ಜೀವನದ ಪ್ರತಿ ಕ್ಷಣಗಳಲ್ಲು ಪ್ರತಿಯೊಂದು ಘಟ್ಟದಲ್ಲು ಮನುಷ್ಯನಾದವ ತನ್ನದೆ ಆದ ನಿರ್ಧಾರಗಳನ್ನು ತೆಗದುಕೊಳ್ಳಬೇಕಾಗುತ್ತದೆ. ವ್ಯಕ್ತಿತ್ವ ವಿಕಸನ ಅನ್ನೊದನ್ನೇನಾದರು ನಾವು ವಿಶ್ಲೇಷಿಸ ಹೊರಟರೆ ಅದರ ತಳಪಾಯ ಇರುವದು ಇತರರ ಮಾರ್ಗದರ್ಶನ, ಸಲಹೆ, ನಮ್ಮ ವಿದ್ಯಾಭ್ಯಾಸದ ಡಿಗ್ರಿಗಳು ಏನೆ ಇದ್ದರು ಅದೆಲ್ಲದರ ಹೊರತಾಗಿಯು ಅದು ಇರುವದು ಹಾಗು ಅವಿತಿರುವದು ನಾವು ಜೀವನದ ಪ್ರತಿಘಟ್ಟದಲ್ಲು ತೆಗೆದುಕೊಳ್ಳುವ ನಮ್ಮದೆ ನಿರ್ಧಾರಗಳಲ್ಲಿ.ಪ್ರತಿಯೊಂದು ಸರಿಯಾದ ನಿರ್ಧಾರಗಳು ಕೂಡ ನಮ್ಮನ್ನು ಉದ್ದರಿಸಬಲ್ಲುದು ತಪ್ಪು ನಿರ್ಧಾರಗಳಾದರೆ ಒಡನೆಗೆ ಅರಿವಿಗೆ ಬರದಿದ್ದರು ಕೂಡ ಮುಂದೆ ಸಮಸ್ಯೆಗಳಿಗೆ ನಾಂದಿಯಾಗಬಹುದು ಆಗ ನಾವು ತೆಗೆದುಕೊಂಡ ನಿರ್ಧಾರಗಳೆ ಮರೆತು ಹೋಗಿ ಯಾಕೆ ಹೀಗಾಯಿತು ಅನ್ನೊ ಕೊರಗಷ್ಟೆ ನಮ್ಮೊಳಗೆ ಉಳಿಯಬಹುದು. ಅದು ನಮ್ಮ ವಿಕಸನಕ್ಕೆ ಅಡ್ಡಿಪಡಿಸುವದಂತು ದಿಟ.ಹಾಗಿದ್ದರೆ ನಮ್ಮೊಳಗೆ ಸರಿಯಾದ ನಿರ್ಧಾರಗಳು ಅದಾಗೆ ಹುಟ್ಟಬೇಕಾದರೆ ನಮ್ಮಳಗೆ ಪ್ರಶ್ನೆಗಳು ಹುಟ್ಟುತ್ತಲೆ ಇರಬೇಕು!!! ವಿಚಿತ್ರ ಅನಿಸುತ್ತಾ, ಹೌದು ನಮಗೆ ನಾವೆ ಒಡ್ಡಬಹುದಾದ ಪ್ರಶ್ನೆಗಳು ನಮ್ಮನ್ನು ಸರಿಯಾದ ನಿರ್ಧಾರಗಳೆಡೆ ಪ್ರಚೋದಿಸುತ್ತದೆ.
ಲಕ್ಷ ಲಕ್ಷ ವೈಜ್ಞಾನಿಕ ಸಂಶೋಧನೆಗಳು ನಮ್ಮನ್ನು ಈ ಯಾಂತ್ರಿಕ ಯುಗದಲ್ಲಿ ಅಡಿಯಿರಿಸುವಂತೆ ಮಾಡಿದೆ, ಈ ಅನ್ವೇಷಣೆಗಳು ಹುಟ್ಟಿದ್ದು ಬರೀಯ ಪ್ರಶ್ನೆಗಳಿಂದ ಮತ್ತು ಕುತೂಹಲದಿಂದಲ್ಲವೆ?ಬೆಳಿಗ್ಗೆದ್ದು ಬ್ರಶ್ ಮಾಡೋ ಟೂತ್ ಪೇಷ್ಟ್ ಬ್ರಶ್ ನಿಂದ ಹಿಡಿದು ಒಡಾಡುವ ಕಾರು, ಬೈಕು, ಬಸ್ಸು,ಅನುಕೂಲಕ್ಕಾಗಿ ಬಳಸುವ ಯಂತ್ರಗಳು, ಮನರಂಜಿಸುವ ಟೀವಿ, ಸಿಡಿ ಪ್ಲೇಯರ್ ಇತ್ಯಾದಿ ಮನರಂಜಕಗಳು ಇತ್ಯಾದಿ ಇತ್ಯಾದಿ ವಸ್ತು ವಿಷಯಗಳೆಲ್ಲ ನಮ್ಮಲ್ಲಿನ ಪ್ರಶ್ನೆಗಳಿಗೆ ಹುಟ್ಟಿಕೊಂಡಿರುವ ಪ್ರತ್ಯುತ್ತರದ ಸಾಮಾಗ್ರಿಗಳೆ ಅಲ್ಲವೆ?ಹೀಗೆ ಪ್ರಶ್ನೆಗಳ ಹುಟ್ಟು ಉತ್ತರಗಳನ್ನು ಕಂಡುಕೊಳ್ಳುವಲ್ಲಿಯವರೆಗೆ ಅದರ ಹರಿವು ನಿಲ್ಲದು.ನಮ್ಮ ಅನುಕೂಲಕ್ಕಾಗಿ ಪ್ರತಿ ಪ್ರಶ್ನೆಗಳಿಗೆ ಉತ್ತರ ಹುಡುಕುವ ನಾವು ನಮ್ಮನ್ನು ನಾವು ವಿಕಸಿಸಿಕೊಳ್ಳೊದಕ್ಕೆ ಪ್ರಶ್ನೆ ಮಾಡಿಕೊಳ್ಳುವದು ಕಡಿಮೆಯಾಗುತ್ತಿದೆ. ಕಾರಣ ನಾವು ನಮ್ಮ ವಿಕಸನ ಅಂತ ತಿಳಿದುಕೊಳ್ಳೊದು ನಾವು ಪಡೆದ ವಿದ್ಯಾಭ್ಯಾಸದ ಸರ್ಟಿಫಿಕೇಟ್ ಮೇಲೆ. ಆ ಸರ್ಟಿಫಿಕೇಟ್ ಮೇಲೆ ಕೈ ತುಂಬಾ ಸಂಪಾದಿಸಬಲ್ಲಂತ ಉದ್ಯೋಗ ದೊರೆತರೆ ಸಾಕು ಅಲ್ಲಿಗೆ ಜೀವನ ಸೀಮೀತಗೊಳಿಸುವ ಸಾರ್ಥೈಕ ಭಾವ. ಇದರಿಂದಾಗಿ ಮನಸ್ಸುಗಳ ಚೈತನ್ಯತೆಯು ಬತ್ತುತ್ತದೆ, ಹೇಗೆ ಅಂತೀರಾ? ಮನೆ ಮನಗಳಲ್ಲಿ ತಮ್ಮದೆ ನೂರೆಂಟು ರಗಳೆಗಳಿದ್ದಾವಾಗ ಬದುಕು ಯಾಂತ್ರಿಕವಾಗಿರುವಾಗ ಪರರತ್ತ ನೋಡೋದಕ್ಕೆ ಅವರ ಕಷ್ಟಗಳಿಗೆ ಸ್ಪಂದಿಸುವದಕ್ಕೆ ನಮ್ಮಲ್ಲಿ ವೇಳೆಯಾದರು ಎಲ್ಲಿಂದ ಸಿಕ್ಕೀತು. ನಮ್ಮಲ್ಲಿ ನೂರೆಂಟು ರಗಳೆ ಯಾಕೆ ಹುಟ್ಟುತ್ತವೆ ಅಂದರೆ ನಾವು ತೆಗೆದುಕೊಳ್ಳುವಲ್ಲಿನ ನಿರ್ಧಾರಗಳ ಯಡವಟ್ಟುಗಳಿಂದ,ಯಾವತ್ತೊ ಏನೊ ತೆಗೆದುಕೊಂಡ ತಪ್ಪು ನಿರ್ಧಾರಗಳು ರಗಳೆಗಳಾಗಿ ಭಾಧಿಸುತ್ತದೆ ಇದಕ್ಕೆ ಕಾರಣ ಮೊದಲೆ ಹೇಳಿದಂತೆ ನಿರ್ಧಾರಗಳ ಮುಂದು ನಮಗೆ ನಾವೆ ಪ್ರಶ್ನೆಗಳನ್ನ ಮಾಡುವದನ್ನು ಮರೆತಿದ್ದು.ಹೀಗಿರಬೇಕಾದರೆ ಇದರ ಒಟ್ಟು ಪರಿಣಾಮ ಸಮಾಜದ ಮೇಲಾಗುತ್ತೆ.ಸಮಾಜವು ಭಾಂದವ್ಯಗಳನ್ನು ಕಳಕೊಂಡು ಯಾಂತ್ರಿಕವಾಗುತ್ತದೆ.ಸಮಾಜದಲ್ಲಿ ಮಿಳಿತವಾಗಿ ಸ್ವಚ್ಚ ಆನಂದವನ್ನ ಪಡೆಯೊ ಭಾಗ್ಯದಿಂದ ವಂಚಿತರಾಗುತ್ತೇವೆ,ಅಂತೆಯೆ ಪ್ರಶ್ನೆಗಳನ್ನು ನಮಗೆ ನಾವೆ ಮಾಡಿಕೊಳ್ಳುವ ಅಭ್ಯಾಸವನ್ನ ಬಿಟ್ಟಿದ್ದಕ್ಕೆ ಏನೊ ಗೊತ್ತಿದ್ದೊ ಗೊತ್ತಿಲ್ಲದೆಯೊ ಸಮಾಜಕ್ಕೆ ಈ ತೆರನಾದ ಒಳಿತೊ, ಕೆಡುಕೊ ಏನೊ ಒಂದು ಪ್ರಭಾವವನ್ನು ಹರಿಬಿಡುತ್ತೇವೆ.
ಈಗ ಬರವಣಿಗೆಯನ್ನೆ ತೆಗೆದುಕೊಳ್ಳೋಣ, ನನ್ನಲ್ಲಿ ಸಾಮಾಗ್ರಿಗಳಿವೆ, ವಿಷಯ ಸಂಗ್ರಹಗಳಿವೆ ಅಂತ ಉದ್ದುದ್ದ ಬರೆಯೋದು ಸಾಧ್ಯನ? ಒಂದು ವೇಳೆ ಬರೆದೆನು ಎಂದರೆ ಅದು ನನಗೊಪ್ಪುವ ವಿಷಯಗಳ? ಬರಿಯ ಸಂಗ್ರಹದ ಸಾಮಾಗ್ರಿಯಾಗಿರದೆ ಅದು ತನ್ನ ಗ್ರಹಿಕೆಗೆ ಬಂದಿರೋದ? ನನ್ನತನಕ್ಕೆ ಎಷ್ಟು ಬೇಕೊ ಅಷ್ಟು ಬರೆದೆನೆ?ಆಥವಾ ನನ್ನ ಸಾಮರ್ಥ್ಯಕ್ಕಿಂತಲು ಮಿಗಿಲಾಗಿದ್ದನ್ನು ಸಾಮಾಗ್ರಿ ಪೂರೈಕೆಯಿದೆ ಅನ್ನೊ ಕಾರಣಕ್ಕಾಗಿ ಬರೆದನೆ? ವಿಚಾರಗಳು ನನಗೆ ಹೊಳೆದದ್ದೆ? ಅನ್ನೊ ಪ್ರಶ್ನೆಗಳೊಡನೆ ಬರವಣಿಗೆಯನ್ನು ಬರೆಯಬೇಕಾಗುತ್ತದೆ.ಸಾಮರ್ಥ್ಯದಿಂದಲು ಮಿಗಿಲಾದದ್ದನ್ನು ಬರೆಯಲು ಹೋದರೆ ಆಭಾಸವಾಗುತ್ತದೆ.ಹಾಗು ನಮ್ಮೊಳಿರುವ ಬರಹಗಾರನಿಗು ನಾವು ಬರೆದ ಬರವಣಿಗೆಗು ದ್ರೋಹವೆಸೆದಂತೆ.ಅದು ನಮ್ಮನ್ನು ನಾವು ಕೊಂದುಕೊಂಡಂತೆ. ಹಾಗಾದರೆ ತನ್ನ ಸಾಮರ್ಥ್ಯದ ಗ್ರಹಿಕೆ ಅದರ ಉದ್ದ, ಅಗಲವನ್ನು, ಇತಿ-ಮಿತಿಯನ್ನು ತಿಳಿಸುವದು ನಮ್ಮೊಳು ನಾವೆ ಹಾಕಿಕೊಳ್ಳುವ ಪ್ರಶ್ನೆಗಳಿಂದ.ಹೀಗೆ ಪ್ರತಿ ಕ್ಷೇತ್ರದಲ್ಲು ನಮಗೆ ನಾವೆ ಒಡ್ಡುವ ಪ್ರಶ್ನೆಗಳು ನಮ್ಮೊಳಗಿನ ಸಜ್ಜನಿಕೆ ಹಾಗು ನಮ್ಮ ಸಾಮರ್ಥ್ಯಗಳನ್ನು ನಮಗೆ ತಿಳಿಸುತ್ತೆ ಹಾಗು ಸಾಮರ್ಥ್ಯಕ್ಕೆ ಅನುಗುಣವಾಗಿ ಮುಗಿಸಿದ ಕೆಲಸದಿಂದ ಸಿಗುವ ಶ್ರೇಯ ಸಾಮರ್ಥ್ಯದ ಇನ್ನೊಂದು ಅಂತಸ್ಥನ್ನು ಏರಲು ಚೈತನ್ಯಿಸುತ್ತದೆ. ಇದನ್ನೆ ನಾನು ನಮ್ಮ ವಿಕಸನಗಳು ಅಂದಿದ್ದು ಇದಕ್ಕೆ ಕಾರಣ ಹಾಗು ಶಕ್ತಿಯನ್ನ ತುಂಬೋದು ನಮ್ಮೊಳಗೆ ಹುಟ್ಟಿಕೊಳ್ಳುವ ಪ್ರಶ್ನೆಗಳೆ ಹೊರತಾಗಿ ಬೇರಾವುದೂ ಅಲ್ಲ.
ನಾನು ಯಾರು? ಅನ್ನೊ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಲೆ ಆತ್ಮಶೋಧನೆಯಲ್ಲಿ ತೊಡಗಿದ ರಮಣ ಮಹರ್ಷಿಯವರನ್ನು ಭಗವಾನ್ ಅಂತ ಹೆಸರಿಡಿದು ಕರಿಯುತ್ತೆ ನಮ್ಮ ಸಮಾಜ.ಯಾವುದೆ ಧರ್ಮಗಳ ಹಂಬಿಲ್ಲದೆ ಯಾವುದೆ ದೇವರನ್ನು ಹೆಸರಿಡಿಯದೆ ಆತ್ಮವನ್ನೆ ದೇವರೆಂದು ಕರೆದು ಆ ದೇವರನ್ನೆ ಹುಡುಕಿ ಜ್ಞಾನವನ್ನು ಪಡೆದ ದಾರ್ಶನಿಕ.ಆತ್ಮವನ್ನು ಹುಡುಕುವದು ಎಂದರೆ ರಮಣರ ಪಾಲಿಗೆ ನಾನು ಯಾರು?ಅನ್ನೊ ಪ್ರಶ್ನೆಗೆ ಉತ್ತರ ಹುಡುಕೋದು ಅಷ್ಟೆ ಆಗಿತ್ತು. ಸಾಮಾನ್ಯನಲ್ಲಿ ಸಾಮಾನ್ಯನಾದ ವೆಂಕಟರಮಣನೆಂಬ ಹುಡುಗ ತನ್ನ ಹನ್ನೆರಡನೆ ವಯಸ್ಸಿನಲ್ಲಿ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುದಕ್ಕೆ ಹಾಗು ಈ ಪ್ರಯತ್ನದಲ್ಲಿ ದೊರೆತ ಸತ್ಯಗಳು ಜನರ ದಾರಿ ದೀಪವಾದುದಕ್ಕೆ ಆತ ರಮಣ ಮಹರ್ಷಿಗಳಾದರು, ನಮ್ಮೊಳಗೆ ಹುಟ್ಟಿಕೊಳ್ಳೊ ಪ್ರಶ್ನೆಗಳು ನಮ್ಮನ್ನ ಯಾವ ಮಟ್ಟಕ್ಕೆ ಏರಿಸಬಲ್ಲದು ಎಂಬುದಕ್ಕೆ ಉದಾಹರಣೆಯಾಗಿ, ಈ ಪ್ರಶ್ನೆಗಳ ಬಗ್ಗೆ ಇಷ್ಟೊಂದು ಬರೆದುದಕ್ಕೆ ಕಾರಣವಾದ ವಿಷಯ ಇದಾಗಿದುದರಿಂದ ಇಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದೆ.
ನಮ್ಮಲ್ಲಿ ಇತರರನ್ನು ಪ್ರಶ್ನಿಸುವ ಛಾಳಿ ಹಾಗು ಅದರಲ್ಲಿನ ಆಸಕ್ತಿ ಅತಿ ಹೆಚ್ಚೆ. ಅದಕ್ಕೆ ನಾನು ಹೊರತಲ್ಲ.ಮನುಷ್ಯ ಗಣವೆ ಹಾಗೆಯೆ ಏನೊ? ಇರಬಹುದು.ಇದರ ಹೊರತಾಗಿಯು ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳುವದನ್ನ ರೂಢಿ ಮಾಡಿಕೊಳ್ಳೊದು ಉತ್ತಮ. ಪ್ರತಿ ಸಂದರ್ಭದಲ್ಲು ಎದುರಾಗುವ ಸಮಸ್ಯೆಗಳಿಗೆ ನಮ್ಮೊಳಗಿನ ಪ್ರಶ್ನೆಗಳು ಉತ್ತರವಾಗಬಹುದು. ಕೆಲವೊಮ್ಮೆ ಪ್ರಶ್ನೆಗಳು ನಮ್ಮ ಹೊರತಾಗಿ ಹಾಕುವಂತೆ ನಮಗೆ ನಾವೆ ಏಕಪಕ್ಷೀಯವಾಗಿ ಹಾಕಿದಲ್ಲಿ ತಪ್ಪು ನಿರ್ಧಾರಕ್ಕೆ ಕಾರಣವಾಗಬಹುದು.ಅದ್ದರಿಂದ ನಮ್ಮ ಹೊರಗಾಗಲಿ ಒಳಗಾಗಲಿ ನಾವು ಮಾಡಿಕೊಳ್ಳುವ ಪ್ರಶ್ನೆಗಳು ನಿಕ್ಷಪಕ್ಷಪಾತವಾಗಿದ್ದರೆ ಅದು ವ್ಯಕ್ತಿತ್ವಕ್ಕೆ ಮೆರುಗನ್ನು ಕೊಡಬಲ್ಲುದು.ಜೀವನದ ಸುಂದರತೆಗೆ ಪಕ್ವತೆಗೆ ನಮ್ಮೊಳಗೆ ನಮಗಾಗಿ ಪ್ರಶ್ನೆಗಳು ಹುಟ್ಟುತ್ತಲೆ ಇರಬೇಕು ಪ್ರತಿಸಲ ಪ್ರತಿ ಕಾರ್ಯದ ಮುನ್ನ. ವ್ಯಕ್ತಿತ್ವಕ್ಕೊಂದು ಪಾಲೀಶ್ ಕೊಟ್ಟು ಹೊಳಪುಕೊಡಬಹುದಾದ ಪ್ರಶ್ನೆಗಳನ್ನು ತಿರಸ್ಕರಿಸುವದಾದರು ಯಾಕೆ?
No comments:
Post a Comment