Wednesday, March 28, 2012

ಸರ್ಕಾರಿ ಶಾಲೆ ನಕ್ಸಲೈಟ್ ಹುಟ್ಟಿಸೊ ಕೇಂದ್ರಗಳಾಗಿ ಕಂಡಿದ್ದೇಕೆ ರವಿಶಂಕರ್?

ಸಮಾಜದ ನಡುವಿನ ಅಸಮತೋಲನ ವ್ಯವಸ್ಥೆ ಮಧ್ಯೆ ಇದಕ್ಕೆ ಸಿಡಿದೆದ್ದು ನಿಂತು ನಕ್ಸಲೈಟ್ ಅನ್ನೋದು ಹುಟ್ಟು ಪಡೆಯಿತು ಎಂಬುದು ಒಂದು ಸಾಮಾನ್ಯ ತಿಳುವಳಿಕೆಯನ್ನು ಹೊಂದಿದ ವ್ಯಕ್ತಿಯ ಅರಿವಿಗೆ ಬರುವಂತದ್ದು.ಬಡತನ,ದೌರ್ಜನ್ಯ ಇತರದರಿಂದ ಬೇಸತ್ತು ನಕ್ಸಲೈಟ್ ವ್ಯವಸ್ಥೆಗೆ ಸೇರುವ ಮಂದಿ ಇರಬಹುದು ಆದರೆ ಇದಕ್ಕೂ ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಂದಿ ನಕ್ಸಲೈಟ್ ಗಳಾಗಿ ಬದಲಾಗುತ್ತಾರೆ ಎಂಭ ರವಿಶಂಕರ್ ನಿಮ್ಮ ಮಾತುಗಳಿಗೆ ಎತ್ತಣಿಂದೆತ್ತ ಸಂಬಂಧ ಅನ್ನೋದನ್ನ ನಾ ತಿಳಿಯೆ.ದೇಶದ ೬೦% ಮಂದಿ ಇವತ್ತು ಸರ್ಕಾರಿ ಶಾಲೆಯಿಂದ ಬಂದವರೆ ಆಡಳಿತದ ಬೇರೆ ಬೇರೆ ಸ್ತರದಲ್ಲಿ ಇದ್ದಾರೆ,ತಾಂತ್ರಿಕ, ಶೈಕ್ಷಣಿಕ, ವೈಜ್ಞಾನಿಕ, ವೈದ್ಯಕೀಯ ಇಂಥ ಎಲ್ಲಾ ಕ್ಷೇತ್ರಗಳಲ್ಲಿಯು ಸರ್ಕಾರಿ ಶಾಲೆಯಿಂದ ಬಂದವರೆ ಇದ್ದಾರೆ,ಹೀಗಿರಬೇಕಾದರೆ ಸಮಾಜದ ಒಂದು ಸಮೂಹದಿಂದ ಗುರೂಜಿ ಎಂದು ಕರೆಸಿಕೊಳ್ಳುವ ನೀವು ಸರ್ಕಾರಿ ಶಾಲೆಗಳು ಮಕ್ಕಳನ್ನು ಹಿಂಸೆಗೆ ತನ್ಮೂಲಕ ನಕ್ಸಲಿಸಂಗೆ ಸೆಳೆಯುತ್ತವೆ. ಈ ಕಾರಣದಿಂದ ಎಲ್ಲ ಸರ್ಕಾರಿ ಶಾಲೆ-ಕಾಲೇಜುಗಳನ್ನು ಖಾಸಗಿಯವರಿಗೆ ವಿಶೇಷವಾಗಿ ಆದರ್ಶ ಶಾಲೆಗಳಿಗೆ ಒಪ್ಪಿಸಬೇಕು ಎನ್ನುವ ಹೇಳಿಕೆ ನೀಡ್ತೀರಾ ಅಂದರೆ ನಮ್ಮಂತ ಜನಸಾಮಾನ್ಯ ಅದು ಬಾಲಿಶ ಹಾಗು ಈ ಬಗ್ಗೆಯ ಯಾವುದೆ ಅರಿವಿರದ, ಪೂರ್ವಾಗ್ರಹ ಪೀಡಿತವಾದ,ಅನೈತಿಕ, ಜೀವವಿರೋಧಿಯಾದ, ಮಾನಸಿಕ ಸಮತೋಲನ ಕಳಕೊಂಡ ವ್ಯಕ್ತಿಯ ತಲೆಕೆಟ್ಟ ಹೇಳಿಕೆಯೆಂದೆ ಪರಿಗಣಿಸಬೇಕಾಗಿದೆ.

ಕುವೆಂಪು,ದ ರಾ ಬೇಂದ್ರೆ, ಶಿವರಾಮ ಕಾರಂತ್ ,ನಿಸಾರ್ ಅಹ್ಮದ್, ವಿಜ್ಞಾನಿಗಳಾದ ಜಗದೀಶ್ ಚಂದ್ರ ಭೋಸ್, ಅಬ್ದುಲ್ ಕಲಾಂ ಮುಂತಾದ ಮುಂತಾದ ಸಾವಿರಾರು ಗಣ್ಯರು ಕಲಿತದ್ದು ಇದೆ ಸರ್ಕಾರಿ ಶಾಲೆಗಳಲ್ಲಿ ಅನ್ನೊ ಪರಿಜ್ಞಾನ ಹೇಳಿಕೆ ಕೊಡೊ ಮುನ್ನ ನಿಮ್ಮಲ್ಲಿ ಇರಲಿಲ್ಲವೆ?, ಇಲ್ಲದೆ ಏನಿಲ್ಲ ಶ್ರೀಮಂತ ಸಮುದಾಯವನ್ನು ಓಲೈಸುವ ಸಲುವಾಗಿ ಕಾರ್ಪೋರೇಟ್ ದಂದೆ ಮಾಡುವ ನಿಮಗೆ ಏನಾದರೊಂದು ಹೇಳಿ ಆ ಜನಗಳನ್ನ ತನ್ನತ್ತ ಸೆಳೆಯಬೇಕಾದ ಹಪಹಪಿತನದಲ್ಲಿ ಬಾಯಿ ಹರಿಯಬಿಟ್ಟಿರಿ ಅನ್ನುವದು ಸ್ಪಷ್ಟ, ಇದೊಂದು ನಿಮ್ಮ ಸೋಗಲಾಡಿತನದ ವ್ಯಾಪಾರಿಯ ಬುದ್ದಿಯ ಬೇಜವಬ್ದಾರಿ ಹೇಳಿಕೆ ಅಷ್ಟೆ. ನನ್ನ ಈ ಹೇಳಿಕೆ ಸಮಾಜದ ಮೇಲೆ ಅದೆಂಥ ಪರಿಣಾಮ ಬೀರಬಹುದು ಅನ್ನುವ ಯಾವುದೆ ಯೋಚನೆ ಬಾಯಿ ಹರಿಬಿಡೋ ಮುನ್ನ ನಿಮಗೆ ಇದ್ದಂತಿಲ್ಲ. ಹಾಗೆಯೆ ಸರ್ಕಾರಿ ಶಾಲೆಯಲ್ಲಿ ಕಲಿತ ನಮಗೆ ನಿಮ್ಮ ಹೇಳಿಕೆಗೆ ಕೈ ಕಟ್ಟಿ ಕೂತು ಕೇಳಿಸಿಕೊಂಡು ಕೂರುವ ದರ್ದು ಬಂದೊದಗಿಲ್ಲ.ಜೀವನದ ಕಲೆಯನ್ನು ಕಲಿಸುವ ನಿಮಗೆ ಕೆಲವು ಜೀವನದ ಮೌಲ್ಯಗಳ ಕಲೆ, ಜನರ ನಾಡಿ ಮಿಡಿತವ ಅರಿಯುವ ಕಲೆ,ಹಸಿದವನ ಹಸಿವಿನ ತೊಳಲು ತಿಳಿಯುವ ಕಲೆ ಇದ್ದಂತಿಲ್ಲ, ಅದನ್ನ ನಮ್ಮಿಂದ ಹೇಳಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ನಿಮಗೆ ನೀವೆ ತಂದುಕೊಡಿದ್ದೀರಿ, ಸಂತೋಷ.ಸರ್ಕಾರಿ ಶಾಲೆಯಲ್ಲಿ ಕಲಿತ ನಮಗೆ ಆ ಮಟ್ಟಿಗಿನ ಬದ್ದತೆ ಇದೆ ಎಂದು ತಿಳಿದೆ ಒಂದಷ್ಟು ವಿಷಯಗಳನ್ನು ನಮ್ಮೊಳಗೆ ಅವಲೋಕಿಸಿ ನಿಮ್ಮಂತವರ ಸಾಚಾತನವನ್ನು ತಿಳಿಯಬೇಕಾಗಿದೆ.

ನೀವು ದೇಶ ವಿದೇಶದಲ್ಲಿ ಹೆಸರುವಾಸಿ, ನೀವು ಆ ಮೂಲಕ ಯೋಗ ಅದ್ಯಾತ್ಮ ಗುರುಗಳು ಅನಿಸಿಕೊಂಡವರು ಸಾಕಷ್ಟು ಆಸ್ತಿಯು ಉಳ್ಳವರ ಸಂಘವು ನಿಮಗಿದೆ, ಹಾಗಿರಬೇಕಾದರೆ ದೇಶ ವಿದೇಶ ಬೇಡ ನಿಮ್ಮ ಅಸ್ತಿತ್ವ ಕಾಯ್ದುಕೊಂಡಿರುವ ನಿಮಗೊಂದು ಮಾನ್ಯತೆ ಕೊಟ್ಟಿರುವ ಈ ರಾಜ್ಯದಲ್ಲಿರುವ ಬಡವರು ಎನಿಸಿಕೊಂಡಿರುವ ಸಾವಿರಾರು ಕುಟುಂಬಗಳಿದ್ದಾವೆ, ದಿನಗೂಲಿಗೆ ದುಡಿಯುತ್ತಿರುವ ಪೌರ ಕಾರ್ಮಿಕ ಕುಟುಂಬಗಳು, ಮಾನ್ಯುಯಲ್ ಸಾವೆಂಜರ್ ಅನ್ನೊ ಅನಿಷ್ಟ ಪದ್ದತಿಯೊಳಗೆ ಹೊತ್ತನ್ನ ತಿನ್ನುವ ಕುಟುಂಬಗಳು,ಊರುರೂ ಕೂಲಿಗಾಗಿ ಅಲೆದು ಬದುಕು ಕಂಡುಕೊಳ್ಳುವ ಉತ್ತರ ಕರ್ನಾಟಕದ ಕುಟುಂಬಗಳು,ದಿನವಿಡಿ ಬಿಸಿಲಲ್ಲಿ ಪುಟ್ ಪಾತ್ ಮೇಲೆ ವ್ಯಾಪಾರ ಮಾಡಿ ಜೀವನ ಕಂಡುಕೊಳ್ಳೊ ಕುಟುಂಬಗಳು,ಸಂಪರ್ಕ ಸೌಲಭ್ಯವೆ ಇಲ್ಲದ ಹಲವು ಹಳ್ಳಿಯೂರಿನ ಕುಟುಂಬಗಳು,ಗುಡ್ಡ ಗಾಡು ಪ್ರದೇಶದ ಹಲವು ಹಿಂದುಳಿದ ಜನಾಂಗದ ಕುಟುಂಬಗಳು, ಭಿಕ್ಷೆ ಹೊರೆದು ಜೀವನ ನಡೆಸುತ್ತಿರುವ ಇಂಥಹ ಸಾವಿರಾರು ಕುಟುಂಬಗಳನ್ನು ಹಾಗು ಅವರ ಮಕ್ಕಳನ್ನು ದತ್ತು ತೆಗೆದುಕೊಂಡು ಜೀವಿತದ ಕಲೆ ಆ ಕುಟುಂಬಗಳಿಗೆ ಹಾಗು ಅವರ ಮಕ್ಕಳಿಗೆ ನೀವು ಹೇಳುವಂತಹ ಉತ್ತಮ ಶಿಕ್ಷಣ ಕೊಡಬಲ್ಲಿರೆ?ಸಾಮರ್ಥ್ಯ ಇದ್ದಾಗಿಯು ನೀವು ಆ ನಿಟ್ಟಿನಲ್ಲಿ ಕೆಲಸ ಮಾಡಲಾರಿರಿ, ಕಾರಣ ಸ್ಪಷ್ಟ ನೀವು ಜೀವಿತದ ಕಲೆ ಕಲಿಸಿಕೊಡೋದು ನಿಮ್ಮ ವ್ಯಾಪಾರಿ ಬುದ್ದಿಯಿಂದ, ವ್ಯಾಪಾರಿ ಅಂದೊಡೆ ಲಾಭವಿರುವಲ್ಲಿ ನೀವಿರಲು ಸಾಧ್ಯ. ಅದಕ್ಕಾಗಿ ನೀವು ಉಳ್ಳವರ ಓಲೈಕೆಗೆ ಮುಂದಡಿ ಇಡುತ್ತೀರಿ.ರವಿಶಂಕರ್ ಅವರೆ ಮೇಲೆ ಹೇಳಿದ ಕುಟುಂಬದ ಮಕ್ಕಳು ಒಂದಷ್ಟು ಅಕ್ಷರ ಕಲಿಯುತ್ತಾರೆಂದರೆ ಅದು ನಿಮ್ಮಂತ ವ್ಯಾಪಾರಿಯಿಂದಾಗಲಿ, ಇತರ ಡೋನೇಷನ್ ಹಪಹಪಿತನಕ್ಕೊಳಪಟ್ಟ ಖಾಸಗಿ ಶಾಲೆಯಿಂದಲ್ಲ ಅದೇನಿದ್ದರು ಸರ್ಕಾರಿ ಶಾಲೆಯಿಂದಷ್ಟೆ ಸಾಧ್ಯ, ಬಲ್ಲಿದರನ್ನು ಭಿಕ್ಷಾಟನೆ ಅನುಭವ ಪಡೆದು ಬನ್ನಿ ಅಂದು ಕಳಿಸೋದು ಸುಲಭ,ನಿಜ ಭಿಕ್ಷುಕರನ್ನು ಬಲ್ಲಿದರನ್ನಾಗಿ ಮಾಡುವತ್ತ(ಸಾಮರ್ಥ್ಯ ಇದ್ದಾಗಿಯು) ನೀವು ಹೆಜ್ಜೆಯಿಡಲಾರಿರಿ ಅನ್ನೋದು ಸ್ಪಷ್ಟ. 

ಸರ್ಕಾರಿ ಶಾಲೆಯಲ್ಲಿ ಸಂವಿಧಾನಕ್ಕೊಳಪಟ್ಟ ರೀತಿಯಲ್ಲೆ ಪಠ್ಯಕ್ರಮಗಳಿರೋದು,ಅದೆಲ್ಲೂ ನಕ್ಸಲೈಟ್ ಅಂತ ಕಡೆಗೆ ಪ್ರಚೋದಿಸುವಂತದ್ದಲ್ಲ,ಕಾಲದಿಂದ ಕಾಲಕ್ಕೆ ಅದು ಬದಲಾಗಬಹುದಾಗಿದ್ದರು ಅದು ಸಂವಿಧಾನಿಕ ಚೌಕಟ್ಟಿನೊಳಗೆ ಬದಲಾಗುವಂತದ್ದು, ನಿಮ್ಮ ಈ ಬಾಲಿಶತನದ ಮಾತು ಸಂವಿಧಾನ ವಿರೋಧವಾಗಿ ನನ್ನಂತ ಜನಸಾಮಾನ್ಯನಿಗೆ ಕಾಣುತ್ತಿದೆ, ಬದುಕುವ ಕಲಿಯುವ ಹಕ್ಕುಗಳು ಉಳ್ಳವರ ಸೊತ್ತಲ್ಲ,ಅದು ಪ್ರತಿ ಪ್ರಜೆಯ ಸೊತ್ತು, ಅದೆಷ್ಟು ಖಾಸಗಿ ಶಾಲೆಗಳು ಬಡವರ ಮಕ್ಕಳಿಗೆ ಅಕ್ಷರ ಕಲಿಸುತ್ತಿದೆ ಅನ್ನುವದ ಅವಲೋಕಿಸಿ.ಸರ್ಕಾರಿ ಶಾಲೆಯ ಸವಲತ್ತುಗಳನ್ನು ಖಾಸಗಿ ಶಾಲೆಗಳು ಬಡವರ ಮಕ್ಕಳಿಗೆ ಕೊಡಮಾಡಬಲ್ಲುದೆ? ನೀವು ಹೇಳಿದಂತೆ ಆದರೆ ೧೪ ವರುಷದೊಳಗಿನ ಶೇಕಡಾ ೭೫% ಸರ್ಕಾರಿ ಶಾಲೆಯ ಮಕ್ಕಳು ವಿದ್ಯೆಯಿಂದ ವಂಚಿತರಾಗುತ್ತಾರೆ,ನಿಮ್ಮ ಈ ಹೇಳಿಕೆ ಉಳ್ಳವರನ್ನು ನಿಮ್ಮ ಬಗಲಿಗೆ ಹಾಕಿಕೊಳ್ಳಲಾಡಿದ್ದು ಅನ್ನೋದು ಮೇಲಿನ ಕಾರಣಗಳಿಂದ ಸ್ಪಷ್ಟವಾಗುತ್ತಿದೆ.ದಾಸ್ಯದ ದಿನಗಳನ್ನು ಮೆಟ್ಟಿ ನಿಂತಾಗಿದೆ, ಮತ್ತೆ ಅದೆ ಉರುಳಿಗೆ ಸಮಾಜವ ದೂಡಲು ಇಚ್ಚಿಸದಿರಿ, ಅಷ್ಟಕ್ಕೂ ನಿಮ್ಮಂತ ಸೋಗಲಾಡಿತನರು ಆಡಿದ ಮಾತ್ರಕ್ಕೆ ಹಾಗಾಗುತ್ತದೆ ಅಂತಲ್ಲ, ಸಮಾಜದಲ್ಲಿ ಗೌರವ ಸ್ಥಾನದಲ್ಲಿ ಕಾಣಿಸಿಕೊಳ್ಳೊ ನಿಮ್ಮಂತವರ ಬುದ್ದಿಗೇಡಿತನದ ಮಾತುಗಳಿಗೆ ಬ್ರೇಕ್ ಬೀಳಬೇಕಾದ ಅವಶ್ಯಕತೆಯಿದೆ.ಇಂದಿನ ಜನಾಂಗದ ಮಕ್ಕಳು ಕೂಡ ಹುಟ್ಟು ಪ್ರಬುದ್ದರೆ,ಅಂತಹ ಕಲಿಯೊ ವಯಸ್ಸಿನ ಮಕ್ಕಳ ಮೇಲೆ ಅದರಲ್ಲೂ ಈ ವಿಷಯ ಸರ್ಕಾರಿ ಶಾಲೆಯಲ್ಲಿ ಕಲಿಯೊ ಮಕ್ಕಳ ಕಿವಿ ತಲುಪಿದರೆ ಅವರ ಮೇಲೆ ಅದೆಂತ ಪರಿಣಾಮ ಬೀರಬಹುದು ಅನ್ನೊ ಕನಿಷ್ಟ ತಿಳುವಳಿಕೆ ನಿಮ್ಮಲ್ಲಿ ಹೇಳಿಕೆ ಕೊಡೊ ಮುನ್ನ ಇರಬೇಕಾಗಿತ್ತು.ಅದ್ಯಾಕೊ ಈ ವಿಷಯದಲ್ಲಿ ಆ ಮಟ್ಟಿಗಿನ ತಿಳುವಳಿಕೆ ಉಳ್ಳವರಿಗೆ ಜೀವನದ ಕಲೆ ಕಲಿಸುವ ನಿಮಗೆ ಇದ್ದಂತಿಲ್ಲ.

ಮೇಲಿನ ಹೇಳಿಕೆಗೆ"ಸರಕಾರಿ ಶಾಲೆಯ ಎಲ್ಲಾ ಮಕ್ಕಳೂ ನಕ್ಸಲೀಯರು ಅಂತಲ್ಲ, ನಕ್ಸಲೀಯರೆಲ್ಲರೂ ಸರಕಾರಿ ಶಾಲೆಗಳಿಂದ ಬಂದವರು. ಸರಕಾರೀ ಶಾಲೆಗಳಲ್ಲಿ ಯಾವುದೇ ಮೌಲ್ಯಗಳನ್ನು ಕಲಿಸದೆ ಇರುವುದೆ ಇದಕ್ಕೆ ಕಾರಣವಿರಬಹುದು. ಬದುಕಿನ ಮೌಲ್ಯಗಳನ್ನು ಕಲಿಸಿಕೊಡುವ, ಆಧ್ಯಾತ್ಮದ ಮೌಲ್ಯಗಳನ್ನು ಕಲಿಸಿಕೊಡುವ ಯಾವುದೇ ಖಾಸಗಿ ಶಾಲೆಯಲ್ಲಿ ಓದಿ ಬಂದ ಮಕ್ಕಳು ನಕ್ಸಲೀಯರಾಗೋಲ್ಲ"ಅನ್ನೊ ಸ್ಪಷ್ಟನೆ ಕೊಟ್ಟು ಮತ್ತೆ ಬೆತ್ತಲಾಗಿದ್ದೀರಿ.ನಕ್ಸಲೀಸಂ ತಳಹದಿನೆ ಉಳ್ಳವರ ವಿರುದ್ದದ ಹೋರಾಟ,ಬಡವರ ವ್ಯವಸ್ಥೆಯೆಡೆಗಿನ ಕಿಚ್ಚು ನಕ್ಸಲ್ ಕಡೆ ಬದಲಾಗೋದು ಹಾಗು ಬದಲಾಗಿರೋದು,ಹಾಗಿರಬೇಕಾದರೆ ಅವರೆಲ್ಲ ಹೈ ಫೈ ಶಾಲೆಗಳಲ್ಲಿ ಓದಿರುವ ಮಂದಿಯಾಗಿರೋದು ಕಷ್ಟ,ಬರೀಯ ಅಷ್ಟಕ್ಕೆ ನಿಮಗೆ ಸರ್ಕಾರಿ ಶಾಲೆ ನಕ್ಸಲೈಟ್ಗಳನ್ನು ಹುಟ್ಟು ಹಾಕುವ ಕೇಂದ್ರಗಳಾಗಿ ಕಂಡಿದ್ದು ವಿಪರ್ಯಾಸ.ಭಾರತ ಅನ್ನೋದು ಜಾತ್ಯಾತೀತ ರಾಷ್ಟ್ರ,ಹೀಗಿರಬೇಕಾದರೆ ಸಣ್ಣ ಮಕ್ಕಳಿಗೆ ಆದ್ಯಾತ್ಮದ ಅರಿವು ಮೂಡಿಸುವ ಅಗತ್ಯತೆಯಾದರು ಏನು?ಅವರಿಗೆ ಅರಿವು ಮೂಡಿಸಬೇಕಾದ್ದು ಬದುಕನ್ನು ಸ್ವೀಕರಿಸಬೇಕಾದ ನೀತಿಗಳನ್ನು ಕಲಿಸಿಕೊಡುವತ್ತ, ಅದು ಆದ್ಯಾತ್ಮದಿಂದಲೆ ಕೊಡಬೇಕಾದದ್ದು ಅನ್ನೊದನ್ನ ನೀವು ಹೇಳೋದಾದರೆ ನಿಮ್ಮಂತವರು ಆ ನಿಟ್ಟಿನಲ್ಲಿ ಸ್ವಯಂಪ್ರೇರಿತರಾಗೆ ಕೊಡಬಹುದಲ್ಲವೆ.ಸರಕಾರಿ ಶಾಲೆ ಖಾಸಗಿ ಶಾಲೆಯೆಂಬ ಭೇದವಿಲ್ಲದೆ ಆ ನಿಟ್ಟಿನಲ್ಲಿ ಕೆಲಸ ಮಾಡಬಹುದಲ್ಲವೆ? ಇಲ್ಲಿ ಭೇದ ಯಾಕೆ ಮಾಡುತ್ತೀರೆಂದರೆ ಖಾಸಗಿ ಶಾಲೆ ಅಂತಾದರೆ ಇಂಥಹ ಕಾರ್ಯಕ್ರಮಗಳ ಮೂಲಕ ಜೇಬು ತುಂಬಿಸಿಕೊಳ್ಳಬಹುದು, ಆ ಮೂಲಕ ನಿಮ್ಮ ವ್ಯಾಪಾರಿ ಬುದ್ದಿ ತೋರಿಸಬಹುದು ಅನ್ನೊ ನಿಮ್ಮ ಯೋಚನೆಯಿಂದಲೆ ಗೊಡ್ಡು ಉಪದೇಶಿಸುತ್ತೀರಿ ಅಂತ ತಿಳಿಯಬೇಕಾಗುತ್ತೆ.ಅಷ್ಟಕ್ಕೂ ಇದರ ಔಚಿತ್ಯವಂತು ನೀವು ತಿಳಿದುಕೊಂಡಂತೆ ಇಲ್ಲ ಅದು ಬೇರೆ ಮಾತು.ಹೌದು ಸರ್ಕಾರಿ ಶಾಲೆಯಲ್ಲಿನ ಶಿಕ್ಷಣ ಗುಣಮಟ್ಟ ಕುಸಿದಿದೆ, ಒಪ್ಪಬೇಕಾದ ಮಾತು, ಯಾವಾಗ ವಿದ್ಯಾ ಕ್ಷೇತ್ರಕ್ಕೆ ಧನದಾಹಿಗಳ ಆಗಮನವಾದವೊ, ವಿದ್ಯಾಕ್ಷೇತ್ರ ಮಾಫಿಯಾವಾಗಿ ಬೆಳೆದವೊ ಅವಾಗ ಅದಕ್ಕೆ ಅಡ್ಡಿಯಾಗಿದ್ದು/ಆಗುತ್ತಿರುವದು ಇದೆ ಸರ್ಕಾರಿ ಶಾಲೆಗಳು,ವ್ಯವಸ್ಥಿತವಾಗಿ ಸರ್ಕಾರಿ ಶಾಲೆಯನ್ನು ಹಣಿಯುತ್ತಲೆ ಬಂದಿರುವ ಈ ಮಾಫಿಯಾಗಳು ಆ ನಿಟ್ಟಿನಲ್ಲಿ ಸಫಲತೆಯನ್ನು ಒಂದಷ್ಟರ ಮಟ್ಟಿಗೆ ಪಡೆದಿದೆ, ಅದಕ್ಕಾಗಿ ನನ್ನಂತವ ಕೇಳುತ್ತಿರುವದು ಸಂಪೂರ್ಣ ಶಿಕ್ಷಣ ಕ್ಷೇತ್ರವೆ ಸರ್ಕಾರಿಕರಣವಾಗಿ ಪ್ರತಿ ಪ್ರಜೆಗೂ ಶಿಕ್ಷಣ ಅನ್ನೋದು ಸುಲಭದಿ ನಿಲುಕುವಂತಾಗಲಿ, ಶಿಕ್ಷಣ ಕ್ಷೇತ್ರದಲ್ಲಿನ ವ್ಯಾಪಾರಿಕರಣ ನೀಗಿದಾಗ ಸೇವೆ ಎಂಭ ಭಾವನೆ ಬಂದು ಶಿಕ್ಷಣ ಕ್ಷೇತ್ರ ಬೆಳಗಲಿ ಅನ್ನೊ ಭಾವನೆಯಿಂದ, ಅದೆಷ್ಟರ ಮಟ್ಟಿಗೆ ಇದು ಸಾಧ್ಯನೊ ಗೊತ್ತಿಲ್ಲ.ಹಾಗಿದ್ದರೂ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣ ವ್ಯವಸ್ಥೆ ಸುಧಾರಿಸುವತ್ತ ಯೋಚನೆಯನ್ನು ನೀವು ಮಾಡಬಹುದಿತ್ತು,ಸರ್ಕಾರಿ ಶಾಲೆಯಲ್ಲು ಖಾಸಗಿ ಶಾಲೆಯನ್ನು ಮೀರಿಸುವ ಮಾದರಿ ಶಾಲೆಗಳು ಸಾಕಷ್ಟಿವೆ, ಸರ್ಕಾರಿ ಶಾಲೆಯಲ್ಲು ಪ್ರತಿಭಾವಂತರು ಹುಟ್ಟಿ ಬರುವದೇನು ಇವತ್ತಿಗೂ ಕಡಿಮೆಯಾಗಿಲ್ಲ.ಇದೆಲ್ಲವನ್ನು ಅವಲೋಕಿಸದೆ ಬರಿಯ ಕಾರ್ಪೋರೇಟ್ ಸಂಸ್ಕೃತಿಯನ್ನು ಮೈ ಹತ್ತಿಸಿಕೊಂಡ ನೀವು ಖಾಸಗಿ ಶಾಲೆ ಬಗ್ಗೆ ಫಾರ್ಮಾನು ಹೊರಡಿಸಿಬಿಟ್ಟಿರಲ್ಲ ನಾಚಿಕೆಯಾಗಬೇಕು, ನಿಮ್ಮ ಈ ನಡವಳಿಕೆ ಈ ತೆರನಾದ ಮಾತು ಹುಟ್ಟಿಸಿರೋದು ಬರೀಯ ಅಸಹ್ಯವನ್ನಷ್ಟೆ.

Tuesday, March 27, 2012

ಸೈಕಲ್ ನಂಟು

ಮೊದ ಮೊದಲು ಸೈಕಲ್ ಕಲಿತ ನೆನಪುಗಳನ್ನ ಸ್ನೇಹಿತರೆಲ್ಲ ಸೇರಿ ಹಂಚಿಕೊಂಡಿದ್ದು ಕೆಳಗಿನಂತೆ, ಅವರವರ ಮಾತುಗಳಲ್ಲೆ ಅವರವರ ಅನುಭವಗಳನ್ನ ಕೇಳಿ, ಇಷ್ಟವಾಗಬಹುದು ಹಾಗು ಈ ನೆನಪುಗಳು ನಿಮ್ಮದೆ ಆಗಿರಲೂಬಹುದು.. :) :)
ಅದಿತಿ:-ನಂಗೆ ಸೈಕಲ್ ಕಲಿಸಿದ್ದು ಅಮ್ಮ ನೆ , ನನ್ನಮ್ಮನಿಗೆ ಸೈಕಲ್ ಬರ್ತಿತ್ತು ಅವ್ರೆ ಗೈಡ್ ಮಾಡ್ತಿದ್ರು, ಹಠ ಮಾಡಿ ಅಮ್ಮ ನ ಕರ್ಕೊಂಡ್ ಹೋಗ್ತಿದ್ದ್ವಿ ಫೀಲ್ಡ್ ಗೆ . ಅಮ್ಮ ನೆ ಆ ಒಂದ್ ಅಭ್ಯಾಸ ಮಾಡ್ಸಿದ್ದು ,ಸಮ್ಮರ್ ಹಾಲಿಡೇಸ್ ಬಂದ್ರೆ ಸಾಕು ಅಮ್ಮ ನ ಬೋರ್ ಹೊಡಿತಿದೆ ಅಂತ ಪ್ರಾಣ ತಿಂತಿದ್ವಿ ಆವಾಗ್ಲೆ ಅಮ್ಮ ಸೈಕಲ್ ಕಲಿಸೊ ಐಡಿಯಾ ಮಾಡಿದ್ದು. ಪ್ರತಿ ಸಂಡೆ ಅಮ್ಮ 2ರೂ ಕೊಡೋರು ಆ ಎರಡು ರುಪಾಯಿಗೆ 1ಘಂಟೆ ಸೈಕಲ್ ಬಾಡಿಗೆಗೆ ತೆಗೊಂತಾ ಇದ್ವಿ, ನಾನು ನನ್ ತಂಗಿ ಆಮೇಲೆ ಅಮ್ಮ ನ ಫ್ರೆಂಡ್ ಮಕ್ಕಳು ಸ್ಟೂಡೆಂಟ್ಸ್ ಅಮ್ಮನಿಗೆ , 2 ಸೈಕಲ್ ತಗೊಂಡು ಒಂದ್ ರೋಡ್ ಸುತ್ಕೊಂಡು ಬಂದು ಇನ್ನೊಬ್ಬರಿಗೆ ಕೊಡೋದು ರೂಲ್ಸು. ನಾ ಹೋದರೆ ದೊಡ್ಡ ರೌಂಡ್ ಹೋಗಿ ಬರ್ತಿದ್ದೆ. ಸೈಕಲ್ ಕೆಟ್ಟೋಗಿತ್ತು ಹಾಗೆ ಹೀಗೆ ಅಂತ ತಂಗಿಗೆ ಸುಳ್ಳು ಹೇಳ್ತಿದ್ದೆ ಒಟ್ಟಿನಲ್ಲಿ ಮಜಾ ಹೊಡೆದಿದ್ದನಪ್ಪ ಸೈಕಲ್ ನಲ್ಲಂತು.ಸೈಕಲ್ ಕಲಿತ ಮೇಲಿನ ಅನುಭವಗಳು ಖುಷಿಗಳು ಕೂಡಾ ಹಲವು, ಕೆಲವೊಂದು ಹೀಗೆ ನೆನಪಿಗೆ ಬರ್ತಾ ಇದೆ.......................
ನನ್ ಕಸಿನ್ ಒಬ್ಳು ಸೈಕಲ್ ಕಲಿತಿದ್ಲು ,ಅವ್ಳಿಗೆ ಅರ್ಧಂಬರ್ಧ ಸೈಕಲ್ ಬಿಡಕ್ಕೆ ಬರ್ತಿತ್ತು. ಅಂತದ್ರಲ್ಲಿ ಒಮ್ಮೆ ಡಬಲ್ ರೈಡ್ ಮಾಡ್ತೀನಿ ಬಾ ಕೂತ್ಕೋ ಅಂತ ಕೂರಿಸ್ಕೊಂಡು ಮೋರಿಯೊಳಗೆ ಬೀಳಿಸಿದ್ಳು, ಸೈಕಲ್ ನಮ್ ಮೈ ಮೇಲೆ ಬಿದ್ದಿತ್ತು.ಎದ್ಕೊಂಡು ಬಂದ್ವಿ ಬಿಡಿ.ಆಮೇಲೆ ನಾ ಹೈಸ್ಕೂಲ್ ನಲ್ಲಿ ಇದ್ದಾಗ ಎನ್ ಸಿ ಸಿ, ಸ್ಪೋರ್ಟ್ಸ್ ಅಂತ ಮಧ್ಯಾಹ್ನ 2 ಪಿರೆಡ್ ಮೇಲೆ ಹೊರಗೆ ಇರ್ತಿದ್ದೆ ..... ಎನ್ ಸಿ ಸಿ ಇರೋವಾಗ ಬೆಳಿಗ್ಗೆ ತಿಂಡಿ ತರೋಕೆ ಅಂತ ನಾವ್ ಒಂದ್ 4 ಜನ ಹುಡ್ಗಿರು ಫ್ರೆಂಡ್ಸ್ ಸೈಕಲ್ ತಗೊಂಡ್ ಹೋಗಿ ಹೋಟೆಲ್ ನಲ್ ಚನ್ನಾಗ್ ತಿಂದು ಆಮೇಲೆ ಬೇರೆ ಹುಡ್ಗಿರ್ಗೆ ತಿಂಡಿ ತರ್ತಿದ್ವಿ, ಆಗಲು ನಮ್ದು ಖುಷಿಯ ಸೈಕಲ್ ಸವಾರಿ.ವಾರ್ಷಿಕ ಸ್ಪೋರ್ಟ್ಸ್ ಡೇ ನಲ್ಲಿ ಸ್ಲೋ ಸೈಕಲಿಂಗ್ ಸ್ಫರ್ಧೆ ಇರೋದು , ನಂಗೆ ಬರ್ತಾನೆ ಇರಲಿಲ್ಲ.... ಸೈಕಲ್ ಟ್ಯೂಬ್ ಗಾಳಿ ತೆಗದು ಓಡ್ಸೋರಪ್ಪ ನಮ್ ಹುಡ್ಗಿರು .ಬೇರೆ ಇವೆಂಟ್ನಲ್ಲಿ ವಿನ್ ಆಗೋಳು ಆದರೆ ಸ್ಲೋ ಸೈಕಲಿಂಗ್ ಸ್ಫರ್ಧೆ ಯಲ್ಲಿ ಮಾತ್ರ ಪ್ರೈಜ್ ಬರ್ತಾ ಇರಲಿಲ್ಲ.ಅಪ್ಪನ ಹತ್ರ ಸೈಕಲ್ ಇತ್ತು, ಒಂದ್ಸಲ ಏನೊ ತರಕ್ಕೆ ಅಂತ ನಾನು ಅಪ್ಪ ನನ್ ತಂಗಿ ಮೂವರು ಆ ಸೈಕಲ್ ನಲ್ಲಿ ಕೂತಿದ್ವಿ ನಾ ಮುಂದೆ ನನ್ ತಂಗಿ ಹಿಂದೆ, ಅವಳು ಸರ್ಯಾಗಿ ಕಾಲ್ ಇಟ್ಟುಕೊಳ್ಳದೆ ಸೈಕಲ್ ಚಕ್ರಕ್ಕೆ ಕಾಲ್ಕೊಟ್ಟು ಕಾಲ್ ಗೆ ಏಟ್ ಮಾಡ್ಕೊಂಡಿದ್ಳು, ಆಮೇಲೆ ಡಾಕ್ಟರ ಹತ್ರ ಕರ್ಕೊಂಡ್ ಹೋದರು ನಮ್ಮಪ್ಪ,.ನನಗೇನು ಗೊತ್ತಾಗದೆ ಮಿಕ ಮಿಕ ಅಂತ ಡಾಕ್ಟರ್ ಶಾಪ್ ನ ನೋಡ್ತಿದ್ದೆ ಪ್ರತಿ ಸಲ ಸೈಕಲ್ ಕೊಡಿಸಿ ಅಂತ ಅಪ್ಪ ಅಮ್ಮನ್ನ ಕಾಡಿಸ್ತಾನೆ ಇದ್ದೆ, ಓಳ್ಳೆ ಮಾರ್ಕ್ಸ್ ತೆಗಿ ಈ ಸಲ ಕೊಡಿಸ್ತೀನಿ ಅನ್ನೊ ಸೇಮ್ ಡೈಲಾಗೆ ಬರ್ತಿತ್ತು ಪ್ರತಿ ಸಲ. 10 ನೆ ವರೆಗು ಇದೆ ಹೇಳೋರು.ಅದು ಆಯ್ತು ಆದರೆ ಸೈಕಲ್ ಬರಲೆ ಇಲ್ಲ, ಕೊನೆಗೆ ಕೇಳೋದನ್ನು ನಾನೆ ಬಿಟ್ಟೆ.

ಈಶ್ವರ ಕಿರಣ ಭಟ್ :- ನಾನು ೫ ನೇ ಕ್ಲಾಸಲ್ಲಿರಬೇಕಾದರೆ ನಮ್ಮೂರಿನ ಪೋಸ್ಟ್ ಮ್ಯಾನ್ ನನ್ನನ್ನ ಸೈಕಲ್ ಹಿಂದುಗಡೆ ಕೂರಿಸ್ಕೊಂಡು ಊರಿಗೆ ಡ್ರಾಪ್ ಕೊಡ್ತಾ ಇದ್ರು . ಅದು ಹೇಗೋ ಗೊತ್ತಿಲ್ಲ ನನ್ನ ಎಡಗಾಲು ಹಿಂದಿನ ಚಕ್ರಕ್ಕೆ ಸಿಲುಕಿ, ಒಳ್ಳೆ ಎಳನೀರು ಕೆತ್ತಿದಾಂಗೆ ಅಗೋಗಿತ್ತು.. ಆಮೇಲಿಂದ ಶುರುವಾದ ನನ್ನ ಸೈಕಲ್ ದ್ವೇಷ, ಪಿಯುಸಿ ಮುಗಿಯುವವರೆಗೂ ಇತ್ತು.. ನಾನು ಡಿಗ್ರಿಯಲ್ಲೇ ಸೈಕಲ್ ಕಲಿತದ್ದು... ಮೂಸೆಬ್ಯಾರಿಯ ರೆಂಟೆಡ್ ಸೈಕಲ್ ಓಡಿಸುವ ಮಜಾ ಯಾರಿಗುಂಟು ಯಾರಿಗಿಲ್ಲ ಹೇಳಿ.. ಘಂಟೆಗೆ ಕೇವಲ ೨ ರೂಪಾಯಿ ಚಾರ್ಜು !ಬಾಡಿಗೆ ಸೈಕಲ್ ಪಡೆದು ಅದುನ ಓಡ್ಸೋ ಮಜಾನೆ ಬೇರೆ.. ಸೈಕಲ್ ಕಲಿತ ಖುಷಿಯಲ್ಲಿ ಅಜ್ಜಿಗೆ ಲಿಫ್ಟ್ ಕೊಡಲು ಹೋಗಿ ಅಜ್ಜಿ ಜೊತೆಗೆ ತೋಡಿಗೆ (ಹಳ್ಳಕ್ಕೆ) ಬಿದ್ದದ್ದು.. ಈಗಲೂ ಅಜ್ಜಿ ಇದ್ದಾರೆ ಎನ್ನುವಲ್ಲಿಗೆ ಸುಖಾಂತ್ಯ !ಹೀಗೆಲ್ಲಾ ಇರಬೇಕಾದರೆ ಸ್ಲೋ ಸೈಕಲ್ ರೇಸು ಇದ್ದಾಗ, ಅದರ ನಿಯಮ ಗೊತ್ತಿಲ್ಲದೆ ಎಲ್ಲರಿಗಿಂತ ಮೊದಲು ರೀಚ್ ಆಗಿ ಗೆದ್ದೆ ಎನ್ನುವ ಅಹಂಕಾರಕ್ಕೆ, ಕೊನೆಗೆ ಬಂದವನಿಗೆ ಪ್ರೈಜು ಕೊಟ್ಟಾಗ ಆದ ಗೊಂದಲಕ್ಕೆ ಸೈಕಲ್ಲೇ ಕಾರಣ ! ಊರಿಗೆ ಒಂದೇ ರಸ್ತೆ, ಅಲ್ಲಿ ಜನರಿರುವುದಿಲ್ಲ.. ಅಲ್ಲೋ ಇಲ್ಲೋ ಒಬ್ಬಬ್ಬರು ಕಾಣಸಿಗುವುದು.. ಕಾಲೇಜು ಬಿಟ್ಟು ಬಸ್ಸಲ್ಲಿ ಬಂದು ಆ ದಾರಿಯಲ್ಲಿ ಒಬ್ಬಂಟಿ, ಅಥವಾ ಇಬ್ಬರು ಜೊತೆಯಾಗಿ ನಡೆಯುವ ಹುಡುಗಿಯರನ್ನ ಟ್ರಿಣ್ ಟ್ರಿಣ್ ಮಾತಾಡಿಸುವ ಖುಷಿ ಸೈಕಲ್ಲೇ!ಟ್ರಿಣ್ ಟ್ರಿಣ್ ನೆನಪುಗಳು, ಹುಸಿಕೋಪಗಳು.. ಮಗನೇ ಕಲಿಸುತ್ತೇನೆ ಎನ್ನುವ ಡೈಲಾಗುಗಳು ! :) ಬರೀ ಸೈಕಲ್ ನೆನಪು ! ಈಗ ಬೈಕು ಬಂದು ಮಿತಿಮೀರಿದ ವೇಗ, ಹುಡುಗಿಯರ ಶಾಲು ಕೂಡಾ ಕಾಣಿಸದಿರುವದು ವಿಪರ್ಯಾಸ !! ಶಾಲೆಯಲ್ಲಿ, ಯಾರೆಲ್ಲಾ ನಮಗೆ ವಿಲನ್ ಗೆಳೆಯರೋ ಅವರ ಸೈಕಲ್ ಪಂಚರ್ ಮಾಡೋದರಲ್ಲಿದ್ದ ಅಮಿತಾನಂದ ಈಗಿನ ಜಗಳದಲ್ಲಿದೆಯೇ..?? :) ಸೈಕಲ್ ಜೊತೆ ಒಳ್ಳೆಯ ನೆನಪುಗಳು ಜೊತೆಗಿವೆಯಪ್ಪ :).

ಮೊಹಮ್ಮದ್ ಇಮ್ತಿಯಾಜ್ :- ಸೈಕಲ್ ಕಲಿತ ಅನುಭವ ಕೇಳಿದಾಗ ಮನಸ್ಸು ಒಮ್ಮೆ ಬಾಲ್ಯದ ಆ ಸವಿ ದಿನಗಳ ಎಡೆಗೆ ವಾಲಿತು .. ಏನು ಆ ದಿನಗಳು .. ಆಗ ಸ್ವಂತ ಸೈಕಲ್ ಇರೋ ಜನ ಅಂದ್ರೆ ಅವರು ಬಾರಿ ದೊಡ್ಡ ಜನ ಎಂದು ಅರ್ಥ .. ನಮಗೆಲ್ಲಿ ಸ್ವಂತ ಸೈಕಲ್ ಹೇಳಿ ... ಬಾಡಿಗೆ ಸೈಕಲ್ ನಲ್ಲಿಯೇ ನಮ್ಮ ಸವಾರಿ .. ಘಂಟೆ ಗೆ ಮೂರೂ ರುಪಾಯಿ .. ವಾರಕ್ಕೆ ಒಮ್ಮೆ ಪಾಕೆಟ್ ಮನಿ ತೆಗೆದಿಟ್ಟು, ಶನಿವಾರ ಮಧ್ಯಾಹ್ನ ಸೈಕಲ್ ಬಾಡಿಗೆ ತೆಗೆದು ಓಡಿಸುವುದರ ಮಜಾ ಇದೆಯಾಲ್ಲ .. ಅದು ಅನುಭವಿಸಿದವರಿಗೆ ಗೊತ್ತು. ಸೈಕಲ್ ಅಂಗಡಿಯವ ಎಲ್ಲಾರಿಗೂ ಸೈಕಲ್ ಬಾಡಿಗೆಗೆ ಕೊಡುತ್ತಿರಲಿಲ್ಲ ... ಬಾಡಿಗೆ ಕೊಡಬೇಕಾದರೆ ಅವನ ಎದುರು ಒಮ್ಮೆ ಸರಿ ಬ್ಯಾಲೆನ್ಸ್ ನಲ್ಲಿ ಸೈಕಲ್ ಓಡಿಸಿರಬೇಕು .. ನಾನ್ ಸೈಕಲ್ ಕಲಿಯುವಾಗ ನನ್ನ ಫ್ರೆಂಡ್ ಗುರುತಿನಲ್ಲಿ ಸೈಕಲ್ ಬಾಡಿಗೆಗೆ ಪಡೆಯುತ್ತಿದ್ದೆ . (ಸೈಕಲ್ ಬಾಡಿಗೆ ಕೊಡುವವನ ಮಗ ನನ್ನ ಫ್ರೆಂಡ್ , ನನ್ನ ಪುಣ್ಯಕ್ಕೆ ) ಇಬ್ಬರು ಮೂವರು ಗೆಳೆಯರು ಒಟ್ಟಾಗಿ ಸೇರಿ ಸೈಕಲ್ ಬಾಡಿಗೆ ಪಡೆದು , ಹೀಗೆ ದೂರ ಸವಾರಿ ಹೊರಡ್ತ ಇದ್ದೆವು ..ಆಗ ನಮ್ಮ ನಡುವೆ ರೇಸ್ ಕೂಡಾ ನಡೆಯುತ್ತಿತ್ತು .. ಅದರಲ್ಲಿ ಗೆದ್ದ ಬಗ್ಗೆ ಚರ್ಚೆ ಮುಂದಿನ ಒಂದು ವಾರ ಪೂರ್ತಿ ಸ್ಕೂಲ್ ನಲ್ಲಿ ನಡೆಯುತ್ತಿತ್ತು .  ಸೈಕಲ್ ಬಾಡಿಗೆ ತಂದಾಗ , ಒಂದು ರೈಡ್ ಕೊಡೊ , ಒಂದು ರೈಡ್ ಕೊಡೊ , ಎಂದು ಗೆಳೆಯರ ಗೋಳು , ಅವರ ಕಣ್ಣು ತಪ್ಪಿಸಿ ಸೈಕಲ್ ಬಿಡಲು ಮಾಡೋ ಪರದಾಟ ...ಇವೆಲ್ಲ   ಕಷ್ಟ ನಮುಗೆ ಗೊತ್ತು. ಏನ್ ಆ ದಿನಗಳು .......ಭಲೇ ಭಲೇ ನೆನಪುಗಳು.

ಮೊಹಮದ್ ಹನೀಫ್ ಸೈತ್:- ನನಗೆ ಸೈಕಲ್ ಕಳಿಸಿದ್ದು ನನ್ನ ಚಿಕ್ಕಪ್ಪ.ನಾನಾಗ ಐದನೇ ತರಗತಿಯಲ್ಲಿ ಓದುತ್ತಿದ್ದೆ.ನನ್ನ ತಂದೆ,ನನ್ನ ಚಿಕ್ಕಪ್ಪ ಎಲ್ಲರೂ ಸೈಕಲ್ ಓಡಿಸುತ್ತಿದ್ದುದು ನನಗೆ ಬಹಳ ಆಶ್ಚರ್ಯ ಮತ್ತು ಆಸಕ್ತಿಯ ಸಂಗತಿಯಾಗಿತ್ತು.ಹೇಗಾದರೂ ಸೈಕಲ್ ಕಲಿಯಬೇಕೆಂದು ಹಠ ಹಿಡಿದಾಯಿತು.ತಂದೆಯ ಸೈಕಲ್ ಅನ್ನು ತಳ್ಳುತ್ತಾ ಹೋಗಿ ಅನೇಕ ಸಲ ಬಿದ್ದಿದ್ದೆ.ತಂದೆಯಿಂದ ಬಿದ್ದ ಪೆಟ್ಟಿಗೆ ಲೆಕ್ಕವಿಲ್ಲ. ಅದೇ ಸಮಯದಲ್ಲಿ ನಮ್ಮ ಊರಿನ ಸೈಕಲ್ ಮೊಯ್ದುಚ್ಚ ತಮ್ಮ ಅಂಗಡಿಗೆ ಹೊಸತಾದ ಅನೇಕ ಸೈಕಲ್ ಗಳನ್ನು ತಂದಿದ್ದರು.ಅದರಲ್ಲಿ ಒಂದು ಮುದ್ದಾದ ಪುಟಾಣಿ ಸೈಕಲ್ ಕೂಡ ಇತ್ತು.ಅದರ ಮೇಲೆ ನನಗೇನೋ ಬಹಳ ವ್ಯಾಮೋಹ.ಚಿಕ್ಕಪ್ಪನನ್ನು ಪುಸಲಾಯಿಸಿ ಸೈಕಲ್ ಕಲಿಸಲು ತಂದೆಯಿಂದ ಪರ್ಮಿಶನ್ ತೆಗೆಸಿಕೊಂಡೆ.ಅದೇ ಮುದ್ದಾದ ಸೈಕಲ್ ನಲ್ಲಿ ಕೂತು ಚಿಕ್ಕಪ್ಪ ಕಲಿಸುತ್ತಿರಬೇಕಾದರೆ ಏನೋ ಒಂತರಾ ಪುಳಕ.ಕಲಿಯುವಾಗ ಒಂದೇ ಕಡೆಗೆ ವಾಲಿಬಿಡುತ್ತಿದ್ದೆ.ಮುಂದೆ ನೋಡದೆ ಫೆಡಲ್ ನೋಡುತ್ತಿದ್ದೆ.ಖರ್ಚಿಗೆ ಇರಲಿ ಅಂತ ಚಿಕ್ಕಪ್ಪನೂ ಸ್ವಲ್ಪ ಪೆಟ್ಟು ಕೊಟ್ಟ.ಎರಡು ದಿನದಲ್ಲಿ ನಾನೊಬ್ಬ ಪರ್ಫೆಕ್ಟ್ ಸೈಕಲ್ ಸವಾರನಾಗಿದ್ದೆ.ನಂತರದ್ದು ಹೇಳುವುದೇ ಬೇಡ.ಸೈಕಲ್ ತುಳಿಯಲು ಕಾಸಿಗಾಗಿ ಚಿಕ್ಕಪ್ಪ,ಮಾವಂದಿರತ್ತಿರ ಸಾಕ್ಷಾತ್ ಭಿಕ್ಷುಕನಾಗಿದ್ದೆ.ಸೈಕಲ್ನಲ್ಲಿ ಬಿದ್ದು ಮಾಡಿಕೊಂಡ ಗಾಯಗಳು ಅದೆಷ್ಟೋ.

ಜಯಪಾಲ್ ಹಿರಿಯಾಳು:- ಒಂದು ಸಾರಿ ನಮ್ ಮನೆಗೆ ಬಂದ್ದಿದ್ದ ಪರಿಚಿತರ ಬೈಸಿಕಲ್ ಕೇಳಿ ಇಸ್ಕೊಂಡು ಸಂಜೆ ಹೊಡಿವಾಗ, ಚರಂಡಿಗೆ ಬಿದ್ದ ರಭಸಕ್ಕೆ ಚರಂಡಿಯ ಕಾಂಕ್ರಿಟ್ lining ನನ್ನ ಕಾಲಿಗೆ ತಾಗಿ ಸರಿ ಗಾಯ ಆಯಿತು. ಇನ್ನು ಅದರ ಕಲೆ ಹಾಗೆ ಇದೆ. ನಾನು SSLC ಓದುವಾಗ ಕಾಡಿ ಬೇಡಿ Hero Jet second hand ಸೈಕಲ್ ತೆಗಿಸಿಕೊಂಡೆ, ಅಪ್ಪ ನನ್ನ ಅಮ್ಮ ಅದಕ್ಕೆ ದೊಡ್ಡ ಆಕ್ಷೇಪಣೆ ಎತ್ತಿದ್ದರು. ಅವರ ಪ್ರಕಾರ ನಾವು ಪೋಲಿ ಬಿದ್ದೋಗುತ್ತೇವೆ ಅಂಥ ಅವರ ಅಂದಾಜು... Even ನಾನು M A ಓದುವಾಗಲೂ ಸೈಕಲ್ ತುಳಿದುಕೊಂಡೇ ಹಾಸ್ಟೆಲ್ ನಿಂದ್ ಪಡುವಾರಹಳ್ಳಿ, ಅಲ್ಲಿಂದ ಗಂಗೋತ್ರಿಗೆ ಹೋಗುತ್ತಿದ್ದೆವು... ಮಾಸದ ಗಾಯದ ಜೊತೆ ಸೈಕಲ್ ನೆನಪು ನನ್ನಲ್ಲಿ ಸದಾ ಹಸಿರು.

ಪ್ರವೀಣ್ ಸೂಡ:- ನನಗೆ 5ನೆ ಕ್ಲಾಸ್ ಅಲ್ಲಿ ನವೀನ ಅಂತ ಕ್ಲೋಸ್ ಫ್ರೆಂಡ್ ಇದ್ದ, ಸೈಕಲ್ ಹುಚ್ಚ ನನ್ನ ಹಿಂದೆ ಕೂರಿಸ್ಕೊಂಡು ಊರೆಲ್ಲ ಸುತ್ತೋನು, ಒಂದು ಸಾರಿ ಸ್ಪೀಡಾಗಿ ಸೈಕಲ್ ಓಡಿಸಬೇಕಾದ್ರೆ,ಹಂಪ್ಸ್ ಬಂತು ನಾನು ಎಗರಿದೆ ಸೈಕಲ್ ಮೂವ್ ಆಯ್ತು ನಾನು ಮತ್ತೆ ಬ್ಯಾಕ್ ಸೀಟಲ್ಲಿ ಕೂರೊ ಅಷ್ಟ್ರಲ್ಲಿ ಸೈಕಲ್ ಮುಂದೆ ಹೋಗಿ ನಾನು ರೋಡಿಗೆ ಬಿದ್ದೆ.. ಹಾಳಾದ್ದು ಆ ವಯ್ಯಸ್ಸಲ್ಲೆ ನನ್ ಬ್ಯಾಕಿಗೆ ಸರಿ ಏಟು ಬಿತ್ತು..

ಅಲೀರ ಅಬ್ದುಲ್ ಜಮೀರ್ :- ನಾನು ಚಯಕಲ್ ಕಲಿಬೇಕು ಅಂತ ಆಸೆ ಇಂದ ಅಪ್ಪ ಹತ್ರ ಸೈಕಲ್ ಕೊಡಿಸೊಕೆ ಕೇಳಿದೆ, ಅವರು ಮೊದಲು ಸೈಕಲ್ ಕಲಿ ಆಮೇಲೆ ಕೊಡಿಸ್ತೀನಿ ಅಂತ ಹೇಳಿದ್ರು ಸೈಕಲ್ ಇಲ್ಲದೆ ಸೈಕಲ್ ಕಲಿಯೋದು ಹೇಗೆ? ಅದಕ್ಕೆ ಒಮ್ಮೆ ಸ್ಕೂಲ್ ಅಲ್ಲಿ ಇದ್ದಾಗ ಒಂದು ಸೈಕಲ್ ಕದ್ದೆ, ಅದು ಪ್ರಿಸಿಪಾಲ್ ಮಗಳ ಸೈಕಲ್, ಸಂಜೆ ತನಕ ತಗೊಂಡು ಹೋಗಲೆ ಇಲ್ಲ, ಸಂಜೆ ತಿಳಿತು ಅದು ಪ್ರಿಸಿಪಾಲ್ ಮಗಳ ಸೈಕಲ್ ಅಂತ, ಕೊನೆಗೆ ಸೈಕಲ್ ಎಲ್ಲೊ ಬಿಸಾಕಿ ಮನೆಗೆ ಹೋದೆ, ಮಾರನೆ ದಿನ ಅಲ್ಲಿ ಸೈಕಲ್ ಇರಲೆ ಇಲ್ಲ, ಸೈಕಲ್ ಕದ್ದಿದ್ದು ನಾನು ಅಂತ ತಿಳಿಲೆ ಇಲ್ಲ.. ಕೊನೆಗೆ ಸೈಕಲ್ ಕಾಯೊಕೆ ಸೆಕ್ಯುರಿಟಿ ನೇಮಿಸಿದ್ರು ಸ್ಕೂಲಿಂದ....:) :)

ಅನುಪಮ ಗೌಡ:-ನಾನ್ ಕೂಡ ಡ್ಯಾಡಿ ಮನೇಲಿ ಸೈಕಲ್ ಓಡ್ಸಿದೀನಿ, ಅಲ್ಲಿ ಪಾಪ ನನ್ ತಮ್ಮಂದಿರು ಕಲಿಸಿಕೊಟ್ಟಿದ್ದು, ಅವರಿಬ್ರೂ ಹಿಡ್ಕೊಂಡಿದ್ರೆ ನಾನು ಅವ್ರಿಬ್ರ ಮೇಲೆ ಬ್ಯಾಲೆನ್ಸ್ ಬಿಟ್ಟು ಆರಾಮಾಗಿ ಸೈಕಲ್ ಓಡಿಸ್ತಿದ್ದೆ,ಪಾಪ ತಮ್ಮಂದಿರು ಆ ಬಿಸಿಲಲ್ಲಿ ಬಳಲಿ ಬೆಂಡಾಗಿ ಬಿಡ್ತಿದ್ರು, ಒಂದಿನ ನನ್ನಿಂದಾಗಿ ಅವರು ಮೋರಿಗೆ ಹೋಗಿ ಬಿದ್ದಿದ್ರೂ,ನೆನಸಿ ಕೊಂಡ್ರೆ ಇವತ್ತು ಕೂಡ ನಗು ತಡಿಯಾಕ್ಕಾಗೋದೆ ಇಲ್ಲ,ಬಟ್ ನಾನಂತೂ ಸೇಫ್ ಆಗಿದ್ದೆ. :)

ತ್ರಿವೇಣಿ ಟಿ ಸಿ:- ತುಮಕೂರಿನ ಶ್ರೀರಾಮನಗರದ ದೊಡ್ಡಮ್ಮನ ಮನೆಗೆ ಹೋದಾಗಲೆಲ್ಲ , ೨ರೂ ಕೊಟ್ಟು ಸೈಕಲ್ ಬಾಡಿಗೆ ತಗೊಂಡು ನಮ್ಮಕ್ಕ ನಿರ್ಮಲ (ನಿಂಬೆಕಾಯಿ ) ಸಂಜೆ ಕರ್ಕೊಂಡು ಹೋಗುವವಳು, ಅವಳ್ ಯಾರೋ ಹುಡುಗನ ಜೊತೆ ಮಾತಾಡ್ತಾ ನಿಲ್ಲೋಳು, ಯಾರು ಏನು ಯಾಕೆ ಎತ್ತ ಅಂತ ಗೊತ್ತಾಗಿದ್ದು ಅವ್ರು ನನ್ ಭಾವ ಆದ ಮೇಲೆನೆ. ನಮ್ಮಭಾವನೆ ಸೈಕಲ್ ಬಾಡಿಗೆ ತೆಗೊಳಕ್ಕೆ ದುಡ್ಡು ಕೊಡ್ತಾ ಇದ್ರು ಅಂತ , ಕೆರೆ ರೋಡ್ ಅಂಚಿಗೆ ಅವರ ಮನೆ , ಒಮ್ಮೊಮ್ಮೆ ಸೀಬೇಕಾಯಿ ಕೊಡುವವರು, ನನ್ನಿಂದಲೆ ಅವರ ಲವ್ ಸ್ಟೋರಿ ಕೂಡ ಗೊತ್ತಾಗಿ ಅವರ ಮಾಡುವೆ ಮಾಡ್ಸಿದ ಪಾಪನೋ ,ಪುಣ್ಯನೊ ಗೊತ್ತಿಲ್ಲ . ಅಂತು ಮದ್ವೆ ಆಗಿತ್ತು ನಮ್ಮ ನಿಂಬೆಕಾಯಿದು :) . . . . . !!!!ಹೀಗೆ ಈ ಲವ್ ಪುರಾಣದ ಫಲವಾಗಿ ನಾನು ಸೈಕಲ್ ಕಲಿತೆ. ಸೈಕಲ್ ಕಲಿತ ಖುಷಿನಲ್ಲಿ ಅಜ್ಜಿ ಮನೆಗೆ ಹೋಗಿ , ಮಾಮನ ಟಿವಿಎಸ್ ಸ್ಕೂಟರ್ ತಗೊಂಡು ತೋಟಕ್ಕ್ ಹೋಗ್ತಾ ಇದ್ದೆ . ಒಂದು ಎಮ್ಮೆ ದಾರಿಗೆ ಅಡ್ಡ ಬಂದು ನಾನು ಹೋಗಿ , ಬೇಲಿಗೆ ದಬ್ಬಾಕೊಂಡಿರ್ಬೇಕಾದ್ರೆ, ಯಾರೋ ಬಂದು ಹೆಲ್ಪ್ ಮಾಡಿ ಕರ್ಕೊಂಡು ಹೋಗಿ ಮತ್ತೆ ಅಜ್ಜಿ ಮನೆಗೆ ಬಿಟ್ಟರು ಅವತ್ತಿಂದ ಮತ್ತೆ ಸೈಕಲ್ & ಮೋಟಾರ್ ಸಹವಾಸಕ್ಕೆ ಹೋಗಿಲ್ಲ . . . .!!!!

ಮಲ್ಲಿ ಸಾಗರ್:- ಬ್ರೇಕ್ ಇಲ್ಲದ ಸೈಕಲ್ ಓಡ್ಸಿ ಬಟ್ಟೆ ಒಗೀತಾ ಇದ್ದ ಒಂದು ಹೆಂಗಸಿಗೆ ಸೈಕಲಿಂದ ಗುದ್ದಿದ್ದೆ,,,,,,,, ನಮ್ಮ ಫ್ಯಾಮಿಲಿ ಹೆಸರು ಗೊತ್ತಾದ ಮೇಲೆ ಸುಮ್ಮನೆ ಬಿಟ್ಟಳು !!!!!!!!!!! ಸೈಕಲ್ ಜೊತೆ ಒಂದು ನಿಕಟವಾದ ಸಂಬಂಧ ಈಗಲೂ ಇದೆ ,,,, ಈಗಲೂ ಸೈಕಲ್ ಓಡಿಸೋದು ಅಂದ್ರೆ ತುಂಬಾ ಮಜಾನೆ,,,,,,,,,,,,

ಜಾವೇದ್ ಹುಸೇನ್:- ಬೆಂಗಳೂರಿನಲ್ಲಿದ್ದಾಗ ನಾನು ನನ್ ಗೆಳೆಯರು ಸಂಡೇ ಬಂದಾಗೆಲ್ಲ ನೆಲಮಂಗಲ ವರೆಗೂ ಸೈಕಲ್ ನಲ್ಲಿ ಹೋಗಿ ಮತ್ತೆ ವಾಪಸ್ಸ್ ಬರೋವಾಗ ಪಡ್ತಿದ್ದ ಪಛೀತಿ ಈಗಲೂ ನೆನಪಿದೆ. ಹೀಗಿರಬೇಕಾದರೆ ನಾನ್ ಒಂದು ಸಾರಿ ಹಳ್ಳಿನಲ್ಲಿ ಇದ್ದಾಗ ನಮ್ಮ ದೊಡ್ಡಪ್ಪನ ಅಟ್ಲಾಸ್ ಸೈಕಲ್ I mean ದೊಡ್ಡ ಸೈಕಲ್ ತಗೊಂಡು ಅಡ್ಡ ಕಾಲ್ ಹಾಕಿ ತುಳಿಯುವಾಗ ಬಿದ್ದು ಕಾಲ್ ಮುರಕೊಂಡು 1 ವೀಕ್ ಕುಂಟುಕೋತಾ ನಡೀತಾ ಇದ್ದೆ. ಆಗ್ಲೇ ನಂಗು ಸೈಕಲ್ ಗೆ ಬಿಡಿಸಲಾಗದ ದ್ವೇಷ ಬಂದಿದ್ದು......

ಚಂದು ಎಸ್ ಆಚಾರ್:- ನಾನು ಆಗ ಮೂರನೇ ಕ್ಲಾಸು, ಸೈಕಲ್ ಅಂದ್ರೆ ಪ್ರಾಣ. ಆದರೆ ಸ್ವಲ್ಪ ಕುಳ್ಳ ಇದ್ದೆ, ಸೈಕಲ್ ಹೊಡ್ಯೋಕೆ ಕಾಲು ಸಿಗ್ತಾ ಇರ್ಲಿಲ್ಲ. ನನ್ನ ಅಪ್ಪ ಟೀಚರ್ ಆಗಿದ್ರು, ಅವರು ಕೆಲ್ಸ ಮಾಡ್ತಿದ್ದ ಸ್ಕೂಲ್ ನಾಲ್ಕು ಕಿ,ಮಿ ದೂರ ಇತ್ತು. ಒಂದು ದಿನ ಅಮ್ಮ ಊಟದ ಬಾಕ್ಸ್ ಕೊಟ್ಟು, ಹತ್ತು ರೂ ಕೊಟ್ಟು ಬಸ್ಸಲ್ಲಿ ಹೋಗಿ ಅಪ್ಪಂಗೆ ಊಟ ಕೊಟ್ಟು ಬಾ ಅಂದಿದ್ರು. ಸಿಕ್ಕಿದ್ದೆ ಚಾನ್ಸ್ ಅಂತ ಸೀದ ಹೋಗಿ ಬಾಡಿಗೆ ಸೈಕಲ್ ತಗೊಂಡು ಹೊರಟೆ, ಎಷ್ಟು ತುಳಿದ್ರು ಊರು ಸಿಗ್ತಾನೆ ಇಲ್ಲ. ಆದ್ರು ಕಷ್ಟಪಟ್ಟು ತಲುಪಿದೆ. ತುಂಬ ಸುಸ್ತಾಗಿದ್ದೆ. ನನ್ನ ಅಪ್ಪಾಜಿ ಗೆ ತುಂಬಾ ಸಂತೋಷ ಆಗಿತ್ತು, ಆದ್ರು ತುಂಬ ಬೈದಿದ್ರು. ಊಟ ಕೊಟ್ಟು ವಾಪಸ್ ಮನೆಗೆ ಬಂದೆ ಜ್ವರ ಬಂದು ಮಲಗ್ಬಿಟ್ಟೆ. ಆದ್ರು ಏನೊ ಖಷಿ, ಅಷ್ಟು ದೂರ ಸೈಕಲ್ ಅಲ್ಲಿ ಹೋಗ್ಬಂದೆ ಅಂತ.ನನ್ನ ಅಪ್ಪಾಜಿನೂ ಅವರ ಸ್ನೇಹಿತರತ್ರ ಹೇಳ್ಕೊತಿದ್ರು. ಅವರ ಕಣ್ಣಲ್ಲಿ ಏನೊ ಒಂದು ತರ ಖುಷಿ ಕಾಣುಸ್ತಿತ್ತು. ಈಗ ಸೈಕಲ್ ಮೂಲೆ ಸೇರಿದೆ, ಅಪ್ಪಾಜಿ ನು ಇಲ್ಲ... i miss my dad n also my cycle....

ಚಂದನಾ ರಾವ್:- ನನಗೆ ಸೆಕೆಂಡ್ ಸ್ಟಾಂಡರ್ಡ್ ನಲ್ಲಿ ಕೊಡಿಸಿರೊ ಸೈಕಲ್ ಈಗಲೂ ಇದೆ ..ದಿನ ಅದರಲ್ಲೇ ಸ್ಕೂಲ್ಗೆ ಹೋಗ್ತಿದ್ದೆ ...ನನ್ ಸೈಕಲ್ ಹೆಸರು ಐರಾವತ ಅಂತ ..:)


ಸರ್ವೇಶ್ ಕೂಮಾರ್ ಎಂ ವಿ:-

ಎಂಬತ್ತರ ದಶಕದಲ್ಲಿ ನಮ್ಮ ಮನೆಯಲ್ಲಿ ಇರಲಿಲ್ಲ ಸೈಕಲ್ಲು

ಐದನೆ ವಯಸ್ಸಿನಲ್ಲೆ ಮನ ಹಾತೊರೆಯುತ್ತಿತ್ತು ಕಲಿಯಲು ಬೈಸಿಕಲ್ಲು

ಅಂತು ಇಂತು ಕಾಡಿ ಬೇಡಿ ಪಡೆದಿದ್ದೆ ಕಲಿಯಲು ಸ್ನೇಹಿತನ ಸೈಕಲ್ಲು
ಮೊದಲ ದಿನ ಸೀಟನ್ನು ಹತ್ತಿ ಬಡಿದಿತ್ತು ಸೈಕಲ್ಲಿಗೆ ಸೈಜುಗಲ್ಲು

ಬಡಿತದ ರಭಸಕ್ಕೆ ಹಾರಿ ಬಿದ್ದು ಹರಿದಿತ್ತು ನನ್ನ ಮಂಡಿ ಕಾಲು
ಮನೆಯಲ್ಲಿ ಕೇಳಿದಾಗ ಉತ್ತರಿಸಿದ್ದೆ ಪೊಣಿಸಿ ಸುಳ್ಳುಗಳ ಸಾಲು

ಕೊನೆಗು ಕಾಟ ತಾಳಲಾರದೆ ಕೊಡಿಸಿದ್ದರು ಮನೆಯಲ್ಲೊಂದು ಪುಟ್ಟ ಸೈಕಲ್ಲು
ತಳ್ಳಾಡಿ ಕಷ್ಟ ಪಟ್ಟು ಅಣ್ಣನ ಮಾರ್ಗದರ್ಶನದಿ ವಾರದಲ್ಲಿ ಕಲಿತಿದ್ದೆ ಕತ್ತರಿ ಕಾಲು

ಕಲಿತ ಮೇಲೆ ಎಲ್ಲೆಂದರಲ್ಲಿ ಮಾಡುತ್ತಿದ್ದೆ ಸವಾರಿಯ ಮೈಲಿಗಲ್ಲು
ವಿವಿಧ ಶೋಕಿ ಮಾಡಲು ಹೋಗಿ ಮತ್ತೊಮ್ಮೆ ಮುರಿದಿತ್ತು ಕೈ ಕಾಲು

ತುಳಿದು ತುಳಿದು ಬೆಂಡಾಗಿ ನನ್ನ ಸೈಕಲ್ಲು ಪಾವತಿ ಮಾಡಿಸಿತ್ತು ರಿಪೇರಿಗೆ ಹೆಚ್ಚು ಬಿಲ್ಲು
ಬೆಸತ್ತು ಬರಡಾಗಿದ್ದ ಮನ ಯೋಚಿಸಿತ್ತು ಕೊಂಡರೆ ಹೇಗೆ ಒಂದು ಮೋಟಾರ್ ಸೈಕಲ್ಲು!!!!

ರಾಘವೇಂದ್ರ ತೆಕ್ಕಾರ್:- ನನ್ನೊಬ್ಬ ಸೈಕಲ್ ಕಲಿಸಿದ ಮೊದಲ ಗುರು ಇದ್ದ ನಾರಾಯಣ ಅಂತ ಮೊದಲ ದಿನ ಮೊದಲ ಸೈಕಲ್ ಏರಿದ ದಿನದ ಗುರು,2 ರೌಂಡ್ ಕ್ಯಾರಿಯರ್ ಹಿಡ್ಕೊಂಡು ಸೈಕಲ್ ಹಿಂದೆ ಹಿಡ್ಕೊಂಡು ಓಡಿದ, ಮೂರನೆ ರೌಂಡಿಗೆ ಅವನಿಗೆ ಆಯಾಸ ಆಗಿ ದಬಾರ್ ಅಂತ ದೂಡಿ ಬಿಟ್ಟ ನನಗೆ ಬ್ಯಾಲೆಂಸ್ ಇಲ್ಲ ಸೈಕಲ್ ಸಮೇತ ಹೊತ್ಕೊಂಡು ಬಿದ್ದೆ, ಅವನೊ ನನ್ ಮನೆಯಲ್ಲಿ ಅಮ್ಮ ಬೈತಾರೆ ಅಂತ ಓಡಿ ಹೋಗಿದ್ದ, ನಾನ್ ಮನೆಗೆ ಬಂದು ಅಮ್ಮನತ್ರ ಬೈಸ್ಕೊಂಡಿದ್ದೆ, ರಾತ್ರಿ ಪೂರ್ತ ಜ್ವರ, ಹಾ ಸೈಕಲ್ ತೆಗೊಂತಾ ಇದ್ದಿದ್ದು ಲತೀಫ್ ಹತ್ರ.ಅಮೇಲೆ ವಾರ ಕಳೆದ ಮೇಲೆನೆ ನಾರಾಯಣ ಪತ್ತೆಯಾಗಿದ್ದು.ಅಮೇಲೆ ನಾವೆ ನಮುಗೆ ಗುರುಗಳು, ನಮ್ದು ಸೈಕಲ್ ಬಾಡಿಗೆಗೆ ಪಡೆಯೋಕೆ ಲೆಡ್ಜರ್ ಸೈನ್ ಏನೂ ಇಲ್ಲ, ಅರ್ಧ ಘಂಟೆಗೆ ತೆಗೊಂಡಿದ್ದು ಅಂತಾದರೆ 2-3 ರೌಂಡ್ ಹೋಗಿ ಬರ್ಬೇಕಾದರೆ ಟೆನ್ಷನ್, ಎಲ್ಲಿ ಟೈಮ್ ಮೀರುತ್ತೊ ಅಂತ, ಟೈಮ್ ಮೀರಿದ್ರೆ ಜೇಬಲ್ಲಿ ಕಾಸು ಇರ್ತಾ ಇರಲಿಲ್ಲ, ಅದುಕ್ಕೆ ಪದೆ ಪದೆ ಅಂಗಡಿಯನತ್ರ ಅಥವಾ ಅವನ ಮುಂದೆನೆ ಸೈಕಲ್ ಹೊಡೀತಿದ್ದೆ, ಟೈಮಾದರೆ ಅವ್ನೆ ಕರೀತಾನೆ ಅಂತ, ಜೇಬಲ್ಲಿ ದುಡ್ಡಿದ್ದಾವಾಗ ಅಷ್ಟೆ ದೂರ ಹೋಗ್ತಾ ಇದ್ದಿದ್ದು.ಹಾಗಿದ್ರು ಕೆಲವೊಮ್ಮೆ ಸಾಲ ಆಗಿದ್ದು ಉಂಟು, ಸಾಲ ತೀರಿಸಲು ಮತ್ತೆ ದುಡ್ಡು ಹೊಂದಿಕೆ ಆಗೋ ವರೆಗೆ ಸೈಕಲ್ ಒಡಿಸೋ ಆಸೆ ಆದರು ಸುಮ್ನೆ ಕೂರ್ತಿದ್ದೆ. ಬಾಡಿಗೆ ಸೈಕಲ್ ಅಂಗಡಿ ಇದ್ದಿದ್ದು ಅಪ್ಪನ ಬ್ಯಾಂಕ್ ಪಕ್ಕ ಚೆನ್ನಾಗಿರೊ ರೋಡ್ ಕಡೆ ಹೊಡಿಯೋಣವೆಂದರೆ ಮನೆ, ಆ ಕಡೆ ಹೊಡೆದರೆ ಅಪ್ಪಂಗೆ ಗೊತ್ತಾಗುತ್ತೆ ಈ ಕಡೆ ಹೊಡೆದರೆ ಅಮ್ಮಂಗೆ ಗೊತ್ತಾಗುತ್ತೆ, ಏಟು ಬೀಳೋದು ಗ್ಯಾರೆಂಟಿ, ಅದುಕ್ಕೆ ರೊಡಲ್ಲದ ರೋಡಲ್ಲಿ ಸೈಕಲ್ ಶಾಫ್ ಹಿಂದ್ಗಡೆ ರೋಡಲ್ಲಿ ಮೊದ ಮೊದಲು ಸೈಕಲ್ ಹೊಡೀತಾ ಇದ್ದೆ, ಅಪ್ಪನಿಗೆ ಗೊತ್ತಾಗಬಾರದು ಅನ್ನೊದನ್ನ ಶಾಪ್ ನವನಿಗೆ ಮೊದಲೆ ಹೇಳ್ತಿದ್ದೆ,ಈ ಎಲ್ಲದರ ಮಧ್ಯೆ ಟೈಮ್ ಟೆನ್ಷನ್, ಸೈಕಲ್ ಶಾಫ್ ನವನ ಕಣ್ಣಿಗೆ ಕಾಣುವಂತೆ ಆಗಾಗೆ ಬಂದು ಹೋಗ್ಬೇಕಾದ ಪಛೀತಿ, ಅಂತೂ ಇಂತು ಕಲಿತೆ, ಆಮೇಲೆನೆ ಮನೆಗೆ ಬಾಡಿಗೆ ಸೈಕಲ್ ಹೊಡ್ಕೊಂಡು ಹೋಗಿ ಅಮ್ಮನೆದುರು ನಿಲ್ಲಿಸಿದ್ದು, ಅಮ್ಮ ನೀನ್ ಯಾವಾಗ ಕಲಿತಿದ್ದು ಅಂತ ಕೇಳಿದ್ರು. ಪುಣ್ಯಕ್ಕೆ ಏಟೇನು ತಿಂದಿರಲಿಲ್ಲ ಆ ದಿನ. :)

ಎಂತೆಂಥ ಅನುಭವ, ನೆನಪುಗಳು ಅಲ್ಲವೆ, ಬಹುಶಃ ನನ್ನ ಅನುಭವ ಅಷ್ಟನ್ನೆ ಬರೆದುಕೊಂಡಿದ್ದರೆ ಇಷ್ಟೆಲ್ಲಾ ಅನುಭವಗಳು ದಕ್ಕುತ್ತಿರಲಿಲ್ಲ.ಪ್ರತಿಯೊಬ್ಬರದು ವಿಭಿನ್ನ ಅನುಭವ ಅದರ ಜೊತೆ ನೆನಪುಗಳ ಮಹಾ ಪೂರಣ. ಈ ಎಲ್ಲಾ ಅನುಭವ ಹಂಚಿಕೆಯು ಖುಷಿಕೊಟ್ಟಿದ್ದು ಬಹಳ, ಈ ಖುಷಿಯನ್ನು ಎಲ್ಲರೊಡೆ ಹಂಚಿಕೊಳ್ಳೋಣವೆಂದು ದಾಖಲಿಸಿದೆ. ಇವತ್ತು ನಮಗೆ ಸೈಕಲ್ ಒಂದು ದೊಡ್ಡ ವಿಷಯ ಅಲ್ಲದಿರಬಹುದು, ಆದರೆ ಆ ದಿನಗಳ ಈ ನಿಟ್ಟಿನ ತುಡಿತ,ನೋವು ಏಟುಗಳನ್ನು ಲೆಕ್ಕಿಸದೆ ಕಲಿತೆ ತೀರಬೇಕೆಂಬ ಹಂಬಲ, ಒಂದು ದಿನ ದಕ್ಕಿದ ಗೆಲುವು ಇತ್ಯಾದಿ ನೆನಪುಗಳ ಮೆಲುಕುಗಳು ನಮ್ಮ ಇಂದಿನ ಕಾರ್ಯಗಳಿಗೆ ಸ್ಪೂರ್ತಿಯಾದರು ಅಚ್ಚರಿಯಿಲ್ಲ.ಏನಾಗದಿದ್ದರೇನಂತೆ ಖುಷಿಯನ್ನಾದರು ತರಬಲ್ಲುದಲ್ಲವೆ, ಅದೆ ದೊಡ್ಡ ಗೆಲುವು.

ಚಿತ್ರ ಕೃಪೆ ಮತ್ತು ಅನುಭವ ಹಂಚಿಕೊಳ್ಳುವಲ್ಲಿ ಅನುವು ಮಾಡಿ ಕೊಟ್ಟಿದ್ದು:-ದಯಾನಂದ್ ಟಿಕೆ


ಅವಧಿಯಲ್ಲಿ ಪ್ರಕಟವಾದ ಈ ಲೇಖನ  ಓದಲು ಇಲ್ಲಿ ಕ್ಲಿಕ್ಕಿಸಿ.

Saturday, March 24, 2012

ಆಕರ್ಷಣೆಗಳ ಸೆಳೆತಕ್ಕೆ ಸಿಕ್ಕಿ ಬೀಳುವ ಹುಚ್ಚು ಕೋಡಿ ಮನಸು....

ಅದೊಂದು ಕಣ್ಣ ಮಿಂಚು ಪಳ್ಳನೆ ನನ್ನೆದುರು ಇವತ್ತು ಕೂಡ ಬಂದು ಕಣ್ಣು ಕುಕ್ಕುತ್ತೆ,ಆ ನೆನಪುಗಳು ಮತ್ತೆ ಸುಳಿದಾಡಿ ಮೆಲ್ಲಗೆ ನನ್ನಲ್ಲಿ ನಸು ನಗೆಯ ತರಿಸುತ್ತೆ, ಅವಾಗ ಅವಳದು ನನ್ನದು ವಯಸ್ಸು ಹನ್ನೆರಡಿರಬೇಕು,ಒಂದೆ ಕ್ಲಾಸು, ಅಕ್ಕ-ಪಕ್ಕದ ಬೆಂಚು, ನಡುವೆ ಒಂದಿಷ್ಟು ಗ್ಯಾಪ್ ಸಿಹಿಗಾಳಿ ಓಡಾಡಲೆಂದು,ಚಿಕ್ಕಂದಿನಿಂದ ಪರಿಚಿತಳೆ ಆದರು ಅದೊಂದು ಅವಳ ದೃಷ್ಟಿ ನನ್ನ ತಾಕಿದ್ದು ಪೆನ್ನು ಬರೆಯುತ್ತಿಲ್ಲವೆಂದು ಪೆನ್ನು ಕಡ್ಡಿಯನೂದಿ ನಿಬ್ ಹಾರಿ ಶಾಯಿ ಆಕೆಯ ಡೆಸ್ಕ್ ಮೇಲೆ ಚಿತ್ತಾರ ಬಿಡಿಸಿದಾಗ,ಆಕೆಯ ಆ ಹೊತ್ತಿನ ರಂಪ್ ರಾಢಿ ಟೀಚರ್ ಗೆ ಹೇಳ್ತೀನಿ ಅನ್ನೊ ಗದರಿಕೆಯೊಂದಿಗೆ ಸ್ಟಾಪ್ ರೂಮಿಗೆ ಹೊರಟ ಬಿರುಸು,ಅದ ತಡೆಯಲು ನಾ ಕೈಹಿಡಿದೆಳೆದ ಕ್ಷಣವೆ ರಪ್ಪನೆ ಅವಳ ಕಣ್ಣ ಮಿಂಚು ನನಗೆ ರಾಚಿದ್ದು. ನೋಟ್ ಬುಕ್ಕಿನ ಹಾಳೆಯೆಳೆದು ಡೆಸ್ಕ್ ನಲ್ಲಿ ಮೂಡಿದ್ದ ಚಿತ್ತಾರವ ಅಳಿಸುತ್ತನೆ ಮನದೊಳಗೆ ಹೊಸ ತರದ ಭಾವನೆಗಳ ಚಿತ್ತಾರವ ಬಿಡಿಸಿದ್ದೆ. ಅವಳಲ್ಲೂ ಈ ಚಿತ್ತಾರ ಮೂಡಿತ್ತೆ? ಅವಳ ಆ ನೋಟದೊಳಗೆ ಅದೇನು ಸೆಳೆತವಿತ್ತು?ಕೋಪದಿ ಕುದಿಯಾಗಿದ್ದ ಅವಳು ಶಾಂತವಾಗಿದ್ದು ಹೆಂಗೆ? ಆ ಸ್ಪರ್ಷ ಹಿತವಾಗಿದ್ದೇಕೆ?ಪರಿಚಿತ ತುಂಡುಲಂಗದ ಹುಡುಗಿ ಈ ಚಡ್ಡಿ ಹೈದನಿಗೆ ಅವತ್ತೆ ಯಾಕೆ ಇಷ್ಷವಾಗಿದ್ದು?ಗೊತ್ತಿಲ್ಲ, ತನ್ನ ಬ್ಯಾಗ್ ತಡಕಾಡಿ ಪೆನ್ನೊಂದನ್ನ ಕೊಟ್ಟಿದ್ದಳು ಎಲ್ಲವನ್ನು ಮರೆತ ನಸುನಗೆಯೊಂದಿಗೆ,ನನ್ನ ಕಳ್ಳ ನೋಟಗಳು ನನ್ನ ಪರಿವೆಯೆ ಇಲ್ಲದೆ ಅವಳತ್ತ ಸಾಗಲು ಶುರುವಾದ ದಿನವದು,ನನ್ನ ಪ್ರತಿ ನೋಟದಲ್ಲು ಅವಳ ಮೊಗದಲ್ಲಿ ಮುಗುಳ್ನಗೆಯನ್ನೆ ಕಂಡಿದ್ದೆ ಆ ದಿನದಿಂದ. 

ಹೊಂ ವರ್ಕ್ ಮುಗಿಸಿ ಮೇಸ್ಟರಿಗೆ ತೋರಿಸಿದಾಗ,ಕ್ಲಾಸಲ್ಲಿ ಎದ್ದು ನಿತ್ತು ಮೇಸ್ಟ್ರ ಪ್ರಶ್ನೆಗೆ ಉತ್ತರಿಸಿ ಕೂತಾಗ,ಮಗ್ಗಿ ಉಸುರಿ ಮುಗಿಸಿದಾಗ ಮೇಸ್ಟ್ರ ಶಹಭಾಶ್ ಮಾತುಗಳನ್ನು ಕೇಳಿಸಿಕೊಂಡೆ ನನ್ನ ಕುಡಿ ನೋಟವ ಹರಿ ಬಿಡುತಿದ್ದೆ ಅವಳೆಡೆ ಅವಳ ಮುಖದಿ ಲಾಸ್ಯವಾಡೊ ನಗೆಯ ಕಾಣಲು, ಅವಳ ನಗೆಯಲ್ಲಿನ ಮಾಂತ್ರಿಕತೆ ನನಗೆ ಕೊಡೊ ಹುರುಪುಗಳನ್ನ ಹಿಡಿಯಾಗಿಸುತ್ತಲೆ ಇದ್ದೆ ಪ್ರತಿಸಲ.ಗ್ರೌಂಡಿನ ಬರೆಯಲ್ಲಿ ಕುಳಿತು ಆಕೆ ನೋಡುತಿದ್ದರೆ ಆಟದಲ್ಲಿ ತೊಡಗಿಕೊಂಡ ನನಗೆ ಬೂಷ್ಟ್ ಕುಡಿದ ಅನುಭವ,ನುಗ್ಗಿ ಬರುವ ಚೈತನ್ಯದೊಂದಿಗಿನ ಅದೆಂತದೊ ಸೆಳೆತ ನವಿರು ಖುಷಿಯಕೊಡುತಿತ್ತು, ಆಕೆ ನನ್ನೆ ನೊಡುತಿದ್ದಳ?ಎಂಭೊ ಪ್ರಶ್ನೆಗೆ ನನ್ನೊಳಗಿನ ಭಾವ ಹೌದೆಂದು ಉಸುರುತಿತ್ತು. ತಪ್ಪೊ ಸರಿಯೊ ತಿಳಿಯದಾದ ವಯಸ್ಸಲ್ಲಿ ನಾ ತೇಲುತಿದ್ದೆ ನವಿರು ಭಾವನೆಗಳ ಹಂದರದ ಆಗಸದಲ್ಲಿ.ಇದ್ಯಾಕೆ ಹೀಗೆ? ಯಾವನಿಗೊತ್ತು. ಉಹೂಂ ಯಾವುದಕ್ಕು ಉತ್ತರವಿಲ್ಲ.ಮಾತುಗಳೆ ಬೇಕಾಗಿರಲ್ಲಿ ಭಾವನೆಗಳ ಉಡಿತುಂಬಲು, ಅವಶ್ಯಕತೆಗೆ ಅನುಗುಣವಾಗಿ ಕ್ಲಾಸ್ ರೂಮ್ ಬಿಟ್ಟರೆ ಬೇರೆಲ್ಲು ಅಷ್ಟಾಗಿ ಇಲ್ಲದ ಮಾತುಕತೆ ಮೌನದೊಂದಿಗೆ ಭಾವನೆಗಳ ಜೊತೆ ಮಾತಿಗೆ ಬಿದ್ದಿತ್ತು. ಇದೊಂದು ಕ್ರಶ್ ಆಗಿತ್ತೆ? ಹೌದೆಂದು ತಿಳಿದಿದ್ದು ಬಹಳ ವರುಷಗಳ ನಂತರ.ಪ್ರೈಮರಿ ಮುಗಿಯುವವರೆಗು ಹೊಸ ಅನುಭವದ ಈ ಭಾವನೆಯೋಟ ಹೀಗೆ ಸಾಗಿತ್ತು,ಅದೊಂದು ಬೀಳ್ಕೊಡುಗೆಯ ದಿನ ಕಣ್ಣಲ್ಲಿ ನೀರೆ ನೀರು, ಸ್ಕೂಲ್ ಬಿಡುತ್ತೇನೆ ಅಂತಲ್ಲ, ನನ್ನ ಮುದಗೊಳಿಸುತಿದ್ದ ಆ ಲಾಸ್ಯ ನನ್ನಿಂದ ದೂರವಾಗುತ್ತಿದೆಯಲ್ಲ ಎಂದು, ಆಕೆ ಚಿಕ್ಕಮಂಗಳೂರಿನಲ್ಲಿ ತನ್ನ ಅಜ್ಜಿ ತಾತನ ಜೊತೆ ಇದ್ದು ಫ್ರೌಢ ಶಿಕ್ಷಣ ಪಡೆಯಲು ಹೋಗುತಿದ್ದಾಳೆಂದು,ಅವಳರುಹಿದ ಈ ಸುದ್ದಿ ನನ್ ಹೈಸ್ಕೂಲಿಗೆ ಬಂದು ಸೇರುತ್ತಾಳೆ ಎಂಬ ನನ್ನಾಸೆಗೆ ಕೊಡಗಟ್ಟಲೆ ನೀರು ಸುರಿದಿತ್ತು,ಆ ನೋವ ಕಳೆಯಲೆಂದು ಎಲ್ಲರಿಗಿಂತಲು ಜಾಸ್ತಿ ನಾನ್ ಅತ್ತಿದ್ದೆ ಆ ದಿನ,ನನ್ ಅಳು ಕಂಡು ಮೇಷ್ಟ್ರು, ಟೀಚರುಗಳ ಎಲ್ಲರ ಕಣ್ಣು ನವೆಯಾಗಿದ್ದರು ಕೂಡ ನಾ ನೋಡಿದ್ದು ಆಕೆಯೆಡೆಗೆ, ಆಕೆಯು ತಣ್ಣಗೆ ಅಳುತಿದ್ದಳು, ಇದೇನಪ್ಪ ಇವಳು ಅಳ್ಬೇಕಾದ್ರು ನಕ್ಕೊಂತಿರ್ತಾಳೆ ಅಂತ ಅಂದುಕೊಂಡಿದ್ದು ಹೌದು,ಅವಳು ನಗುತಿದ್ದಳಾ? ಅಥವಾ ನಗು ಮೋರೆ ನೋಡಲೆ ಬಯಸಿದ ನಾನು ಹಂಗೆ ಭ್ರಮಿಸಿಕೊಂಡೆನೊ? ಗೊತ್ತಿಲ್ಲ. ಹೈಸ್ಕೂಲ್ ಸೇರಿದ ಮೊದಲೆರಡು ತಿಂಗಳು ಇದೆ ನೆನಪು ಕಾಡಿತ್ತು,ಕ್ರಮೇಣ ಹೊಸ ಪರಿಸರಕ್ಕೆ ಹೊಂದಿಕೊಂಡಾಗ,ಹೊಸ ಗೆಳೆಯ ಗೆಳತಿಯರು ದೊರೆತಾಗ ಮನ ತಂಪಾಗಿ ಈ ಕಾಡುವಿಕೆ ಮರೆಯಾಗಿ ನನ್ನ ಮೊದಲ ಕ್ರಶ್ ಕೂಡ ದಿ ಎಂಡ್ ಪಡೆದಿತ್ತು.

ಹರೆಯ-ವೈಯಾರದ ಮನಕೆ ಲಂಗು ಲಗಾಮು ತೊಡಿಸಲಾಗದ ವಯಸು,ಫಲವಾಗಿ ಕ್ರಶ್ ಅನ್ನುವ ಭಾವನೆಯ ಹೊಸ ಅನುಭೂತಿಯ ಪುಟಿತ. ಈ ಹರೆಯದ ಕ್ರಶ್ ಅನ್ನೋದು ಸಹಪಾಠಿ ಮೇಲೆನೆ ಆಗ್ಬೇಕೂಂತ ಏನ್ ಕಾನೂನು ಇಲ್ಲ. ಕ್ಲಾಸ್ ಟೀಚರ್ ಮೇಲೆನೆ ಕ್ರಶ್ ಆಗ್ಬಹುದು, ಪಕ್ಕದ ಮನೆ ಆಂಟಿ ಮೇಲೆನೆ ಕ್ರಶ್ ಆಗ್ಬಹುದು,ದಾರಿಯಲ್ಲಿ ನಡೆದು ಹೋಗೊ ಹುಡುಗಿ ಮೇಲೆನೆ ಆಗಿರ್ಬಹುದು,ಬಸ್ಸಲ್ಲಿ ದಿನವು ಕಂಡು ಬರುವ ಅದೊಂದು ಹುಡುಗಿ ಮೇಲೆನೆ ಆಗಿರ್ಬಹುದು ಹೀಗೆ ಯಾರ್ ಮೇಲೆನೂ ಆಗ್ಬಹುದು, ಇಷ್ಟದಲ್ಲಿ ಅತಿ ಇಷ್ಟ ಅನ್ನೊ ನಮ್ಮೊಳಗಿನ ಭಾವನೆಗಳ ಭೋರ್ಗರೆತವಿದು. ಹುಡುಗಿರು ಇದಕ್ಕೆ ಹೊರತಾಗಿಲ್ಲ, ಅದಕ್ಕೆ ಇರ್ಬೇಕು ಕವಿ ಹೆಚ್.ಎಸ್.ವೆಂಕಟೇಶ ಮೂರ್ತಿ ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು ಎಂಭ ಸಾಲುಗಳನ್ನ ಬರಕೊಂಡಿದ್ದು.ಹಂಗೆ ನೋಡಿದ್ರೆ ಕ್ರಶ್ ಅನ್ನೋದು ಪಕ್ವತೆ ಪಡೆದು ತಿಳುವಳಿಕೆ ಒಡ ಮೂಡಿಸಿಕೊಂಡಾಗ ಪ್ರೀತಿಯಾಗಿ ಮಾರ್ಪಾಡಾಗಬಹುದು,ಕ್ರಶ್ ಹೆಚ್ಚಾಗಿ ಕ್ರಶ್ ಆಗೆ ಉಳಿಯೊದು, ಹಾಗಿದ್ದಾವಾಗ ಮಾತ್ರ ಆ ನೆನಪುಗಳು ಮಧುರ.ತುದಿ ಮೊದಲ್ಲಿದ ಕ್ರಶ್ ಗಳಿಗೆ ಹರೆಯದ ವಯಸ್ಸಲ್ಲಿ ಅಂತ್ಯವಿಲ್ಲವೇನೊ?ಉದಾಹರಣೆಗೆ ನನ್ನೆ ತೆಗೊಳ್ಳಿ 7 ನೆ ಕ್ಲಾಸ್ ನಲ್ಲಿ ಅಂತ್ಯಕಂಡ ನನ್ನ ಮೊದಲ ಕ್ರಶ್ ಮತ್ತೆ ಜೀವತೆಳೆದಿದ್ದು 9 ನೆ ಕ್ಲಾಸಲ್ಲಿ, ಬಹುಶಃ ನನಗೆ ಸೀಮಿತವಾಗಿ ಹೇಳೊದಾದರೆ 2 ನೆ ಯ ಹಾಗು ನನ್ನ ಕೊನೆಯ ಕ್ರಶ್ ಇದು ಹರೆಯದಲ್ಲಿ ಅಂದುಕೊಳ್ಳುತ್ತೇನೆ.ಉಳಿದಿದ್ದು ಹಾಗಾಗೆ ಬಂದು ಹೋದ ಕೆಲವು ಈ ಪರಿಯ ಭಾವಗಳಿದ್ದರು ಮೊದ ಮೊದಲ ಈಗಾಗಲೆ ಹೇಳಿದ ಮತ್ತು ಈಗ ಹೇಳುತ್ತಿರುವ ಈ ಕ್ರಶ್ ಗಳಿಗೆ ಅದು ಸಮನಾಗಿ ನಿಲ್ಲುವಂತದ್ದಲ್ಲ.

ನಂಗೆ ಹೈಸ್ಕೂಲ್ ಬುತ್ತಿಯೂಟದ ಪರಿಚಯ ಮಾಡಿಸಿತ್ತು.ನಡೆದು ಬರುತಿದ್ದ ದಾರಿಯಲ್ಲಿ ಅದೊಂದು ದಿನ ಬ್ಯಾಗ್ ಹರಿದು ಬುತ್ತಿ ಮಣ್ಣು ಸೇರಿದ್ದ ದಿನ ಪಕ್ಕದ ತೊರೆಯಲಿ ಅದ ತೊಳೆದು ಖಾಲಿ ಡಬ್ಬದೊಂದಿಗೆ ಶಾಲೆ ತಲುಪಿದ್ದೆ. ಊಟದ ಹೊತ್ತಲ್ಲಿ ಕ್ಲಾಸ್ ರೂಂ ತೊರೆದಾಗ ಗೆಳೆಯ ಊಟ ಯಾಕೆ ಮಾಡೋದಿಲ್ಲ ಎಂದು ಕೇಳಿದ ಪ್ರಶ್ನೆಗೆ ಹಸಿವಿಲ್ಲ ಎಂಭ ಉತ್ತರದೊಡನೆ ವಿರಾಮದ ತಾಣವಾಗಿ ಮಾರ್ಪಾಡಾಗಿದ್ದ ಶಾಲಾ ಹಿಂದಿನ ಮರದ ನೆರಳಿಗೆ ಬಂದೆ. ಹಸಿವಿಲ್ಲ ಎಂಭ ಶಬ್ದ ಆಕೆಗದು ಕೇಳಿಸಿತ್ತು ಹಾಗು ಗ್ರಹಿಕೆಗು ಬಂದಿತ್ತು, ಅವಳೂ ಬಂದಿದ್ದಳು ನನ್ನ ಆಶ್ರಯಿಸಿದ ನೆರಳ ಕೆಳಗೆ, ಬುತ್ತಿಯ ಮುಚ್ಚಳವೆ ಬಟ್ಟಲಾಗಿತ್ತು, ಜೊತೆಗೆ ಅವಳು ಕೊಟ್ಟ ಅವಳ ಪಾಲಿನ ಹಿಟ್ಟು ನನ್ನ ಹೊಟ್ಟೆ ತಂಪಾಗಿಸಿತ್ತು.ಅವಳ ಆ ಕ್ರಿಯೆಯಲ್ಲಿದ್ದುದು ಮಮತೆನ? ಪ್ರೀತಿನಾ? ಅನುಕಂಪನ?ಗೊತ್ತಿಲ್ಲ, ನನ್ನಲ್ಲಂತೂ ಭಾವನೆಗಳ ಭೋರ್ಗರೆತ ಕಡಲಾಗಿ ಹರಿದಿತ್ತು.ದೂರದ ಬೋರ್ ವೆಲ್ ಕಡೆಗೆ ನನ್ನೆಂಜಲು ತಟ್ಟೆಯ ಹಿಡಿದು ಅವಳೆ ನಡೆದಿದ್ದಳು ನಾ ಅವಳ ಹಿಂಬಾಲಕ.ಬೋರ್ ಹ್ಯಾಂಡಲ್ ಜಗ್ಗೊ ನನ್ನ ನೋಟ ತಟ್ಟೆ ತೊಳಿತಿದ್ದ ಆಕೆಯೆಡೆಗೆನೆ ದೃಷ್ಟಿ ಬೀರಿತ್ತು, ನನ್ನ ಸುತ್ತ ಎಲ್ಲವು ಮರೆತ ಅನುಭವ.ಆಕೆ ಹ್ಯಾಂಡಲ್ ಜಗ್ಗಿ ನಾನ್ ಕೈ ತೊಳಿಯುತ್ತಿರಬೇಕಾದರೆ ಯಾಕೊ ಭಾವನೆಗಳ ಹೊಳೆಯನ್ನೆ ನನ್ನೊಳು ಹರಿಸಿದ ಅನುಭೂತಿ.ಕ್ಲಾಸ್ ರೂಂ ಪ್ರವೇಶವಾದೊಡೆ ಸಹಪಾಠಿಗಳ ನೇರ ದೃಷ್ಟಿಯೊಡನೆ ಬರಿದೆ ಬಂದೊದಗಿದ ಮುಜುಗರ, ಬೆಂಚ್ ಮೇಟ್ ನ ಪಕ್ಕೆಯ ತಿವಿತ ಜೊತೆಗೊಂದಿಷ್ಟು ಮುಸು ಮುಸು ನಗು, ಪಿಸ ಪಿಸ ಸದ್ದುಗಳು ನನ್ನೊಳಗೆ ಚೇತರಿಕೆಯ ತಂದಿತ್ತು, ಅದಾಗೆ ಒತ್ತರಿಸಿ ಬಂದ ಖುಷಿಯ ಹಿಡಿ ನಗುವಿನೊಂದಿಗೆ ಆಕೆಯೆಡೆ ನೊಡಿದ್ದೆ.ಹುಡುಗಿ ಮುಖವೆಲ್ಲ ಕೆಂಪು ಮಾಡ್ಕೊಂಡು ಕೂತಿತ್ತು,ಯಾಕೊ ತಲೆ ಎತ್ತಿ ನೋಡ್ತಾನೆ ಇರಲಿಲ್ಲ, ನನಗಿನ್ನಷ್ಟು ನಗು, ನಗು ಕೇಳಿಸಿತೊ ಎಂಬಂತೆ ಹಿಂತಿರುಗಿ ನೋಡಿದ್ದಳು, ಮುಖ ಇನ್ನಷ್ಟು ಕೆಂಪೇರಿತ್ತು.ಒಂದು ಸೆಕೆಂಡ್ ಅಷ್ಟೆ ಅವಳ ಮುಖದಲ್ಲು ಸಣ್ಣನೆಯ ತಿಳಿ ನಗು ಮಿಂಚಿ ಮಾಯವಾಗಿದ್ದು ನನ್ನ ಅರಿವಿಗೆ ಮಾತ್ರ ಬಂದಿತ್ತು.ನವಿರಾದ ಮುದ ಕ್ಷಣಗಳು.ಇಂತಿಪ್ಪ ಕ್ರಶ್ ಕೂಡ SSLC ಮುಗಿಸುವವರೆಗೆ ಮಾತ್ರ ಸೀಮಿತ, ಮತ್ತದೆ ಬೀಳ್ಕೊಡುಗೆ ಅತ್ತು ಕರೆಯುವ ರಂಪಾಟಗಳು ನಡೆದೆ ಇತ್ತು ಈ ಮದ್ಯೆ ಆಟೋಗ್ರಾಫ್ ಹಂಚಿಕೆಗಳು ನಡೆದಿತ್ತು 2 ಕಡೆಯಿಂದ ಅದಕ್ಕೊಂದಿಷ್ಟು ಅಸ್ಥೆಯಿಂದ ರಂಗು ತುಂಬಿ ನಾಕು ಅಕ್ಷರಗಳನ್ನು ಬರೆಯಲಾಗಿ ವಿನಿಮಯಿಸಿಕೊಳ್ಳಲಾಗಿತ್ತು.ಇತ್ತೀಚೆಗೆ ಊರಿಗೆ ಹೋದಾವಾಗ ಸಿಕ್ಕಳು, ಕೈ ಹಿಡಿದು ಕೊಂಡು ಒಂದು ಮಗು ಹೆಜ್ಜೆ ಹಾಕಿದರೆ ಆಕೆಯ ಕಂಕುಳಲ್ಲಿದ್ದ ಮತ್ತೊಂದು ಮಗು ಆಕೆಯ ಮುಖ ಪರಚುತಿತ್ತು, ಯಾಕೊ ಜೋರಾಗಿ ನಗು ಬಂತು ನಕ್ಕೆ ಆಕೆಯು ನಕ್ಕಳು ನಗು ವಿನಿಮಯದೊಂದಿಗೆ ಮಾತು ಶುರುವಾಗಿದ್ದು ಕುಶಲೋಪರಿಯೊಂದಿಗೆ ಸಾಗಿ ಮುಗಿದಿತ್ತು. ಈಗಲು ಖುಷಿಯನ್ನು ಒಡಲು ತುಂಬಿಸಿನೆ ಮನೆ ಕಡೆ ಹೆಜ್ಜೆ ಹಾಕಿದ್ದೆ.

ಹಾಗೆ ನೋಡಿದಲ್ಲಿ ಈ ಕ್ರಶ್ ಗೆ ಆದಿ ಆಂತ್ಯಗಳು ಇರೋದನ್ನ ನಾ ಕಾಣೆ. ಚಿತ್ರ ನಟರ ಮೇಲೆ ಚಿತ್ರ ನಟಿಯರ ಮೇಲೆ, ಬಾಸ್ ಮೇಲೆ, ಮೇಡಂ ಮೇಲೆ ಹೀಗೆ ನಾನ ಪರಿಯಲ್ಲಿ ಕ್ರಶ್ ಹುಟ್ಟುತ್ತಲೆ ಇರುತ್ತದೆ.ಆದರೆ ಈ ಎಲ್ಲ ಕ್ರಶ್ ಗಳ ಹಿಂದೆ ಮೊದ ಮೊದಲು ಹುಟ್ಟಿದ ಕ್ರಶ್ ನಲ್ಲಿರುವ ಮುಗ್ಧತೆ ಇರಲು ಸಾಧ್ಯವಿಲ್ಲ, ಅವುಗಳು ಆಗಷ್ಟೆ ಫ್ರೆಶ್ ಆಗಿ ನಮೊಗೊದಗಿದ ಇಷ್ಟದ ಭಾವನೆಗಳು, ಅವುಗಳ ನೆನಪುಗಳು ಕೂಡ ಮಧುರ.ಆ ನೆನಪುಗಳು ಮಾಗಿರೋದಿಲ್ಲ,ಮನದ ಅಂಚಲ್ಲಿ ಅವಿತಿರುವ ಆ ನೆನಪುಗಳನ್ನು ಹೊರಗೆಳೆದು ಮೆಲುಕು ಹಾಕಿದಾಗ ಒಂದಷ್ಟು ಖುಷಿ ಸಿಗೊದಂತು ಸತ್ಯ.ಒಟ್ಟಿನಲ್ಲಿ ಬಾಲ್ಯ ಮತ್ತು ಯೌವನ ಈ ನಡುವಿನ ಅಂತರವಿದೆಯಲ್ಲ ಇದು ಭಾವನೆಗಳ ಮಿಂಚು ಹರಿಸೊ ಕಾಲ,ಹೊಸತೆರನಾದ ಭಾವನೆಗಳು ಹುಟ್ಟುವ ವಯಸ್ಸದು,ಆ ಹೊಸ ತೆರನಾದ ಭಾವನೆಗಳು ಅಂದರೆ ಮತ್ತೇನಲ್ಲ ಮೇಲೆ ಹೇಳಿದ ಭಾವನೆಗಳಂತೆ ಅದು ಗಂಡು ಹೆಣ್ಣಿನ ನಡುವೆ ಹುಟ್ಟೊ ಆಕರ್ಷಣೆ ಅಥವಾ ಕ್ರಶ್.ತಾಯಿ ಪ್ರೀತಿ ನೋಡಿ ಬಾಲ್ಯ ಕಳೆದ ನಂತರ ಬೇರೆಯೆ ತೆರದಲ್ಲಿ ಗಂಡು ಹೆಣ್ಣಿನತ್ತ, ಹೆಣ್ಣು ಗಂಡಿನತ್ತ ಆಕರ್ಷಿತರಾಗುವದು ಪ್ರಕೃತಿ ನಿಯಮ. ಜೊತೆಗೆ ಇದ್ದರು ಒಡನಾಟವಿದ್ದರು ಈ ಕ್ರಶ್ ಹುಟ್ಟಲು ಅದರದೆ ಆದ ಕಾಲವನ್ನು ಬಯಸುತ್ತದೆ, ಆದ್ಯಾಕೆ ಆವಾಗಲೆ ಅದು ಹುಟ್ಟಿತು ಅನ್ನುವದಕ್ಕೆ ಉತ್ತರ ದೊರಕಲಾರದು ಹಾಗೆಯೆ ಅದು ಕೊನೆಯಾಗಲು ಕೂಡ,ಪ್ರೀತಿಯು ಅಲ್ಲದ ಅತ್ತ ಕಾಮವೆಂದರೆ ಏನೆಂದೂ ತಿಳಿಯದ ಗಂಡು ಹೆಣ್ಣಿನ ಹರೆಯದ ಸಹಜ ಆಕರ್ಷಣೆಯಾದ ಕ್ರಶ್ ಬಗ್ಗೆ ಹೇಳಿದ್ದೇನೆ,ಮೂಗೆಳೆಯಬೇಡಿ, ನಮಗೆ ಈ ಪರಿಯ ಅನುಭೂತಿ ಆಗಿಲ್ಲವೆ ಇಲ್ಲ ಅಂಥಲೂ ಹೇಳಬೇಡಿ, ಒಂದಲ್ಲ ಒಂದು ಹರೆಯದ ವಯಸ್ಸಲ್ಲಿ ಈ ಅನುಭವವನ್ನು ದಾಟಿನೆ ಯೌವನಕ್ಕೆ ಕಾಲಿಟ್ಟಿದ್ದೇವೆ ಅನ್ನೊದನ್ನ ಆತ್ಮವಂಚನೆಯಿಲ್ಲದೆ ನಾವು ಒಪ್ಪಿಕೊಳ್ಳಬೇಕಾದ ಸತ್ಯ.

Friday, March 23, 2012

ನಾನು ಮತ್ತು ಬೆಂಗಳೂರು

ಬೆರಗು ಬೆಂಗಳೂರು:-
ಮೊದಲು ಸ್ವತಂತ್ರವಾಗಿ ಪಟ್ಟಣಕ್ಕೆ ಬಂದಿದ್ದು ನನ್ನ 5 ನೆ ಕ್ಲಾಸಿನಲ್ಲಿರಬಹುದು.ಅದೂ ಯಾವ ಪಟ್ಟಣ ಕೇಳ್ತೀರ? ಬೆಂಗಳೂರು, ಮಂಗಳೂರಿನಲ್ಲಿ ಹುಟ್ಟಿ ಬೆಳೆದ ನಗರವಾಸಿಗಳಿಗೆ ಪಟ್ಟಣವೆ ಆಗಿರದ ಉಪ್ಪಿನಂಗಡಿಗೆ, ಬಹುಶಃ ಕಳಿಸಬೇಕೊ ಬೇಡವೊ ಎಂಭ ದ್ವಂದ್ವದಲ್ಲೆ ಅವತ್ತು ಪೇಟೆಗೆ ಹೋಗಿ ಬಾ ಅಂತ ಅಪ್ಪ ಕಳಿಸಿರಬೇಕು, ನಮ್ಮ ಹಳ್ಳಿಯಲ್ಲಿದ್ದ ಸಾರಿಗೆ ಸಂಪರ್ಕದ ಕೊರತೆ, ನಮ್ಮ ಹಳ್ಳಿಯಲ್ಲಿ ವಾಹನಗಳನ್ನು ಎದುರಿಸಿ ಗೊತ್ತಿಲ್ಲದ ನನಿಗೆ ಹೆಂಗಪ್ಪಾ ಇವನನ್ನು ಒಬ್ಬಂಟಿಯಾಗಿ ಕಳಿಸೋದು,ರಸ್ತೆ ದಾಟಲು ಗೊತ್ತಾಗುತ್ತೊ ಇಲ್ವೊ? ಊರಿಗೆ ಇರೊ ಸಾರಿಗೆ ಅಂದರೆ ಜೀಪುಗಳು ಅದು ಬೆರಳೆಣಿಕೆ ಅದು ತಪ್ಪಿದರೆ ಬೇರೆ ದಾರಿಯಿಲ್ಲ ಕಾಲ್ನಡಿಗೆಯೊಂದನ್ನು ಬಿಟ್ಟು ಅದು ಬರೋಬ್ಬರಿ 10 ಕಿ ಮಿ, ಈ ಎಲ್ಲ ತರಲೆ ತಾಪತ್ರಯವು ಇರೋದರಿಂದ ಮೊದಲ ಭಾರಿಗೆ ಪೇಟೆಗೆ ಕಳಿಸಬೇಕಾದಾವಾಗ ಅಪ್ಪ ಯೋಚಿಸಿರಬಹುದು.ಸ್ವತಂತ್ರವಾಗಿ ಓಡಾಡಿದ ಮೊದಲ ದಿನ ನೆನಪಿಗೆ ಬಂದು ಹೇಳಿದೆನಷ್ಟೆ, ಹೀಗೆ ಒಂದು ಮೂರು ನಾಲ್ಕು ಭಾರಿ ಒಡಾಡಿದ ನಂತರವಷ್ಟೆ ಮನೆಯವರಿಗೆ ಇವ ಓಡಾಡಬಲ್ಲ ಅನ್ನೊ ಖಾತರಿ ಬೆಳೆದಿದ್ದು ಅಂತ ಅಂದುಕೊಳ್ಳುತ್ತೇನೆ.ನಂತರ ಮಂಗಳೂರಂತ ಪಟ್ಟಣ ಪ್ರವೇಶ ಮುಂತಾದವು ಸಾಂಗವಾಗಿ ನಡೆದವು, ಹಲವು ಪಟ್ಟಣಗಳನ್ನು ಸುತ್ತಿಯಾಯಿತು,ಆದರೆ ಅದು ಕರಾವಳಿಯ ಪಟ್ಟಣಗಳಿಗಷ್ಟೆ ಸೀಮಿತ. ಹೀಗಿರಬೇಕಾದರೆನೆ ಕೆಲಸದ ನಿಮಿತ್ತ ಬೆಂಗಳೂರನ್ನ ಪ್ರವೇಶ ಮಾಡಿದ್ದು.ಹಾಗಂತ ಬೆಂಗಳೂರಿಗೆ ಬರೋದು ಮೊದಲೇನಲ್ಲ ಬಹಳ ಸಲ ಬಂದಾಗಿತ್ತು ಬೆರಗು ಕಣ್ಣಿನಿಂದ ನೋಡಾಗಿತ್ತು ಆಗೆಲ್ಲ ಕೈಹಿಡಿದುಕೊಂಡು ಜೊತೆಗೊಬ್ಬರು ಇರುತಿದ್ದರು, ಆದರೆ ನಿಜ ಬೆಂಗಳೂರ ಅನುಭವ ನಾನೊಬ್ಬನೆ ಸ್ವತಂತ್ರವಾಗಿ ಬಂದಾವಾಗ ಆಗಿತ್ತು.ಬೆಂಗಳೂರಂತ ಹಲವು ಮಹಾನಗರವನ್ನು ಇವತ್ತು ನಾ ನೋಡಿರಬಹುದು ಅಷ್ಟಾಗಿ ಎಲ್ಲಿಯೂ ಏನೊಂದು ಕಷ್ಟ ಪಡದೆ ನನ್ನ ಕೆಲಸ ಮುಗಿಸಿಕೊಂಡು ನಾನಿವತ್ತು ಮರಳಬಹುದು ಅದೆಲ್ಲಾ ಬೆಂಗಳೂರಿನ ಅನುಭವಗಳು ಕಲಿಸಿ ಕೊಟ್ಟಿದ್ದು ಅಂದರೆ ತಪ್ಪಾಗಲಾರದು.ಈ ಪ್ರಯಾಣಗಳ ಮೊದಲ್ವಿಕೆ ಶುರುಗೊಂಡಿದ್ದೆ ಬೆಂಗಳೂರಿನಿಂದ ಅನ್ನಬಹುದು ಅದಕ್ಕಾಗೆ ಇಂಥ ಅನುಭವಗಳನ್ನು ಹಂಚಿಕೊಳ್ಳೋಣವೆಂದೆ ಈ ಬರಹಕ್ಕೆ ಅಡಿಯಿಟ್ಟೆ.

ಮಂಗಳೂರಿನಿಂದ ಬಸ್ ಹತ್ತಿ ಬೆಳಿಗ್ಗೆ ಬೆಂಗಳೂರು ಇಳಿದಾವಾಗ ಸರಿ ಸುಮಾರು ಮುಂಜಾವಿನ 5.30 ರ ಸಮಯ.ಅಂದಂಗೆ ಬೆಂಗಳೂರಿಗೆ ಜಾಬ್ ಮೇಲೆ ಟ್ರಾನ್ಸ್ಪರ್ ಆಗಿ ಮಂಗಳೂರಿನಲ್ಲಿ 7-8 ತಿಂಗಳು ಸೇವೆ ಸಲ್ಲಿಸಿ ಬಂದವ ನಾನು, ಬೆಂಗಳೂರಿನ ಪರಿಜ್ಞಾನದ ಲವಲೇಷವು ಇರಲಿಲ್ಲ.ಬಸ್ಸಿಳಿದು ನಿಂತ ನಂಗೆ ಆ ಮುಂಜಾವು ಆ ಪರಿ ಜನ ಆ ಪರಿಯ ಬಸ್ಸುಗಳು ಬಂದು ನಿಲ್ಲುವದ ನೋಡಿ ಸೋಜಿಗವೆನಿಸಿತ್ತು.ಬಸ್ ಸ್ಟಾಂಡ್ ಬಿಟ್ಟು ಹೊರಬರುವದೆಂತು ತಿಳಿಯದಾಗಿದ್ದು ನಿಜನೆ, ಹೊರ ಬಂದು ಎಲ್ಲಿಗೆ ಹೋಗ್ಬೇಕು ಅನ್ನುವದು ಗೊತ್ತಿಲ್ಲ, ನಮ್ ಮ್ಯಾನೇಜರ್ ಬೆಳಿಗ್ಗೆ 8 ಘಂಟೆಗೆ ಪೋನ್ ಮಾಡಲು ತಿಳಿಸಿದ್ದರು, ಅವಾಗ ಈಗಿನಂತೆ ಮೊಬೈಲ್ ಸರ್ವೆ ಸಾಧಾರಣವಾಗಿ ಎಲ್ಲರ ಕೈ ಗೂ ಬಂದಿಲ್ಲದ ದಿನಗಳು,ಮೊಬೈಲ್ ಇದೆ ಅಂತಾದರೆ ಆತನನ್ನು ಜನಗಳು ನೋಡುವ ಅವರಿಗೆ ಕೊಡುವ ಸ್ಥಾನ ಮಾನನೆ ಬೇರೆ, ಹೀಗಿರಬೇಕಾದರೆ ಎತ್ತ ಹೋಗೋದು ತಿಳಿಯದೆ ವಸತಿ ಗೃಹದಲ್ಲಿ ಒಂದು ರೂಂ ಮಾಡಲು ಕೂಡ ಸಾಧ್ಯವಾಗದೆ ಸ್ಟಾಂಡಲ್ಲೆ ಕಾಲಹರಣ ಮಾಡುತ್ತಾ ಕೂತಿದ್ದೆ.ಜನಗಳ ದೌಡು,ಇಂಗ್ಲೀಷ್,ಕನ್ನಡ,ಹಿಂದಿ,ತಮಿಳು,ತೆಲುಗು ಇನ್ನಿತರ ಭಾಷೆ ಮಾತಾಡೊ ಮಂದಿ, ಅಲ್ಲಲ್ಲಿ ಬೆಳ್ಳಗೆ ಹೊಳೆಯೊ ಫಾರಿನರ್ಸ್, ಭಿಕ್ಷುಕರು,ಕಂಕುಳಲ್ಲಿ ಮಗುವನ್ನೆತ್ತಿ ಸಾಗುವ ಮಹಿಳೆಯರು, ದೊಡ್ಡ ದೊಡ್ಡ ಬ್ಯಾಗ್ 2 ಕೈಯಲ್ಲಿ ಒಂದೊಂದು, ಭುಜದಲ್ಲಿ ಇನ್ನೊಂದು ಇಟ್ಕೊಂಡು ಬಸ್ಸು ಹುಡುಕುವ ಅವರ ಗಂಡಂದಿರು, ಎಲ್ಲೆಲ್ಲೂ ಜೀನ್ಸ್ ಪ್ಯಾಂಟ್ ಧರಿಸಿಕೊಂಡ ಹುಡುಗೀರು,ಥಟ್ಟಣೆ ಇಣುಕಿದ ಮಿಡಿ ಧರಿಸಿದ ಹುಡುಗೀರು, ಕೂಲಿಯಾಳುಗಳು, ರಾತ್ರಿ ಪ್ರಯಾಣ ಮುಗಿಸಿ ಇಳಿಯೊ ಪ್ರಯಾಣಿಕರು, ಬಸ್ಸಿಳಿಯುತ್ತಲೆ ಎಲ್ಲಿಗೆ ಸಾರ್ ಅಟೋ ಬೇಕಾ ಅಂಥ ಕಿರಿ ಕಿರಿ ಮಾಡುವ ಅಟೋ ಚಾಲಕರು,ಕರ್ನಾಟಕದ ಎಲ್ಲಾ ಊರಿನ ಹೆಸರು ಕೂಗುತಿದ್ದ ಬಸ್ ನಿರ್ವಾಹಕರುಗಳು,ತೆಲುಗು, ತಮಿಳು ಹೆಸರನ್ನೊತ್ತ ಹೊರ ರಾಜ್ಯದ ಬಸ್ಸುಗಳು, ಬಸ್ ಸ್ಟಾಂಡ್ ಅಂಗಡಿಗಳಲ್ಲಿ ಕಿಕ್ಕಿರಿದು ನಡೆಯುತಿದ್ದ ವ್ಯಾಪಾರಗಳು, ಟೀ ಕಫ್ ಹೊತ್ತು ಅಲ್ಲೆ ನಿತ್ತು ಸೇವಿಸುತಿದ್ದ ಜನಗಳು, ಸ್ಥುರದ್ರೂಪಿ ಯುವಕರುಗಳು,ಇವೆನ್ನೆಲ್ಲ ನೋಡುತ್ತಾ ಪ್ರಪಂಚವೆ ನನ್ನೆದುರು ಬಂದಿದೆಯೊ ಎಂಭ ಭ್ರಮೆಯೊಂದಿಗೆ ಟೈಮ್ ಪಾಸ್ ಮಾಡುತಿದ್ದೆ, ಬಿಯಂಟಿಸಿ ಬಸ್ ಸ್ಟಾಂಡ್ ಇದೆಯೆಂದು ಗೊತ್ತು ಎಲ್ಲಿ ಅನ್ನೋದು ಗೊತ್ತಿಲ್ಲ ಯಾರತ್ರ ಆದ್ರು ಕೇಳೋಣವೆಂದರೆ ಈ ದೌಡಿನೊಂದಿಗೆ ಮೌನವಾಗಿ ಬೆರಗಾಗಿ ಮಾತೆ ಮರೆತ ಪರಿಸ್ಥಿತಿ ನನ್ನದು, ಊರಲ್ಲಾದರೆ ಬಸ್ ಸ್ಟಾಂಡಲ್ಲಿ ಈ ಪರಿ ಹ್ಯಾಫ್ ಮೋರೆ ಹಾಕೊಂಡಿದ್ದರೆ ಒಂದು ಹತ್ತು ಮಂದಿ ಎಲ್ಲಿಗೋಗ್ಬೇಕಪ್ಪ ಅಂತ ಕೇಳುತಿದ್ದರು ಬರೋಬ್ಬರಿ 2.30 ತಾಸಿನಲ್ಲಿ ಮಾತಾಡಿಸಿದವರು ವಿಚಾರಿಸಿದವರು ಒಬ್ಬರು ಇಲ್ಲ, ಕಣ್ಣೆದುರು ಎಲ್ಲಾ ಇದ್ದು ಜನರಾಶಿಯೆ ಇದ್ದರು ನಾನೊಬ್ಬನೆ ಪರಕೀಯ ಅನಿಸಿತ್ತು.ಹಾ ಇದು ಸೂಮಾರು 10 ವರುಷದ ಹಿಂದೆ ಬೆಂಗಳೂರಿಗೆ ಅಡಿಯಿಟ್ಟ ಒಂದು ಮುಂಜಾವಿನ ನೆನಪು.

ಹಂಗೆ ಬಸ್ಟಾಂಡ್ ಮೂಲೆಯಲ್ಲಿದ್ದ ಹೋಟೇಲಿನಲ್ಲಿ ಎನೋ ಒಂದಿಷ್ಟು ತಿಂದು 2 ಚಾ ಕುಡಿದು ಯಾಕೆಂದರೆ ಊರಿನ 1 ಚಾ ಕ್ಕೆ ಸಮಾನಾಗಬೇಕಲ್ಲ ಅಲ್ಲಿನ1 ಚಾ ಇಲ್ಲಿನ 3 ಚಾ ಕ್ಕೆ ಸಮ.ಎಂತೊ ಒಂದಷ್ಟರ ಮಟ್ಟಿಗೆ ಚಲನ ಶೀಲತೆಯ ಪಡೆದು ಗಂಟೆ 8 ಅನ್ನುತಿದ್ದಂತೆ ಜೀಬಿನಲ್ಲಿ 1 ರೂಪಾಯಿ ಕಾಯಿನ್ ಗೆ ತಡಕಾಡಿ ಕ್ರೆಡಲೆತ್ತಿ ಕಾಯಿನ್ ಹಾಕಿ ನನ್ ಮೆನೇಜರ್ ಗೆ ಡಯಲಿಸಿದ್ದೆ.ಅತ್ತಲಿಂದ ಕೋರಮಂಗಲ ಬಸ್ ಕಲ್ಯಾಣ ಮಂಟಪ ಸ್ಟಾಪ್ ಗೆ ಬಂದು ಬಿಡು ಅಲ್ಲಿಂದ ಕಾಲ್ ಮಾಡು ಬಸ್ ನಂಬರ್ 171,ಲಗೇಜ್ ರೂಮಲ್ಲಿ ಲಗೇಜ್ ಇರಿಸಿ ಬಾ ಅನ್ನಲು ಕಾಲ್ ಕಟ್ ಆಗುವದೆ,ಜೇಬಲ್ಲಿ ಕಾಯಿನ್ ಗೆ ತಡಕಾಡಿದೆ ಇಲ್ಲ, ಸರಿ ಆಗಿದ್ದು ಆಗಲಿ ಅಂತ ಲಗೇಜ್ ರೂಮಲ್ಲಿ ಲಗೇಜ್ ಇರಿಸಿ ಸಂಜೆ ಬರುತ್ತೇನೆಂದು ಹೇಳಿ, ರಿಸೀವ್ ಮಾಡ್ಕೊಳ್ಳಕ್ಕೆ ಯಾರಾದರೊಬ್ಬರು ಬರಬಾರದೆ ಅಂತ ಮನದಲ್ಲೆ ಹಿಡಿ ಶಾಪ ಹಾಕುತ್ತಾ ಬಿಯಂಟಿಸಿ ಬಸ್ ಸ್ಟಾಂಡ್ ಗೆ ಹೊಗೋದೆಲ್ಲಿ ಅಂತ ಒಬ್ಬರಲ್ಲಿ ದಾರಿ ಕೇಳಿದೆ, ಪ್ಲೈ ಓವರ್ ಹತ್ತು ಹಂಗೆ ಹೋಗು ಅಂತಂದರು,ಭಾಷೆ ಕೇಳಿ ಮಂಗಳೂರ ಅಂತ ಕೇಳಿನೂ ಆಗಿತ್ತು. ಹೆಂಗೆ ಗೊತ್ತಾಗುತ್ತಪ್ಪ ಈ ಜನಗಳಿಗೆ ಅಂತಂದುಕೊಂಡು ಪ್ಲೈ ಓವರ್ ಹತ್ತಿದ್ದೆ. ಬಸ್ ಹಿಡಿಯೋ ಬದಲು ಪ್ಲೈ ಓವರ್ ಮೇಲಿನ ವ್ಯಾಪಾರಿಗಳನ್ನು ನೋಡಿ ಜಾತ್ರೆಯ ಸಂತೆ ನೋಡಿದಂಗೆ ಆಗಿತ್ತು.ಹಂಗೆ ಅವರನ್ನೆ ನೋಡುತ್ತಾ ಬಸ್ ಸ್ಟಾಂಡ್ ತಲುಪುವ ಬದಲು ಇನ್ನೊದಂಚಿನ ರಸ್ತೆ ತಿಲುಪಿದ್ದೆ, ಥಥ್ತೇರಿಕೆ ಅದೆಲ್ಲಿ ಇಳಿಯೋದು ಗೊತ್ತೆ ಆಗಲಿಲ್ವೆ ಅನ್ನುತ್ತಾ ಕೋರಮಂಗಲ ಕಲ್ಯಾಣ ಮಂಟಪ ಸ್ಟಾಪ್ ಹೋಗ್ಬೇಕು ಅನ್ನುತ್ತ ಅಟೋ ಏರಿದ್ದೆ, ಅದು ಮೂರು ಅಟೋಗಳು ಬರಲ್ಲ ಅಂದ ನಂತರದ ನಾಲ್ಕನೆ ಅಟೋ. ಈ ಪ್ರಸಂಗ ಈಗಲೂ ನೆನಪಾಗಿ ನನ್ನ ಪೆಕರುತನ ನೆನಪಿಸಿಕೊಂಡು ನಗೋದುಂಟು.ಅಟೋದವನಿಗೆ ನಾನೊಳ್ಳೆ ಕುರಿಮರಿಯ ಕಂಡ ಹಂಗೆ ಆಗಿರಬೇಕು,ಊರೂರು ಸುತ್ತಿಸಿ ಕೋರಮಂಗಲ ತಲುಪಿದ್ದ ಮೀಟರ್ ನೋಡ್ತೀನಿ 380ರೂಪಾಯಿ ಆ ಕಾಲದಲ್ಲಿ. ಯಪ್ಪಾ ಶಿವ ಇರಬಹುದು ತಾಸಿಗೂ ಮೇಲು ಹಿಡಿದಿತ್ತಲ್ಲ ಅಂದು ಕೊಂಡು ಮರು ಮಾತಿಲ್ಲದೆ ಕೊಟ್ಟೆ. ಕೊಲೀಗ್ ಒಬ್ಬ ಬರೀಯ 40 ರುಪಾಯಿ ಆಗೋದಷ್ಟೆ ಅಂದಾಗ ತಲೆಗೆ ಮರ ಬಿದ್ದಂತಾಗಿತ್ತು. ಹೀಗೆ ಮೊದಲ ದಿನ ವರ್ಕ್ ಪ್ಲೇಸ್ ತಲುಪಿದ್ದೆ.ಆಗಲೂ ತಲೆಯಲ್ಲಿ ಒಂದೆ ಚಿಂತೆ ಸಂಜೆ ಎಲ್ಲಿಗೆ ಹೋಗೋದು? ರೂಮ್ ವ್ಯವಸ್ಥೆಯ ಬಗ್ಗೆ ಏನೊಂದು ಖಾತರಿಯಾಗಿಲ್ಲವಿತ್ತು.ಸಂಜೆಯ ಸುಮಾರಿಗೆ ಕೇಳಿಯೆ ಬಿಟ್ಟೆ, ದಯಾ ಅಂತ ಒಬ್ಬರ ರೂಮಲ್ಲಿ ಶೇರ್ ಮಾಡ್ಕೊ ಮಾತಾಡಿದ್ದೇವೆ ಅಂತ ಮೆನೇಜರ್ ಅಂದಾಗಲೆ ಸಮಾಧಾನ.ಡ್ಯೂಟಿ ಮುಗಿದ ನಂತರ ಮತ್ತೆ ಮೆಜೆಸ್ಟಿಕ್ ಬಸ್ ಹಿಡಿದಿವಿ, ಆಗಲೂ ಸಣ್ಣದೊಂದು ಪ್ರಸಂಗ ನಡೆಯಿತು.ಜೊತೆಗೆ ರೂಮ್ ಶೇರ್ ಮಾಡ್ಕೊಬೇಕಾಗಿರುವ ದಯಾ ಕೂಡ ಇದ್ದರು, ಕೆಂಪೆಗೌಡ ಬಸ್ ನಿಲ್ಧಾಣ ಅಂದರೆ ಮೆಜೆಸ್ಟಿಕ್ ಅನ್ನುವ ಅರಿವಿಲ್ಲ, ನಾನು ಮೆಜೆಸ್ಟಿಕ್ ಅಂತ ಬರೆದಿಲ್ಲವೆಂದು ಬಸ್ ಏರಿನೆ ಇಲ್ಲಾ ಇತ್ತು. ಅವರು ಬಸ್ಸೇರಿ ನಾ ಕಾಣದಾಗಿ ಮತ್ತೆ ಬಂದು ವಿಷಯ ಅರುಹಿ ನನ್ನಂತ ಪೆಕರನನ್ನು ಕರೆದುಕೊಂಡು ಹೋಗಿದ್ದರು.ಮಂಗಳೂರು ಮಂಜುನಾಥ ಬೆಂಗಳೂರು ಬಂದ ಕಾಶೀನಾಥ್ ಡೈಲಾಗ್ ನೆನಪಾಗಿತ್ತು :) ಹೀಗೆ ಲಗೇಜ್ ಬಿಡಿಸಿಕೊಂಡು ರೂಂ ಸೇರೊತ್ತಿಗೆ ಬರೋಬ್ಬರಿ 9.30 ಘಂಟೆ. ನಂತರ ಅದೇನೊ ಮಾಡಿ ಹಾಕಿದ್ದನ್ನು ಹೊಟ್ಟೆ ತುಂಬಾ ತಿಂದು ಚಾಪೆ ಸೇರಿದ್ದೆ. ಹೀಗೆ ಮೊದಲ ಬೆಂಗಳೂರಿನ ನನ್ನ ಸ್ವತಂತ್ರ ಪಯಣ ಒಂದು ದಿನವ ಕಳೆದಿತ್ತು.
****************************************************************************
ಬೆಂಗಳೂರಿಗೆ ಒಗ್ಗಿಕೊಂಡಿದ್ದು ಹಾಗು ನೋಡಿದ್ದು:-

ಮೊದಲಿಗೆ ನಂದು ಫೀಲ್ಡ್ ವರ್ಕ್ ಅದು ಮೊಬೈಲ್ ಟವರ್ ಟವರ್ ಗೆ ಸುತ್ತಾಟ, ಹಿಂದೆ ಮುಂದೆ ಗೊತ್ತಿಲ್ಲದ ಊರಿನಲ್ಲಿ ಅಡ್ರೆಸ್ ಹಿಡಿದು ಊರು ಸುತ್ತುವ ಪರಿಪಾಟಲು ಏಂತಿದ್ದೀತು ಎಂಭ ಊಹನೆಗಳನ್ನ ನಿಮ್ಮ ನಿಲುಕಿಗೆ ಬಿಡುತ್ತೇನೆ.2-3 ತಿಂಗಳು ಕಷ್ಟನೊ ಸುಖನೊ ರಿಚ್ಮಂಡ್ ನಿಂದ ಹಿಡಿದು ಅತ್ತಿಬೆಲೆ,ಆನೇಕಲ್, ವೈಟ್ ಪೀಲ್ಡ್,ಕನಕಪುರ ರಸ್ತೆ ಹೀಗೆ ಎಲ್ಲೆಂದರಲ್ಲಿ ಬಿಡದ ಓಡಾಟ.ದಿನ ನಿತ್ಯ ಹಲವು ಬದುಕುಗಳು ಕಣ್ಣ ಮುಂದೆ.ರಿಚ್ಚೆಷ್ಟ್ ಬದುಕುಗಳು ಕಣ್ಣಿಗೆ ಕಂಡರೂ ನಿರ್ಲಿಪ್ತತತೆ,ಅದಕ್ಕಾಗಿ ಅದು ನನ್ನ ಕಣ್ಣಂಚಿಗೆ ಆನಿಸುವದು ಸ್ವಲ್ಪ ಕಡಿಮೆ,ಪುಟ್ ಪಾಥ್ ವ್ಯಾಪಾರಿಗಳು,ಕೂಲಿ ಕಾರ್ಮಿಕರು,ರೋಡ್ ಗುಡಿಸುವವರು,ಮೋರಿ ಸ್ವಚ್ಚಗೊಳಿಸುವವರು,ಕಸವೆತ್ತುವವರು,ಮಹಾನಗರಿಯಲ್ಲಿನ ಭಿಕ್ಷುಕರು,ಸಿಗ್ನಲ್ ನಲ್ಲಿ ದಿನ ಪೂರ್ತಿ ನಿಂತು ತಂಪು ಕನ್ನಡಕ ಮಾರುವವರು ಹೀಗೆ ಬರೀ ಇಂತವುಗಳೆ, ಅದ್ಯಾಕೊ ಏನೊ ಆ ಕಷ್ಟದ ಬದುಕುಗಳ ಮುಂದೆ ನನ್ನದೆ ವಾಸಿಯೆಂಬ ನಿಟ್ಟುಸಿರು. 3 ತಿಂಗಳಲ್ಲಿ ಕೈಗೊಂದು ಅಂದದ ಬೈಕು, ಮೊಬೈಲ್ ಎಲ್ಲವೂ ಬಂತು, ನನ್ನೊಳಗೆ ನಾನೆ ರಾಜ ಆದರು ಮಹಾನಗರಿಯ ನಿರ್ಲಿಪ್ತತತೆಯ ಮುಂದೆ ಪರಕೀಯ, ಒಂಟಿತನ, ಊರ ನೆನಪು ಎಲ್ಲವು ಆಗಿಂದಾಗ್ಯೆ ಬಂದು ಹಿಂಸೆ ಕೊಟ್ಟು ಹೋಗುತಿದ್ದವು,ಸುತ್ತಾಟದ ಪರಿಣಾಮವೋ ಏನೊ ರಾತ್ರಿಯಾದರೆ ತಲೆ ನೋವು,ಟ್ರಾಪಿಕ್ ಕಿರಿ ಕಿರಿಗಳು, ವಾಹನಗಳ ದೌಡು, ತರೆವಾರಿ ಬಸ್ಸುಗಳು,ವಿವಿಧ ಬಗೆಯ ಕಾರುಗಳು, ನಾಯಿಯೊಂದೆ ಪ್ರಾಣಿಯೆಂದು ಆಸ್ಥೆಯಿಂದ ಸಾಕುವ ಮಂದಿಗಳು, ಅವುಗಳನ್ನು ಕಾರಲ್ಲಿ ಕೂರಿಸಿಕೊಂಡು ಊರು ಸುತ್ತಿಸೊ ಪರಿ,ಅವು ಕಾರಿನಿಂದ ಇಣುಕಿದಾಗ ಥತ್ತೇರಿಕೆ ಎಂತಾ ಭಾಗ್ಯ ಇವಕ್ಕೆ ಅಂಥ ಹಲುಬಿದ್ದು,ರಿಚ್ಮಂಡ್ ರೋಡಿನ ಪ್ಲೈ ಓವರ್ ರಸ್ತೆ, ಇಂಥಹ ಎಲ್ಲ ಹೊಸದನ್ನ ಅನುಭವಿಸುತ್ತಲೆ ಅದ ನೋಡುತ್ತಲೆ ದಿನಗಳನ್ನು ಕಳೆಯುತ್ತಾ ಬಂದಿದ್ದೆ ಮೊದ ಮೊದಲಿಗೆ ಬೆಂಗಳೂರಿನಲ್ಲಿ.ಹೀಗೆ ಸ್ವಲ್ಪ ಸ್ವಲ್ಪನೆ ಒಗ್ಗಿಕೊಂಡಿದ್ದೆ ಬೆಂಗಳೂರಿಗೆ.

ಮೊದಮೊದಲ ಬ್ಯಾಚುಲರ್ ಲೈಪ್ ಅಡುಗೆಗಳು, ಕರಟಿದ ಒಗ್ಗರಣೆಗಳು,ಸೀದ ಪಾತ್ರೆಗಳು, ಬರಿದೆ ಗಾಳಿ ಉಸುರುವ ನಲ್ಲಿಗಳು, ಕೊಡ ಬಿಂದಿಗೆಗೆ 2 ರುಪಾಯಿ ಕೊಟ್ಟು ಖರೀದಿಸಿದ ದಿನಗಳು,ಕಾಮನ್ ಟಾಯಿಲೆಟ್ಗಳು,ನಲ್ಲಿ ಬಂದ್ ಮಾಡದೆ ಹೋಗಿ ಮನೆ ತುಂಬ ನೀರು ತುಂಬಿಸಿದ ಆವಾಂತರಗಳು,ಬೆಂಗಳೂರ ಮಧ್ಯ ರಾತ್ರಿ ಮೌನದ ಜೊತೆ ಸಾಗಿದ ಪಯಣಗಳು, ಬಸ್ ಪುಟ್ಪಾತ್ ಜೋತಾಟಗಳು,ವಾಚ್ ನೋಡುತ್ತ ಸುತ್ತ ಮುತ್ತ ದೃಷ್ಟಿ ಹಾಯಿಸುತ್ತ ನಿಂತ ಒಂಟಿ ಮಹಿಳೆಯರುಗಳು, ಪ್ಲಾಸ್ಟಿಕ್ ಕಫ್ ಚಾಗಳು, ಸಣ್ಣ ಮಳೆಯೊಂದಿಗೆ ಕೃತಕ ನೆರೆ ಪರಿಸ್ಥತಿಯ ಸೃಷ್ಟಿಸುವ ಬೆಂಗಳೂರು ರೋಡ್ ಗಳು,ಬಜಾರ್ ಗಳು, ಮಾಲ್ ಗಳು,ಚರ್ಚೆ ಅನಿವಾರ್ಯತೆಯ ಜೊತೆ ನಡೆಯುವ ವ್ಯಾಪಾರಗಳು, ಜನ ಜಾತ್ರೆಗಳು, ಮುಂಜಾವಿಗೆ ತರಕಾರಿ ಕೊಳ್ಳಲು ಸಾಗುವ ತರಕಾರಿ ಗಾಡಿಗಳು, ಲಲನೆಯರು, ಫ್ರೌಢತೆ ಮೆರೆಯೊ ಪೇಟೆ ಮಕ್ಕಳುಗಳು, ಕಾಲೇಜ್ ವಿದ್ಯಾರ್ಥಿ,ವಿಧ್ಯಾರ್ಥಿನಿಯರುಗಳು,ಪಾರ್ಕುಗಳು, ಬೀದಿಗೊಂದರಂತೆ ನಿಂತ ಮಂದಿರ ಮಸೀದಿ ಚರ್ಚುಗಳು,ಕಡ್ಲೆ ಕಾಯಿ ಪರಿಷೆ,ಕರಗ ಮುಂತಾದ ಸಾಂಪ್ರದಾಯಿಕ ಜಾತ್ರೆಗಳು,ಬೀದಿಬದಿಯ ಬದುಕುಗಳು,ಮುಂತಾದವುಗಳು ಸಾವಿರ ಸಾವಿರ ಇಂತಹ ಅನುಭವಗಳು,ಅರಿವುಗಳು ಬೆಂಗಳೂರ ಬದುಕು ನನ್ನೆದುರಿಗೆ ಇರಿಸಿದೆ ಇರಿಸುತ್ತಿದೆ. 

ಬೆಂಗಳೂರಿನ ಸುತ್ತಾಟ ಸುಮಾರು 2-3 ವರುಷ ನಡೆದೆ ಇತ್ತು, ತದ ನಂತರನೆ ಆಫೀಸ್ ಎಸಿ ರೂಮ್ ನೊಳಗೆ ಬಿದ್ದಿದ್ದು,ಬೆಂಗಳೂರ ನಗರದಲ್ಲಿ ಒಂದು ಹೆಜ್ಜೆ ಮುಂದಿಡಲಾಗದ ನಾನು ಬೆಂಗಳೂರನ್ನು ಇಷ್ಟು ಹೊತ್ತಿಗೆ ಅರೆದು ಕುಡಿದಿದ್ದೆ, ನಗರವೊಂದೆ ಅಲ್ಲ ಸುತ್ತಲಿನ ಹಳ್ಳಿ ಪರಿಸರ, ನಗರದೊಳಗಿನ ಗಲ್ಲಿ ಗಲ್ಲಿಗಳು ಎಲ್ಲವೂ ಚಿರ ಪರಿಚಿತವಾಗಿದ್ದವು, ಆದರು ಈಗಲೂ ಬೆಂಗಳೂರನ್ನು ದಿನವು ಹೊಸದಾಗೆ ನೋಡುತ್ತಿದ್ದೇನೆ, ಕಾರಣ ಬೆಂಗಳೂರು ಬೆಳೆದ ಹಾಗು ಬೆಳೆಯುತ್ತಿರುವ ರೀತಿಯನ್ನು ಕಂಡು ಅನುಭವಿಸಿ.ಬೆಂಗಳೂರು ಐಟಿ ಬಿಟಿ ಕಂಪೆನಿಗಳ ಲಗ್ಗೆಯಿಂದ ಭಾರತದ ಎಲ್ಲಾ ಭಾಗದ ಜನಗಳಿಗೆ ಆಶ್ರಯ ಕೊಟ್ಟಿದೆ,ಅಷ್ಟೆ ಅಲ್ಲ ಇವು ಬೆಂಗಳೂರನ್ನ ಶೀಘ್ರವಾಗಿ ಬದಲು ಮಾಡಿಬಿಟ್ಟಿದೆ, ಪರಿಣಾಮ ಕೃಷಿ ಭೂಮಿ,ಬರಡು ಭೂಮಿ ಅನ್ನದೆ ಎಲ್ಲದಕ್ಕೂ ಬಂಗಾರದ ಬೆಲೆ, ತಮ್ಮಲ್ಲಿದ್ದ ಜಮೀನಿನ ಒಂದೊಂದು ಭಾಗವನ್ನು ಮಾರಿಕೊಂಡು ಕೋಟ್ಯಾಧೀಶರಾದ ಮಂದಿಗಳು ಕಡಿಮೆ ಇಲ್ಲ,ಬೆಂಗಳೂರು ನಗರದ ಕೊಂಡಿ ಕಳಚಿದಂತ್ತಿದ್ದ ಸರ್ಜಾಪುರ, ವೈಟ್ ಫೀಲ್ಡ್ ಹೆಬ್ಬಗೋಡಿ, ಅತ್ತಿಬೆಲೆ, ಆನೇಕಲ್ ಜಿಗಣಿ, ಬನ್ನೇರುಘಟ್ಟ ಇತರ ಪ್ರದೇಶಗಳನ್ನು ಹೊರತಾಗಿಸಿ ಇವತ್ತು ಬೆಂಗಳೂರನ್ನು ಊಹಿಸಿಕೊಳ್ಳುವದು ಕಷ್ಟ. ಈ ಪ್ರದೇಶಗಳಿಗೆ ಹೋಗುವ ರಸ್ತೆಗಳಲ್ಲಿ ಸರ್ಕಸ್ ಮಾಡಬೇಕಿದ್ದ ಕಷ್ಟಗಳು ಇವತ್ತಿಲ್ಲ ಬದಲಾಗಿ 4ವೇ ರಸ್ತೆಗಳು ಈ ಊರುಗಳಿಗೆ ಸಂಪರ್ಕ ಕಲ್ಪಿಸಿ ಬೆಂಗಳೂರಿನ ತೆಕ್ಕೆಗೆ ಇವುಗಳನ್ನು ಸೇರಿಸಿಕೊಂಡಿದೆ.ಈ ಎಲ್ಲ ಅಭಿವೃದ್ದಿ ಕಾರ್ಯಗಳು ಸುತ್ತಲೂ ಬೆಳೆದಿದ್ದ ಮರ,ಪರಿಸರಗಳನ್ನು ಆಹುತಿ ತೆಗೆದುಕೊಂಡಿದೆ.ಬೆಂಗಳೂರೊಳಗೆ ಇದ್ದ ಕೃಷಿ ಚಟುವಟಿಕೆಗಳು ಸತ್ತೆ ಹೋಗಿದೆ.ಮಾರ್ಕೇಟ್ ಇತರ ಸಾಂಪ್ರದಾಯಿಕ ವ್ಯಾಪಾರಿ ಪರಿಸರವನ್ನು ಮಾಲ್ ಸಂಸ್ಕೃತಿಯು ಆಹುತಿ ತೆಗೆದುಕೊಳ್ಳುತ್ತಿದೆ,3-4ಸಾವಿರಕ್ಕೆ ಸಿಗುತ್ತಿದ್ದ ಡಬಲ್ ಬೆಡ್ ರೂಂ ಬಾಡಿಗೆ ಮನೆಗಳು ಇವತ್ತು 12-15 ಸಾವಿರಕ್ಕೆ ಬಾಡಿಗೆಯನ್ನ ಏರಿಸಿಕೊಂಡು ನಿಂತಿದೆ.ಭೂಮಿ ಬೆಲೆ ಉಹೂಂ ಇದನ್ನ ಹೇಳದಿದ್ದರೆನೆ ವಾಸಿ, ಬಹುಶಃ ಬೆಂಗಳೂರಿನ ಸಂಸ್ಕೃತಿನೆ ಬದಲಾಗುತ್ತಿದೆ, ಇದ್ದುದರಲ್ಲಿ ಹಳೆ ಬೆಂಗಳೂರು ಪ್ರದೇಶಗಳಾದ ಮಲ್ಲೆಶ್ವರಂ,ಬಸವನಗುಡಿ, ಜಯನಗರ ಪ್ರದೇಶಗಳು ಬೆಳೆದರು ಸ್ವಲ್ಪದರ ಮಟ್ಟಿಗೆ ಕನ್ನಡತನ ಇಲ್ಲಿನ ಸಂಸ್ಕೃತಿಯನ್ನು ಹಿಡಿದಿಟ್ಟುಕೊಂಡೆ ಬೆಳೆದಿದೆ. ಎಷ್ಟು ದಿನ ಹೀಗೆ ಇರಬಹುದು ಅನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರಗಳು ಕಾಣಲಾರವು.ನಗರ ಸಾರಿಗೆಯಲ್ಲು ಅಭೂತಪೂರ್ವ ಬದಲಾವಣೆ ಆಗಿದೆ.ಮೆಟ್ರೊ ಬಂದಿದೆ, ಲಾಲ್ ಬಾಗ್,ಕಬ್ಬನ್ ಪಾರ್ಕ್ ಒಂದಷ್ಟು ಮೂಲತೆಯನ್ನ ಉಳಿಸಿಕೊಂಡಿದೆ ಅಂದರೆ ತಪ್ಪಾಗಲಾರದು.ಎಲ್ಲೆಲ್ಲು ಕಂಡು ಬರುವ ಕಾರ್ಪೊರೇಟ್ ಸಂಸ್ಕೃತಿಯ ಮಧ್ಯೆ ಬದಲಾಗದ ಒಂದು ವಿಷಯ ಅಂದರೆ ಅವತ್ತಿಗೂ ಇವತ್ತಿಗೂ ಬಡವರು ಬಡವರಾಗೆ ನಗರದಲ್ಲಿದ್ದಾರೆ ಪ್ರಮಾಣ ಜಾಸ್ತಿಯಾಗಿರಬಹುದೆ ಹೊರತಾಗಿ ಕಡಿಮೆಯಾಗಿಲ್ಲ,ಇತ್ತ ಗಮನ ಹರಿಸಲು ಕಾರ್ಪೊರೇಟ್ ಸಂಸ್ಕೃತಿಯನ್ನು ಮೈಹತ್ತಿಸಿಕೊಂಡ ನಮಗೆ ವೇಳೆಯಿಲ್ಲ.ಗಾರ್ಡನ್ ಸಿಟಿ ಹೆಸರಾಗಿ ಉಳಿದಿದೆ ಅಷ್ಟೆ ವಿನಃ ಕಾಂಕ್ರೀಟ್ ಕಾಡಾಗಿ ಬದಲಾಗಿ ಬಹಳ ದಿನಗಳಾಗಿದೆ.ಯಾರು ಯಾರ ಬಗ್ಗೆನು ತಲೆಕೆಡಿಸಿಕೊಳ್ಳಲು ಒತ್ತಡ ಸಂಸ್ಕೃತಿ ಬಿಡುತ್ತಿಲ್ಲ,ವಾಹನಗಳು ವಿಪರೀತವಾಗಿ ಬಿಟ್ಟಿದೆ.ಇದರಿಂದಾಗಿ ಹಿಂದಿನ ತಂಪು ತಾಪಮಾನ ಕೂಡ ಮರೆಯಾಗಿದೆ, ನಗರದೊಳಗಿನ ಪ್ರಯಾಣ ಹಿಂಸೆ ಒದಗಿಸುತ್ತಿದೆ.ಇದನ್ನು ಸರಿಪಡಿಸಲು ಮತ್ತೆ ಬೆಳೆಯುತ್ತಲೆ ಇದೆ ಬೆಂಗಳೂರು, ವಾಣಿಜ್ಯಿಕರಣದ ಹಂಚಿಕೆ ಕರ್ನಾಟಕದ ಇತರ ನಗರಗಳಿಗು ಸಮ ಪ್ರಮಾಣದಲ್ಲಿ ಹಂಚಿಕೆಯಾಗದ ಪರಿಣಾಮವಾಗಿ ಬೆಂಗಳೂರು ದಿನ ದಿನಕ್ಕೆ ತನ್ನ ಜನಸಂಖ್ಯೆಯನ್ನು ಏರಿಸಿಕೊಳ್ಳುತ್ತಲೆ ಇದೆ.ಬಹುಶಃ ಬೆಂಗಳೂರು ಬದಲಾಗುತ್ತಿರುವದನ್ನ ಬರೆದುಕೊಳ್ಳಲು ಕೂತಲ್ಲಿ ಅದು ಮುಗಿಯಲೊಲ್ಲದ ಕಥೆ. 

ಬೆಂಗಳೂರ ಬೆಳವಣಿಗೆ ಅದರ ಒಪ್ಪು-ತಪ್ಪುಗಳ ಪ್ರಶ್ನೆಗಳು ಹೆಂಗೂ ಇರಲಿ, ಬೆಂಗಳೂರು ನನ್ನನ್ನು ಬೆಳೆಸಿದೆ,ಇವತ್ತು ಬೆಂಗಳೂರಲ್ಲಿ ಕಾಣಸಿಗುವ ಎಲ್ಲಾ ಭಾಷೆಗಳನ್ನು ಅರಗಿಸಿಕೊಳ್ಳಬಲ್ಲೆ,ಬಹುಶಃ ಈ ಪರಿಯು ಬೆಂಗಳೂರಿಗೆ ಮಾತ್ರ ಸೀಮಿತ, ಯಾರು ಕೂಡ ಬಂದು ತಮ್ಮ ಭಾಷೆಯಲ್ಲೆ ಇಲ್ಲಿ ವ್ಯವಹರಿಸಬಲ್ಲರು,ಬೇರೆ ಯಾವ ನಗರದಲ್ಲು ಇದು ಕಾಣಸಿಗೋದು ಕಷ್ಟ. ಬೆಂಗಳೂರ ಅನುಭವಗಳನ್ನೆ ಮೂಲವಾಗಿಸಿಕೊಂಡು ಬೆಂಗಳೂರಿನಂತ ಹಲವು ಊರುಗಳನ್ನ ಸುತ್ತಿದ್ದೇನೆ, ಸುತ್ತುತ್ತಲೆ ಇದ್ದೇನೆ ಆದರೆ ಬೆಂಗಳೂರಿಗೆ ಮೊದಲು ಅಡಿಯಿರಿಸಿದಾಗ ಪಟ್ಟ ಪಚೀತಿಗಳನ್ನು ಎಲ್ಲು ಅನುಭವಿಸಿಲ್ಲ, ಬೆಂಗಳೂರು ತನ್ನದೆ ಅಸ್ತಿತ್ವವನ್ನ ನನಗೆ ತಂದು ಕೊಟ್ಟಿದೆ.ಬೆಂಗಳೂರು ಕಷ್ಟಗಳನ್ನು ಇಷ್ಟಗಳನ್ನು ಸಮಪಾಲಾಗಿ ನನ್ನ ಮುಂದಿರಿಸಿದೆ, ಬದುಕ ಅನುಭವಗಳನ್ನು ನಾನು ಕಂಡುಕೊಡಿದ್ದು ಇಲ್ಲಿ.ಬಹುಶಃ ನನ್ನದೆ ಅನುಭವಗಳು ಮೊದಲಿಗೆ ಹಳ್ಳಿಯಿಂದ ನಗರಕ್ಕೆ ಬಂದ ಎಲ್ಲರದು ಆಗಿರಬಹುದು. ಅದು ಬೆಂಗಳೂರೆ ಆಗಬೇಕಿಲ್ಲ,ನನ್ನ ಈ ಅನುಭವ ಬೆಂಗಳೂರಿಗೆ ಸೀಮಿತವಾದುದರಿಂದ ಆ ಬಗ್ಗೆ ಬರೆದೆನಷ್ಟೆ,ಇದು ಬೆಂಗಳೂರಿನ ಬೆಳವಣಿಗೆ ಜೊತೆ ನನ್ನದು ಒಂದು ಬೆಳವಣಿಗೆಯ ಕಥನ ಅಷ್ಟೆ.ಬೆಂಗಳೂರ ಅನುಭವ ನನ್ನನ್ನು ಬದಲಾಯಿಸಿದೆ ಅಂದರೆ ತಪ್ಪಿಲ್ಲ, ಈಗ ಅನುಕೂಲಕ್ಕಿರಬೇಕಾದ ಎಲ್ಲವೂ ಇದೆ ಆದರೆ ನೆಮ್ಮದಿಗಾಗಿ ಒಂದಷ್ಟು ಚೈತನ್ಯಕ್ಕಾಗಿ ನಾನ್ ಇವತ್ತಿಗು ಮುಖ ಮಾಡೋದು ನನ್ನ ಹಳ್ಳಿ ಕಡೆಗೆ ಅನ್ನುವದು ಸತ್ಯ.ಅದೊಂದನ್ನು ಕೊಂಡುಕೊಳ್ಳಬಹುದಾದ ಮಾಲ್,ಮಾರ್ಕೇಟ್ ಬೆಂಗಳೂರಲ್ಲಿ ಇಲ್ಲಾ ನೋಡಿ :).


ಚಿತ್ರ ಕೃಪೆ:- ಗೂಗಲ್.


Tuesday, March 20, 2012

ಕಾಡು ಹಕ್ಕಿಯ ಹಾಡು ಕವನ ಸಂಕಲನದ ಲೋಕಾರ್ಪಣೆಯೊಂದಿಗೆ ಸಣ್ಣಗಿನ ನಮ್ಮಗಳ ಕಲರವ.


ಕವಿತೆಗಳು ಅಂದರೆ ಭಾವನೆಗಳ ಅಕ್ಷರ ರೂಪ ಹಾಗೂ ಅದರ ಅಭಿವ್ಯಕ್ತಿ. ಕವಿಯೊಬ್ಬ ತುಂಬಾ ಸರಳವಾಗಿ ಭಾವನೆಗಳ ಅಭಿವ್ಯಕ್ತಿಗೆ ಎಲ್ಲೂ ಧಕ್ಕೆಯಾಗದಂತೆ ತನ್ನೂರಿನ ನಿಸರ್ಗದಿಂದ ಪ್ರೇರಿತನಾಗಿ ಬರೆದ ಸಾಲು ಸಾಲು ಕವನಗಳು ಪುಸ್ತಕ ರೂಪ ಪಡೆದು ಲೋಕಾರ್ಪಣೆಗೊಂಡಾಗಿನ ಕ್ಷಣಗಳ ಸಂಭ್ರಮವನ್ನು ಅನುಭವಿಸುವ ಪರಿಯನ್ನು ಮೊನ್ನೆ ಮೊನ್ನೆ ಕಣ್ಣಾರೆ ಕಂಡೆ.ಡಿ ಡಿ ಉಮೇಶ್ ಸಕಲೇಶಪುರ ತಾಲೂಕಿನ ಪಶ್ಚಿಮ ಘಟ್ಟದ ಕಾಡೊಳಗಿನ ಪುಟ್ಟ ಊರಾದ ಹೊಂಗಡಹಳ್ಳ ಹಳ್ಳಿಯ ಕವಿ.ತನ್ನೂರಲ್ಲೆ ತನ್ನ ಮೊದಲ ಕವನ ಸಂಕಲನ ಬಿಡುಗಡೆಗೊಳ್ಳಬೇಕೆಂಬ ಸದಾಭಿಲಾಷೆಯ ಫಲವಾಗಿ ಆ ಪುಟ್ಟ ಊರಿನ ತಾ ಕಲಿತ ಪ್ರಾಥಮಿಕ ಶಾಲೆಯಲ್ಲೆ ಲೋಕಾರ್ಪಣೆಗೊಂಡ ಅವರ ಕವನ ಸಂಕಲನದ ಹೆಸರು “ಕಾಡು ಹಕ್ಕಿಯ ಹಾಡು”.ಗೆಳೆಯರಾದ ಜೆಕೆ ಮತ್ತು ಡಿಕೆ ಇಂಥ ಕಾರ್ಯಕ್ರಮದಲ್ಲಿ ಭಾಗಿಯಾಗೋಣ ಬಾ ಎಂದಾಗ ವೀಕ್ ಎಂಡ್ ಆದುದರಿಂದಲೋ ಏನೊ ಅದಕ್ಕಿಂತಲೂ ಹೆಚ್ಚಾಗಿ ಸಕಲೇಶಪುರ ಎಂದಾಗ ನೆನಪಾಗೋದು ಅಲ್ಲಿನ ಪರಿಸರ ಹಾಗೂ ಕಾಡು, ಅದು ಕಾಡೊಳಗಿನ ಊರಲ್ಲಿ ಈ ತರದ ಒಂದು ಕಾರ್ಯಕ್ರಮ ಅಂದಾಗ ಸಂತೋಷದಿಂದಲೆ ಹೊರಟು ನಿಂತಿದ್ದೆ.

ಪತ್ರಕರ್ತ ಗೆಳೆಯ ಮೆಹೆಬೂಬ್ ರ ಆತ್ಮೀಯ ಬೆಚ್ಚಗಿನ ಸ್ವಾಗತ ಪಡೆದು ಗೆಳೆಯರಾದ ಮಂಜು, ವಿಶ್ವರೊಂದಿಗೆ ನಮ್ಮ ಪಯಣ ಸಕಲೇಶಪುರದಿಂದ 58 ಕಿ ಮೀ ದೂರವಿರುವ ಹೊಂಗಡಹಳ್ಳ ಹಳ್ಳಿ ಕಡೆ ಹೊರಟು ನಿಂತಾಗ ಬೆಳಿಗ್ಗೆ ಘಂಟೆ 10 ರ ಸಮಯ.ದಾರಿ ಮಧ್ಯೆ ಸಿಗುವ ಸುಂದರ ತಾಣಗಳು ಬಹಳಷ್ಟು, ಕೆಲವೊಂದು ವಿಶಿಷ್ಟ ಮರಗಳ ಪರಿಚಯ, ತಾಣಗಳ ಪರಿಚಯ ಅದರ ಹಿನ್ನಲೆ ಇತರವವನ್ನು ಮೆಹಬೂಬ್ ವಿವರಿಸುತ್ತಲೆ ಜೊತೆಗೊಂದಿಷ್ಟು ಹೊಟ್ಟೆ ಹುಣ್ಣಾಗಿಸಿ ನಗುವ ಹಾಸ್ಯದೊಂದಿಗೆ 11ರ ಸಮಯಕ್ಕೆ ವಾಹನ ಕವನ ಸಂಕಲನ ಬಿಡುಗಡೆಯಾಗುವ ವೇದಿಕೆಯೆದುರು ನಿಂತಿತ್ತು. ವೇದಿಕೆಯ ಮುಂಬಾಗದ ಶಾಲಾ ಮೈದಾನಕ್ಕೆ ಶಾಮಿಯಾನ ಹಾಕಿಸಿದ ಬಯಲು ಸಭಾಂಗಣ ರೆಡಿಯಾಗಿತ್ತು, ಹಳ್ಳಿಗರಲ್ಲಿ ಅದೆಂತೊದೊ ಸಂಭ್ರಮ ನಮ್ಮೂರ ಹುಡುಗ ಸಾಧನೆ ಎಂದೆ ತಿಳಿದಿದ್ದ ಅವರಿಗೆ ಅದು ಫಲಿತವಾಗಬಲ್ಲ ಸಮಾರಂಭದೆಡೆಗೆ ನೋಡುವ ಕಾತರಿಕೆಗಳು ಸ್ಪಷ್ಟವಾಗಿ ಗೋಚರಿಸುತಿತ್ತು.ಬೆಂಗಳೂರಿನಂತ ನಗರದಲ್ಲಿ ಕವನ ಸಂಕಲ ಬಿಡುಗಡೆ ಎಂದರೆ 20 ರಿಂದ 25 ಮಂದಿ ಸೇರುವದೆ ಹೆಚ್ಚು,ಕೆಲ ಘಂಟೆಯ ಕಾರ್ಯಕ್ರಮ, ಒಂದಷ್ಟು ಸಾಕ್ಷಿಗಾಗಿ ಪೊಟೋಗ್ರಾಪಿ,ಹೆಚ್ಚೆಂದರೆ ಕೊನೆಗೆ ಬಿಸ್ಕೇಟ್ ಜೊತೆ ಒಂದರ್ಧ ಕಫ್ ಟೀ ಇಷ್ಟಕ್ಕೆ ಸೀಮೀತವಾಗಿ ನೋಡಿದ್ದ ಕಾರ್ಯಕ್ರಮಗಳ ಮುಂದೆ ಈ ಹೊಸ ತರ,ಕಾರ್ಯಕ್ರಮದೊಂದಿಗಿನ ಹಳ್ಳಿಗರ ಭಾವನೆಗಳು, ಇಂತಹ ಕಾರ್ಯಕ್ರಮವನ್ನು ಹಬ್ಬದಂತೆ ಆಚರಿಸಲು ನಿಂತಿದ್ದನ್ನು ನೋಡಿ ಅಚ್ಚರಿಯೊಂದಿಗೆ ಅವರ ಖುಷಿಯೊಂದಿಗೆ ನಾವೂ ಖುಷಿ ಪಟ್ವಿ.ಈ ಬಗ್ಗೆ ನಾ ಬರೆದುಕೊಳ್ಳುತ್ತಿರೋದು ಕೂಡ ಇದೆ ಕಾರಣಕ್ಕೆ.

ಸಭಾ ಕಾರ್ಯಕ್ರಮ 11.30 ಕ್ಕೆಲ್ಲ ಪ್ರಾರಂಭ ಪಡೆದು ಮಾಜಿ ಶಾಸಕರಾದ ವಿಶ್ವನಾಥ್ ಎಚ್ ಎಂ ಅವರಿಂದ ಕವನ ಸಂಕಲನ ಲೋಕಾರ್ಪಣೆಯನ್ನು ಪಡೆಯಿತು, ಹಾಲಿ ಶಾಸಕರಾದ ಕುಮಾರಸ್ವಾಮಿ ಕೂಡ ಮುಖ್ಯ ಅತಿಥಿಯಾಗಿದ್ದ ಈ ಕಾರ್ಯಕ್ರಮದಲ್ಲಿ ರಾಜಕೀಯ ಕ್ಷೇತ್ರದ ಸಣ್ಣ ನುಡಿಯನ್ನು ಬಳಸದೆ ಬರಿಯ ಕವಿಯ ಸ್ಪೂರ್ತಿಯನ್ನು ಹೆಚ್ಚಿಸುವ ಮಾತನ್ನಾಡಿದ್ದು,ಒಂದಷ್ಟು ಪುಸ್ತಕವನ್ನ ಸ್ಥಳದಲ್ಲೆ ಖರೀದಿಯನ್ನು ಮಾಡಿ ಪುಸ್ತಕದೆಡೆಗಿನ ಪ್ರೇಮ ತೋರಿಸಿದ್ದು ಕೂಡ ಖುಷಿಯನ್ನು ತಂದಿತ್ತು.ಹಾಸನದ ಸೈಂಟ್ ಜೋಸೆಪ್ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕಿ ಸಾಹಿತಿಯೂ ಆದ ಭಾರತಿ ಹಾದಿಗೆ ಅವರ ಕೃತಿ ಪರಿಚಯ ಚೆಂದಗಿನ ಒಕ್ಕಣೆ ಅಲ್ಲಲ್ಲಿ ವಿಶಿಷ್ಟ ಭಾಷೆಯೊಂದಿಗೆ ಚಂದವಾಗಿ ಮೂಡಿ ಬಂದಿತ್ತು.ಡಿ ಡಿ ಉಮೇಶ್ ಮಾತಾಡುತ್ತ ಊರ ಮಂದಿಯ ಪ್ರೇಮವನ್ನು ಕಂಡು ಭಾವುಕರಾಗಿದ್ದು ಸಭೆಯನ್ನು ಒಂದು ಕ್ಷಣ ಭಾವುಕರಾಗಿಸಿತ್ತು. ಕೊನೆಯಲ್ಲಿ ದಿನೇಶ್ ಕುಮಾರ್ ನೀಡಿದ ಕವಿ ಪರಿಚಯದೊಂದಿಗಿನ ಚಿಕ್ಕ ಚೊಕ್ಕವಾದ ಎರಡೂ ಮಾತು ಕೂಡ ಸಭೆಯ ಅಂದದ ಪೂರ್ಣತೆಗೆ ಸಹಕಾರಿಯಾಗಿತ್ತು,ಡಿ ಡಿ ಉಮೇಶ್ ಇಲ್ಲಿವರೆಗೆ ಗಳಿಸಿದ್ದಕ್ಕಿಂತ ಕಳಕೊಂಡಿದ್ದೆ ಹೆಚ್ಚು ಗಳಿಸುವ ಕಾರ್ಯ ಇವತ್ತಿಂದ ಪ್ರಾರಂಭವಾಗಿದೆ ಇದು ಹೀಗೆ ಮುಂದುವರಿಯಲಿ ಎಂಭ ಮಾತು ನರೆದವರ ಎಲ್ಲರ ಆಶಯವನ್ನು ಅವರೆ ಹೇಳಿದಂತಿತ್ತು, ಅದಾಗಲೆ 2 ಘಂಟೆ ಆಗಿದ್ದರಿಂದ ಹೊಟ್ಟೆ ಚುರುಕ್ ಅನ್ನುತ್ತಿರಲು ಸಭಾ ಕಾರ್ಯಕ್ರಮಕ್ಕೂ ತೆರೆ ಬಿದ್ದಿತ್ತು, ನೆರೆದವರಿಗೆಲ್ಲರೀಗೂ ಊಟ ಉಪಹಾರ ವ್ಯವಸ್ಥೆ ನನಗೆ ಯಾವುದೊ ಮದುವೆ ಸಮಾರಂಭವನ್ನ ನೆನಪಿಸಿತು.ಒಟ್ಟಿನಲ್ಲಿ ಊರ ಹಬ್ಬದಂತೆ ಆಚರಿಸಿದ ಈ ಕಾರ್ಯಕ್ರಮವನ್ನ ನಾನು ನನಗೆ ಗೊತ್ತಿಲ್ಲದಂತೆ ಹಳ್ಳಿಯ ಕಾರ್ಯಕ್ರಮಕ್ಕೂ ಪಟ್ಟಣದ ಕಾರ್ಯಕ್ರಮಕ್ಕೂ ತಾಳೆ ಹಾಕುವಂತೆ ಮಾಡಿದ್ದಂತೂ ಸತ್ಯ.

ಅಶ್ರಫ್ ಮಾಂಜ್ರಾಬಾದ್ ಅವರೊಂದಿಗೆ
ಹೀಗೆ ಒಂದು ಅಂದವಾದ ಕಾರ್ಯಕ್ರಮ ಮುಗಿಸಿ ಸಕಲೇಶಪುರಕ್ಕೆ ಮರಳಿತ್ತು ನಮ್ ಟೀಮ್, ಪತ್ರಕರ್ತರಾದ ಜಯಕುಮಾರ್ ದಾರಿಪೂರ್ತಿ ಹಾಡಿದ ಹಾಡುಗಳು ಆ ಹಾಡಿನ ಮದ್ಯದ ಮೆಹಬೂಬ್ ಅವರ ಅನೌಂಸ್ ಮೆಂಟ್ಗಳು ಇತರವೂ ಗಟ್ಟಿ ಊಟ ಸಹಜವಾಗಿ ಒದಗಿಸಿದ ನಿದ್ದೆ ಮಂಪರನ್ನು ಓಡಿಸಿತ್ತು, ಹೀಗೆ ಬಂದು ವಸತಿ ಗೃಹ ಹೊಕ್ಕ ನಾವುಗಳು ಒಂದಷ್ಟು ವಿಶ್ರಾಂತಿಯ ಬಳಿಕ ಸಣ್ಣಗಿನ ಸುತ್ತಾಟ ಮುಗಿಸಿ ರಾತ್ರಿ ಊಟಕ್ಕೆ ರೆಡಿಯಾಗಿದ್ವಿ. ನಾನು ನಿರೀಕ್ಷಿಸದೆ ಇದ್ದ ಅತಿಥಿ ಹಾಗು ನಾ ಮೆಚ್ಚುವ ಆಶ್ರಪ್ ಮಾಂಜ್ರಾಬಾದ್ ರನ್ನ ಭೆಟ್ಟಿಯಾಗಿದ್ದು ಆಗಲೆ.ನನ್ನ ಬೆನ್ನು ತಟ್ಟುತ್ತಲೆ ಬಂದಿರುವ ಇವರನ್ನು ಒಂದು ದಿನ ಭೆಟ್ಟಿಯಾಗುತ್ತೇನೆ ಅನ್ನೋದು ನಾನು ಊಹಿಸದಿರದ ವಿಷಯ,ಸಕಲೇಶಪುರದವರಾದರು ಹೊರದೇಶದಲ್ಲಿ ಇರುವವರಾದ್ದರಿಂದ ಭೆಟ್ಟಿಯಾಗಬಲ್ಲೆ ಎಂಭ ನಿರೀಕ್ಷೆಗಳು ಇರಲಿಲ್ಲ.ಈ ಕಾರ್ಯಕ್ರಮಗಳ ಮಧ್ಯೆ ಇದು ಒಂದು ಖುಷಿ ನನಗೊದಗಿ ಬಂದಿದ್ದು ಈ ಪ್ರಯಾಣದ ನೆನಪನ್ನು ಹಸಿರಾಗಿಟ್ಟುಕೊಳ್ಳುವಂತೆ ಮಾಡುವುದಂತು ದಿಟ. ಊಟದ ಮಧ್ಯೆದ ಪತ್ರಿಕಾರಂಗದ ನಿಲುವುಗಳ ಚರ್ಚೆ ಅದರ ಹೊರತಾಗಿಯೂ ಸ್ನೇಹಕ್ಕೆ ನೀಡುವ ಬೆಲೆಗಳು, ಪತ್ರಿಕಾರಂಗದಲ್ಲಿರಬೇಕಾದ ಗಟ್ಟಿ ನಿಲುವುಗಳು ಈ ಬಗ್ಗೆಯ ಆಸಕ್ತಿದಾಯಾಕ ಚರ್ಚೆಗಳ ಮುಗಿಸಿ ಮೆಹಬೂಬ್, ಆಶ್ರಫ್ ಹಾಗೂ ಇತರ ಸ್ನೇಹಿತರನ್ನ ಬೀಳ್ಕೊಟ್ಟು ದಿಂಬಿಗೆ ತಲೆಯಾನಿಸ ಬೇಕಾದರೆ ತಡ ರಾತ್ರಿಯೆ ಆಗಿತ್ತು.ಅಂತೆಯೆ ಅಲ್ಪಾವಧಿಯ ನಿದ್ದೆ ಮುಗಿಸಿ ಮೋರೆಗೊಂದಷ್ಟು ನೀರ ಹಾಕಿಕೊಂಡು ಪ್ರೆಶ್ ಆಗಿ ಬೆಳಗ್ಗಿನ ಜಾವಕ್ಕೆ ಸಕಲೇಶಪುರದ ಮಂಜಿನ ಮಧ್ಯ ಬೆಂಗಳೂರ ದಾರಿ ಹಿಡಿದಿದ್ದೆವು. ಪ್ರಯಾಣ ಮಧ್ಯೆ ನೆನಪಾಗುತ್ತಿದ್ದುದು ಅದೆ ಹೊಂಗಡಹಳ್ಳ ಹಳ್ಳಿ, ಕಾಡು ಹಕ್ಕಿ ಡಿಡಿ ಉಮೇಶ್ ಅವರು, ಇದೆ ನೆನಪಿನೊಂದಿಗೆ ಓದಿದ ಅವರ ಕವನದ ಸಾಲು ಹೀಗಿತ್ತು..........

ನನ್ನೂರ ಬೆಟ್ಟದಲಿ
ನವಿಲುಗಳು ನರ್ತಿಸುತ್ತಿದೆ
ನಾ ಹ್ಯಾಂಗೆ ನೋಡಲಿ
ಕುರುಡ ನಾನು!

ನನ್ನೂರ ಮಾಮರದಿ
ಕೋಗಿಲೆಯ ರಾಗ ಮಿಡಿಯುತ್ತಿದೆ
ನಾ ಹ್ಯಾಂಗ ಆಲಿಸಲಿ
ಕಿವುಡ ನಾನು!

ನನ್ನೂರ ಹೂ ಬನದಲಿ
ಗಿಳಿಯೊಂದು ಉಲಿಯುತಿದೆ
ನಾ ಹ್ಯಾಂಗ ಉಲಿಯಲಿ
ಮೂಕ ನಾನು!

ನನ್ನೂರ ಸುಗ್ಗಿಯಲಿ
ನವಿಲೊಂದು ಕುಣಿಯುತ್ತಿದೆ
ನಾ ಹ್ಯಾಂಗ ಕುಣಿಯಲಿ
ಕುಂಟ ನಾನು!

ಈ ಜಗದಿ ನರರಿಗಿಂತ 
ನನ್ನವರ ಸಂಖ್ಯೆ ಮೇಲು
ನೀವು ತಿಳಿದ್ಹಾಂಗೆ
ನಾನು ಯಾರು?

ಬೇಸಿಗೆಯಲಿ ಬಿಸಿ ಎನ್ನದೆ
ಮಳೆಯಲಿ ಚಳಿ ಎನ್ನದೆ
ನಿಂತಲ್ಲೆ ನಿಲ್ಲುವ 
ಕಲ್ಲು ನಾನು!

ಯಾಕೊ ನಗರದಲ್ಲಿ ಖುಷಿ ಮರೆತು ಸಣ್ಣ ಸಣ್ಣ ಖುಷಿಯನ್ನು ಹಿಡಿಯಾಗಿಸದೆ ಕೈ ಚೆಲ್ಲುವ ನಾವು ಕಲ್ಲೆ?ಗೊತ್ತಿಲ್ಲ ಕವಿತೆ ಓದಿ ಮುಗಿಸಿದಾಗ ಹಿಂಗಂದುಕೊಂಡಿದ್ದು ಸತ್ಯ.ಒಂದಷ್ಟು ಖುಷಿ ಈ ಪಯಣದಿಂದಾದರು ಸಿಕ್ಕಿತಲ್ಲ ಎಂಭ ನಿಟ್ಟುಸಿರಿನೊಂದಿಗೆ ಸೀಟಿಗೊರಗಿದ್ದೆ.



Friday, March 16, 2012

ನಿನ್ನೋಟದೊಳಗಿನ ಬಂಧಿ

ನಿನ್ನ ಕಣ್ಣ ನೋಟದೆದುರು
ಚಕ್ರವ್ಯೂಹ ಪ್ರವೇಶ ಪಡೆದ
ಅಭಿಮನ್ಯು ನಾನು.

ಬತ್ತಳಿಕೆಯಲಿ ಜತನದಿ ಪೇರಿಸಿಟ್ಟ
ನಿನ್ನ ನೋಟದ ಬಾಣಗಳಿಗೆ
ದೇಹವನ್ನೆ ಬಿಲ್ಲಾಗಿಸಿದವ ನಾನು.

ನಿನ್ನ ಅಕ್ಷಿ ಪರಿಧಿಯಲ್ಲಿ
ಎದುರುಗೊಂಬ ಶತ್ರುಗಳೊಡ ಹೋರಾಡೊ
ಕೆಚ್ಚೆದೆಯ ಗಂಡು ನಾನು

ನಿನ್ನೊಳು ಬರಬಲ್ಲೆ
ನನ್ನೊಳು ನಿನಗಾಗಿ ಯುದ್ಧಕ್ಕೂ ಬೀಳಬಲ್ಲೆ
ನಿನ್ನ ನೋಟ ಚಕ್ರವ ಭೇಧಿಸಲಾರೆನು ನಾನು.

ನಿನ್ನ ನೋಟದೊಳಗಿನ ಸ್ಪೂರ್ತಿ
ಹಿಡಿಯಾಗಿಸಿ ಬದುಕೊ ಆಸೆ
ಭೇಧಿಸಲಾಗದ ನಿನ್ನೋಟದೊಳಗಿನ ಬಂಧಿ ನಾನು.

Thursday, March 15, 2012

ಸಮಸ್ಯೆಗಳಿಗೆ ಉತ್ತರವಾಗಬಲ್ಲ ಪ್ರಶ್ನೆಗಳು.

ಜೀವನದ ಪ್ರತಿ ಕ್ಷಣಗಳಲ್ಲು ಪ್ರತಿಯೊಂದು ಘಟ್ಟದಲ್ಲು ಮನುಷ್ಯನಾದವ ತನ್ನದೆ ಆದ ನಿರ್ಧಾರಗಳನ್ನು ತೆಗದುಕೊಳ್ಳಬೇಕಾಗುತ್ತದೆ. ವ್ಯಕ್ತಿತ್ವ ವಿಕಸನ ಅನ್ನೊದನ್ನೇನಾದರು ನಾವು ವಿಶ್ಲೇಷಿಸ ಹೊರಟರೆ ಅದರ ತಳಪಾಯ ಇರುವದು ಇತರರ ಮಾರ್ಗದರ್ಶನ, ಸಲಹೆ, ನಮ್ಮ ವಿದ್ಯಾಭ್ಯಾಸದ ಡಿಗ್ರಿಗಳು ಏನೆ ಇದ್ದರು ಅದೆಲ್ಲದರ ಹೊರತಾಗಿಯು ಅದು ಇರುವದು ಹಾಗು ಅವಿತಿರುವದು ನಾವು ಜೀವನದ ಪ್ರತಿಘಟ್ಟದಲ್ಲು ತೆಗೆದುಕೊಳ್ಳುವ ನಮ್ಮದೆ ನಿರ್ಧಾರಗಳಲ್ಲಿ.ಪ್ರತಿಯೊಂದು ಸರಿಯಾದ ನಿರ್ಧಾರಗಳು ಕೂಡ ನಮ್ಮನ್ನು ಉದ್ದರಿಸಬಲ್ಲುದು ತಪ್ಪು ನಿರ್ಧಾರಗಳಾದರೆ ಒಡನೆಗೆ ಅರಿವಿಗೆ ಬರದಿದ್ದರು ಕೂಡ ಮುಂದೆ ಸಮಸ್ಯೆಗಳಿಗೆ ನಾಂದಿಯಾಗಬಹುದು ಆಗ ನಾವು ತೆಗೆದುಕೊಂಡ ನಿರ್ಧಾರಗಳೆ ಮರೆತು ಹೋಗಿ ಯಾಕೆ ಹೀಗಾಯಿತು ಅನ್ನೊ ಕೊರಗಷ್ಟೆ ನಮ್ಮೊಳಗೆ ಉಳಿಯಬಹುದು. ಅದು ನಮ್ಮ ವಿಕಸನಕ್ಕೆ ಅಡ್ಡಿಪಡಿಸುವದಂತು ದಿಟ.ಹಾಗಿದ್ದರೆ ನಮ್ಮೊಳಗೆ ಸರಿಯಾದ ನಿರ್ಧಾರಗಳು ಅದಾಗೆ ಹುಟ್ಟಬೇಕಾದರೆ ನಮ್ಮಳಗೆ ಪ್ರಶ್ನೆಗಳು ಹುಟ್ಟುತ್ತಲೆ ಇರಬೇಕು!!! ವಿಚಿತ್ರ ಅನಿಸುತ್ತಾ, ಹೌದು ನಮಗೆ ನಾವೆ ಒಡ್ಡಬಹುದಾದ ಪ್ರಶ್ನೆಗಳು ನಮ್ಮನ್ನು ಸರಿಯಾದ ನಿರ್ಧಾರಗಳೆಡೆ ಪ್ರಚೋದಿಸುತ್ತದೆ.
ಲಕ್ಷ ಲಕ್ಷ ವೈಜ್ಞಾನಿಕ ಸಂಶೋಧನೆಗಳು ನಮ್ಮನ್ನು ಈ ಯಾಂತ್ರಿಕ ಯುಗದಲ್ಲಿ ಅಡಿಯಿರಿಸುವಂತೆ ಮಾಡಿದೆ, ಈ ಅನ್ವೇಷಣೆಗಳು ಹುಟ್ಟಿದ್ದು ಬರೀಯ ಪ್ರಶ್ನೆಗಳಿಂದ ಮತ್ತು ಕುತೂಹಲದಿಂದಲ್ಲವೆ?ಬೆಳಿಗ್ಗೆದ್ದು ಬ್ರಶ್ ಮಾಡೋ ಟೂತ್ ಪೇಷ್ಟ್ ಬ್ರಶ್ ನಿಂದ ಹಿಡಿದು ಒಡಾಡುವ ಕಾರು, ಬೈಕು, ಬಸ್ಸು,ಅನುಕೂಲಕ್ಕಾಗಿ ಬಳಸುವ ಯಂತ್ರಗಳು, ಮನರಂಜಿಸುವ ಟೀವಿ, ಸಿಡಿ ಪ್ಲೇಯರ್ ಇತ್ಯಾದಿ ಮನರಂಜಕಗಳು ಇತ್ಯಾದಿ ಇತ್ಯಾದಿ ವಸ್ತು ವಿಷಯಗಳೆಲ್ಲ ನಮ್ಮಲ್ಲಿನ ಪ್ರಶ್ನೆಗಳಿಗೆ ಹುಟ್ಟಿಕೊಂಡಿರುವ ಪ್ರತ್ಯುತ್ತರದ ಸಾಮಾಗ್ರಿಗಳೆ ಅಲ್ಲವೆ?ಹೀಗೆ ಪ್ರಶ್ನೆಗಳ ಹುಟ್ಟು ಉತ್ತರಗಳನ್ನು ಕಂಡುಕೊಳ್ಳುವಲ್ಲಿಯವರೆಗೆ ಅದರ ಹರಿವು ನಿಲ್ಲದು.ನಮ್ಮ ಅನುಕೂಲಕ್ಕಾಗಿ ಪ್ರತಿ ಪ್ರಶ್ನೆಗಳಿಗೆ ಉತ್ತರ ಹುಡುಕುವ ನಾವು ನಮ್ಮನ್ನು ನಾವು ವಿಕಸಿಸಿಕೊಳ್ಳೊದಕ್ಕೆ ಪ್ರಶ್ನೆ ಮಾಡಿಕೊಳ್ಳುವದು ಕಡಿಮೆಯಾಗುತ್ತಿದೆ. ಕಾರಣ ನಾವು ನಮ್ಮ ವಿಕಸನ ಅಂತ ತಿಳಿದುಕೊಳ್ಳೊದು ನಾವು ಪಡೆದ ವಿದ್ಯಾಭ್ಯಾಸದ ಸರ್ಟಿಫಿಕೇಟ್ ಮೇಲೆ. ಆ ಸರ್ಟಿಫಿಕೇಟ್ ಮೇಲೆ ಕೈ ತುಂಬಾ ಸಂಪಾದಿಸಬಲ್ಲಂತ ಉದ್ಯೋಗ ದೊರೆತರೆ ಸಾಕು ಅಲ್ಲಿಗೆ ಜೀವನ ಸೀಮೀತಗೊಳಿಸುವ ಸಾರ್ಥೈಕ ಭಾವ. ಇದರಿಂದಾಗಿ ಮನಸ್ಸುಗಳ ಚೈತನ್ಯತೆಯು ಬತ್ತುತ್ತದೆ, ಹೇಗೆ ಅಂತೀರಾ? ಮನೆ ಮನಗಳಲ್ಲಿ ತಮ್ಮದೆ ನೂರೆಂಟು ರಗಳೆಗಳಿದ್ದಾವಾಗ ಬದುಕು ಯಾಂತ್ರಿಕವಾಗಿರುವಾಗ ಪರರತ್ತ ನೋಡೋದಕ್ಕೆ ಅವರ ಕಷ್ಟಗಳಿಗೆ ಸ್ಪಂದಿಸುವದಕ್ಕೆ ನಮ್ಮಲ್ಲಿ ವೇಳೆಯಾದರು ಎಲ್ಲಿಂದ ಸಿಕ್ಕೀತು. ನಮ್ಮಲ್ಲಿ ನೂರೆಂಟು ರಗಳೆ ಯಾಕೆ ಹುಟ್ಟುತ್ತವೆ ಅಂದರೆ ನಾವು ತೆಗೆದುಕೊಳ್ಳುವಲ್ಲಿನ ನಿರ್ಧಾರಗಳ ಯಡವಟ್ಟುಗಳಿಂದ,ಯಾವತ್ತೊ ಏನೊ ತೆಗೆದುಕೊಂಡ ತಪ್ಪು ನಿರ್ಧಾರಗಳು ರಗಳೆಗಳಾಗಿ ಭಾಧಿಸುತ್ತದೆ ಇದಕ್ಕೆ ಕಾರಣ ಮೊದಲೆ ಹೇಳಿದಂತೆ ನಿರ್ಧಾರಗಳ ಮುಂದು ನಮಗೆ ನಾವೆ ಪ್ರಶ್ನೆಗಳನ್ನ ಮಾಡುವದನ್ನು ಮರೆತಿದ್ದು.ಹೀಗಿರಬೇಕಾದರೆ ಇದರ ಒಟ್ಟು ಪರಿಣಾಮ ಸಮಾಜದ ಮೇಲಾಗುತ್ತೆ.ಸಮಾಜವು ಭಾಂದವ್ಯಗಳನ್ನು ಕಳಕೊಂಡು ಯಾಂತ್ರಿಕವಾಗುತ್ತದೆ.ಸಮಾಜದಲ್ಲಿ ಮಿಳಿತವಾಗಿ ಸ್ವಚ್ಚ ಆನಂದವನ್ನ ಪಡೆಯೊ ಭಾಗ್ಯದಿಂದ ವಂಚಿತರಾಗುತ್ತೇವೆ,ಅಂತೆಯೆ ಪ್ರಶ್ನೆಗಳನ್ನು ನಮಗೆ ನಾವೆ ಮಾಡಿಕೊಳ್ಳುವ ಅಭ್ಯಾಸವನ್ನ ಬಿಟ್ಟಿದ್ದಕ್ಕೆ ಏನೊ ಗೊತ್ತಿದ್ದೊ ಗೊತ್ತಿಲ್ಲದೆಯೊ ಸಮಾಜಕ್ಕೆ ಈ ತೆರನಾದ ಒಳಿತೊ, ಕೆಡುಕೊ ಏನೊ ಒಂದು ಪ್ರಭಾವವನ್ನು ಹರಿಬಿಡುತ್ತೇವೆ.

ಈಗ ಬರವಣಿಗೆಯನ್ನೆ ತೆಗೆದುಕೊಳ್ಳೋಣ, ನನ್ನಲ್ಲಿ ಸಾಮಾಗ್ರಿಗಳಿವೆ, ವಿಷಯ ಸಂಗ್ರಹಗಳಿವೆ ಅಂತ ಉದ್ದುದ್ದ ಬರೆಯೋದು ಸಾಧ್ಯನ? ಒಂದು ವೇಳೆ ಬರೆದೆನು ಎಂದರೆ ಅದು ನನಗೊಪ್ಪುವ ವಿಷಯಗಳ? ಬರಿಯ ಸಂಗ್ರಹದ ಸಾಮಾಗ್ರಿಯಾಗಿರದೆ ಅದು ತನ್ನ ಗ್ರಹಿಕೆಗೆ ಬಂದಿರೋದ? ನನ್ನತನಕ್ಕೆ ಎಷ್ಟು ಬೇಕೊ ಅಷ್ಟು ಬರೆದೆನೆ?ಆಥವಾ ನನ್ನ ಸಾಮರ್ಥ್ಯಕ್ಕಿಂತಲು ಮಿಗಿಲಾಗಿದ್ದನ್ನು ಸಾಮಾಗ್ರಿ ಪೂರೈಕೆಯಿದೆ ಅನ್ನೊ ಕಾರಣಕ್ಕಾಗಿ ಬರೆದನೆ? ವಿಚಾರಗಳು ನನಗೆ ಹೊಳೆದದ್ದೆ? ಅನ್ನೊ ಪ್ರಶ್ನೆಗಳೊಡನೆ ಬರವಣಿಗೆಯನ್ನು ಬರೆಯಬೇಕಾಗುತ್ತದೆ.ಸಾಮರ್ಥ್ಯದಿಂದಲು ಮಿಗಿಲಾದದ್ದನ್ನು ಬರೆಯಲು ಹೋದರೆ ಆಭಾಸವಾಗುತ್ತದೆ.ಹಾಗು ನಮ್ಮೊಳಿರುವ ಬರಹಗಾರನಿಗು ನಾವು ಬರೆದ ಬರವಣಿಗೆಗು ದ್ರೋಹವೆಸೆದಂತೆ.ಅದು ನಮ್ಮನ್ನು ನಾವು ಕೊಂದುಕೊಂಡಂತೆ. ಹಾಗಾದರೆ ತನ್ನ ಸಾಮರ್ಥ್ಯದ ಗ್ರಹಿಕೆ ಅದರ ಉದ್ದ, ಅಗಲವನ್ನು, ಇತಿ-ಮಿತಿಯನ್ನು ತಿಳಿಸುವದು ನಮ್ಮೊಳು ನಾವೆ ಹಾಕಿಕೊಳ್ಳುವ ಪ್ರಶ್ನೆಗಳಿಂದ.ಹೀಗೆ ಪ್ರತಿ ಕ್ಷೇತ್ರದಲ್ಲು ನಮಗೆ ನಾವೆ ಒಡ್ಡುವ ಪ್ರಶ್ನೆಗಳು ನಮ್ಮೊಳಗಿನ ಸಜ್ಜನಿಕೆ ಹಾಗು ನಮ್ಮ ಸಾಮರ್ಥ್ಯಗಳನ್ನು ನಮಗೆ ತಿಳಿಸುತ್ತೆ ಹಾಗು ಸಾಮರ್ಥ್ಯಕ್ಕೆ ಅನುಗುಣವಾಗಿ ಮುಗಿಸಿದ ಕೆಲಸದಿಂದ ಸಿಗುವ ಶ್ರೇಯ ಸಾಮರ್ಥ್ಯದ ಇನ್ನೊಂದು ಅಂತಸ್ಥನ್ನು ಏರಲು ಚೈತನ್ಯಿಸುತ್ತದೆ. ಇದನ್ನೆ ನಾನು ನಮ್ಮ ವಿಕಸನಗಳು ಅಂದಿದ್ದು ಇದಕ್ಕೆ ಕಾರಣ ಹಾಗು ಶಕ್ತಿಯನ್ನ ತುಂಬೋದು ನಮ್ಮೊಳಗೆ ಹುಟ್ಟಿಕೊಳ್ಳುವ ಪ್ರಶ್ನೆಗಳೆ ಹೊರತಾಗಿ ಬೇರಾವುದೂ ಅಲ್ಲ.

ನಾನು ಯಾರು? ಅನ್ನೊ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಲೆ ಆತ್ಮಶೋಧನೆಯಲ್ಲಿ ತೊಡಗಿದ ರಮಣ ಮಹರ್ಷಿಯವರನ್ನು ಭಗವಾನ್ ಅಂತ ಹೆಸರಿಡಿದು ಕರಿಯುತ್ತೆ ನಮ್ಮ ಸಮಾಜ.ಯಾವುದೆ ಧರ್ಮಗಳ ಹಂಬಿಲ್ಲದೆ ಯಾವುದೆ ದೇವರನ್ನು ಹೆಸರಿಡಿಯದೆ ಆತ್ಮವನ್ನೆ ದೇವರೆಂದು ಕರೆದು ಆ ದೇವರನ್ನೆ ಹುಡುಕಿ ಜ್ಞಾನವನ್ನು ಪಡೆದ ದಾರ್ಶನಿಕ.ಆತ್ಮವನ್ನು ಹುಡುಕುವದು ಎಂದರೆ ರಮಣರ ಪಾಲಿಗೆ ನಾನು ಯಾರು?ಅನ್ನೊ ಪ್ರಶ್ನೆಗೆ ಉತ್ತರ ಹುಡುಕೋದು ಅಷ್ಟೆ ಆಗಿತ್ತು. ಸಾಮಾನ್ಯನಲ್ಲಿ ಸಾಮಾನ್ಯನಾದ ವೆಂಕಟರಮಣನೆಂಬ ಹುಡುಗ ತನ್ನ ಹನ್ನೆರಡನೆ ವಯಸ್ಸಿನಲ್ಲಿ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುದಕ್ಕೆ ಹಾಗು ಈ ಪ್ರಯತ್ನದಲ್ಲಿ ದೊರೆತ ಸತ್ಯಗಳು ಜನರ ದಾರಿ ದೀಪವಾದುದಕ್ಕೆ ಆತ ರಮಣ ಮಹರ್ಷಿಗಳಾದರು, ನಮ್ಮೊಳಗೆ ಹುಟ್ಟಿಕೊಳ್ಳೊ ಪ್ರಶ್ನೆಗಳು ನಮ್ಮನ್ನ ಯಾವ ಮಟ್ಟಕ್ಕೆ ಏರಿಸಬಲ್ಲದು ಎಂಬುದಕ್ಕೆ ಉದಾಹರಣೆಯಾಗಿ, ಈ ಪ್ರಶ್ನೆಗಳ ಬಗ್ಗೆ ಇಷ್ಟೊಂದು ಬರೆದುದಕ್ಕೆ ಕಾರಣವಾದ ವಿಷಯ ಇದಾಗಿದುದರಿಂದ ಇಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದೆ.

ನಮ್ಮಲ್ಲಿ ಇತರರನ್ನು ಪ್ರಶ್ನಿಸುವ ಛಾಳಿ ಹಾಗು ಅದರಲ್ಲಿನ ಆಸಕ್ತಿ ಅತಿ ಹೆಚ್ಚೆ. ಅದಕ್ಕೆ ನಾನು ಹೊರತಲ್ಲ.ಮನುಷ್ಯ ಗಣವೆ ಹಾಗೆಯೆ ಏನೊ? ಇರಬಹುದು.ಇದರ ಹೊರತಾಗಿಯು ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳುವದನ್ನ ರೂಢಿ ಮಾಡಿಕೊಳ್ಳೊದು ಉತ್ತಮ. ಪ್ರತಿ ಸಂದರ್ಭದಲ್ಲು ಎದುರಾಗುವ ಸಮಸ್ಯೆಗಳಿಗೆ ನಮ್ಮೊಳಗಿನ ಪ್ರಶ್ನೆಗಳು ಉತ್ತರವಾಗಬಹುದು. ಕೆಲವೊಮ್ಮೆ ಪ್ರಶ್ನೆಗಳು ನಮ್ಮ ಹೊರತಾಗಿ ಹಾಕುವಂತೆ ನಮಗೆ ನಾವೆ ಏಕಪಕ್ಷೀಯವಾಗಿ ಹಾಕಿದಲ್ಲಿ ತಪ್ಪು ನಿರ್ಧಾರಕ್ಕೆ ಕಾರಣವಾಗಬಹುದು.ಅದ್ದರಿಂದ ನಮ್ಮ ಹೊರಗಾಗಲಿ ಒಳಗಾಗಲಿ ನಾವು ಮಾಡಿಕೊಳ್ಳುವ ಪ್ರಶ್ನೆಗಳು ನಿಕ್ಷಪಕ್ಷಪಾತವಾಗಿದ್ದರೆ ಅದು ವ್ಯಕ್ತಿತ್ವಕ್ಕೆ ಮೆರುಗನ್ನು ಕೊಡಬಲ್ಲುದು.ಜೀವನದ ಸುಂದರತೆಗೆ ಪಕ್ವತೆಗೆ ನಮ್ಮೊಳಗೆ ನಮಗಾಗಿ ಪ್ರಶ್ನೆಗಳು ಹುಟ್ಟುತ್ತಲೆ ಇರಬೇಕು ಪ್ರತಿಸಲ ಪ್ರತಿ ಕಾರ್ಯದ ಮುನ್ನ. ವ್ಯಕ್ತಿತ್ವಕ್ಕೊಂದು ಪಾಲೀಶ್ ಕೊಟ್ಟು ಹೊಳಪುಕೊಡಬಹುದಾದ ಪ್ರಶ್ನೆಗಳನ್ನು ತಿರಸ್ಕರಿಸುವದಾದರು ಯಾಕೆ?

Wednesday, March 14, 2012

ಬರಹಕ್ಕಾಗಿ ವಿಷಯವೆ ಸಿಗದಿದ್ದ ದಿನ..........

ಕೆಲವೊಮ್ಮೆ ಅಂದುಕೊಳ್ಳೊದು ಏನಾದರೂ ಬರಿಬೇಕು, ಅದಕ್ಕಾಗಿ ವಿಷಯಗಳ ತಡಕಾಟದಲ್ಲಿ ತೊಡೊಗೋದು, ಒಮ್ಮೊಮ್ಮೆ ಆ ವಿಷಯಗಳು ಕಣ್ಣೆದುರು ರಾಶಿ ರಾಶಿ ಕೆಲವೊಮ್ಮೆ ತನು ಮನಸ್ಸುಗಳನ್ನ ಆಕಾಶಕ್ಕೆ ಏಣಿಯಾಗಿಸುತ್ತಾ ಯೋಚಿಸಿದರು ಸಿಗುವ ವಿಷಯ ಬರೀಯ ಸೊನ್ನೆ. ವಿಷಯಗಳಿಲ್ಲ ಅಂತಲ್ಲ ಅದು ಗೋಚರಿಸದಿರುವದೆ ಒಂದು ವಿಷಯ,ಬರವಣಿಗೆಯೆಂಬುದು ಕಿರಿಡಾಕ್ಕಿ ತಕಧಿಮಿತ,ಸಿಕ್ಕಿದಲ್ಲಿ ಸಿಹಿ ಪಲ್ಯ ಸಿಗದಿದ್ದರೆ ಕೊರಗೊಜ್ಜು. 
ಬರೆಯಲೇನಿಲ್ಲ? ಕಣ್ಣ ಸುತ್ತ ಅಡ್ಡಾಡುವ ವಸ್ತುಗಳೆ ಬರಹಕ್ಕೆಸಾಕು, ಆದರೆ ಅದೆಲ್ಲವನ್ನು ಗ್ರಹಿಸಿ ಅಕ್ಷರಕ್ಕಿಳಿಸಲು ಒಂದಷ್ಟು ಪ್ರಶಾಂತತೆ ಮನದೊಪ್ಪಿಗೆ ಇರಬೇಕು ಅದಿಲ್ಲದಿರುವುದೆ ಈ ಗೊಂದಲಗಳು ಒಡಮೂಡಲು ಕಾರಣ. ಬಹುಶಃ ಇದು ಬರಹಗಾರನೆನೆಸಿಕೊಂಡ ಎಲ್ಲರ ಪಾಡು.ಬರಹದಲ್ಲಿ ಪಕ್ವತೆ ಪಡೆದಂತೆ ವಿಷಯ ಗ್ರಹಿಕಾ ಸಾಮರ್ಥ್ಯ ಬೆಳೆಯುತ್ತಾ ಸಾಗುತ್ತೆ ಬರೆಯುತ್ತಾ ಹೋದಂತೆ ತಮ್ಮ ಬರಹಗಳೆ ಹೊಸ ವಿಷಯ ಹುಟ್ಟಿಸುವಂತೆ ಮಾಡುತ್ತದೆ.ಅದುದರಿಂದ ನನ್ನ ಪ್ರಕಾರ ಬರಹಗಾರನಿಗೆ ಬೇಕಾದ ಮೂಲ ನಡವಳಿಕೆ ಅಂದರೆ ಬರೆಯುವದು ಮತ್ತು ಗ್ರಹಿಸುವದು ಆಗಿರುತ್ತದೆ.ಏನ ಬರೆಯಲಿ ಅನ್ನುತ್ತಾ ಪ್ರಶ್ನೆಗೆ ತೊಡಗಿದಾಗ ಕೆಲವೊಮ್ಮೆ ಏನೊಂದು ಬರೆಯಲು ಆಗದೆಯೆ ಇರಬಹುದು ಅಂದರೆ ವಿಷಯಗಳು ಖಾಲಿಯಾದವು ಅಂತಲ್ಲ, ಕೆಲ ವಿಚಾರಗಳಲ್ಲಿನ ಪಕ್ವತೆಯ ಕೊರತೆ,ಮನಸ್ಸಿನ ಗೊಂದಲಗಳು, ಸರಿಯಾದ ಸಂದರ್ಭ ದೊರೆಯದೆ ಇರುವದರಿಂದ ಒಮ್ಮೊಮ್ಮೆ ಹಿಡಿದ ಲೇಖನಿ ಮೇಜು ಕುಟ್ಟಬಹುದು.ಅದರೆ ಅದು ಕೆಲ ಸಮಯಗಳು, ಕೆಲ ದಿನಗಳು ಅಷ್ಟೆ.ಮಗದೊಂದು ದಿನ ನಮ್ಮ ಬರವಣಿಗೆ ನಮಗೊಲಿಯೋದು ನಿಶ್ಚಿತ.ಹೀಗಿರಬೇಕಾದರೆ ಕೊರಗಬೇಕಾದ್ದಿಲ್ಲ,ಏನು ಬರೆಯದಿದ್ದರು ಸರಿ ಬರಹದ ತುಡಿತ ಹಾಗೆ ಉಳಿಸಿಕೊಂಡರೆ ಸಾಕಷ್ಟೆ. ಕೆಲವೊಮ್ಮೆ ಹೀಗಾದಾವಾಗ ಬರವಣಿಗೆಯಿಂದ ಸಣ್ಣದೊಂದು ವಿಶ್ರಾಂತಿ ಪಡೆದು ಮರಳುವದು ಅದ್ಭುತ ಔಷದಿಯಾಗಿ ಪರಿಣಾಮಕಾರಿಯಾಗಬಲ್ಲುದು. 

ಬರವಣಿಗೆಯೆಂಬುದು ಸಮಾಜದಲ್ಲಿ ನಾವು ಕಂಡ, ಅನುಭವಿಸಿದ, ಕೇಳಿದ ವಿಷಯಗಳ ಒಟ್ಟು ಸಾರ, ಅದು ಬರಹಗಾರನ ಗ್ರಹಿಕೆ ಮತ್ತು ಅನುಭವಗಳ ಮೇಲೆ ನಿಂತಿರೋದು.ಕೆಲವೊಂದು ವಿಚಾರಗಳನ್ನು ಕಂಡದ್ದನ್ನು, ನಾವು ಯೋಚಿಸುವಂತದ್ದನ್ನು ಇತರರಿಗೆ ಹೇಳುವಲ್ಲಿಯವರೆಗೆ ಸಮಾಧಾನ ಸಿಗಲಾರದು, ಈ ಸಮಾಧಾನ ಕಂಡುಕೊಳ್ಳುವ ಪರಿಯೆ ಬರಹ.ಕೆಲವೊಮ್ಮೆ ಬರವಣಿಗೆಯಲ್ಲಿ ಆಸಕ್ತಿಯಿದ್ದು ನಾವು ದುಡಿಯುವ ಕ್ಷೇತ್ರವೆ ಬೇರೆಯದಾದಾವಾಗ ಬರಹ ಅನ್ನುವದು ಅವುಗಳಿಂದೆಲ್ಲ ಹೊರಬಂದು ನಮ್ಮನ್ನು ನಾವು ಚೈತನ್ನಿಸುವ ವಿಧಾನವು ಆಗಿರಬಹುದು.ಬರವಣಿಗೆ ಅನ್ನುವದು ಚೇತೊಹಾರಿಯಾದದ್ದು,ಅದು ಮನಕ್ಕೆ ಸಮಾಧಾನ ತರುವಂತದ್ದು,ಅದಕ್ಕಾಗಿ ಬರಹಗಾರನೆನೆಸಿಕೊಂಡವ ಬರೆಯಬೇಕು.ಬರಹ ಅನ್ನುವದನ್ನು ಕಸುಬಾಗಿ ಸ್ವೀಕರಿಸುವುದಾದರೆ ತಪ್ಪಿಲ್ಲ, ಆದರೆ ಕಸುಬಿಗಾಗಿ ಬರಹದ ಮಾರಾಟಕ್ಕಾಗಿ ಬರೆಯಬಾರದು,ಬರಹ ಮನಸಂತೋಷಕ್ಕಾಗಿ ಬರೆಯುವದು ಬರಹಗಾರನ ಆದ್ಯ ಕರ್ತವ್ಯ, ಈ ನೀತಿ ನಮ್ಮಲ್ಲಿನ ಬರಹಗಾರನನ್ನ ಸಾಣೆ ಹಿಡಿದು ಮತ್ತಷ್ಟು ಹೊಳೆಯುವಂತೆ ಮಾಡುತ್ತದೆ.

ಮೊದಲಿಗೆ ಬರೆಯಬೇಕು ಅಂದುಕೊಳ್ಳುವವರು ವಿಷಯದ ಬಗ್ಗೆ ಬರೆದರೆ ಸಾಕಷ್ಟೆ , ಅದು ಹೀಗೆ ಇರಬೇಕು, ಹಾಗೆ ಇರಬೇಕು, ಅವರು ಬರೆದಂತಿರಬೇಕು ,ಇವರು ಬರೆದಂತಿರಬೇಕು ಅನ್ನೊ ಹೋಲಿಕೆ ಮತ್ತು ಹೋಲಿಸಿಕೊಂಡು ಬರೆಯೋದು ಸರ್ವಥಾ ಸಲ್ಲ. ತಮಗನಿಸಿದಂತೆ ಬರೆಯಬೇಕಾದ್ದು ಧರ್ಮ,ಆಗಲೆ ಆ ಬರಹಗಾರನಿಗೆ ತನ್ನದೆ ಶೈಲಿ ಮತ್ತು ತನ್ನದೆ ಆದ ಗ್ರಹಿಕೆಗಳು ಒಲಿಯೋದು.ಇದರ ಜೊತೆ ಓದುವಿಕೆಯ ಕ್ರಿಯೆಯೂ ರೂಢಿಯಾಗಿರೋದು ಮುಖ್ಯ, ಹೀಗಾದಾವಾಗ ಮಾತ್ರ ಬರವಣಿಗೆ ಸುಲಭವಾಗಿ ದಕ್ಕೋದು ಅನ್ನುವದು ನನ್ನ ಅಭಿಪ್ರಾಯ.ಬರವಣಿಗೆ ನಮ್ಮೊಳಗಿನ ಶೋಧನೆಗಳ ಪ್ರಸ್ತುತಪಡಿಸುವಿಕೆ ಹಾಗು ಕಲೆ ಅಷ್ಟೆ.ಬರವಣಿಗೆ ಒಲಿಯೋದು ಅಂದರೆ ನಾವು ಬರೆದ ಬರಹಗಳು ನಮಗೆ ಮೆಚ್ಚುಗೆಯಾಗುವದು ಎಂದರ್ಥ.ನಮ್ಮ ಬರಹಗಳು ನಮಗೆ ಒಪ್ಪಿಗೆಯಾದ ನಂತರವಷ್ಟೆ ಕಥೆ, ಕಾದಂಬರಿ, ಕವಿತೆ ಇತ್ಯಾದಿ ಬರಹದ ಪ್ರಕಾರಕ್ಕೆ ಒಳಪಡಿಸೋದು ಅತ್ಯಂತ ಸೂಕ್ತ.ತನಗೆ ಮೆಚ್ಚುಗೆಯಾದ ಬರಹಗಳು ಇತರರೀಗೆ ಮೆಚ್ಚುಗೆಯಾಗಲುಬಹುದು ಆಗದಿರಲುಬಹುದು ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ್ದಿಲ್ಲ.ಹೆಚ್ಚಿನ ಸಂದರ್ಭದಲ್ಲಿ ಬರಹಗಾರನಿಗೆ ಮೆಚ್ಚುಗೆಯಾದ ಬರಹಗಳು ಇತರರೀಗು ಮೆಚ್ಚಗೆಯಾಗಿರುವಂತದ್ದೆ ಆಗಿರುತ್ತದೆ. ಬರವಣಿಗೆ ಬರಹಗಾರನಿಗೆ ಖುಷಿ ಕೊಡೋದು ಮುಖ್ಯ ಅಷ್ಟೆ.

ಬೇರೆಲ್ಲ ಕ್ರಿಯೆಯ ಹಾಗೆ ಬರವಣಿಗೆ ಅನ್ನೊದು ಒಂದು ಕ್ರಿಯೆಯಷ್ಟೆ, ಅದರ ಮೇಲಿರುವ ನಮ್ಮ ಅಸ್ಥೆಗಳು, ಅಭಿರುಚಿಯ ಪ್ರಮಾಣಗಳು ನಮ್ಮನ್ನು ಬರಹಗಾರರ ಬೇರೆ ಬೇರೆ ಅಂತಸ್ತುಗಳಲ್ಲಿ ನಿಲ್ಲಿಸೋದು,ಬರವಣಿಗೆ ಬಗ್ಗೆನೆ ಮಾತಾಡುವಷ್ಟು ದೊಡ್ಡ ಬರಹಗಾರನೆ ನಾನು? ಖಂಡಿತ ಅಲ್ಲ.ಬರವಣಿಗೆ ಬಗ್ಗೆ ನಾನಿಷ್ಟು ಹೇಳಬಹುದು ಅನ್ನುವದು ನನಗು ಗೊತ್ತಿರಲಿಲ್ಲ. ಹೇಳಿದ್ದೇನೆ ಎಂಥಾದರೆ ಅದರ ಕ್ರೆಡೀಟ್ ನನ್ನ ಬರವಣಿಗೆ ಹುಚ್ಚಿಗೆ ಸೇರಬೇಕು, ಆ ಬರಹಗಳ ಅನುಭವವೆ ಇಷ್ಟೆಲ್ಲಾ ಹೇಳಿಸಿರೋದು ಎಂದು ಅಂದುಕೊಳ್ಳುತ್ತೇನೆ.ಬರವಣಿಗೆಯ ಎಲ್ಲಾ ಸಂದರ್ಭಗಳಲ್ಲಿ ಅದನ್ನ ಮುಗಿಸಿದಾಗ ಸಿಗುವ ಖುಷಿಯನ್ನು ಯಾವಾಗಲು ಸವಿಯಲು ಇಚ್ಚಿಸುತ್ತೇನೆ ಎಂಬುದಷ್ಟೆ ಸತ್ಯ.ಇವತ್ತು ನನಗು ಕೂಡ ಹಾಗೆ ಬರೆಯಲು ಏನೊಂದು ವಿಷಯಗಳೆ ಸಿಗದಿದ್ದ ದಿನ,ಅದಕ್ಕಾಗಿ ಅದೆ ವಿಷಯವನ್ನೆ ಇಟ್ಟುಕೊಂಡು ಬರೆದುದಕ್ಕೆ ಇಷ್ಟೆಲ್ಲಾ ವಿಚಾರ ಹೇಳುವಂತಾಯಿತು ಅಷ್ಟೆ,ಇನ್ನೂ ಬರೆಯಬೇಕಿತ್ತು ಅನ್ನಿಸುತ್ತದೆ,ಈ ತರ ಓದುಗರೂ ಅಂದುಕೊಂಡರೆ ಬರಹಕ್ಕೊಂದು ಸಾರ್ಥಕತೆ.

Tuesday, March 13, 2012

ಕಾಕ್ ಟೈಲ್-ವಿವಾಹೇತರ ಸಂಬಂಧಗಳಿಗೊಂದು ಪಾಠ

ವೃತ್ತಿ ಸಹಜವಾಗೆ ಮುಡಿಗೇರಿಸಿದ ಅಹಂನೊಂದಿಗೆ ಮನೆಯಲ್ಲಿರುವ ತನ್ನ ಸುಂದರ ಸಂಸಾರವನ್ನು ಮರೆತು ತನ್ನ ಆಫೀಸ್ ಅಸಿಸ್ಟೆಂಟ್ ಜೊತೆ ಲಲ್ಲೆಗರೆವ ವಿವಾಹೇತರ ಅನಧಿಕೃತ ಸಂಬಂಧವನ್ನು ಹೊಂದಿ ತನ್ನವರೆ ತಮಗೆ ಪಾಠ ಕಲಿಸುವವರೆಗೆ ಇದೆ ಚಪಲದಲ್ಲಿ ಮುಂದುವರಿದು ಕಡೆಗೊಂದು ದಿನ ಪಶ್ಚಾತಾಪದ ಬೇಗುದಿಯನ್ನು ಸೆಳೆದಪ್ಪುವ ಕಥಾ ಹಂದರವುಳ್ಳ 2010 ರಲ್ಲಿ ತೆರೆ ಕಂಡ ಕಾಕ್ ಟೈಲ್ ಮಳಿಯಾಳಿ ಚಿತ್ರವನ್ನ ಕೆಲ ದಿನಗಳ ಹಿಂದೆ ಮತ್ತೆ ನೋಡಿದೆ.ಯಾಕೊ ಈ ಬಗ್ಗೆ ಬರೆಯಬೇಕೆಂದೆನಿಸಿತು.ಮಳೆಯಾಳಿ ಚಿತ್ರಗಳೆ ಹಾಗೆ ಭಾವನೆಗಳನ್ನು ಹಿಡಿಯಾಗಿಸಿ ಹೃದಯಕ್ಕೆ ಲಗ್ಗೆ ಇಡುತ್ತದೆ. ಕಾಕ್ ಟೈಲ್ ಚಿತ್ರವೂ ಇದಕ್ಕೆ ಹೊರತಾಗಿಲ್ಲ. ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಅನೂಪ್ ಮೆನನ್,ಸಮೃತಾ ಸುನೀಲ್,ಜಯಸೂರ್ಯರ ಮನೋಜ್ಙ ಅಭಿನಯದಿಂದ ಕೂಡಿದ ಈ ಚಿತ್ರ ಕೊನೆವರೆಗು ಸಸ್ಪೆನ್ಸ್ ಜೊತೆ ಪ್ರೇಕ್ಷಕನನ್ನ ಹಿಡಿದಿಟ್ಟುಕೊಂಡೆ ಸಾಗುತ್ತೆ.ಅರುಣ್ ಕುಮಾರ್ ಗಟ್ಟಿ ನಿರ್ದೇಶನ ಪ್ರದೀಪ್ ನಾಯರ್ ರ ಚೆಂದದ ಕ್ಯಾಮಾರ ಕೈಚಳಕ ಕೂಡ ಚಿತ್ರದ ಮೆರುಗನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. 2007 ರಲ್ಲಿ ತೆರೆ ಕಂಡ ಕೆನೆಡಿಯನ್ ಚಿತ್ರ "ಬಟರ್ ಪ್ಲೈ ಆಫ್ ದ ವೀಲ್ "ಅನ್ನು ಇದು ಹೋಲುವದು ಸತ್ಯ.

ಚಿತ್ರದ ನಾಯಕಿ ಪಾರ್ವತಿ ಶಾಪಿಂಗ್ ಮಾಲ್ ನಲ್ಲಿ ತನ್ನ ಮಗು ಅಮ್ಮು ಜೊತೆ ಶಾಪಿಂಗ್ ಜೊತೆ ದೂರವಾಣಿ ಸಂಭಾಷಣೆ ನಡೆಸುತ್ತಿರುವಾಗ ಮಗುವನ್ನು ಮಿಸ್ ಮಾಡಿಕೊಳ್ಳುತ್ತಾಳೆ, ಕ್ಷಣಕ್ಕೆ ಗಾಭರಿಗೊಳ್ಳೊ ತಾಯಿ ತನ್ನ ಮಗು ಯಾರೊ ಕೊಡಿಸಿದ ಗೊಂಬೆ ಜೊತೆ ಪತ್ತೆಯಾದಾವಾಗ ನಿಟ್ಟುಸಿರ ಬಿಡುತ್ತಾಳೆ, ಈ ಮೂಲಕ ಪ್ರಾರಂಭ ಪಡೆಯುವ ಚಿತ್ರ ಆರಂಭದಲ್ಲೆ ಒಂದು ಆತಂಕವನ್ನ ಪ್ರೇಕ್ಷಕರಲ್ಲಿ ಹುಟ್ಟುಹಾಕುತ್ತದೆ.ಗೊಂಬೆ ಕೊಡಿಸಿದ್ದು ಯಾರು? ಅನ್ನೊ ಪ್ರಶ್ನೆಯೊಂದು ಹುಟ್ಟು ಪಡೆದಿರುತ್ತೆ. ಗಂಡ ರವಿಗಾಗಿ ಮನೆಯಲ್ಲೆ ಕಾಯುವ ಪಾರ್ವತಿ ಪದೆ ಪದೆ ಗಂಡನ ಮೊಬೈಲಿಗೆ ರಿಂಗಣಿಸಿದರೂ ದೊರೆಯುವ ನಾಟ್ ರೀಚೆಬಲ್ ಉತ್ತರ, ಪಾರ್ವತಿಯ ಹುಟ್ಟು ಹಬ್ಬದ ದಿನ ಅಪರಾತ್ರಿಯಲ್ಲಿ ಕೇಕ್ ಒಂದಿಗೆ ಆಗಮಿಸೊ ಗಂಡ ಈ ತರ ಮಾಮೂಲಿಯಾಗಿ ಕಥೆ ಮುಂದುವರಿಯುತ್ತೆ.ಹೀಗಿರಲೊಂದು ದಿನ ಪಾರ್ವತಿ ತನ್ನ ಗೆಳೆತಿಯ ಬರ್ತಡೆ ಪಾರ್ಟಿಗೆ ಹೊರಟರೆ ನನಗೂ ಆ ದಿನ ಬಾಸ್ ಮೀಟಿಂಗ್ ಕರೆದಿದ್ದಾರೆ ಅಂಥ ರವಿ ಅನ್ನಲು ಮಗುವನ್ನು ನೋಡಿಕೊಳ್ಳಲು ಆಯಾ ಒಬ್ಬಳನ್ನ ಆ ದಿನದ ಮಟ್ಟಿಗೆ ನೇಮಿಸಿಕೊಂಡು ಒಂದೆ ಕಾರಲ್ಲಿ ಹೊರಡುತ್ತಾರೆ ಅಸಲಿಗೆ ರವಿ ತನ್ನ ವಿವಾಹೇತರ ಪ್ರೇಯಸಿ ಜೊತೆ ಕಾಲ ಕಳೆಯಲು ಹೊರಟಿದ್ದೆಂಬುದು ಪ್ರೇಕ್ಷಕರಿಗೆ ಚಿತ್ರದ ಕೊನೆವರೆಗೆ ತಿಳಿಯಲಾರದು.ಹೀಗೆ ಹೊರಟ ಗಂಡ ಹೆಂಡತಿ ಪಯಣದಲ್ಲೆ ಚಿತ್ರವೆಲ್ಲ ಅಡಗಿರುತ್ತೆ.ಈ ಪಯಣದ ಕೊನೆಯೆ ಚಿತ್ರದ ಕೊನೆಯಾಗುತ್ತೆ. ಹಾಗಾದರೆ ಈ ಪಯಣದುದ್ದ ನಡಿಯುವದು ಏನು ಎಂಬ ಕುತೂಹಲ ನಿಮ್ಮದಾಗಿದ್ದರೆ ಮುಂದೆ ಓದಿ.


ಕಾರು ಕೆಟ್ಟಿದೆಯೆಂದು ಇವರ ಕಾರಿಗೆ ಡ್ರಾಪ್ ಕೇಳೊ ವೆಂಕಟೇಶ್ ಪಾತ್ರ ಕಥೆಯೊಂದಿಗೆ ಸೇರೊದು ಈ ಪಯಣದ ಆರಂಭದಲ್ಲೆ.ಪ್ರಾರಂಭದಲ್ಲಿ ಸೌಮ್ಯವಾಗಿರುವ ಈ ಪಾತ್ರ ಸಲ್ಪದರಲ್ಲೆ ರೂಢ್ ಆಗಿ ವಿಶಿಷ್ಟವಾಗಿ ಕಾಣುತ್ತೆ.ತಲೆಗೆ ಪಿಸ್ತೂಲು ಹಿಡಿದು ನಿಮ್ಮ ಮಗುವನ್ನು ನೋಡಿಕೊಳ್ಳೊ ಆಯಾ ನಾನು ಕಳಿಸಿದವಳೆಂದು ಮಗುವಿನ ಪ್ರಾಣ ಬೇಕಾದಲ್ಲಿ ನಾ ಹೇಳುವಂತೆ ಕೇಳಿಯೆಂಬ ಪಾತ್ರ ದಂಪತಿ ಸಂಪಾದಿಸಿಟ್ಟ ಪೂರ್ಣ ಹಣವನ್ನು ಪಡೆದು ಬೆಂಕಿ ಹಚ್ಚಿ ನದಿಗೆ ಎಸೆಯುತ್ತೆ.ಊಟ ಮಾಡಲು ತನ್ನ ಲಕ್ಷ ರೂಪಾಯಿ ವಾಚನ್ನು ಬರಿಯ 6 ಸಾವಿರಕ್ಕೆ ಮಾರಿ ಹೋಟೆಲಿಗೆ ದಂಪತಿ ಬಂದಾವಾಗ 2ವರೆ ಸಾವಿರ ರುಪಾಯಿಯ ಆಹಾರವನ್ನು ಪಾರ್ಸೇಲ್ ಮಾಡಿ ಬಿಲ್ ತೋರಿಸುತ್ತೆ ಈ ಪಾತ್ರ. ಇದಷ್ಟನ್ನೂ ಎತ್ತಿಕೊಂಡು ವೆಂಕಟೇಶ್ ಜೊತೆ ಹೊರಟ ದಂಪತಿಗಳು ಒಣಿ ಮಧ್ಯೆ ಅದಷ್ಟು ಆಹಾರವನ್ನು ಬಡ ಮಕ್ಕಳಿಗೆ ಹಂಚಿದ ಪಾತ್ರದ ಪರಿಯನ್ನ ಕಂಡ ದಂಪತಿಗಳು ಮರು ಮಾತಿಲ್ಲದೆ ಕಾರು ಹತ್ತಿ ಕೂರೂವ ಈ ದೃಶ್ಯಗಳಲ್ಲಿ ಬಡತನದ ವಾಸ್ತವಗಳು, ಶ್ರೀಮಂತಿಕೆಯ ಮದವನ್ನು ಚಿಗುಟುವಂತೆ ವೆಂಕಟೇಶ್ ಪಾತ್ರದಲ್ಲಿ ರೋಷ ನಮಗೆ ಕಣ್ಣಿಗೆ ರಾಚಿದಲ್ಲಿ ಅದರ ಶ್ರೇಯ ನಿರ್ದೇಶಕ ಅರುಣ್ ಕುಮಾರ್ ಮತ್ತು ನಟ ಜಯಸೂರ್ಯರಿಗೆ ಸೇರಬೇಕು. 


ಕಾಸು ಕೊಟ್ಟು ಸೂಳೆಯನ್ನು ನಿನ್ನದಾಗಿಸುಕೊ ಎಂದು ಪಾತ್ರ ಎಂದಾಗ ಅಸಹ್ಯ ಪಡುವ ರವಿ ಕೀಳು ಮಟ್ಟದ ಕೆಲಸವೆಂದು ಪರಿಗಣಿಸಿ ತನ್ನ ಮಗುವ ಪ್ರಾಣವ ನೆನೆಸಿ ಪಾತ್ರದ ಅಣತಿಯಂತೆ ಸೂಳೆಯನ್ನು ತನ್ನ ಹೆಂಡತಿಯ ಮುಂದೆನೆ ಒಲಿಸಿ ಕಾರು ಹತ್ತಿಸುತ್ತಾನೆ, ತನ್ನ ಶ್ರೀಮಂತಿಕೆಯ ಮದದಲ್ಲಿನ ದಿನಗಳಲ್ಲಿ ತನ್ನ ಅಸಿಸ್ಟೆಂಟ್ ಜೊತೆ ವಿವಾಹಿತಳು ಎಂದು ಗೊತ್ತಿದ್ದು ಅನಧಿಕೃತ ಸಂಬಂಧ ಹೊಂದಿರಬೇಕಾದರು ರವಿ ಈ ಪರಿ ಅಸಹ್ಯಿಸಿಕೊಳ್ಳೊದಿಲ್ಲ,ಬಡತನದ ಲೇಪದ ಜೊತೆ ಸಭ್ಯತನವು ಇರುತ್ತದೆ ಎಂಬುದನ್ನು ಇಲ್ಲಿ ನಿರ್ದೇಶಕ ಹೇಳ ಹೊರಡುತ್ತಾನಾ? ಪ್ರೇಕ್ಷಕರೀಗೆ ಈ ಯೋಚನೆಯನ್ನು ಬಿಟ್ಟು ಚಿತ್ರ ಮುಂದೆ ಸಾಗುತ್ತೆ.ಮುಂದಿನ ಭಾಗದಲ್ಲಿ ವೆಂಕಟೇಶ್ ತನ್ನ ಹೆಂಡತಿಯ ಮೈಗೆ ಕೈ ಹಾಕಬೇಕಾದರೆ ರೋಷ ಉಕ್ಕಿ ಅವನೆದೆಗೆ ಒದೆಯೊ ನಾಯಕ ತಾನು ಈ ರೀತಿ ಕೃತ್ಯವನ್ನ ಕದ್ದು ಮಾಡುತಿದ್ದೆ ಅನ್ನೊದನ್ನ ಕೂಡ ನೆನಪಿಸಿಕೊಳ್ಳೊದಿಲ್ಲ,ಇಲ್ಲೆಲ್ಲು ನಿರ್ದೇಶಕ ಅಸಹ್ಯಿಸುವಂತೆ ನಿರ್ದೇಶಿಸಿಲ್ಲ, ಬದಲಾಗಿ ಸಭ್ಯತೆ ಮೆರೆದದ್ದೂ ನಿರ್ದೇಶಕನ ಜಾಣ್ಮೆಗೆ ಹಿಡಿದ ಕೈಗನ್ನಡಿ. ಪಶ್ಚಾತಾಪದೊಂದಿಗೆ ತನ್ನೆಲ್ಲಾ ತಪ್ಪು ನೆನಪಾಗುತ್ತೆ ನಾಯಕನಿಗೆ ಅದ್ಯಾವಾಗ ಎಂದರೆ ಆ ಪಯಣ ಮನೆಯೊಂದರ ಮುಂದೆ ನಿಂತಾಗ, ಕೈಯಲ್ಲಿ ಬಂದೂಕ ಕೊಟ್ಟು ಮನೆಯಲ್ಲಿದ್ದವಳನ್ನು ನಿನ್ನ ಮಗುವಿನ ಪ್ರಾಣಕ್ಕಾಗಿ ಕೊಲ್ಲು ಎಂದು ಕಳಿಸಿ ಕೊಟ್ಟಾಗ. ಆ ಮನೆ ಬೇರೆ ಯಾರದ್ದು ಆಗಿರದೆ ನಾಯಕ ರವಿಯ ವಿವಾಹೇತರ ಪ್ರೇಯಸಿ ದೇವಿಯದ್ದು ಆಗಿರುತ್ತದೆ,ವೆಂಕಟೇಶ್ ಕೊಲ್ಲು ಅಂದಿದ್ದು ಕೂಡ ಅವಳನ್ನೆ.ನಾಯಕ ರವಿಗೆ ಅಚ್ಚರಿ ಕೊಡೊ ಮತ್ತೊಂದು ವಿಷಯ ಏನೆಂದರೆ ಆ ಮನೆಯಲ್ಲಿ ಕಂಡ ಪೋಟೊ, ಅದು ತನ್ನ ಪ್ರೇಯಸಿ ಗಂಡನೊಂದಿಗೆ ಇರುವ ಪೋಟೊ,ಆಕೆಯ ಗಂಡನಾದ ಆ ಪೋಟೊದಲ್ಲಿರುವ ವ್ಯಕ್ತಿ ಬೇರಾರು ಆಗಿರದೆ ಇಷ್ಟು ದಿನ ಕಾಡಿದ ಪಾತ್ರ ವೆಂಕಟೇಶ್ ಆಗಿದ್ದ.ಇಷ್ಟಾಗಿಯು ಕೂಡ ತನ್ನ ಮಗುವಿಗಾಗಿ ಪ್ರೇಯಸಿಯ ಪ್ರಾಣ ತೆಗೆಯಲು ಪಿಸ್ತೂಲ ಟ್ರಿಗರ್ ಅದುಮುವ ನಾಯಕ ಪಿಸ್ತೂಲಿನಲ್ಲಿ ಗುಂಡೆ ಇರದ್ದನ್ನು ನೋಡಿ ಕುಸಿಯುತ್ತಾನೆ. ಮಾಂಸ ಮಾಂಸಗಳ ತುಮುಲಗಳಷ್ಟೆ ನಮ್ಮೊಳಗಿದ್ದಿದ್ದೂ ಅನ್ನೋದು ಇಬ್ಬರೀಗೂ ಅರಿವಾಗಿರುತ್ತದೆ. ಪ್ರೀತಿಸುವ ಗಂಡನ ಮುಖ ನೋಡಲಾಗದೆ ದೇವಿ ಕತ್ತೆತ್ತದೆ ಭೋರ್ಗರೆಯುತ್ತಾಳೆ ಇತ್ತ ರವಿ ಪಶ್ಚಾತಾಪದ ಬೇಗೆಯಲ್ಲಿ ಬೇಯುತ್ತ ತನ್ನ ಮಗಳಿಗೆ ಏನೇನೂ ಆಗಿಲ್ಲ ತನ್ನ ಮನೆಯಲ್ಲೆ ಆರಾಮವಾಗಿದ್ದಾಳೆ ಎಂಬುದನ್ನ ತಿಳಿದು ಮರಳುತ್ತಾನೆ.ತನ್ನ ಹೆಂಡತಿ ನನಗೆ ಬುದ್ದಿ ಕಲಿಸಲು ವೆಂಕಟೇಶ್ ಪಾತ್ರ ತನ್ನ ಹೆಂಡತಿಗೆ ಬುದ್ದಿ ಕಲಿಸಲು ಪರಸ್ಪರ ಕೈ ಮಿಲಾಯಿಸಿ ನಾಟಕವಾಡಿದ್ದು ಹಾಗು ತನ್ನ ಹಣಕ್ಕೆ ಬೆಂಕಿ ಹಚ್ಚಿ ಹೊಳೆಗೆಸೆದಿದ್ದು ಇತ್ಯಾದಿ ಬರಿಯ ನಾಟಕವಷ್ಟೆ ಅನ್ನೊದನ್ನ ತಿಳಿದು ಪಶ್ಚಾತಾಪದ ಬೇಗೆಯಿಂದ ತನಗೆ ಗುರುವಾದ ಹೆಂಡತಿ ಹಾಗು ವೆಂಕಟೇಶನನ್ನು ರವಿ ಮೆಚ್ಚುತ್ತಾನೆ ಹಾಗು ಸರಿ ದಾರಿಗೆ ಮರಳುತ್ತಾನೆ. ಹಾಗಾದರೆ ಚಿತ್ರದ ನಾಯಕಿ ಹಾಗು ವೆಂಕಟೇಶ್ ಪರಿಚಯವಾಗಿದ್ದೆಲ್ಲಿ ಅನ್ನೊ ಪ್ರಶ್ನೆಗೆ ಚಿತ್ರದ ಆರಂಭದಲ್ಲಿ ಹುಟ್ಟಿದ ಪ್ರಶ್ನೆ ಮಗುವಿಗೆ ಗೊಂಬೆ ಕೊಡಿಸಿದ್ದು ಯಾರು? ಅನ್ನೊ ಪ್ರಶ್ನೆಯ ಜೊತೆಗೆ ಉತ್ತರಿಸುತ್ತದೆ. 


ಚಿತ್ರದ ಕೊನೆಗೆ ಆಸ್ಪತ್ರೆಗೆ ದೇಣಿಗೆ ನೀಡೊ ರವಿ-ಪಾರ್ವತಿ ದಂಪತಿ,ಅದೆ ಆಸ್ಪತ್ರೆಯ ಮಂಚವೊಂದರ ಮೇಲೆ ಸುಸೈಡ್ ಪ್ರಯತ್ನ ಪಟ್ಟು ಜೀವಂತ ಹೆಣವಾಗಿ ಮಲಗಿರುವ ದೇವಿ ಮತ್ತವಳ ಆರೈಕೆಯಲ್ಲಿ ತೊಡಗಿರುವ ಆತಳ ಪತಿ ವೆಂಕಟೇಶ್ ನನ್ನು ನಿರ್ದೇಶಕ ತೋರಿಸೊ ರೀತಿ ನಮ್ಮ ಕರುಳ ಹಿಂಡುವುದಂತು ಸತ್ಯ.ಸ್ಪಷ್ಟವಾದ ಸಮಾಜಮುಖಿ ಸಂದೇಶ ಸಾರುವ ಚಿತ್ರ ನೋಡಿ ಮುಗಿಸಿದಾಗ ನನಗೆ ಕಂಡ ಪಾತ್ರಗಳೊಳ ದ್ವಂದ್ವ ಇಷ್ಟೆ ವಿಲನ್ ಅನ್ಕೊಂಡ ವೆಂಕಟೇಶ್ ಪಾತ್ರ ಚಿತ್ರದ ನಾಯಕನೊ?ಎಂದು.ಕೆಲವೆ ಸೀಮಿತ ಪಾತ್ರದಲ್ಲಿ ಕಟ್ಟಿಕೊಟ್ಟ ಕಾಕ್ ಟೈಲ್ ಚಿತ್ರ ವಿವಾಹೇತರ ಸಂಬಂಧಗಳಿಗೆ ಪಾಠದಂತೆ ಕಂಡರೆ ತಪ್ಪಿಲ್ಲ, ಸಿಕ್ಕಿದಲ್ಲಿ ಈ ಚಿತ್ರವನ್ನೊಮ್ಮೆ ನೋಡಿ.ನಿಮ್ಮ ಮುಂದೆ ಒಂದು ಚಿತ್ರವನ್ನು ಕಟ್ಟಿಕೊಡಲು ಎಷ್ಟು ಸರಕುಗಳು ಬೇಕೊ ಅದಷ್ಟನ್ನೆ ಬಳಸಿರುತ್ತೇನೆ, ಇದರ ಹೊರತಾಗಿಯೂ ಇನ್ನಷ್ಟು ವಿಷಯಗಳೊಂದಿಗೆ ಭಾಷೆಯ ಯಾವ ಹಂಬುಗಳೂ ಇಲ್ಲದೆ ಈ ಚಿತ್ರ ನಿಮ್ಮದಾಗಬಲ್ಲದು, ಒಂದೊಳ್ಳೆ ಚಿತ್ರ ನೋಡಿದ ಖುಷಿ ನಿಮ್ಮದು ಆಗಲಿ.










Monday, March 12, 2012

ಬರಿದೆ ವೈಧವ್ಯ

ಗಡಿಯ ಕಾಯುತಿದ್ದ ಗಂಡ
ಯುದ್ಧ ಮುಗಿದ ಹಲವು ವರುಷ
ಮರಳಿ ಬರದೆ ಪತ್ತೆ ಕಳೆಯಲೂ,
ಕಾಯೊ ಪತ್ನಿಯೆಂಬ ಜೀವವನ್ನ
ಮಂದಿ ತಮ್ಮ ಸಂಪ್ರದಾಯದೊಳಗೆ ತರಿಸಿ
ತಿಲಕ ಅಳಿಸಿ, ಕೈಯ ಬಡಿಸಿ,ಬಿಳಿಯ ಸೀರೆಯುಡಿಸಿ
ಮಂದಿ ತಮ್ಮ ವೈಧವ್ಯದ ಪಟ್ಟಿ ತಿದ್ದಿ ತೀಡಿ
ಬರಿದೆ ಇವಳ ಹೆಸರು ನಮೂದಿಸಿ ಪಟ್ಟ ಕೊಟ್ಟರು

ಕಳಚಿ ಬಿದ್ದ ನಗುವನರಸಿ
ದಾರಿ ಅರಸಿ ಹೊರಟ ಇವಳ ಪಯಣ
ಮಂದಿ ಕುಹಕದಲ್ಲಿ ನೊಂದು ಬೆಂದು
ಕಣ್ಣು ಸುರಿಸೊ ನೀರ ವರೆಸಿಕೊಂಡು
ಹೆಜ್ಜೆ ತಪ್ಪಿ ಆಸರೆಯ ಆಯವೂ ತಪ್ಪಿ
ಬೇಗುದಿಯೊಳಗೆ ಧರೆಗುರುಳಿ
ಬಸವಳಿದು ಗರಬಡಿದು-ಕುಸಿದು ಕೂರುತಿದ್ದಳು

ಸಮಾಜದ ಗೌರವ ಆದರಗಳು
ಬತ್ತಿ ಮೂಲೆ ಸೇರುತಿರಲು
ಮಂದಿ ಕಣ್ಣೂ ಬೀಳುತಿತ್ತು
ಭೋಗಕ್ಕಿರುವ ಹೆಣ್ಣು ಎಂದು
ಅದಕ್ಕಾಗಿ ಕೊಟ್ಟಂಗಿತ್ತು
ದುರುಳ ವಿಧವೆ ಪಟ್ಟ.
ವ್ಯಭಿಚಾರಿಣಿ ಎಂಭವರೆಗೆ
ನಾಲಿಗೆಯ ಹರಿಯಬಿಟ್ಟ ಮಂದಿ
ವಿಕೃತ ಖುಷಿಯ ಅನುಭೂತಿಯೊಡೆ
ಕೊಂಕು ಮಾತನಿವಳ ಮುಂದಿಟ್ಟು- ಮೊಟಕುತಿದ್ದರು

ಬೆಳಕು ತುಂಬಿದೊಂದು ದಿನ
ಒಂಟಿ ಕಾಲ ನಡಿಗೆಯಲ್ಲಿ
ಕೃಶವಾದ ಒಂದು ಜೀವ
ವಿಧವೆಯನ್ನ ಬಂದು ಆಧರಿಸಿ ಅಪ್ಪಿತು,
ಶತ್ರು ದೇಶದ ಸೆರೆಯಲ್ಲಿ
ಯುದ್ಧ ಕೈದಿಯಾಗಿ ಜೀವತೈದು
ಮರೆಯಾದ ಆಕೆಯ ನಲ್ಲ
ಬತ್ತಿದ ಖುಷಿಯ ಮರಳಿ ತಂದು- ಗಲ್ಲ ಚಿವುಟಿದ

ಕುಹಕ ಮಂದಿ ಇದನು ನೋಡಿ
ಪ್ಲೇಟು ಅದಲು ಬದಲು ಮಾಡಿ
ಕರುಣೆ ಮಾತ ಹೊತ್ತು ಬರಲು
ರೋಷಗೊಂಡ ಇವಳದೊಂದು ಉಗುಳು
ವ್ಯಭಿಚಾರಕರ ಮೊಖಕ್ಕೆ ಥೂ...ಎನಲು
ಉಗುಳ ಕಾವಿಗೆ ತರಗುಟ್ಟಿದ ಮಂದಿ ಬಳಗ
ಮುಂದಿಡುವ ಹೆಜ್ಜೆಯ ಮರೆತು ಬೆಚ್ಚಿ ಬಿದ್ದು- ಕಾಲ್ಕಿತ್ತಿತು

ಸಮಾಜವೆ ನಿನ್ನ ಒಡಲಿನಲ್ಲಿ
ಇಹುದಿಂತ ನೂರು ನೂರು ಕಥೆ
ಕೆಲವೊಂದು ಸವಿ ಕವಿತೆ ಕೆಲವೊಂದು ವ್ಯಥೆ
ಪಿಸುಗುಡುವ ಸಾಲುಗಳೂ ಸಜ್ಜನಿಕೆಗೆ ಪೂರಕವಾದೊಡೆ
ಸಾರ್ಥಕವದು ಕಹಿಯಾದರೂ ಕನವರಿಪ
ನಿನ್ನ ಅನೂಹ್ಯ ತಿರುಹುಗಳು,ಒಳ ಹರಿವುಗಳು.

Sunday, March 11, 2012

ನೋವು ಹಾಡಾಗಿದ್ದೇಕೆ?

ಹೃದಯದೊಲುಮೆ ತಾಳ ಹಾಕಿ
ಮನದ ತುಂಬ ರಾಗವಾಗಿ
ನುಡಿಯ ಕೇಳಿ ಹಾಡು ಎಂದು
ಅರ್ಥೈಸಿದ್ದೇಕೆ?

ಬೀದಿ ಬದಿಯ ಜೋಪಡಿಯೊಳಗೆ
ತನ್ನ ಪಾಡು ಹಳಿದುಕೊಂಡು
ಮನದ ಮಾತು ನುಡಿದಾಗ
ಹಾಡಾಗಿದ್ದೇಕೆ?

ಬಿಸುಟು ಗಂಡ ತೊರೆದಾಗ
ಹೊಟೇಲ ಮುಸುರೆ ಚಾಕರಿ ಸೇರಿ
ಮಗನ ಎತ್ತಿ ಬೆಳೆಸಿ ಕಲಿಸಿ
ಬೆಳೆಸಿದ್ದು ಏಕೆ?

ನೋವು ತುಂಬ ಒಡಲಾಗಿಸಿ
ಸಹಜ ಮುಪ್ಪು ಬಂದೊದಗಲು
ಬೆಳೆದ ಮಗಂಗೆ ತನ್ನ ತಾಯಿ
ಹುಚ್ಚಿಯಾಗಿದ್ದೇಕೆ?

ಬೀದಿಗೆ ಬಿದ್ದ ಮುದಿ ಜೀವ
ಜೋಪಡಿಯೊಳ ಸೇರಿಕೊಂಡು
ಕರುಳಬಳ್ಳಿಯ ನೆನವ ನುಡಿಗಳು
ಕಣ್ಣ ಮಂಜಾಗಿಸುವದೇಕೆ?

ನೋವಿನಿಂದ ಬದುಕ ನಡೆಸಿ
ಅದರಲ್ಲೆ ಬದುಕ ಮುಗಿಪ
ಈ ಜೀವದೊಳಗೆ ಮಮತೆಯೆಂಬುದು
ಉಳಿದಿದ್ದು ಹೇಗೆ?

ಮಾನವತೆಯು ಅಳಿದಿಲ್ಲ
ಅದಿರುವ ಮನುಜರಿಂದ
ಚೂರು ಪಾರು ಹಿಟ್ಟು ಸಿಕ್ಕಿ
ಹೊಟ್ಟೆ ತುಂಬ ತುಂಬಿಕೊಂಡ ಜೀವ
ನಗೆಯಾಡುವದೇಕೆ?

ಗೊತ್ತಿಲ್ಲದ ದ್ವಂದ್ವದೊಡನೆ
ಉತ್ತರವಿಲ್ಲದ ಪ್ರಶ್ನೆಗಳೊಡನೆ
ಕಷ್ಟಗಳ ಅರಿವಿರುಪವರಿಗೆ
ನೋವು ಅದ ಪಿಸುಟುಗಳೂ
ಹಾಡಾಗಿ ಇಂಪಾಗುವದೇಕೆ?
ಕರುಳಕುಡಿಗೆ ಇಲ್ಲದ ಒಲವು
ನಮಗಾನಿಪುದು ಏಕೆ?

ಚಿತ್ರ ಕೃಪೆ:-kanaja.in

ಬೇಸಗೆಯ ಮೊದ ಮೊದಲಿಗೆ ಮಳೆ ಜಪ

ಭೂಮಿ ಬಾನು ಸೇರುವಂತೆ
ಬಿಸಿಲ ನೀಗಿ ತಂಪು ಸುರಿಸೆ
ಬೇಗೆ ನೀಗಿ ಫಸಲು ಬೆಳೆಸೆ
ಮಳೆಯೆ ನೀನು...
ಕಾಲ ಮರೆತು ಬೇಗನೆದ್ದು ಬಾ

ವರುಷ ವರುಷ ಮಾಗಿದಂತೆ
ಅತಿಯ ಬಿಸಿಲು ಕಾಸುತಿರಲು
ಭೂಮಿ ಕಾದು ಪೈರು ಸುಟ್ಟ
ನೆಲದ ಕಳೆಯು ಮಾಗೊ ಮೊದಲು
ಕರುಣೆ ತೋರಿ ತಣಿಸು ಭುವವ
ಕಪ್ಪು ಮೋಡ ಬರದಿ ಘನಿಸಿ
ಮಳೆಯ ಸುರಿಸು ಬಾ

ಕಾಡು ಕಡಿದು ಬರಡು ಮಾಡಿ
ಊರ ತುಂಬ ಕಲ್ಲು ಕಟ್ಟಿ
ಮಾರ್ಗ ತುಂಬ ಯಂತ್ರ ಗಾಡಿ ಬಿಟ್ಟು
ನಿನ್ನ ಮುನಿಸ ಪಡೆದ ನಾನು
ಸಹಿಸದಾಗಿ ಕೈಯ ಮುಗಿದು
ಬೇಡಿಪೆನು ನಿನ್ನ ಮುಂದು
ಮುನಿಸ ಮರೆತು ಜೀವರಾಶಿಯ
ಪ್ರೀತಿಯಿಂದ ಒಮ್ಮೆ ಬಂದು ಅಪ್ಪು ಬಾ

ಜಗದ ಕಾವು ಏರುತಿರಲು
ಮನುಜ ಮನದಿ ಭೀತಿ ಹುಟ್ಟಿ
ಮುಂದ ಏನ ದಾರಿ ತಿಳಿಯದಾದೆವು,
ಅಭಿವೃದ್ದಿ ಪರದ ಬೆನ್ನ ಬಿದ್ದು
ನಿನ್ನ ಮನವ ನೋಯಿಸಿದ್ದಕ್ಕೆ
ಪ್ರಕೃತಿ ಪಾಠ ಕಲಿಸ ಹೊರಟೆಯ?
ತಿಳಿಯದಾಗಿ ಕೈಯ ಕಟ್ಟಿ ಕೂತೆ
ಬೇಸಗೆಯ ಮೊದ ಮೊದಲಿಗೆ
ಬೇಗ ಬಾ ಮಳೆಯೆ ಎಂದು ನಿನ್ನ ಜಪಿಸುತ್ತಾ...........

Saturday, March 10, 2012

ಘಮಲಿನ ಜೊತೆಗಿರುವ ನೆನಪುಗಳು !!!!

ಬಾಲ್ಯದಲ್ಲಿ ಮನೆ ಪಕ್ಕದ ಇಳಿಜಾರಿನಲ್ಲಿ ಜಾರುಬಂಡೆಯಾಟವಾಡಿ ಮೈಗೆ ಹತ್ತಿಸಿಕೊಂಡ ಧೂಳಿನ ಘಮಲು, ಮೊದಲ ಮಳೆ ಬಿದ್ದಾಗ ಇಡಿಯ ವಾತಾವರಣ ಹೊರಸೂಸುವ ಮಣ್ಣು ಮಿಶ್ರಿತ ವಾಸನೆ, ಮನೆಯಲ್ಲಿ ಶುಭ ಕಾರ್ಯಗಳೂ ನಡೆಯುವ ಮುಂದು ಗೋಡೆಗೆ ಹಚ್ಚಿದ ಸುಣ್ಣ ಬಣ್ಣ ಹೊರಸೂಸಿದ ವಾಸನೆ, ಮನೆಯನ್ನು ರಿಪೇರಿಗೊಳಪಡಿಸಿದಾಗ ಬಳಸಿದ ಜಲ್ಲಿ ಕಲ್ಲು ಸಿಮೆಂಟು ಮಿಶ್ರಣ ನೀಡಿದ ವಾಸನೆ,ಮನೆಯಲ್ಲಿ ದಿನವೂ ಅಪ್ಪ ನಡೆಸುವ ಪೂಜಾ ಕಾರ್ಯದಲ್ಲಿ ಬಳಸುವ ಊದುಕಡ್ಡಿ ಹೊರಸೂಸೊ ಪರಿಮಳ,ಬಾಲ್ಯದಲ್ಲಿ ಬಳಸುತಿದ್ದ ಹಮಾಮ್ ಸೋಪಿನ ವಾಸನೆ,ಮನೆಯ ಪಕ್ಕದ ಹಟ್ಟಿಯ ಬದಿಯಲ್ಲಿ ಅಘ್ರಾಣಿಸಿದ ವಾಸನೆ,ಅಮ್ಮ ಬಟ್ಟೆ ಒಗೆದು ಒಣಗಿಸಿ ಇಟ್ಟಾಗ ಅದು ಹೊರ ಸೂಸೊ ವಾಸನೆ,ಮಂಗಳೂರಿನ ಬಳಿ ಕರಾವಳಿ ತೀರದಲ್ಲಿ ಸಾಗಲೂ ಅಲ್ಲಿ ಸಿಗುವ ಮೀನಿನ ವಾಸನೆ,ದೀಪಾವಳಿಗೆ ಪಟಾಕಿ ಸಿಡಿಸಿದಾಗ ಅದು ನೀಡಿದ ವಾಸನೆ,ಮನೆಯ ತೋಟಕ್ಕೆ ನೀರು ಹಾಯಿಸುತಿದ್ದ ಆಕಾಲದ ಡಿಸೀಲ್ ಮೋಟಾರು ಚಾಲು ಮಾಡಿದಾಗ ಅದು ನೀಡಿದ ವಾಸನೆ,ತಂಗಿ, ತಮ್ಮ ಮಗುವಾಗಿರಬೇಕಾದರೆ ಸ್ನಾನ ಮಾಡಿಸಿ ಬಂದು ಜಾಸ್ಸನ್ ಪೌಡರ್ ಹಚ್ಚಿದಾಗ ಅದು ನೀಡಿದ ಘಮಲು, ಛಳಿಗಾಲದಲ್ಲಿ ಮನೆಯ ಸುತ್ತಲೂ ಇರುವ ಮರ ಗಿಡಗಳೂ ಬೆಳಿಗ್ಗೆ ಬೆಳಿಗ್ಗೆ ನೀಡುವ ಅದೆಂತದೊ ಪರಿಯ ಘಮಲು,ಸಗಣಿ ಸಾರಿಸಿದ ನೆಲದ ವಾಸನೆ,ಬಿರು ಬಿಸಿಲಿಗೆ ಥರಗುಟ್ಟುವ ಭೂಮಿ ಕಾದ ಮಣ್ಣು ನೀಡೊ ವಾಸನೆ,ರೇಷನ್ ಅಂಗಡಿಯಲ್ಲಿ ಸೀಮೆಯೆಣ್ಣೆ ಮಿಶ್ರಿತವಾದ ಒಂದು ತರದ ಘಮಲು,ಕೂಲಿ ಮುಗಿಸಿ ಬಂದು ಕೂರುವ ಕಾರ್ಮಿಕನ ಮೈ ಹೊರಸೂಸೊ ಬೆವರು ಮಿಶ್ರಿತ ವಾಸನೆ, ಮನೆಯಲ್ಲಿ ಧಗೆಗೆ ಬೆವೆತ ಮೈ ನೀಡೊ ವಾಸನೆ, ಶಿಕ್ಷಣಕ್ಕಾಗಿ ಶಾಲೆಗೆ ನಡೆದು ಹೋಗುತಿದ್ದ ಸಂದರ್ಭದಲ್ಲಿ ಹಳ್ಳದ ಬದಿಯ ನಾಣೀಲು ಹೂ ಹೊರಸೂಸೊ ಘಮಲು,ಹಳ್ಳದ ನೀರ ಬದಿಯ ಘಮಲು, ಶಾಲೆಯಲ್ಲಿ ಊಟದ ಹೊತ್ತಿನಲ್ಲಿ ಎಲ್ಲಾರು ಟಿಫಿನ್ ಬಾಕ್ಸ್ ಬಿಚ್ಚಿದಾಗ ಘಮಲುಗಳೆಲ್ಲಾ ಮಿಳಿತವಾಗಿ ಹೊಸ ಪರಿಯ ಘಮಲನ್ನೂ ಅಸ್ವಾದಿಸಿದ್ದು,ಅಮ್ಮನ ಅಡಿಗೆ ರೆಡಿಯಾದಾಗ ಅದರ ಮಸಾಲೆ ಇತರವೂ ಹೊರ ಸೂಸಿದ ಘಮಲು,ಮನೆ ಮಂದಿಯೆ ಅನ್ನುವಷ್ಟರ ಮಟ್ಟಿಗೆ ಮನೆಯಲ್ಲಿ ಕೆಲಸವಿದ್ದಾಗ ಬಂದು ತೊಡಗುವ ನಾರಾಯಣ, ಕೂಸ, ಕೊರಗಪ್ಪ, ಮಾದು ಮುಂತಾದವರು ಎಳೆಯುತ್ತಿದ್ದ ಬೀಡಿಯ ವಾಸನೆ,ಊರ ಶೆಟ್ಟರ ಹೊಟೇಲಿನ ನೀರ್ ದೋಸೆಯ ಘಮಲು,ಕಾದ್ರಿಬ್ಯಾರಿ ಹೊಟೇಲಿನ ಚಾ-ಕಲ್ತಪ್ಪಾ ಪರಿಮಳ....................................ಹೀಗೆ ವಿವಿಧ ವಾಸನೆಗಳು ನಮ್ಮ ನೆನಪಿನ ಬುಟ್ಟಿಯಲ್ಲಿ ಸದಾ ಭದ್ರ, ಪ್ರತಿಯೊಂದಕ್ಕು ಅದರದೆ ಆದ ನೆನಪುಗಳು ಜೊತೆಗಿರುತ್ತವೆ,.ಅದು ಕೆಟ್ಟದ್ದೂ ಆಗಿರಬಹುದು ಒಳ್ಳೆದು ಆಗಿರಬಹುದು.ಆದರೆ ನೆನಪುಗಳ ಜೊತೆ ಈ ವಾಸನೆಗಳ ಅವಿನಾಭಾವ ಸಂಬಂಧವಿರುವುದಂತು ಸತ್ಯ.

ಬಾಲ್ಯ ದಾಟಿ ಬೆಳೆದು ಬಂದಿರುತ್ತೇವೆ.ಅದೆಷ್ಟೊ ಪರಿಸ್ಥಿತಿಗಳ ಮಧ್ಯೆ ಮುಳುಗೇಳಿ ಒಂದು ಹಂತಕ್ಕೆ ತಲುಪಿರುತ್ತೇವೆ.ನವಿರು ನೆನಪುಗಳು ಬತ್ತಿರೋದಿಲ್ಲ,ಅದು ಗಮನಕ್ಕೆ ಬಂದಿರೋದಿಲ್ಲ ಅಷ್ಟೆ, ಹೀಗಿರಬೇಕಾದರೆ ಈ ವಾಸನೆಗಳೂ ಆ ನೆನಪುಗಳನ್ನು ಮರಳಿಸಬಲ್ಲುದು.ಈ ತೆರನಾಗಿ ಎಲ್ಲರಿಗೂ ಅನುಭವಕ್ಕೆ ನಿಲುಕಿದ ವಿಷಯಗಳನ್ನೆ ನಾನಿಲ್ಲಿ ಹೇಳಹೊರಟಿರುವದು.ಅದೊಂದು ವೃತ್ತಿ ಸಂಬಂಧಿ ಕನ್ ಸ್ಟ್ರಕ್ಷನ್ ಕೆಲಸದ ಜಾಗಕ್ಕೆ ಹೋದಾವಾಗ ಅಲ್ಲಿ ಆ ಸಿಮೆಂಟು ಮಣ್ಣು ಇಟ್ಟಿಗೆಗಳು ನೀಡಿದ ಘಮಲು ನನ್ನ ಮನೆಯ ರಿಪೇರಿಯ ಹಿಂದಿನ ಶ್ರಮ ಆವಾಗಿನ ಕಷ್ಟ ಕೆಲಸದ ವರಿಗೆ ಅಮ್ಮ ಬೇಯಿಸಿ ಹಾಕುವಲ್ಲಿ ಪಟ್ಟ ಶ್ರಮ, ಅವಳ ಎಡೆ ಬಿಡದ ದುಡಿತ, ಸಾಮಾಗ್ರಿ ಕೊಡಿಸುವಲ್ಲಿ ಅಪ್ಪನ ಓಡಾಟ ಅವರುಗಳ ಕಷ್ಟ, ದೂರದೂರಲ್ಲಿ ಕೂತು ಹಣ ಹೊಂಚಿ ಕೆಲಸಕ್ಕೆ ಸಮಾನಾಗಿ ಕಳಿಸಿಕೊಡುವಿನಲ್ಲಿನ ನನ್ನ ತಾಪತ್ರಯ ಇದೆಲ್ಲವನ್ನೂ ಮೀರಿ ಕೆಲಸ ಮುಗಿಸಿದ ಖುಷಿ ಆ ಬಗ್ಗೆ ನಮ್ಮೊಳಗೆ ಹುಟ್ಟೊ ಮೆಚ್ಚುಗೆ ಎಲ್ಲವೂ ನೆನಪಾದರೆ ಅದು ಆ ವಾಸನೆ ಕೊಟ್ಟ ಫಲ.ಆ ನೆನಪುಗಳು ನನ್ನ ಕೆಲಸದಲ್ಲಿ ತೊಡಗಲು ಸ್ಪೂರ್ತಿಯನ್ನು ಕೊಟ್ಟಿತೆಂದರೆ ಅದು ಆ ವಾಸನೆ ನನಗೊದಗಿಸಿದ ಲಾಭ.ಇದೆ ತೆರನಾದ ಇನ್ನೊಂದು ಅನುಭೂತಿಯೆಂದರೆ ವಾಸು ಅಗರಬತ್ತಿಯ ಘಮಲು ನನಗೆಲ್ಲಾದರು ಸಿಕ್ಕರೆ ಅದು ಇಂತದ್ದೆ ಅನ್ನುವಷ್ಟರ ಮಟ್ಟಿಗೆ ಆತ್ಮೀಯತೆ ಕಾರಣ ಅದು ನನ್ ಮನೆಯಲ್ಲಿ ನಿತ್ಯ ಉಪಯೋಗಿಸುವಂತದ್ದು,ಬರಿಯ ವಾಸನೆ ಅಲ್ಲದೆ ನನ್ನದೆ ಮನೆಯ ಅದೆಷ್ಟೊ  ಸವಿ ನೆನಪುಗಳು ಒಂದು ಸಲ ಮನಪಟಲದಲ್ಲಿ ಸುಳಿದಾಡಿ ಆ ದಿನವನ್ನು ಮುದದಿಂದ ಕಳೆಯುವಲ್ಲಿ ಇದು ಸಹಕರಿಸುತ್ತದೆ ಎಂದಾದರೆ ಆ ಘಮಲಿಗೆ ಒಂದು ಸಲಾಂ ನೀಡಲೆಬೇಕು.

ಚಿಕ್ಕವನಿದ್ದಾಗಿನ ಆಟಗಳೂ ಅದರಲ್ಲಿನ ನೆನಪುಗಳೂ ಆ ಖುಷಿ ಎಲ್ಲವೂ ಧೂಳಿನ ವಾಸನೆಯಲ್ಲಿ ಮತ್ತೆ ನನಗೆ ನೆನಪಿಗೆ ಬಂದು ಖುಷಿಪಡಬಲ್ಲೆ,ನನಗೆ ನಾನೆ ಈ ಪರಿಗೆ ಅಚ್ಚರಿ ಪಡುವದುಂಟು. ಮೊದಲ ಮಳೆ ಬಿದ್ದಾಗ ವಾತಾವರಣದಲ್ಲಿ ಒಡಮೂಡುವ ಒಂದು ವಿಶಿಷ್ಟ ಘಮಲನ್ನು ಅಸ್ವಾದಿಸಲೂ ಕಾಯುತ್ತಿರುತ್ತೇನೆ ಯಾಕೆಂದರೆ ಆ ಘಮಲಿನ ಜೊತೆ ನವಿರು ನೆನಪುಗಳಿವೆ, ಅದು ನನಗೆ ಮುದವನ್ನು ಒದಗಿಸಬಲ್ಲುದು.ಮೊದಲ ಮಳೆ ಬರುವದರ ಮುಂಚಿನ ಅಮ್ಮನ ಸಿದ್ದತೆಗಳೂ ಒಂದಾ ಎರಡ. ಹಪ್ಪಳ ಸೆಂಡಿಗೆ ಮಾಂಬಳ ಮುಂತಾದುವನ್ನೂ ಮಳೆಗಾಲವನ್ನೂ ಸವಿಯಲೂ ಮಾಡಿಟ್ಟುಕೊಂಡು ಮಳೆಗಾಲಕ್ಕಾಗಿ ಕಾಯುವ ತಾಯಿ ಮೊದಲ ಮಳೆಯ ಮಣ್ಣಿನ ಘಮಲು ನೆನಪಿಸಿಕೊಡುವದು ಸಾಮಾನ್ಯ.ಹಳ್ಳಿಗರು ಮಳೆಗಾಲಕ್ಕಾಗಿ ಕಾಯುವ ಪರಿ ಅದೊಂದು ಸೊಬಗು, ಕೂಲಿ ನಾಲಿ ಮಾಡಿಕೊಂಡೆ ಬದುಕುವ ಒಂದಷ್ಟು ಮಂದಿಗೆ ಮಳೆಯ ಮೊದಲು ಮಳೆಗಾಲದಲ್ಲಿ ತಮ್ಮಲ್ಲಿದ್ದ ಜಮೀನಿನಲ್ಲಿ ಉತ್ತು ಬಿತ್ತು ಬೆಳೆಯಲೂ ಬೇಕಾಗುವ ಧಾನ್ಯಗಳನ್ನೂ ಸಂಗ್ರಹಿಸಬೇಕು,ಮಳೆಗಾಲ ಪೂರ್ತಿ ಕಳೆಯಲೂ ಬೇಕಾದ ಸೌದೆ ಮುಂತಾದುವನ್ನು ಹೊಂದಿಸಬೇಕು.ಮಳೆ ಬಂತೆಂದರೆ ಸಾಕು ಕೃಷಿ ಚಟುವಟಿಕೆಯಲ್ಲಿ ತೊಡಗುವ ಇವರು ಮಳೆಯನ್ನು ನೋಡುವ ಪರಿಯೆ ಬೇರೆ, ಹೀಗೆ ಈ ಎಲ್ಲಾ ಬದುಕುಗಳು ಪ್ರತಿ ಸಲ ಮೊದಲ ಮಳೆಯ ಮಣ್ಣಿನ ವಾಸನೆ ಜೊತೆಗೆ ನೆನಪಿಗೆ ಬರುವಂತದ್ದು.ಅದಾಕೊ ಏನೊ ನಾನಿನ್ನೂ ನನ್ನ ಹಳ್ಳಿಗರ ಜೊತೆಗೆನೆ ಈ ಎಲ್ಲಾ ಚಟುವಟಿಕೆಯಲ್ಲಿ ತೊಡಗಿದ್ದೇನೆ ಅನ್ನೊ ಭ್ರಮೆಯೊಡನೆಯ ಸವಿ ಅನುಭೂತಿ ಮೊದಲ ಮಳೆಯ ಮಣ್ಣಿನ ಘಮಲು ನನಗೊದಗಿಸುತ್ತವೆ.

ಕಡಲ ತೀರದಲ್ಲಿ ಸಂಚರಿಸುವಾಗಲೆಲ್ಲ ಕಾಡುವದು ನನ್ನ ಮಂಗಳೂರಿನ ಜೀವನ. ಕೆಲಸದ ನಿಮಿತ್ತ 15 ತಿಂಗಳೂ ನಾನಲ್ಲೆ ವಾಸವಾಗಿದ್ದೆ,ಅಲ್ಲಿ ಒಂದು ಮುಸ್ಲಿಂ ಕುಟುಂಬದ ಒಡನಾಟ,ನನ್ನ ಮನೆಮಗನಂತೆ ಅವರು ನೋಡಿಕೊಂಡಿದ್ದು, ವಾರಾಂತ್ಯದಲ್ಲಿ ಬೀಚ್ ನಲ್ಲಿ ಕುಳಿತು ಮುಂದಿನ ಗುರಿಗಳ ಬಗ್ಗೆ ಯೋಚಿಸಿದ್ದೂ ಕೈಯಲ್ಲಿ ಕಾಸಿಲ್ಲದೆ ಒದ್ದಾಡಿದ್ದು,ತುಳು ನಾಟಕ ರಂಗಭೂಮಿಯ ಒಡನಾಟ ದಕ್ಕಿದ್ದೂ ಎಲ್ಲವೂ ಈ ಕಾಲದಲ್ಲೆ, ಅದ್ಯಾವುದೆ ಜಾಗವಾಗಿರಲಿ ಕಡಲ ತೀರದ ಮೀನ ವಾಸನೆಯೂ ಮೂಗಿಗೆ ಬಡಿದರೆ ಸಾಕು ಈ ನೆನಪುಗಳು ನನ್ನಲ್ಲಿ ಜೀವ ಪಡೆಯುತ್ತವೆ.ಹೀಗೆ ಕೆಲಸದ ಮೇಲೆ ತಿರುವನಂತಪುರಕ್ಕೆ ಒಂದು ಭಾರಿ ಹೋಗಿದ್ದೆ ಮಳಿಯಾಳಿ ಭಾಷೆ ನನಗೆ ಬರಲೊಲ್ಲದು ಹಿಂದಿ ಇಂಗ್ಲೀಷ್ ಅಲ್ಲಿಯವರಿಗೆ ಅಷ್ಟಕಷ್ಟೆ. ಈ ಪಚೀತಿಗಳ ನಡುವೆ ನನ್ನ ಕೆಲಸವೂ 1 ವಾರಕ್ಕೆ ಮುಂದೂಡಲ್ಪಟ್ಟು ಒಬ್ಬಂಟಿಯಾಗಿ ವಸತಿ ಗೃಹದ ಕೋಣೆಯೊಳಗೆ ಬಂಧಿಯಾಗಬೇಕಿದ್ದ ನನ್ನನ್ನೂ ಅದರಿಂದ ಹೊರತಂದು ನೆನಪುಗಳ ಅವಲೋಕನದತ್ತ ನನ್ನ ನಾ ತೆರೆದುಕೊಳ್ಳುವಂತೆ ಮಾಡಿದ್ದು ಕೋವಳಂ ಬೀಚ್ ಮತ್ತು ಅಲ್ಲಿನ ಬೀಚ್ ಘಮಲು.ನನ್ನೆಲ್ಲ ಕಡಲ ಬದಿ ಜೀವನದ ನೆನಪುಗಳನ್ನು ಪುನರಪಿ ಕಡಲಾಗಿ ನೆನಪಿಸಿತ್ತು ನನ್ನಲ್ಲಿ ಒಬ್ಬಂಟಿತನವನ್ನೂ ನುಸುಳಲೂ ಬಿಡುಗೊಡಲಿಲ್ಲ ಅದು.ನೆನಪುಗಳೆ ಕೈ ಹಿಡಿದು ಸಾಗುತ್ತೆ ಅನ್ನೋದು ಇದಕ್ಕೆ ಇರಬಹುದು.

ಘಮಲಿನಲ್ಲೂ ಕೆಲವಾರು ತರಗಳಿವೆಯಲ್ಲವೆ? ಮಣ್ಣಿನ ವಾಸನೆ ಅಂತಂದೆ, ಬೆಂಗಳೂರಿನಲ್ಲಿ ಮಳೆ ಬಿದ್ದಾವಗ ಬರುವ ಮಣ್ಣಿನ ವಾಸನೆ ಹಳ್ಳಿಯಲ್ಲಿ ಮಳೆ ಬಿದ್ದಾವಾಗ ಬರುವ ಮಣ್ಣಿನ ವಾಸನೆ ಹುಟ್ಟುವ ರೀತಿ ಒಂದೆ ಆಗಿದ್ದರೂ ಸೂಕ್ಷ್ಮವಾಗಿ ಗಮನಿಸಿದಾಗ ವ್ಯತ್ಯಾಸಗಳು ಕಂಡು ಬರುತ್ತದೆ ಅಲ್ಲವೆ?ತಾಯಿ ಒಗೆದ ಬಟ್ಟೆ ನಾವೆ ಒಗೆದುಕೊಂಡಂತ ಬಟ್ಟೆ ಅದು ಹೊಮ್ಮಿಸೊ ಘಮಲಿನಲ್ಲಿ ವ್ಯತ್ಯಾಸವಿದೆಯಲ್ಲವೆ?ಅಷ್ಟೆ ಏಕೆ ಪ್ರತಿ ಮನೆ ಮನೆಗೂ ಅದರದ್ದೇ ಆದ ಘಮಲುಗಳಿವೆ ಅಲ್ಲವೆ?ನೀರ್ ದೋಸೆ ಅಂದಾವಾಗ ಶೆಟ್ಟರ ಹೊಟೇಲೆ ನೆನಪಿಗೆ ಬರಬೇಕು ಏಕೆ? ಟೀ ಅಂದಾವಾಗ ಕಾದ್ರಿ ಕಾಕ ನೆನಪಾಗೋದು ಯಾಕೆ?ಬೀಡಿ ವಾಸನೆ ಅಂದಾವಾಗ ಯಾಕೆ ನಾರಾಯಣ, ಕೂಸ, ಕೊರಗಪ್ಪ, ಮಾದು ಇವರುಗಳೆ ನೆನಪಾಗ್ತಾರೆ?ಇದೆಲ್ಲಕ್ಕೂ ಕಾರಣ ನಾವು ಆ ವಾಸನೆಗಳನ್ನು ಮೊದಲಾಗಿ ಅಲ್ಲೆ ಆಘ್ರಾಣಿಸಿ ಇಷ್ಟ ಪಟ್ಟಿದ್ದಕ್ಕೆ ಇರಬಹುದು ಅಲ್ಲವೆ? ಅದೇನೆ ಇರಲಿ ವಾಸನೆ ನೆನಪಿನ ಜೊತೆಗೆ ಸ್ವಾದಕ್ಕೆ ಬರುವದು ದಿಟ.ವಾಸನೆಗಳೊಂದಿಗೆ ನೆನಪುಗಳೂ ಅಡಗಿದೆ ಅಲ್ಲವೆ? ಸಂದರ್ಭಕ್ಕೆ ಅನುಗುಣವಾಗಿ ಬೇರೆ ಬೇರೆ ಘಮಲುಗಳು ಸ್ವಾದಕ್ಕೆ ಬಂದಾವಾಗ ಅದರ ಜೊತೆಗಿನ ನೆನಪುಗಳೂ ನಮ್ಮನ್ನ ತಾಕಿ ಮುದಗೊಳಿಸುವದಂತೂ ನಿಜ.ಘಮಲುಗಳು ಬರಿಯಾ ವಾಸನೆಗಳಲ್ಲ ಅದು ನಮ್ಮ ನೆನಪನ್ನೂ ಹೊತ್ತು ಸಾಗುವ ಬಂಡಿ. 


ಅಹಾ ಎಂಭ ಹೆಸರಿನಲ್ಲಿ ಅವಧಿಯಲ್ಲಿ ಪ್ರಕಟವಾದ ಈ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ

Friday, March 9, 2012

ಪ್ರೀತಿ ಎಂದರೇನು?

ಪ್ರೀತಿ ಎಂದರೇನು? ಅಂತ ಸಡನ್ನಾಗಿ ಒಂದು ಪ್ರಶ್ನೆ ಬರುತ್ತೆ ಅಂತಿಟ್ಟುಕೊಳ್ಳೋಣ,ಆಗ ಏನು ಉತ್ತರ ಕೊಡೋದು? ಅದು ಮನಸ್ಸಿಗೆ ಸಂಭಂದಿಸಿದ್ದು ಅನ್ನೋದಾ? ಹೃದಯಗಳಿಗೆ ಸಂಬಂಧಿಸಿದ್ದು ಅನ್ನೋದಾ? ಅಥವಾ ಬೇರೆನಾದರೂ ವಿಶ್ಲೇಷಣೆಗೆ ತೊಡಗೋದಾ? ಹೇಗೆ ಉತ್ತರ ಕೊಡೋದು ಅನ್ನೋ ಜಿಜ್ಞಾಸೆಯೊಳಗೆ ನಾನಂತೂ ಪಕ್ಕಾ ತಬ್ಬಿಬ್ಬಾಗೋದು ಗ್ಯಾರಂಟಿ.ಹಾಗಾದರೆ ನನಗೆ ಪ್ರೀತಿಸೋದು ಗೊತ್ತಿಲ್ವಾ? ಅಪ್ಪ, ಅಮ್ಮ, ತಂಗಿ, ತಮ್ಮ ,ಗೆಳೆಯರೂ, ಗೆಳತಿಯರೂ ಇವೆರೆಲ್ಲರೊಡನೆ ನಾ ಹಂಚಿಕೊಳ್ಳುತ್ತಿರುವದು ಏನೂ ಹಾಗಾದರೆ? ಪ್ರೀತಿಯೆ ಇದ್ದಿರಬೇಕು. ಅವರ ನೋವು ನಲಿವುಗಳಲ್ಲಿ ನನ್ನ ಮನವೂ ಸ್ಪಂದನೆಗೆ ಒಳಗಾಗುತ್ತೆ ಅಲ್ವಾ? ಹಾಗಾದರೆ ಇದನ್ನೆ ಪ್ರೀತಿ ಅನ್ನೋದ? ಇರಬಹುದು.ಹಾಗಾದರೆ ಪ್ರೀತಿ ಅಂದರೇನು ಅನ್ನೋದಕ್ಕೆ ಒಂದು ಡೆಫಿನೇಷನ್ ಕೊಡಕ್ಕೆ ನನ್ನಿಂದ ಸಾಧ್ಯವಿಲ್ಲ ಯಾಕೆ?ಪ್ರತಿ ಸಲನೂ ನಾನೂ ಪ್ರೀತಿಗೆ ಡೆಫಿನೇಷನ್ ಕೊಡಲು ಹೊರಟಾಗ ಅಪೂರ್ಣ ಅಂತೆನಿಸುತ್ತದಲ್ವಾ ಯಾಕೆ?ಪ್ರೀತಿ ಅನ್ನೋದು ಪ್ರೇಮಿಗಳ ಮಧ್ಯದ ಸರಕೇ? ಖಂಡಿತಾ ಅಲ್ಲಾ ಅಂತಾದ ಮೇಲೆ ಮತ್ತೆ ಇನ್ನೇನೂ?

ಹೀಗೊಂದು ಡೆಫಿನೇಷನ್ ಕೊಡ ಹೊರಟೆ, ಇದೊಂದು ನವಿರು ಭಾವ, ಇದೊಂದು ವಿವರಿಸಲಾಗದ ನಮ್ಮೊಳಗಿನ ಸೆಳೆತ,ಆದರೆ ಇದನ್ನ ನೋಡಲಾಗದೂ, ಕೇಳಲಾಗದೂ ಆದರೆ ಅನುಭವಕ್ಕೆ ನಿಲುಕುವಂತದ್ದೂ....... ಅಂತೇನೊ ಬರೆದು ಯೋಚಿಸತೊಡಗಿದೆ.ಹಾಗಾದರೆ ಪ್ರೀತಿ ಅನ್ನೋದು ಹೇಳುವ ವಿಧಾನ ಬರೀಯ 'ಐ ಲವ್ ಯೂ' ಅಂದೇ ತಿಳಿಸುವಂತದ್ದಾ? ಅದಾಗೆ ಅದು ಇನ್ನೊಬ್ಬರಿಗೆ ತಿಳಿಯುವ ವಿಷಯ ಅಲ್ಲವಾ?ಸೆಳೆತ ಅನ್ನೋ ಪದ ಆಕರ್ಷಣೆ ಅನ್ನೊ ಅರ್ಥವನ್ನೂ ಕೊಡುತ್ತದಲ್ವಾ?ಭಾವನೆ ಅಂದಾವಾಗ ಆಕರ್ಷಣೆ ಪದ ಬರೋದು ಎಷ್ಟು ಸರಿ? ಇಲ್ಲಾ ಈ ತರ ಯೋಚನೆ ತಗುಲಿದಾಗ ಗೊಂದಲ ಮೂಡಿ ನಾ ಬರೆದದ್ದೂ ಮತ್ತೆ ಅಪೂರ್ಣ ಅಂದೆನಿಸಿ ಸುಮ್ಮನಾದೆ. ಮತ್ತದೆ ಪ್ರಶ್ನೆ ಚಿಂತೆಗೆ ಹಚ್ಚಿತು ಪ್ರೀತಿ ಅಂದರೇನು?

ನಮಗೆ ವಿಧ ವಿಧವಾದ ಅಭ್ಯಾಸಗಳಿರುತ್ತವೆ ಅದೂ ಕೆಟ್ಟದ್ದೂ ಆಗಿರಬಹುದು.ಉದಾಹರಣೆಗೆ ಸಿಗರೇಟ್ ,ಮಧ್ಯಪಾನ ಇತ್ಯಾದಿ. ಯಾರೋ ನಮ್ಮನ್ನು ಅಕ್ಕರೆಯಿಂದ ನೋಡಿಕೊಳ್ಳೋರು ಬಿಟ್ಟು ಬಿಡೋ ಅಂತಾರೆ ಸರಿ ಅವರಿಗಾಗಿ ಬಿಡಲು ಪ್ರಯತ್ನ ಪಡುತ್ತೇವೆ.ಹಾಗಾದರೆ ಆ ಅಕ್ಕರೆಯನ್ನ ಪ್ರೀತಿ ಅನ್ನೋದೆ? ಆಥವಾ ಅಕ್ಕರೆಯವರೆದುರಲ್ಲಿ ಆ ಆಭ್ಯಾಸಗಳನ್ನೂ ಬಿಟ್ಟನೆಂದೂ ತೋರ್ಪಡಿಸಿಕೊಂಡು ಕಣ್ಣಾ ಮುಚ್ಚಾಲೆಯೊಡ ಆ ಆಭ್ಯಾಸದಲ್ಲೆ ಬಿಡಲಾಗದೆ ತೊಡಗಿಸಿಕೊಂಡರೆ ಅವಾಗ ಅಕ್ಕರೆಯವರಿಗಿಂತ ಆ ಆಭ್ಯಾಸದ ಮೇಲಿನ ಪ್ರೀತಿ ಜಾಸ್ತಿ ಅನ್ನೊ ತರ ನಮ್ಮನ್ನೂ ನಾವು ಆಳೆದುಕೊಳ್ಳೋದೆ? ಪ್ರಸ್ತುತವೆಂದರೆ ಅವೆರಡೂ ನಮಗೆ ಬೇಕಾಗಿರುತ್ತದೆ. ಆದರೆ ಆಭ್ಯಾಸದ ಮೇಲಿನ ಪ್ರೀತಿಯನ್ನೂ ಪ್ರೀತಿಯೆಂದೂ ಕರೆಯೋದಕ್ಕೆ ಸಾಧ್ಯವಾಗದೆ ಚಟ ಇತ್ಯಾದಿ ಹೆಸರಿಟ್ಟು ಕರಿತೇವೆ? ಹಾಗಾದರೆ ಪ್ರೀತಿಯಲ್ಲೂ ಕಡಿಮೆ, ಹೆಚ್ಚು, ಮಧ್ಯಮ ಈ ತರ ಮಾಪನಗಳಿವೆಯೆ? ಅಷ್ಟಕ್ಕೂ ಪ್ರೀತಿಯೆಂದರೇನೂ?

ನನ್ನೊಬ್ಬಳೂ ಗೆಳತಿ ಲವ್ ಮಣ್ಣು ಲಂಗು ಲಸ್ಕು ಅಂತಾ ತನ್ನ ಫ್ಯಾಮಿಲಿ ಕಥೆಯನ್ನಾ ಹಂಚಿಕೊಳ್ತಾ ಇರ್ತಾಳೆ. ಈ ಡಿಸ್ಕಷನ್ ನಡುವೆ ಬರೀಯ ಕೆಲಸ ಕೆಲಸ ಅಂತಾ ಒತ್ತಡದ ಮಧ್ಯೆ ನಾನೂ ನನ್ ಗಂಡ ಸಾಯ್ತಾ ಇರ್ತೀವಿ ಬಹಳ ಹೆಚ್ಚು ಪ್ರೀತಿಸುವದಕ್ಕೆ ಆಗ್ತಿಲ್ಲಾ ಅಂತಾ ಮಾಮೂಲಿ ಮಾತು ಬರ್ತಾ ಇರುತ್ತೆ, ಇದೆಂಗೆ ಕಡಿಮೆ ಪ್ರೀತಿ, ಜಾಸ್ತಿ ಪ್ರೀತಿ?ಪ್ರೀತಿಯೊಳಗೆ ಹೆಚ್ಚು ಕಮ್ಮಿ ಹೇಗೆ ಬಂತು? ತಿಳಿಯದೆ ಒದ್ದಾಡ್ತಾ ಇರ್ತೀನಿ.ಹಾಗಾದರೆ ಪ್ರೀತಿಯ ಆಯಾಮಗಳೂ ಅದೆಷ್ಟೂ ತರ ಇದೆ ಅನ್ನೋದನ್ನೂ ಯೋಚಿಸಿದರೆ ಯೋಚಿಸುತ್ತಾ ಕೂರಬೇಕಾಗುತ್ತೆ ವಿನಃ ಒಂದು ಚೌಕಟ್ಟಿನೊಳಗೆ ಪ್ರೀತಿ ಭಾವನೆಯನ್ನೂ ಬಂಧಿಸಿ ಅಕ್ಷರಗಳೊಡೆ ಪೋಣಿಸೋದು ಅಸಾಧ್ಯವೆ ಸರಿ. ಯಾವಾಗಲೂ ಪ್ರೀತಿಗೆ ಹೋಲಿಸಬಹುದಾದ ಸಮಾನ ಭಾವ ಯಾವುದೆಂದು ಹುಡುಕ ಹೊರಟಾಗ ಇದು ನಮ್ಮ ಮನಸ್ಸಿನಂತೆ ಅನ್ನಿಸತೊಡಗುತ್ತದೆ.ಒಂದು ಸ್ಥಿರತೆಯಿಂದ ಕಾಯ್ದುಕೊಳ್ಳಲಾಗದ್ದೂ ಅನಿಸತೊಡಗುತ್ತದೆ.ಮನಸ್ಸಿಗೆ ಹೇಗೆ ಲಗಾಮು ಹಾಕಿ ಕೆಟ್ಟೆಡೆಗೆ ದೃಷ್ಟಿಕೊಡದೆ ನಮ್ಮ ಒಳ್ಳೆ ವ್ಯಕ್ತಿತ್ವವನ್ನೂ ಕಾಯ್ದುಕೋಳ್ಳೋತ್ತೇವೊ ಅದೇ ತರ ಪ್ರೀತಿಯನ್ನೂ ನಮ್ಮೊಳಗೆ ಜತನದಿಂದ ಕಾಯ್ದಿಡಬಹುದಷ್ಟೆ!!. ಹೇಗೆ ನಾವೂ ಕೆಲವ್ಯಕ್ತಿಗಳಿಗೆ ಒಳ್ಳೆಯವರಾಗಿಯೂ ಕೆಲವರಿಗೆ ಕೆಟ್ಟವರಾಗಿಯೂ ಕಂಡು ಬರುತ್ತೇವೊ ಅದೇ ತರ ನಮ್ಮೊಳಗಿನ ಪ್ರೀತಿ ಇತರರಿಗೆ ವಿವಿಧ ತೆರನಾಗಿ ಕಾಣಿಸಿಕೊಳ್ಳಬಹುದು. ಸಮಾನ ಮನಸ್ಥಿತಿಯೊಂದಿಗೆ ಮಾತ್ರ ಇದು ಹಂಚಿಕೊಳ್ಳೊ ಮಟ್ಟಕ್ಕೆ ಬರಬಹುದೇನೋ? 

ಕೆಲವೊಮ್ಮೆ ಅನಿವಾರ್ಯವಾಗಿ ಪ್ರೀತಿಯನ್ನೂ ನಟಿಸಬೇಕಾಗಿಯೂ ಬಂದರೂ ಬರಬಹುದು? ಉದಾಹರಣೆಗೆ ಮದುವೆ(ಎಂಗೇಜ್ಡ್ ಮ್ಯಾರೇಜ್ನಲ್ಲಿ) ಆದ ಹೊಸತರಲ್ಲಿ ಹಾಗೂ ಇದೆ ತೆರನಾದ ಇತರ ಸನ್ನಿವೇಶದಲ್ಲಿ, ಕ್ರಮೇಣ ಪರಸ್ಪರ ಅರಿತು ನಿಜ ಪ್ರೀತಿ ಹುಟ್ಟಬಹುದೇನೊ?ಹಾಗಾದರೆ ಅಲ್ಲಿವರೆಗಿನ ಭಾವನೆಯನ್ನೂ ಬರೀಯ ಆಕರ್ಷಣೆ ಅನ್ನೋದ? ಅಥವಾ ಪರಸ್ಪರ ಅರಿತುಕೊಳ್ಳುವಲ್ಲಿನ ತುಡಿತ ಅನ್ನೋದ? ಪ್ರೀತಿಯಡೆಗೆ ನಡೆಯುವ ಹೆಜ್ಜೆಗಳ ಭಾವ ಅಂದರೆ ಸಾಕೇನೊ!!"ಗಂಡಿನ ಕೊನೆಯ ಪ್ರೀತಿ ಮತ್ತು ಹೆಣ್ಣಿನ ಕೊನೆಯ ಪ್ರೀತಿ ಪಡೆದವರು ಪುಣ್ಯ ವಂತರು ಅಂತೆ"ಅನ್ನೊ ಮಾತಿದೆ ಇದೂ ಹೇಗೆ ಅನ್ನೋದು ನನಗಂತೂ ಗೊತ್ತಿಲ್ಲ,ಬಹುಶಃ ಇದನ್ನ ಹೇಳಿದವರ ಭಾವನೆಗಳೂ ಯಾವ ತೆರನಾಗಿ ಇತ್ತೂ ಅನ್ನೊದರ ಮೇಲೆ ಈ ಮಾತು ಅವಲಂಭಿತವಾಗಿ ಇರಬಹುದು. ಒಟ್ಟಿನಲ್ಲಿ ಒಂದು ಸ್ಪಷ್ಟ ಪ್ರೀತಿ ಅನ್ನೋದು ಉದ್ದ ,ಅಗಲ, ಆಳ, ಎತ್ತರಗಳನ್ನೂ ಅಳೆಯಲಾಗದ ನಮ್ಮೊಳಗೆ ಹುದುಗಿರುವ ಭಾವ ಎನ್ನಬಹುದೇನೊ? ಅವರವರ ಭಾವಕ್ಕೆ ಭಕುತಿಗೆ ತೆರನಾಗಿ ಅದು ತರೆವಾರಿ ಅಯಾಮಗಳಿಂದ ಗೋಚರಿಸುವಂತದ್ದು ಅನ್ನೋದು ಸೂಕ್ತವೆನಿಸಬಹುದೇನೊ?ನಿಜ ಪ್ರೀತಿಯೊಂದಿಗೆ ಗೊತ್ತಿಲ್ಲದೆ ತಳುಕು ಹಾಕಿಕೊಂಡಿರುತ್ತದೆ ಅದೇನೆಂದರೆ ಪರಸ್ಪರ ಗೌರವ. ಇದೆಲ್ಲಾ ಕಥೆ ಯಾಕೆ ಹೇಳ್ತೀಯಾ ಹೀಗೆ ನೀವನ್ನಬಹುದು, ಈ ತೆರನಾದ ಒಂದು ಸಾಮಾನ್ಯ ವಿಷಯ ಕೂಡ ನನ್ ಯೋಚನೆಗೆ ಗ್ರಾಸವಾಗಿದ್ದನ್ನೂ ನೋಡಿ ತಾರ್ಕಿಕವಾಗಿ ಏನೊಂದು ಅಂತಿಮವಾಗಿಸುವದಕ್ಕೆ ಆಗದ ವಿಷಯವನ್ನೂ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.ಬಹುಶಃ ಭಾವನೆಗಳೂ ಅನ್ನೋದು ಹೀಗೆ ಇರಬೇಕು.ಪ್ರೀತಿ ಅನ್ನೋದು ಭಾವನೆ ಉದ್ದೀಪಿಸುವ ಸ್ಪೂರ್ತಿ ಅನ್ನುತ್ತಲೆ ಪ್ರೀತಿ ಅಂದರೇನು ಅನ್ನೊ ಪ್ರಶ್ನೆಗೆ ಪ್ರೀತಿ ಅಂದರೆ ಪ್ರೀತಿ ಎಂದಷ್ಟೆ ಅನ್ನುತ್ತ ಮುಗಿಸುತಿದ್ದೇನೆ.ವಿಚಾರತೆ ಒಡಮೂಡಲಿ ಎಲ್ಲರಿಗೂ ಶುಭವಾಗಲಿ.

Sunday, March 4, 2012

ಮೂರು ವ್ಯವಸ್ಥೆಯ ಮಧ್ಯೆ ನಡೆದ ದೊಂಬಿ ಹುಟ್ಟಿಸಿದ ಪ್ರಶ್ನೆಗಳು


ಇತ್ತೀಚೆಗೆ ರಾಜ್ಯದಲ್ಲಿ ಎಲ್ಲವೂ ಹೊಸ ಬೆಳವಣಿಗೆ, ರಾಜ್ಯದ ಮುಖ್ಯಮಂತ್ರಿ ಆಗಿರೋವವರೊಬ್ಬರು ಜೈಲು ಸೇರಿದ್ದೂ ಆಯಿತು, ಸದನದಲ್ಲೆ ನೀಲಿ ಚಿತ್ರ ವೀಕ್ಷಿಸಿದ್ದೂ ಆಯಿತು ಹೀಗೆ ಪಟ್ಟಿ ಬಹಳ ಬೆಳೆಯುತ್ತಾ ಸಾಗುತ್ತೆ.ಇದಕ್ಕೆ ಹೊಸ ಸೇರ್ಪಡೆ ಇತ್ತೀಚೆಗೆ ಅತ್ಯಂತ ಅಸಹ್ಯಕರವಾಗಿ ನಡೆದ ಮೂರು ವ್ಯವಸ್ಥೆಗಳ ನಡುವಿನ ತಿಕ್ಕಾಟ. ವಕೀಲರು, ಮಾಧ್ಯಮ ಮತ್ತು ಪೋಲಿಸ್ ವ್ಯವಸ್ಥೆಯ ನಡುವೆ ನಡೆದ ದೊಂಬಿಗೆ(ಕ್ಷಮಿಸಿ ದೊಂಬಿ ಅಲ್ಲದೆ ಬೇರೆ ಪದ ಬಳಸೋದು ಸೂಕ್ತ ಅನ್ನಿಸಲಿಲ್ಲ) ಕರ್ನಾಟಕ ಸಾಕ್ಷಿಯಾಗಿದ್ದು ನಾಚಿಕೆಗೇಡಿನ ವಿಷಯ.ಯಾವ ವ್ಯವಸ್ಥೆಯನ್ನ ಪ್ರಜಾಪ್ರಭುತ್ವದ ಜವಬ್ದಾರಿ ವ್ಯವಸ್ಥೆ ಎನ್ನುತ್ತೇವೋ ಅವುಗಳೆ ಪ್ರಭುತ್ವ ಮೆರೆಯುವದಕ್ಕಾಗಿ ಈ ಪರಿಸ್ಥಿತಿಯನ್ನು ತಂದೊಡ್ಡಿದ್ದನ್ನು ನಾವು ಅನಿವಾರ್ಯವಾಗಿ ನೋಡಬೇಕಾಯಿತು.ಈ ಘಟನೆಯ ನಂತರ ಸುಮ್ಮನೆ ಇದನ್ನ ಅವಲೋಕಿಸಿದಾಗ ಕೆಲವೊಂದು ಗಂಭೀರ ಪ್ರಶ್ನೆಗಳೂ ಎದ್ದು ನಿಂತಿದೆ.ಇಲ್ಲಿ ಘಟನೆಗೆ ಕಾರಣಕರ್ತರೂ ಯಾರೆ ಆಗಿರಬಹುದು ಆದರೆ ಮಾಧ್ಯಮವು ಇದನ್ನು ತೋರ್ಪಡಿಸಿದ ರೀತಿ, ಕಾನೂನು ಸುವ್ಯವಸ್ಥೆಗಳನ್ನು ಕಾಪಾಡಬೇಕಾದ ಪೋಲಿಸರು ನಡೆದುಕೊಂಡ ರೀತಿ, ಪುಂಡತನ ಮೆರೆದ ವಕೀಲರ ಬಳಗ, ಎಲ್ಲಾರೂ ಒಂದಿಲ್ಲೊಂದು ರೀತಿಯಲ್ಲಿ ಜನತೆಯ ಮುಂದೆ ಅನುಮಾನಾಸ್ಪದವಾಗಿ ನಡೆದು ಪ್ರಶ್ನೆಗಳ ಹುಟ್ಟುವಿಕೆಗೆ ಕಾರಣರಾಗಿರುತ್ತಾರೆ.

ಸುಪ್ರಿಂಕೋರ್ಟ್ ಮತ್ತು ಹೈಕೋರ್ಟ್ ನಲ್ಲಿ ಮಾಧ್ಯಮ ಮಿತ್ರರ ಸಂವಾದಕ್ಕಾಗೆ ಸೂಕ್ತ ಸ್ಥಳವಿರುತ್ತದೆ.ಆದರೆ ಸಿಟಿ ಸಿವಿಲ್ ಕೋರ್ಟ್ನಲ್ಲಿ ಈ ವ್ಯವಸ್ಥೆ ಇಲ್ಲದುದರಿಂದಾಗಿ ಮಾಧ್ಯಮದವರು ಜನಾರ್ಧನ ರೆಡ್ಡಿ ವಿಚಾರಣೆಗೆ ಸಂಬಂಧಿಸಿದ ದೃಶ್ಯಗಳನ್ನು ಸೆರೆ ಹಿಡಿಯಲು ಕೋರ್ಟ್ ಆವರಣದೊಳಗೆ ಪ್ರವೇಶಿಸಿದ್ದೇವೆ ಅನ್ನೋದು ಮಾಧ್ಯಮದವರ ವಾದ.ಹೈಕೋರ್ಟ್ ಅದೇಶದಂತೆ ಇದು ತಪ್ಪು ಅದಕ್ಕಾಗೆ ನಾವು ಪ್ರಶ್ನೆ ಮಾಡಲಾಗಿ ವಾಗ್ವಾದ ಶುರುವಾಗಿ ಜಗಳ ಶುರುವಾಯಿತು ಅನ್ನೋದು ವಕೀಲರ ವಾದ.ಸಭ್ಯತೆ ಮೆರೆಯಬೇಕಾದ ವಕೀಲರು ಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿದ್ದು ತಪ್ಪೆ.ಅದು ಸರಿ ಎಂದು ವಾದಿಸಲು ಬರುವದಿಲ್ಲ ಆದರೆ ಮಾಧ್ಯಮದವರಿಗೆ ಈ ತಿಳುವಳಿಕೆ ಇಲ್ಲವಾಗಿತ್ತೆ?ಆಥವಾ ಪ್ರಚೋದನೆಗಾಗಿ ಈ ರೀತಿ ಆಯಿತ? ಮಾಧ್ಯಮಕ್ಕೆ ಇಂತದ್ದೋಂದು ಜಗಳ ಬೇಕಿತ್ತಾ? ಅನ್ನೋದು ಇಲ್ಲಿ ಎದ್ದಿರುವ ಪ್ರಶ್ನೆ ಯಾಕೆ ಅನ್ನೋದನ್ನ ಜಗಳ ಎದ್ದ ಇನ್ನೊಂದು ಕಾರಣ ಇದೆಂದು ಸುದ್ದಿಯಾದ ಇನ್ನೊಂದು ಸುದ್ದಿಯನ್ನು ತಿಳಿಯುತ್ತಾ ಪ್ರಶ್ನೆಗಳನ್ನ ಹಾಕೋಣ.

ಜನಾರ್ಧನ ರೆಡ್ಡಿಯನ್ನ ಕೋರ್ಟ್ ಆವರಣದೊಳಗೆ ತರುವ ಸಮಯಕ್ಕೆ ಸರಿಯಾಗಿ ಕೋರ್ಟ್ ಆವರಣದ ಪಾರ್ಕಿಂಗ್ ಜಾಗದಲ್ಲಿ ಇಬ್ಬರೂ ವಕೀಲರ ನಡುವೆ ಜಗಳವಾಗುತಿತ್ತು, ಇದನ್ನೂ ಚಿತ್ರಿಕರಿಸಲೂ ಬಂದ ಮಾಧ್ಯಮ ಮಂದಿಯನ್ನು ಕಂಡ ವಕೀಲರೂ ತಮ್ಮ ಜಗಳ ಮರೆತು ಮಾಧ್ಯಮ ಮಂದಿಯನ್ನೂ ಆಟ್ಟಾಡಿಸಿ ಹೊಡೆದಿದ್ದರೂ ಹಾಗೆ ಇನ್ನಷ್ಟೂ ವಕೀಲರೂ ಈ ಕೃತ್ಯದಲ್ಲಿ ಪಾಲ್ಗೊಂಡು ಜಗಳ ಶುರುವಾಗಿತ್ತು, ಇಲ್ಲಿ ಕೆಲವು ತಿಂಗಳ ಹಿಂದೆ ನಗರದ ಮೈಸೂರ್ ಬ್ಯಾಂಕ್ ವೃತ್ತವನ್ನು ತಮ್ಮ ಸ್ವ- ಸಮಸ್ಯಗೆ ೬ ಘಂಟೆ ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದನ್ನೂ ಮಾಧ್ಯಮ ಮಂದಿ ತೀವ್ರವಾಗಿ ಖಂಡಿಸಿದ್ದಕ್ಕೆ ನೀವು ಕೋರ್ಟ್ ಆವರಣ ಪ್ರವೇಶಿಸಿ ಆವಾಗ ನೋಡುತ್ತೇವೆ ಎಂದು ಮಾಧ್ಯಮಗಳಿಗೆ ಧಮಕಿ ಹಾಕಿದ ವಕೀಲರು ಸಮಯಕ್ಕಾಗಿ ಕಾದು ಈ ಸಮಯವನ್ನು ಅದಕ್ಕಾಗಿ ಬಳಸಿದರೆ?ದೊಂಬಿಯಲ್ಲಿ ತೊಡಗಿದ ಕರಿಕೋಟಿನವರೆಲ್ಲ ವಕೀಲರೆ ಆಗಿದ್ದರೆ? ಅನ್ನೋ ಪ್ರಶ್ನೆ ಮೂಡುತ್ತದೆ. ಮೇಲಿನೆರಡೂ ಘಟನೆ ಜಗಳ ಪ್ರಾರಂಭಕ್ಕೆ ಕಾರಣವೆ?ಅದರ ಹಿಂದಿನ ಉದ್ದೇಶ ಮೈಸೂರ್ ಬ್ಯಾಂಕ್ ವೃತ್ತದ ಪ್ರತಿಭಟನೆಯೆ?ಅಥವಾ ಬೇರೆ ಏನಾದರೂ ಕಾಣದ ಕೈ ಇದರ ಹಿಂದೆ ಕೆಲಸ ಮಾಡಿದೆಯೆ? ಗೊತ್ತಿಲ್ಲ ತಿಳಿಸಬೇಕಾದ ಮಾಧ್ಯಮ, ಪೋಲಿಸ್ ವ್ಯವಸ್ಥೆ ದ್ವೇಷ ಸಾಧನೆಯನ್ನ ಮಾತ್ರ ಮಾಡಿದೆ. ಒಂದು ಕೋನದ ವಿಷಯಗಳಷ್ಟೆ ನಮ್ಮ ಅರುಹಿಗೆ ಬಂದಿದೆ.

ಒಂದು ಐವತ್ತೋ ಅರುವತ್ತೋ ಮಂದಿ ವಕೀಲರ ಪುಂಡಾಟಿಕೆಯನ್ನು ತಡೆಯಲು ಪೋಲಿಸರು ಗಂಡು-ಹೆಣ್ಣು ಹಿರಿಯರು-ಕಿರಿಯರು ಬೇಧ ನೋಡದೆ ಕರಿಕೋಟು ಹೊಂದಿದ್ದವರೆಲ್ಲವನ್ನೂ ಅಟ್ಟಾಡಿಸಿ ಹೊಡೆದರಲ್ಲ ಇದು ಎಷ್ಟರ ಮಟ್ಟಿಗೆ ಸರಿ?ಹಾಗೆ ಘಟನೆಯನ್ನು ನಿಯಂತ್ರಿಸಲು ಮನತೋರಿದ್ದರೆ ಮಾಧ್ಯಮ ಮಂದಿಯ ಮೇಲೆ ವಕೀಲರು ಪುಂಡಾಟಿಕೆ ತೋರಿಸಬೇಕಾದರೆ ಪೋಲಿಸರೆನಿಸಿಕೊಂಡವರೆಲ್ಲ ಕೈ ಕಟ್ಟಿ ಕೂತಿದ್ದು ಯಾಕೆ?ಇನ್ನೋಂದು ಗಂಭೀರ ಪ್ರಶ್ನೆ ಏನೆಂದರೆ ರಾಜ್ಯದ ಕ್ಯಾಬಿನೇಟ್ ಮಂತ್ರಿ ಜೈಲು ಸೇರಿದ್ದರೂ,ಮುಖ್ಯಮಂತ್ರಿಯಾಗಿದ್ದವರೂ ಜೈಲೂ ಸೇರಿದ್ದರೂ,ವಕೀಲರೂ,ಮಾಧ್ಯಮದವರೂ,ಪೋಲಿಸರೂ ಏಲ್ಲರೂ ಅವಾಗಲೂ ಇದ್ದರಾದರೂ ಅವಾಗೆಲ್ಲ ಏನೂ ನಡೆದಿಲ್ಲ. ಯಾಕೆ ಜನಾರ್ಧನ ರೆಡ್ಡಿ ಕರ್ನಾಟಕದ ಕೋರ್ಟಿಗೆ ಹಾಜರಾಗಬೇಕಾದರೆ ಈ ಘಟನೆ ನಡೆಯಿತು? ಪೋಲಿಸರು ಯಾಕೆ ರೌಡಿಗಳ ತರ ವರ್ತಿಸಿದರೂ, ಯಾಕೆ ಅವರೆ ಕಾರು ಬೈಕು ಸುಟ್ಟರೂ? ಇವುಗಳ ಹಿಂದೆ ಬೇರೇನಾದರೂ ಕಾರಣ ಇರಬಹುದೇ? ಮೇಲಿನ ಕಾರಣಗಳಷ್ಟೆ ಅಲ್ಲದೆ ಬೇರೇನಾದರೂ ಶಕ್ತಿ ಕೆಲಸ ಮಾಡಿದೆಯೆ?ಇದ್ದರೂ ಇರಬಹುದು ಇಲ್ಲದೆಯೂ ಇರಬಹುದು ಪತ್ತೆ ಹಚ್ಚಬಹುದಾದ ಮಾಧ್ಯಮ ತಮ್ಮ ಮೇಲೆ ಹಲ್ಲೆಯಾಗಿದೆಯೆಂದು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆಗೆ ನಿಂತಿದೆ.ಸದ್ಯಕ್ಕೆ ಅದರ ಮುಂದಿರುವದು ವಕೀಲರ ಮೇಲೆ ಸೇಡು ತೀರಿಸುವದಷ್ಟೆ.
ಗಾಯಾಳು ವಕೀಲರೊಬ್ಬರ ಚಿತ್ರ
ಬಡಪಾಯಿ ಹಲವು ವಕೀಲರು ಏಟು ತಿಂದು ಆಸ್ಪತ್ರೆ ಸೇರಿದರೂ, ಮಾಧ್ಯಮ ಮಂದಿ ಪೋಲಿಸರು ಏಟು ತಿಂದರೂ ಆದರೆ ಮಾಧ್ಯಮದಲ್ಲಿ ಪೋಲೀಸರಿಗೆ ಹಾಗೂ ತನ್ನ ಮಂದಿ ಹೊಡೆಸಿಕೊಳ್ಳುತ್ತಿರುವದಷ್ಟೆ ಎಡೆಬಿಡದೆ ಪ್ರಸಾರವಾಯಿತು.ಒಂದು ಹಂತದಲ್ಲಿ ಎಲ್ಲಿಯವರೆಗೆ ಅಂದರೆ ಪೋಲಿಸನೋರ್ವನನ್ನ ವಕೀಲರೂ ಕೊಂದೆ ಬಿಟ್ಟರೆಂಬ ಮಟ್ಟಕ್ಕೆ ಪ್ರಚಾರಮಾಡಲಾಗಿ ಜನತೆ ವಕೀಲರ ವಿರುದ್ದ ತಿರುಗಿ ಬೀಳುವಂತೆ ಮಾಡಿತು. ಗೃಹ ಸಚಿವರು ಅಂತದ್ದೇನಾಗಿಲ್ಲ ಅನ್ನೋ ಸ್ಪಷ್ಟನೆ ಕೊಡಬೇಕಾಯಿತು.ಯಾಕೆ ವಕೀಲರ ಮೇಲೆ ಪೋಲೀಸ್ ದೌರ್ಜನ್ಯ ನಡೆದಿದ್ದು ಮಾಧ್ಯಮದಲ್ಲಿ ಪ್ರಸಾರವಾಗಲಿಲ್ಲ ಅನ್ನೋದನ್ನ ಮಾಧ್ಯಮದವರಿಗೆ ಪ್ರಶ್ನೆ ಮಾಡಿದರೆ ಅದಾಗಲೆ ಎಲ್ಲಾ ಕ್ಯಾಮಾರಗಳು ಪುಡಿಯಾಗಿದ್ದವೂ ಹಾಗಾಗಿ ವರದಿ ಮಾಡಲಾಗಲಿಲ್ಲ ಅನ್ನೋ ಹಾರಿಕೆಯ ಉತ್ತರ ಸಿದ್ದವಾಗಿತ್ತು.ಸರಿ ನಮ್ಮಲ್ಲೆ ಆ ಬಗ್ಗೆ ದೃಶ್ಯಗಳಿವೆ ಪ್ರಸಾರ ಮಾಡುತ್ತೀರೋ? ಕೇಳಿದಾಗ ಯಾಕೆ ಮೊದಲಾಗಿ ವಕೀಲರು ನಮ್ಮ ಮೇಲೆ ಕೈ ಮಾಡಿದರೂ ಅನ್ನೋದನ್ನ ಅಷ್ಟು ಮಂದಿ ಬಂದು ಹೇಳಿದಲ್ಲಿ ಪ್ರಸಾರಿಸಬಹುದು ಎನ್ನುವ ಅಸಾಧ್ಯ ನಿಭಂದನೆ ಮಾಧ್ಯಮ ಮಂದಿಯಿಂದ ಬಂದಿತ್ತು. ವಕೀಲರ ಮೇಲಿನ ಪೋಲಿಸ್ ದೌರ್ಜನ್ಯದ ಒಂದು ಚಕಾರ ಕೂಡ ಟೀವಿ ಪರದೆಯ ಅಂಡರ್ ಲೈನ್ ನನ್ನೂ ತುಂಬಲಿಲ್ಲ.ವಿಷಯ ಸ್ಪಷ್ಟ ಮಾಧ್ಯಮದ ಮಂದಿ ಕುದ್ದು ಹೋಗಿದ್ದರೂ, ವಕೀಲರ ಮೇಲೆ ಈರ್ಷೆಗೆ ಬಿದ್ದಿದ್ದರೂ ಅವರಿಗೆ ವಕೀಲ ಸಮೂದಾಯವನ್ನೆ ಕೆಟ್ಟದ್ದೆಂದು ತೋರಿಸಬೇಕಾಗಿತ್ತು, ತೋರಿಸಿದರೂ ಕೂಡ ಆದರೆ ಇಲ್ಲಿ ಹುಟ್ಟುವ ಪ್ರಶ್ನೆ ಮಾಧ್ಯಮ ನೀತಿಯ ನೈತಿಕತೆಯ ಪ್ರಶ್ನೆ? ನೈಜ ಸುದ್ದಿಯನ್ನು ಬಿತ್ತರಿಸುತಿದ್ದೇವೆ ಎಂದು ಹೇಳೂತ್ತಾ ಜನತೆಯನ್ನೂ ಮೂರ್ಖರಾಗಿಸುವದು ಯಾಕೆ ಎಂಬ ಪ್ರಶ್ನೆ?ಜನತೆಯಲ್ಲಿ ಭಯ ಭೀತಿ ಹುಟ್ಟು ಹಾಕಿದ್ದೂ ಯಾಕೆಂಬ ಪ್ರಶ್ನೆ?

ಸರ್ಕಾರವೇನೋ ಎಲ್ಲಾ ಮುಗಿದ ಮೇಲೆ ನ್ಯಾಯಾಂಗ ತನಿಖೆಗೆ ಆದೇಶ ನೀಡಿದೆ.ಗಾಯಾಳುಗಳೂ ಚೇತರಿಸಿಕೊಳ್ಳುತಿದ್ದಾರೆ,ಆದರೆ ಪ್ರಶ್ನೆ ಇದೂ ಇಲ್ಲಿಗೆ ಮುಗಿಯುತ್ತಾ? ಎಂಬುದು.ಒಂದು ವೇಳೆ ಈ ದ್ವೇಷ ಅಸೂಹೆಗಳೂ ಅಹಂಗಳೂ ಹೀಗೆ ಮುಂದುವರಿದರೆ ಮೊದಲಿಗೆ ದೊಡ್ಡ ಕೊಡಲಿ ಏಟು ಬೀಳುವದು ಪ್ರಜಾಪ್ರಭುತ್ವ ಮೌಲ್ಯಗಳಿಗೆ. ಅಂದು ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಪೋಲಿಸರು ಒಂದು ಸಣ್ಣ ಕಣ್ಣ ಸನ್ನೆಯ ಮೂಲಕ ಬರೀಯ ಜನತೆಯನ್ನ ಪ್ರಚೋದಿಸಿದ್ದರೂ ಸಾಕಿತ್ತು ವಕೀಲರನ್ನ ಸಾರ್ವಜನಿಕರೆ ವಿಚಾರಿಸುತಿದ್ದರೂ. ಸಂಯಮ ಮೆರೆದ ಪೋಲೀಸರ ಬಗ್ಗೆ ಅಂದು ಗೌರವ ಮೂಡಿತ್ತು ಅದೇ ಈ ಪ್ರಕರಣ ಅದೆ ಪೋಲಿಸರ ಮೇಲೆ ಅಸಹ್ಯ ಮೂಡಿಸುತ್ತಿದೆ.ಮಾಧ್ಯಮಗಳೂ ಸುಭಗರಲ್ಲ ಅನ್ನುವದೂ ಎಲ್ಲರೀಗೂ ಗೊತ್ತಿರುವ ವಿಷಯವೆ.ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಪ್ರಸಾರವನ್ನೂ ನಿಲ್ಲಿಸಿ ಒಟ್ಟಾಗಿ ನಿಂತು ಪ್ರತಿಭಟಿಸಿದ ಇಲೆಕ್ಟ್ರಾನಿಕ್ ಮಾಧ್ಯಮ ಈ ನೆಲದ, ಜಲದ,ಜನದ ಸಮಸ್ಯೆ ಬಂದಾಗಲೂ ಹೀಗೆ ಒಗ್ಗಾಟ್ಟಾಗಿ ನಿಲ್ಲುವದೆ?ಹಿಂದೆ ಎಂದೂ ನಿಂತಿಲ್ಲ ಮುಂದೆ ಗೊತ್ತಿಲ್ಲ ನಿಲ್ಲಲಿ ಅನ್ನೋ ಆಶಯ ಇಟ್ಟುಕೊಳ್ಳೋಣ.ಇತ್ತೀಚೆಗೆ ವಕೀಲರ ಪುಂಡಾಟಿಕೆಯೂ ಈ ಪ್ರಕರಣದ ಹೊರತಾಗಿಯೂ ಅತಿಯಾಗಿದೆ.ಹೆಚ್ಚಿನೆಲ್ಲ ಹಿರಿಯರೂ ತಮಗ್ಯಾಕೆ ಅನ್ನೋ ನಿಲುವು ತಾವಾಯಿತು ತಮ್ಮ ಕೆಲಸವಾಯಿತು ಅಂತಿರಬೇಕಾದರೆ ಕಿರಿಯ ವಕೀಲರಿಗೆ ಮಾರ್ಗದರ್ಶನ ಕೊರತೆಯಿಂದ ಹೀಗಾಗುತ್ತಿದೆಯೆ? ಗೊತ್ತಿಲ್ಲ ಇದಲ್ಲದೆ ಬೇರೆ ಬೇರೆ ಕಾರಣಗಳೂ ಇರಬಹುದು.ಒಂದಂತೂ ಸ್ಪಷ್ಟ ಇಲ್ಲಿ ಪರಸ್ಪರ ಅಹಂ ಎಲ್ಲಕ್ಕಿಂತ ಹೆಚ್ಚಾಗಿ ಕೆಲಸ ಮಾಡಿದೆ ಅನ್ನಬಹುದು.ಪ್ರಜಾಪ್ರಭುತ್ವದ ಆಶಯಗಳನ್ನು ಸ್ವೇಚ್ಚೆಯೆಂದು ಅನುಭವಿಸ ಹೊರಟಾಗ ಇಂತಹ ಸಮಸ್ಯೆಗಳೂ ಉದ್ಬವವಾಗುತ್ತೆ.ಪರಸ್ಪರ ವೃತ್ತಿ ದ್ವೇಷಗಳೂ,ಅಹಂಗಳೂ ಅದಷ್ಟೂ ಬೇಗನೆ ಪರಸ್ಪರ ಬಗೆಹರಿಯಲಿ. ಅದರೆ ಈ ಕೂಡಲೆ ಈರ್ಷೆಗಳೂ ಕೊನೆಯಾಗುವದೆ ಎಂಬುದು ಪ್ರಶ್ನೆ?ನಿಜ ತಪ್ಪಿದಸ್ಥರಿಗೆ ಶಿಕ್ಷೆಯಾಗುತ್ತಾ ಅನ್ನುವದು ಪ್ರಶ್ನೆ?