Tuesday, March 13, 2012

ಕಾಕ್ ಟೈಲ್-ವಿವಾಹೇತರ ಸಂಬಂಧಗಳಿಗೊಂದು ಪಾಠ

ವೃತ್ತಿ ಸಹಜವಾಗೆ ಮುಡಿಗೇರಿಸಿದ ಅಹಂನೊಂದಿಗೆ ಮನೆಯಲ್ಲಿರುವ ತನ್ನ ಸುಂದರ ಸಂಸಾರವನ್ನು ಮರೆತು ತನ್ನ ಆಫೀಸ್ ಅಸಿಸ್ಟೆಂಟ್ ಜೊತೆ ಲಲ್ಲೆಗರೆವ ವಿವಾಹೇತರ ಅನಧಿಕೃತ ಸಂಬಂಧವನ್ನು ಹೊಂದಿ ತನ್ನವರೆ ತಮಗೆ ಪಾಠ ಕಲಿಸುವವರೆಗೆ ಇದೆ ಚಪಲದಲ್ಲಿ ಮುಂದುವರಿದು ಕಡೆಗೊಂದು ದಿನ ಪಶ್ಚಾತಾಪದ ಬೇಗುದಿಯನ್ನು ಸೆಳೆದಪ್ಪುವ ಕಥಾ ಹಂದರವುಳ್ಳ 2010 ರಲ್ಲಿ ತೆರೆ ಕಂಡ ಕಾಕ್ ಟೈಲ್ ಮಳಿಯಾಳಿ ಚಿತ್ರವನ್ನ ಕೆಲ ದಿನಗಳ ಹಿಂದೆ ಮತ್ತೆ ನೋಡಿದೆ.ಯಾಕೊ ಈ ಬಗ್ಗೆ ಬರೆಯಬೇಕೆಂದೆನಿಸಿತು.ಮಳೆಯಾಳಿ ಚಿತ್ರಗಳೆ ಹಾಗೆ ಭಾವನೆಗಳನ್ನು ಹಿಡಿಯಾಗಿಸಿ ಹೃದಯಕ್ಕೆ ಲಗ್ಗೆ ಇಡುತ್ತದೆ. ಕಾಕ್ ಟೈಲ್ ಚಿತ್ರವೂ ಇದಕ್ಕೆ ಹೊರತಾಗಿಲ್ಲ. ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಅನೂಪ್ ಮೆನನ್,ಸಮೃತಾ ಸುನೀಲ್,ಜಯಸೂರ್ಯರ ಮನೋಜ್ಙ ಅಭಿನಯದಿಂದ ಕೂಡಿದ ಈ ಚಿತ್ರ ಕೊನೆವರೆಗು ಸಸ್ಪೆನ್ಸ್ ಜೊತೆ ಪ್ರೇಕ್ಷಕನನ್ನ ಹಿಡಿದಿಟ್ಟುಕೊಂಡೆ ಸಾಗುತ್ತೆ.ಅರುಣ್ ಕುಮಾರ್ ಗಟ್ಟಿ ನಿರ್ದೇಶನ ಪ್ರದೀಪ್ ನಾಯರ್ ರ ಚೆಂದದ ಕ್ಯಾಮಾರ ಕೈಚಳಕ ಕೂಡ ಚಿತ್ರದ ಮೆರುಗನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. 2007 ರಲ್ಲಿ ತೆರೆ ಕಂಡ ಕೆನೆಡಿಯನ್ ಚಿತ್ರ "ಬಟರ್ ಪ್ಲೈ ಆಫ್ ದ ವೀಲ್ "ಅನ್ನು ಇದು ಹೋಲುವದು ಸತ್ಯ.

ಚಿತ್ರದ ನಾಯಕಿ ಪಾರ್ವತಿ ಶಾಪಿಂಗ್ ಮಾಲ್ ನಲ್ಲಿ ತನ್ನ ಮಗು ಅಮ್ಮು ಜೊತೆ ಶಾಪಿಂಗ್ ಜೊತೆ ದೂರವಾಣಿ ಸಂಭಾಷಣೆ ನಡೆಸುತ್ತಿರುವಾಗ ಮಗುವನ್ನು ಮಿಸ್ ಮಾಡಿಕೊಳ್ಳುತ್ತಾಳೆ, ಕ್ಷಣಕ್ಕೆ ಗಾಭರಿಗೊಳ್ಳೊ ತಾಯಿ ತನ್ನ ಮಗು ಯಾರೊ ಕೊಡಿಸಿದ ಗೊಂಬೆ ಜೊತೆ ಪತ್ತೆಯಾದಾವಾಗ ನಿಟ್ಟುಸಿರ ಬಿಡುತ್ತಾಳೆ, ಈ ಮೂಲಕ ಪ್ರಾರಂಭ ಪಡೆಯುವ ಚಿತ್ರ ಆರಂಭದಲ್ಲೆ ಒಂದು ಆತಂಕವನ್ನ ಪ್ರೇಕ್ಷಕರಲ್ಲಿ ಹುಟ್ಟುಹಾಕುತ್ತದೆ.ಗೊಂಬೆ ಕೊಡಿಸಿದ್ದು ಯಾರು? ಅನ್ನೊ ಪ್ರಶ್ನೆಯೊಂದು ಹುಟ್ಟು ಪಡೆದಿರುತ್ತೆ. ಗಂಡ ರವಿಗಾಗಿ ಮನೆಯಲ್ಲೆ ಕಾಯುವ ಪಾರ್ವತಿ ಪದೆ ಪದೆ ಗಂಡನ ಮೊಬೈಲಿಗೆ ರಿಂಗಣಿಸಿದರೂ ದೊರೆಯುವ ನಾಟ್ ರೀಚೆಬಲ್ ಉತ್ತರ, ಪಾರ್ವತಿಯ ಹುಟ್ಟು ಹಬ್ಬದ ದಿನ ಅಪರಾತ್ರಿಯಲ್ಲಿ ಕೇಕ್ ಒಂದಿಗೆ ಆಗಮಿಸೊ ಗಂಡ ಈ ತರ ಮಾಮೂಲಿಯಾಗಿ ಕಥೆ ಮುಂದುವರಿಯುತ್ತೆ.ಹೀಗಿರಲೊಂದು ದಿನ ಪಾರ್ವತಿ ತನ್ನ ಗೆಳೆತಿಯ ಬರ್ತಡೆ ಪಾರ್ಟಿಗೆ ಹೊರಟರೆ ನನಗೂ ಆ ದಿನ ಬಾಸ್ ಮೀಟಿಂಗ್ ಕರೆದಿದ್ದಾರೆ ಅಂಥ ರವಿ ಅನ್ನಲು ಮಗುವನ್ನು ನೋಡಿಕೊಳ್ಳಲು ಆಯಾ ಒಬ್ಬಳನ್ನ ಆ ದಿನದ ಮಟ್ಟಿಗೆ ನೇಮಿಸಿಕೊಂಡು ಒಂದೆ ಕಾರಲ್ಲಿ ಹೊರಡುತ್ತಾರೆ ಅಸಲಿಗೆ ರವಿ ತನ್ನ ವಿವಾಹೇತರ ಪ್ರೇಯಸಿ ಜೊತೆ ಕಾಲ ಕಳೆಯಲು ಹೊರಟಿದ್ದೆಂಬುದು ಪ್ರೇಕ್ಷಕರಿಗೆ ಚಿತ್ರದ ಕೊನೆವರೆಗೆ ತಿಳಿಯಲಾರದು.ಹೀಗೆ ಹೊರಟ ಗಂಡ ಹೆಂಡತಿ ಪಯಣದಲ್ಲೆ ಚಿತ್ರವೆಲ್ಲ ಅಡಗಿರುತ್ತೆ.ಈ ಪಯಣದ ಕೊನೆಯೆ ಚಿತ್ರದ ಕೊನೆಯಾಗುತ್ತೆ. ಹಾಗಾದರೆ ಈ ಪಯಣದುದ್ದ ನಡಿಯುವದು ಏನು ಎಂಬ ಕುತೂಹಲ ನಿಮ್ಮದಾಗಿದ್ದರೆ ಮುಂದೆ ಓದಿ.


ಕಾರು ಕೆಟ್ಟಿದೆಯೆಂದು ಇವರ ಕಾರಿಗೆ ಡ್ರಾಪ್ ಕೇಳೊ ವೆಂಕಟೇಶ್ ಪಾತ್ರ ಕಥೆಯೊಂದಿಗೆ ಸೇರೊದು ಈ ಪಯಣದ ಆರಂಭದಲ್ಲೆ.ಪ್ರಾರಂಭದಲ್ಲಿ ಸೌಮ್ಯವಾಗಿರುವ ಈ ಪಾತ್ರ ಸಲ್ಪದರಲ್ಲೆ ರೂಢ್ ಆಗಿ ವಿಶಿಷ್ಟವಾಗಿ ಕಾಣುತ್ತೆ.ತಲೆಗೆ ಪಿಸ್ತೂಲು ಹಿಡಿದು ನಿಮ್ಮ ಮಗುವನ್ನು ನೋಡಿಕೊಳ್ಳೊ ಆಯಾ ನಾನು ಕಳಿಸಿದವಳೆಂದು ಮಗುವಿನ ಪ್ರಾಣ ಬೇಕಾದಲ್ಲಿ ನಾ ಹೇಳುವಂತೆ ಕೇಳಿಯೆಂಬ ಪಾತ್ರ ದಂಪತಿ ಸಂಪಾದಿಸಿಟ್ಟ ಪೂರ್ಣ ಹಣವನ್ನು ಪಡೆದು ಬೆಂಕಿ ಹಚ್ಚಿ ನದಿಗೆ ಎಸೆಯುತ್ತೆ.ಊಟ ಮಾಡಲು ತನ್ನ ಲಕ್ಷ ರೂಪಾಯಿ ವಾಚನ್ನು ಬರಿಯ 6 ಸಾವಿರಕ್ಕೆ ಮಾರಿ ಹೋಟೆಲಿಗೆ ದಂಪತಿ ಬಂದಾವಾಗ 2ವರೆ ಸಾವಿರ ರುಪಾಯಿಯ ಆಹಾರವನ್ನು ಪಾರ್ಸೇಲ್ ಮಾಡಿ ಬಿಲ್ ತೋರಿಸುತ್ತೆ ಈ ಪಾತ್ರ. ಇದಷ್ಟನ್ನೂ ಎತ್ತಿಕೊಂಡು ವೆಂಕಟೇಶ್ ಜೊತೆ ಹೊರಟ ದಂಪತಿಗಳು ಒಣಿ ಮಧ್ಯೆ ಅದಷ್ಟು ಆಹಾರವನ್ನು ಬಡ ಮಕ್ಕಳಿಗೆ ಹಂಚಿದ ಪಾತ್ರದ ಪರಿಯನ್ನ ಕಂಡ ದಂಪತಿಗಳು ಮರು ಮಾತಿಲ್ಲದೆ ಕಾರು ಹತ್ತಿ ಕೂರೂವ ಈ ದೃಶ್ಯಗಳಲ್ಲಿ ಬಡತನದ ವಾಸ್ತವಗಳು, ಶ್ರೀಮಂತಿಕೆಯ ಮದವನ್ನು ಚಿಗುಟುವಂತೆ ವೆಂಕಟೇಶ್ ಪಾತ್ರದಲ್ಲಿ ರೋಷ ನಮಗೆ ಕಣ್ಣಿಗೆ ರಾಚಿದಲ್ಲಿ ಅದರ ಶ್ರೇಯ ನಿರ್ದೇಶಕ ಅರುಣ್ ಕುಮಾರ್ ಮತ್ತು ನಟ ಜಯಸೂರ್ಯರಿಗೆ ಸೇರಬೇಕು. 


ಕಾಸು ಕೊಟ್ಟು ಸೂಳೆಯನ್ನು ನಿನ್ನದಾಗಿಸುಕೊ ಎಂದು ಪಾತ್ರ ಎಂದಾಗ ಅಸಹ್ಯ ಪಡುವ ರವಿ ಕೀಳು ಮಟ್ಟದ ಕೆಲಸವೆಂದು ಪರಿಗಣಿಸಿ ತನ್ನ ಮಗುವ ಪ್ರಾಣವ ನೆನೆಸಿ ಪಾತ್ರದ ಅಣತಿಯಂತೆ ಸೂಳೆಯನ್ನು ತನ್ನ ಹೆಂಡತಿಯ ಮುಂದೆನೆ ಒಲಿಸಿ ಕಾರು ಹತ್ತಿಸುತ್ತಾನೆ, ತನ್ನ ಶ್ರೀಮಂತಿಕೆಯ ಮದದಲ್ಲಿನ ದಿನಗಳಲ್ಲಿ ತನ್ನ ಅಸಿಸ್ಟೆಂಟ್ ಜೊತೆ ವಿವಾಹಿತಳು ಎಂದು ಗೊತ್ತಿದ್ದು ಅನಧಿಕೃತ ಸಂಬಂಧ ಹೊಂದಿರಬೇಕಾದರು ರವಿ ಈ ಪರಿ ಅಸಹ್ಯಿಸಿಕೊಳ್ಳೊದಿಲ್ಲ,ಬಡತನದ ಲೇಪದ ಜೊತೆ ಸಭ್ಯತನವು ಇರುತ್ತದೆ ಎಂಬುದನ್ನು ಇಲ್ಲಿ ನಿರ್ದೇಶಕ ಹೇಳ ಹೊರಡುತ್ತಾನಾ? ಪ್ರೇಕ್ಷಕರೀಗೆ ಈ ಯೋಚನೆಯನ್ನು ಬಿಟ್ಟು ಚಿತ್ರ ಮುಂದೆ ಸಾಗುತ್ತೆ.ಮುಂದಿನ ಭಾಗದಲ್ಲಿ ವೆಂಕಟೇಶ್ ತನ್ನ ಹೆಂಡತಿಯ ಮೈಗೆ ಕೈ ಹಾಕಬೇಕಾದರೆ ರೋಷ ಉಕ್ಕಿ ಅವನೆದೆಗೆ ಒದೆಯೊ ನಾಯಕ ತಾನು ಈ ರೀತಿ ಕೃತ್ಯವನ್ನ ಕದ್ದು ಮಾಡುತಿದ್ದೆ ಅನ್ನೊದನ್ನ ಕೂಡ ನೆನಪಿಸಿಕೊಳ್ಳೊದಿಲ್ಲ,ಇಲ್ಲೆಲ್ಲು ನಿರ್ದೇಶಕ ಅಸಹ್ಯಿಸುವಂತೆ ನಿರ್ದೇಶಿಸಿಲ್ಲ, ಬದಲಾಗಿ ಸಭ್ಯತೆ ಮೆರೆದದ್ದೂ ನಿರ್ದೇಶಕನ ಜಾಣ್ಮೆಗೆ ಹಿಡಿದ ಕೈಗನ್ನಡಿ. ಪಶ್ಚಾತಾಪದೊಂದಿಗೆ ತನ್ನೆಲ್ಲಾ ತಪ್ಪು ನೆನಪಾಗುತ್ತೆ ನಾಯಕನಿಗೆ ಅದ್ಯಾವಾಗ ಎಂದರೆ ಆ ಪಯಣ ಮನೆಯೊಂದರ ಮುಂದೆ ನಿಂತಾಗ, ಕೈಯಲ್ಲಿ ಬಂದೂಕ ಕೊಟ್ಟು ಮನೆಯಲ್ಲಿದ್ದವಳನ್ನು ನಿನ್ನ ಮಗುವಿನ ಪ್ರಾಣಕ್ಕಾಗಿ ಕೊಲ್ಲು ಎಂದು ಕಳಿಸಿ ಕೊಟ್ಟಾಗ. ಆ ಮನೆ ಬೇರೆ ಯಾರದ್ದು ಆಗಿರದೆ ನಾಯಕ ರವಿಯ ವಿವಾಹೇತರ ಪ್ರೇಯಸಿ ದೇವಿಯದ್ದು ಆಗಿರುತ್ತದೆ,ವೆಂಕಟೇಶ್ ಕೊಲ್ಲು ಅಂದಿದ್ದು ಕೂಡ ಅವಳನ್ನೆ.ನಾಯಕ ರವಿಗೆ ಅಚ್ಚರಿ ಕೊಡೊ ಮತ್ತೊಂದು ವಿಷಯ ಏನೆಂದರೆ ಆ ಮನೆಯಲ್ಲಿ ಕಂಡ ಪೋಟೊ, ಅದು ತನ್ನ ಪ್ರೇಯಸಿ ಗಂಡನೊಂದಿಗೆ ಇರುವ ಪೋಟೊ,ಆಕೆಯ ಗಂಡನಾದ ಆ ಪೋಟೊದಲ್ಲಿರುವ ವ್ಯಕ್ತಿ ಬೇರಾರು ಆಗಿರದೆ ಇಷ್ಟು ದಿನ ಕಾಡಿದ ಪಾತ್ರ ವೆಂಕಟೇಶ್ ಆಗಿದ್ದ.ಇಷ್ಟಾಗಿಯು ಕೂಡ ತನ್ನ ಮಗುವಿಗಾಗಿ ಪ್ರೇಯಸಿಯ ಪ್ರಾಣ ತೆಗೆಯಲು ಪಿಸ್ತೂಲ ಟ್ರಿಗರ್ ಅದುಮುವ ನಾಯಕ ಪಿಸ್ತೂಲಿನಲ್ಲಿ ಗುಂಡೆ ಇರದ್ದನ್ನು ನೋಡಿ ಕುಸಿಯುತ್ತಾನೆ. ಮಾಂಸ ಮಾಂಸಗಳ ತುಮುಲಗಳಷ್ಟೆ ನಮ್ಮೊಳಗಿದ್ದಿದ್ದೂ ಅನ್ನೋದು ಇಬ್ಬರೀಗೂ ಅರಿವಾಗಿರುತ್ತದೆ. ಪ್ರೀತಿಸುವ ಗಂಡನ ಮುಖ ನೋಡಲಾಗದೆ ದೇವಿ ಕತ್ತೆತ್ತದೆ ಭೋರ್ಗರೆಯುತ್ತಾಳೆ ಇತ್ತ ರವಿ ಪಶ್ಚಾತಾಪದ ಬೇಗೆಯಲ್ಲಿ ಬೇಯುತ್ತ ತನ್ನ ಮಗಳಿಗೆ ಏನೇನೂ ಆಗಿಲ್ಲ ತನ್ನ ಮನೆಯಲ್ಲೆ ಆರಾಮವಾಗಿದ್ದಾಳೆ ಎಂಬುದನ್ನ ತಿಳಿದು ಮರಳುತ್ತಾನೆ.ತನ್ನ ಹೆಂಡತಿ ನನಗೆ ಬುದ್ದಿ ಕಲಿಸಲು ವೆಂಕಟೇಶ್ ಪಾತ್ರ ತನ್ನ ಹೆಂಡತಿಗೆ ಬುದ್ದಿ ಕಲಿಸಲು ಪರಸ್ಪರ ಕೈ ಮಿಲಾಯಿಸಿ ನಾಟಕವಾಡಿದ್ದು ಹಾಗು ತನ್ನ ಹಣಕ್ಕೆ ಬೆಂಕಿ ಹಚ್ಚಿ ಹೊಳೆಗೆಸೆದಿದ್ದು ಇತ್ಯಾದಿ ಬರಿಯ ನಾಟಕವಷ್ಟೆ ಅನ್ನೊದನ್ನ ತಿಳಿದು ಪಶ್ಚಾತಾಪದ ಬೇಗೆಯಿಂದ ತನಗೆ ಗುರುವಾದ ಹೆಂಡತಿ ಹಾಗು ವೆಂಕಟೇಶನನ್ನು ರವಿ ಮೆಚ್ಚುತ್ತಾನೆ ಹಾಗು ಸರಿ ದಾರಿಗೆ ಮರಳುತ್ತಾನೆ. ಹಾಗಾದರೆ ಚಿತ್ರದ ನಾಯಕಿ ಹಾಗು ವೆಂಕಟೇಶ್ ಪರಿಚಯವಾಗಿದ್ದೆಲ್ಲಿ ಅನ್ನೊ ಪ್ರಶ್ನೆಗೆ ಚಿತ್ರದ ಆರಂಭದಲ್ಲಿ ಹುಟ್ಟಿದ ಪ್ರಶ್ನೆ ಮಗುವಿಗೆ ಗೊಂಬೆ ಕೊಡಿಸಿದ್ದು ಯಾರು? ಅನ್ನೊ ಪ್ರಶ್ನೆಯ ಜೊತೆಗೆ ಉತ್ತರಿಸುತ್ತದೆ. 


ಚಿತ್ರದ ಕೊನೆಗೆ ಆಸ್ಪತ್ರೆಗೆ ದೇಣಿಗೆ ನೀಡೊ ರವಿ-ಪಾರ್ವತಿ ದಂಪತಿ,ಅದೆ ಆಸ್ಪತ್ರೆಯ ಮಂಚವೊಂದರ ಮೇಲೆ ಸುಸೈಡ್ ಪ್ರಯತ್ನ ಪಟ್ಟು ಜೀವಂತ ಹೆಣವಾಗಿ ಮಲಗಿರುವ ದೇವಿ ಮತ್ತವಳ ಆರೈಕೆಯಲ್ಲಿ ತೊಡಗಿರುವ ಆತಳ ಪತಿ ವೆಂಕಟೇಶ್ ನನ್ನು ನಿರ್ದೇಶಕ ತೋರಿಸೊ ರೀತಿ ನಮ್ಮ ಕರುಳ ಹಿಂಡುವುದಂತು ಸತ್ಯ.ಸ್ಪಷ್ಟವಾದ ಸಮಾಜಮುಖಿ ಸಂದೇಶ ಸಾರುವ ಚಿತ್ರ ನೋಡಿ ಮುಗಿಸಿದಾಗ ನನಗೆ ಕಂಡ ಪಾತ್ರಗಳೊಳ ದ್ವಂದ್ವ ಇಷ್ಟೆ ವಿಲನ್ ಅನ್ಕೊಂಡ ವೆಂಕಟೇಶ್ ಪಾತ್ರ ಚಿತ್ರದ ನಾಯಕನೊ?ಎಂದು.ಕೆಲವೆ ಸೀಮಿತ ಪಾತ್ರದಲ್ಲಿ ಕಟ್ಟಿಕೊಟ್ಟ ಕಾಕ್ ಟೈಲ್ ಚಿತ್ರ ವಿವಾಹೇತರ ಸಂಬಂಧಗಳಿಗೆ ಪಾಠದಂತೆ ಕಂಡರೆ ತಪ್ಪಿಲ್ಲ, ಸಿಕ್ಕಿದಲ್ಲಿ ಈ ಚಿತ್ರವನ್ನೊಮ್ಮೆ ನೋಡಿ.ನಿಮ್ಮ ಮುಂದೆ ಒಂದು ಚಿತ್ರವನ್ನು ಕಟ್ಟಿಕೊಡಲು ಎಷ್ಟು ಸರಕುಗಳು ಬೇಕೊ ಅದಷ್ಟನ್ನೆ ಬಳಸಿರುತ್ತೇನೆ, ಇದರ ಹೊರತಾಗಿಯೂ ಇನ್ನಷ್ಟು ವಿಷಯಗಳೊಂದಿಗೆ ಭಾಷೆಯ ಯಾವ ಹಂಬುಗಳೂ ಇಲ್ಲದೆ ಈ ಚಿತ್ರ ನಿಮ್ಮದಾಗಬಲ್ಲದು, ಒಂದೊಳ್ಳೆ ಚಿತ್ರ ನೋಡಿದ ಖುಷಿ ನಿಮ್ಮದು ಆಗಲಿ.










2 comments:

  1. ಚಿತ್ರ ಕಥಾ ವಿಮರ್ಶೆ ಚೆನ್ನಾಗಿದೆ ಮಾನ್ಯ ತೆಕ್ಕಾರರೆ.ಯಾವ ಕ್ಷೇತ್ರದಲ್ಲಿ ಬುದ್ಧಿವಂತ ಜನತೆ ಇರುತ್ತಾರೋ ಅಲ್ಲಿ, ಸೃಜನಶೀಲತೆ ತನ್ನಿಂತಾನೆ ಬೆಳೆಯುತ್ತದೆ.ಅದು ಪ್ರೇಕ್ಷಕ ಸಮೂದಾಯವನ್ನು ಹೊರತಾಗಿಲ್ಲ. ಮಲೆಯಾಳಂ ಸೃಜನಶೀಲ ಸಾಹಿತ್ಯ ಭಾರತದಲ್ಲಿ ಪ್ರಸಿದ್ಧಿ ಪಡೆಯಲು ಅಲ್ಲಿನ ಚಲನ ಚಿತ್ರದ ಕೊಡುಗೆ ಅಪಾರ.ಹಾಗೇ ಅಲ್ಲಿರುವ ಸಾಹಿತ್ಯ ಅಷ್ಟೊಂದು ಸಮೃದ್ದವಾಗಿ ಬೆಳೆಯಲು ಜ್ಞಾನಪೀಠ ಪ್ರಶಸ್ತಿ ವಿಜೇತ ತಗಳಿ ಶಿವಶಂಕರ್ ಪಿಳ್ಳೈ ಅವರ " ಚೆಮ್ಮೀನ್", ಪಾರಪುರತ್ತು ಅವರ" ಅರೆ ಗಳಿಗೆಯ ಹೊತ್ತು", ಎಂ.ಟಿ. ವಾಸುದೇವನ್ ನಾಯರ‍್ ಅವರ ಹಲವು ವಿಶಿಷ್ಟ ಸಣ್ಣ ಕಥೆಗಳು ಸ್ಥಾನ ಪಡೆದವು. ಅಳಿಯಕಟ್ಟು ಸಂಪ್ರಾದಯದ ತರವಾಡು ಕುಟುಂಬಗಳಲ್ಲಿ ಮನುಷ್ಯ ಜೀವಿಗಳು ಅನುಭವಿಸಿದ ಯಾತನಾಮಯ ಸನ್ನಿವೇಶಗಳು ಮನಸ್ಸೇ ಮಾತಾಡುವಂತೆ ಸಮಾಜ ಮುಂದೆ ತೆರೆದಿಟ್ಟ ಸಾಹಿತ್ಯಗಳು ಮಲೆಯಾಳಂ ಚಲನ ಕ್ಷೇತ್ರದಲ್ಲಿ ಡಾಳಾಗಿ ಪ್ರಚಾರಗೊಂಡಿವೆ.ಇಂದಿಗೂ ಮಲೆಯಾಳಂನ ಎಲ್ಲಾ ಕ್ಷೇತ್ರಗಳು ಸೃಜನಶೀಲತೆಗೆ ಸಾಕ್ಷಿಯಾಗಿವೆ. ಅದನ್ನು ಓದುಗರೇ ಅಧ್ಯಾಯನ ನಡೆಸಿ ಕಂಡುಕೊಳ್ಳಬಹುದು.
    ನಮ್ಮ ಕನ್ನಡದಲ್ಲಿ ಕೆಲವೇ ಕೆಲವು ಸಾಹಿತ್ಯಗಳನ್ನು ತೆರೆಗೆ ತಂದದ್ದು ಬಿಟ್ಟರೆ, ಬೇರಾವುದೇ ವಿಷಯದಲ್ಲಿ ಚಲನಚಿತ್ರ ಕ್ಷೇತ್ರ ಮನ್ನಣೆ ನೀಡಿಲ್ಲ.ಅದನ್ನು ತೆಗೆಯುವ ರೀತಿ ಇಲ್ಲಿ ಚಾಲನೆಗೆ ಬಂದಿಲ್ಲ. ಎಷ್ಟೊಂದು ಕಥೆಗಳಿವೆ ಕನ್ನಡದಲ್ಲಿ,ಇಡೀ ವಿಶ್ವವನ್ನೇ ನಾಚಿಸುವ ಸಾಹಿತ್ಯ ಭಂಡಾರಕ್ಕೆ ಚಲನ ಚಿತ್ರ ಕ್ಷೇತ್ರವೂ ಪ್ರಮುಖ ಮಾನದಂಡವಾಗುತ್ತದೆ ಅಂತ ನಮ್ಮವರಿಗೆ ಇನ್ನೂ ಅರಿವಿಗೆ ಬಂದಿಲ್ಲ.ಮತ್ತೆ ನಮ್ಮಲ್ಲಿ ಪ್ರೇಕ್ಷಕರನ್ನು " ಮಸಾಲೆ ಚಿತ್ರಕ್ಕೆ , ಮತ್ತು ಕನಸು ಕಾಣುವ ಚಿತ್ರಕ್ಕೆ" ಒಗ್ಗಿಸಿಬಿಟ್ಟಿದೆ ಕನ್ನಡ ಚಲನಚಿತ್ರ ಕ್ಷೇತ್ರ. ಅನಕೃ, ಶಿವರಾಮ ಕಾರಂತ, ತೇಜಸ್ವಿ ಸೇರಿದಂತೆ , ಹಲವು ಇಂದಿನ ನವೋದಯ ಸಾಹಿತಿಗಳ ಕಥೆಗಳು ಚಲನಚಿತ್ರದಲ್ಲಿ ತೆರೆ ಕಾಣಬೇಕು.ಅಲ್ಲೇಲ್ಲೋ ಒಂದೊಂದಕ್ಕೆ ಪ್ರಶಸ್ತಿ ಬಂದಿರಬಹುದು. ಅದು ಬಿಟ್ಟರೆ ಮಿಕ್ಕಿದ್ದೆಲ್ಲ ಒಂದು ತಿಂಗಳಿದ್ದು ಮರೆತುಹೋಗುವಂತಹದ್ದು.

    ReplyDelete
    Replies
    1. ಧನ್ಯವಾದ ರವಿಯಣ್ಣ

      Delete