Friday, March 23, 2012

ನಾನು ಮತ್ತು ಬೆಂಗಳೂರು

ಬೆರಗು ಬೆಂಗಳೂರು:-
ಮೊದಲು ಸ್ವತಂತ್ರವಾಗಿ ಪಟ್ಟಣಕ್ಕೆ ಬಂದಿದ್ದು ನನ್ನ 5 ನೆ ಕ್ಲಾಸಿನಲ್ಲಿರಬಹುದು.ಅದೂ ಯಾವ ಪಟ್ಟಣ ಕೇಳ್ತೀರ? ಬೆಂಗಳೂರು, ಮಂಗಳೂರಿನಲ್ಲಿ ಹುಟ್ಟಿ ಬೆಳೆದ ನಗರವಾಸಿಗಳಿಗೆ ಪಟ್ಟಣವೆ ಆಗಿರದ ಉಪ್ಪಿನಂಗಡಿಗೆ, ಬಹುಶಃ ಕಳಿಸಬೇಕೊ ಬೇಡವೊ ಎಂಭ ದ್ವಂದ್ವದಲ್ಲೆ ಅವತ್ತು ಪೇಟೆಗೆ ಹೋಗಿ ಬಾ ಅಂತ ಅಪ್ಪ ಕಳಿಸಿರಬೇಕು, ನಮ್ಮ ಹಳ್ಳಿಯಲ್ಲಿದ್ದ ಸಾರಿಗೆ ಸಂಪರ್ಕದ ಕೊರತೆ, ನಮ್ಮ ಹಳ್ಳಿಯಲ್ಲಿ ವಾಹನಗಳನ್ನು ಎದುರಿಸಿ ಗೊತ್ತಿಲ್ಲದ ನನಿಗೆ ಹೆಂಗಪ್ಪಾ ಇವನನ್ನು ಒಬ್ಬಂಟಿಯಾಗಿ ಕಳಿಸೋದು,ರಸ್ತೆ ದಾಟಲು ಗೊತ್ತಾಗುತ್ತೊ ಇಲ್ವೊ? ಊರಿಗೆ ಇರೊ ಸಾರಿಗೆ ಅಂದರೆ ಜೀಪುಗಳು ಅದು ಬೆರಳೆಣಿಕೆ ಅದು ತಪ್ಪಿದರೆ ಬೇರೆ ದಾರಿಯಿಲ್ಲ ಕಾಲ್ನಡಿಗೆಯೊಂದನ್ನು ಬಿಟ್ಟು ಅದು ಬರೋಬ್ಬರಿ 10 ಕಿ ಮಿ, ಈ ಎಲ್ಲ ತರಲೆ ತಾಪತ್ರಯವು ಇರೋದರಿಂದ ಮೊದಲ ಭಾರಿಗೆ ಪೇಟೆಗೆ ಕಳಿಸಬೇಕಾದಾವಾಗ ಅಪ್ಪ ಯೋಚಿಸಿರಬಹುದು.ಸ್ವತಂತ್ರವಾಗಿ ಓಡಾಡಿದ ಮೊದಲ ದಿನ ನೆನಪಿಗೆ ಬಂದು ಹೇಳಿದೆನಷ್ಟೆ, ಹೀಗೆ ಒಂದು ಮೂರು ನಾಲ್ಕು ಭಾರಿ ಒಡಾಡಿದ ನಂತರವಷ್ಟೆ ಮನೆಯವರಿಗೆ ಇವ ಓಡಾಡಬಲ್ಲ ಅನ್ನೊ ಖಾತರಿ ಬೆಳೆದಿದ್ದು ಅಂತ ಅಂದುಕೊಳ್ಳುತ್ತೇನೆ.ನಂತರ ಮಂಗಳೂರಂತ ಪಟ್ಟಣ ಪ್ರವೇಶ ಮುಂತಾದವು ಸಾಂಗವಾಗಿ ನಡೆದವು, ಹಲವು ಪಟ್ಟಣಗಳನ್ನು ಸುತ್ತಿಯಾಯಿತು,ಆದರೆ ಅದು ಕರಾವಳಿಯ ಪಟ್ಟಣಗಳಿಗಷ್ಟೆ ಸೀಮಿತ. ಹೀಗಿರಬೇಕಾದರೆನೆ ಕೆಲಸದ ನಿಮಿತ್ತ ಬೆಂಗಳೂರನ್ನ ಪ್ರವೇಶ ಮಾಡಿದ್ದು.ಹಾಗಂತ ಬೆಂಗಳೂರಿಗೆ ಬರೋದು ಮೊದಲೇನಲ್ಲ ಬಹಳ ಸಲ ಬಂದಾಗಿತ್ತು ಬೆರಗು ಕಣ್ಣಿನಿಂದ ನೋಡಾಗಿತ್ತು ಆಗೆಲ್ಲ ಕೈಹಿಡಿದುಕೊಂಡು ಜೊತೆಗೊಬ್ಬರು ಇರುತಿದ್ದರು, ಆದರೆ ನಿಜ ಬೆಂಗಳೂರ ಅನುಭವ ನಾನೊಬ್ಬನೆ ಸ್ವತಂತ್ರವಾಗಿ ಬಂದಾವಾಗ ಆಗಿತ್ತು.ಬೆಂಗಳೂರಂತ ಹಲವು ಮಹಾನಗರವನ್ನು ಇವತ್ತು ನಾ ನೋಡಿರಬಹುದು ಅಷ್ಟಾಗಿ ಎಲ್ಲಿಯೂ ಏನೊಂದು ಕಷ್ಟ ಪಡದೆ ನನ್ನ ಕೆಲಸ ಮುಗಿಸಿಕೊಂಡು ನಾನಿವತ್ತು ಮರಳಬಹುದು ಅದೆಲ್ಲಾ ಬೆಂಗಳೂರಿನ ಅನುಭವಗಳು ಕಲಿಸಿ ಕೊಟ್ಟಿದ್ದು ಅಂದರೆ ತಪ್ಪಾಗಲಾರದು.ಈ ಪ್ರಯಾಣಗಳ ಮೊದಲ್ವಿಕೆ ಶುರುಗೊಂಡಿದ್ದೆ ಬೆಂಗಳೂರಿನಿಂದ ಅನ್ನಬಹುದು ಅದಕ್ಕಾಗೆ ಇಂಥ ಅನುಭವಗಳನ್ನು ಹಂಚಿಕೊಳ್ಳೋಣವೆಂದೆ ಈ ಬರಹಕ್ಕೆ ಅಡಿಯಿಟ್ಟೆ.

ಮಂಗಳೂರಿನಿಂದ ಬಸ್ ಹತ್ತಿ ಬೆಳಿಗ್ಗೆ ಬೆಂಗಳೂರು ಇಳಿದಾವಾಗ ಸರಿ ಸುಮಾರು ಮುಂಜಾವಿನ 5.30 ರ ಸಮಯ.ಅಂದಂಗೆ ಬೆಂಗಳೂರಿಗೆ ಜಾಬ್ ಮೇಲೆ ಟ್ರಾನ್ಸ್ಪರ್ ಆಗಿ ಮಂಗಳೂರಿನಲ್ಲಿ 7-8 ತಿಂಗಳು ಸೇವೆ ಸಲ್ಲಿಸಿ ಬಂದವ ನಾನು, ಬೆಂಗಳೂರಿನ ಪರಿಜ್ಞಾನದ ಲವಲೇಷವು ಇರಲಿಲ್ಲ.ಬಸ್ಸಿಳಿದು ನಿಂತ ನಂಗೆ ಆ ಮುಂಜಾವು ಆ ಪರಿ ಜನ ಆ ಪರಿಯ ಬಸ್ಸುಗಳು ಬಂದು ನಿಲ್ಲುವದ ನೋಡಿ ಸೋಜಿಗವೆನಿಸಿತ್ತು.ಬಸ್ ಸ್ಟಾಂಡ್ ಬಿಟ್ಟು ಹೊರಬರುವದೆಂತು ತಿಳಿಯದಾಗಿದ್ದು ನಿಜನೆ, ಹೊರ ಬಂದು ಎಲ್ಲಿಗೆ ಹೋಗ್ಬೇಕು ಅನ್ನುವದು ಗೊತ್ತಿಲ್ಲ, ನಮ್ ಮ್ಯಾನೇಜರ್ ಬೆಳಿಗ್ಗೆ 8 ಘಂಟೆಗೆ ಪೋನ್ ಮಾಡಲು ತಿಳಿಸಿದ್ದರು, ಅವಾಗ ಈಗಿನಂತೆ ಮೊಬೈಲ್ ಸರ್ವೆ ಸಾಧಾರಣವಾಗಿ ಎಲ್ಲರ ಕೈ ಗೂ ಬಂದಿಲ್ಲದ ದಿನಗಳು,ಮೊಬೈಲ್ ಇದೆ ಅಂತಾದರೆ ಆತನನ್ನು ಜನಗಳು ನೋಡುವ ಅವರಿಗೆ ಕೊಡುವ ಸ್ಥಾನ ಮಾನನೆ ಬೇರೆ, ಹೀಗಿರಬೇಕಾದರೆ ಎತ್ತ ಹೋಗೋದು ತಿಳಿಯದೆ ವಸತಿ ಗೃಹದಲ್ಲಿ ಒಂದು ರೂಂ ಮಾಡಲು ಕೂಡ ಸಾಧ್ಯವಾಗದೆ ಸ್ಟಾಂಡಲ್ಲೆ ಕಾಲಹರಣ ಮಾಡುತ್ತಾ ಕೂತಿದ್ದೆ.ಜನಗಳ ದೌಡು,ಇಂಗ್ಲೀಷ್,ಕನ್ನಡ,ಹಿಂದಿ,ತಮಿಳು,ತೆಲುಗು ಇನ್ನಿತರ ಭಾಷೆ ಮಾತಾಡೊ ಮಂದಿ, ಅಲ್ಲಲ್ಲಿ ಬೆಳ್ಳಗೆ ಹೊಳೆಯೊ ಫಾರಿನರ್ಸ್, ಭಿಕ್ಷುಕರು,ಕಂಕುಳಲ್ಲಿ ಮಗುವನ್ನೆತ್ತಿ ಸಾಗುವ ಮಹಿಳೆಯರು, ದೊಡ್ಡ ದೊಡ್ಡ ಬ್ಯಾಗ್ 2 ಕೈಯಲ್ಲಿ ಒಂದೊಂದು, ಭುಜದಲ್ಲಿ ಇನ್ನೊಂದು ಇಟ್ಕೊಂಡು ಬಸ್ಸು ಹುಡುಕುವ ಅವರ ಗಂಡಂದಿರು, ಎಲ್ಲೆಲ್ಲೂ ಜೀನ್ಸ್ ಪ್ಯಾಂಟ್ ಧರಿಸಿಕೊಂಡ ಹುಡುಗೀರು,ಥಟ್ಟಣೆ ಇಣುಕಿದ ಮಿಡಿ ಧರಿಸಿದ ಹುಡುಗೀರು, ಕೂಲಿಯಾಳುಗಳು, ರಾತ್ರಿ ಪ್ರಯಾಣ ಮುಗಿಸಿ ಇಳಿಯೊ ಪ್ರಯಾಣಿಕರು, ಬಸ್ಸಿಳಿಯುತ್ತಲೆ ಎಲ್ಲಿಗೆ ಸಾರ್ ಅಟೋ ಬೇಕಾ ಅಂಥ ಕಿರಿ ಕಿರಿ ಮಾಡುವ ಅಟೋ ಚಾಲಕರು,ಕರ್ನಾಟಕದ ಎಲ್ಲಾ ಊರಿನ ಹೆಸರು ಕೂಗುತಿದ್ದ ಬಸ್ ನಿರ್ವಾಹಕರುಗಳು,ತೆಲುಗು, ತಮಿಳು ಹೆಸರನ್ನೊತ್ತ ಹೊರ ರಾಜ್ಯದ ಬಸ್ಸುಗಳು, ಬಸ್ ಸ್ಟಾಂಡ್ ಅಂಗಡಿಗಳಲ್ಲಿ ಕಿಕ್ಕಿರಿದು ನಡೆಯುತಿದ್ದ ವ್ಯಾಪಾರಗಳು, ಟೀ ಕಫ್ ಹೊತ್ತು ಅಲ್ಲೆ ನಿತ್ತು ಸೇವಿಸುತಿದ್ದ ಜನಗಳು, ಸ್ಥುರದ್ರೂಪಿ ಯುವಕರುಗಳು,ಇವೆನ್ನೆಲ್ಲ ನೋಡುತ್ತಾ ಪ್ರಪಂಚವೆ ನನ್ನೆದುರು ಬಂದಿದೆಯೊ ಎಂಭ ಭ್ರಮೆಯೊಂದಿಗೆ ಟೈಮ್ ಪಾಸ್ ಮಾಡುತಿದ್ದೆ, ಬಿಯಂಟಿಸಿ ಬಸ್ ಸ್ಟಾಂಡ್ ಇದೆಯೆಂದು ಗೊತ್ತು ಎಲ್ಲಿ ಅನ್ನೋದು ಗೊತ್ತಿಲ್ಲ ಯಾರತ್ರ ಆದ್ರು ಕೇಳೋಣವೆಂದರೆ ಈ ದೌಡಿನೊಂದಿಗೆ ಮೌನವಾಗಿ ಬೆರಗಾಗಿ ಮಾತೆ ಮರೆತ ಪರಿಸ್ಥಿತಿ ನನ್ನದು, ಊರಲ್ಲಾದರೆ ಬಸ್ ಸ್ಟಾಂಡಲ್ಲಿ ಈ ಪರಿ ಹ್ಯಾಫ್ ಮೋರೆ ಹಾಕೊಂಡಿದ್ದರೆ ಒಂದು ಹತ್ತು ಮಂದಿ ಎಲ್ಲಿಗೋಗ್ಬೇಕಪ್ಪ ಅಂತ ಕೇಳುತಿದ್ದರು ಬರೋಬ್ಬರಿ 2.30 ತಾಸಿನಲ್ಲಿ ಮಾತಾಡಿಸಿದವರು ವಿಚಾರಿಸಿದವರು ಒಬ್ಬರು ಇಲ್ಲ, ಕಣ್ಣೆದುರು ಎಲ್ಲಾ ಇದ್ದು ಜನರಾಶಿಯೆ ಇದ್ದರು ನಾನೊಬ್ಬನೆ ಪರಕೀಯ ಅನಿಸಿತ್ತು.ಹಾ ಇದು ಸೂಮಾರು 10 ವರುಷದ ಹಿಂದೆ ಬೆಂಗಳೂರಿಗೆ ಅಡಿಯಿಟ್ಟ ಒಂದು ಮುಂಜಾವಿನ ನೆನಪು.

ಹಂಗೆ ಬಸ್ಟಾಂಡ್ ಮೂಲೆಯಲ್ಲಿದ್ದ ಹೋಟೇಲಿನಲ್ಲಿ ಎನೋ ಒಂದಿಷ್ಟು ತಿಂದು 2 ಚಾ ಕುಡಿದು ಯಾಕೆಂದರೆ ಊರಿನ 1 ಚಾ ಕ್ಕೆ ಸಮಾನಾಗಬೇಕಲ್ಲ ಅಲ್ಲಿನ1 ಚಾ ಇಲ್ಲಿನ 3 ಚಾ ಕ್ಕೆ ಸಮ.ಎಂತೊ ಒಂದಷ್ಟರ ಮಟ್ಟಿಗೆ ಚಲನ ಶೀಲತೆಯ ಪಡೆದು ಗಂಟೆ 8 ಅನ್ನುತಿದ್ದಂತೆ ಜೀಬಿನಲ್ಲಿ 1 ರೂಪಾಯಿ ಕಾಯಿನ್ ಗೆ ತಡಕಾಡಿ ಕ್ರೆಡಲೆತ್ತಿ ಕಾಯಿನ್ ಹಾಕಿ ನನ್ ಮೆನೇಜರ್ ಗೆ ಡಯಲಿಸಿದ್ದೆ.ಅತ್ತಲಿಂದ ಕೋರಮಂಗಲ ಬಸ್ ಕಲ್ಯಾಣ ಮಂಟಪ ಸ್ಟಾಪ್ ಗೆ ಬಂದು ಬಿಡು ಅಲ್ಲಿಂದ ಕಾಲ್ ಮಾಡು ಬಸ್ ನಂಬರ್ 171,ಲಗೇಜ್ ರೂಮಲ್ಲಿ ಲಗೇಜ್ ಇರಿಸಿ ಬಾ ಅನ್ನಲು ಕಾಲ್ ಕಟ್ ಆಗುವದೆ,ಜೇಬಲ್ಲಿ ಕಾಯಿನ್ ಗೆ ತಡಕಾಡಿದೆ ಇಲ್ಲ, ಸರಿ ಆಗಿದ್ದು ಆಗಲಿ ಅಂತ ಲಗೇಜ್ ರೂಮಲ್ಲಿ ಲಗೇಜ್ ಇರಿಸಿ ಸಂಜೆ ಬರುತ್ತೇನೆಂದು ಹೇಳಿ, ರಿಸೀವ್ ಮಾಡ್ಕೊಳ್ಳಕ್ಕೆ ಯಾರಾದರೊಬ್ಬರು ಬರಬಾರದೆ ಅಂತ ಮನದಲ್ಲೆ ಹಿಡಿ ಶಾಪ ಹಾಕುತ್ತಾ ಬಿಯಂಟಿಸಿ ಬಸ್ ಸ್ಟಾಂಡ್ ಗೆ ಹೊಗೋದೆಲ್ಲಿ ಅಂತ ಒಬ್ಬರಲ್ಲಿ ದಾರಿ ಕೇಳಿದೆ, ಪ್ಲೈ ಓವರ್ ಹತ್ತು ಹಂಗೆ ಹೋಗು ಅಂತಂದರು,ಭಾಷೆ ಕೇಳಿ ಮಂಗಳೂರ ಅಂತ ಕೇಳಿನೂ ಆಗಿತ್ತು. ಹೆಂಗೆ ಗೊತ್ತಾಗುತ್ತಪ್ಪ ಈ ಜನಗಳಿಗೆ ಅಂತಂದುಕೊಂಡು ಪ್ಲೈ ಓವರ್ ಹತ್ತಿದ್ದೆ. ಬಸ್ ಹಿಡಿಯೋ ಬದಲು ಪ್ಲೈ ಓವರ್ ಮೇಲಿನ ವ್ಯಾಪಾರಿಗಳನ್ನು ನೋಡಿ ಜಾತ್ರೆಯ ಸಂತೆ ನೋಡಿದಂಗೆ ಆಗಿತ್ತು.ಹಂಗೆ ಅವರನ್ನೆ ನೋಡುತ್ತಾ ಬಸ್ ಸ್ಟಾಂಡ್ ತಲುಪುವ ಬದಲು ಇನ್ನೊದಂಚಿನ ರಸ್ತೆ ತಿಲುಪಿದ್ದೆ, ಥಥ್ತೇರಿಕೆ ಅದೆಲ್ಲಿ ಇಳಿಯೋದು ಗೊತ್ತೆ ಆಗಲಿಲ್ವೆ ಅನ್ನುತ್ತಾ ಕೋರಮಂಗಲ ಕಲ್ಯಾಣ ಮಂಟಪ ಸ್ಟಾಪ್ ಹೋಗ್ಬೇಕು ಅನ್ನುತ್ತ ಅಟೋ ಏರಿದ್ದೆ, ಅದು ಮೂರು ಅಟೋಗಳು ಬರಲ್ಲ ಅಂದ ನಂತರದ ನಾಲ್ಕನೆ ಅಟೋ. ಈ ಪ್ರಸಂಗ ಈಗಲೂ ನೆನಪಾಗಿ ನನ್ನ ಪೆಕರುತನ ನೆನಪಿಸಿಕೊಂಡು ನಗೋದುಂಟು.ಅಟೋದವನಿಗೆ ನಾನೊಳ್ಳೆ ಕುರಿಮರಿಯ ಕಂಡ ಹಂಗೆ ಆಗಿರಬೇಕು,ಊರೂರು ಸುತ್ತಿಸಿ ಕೋರಮಂಗಲ ತಲುಪಿದ್ದ ಮೀಟರ್ ನೋಡ್ತೀನಿ 380ರೂಪಾಯಿ ಆ ಕಾಲದಲ್ಲಿ. ಯಪ್ಪಾ ಶಿವ ಇರಬಹುದು ತಾಸಿಗೂ ಮೇಲು ಹಿಡಿದಿತ್ತಲ್ಲ ಅಂದು ಕೊಂಡು ಮರು ಮಾತಿಲ್ಲದೆ ಕೊಟ್ಟೆ. ಕೊಲೀಗ್ ಒಬ್ಬ ಬರೀಯ 40 ರುಪಾಯಿ ಆಗೋದಷ್ಟೆ ಅಂದಾಗ ತಲೆಗೆ ಮರ ಬಿದ್ದಂತಾಗಿತ್ತು. ಹೀಗೆ ಮೊದಲ ದಿನ ವರ್ಕ್ ಪ್ಲೇಸ್ ತಲುಪಿದ್ದೆ.ಆಗಲೂ ತಲೆಯಲ್ಲಿ ಒಂದೆ ಚಿಂತೆ ಸಂಜೆ ಎಲ್ಲಿಗೆ ಹೋಗೋದು? ರೂಮ್ ವ್ಯವಸ್ಥೆಯ ಬಗ್ಗೆ ಏನೊಂದು ಖಾತರಿಯಾಗಿಲ್ಲವಿತ್ತು.ಸಂಜೆಯ ಸುಮಾರಿಗೆ ಕೇಳಿಯೆ ಬಿಟ್ಟೆ, ದಯಾ ಅಂತ ಒಬ್ಬರ ರೂಮಲ್ಲಿ ಶೇರ್ ಮಾಡ್ಕೊ ಮಾತಾಡಿದ್ದೇವೆ ಅಂತ ಮೆನೇಜರ್ ಅಂದಾಗಲೆ ಸಮಾಧಾನ.ಡ್ಯೂಟಿ ಮುಗಿದ ನಂತರ ಮತ್ತೆ ಮೆಜೆಸ್ಟಿಕ್ ಬಸ್ ಹಿಡಿದಿವಿ, ಆಗಲೂ ಸಣ್ಣದೊಂದು ಪ್ರಸಂಗ ನಡೆಯಿತು.ಜೊತೆಗೆ ರೂಮ್ ಶೇರ್ ಮಾಡ್ಕೊಬೇಕಾಗಿರುವ ದಯಾ ಕೂಡ ಇದ್ದರು, ಕೆಂಪೆಗೌಡ ಬಸ್ ನಿಲ್ಧಾಣ ಅಂದರೆ ಮೆಜೆಸ್ಟಿಕ್ ಅನ್ನುವ ಅರಿವಿಲ್ಲ, ನಾನು ಮೆಜೆಸ್ಟಿಕ್ ಅಂತ ಬರೆದಿಲ್ಲವೆಂದು ಬಸ್ ಏರಿನೆ ಇಲ್ಲಾ ಇತ್ತು. ಅವರು ಬಸ್ಸೇರಿ ನಾ ಕಾಣದಾಗಿ ಮತ್ತೆ ಬಂದು ವಿಷಯ ಅರುಹಿ ನನ್ನಂತ ಪೆಕರನನ್ನು ಕರೆದುಕೊಂಡು ಹೋಗಿದ್ದರು.ಮಂಗಳೂರು ಮಂಜುನಾಥ ಬೆಂಗಳೂರು ಬಂದ ಕಾಶೀನಾಥ್ ಡೈಲಾಗ್ ನೆನಪಾಗಿತ್ತು :) ಹೀಗೆ ಲಗೇಜ್ ಬಿಡಿಸಿಕೊಂಡು ರೂಂ ಸೇರೊತ್ತಿಗೆ ಬರೋಬ್ಬರಿ 9.30 ಘಂಟೆ. ನಂತರ ಅದೇನೊ ಮಾಡಿ ಹಾಕಿದ್ದನ್ನು ಹೊಟ್ಟೆ ತುಂಬಾ ತಿಂದು ಚಾಪೆ ಸೇರಿದ್ದೆ. ಹೀಗೆ ಮೊದಲ ಬೆಂಗಳೂರಿನ ನನ್ನ ಸ್ವತಂತ್ರ ಪಯಣ ಒಂದು ದಿನವ ಕಳೆದಿತ್ತು.
****************************************************************************
ಬೆಂಗಳೂರಿಗೆ ಒಗ್ಗಿಕೊಂಡಿದ್ದು ಹಾಗು ನೋಡಿದ್ದು:-

ಮೊದಲಿಗೆ ನಂದು ಫೀಲ್ಡ್ ವರ್ಕ್ ಅದು ಮೊಬೈಲ್ ಟವರ್ ಟವರ್ ಗೆ ಸುತ್ತಾಟ, ಹಿಂದೆ ಮುಂದೆ ಗೊತ್ತಿಲ್ಲದ ಊರಿನಲ್ಲಿ ಅಡ್ರೆಸ್ ಹಿಡಿದು ಊರು ಸುತ್ತುವ ಪರಿಪಾಟಲು ಏಂತಿದ್ದೀತು ಎಂಭ ಊಹನೆಗಳನ್ನ ನಿಮ್ಮ ನಿಲುಕಿಗೆ ಬಿಡುತ್ತೇನೆ.2-3 ತಿಂಗಳು ಕಷ್ಟನೊ ಸುಖನೊ ರಿಚ್ಮಂಡ್ ನಿಂದ ಹಿಡಿದು ಅತ್ತಿಬೆಲೆ,ಆನೇಕಲ್, ವೈಟ್ ಪೀಲ್ಡ್,ಕನಕಪುರ ರಸ್ತೆ ಹೀಗೆ ಎಲ್ಲೆಂದರಲ್ಲಿ ಬಿಡದ ಓಡಾಟ.ದಿನ ನಿತ್ಯ ಹಲವು ಬದುಕುಗಳು ಕಣ್ಣ ಮುಂದೆ.ರಿಚ್ಚೆಷ್ಟ್ ಬದುಕುಗಳು ಕಣ್ಣಿಗೆ ಕಂಡರೂ ನಿರ್ಲಿಪ್ತತತೆ,ಅದಕ್ಕಾಗಿ ಅದು ನನ್ನ ಕಣ್ಣಂಚಿಗೆ ಆನಿಸುವದು ಸ್ವಲ್ಪ ಕಡಿಮೆ,ಪುಟ್ ಪಾಥ್ ವ್ಯಾಪಾರಿಗಳು,ಕೂಲಿ ಕಾರ್ಮಿಕರು,ರೋಡ್ ಗುಡಿಸುವವರು,ಮೋರಿ ಸ್ವಚ್ಚಗೊಳಿಸುವವರು,ಕಸವೆತ್ತುವವರು,ಮಹಾನಗರಿಯಲ್ಲಿನ ಭಿಕ್ಷುಕರು,ಸಿಗ್ನಲ್ ನಲ್ಲಿ ದಿನ ಪೂರ್ತಿ ನಿಂತು ತಂಪು ಕನ್ನಡಕ ಮಾರುವವರು ಹೀಗೆ ಬರೀ ಇಂತವುಗಳೆ, ಅದ್ಯಾಕೊ ಏನೊ ಆ ಕಷ್ಟದ ಬದುಕುಗಳ ಮುಂದೆ ನನ್ನದೆ ವಾಸಿಯೆಂಬ ನಿಟ್ಟುಸಿರು. 3 ತಿಂಗಳಲ್ಲಿ ಕೈಗೊಂದು ಅಂದದ ಬೈಕು, ಮೊಬೈಲ್ ಎಲ್ಲವೂ ಬಂತು, ನನ್ನೊಳಗೆ ನಾನೆ ರಾಜ ಆದರು ಮಹಾನಗರಿಯ ನಿರ್ಲಿಪ್ತತತೆಯ ಮುಂದೆ ಪರಕೀಯ, ಒಂಟಿತನ, ಊರ ನೆನಪು ಎಲ್ಲವು ಆಗಿಂದಾಗ್ಯೆ ಬಂದು ಹಿಂಸೆ ಕೊಟ್ಟು ಹೋಗುತಿದ್ದವು,ಸುತ್ತಾಟದ ಪರಿಣಾಮವೋ ಏನೊ ರಾತ್ರಿಯಾದರೆ ತಲೆ ನೋವು,ಟ್ರಾಪಿಕ್ ಕಿರಿ ಕಿರಿಗಳು, ವಾಹನಗಳ ದೌಡು, ತರೆವಾರಿ ಬಸ್ಸುಗಳು,ವಿವಿಧ ಬಗೆಯ ಕಾರುಗಳು, ನಾಯಿಯೊಂದೆ ಪ್ರಾಣಿಯೆಂದು ಆಸ್ಥೆಯಿಂದ ಸಾಕುವ ಮಂದಿಗಳು, ಅವುಗಳನ್ನು ಕಾರಲ್ಲಿ ಕೂರಿಸಿಕೊಂಡು ಊರು ಸುತ್ತಿಸೊ ಪರಿ,ಅವು ಕಾರಿನಿಂದ ಇಣುಕಿದಾಗ ಥತ್ತೇರಿಕೆ ಎಂತಾ ಭಾಗ್ಯ ಇವಕ್ಕೆ ಅಂಥ ಹಲುಬಿದ್ದು,ರಿಚ್ಮಂಡ್ ರೋಡಿನ ಪ್ಲೈ ಓವರ್ ರಸ್ತೆ, ಇಂಥಹ ಎಲ್ಲ ಹೊಸದನ್ನ ಅನುಭವಿಸುತ್ತಲೆ ಅದ ನೋಡುತ್ತಲೆ ದಿನಗಳನ್ನು ಕಳೆಯುತ್ತಾ ಬಂದಿದ್ದೆ ಮೊದ ಮೊದಲಿಗೆ ಬೆಂಗಳೂರಿನಲ್ಲಿ.ಹೀಗೆ ಸ್ವಲ್ಪ ಸ್ವಲ್ಪನೆ ಒಗ್ಗಿಕೊಂಡಿದ್ದೆ ಬೆಂಗಳೂರಿಗೆ.

ಮೊದಮೊದಲ ಬ್ಯಾಚುಲರ್ ಲೈಪ್ ಅಡುಗೆಗಳು, ಕರಟಿದ ಒಗ್ಗರಣೆಗಳು,ಸೀದ ಪಾತ್ರೆಗಳು, ಬರಿದೆ ಗಾಳಿ ಉಸುರುವ ನಲ್ಲಿಗಳು, ಕೊಡ ಬಿಂದಿಗೆಗೆ 2 ರುಪಾಯಿ ಕೊಟ್ಟು ಖರೀದಿಸಿದ ದಿನಗಳು,ಕಾಮನ್ ಟಾಯಿಲೆಟ್ಗಳು,ನಲ್ಲಿ ಬಂದ್ ಮಾಡದೆ ಹೋಗಿ ಮನೆ ತುಂಬ ನೀರು ತುಂಬಿಸಿದ ಆವಾಂತರಗಳು,ಬೆಂಗಳೂರ ಮಧ್ಯ ರಾತ್ರಿ ಮೌನದ ಜೊತೆ ಸಾಗಿದ ಪಯಣಗಳು, ಬಸ್ ಪುಟ್ಪಾತ್ ಜೋತಾಟಗಳು,ವಾಚ್ ನೋಡುತ್ತ ಸುತ್ತ ಮುತ್ತ ದೃಷ್ಟಿ ಹಾಯಿಸುತ್ತ ನಿಂತ ಒಂಟಿ ಮಹಿಳೆಯರುಗಳು, ಪ್ಲಾಸ್ಟಿಕ್ ಕಫ್ ಚಾಗಳು, ಸಣ್ಣ ಮಳೆಯೊಂದಿಗೆ ಕೃತಕ ನೆರೆ ಪರಿಸ್ಥತಿಯ ಸೃಷ್ಟಿಸುವ ಬೆಂಗಳೂರು ರೋಡ್ ಗಳು,ಬಜಾರ್ ಗಳು, ಮಾಲ್ ಗಳು,ಚರ್ಚೆ ಅನಿವಾರ್ಯತೆಯ ಜೊತೆ ನಡೆಯುವ ವ್ಯಾಪಾರಗಳು, ಜನ ಜಾತ್ರೆಗಳು, ಮುಂಜಾವಿಗೆ ತರಕಾರಿ ಕೊಳ್ಳಲು ಸಾಗುವ ತರಕಾರಿ ಗಾಡಿಗಳು, ಲಲನೆಯರು, ಫ್ರೌಢತೆ ಮೆರೆಯೊ ಪೇಟೆ ಮಕ್ಕಳುಗಳು, ಕಾಲೇಜ್ ವಿದ್ಯಾರ್ಥಿ,ವಿಧ್ಯಾರ್ಥಿನಿಯರುಗಳು,ಪಾರ್ಕುಗಳು, ಬೀದಿಗೊಂದರಂತೆ ನಿಂತ ಮಂದಿರ ಮಸೀದಿ ಚರ್ಚುಗಳು,ಕಡ್ಲೆ ಕಾಯಿ ಪರಿಷೆ,ಕರಗ ಮುಂತಾದ ಸಾಂಪ್ರದಾಯಿಕ ಜಾತ್ರೆಗಳು,ಬೀದಿಬದಿಯ ಬದುಕುಗಳು,ಮುಂತಾದವುಗಳು ಸಾವಿರ ಸಾವಿರ ಇಂತಹ ಅನುಭವಗಳು,ಅರಿವುಗಳು ಬೆಂಗಳೂರ ಬದುಕು ನನ್ನೆದುರಿಗೆ ಇರಿಸಿದೆ ಇರಿಸುತ್ತಿದೆ. 

ಬೆಂಗಳೂರಿನ ಸುತ್ತಾಟ ಸುಮಾರು 2-3 ವರುಷ ನಡೆದೆ ಇತ್ತು, ತದ ನಂತರನೆ ಆಫೀಸ್ ಎಸಿ ರೂಮ್ ನೊಳಗೆ ಬಿದ್ದಿದ್ದು,ಬೆಂಗಳೂರ ನಗರದಲ್ಲಿ ಒಂದು ಹೆಜ್ಜೆ ಮುಂದಿಡಲಾಗದ ನಾನು ಬೆಂಗಳೂರನ್ನು ಇಷ್ಟು ಹೊತ್ತಿಗೆ ಅರೆದು ಕುಡಿದಿದ್ದೆ, ನಗರವೊಂದೆ ಅಲ್ಲ ಸುತ್ತಲಿನ ಹಳ್ಳಿ ಪರಿಸರ, ನಗರದೊಳಗಿನ ಗಲ್ಲಿ ಗಲ್ಲಿಗಳು ಎಲ್ಲವೂ ಚಿರ ಪರಿಚಿತವಾಗಿದ್ದವು, ಆದರು ಈಗಲೂ ಬೆಂಗಳೂರನ್ನು ದಿನವು ಹೊಸದಾಗೆ ನೋಡುತ್ತಿದ್ದೇನೆ, ಕಾರಣ ಬೆಂಗಳೂರು ಬೆಳೆದ ಹಾಗು ಬೆಳೆಯುತ್ತಿರುವ ರೀತಿಯನ್ನು ಕಂಡು ಅನುಭವಿಸಿ.ಬೆಂಗಳೂರು ಐಟಿ ಬಿಟಿ ಕಂಪೆನಿಗಳ ಲಗ್ಗೆಯಿಂದ ಭಾರತದ ಎಲ್ಲಾ ಭಾಗದ ಜನಗಳಿಗೆ ಆಶ್ರಯ ಕೊಟ್ಟಿದೆ,ಅಷ್ಟೆ ಅಲ್ಲ ಇವು ಬೆಂಗಳೂರನ್ನ ಶೀಘ್ರವಾಗಿ ಬದಲು ಮಾಡಿಬಿಟ್ಟಿದೆ, ಪರಿಣಾಮ ಕೃಷಿ ಭೂಮಿ,ಬರಡು ಭೂಮಿ ಅನ್ನದೆ ಎಲ್ಲದಕ್ಕೂ ಬಂಗಾರದ ಬೆಲೆ, ತಮ್ಮಲ್ಲಿದ್ದ ಜಮೀನಿನ ಒಂದೊಂದು ಭಾಗವನ್ನು ಮಾರಿಕೊಂಡು ಕೋಟ್ಯಾಧೀಶರಾದ ಮಂದಿಗಳು ಕಡಿಮೆ ಇಲ್ಲ,ಬೆಂಗಳೂರು ನಗರದ ಕೊಂಡಿ ಕಳಚಿದಂತ್ತಿದ್ದ ಸರ್ಜಾಪುರ, ವೈಟ್ ಫೀಲ್ಡ್ ಹೆಬ್ಬಗೋಡಿ, ಅತ್ತಿಬೆಲೆ, ಆನೇಕಲ್ ಜಿಗಣಿ, ಬನ್ನೇರುಘಟ್ಟ ಇತರ ಪ್ರದೇಶಗಳನ್ನು ಹೊರತಾಗಿಸಿ ಇವತ್ತು ಬೆಂಗಳೂರನ್ನು ಊಹಿಸಿಕೊಳ್ಳುವದು ಕಷ್ಟ. ಈ ಪ್ರದೇಶಗಳಿಗೆ ಹೋಗುವ ರಸ್ತೆಗಳಲ್ಲಿ ಸರ್ಕಸ್ ಮಾಡಬೇಕಿದ್ದ ಕಷ್ಟಗಳು ಇವತ್ತಿಲ್ಲ ಬದಲಾಗಿ 4ವೇ ರಸ್ತೆಗಳು ಈ ಊರುಗಳಿಗೆ ಸಂಪರ್ಕ ಕಲ್ಪಿಸಿ ಬೆಂಗಳೂರಿನ ತೆಕ್ಕೆಗೆ ಇವುಗಳನ್ನು ಸೇರಿಸಿಕೊಂಡಿದೆ.ಈ ಎಲ್ಲ ಅಭಿವೃದ್ದಿ ಕಾರ್ಯಗಳು ಸುತ್ತಲೂ ಬೆಳೆದಿದ್ದ ಮರ,ಪರಿಸರಗಳನ್ನು ಆಹುತಿ ತೆಗೆದುಕೊಂಡಿದೆ.ಬೆಂಗಳೂರೊಳಗೆ ಇದ್ದ ಕೃಷಿ ಚಟುವಟಿಕೆಗಳು ಸತ್ತೆ ಹೋಗಿದೆ.ಮಾರ್ಕೇಟ್ ಇತರ ಸಾಂಪ್ರದಾಯಿಕ ವ್ಯಾಪಾರಿ ಪರಿಸರವನ್ನು ಮಾಲ್ ಸಂಸ್ಕೃತಿಯು ಆಹುತಿ ತೆಗೆದುಕೊಳ್ಳುತ್ತಿದೆ,3-4ಸಾವಿರಕ್ಕೆ ಸಿಗುತ್ತಿದ್ದ ಡಬಲ್ ಬೆಡ್ ರೂಂ ಬಾಡಿಗೆ ಮನೆಗಳು ಇವತ್ತು 12-15 ಸಾವಿರಕ್ಕೆ ಬಾಡಿಗೆಯನ್ನ ಏರಿಸಿಕೊಂಡು ನಿಂತಿದೆ.ಭೂಮಿ ಬೆಲೆ ಉಹೂಂ ಇದನ್ನ ಹೇಳದಿದ್ದರೆನೆ ವಾಸಿ, ಬಹುಶಃ ಬೆಂಗಳೂರಿನ ಸಂಸ್ಕೃತಿನೆ ಬದಲಾಗುತ್ತಿದೆ, ಇದ್ದುದರಲ್ಲಿ ಹಳೆ ಬೆಂಗಳೂರು ಪ್ರದೇಶಗಳಾದ ಮಲ್ಲೆಶ್ವರಂ,ಬಸವನಗುಡಿ, ಜಯನಗರ ಪ್ರದೇಶಗಳು ಬೆಳೆದರು ಸ್ವಲ್ಪದರ ಮಟ್ಟಿಗೆ ಕನ್ನಡತನ ಇಲ್ಲಿನ ಸಂಸ್ಕೃತಿಯನ್ನು ಹಿಡಿದಿಟ್ಟುಕೊಂಡೆ ಬೆಳೆದಿದೆ. ಎಷ್ಟು ದಿನ ಹೀಗೆ ಇರಬಹುದು ಅನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರಗಳು ಕಾಣಲಾರವು.ನಗರ ಸಾರಿಗೆಯಲ್ಲು ಅಭೂತಪೂರ್ವ ಬದಲಾವಣೆ ಆಗಿದೆ.ಮೆಟ್ರೊ ಬಂದಿದೆ, ಲಾಲ್ ಬಾಗ್,ಕಬ್ಬನ್ ಪಾರ್ಕ್ ಒಂದಷ್ಟು ಮೂಲತೆಯನ್ನ ಉಳಿಸಿಕೊಂಡಿದೆ ಅಂದರೆ ತಪ್ಪಾಗಲಾರದು.ಎಲ್ಲೆಲ್ಲು ಕಂಡು ಬರುವ ಕಾರ್ಪೊರೇಟ್ ಸಂಸ್ಕೃತಿಯ ಮಧ್ಯೆ ಬದಲಾಗದ ಒಂದು ವಿಷಯ ಅಂದರೆ ಅವತ್ತಿಗೂ ಇವತ್ತಿಗೂ ಬಡವರು ಬಡವರಾಗೆ ನಗರದಲ್ಲಿದ್ದಾರೆ ಪ್ರಮಾಣ ಜಾಸ್ತಿಯಾಗಿರಬಹುದೆ ಹೊರತಾಗಿ ಕಡಿಮೆಯಾಗಿಲ್ಲ,ಇತ್ತ ಗಮನ ಹರಿಸಲು ಕಾರ್ಪೊರೇಟ್ ಸಂಸ್ಕೃತಿಯನ್ನು ಮೈಹತ್ತಿಸಿಕೊಂಡ ನಮಗೆ ವೇಳೆಯಿಲ್ಲ.ಗಾರ್ಡನ್ ಸಿಟಿ ಹೆಸರಾಗಿ ಉಳಿದಿದೆ ಅಷ್ಟೆ ವಿನಃ ಕಾಂಕ್ರೀಟ್ ಕಾಡಾಗಿ ಬದಲಾಗಿ ಬಹಳ ದಿನಗಳಾಗಿದೆ.ಯಾರು ಯಾರ ಬಗ್ಗೆನು ತಲೆಕೆಡಿಸಿಕೊಳ್ಳಲು ಒತ್ತಡ ಸಂಸ್ಕೃತಿ ಬಿಡುತ್ತಿಲ್ಲ,ವಾಹನಗಳು ವಿಪರೀತವಾಗಿ ಬಿಟ್ಟಿದೆ.ಇದರಿಂದಾಗಿ ಹಿಂದಿನ ತಂಪು ತಾಪಮಾನ ಕೂಡ ಮರೆಯಾಗಿದೆ, ನಗರದೊಳಗಿನ ಪ್ರಯಾಣ ಹಿಂಸೆ ಒದಗಿಸುತ್ತಿದೆ.ಇದನ್ನು ಸರಿಪಡಿಸಲು ಮತ್ತೆ ಬೆಳೆಯುತ್ತಲೆ ಇದೆ ಬೆಂಗಳೂರು, ವಾಣಿಜ್ಯಿಕರಣದ ಹಂಚಿಕೆ ಕರ್ನಾಟಕದ ಇತರ ನಗರಗಳಿಗು ಸಮ ಪ್ರಮಾಣದಲ್ಲಿ ಹಂಚಿಕೆಯಾಗದ ಪರಿಣಾಮವಾಗಿ ಬೆಂಗಳೂರು ದಿನ ದಿನಕ್ಕೆ ತನ್ನ ಜನಸಂಖ್ಯೆಯನ್ನು ಏರಿಸಿಕೊಳ್ಳುತ್ತಲೆ ಇದೆ.ಬಹುಶಃ ಬೆಂಗಳೂರು ಬದಲಾಗುತ್ತಿರುವದನ್ನ ಬರೆದುಕೊಳ್ಳಲು ಕೂತಲ್ಲಿ ಅದು ಮುಗಿಯಲೊಲ್ಲದ ಕಥೆ. 

ಬೆಂಗಳೂರ ಬೆಳವಣಿಗೆ ಅದರ ಒಪ್ಪು-ತಪ್ಪುಗಳ ಪ್ರಶ್ನೆಗಳು ಹೆಂಗೂ ಇರಲಿ, ಬೆಂಗಳೂರು ನನ್ನನ್ನು ಬೆಳೆಸಿದೆ,ಇವತ್ತು ಬೆಂಗಳೂರಲ್ಲಿ ಕಾಣಸಿಗುವ ಎಲ್ಲಾ ಭಾಷೆಗಳನ್ನು ಅರಗಿಸಿಕೊಳ್ಳಬಲ್ಲೆ,ಬಹುಶಃ ಈ ಪರಿಯು ಬೆಂಗಳೂರಿಗೆ ಮಾತ್ರ ಸೀಮಿತ, ಯಾರು ಕೂಡ ಬಂದು ತಮ್ಮ ಭಾಷೆಯಲ್ಲೆ ಇಲ್ಲಿ ವ್ಯವಹರಿಸಬಲ್ಲರು,ಬೇರೆ ಯಾವ ನಗರದಲ್ಲು ಇದು ಕಾಣಸಿಗೋದು ಕಷ್ಟ. ಬೆಂಗಳೂರ ಅನುಭವಗಳನ್ನೆ ಮೂಲವಾಗಿಸಿಕೊಂಡು ಬೆಂಗಳೂರಿನಂತ ಹಲವು ಊರುಗಳನ್ನ ಸುತ್ತಿದ್ದೇನೆ, ಸುತ್ತುತ್ತಲೆ ಇದ್ದೇನೆ ಆದರೆ ಬೆಂಗಳೂರಿಗೆ ಮೊದಲು ಅಡಿಯಿರಿಸಿದಾಗ ಪಟ್ಟ ಪಚೀತಿಗಳನ್ನು ಎಲ್ಲು ಅನುಭವಿಸಿಲ್ಲ, ಬೆಂಗಳೂರು ತನ್ನದೆ ಅಸ್ತಿತ್ವವನ್ನ ನನಗೆ ತಂದು ಕೊಟ್ಟಿದೆ.ಬೆಂಗಳೂರು ಕಷ್ಟಗಳನ್ನು ಇಷ್ಟಗಳನ್ನು ಸಮಪಾಲಾಗಿ ನನ್ನ ಮುಂದಿರಿಸಿದೆ, ಬದುಕ ಅನುಭವಗಳನ್ನು ನಾನು ಕಂಡುಕೊಡಿದ್ದು ಇಲ್ಲಿ.ಬಹುಶಃ ನನ್ನದೆ ಅನುಭವಗಳು ಮೊದಲಿಗೆ ಹಳ್ಳಿಯಿಂದ ನಗರಕ್ಕೆ ಬಂದ ಎಲ್ಲರದು ಆಗಿರಬಹುದು. ಅದು ಬೆಂಗಳೂರೆ ಆಗಬೇಕಿಲ್ಲ,ನನ್ನ ಈ ಅನುಭವ ಬೆಂಗಳೂರಿಗೆ ಸೀಮಿತವಾದುದರಿಂದ ಆ ಬಗ್ಗೆ ಬರೆದೆನಷ್ಟೆ,ಇದು ಬೆಂಗಳೂರಿನ ಬೆಳವಣಿಗೆ ಜೊತೆ ನನ್ನದು ಒಂದು ಬೆಳವಣಿಗೆಯ ಕಥನ ಅಷ್ಟೆ.ಬೆಂಗಳೂರ ಅನುಭವ ನನ್ನನ್ನು ಬದಲಾಯಿಸಿದೆ ಅಂದರೆ ತಪ್ಪಿಲ್ಲ, ಈಗ ಅನುಕೂಲಕ್ಕಿರಬೇಕಾದ ಎಲ್ಲವೂ ಇದೆ ಆದರೆ ನೆಮ್ಮದಿಗಾಗಿ ಒಂದಷ್ಟು ಚೈತನ್ಯಕ್ಕಾಗಿ ನಾನ್ ಇವತ್ತಿಗು ಮುಖ ಮಾಡೋದು ನನ್ನ ಹಳ್ಳಿ ಕಡೆಗೆ ಅನ್ನುವದು ಸತ್ಯ.ಅದೊಂದನ್ನು ಕೊಂಡುಕೊಳ್ಳಬಹುದಾದ ಮಾಲ್,ಮಾರ್ಕೇಟ್ ಬೆಂಗಳೂರಲ್ಲಿ ಇಲ್ಲಾ ನೋಡಿ :).


ಚಿತ್ರ ಕೃಪೆ:- ಗೂಗಲ್.


2 comments:

  1. prakash srinivas
    ನಿಜಕ್ಕೂ ನಿಮ್ಮ ಲೇಖನವನ್ನು ಓದುತ್ತ ಇದ್ದರೆ ನಾನೂ ನಿಮ್ಮ ಜೊತೆ ಇದ್ದ ಹಾಗೆ ಅನುಭವಾಯಿತು!
    ಒಳ್ಳೆಯ ಬರವಣಿಗೆ! ಶುಭವಾಗಲಿ ಗೆಳೆಯ

    ReplyDelete
  2. Hello there, I stumbled on your blog while surfing around. What a beautiful tribute to Bangalore from you! I live ten thousand miles away from Bangalore - but I went through the same experience that you have experienced when I worked in Bangalore albeit just for a couple of years. I grew up in a village near Mysore & had always thought Bangalore to be 'Kaige silukada Nakshatra' - Very good essay! Thanks

    ReplyDelete