Friday, September 14, 2012

ಕಪ್ಪು- ಬಿಳುಪು

ಅನಿರೀಕ್ಷಿತವಾಗಿ
ಎಡವಿದಾಗ
ತುಸು ಜಾರಿದ
ಕಪ್ಪು ಕನ್ನಡಕದ
ಫ್ರೇಮಿನೊಳಗಿಂದ
ಕಣ್ಣ ನೋಟ ತುಸು
ಹೊರ ಇಣುಕಿದಾಗಲೆ
ತಿಳಿದದ್ದೂ
ನಾ ನೋಡುವ ದೃಷ್ಟಿ
ಮಬ್ಬು ಮಬ್ಬೆಂದು.

ಮಬ್ಬು ಕತ್ತಲ
ತೊಳೆಯೋಣವೆಂದು
ಕಣ್ಣ ಮರೆಸಿದ್ದ
ಕಪ್ಪು ಕನ್ನಡಕವ
ಎತ್ತಿ ಎಸೆದಾಗಲೆ
ರಾಚಿದ್ದು
ಜಗದ ಪ್ರಖರ
ಬೆಳಕು
ಜೊತೆಗೆ ಒಂದಿಷ್ಟು
ಬೆಳಕರಿಯದ
ಬದುಕು-ಬವಣೆಗಳು
ಬಿಳುಪಿನಂತೆ

ಬೇರು ಸತ್ತ
ಜೀವಿಗಳೂ
ತಾವಿಲ್ಲದ
ಸೂರುಗಳು
ಸುಟ್ಟೆಲೆಯ
ಪೈರುಗಳು
ಎಲ್ಲವು ಎಲ್ಲವೂ
ದೃಷ್ಟಿ ಪರದೆಯಲ್ಲಿ
ನಿಂತಣಕಿಸಿ
ನಾಚುವಾಗ
ಮತ್ತದೆ ಮಬ್ಬು
ದೃಷ್ಟಿ ತುಂಬಿದ
ಕತ್ತಲು


ನಗ್ನತೆಯ
ಜಗದ ತುಂಬ
ಬಡವರ ಕೆಂಪು
ನೆತ್ತರ ಬಸಿದು
ಶೀಷೆಯೊಳಗೆ
ತುಂಬಿ ಗುಟುಕರಿಸುವ
ಮಂದಿಯರ ಕಂಡಾಗ
ನನಗದೆ ಮುಸುಕು
ಮುಗ್ಗಲು
ಕನ್ನಡಕದ ನೆನಪಾಗಿ
ಎತ್ತಿ ಕಣ್ಣಿಗೊತ್ತಿಕೊಂಡೆ
ಒಂದಿಷ್ಟು ದಿನ
ದೃಷ್ಟಿ ಮಾಸದಿರಲೆಂದು
ನೈಜತೆಯು
ಕಣ್ಣ ಸುಡದಿದ್ದರೆ
ಮಬ್ಬು ಬೆಳಕನ್ನೆ
ಬಿಳುಪಾಗಿಸೋಣವೆಂದು

ಕಣ್ಣಿಗೊತ್ತಿಕೊಂಡ
ಕನ್ನಡಕದ ಫ್ರೇಮೂ
ದೃಷ್ಟಿಗೊಂದು ಚೌಕಟ್ಟು
ಮೀರಗೊಡುವದಿಲ್ಲ
ನನಗೆಟಕುವ
ನೆಟ್ಟ ದೃಷ್ಟಿಯೊಳಗೆ
ಕಾಣುವ
ಕಪ್ಪು ಬಿಳುಪು
ಎಲ್ಲವೂ ಮಬ್ಬಾಗಿ
ಹೆಚ್ಚಿನ ವ್ಯತ್ಯಾಸವ
ನೋಡುವದನ್ನೆ
ತೊರೆಯಲಿಚ್ಚಿಸಿ

ಅಂದುಕೊಂಡೆ
ಮನಸಿನೊಳಗೆ
ಕತ್ತಲಿನ ಓರೆಹಚ್ಚಿ
ಬಿಳುಪಾಗುತ್ತಿರೋಣವೆಂದು.


2 comments:

  1. ನೈಜತೆಯ ಕನ್ನಡಿಯಂತಿರುವ ಕಾವ್ಯ ಶೈಲಿ., ಮನ ಗೆಲ್ಲುತ್ತದೆ..!!

    ReplyDelete
    Replies
    1. ಧನ್ಯವಾದ ಪ್ರೋತ್ಸಾಹಕ್ಕೆ, :)

      Delete