Monday, March 12, 2012

ಬರಿದೆ ವೈಧವ್ಯ

ಗಡಿಯ ಕಾಯುತಿದ್ದ ಗಂಡ
ಯುದ್ಧ ಮುಗಿದ ಹಲವು ವರುಷ
ಮರಳಿ ಬರದೆ ಪತ್ತೆ ಕಳೆಯಲೂ,
ಕಾಯೊ ಪತ್ನಿಯೆಂಬ ಜೀವವನ್ನ
ಮಂದಿ ತಮ್ಮ ಸಂಪ್ರದಾಯದೊಳಗೆ ತರಿಸಿ
ತಿಲಕ ಅಳಿಸಿ, ಕೈಯ ಬಡಿಸಿ,ಬಿಳಿಯ ಸೀರೆಯುಡಿಸಿ
ಮಂದಿ ತಮ್ಮ ವೈಧವ್ಯದ ಪಟ್ಟಿ ತಿದ್ದಿ ತೀಡಿ
ಬರಿದೆ ಇವಳ ಹೆಸರು ನಮೂದಿಸಿ ಪಟ್ಟ ಕೊಟ್ಟರು

ಕಳಚಿ ಬಿದ್ದ ನಗುವನರಸಿ
ದಾರಿ ಅರಸಿ ಹೊರಟ ಇವಳ ಪಯಣ
ಮಂದಿ ಕುಹಕದಲ್ಲಿ ನೊಂದು ಬೆಂದು
ಕಣ್ಣು ಸುರಿಸೊ ನೀರ ವರೆಸಿಕೊಂಡು
ಹೆಜ್ಜೆ ತಪ್ಪಿ ಆಸರೆಯ ಆಯವೂ ತಪ್ಪಿ
ಬೇಗುದಿಯೊಳಗೆ ಧರೆಗುರುಳಿ
ಬಸವಳಿದು ಗರಬಡಿದು-ಕುಸಿದು ಕೂರುತಿದ್ದಳು

ಸಮಾಜದ ಗೌರವ ಆದರಗಳು
ಬತ್ತಿ ಮೂಲೆ ಸೇರುತಿರಲು
ಮಂದಿ ಕಣ್ಣೂ ಬೀಳುತಿತ್ತು
ಭೋಗಕ್ಕಿರುವ ಹೆಣ್ಣು ಎಂದು
ಅದಕ್ಕಾಗಿ ಕೊಟ್ಟಂಗಿತ್ತು
ದುರುಳ ವಿಧವೆ ಪಟ್ಟ.
ವ್ಯಭಿಚಾರಿಣಿ ಎಂಭವರೆಗೆ
ನಾಲಿಗೆಯ ಹರಿಯಬಿಟ್ಟ ಮಂದಿ
ವಿಕೃತ ಖುಷಿಯ ಅನುಭೂತಿಯೊಡೆ
ಕೊಂಕು ಮಾತನಿವಳ ಮುಂದಿಟ್ಟು- ಮೊಟಕುತಿದ್ದರು

ಬೆಳಕು ತುಂಬಿದೊಂದು ದಿನ
ಒಂಟಿ ಕಾಲ ನಡಿಗೆಯಲ್ಲಿ
ಕೃಶವಾದ ಒಂದು ಜೀವ
ವಿಧವೆಯನ್ನ ಬಂದು ಆಧರಿಸಿ ಅಪ್ಪಿತು,
ಶತ್ರು ದೇಶದ ಸೆರೆಯಲ್ಲಿ
ಯುದ್ಧ ಕೈದಿಯಾಗಿ ಜೀವತೈದು
ಮರೆಯಾದ ಆಕೆಯ ನಲ್ಲ
ಬತ್ತಿದ ಖುಷಿಯ ಮರಳಿ ತಂದು- ಗಲ್ಲ ಚಿವುಟಿದ

ಕುಹಕ ಮಂದಿ ಇದನು ನೋಡಿ
ಪ್ಲೇಟು ಅದಲು ಬದಲು ಮಾಡಿ
ಕರುಣೆ ಮಾತ ಹೊತ್ತು ಬರಲು
ರೋಷಗೊಂಡ ಇವಳದೊಂದು ಉಗುಳು
ವ್ಯಭಿಚಾರಕರ ಮೊಖಕ್ಕೆ ಥೂ...ಎನಲು
ಉಗುಳ ಕಾವಿಗೆ ತರಗುಟ್ಟಿದ ಮಂದಿ ಬಳಗ
ಮುಂದಿಡುವ ಹೆಜ್ಜೆಯ ಮರೆತು ಬೆಚ್ಚಿ ಬಿದ್ದು- ಕಾಲ್ಕಿತ್ತಿತು

ಸಮಾಜವೆ ನಿನ್ನ ಒಡಲಿನಲ್ಲಿ
ಇಹುದಿಂತ ನೂರು ನೂರು ಕಥೆ
ಕೆಲವೊಂದು ಸವಿ ಕವಿತೆ ಕೆಲವೊಂದು ವ್ಯಥೆ
ಪಿಸುಗುಡುವ ಸಾಲುಗಳೂ ಸಜ್ಜನಿಕೆಗೆ ಪೂರಕವಾದೊಡೆ
ಸಾರ್ಥಕವದು ಕಹಿಯಾದರೂ ಕನವರಿಪ
ನಿನ್ನ ಅನೂಹ್ಯ ತಿರುಹುಗಳು,ಒಳ ಹರಿವುಗಳು.

No comments:

Post a Comment