Saturday, March 24, 2012

ಆಕರ್ಷಣೆಗಳ ಸೆಳೆತಕ್ಕೆ ಸಿಕ್ಕಿ ಬೀಳುವ ಹುಚ್ಚು ಕೋಡಿ ಮನಸು....

ಅದೊಂದು ಕಣ್ಣ ಮಿಂಚು ಪಳ್ಳನೆ ನನ್ನೆದುರು ಇವತ್ತು ಕೂಡ ಬಂದು ಕಣ್ಣು ಕುಕ್ಕುತ್ತೆ,ಆ ನೆನಪುಗಳು ಮತ್ತೆ ಸುಳಿದಾಡಿ ಮೆಲ್ಲಗೆ ನನ್ನಲ್ಲಿ ನಸು ನಗೆಯ ತರಿಸುತ್ತೆ, ಅವಾಗ ಅವಳದು ನನ್ನದು ವಯಸ್ಸು ಹನ್ನೆರಡಿರಬೇಕು,ಒಂದೆ ಕ್ಲಾಸು, ಅಕ್ಕ-ಪಕ್ಕದ ಬೆಂಚು, ನಡುವೆ ಒಂದಿಷ್ಟು ಗ್ಯಾಪ್ ಸಿಹಿಗಾಳಿ ಓಡಾಡಲೆಂದು,ಚಿಕ್ಕಂದಿನಿಂದ ಪರಿಚಿತಳೆ ಆದರು ಅದೊಂದು ಅವಳ ದೃಷ್ಟಿ ನನ್ನ ತಾಕಿದ್ದು ಪೆನ್ನು ಬರೆಯುತ್ತಿಲ್ಲವೆಂದು ಪೆನ್ನು ಕಡ್ಡಿಯನೂದಿ ನಿಬ್ ಹಾರಿ ಶಾಯಿ ಆಕೆಯ ಡೆಸ್ಕ್ ಮೇಲೆ ಚಿತ್ತಾರ ಬಿಡಿಸಿದಾಗ,ಆಕೆಯ ಆ ಹೊತ್ತಿನ ರಂಪ್ ರಾಢಿ ಟೀಚರ್ ಗೆ ಹೇಳ್ತೀನಿ ಅನ್ನೊ ಗದರಿಕೆಯೊಂದಿಗೆ ಸ್ಟಾಪ್ ರೂಮಿಗೆ ಹೊರಟ ಬಿರುಸು,ಅದ ತಡೆಯಲು ನಾ ಕೈಹಿಡಿದೆಳೆದ ಕ್ಷಣವೆ ರಪ್ಪನೆ ಅವಳ ಕಣ್ಣ ಮಿಂಚು ನನಗೆ ರಾಚಿದ್ದು. ನೋಟ್ ಬುಕ್ಕಿನ ಹಾಳೆಯೆಳೆದು ಡೆಸ್ಕ್ ನಲ್ಲಿ ಮೂಡಿದ್ದ ಚಿತ್ತಾರವ ಅಳಿಸುತ್ತನೆ ಮನದೊಳಗೆ ಹೊಸ ತರದ ಭಾವನೆಗಳ ಚಿತ್ತಾರವ ಬಿಡಿಸಿದ್ದೆ. ಅವಳಲ್ಲೂ ಈ ಚಿತ್ತಾರ ಮೂಡಿತ್ತೆ? ಅವಳ ಆ ನೋಟದೊಳಗೆ ಅದೇನು ಸೆಳೆತವಿತ್ತು?ಕೋಪದಿ ಕುದಿಯಾಗಿದ್ದ ಅವಳು ಶಾಂತವಾಗಿದ್ದು ಹೆಂಗೆ? ಆ ಸ್ಪರ್ಷ ಹಿತವಾಗಿದ್ದೇಕೆ?ಪರಿಚಿತ ತುಂಡುಲಂಗದ ಹುಡುಗಿ ಈ ಚಡ್ಡಿ ಹೈದನಿಗೆ ಅವತ್ತೆ ಯಾಕೆ ಇಷ್ಷವಾಗಿದ್ದು?ಗೊತ್ತಿಲ್ಲ, ತನ್ನ ಬ್ಯಾಗ್ ತಡಕಾಡಿ ಪೆನ್ನೊಂದನ್ನ ಕೊಟ್ಟಿದ್ದಳು ಎಲ್ಲವನ್ನು ಮರೆತ ನಸುನಗೆಯೊಂದಿಗೆ,ನನ್ನ ಕಳ್ಳ ನೋಟಗಳು ನನ್ನ ಪರಿವೆಯೆ ಇಲ್ಲದೆ ಅವಳತ್ತ ಸಾಗಲು ಶುರುವಾದ ದಿನವದು,ನನ್ನ ಪ್ರತಿ ನೋಟದಲ್ಲು ಅವಳ ಮೊಗದಲ್ಲಿ ಮುಗುಳ್ನಗೆಯನ್ನೆ ಕಂಡಿದ್ದೆ ಆ ದಿನದಿಂದ. 

ಹೊಂ ವರ್ಕ್ ಮುಗಿಸಿ ಮೇಸ್ಟರಿಗೆ ತೋರಿಸಿದಾಗ,ಕ್ಲಾಸಲ್ಲಿ ಎದ್ದು ನಿತ್ತು ಮೇಸ್ಟ್ರ ಪ್ರಶ್ನೆಗೆ ಉತ್ತರಿಸಿ ಕೂತಾಗ,ಮಗ್ಗಿ ಉಸುರಿ ಮುಗಿಸಿದಾಗ ಮೇಸ್ಟ್ರ ಶಹಭಾಶ್ ಮಾತುಗಳನ್ನು ಕೇಳಿಸಿಕೊಂಡೆ ನನ್ನ ಕುಡಿ ನೋಟವ ಹರಿ ಬಿಡುತಿದ್ದೆ ಅವಳೆಡೆ ಅವಳ ಮುಖದಿ ಲಾಸ್ಯವಾಡೊ ನಗೆಯ ಕಾಣಲು, ಅವಳ ನಗೆಯಲ್ಲಿನ ಮಾಂತ್ರಿಕತೆ ನನಗೆ ಕೊಡೊ ಹುರುಪುಗಳನ್ನ ಹಿಡಿಯಾಗಿಸುತ್ತಲೆ ಇದ್ದೆ ಪ್ರತಿಸಲ.ಗ್ರೌಂಡಿನ ಬರೆಯಲ್ಲಿ ಕುಳಿತು ಆಕೆ ನೋಡುತಿದ್ದರೆ ಆಟದಲ್ಲಿ ತೊಡಗಿಕೊಂಡ ನನಗೆ ಬೂಷ್ಟ್ ಕುಡಿದ ಅನುಭವ,ನುಗ್ಗಿ ಬರುವ ಚೈತನ್ಯದೊಂದಿಗಿನ ಅದೆಂತದೊ ಸೆಳೆತ ನವಿರು ಖುಷಿಯಕೊಡುತಿತ್ತು, ಆಕೆ ನನ್ನೆ ನೊಡುತಿದ್ದಳ?ಎಂಭೊ ಪ್ರಶ್ನೆಗೆ ನನ್ನೊಳಗಿನ ಭಾವ ಹೌದೆಂದು ಉಸುರುತಿತ್ತು. ತಪ್ಪೊ ಸರಿಯೊ ತಿಳಿಯದಾದ ವಯಸ್ಸಲ್ಲಿ ನಾ ತೇಲುತಿದ್ದೆ ನವಿರು ಭಾವನೆಗಳ ಹಂದರದ ಆಗಸದಲ್ಲಿ.ಇದ್ಯಾಕೆ ಹೀಗೆ? ಯಾವನಿಗೊತ್ತು. ಉಹೂಂ ಯಾವುದಕ್ಕು ಉತ್ತರವಿಲ್ಲ.ಮಾತುಗಳೆ ಬೇಕಾಗಿರಲ್ಲಿ ಭಾವನೆಗಳ ಉಡಿತುಂಬಲು, ಅವಶ್ಯಕತೆಗೆ ಅನುಗುಣವಾಗಿ ಕ್ಲಾಸ್ ರೂಮ್ ಬಿಟ್ಟರೆ ಬೇರೆಲ್ಲು ಅಷ್ಟಾಗಿ ಇಲ್ಲದ ಮಾತುಕತೆ ಮೌನದೊಂದಿಗೆ ಭಾವನೆಗಳ ಜೊತೆ ಮಾತಿಗೆ ಬಿದ್ದಿತ್ತು. ಇದೊಂದು ಕ್ರಶ್ ಆಗಿತ್ತೆ? ಹೌದೆಂದು ತಿಳಿದಿದ್ದು ಬಹಳ ವರುಷಗಳ ನಂತರ.ಪ್ರೈಮರಿ ಮುಗಿಯುವವರೆಗು ಹೊಸ ಅನುಭವದ ಈ ಭಾವನೆಯೋಟ ಹೀಗೆ ಸಾಗಿತ್ತು,ಅದೊಂದು ಬೀಳ್ಕೊಡುಗೆಯ ದಿನ ಕಣ್ಣಲ್ಲಿ ನೀರೆ ನೀರು, ಸ್ಕೂಲ್ ಬಿಡುತ್ತೇನೆ ಅಂತಲ್ಲ, ನನ್ನ ಮುದಗೊಳಿಸುತಿದ್ದ ಆ ಲಾಸ್ಯ ನನ್ನಿಂದ ದೂರವಾಗುತ್ತಿದೆಯಲ್ಲ ಎಂದು, ಆಕೆ ಚಿಕ್ಕಮಂಗಳೂರಿನಲ್ಲಿ ತನ್ನ ಅಜ್ಜಿ ತಾತನ ಜೊತೆ ಇದ್ದು ಫ್ರೌಢ ಶಿಕ್ಷಣ ಪಡೆಯಲು ಹೋಗುತಿದ್ದಾಳೆಂದು,ಅವಳರುಹಿದ ಈ ಸುದ್ದಿ ನನ್ ಹೈಸ್ಕೂಲಿಗೆ ಬಂದು ಸೇರುತ್ತಾಳೆ ಎಂಬ ನನ್ನಾಸೆಗೆ ಕೊಡಗಟ್ಟಲೆ ನೀರು ಸುರಿದಿತ್ತು,ಆ ನೋವ ಕಳೆಯಲೆಂದು ಎಲ್ಲರಿಗಿಂತಲು ಜಾಸ್ತಿ ನಾನ್ ಅತ್ತಿದ್ದೆ ಆ ದಿನ,ನನ್ ಅಳು ಕಂಡು ಮೇಷ್ಟ್ರು, ಟೀಚರುಗಳ ಎಲ್ಲರ ಕಣ್ಣು ನವೆಯಾಗಿದ್ದರು ಕೂಡ ನಾ ನೋಡಿದ್ದು ಆಕೆಯೆಡೆಗೆ, ಆಕೆಯು ತಣ್ಣಗೆ ಅಳುತಿದ್ದಳು, ಇದೇನಪ್ಪ ಇವಳು ಅಳ್ಬೇಕಾದ್ರು ನಕ್ಕೊಂತಿರ್ತಾಳೆ ಅಂತ ಅಂದುಕೊಂಡಿದ್ದು ಹೌದು,ಅವಳು ನಗುತಿದ್ದಳಾ? ಅಥವಾ ನಗು ಮೋರೆ ನೋಡಲೆ ಬಯಸಿದ ನಾನು ಹಂಗೆ ಭ್ರಮಿಸಿಕೊಂಡೆನೊ? ಗೊತ್ತಿಲ್ಲ. ಹೈಸ್ಕೂಲ್ ಸೇರಿದ ಮೊದಲೆರಡು ತಿಂಗಳು ಇದೆ ನೆನಪು ಕಾಡಿತ್ತು,ಕ್ರಮೇಣ ಹೊಸ ಪರಿಸರಕ್ಕೆ ಹೊಂದಿಕೊಂಡಾಗ,ಹೊಸ ಗೆಳೆಯ ಗೆಳತಿಯರು ದೊರೆತಾಗ ಮನ ತಂಪಾಗಿ ಈ ಕಾಡುವಿಕೆ ಮರೆಯಾಗಿ ನನ್ನ ಮೊದಲ ಕ್ರಶ್ ಕೂಡ ದಿ ಎಂಡ್ ಪಡೆದಿತ್ತು.

ಹರೆಯ-ವೈಯಾರದ ಮನಕೆ ಲಂಗು ಲಗಾಮು ತೊಡಿಸಲಾಗದ ವಯಸು,ಫಲವಾಗಿ ಕ್ರಶ್ ಅನ್ನುವ ಭಾವನೆಯ ಹೊಸ ಅನುಭೂತಿಯ ಪುಟಿತ. ಈ ಹರೆಯದ ಕ್ರಶ್ ಅನ್ನೋದು ಸಹಪಾಠಿ ಮೇಲೆನೆ ಆಗ್ಬೇಕೂಂತ ಏನ್ ಕಾನೂನು ಇಲ್ಲ. ಕ್ಲಾಸ್ ಟೀಚರ್ ಮೇಲೆನೆ ಕ್ರಶ್ ಆಗ್ಬಹುದು, ಪಕ್ಕದ ಮನೆ ಆಂಟಿ ಮೇಲೆನೆ ಕ್ರಶ್ ಆಗ್ಬಹುದು,ದಾರಿಯಲ್ಲಿ ನಡೆದು ಹೋಗೊ ಹುಡುಗಿ ಮೇಲೆನೆ ಆಗಿರ್ಬಹುದು,ಬಸ್ಸಲ್ಲಿ ದಿನವು ಕಂಡು ಬರುವ ಅದೊಂದು ಹುಡುಗಿ ಮೇಲೆನೆ ಆಗಿರ್ಬಹುದು ಹೀಗೆ ಯಾರ್ ಮೇಲೆನೂ ಆಗ್ಬಹುದು, ಇಷ್ಟದಲ್ಲಿ ಅತಿ ಇಷ್ಟ ಅನ್ನೊ ನಮ್ಮೊಳಗಿನ ಭಾವನೆಗಳ ಭೋರ್ಗರೆತವಿದು. ಹುಡುಗಿರು ಇದಕ್ಕೆ ಹೊರತಾಗಿಲ್ಲ, ಅದಕ್ಕೆ ಇರ್ಬೇಕು ಕವಿ ಹೆಚ್.ಎಸ್.ವೆಂಕಟೇಶ ಮೂರ್ತಿ ಹುಚ್ಚು ಕೋಡಿ ಮನಸು ಅದು ಹದಿನಾರರ ವಯಸು ಎಂಭ ಸಾಲುಗಳನ್ನ ಬರಕೊಂಡಿದ್ದು.ಹಂಗೆ ನೋಡಿದ್ರೆ ಕ್ರಶ್ ಅನ್ನೋದು ಪಕ್ವತೆ ಪಡೆದು ತಿಳುವಳಿಕೆ ಒಡ ಮೂಡಿಸಿಕೊಂಡಾಗ ಪ್ರೀತಿಯಾಗಿ ಮಾರ್ಪಾಡಾಗಬಹುದು,ಕ್ರಶ್ ಹೆಚ್ಚಾಗಿ ಕ್ರಶ್ ಆಗೆ ಉಳಿಯೊದು, ಹಾಗಿದ್ದಾವಾಗ ಮಾತ್ರ ಆ ನೆನಪುಗಳು ಮಧುರ.ತುದಿ ಮೊದಲ್ಲಿದ ಕ್ರಶ್ ಗಳಿಗೆ ಹರೆಯದ ವಯಸ್ಸಲ್ಲಿ ಅಂತ್ಯವಿಲ್ಲವೇನೊ?ಉದಾಹರಣೆಗೆ ನನ್ನೆ ತೆಗೊಳ್ಳಿ 7 ನೆ ಕ್ಲಾಸ್ ನಲ್ಲಿ ಅಂತ್ಯಕಂಡ ನನ್ನ ಮೊದಲ ಕ್ರಶ್ ಮತ್ತೆ ಜೀವತೆಳೆದಿದ್ದು 9 ನೆ ಕ್ಲಾಸಲ್ಲಿ, ಬಹುಶಃ ನನಗೆ ಸೀಮಿತವಾಗಿ ಹೇಳೊದಾದರೆ 2 ನೆ ಯ ಹಾಗು ನನ್ನ ಕೊನೆಯ ಕ್ರಶ್ ಇದು ಹರೆಯದಲ್ಲಿ ಅಂದುಕೊಳ್ಳುತ್ತೇನೆ.ಉಳಿದಿದ್ದು ಹಾಗಾಗೆ ಬಂದು ಹೋದ ಕೆಲವು ಈ ಪರಿಯ ಭಾವಗಳಿದ್ದರು ಮೊದ ಮೊದಲ ಈಗಾಗಲೆ ಹೇಳಿದ ಮತ್ತು ಈಗ ಹೇಳುತ್ತಿರುವ ಈ ಕ್ರಶ್ ಗಳಿಗೆ ಅದು ಸಮನಾಗಿ ನಿಲ್ಲುವಂತದ್ದಲ್ಲ.

ನಂಗೆ ಹೈಸ್ಕೂಲ್ ಬುತ್ತಿಯೂಟದ ಪರಿಚಯ ಮಾಡಿಸಿತ್ತು.ನಡೆದು ಬರುತಿದ್ದ ದಾರಿಯಲ್ಲಿ ಅದೊಂದು ದಿನ ಬ್ಯಾಗ್ ಹರಿದು ಬುತ್ತಿ ಮಣ್ಣು ಸೇರಿದ್ದ ದಿನ ಪಕ್ಕದ ತೊರೆಯಲಿ ಅದ ತೊಳೆದು ಖಾಲಿ ಡಬ್ಬದೊಂದಿಗೆ ಶಾಲೆ ತಲುಪಿದ್ದೆ. ಊಟದ ಹೊತ್ತಲ್ಲಿ ಕ್ಲಾಸ್ ರೂಂ ತೊರೆದಾಗ ಗೆಳೆಯ ಊಟ ಯಾಕೆ ಮಾಡೋದಿಲ್ಲ ಎಂದು ಕೇಳಿದ ಪ್ರಶ್ನೆಗೆ ಹಸಿವಿಲ್ಲ ಎಂಭ ಉತ್ತರದೊಡನೆ ವಿರಾಮದ ತಾಣವಾಗಿ ಮಾರ್ಪಾಡಾಗಿದ್ದ ಶಾಲಾ ಹಿಂದಿನ ಮರದ ನೆರಳಿಗೆ ಬಂದೆ. ಹಸಿವಿಲ್ಲ ಎಂಭ ಶಬ್ದ ಆಕೆಗದು ಕೇಳಿಸಿತ್ತು ಹಾಗು ಗ್ರಹಿಕೆಗು ಬಂದಿತ್ತು, ಅವಳೂ ಬಂದಿದ್ದಳು ನನ್ನ ಆಶ್ರಯಿಸಿದ ನೆರಳ ಕೆಳಗೆ, ಬುತ್ತಿಯ ಮುಚ್ಚಳವೆ ಬಟ್ಟಲಾಗಿತ್ತು, ಜೊತೆಗೆ ಅವಳು ಕೊಟ್ಟ ಅವಳ ಪಾಲಿನ ಹಿಟ್ಟು ನನ್ನ ಹೊಟ್ಟೆ ತಂಪಾಗಿಸಿತ್ತು.ಅವಳ ಆ ಕ್ರಿಯೆಯಲ್ಲಿದ್ದುದು ಮಮತೆನ? ಪ್ರೀತಿನಾ? ಅನುಕಂಪನ?ಗೊತ್ತಿಲ್ಲ, ನನ್ನಲ್ಲಂತೂ ಭಾವನೆಗಳ ಭೋರ್ಗರೆತ ಕಡಲಾಗಿ ಹರಿದಿತ್ತು.ದೂರದ ಬೋರ್ ವೆಲ್ ಕಡೆಗೆ ನನ್ನೆಂಜಲು ತಟ್ಟೆಯ ಹಿಡಿದು ಅವಳೆ ನಡೆದಿದ್ದಳು ನಾ ಅವಳ ಹಿಂಬಾಲಕ.ಬೋರ್ ಹ್ಯಾಂಡಲ್ ಜಗ್ಗೊ ನನ್ನ ನೋಟ ತಟ್ಟೆ ತೊಳಿತಿದ್ದ ಆಕೆಯೆಡೆಗೆನೆ ದೃಷ್ಟಿ ಬೀರಿತ್ತು, ನನ್ನ ಸುತ್ತ ಎಲ್ಲವು ಮರೆತ ಅನುಭವ.ಆಕೆ ಹ್ಯಾಂಡಲ್ ಜಗ್ಗಿ ನಾನ್ ಕೈ ತೊಳಿಯುತ್ತಿರಬೇಕಾದರೆ ಯಾಕೊ ಭಾವನೆಗಳ ಹೊಳೆಯನ್ನೆ ನನ್ನೊಳು ಹರಿಸಿದ ಅನುಭೂತಿ.ಕ್ಲಾಸ್ ರೂಂ ಪ್ರವೇಶವಾದೊಡೆ ಸಹಪಾಠಿಗಳ ನೇರ ದೃಷ್ಟಿಯೊಡನೆ ಬರಿದೆ ಬಂದೊದಗಿದ ಮುಜುಗರ, ಬೆಂಚ್ ಮೇಟ್ ನ ಪಕ್ಕೆಯ ತಿವಿತ ಜೊತೆಗೊಂದಿಷ್ಟು ಮುಸು ಮುಸು ನಗು, ಪಿಸ ಪಿಸ ಸದ್ದುಗಳು ನನ್ನೊಳಗೆ ಚೇತರಿಕೆಯ ತಂದಿತ್ತು, ಅದಾಗೆ ಒತ್ತರಿಸಿ ಬಂದ ಖುಷಿಯ ಹಿಡಿ ನಗುವಿನೊಂದಿಗೆ ಆಕೆಯೆಡೆ ನೊಡಿದ್ದೆ.ಹುಡುಗಿ ಮುಖವೆಲ್ಲ ಕೆಂಪು ಮಾಡ್ಕೊಂಡು ಕೂತಿತ್ತು,ಯಾಕೊ ತಲೆ ಎತ್ತಿ ನೋಡ್ತಾನೆ ಇರಲಿಲ್ಲ, ನನಗಿನ್ನಷ್ಟು ನಗು, ನಗು ಕೇಳಿಸಿತೊ ಎಂಬಂತೆ ಹಿಂತಿರುಗಿ ನೋಡಿದ್ದಳು, ಮುಖ ಇನ್ನಷ್ಟು ಕೆಂಪೇರಿತ್ತು.ಒಂದು ಸೆಕೆಂಡ್ ಅಷ್ಟೆ ಅವಳ ಮುಖದಲ್ಲು ಸಣ್ಣನೆಯ ತಿಳಿ ನಗು ಮಿಂಚಿ ಮಾಯವಾಗಿದ್ದು ನನ್ನ ಅರಿವಿಗೆ ಮಾತ್ರ ಬಂದಿತ್ತು.ನವಿರಾದ ಮುದ ಕ್ಷಣಗಳು.ಇಂತಿಪ್ಪ ಕ್ರಶ್ ಕೂಡ SSLC ಮುಗಿಸುವವರೆಗೆ ಮಾತ್ರ ಸೀಮಿತ, ಮತ್ತದೆ ಬೀಳ್ಕೊಡುಗೆ ಅತ್ತು ಕರೆಯುವ ರಂಪಾಟಗಳು ನಡೆದೆ ಇತ್ತು ಈ ಮದ್ಯೆ ಆಟೋಗ್ರಾಫ್ ಹಂಚಿಕೆಗಳು ನಡೆದಿತ್ತು 2 ಕಡೆಯಿಂದ ಅದಕ್ಕೊಂದಿಷ್ಟು ಅಸ್ಥೆಯಿಂದ ರಂಗು ತುಂಬಿ ನಾಕು ಅಕ್ಷರಗಳನ್ನು ಬರೆಯಲಾಗಿ ವಿನಿಮಯಿಸಿಕೊಳ್ಳಲಾಗಿತ್ತು.ಇತ್ತೀಚೆಗೆ ಊರಿಗೆ ಹೋದಾವಾಗ ಸಿಕ್ಕಳು, ಕೈ ಹಿಡಿದು ಕೊಂಡು ಒಂದು ಮಗು ಹೆಜ್ಜೆ ಹಾಕಿದರೆ ಆಕೆಯ ಕಂಕುಳಲ್ಲಿದ್ದ ಮತ್ತೊಂದು ಮಗು ಆಕೆಯ ಮುಖ ಪರಚುತಿತ್ತು, ಯಾಕೊ ಜೋರಾಗಿ ನಗು ಬಂತು ನಕ್ಕೆ ಆಕೆಯು ನಕ್ಕಳು ನಗು ವಿನಿಮಯದೊಂದಿಗೆ ಮಾತು ಶುರುವಾಗಿದ್ದು ಕುಶಲೋಪರಿಯೊಂದಿಗೆ ಸಾಗಿ ಮುಗಿದಿತ್ತು. ಈಗಲು ಖುಷಿಯನ್ನು ಒಡಲು ತುಂಬಿಸಿನೆ ಮನೆ ಕಡೆ ಹೆಜ್ಜೆ ಹಾಕಿದ್ದೆ.

ಹಾಗೆ ನೋಡಿದಲ್ಲಿ ಈ ಕ್ರಶ್ ಗೆ ಆದಿ ಆಂತ್ಯಗಳು ಇರೋದನ್ನ ನಾ ಕಾಣೆ. ಚಿತ್ರ ನಟರ ಮೇಲೆ ಚಿತ್ರ ನಟಿಯರ ಮೇಲೆ, ಬಾಸ್ ಮೇಲೆ, ಮೇಡಂ ಮೇಲೆ ಹೀಗೆ ನಾನ ಪರಿಯಲ್ಲಿ ಕ್ರಶ್ ಹುಟ್ಟುತ್ತಲೆ ಇರುತ್ತದೆ.ಆದರೆ ಈ ಎಲ್ಲ ಕ್ರಶ್ ಗಳ ಹಿಂದೆ ಮೊದ ಮೊದಲು ಹುಟ್ಟಿದ ಕ್ರಶ್ ನಲ್ಲಿರುವ ಮುಗ್ಧತೆ ಇರಲು ಸಾಧ್ಯವಿಲ್ಲ, ಅವುಗಳು ಆಗಷ್ಟೆ ಫ್ರೆಶ್ ಆಗಿ ನಮೊಗೊದಗಿದ ಇಷ್ಟದ ಭಾವನೆಗಳು, ಅವುಗಳ ನೆನಪುಗಳು ಕೂಡ ಮಧುರ.ಆ ನೆನಪುಗಳು ಮಾಗಿರೋದಿಲ್ಲ,ಮನದ ಅಂಚಲ್ಲಿ ಅವಿತಿರುವ ಆ ನೆನಪುಗಳನ್ನು ಹೊರಗೆಳೆದು ಮೆಲುಕು ಹಾಕಿದಾಗ ಒಂದಷ್ಟು ಖುಷಿ ಸಿಗೊದಂತು ಸತ್ಯ.ಒಟ್ಟಿನಲ್ಲಿ ಬಾಲ್ಯ ಮತ್ತು ಯೌವನ ಈ ನಡುವಿನ ಅಂತರವಿದೆಯಲ್ಲ ಇದು ಭಾವನೆಗಳ ಮಿಂಚು ಹರಿಸೊ ಕಾಲ,ಹೊಸತೆರನಾದ ಭಾವನೆಗಳು ಹುಟ್ಟುವ ವಯಸ್ಸದು,ಆ ಹೊಸ ತೆರನಾದ ಭಾವನೆಗಳು ಅಂದರೆ ಮತ್ತೇನಲ್ಲ ಮೇಲೆ ಹೇಳಿದ ಭಾವನೆಗಳಂತೆ ಅದು ಗಂಡು ಹೆಣ್ಣಿನ ನಡುವೆ ಹುಟ್ಟೊ ಆಕರ್ಷಣೆ ಅಥವಾ ಕ್ರಶ್.ತಾಯಿ ಪ್ರೀತಿ ನೋಡಿ ಬಾಲ್ಯ ಕಳೆದ ನಂತರ ಬೇರೆಯೆ ತೆರದಲ್ಲಿ ಗಂಡು ಹೆಣ್ಣಿನತ್ತ, ಹೆಣ್ಣು ಗಂಡಿನತ್ತ ಆಕರ್ಷಿತರಾಗುವದು ಪ್ರಕೃತಿ ನಿಯಮ. ಜೊತೆಗೆ ಇದ್ದರು ಒಡನಾಟವಿದ್ದರು ಈ ಕ್ರಶ್ ಹುಟ್ಟಲು ಅದರದೆ ಆದ ಕಾಲವನ್ನು ಬಯಸುತ್ತದೆ, ಆದ್ಯಾಕೆ ಆವಾಗಲೆ ಅದು ಹುಟ್ಟಿತು ಅನ್ನುವದಕ್ಕೆ ಉತ್ತರ ದೊರಕಲಾರದು ಹಾಗೆಯೆ ಅದು ಕೊನೆಯಾಗಲು ಕೂಡ,ಪ್ರೀತಿಯು ಅಲ್ಲದ ಅತ್ತ ಕಾಮವೆಂದರೆ ಏನೆಂದೂ ತಿಳಿಯದ ಗಂಡು ಹೆಣ್ಣಿನ ಹರೆಯದ ಸಹಜ ಆಕರ್ಷಣೆಯಾದ ಕ್ರಶ್ ಬಗ್ಗೆ ಹೇಳಿದ್ದೇನೆ,ಮೂಗೆಳೆಯಬೇಡಿ, ನಮಗೆ ಈ ಪರಿಯ ಅನುಭೂತಿ ಆಗಿಲ್ಲವೆ ಇಲ್ಲ ಅಂಥಲೂ ಹೇಳಬೇಡಿ, ಒಂದಲ್ಲ ಒಂದು ಹರೆಯದ ವಯಸ್ಸಲ್ಲಿ ಈ ಅನುಭವವನ್ನು ದಾಟಿನೆ ಯೌವನಕ್ಕೆ ಕಾಲಿಟ್ಟಿದ್ದೇವೆ ಅನ್ನೊದನ್ನ ಆತ್ಮವಂಚನೆಯಿಲ್ಲದೆ ನಾವು ಒಪ್ಪಿಕೊಳ್ಳಬೇಕಾದ ಸತ್ಯ.

2 comments:

  1. ’ಲಿಟ್ಲ್ ಮ್ಯಾನ್’ಹಟ್ಟನ್’ ಸಿನೆಮಾವನ್ನು ಮತ್ತೊಮ್ಮೆ ತಿರುಗಿಸಿ, ತಿರುಗಿಸಿ ನೋಡಿದಂತೆನಿಸಿತು ರಾಘಣ್ಣ.. ಮನಮಿಡಿಯುವ ಲೇಖನ, ನನ್ನ ಮೊದಲ ಕ್ರಶ್ ಅನ್ನು ನೆನಪಿಸಿದಿರಿ.. ನನ್ನ ಜೀವನದ ಮೊದಲ ಕ್ರಶ್ ಆದದ್ದು ನಾನು ಏಳನೇ ತರಗತಿಯಲ್ಲಿದ್ದಾಗ ಆಕೆ ಈಗಲೂ ನನ್ನ ಸ್ನೇಹಿತೆ ಆದರೆ ಅದು ಕೇವಲ ಕ್ರಶ್ ಆಗಿಯೇ ಉಳಿದು ಸ್ನೇಹವಾಗಿ ಅರಳಿದೆ.. ಆದರೂ ಆಕೆ ಮನಸ್ಸಿಗೆ ಕೊಟ್ಟ ಪುಳಕಗಳನ್ನು ಎಂದಿಗೂ ಮರೆಯಲಾಗದು..ಗೆಳೆಯರು ಆಕೆಯ ಹೆಸರನ್ನು ನನ್ನ ಹೆಸರಿನೊಂದಿಗೆ ತಳುಕು ಹಾಕಿ ಆಡಿಕೊಂಡಾಗ ಮುಂದೆ ಕೋಪ ನಟಿಸಿದರೂ ನನಗೇ ಅರಿವಿಲ್ಲದೆ ಮನದೊಳಗೆ ನಗುವಾಗುತ್ತಿದ್ದೆ.. ಕ್ರಶ್ ಪುರಾಣ ಮುದ ನೀಡಿತು.. ಭಾವನಾತ್ಮಕ ಲಹರಿ..:)))

    ReplyDelete
  2. ಒಳ್ಳೆ ಕ್ರಶ್ ಆಗಿದೆ ಮತ್ತು ಫ್ರೆಶ್ ಆಗಿದೆ :)

    ReplyDelete