Sunday, February 26, 2012

ಕವಿತೆ-ಪ್ರಶ್ನೆ

ನಾ ಬರೆಯೋದು ನನಗಲ್ಲ
ಮೂಡುವ ಸಾಲುಗಳೂ ನನದಲ್ಲ
ವಸ್ತು ಅದಾಗೆ ಅದು ಬರೆಸಿಕೊಂಡು
ನಾನದರ ಮಾಧ್ಯಮ ಆಗೋ ಆಸೆ.

ಸಾಲುಗಳೋದಿ ಕವಿತೆ ಕಥೆ ಅಂದಿರೆಲ್ಲ
ವಿಷಯಗಳೂ ನನದಲ್ಲವೆಂದು ಒಪ್ಪಿರೆಲ್ಲ
ಗ್ರಹಿಕೆಗೆ ಬಂದದ್ದೂ ಅದಾಗೆ
ಗೀಚಿದೆ ಅದ ನಾ ನಿಮಗಾಗೆ

ಗೆಳೆಯ ಹೇಳಿದ ಬರೆದದ್ದನ್ನೂ ಕೂಡಿಡೆಂದು
ನನಗೆ ಕ್ಲೀಷೆ ನನದಲ್ಲದರ ಮೇಲೆ...........
ತನ್ನದೆಂದು ಹಕ್ಕಸಾಧಿಸಿ ಕೂಡಿಡುವದು ಎಂತೆಂದು?
ಅನುಭವಕ್ಕೆ ಬಂದದ್ದನ್ನು ಜನ ತಿಳಿಯಲೆಂದು ಬರೆದೆ
ಬೇಕಾದರೆ ನೀನೆ ಕೂಡಿಟ್ಟುಕೋ ಎಂದು ಗೆಳೆಯನಿಗಂದೆ.

ನನ್ನ ಬಗ್ಗೆ ನಾನೆ ಬರೆದರೆ ಅಸಹ್ಯಿಸಿಕೊಳ್ಳುತ್ತೇನೆ
ಹಸಿವು,ಬಡತನಕ್ಕೆ ತುಟಿಯಾಡಿಸ ಬಯಸುತ್ತೇನೆ
ನಿನ್ನ ಅನುಭವಗಳನ್ನು ನಿನ್ನದೆಂದು ಬರಿ
ಬದುಕ ವ್ಯಥೆ ಕಥೆಗಳ ಕಟ್ಟಿಡು ನಿನ್ನ ಕಥೆಯೊಂದಿಗೆ ಸೇರಿ
ಬಂಧು ಗೆಳೆಯನ ಮಾತ ಕೇಳಿ ಜಿಜ್ಞಾಸೆ ಮೂಡಿದೆ
ನಾ ಏನ ಬರೆಯಲಿ?ಹೆಂಗೆ ಬರೆಯಲಿ? ಎಂದು ಮನ ಕಾಡಿದೆ.

ಬರೆಯುತ್ತಾ ಬರೆಯುತ್ತಾ ಉತ್ತರ ಸಿಗಬಹುದೇನೋ?
ನನ್ನದೇ ವಿಭಿನ್ನ ಶೈಲಿ ನನ್ನದಾಗಬಹದೇನೋ?
ಮಾತುಗಳ ರೂಪದ ವಾಕ್ಯವೂ ಕವಿತೆಯಾಗಬಲ್ಲುದೆ?
ಭಾವನೆಗಳೆ ಜೀವಾಳವಾಗಬೇಕಾದ ಕವಿತಾ ಶೈಲಿ ನನಗೊಗ್ಗಬಲ್ಲುದೆ?
ಪ್ರಶ್ನೆಗಳ ಬಗ್ಗೆ ನಾನಂದುಕೊಳ್ಳೋದಿಷ್ಟೆ.....
ಮನದಲ್ಲಿ ಪ್ರಶ್ನೆಗಳೂ ಹೀಗೆ ಒಡಮೂಡಲಿ
ನನ್ನ ಬರವಣಿಗೆ ಇದರಿಂದ ಪಕ್ವತೆಯ ಪಡೆಯಲಿ.

Saturday, February 25, 2012

ನಾರಿಯೊಬ್ಬಳ ನೋಟ………!!!!


ಮೌನಗೌರಿ ,ಕತ್ತು ಬಗ್ಗಿಸಿ ನಡೆವ ನಾರಿ
ತನ್ನ ಕಲಿಕೆಗಾಗಿ ಬಸ್ಸ ಹಿಡಿವ ಮಿತ ಸಂಚಾರಿ
ತನ್ನ ಎಂದಿನಂತೆ ಹಿಂಬಾಲಿಸುವ ಜೋಡಿ ಕಣ್ಣ ನೋಟ
ಅದರ ಪರಿವೆ ಇಲ್ಲದೆ ಆ ನೋಟದೊಳಗೆ ಹಾಯಿಸದೆ ಕಣ್ಣೋಟ
ಸಾಗುತಿತ್ತು ಈಕೆಯ ಪಯಣ ಒಲವ ಗೆಳೆತಿಯರೊಂದಿಗೆ

ಕಣ್ಣ ನೋಟ ನಾರಿಯ ಅರಿಯುತಿತ್ತು ದೂರದಿಂದಲೆ
ಹೃದಯದಿ ಪ್ರೇಮವು ಕುಡಿಯೊಡದಿತ್ತು ಅದಾಗಲೆ
ಪ್ರೇಮದ ನೀವೇದನೆಗೆ ಬಯಸುತಿದ್ದ ಆ ನೋಟ
ಕುಟುಂಬ ಸದಸ್ಯರ ಪರಿಚಯಿಸಿ ಕೊಂಡು
ತನ್ಮೂಲಕ ಹಂಬಲಿಸಿತು ನಾರಿಯ ಒಡನಾಟ.

ಅದೊಂದು ವರುಷದ ಮೊದಲನೆ ದಿನ
ನೋಟವು ಅರುಹಿತು ನಾರಿಗೆ ತನ್ನೊಲವ ಆ ದಿನ
ಇದ ಬಯಸದ ನಾರಿ ಮನದಲ್ಲೆ ಕಂಪಿಸಿದಳೂ
ಈ ಭಾಗ್ಯವ ನನದಾಗಿಸಿಕೊಳ್ಳಲಾಗುತ್ತಿಲ್ಲವೆಂದೂ ಅತ್ತಳೂ!!!
ತಾಯಿಯ ಕಳಕೊಂಡ ಒಂಟಿತನ,
ಮಲತಾಯಿಯೆಂಬ ಭೂತ ಹೊರೆಸಿದ್ದ ಹಗೆತನ
ಓದೊಂದೆ ಉತ್ತರವಾಗಿ ಜೀವನಕ್ಕೆ ಕಂಡು
ನಾರಿ ನಿರಾಕರಿಸಿದ್ದಳೂ ನಯವಾಗಿ ತನ್ನ ಮನದ ನೋವ ತಾನುಂಡು

ನಾರಿಯು ಕಲಿಕೆಯ ಅಂಚು ತಲುಪಿದಳು
ಕೆಲಸಕ್ಕಾಗಿ ಯಾರ ಆಸರೆಯ ಬಯಸದೆ ಅಲೆದಾಡಿದಳು
ಅದು ಮರೀಚಿಕೆ ಅನ್ನೋದಿವಸದಲ್ಲಿ ………………!!!
ಆ ನೋಟ ಮತ್ತೆ ದುತ್ತೆಂದು ನಾರಿಯೆದುರು ನಿಂತಿತ್ತು.
ನಾರಿಯ ನಿಲುವನ್ನು ನೋಟ ಅರಿತಿತ್ತು
ಮನೆಯ ಗೋಡೆಯ ಮೇಲೆ ನೇತು ಹಾಕಿದ ಪಟದ ಮೇಲೆ
ಬರೆದಿತ್ತು ನಾ ಆಸರೆಯಾಗಬಲ್ಲೆ ನಿನ್ನ ಸ್ವಾವಲಂಭಿತನಕ್ಕೆ
ದುಗುಡವ ಗೀಚು ಬಾ ನನ್ನ ಮನದ ಪುಟದ ಮೇಲೆ…….!!

ಇಷ್ಟು ವರುಷವ ನನಗಾಗಿ ಕಳೆದ ನೋಟಕ್ಕೆ ಮನಸೋತು
ನೋಟವು ತನಗಾಸೆರೆಗೆ ನಿಂತು ಕೊಡಿಸಿದ ಕೆಲಸವ ಬರಸೆಳೆದು
ತನ್ನ ಸ್ವಾವಲಂಭಿತನಕ್ಕೆ ಇಂಬುಕೊಟ್ಟ ಆ ಮನಕ್ಕೆ ಕೈ ಮುಗಿದು
ತನ್ನ ಸ್ವಾತಂತ್ರ್ಯವ ಮರಳಿ ಪಡೆದುದಕ್ಕೆ ಮುದಗೊಂಡು ನೆಗೆದು
ಕಣ್ಣಾಲಿಗೆಯಲ್ಲಿ ಒಸರುತಿದ್ದ ಹನಿಯಂಚ ಸವರಿ
ಮನದ ಆದೇಶದಂತೆ ಹಿತದೊಂದಿಗೆ ಬಾಳುವದೇ ಸರಿ
ಗಟ್ಟಿ ನಿರ್ಧಾರದೊಂದಿಗೆ ನೋಟದೊಂದಿಗೆ ತನ್ನ ಕಣ್ಣೋಟ ಹರಿಬಿಟ್ಟಿದ್ದಳು ನಾರಿ
ನಿರ್ಧಾರ ಟಿಸಿಲೊಡೆದು ಸತಿ- ಪತಿಯೆಂಬ ಸಂಭಂದದೊಂದಿಗೆ ಆರಂಭ ಪಡೆದಿತ್ತು
ನಗುವೊಂದಿಗೆ ನಾರಿಯ ಜೀವನದ ಮಗದೊಂದು ದಾರಿಯು ಮಜಲೊಡೆದಿತ್ತು...


Thursday, February 23, 2012

ಕೆಲ ಸಾಲುಗಳು-ರೈಲ ಪುಸ್ತಕ ವ್ಯಾಪಾರಿ ಕುರಿತು

ತುಂಡ ಹಲಗೆಗೆ ನಾಲ್ಕು ಚಕ್ರವ ಪೋಣಿಸಿ
ತನ್ನ ಕಾಲಾಗಿಸಿ ನಡೆಯುತಿದ್ದ
ತನ್ನೆರಡು ಕಾಲನ್ನು ರೈಲ ಕಂಬಿಗೆ
ಆಚಾನಕ್ ಆಗಿ ಸಿಲುಕಿಸಿ
ಅದುನ ಕಳಕೊಂಡವ..........


ಒಂದಷ್ಟು ಕನ್ನಡ ಪುಸ್ತಕದ ಕಟ್ಟಿನೊಂದಿಗೆ
ಬರುವ ರೈಲುಗಳ ಹಾದಿಯ ನೋಡುತ್ತಾ
ಬದುಕ ಸಂಪಾದನೆಯ ಗಿಟ್ಟಿಸುವ ಬಂಡಿ ಬಂದಾಗ
ತನ್ನ ಸರಂಜಾಮುಗಳನ್ನ ಮೇಲಿಟ್ಟು
ಕೈ ಹಿಡಿಯ ಆಸರೆಯೊಂದಿಗೆ
ಬೇರಾವುದೆ ಸಹಾರವನ್ನು ಬಯಸದೆ
ಕಾಲ ಕಿತ್ತ ಅದೇ ರೈಲನ್ನೇರುತಿದ್ದ ದಿನಾವು
ಹಠ ಸಾಧನೆಗೆ ನಿಂತ ಯೋಗಿಯಂತೆ


ಬೋಗಿಯಿಂದ ಬೋಗಿಗೆ
ಕನ್ನಡ ಪುಸ್ತಕದ ಸೊಗಡನ್ನು ಜನಕ್ಕೀಯುತ್ತಾ
ಇಚ್ಚೆ ಪಟ್ಟವರಿಗೆ ಅದುನ್ನಾ ಮಾರುತ್ತಾ
ತನ್ನ ಕುಟುಂಬ ಪೊರೆಯಲೂ ಬೇಕಾದ
ಸಂಪಾದನೆಯ ಕ್ರಿಯೆಯೂ ನಡೆಯುತಿತ್ತೂ
ಮುಂದಿನ ನಿಲ್ದಾಣಕ್ಕೆ ಬಂಡಿ ತಲುಪುವ ತನಕ
ತಾನೂ ಸೋಲಬಾರದು ಎಂಬ ಕ್ಲೀಷೆಯೊಡೆ


ಮನದ ದೃಷ್ಟಿಯೂ ಬೆರಗೂ ಕಣ್ಣಿನಿಂದ
ಇವನ ನೋಡುತ್ತಿರುತ್ತದೆ
ಪ್ರತಿ ಸಲದ ರೈಲ ಪ್ರಯಾಣದಲ್ಲಿ
ಎಲ್ಲವೂ ಇದ್ದು ಅವನ ದುಡಿಯುವ ಛಲ
ಅವನಲ್ಲಿರುವ ಧೀ ಶಕ್ತಿ ನನ್ನಲೇಕೆ ಇಲ್ಲವೆಂದು?
ಆ ಜಾಗದಲ್ಲಿ ಬಂದು ಕೂತಿದೆ ಆಲಸ್ಯವೆಂಬ
ಜಾಡ್ಯತನ ನನ್ನನ್ನು ಇಂಚಿಂಚೆ ತಿನ್ನಲೆಂದು.
ಆವನ ಆತ್ಮ ಸ್ಥೈರ್ಯ, ಸ್ವಾಭಿಮಾನಕ್ಕೆ ಮೆಚ್ಚಿ
ನನ್ನ ನಾ ಹೋಲಿಸಿಕೊಂಡು ಮನದಲ್ಲೆ ಕೊರಗುತ್ತಿರುತ್ತೇನೆ.



Monday, February 20, 2012

ಶಿವರಾತ್ರಿ ದಿನ ಶಿವಶರಣ ತತ್ವಗಳೊಡನೆ ಸಣ್ಣ ಅವಲೋಕನ


ಈ ದಿನ ಶಿವರಾತ್ರಿ ಯಾಕೋ ಶಿವ ಶರಣರು ಅದರಲ್ಲೂ ಮುಖ್ಯವಾಗಿ ಬಸವಣ್ಣ ನೆನಪಾಗ್ತಾ ಇದ್ದಾರೆ. ಜಡ್ಡುಗಟ್ಟಿ ಮೌಢ್ಯತೆಯತ್ತಾ ತಿರುಗುತಿದ್ದ ಸಮಾಜವನ್ನ ಧಿಕ್ಕರಿಸಿ ಸಕಲರಿಗು ದೇವನನ್ನು ತನ್ನಲ್ಲೇ ಕಾಣುವ ನೀತಿಯನ್ನು ತೋರಿಸಿಕೊಟ್ಟ ಸಂಕ್ರಮಣ ಕಾಲವಾಗಿ ಇತಿಹಾಸದಲ್ಲಿ ದಾಖಲಾದ ಹನ್ನೆರಡನೆ ಶತಮಾನದ ಧಾರ್ಮಿಕ, ಸಾಮಾಜಿಕ, ಸಾಹಿತ್ಯಿಕ ವಿಚಾರ ಕ್ರಾಂತಿ ನೆನಪಿಗೆ ಬರುತ್ತಿದೆ.ಒಬ್ಬ ಮೇಲ್ವರ್ಗದಲ್ಲಿ ಹುಟ್ಟಿದ ಬಸವಣ್ಣ ಅದೆಲ್ಲವನ್ನೂ ಧಿಕ್ಕರಿಸಿ ನೊಂದರವರ, ತುಳಿಯಲ್ಪಟ್ಟವರನ್ನ ಸಮಾಜದಲ್ಲಿ ಎದ್ದು ನಿಲ್ಲುವಂತೆ ಮಾಡುತ್ತಾರಲ್ಲ, ಮೇಲು ಕೀಳನ್ನು ತೊರೆದು ಎಲ್ಲರೂ ಶಿವಸ್ವರೂಪಿಗಳು ಅನ್ನೋ ವಿಚಾರ ತುಂಬುತ್ತಾರಲ್ಲ, ಸಾಮಾನ್ಯ ಮಾತ್ರರಿಂದ ಸಾಧ್ಯವಾಗದ ಪರಿವರ್ತನೆಯನ್ನು ಸಮಾಜಮುಖಿಯಾಗಿ, ಪ್ರಕೃತಿಮುಖಿಯಾಗಿ ತರುತ್ತಾರಲ್ಲಾ ಇದು ಬೆರಗು ಕಣ್ಣುಗಳಿಂದ ಅವರನ್ನು ಈಗಲೂ ನೋಡುವಂತೆ ಮಾಡುತ್ತದೆ.

ಹೌದು ಬಸವಣ್ಣರ ತತ್ವಗಳು ಪ್ರಕೃತಿಮುಖಿಯಾಗಿ ಇತ್ತು ಇದು ನನಗೆ ಬಸವಣ್ಣರ  ಬಗ್ಗೆ ತಿಳಿಯಲು ಪ್ರೇರೇಪಿಸಿದ ಬಹು ಮುಖ್ಯ ವಿಚಾರ.‘ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ’ಅಂತ ಬಸವಣ್ಣ ಹೇಳ್ತಾರೆ, ನೆಲವನ್ನು ನೆಲವಾಗಿ ನೋಡು ಅದರ ಬದಲು ದೇವರಾಗಿ ನೋಡಿದರೆ ಭಾವನಾತ್ಮಕವಾಗುತ್ತೇವೆ ಹೊರತಾಗಿ ಬದುಕಿಗೆ ಉತ್ತರವಾಗಲಾರದು,ಜಲವನ್ನು ಜಲವಾಗಿ ನೋಡಿದಾಗ ಅದರಲ್ಲಿ ಮಿಂದೆದ್ದರೆ ಪಾಪ ಕಳೆದು ಹೋಗುವದೆಂಬ ಭ್ರಾಂತಿ ಹುಟ್ಟಿ ಜಲ ಕಲುಷಿತ ಗೋಳ್ಳೋದನ್ನ ಬಸವಣ್ಣ ಸ್ಪಷ್ಟವಾಗಿ ತಿರಸ್ಕರಿಸಿದ್ದ.ಜಲವು ದೇವತೆಯಾದಾಗ ಜನ ಅದರೋಳಗೆ ಮುಳುಗಿ ಉಪಯೋಗಕ್ಕೆ ಬರದಂತೆ ಮಾಡುತ್ತಾರೆಂಬ ಆತಂಕ ಬಸವಣ್ಣನಲ್ಲಿತ್ತು.ಅಗ್ನಿಯು ದೇವತೆ ಅಂತ ತಿಳಿದಂದಿನಿಂದ ಯಜ್ಞ ಯಾಗಾದಿಗಳು ಮೊದಲುಗೊಂಡವು. ಮೂಲ ಅಗ್ನಿ ನಿರಾಕಾರ ಅನ್ನೋ ತತ್ವದಲ್ಲಿ ಅಗ್ನಿ ಉಪಾಸನೆ ಮೊದಲ್ಗೊಂಡರೂ ಕೂಡ ಬರಬರುತ್ತಾ ದುಂಡಾವರ್ತಿತನ ಪಡೆದು ಅರಣ್ಯ ನಾಶಕ್ಕೆ ನಾಂದಿ ಹಾಡಿತು.ವರ್ಷಗಟ್ಟಲೆ ನಡೆಯುತಿದ್ದ ಯಜ್ಞ ಯಾಗಾದಿಗಳಿಗೆ ಅದೆಷ್ಟೋ ಪ್ರಾಣಿ ಜೀವಸಂಕುಲವು ನಾಶ ಗೊಂಡದ್ದನ್ನ ತಿಳಿದ ಬಸವಣ್ಣ ವೈಧಿಕವಾಗಿ ಅಗ್ನಿ ಎಂದು ಕರೆಸಿಕೊಳ್ಳುತಿದ್ದ ಪದಕ್ಕೆ ಕಿಚ್ಚು ಎಂದು ಕರೆದರು, ಅದು ಹೀಗೆ.....

ಕಿಚ್ಚು ದೈವವೆಂದು ಹವಿಯನಿಕ್ಕುವ ಹಾರುವರ ಮನೆಯಲು

ಕಿಚ್ಚೆದ್ದು ಸುಡುವಾಗ

ಬಚ್ಚಲ ನೀರು, ಬೀದಿಯ ಧೂಳ ಹೊಯ್ದು

ಬೊಬ್ಬಿಟ್ಟೆಲ್ಲರ ಕರೆವರಯ್ಯಾ

ಕೂಡಲಸಂಗಮದೇವಾ

ಮನುಷ್ಯನ ಮನ ಮತ್ತು ದೇಹವನ್ನು ಶುಚಿಯಾಗಿ ಇಟ್ಟುಕೋ ಅನ್ನೋ ದೃಷ್ಟಿಕೋನದಲ್ಲಿ "ದೇಹವೆ ದೇಗುಲ ಶಿರವೆ ಹೊನ್ನ ಕಳಸ" ಅನ್ನೋದಲ್ಲದೆ ಆ ವಿಚಾರ ಸದಾ ಮನದಲ್ಲಿರುವಂತೆ ನೋಡಿಕೊಳ್ಳುವದಕ್ಕಾಗಿ ದೇವಾಲಯ ಗರ್ಭಗುಡಿಗೆ ಸೀಮಿತವಾಗಿದ್ದ ಲಿಂಗವನ್ನು ಪ್ರತಿ ಮನುಷ್ಯನಿಗೂ ನಿಲುಕಬೇಕೆಂಬ ಉದ್ದೇಶವ ಹೊಂದಿ ಕತ್ತಿಗೆ ಕಟ್ಟಿಕೊಳ್ಳುವ ಸಂಪ್ರದಾಯಕ್ಕೆ ನಾಂದಿ ಹಾಡಿದರು.ಯಾವ ವೈಧಿಕತೆಯು ಒಂದಷ್ಟು ವರ್ಗವನ್ನು ತುಳಿಸಲ್ಪಟ್ಟಿತ್ತೋ ಆ ವರ್ಗಕ್ಕೆ ಲಿಂಗಗಳನ್ನು ಕೊಟ್ಟು ಸ್ಥಾವರ ಸಂಸ್ಕೃತಿಯನ್ನು ಆ ಮೂಲಕ ಗುಡಿಗುಂಡಾರವನ್ನು ಸ್ಪಷ್ಟವಾಗಿ ನಿರಾಕರಿಸಿ ಸಮಾಜಮುಖಿಯಾಗಿ ನೊಂದವರನ್ನು ಮೇಲೆತ್ತುವ ಮಹತ್ತರ ಪಾತ್ರವನ್ನು ಕೈಗೊಂಡು ವೈಚಾರಿಕತೆಯನ್ನು ಸಮಾಜದಲ್ಲಿ ತುಂಬಿದ ಬಸವಣ್ಣ.ಬಡವರು ದೇವಾಲಯ ದೇವರ ಕಾರ್ಯದಲ್ಲೆ ತಮ್ಮ ಸಂಪಾದನೆಯನ್ನು ಹಾಳುಗೆಡವುತ್ತಾರೆ ಆ ಮೂಲಕ ಜೀವನವನ್ನು ಕಷ್ಟಕ್ಕೆ ದೂಕಿಕೊಳ್ಳುತ್ತಾರೆ ಎಂದರಿತ ಬಸವಣ್ಣ ದೇವರು ಏನನ್ನೂ ಬಯಸುವದಿಲ್ಲ "ಬರಿಯ ಪತ್ರೆಯ ತಂದು ಪೂಜಿಸು ಎನ್ನ ಕೂಡಲ ಸಂಗಮ ದೇವನ" ಎಂಬ ಕರೆಯ ನೀಡುತ್ತಾರೆ. ಇಂತಹ ಕಾರ್ಯಗಳಿಂದಲೆ ಬಸವಣ್ಣ ಇಂದಿಗೂ ಎಂದಿಗೂ ದಾರ್ಶನಿಕ.

ಬಸವಣ್ಣರ ಈ ತತ್ವಗಳನ್ನು ಅನುಸರಿಸುತ್ತಲೆ ಈ ವಿಚಾರಗಳ ಪ್ರಚುರಪಡಿಸಲು ಅನುಯಾಯಿಗಳು ಬಂದರು ಇವರೆ ಶಿವ ಶರಣರು, ಅವಾಗಾವಾಗ ಎಲ್ಲಾ ಸೇರಿ ಶಿವಾನುಭವ ಅನ್ನೋ ಗೋಷ್ಟಿಯನ್ನು ಮಾಡುತಿದ್ದರೂ ,ಪರಂಪರೆಯನ್ನು ಕುರಿತು, ಧರ್ಮವನ್ನು ಕುರಿತು, ದೇವರನ್ನು ಕುರಿತು, ತಮ್ಮ ಸುತ್ತಣ ಸಾಮಾಜಿಕ ಪರಿಸರವನ್ನು ಕುರಿತು, ಎಲ್ಲಕ್ಕೂ ಮಿಗಿಲಾಗಿ ತಮ್ಮನ್ನೇ ಕುರಿತು ವಸ್ತುನಿಷ್ಠವಾಗಿ ವಿಮರ್ಶೆ ನಿಷ್ಠುರವಾಗಿ ಮಾಡುತಿದ್ದರೂ, ಈ ಮೂಲಕ ವಿಮರ್ಶೆ ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ಆ ಮೂಲಕ ಸಮಾಜಮುಖಿಯಾಗಿ ಬೆಳೆಯಬೇಕಾದ ಶರಣ ಪರಂಪರೆ ಹಾದಿ ತಪ್ಪಬಾರದೆಂಬ ಮಹತ್ತರ ಕಾಳಾಜಿ ಹೊಂದಿದ್ದರು ಮತ್ತು ಆ ಮಾರ್ಗದಲ್ಲಿ ಸಫಲತೆಯನ್ನು ಪಡೆದರೂ, ಅದುಕ್ಕಾಗಿ ಇಂದಿಗೂ ಇದು ಉಳಕೊಂಡು ನಮಗೆ ಮಾರ್ಗದರ್ಶನವಾಗಿರೋದು.ಹಾಗಾದರೆ ಇಷ್ಟೆಲ್ಲಾ ವೈಚಾರಿಕತೆಯನ್ನು ತಂದಿತ್ತವರು ಪಂಡಿತರೋ ಖಂಡಿತಾ ಅಲ್ಲಾ ಇವರೆಲ್ಲಾ ಸಾಮಾನ್ಯರಲ್ಲಿ ಸಾಮಾನ್ಯರು ಗಂಡೆನ್ನದೆ ಹೆಣ್ಣೆನ್ನದೆ ಆ ಜಾತಿ ಈ ಜಾತಿಯೆನ್ನದೆ ಬಸವಣ್ಣನ ತತ್ವಗಳನ್ನು ನಾವೆಂತ ವೈಚಾರಿಕತೆಯನ್ನ ಹುಟ್ಟು ಹಾಕುತಿದ್ದೇವೆ ಅನ್ನೋದನ್ನೂ ಕೂಡ ಅರಿಯದೆ ವಚನ ಮೂಲಕ ಸಾಹಿತ್ಯಮೂಲಕ ಪ್ರಚುರಪಡಿಸಲು ನಿಂತವರು.ಹೀಗೆ ಬಸವಣ್ಣ ಹಾಗೂ ಶರಣರ ಬಗ್ಗೆ ಮುಗಿಯದಷ್ಟೂ ಬರೆಯಬಹುದಾದ ದಾರ್ಶನಿಕ ವಿಚಾರಗಳಿವೆ.

ಅಂದರೆ ಬಸವಣ್ಣನ ಕನಸುಗಳಲ್ಲಿ, ಆಚಾರದಲ್ಲಿ, ತತ್ವದಲ್ಲಿ ದೇವಾಲಯ(ಸ್ಥಾವರ)ಸ್ಪಷ್ಟ ನಿರಾಕರಣೆ ಇತ್ತು,ಜಾತೀಯತೆಗೆ ಆಸ್ಪದ ಇರಲಿಲ್ಲ ನೊಂದವರ ಮೇಲೆತ್ತುವದು ವ್ಯಕ್ತಿಗತವಾಗಿ ಪ್ರತಿಯೊಭ್ಬನೂ ಕೀಳರಿಮೆಯ ತೊಡೆದು ಸಮಾನರು ಎಂಭ ಸಮಾನತೆಯ ಭಾವನೆಯನ್ನ ತೋರಗೊಡುವದಾಗಿತ್ತು.ಇವೆಲ್ಲವನ್ನೂ ಸಾಧಿಸಲು ವಿಚಾರಗಳನ್ನು ಪ್ರಚುರಪಡಿಸಲು ವಚನಗಳು ಬಂದವು, ೧೫ ನೆ ಶತಮಾನದಲ್ಲಿ ಬಸವಣ್ಣನವರ ಹೆಸರಿನ ಮೇಲೆ ಮಠ ಮಾನ್ಯಗಳು ಹುಟ್ಟಿಕೊಂಡವು,ವಿರಕ್ತಿ ಮಠಗಳೆಂದು ಇವನ್ನು ಕರೆಯಲಾಯಿತು. ತದ ನಂತರ ಸಾಕಷ್ಟು ಮಠ ಮಾನ್ಯಗಳು ಹುಟ್ಟಿ ಸ್ಥಾವರಗಳಾಗಿ ಬೆಳೆದು ನಿಂತಿದೆ.ಬಸವ ಪೂರ್ವದ ಈ ಮಠ, ದೇವಾಲಯ ಸಂಸ್ಕತಿಯನ್ನ ಧಿಕ್ಕರಿಸಿ ಯಾವ ಮೂಲ ತಳಹದಿ ಮೇಲೆ ಶರಣ ಸಂಸ್ಕೃತಿ ಜನ್ಮ ತೆಳೆಯಿತು ಅದಕ್ಕೆ ಸಂಪೂರ್ಣ ಭಿನ್ನವಾಗಿ ಇವತ್ತು ಬಸವಣ್ಣರ ತತ್ವಗಳನ್ನೆ ಬಂಡವಾಳವಾಗಿಟ್ಟುಕೊಂಡು ಆ ಮೂಲಕ ಮಠ ಮಾನ್ಯ ಸ್ಥಾವರಗಳು ರೂಪುಗೊಂಡಿವೆ.ಬಸವಣ್ಣನವರು ಮೂಲತಃ ಜಂಗಮರು. ಜಂಗಮ ಪದದ ಅರ್ಥವೆ ಚಲನ ಶೀಲತೆ.ಅಂದರೆ ಯಾವುದೋ ಒಂದು ಸ್ಥಾವರಕ್ಕೆ ಕಟ್ಟು ಬಿದ್ದವರಲ್ಲಾ. ಬಸವಣ್ಣನವರೆ ಹೇಳಿದಂತೆ "ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!".ಮಠ ಮಾನ್ಯಗಳೂ ಮೂಲತಃ ಯಥಾಸ್ಥಿತಿ ಮತ್ತು ಸ್ವ ಅಭಿವೃದ್ದಿಯನ್ನು ಮಾತ್ರ ಗಮನಕೋಡುತ್ತವೆ, ಇದರಿಂದ ಯಾವ ಪರಿವರ್ಥನೆಯೂ ಅಗೋದನ್ನ ನಿರೀಕ್ಷಿಸುವದು ನಮ್ಮನ್ನು ನಾವೆ ಆತ್ಮವಂಚನೆಗೆ ದೂಕಿದಂತೆ. ಯಾವ ಜಾತಿಯತೆಯನ್ನು ತೊಡೆಯಲು ಬಸವಣ್ಣ ಶ್ರಮಿಸಿದ್ದರೋ ಅದೇ ತತ್ವವನ್ನು ಬಂಡವಾಳವನ್ನಾಗಿ ಮಾಡಿಕೊಂಡ ಮಂದಿ ಇವತ್ತು ಸ್ವಜಾತಿ ಪ್ರೇಮಿಗಳಾಗಿದ್ದಾರೆ.ಬಸವಣ್ಣ ತತ್ವಗಳನ್ನು ಪ್ರಚುರಪಡಿಸುತ್ತೇವೆ ನಮ್ಮದು ದೇವಾಲಯ ಅಲ್ಲ ಮಠ ನಾವು ಜಂಗಮರೆ ಈ ತೆರನಾದ ವಾದಗಳೂ ಕಂಡುಬರುತ್ತದೆ. ಆದರೆ ಈ ಕಾರ್ಯವನ್ನು ಮಾಡೋ ಮುಖ್ಯಸ್ಥ ಸ್ವಾಮಿಯೆಂಬ ಹಣೆಪಟ್ಟಿಯನ್ನ ಹಾಕಿಕೊಂಡಿರುತ್ತಾನೆ,ಸ್ವಾಮಿ ಪದದ ಅರ್ಥವೆ ಒಡೆಯ.ಬಸವ ತತ್ವಗಳ ಪರಿಪಾಲಿಸುವದೇ ಆಗಿದ್ದಲ್ಲಿ ಎಲ್ಲರೂ ಸಮಾನಾರು ಬರಿಯ ಮಾನವತೆಯತ್ತ ಅಷ್ಟೆ ಬೆಳಕು ಬೀರುವ ಬಸವಣ್ಣ ತತ್ವಕ್ಕೆ ಇದು ಸಂಪೂರ್ಣ ವಿರುದ್ದವಾದುದು.ಈ ಎಲ್ಲಾ ತರ್ಕಗಳಿಗೆ ಹೊರತಾಗಿ ಕೆಲವರೂ ಸಿಕ್ಕರೂ ಸಿಗಬಹುದು, ಆದರೆ ಇದು ಅಲ್ಲೊ ಇಲ್ಲೊ ಒಂದೊಂದು ಅಥವಾ ಇಲ್ಲಾ ಎಂಬುದಷ್ಟೆ ಉತ್ತರ.

ಬಸವಣ್ಣನವರ ಮೊದಲೆ ವೀರಶೈವ ಮತ ಇತ್ತು,ಶಿವ ಸಂಸ್ಕೃತಿಗೆ ವಾರಾಸುದಾರರೆಂದು ಹೇಳಿಕೊಳ್ಳುವವರ ಬಳಗ ಆಗಲೂ ಇತ್ತು. ಬಸವಣ್ಣ ಶಿವ ಸಂಸ್ಕೃತಿಯನ್ನ ಒಪ್ಪಿಕೊಂಡಿದ್ದವನಾಗಿದ್ದರೂ ಆ ಮೂಲಕ ನಡೆಯುತಿದ್ದ ವೈದಿಕತೆಗೆ ಸ್ಪಷ್ಟ ತಿರಸ್ಕಾರ ಅವರಲ್ಲಿತ್ತು.ಬಸವ ಪೂರ್ವ ಯುಗ ಹಾಗೂ ಬಸವ ಯುಗವನ್ನು ವೀಶ್ಲೇಷಿಸ ಹೊರಟರೆ ಅದು ಮತ್ತೋಂದು ಆಯಾಮವನ್ನು ತಂದುಕೊಡುತ್ತದೆ.ಸಂಕ್ಷಿಪ್ತವಾಗಿ ಹೇಳೋದಾದರೆ ಶಿವ ಹಾಗೂ ಲಿಂಗಕ್ಕಿರುವ ಸೂಕ್ಷ ಅಂತರವನ್ನು ಗೋಚರಿಸುತ್ತದೆ.ಲಿಂಗಧಾರಣೆ ಒಂದು ಸಾಮಾಜಿಕ ಚಳುವಳಿ ಆಗಿತ್ತು ಅನ್ನೋದನ್ನ ಗಮನಿಸದಿದ್ದರೆ ಈ ವಿಚಾರ ಕೂಡ ವೈಧಿಕತೆಯತ್ತಾ ವಾಲುತ್ತದೆ.ಪಂಚ ಪೀಠದ ಗುರುವರ್ಯಗಳೂ ಇವತ್ತೂ ಕೂಡ ಬಸವಣ್ಣರನ್ನ ಗುರುವಾಗಿ ಕಾಣುವದಿಲ್ಲ.ಬಸವಣ್ಣರನ್ನ ತಮ್ಮ ಶಿಷ್ಯರೆಂದೆ ವಾಸ್ತವಕ್ಕೆ ದೂರವಾದ ಮಾತನ್ನ ಆಡುತ್ತಾರೆ.ಅದೊಂದು ವೇಳೆ ನಿಜವೆ ಆಗಿದ್ದರೆ ಬಸವಣ್ಣ ಕಾಲಗಟ್ಟದಲ್ಲಿ ಪರ್ಯಾಯ ವೀರಶೈವ ಮತವನ್ನ ಹುಟ್ಟು ಹಾಕಿದರೂ ಅನ್ನುವದೇ ಸೂಕ್ತ. ಶಿವಸಂಸ್ಕೃತಿಯ ಕುರಿತಾಗಿ ಎಂ.ಜಿ.ನಾಗರಾಜ್ ಡಾ.ಜಚನಿ ಮುಂತಾದವರೂ ಬರೆದ ಪುಸ್ತಕಗಳಲ್ಲಿ ಹೆಚ್ಚಿನ ಮಾಹಿತಿಗಳೂ ಲಭ್ಯ. ಶಿವರಾತ್ರಿಯ ಈ ದಿನ ಬಸವಣ್ಣರ-ಶಿವ ಶರಣರ ಒಂದಿಷ್ಟು ವಿಚಾರಗಳು ತಿಳಿಯುತ್ತಾ ವೈಚಾರಿಕತೆಯತ್ತಾ ಒಲವು ತೋರುತ್ತಾ ಹಬ್ಬನಾ ಆಚರಿಸೋದು ಸೂಕ್ತವೆಂಬ ನಿಟ್ಟಿನಲ್ಲಿ ಈ ವಿಷಯಗಳನ್ನ ಪ್ರಸ್ತಾಪಿಸಿದೆ. ಎಂದೆಂದಿಗೂ ಎಲ್ಲಾ ಕಾಲಘಟ್ಟದಲ್ಲೂ ದಾರಿ ತೋರುವ ಮಾನವತೆಯನ್ನ ಎತ್ತಿ ತೋರಿಸುವ ಶರಣ ತತ್ವಗಳೂ ನಮಗೆ ಲಭಿಸಲಿ ಅನ್ನೋ ಆಶಯ ನನ್ನದು.


ಚಿತ್ರ ಕೃಪೆ:-karavenalnudi.blogspot.com
( ಕೆಲ ಮಾಹಿತಿ ಒದಗಿಸಿದ ಗುರುಸಮಾನ ದಿ ನೂ ಸ ಚಂ ಅವರಿಗೂ ವಂದನೆಗಳೂ)

Sunday, February 19, 2012

ಹಾಸ್ಯಪ್ರಜ್ಞೆ



ಯಾಕೋ ಮೂಗ ತುದಿ ಕೆಂಪು,ಹಿಂಗೆ ಮಾಡ್ಬೇಡ್ವೋ ನನ್ನ ಕರುಳು ಕಿತ್ತು ಬರುತ್ತೆ ಅದಕ್ಕೆ ನಿನ್ನ ಹೆಸರ ಟ್ಯಾಗ್ ಪಟ ಬರೆದು ಹಾರ ಮಾಡಿ ಕುತ್ತಿಗೆಗೆ ಹಾಕೋಂಡು ಒಡಾಡ್ತೀನಿ ನೋಡು.ಅಷ್ಟಕ್ಕೂ ನಾನೆನಂದೆ? ಊರೂರು ಸುತ್ತೋದು ಬೇಡ, ಒಂದು ಕೆಲಸ ಹಿಡಿ. ಬಂದಿದ್ದೆಲ್ಲ ಅವಕಾಶನ ಕೈ ಚೆಲ್ಲಬೇಡ? ಇವತ್ತೇನೋ ನಡಿಯುತ್ತೆ ಮುಂದೆ ಹೆಂಗೆ? ನೀ ಹಿಂಗೆ ಆಡ್ತಾ ಇದ್ದರೆ ಬಾಲ ಸುಟ್ಟ ಬೆಕ್ಕಿನಂತೆ ರಪ್ಪನೆ ಓಡೋಗಿ ಗವ್ವನೆ ನಿನ್ ಸಹವಾಸನೆ ಬೇಡ ಅಂತ ಕೂರ್ತೀನಿ, ಆಗಲೂ ಹಾಳಾಗೋದು ನೀನೆ. ಒಸಿ ವಿಚಾರ ಮಾಡಪ್ಪ ಕತ್ತೆ ವಯಸ್ಸಾದರು ಬುದ್ದಿ ಹೇಳಿಸಿಕೊಬಾರದು, ನಮ್ದೇನೋ ಛಾಳಿ ಹೇಳ್ತಿವಿ ನೋಟೀಸ್ ಇಲ್ಲದೆ ಹಾಜರಾಗ್ತಿವಿ ಕಾರಣ ಇಷ್ಟೆನಲೆ ಏನೋ ನಿನ್ ಮೇಲೆ ಪಿರುತಿ ನೀನ್ ಓಳ್ಳೆದಾಗಿ ನಿನ್ನ ಚಂದದ ದಿನಗಳ ನೋಡೋ ಆಸೆ. ನಾವೇನೋ ಹೇಳೋಣ ಅಂತ ಬಂದ್ರೆ ಹಿಂಗೆ ಮೂಖ ಸಿಂಡರಿಸಿ ಕೂತರೆ ಹೆಂಗೆ? ಏಳು ನಾಳೆಗೆ ಅದಾವೊದೊ ಇಂಟರವ್ಯೂ ಇದೆಯಂದೆಯಲ್ಲ ಜಾಣ ಮರಿಯಂತೆ ರೆಡಿಯಾಗಿ ಹೋಗಿ ಕೆಲಸ ಗಿಟ್ಟಿಸಿಕೋ ಮೋಜು ಮಸ್ತಿಯೆಲ್ಲ ಆಮೇಲೆನೂ ಮಾಡ್ಕೋ ಬಹುದು. ಒಬ್ಬ ಪಾಲಿಗೆ ಬಂದ ಕೆಲಸವನ್ನೆಲ್ಲಾ ಕೈ ಚೆಲ್ಲುತ್ತಾ ಬುದ್ದಿ ಹೇಳೋರ ಮೇಲೆಲ್ಲಾ ಬಿಸಿ ರಕ್ತದ ದರ್ಪ ತೋರಿಸೋ ಯುವಕನಿಗೆ ಈ ತೆರನಾಗಿ ತಿಳಿ ಹೇಳುತ್ತಾ ಹೋದರೆ ಒಂದಷ್ಟು ಪರಿಣಾಮ ಖಂಡಿತಾ ಆಗಬಹುದು.ಒಂದು ನಸುನಗೆಯೊಂದಿಗೆ ಸಲಹೆ ಒಪ್ಪಿಕೊಳ್ಳೋ ಸಂದರ್ಭಗಳೆ ಹೆಚ್ಚು. ತಿಳಿ ಹೇಳುವದರಲ್ಲೂ ನವಿರಾದ ಹಾಸ್ಯ ಪ್ರಜ್ಞೆ ಮೆರೆದಿದ್ದು ಈ ಮಾತುಗಳನ್ನು ಆ ಯುವಕ ಒಪ್ಪಿಸಿಕೋಳ್ಳೊದಕ್ಕೆ ಕಾರಣ

ಕಿಕ್ಕಿರದ ಟ್ರಾಪಿಕ್ ನಲ್ಲಿ ಮನೆ ಸೇರೋ ಧಾವಂತ ,ಆಫೀಸು ಸೇರೋ ಧಾವಂತದೊಂದಿಗೆ ಬೈಕೇರಿ ಹೊರಟಿರುತ್ತೇವೆ,ಅದಾವೋದೋ ಸಿಗ್ನಲ್ ನಲ್ಲಿ ಬೈಕ ಮಿರರ್ ಇನ್ನಾವುದೋ ವಾಹನಕ್ಕೆ ತರಚುತ್ತದೆ. ಸಹಜವಾಗಿ ಆ ವಾಹನದವ ಗಂಭೀರನಾಗಿ ನಿಮ್ಮತ್ತ ಪ್ರಶ್ನೆಗಳೆನ್ನೆಸೆಯುವ ಮುಂದೆನೆ ಮುಗುಳ್ನಗೆಯೊಂದಿಗೆ ಒಂದು ಸಾರಿ ಅಂದುಬಿಡೋಣ, ಸಣ್ಣದಾದಾ ಆ ವಿಷಯವನ್ನು ಆತನೂ ಅಷ್ಟೆ ಸಣ್ಣದಾಗಿ ಸ್ವೀಕರಿಸಿ ನಸು ನಕ್ಕು ಐಟ್ಸ್ ಓಕೆ ಅನ್ನೋ ಸಂದರ್ಭನೆ ಹೆಚ್ಚು. ಇಲ್ಲಿ ಸಾರಿ ಪದಕ್ಕಿಂತಲೂ ಹೆಚ್ಚು ಕೆಲಸ ಮಾಡೋದು ಆ ಪದದೋಂದಿಗೆನೆ ನಸು ನಗೆ. ಅದೆ ಅದೆಷ್ಟೋ ನಾವು ಹೇಳಬೇಕಾದ ಮಾತುಗಳನ್ನು ಎದುರಿಗಿದ್ದವನಿಗೆ ಅರುಹಿ ಬಿಡುತ್ತದೆ.ಅದು ಬಿಟ್ಟು ನಮ್ಮ ಒತ್ತಡವನ್ನು ಸಿಟ್ಟಿನ ಕೈಗೆ ಕೊಟ್ಟು ಅನಾವಶ್ಯಕವಾಗಿ ಜಗಳ ಕಾಯೋಕೆ ನಿಂತರೆ ಅದೇ ಸಮಸ್ಯೆ ದೊಡ್ಡದಾಗಿ ನಮ್ಮ ಕೆಲಸಗಳೀಗೂ ವಿಳಂಬ, ಇತರರೀಗೂ ಕಿರಿ ಕಿರಿ, ಅವರದೊಂದಿಷ್ಟು ಶಾಪಗಳ ಸುರಿಮಳೆ ಹೆಗಲೇರಿಸಿಕೊಳ್ಳೋದು ಅನಿವಾರ್ಯ.ಹೀಗೆ ಪ್ರತಿ ಸಂದರ್ಭದಲ್ಲೂ ನಮ್ಮೋಳಗಿನ ಹಾಸ್ಯ ಪ್ರಜ್ಞೆ ಅದೆಷ್ಟೋ ರೀತಿಯಲ್ಲಿ ನಮ್ಮ ಕೈ ಹಿಡಿದು ಸಾಗುತ್ತೆ. ಆ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿರಬೇಕಷ್ಟೆ.

ಸುಲಭವಾಗಿ ನಾಲ್ಕು ಹಾಸ್ಯ ಸಾಲುಗಳನ್ನ ಗೀಚಿಬಿಡಬಹುದು,ಹಾಸ್ಯ ಗೋಷ್ಠಿಗಳಿಗೋಗಿ ನಕ್ಕೆದ್ದು ಬರಬಹುದು,ಗೆಳೆಯರೊಡನೆ ಕೂತು ಹಾಸ್ಯ ಚಟಾಕಿಯನ್ನೂ ಹೇಳಬಹುದು ಆದರೆ ನಿಜವಾಗಿಯೂ ಹಾಸ್ಯ ಪ್ರಜ್ಞೆ ಜಾಗೃತವಾಗಿ ಸದಾ ಕಾಲ ಮೈತುಂಬಿಕೊಳ್ಳೋದು ಕಷ್ಟ.ಇದು ರೂಢಿಯಿಂದ ಬರಬೇಕಾದ್ದು.ಒಂದು ಸೀರಿಯಸ್ ವಿಚಾರವನ್ನ ಹಾಸ್ಯದ ಲೇಪನ ಕೊಟ್ಟು ಯಾವುದೇ ರೀತಿಯ ವ್ಯಂಗ್ಯಕ್ಕೆ ಅವಕಾಶ ಇಲ್ಲದಂತೆ, ಮನಮುಟ್ಟುವಂತೆ ಹೇಳೋಕೆ ಸಾಧ್ಯನಾ? ಸಾಧ್ಯ ಆದರೆ ಬಹಳ ಮಂದಿಗೆ ಕಷ್ಟ.ಕಾರಣ ಇಷ್ಟೆ ನಮ್ಮೋಳಗಿನ ಹಾಸ್ಯಪ್ರಜ್ಞೆ ಇನ್ನೂ ಜಾಗೃತವಾಗಿಲ್ಲ, ಪ್ರತಿಯೊಂದರಲ್ಲೂ ಹಾಸ್ಯವಿದೆ ಅನ್ನೋದು ಅದನ್ನ ಗ್ರಹಿಸೋದಕ್ಕೆ ನಮ್ಮ ಒತ್ತಡಗಳು ನಮಗೆ ಅವಕಾಶವ ಕೊಟ್ಟಿಲ್ಲ ಅನ್ನೋದೆ ಸರಿ. 

ಅಪಧಮನಿ ಆಭಿಧಮನಿ ಎಲ್ಲೆಲ್ಲೋ ಹರಿಯೋ ರಕ್ತ,ನಮ್ಮೆಲ್ಲರ ಮೈತುಂಬಾ ಇದೆ. ಸುಮ್ಮನೆ ಹಳೆ ರಕ್ತ ಹರಿದು ಹೋಗೋ ತನಕ ನಮ್ಮ ದೇಹದ ರಕ್ತ ಉತ್ಪಾದನಾ ಕೇಂದ್ರವೂ ಸ್ಥಬ್ದವಾಗಿ ಕೆಲಸ ನಿಲ್ಲಿಸಿದೆ. ಆ ಯಂತ್ರಾಗಾರ ಅದೆಲ್ಲಿ ತುಕ್ಕು ಹಿಡಿದು ಹಾಳೋಗುತ್ತೋ ಅನ್ನೋ ಭಯದಲ್ಲಿ ಕುಯ್ಕೊಂಡು ರಕ್ತ ಹರಿಬಿಡಬೇಡಿ, ಸುಮ್ಮನೆ ವೇಷ್ಟ್.ಅದರ ಬದಲು ನಾಡಿದ್ದು ಇಲ್ಲೆ ಊರ ಬಯಲಲ್ಲಿ ದೊಡ್ಡಾಸ್ಪತ್ರೆಯವರು ಬಂದು ರಕ್ತದಾನ ಶಿಬಿರ ಮಾಡ್ತಾವ್ರೆ, ನಿಮ್ಮಲ್ಲಿ ಮಡುಗಟ್ಟಿ ಹಳೆಯದಾದ ರಕ್ತ ಇನ್ಯಾವುದೋ ಜೀವಕ್ಕೆ ಹೊಸಾದಾಗಿ ಸೇರಲಿ, ಬನ್ನಿ ರಕ್ತ ಕೊಡಿ, ನಿಮ್ಮ ಯಂತ್ರಾಗಾರಕ್ಕೆ ಕೆಲಸ ಕೊಡಿ. 

ರಕ್ತದಾನ ಶಿಬಿರಕ್ಕೆ ಹಿಂಗೊಂದು ಜಾಹಿರಾತು ಕೊಟ್ಟರೆ ಹೇಗಿರುತ್ತೆ? ಇಲ್ಲಿ ಎಲ್ಲೆಲ್ಲೂ ಮೂಲ ಕ್ರಿಯೆಗೆ ಅಭಾಸವಾಗಿಲ್ಲ ವ್ಯಂಗ್ಯವೂ ಬೆರೆತಿಲ್ಲ, ನಿಮ್ಮ ಕಳಕಳಿ ಸುಲಭವಾಗಿ ಜನದ ಮನ ಮುಟ್ಟುತ್ತದೆ ಅಂತಾದರೆ ಈ ಸಾಲುಗಳಿಲ್ಲುರುವ ಹಾಸ್ಯಪ್ರಜ್ಞೆಯೆ ಕಾರಣ.ಸುಮ್ಮನೆ ಒಂದು ಸ್ಯಾಂಪಲ್ ತೋರಗೊಡವಿದೆನಷ್ಟೆ.ಹಾಸ್ಯ ಪ್ರಜ್ಞೆಯೊಂದಿಗೆ ಇನ್ನಷ್ಟು ಅದ್ಬುತವಾಗಿ ಬಹಳಷ್ಟು ಸಂದರ್ಭಗಳಲ್ಲಿ ನಮ್ಮ ಕಳಕಳಿಗಳನ್ನು ತೋರಗೊಡಬಹುದಾದ ಸಾದ್ಯತೆಗಳಿವೆ.ಒತ್ತಡದ ಜೀವನದಲ್ಲಿ ಒಂದಷ್ಟು ರಿಲೀಫ್ ಗಳನ್ನು ಕಂಡುಕೊಳ್ಳಬಹುದು.ಸಾಂಧರ್ಬಿಕವಾಗಿ ಯಾರಿಗೂ ನೋವಾಗದಂತೆ ಹಾಸ್ಯಪ್ರಜ್ಞೆಯನ್ನು ಮೆರೆಯುತ್ತಿರೋಣ. ಇದರಲ್ಲಿ ಕಳಕೋಳ್ಳುವಂತದ್ದು ಎಳ್ಳಷ್ಟು ಇಲ್ಲವೆಂದಾದ ಮೇಲೆ ಪ್ರಯತ್ನ ಪಡಬಾರದೇಕೆ?

ನಾವು ನಗೋದು ಸತ್ಯ ಅಂತಾದಮೇಲೆ ನಮ್ಮಲ್ಲಿ ಹಾಸ್ಯಪ್ರಜ್ಞೆ ಇರೋದು ಸತ್ಯ.ಅದಾಕೋ ಏನೋ ಬಾಲ್ಯ ಕಳೆದಂತೆ ವಯಸ್ಸು ಅರೋಹಣವಾದಂತೆ ಈ ಪ್ರಜ್ಞೆ ನಮ್ಮೊಳಗೆ ಮುಸುಕಾಗುತ್ತಾ ಸಾಗುತ್ತೆ.ದಿನ ಕಳೆದಂತೆ ಚಿಂತೆಯ ಗೂಡು ಆ ಜಾಗವ ಆಕ್ರಮಿಸಿಕೊಳ್ಳುತ್ತೆ, ಆವೆ ಹೆಮ್ಮರವಾಗಿ ಖಿನ್ನತೆಗೆ ದಾರಿ ಮಾಡುತ್ತೆ. ಮನುಷ್ಯ ತೋರಿಕೆಗಲ್ಲದೆ ಮನತುಂಬಾ ನಗುತ್ತಿರಬೇಕು, ಅದು ಆತನ ಜೀವಂತಿಕೆಯ ಸಂಕೇತ.ನಗುವಿನಿಂದಾಗಿ ಅದೆಷ್ಟೋ ಕಷ್ಟಗಳೂ ಗೌಣವಾಗಿ ಕಾಣುತ್ತೆ ಅದೇ ಭಾರವಾಗಿ ಕಾಣಿಸುವ ಬದಲಾಗಿ ಅದನ್ನು ಪರಿಹರಿಸಿವಲ್ಲಿ ಮಹತ್ತರ ಕೊಡುಗೆಯನ್ನು ನೀಡುತ್ತೆ. ನಗುವು ನಮ್ಮೆಲ್ಲರೊಂದಿಗೆ ಸದಾ ಇದ್ದು ದುಗುಡವೆಲ್ಲವ ದೂರವಾಗಿಸುವದಕ್ಕೆ ನಮ್ಮೊಳಗಿರುವ ಹಾಸ್ಯಪ್ರಜ್ಞೆ ಅನುಕ್ಷಣ ಜಾಗೃತವಾಗಿರಲಿ ಅನ್ನೋದು ನನ್ನ ಆಶಯ.ನೀವೇನಂತಿರೋ?

ಉತ್ಸಾಹ ಚಿರನೂತನವಾಗಿರಲಿ!!!!


ಅದ್ಯಾವುದೋ ಹೊತ್ತಲ್ಲದ ಹೊತ್ತಲ್ಲಿ ಒಂದು ಕಾಲ್ ಬರುತ್ತೆ ಹಾಸಿಗೆಯಲ್ಲಿ ಬಿದ್ದುಕೊಂಡವರೆದ್ದು ಮನಸಲ್ಲೆ ಶಪಿಸುತ್ತಾ ಕಿರುಚಾಡೋ ಮೊಬೈಲೆತ್ತಿ ನೋಡುತ್ತೇವೆ,ನಾವಾಗೆ ಅದೇನೋ ಅಡ್ಡ ಹೆಸರಿತ್ತ ಗೆಳೆಯನ ಹೆಸರು ಕಾಣಿಸುತ್ತೆ,ಅಷ್ಟೆ ದಿಗ್ಗನೆದ್ದು ನಸುನಗೆಯಿಂದ ಕಾಲ್ ರಿಸೀವ್ ಮಾಡಿ ಹರಟೆಗೆ ಸಿದ್ದಗೊಳ್ಳುತ್ತೇವೆ,ಸಮಯದ ಅರಿವ ಕಡೆ ತಲೆಕೆಡಿಸಿಕೊಳ್ಳದೆ. ಹಾಗಾದರೆ ಸುಸ್ತೆಂದು ಮಲಗಿದ್ದ ದೇಹದಲ್ಲಿ ಅದೆಂಗೆ ಒಂದು ಸಣ್ಣ ಸನ್ನಿವೇಷ ಮಿಂಚ ಹರಿಸಿತು? ನಮ್ಮೊಳಗೆ ಇದ್ದ ಉಲ್ಲಾಸ ಎಲ್ಲಿ ಮರೆಯಾಗಿತ್ತು?

ಅದ್ಯಾವುದೋ ಒಂದು ದಿನ ನಮಗೆ ಗೊತ್ತಿಲ್ಲದೆ ನಾವು ಮಾಡೋ ಕೆಲಸದಲ್ಲಿ ಮೊದಲಿದ್ದ ಆಸಕ್ತಿ ಮರೆಯಾದುದನ್ನು ಗಮನಿಸಿ ಬಾಸ್ ಕರೆದು ವಾರ್ನ್ ಮಾಡಿದ ಮರುದಿನದಿಂದ ಭಯಕ್ಕೇನೋ ಎಂಬಂತೆ ಕೆಲಸಕ್ಕೆ ಮುಂಚಿನಂತೆ ಮರಳುವದು ಆಭ್ಯಾಸವಾಗಿ ಮೊದಲಿನಂತೆ ಸುಲಭದಲ್ಲಿ ಕೆಲಸಕ್ಕೆ ಜಾರಿಕೊಳ್ಳುತ್ತೇವಲ್ಲಾ ಅವಾಗ ಮತ್ತೆ ಪ್ರಶ್ನೆ ಕಾಡುತ್ತೆ ನಮ್ಮಲ್ಲಿ ಸಾಮರ್ಥ್ಯವಿದ್ದರೂ ನಮ್ಮನ್ಯಾಕೆ ಈ ಜಾಡ್ಯತೆ ಇಷ್ಟು ದಿನ ಕಾಡಿತ್ತು? ನಮ್ಮೊಳಗೆ ಇದ್ದ ಉಲ್ಲಾಸ ಎಲ್ಲಿ ಮರೆಯಾಗಿತ್ತು?

ಬರವಣಿಗೆ ಬಗ್ಗೆ ಆಸಕ್ತಿನೆ ಕಳಕೊಂಡು ಏನೊಂದು ಬರೆಯುವದೆ ತಿಳಿಯದೆ ಮಂಕಾಗಿ ಕುಳಿತಿರಬೇಕಾದರೆ  ಚೆಂದಕೆ ಬರೀತಿದ್ದೀಯೋ ಅದಾಕೆ ಬರೀತಿಲ್ಲ?ಬಹಳ ದಿವಸ ಆಯ್ತು ನಿನ್ ಬರವಣಿಗೆ ನೋಡಿ ಅದೇನಾದರೂ ಸರಿ ನಿನ್ ಮಾತಲ್ಲೆ ಹೇಳೋದಾದರೆ ನೀನ್ ಗೀಚೋದ ನಿಲ್ಲಿಸ್ಬೇಡ ಅನ್ನೋ ಹಿತವರ ಹಿತ ನುಡಿ ಮತ್ತೋಂದು ಬರಹಕ್ಕೆ ನಾಂದಿಯಾಗಿ ಲೇಖನದ ರೂಪ ಪಡೆಯಲು ಪ್ರೇರೆಪಿಸಿದಲ್ಲಿ ಮತ್ತದೆ ಪ್ರಶ್ನೆ ನಾನ್ಯಕೆ ಇಷ್ಟು ದಿನ ಬರೆಯಲು ಸಾದ್ಯವಾಗಿಲ್ಲ? ನನ್ನೊಳಗೆ ಇದ್ದ ಉಲ್ಲಾಸ ಎಲ್ಲಿ ಮರೆಯಾಗಿತ್ತು?
ಮೇಲಿನವು ಕೆಲವೊಂದು ಉದಾಹರಣೆಗಳಷ್ಟೆ ಇಂಥವೂ ಪಟ್ಟಿ ಮಾಡಕ್ಕೆ ಕುಂತರೆ ಬಹಳಷ್ಟು ಸಿಗುತ್ತವೆ……..ಇರಲಿ ನನ್ನ ತೃಣ ಅನುಭವಕ್ಕೆ ನಿಲುಕಿದಂತೆ  ನಮಗರಿವೆ ಇಲ್ಲದೆ ಅದ್ಯಾವುದೋ ಜಾಡ್ಯತೆ ಮಂಕು ಅವಾಗಾವಾಗ ಸಹಜವಾಗಿ ನಮ್ಮೆಲ್ಲರನ್ನೂ ಆವರಿಸುತ್ತಿರುತ್ತದೆ,ಹೀಗಿರಬೇಕಾದರೆ ಮನದ ಆಪ್ಯಾಯಮಾನತೆಗೆ ಪಾತ್ರರಾದವರ ಮಾತುಗಳು,ಸಣ್ಣ ಎಚ್ಚರಿಕೆಗಳೂ ನಮ್ಮ ಜೀವಂತಿಕೆಯ ಹಾದಿಗೆ ಗುಟುಕು ಟಾನಿಕ್ ಆಗುತ್ತದೆಯಲ್ಲಾ, ಎಲ್ಲಕ್ಕಿಂತಲೂ ಮುಖ್ಯವಾಗಿ ಪ್ರತಿ ಸನ್ನಿವೇಶಗಳನ್ನೂ ಗ್ರಹಿಸುವ ಗುಣ ನಮ್ಮಲ್ಲಿ ಒಡಮೂಡಿದಾಗ ನಮ್ಮೋಳಗೆ ಅಡಗಿ ಕೂತಿರುವ ಉಲ್ಲಾಸವ ಮರಳಿ ಹಾದಿಗೆ ತರಲು ಸಹಕಾರಿಯಾಗೋದರ ಪರಿಯನ್ನು ನೋಡಿ ಬೆರಗುಗೊಳ್ಳುತ್ತಿರುತ್ತೇನೆ.

ಓಮ್ಮೆ ಪೋನಾಯಿಸಿ ಅಮ್ಮ, ಅಪ್ಪನಲ್ಲಿ ಮಾತಾಡೋಣ, ಬಹಳ ದಿನಗಳಾಯಿತು, ಆ ಗೆಳೆಯನಿಗೆ ಪೋನಾಯಿಸಿ ಈ ಗೆಳತಿಯೋಡ ಮಾತಾಡಿ ಈ ತೆರನಾದ ಮನದ ಹಂಬಲಿಕೆಗಳು ಬಂದಾಗ ಎಲ್ಲವ ಮರೆತು ಮೊದಲು ಮನ  ಒಪ್ಪಿಸುತ್ತಿರುವ ಕಾರ್ಯವ ಮುಗಿಸೋದಕ್ಕೆ ಆಸಕ್ತಿ ಹಾಗೂ ಉಲ್ಲಾಸ ತೋರುತ್ತೇವಲ್ಲಾ?ಅತ್ತಲಿಂದ ಸಂತೋಷವಾಯಿತು ಎಂದಾಗ ನಾವು ಸಂತೋಷ ಪಡುತ್ತೇವಲ್ಲ? ಈ ತೆರನಾದ  ರೀತಿಯಲ್ಲೂ ಮನಸ್ಸು ಜೀವಂತಿಕೆಗೆ ಉಲ್ಲಾಸ ತುಂಬುವದನ್ನೂ ಸಂತಸದಿಂದಲೆ ನಮ್ಮದಾಗಿಸಿಕೋಳ್ಳೊದರಲ್ಲೂ ಬಹಳ ಮುದವಿದೆಯಲ್ಲವೆ?ತುಂಬು ಕುಟುಂಬವಾಗಿದ್ದರೆ ಬಹುಷಃ ಇದು ಅನ್ವಯಿಸುವದಿಲ್ಲವೇನೋ? ಉದ್ಯೋಗ ಭಾರಕ್ಕಾಗಿ ಒಂಟಿಯಾಗಿ  ದೂರ ನೆಲೆ ನಿಂತಾದಾವಾಗ ಅಮ್ಮ ಅಪ್ಪ ಕಾಡೋದು ಸಹಜ ಅನ್ನೋವಲ್ಲಿಗೆ ಪೋನಾಯಿಸಿ ಮಾತಾಡೋ ಮಾತು ಸೀಮಿತ.ಅದೇನೆ ಇರಬಹುದು ಒಂದಂತು ಸ್ಪಷ್ಟ ನಾವು ಅದೆಷ್ಟೋ ಕಾರ್ಯಗಳನ್ನ ಮನಸ್ಸ ಸಮ್ಮತಿಯಿಲ್ಲದೆ ಅಥವಾ ಸಮ್ಮತಿ ಇದ್ದಾಗಿಯೂ ಏಕಾನಥೆಯಿಂದಾಗಿಯೋ ಏನೋ ಒಂದು ತರದ ಜಾಡ್ಯತೆಯನ್ನ ಬರಮಾಡಿಕೊಳ್ಳುತ್ತೇವೆ.ಇದು ಅದಾಗೆ ಬರುತ್ತೆ , ಅದಾಗೆ ಹೋಗುತ್ತೆ ಆದರೂ ಇದನ್ನ ಗುರುತಿಸೋದು, ಆತ್ಮೀಯರೆನ್ನಿಸಿಕೊಡವರ ಸಲಹೆಗಳನ್ನ ಸ್ವೀಕರಿಸುವ, ನಮ್ಮೊಳಗೆ ಇರುವ ನನ್ನ ಸುತ್ತಲೆ ಇರುವ ಸಂತೋಷಗಳು ಮರೆಯಾಗಿದ್ದೇಕೆ? ಅನ್ನುವ ಸಣ್ಣ ಅವಲೋಕನಗಳು ನಮ್ಮಲ್ಲೆ ನಡೆಸುವದು ನಮ್ಮನ್ನ ನಾವು ಚಟುವಟಿಕೆಯಲ್ಲಿ ಉಲ್ಲಾಸದಲ್ಲಿರುವಂತೆ ಮಾಡುವಲ್ಲಿ ನೆರವಾಗುತ್ತೆ.

ಅವನ್ಯಾಕೋ ನನ್ನನ್ನ ಕಿಂಡಲ್ ಮಾಡಿದ,ಇವನ್ಯಾಕೋ ಹೀಯಾಳಿಸಿದ ,ಆಕೆ ಹರ್ಟ್ ಮಾಡಿದಳು ಈ ತೆರನಾದ ನೆಗೆಟಿವ್ ಅಂಶಗಳನ್ನು ಮನಸ್ಸು ಬೇಗ ಸ್ವೀಕರಿಸಿಬಿಟ್ಟು ಅದಕ್ಕಾಗೆ ಮನದಲ್ಲಿ ಕಪಾಟು ರೂಪಿಸಿ ಸ್ಟೋರ್ ಮಾಡಿಟ್ಟುಕೊಂಡು ನಮ್ಮೊಳಗಿನ ಉಲ್ಲಾಸವನ್ನು ಕುಗ್ಗಿಸಹೊರಡುತ್ತದೆ.ಈ ನೆಗೆಟಿವ್ ಅಂಶ ಹಾಗು ಕಪಿ ಮನಸ್ಸಿನ ವೈಯಾರದಲ್ಲಿ ಸಣ್ಣ ಸಣ್ಣ ವಿಷಯಗಳಲ್ಲೂ ದಿನಾವೂ ಸಿಗುವ ಸಂತೋಷಗಳನ್ನು ಗುರುತಿಸಿ ನಮ್ಮದಾಗಿಸುವಲ್ಲಿ ಎಡವುತ್ತೇವೆ. ಹಾಗಾಗದಿರಲಿ ನಮ್ಮೋಳಗಿನ ಚೈತನ್ಯವು ಭಾಡದಿರಲಿ,ನಮ್ಮ ವ್ಯಕ್ತಿತ್ವವನ್ನು ಚೆಂದವಾಗಿ ಮುನ್ನಡೆಸುತ್ತಾ ಬಂದಲ್ಲಿ ನಮ್ಮನ್ನು ಅರ್ಥೈಸಿಕೊಳ್ಳೋ ಒಂದು ಬಳಗ ನಮ್ಮ ಜೊತೆನೆ ಬೆಳೆದು ಬಂದಿರುತ್ತೆ, ನಮ್ಮ ದುಗುಡ ನಮ್ಮ ಚಟುವಟಿಕೆಯಲ್ಲಿನ ಸಣ್ಣಗಿನ ಏರು ಪೇರನ್ನೂ ಕೂಡ ಗುರುತಿಸಿ(ನಮ್ಮ ಅರಿವಿಗೆ ಬಾರದಿದ್ದರೂ ಕೂಡ)ಆ ಬಗ್ಗೆ ಎಚ್ಚರಿಸಬಲ್ಲುದು ಈ ಬಳಗ. ಅಂಥಹ ವ್ಯಕ್ತಿತ್ವ ಮತ್ತು ಆ ತೆರನಾದ ಬಳಗ ನಮ್ಮೋಂದಿಗಿರಲಿ. ನಮ್ಮೋಳಗಿನ ಉತ್ಸಾಹ ಚಿರನೂತನವಾಗಿರಲಿ.

ಏನೋಪ್ಪ ಬಹಳ ಮಾತಾಡಕ್ಕೆ ಹಿಡಿದ ಇತ್ತೀಚೆಗೆ ಇವ ಅನ್ನೋ ಸಣ್ಣ ಆತ್ಮೀಯ ಗದರಿಕೆಯೆ ನಿಮ್ಮಿಂದಾ? ಚೆಂದಕೆ ಸ್ವಿಕರಿಸುತ್ತೀನಿ,ಇದೇ ಆತ್ಮೀಯತೆ ಮತ್ತಷ್ಟು ಇರಲಿ ಅನ್ನೋ ಆಸೆಯೊಂದಿಗೆ ಈ ವಿಚಾರದ ಬಗ್ಗೆ ಸಾಕಷ್ಟು ಹೇಳಬಹುದಾಗಿದ್ದರೂ ಕೂಡ ಸಂಕ್ಷಿಪ್ತವಾಗಿ ಹೇಳಿ ನನ್ನ ಕೊರೆತಕ್ಕೆ ಪುಲಿಸ್ಟಾಪ್ ಇಡುತಿದ್ದೇನೆ. ಕೊರೆಸಿಕೊಂಡಿದ್ದಕ್ಕೆ ವಂದನೆಗಳೂ J J.ಮತ್ತೆ ಸಿಗುವೆ ಇನ್ನಷ್ಟು ಕಾಟ ಕೊಡಲು ಒಂದಷ್ಟು ಅಕ್ಷರಗಳೊಂದಿಗೆ.J J

Friday, February 17, 2012

ಮಾದ ಧೀರ ಯೋಧನಾದ.

ತಂಗಿ ಮದುವೆ ಕನಸ ನೀಗಿಸಲು
ಹೆತ್ತಬ್ಬೆಯನ್ನು ಚಂದದಿ ಸಾಕಲು
ಹಳ್ಳಿಗ ಮಾದ ನಡೆದು ಬಂದಿದ್ದ
ಎರಡೋತ್ತ ತುತ್ತ ಕಟ್ಟಿಕೊಂಡು
ಮಿಲಿಟರಿ ಸೆಲೆಕ್ಷನ್ ಕ್ಯಾಂಪಿಗೆ



ಬಿಸಿಲ ಝಳಕ್ಕೆ ಪರಿತಪಿಸದೆ
ಅತೃಪ್ತ ಹೊಟ್ಟೆಯ ಹಿಟ್ಟಿಗೆ ಮರುಗದೆ
ಹಳ್ಳಿ ವರವಾಗಿ ಕೊಟ್ಟ ದೇಹವ ದಂಡಿಸಿ
ಒಸರ ಸೆಲೆಯಾಗಿ ಹರಿಯೋ ಬೆವರ ವರೆಸಿ
ಕೆಲಸ ಗಿಟ್ಟಿಸಿ ಕಣ್ಣಂಚಿನ ನೀರ ಒರೆಸುತ್ತಾ
ದೇಶ ಸೇವೆ, ಬಡತನ ಬೇಗೆಯ ತೊಡೆಯುವ
ಸುಭದ್ರ ಭರವಸೆಯನ್ನು ಮೊಗೆದಪ್ಪಿದ್ದ

ಖಂಡ ಮಾಂಸವ ಬೆಳೆಸಿ,
ಕರುಣೆಯ ತೊರೆದು
ತುಫಾಕಿ ಸಿಡಿಗುಂಡ ಶಬ್ದ
ಕಿವಿಯಾಗಿಸಲು ತರಬೇತಿಸಿಕೊಂಡು
ಕೋವಿಯಂಚ ಹೆಗಲೇರಿಸಿ
ಅದ ಒಲುಮೆಯಿಂದ ಸವರುವದ ಕಲಿತು
ಮಾದ ಹೊರಟ ಧೃಡತೆಯಿಂದ ಗಡಿಯಂಚಿಗೆ

ಅವ್ವ ಕಾಡುವ ನೆನಪಿನೊಂದು ದಿನದಲ್ಲಿ
ತನ್ನ ತಂಗಿ ಬರೆದ ಅವ್ವನ ಮಾತಿನೋಲೆ
ತಂಗಿ ಮದುವೆ ಗೊತ್ತಾಗಿದೆಯೆಂದು ಅರುಹಲು
ದುಡಿಯೋ ಕೆಲಸದ ಭರವಸೆ ಮೇಲೆ
ಸುಲಭದಿ ದಕ್ಕಿದ ಲಕ್ಷ ಸಾಲವ ಪಡೆದು
ಸಂಭ್ರಮದಿಂದ ಹೆಗಲೇರಿದ ಜವಬ್ದಾರಿ ತೊಡೆದ

ತಾನಿನ್ನೇನು ಸುಖಿ ಎಂಬ ಮನದೊಪ್ಪಣದಿ
ತನ್ನ ಜೀವದ ಅವ್ವನ ಬಿಗಿದಪ್ಪಿ
ಬಡತನದ ಬೇಗೆಯ ನೀಗಿಸುವ ಮಾತೋಪ್ಪಿಸಿ
ಮರಳಿ ಡೇರೆ ಸೇರಿದ ಮಾದನಿಗೆ ಗೊತ್ತಿರಲಿಲ್ಲ
ಮಸಣವ ಸೇರಲು ದಿನ ಕಾಯುತಿಹುದೆಂದು

ರಾಜಕೀಯದ ಹಪಾಪಿತನದಲ್ಲಿ
ಮಾನವತೆ ಮರೆತ ಮಂದಿ
ಯುದ್ಧವ ಘೋಷಿಸಲಾಗಿ
ಜೀವಗಳ ಪಣವನಿತ್ತು
ಸೀಸೆಯೊಂದಿಗೆ ಮೋಜು
ಟಿವಿಯೊಂದಿಗೆ ಕ್ರೇಜು ನೋಡಬಹುದೆಂದು
ಗೊತ್ತೇ ಇರಲಿಲ್ಲ ಯೋಧ ಮಾದನಿಗೆ

ಶತ್ರು ಸೈನಿಕನೆಡೆಗೆ ಕನಿಕರ ನೋಡದೆ
ಮನದ ಉದ್ವೇಗದಲ್ಲಿ ರಾಶಿ ಕೊಲೆಗೈದು
ಮಾದ ತಾನುರುಳಿಸಿದ ಹೆಣದ ಮುಂದೆ
ಮಂಡಿಯೂರಿ ಕೂತು ಅವ್ವನ ನೆನಸಿ ಬಿಕ್ಕಳಿಸಿದ್ದ
ಆಕೆಯೆ ಕಲಿಸಿದ ಪ್ರೀತಿ ಪಾಠವ ಮರೆತುದುದಕ್ಕೆ

ಅದೆಲ್ಲಿತ್ತೋ ಆ ಸಿಡಿಗುಂಡು
ನುಗ್ಗಿಬಂದು ಮಾದನ ತಲೆ ಸೀಳಲು
ಶತ್ರು ಸೈನಿಕರ ರಕ್ತದೊಂದಿಗೆ
ಮಾದನ ರಕ್ತ ಬೆರೆಯಲು
ಆತನಿಂದ ಹೊರಟಿದ್ದು ಅದೋಂದೆ ಪದ ಅವ್ವಾ
ರಕ್ತಕ್ಕೆಲ್ಲಿದೆ
 ಮನುಜ ಭೇದ

ಹಳ್ಳಿಗೆ ತಲುಪಿದ ಮಾದನ ಶವ
ಸಕಲ ಗೌರವ ಪಡೆದು ಅಂತ್ಯ ಕಂಡು
ನಂತರ ಮರಣೋತ್ತರವಾಗಿ ಪಡೆದ ಬಿರುದು
ನಗದಾಗಿ ಪಡೆದ ಲಕ್ಷ ರೂಗಳನ್ನು
ಸ್ವೀಕರಿಸಿದ ಮಾದನ ಅವ್ವಾ
ತಂಗಿ ಮದುವೆಗಾಗಿ ಮಾಡಿದ ಸಾಲವ ತೀರಿಸಿ
ಮತ್ತೆ ಬಡತನವ ಬಿಗಿದಪ್ಪಿದ್ದಳೂ.
ಇದ್ದೊಬ್ಬನನ್ನು ಕಳಕೊಂಡು.
ದೊರೆತ ಪದಕವ ನೋಡಿ ಮರುಗುತ್ತಾ.

ಹೀಗೆ ಮಾದ ಧೀರ ಯೋಧನಾದ........!!!!!!!





Thursday, February 16, 2012

ಬೋರ್ ಪುರಾಣ


ಅದ್ಯಾಕೋ ಏನೋ ಕೆಲವೋಮ್ಮೆ ಕಾರಣನೆ ಇಲ್ಲದೆ ಬೋರ್ ಫೀಲ್ ಮಾಡುತ್ತಿರುತ್ತೇನೆ, ಕೆಲಸಗಳಿಲ್ಲವಾ ಇರುತ್ತೆ ಮುಗಿಯದಷ್ಟು,ಇಷ್ಟೆ ಅಲ್ಲದೆ ಗೆಳೆಯರಿದ್ದಾರೆ ಸಂಗಡಿಗರಿದ್ದಾರೆ, ನನ್ನವರೂಂತಾ ಮನೆ ಮಂದಿ ಇದ್ದಾರೆ ಎಲ್ಲವೂ ಇದ್ದು ಏಕಾಂಗಿತನ ಕಾಡುತ್ತಿರುತ್ತದೆ.ದಿನ ನಿತ್ಯ ಅದೇ ಆಫೀಸು ,ಆದೇ ದುಡಿತ,ಅದೇ ಟ್ರಾಪೀಕ್ ಅದೇ ಗಿಜಿಗುಡುವ ಶಬ್ದ ಇದೆಲ್ಲದರ ಏಕಾನಥೆಯಿಂದ ಮನಸ್ಸು ರೋಸಿ ಹೋಗುತ್ತಾ? ಒಂದು ಹಂತದ ಗುರಿತಲುಪಿದ ನಂತರ ಮುಂದೆ ಮಹತ್ತರವಾದ ಯಾವೂದೆ ಗುರಿ ಇಲ್ಲದಾದಾಗ ಮನ ಹಿಂಗಾಡುತ್ತಾ?ಇರಬಹುದೇನೋ ಗೊತ್ತಿಲ್ಲ.

ಯಾಕೋ ಬೋರ್ ಅಂದಾಗಲೆಲ್ಲ ಹಾಡ್ ಕೇಳೋ ಮಗ, ಪಾರ್ಟಿ ಮಾಡೋಣ ಬಾ, ಸ್ವಲ್ಪ ಅಡ್ಡಾಡಿಕೊಂಡು ಬಾ, ಒಂದು ಕಾಫಿ ಕುಡಿದು ಪ್ರೆಶ್ ಆಗೋ ಹೀಗೆ ಸಾಕಷ್ಟು ಸಲಹೆಗಳ ಮಹಾಪೂರವೆ ಬಂದು ಬೀಳುತ್ತದೆ.ಹೂಂ ಒಂದಷ್ಟು ಮಟ್ಟಿಗೆ ಇವುಗಳು ಚೈತನ್ಯ ತುಂಬಿದರೂ ಅದು ಒಂದಷ್ಟು ಹೊತ್ತು ಅಷ್ಟೆ, ಕೆಲಸಕ್ಕೆ ತೊಡಗಿದಾಗ ಮತ್ತದೆ ಬೇಸರ ಅದೇ ಏಕಾಂತ !!!!ಈ ಬೋರ್ ಅನ್ನೋದನ್ನ ಅಷ್ಟು ಸುಲಭಕ್ಕೆ ನೆಗ್ಲೆಕ್ಟ್ ಮಾಡಲಾಗದು! ಕಾರಣ ಇದು ತಮ್ಮ ತನವನ್ನ ನಿಧಾನಕ್ಕೆ ಕಸಿದುಕೊಳ್ಳ ಪ್ರಾರಂಭಿಸುತ್ತೆ, ನಮ್ಮ ಚೈತನ್ಯವ ಹುದುಗಿ ಕೀಳರಿಮೆ ಗೀಳನ್ನು ಹೆಚ್ಚಿಸುತ್ತೆ ,ಮಾಡಿದ ಕೆಲಸಗಳು ಮನ ಒಪ್ಪದೆ ಇನ್ನಷ್ಟು ತೊಡಗಿಸಿ ಚಂದದಲ್ಲಿ ಮುಗಿಸಬಹುದಿತ್ತು,ಸಂಪಾದನೆ ಹೆಚ್ಚಿಸಬಹುದಿತ್ತು ಅನ್ನೋ ಕೊರಗು,ಕೆಲಸಕ್ಕೆ ಹಾಗೂ ತನ್ನ ಕುಟುಂಬಕ್ಕೆ ನ್ಯಾಯ ಒದಗಿಸುತ್ತಿಲ್ಲವೆಂಬ ಕಳವಳ,ಹೀಗೆ ಇನ್ನೂ ಅದೆಷ್ಟೋ ಕೀಳರಿಮೆಗಳು ಗಿರಕಿ ಹಾಕುತ್ತಿರುತ್ತದೆ.ಈ ಬೋರ್ ಅನ್ನೋದು ಇನ್ನಷ್ಟು ಬಗೆಯಲ್ಲಿ ಲಭ್ಯ ತಿನ್ನೋ ಆಹಾರ, ಧರಿಸೋ ಉಡುಪು, ಓಡಿಸೋ ಗಾಡಿ ಹೀಗೆ ಯಾವುದನ್ನೋ ಬಿಟ್ಟಿರದ ನಂಟು.ಅಷ್ಟೇ ಏಕೆ ಸಂಸಾರದಲ್ಲೂ 3 - 4 ವರುಷ ಕಳೆದಂತೆ ಬೋರ್ ಶುರುವಾಗಿಬಿಡುತ್ತದೆ, ಹಾಗಂತ ಪ್ರೀತಿ ಕಡಿಮೆ ಆಯೀತೂಂತಾನಾ? ಅಲ್ಲಾ ಎಲ್ಲವೂ ಇದ್ದಂತೆ ಇದ್ದೂ ಇಲ್ಲದಂತೆ ಒಂಟಿತನ ಹೀಗೆ ಎಲ್ಲವೂ ಬೋರ್ ಮಯ.

ಮನೆ ಫರಿಧಿಯಲ್ಲೆ ಸಿಗಬಹುದಾದಾ ಟಿವಿ ಪ್ರೋಗ್ರಾಮ್ಸ್, ಹಾಡುಗಳು ಕೂಡ ರಿಪ್ರೆಷ್ ಮೆಂಟ್ ತರಬಲ್ಲುದಾದರೂ ಎಲ್ಲಾ ಸಂದರ್ಭಗಳಲ್ಲಿ ಅಲ್ಲಾ. ಬೆಳಿಗ್ಗೆ ಟಿವಿ ಆನ್ ಮಾಡಿದಂಗೆ ಮತ್ತೆ ಮತ್ತೆ ಅದೇ ಸುದ್ದಿಗಳು. ಜೋತಿಷಿಗಳೂ,ಪೂರ್ವ ಜನ್ಮ, ರಾಜಕಾರಣದ ವಿಶ್ಲೇಷಣೆಗಳೂ, ರಾತ್ರಿ ಟಿವಿಯಲ್ಲಿ ಹೆಣ ಬೀಳಿಸೋ ಕ್ರೈಮ್ ನ್ಯೂಸ್ ಗಳೂ ಇತ್ಯಾದಿ ಟಿವಿಯನ್ನೂ ದೂರ ಇಡುವಂತೆ ಮಾಡಿ ಬಿಟ್ಟಿವೆ. ಸುಮ್ಮನೆ ಆಫ್ ಮಾಡಿ ಮನೆಯೋಳಗೆ ಅಡ್ಡಾಡೋದೆ ಹಿತವೆಂದು ಹಂಗೆ ಸುತ್ತರಿಯುತ್ತಿರುತ್ತೇನೆ. ಇನ್ನೂ ಮೋಬೈಲ್ ಕೂಡಾ ಈ ಬೋರ್ ಪಟ್ಟಿಗೆ ಮಹತ್ತರ ಕಾಣಿಕೆ ಕೊಡುತ್ತೆ.ಈ ಬೋರ್ ಅನ್ನೋದು ನಿಮ್ಮದೂ ಆಗಿದ್ದರೂ ಆಗಿರಬಹುದೇನೋ? ಹಾಗಾದರೆ ಈ ಬೋರ್ ಗಳನ್ನು ಹೋಗಲಾಡಿಸುವ ರಿಪ್ರೆಶ್ ಮೆಂಟು ಸಿಗೋದಾದರೂ ಎಲ್ಲಿಂದ? 

ನನಗೆ ಈ ಬೋರ್ ಹುಚ್ಚು ಬಂದಾಗ ಈ ಹುಚ್ಚು ಕಳೆಯಲು ಹೀಗೋಂದು ಹುಚ್ಚು ಮಾಡುತ್ತಿರುತ್ತೇನೆ. ಸುಮ್ಮನೆ ಬೈಕ್ ಪೆಟ್ರೋಲ್ ಟ್ಯಾಂಕ್ ತುಂಬಿಸಿ ಹೊರಟೆ ಬಿಡುತ್ತೇನೆ? ಎಲ್ಲಿಗೆ? ನನಗೂ ಗೊತ್ತಿರುವದಿಲ್ಲ, ಸುಮ್ಮನೆ ಟ್ರಾಪಿಕ್ ಸಮಸ್ಯೆ ಇಲ್ಲದ ಹಾದಿಯಲ್ಲಿ ಎಕ್ಸಲೇಟರ್ ತಿರುವತ್ತಿರುತ್ತೇನೆ ಗಾಡಿ ಸಾಗುತ್ತಿರುತ್ತೆ, ಕಿವಿಯಲ್ಲಿ ಐ ಪ್ಯಾಡ್ನಲ್ಲಿ ಸ್ಟೋರಾಗಿರುವ ಹಾಡು ಗುನುಗುತ್ತಿರುತ್ತದೆ ಅಷ್ಟೆ. ಎಷ್ಟೋ ದೂರ ಸಾಗಿದ ನಂತರ ನಾನೆಲ್ಲಿದ್ದೇನೆ? ಇಲ್ಲಿ ಯಾಕೆ ಬಂದೆ ?ಅನ್ನೋ ಪ್ರಶ್ನೆಗಳು ಬರುತ್ತವೆ ಅಲ್ಲಿಗೆ ಪ್ರಯಾಣ ದಿ ಎಂಡ್ ಮತ್ತೆ ಮರಳುತ್ತೇನೆ ವಾಸ್ತವಕ್ಕೆ ಹೊಸ ಹುಮ್ಮನಸಿನೊಂದಿಗೆ. ಒಂದಷ್ಟು ದಿನಕ್ಕೆ ಈ ಚೈತನ್ಯ ನನ್ನ ಜೀವಂತಿಕೆಗೆ ನೆರವಾಗುತ್ತೆ, ಬೆಂಗಳೂರಿನ ಸುತ್ತಲಿನ ಹಳ್ಳಿಗಳೂರಿನ ಮಣ್ಣಿನ ವಾಸನೆ ನಾ ಗ್ರಹಿಸಿದ್ದೇ ಈ ಹುಚ್ಚಿನಿಂದ.ಇದು ಬಿಟ್ಟರೆ ಪುಸ್ತಕದ ಮೊರೆ ಹೋಗುವದು, ಹೀಗೆ ಏನಾದರೂ ಗೀಚುವದು,ಗೆಳೆಯರೆಲ್ಲರನ್ನ ಸೇರಿಸಿಕೊಂಡು ಹರಟುವದು ಹೀಗೆ ಏನೇನೋ ಬೋರ್ ಪ್ರಮಾಣದ ಅನುಗುಣವಾಗಿ ಏನೇನೋ ಚಟುವಟಿಕೆ ಪ್ರೇರೇಪಿತನಾಗಿ ಅದರಲ್ಲಿ ತಲ್ಲೀನನಾಗುತ್ತೇನೆ ಮತ್ತೆ ವಾಸ್ತವಕ್ಕೆ ಚೇತೋಹಾರಿಯಾಗಿ ಮರಳುವವರೆಗೆ......!!! ಅವರವರ ಅಭಿರುಚಿಯಂತೆ ದಿನದ ದಿನಚರಿಗಿಂತ ಸಂಪೂರ್ಣ ಭಿನ್ನವಾದ ಕಾರ್ಯದಲ್ಲಿ ಒಂದಷ್ಟು ಹೊತ್ತು ತೊಡಗಿಕೋಳ್ಳೋದು ಈ ಬೋರ್ ಸಿಂಡ್ರೋಮ್ ಒದ್ದೋಡಿಸಲು ಇರುವ ಸುಲಭ ದಾರಿ ಅಂತ ನನಗನ್ನಿಸಿದೆ.ಹಾಗೆ ನೋಡಿದಲ್ಲಿ ಆಫೀಸ್ ನಲ್ಲಿ ಕೂತು ಕೆಲಸ ಮಾಡೋರಿಗೆ ಬೋರ್ ಫೀಲ್ ಆಗೋವಷ್ಟು ಬೇರೆ ಯಾರಿಗೂ ಆಗಲ್ಲ.ಅಪೀಸ್ ಹೊರಗಿದ್ದು ಕೆಲಸ ಮಾಡೋ ಮಂದಿಗೆ ಹೊಸ ಹೊಸ ವಿಷಯಗಳು ಕಣ್ ಮುಂದೆ ಬರುತ್ತಿರುತ್ತೆ,ಕೂಲಿ ಇನ್ನಿತರ ಕೆಲಸ ಮಾಡೋ ಮಂದಿಗೆ ದೇಹ ದಂಡನೆ ಕಿಲುಬುಗಳ ನೋವು ಬೋರ್ ಪೀಲಿಂಗ್ ಹತ್ತಿರಕ್ಕೂ ಸುಳಿಯದಂತೆ ಲಕ್ಷಣ ರೇಖೆಯನ್ನು ಹಾಕಿರುತ್ತೆ, ಹಳ್ಳಿಗರು ಬಿಡಿ ಆ ಪ್ರಶಾಂತತೆ, ಬೆಳೆದ ಬೆಳೆ, ಮೈ ತುಂಬಾ ಕೆಲಸಗಳ ಮದ್ಯೆ ಕಳೆದು ಹೋಗಿರುತ್ತಾರೆ ಅವರಲ್ಲಿ ಈ ಬೋರ್ ಪದಕ್ಕೆ ಅರ್ಥವಿರೋದಿಲ್ಲ.ನನ್ನೂರು ನನ್ನ ಹಳ್ಳಿಯಲ್ಲಿ ಒಂದೆರಡು ದಿನ ಇದ್ದು ಬಂದರೆ ಅದರಿಂದ ಸಿಗೋ ದೊಡ್ಡ ರಿಪ್ರೆಶ್ ಮೆಂಟ್ ನನಗೆ ಬೇರೆ ಚಟುವಟಿಕೆಯಲ್ಲಿ ಸಿಗೋದಿಲ್ಲ. ಒಂದಾರು ತಿಂಗಳು ಕೆಲಸದಲ್ಲಿ ಆರಾಂಸೆ ತೊಡಗಬಹುದಾದ ಚೈತನ್ಯ ಅಲ್ಲಿ ಕಳೆಯುವ ಬರೀಯ 2 ದಿನ ನನ್ನದಾಗಿಸುತ್ತೆ. ಇದನ್ನು ನೋಡಿದಾಗ ಪರಿಸರವು ನಮ್ಮ ಮನಸ್ಸಿನ ಮೇಲೆ ಎಷ್ಟೋಂದು ಪ್ರಭಾವ ಬೀರುತ್ತೆ ಅನ್ನೋ ಅಚ್ಚರಿ, ಪ್ರಕೃತಿ ಅದೆಷ್ಟು ಪಾಠವನ್ನು ಹೇಳಿಕೊಡುತ್ತದಲ್ವಾ ಅನ್ನೋ ಕೌತುಕ ಪ್ರತಿ ಭಾರಿಯಂತೆ ನನ್ನೋಡಲ ತುಂಬಿ ಪ್ರಕೃತಿಯೆಡೆಗಿನ ಸೆಳೆತವ ಮತ್ತಷ್ಟು ಗಟ್ಟಿಗೋಳಿಸುತ್ತೆ.

ಆದರೂ ಈ ಬೋರ್ಗೋಂದು ಸಲಾಮು ಕೊಡಲೆ ಬೇಕು? ಯಾಕಂತೀರಾ? ಈ ಬೋರ್ ನನಗೆ ಹೊಸ ಹೊಸ ಚಟುವಟಿಕೆ ಹವ್ಯಾಸಗಳನ್ನು ನನ್ನದಾಗಿಸೋಕೆ ನನ್ನ ಉದ್ದೀಪನಗೊಳಿಸುತ್ತಾನೆ ಬಂದಿದೆ,ಓದಿನ ಹವ್ಯಾಸ,ಅಲೆದಾಡೋ ಅದ ಮೂಲಕ ಒಂದಷ್ಟನ್ನು ಅರಿಯುವ ಅಭ್ಯಾಸ, ಹಿಂಗೆ ಗೀಚುವ ಹವ್ಯಾಸ, ಹಾಡು ಕೇಳೋ ಹವ್ಯಾಸ, ಹರಟೋ ಹವ್ಯಾಸ,ಗೆಳೆಯರೊಡಗೂಡೋ ಹವ್ಯಾಸ ಹೀಗೆ ಒಂದಾ ಎರಡಾ?ಇದೆಲ್ಲವೂ ನನಗೆ ನಾನೆ ಅನುಭವಿಸಿದ ಬೋರ್ ನನಗಾಗಿ ಕೊಟ್ಟ ಉಚಿತ ಹವ್ಯಾಸಗಳು.ಹೀಗೆ ನಮಗೆ ನಾವೆ ರಿಪ್ರೆಷ್ ಮೆಂಟ್ ದಾರಿಗಳನ್ನು ಕಂಡುಕೊಂಡಲ್ಲಿ  ಬೋರ್ ಜೀವನವ ಬೋರಾಗಿಸದೆ ಪಾಠವಾಗಬಲ್ಲುದು, ಬೋರ್ ಕಳೆಯಲು ಮದಿರೆಯೊಂದಿಗೆ ಚಿಯರ್ಸ್ ಹೇಳಬೇಕಾಗೇನೂ ಇಲ್ಲಾ ಮಧುರ ಹವ್ಯಾಸಗಳೊಂದಿಗೂ ಚಿಯರ್ಸ್ ಅನ್ನಬಹುದು.ಅದು ನಮ್ಮತನವನ್ನು ಮತ್ತಷ್ಟೂ ಸುಂದರಿಸಬಹುದು. ಎನೋಪ್ಪಾ ಬೋರ್ ಪುರಾಣ ನಿಮಗೆ ಬೋರ್ ಅನಿಸದಿದ್ದರೆ ಸಾಕು. ಸರಿ ಮತ್ತೆ ಕಾಣೋಣ ಶುಭವಾಗಲಿ.
ಚಿತ್ರ ಕೃಪೆ:-desicomments.com

Tuesday, February 14, 2012

ನೆನಪ ಪುಸ್ತಕ.



ಆ ದಿನಗಳು ಖುಷಿಯಾಗಿತ್ತಲ್ಲವೆ.ಮರೆಯಾಗದ ಮಧುರ ನೆನಪು ಹಂಗೆ ಹಿಡಿಗಟ್ಟಿ ಹೃದಯ ಮೂಲೆಯಲ್ಲಿ ಕಟ್ಟಿ ಇಟ್ಟಿರುವೆ,ಪ್ರೇಮಿಗಳ ದಿನ ಬಂದಾಗ ಬಿಚ್ಚಿ ಹರವಿ ಅದನ್ನೊಮ್ಮೆ ಅವಲೋಕಿಸಿ ಮರಳಿ ಧೂಳ ಕೆಡವಿ ಹೃದಯ ಗೂಡ ಸೇರಿಸುವೆ ,ಭಾವನೆ ಹಾಗೂ ಅದರಲ್ಲಿನ ನವಿರು ನೆನಪು ಸಾಯಬಾರದೆಂದು.

ದಿನದಿಂದ ದಿನಕ್ಕೆ ಪ್ರಬುದ್ದನಾಗುತ್ತಿರುವೆನೆ ಆ ನೆನಪುಗಳ ಅವಲೋಕಿಸಿ? ಹೌದು ಎನ್ನುವದೆ ಸೂಕ್ತ,ಕಾಲ ಬುಡದ ಭದ್ರತೆಯ ಅರಿವಿಲ್ಲದ ದಿನ ಜೀವನ ಸುಭದ್ರತೆಯ ಯೋಚನೆಯೆ ಶುರುವಾಗದ ದಿನಗಳಲ್ಲಿ ಪ್ರೀತಿ ಒಡಮೂಡಿತ್ತು ನಮ್ಮೊಳಗೆ.ಅದೊಂದು ದಿನ ವಿದಿತದಂತೆ ಪ್ರೀತಿ ತೊರೆದು ಆಗಿತ್ತು ಹಾಗಿದ್ದರೆ ಪ್ರೀತಿ ಪ್ರೀತಿ ಯಾಗಿರಲಿಲ್ಲವೆ?ಉತ್ತರ ಸಿಗದ ಪ್ರಶ್ನೆ ಕಾಡುತ್ತಿರುತ್ತದೆ,ಪ್ರೀತಿಗಿಂತ ಆಕರ್ಷಣೆ ಹೆಚ್ಚಿತ್ತು ಅನ್ನೋದನ್ನ ಒಪ್ಪಿಕೊಳ್ಳೋದು ಕಷ್ಟವಾಗಿದೆ ಮನಕ್ಕೆ. 

ನೀಲ ಮೇಘ ಗಾಳಿ ಬೀಸಿ ದೂರಾದ ಹಾಗೆ,ಚಂದ್ರ ತಾರೆ ತಂಪು ಕಾಂತಿ ಚೆಲ್ಲಾಡೊ ಹಾಗೆ ನೀ ದೂರಾದರು ಆ ನೆನಪುಗಳು ಬೆಳದಿಂಗಳಂತೆ ನನ್ನ ಬಾಳನ್ನ ಹಸನುಗೊಳಿಸುತ್ತ ಬೆಳಕು ತೋರುತ್ತಾ ಬಂದಿದೆ.ತಾಯಿ ತಂದೆ ತಮ್ಮ ತಂಗಿಯ ಪ್ರೀತಿ ಮಮತೆಯನ್ನು ಕಂಡ ನಂಗೆ ಪ್ರೀತಿಯ ಹೊಸ ಆಯಾಮ ತಂದು ತೋರಿದೋಳು ನೀನು. ನಿಂಗೊಂದು ವಿಷಯ ಗೊತ್ತಾ ನೀ ದೂರಾದ ನೋವನ್ನು ಬಹಳ ಬೇಗನೆ ಮರೆತೆ, ನಾ ಮಾಡಿದ್ದಿಷ್ಟೆ ಪ್ರೀತಿಯ ಹೊಸ ಸೆಲೆಯ ದಾರಿಯ ತೋರಿಸಿದ ನಿನ್ನ ದಾರಿಯಲ್ಲೆ ನಡೆದು ಮತ್ತಷ್ಟು ದಾರಿಯನ್ನು ಹುಡುಕಿದೆ, ಮನುಷ್ಯ ಮನುಷ್ಯರನ್ನ ಪ್ರೀತಿಸುವದ ಕಲಿತೆ, ಪ್ರಕೃತಿಯ ಪ್ರೀತಿಸೋದ ಕಲಿತೆ,ಪ್ರಾಣಿ ಪಕ್ಷಿಗಳ ಪ್ರೀತಿಸೋದ ಕಲಿತೆ, ಇವುಗಳೋಡ ಲೀನವಾಗಿ ಅವುಗಳೋಡನೆ ಮಾತಾಡೋದ ಕಲಿತೆ.... ಹೀಗೆ ಇನ್ನು ಏನೇನೋ. ಒಂದಂತು ಸತ್ಯ ನಮ್ಮ ಪ್ರೀತಿಯ ದಿನಗಳಿಂದ ಈಗ ನಾ ಕಂಡುಕೊಂಡಿರುವ ನನ್ನದಾಗಿಸಿರುವ ಪ್ರೀತಿ ಮಾಜಾವೆ ಚೆನ್ನಾಗಿದೆ. ಆದರೂ ನಿನ್ನೋಡ ಪ್ರೀತಿಯ ಮರೆಯಲಾರೆ ಕಾರಣ ಅದು ನನ್ನ ಅರಿವು ಮತ್ತೆ ಮತ್ತೆ ನನ್ನ ತಿದ್ದಿ ತೀಡಿ ನಡೆಸಬಹುದಾದ ನೆನಪ ಪುಸ್ತಕ.

ಇಂದು ಪ್ರೇಮಿಗಳ ದಿನ, ನನಗೂ ಸಂತಸದ ದಿನಾನೆ!!! ಆಶ್ಚರ್ಯವಾಯಿತಾ!! ಇಲ್ಲಾ ನಿನ್ನಂತೆ ಪ್ರೀತಿಸಲು ಇನ್ನೂ ಯಾರು ನನ್ನ ಬಾಳ ಪ್ರವೇಶಿಸಿಲ್ಲ, ನಾವಂದು ಈ ದಿನದಂದೆ ಸುತ್ತಾಡಿರೋ ಜಾಗಕ್ಕೆ ಪ್ರತಿ ವರುಷದಂತೆ ಮತ್ತೆ ಹೋಗುವೆ. ಗೊತ್ತಿದೆಯಲ್ಲಾ ಆ ಮರ ಕೆಳಗಿರೋ ಕಲ್ಲು ಬೆಂಚು, ಪಕ್ಕದಲ್ಲಿರೋ ಕೆರೆ, ಅದರಲ್ಲಿನ ಬಾತು ಕೋಳಿ,ಬೀಸೋ ಗಾಳಿ, ಚಿಲಿಪಿಲಿ ಹಕ್ಕಿ-ಪಕ್ಕಿ ಅದೆಲ್ಲ ಈಗಲೂ ಇದೆ, ನೀನಿಲ್ಲ ಅನ್ನೋದನ್ನ ಬಿಟ್ಟರೆ ಪ್ರೀತಿಸುವದಕ್ಕೆ ಅಷ್ಟು ಸಾಕು, ವ್ಯತ್ಯಾಸವೆಂದರೆ ನಾವು ಕೂರುತ್ತಿದ್ದ ಕಲ್ಲು ಬೆಂಚು ಹಾಗೂ ಆ ಪರಿಸರ ಇತರ ಜೋಡಿಗಳ ಪಾಲಾಗಿದೆ,ಆ ಪ್ರೇಮಿಗಳ ನೋಡಿ ಪ್ರೀತಿಯನ್ನ ಪ್ರೀತಿಸುತ್ತೇನೆ, ಮನದಾಳದಲ್ಲಿ ಹರಸುತ್ತಿರುತ್ತೇನೆ ನಿಮ್ಮ ಪ್ರೀತಿ ಹಸಿರಾಗಲೆಂದು....!!!ಪ್ರೀತಿ ಪ್ರೀತಿಯಾಗಿರಲಿ ಹುಚ್ಚುತನ ಪ್ರೀತಿಯ ಹೊರತಾಗದೆ ಇರಲಿ,ಬದುಕ ದಾರಿಯ ಕಂಡು ಪ್ರೀತಿ ಮೊಳಕೆ ಒಡೆದಿರಲೆಂದು. ಹಾಂ ನನಗೆ ನಿನ್ನದೇ ಪ್ರೀತಿ ಇವತ್ತು ಸಿಕ್ಕಿದ್ದರೆ ನಿನ್ನ ನೆನಪು ನನ್ನ ಮನದ ಪುಸ್ತಕ ಸೇರದೆ ಒಡಲು ಸೇರುತಿತ್ತು., ಇರಲಿ ಈಗ ನನ್ನಲ್ಲಿ ನಾನೇ...ಸಾಕಿದಾ ಗಿಣಿ ಹಾಡಿಗೆ ನೋ ಛಾನ್ಸ್. ಇದ್ದಷ್ಟು ದಿನ ಯಾರ ಅನುಕಂಪಕ್ಕೂ ಕಾಯದೆ ಕಳೆದು ಹೋದ ಪ್ರೀತಿಯನ್ನು ಮತ್ತೊಂದರಲ್ಲಿ ದಕ್ಕಿಸಿಕೊಳ್ಳುವುದು. ವಾಸ್ತವಕ್ಕೆ ಮುಖಾಮುಖಿಯಾಗುವುದು ಎಂಭ ಪಾಠ ನಿನ್ನ ನವಿರು ನೆನಪ ಪುಸ್ತಕ ಕಲಿಸಿ ಕೊಟ್ಟಿದೆ. ಆ ನೆನಪುಗಳು ಇರುವಷ್ಟು ದಿನ ನಾ ಸುಖಿ.ಆ ದಿನಗಳು ಖುಷಿಯಾಗಿತ್ತು ಈ ದಿನಗಳು ಖುಷಿಯಾಗಿವೆ, ಆಯಾಮಗಳು ಬೇರೆ ಬೇರೆಯಷ್ಟೆ. ಸರಿ ಹಾಗಾದರೆ ಮತ್ತೆ ಸಿಗೋಣ ಮತ್ತೋಮ್ಮೆ ಮನದ ನೆನಪ ಪುಸ್ತಕವ ಹರವಿ ಕೂತಾಗ..........!!!!!

ಸಾರಿ ಮುಖ್ಯವಾದುದನ್ನೆ ಮರೆತೆ, ನಾ ಪ್ರೀತಿಸೋ ಪ್ರೇಮಿಗಳೆ ನಿಮಗೆಲ್ಲರೀಗೂ ಹ್ಯಾಪಿ ವ್ಯಾಲೆಂನ್ಟೈಸ್ ಡೇ :):)

Monday, February 13, 2012

ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೂಢನಂಬಿಕೆ -ದಿನೇಶ್ ಕುಮಾರ್ ಎಸ್ ಸಿ ಮಾತುಗಳು

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಪರಿಷತ್ತು, ಜನಪ್ರಿಯ ವಿಜ್ಞಾನ ಸಾಹಿತಿಗಳ ವೇದಿಕೆ ಬೆಂಗಳೂರಿನ ಕಿಮ್ಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ ೫ನೇ ರಾಜ್ಯಮಟ್ಟದ ವಿಜ್ಞಾನ ಸಾಹಿತಿಗಳ ಸಮಾವೇಶದ ಎರಡನೇ ದಿನ (ಫೆಬ್ರವರಿ ೧೨) ನಡೆದ ವಿದ್ಯುನ್ಮಾನ ಮಾಧ್ಯಮದಲ್ಲಿ ಮೂಢನಂಬಿಕೆ ವಿಷಯ ಕುರಿತ ಗೋಷ್ಠಿಯಲ್ಲಿ ಕರವೇ ನಲ್ನುಡಿಯ ಪ್ರಧಾನ ಸಂಪಾದಕರೂ ಹಾಗೂ ಗೆಳೆಯರೂ ಆದ ದಿನೇಶ್ ಕುಮಾರ್ ಎಸ್ ಸಿ ಮಂಡಿಸಿದ ಭಾಷಣ ಪ್ರಸಕ್ತ  ವಾಸ್ತವತೆಗಿಂತ ರೋಚಕತೆಗೆ ಆದ್ಯತೆ ದೊರೆಯುತ್ತಿರುವ ಮಾದ್ಯಮ ನೀತಿಗೆ ಛಾಟಿ ಏಟಿನಂತಿತ್ತು. ಮಾಧ್ಯಮದ ಅಲಿಖಿತ ನಿಯಮಗಳು,ಸ್ಪರ್ಧೆಗೆ ಬಿದ್ದು ನೈತಿಕತೆ ಮರೆಯುತ್ತಿರೋ ಬದಲಾಗುತ್ತಿರುವ ಮಾಧ್ಯಮ ನೀತಿಗಳು, TRP ಅನ್ನೋ ಭೂತವನ್ನು ಮೈಗೇರಿಸಿಕೊಂಡಿರೋ ಮಾಧ್ಯಮ,ಇದು ಜನತೆಗೆ ಸಲ್ಲಬಾರದ್ದು ಅಂತ ಗೊತ್ತಿದ್ದರೂ TRP ಹೆಗಲೇರಿ ಮೌಡ್ಯವನ್ನು ಬಿತ್ತರಿಸುವ ಮಾಧ್ಯಮ ನೀತಿಗಳನ್ನು ಸ್ಕ್ಯಾನ್ ಮಾಡಿದಂತಿತ್ತು. ಈ ನಿಟ್ಟಲ್ಲಿ ಅವರ ಭಾಷಣ ಪ್ರತಿ ಇನ್ನಷ್ಟು ಜನಕ್ಕೆ ತಲುಪಬೇಕೆಂಬ ಉದ್ದೇಶದಿಂದ ಮತ್ತು ಇದು ಸಂಗ್ರಹದಲ್ಲಿರಬೇಕೆಂಬ ಉದ್ದೇಶದಿಂದ ಅವರೆ ಕೊಡ ಮಾಡಿರುವ ಯಥಾವತ್ತು ಪ್ರತಿಯನ್ನು ಇಲ್ಲಿ ಪ್ರಕಟಿಸುತಿದ್ದೇನೆ.
ಗೋಷ್ಠಿ ದಿನಾಂಕ :-12-2-2012
ಉಪಸ್ಥಿತರು: ಅಧ್ಯಕ್ಷತೆ: ಜಿ. ರಾಮಕೃಷ್ಣ, ಸಂಪಾದಕರು, ಹೊಸತು ಪತ್ರಿಕೆ
ಸಹ ವಿಷಯ ಮಂಡಕರು: ಡಾ. ನಾ.ಸೋಮೇಶ್ವರ ಹಾಗು ಬಿ.ಎಸ್.ಸೊಪ್ಪಿನ



ದಿನೇಶ್ ಕುಮಾರ್ ಎಸ್ ಸಿ:-
ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮೂಢನಂಬಿಕೆ ಎಂಬ ವಿಷಯದ ಕುರಿತು ವಿಚಾರಸಂಕಿರಣದಲ್ಲಿ ಭಾಗವಹಿಸುತ್ತಿದ್ದೇನೆ ಎಂದಾಗ ನನ್ನ ಕವಿಮಿತ್ರರೊಬ್ಬರು ಹೇಳಿದ್ದು, ವಿದ್ಯುನ್ಮಾನ ಮಾಧ್ಯಮ ಎಂಬುದೇ ಈ ಯುಗದ ಅತಿ ದೊಡ್ಡ ಮೂಢನಂಬಿಕೆ ಎಂದು. ಹಲವರಿಗೆ ಒಪ್ಪಿಕೊಳ್ಳುವುದಕ್ಕೆ ತುಸು ಕಷ್ಟವಾದರೂ ಮೀಡಿಯಾ ಅನ್ನೋದೇ ಒಂದು ದೊಡ್ಡ ಮೌಢ್ಯವಾಗಿರುವುದು ಸತ್ಯದ ಮಾತು. ಈ ಮಾತನ್ನು ಸಮರ್ಥಿಸುವುದಕ್ಕೆ ಸಾಕಷ್ಟು ಆಧಾರಗಳಿವೆ. ಆದರೆ ಮೀಡಿಯಾದಲ್ಲಿ ಮೌಢ್ಯ ಎಂಬ ವಿಷಯ ಇವತ್ತಿನ ಚರ್ಚೆಯ ವಿಷಯವಾಗಿರುವುದರಿಂದ ಮೀಡಿಯಾ ಎಂಬ ಮೌಢ್ಯ ಎಂಬ ವಿಶಾಲ ವ್ಯಾಪ್ತಿಯ ವಿಷಯವನ್ನು ಸದ್ಯಕ್ಕೆ ಕೈಬಿಡುತ್ತಿದ್ದೇನೆ.

ಎಲೆಕ್ಟ್ರಾನಿಕ್ ಮಾಧ್ಯಮವೆಂಬುದು ಆಧುನಿಕ ವಿಜ್ಞಾನ ತಂತ್ರಜ್ಞಾನದ ವಿಶಿಷ್ಠ ಕೊಡುಗೆ. ಆದರೆ ಅದು ಮೌಢ್ಯವನ್ನು ಬಿತ್ತರಿಸಲು ಬಳಕೆಯಾಗುತ್ತಿದೆ ಎಂಬುದೇ ಒಂದು ವ್ಯಂಗ್ಯ. ಅಗ್ಗದ ಜನಪ್ರಿಯತೆಗಾಗಿ ಅವುಗಳಿಗೆ ಅಂಧಶ್ರದ್ಧೆಗಳು ಬೇಕು, ಸೆಕ್ಸ್ ಮತ್ತು ಕ್ರೈಂಗಳು ಬೇಕು. ಮೂವರು ಸಚಿವರು ಬ್ಲೂ ಫಿಲ್ಮ್ ನೋಡಿದ್ದನ್ನು ಈ ಚಾನಲ್‌ಗಳು ಬಹಿರಂಗಪಡಿಸಿ ಅವರ ಸಚಿವ ಸ್ಥಾನ ಕಳೆದವು. ಆದರೆ ಅದೇ ಸಮಯದಲ್ಲಿ ಕರ್ನಾಟಕದ ಜನತೆಗೆ ಬ್ಲೂ ಫಿಲ್ಮ್ ತೋರಿಸಿದವು, ಮಸುಕು ಕೂಡ ಮಾಡದೆ. ಎಲೆಕ್ಟ್ರಾನಿಕ್ ಮಾಧ್ಯಮ ಉತ್ತರದಾಯಿತ್ವವನ್ನು ಕಳೆದುಕೊಂಡಿದೆ. ಉತ್ತರದಾಯಿತ್ವ ಇಲ್ಲದ ಮಾಧ್ಯಮ ಯಾವತ್ತಿಗೂ ವಿನಾಶಕಾರಿಯಾಗಿರುತ್ತದೆ ಮಾತ್ರವಲ್ಲ, ಸಮಾಜದ್ರೋಹದ ಕೆಲಸವನ್ನು ಎಗ್ಗಿಲ್ಲದೆ ಮಾಡುತ್ತಿರುತ್ತದೆ. ನಮ್ಮ ಚಾನಲ್‌ಗಳು ಈಗ ಆ ಕೆಲಸವನ್ನು ಮಾಡುತ್ತಿವೆ.

ಈ ತರಹದ ಗೋಷ್ಠಿಗಳಿಗೆ ಸಾಧಾರಣವಾಗಿ ಎಲೆಕ್ಟ್ರಾನಿಕ್ ಮೀಡಿಯಾದ ಪ್ರತಿನಿಧಿಗಳು ಬರುವುದು ಕಡಿಮೆ. ಬಂದರೂ ಇಲ್ಲಿನ ಚರ್ಚೆಯ ವಿಷಯಗಳು ಆ ಚಾನಲ್‌ಗಳಲ್ಲಿ ಪ್ರಸಾರವಾಗುವುದಿಲ್ಲ. ಹೀಗಾಗಿ ಇಲ್ಲಿ ಮಾತನಾಡುವ ವಿಷಯಗಳು ಯಾರನ್ನು ತಲುಪಬೇಕೋ ಅವರನ್ನು ತಲುಪುವುದೇ ಇಲ್ಲ. ಅದಕ್ಕೆ ಕಾರಣಗಳೂ ಇವೆ. ಎಲೆಕ್ಟ್ರಾನಿಕ್ ಮೀಡಿಯಾಗಳಿಗೆ ತಾವು ಮೌಢ್ಯವನ್ನು ಹರಡುತ್ತಿದ್ದೇವೆ ಎಂಬ ವಿಷಯ ಚೆನ್ನಾಗಿಯೇ ಗೊತ್ತು. ಪ್ರಜ್ಞಾಪೂರ್ವಕವಾಗಿಯೇ ಈ ಕೆಲಸವನ್ನು ಅವು ಮಾಡುತ್ತಿವೆ. ಹೀಗಾಗಿ ಯಾವ ಸಲಹೆ-ಸೂಚನೆ-ನಿರ್ದೇಶನಗಳೂ ಅವುಗಳಿಗೆ ಬೇಕಾಗಿಲ್ಲ. ನಿದ್ದೆ ಮಾಡುತ್ತಿರುವವರನ್ನು ಎಚ್ಚರಿಸಬಹುದು, ನಿದ್ದೆಯ ನಾಟಕವಾಡುತ್ತಿರುವವರನ್ನು ಅಲ್ಲ. ಎಲೆಕ್ಟ್ರಾನಿಕ್ ಮಾಧ್ಯಮಗಳು ತಾವೂ ಅಂಧಶ್ರದ್ಧೆಗೆ ಬಿದ್ದು ಜ್ಯೋತಿಷ್ಯದಂಥ ಕಾರ್ಯಕ್ರಮಗಳನ್ನು ವಿಜೃಂಭಿಸುವ ಕೆಲಸ ಮಾಡುತ್ತಿಲ್ಲ. ಚಾನಲ್‌ನಲ್ಲಿ ಮಾತನಾಡುವ ಜ್ಯೋತಿಷಿಗಳು ಹೇಳುವ ಮಾತುಗಳನ್ನು ಚಾನಲ್ ನವರೇ ನಂಬುವುದಿಲ್ಲ, ಅನುಸರಿಸುವುದಿಲ್ಲ. ಈ ಮೀಡಿಯಾ ಜನರಿಗೆ ತಮ್ಮದು ಮುಠ್ಠಾಳ, ಮನೆಹಾಳ ಕಾರ್ಯಕ್ರಮಗಳು ಎಂಬುದು ಚೆನ್ನಾಗಿಯೇ ಗೊತ್ತು.

ಎಲೆಕ್ಟ್ರಾನಿಕ್ ಮಾಧ್ಯಮಗಳು ಹಲವು ಬಗೆಯ ಮೌಢ್ಯಗಳನ್ನು ಪ್ರಸಾರ ಮಾಡುತ್ತಿವೆ. ಪ್ರಸಾರ ಮಾಡುತ್ತಿವೆ ಎಂಬ ಶಬ್ದಕ್ಕಿಂತ ಮಾರಾಟ ಮಾಡುತ್ತಿವೆ ಎಂಬ ಶಬ್ದವನ್ನು ಬಳಸಲು ಬಯಸುತ್ತೇನೆ. ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಪ್ರತಿ ಕಾರ್ಯಕ್ರಮವೂ ಮಾರಾಟದ ಸರಕು. ಜ್ಯೋತಿಷ್ಯ, ಪುನರ್ಜನ್ಮ, ಬಾನಾಮತಿ, ಸಂಖ್ಯಾಶಾಸ್ತ್ರ, ವಾಸ್ತು ಶಾಸ್ತ್ರ, ಮಾಟ-ಮಂತ್ರ ಇತ್ಯಾದಿಗಳೆಲ್ಲವೂ ಬಹುಬೇಗ ಸೇಲ್ ಆಗುವ ವಸ್ತುಗಳು. ಜನರಿಗೆ ಅಂತೀಂದ್ರಿಯವಾದದ್ದೆಲ್ಲ ಕುತೂಹಲ ಹುಟ್ಟಿಸುತ್ತವೆ. ಯಾವುದಕ್ಕೆ ವೈಜ್ಞಾನಿಕ ತರ್ಕ ವಿಶ್ಲೇಷಣೆಗಳು ಬಹುಬೇಗ ತಲೆಗೆ ಹೊಳೆಯುತ್ತವೋ ಅಂಥವು ಜನರಿಗೆ ಬೇಕಾಗಿಲ್ಲ. ಹೀಗಾಗಿ ತಮ್ಮ ಬುದ್ಧಿಗೆ ನಿಲುಕದ್ದನ್ನೆಲ್ಲ ಜನರು ಆಶ್ಚರ್ಯದಿಂದ ನೋಡುತ್ತಾರೆ. ಮತ್ತು ಅದಕ್ಕೆ ತಲೆಕೊಡುತ್ತಾರೆ. ಇದು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಸ್ಪಷ್ಟವಾಗಿ ಗೊತ್ತಿರುವ ವಿಷಯ. ಹೀಗಾಗಿ ಅವು ಒಂದಾದ ಮೇಲೊಂದರಂತೆ ಇಂಥ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತವೆ.

ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕೆಲಸ ಮಾಡುವ ನನ್ನ ಗೆಳೆಯನೊಬ್ಬ ಇದನ್ನು ಚೆನ್ನಾಗಿ ವಿಶ್ಲೇಷಣೆ ಮಾಡುತ್ತಾನೆ. ಅವನ ದೃಷ್ಟಿಯಲ್ಲಿ ಅವನೊಬ್ಬ ಪತ್ರಕರ್ತನಲ್ಲ. ಒಬ್ಬ ಬಿಜಿನೆಸ್ ಮ್ಯಾನ್, ಅವನ ಜತೆ ಕೆಲಸ ಮಾಡುವ ಸಹ ಪತ್ರಕರ್ತರು ಸೇಲ್ಸ್ ಮನ್‌ಗಳು. ಜನ ಏನನ್ನು ನೋಡುತ್ತಾರೆ ಎಂಬುದಷ್ಟೇ ಅವರಿಗೆ ಮುಖ್ಯ. ಜನರಿಗೆ ಏನನ್ನು ಕೊಡಬೇಕು ಎಂಬುದು ಮುಖ್ಯವಲ್ಲ. ಒಂದು ವೇಳೆ ಜನರಿಗೆ ನಿಜವಾಗಿಯೂ ಕೊಡಬೇಕಾಗಿದ್ದನ್ನು ಕೊಟ್ಟರೆ ಅವರು ಸ್ಪರ್ಧೆಯಲ್ಲಿ ಉಳಿಯುವುದಿಲ್ಲ. ಹೀಗಾಗಿ ನಾವು ಜನ ನೋಡುವುದನ್ನಷ್ಟೆ ಕೊಡುತ್ತೇವೆ ಎನ್ನುತ್ತಾನೆ ಆತ. ಹೀಗಾಗಿ ಜ್ಯೋತಿಷ್ಯ, ಮಾಟ-ಮಂತ್ರ, ಸೆಕ್ಸ್, ಕ್ರಿಕೆಟ್ ಇಂಥವುಗಳೇ ಚಾನಲ್‌ಗಳಿಗೆ ಆದ್ಯತೆಯ ವಿಷಯ. ಅವುಗಳನ್ನು ಬಿಟ್ಟು ಇವು ಬದುಕಲಾರಂತೆ ಆಗಿಹೋಗಿವೆ.

ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ನೇಮಕಗೊಂಡ ತರುವಾಯ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಹೇಳಿದ್ದು ಇದನ್ನೇ. ಅವರಿಗೆ ಎಲೆಕ್ಟ್ರಾನಿಕ್ ಮಾಧ್ಯಮಗಳ ಕುರಿತು ತೀವ್ರ ಅಸಮಾಧಾನವಿತ್ತು. ಚಾನಲ್‌ಗಳು ಅಂಧಶ್ರದ್ಧೆಗಳನ್ನು ಹರಡುತ್ತಿವೆ. ಇವುಗಳಿಗೆ ಲಗಾಮು ಹಾಕಲೇಬೇಕು ಎಂಬ ಮಾತುಗಳನ್ನು ಅವರು ಆಡಿದರು. ಖಟ್ಜು ಕೆಲವು ದೇಶಮಟ್ಟದ ಹಿಂದಿ ಚಾನಲ್‌ಗಳನ್ನು ನೋಡಿ ಈ ಅಭಿಪ್ರಾಯ ಹೇಳಿರಬಹುದು. ಒಂದು ವೇಳೆ ಅವರು ನಮ್ಮ ಕನ್ನಡ ಚಾನಲ್‌ಗಳನ್ನು ನೋಡಿದ್ದರೆ, ಅದರಲ್ಲೂ ನರೇಂದ್ರ ಬಾಬು ಶರ್ಮನಂಥವನ ಮಾತುಗಳನ್ನು ಒಂದು ಹತ್ತು ನಿಮಿಷ ಕೇಳಿದ್ದರೆ ಅವರ ಎದೆ ಒಡೆದುಹೋಗುತ್ತಿತ್ತೇನೋ?

ಆರ್ಥಿಕ ಉದಾರೀಕರಣ, ಜಾಗತೀಕರಣದ ಪರಿಣಾಮವಾಗಿ ದೇಶದಲ್ಲಿಂದು ಎಲೆಕ್ಟ್ರಾನಿಕ್ ಮಾಧ್ಯಮ ಬೆಳೆದು ನಿಂತಿದೆ. ಈಗ ಅದು ಲಂಗು ಲಗಾಮಿಲ್ಲದ ಕುದುರೆ. ನಮ್ಮ ಪತ್ರಿಕಾ ಮಾಧ್ಯಮಕ್ಕೂ ಎಲೆಕ್ಟ್ರಾನಿಕ್ ಮಾಧ್ಯಮಕ್ಕೂ ಅವುಗಳ ರಚನೆ, ದೃಷ್ಟಿಯಲ್ಲೇ ಮೂಲಭೂತವಾದ ವ್ಯತ್ಯಾಸವಿದೆ. ಪತ್ರಿಕಾ ಮಾಧ್ಯಮ ಭಾರತದ ಮಟ್ಟಿಗೆ ಬೆಳೆಯಲು ಶುರುವಾಗಿದ್ದು ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ. ಆ ಕಾಲದಲ್ಲಿ ಪತ್ರಿಕಾ ಮಾಧ್ಯಮಗಳ ಧೋರಣೆ ಹೇಗಿತ್ತೆಂದರೆ ಅದು ಒಂದು ಆದರ್ಶದ ಕ್ಷೇತ್ರವಾಗಿತ್ತು. ಅದೂ ಕೂಡ ಚಳವಳಿಯ ಭಾಗವಾಗಿಯೇ ಕೆಲಸ ಮಾಡುತ್ತಿತ್ತು.

ಇವತ್ತಿಗೂ ನೀವು ಪತ್ರಿಕೆಗಳನ್ನು, ಅದರಲ್ಲೂ ವಿಶೇಷವಾಗಿ ದಿನಪತ್ರಿಕೆಗಳನ್ನು ನೋಡಿ. ಅವುಗಳು ಸಾಮಾಜಿಕ ಕಳಕಳಿ ಅವುಗಳಿಗೆ ಸ್ಥಾಯಿಯಾದ ಉದ್ದೇಶಗಳಲ್ಲಿ ಒಂದು. ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳು ಕೆಲವು ರಾಜಕೀಯ ಪಕ್ಷಗಳ, ವ್ಯಕ್ತಿಗಳ, ಸಂಘಟನೆಗಳ ತುತ್ತೂರಿಯಾಗಿದ್ದರೂ ಅಲ್ಲಿ ಜನಪರವಾದ ಸುದ್ದಿಗಳಿಗೆ ಮಹತ್ವ ಇದ್ದೇ ಇರುತ್ತದೆ. ಯಾವುದೋ ಹಳ್ಳಿಯ ಏನೋ ಸಮಸ್ಯೆಯನ್ನು ಒಬ್ಬ ಓದುಗ ವಾಚಕರ ವಾಣಿಯಲ್ಲಿ ಬರೆಯಬಲ್ಲ, ಆ ಸುದ್ದಿ ಇತರ ಓದುಗರಿಗೆ ಅಪ್ರಸ್ತುತವಾಗಿದ್ದರೂ ಕೂಡ.

ಅದಕ್ಕಿಂತ ಹೆಚ್ಚಾಗಿ ವೃತ್ತ ಪತ್ರಿಕೆಗಳ ಪತ್ರಕರ್ತರನ್ನು ಆ ಪತ್ರಿಕೆಗಳ ಮಾಲೀಕ ನನಗೆ ಸೇಲ್ ಆಗುವ ಸುದ್ದಿಯನ್ನೇ ಬರೆಯಬೇಕು ಎಂದು ಎಂದೂ ಸಹ ಕೈಹಿಡಿದು ಬರೆಸಲು ಹೋಗುವುದಿಲ್ಲ. ಅಷ್ಟು ಸ್ವಾತಂತ್ರ್ಯವನ್ನು ಈ ಪತ್ರಕರ್ತರು ಅನುಭವಿಸುತ್ತಿದ್ದಾರೆ. ಆದರೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಇದಕ್ಕೆ ಅವಕಾಶವಿಲ್ಲ. ವರದಿಗಾರ ಸೇಲ್ ಆಗುವ ಸುದ್ದಿಯನ್ನೇ ಕೊಡಬೇಕು. ಕೊಡದೇ ಇದ್ದರೆ ಸಂಪಾದಕ ಸ್ಥಾನಗಳಲ್ಲಿರುವವರು ತಲೆ ತಿನ್ನಲು ಶುರು ಮಾಡಿರುತ್ತಾನೆ. ಕೆಲಸ ಕಳೆದುಕೊಳ್ಳುವ ಭೀತಿಗೆ ಸಿಲುಕುವ ವರದಿಗಾರ ತನ್ನ ಇಚ್ಛೆಗೆ ವಿರುದ್ಧವಾಗಿ ಜನಪ್ರಿಯ ಸುದ್ದಿಗಳ ಬೆನ್ನುಹತ್ತುತ್ತಾನೆ.

ಹೀಗಾಗಿ ಯಾವುದೋ ಒಂದು ಕಾಲೇಜಿನ ಮುಂಭಾಗ ಯಾರೋ ಒಂದು ನಿಂಬೆಹಣ್ಣು, ಕುಂಕುಮದ ಪೊಟ್ಟಣ, ಸಣ್ಣ ಬೊಂಬೆ ಇಟ್ಟು ಹೋಗಿದ್ದರೆ ಚಾನಲ್ ವರದಿಗಾರ ಎಲ್ಲವನ್ನೂ ಬಿಟ್ಟು ಓಬಿವ್ಯಾನ್ ತಂದು ಅದರ ಕವರೇಜ್ ಗೆ ನಿಂತುಬಿಡುತ್ತಾನೆ. ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ಒಲಿಸಿಕೊಳ್ಳಲೆಂದೇ ಮಾಟ ಮಾಡಿಸಿದ್ದಾನೆ ಎಂದು ಓತಪ್ರೋತ ಕಥೆ ಕಟ್ಟುತ್ತಾನೆ. ಚಾನಲ್ ಗಳಲ್ಲಿ ಗಂಟೆಗಟ್ಟಲೆ ಪ್ಯಾನಲ್ ಚರ್ಚೆ ಶುರುವಾಗಿಬಿಡುತ್ತದೆ. ಅಲ್ಲಿ ಕೆಲವು ಚಿತ್ರವಿಚಿತ್ರ ವೇಷದ ಜ್ಯೋತಿಷಿಗಳು, ಮಾಟಗಾರರು, ಕಾಳಿ ಉಪಾಸಕರೆಂದು ಹೇಳಿಕೊಳ್ಳುವ ಆಂಟಿ ಮಾಟಗಾರರು (ವೈರಸ್ ಗಳಿಗೆ ಆಂಟಿವೈರಸ್ ಗಳಿದ್ದಂತೆ ಈ ಆಂಟಿ ಮಾಟಗಾರರು, ಇವರೂ ಕೂಡ ಒಂದು ಥರದ ವೈರಸ್ಸುಗಳೇ) ಬಂದು ಕುಳಿತುಬಿಡುತ್ತಾರೆ. ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಟಿವಿಯಲ್ಲಿ ಕಾಣಿಸಿಕೊಳ್ಳುತ್ತೇವೆಂಬ ಕಾರಣಕ್ಕೆ ಕ್ಯಾಮೆರಾ ಮುಂದೆ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ಚಾನಲ್‌ಗಳ ಹೊಟ್ಟೆ ತುಂಬುತ್ತದೆ.

ನಿತ್ಯ ಬೆಳಿಗ್ಗೆ ನೀವು ಟಿವಿ ಆನ್ ಮಾಡಿ ನೋಡಿ. ಎಲ್ಲ ಚಾನಲ್ ಗಳಲ್ಲೂ ವಿಚಿತ್ರ ಪೋಷಾಕುಗಳನ್ನು ಧರಿಸಿ, ವಿಚಿತ್ರ ರೀತಿಯಲ್ಲಿ ಸಜ್ಜುಗೊಳಿಸಿದ ಸ್ಟುಡಿಯೋದಲ್ಲಿ ಜ್ಯೋತಿಷಿಗಳು ಹಾಜರಾಗಿರುತ್ತಾರೆ. ಕೆಲವು ಜ್ಯೋತಿಷಿಗಳೋ ತಮ್ಮನ್ನು ತಾವು ಗರ್ಭಗುಡಿಯಲ್ಲಿ ಕುಳಿತುಕೊಂಡ ಹಾಗೆ ಸ್ಟುಡಿಯೋ ಅಲಂಕಾರ ಮಾಡಿಸಿಕೊಂಡಿರುತ್ತಾರೆ. ತಮ್ಮ ತಲೆಯ ಹಿಂದೆ ಡ್ಯೂಪ್ಲಿಕೇಟ್ ಪ್ರಭಾವಳಿಗಳ ಸಮೇತ ಆಸೀನರಾಗಿ ಜ್ಯೋತಿಷ್ಯ ಶುರುಮಾಡುತ್ತಾರೆ. sಸಾಧಾರಣವಾಗಿ ಕನ್ನಡ ಚಾನಲ್‌ಗಳಲ್ಲಿ ಈ ಜ್ಯೋತಿಷಿಗಳು ಲ್ಯಾಪ್ ಟಾಪ್ ನಲ್ಲಿ ಜ್ಯೋತಿಷ್ಯದ ಒಂದು ರೆಡಿಮೇಡ್ ಸಾಫ್ಟ್ ವೇರ್ ಹಾಕಿಕೊಂಡು ಕೂತಿರುತ್ತಾರೆ. ಒಬ್ಬ ನಿರೂಪಕಿ ಜತೆಗೆ ಕುಳಿತಿರುತ್ತಾಳೆ. ಆಕೆಯೇ ದೂರವಾಣಿ ಕರೆಗಳನ್ನು ಸ್ವೀಕರಿಸಿ ವೀಕ್ಷಕನ/ವೀಕ್ಷಕಳ ಜನ್ಮದಿನಾಂಕ ಪಡೆಯುತ್ತಾಳೆ, ಅವಳು ಅವನ ಜತೆ ಮಾತನಾಡುತ್ತಿರುವಾಗ ಜ್ಯೋತಿಷಿ ಲ್ಯಾಪ್ ಟಾಪ್‌ನಲ್ಲಿ ಜನ್ಮದಿನಾಂಕ ಎಂಟ್ರಿ ಮಾಡಿ, ಗುರು, ಶನಿ, ರಾಹು ಎಲ್ಲರೂ ಯಾವ್ಯಾವ ಮನೆಯಲ್ಲಿದ್ದಾರೆ ಎಂಬುದನ್ನು ಗಮನಿಸಿ ತನ್ನ ಜಡ್ಜ್‌ಮೆಂಟ್ ಕೊಡೋದಕ್ಕೆ ಶುರು ಮಾಡುತ್ತಾನೆ.

ಸಾಧಾರಣವಾಗಿ ಈ ಜ್ಯೋತಿಷಿಗಳು ದುರಹಂಕಾರಿಗಳು. ಅವರು ಮಾತನಾಡುವ ಶೈಲಿಯನ್ನು ಸರಿಯಾಗಿ ಗಮನಿಸಿ. ತಾವು ಏನನ್ನು ಹೇಳುತ್ತಿದ್ದೇವೋ ಅದೇ ಸತ್ಯ ಎಂಬ ಉಡಾಫೆ ಅವರುಗಳದ್ದು. ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಅವರ ಬಳಿ ಪರಿಹಾರವಿದೆ. ಚಿತ್ರ ವಿಚಿತ್ರವಾದ ಪರಿಹಾರಗಳನ್ನು ಅವರು ನೀಡುತ್ತಾರೆ. ತುಪ್ಪದ ದೀಪ ಹಚ್ಚಿ ಎನ್ನುವುದರಿಂದ ಹಿಡಿದು, ಆ ದೇವಸ್ಥಾನದಲ್ಲಿ ಅಭಿಷೇಕ ಮಾಡಿ, ಈ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿ, ಮನೆ ಸುತ್ತ ಎಳ್ಳು ಚೆಲ್ಲಿ, ಬಿಳಿ ಬಟ್ಟೆ ಹಾಕ್ಕೊಳ್ಳಿ, ಶನಿವಾರ ಮನೆಯಿಂದ ಹೊರಗೆ ಹೋಗಬೇಡಿ, ಬೀದಿ ನಾಯಿಗೆ ಊಟ ಹಾಕಿ ಎನ್ನುವವರೆಗೆ ಈ ಪರಿಹಾರಗಳಿರುತ್ತವೆ. ಒಬ್ಬ ಜ್ಯೋತಿಷಿ ಕಳೆದ ವರ್ಷ ಫೆಬ್ರವರಿಯಲ್ಲಿ ಜಗತ್ತು ಪ್ರಳಯವಾದಂತೆ ತಡೆಯಲು ದೇವಸ್ಥಾನಗಳಲ್ಲಿ ಐದು ವಿಧವಿಧದ ಎಣ್ಣೆಗಳನ್ನು ಬಳಸಿ ದೀಪ ಹಚ್ಚಿ ಎಂದು ಕರೆ ನೀಡಿದ್ದ. ರಾಜ್ಯದ ಎಲ್ಲ ದೇವಸ್ಥಾನಗಳಲ್ಲೂ ಅಂದು ನೂಕುನುಗ್ಗಲು.

ಜ್ಯೋತಿಷ್ಯ ಸಾಕಾಗದೇ ಹೋದಾಗ ಚಾನಲ್‌ಗಳು ಪುನರ್ಜನ್ಮ ಕುರಿತು ಕಾರ್ಯಕ್ರಮ ಮಾಡುತ್ತವೆ. ವ್ಯಕ್ತಿಯೊಬ್ಬನಿಗೆ ಪ್ರಜ್ಞೆ ತಪ್ಪಿಸಿ, ಅರೆ ಪ್ರಜ್ಞಾವಸ್ಥೆಯಲ್ಲಿ ಅವನ ಪುನರ್ಜನ್ಮದ ಕಥೆ ಕೇಳುವುದು ಈ ಕಾರ್ಯಕ್ರಮದ ತಂತ್ರ. ಇದೂ ಸಹ ಸ್ಕ್ರಿಪ್ಟೆಡ್ ಕಾರ್ಯಕ್ರಮ. ಸತ್ತ ಕೆಲವೇ ದಿವಸಕ್ಕೆ ಚಾನಲ್ ಒಂದರಲ್ಲಿ ಸಾಯಿಬಾಬಾ ಬಂದು ಮಾತನಾಡಿದ್ದೂ ಸಹ ಹೀಗೆಯೇ.

ಇನ್ನೊಂದು ಗಮನಿಸಬೇಕಾದ ಅಂಶವೊಂದಿದೆ. ಜ್ಯೋತಿಷ್ಯ, ಮಾಟ ಮಂತ್ರ ಇನ್ನಿತ್ಯಾದಿ ಅಂಧಶ್ರದ್ಧೆಗಳ ವಿರುದ್ಧ ಸುದ್ದಿ ಮಾಡಿದರೂ, ಕಾರ್ಯಕ್ರಮ ಮಾಡಿದರೂ ಜನರು ನೋಡುತ್ತಾರೆ. ಹಿಂದೆ ಕ್ರೈಂ ಡೈರಿ, ಕ್ರೈಂಡ ಸ್ಟೋರಿ ಥರಹದ ಕಾರ್ಯಕ್ರಮಗಳಲ್ಲಿ ಬ್ಲೇಡ್ ಬಾಬಾಗಳು, ಡೋಂಗಿ ಸ್ವಾಮಿಗಳು, ಸುಳ್ಳು ದೇವರನ್ನು ಆವಾಹನೆ ಮಾಡಿಕೊಳ್ಳುವವರ ವಿರುದ್ಧ ಕಾರ್ಯಕ್ರಮಗಳು ಬರುತ್ತಿದ್ದವು. ಇತ್ತೀಚಿಗೆ ಹುಲಿಕಲ್ ನಟರಾಜ್ ಅವರ ಪವಾಡ ಬಯಲು ಕಾರ್ಯಕ್ರಮಗಳೂ ಸಹ ಜನಪ್ರಿಯವಾಗಿದ್ದವು. ಆದರೆ ಚಾನಲ್ ಗಳಿಗೆ ಹೊಟ್ಟೆ ತುಂಬಿಸುವಷ್ಟು ಇವು ಶಕ್ತವಾಗಿಲ್ಲ. ಹೀಗಾಗಿ ಅವು ಹೀಗೂ ಉಂಟೆ ಥರದ ಕಾರ್ಯಕ್ರಮಗಳನ್ನು ವರ್ಷಗಟ್ಟಲೆ ಪ್ರಸಾರ ಮಾಡುತ್ತವೆ.

ಜ್ಯೋತಿಷ್ಯ ಈಗ ಕವಲೊಡೆದು ಹೆಮ್ಮರವಾಗಿ ಬೆಳೆದಿದೆ. ಜ್ಯೋತಿಷಿಗಳಿಗೆ ವಾಸ್ತು ತಜ್ಞರು, ಸಂಖ್ಯಾ ತಜ್ಞರು, ಮಂತ್ರವಾದಿಗಳು ಪೈಪೋಟಿ ನೀಡುತ್ತಿದ್ದಾರೆ. ಹಿಂದೆ ಜ್ಯೋತಿಷಿಗಳನ್ನು ಸ್ಟುಡಿಯೋ ಚರ್ಚೆಗೆ ಕರೆದರೆ ಜತೆಯಲ್ಲಿ ಪ್ರತಿವಾದ ಮಾಡಲು ಒಬ್ಬ ವಿಜ್ಞಾನಿಯನ್ನೋ, ವಿಜ್ಞಾನ ಬರಹಗರಾರನ್ನೋ ಕಾಟಚಾರಕ್ಕಾದರೂ ಕರೆಯುತ್ತಿದ್ದರು. ಈಗ ಇವರುಗಳದ್ದೇ ದರ್ಬಾರು. ಕೆಲವು ಜ್ಯೋತಿಷಿಗಳನ್ನು ಕಿರುತೆರೆಯ ಮೇಲೆ ನೊಡುವುದಕ್ಕೆ ಭಯವಾಗುತ್ತದೆ. ಹಾಗಿರುತ್ತದೆ ಅವರ ವೇಷಭೂಷಣ. ಈ ಜ್ಯೋತಿಷಿಗಳೇ ಈಗ ಚಾನಲ್‌ಗಳಿಗೆ ಹಣ ತರುವ ಏಜೆಂಟರಾಗಿದ್ದಾರೆ.

ಅಂಧಶ್ರದ್ಧೆಗಳನ್ನು ಹರಡುವ ಚಾನಲ್‌ಗಳ ಮುಖ್ಯಸ್ಥರನ್ನೆಲ್ಲ ಒಮ್ಮೆ ಕರೆಸಿ ಅವರೊಂದಿಗೆ ಮಾತನಾಡಿ ನೋಡಿ. ಎಲ್ಲರೂ ಒಂದೇ ಉತ್ತರ ನೀಡುತ್ತಾರೆ. ಟಿಆರ್‌ಪಿಗಾಗಿ ನಾವು ಇದನ್ನೆಲ್ಲ ಮಾಡುತ್ತೇವೆ ಎಂಬುದು ಅವರು ಸೋಗು. ತಾವು ಮಾಡುತ್ತಿರುವುದು ಸರಿಯಲ್ಲ ಎಂಬುದನ್ನು ಅವರು ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ. ಟಿಆರ್‌ಪಿ ಕಪಿಮುಷ್ಠಿಯಲ್ಲಿ ನಾವೆಲ್ಲ ಸಿಕ್ಕಿಬಿದ್ದಿದ್ದೇವೆ ಎಂದು ಅವರು ತಮ್ಮ ಅಸಹಾಯಕತೆ ತೋರ್ಪಡಿಸಿಕೊಳ್ಳುತ್ತಾರೆ.

ಅಷ್ಟಕ್ಕೂ ಟಿಆರ್ ಪಿ ಎಂಬುದೇ ಮಹಾಮೋಸದ ಪ್ರಕ್ರಿಯೆ. ಅದು ನಿಜವಾದ ನೋಡುಗರ ಸಂಖ್ಯೆಯನ್ನು ಪ್ರತಿನಿಧಿಸುವುದಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಷಯವೇ. ಟಿಆರ್‌ಪಿಯನ್ನು ನಿರ್ಧರಿಸುವ ಸಂಸ್ಥೆ ರಾಜ್ಯದ ಪ್ರಮುಖ ನಗರಗಳಲ್ಲಿ ಆಯ್ದ ಕೆಲವು ಟಿವಿ ವೀಕ್ಷಕರ ಮನೆಗಳಲ್ಲಿ ತಮ್ಮ ಉಪಕರಣಗಳನ್ನು ಜೋಡಿಸಿರುತ್ತಾರೆ. ಅವರು ಯಾವ ಚಾನಲ್ ನ ಯಾವ ಕಾರ್ಯಕ್ರಮ ನೋಡುತ್ತಾರೆ ಎಂಬುದರ ಆಧಾರದ ಮೇಲೆ ಟಿಆರ್‌ಪಿ ಮತ್ತು ಜಿಆರ್‌ಪಿಗಳು ನಿರ್ಧಾರವಾಗುತ್ತವೆ. ಟಿಆರ್ ಪಿಯನ್ನು ಆಧರಿಸಿ ಜಾಹೀರಾತು ಸಂಸ್ಥೆಗಳು ಜಾಹೀರಾತು ನೀಡುತ್ತವೆ. ಜಾಹೀರಾತು ಇಲ್ಲದೇ ಇದ್ದರೆ ಚಾನಲ್‌ಗಳು ಬದುಕುವುದಿಲ್ಲ. ಹೀಗಾಗಿ ಅವುಗಳಿಗೆ ಟಿಆರ್‌ಪಿ ಬೇಕೇಬೇಕು.

ಟಿಆರ್ ಪಿ ಮೆಷಿನ್ನುಗಳು ಪಟ್ಟಣಗಳಲ್ಲಿ ಇರುವುದಿಲ್ಲ, ಹಳ್ಳಿಗಳಲ್ಲಿ ಇರುವುದಿಲ್ಲ. ಹೀಗಾಗಿ ಗ್ರಾಮಾಂತರ ಪ್ರದೇಶದ ಜನರ ಇಷ್ಟಾನಿಷ್ಟಗಳು ಮೆಷಿನ್ನುಗಳಲ್ಲಿ ಲೆಕ್ಕ ಆಗೋದೇ ಇಲ್ಲ. ಹಾಗೆ ನೋಡಿದರೆ ಆಧುನೀಕರಣದ ಭರಾಟೆಯಲ್ಲಿ ಗ್ರಾಮೀಣ ಜನರನ್ನು ಲೆಕ್ಕಕ್ಕೆ ತೆಗೆದುಕೊಳ್ಳುವವರಾದರೂ ಯಾರು? ಟಿಆರ್‌ಪಿ ಮೆಷಿನ್ನುಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಯಾಕೆ ಇಡುವುದಿಲ್ಲವೆಂಬ ಪ್ರಶ್ನೆಗೆ ಉತ್ತರವೂ ಆಘಾತಕಾರಿಯಾಗಿಯೇ ಇದೆ. ಗ್ರಾಮೀಣ ಜನರು ಜಾಹೀರಾತುದಾರರ ಗ್ರಾಹಕರಲ್ಲವಾದ್ದರಿಂದ ಹಳ್ಳಿಗಳ ಜನರ ಅಭಿರುಚಿ, ಇಷ್ಟಗಳನ್ನು ಅವರು ಲೆಕ್ಕ ಹಾಕುವುದಿಲ್ಲವಂತೆ.

ಇಂಥ ಸನ್ನಿವೇಶದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಮೌಢ್ಯವನ್ನು ಬಿತ್ತುವ ಕೆಲಸವನ್ನು ನಿಲ್ಲಿಸುವುದಾದರೂ ಹೇಗೆ? ಇದು ಯಾರ ಹೊಣೆಗಾರಿಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಬಹುಶಃ ಈ ಸಮಸ್ಯೆಗೆ ಇದುವರೆಗೆ ಯಾರೂ ಸಹ ಮುಖಾಮುಖಿಯಾಗಿ ನಿಂತು ಪರಿಹಾರಕ್ಕೆ ಯತ್ನಿಸದೇ ಇರುವುದೇ ದೊಡ್ಡ ಸಮಸ್ಯೆಯಾಗಿದೆ.

ಸಾಮಾಜಿಕ ಸಂಘಟನೆಗಳು ಇಂಥ ಅಂಧಶ್ರದ್ಧೆಗಳ ವಿರುದ್ಧ ಮಾತನಾಡುತ್ತವೆ, ಆದರೆ ಚಾನಲ್ ಗಳ ಮುಂದೆ ನಿಂತು ಇದನ್ನು ಹೇಳಲು ಯತ್ನಿಸಿದ ಉದಾಹರಣೆಗಳು ಕಡಿಮೆ. ಸುದ್ದಿಮಾಧ್ಯಮಗಳನ್ನು ಎದುರುಹಾಕಿಕೊಳ್ಳಲು ಸಂಘಟನೆಗಳು ಹಿಂದೆಮುಂದೆ ನೋಡುತ್ತವೆ. ಎಲ್ಲೋ ಅಲ್ಲೊಂದು ಇಲ್ಲೊಂದು ಧ್ವನಿಗಳು ಮೊಳಗಿದರೂ ಅವು ಹಾಗೆಯೇ ತಣ್ಣಗಾಗುತ್ತವೆ.

ಇಂಥ ಸಂದರ್ಭದಲ್ಲಿ ಕ್ರಿಯಾಶೀಲ ಪಾತ್ರ ವಹಿಸಬಹುದಾಗಿರುವುದು ಮೀಡಿಯಾದ ಬಹುಮುಖ್ಯ ಭಾಗವಾಗಿರುವ ಪತ್ರಿಕಾರಂಗ. ಎಲೆಕ್ಟ್ರಾನಿಕ್ ಮಾಧ್ಯಮಗಳ ಇಂಥ ಹೊಣೆಗೇಡಿತನದ ವಿರುದ್ಧ ಮಾತನಾಡಬಹುದಾಗಿರುವುದು ಪತ್ರಿಕೆಗಳು. ಆದರೆ ನೋವಿನ ಸಂಗತಿಯೆಂದರೆ ಈ ಪತ್ರಿಕೆಗಳು ಕೂಡ ಎಲೆಕ್ಟ್ರಾನಿಕ್ ಮಾಧ್ಯಮಗಳ ಪ್ರಭಾವಳಿಗೆ ಒಳಗಾಗಿ ಜ್ಯೋತಿಷ್ಯ ಸಂಬಂಧಿ ಲೇಖನಗಳನ್ನು ದಿನೇದಿನೇ ಹೆಚ್ಚು ಮಾಡುತ್ತಲೇ ಇವೆ. ಕನ್ನಡದ ಬಹುತೇಕ ಎಲ್ಲ ದಿನಪತ್ರಿಕೆಗಳು ಜ್ಯೋತಿಷ್ಯಕ್ಕಾಗಿಯೇ ವಾರಕ್ಕೊಂದು ವಿಶೇಷ ಪುರವಣಿಯನ್ನು ನೀಡುತ್ತಿವೆ. ಯಾವ ನೈತಿಕ ಧೈರ್ಯದಿಂದ ಇವುಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ವಿರುದ್ಧ ಮಾತನಾಡಬಲ್ಲವು?

ಒಂದು ಮಾಧ್ಯಮದ ತಪ್ಪುಗಳನ್ನು ಇನ್ನೊಂದು ಮಾಧ್ಯಮದವರು ಬರೆಯಬಾರದು ಎಂಬ ಅಲಿಖಿತ ನಿಯಮವೊಂದು ಕನ್ನಡ ಮಾಧ್ಯಮರಂಗದಲ್ಲಿ ಜಾರಿಯಲ್ಲಿದೆ. ಇದು ಇನ್ನೊಂದು ಬಗೆಯ ಮೌಢ್ಯ. ಇವರು ಪರಸ್ಪರ ಕೆಸರು ಎರಚಿಕೊಂಡು ಹೊಡೆದಾಡಲಿ ಎಂದು ಯಾರೂ ಬಯಸುತ್ತಿಲ್ಲ. ಆದರೆ ಒಂದು ಮಾಧ್ಯಮ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವಾಗ ಇನ್ನೊಂದು ಮಾಧ್ಯಮ ಸುಮ್ಮನೇ ಕುಳಿತುಕೊಳ್ಳುವುದು ಆತ್ಮವಂಚನೆಯಲ್ಲವೇ?

ಈ ಆತ್ಮವಂಚನೆಯ ವಿರುದ್ಧ ಕರ್ನಾಟಕದ ಜನರು ಜಾಗೃತರಾಗಬೇಕಿದೆ. ಅದಕ್ಕೂ ಮುನ್ನ ವೈಜ್ಞಾನಿಕ ಮನೋಭಾವವಿರುವ ಎಲ್ಲರೂ ಸಂಘಟಿತರಾಗಬೇಕಿದೆ. ಕರ್ನಾಟಕ ವಿಜ್ಞಾನ್ ಪರಿಷತ್‌ನಂಥ ಸಂಘಟನೆಗಳು ಈ ಚಾನಲ್‌ಗಳ ಮುಖ್ಯಸ್ಥರೊಂದಿಗೆ ಮಾತನಾಡಬೇಕಿದೆ, ಒತ್ತಡ ಹೇರಬೇಕಿದೆ. ಚಾನಲ್‌ಗಳು ಸರಿಪಡಿಸಲಾಗದ ತಪ್ಪು ಮಾಡಿದಾಗ ಅವುಗಳ ವಿರುದ್ಧ ಪ್ರತಿಭಟಿಸಬೇಕಿದೆ. ಮೀಡಿಯಾಗಳು ಹರಡುವ ಅಂಧಶ್ರದ್ಧೆಯ ವಿರುದ್ಧ ದೂರು ನೀಡುವಂಥ ಧೈರ್ಯ ಮತ್ತು ಬದ್ಧತೆಯನ್ನು ನಾವು ನೀವೆಲ್ಲರೂ ಸೇರಿ ಪ್ರದರ್ಶಿಸಬೇಕಿದೆ.

-ದಿನೇಶ್ ಕುಮಾರ್ ಎಸ್.ಸಿ.
ಪ್ರಧಾನ ಸಂಪಾದಕ, ಕರವೇ ನಲ್ನುಡಿ 

Friday, February 10, 2012

ಪ್ರೇಮ ನೀವೇದನಾ ಪತ್ರ

ಪ್ರೇಮಿಗಳ ದಿನವನ್ನು ಎದುರು ನೋಡುತ್ತಿರುವ ಪ್ರೇಮಿಗಳಿಗೆ ಶುಭಾಶಯ ಕೋರುತ್ತಾ ಹೀಗೋಂದು ಪ್ರೇಮ ನೀವೇದನಾ ಪತ್ರ ಒಲವಿನಿಂದ ಜಗದ ಪ್ರೀತಿಸುವ ಹೃದಯಗಳಿಗೆ.......................... :) :)


ಹಾಯ್ ಡಿಯರ್,
ಒಂದು ಪ್ರೇಮ ಪತ್ರ ನಿನಾಗಾಗಿ ಬರೆಯೋಣವೆಂದು ಕೂತಿರುವೆ.ಮಡಚಿ ಹರಿದು ಮೂಲೆ ಸೇರಿಸದಿರು.ಇಷ್ಟವಾಗದಿದ್ದರೂ ಸರಿ ಒಮ್ಮೆ ಓದು.ಪ್ರೀತಿಯ ಚಿಲುಮೆ ಚಿಮ್ಮಬಹುದೇನೋ ಅನ್ನೋ ನನ್ನಾಸೆಗೆ ಬರಿದೆ ತಣ್ಣೀರ ಸುರಿಸದಿರು.

ನಾನು ನಿನ್ನ ನೋಡಿದ್ದೆ ಆ ದಿನ ಬಿಯಂಟಿಸಿಗಾಗಿ ಕಾಯುತ್ತಾ ತುಂತುರು ಮಳೆಯಲ್ಲಿ ಛತ್ರಿ ಹಿಡಿದು ನೀ ನಿಂತಿದ್ದೆ ಒಂದಷ್ಟು ದೂರದಲ್ಲಿ ಬೈಕ ನಿಲ್ಲಿಸಿ ನಿನ್ನ ನೋಡುತ್ತಲೆ ನನ್ನ ನಾ ಮರೆತಿದ್ದೆ.ಅಲ್ಲಿ ಮದ್ಯೆ ಇದ್ದದ್ದೂ ತುಂತುರ ಹನಿಗಳಷ್ಟೆ.ಬಸ್ಸು ಬಂದು ನೀ ಯಾವಾಗ ಬಸ್ಸೇರಿದೆಯೋ ಅಯ್ಯೋ ನಾನ್ಯಾಕೆ ನಿನ್ನ ಮುಂದು ಬೈಕ ತಂದು ನಿಲ್ಲಿಸಬಾರದಿತ್ತು ಹಾಗೆಯೆ ನೀನೊಂದು ಬೆಚ್ಚನೆಯ ಡ್ರಾಪ್ ಕೇಳುತಿದ್ದೀಯೇನೋ? ಪ್ರಯತ್ನವೇ ಪಡೆದೆ ನಾ ನಿಂತೆ ಇದ್ದನಲ್ಲ ಯೋಚಿಸಿ ಮರುಗಿದ್ದೆ.ಅನಂತರ ನಿನ್ನ ಅದೆಷ್ಟೂ ಸಲ ನೋಡುತ್ತಲೆ ಬಂದಿದ್ದೀನಿ.ಇದೇನೋ ಪ್ಲರ್ಟ್ ಇರಬಹುದೇನೋ ಅನ್ನೋದನ್ನ ಬಹಳ ಸಲ ಯೋಚಿಸಿದ್ದೇನೆ, ಹಾಗೆನಿಸಿದಾಗಲೆಲ್ಲ ನನ್ನ ಮನ ಸ್ಪಷ್ಟ ನಿರಾಕರಣೆನ ತೋರುತ್ತಿದೆ.ಇಲ್ಲಾ ಕಣೆ ನಿನ್ನ ಕಂಡಾಗಲೆಲ್ಲ ನನ್ನ ಹೃದಯದಲ್ಲಿ ಮಿಂಚು ಹರಿದಿದೆ.

ಈ ಲೆಟರ್ ನೋಡಿ ನಗುತಿದ್ದೀಯ, ಒಕ್ಕಣೆಯಲ್ಲಿ ನನ್ನ ರೆಗಿಸೋ ಪದಗಳೀಗಾಗಿ ತಡಕಾಡುತಿದ್ದೀಯ? ಅಷ್ಟಾದರೆ ನನ್ನ ಈ ಪ್ರಯತ್ನ ಸಾರ್ಥಕ, ನಿನ್ನ ರೇಗಾಟವೆ ನನ್ನ ಚೈತನ್ಯ,ನಿನ್ನ ನಗುವಲ್ಲೆ ನನ್ನ ನಗು ಅಡಗಿದೆ,ಇದು ಬಿಟ್ಟು ಈ ಪತ್ರ ನಿನ್ನ ತಲೆನೋವಿಗೆ ಕಾರಣರಾದರೆ ಇದೋಂದು ಸಲ ಹಂಗೆ ಮನ್ನಿಸಿಬಿಡು ಹೀಗೆ ಹೇಳುವದ ಬಿಟ್ಟು ಬೇರೆ ಮಾರ್ಗವೇ ಸಿಗಲಿಲ್ಲ.ನೀ ನೋಪ್ಪಿ ಐ ಲವ್ ಯೂ ಅಂದರೆ ನನ್ನ ಬೆರಳುಗಳ ನಿನ್ನ ಹಣೆ ಮೇಲಿನ ನಾಟ್ಯ ನಿನ್ನ ನೋವನ್ನ ಪರಿಹರಿಸಬಲ್ಲುದು.ಇಲ್ಲಾ ನನ್ನ ಬೆರಳುಗಳಾಟ ನನ್ನ ಹಣೆಯ ಮೇಲೆ ಮುಂದುವರಿಯುವದು ಒಂದಷ್ಟು ದಿನ.....................ಎಷ್ಟು ದಿನ? ಅನ್ನೋ ಪ್ರಶ್ನೆ ಎತ್ತಬೇಡ ಪ್ಲೀಸ್...........!!!!!!

ಅಂದಂಗೆ ಗೆಳೆಯ ಅಂಥಾ ನನ್ನ ಅದಾಗಲೇ ಒಪ್ಪಿಸಿಕೊಂಡಿರುವೆ ನಾ ನಿನ್ನ ಗೆಳೆಯನೆ ಅನ್ನೋ ಮನಸ್ಸಿಗೊಪ್ಪದ ಮಾತ ಹೇಳಲಾರೆ,ಗೆಳೆತನದೊಂದಿಗೆ ಇನ್ನೂ ಹೆಚ್ಚು ಅದೇನೋ ಇದೆ ಅನ್ನೋದನ್ನ ತಿಳಿದು ಬಹಳ ದಿನಗಳಾಗಿದೆ, ಅದೆಷ್ಟೋ ಬಾರಿ ಇದ ಹೇಳಲು ನಿನ್ನೆದುರು ನಿಂತೆ ಅದ್ಯಾಕೋ ಗೊತ್ತಿಲ್ಲ ಪ್ರತಿಸಲ ಮಾತು ಮರೆತ ಮೂಖನಾಗಿ ನೀ ಕರೆದಲ್ಲಿ ಬಂದು ನೀನೆ ಕೊಡಿಸಿದ ಕಾಫಿ ಹೀರಿ ಮರಳಿದ್ದೇನೆ ಮನದ ಮಾತಿನ ಜೋಳಿಗೆಯನ್ನು ಮತ್ತಷ್ಟು ಭಾರವಾಗಿಸುತ್ತಾ.

ಇದು ಟೈಂಪಾಸ್ಗೆ ಬರೆದಿಲ್ಲಾ ಕಣೆ. ನಾ ಕೊನೆಗೂ ನನ್ನ ಮನಸ್ಸಿಗೆ ನನ್ನಲ್ಲಿರೋದನ್ನ ನಿನ್ನೆದುರು ಬಿಚ್ಚಿಡದೆ ದ್ರೋಹ ಎಸಗೋದು ನನಗಿಷ್ಟವಿಲ್ಲ, ನಿನಗೂ ಹಿಂಗೆ ಅನಿಸಿದಲ್ಲಿ ಇದ ಒಪ್ಪಿಸಿಕೋ.ನನ್ನ ಸ್ಥಾನ ನೋಡಿ ಹಣಕಾಸು ವಿವರ ನೋಡಿ , ಪರ್ಸನಾಲಿಟಿ ನೋಡಿ,ಅಂದ ಚೆಂದವನ್ನ ನೋಡಿ ಇವುಗಳನ್ನ ನಿನ್ನ ನಿರ್ಧಾರಕ್ಕೆ ಅಳತೆಗೋಲಾಗಿಸಬೇಡ, ಅದ್ಯಾವುದೂ ಶಾಶ್ವತವಾದುದಲ್ಲ, ನನ್ನ ಶಾಶ್ವತವಾಗಿರುವ ಪ್ರೀತಿಯನ್ನು ಸಾಧ್ಯವಾದರೆ ಪ್ರೀತಿಸು.ನಿನ್ನ ನಿರ್ಧಾರ ನಿನ್ನ ಮನದ ಅಪ್ಪಣೆಯಂತಿರಲಿ. ಇಷ್ಟಾದ ಮೇಲು ನಿನ್ನಿಂದ ನಕಾರಾತ್ಮಕ ಉತ್ತರ ಬಂದರೆ ಪರವಾಗಿಲ್ಲ. ಜೀವನ ದೊಡ್ಡದು ಎದುರಿಸೋಣ ಏನಂತೀ?

ಇನ್ನೆರಡು ದಿನ ಬಾಕಿ ಪ್ರೇಮಿಗಳ ದಿನಕ್ಕೆ, ಪ್ರೀತಿಸುವದು ದಿನ ಅನುದಿನವೂ ಆಗಿದ್ದರೂ ಇಂತಹ ನೀವೇದನೆಗಳಿಗೆ ಸಿಗುವ ಆ ದಿನ, ಪ್ರೇಮಿಗಳೂ ಅನ್ನೋ ಸೆಲೆಯನ್ನ ನೆನಪಿಸಿಕೊಡುವಂತದ್ದೂ.ಅದೇನೆ ಇರಲಿ ಸರಿಯಾದ ನಿರ್ಧಾರದೊಂದಿಗೆ ಆ ದಿನ ಬಾ,ನಾನಾಗಿ ಲವ್ ಯೂ ಅನ್ನಲೂ ನಾಲಿಗೆ ತೊಡವರಿಸುತ್ತಿದೆ,ಮೊದಲಿಗೆ ನೀನಾಗೆ ಹೇಳುತ್ತೀಯಾ ಅನ್ನೋ ನಿರೀಕ್ಷೆಯಲ್ಲಿ ಕೈ ಕಾಲಿ ಬಿಟ್ಟುಕೊಂಡು ನೀ ಕೊಡಿಸುವ ಕಾಫಿ ಗಿಪ್ಟನ್ನು ಪಡೆಯಲು ಹೊಸ ನಿರೀಕ್ಷೆಯೋದಿಗೆ ಪ್ರೇಮಿಗಳ ದಿನದಂದು ಕಾಯುವೆ ನಿನ್ನ ಮೊದಲು ನೋಡಿದ ಬಿಯಂಟೀಸಿ ಬಸ್ ಸ್ಟಾಪ್ ನಲ್ಲಿ...............

ಟೇಕ್ ಕ್ಯಾರ್
ಇಂತು ನಿರೀಕ್ಷೆಯ ಮೂಟೆ ಹೊತ್ತ ಪ್ರೇಮಿ.


ಚಿತ್ರ ಕೃಪೆ:-ದಯಾನಂದ್ ಟಿಕೆ

ಕನ್ನಡಕ್ಕೊಂದು ಹೊಸ ಛಾನೆಲ್.............

ಕನ್ನಡ ಎಲೆಕ್ಟ್ರಾನಿಕ್ ಮೀಡೀಯಾ ರಾಜ್ಯದಲ್ಲಿ ಬಹಳಷ್ಟು ಉತ್ತಮ ಕೆಲಸಗಳನ್ನೇ ಮಾಡುತ್ತಿವೆ. ಅದಕ್ಕೆ ಸಾಕ್ಷಿ ಹಲವಷ್ಟು ಹಗರಣ ಬಯಲಿಗೆಳದಿದ್ದು, ನೆರೆ  ಸಂತೃಸ್ಥರೀಗೆ ತನ್ನದೇ ಆದ ರೀತೀಲಿ ನೆರವಾಗಿದ್ದು, ಹೀಗೆ ಹತ್ತು ಹಲವನ್ನು ನಮೂದಿಸಬಹುದು. ಪ್ರಸಕ್ತ ಚಾನೆಲ್ ಸಂಖ್ಯೆ ಹೆಚ್ಚಾದುದರಿಂದ ಒಂದು ಸಹಜ ಪೈಪೋಟಿಗಳು ಏರ್ಪಟ್ಟಿದೆ, ಇದು ಒಂದು ದೃಷ್ಟಿಯಲ್ಲಿ ಉತ್ತಮ ಆದರೂ ಕೂಡ ಈ  ಪೈಪೋಟಿ ಭರದಲ್ಲಿ ಕೆಲವೋಮ್ಮೆ ಮಾದ್ಯಮದ ನೈತಿಕತೆಯನ್ನು ಜನಸಾಮಾನ್ಯ ಪ್ರಶ್ನೆ ಮಾಡುವಂತೆ ತನ್ನನ್ನು ತಾನು ತೊಡಗಿಸಿಕೊಂಡಿದೆ.ಅದಕ್ಕೆ ತಾಜ ಉದಾಹರಣೆ ಮೊನ್ನೆ ಶಾಸಕರು ನೋಡಿದ ನೀಲಿ ಚಿತ್ರವನ್ನು ರಾಜ್ಯದ ಜನತೆ ನೋಡುವಂತೆ ಮಾಡಿದ್ದು.ಈ ಸುದ್ದಿ ಸ್ಪೋಟ ಮೊದಲನೆಯಾದಾಗಿ ಸ್ಪೋಟಿಸಿದ್ದು ನಾವೆ ಅನ್ನೋ ಚಾನಲ್ ಒಳಗಿನ ಮುಸುಕಿನ ಗುದ್ದಾಟಗಳು ನಡೆದವು. ಇಂತಹ ಸಂದರ್ಭದಲ್ಲಿ ಮತ್ತೆ ನೆನಪಿಗೆ ಕಾಡಿದ್ದು ಹೆಚ್ ಆರ್ ರಂಗನಾಥ್. ಇವರಿದ್ದಿದ್ದರೆ ಈ ಪ್ರಕರಣ ಯಾವ ರೀತಿ ವಿಶ್ಲೇಷಿಸುತಿದ್ದರು ಎನ್ನುವದನ್ನು ತನಗೆ ತಾನೆ ವಿಮರ್ಷಿಸಿಕೊಂಡಿದ್ದು ಸುಳ್ಳಲ್ಲ.ಕಾರಣ ಇಷ್ಟೆ ಕನ್ನಡ  ಎಲೆಕ್ಟ್ರಾನಿಕ್ ಮೀಡೀಯಾವನ್ನು ಪ್ರಾರಂಭದಿಂದಲೂ ನೋಡುತ್ತಾ ಬಂದಿರುವ ನನಗೆ  ಹೆಚ್ ಆರ್ ರಂಗನಾಥ್. ಅವರಂತ ವಿಶ್ಲೇಷಕರನ್ನ ನೋಡಿಲ್ಲ. ಇವರನ್ನ ಬಿಟ್ಟರೆ ಸ್ವಲ್ಪ ಮಟ್ಟಿಗೆ ನೆಚ್ಚಿಕೊಳ್ಳಬಹುದಾದ ವಿಶ್ಲೇಷಕನಾಗಿ ಕಂಡು ಬಂದಿರೋದು ಹಮೀದ್ ಪಾಳ್ಯ ಮಾತ್ರ.
ಸುವರ್ಣ ಟಿ ವಿ ಯಿಂದ ಮರೆಯಾಗಿ ಅಜ್ನಾತವಾಸದಲ್ಲಿದ್ದ ರಂಗನಾಥ್ ಅವರು  Writemen Media Pvt Ltd ಜತೆ ಸೇರಿಕೊಂಡು ಪಬ್ಲಿಕ್ ಟಿ ವಿ ಅನ್ನೋ ಹೊಸ ಛಾನೆಲ್ ನೊಂದಿಗೆ ಮರಳುತಿದ್ದಾರೆ. ಈ ಮೊದಲು ಕದಂಬ 24x7 , ಟಿವಿ 5 ಮುಂತಾದ ಛಾನೆಲ್ ರೂಪಿಸುತಿದ್ದಾರೆ ಅನ್ನೋ ಸುದ್ದಿ ಇತ್ತಾದರೂ ಕೊನೆಗೆ ಇವೆಕ್ಕೆಲ್ಲ ಉತ್ತರ ಸಿಕ್ಕಿದೆ. ಇದಾಗಲೇ ಪ್ರಯೋಗಾತ್ಮಕವಾಗಿ ಛಾನೆಲ್ ಪ್ರಸಾರವಾಗುತ್ತಿದ್ದರೂ ಅಧಿಕೃತವಾಗಿ ಫೆಬ್ರವರಿ-12ರ ಮಧ್ಯಾಹ್ನ 11 ಘಂಟೆಯಿಂದ ತನ್ನ ಪ್ರಸಾರವನ್ನು  ಪ್ರಾರಂಭಿಸಲಿದೆ. ರಂಗನಾಥ್ ಅವರ ಸಾರಥ್ಯದಲ್ಲಿ ಈ ಛಾನೆಲ್ ಬರುತ್ತಲಿದೆ ಅಂತಾದಮೇಲೆ ಸಹಜವಾಗಿ  ಒಂದು ಹೊಸ ನಿರೀಕ್ಷೆ ನನ್ನಲ್ಲಿ ಒಡಮೂಡಿದೆ.ಇವರ ಅಗತ್ಯತೆ ಕನ್ನಡ ಎಲೆಕ್ಟ್ರಾನಿಕ್ ಮಾದ್ಯಮಕ್ಕೆ ಈ ಹಿಂದಿನಿಂದಲೂ ಈಗ ಹೆಚ್ಚಿದೆ ಅನ್ನೋದು ಸ್ಪಷ್ಟ.T R P ಕಾಪಾಡಿಕೊಂಡು ಮಾಧ್ಯಮ ನೈತಿಕತೆಯನ್ನು ಎತ್ತಿ ಹಿಡಿದು ಸಂಭಾಳಿಸಿಕೊಂಡು ಹೋಗಬಹುದಾದ ಸಾಮರ್ಥ್ಯ ಖಂಡಿತಾ ರಂಗನಾಥ್ ಅವರಿಗಿದೆ. ಸುಮಾರು 24 ವರುಷಗಳಿಗಿಂತ ಮಿಗಿಲಾದ ಮಾಧ್ಯಮ ಕ್ಷೇತ್ರದ ಅವರ ಅನುಭವ ಅವರನ್ನ ಈ ನಿಟ್ಟಲ್ಲಿ ಕೈ ಹಿಡಿದು ನಡೆಸಬಲ್ಲುದು.ಮಂಕಾಗಿದ್ದ ಸುವರ್ಣ ನ್ಯೂಸ್ ಗೆ ಶಕ್ತಿಯನ್ನು ಚೈತನ್ಯವನ್ನು ತುಂಬಿದ್ದು, ಅದಕ್ಕಿಂತಲೂ ಹಿಂದೆ ಕನ್ನಡಪ್ರಭದ ಸಂಪಾದಕರಾಗಿ ವಿಜಯ ಕರ್ನಾಟಕದ ಹೊಡೆತಕ್ಕೆ ಸಿಕ್ಕಿ 52 ಸಾವಿರಕ್ಕೆ ತನ್ನ ಪ್ರಸಾರ ಸಂಖ್ಯೆಯನ್ನು ಇಳಿಸಿಕೊಂಡಿದ್ದ ಪತ್ರಿಕೆಗೆ ಚೈತನ್ಯ ತುಂಬಿ 2 ಲಕ್ಷಕ್ಕೆ ಏರಿಸಿಕೊಳ್ಳುವಂತೆ ಮಾಡಿದ್ದು, ಇವೆಲ್ಲವನ್ನು ನೋಡಿದಾಗ ರಂಗನಾಥ್ ಸದಾ ಚಟುವಟಿಕೆಯಿಂದ ದುಡಿಯುವ ಮನುಷ್ಯ ಅನ್ನೋದು ವೇದ್ಯವಾಗುತ್ತದೆ.
ಇದೀಗ ಇವರ ಸಾರಥ್ಯದಲ್ಲಿ ಬರಲಿರುವ ಪಬ್ಲಿಕ್ ಟಿವಿ ಒಂದೆರೆಡು ಹಳೆ ಮುಖಗಳನ್ನು (ಆದರೂ ದಕ್ಷರೂ) ಬಿಟ್ಟರೆ ಸಂಪೂರ್ಣ ತಾಜಾ ಹೊಸ ಟೀಮ್ ನೊಂದಿಗೆ ಕಾನಿಸಿಕೊಳ್ಳಲಿದೆ.ಯಾರ ಆಸ್ತಿಯೂ ಅಲ್ಲ ,ಇದು ನಿಮ್ಮ ಟಿವಿ ಅನ್ನೋ ಸ್ಲೋಗನ್ ಅದರೊಂದಿಗೆ ಜನರಿಂದ,ಜನರಿಗಾಗಿ, ಜನರಿಗೋಸ್ಕರ ಎಂಭ ಪ್ರಜಾಪ್ರಭುತ್ವದ ಆಶಯದ ಜೊತೆ ಬರುತ್ತಿರುವ ಪಬ್ಲಿಕ್ ಟಿವಿ ಹೊಸ ನಿರೀಕ್ಷೆಯನ್ನ ಹುಟ್ಟುಹಾಕಿದೆ, ಜನರ ನಾಡಿ ಮಿಡಿತಕ್ಕೆ ತಕ್ಕುದಾಗಿ ನಿರೀಕ್ಷೆಗೆ ತಕ್ಕುದಾಗಿ ಈ ಟಿ ವಿ ನಮ್ಮದಾಗಲಿ....!!! ಬೆಷ್ಟ್ ಆಫ್ ಲಕ್ ಪಬ್ಲಿಕ್ ಟಿವಿ ಆಂಡ್ ಸಾರಥಿ ರಂಗನಾಥ್ ಸಾರ್........

ಫೇಸ್ ಬುಕ್ ನಲ್ಲಿ ರಂಗನಾಥ್ ಅವರ ಪೇಜ್ ನೋಡಲು ಇಲ್ಲಿ ಕ್ಲಿಕ್ಕಿಸಿ
ಫೇಸ್ ಬುಕ್ ನಲ್ಲಿ ಪಬ್ಲಿಕ್ ಟಿ ವಿ ಪೇಜ್ ನೋಡಲು ಇಲ್ಲಿ ಕ್ಲಿಕ್ಕಿಸಿ

Tuesday, February 7, 2012

ಯಪ್ಪಾ ಕ್ಯಾಮಾರ ಕಣ್ಣುಗಳಿಗೆ ಸಿಗೆ ಬಿದ್ದ...


ಥೋ .......ಒಡುಸುರ್ಲಾ ದರಬೇಸಿನಾ ಅಂತಾ ಕಿರುಚಾಡುತ್ತ ಯಾವುದೋ ನ್ಯೂಸ್ ನೋಡ್ ಬಂದ ಮಾದ ಕಿರುಚಹತ್ತಿದ್ದ.ಯಾಕ್ಲ ಏನಾತು ಅಂದೆ?ಬಾಯೋಳಗೆ ತುಂಬಿಸಿಟ್ಟ ವೀಳ್ಯರಸವನ್ನ ಕ್ಯಾಕ್ ಥೋ ಅಂತುಗಿದು ಭುವಿಯಲ್ಲಿ ಬಯಸದೆ ಚಿತ್ತಾರ ಮೂಡಿಸಿದ  ಮಾದ ಒದರಕ್ಕೆ ಶುರು ಹಚ್ಚ್ ಕೊಂಡ. 
ಅಲ್ಲಲೆ ವಿಧಾನ ಸೌಧ ಅನ್ನೋದು ಏನ್ಲ? ಆದು ಸರ್ಕಾರದ ಹೃದಯ ಭಾಗ ಅಂತ ನಾನಂದೆ. ಸರಿ ತಿಳಿದೋನು ನೀನ್ ಹೇಳಪ್ಪ ಅಲ್ಲಿ ಎರಡೆರಡು ಮನೆ ಅಂದ್ರೆ ಅದೇ ವಿಧಾನ ಸಭೆ ,ವಿಧಾನ ಪರಿಷತ್ತು ಅಂತ ಐತೇನ್ಲಾ? ಹೂಂ ಇದೆ ಅಂದೆ.ಅಲ್ಲಿ ರಾಜ್ಯದ ಮಂತ್ರಿಗಳು ಸದಸ್ಯರು ಸಚಿವರು ರಾಜ್ಯದ ಸಮಸ್ಯೆ ಬಗ್ಗೆ ಚರುಚೆ ನಡೆಸ್ಬೇಕು ತಾನೆ.? ಹೌದಪ್ಪಾ ಅಹುದು ಏನಾತೀಗ ಅಂದೆ. ಥೂ ದರಬೇಸಿ .................... ಇವ್ನನ್ಯಾಕೆ ಬೆದೆಗೆ ಬಂದೊನಂಗೆ ಆಡ್ದಾ ಈ ವಯಸ್ಸಿನಾಗು ಹರುಕು ಕಚ್ಚೆ ಅವ್ವ್ ನಿಗೆ ಅಲ್ಲೇನ್ ಕೆಲಸ ಅಂತ ಇವ್ನಿಗೆ ಹೆಂಡರು ಮಕ್ಕಳಿಲ್ವೇನ್ಲ     ? ಅಕ್ಕ ತಂಗಿರು ಅಂತಾ ಇಲ್ವೇನ್ಲಾ? ಥಥ್ತೇರಿಕೆ ಅಂತ ಗೊಣಗಿದ. ಲೇ ಸಿಸ್ಯ ಯಾಕ್ಲ ಏನಾತ್ಲ ಯಾಕ್ ಹಿಂಗೆ ಗೊಣಗಕ್ಕೆ ಹತ್ತಿ ಒಸಿ ಬಿಡಿಸಿ ಹೇಳ್ಲ , ಥೋ ಹೇಳಕ್ಕೆ ಅಸಹ್ಯ ಕಣ್ಲ ಬೇಕಾರೆ ನೀನೆ ನೋಡು ಟಿವಿನಾಗೆ ಕೊರೆದಿದ್ದೆ ಕೊರಿತಾವ್ರೆ ಆ ಬಗ್ಗೆ ಅಂದು ಪೈಜಾಮದಲ್ಲಿದ್ದ ಬೀಡಿ ಕಟ್ಟ ತೆಗೆದು ಅದರಲ್ಲೋಂದು ಆಯ್ದು ಹಚ್ಚಿ ದೂಮ್ ಅಂತ ಹೊಗೆ ಮುಖಕ್ಕೆ ರಾಚಿಸುವಂತೆ ಬಿಟ್ಟು ಹೊರಟೆ ಹೋದ.........

ಮನೆಗೆ ಬಂದು ಟಿವಿ ಹಚ್ಚಿದಾಗಲೆ ವಿಷಯ ಗೊತ್ತಾಗಿದ್ದು.ಬಿಜೆಪಿ ಶಾಸಕ ಲಕ್ಷ್ಮಣ ಸವದಿ ಸದನದೊಳಗೆ ಸಿಂಧಗಿ ಪಾಕ್ ಧ್ವಜ ವಿವಾದದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ತಮ್ಮ ಮೊಬೈಲ್ ನಲ್ಲಿ "ಬ್ಲೂಫಿಲ್ಮ್" ನೋಡುತ್ತ ಸಿಗೆಬಿದ್ದವರೆ ಅಂತ.ಮ್ಮ ಮೊಬೈಲ್ ಫೋನಿನಲ್ಲಿ ಇಂತಹ ನೀಲಿ ಚಿತ್ರವನ್ನು ಸುಮಾರು 5 ನಿಮಿಷಗಳ ಕಾಲ ನೋಡಿ ಆನಂದಿಸುತ್ತಾ, ತಮ್ಮ ತೆವಲನ್ನು ತೀರಿಸಿಕೊಂಡ ಹೇಯ ಘಟನೆಗೆ ಕಾರಣರಾದ ಈ ಲಕ್ಮಣ ಸವದಿ ಕ್ಯಾಮಾರ ಕಣ್ಣುಗಳಿಗೆ ಸಿಕ್ಕಿ ಬಿದ್ದಿದ್ದ.ಅಲ್ಲಾ ಕ್ಯಾಮಾರ ಇದೆ ಅನ್ನೋದು ಈ ಯಪ್ಪಾಂಗೆ ಗೊತ್ತಿಲ್ದೇ ಇರೋ ವಿಚಾರಾನ? ಆದರೂ ತೆವಲಿಗೆ ಬಲಿಯಾಗಿ ಇಕ್ಕಟ್ಟಿಗೆ ಸಿಕಬಿದ್ದುಕೋಂಡಿರೋದು ನೋಡುದ್ರೆ ಸಿವ ಸಿವ ಅನ್ಬೇಕಷ್ಟೆ. ಅಲ್ಲ ನೆಟ್ಟಗೆ ಸದನ ಕಲಾಪದಲ್ಲಿ ಭಾಗವಹಿಸಲಾಗದ ಈ ಮಂದಿ ತನ್ನನ್ನೆ ತಾನು ಉದ್ದಾರ ಮಾಡ್ಕೋಳಲಾಗದ ಈ ಮಂದಿ ಅದೆಂಗೆ ಜನಸೇವೆ ಮಾಡ್ತಾರೋ ದೇವನೇ ಬಲ್ಲ.ನರ್ಸ್ ಮೂತಿವರೆಸಿ ಅಂದು ಅವನೋಬ್ಬ ಸಿಕ್ಕಿ ಬಿದ್ದ.ಮತ್ತೋಬ್ಬ ಸ್ನೇಹಿತನ ಹೆಂಡತಿ ಮ್ಯಾಗೆ ತನ್ನ ವಕ್ರ ದೃಷ್ಟಿ ಹರೀಬಿಟ್ಟು ಹಸಿಯಾಗೋದ, ಇವತ್ತು ಈ ಯಪ್ಪಾ!!!!ಅಂದಂಗೆ ಪರಿಸರ  ಸಚಿವರು ಸೆಂಡ್ ಮಾಡಿರೋ ವೀಡಿಯೋ ನೋಡ್ತಿದ್ದೆ ಅನ್ನೋದು ಈ ಯಪ್ಪನ್ ರಾಗ.ಇವಂಗೆ ಸಾಥ್ ಕೊಟ್ಟವ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಮಾಡೋ ಸಚಿವ. ಇವಕ್ಕೇನು ಇದೇ ಕೇಮೆನೋ? ಹೆಂಗೈತೆ ನಮ್ಮ ಆಳುವ ಮಂದಿ ಕಚ್ಚೆ ಹರುಕತನ. ಕೆಂಗಲ್ ಹನುಮಂತಯ್ಯನವರು ಕಟ್ಟಿದ, ಗೋಪಾಲಗೌಡರಂಥವರು ಓಡಾಡಿದ ವಿಧಾನಸೌಧದಲ್ಲಿ ಎಂಥ ಹುಳುಗಳು ಬಂದು ಸೇರಿಕೊಂಡವು ನೋಡಿ. ಇಂಥ ಅಸಹ್ಯಗಳೆಲ್ಲ ನಮ್ಮನ್ನು ಆಳುವ ಸಚಿವರುಗಳು.ಇಲ್ಲ ನಮ್ಮ ಹಳ್ಳಿಗ ಮಾದ ಹೇಳೋದೆ ಸರಿ ಥೋ .......ಒಡುಸುರ್ಲಾ ದರಬೇಸಿನಾ ಅಂತ ಬೈಕೊಂಡು ನಾನು ಹೊಂಟೆ ಅಡ್ಡಾಡಕ್ಕೆ............

ಒಂದು ಮಿದುಳಿನ ಸಾವು...

ದೂರ ದೂರ ಇನ್ನೂ ದೂರ, ಇಷ್ಟಲ್ಲ ಅಷ್ಟಲ್ಲ ಇಂಚಲ್ಲ ಅಡಿಯಲ್ಲ
ದೂರದಾಚೆಗಿನ ದೂರದಲ್ಲಿ ಅಗೋ ಆ ಮಿದುಳು ನೆಲಕ್ಕೊರಗಿದೆ..

ಬಿದ್ದ ನೆಲದ ಪಾರ್ಶ್ವಗಳು ತೇವಗೊಂಡು ಹಸಿರಲ್ಲದ ಹಸಿರಿಗೆ ಗೊಬ್ಬರವಾಗುತ್ತ
ನರನರವೂ ಛಟಛಟನೆ ಛಿದ್ರಗೊಳ್ಳುವಾಗ
ಪಕ್ಕದಲ್ಲಿನ ಕಳ್ಳಿಹೂವು ಇಷ್ಟಿಷ್ಟೇ ಬೆತ್ತಲಾಗುತ್ತಿದೆ..

ಪಿತಗುಡುವ ಮಿದುಳನರಗಳ ಸಂತೆಯೊಳಗೆ ಎಷ್ಟೊಂದು ಪದಗಳು
ಸಂಜೆ ದೂಕಾನಿನ ಶೈಲಿಯಲ್ಲಿ ಸಿಕ್ಕಸಿಕ್ಕರೇಟಿಗೆ ಮಾರಲ್ಪಡುತ್ತಿವೆ

ಅಲ್ಲಿ ಲೈಟುಕಂಬದ ಮೇಲೆ ಕೊಕ್ಕು ಮಸೆಯುತ್ತ ಕುಳಿತ ಖಾಕಿ ಬಣ್ಣದ ಹದ್ದಿಗೆ ಮೈ ತುಂಬ ರಕುತ,
ಬಿಚ್ಚಲೇ ಆಗಸಷ್ಟು ನೆಂದ ರೆಕ್ಕೆಗಳು.. ಬೀಸುತ್ತಿದೆ ಮಿದುಳ ವಾಸನೆ ಹದ್ದಿನೆಡೆಗೆ

ಮಿದುಳು ಒರಗಿದ ಜಾಗದಲ್ಲಿ ಮಂಡರಗಪ್ಪೆಗಳ ಮಂತ್ರಘೋಷ,
ಕಪ್ಪುಚೇಳುಗಳಿಗೂ ಸುದ್ದಿ ಮುಟ್ಟಿ ಕೊಂಡಿ ಕೊಂಬುಗಳ ಝಳಪಿಸುತ್ತ
ಕೇರೆಹಾವುಗಳೊಟ್ಟಿಗೆ ಇಳಿದಿದೆ ಖೂಳರ ದಿಬ್ಬಣ

ನೋಡಲು ಕಣ್ಣಿಲ್ಲ, ಮಾತಾಡೆ ಬಾಯಿಲ್ಲ ಬಿದ್ದಲ್ಲೇ ಬಿದ್ದಿದೆ ಮಿದುಳಿನ ಕಳೇಬರವು
ಉಸಿರಾಡೆ ಮೂಗಿಲ್ಲ,, ಒಂದೇ ಸಮಾಧಾನ ಜೀವಕ್ಕೆ ಲುಕ್ಸಾನಿಲ್ಲ..

ಗೊರಸುಗಳು, ಬೂಟುಗಳು, ಟೊಪ್ಪಿಗಳು, ಹಾಳೆಗಳು, ಪೆನ್ನುಗಳು
ಕರ್ರನೆಯ ನಿಲುವಂಗಿಗಳಿಗೆ ತಲುಪಿದೆ ಕೊಡಲಿಯೊಂದು ರವಾನಿಸಿದ ತಂತಿ
ಸರಭರನೆ ಸಿದ್ದಗೊಳ್ಳುತ್ತಿದೆ ಶವಪರೀಕ್ಷಕರ ಪಡೆ

ಅಷ್ಟರಲ್ಲಿ ಮಿದುಳಿನ ನರವೊಂದು ಹೊರನೆಗೆದು ನಾಲಿಗೆ ಸವರಿಕೊಳ್ಳುತ್ತಿದೆ,
ಹಳದಿಎಲೆಗಳನ್ನು ಬಾಚಿಬಾಚಿ ತಿನ್ನುವ ಸಫಲ ಪ್ರಯತ್ನ

ಧೂಳಿನ ತಂಡಗಳು ಮಾತಾಡಿಕೊಂಡು ಕವುಚಿಬಿದ್ದ ತೇವಕ್ಕೆ ಅಡರಿಕೊಂಡು
ಇಷ್ಟಿಷ್ಟೇ ಒಣಗುತ್ತ, ಏನೇನೋ ಗುನುಗುತ್ತ
ಆವರಿಸುತ್ತಾವರಿತ್ತಾವರಿಸುತ್ತಿರಲು..

ಮಿಸುಕಾಡದೆ ಬಿದ್ದಿದ್ದ ಮಿದುಳಬಳ್ಳಿಗೊಂಡು ದೊಡ್ಡ ಸೈಜಿನ ಬಯಕೆ..
ಬಂದಾರೂ ಬಂದಾರೂ ಬದುಕಿದ್ದಾರಿನ್ನೂ ಕೈ ಕಾಲು ಎದೆ ಭುಜಗಳು
ಬಂದಾರೂ.. ಬಂದಾರೂ..

ಗೊರಸು, ಬೂಟು, ಟೊಪ್ಪಿ, ಹಾಳೆಗಳು ಬಿರಬಿರನೆ ಬಂದವು..
ಒಂದೊಂದು ಕೈಯಲ್ಲಿ ಎರಡೆರಡು ತಟ್ಟೆ.. ಜೇಬುಗಳು ತುಳುಕುತ್ತಿವೆ ಚಮಚೆಗಳ ಜಾತ್ರೆ,
ಗಹಗಹಿಸುತ್ತ ಬಂದವು ಕೊಡಲಿಯೊಟ್ಟಿಗೆ ನಾಲಿಗೆಯ ತೇವದ ಜೊತೆಜೊತೆಗೇ..

ಇದಾವುದೂ ಅರಿಯದ ಪೆದ್ದು ಮಿದುಳು ಕಾಯುತ್ತಿತ್ತು.. ಬಂದಾರು ಬಂದಾರು..
ಅವಯವಗಳ ಒಡೆಯರು ಬಂದಾರು ಬಂದಾರು.. ತನ್ನೆಲ್ಲ ತಾಕತ್ತನ್ನು
ಕಾಯುವತ್ತಲೇ ಚೆಲ್ಲಿ ಕಾಯುತ್ತ ಕಾಯುತ್ತ ಕಾಯುತ್ತಲೇ ಇತ್ತು,

ಇತ್ತಲಾಗಿ ತಟ್ಟೆಗಳ ಮೆರವಣಿಗೆಯೊಟ್ಟಿಗೆ ಬಂದಿಳಿದ ತಂಡದ ಮುಂದೆ..
ಕೈ, ಕಾಲು, ಭುಜ ಬೆನ್ನುಗಳು ಭೋಪರಾಕು ಕೂಗುತ್ತಿವೆ..
ತಟ್ಟೆಗಳಿಗೆ ಜಯವಾಗಲಿ, ಚಮಚೆಗಳಿಗೆ ಜಯವಾಗಲಿ.. ತಳದಲ್ಲಿ ಅಂಟಿದ್ದು ನಮ್ಮದಾದರೂ ಆಗಲಿ,

ಇದೆಲ್ಲದರ ಮಧ್ಯೆ ಭೋಪರಾಕುಗಳು ಮಿದುಳಿಗೂ ತಾಗಿ, ಸಾವು ಇಂಚಿಂಚು ತಿನ್ನತೊಡಗಿ
ಕಡೆಗೇನೂ ಉಳಿಯಲಿಲ್ಲ.. ಆದರೆ ಅವಯವದ ಸಂದಿಯೊಳಗಿಂದ ಕಣ್ಣೊಂದು ಮಾತ್ರ ದೂರ ಸರಿದು
ಕೈ, ಕಾಲು, ಎದೆ, ಬೆನ್ನುಗಳನತ್ತ ಮಣ್ಣು ತೂರತೊಡಗಿತು.


-ದಯಾನಂದ್ ಟಿ ಕೆ

ಮುನಿಯವ್ವ......

ಮೊನ್ನೆ ಡಾಬಾಬದಿಯ ಎಕ್ಕದಹೂವುಗಳನ್ನು ನೇವರಿಸುತ್ತಿದ್ದಾಗ,
ಆಕೆ ತಂಬುಲದ ಬಾಯೊಳಗೆ ನಗುವನ್ನು ತುಂಬಿಕೊಂಡು
ಅವಳೂರ ಕಥೆ ಹೇಳುತ್ತಿದ್ದಳು.

 
ಅಲ್ಲಿ ಯಾವ ರಾಜನೂ ಆಳಿರಲಿಲ್ಲವಂತೆ, ದೇವರುಗಳೂ ಗೈರುಹಾಜರು..
ಕಲ್ಲುಕಲ್ಲು ಸೇರಿದ ಗೂಡುಗಳೇ ಮನೆಯಾದ, ಊರಲ್ಲದ ಊರಂತೆ..
ಬಿಚ್ಚೆಸೆದ ನೂಲಿನುಂಡೆಯಂತೆ ಊರಪಕ್ಕವೇ ನದಿಯಂತೆ..
ತೊಡರು ಹಾಕುವ ಹೂಟಕ್ಕೆ ನದಿಯೂ ಬಿಮ್ಮೆಂದು ಎದ್ದಿದ್ದು ಅಣೆಕಟ್ಟೆ..
ಪೇರಿಸಿಟ್ಟ ಕಲ್ಲುಗಳಿಗೆ ಮನೆಯೆಂದು ಹೆಸರೇ? 

ಊರಿಗೂರನ್ನೇ ಬೀಸಿ ಒಗೆದ ಮೇಲೆ ಬಿದ್ದಿದ್ದೇ ದೇಶ, ಹೆಸರು ಹೈವೇ.
ಆಗಿನಿಂದ ಇವಳ ಬಾಯೊಳಗೆ ರಕುತವೋ ತಂಬುಲವೋ..
ಅಲ್ಲಲ್ಲ ಮಕಾಡೆ ಕವುಚಿಕೊಂಡ ಅವಳದ್ದೇ ಬದುಕೋ ಎಂಬಂಥ ಕೆಂಪುದ್ರವ..
ಹೈವೇಯ ಮೇಲೆ ಯಾರೋ ಅಟ್ಟಿಸಿಕೊಂಡಂಡು ಬಂದಂತೆ ಓಡುವ
ವಾಹನಗಳತ್ತ ಸಕಾರಣವಾಗಿ ದುರುಗುಟ್ಟಿ ಪಿಚಕ್ಕೆನ್ನುತ್ತಾಳೆ,
ಕರ್ರಗೆ ಮಲಗಿದ ಡಾಂಬರುದಾರಿ ತನ್ನದೇ ಹೊಟ್ಟೆಯೇನೋ ಎಂಬಂತೆ
ಕಸಿವಿಸಿಗೊಳ್ಳುತ್ತಾಳೆ. 

ಮುಂದೆಂದಾರೊಂದು ದಿನ.. ಅವಳು ಮತ್ತೆ ಸಿಗಬಹುದು..
ನೂಲಂತೆ ಹರಿಯುವ ನೀರಿಗೇಕೆ ಈ ಜನ ಬಾಗಿಲು ಕಟ್ಟುತ್ತಾರೆ ಅಂತ
ಕಣ್ಣೊಳಗೆ ಕಣ್ಣು ಬಿಸುಟು ಕೇಳಬಹುದು..
 
ಗೊತ್ತಿರುವ ಸತ್ಯವನ್ನು ಮಾತಾಡುತ್ತೇನೇನೋ ಎಂಬ ಭಯದಿಂದ
ರಾಚುವ ಸಿಡಿಲಿನ ರೆಂಬೆಕೊಂಬೆಗಳಲ್ಲಿ ಒಂದನ್ನು ನಾಜೂಕಾಗಿ ಮುರಿದಿಟ್ಟುಕೊಂಡಿದ್ದೇನೆ.
ಮೆಟ್ಟು ಹೊಲೆಯುವ ಮುನಿಯವ್ವಳ ರಂಪಿ ಚೂಪುಮಾಡುವ ಕಲ್ಲ ಮೇಲೆ
ಸಿಡಿಲಿನ ಚೂರನ್ನು ಕಂಡೂ ಕಾಣದೆಷ್ಟು ಮಸೆದು,

ಸೂಜಿಯಂಥ ಸೂಜಿಯೇ ನಿಬ್ಬೆರಗಾಗೋ ಥರದಿ ಸಿಡಿಲ ಸೂಜಿಯೊಂದ
ಅಂಗೈಯೊಳಗಿಟ್ಟುಕೊಂಡಿದ್ದೇನೆ..
ಅವಳು ಅಂಥಹದೊಂದು ಪ್ರಶ್ನೆ ಕೇಳುತ್ತಿದ್ದಂತೆ..
ಮುಲಾಜಿಲ್ಲದೆ ನನ್ನ ಬಾಯಿಯನ್ನು ನಾನೇ ಹೊಲೆದುಕೊಳ್ಳುತ್ತೇನೆ.



-ದಯಾನಂದ್ ಟಿ ಕೆ

Monday, February 6, 2012

ಕುರುಡು ಭಿಕ್ಷುಕ

ನನ್ನದೇ ತಾಳ , ನನ್ನದೇ ಹಾಡು
ಪೂಟ್ಪಾತ್ ಎಂಬ ರಂಗಮಂದಿರ
ಹಾಡು ರೂಢಿಸಿದೆ ನನಗೆ
ನಂಬಿದ ದೇವ ಕಣ್ಣು ಕಿತ್ತ ನಂತರ


ಇದ್ದೋಬ್ಬ ಮಗ ಇಲ್ಲದಾದ ಮೇಲೆ
ಚೂರು ಪಾರೂ ಸಾಕುತಿದ್ದ ಹೆಂಡಿರು
ಅಂತರಂಗಕ್ಕೆ ಕಾಣದಾದ ಮೇಲೆ
ಬದುಕಿಗಾಗಿ ಹಾಡುತ್ತಿರುವೆ ಶಿವ ನಾಮ
ದೇವರು ತೊರೆದ ಬದುಕ ನಡೆಸಲು


ಹಾಡು ಯಾವುದಾದರೇನು?
ತನ್ಮಯತೆ ಒಡಮೂಡಿದಾಗ
ಸೇವೆ ನೀಡದೆ ಭವತಿ ಎನ್ನಲಾರೆ
ಭಿಕ್ಷೆಯ ಋಣವ ಇರಿಸಿಕೊಳ್ಳಲಾರೆ


ಊರು ದಂಟೆಯ ಬಳಸುವದಿಲ್ಲ
ಹೋದರೆ ಹೋಗಲಿ ಈ ಜೀವ
ಕಾಲ ಚಕ್ರದಡಿಗೆ.......
ನೀವಿತ್ತ ಪೈಸೆಗಳಲ್ಲಿ
ಸಾಧ್ಯವಾದರೆ ಉಣ್ಣುವೆ ಕುಡಿಯುವೆ
ನಾಳೆಯ ನೆನೆಯದೆ ಅಡಿಗಡಿಗೆ


ಜಗವೆ ನನ್ನ ಸೂರು
ನಾನೆ ವಿಶ್ವದೊಡೆಯ
ಹಮ್ಮು ಬಿಮ್ಮು ಬಿಟ್ಟ ಬಾಳು
ಕಣ್ಣಿದ್ದು ಕುರುಡು ಮೆರೆವ ಲೋಕಕ್ಕಿಂತ
ನಂಗೆ ನನ್ನ ಜಗವೇ ಅಭೇದ್ಯ


ಅನಾಥ ಹೆಣವಾಗುವೆ ಒಂದು ದಿನ
ನನ್ನ ಚಿರನಿದ್ರಾ ಯಾತ್ರೆ ನಡೆಸಲು
ಸಿದ್ದವಿದೆ ಕಾರ್ಪೋರೇಷನ್ ವ್ಯಾನ್
ಅಲ್ಲಿವರೆಗೆ ಬಿಡದೆ ಹಾಡುವೆ ಶಿವ ನಾಮ
ಸಾವಿನ ದಿನ ನನ್ನ ಬದುಕ ಕಂಡು ದೇವ ಮರುಗಲೆಂದು.....!!!!

ಜಾಪಾರಿ..

ಯಾವ ಪರಿಯ ಸೊಬಗಿಗೂ ಸೊಪ್ಪು ಮುಟ್ಟಿಸದ 
ಇವನ ಹೆಸರು ಜಾಪಾರಿ..
ಹಮಾಲಿ ಜಗತ್ತಿನ ಲೈಟುಕಂಬದೆದುರು ಮಂಡಿಯೂರಿ

ಕುಳಿತ ಇವನೆದುರು ಗಸಗಸೆ ಹಣ್ಣಿನ ಗುಡ್ಡೆಗಳು..
ಆ ಮರ, ಈ ಮರ, ಗಸಗಸೆ ಬಿಡುವ ಯಾವ ಮರವಾದರೂ
ಜಾಪಾರಿಗೆ ಅದು ಅವನದ್ದೇ ಮರ..
ಕೊಂಬೆರೆಂಬೆಗಳ ಮೇಲೆಲ್ಲ ನಡೆದಾಡಿ ಕಿತ್ತ
ಗಸಗಸೆ ಹಣ್ಣುಗಳು ಎಂಟಾಣೆಯ ಕವರೊಳಗೆ ಜೋಪಾನ.
ನಾಲ್ಕುದಾರಿ ತಬ್ಬುವ ಕೂಡುಬಿಂದುವಿನ ಲೈಟುಕಂಬವೇ
ಜಾಪಾರಿಯ ವ್ಯಾಪಾರದ ಶಾಪಿಂಗಿನ ಮಾಲು.
ತಿಳಿಗೆಂಪಿಗೆ ಇಷ್ಟು, ಕಡುಕೆಂಪಿಗೆ ಇಷ್ಟು
ಮಾಗಿದವಕ್ಕೆ ಇಷ್ಟು, ಅಪ್ಪಚ್ಚಿಯಾಗವಕ್ಕೆ ಇಷ್ಟು..
ಎಲ್ಲದಕ್ಕೂ ಬೆಲೆಯುಂಟು ಜಾಪಾರಿ ಗುಡ್ಡೆಗಳಲಿ.
ಇವನ ವಯಸ್ಸಿನಂಥವೇ ಕೂಸುಗಳಿಗೆ
ಗುಡ್ಡೆಗಳ ತೋರಿಸಿ ಗಿರಾಕಿಗಳಾಗಲು ಪ್ರಚೋದಿಸುತ್ತ
ಮೊಣಕಲಾಲೂರಿದ ಜಾಪಾರಿಯ ಕಣ್ಣು ನಿಮೀಲಿತ.
ಎರಡು ಸಾಸುವೆಯಷ್ಟು ಹಿಂದಕ್ಕೆ ತಿರುಗುವುದಾದರೆ,
ಬಾಳೆಕಾಯಿ ಮಂಡಿಯೊಳಗೆ ವಿಟರ ಕೂಪದಲ್ಲಿ
ಅಕ್ಕಿಬೇಳೆಗೆ ದಾರಿ ಮಾಡಿಕೊಳ್ಳುತ್ತಿದ್ದ ಜಾಪಾರಿಯ
ತಾಯಿಯದ್ದು ಸಾವಾಗಿ ತಿಂಗಳು ಕಳೆದಿಲ್ಲ..
ಗಸಗಸೆಯ ಮರವೆಂದು ನೆಲದ ಮೇಲಿರುವತನಕ 
ಜಾಪಾರಿಯ ಬ್ರೆಡ್ಡು ಬನ್ನಿಗೇನೂ ಕೊರತೆಯಿಲ್ಲ..
ಆಗಾಗ್ಗೆ ಗಸಗಸೆ ಹಣ್ಣಿನ ಗುಡ್ಡೆಗಳ ಲಿಲಾವು ಜೋರಾದರೆ, 
ಐದತ್ತು ರುಪಾಯಿಗೆ ಮೊಟ್ಟೆದೋಸೆಯನ್ನೂ ತಿನ್ನುತ್ತಾನೆ.
ಹಿಪ್ಪುನೇರಳೆ ಮರದ ಪೊಟರೆಯೊಳಗೆ ದೇಹ ತೂರಿಸಿ
ಬೆಳಗಾನ ಕತ್ತಲೆಯ ಮೂಗಿಗೆ ಮೂಗು ಉಜ್ಜುತ್ತಾನೆ.
ಎಲ್ಲವನ್ನೂ ನಿಂತ ನಿಟ್ಟಿನಲ್ಲಿ ನಿರುಕಿಸುವ ಮಾಸುಕಪ್ಪು
ಕಾಗೆಯೊಂದು ಪುಟ್ಟ ಕಣ್ಣೊಳಗೆ ಎರಡು ಮಾತು
ಆಡಲು ಹಿಂದೆಮುಂದೆ ನೋಡುತ್ತಿದೆ.
ಪೊಟರೆಯೊಳಗಿನ ಜೀವಕ್ಕೆ ಇನ್ನೂ ಬಿಸಿಲು ತಾಕಿಲ್ಲ..
-ದಯಾನಂದ್ ಟಿ ಕೆ

Sunday, February 5, 2012

ಅವ್ವ.

ಭೂಮಿಗೂ ಮೋಡಕೂ ನಡುವೆ
ಹರಿದ ಸೆರಗನ್ನೇ ಇನ್ನೊಂದಷ್ಟು ತುಂಡರಿಸಿ
ಪರದೆ ಕಟ್ಟಿದ ಜೀವ ಇವಳು.

ನೇಗಿಲಿನ ನಾಲಿಗೆಗೆ ನೆಲ ಚೂರಾದ ಹೊತ್ತು
ಒಡಲ ಬೀಜಗಳನ್ನೇ ನೆಲದೊಳಗೆ ಅವಿತಿಡುತ್ತ
ಇನ್ನಾವಾಗಲೋ ಮೊಳೆಯುವ ಭತ್ತವನ್ನು ಧೇನಿಸಿದವಳು.

ಎಲೆಯಡಿಕೆಯ ಚೀಲದೊಳಗೆ ಬದುಕನ್ನೇ
ಮಡಚಿಟ್ಟ ಮಾಯದಂಥ ಜೀವದ
ಹೊಗೆಸೊಪ್ಪಿನ ಘಾಟೂ, ಊದುವ ಒಲೆಯ ಹೊಗೆಯೂ
ಏಕತ್ರಗೊಂಡ ಚಣದಲ್ಲೇ ಗಂಜಿ ಬೇಯಿಸುವ ಜೀವ.

ಮೇಲೆ ರವರವನೆ ಉರಿಯೋ ಚೆಂಡನ್ನೇ ರೆಪ್ಪೆಯೊಳಗೆ ಅವಿತಿಟ್ಟ
ಈ ಜೀವ.. ನನಗೆ ಕೊಟ್ಟಿದ್ದು ಹಿಡಿ ಉಸಿರಿನ ಸಾಲ,
ಯಾವತ್ತೂ ಕರೆ ತಾಗದ ಈ ಅಬೋಧ ಜೀವಕ್ಕೆ
ಬಣ್ಣಬಳಿದ ಮಾತುಗಳ್ಯಾವೂ ಬೇಕಿರದೆ
ನನ್ನ ನೆದರಿಗೆ ಅಂಟಿಕೊಂಡಿದ್ದು ಎರಡೇ ಪದವು,
ಹರವಿ ಹೇಳುವುದಾರೆ.. ಅವ್ವ.

-ದಯಾನಂದ್ ಟಿ ಕೆ