರೆ ಮತ್ತು ಅಂಥ ಪುಸ್ತಕಗಳನ್ನು ಓದಿದ ಓದುಗ ಇನ್ನುಮುಂದೆ ಈ ಸಾಹಿತಿಗಳ ಸಹವಾಸವೇ ಬೇಡ ಅಂದುಕೊಂಡರೆ ಅದು ಅವನ ತಪ್ಪೇ? ಇಲ್ಲಿ ಮಾಧ್ಯಮದವರ ಕೊಡುಗೆ ಸಾಕಷ್ಟು ಬರಬೇಕಾಗಿದೆ.ಸಿನೆಮಾ ಕತೆಯ ಬಗ್ಗೆ ಪುಂಖಾನುಪುಂಖವಾಗಿ ಬಾರಿಸುವ ಈ ಮಾಧ್ಯಮ ಯಾವತ್ತಾದರೂ TRP ಯ ಹಂಗಿಲ್ಲದೆ ಪುಸ್ತಕಗಳ ಬಗ್ಗೆ ಚರ್ಚೆ ಮಾಡಿದ್ದುoಟಾ? ಬರೆದಿದ್ದುಂಟಾ? ಯಾಕೆ ಈ ಪುಸ್ತಕ flop/hit ಆಯಿತು ಅಂತ ಚರ್ಚಿಸಿದ್ದುಂಟಾ? ಯಾವ ಪ್ರಕಾಶಕನಾದರೂ "ಅರೇ,ಇವರ್ಯಾರೋ ಹೊಸಬರು ಚೆಂದಾಗಿ ಬರೀತಿದಾರಲ್ಲ?ಅವರನ್ನೊಮ್ಮೆ ಪುಸ್ತಕ ಮಾಡುವ ಬಗ್ಗೆ ಕೇಳೋಣ.." ಅಂತ ಅಂದುಕೊಂಡಿದ್ದು ಉಂಟಾ?
-RJ
ರಾಘವೇಂದ್ರ ಸಾರ್ ಇದೆ ಪ್ರಶ್ನೆಗಳು ನನ್ನಲ್ಲೂ ಇರುವಂತದ್ದು.ಹೊಸಬರನ್ನು ಪರಿಚಯಿಸಿದಲ್ಲಿ ಪುಸ್ತಕ ಕೊಂಡು ಓದುವವರಿಲ್ಲವೆಂಬ ನೆಪಗಳು,ಅದಕ್ಕಾಗಿ ಹೆಸರು ಮಾತ್ರಕ್ಕೆ ಹಳಬರಿಗೆ ಜೋತು ಬೀಳುವ ಪ್ರಕಾಶಕರು (ಈವಿಚಾರದ ಹೊರತಾಗಿ ಚಿಂತಿಸುವ ಕೆಲವೆ ಕೆಲವು ಪ್ರಕಾಶನ ಸಂಸ್ಥೆಗಳು ಇದೆ ಆದರೆ ಅದು ಬೆರಳೆಣಿಕೆ ಮಾತ್ರ),ಈ ವ್ಯವಸ್ಥೆಯಿಂದ ಹೊಸ ಹರಿವುಗಳು ನಿಂತಿವೆ ಅಥವಾ ಕಡಿಮೆ ಆಗಿದೆ .ಇದೆಲ್ಲವು ಪ್ರಕಾಶಕರ ಜವಬ್ದಾರಿಯ ಮೇಲೆ ನಿಂತಿದೆ ಅನಿಸುತ್ತಿದೆ.ಅತ್ರಿ ಬುಕ್ ಸ್ಟಾಲ್ ಅದರ್ಶವನ್ನೆ ಮುನ್ನಡಿಯಿಟ್ಟುಕೊಂಡು ನಡೆದಿದ್ದಕ್ಕೆ 36 ವರುಷದ ಸೇವೆಯನ್ನ ಅಂತ್ಯಗೊಳಿಸಿದೆ ಅನ್ನುವದನ್ನು ಕೂಡ ಪ್ರಕಾಶಕರ ಬಗ್ಗೆ ಚಿಂತಿಸುವಾಗ ಮರೆಯುವ ಹಂಗಿಲ್ಲ.ಒಂದಂತು ಸತ್ಯ ಹೊಸ ಹರಿವುಗಳು ಬರುತ್ತನೆ ಇದ್ದಲ್ಲಿ ಮಾತ್ರ ಓದುಗರ ಸಂಖ್ಯೆ ಬೆಳೆಯಬಲ್ಲುದು ಎಂಬುದು ನನ್ನ ಅನಿಸಿಕೆ.
Deleteಸಮಯೋಚಿತ ಲೇಖನ ತೆಕ್ಕಾರರೇ.. ಬರೆಯುವರು ಮುಖ್ಯವಾಹಿನಿಗೆ ಬರದೇ, ಬರೆವವರು ತಮ್ಮದೇ ಒಂದು ಓದುಗರ ಮತ್ತು ತಮ್ಮನ್ನು ಓದದವರ ದೊಡ್ಡ ಗುಂಪನ್ನು ಸೃಷ್ಟಿಸಿಕೊಳ್ಳುತ್ತಾ ಸಾಗಿದುದರ ಬಗ್ಗೆ, ಅದರ ನಿವಾರಣೆಗೆ ಕೆಲ ಮಾರ್ಗೋಪಾಯಗಳನ್ನೂ ಸೂಚಿಸಿ ಬರೆದಿದ್ದೀರ. ಚೆನ್ನಾಗಿದೆ. ಈ ಸಮಯದಲ್ಲಿ ಈ ಕಿರಿಯನಿಗೆ ಅನಿಸಿದ್ದಿಷ್ಟು. .
ReplyDeleteನನ್ನ ಅಜ್ಜಿಯವರು ತ್ರಿವೇಣಿ, ಸಾಯಿಸುತೆ ಹೀಗೆ ಸಾಮಾಜಿಕ ಕಾದಂಬರಿಗಳನ್ನು ಓದುತ್ತಿದ್ದರಂತೆ. ನನ್ನ ಅಮ್ಮನೂ ಆಗಾಗ ಓದುವುದನ್ನು ನೋಡುವುದನ್ನು ನೋಡಿದ್ದೇನೆ. ಆದರೆ ನನ್ನ ಗೆಳೆಯರು ಬಿಡಿ ಗೆಳತಿಯರೂ ಅದನ್ನು ಓದುವುದು ಕಂಡಿಲ್ಲ ಸದ್ಯ. ಆದರೆ ಅವರು ಪುಸ್ತಕಗಳನ್ನೇ ಓದುವುದಿಲ್ಲ ಅಂತಲ್ಲ. ಇಂಗ್ಲೀಷಿನ ಚೇತನ್ ಭಗತ್, ಡ್ಯಾನ್ ಬ್ರೌನ್, ಪಾಲ್ ಕೊಹ್ಲಿಮೊ, ರವಿಂದರ್ ಸಿಂಗ್, ನಿಮೀಶ್ ಹೀಗೆ ಅನೇಕರ ಪುಸ್ತಕಗಳನ್ನು..ಒಂದೂ ಬಿಡದಂತೆ ಓದಿದ್ದಾರೆ, ಓದುತ್ತಾರೆ. ಅವರೆಲ್ಲಾ ಯಾರು ಎಂದು ಕೇಳಬೇಡಿ ದಯವಿಟ್ಟು. ಕೆಲ ಉದಾಹರಣೆ ಕೊಟ್ಟೆ ಅಷ್ಟೆ. ಕನ್ನಡದಲ್ಲಿ ಯಾವುದು ಓದಿದ್ದೀರ ಅಂತ ಕೇಳಿದಾಗ ಈ ರೀತಿ ಪುಸ್ತಕ ಬರುತ್ತಾ ಕನ್ನಡದಲ್ಲಿ ಅಂತಾರೆ. ಮುಂಚೆ ಆದರೆ ತೇಜಸ್ವಿ ಅವರ ಪುಸ್ತಕಗಳನ್ನು ಈ ಸಾಲಿಗೆ ಸ್ವಲ್ಪವಾದರೂ ಉದಾಹರಿಸಬಹುದಿತ್ತೇನೋ.. ಆದರೆ ಈಗ ?
ಪುಸ್ತಕ ಸಂಸ್ಕೃತಿ ಉಳಿಯಬೇಕು ಅನ್ನುತ್ತೀವಿ. ನಿಜ, ಆದರೆ ಕನ್ನಡ ಪುಸ್ತಕಗಳು ಎಲ್ಲೆಡೆ ಇಂಗ್ಲೀಷಿನಷ್ಟು ಸರಾಗವಾಗಿ ಕೈಗೆಟುಕುತ್ತಿವೆಯೇ ? ನಮ್ಮೂರಿನ ಸಾರ್ವಜನಿಕ ಗ್ರಂಥಾಲಯದಲ್ಲಿ ರವಿ ಬೆಳೆಗರೆಯವರ "ಹಿಮಾಲಯನ್ ಬ್ಲಂಡರ್" ಅನುವಾದಕ್ಕೆ ಸುಮಾರು ಸಲ ತಡಕಾಡಿದ್ದೇನೆ. ಅದು ಇನ್ನೂ ಬಂದಿಲ್ಲವೆಂಬ ಉತ್ತರವೇ ಸಿಗುತ್ತದೆ ನನಗೆ. ಭೈರಪ್ಪನವರ ಕವಲು, ಆವರಣಗಳೂ ಇನ್ನೂ ಬಂದಿಲ್ಲವೆಂಬ ಉತ್ತರ. ಶರ್ಮರು, ಚುಟುಕು ಬ್ರಹ್ಮ ದೇಸಾಯಿಯವರ ಪುಸ್ತಕಗಳದಂತೂ ಸುಳಿವೇ ಇಲ್ಲ ಅಲ್ಲಿ. ತಾಲೂಕು ಕೇಂದ್ರ ಗ್ರಂಥಾಲಯದ್ದೇ ಈ ಗತಿಯಾದರೆ ಹೇಗೆ ಸ್ವಾಮಿ ? ಪುಸ್ತಕ ಕೊಂಡು ಓದಬೇಕು ನಿಜ, ಆದರೆ ಎಷ್ಟು ಅಂತ ಕೊಳ್ಳುತ್ತೀರಿ? ಆಸಕ್ತಿ ಕೆರಳಿಸುವಂತಹ ಪುಸ್ತಕಗಳನ್ನು ಓದುತ್ತಿದ್ದರೆ , ಸಿಗದ ಕೆಲವು ಪುಸ್ತಕಗಳನ್ನ ಕೊಳ್ಳಬಹುದು.. ಯಾವುದೂ ಆಸಕ್ತಿಯೇ ಕೆರಳಿಸದಿದ್ದರೆ ? ೬೦-೭೦ ರ ದಶಕದ ಅದೇ ಮರ ಸುತ್ತುವ ಪ್ರೇಮ ಕಥೆಗಳನ್ನೇ ಈಗಲೂ ಓದಿ ಕನ್ನಡ ಸಾಹಿತ್ಯ ಮಹಾನ್ ಅಂತ ಜೈಕಾರ ಹಾಕು ಅಂದರೆ ಸಾಧ್ಯವಾ ? ನಾನು ಹೇಳಿದ್ದು ಅತಿಯಾದರೆ ಕ್ಷಮಿಸಿ. ಯಾರನ್ನೂ ದೂರುತ್ತಿಲ್ಲ. ಪರಿಸ್ಥಿತಿ ಹೀಗಿದೆ ಅಂದೆ ಅಷ್ಟೇ.
ಪುಸ್ತಕ ಪ್ರೇಮಿಗಳಿಗೆಲ್ಲರೀಗೂ ಕಾಡುವ ಪ್ರಶ್ನೆಗಳೆ ನಿಮ್ಮನ್ನೂ ಕಾಡುತ್ತಿವೆ ಪ್ರಶಸ್ತಿ.ಕೋಪಗೊಳ್ಳುವಂತದ್ದೂ ಏನಿಲ್ಲ. ಲೈಬ್ರೇರಿಗಳಿಗೆ ಪುಸ್ತಕಗಳು ಸರಿಯಾಗಿ ತಲುಪುತ್ತಿಲ್ಲ ಇಂತಹ ಹಲವಷ್ಟು ಸಮಸ್ಯೆಗಳು ಇದ್ದೆ ಇವೆ.ಇದೆಲ್ಲ ಸಮಸ್ಯೆಗಳ ಪರಿಹಾರ ಮಾಡುವ ಚಿಂತನೆಯ ಹೊರತಾಗಿ ನಾನು ನನ್ನ ಅನಿಸಿಕೆಯನ್ನ ಇಲ್ಲಿ ಹೇಳಿರುವೆ. ಹೊಸ ಪ್ರಕಾರದಲ್ಲಿ ಸೃಜನಶೀಲರಾಗಿ ಬರೆಯುವ ಮಂದಿ ಕನ್ನಡದಲ್ಲು ಸಾಕಷ್ಟು ಮಂದಿ ಇದ್ದಾರೆ ಅವರನ್ನೂ ಸಾಹಿತ್ಯ ಲೋಕದ ಮೂಲವಾಹಿನಿಗೆ ತರಬೆಕಾದ ಅವಶ್ಯಕತೆ ಇಂದು ಹೆಚ್ಚಿದೆ, ಆ ಮೂಲಕ ಯುವ ಓದುಗರ ಬಳಗ ಕನ್ನಡ ಸಾಹಿತ್ಯ ಕ್ಷೇತ್ರದತ್ತ ಒಲವು ತೋರೀತು ಎಂಭ ಆಸೆಯನ್ನು ಇಟ್ಟುಕೊಂಡು ಆ ನಿಟ್ಟಿನಲ್ಲಿ ನಾವು ಚಿಂತಿಸಬೇಕಾಗಿದೆ ಎಂಬ ಅನಿಸಿಕೆಯನ್ನು ಹೇಳಿದ್ದೇನೆ.ಓದುಗರ ಬಳಗವನ್ನು ಹೆಚ್ಚಿಸಿಕೊಳ್ಳುವುದೊಂದೆ ಎಲ್ಲಾ ಪ್ರಶ್ನೆಗಳಿಗೆ ಉತ್ತರಕಂಡುಕೊಳ್ಳುವಲ್ಲಿ ನೆರವಾದೀತು ಎಂಬುದು ನನ್ನ ನಿರೀಕ್ಷೆ.
Delete