Sunday, January 29, 2012

ಗೆಳೆಯನೊಬ್ಬನ ಸ್ವಗತ

ಊರ ಮಾರಿ ಗುಡಿಯ ಮುಂದೆ
ಆಡುತ್ತಿದ್ದ ಗೆಳೆಯರ ಜೊತೆಗೂಡಿ
ಆಟದ ಮಧ್ಯೆ ಟೈಂ ಪಾಸ್ ಎಂದಾಗ
ಬಸವೇಶ್ವರ ಗುಡಿಯ ಜಗುಲಿಯ ಮೇಲೆ
ಗೆಳೆಯರ ಮಧ್ಯೆ ಕಾಲು ಇಳಿಬಿಟ್ಟು ಕುಳಿತ್ತಿದ್ದ

ತಮ್ಮ ಹುಡುಗರ ಜೊತೆ ಕುಳಿತ
ಆ ಹುಡುಗನ ನೋಡಿ
'ಯಾರ್ ಮಗಾನ್ಲಾ ನೀನು
ನೋಡ್ದಾ ನಿನ್ ಧೈರ್ಯಾನಾ?'
ಗದರಿದ್ದರು ಅವನ ಗೆಳೆಯನೊಬ್ಬನ ತಾಯಿ
ತನ್ನ ಗೆಳೆಯರ ಜೊತೆ ಆಟವಾಡೋದು ತಪ್ಪಾ?
ಅವರ ಪಕ್ಕ ಕುಳಿತುಕೊಳ್ಳೋದು ತಪ್ಪಾ?
ಎಂದೆಣಿಸುತಾ ಎದ್ದು ಮೌನವಾಗಿ
ಆ ಹುಡುಗ ಮನೆ ಕಡೆಗೆ ನಡೆದಿದ್ದ

ಸ್ಕೂಲಿನಲಿ ಮಧ್ಯಾಹ್ನದ ಬಿಸಿಯೂಟಕೆ
ಗೆಳೆಯರೊಡಗೂಡಿ ಮಿಲ್ಲಿನಲಿ
ಗೋಧಿ ನುಚ್ಚು ಮಾಡಿಸಿದ
ಗೋಧಿ ನುಚ್ಚಿನ ಮೂಟೆಯನ್ನೊತ್ತು
ಖುಷಿಯಾಗಿ ನುಚ್ಚು ಬೇಯಿಸುವ ಕೋಣೆಗೆ ನುಗ್ಗಿದ್ದ

'ಲೋ ನೀವು ಅಡುಗೆ ಮನೆಗೆ ಬರಬಾರ್ದು ಕಣ್ಲಾ
ತಣಿಗೆ ತಪ್ಲೆ ಮುಟ್ ಬಾರ್ದು ಅಂದಿದ್ದರು ಅವನ ಮೇಷ್ಟ್ರು
ಯಾಕ್ ಸಾರ್ ಬರಬಾರ್ದು ಯಾಕ್ ಮುಟ್ ಬಾರ್ದು
ಎಂದು ತನ್ನ ಗುರುಗಳ ಕೇಳುವ ಮನಸಾದರೂ
ಯಾಕೋ ಮತ್ತೆ ಮೌನವಾಗಿ ತನ್ನ ಮನೆ ಕಡೆಗೆ ನಡೆದಿದ್ದ

ಮೌನವಾಗಿ ನಡೆದಿದ್ದವನ ಮನದಲಿ
ಅದೆಷ್ಟು ನೋವಿನ ಮಾತುಗಳಿದ್ದವೋ
ಆಡಲಾರದ ಮಾತಿಗೆ ಪದಗಳ ರೂಪ ನೀಡಿ
'ಜಾತಿಯಲಿ ಹೊಲೆಯನಾದರೂ
ನಾನು ನಿಮ್ಮ ಗೆಳೆಯನಲ್ಲವೇ?' ಎಂದು
ಸಾಲೊಂದನು ಬರೆದು ಮತ್ತೆ ಮೌನಿಯಾದ..........


-ನಟರಾಜು ಸೀಗೆಕೋಟೆ ಮರಿಯಪ್ಪ

Friday, January 27, 2012

ಸಾಧುವಾಗಿ ಬಾಳ್ವೆ ಸಾಧ್ಯವೇ!

ಕೆಲವು ಗೊಲ್ಲರ ಹುಡುಗರು ಒಂದು ಹುಲ್ಲುಗಾವಲಿನಲ್ಲಿ ದನ ಕಾಯುತ್ತಿದ್ದರು. ಅಲ್ಲಿ ಒಂದು ಭಯಂಕರ ವಿಷಸರ್ಪ ವಾಸವಾಗಿತ್ತು. ಆ ಹಾವಿಗೆ ಹೆದರಿ ಎಲ್ಲರೂ ಬಹಳ ಎಚ್ಚರಿಕೆಯಿಂದ ಇರುತ್ತಿದ್ದರು. ಒಂದು ದಿನ ಒಬ್ಬ ಬ್ರಹ್ಮಚಾರಿ ಆ ಹುಲ್ಲುಗಾವಲ ಮಾರ್ಗವಾಗಿ ಹೋಗುತ್ತಿದ್ದ. ಹುಡುಗರು ಓಡಿಹೋಗಿ ಆತನಿಗೆ ಹೇಳಿದರು. ‘ಮಹಾಶಯರೆ, ಈ ಮಾರ್ಗವಾಗಿ ಹೋಗಬೇಡಿ. ಅಲ್ಲಿ ವಿಷಸರ್ಪವೊಂದಿದೆ.’ ಬ್ರಹ್ಮಚಾರಿ ಹೇಳಿದ. ‘ಇದ್ದರೆ ಇರಲಿ, ಗೆಳೆಯರಾ ನನಗೇನೂ ಹೆದರಿಕೆ ಇಲ್ಲ; ಮಂತ್ರ ಗೊತ್ತಿದೆ.’ ಹೀಗೆಂದು ಹೇಳಿ ಆತ ಹಾಗೇ ಮುಂದುವರಿದ. ಹೆದರಿಕೊಂಡು ಹುಡುಗರಾರೂ ಆತನನ್ನು ಹಿಂಬಾಲಿಸಲಿಲ್ಲ. ಸ್ವಲ್ಪ ದೂರ ಮುಂದುವರಿಯುವುದರೊಳಗೆ ಆ ಹಾವು ಹೆಡೆಬಿಚ್ಚಿ ಓಡಿಬರಲಾರಂಭಿಸಿತು. ಹತ್ತಿರಕ್ಕೆ ಬಂದೊಡನೆ ಆತ ಏನೊ ಒಂದು ಮಂತ್ರ ಪಠಿಸಿದ. ಹಾವು ಎರೆಹುಳುವಿನೋಪಾದಿಯಲ್ಲಿ ಆತನ ಪಾದದ ಬಳಿ ಸುಮ್ಮನೆ ಬಿದ್ದುಕೊಂಡಿತು. ಬ್ರಹ್ಮಚಾರಿ ಹೇಳಿದ: “ಕೇಳಿಲ್ಲಿ, ಪರರಿಗೆ ಹಿಂಸೆಮಾಡುತ್ತ ಏಕೆ ನೀನು ಸುತ್ತಾಡುತ್ತಿದ್ದೀಯೆ? ನಿನಗೆ ಮಂತ್ರ ಹೇಳಿಕೊಡುತ್ತೇನೆ. ಅದನ್ನು ಜಪಿಸಿದರೆ ನಿನಗೆ ಭಗವಂತನಲ್ಲಿ ಭಕ್ತಿಯುಂಟಾಗುತ್ತದೆ. ಆತನ ಸಾಕ್ಷಾತ್ಕಾರ ದೊರಕುತ್ತದೆ; ಹಿಂಸಾಪ್ರವೃತ್ತಿ ಬಿಟ್ಟು ತೊಲಗುತ್ತದೆ.’ ಹೀಗೆಂದು ಹೇಳಿ ಮಂತ್ರೋಪದೇಶ ಮಾಡಿದ. ಮಂತ್ರ ಪಡೆದ ನಂತರ ಆ ಹಾವು ಗುರುವಿಗೆ ಪ್ರಣಾಮಮಾಡಿ ಆತನನ್ನು ಕೇಳಿಕೊಂಡಿತು: ‘ಪೂಜ್ಯರೆ, ಯಾವ ರೀತಿಯಲ್ಲಿ ಸಾಧನೆಗೆ ತೊಡಗಬೇಕು, ದಯವಿಟ್ಟು ತಿಳಿಸಿ.’ ಗುರು ಹೇಳಿದ: ‘ಈ ಮಂತ್ರ ಜಪಿಸು, ಯಾರಿಗೂ ಹಿಂಸೆ ಮಾಡಬೇಡ.’ ಹೊರಡುವಾಗ ಹೇಳಿದ: ‘ಮತ್ತೆ ಬಂದು ನಿನ್ನನ್ನು ನೋಡುತ್ತೇನೆ.’


“ಹಾಗೇ ಕೆಲವು ದಿನಗಳು ಉರುಳಿದವು. ಆ ಹುಡುಗರಿಗೆ ಗೊತ್ತಾಯಿತು, ಆ ಹಾವು ಕಡಿಯುವುದಿಲ್ಲ ಎಂಬುದಾಗಿ. ಕಲ್ಲು ಹೊಡೆದರು. ಆದರೂ ಅದು ಉದ್ರೇಕಗೊಳ್ಳಲಿಲ್ಲ. ಎರೆಹುಳುವಿನಂತೆ ವರ್ತಿಸಿತು. ಒಂದು ದಿನ ಒಂದು ಹುಡುಗ ಅದರ ಹತ್ತಿರಕ್ಕೆ ಹೋಗಿ ಬಾಲ ಹಿಡಿದು ಚೆನ್ನಾಗಿ ತಿರುಗಿಸಿ ನೆಲಕ್ಕೆ ಅಪ್ಪಳಿಸಿ ಒಂದು ಕಡೆಗೆ ಬಿಸಾಡಿಬಿಟ್ಟ. ಅದರ ಬಾಯಿಂದ ರಕ್ತ ಸುರಿಯಲಾರಂಭಿಸಿತು; ಪ್ರಜ್ಞೆ ತಪ್ಪಿ ಬಿದ್ದುಕೊಂಡಿತು. ಚಲನವಲನವೆಲ್ಲ ನಿಂತುಹೋಯಿತು. ಆ ಹಾವು ಸತ್ತಿತೆಂದು ಭಾವಿಸಿ ಹುಡುಗರೆಲ್ಲರೂ ಹೊರಟುಹೋದರು.

“ರಾತ್ರಿ ಬಹಳ ಹೊತ್ತಾದ ನಂತರ ಆ ಹಾವಿಗೆ ಪ್ರಜ್ಞೆ ಬಂತು. ಬಹಳ ಕಷ್ಟಪಟ್ಟು ಮೆಲ್ಲಮೆಲ್ಲನೆ ತೆವಳಿ ತನ್ನ ಹುತ್ತವನ್ನು ಸೇರಿಕೊಂಡಿತು. ಮೈಯೆಲ್ಲಾ ನಜ್ಜುಗುಜ್ಜಾಗಿ ಬಿಟ್ಟಿತ್ತು – ಚಲಿಸಲು ಶಕ್ತಿಯೇ ಇರಲಿಲ್ಲ. ಹಾಗೇ ಕೆಲವು ದಿನಗಳು ಕಳೆದುಹೋದವು. ಅದು ಮೂಳೆಚೆಕ್ಕಳ ಆಗಿಹೋಯಿತು. ರಾತ್ರಿವೇಳೆ ತನ್ನ ಆಹಾರಕ್ಕಾಗಿ ಆಗಾಗ ಹೊರಕ್ಕೆ ಬರುತ್ತಿತ್ತು. ಹಗಲುವೇಳೆ ಹುಡುಗರಿಗೆ ಹೆದರಿ ಹುತ್ತದಿಂದ ಹೊರಕ್ಕೆ ಬರುತ್ತಲೇ ಇರಲಿಲ್ಲ. ಮಂತ್ರ ಪಡೆದಂದಿನಿಂದ ಯಾರಿಗೂ ಹಿಂಸೆ ಮಾಡುತ್ತಿರಲಿಲ್ಲ. ಕಸ, ಕಡ್ಡಿ, ಎಲೆ, ಮರದಿಂದ ಬಿದ್ದ ಹಣ್ಣು ಹಂಪಲು ಇವನ್ನೇ ತಿಂದೇ ಪ್ರಾಣಧಾರಣೆ ಮಾಡಿಕೊಳ್ಳುತ್ತಿತ್ತು.

ಸುಮಾರು ಒಂದು ವರ್ಷ ಕಳೆದ ನಂತರ ಆ ಬ್ರಹ್ಮಚಾರಿ ಅದೇ ಮಾರ್ಗವಾಗಿ ಬಂದು ಆ ಹಾವನ್ನು ಹುಡುಕಿದ. ಗೊಲ್ಲರ ಹುಡುಗರು ‘ಆ ಹಾವು ಸತ್ತುಹೋಯಿತು’ ಎಂದು ಹೇಳಿದರು. ಬ್ರಹ್ಮಚಾರಿ ನಂಬಲಿಲ್ಲ. ಆತನಿಗೆ ಗೊತ್ತಿತ್ತು. ಮಂತ್ರ ಸಿದ್ಧಿಯಾದ ಹೊರತು ಅದು ಸಾಯುವುದಿಲ್ಲ ಎಂದು. ಹಾಗೇ ಹುಡುಕಿಕೊಂಡು ಅದು ವಾಸವಾಗಿದ್ದ ಸ್ಥಳಕ್ಕೇ ಹೋಗಿ ತಾನು ಕೊಟ್ಟಿದ್ದ ಹೆಸರಿನಿಂದ ಅದನ್ನು ಕೂಗಲಾರಂಭಿಸಿದ. ಗುರುವಿನ ಧ್ವನಿಯನ್ನು ಕೇಳಿ ಅದು ಹುತ್ತದಿಂದ ಹೊರಕ್ಕೆ ಬಂದು ಅತ್ಯಂತ ಶ್ರದ್ಧಾಭಕ್ತಿಯಿಂದ ಆತನಿಗೆ ಪ್ರಣಾಮ ಮಾಡಿತು. ಬ್ರಹ್ಮಚಾರಿ ಕೇಳಿದ: ‘ಕ್ಷೇಮವೇ?’ ಅದು ಹೇಳಿತು ‘ಹೌದು ಗುರುಗಳೇ, ಕ್ಷೇಮದಿಂದಿದ್ದೇನೆ.’ ಬ್ರಹ್ಮಚಾರಿ ಹೇಳಿದ: ‘ಆದರೆ, ನೀನೇಕೆ ಇಷ್ಟು ಕಂಗೆಟ್ಟುಹೋಗಿದ್ದೀಯೆ?’ ಹಾವು ಹೇಳಿತು: ‘ಪೂಜ್ಯರೆ, ತಾವು ಉಪದೇಶವಿತ್ತಿದ್ದೀರಿ, ಯಾರಿಗೂ ಹಿಂಸೆ ಮಾಡಿಕೂಡದು ಎಂಬುದಾಗಿ. ಅದಕ್ಕಾಗಿ ಎಲೆ ಹಣ್ಣು ಹಂಪಲು ತಿನ್ನುತ್ತಿರುವುದರಿಂದ ಶರೀರ ಬಹುಷಃ ಕೃಶವಾಗಿ ತೋರುತ್ತಿರಬಹುದು.’

ಅದರ ಹೃದಯದಲ್ಲಿ ಸತ್ವಗುಣ ಬೆಳೆದುಬಿಟ್ಟಿದ್ದರಿಂದ ಅದಕ್ಕೆ ಯಾರ ಮೇಲೂ ಕ್ರೋಧವಿರಲಿಲ್ಲ. ಆ ಗೊಲ್ಲರ ಹುಡುಗರು ತನ್ನನ್ನು ಕೊಂದುಹಾಕಲು ಯತ್ನಿಸಿದ್ದನ್ನು ಅದು ಮರೆತೇಬಿಟ್ಟಿತ್ತು.

ಬ್ರಹ್ಮಚಾರಿ ಹೇಳಿದ: ‘ಕೇವಲ ಆಹಾರಾಭಾವದಿಂದಲೇ ಈ ದುರವಸ್ಥೆ ಉಂಟಾಗದು. ನಿಶ್ಚಯವಾಗಿ ಬೇರೆ ಏನೋ ಕಾರಣವಿರಬೇಕು. ಯೋಚಿಸಿ ನೋಡು.’ ಗೊಲ್ಲರ ಹುಡುಗರು ತನ್ನನ್ನು ಚೆನ್ನಾಗಿ ನೆಲಕ್ಕೆ ಅಪ್ಪಳಿಸಿದ್ದರ ಜ್ಞಾಪಕ ಅದಕ್ಕೆ ಬಂತು. ಅದು ಹೇಳಿತು ‘ಪೂಜ್ಯರೆ, ಈಗ ಜ್ಞಾಪಕಕ್ಕೆ ಬಂತು; ಒಂದು ದಿನ ಆ ಗೊಲ್ಲರ ಹುಡುಗರು ನನ್ನನ್ನು ನೆಲಕ್ಕೆ ಅಪ್ಪಳಿಸಿದರು. ಎನೆಂದರೂ ಅವರಿನ್ನೂ ಅರಿಯದ ಹುಡುಗರು. ನನ್ನ ಮನಸ್ಸಿನಲ್ಲಿ ಎಂಥ ಬದಲಾವಣೆ ಆಗಿಬಿಟ್ಟಿದೆ ಎಂಬುದು ಅವರಿಗೆ ಗೊತ್ತಾಗಲಿಲ್ಲ. ನಾನು ಯಾರನ್ನೂ ಕಚ್ಚುವುದಿಲ್ಲ, ಬೇರೆ ಯಾವ ವಿಧದಿಂದಲೂ ಹಿಂಸೆ ಮಾಡುವುದಿಲ್ಲ ಎಂಬುದು ಅವರಿಗೆ ಹೇಗೆ ಗೊತ್ತಾಗಬೇಕು?’ 

ಬ್ರಹ್ಮಚಾರಿ ಬಯ್ದು ಹೇಳಿದ” ‘ಛೆ! ನೀನು ಎಂಥಾ ತಿಳಿಗೇಡಿ! ನಿನ್ನನ್ನು ನೀನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದು ನಿನಗೆ ಗೊತ್ತಿಲ್ಲವಲ್ಲ. ನಾನು ನಿನಗೆ ಕಚ್ಚಬೇಡ ಅಂತ ಹೇಳಿದೆನೇ ವಿನಾ ಬುಸುಗುಟ್ಟಬೇಡ ಅಂತ ಹೇಳಲಿಲ್ಲವಲ್ಲ. ಬುಸುಗುಟ್ಟಿ ಅವರನ್ನು ಏಕೆ ಹೆದರಿಸಬಾರದಾಗಿತ್ತು?’

“ದುಷ್ಟರ ಕಡೆ ಬುಸುಗುಟ್ಟಬೇಕು. ಕೇಡು ತರದೆ ಇರಲೆಂದು ಅವರಿಗೆ ಭಯ ತೋರಿಸಬೇಕು. ಅವರ ಮೇಲೆ ವಿಷ ಕಾರಬಾರದು. ಅನಿಷ್ಟ ತರಬಾರದು.” 
ಸಮಾಜದ ಮಧ್ಯೆ ಇರಬೇಕಾದರೆ, ದುಷ್ಟರ ಕೈಯಿಂದ ತಪ್ಪಿಸಿಕೊಳ್ಳಲು ಮನುಷ್ಯ ಸ್ವಲ್ಪ ತಮೋಗುಣವನ್ನು ಪ್ರದರ್ಶಿಸಬೇಕಾಗುತ್ತದೆ. ಆದರೆ ಮುಯ್ಯಿಗೆ ಮುಯ್ಯಿ ತೀರಿಸಲು ಹೋಗಬಾರದು. 

ಕೃಪೆ: ಶ್ರೀರಾಮಕೃಷ್ಣ ಪರಮಹಂಸರ ವಚನವೇದ. — ಕಥಾಸಂಪದ

Thursday, January 26, 2012

ಮೊಬೈಲ್ ಟವರ್ - ರೇಡಿಯೇಷನ್ - ವಸ್ತುಸ್ಥಿತಿ

ಮೊಬೈಲ್ ಟವರ್ ಡೇಂಜರ್ , ಇವುಗಳ ರೇಡಿಯೇಷನ್ ನಿಂದ ಕ್ಯಾನ್ಸರ್ ಅಂಥ ಮಾರಕ ಕಾಯಿಲೆ ಇಂದ ಹಿಡಿದು ಹಲವಾರು ಸಣ್ಣ ಪುಟ್ಟ ಕಾಯಿಲೆಗಳು ಬರುತ್ತವೆ. ಕೇಂದ್ರ ಸರ್ಕಾರದ ನಾರ್ಮ್ಸ್ ಪ್ರಕಾರ 3 ಕಿಮೀ ಒಂದು ಟವರ್ ಹಾಕಕ್ಕೆ ಮಾತ್ರ ಅವಕಾಶ ಇರುವದು. ಈ ರೇಡಿಯೇಷನ್ ನಿಂದ ಬೆಂಗಳೂರು ಅಂಥ ಪಟ್ಟಣದಲ್ಲಿ ಬದುಕೇ ಅಸಾಧ್ಯ,ಈ ರೀತಿಯಾ ಕೆಲ ಹೇಳಿಕೆಗಳು ಈ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ.ಈ ಹೇಳಿಕೆಗಳ ಸಾಧಕ ಬಾಧಕಗಳನ್ನು ಕೆದಕುತ್ತಾ ಹೋದ ನನಿಗೆ ಕೆಲವೊಂದು ವಸ್ತು ಸ್ಥಿತಿಗತಿಗಳು ಪರಿಚಯ ವಾಗುತ್ತಾ ಹೋಯಿತು. ಆ ನಿಟ್ಟಿನಲ್ಲಿ ಹೀಗೆ ಈ ಬಗ್ಗೆ ಇಲ್ಲಿ ಬರಕೊಳ್ಳೋಣ ಅಂತೆನಿಸಿ ಬರೆಯುತಿದ್ದೇನೆ.

ಟೆಲಿವಿಷನ್ ತರಂಗಗಳು, ಸ್ಯಾಟಲೈಟ್ ತರಂಗಗಳು ಹೆಂಗೆ ಕಾರ್ಯ ನಿರ್ವಹಿಸುತ್ತವೆಯೋ ಅದರಂತೆ ಮೊಬೈಲ್ ಟವರ್ ಕೂಡ ರೆಡಿಯೋ ಪ್ರೀಕ್ವೆನ್ಸಿ (RF) ಸಿಗ್ನಲ್ ನನ್ನು ನಮ್ಮ ಮೊಬೈಲ್ ಹಾಂಡ್ ಸೆಟ್ಗೆ ಕಳಿಸುತ್ತದೆ. ನಮ್ಮ ಹಾಂಡ್ ಸೆಟ್ ನಲ್ಲಿ RF ಸಿಗ್ನಲ್ ವಿದ್ಯುತ್ಕಾಂತೀಯ ವಿಕಿರಣ ಹೊರಸೂಸುತ್ತವೆ. ಈ ಕಿರಣವನ್ನು ಮತ್ತು ಸಂದೇಶ ರವಾನಿಸುವ RF ಕಿರಣಗಳ ಪರಿಣಾಮವನ್ನೆ ರೇಡಿಯೇಷನ್ ಎಪೆಕ್ಟ್ಸ್ ಅನ್ನೋದು.ಈ ಸಿಗ್ನಲ್ ಗಳು 1 ಕ್ಕಿಂತಾಲೂ ಕಡಿಮೆ ವ್ಯಾಟ್ ಶಕ್ತಿಯಲ್ಲಿ ಆಪರೇಟ್ ಆಗುವಂತದ್ದು.ಹಾಗೆ ನೋಡಿದಲ್ಲಿ ಈ ಕಿರಣಗಳೂ X-Ray ಮೆಷೀನ್ ನಲ್ಲಿ ಬಳಕೆ ಮಾಡಲ್ಪಡುವ "ಗಾಮಾ ರೇಸ್"(IONIZING RADIATION)ನಷ್ಟೂ ಅಪಾಯಾಕಾರಿಯಾಗಿದ್ದಲ್ಲ.ಮೋಬೈಲ್ ಸಿಗ್ನಲ್ ಗಳು NON-IONIZING ರೇಡಿಯೆಷನ್ ಅಂತಲೇ ಕರೆಯಲ್ಪಡುತ್ತದೆ.ಹಾಗಿದ್ರೆ ಮೋಬೈಲ್ ಸಿಗ್ನಲ್ ಅಪಾಯಾಕಾರಿಯಲ್ಲ ಅನ್ನೋದು ನಾ ಇಲ್ಲಿ ಹೇಳಲು ಹೊರಟಿಲ್ಲ. ರೇಡಿಯೇಷನ್ ಯಾವ ತರದ್ದೆ ಆಗಿರಲಿ ಅದು ಅಪಾಯಾಕಾರಿನೆ. ಅದು ಬೆಳೆಯುವ ಮಕ್ಕಳೀಗೆ ಬಲು ಅಪಾಯಾಕಾರಿ.ಬೆಂಗಳೂರಂತ ಸಿಟಿ ಲೆವೆಲ್ನಲ್ಲಿ -80 ಡಿಬಿಯಂ ನಿಂದ -100 ಡಿಬಿಯಂ ಇರಬೇಕಾದ ಸಿಗ್ನಲ್  -24 ಡಿಬಿಯಂ ನಿಂದ -40 ಡಿಬಿಯಂ ವರೆಗೂ ಬಂದು ಅಪಾಯದ ಮಟ್ಟ ಮೀರಿದೆ.ಆದರೆ ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಸಿಟಿ ಲೆವೆಲ್ ನಲ್ಲಿ ಕಂಡು ಬರುವ ಈ ರೇಡಿಯೇಷನ್ ಸಮಸ್ಯೆ ಸಿಟಿ ಹೊರಗೆ ನಿಮಗೆ ಕಂಡು ಬರಲಾರಾದು. ಹಾಗಿದ್ದರೆ ಯಾಕೆ ಹೀಗೆ? ಈ ಬಗ್ಗೆ ವಸ್ತು ಸ್ಥಿತಿ ಏನು ಅಂತ ತಿಳಿಯೋಣ.

ಬೇರೆ ಬೇರೆ ಉಪಕರಣಗಳಿಂದ ಮಾನವವನಿಗಾಗುವ ರೇಡಿಯೆಷನ್ ಕಿರು ಪರಿಚಯ
ಮೋಬೈಲ್ ಟವರ್ ಜಾಸ್ತಿಯಾದಂತೆ ರೇಡಿಯೇಷನ್ ಪ್ರಮಾಣ ಜಾಸ್ತಿಯಾಗುತ್ತೆ ಅನ್ನೋ ತಪ್ಪು ಅಭಿಪ್ರಾಯ ಹಲವಷ್ಟು ಮಂದಿಗಿದೆ.ಎಲ್ಲಿ ಮೊಬೈಲ್ ಬಳಕೆದಾರರೂ ಜಾಸ್ತಿ ಇದ್ದಾರೋ ಅಲ್ಲಿ ಸಿಗ್ನಲ್ ಸ್ಟ್ರೆಂತ್ ಜಾಸ್ತಿ ಮಾಡಲೇ ಬೇಕಾದ ಅನಿವಾರ್ಯತೆ ಮೊಬೈಲ್ ಆಪರೇಟ್ ಕಂಪೆನಿಗಳದ್ದು. ಬಳಕೆದಾರರೂ ಜಾಸ್ತಿ ಇದ್ದೂ ಮೊಬೈಲ್ ಟವರ್ ಗಳೂ ಕಡಿಮೆ ಇದ್ದಾಗ ಅನಿವಾರ್ಯವಾಗಿ ಇರೋ ಟವರ್ ನಲ್ಲೇ ಸಿಗ್ನಲ್ ಸ್ಟ್ರೆಂತ್ ನ್ನೂ ಜಾಸ್ತಿ ಮಾಡಬೇಕಾಗಿ ಬರುತ್ತದೆ. ಆದುದರಿಂದಲೆ -80 ಡಿಬಿಯಂ ಗಿಂತಾಲೂ ಕಡಿಮೆ ಡಿಬಿಯಂ ಲೆವೆಲ್ ಇಳಿದು ರೇಡಿಯೇಷನ್ ಉಂಟಾಗುತ್ತದೆ.ಸಿಟಿ ಲೆವೆಲ್ ನಲ್ಲಿ ಟವರ್ ಹಾಕಲೂ ಜಾಗದ ಸಮಸ್ಯೆ , ಮಿತಿ ಮೀರಿದ ಬಳಕೆದಾರರೂ ಈ ಎಲ್ಲ ಕಾರಣಗಳಿಂದ ಈ ರೇಡಿಯೇಷನ್ ಸಮಸ್ಯೆ ಉದ್ಬವವಾಗಿದೆ ಅಂದರೂ ತಪ್ಪಿಲ್ಲ. ಬೆಂಗಳೂರಿನ 2-2ಡೂವರೆ ಕಿಮೀ ಉದ್ದದ ಎಂ ಜಿ ರಸ್ತೆಗೆ ಪ್ರತಿ ಆಪರೇಟರ್ ಗಳೂ ಕನಿಷ್ಟ 6-8 ಟವರ್ ಹೊಂದಿದ್ದರೂ ರೇಡಿಯೇಷನ್ ಲೆವೆಲ್ ನನ್ನು ಕಂಟ್ರೋಲ್ ಮಾಡಕ್ಕೆ ಆಗುತ್ತಿಲ್ಲ.ಸ್ಪೇಸ್ ನಲ್ಲಿ ಇರೋ ಎಲ್ಲಾ ತರದ ಸಿಗ್ನಲ್ ಗಳನ್ನೂ "ಸ್ಪೆಕ್ಟ್ರಮ್ ಅನೆಲೈಜರ್" ಯಂತ್ರದ ಮೂಲಕ ಮಾಪನ ಮಾಡುತ್ತೆವೆ. ನಾವು ಇದರಲ್ಲಿ ಮಾಪನ ಮಾಡಲಾದ ಸಿಗ್ನಲ್ ಲೆವೆಲ್ ಬರೀಯ ಮೋಬೈಲ್ ಟವರ್ ನದ್ದು ಮಾತ್ರ ಅಲ್ಲ ಅನ್ನೋದು ಗಮನಿಸಬೇಕಾದ ಅಂಶ.ಅದರೆ ಹೆಚ್ಚಿನ ಅಂಶ ಮೋಬೈಲ್ ಟವರ್ ನದ್ದೇ ಆಗಿರುತ್ತದೆ ಅನ್ನೋದು ಒಪ್ಪಬಹುದಾದದ್ದು.ಹಾಗಿದ್ದಲ್ಲಿ ಈ ರೇಡಿಯೇಷನ್ ಎಪೆಕ್ಟ್ ನಿಂದ ಬಚಾವಾಗೋದು ಎಂಥೂ????ಮೋಬೈಲಂತು ಬಿಟ್ಟಿರಕ್ಕಾಗಲ್ವೆ.

ಸಿಟಿ ಲೆವೆಲ್ ನಲ್ಲಿ ಇರುವ ಕಾರ್ಬನ್ ಡೈಆಕ್ಸೈಡ್, ಇಲ್ಲಿರುವ ಗಾಳಿ ನೀರು, ವಾತಾವರಣದ ತಾಪಾಂಶ,ರಾಸಾಯನಿಕ ಬಳಸಿದ ಹಣ್ಣು ತರಕಾರಿ ಇವೆಲ್ಲ ಮಾನವ ದೇಹಕ್ಕೆ ಕೊಡುವ ನೇರಾ ನೇರಾ ತೊಂದರೆಗೆ ಹೋಲಿಸಿದಲ್ಲಿ ಈ ರೇಡಿಯೇಷನ್ ನಿಂದ ಆಗುವ ಪರಿಣಾಮ ಅಷ್ಟೊಂದು ಘೋರ ಅಲ್ಲವೆನ್ನುವದು ನನ್ನ ಅಭಿಪ್ರಾಯ.ಮೊಬೈಲ್ ರೇಡಿಯೇಷನ್ ಎಪೆಕ್ಟ್ ವಾತಾವರಣದಲ್ಲಿ  ಟವರ್ ಬೀರುವ RF ಸಿಗ್ನಲ್ ಎಪೆಕ್ಟ್ನಿಂದ  ನಮ್ಮ ಮೊಬೈಲ್ ಹೊರಸೂಸುವ ವಿದ್ಯುತ್ಕಾಂತೀಯ ವಿಕಿರಣದ ಅಪಾಯಗಳೆ ಹೆಚ್ಚು.ಎಲ್ಲಿ ಸಿಗ್ನಲ್ ಸ್ಟ್ರೆಂತ್ ಜಾಸ್ತಿಮಾಡುವ ಸಲುವಾಗಿ ಹೆಚ್ಚಿನ ಹೊರೆ (ಸಿಗ್ನಲ್ ಸ್ಟ್ರೆಂತ್ -80ಡಿಬಿಯಂ ಗಿಂತ ಕಡಿಮೆ)ಹಾಕಿರುತ್ತಾರೋ ಅದೇ ತರ ಎಲ್ಲಿ ಸಿಗ್ನಲ್ ಸ್ಟ್ರೆಂತ್ ಕಡಿಮೆ ಇದೆಯೋ(ನೆಟ್ ವರ್ಕ್ ಕವರೇಜ್) ಈ ಎರಡೂ ಕಡೆಗಳಲ್ಲಿ ನಾವು ಬಳಸುವ ಮೊಬೈಲ್ ಸೆಟ್ ನಲ್ಲಿ ಹೆಚ್ಚಿನ ವಿದ್ಯುತ್ಕಾಂತೀಯ ವಿಕಿರಣ ಉತ್ಪಾದನೆಯಾಗುತ್ತೆ.ಈ ವಿಕಿರಣದಿಂದಾಗಿ ತೊಂದರೆಯಾಗುವ ಸಾಧ್ಯತೆಗಳಿವೆ.ಮೋಬೈಲ್ ನಲ್ಲಿ ಇನ್ಬಿಲ್ಟ್ ಆಗಿರುವ ಆಂಟೆನಾ ತಲೆಯಾ ಭಾಗಕ್ಕೆ ಬರುವದರಿಂದ ಈ ಸಮಸ್ಯೆ ಹೆಚ್ಚಾಗುತ್ತದೆ. ಆದುದರಿಂದಲೆ ಹೆಡ್ ಪೋನ್ ನನ್ನು ಬಳಸುವದು ಇದ ನಿವಾರಿಸುವಲ್ಲಿ ಇರೋ ಸುಲಭೋಪಾಯ.

ಮೋಬೈಲ್ ಬಳಕೆಯಿಂದಾಗಿ ಬ್ರೈನ್ ಟ್ಯೂಮರ್ ಬರುತ್ತೆ,ಪುರುಷ ತನ್ನ ಲೈಂಗಿಕ ಸಾಮರ್ಥ್ಯ ಕಳಕೊಳ್ಳೂತ್ತಾನೆ, ಹೆಂಗಸೂ ತನ್ನ ಸಂತಾನ ಭಾಗ್ಯ ಕಳಕೋಳ್ಳುತ್ತಾಳೆ ಎನ್ನೋ ಮಾತಿದೆಯಾದರು ಈ ಬಗ್ಗೆ ಯಾವದೂ ಸರಿ ಯಾವದೂ ತಪ್ಪು ಅನ್ನೋ ಅಭಿಪ್ರಾಯಕ್ಕೆ ಇನ್ನೂ ವಿಜ್ಞಾನಿಗಳು ಬರಲಾಗಿಲ್ಲ. ಈ ಬಗ್ಗೆ ಹಲವಾರು ಸಂಶೋಧನೆ ನಡೆಯುತ್ತಿದ್ದರೂ ಪರ ವಿರೋಧ ಎರಡೂ ಅಭಿಪ್ರಾಯಗಳೂ ಒಡ ಮೂಡಿದೆ.WHO ರಿಪೋರ್ಟ್ಗಳು ಈ ದ್ವಂದ್ವಗಳಿಂದ ಹೊರತಾಗಿಲ್ಲ. ಈ ಬಗ್ಗೆ ಇಂಟರ್ನೆಟ್ಟ್ ನಲ್ಲೇ ಸಾಕಷ್ಟು ಮಾಹಿತಿಗಳು ಲಭ್ಯ.ಮಾನಸಿಕ ಕಿರಿ ಕಿರಿ ಇತರ ಸಮಸ್ಯೆಗಳೂ ಖಂಡಿತಾ ಇದೆ.ಇದೆಲ್ಲ ಸಮಸ್ಯೆಗಳಿಗಳಿಂದ ಒಂದಷ್ಟರ ಮಟ್ಟಿಗೆ ನಮ್ಮನ್ನು ನಾವು ಕಾಪಾಡಿಕೋಳ್ಳಲು ಕೆಳ ಕಂಡ ಮಾರ್ಗಗಳನ್ನು ಅನುಸರಿಸುವದು ಸೂಕ್ತ.

1.ಅದಷ್ಟು ಮೊಬೈಲ್ ಬಳಕೆಯನ್ನು ಕಡಿಮೆಗೊಳಿಸುವದು, ಸ್ಥಿರ ದೂರವಾಣಿ ಇರುವಲ್ಲಿ ಅದನ್ನೆ ಹೆಚ್ಚಾಗಿಬಳಸುವದು. ಮೊಬೈಲು ಬಳಕೆ ಮಾಡುವಾಗ ಮಾತು 1 ಕರೆಗೆ 3 ನಿಮಿಷದಿಂದ ಹೆಚ್ಚಿಗೆ ಆಗದಂತೆ ನೋಡಿಕೊಳ್ಳುವದು. 

2.ಅದಷ್ಟು ಸಾಧ್ಯವಿರುವ ಕಡೆಯಲ್ಲೆಲ್ಲ ದೇಹದಿಂದ ಮೊಬೈಲು ದೂರವಿರುವಂತೆ ನೋಡಿಕೊಳ್ಳುವದು,ಮಾತನಾಡುವದಕ್ಕಾಗಿ ಹ್ಯಾಂಡ್ಸ್ ಫ್ರೀ ಬಳಸುವದು.

3.ಸಿಗ್ನಲ್ ಕವರೇಜು ಕಡಿಮೆ ಇರುವಲ್ಲಿ ಮೊಬೈಲು ಸ್ವಿಚ್ ಆಫ್ ಮಾಡುವದು.

4.ಕಾರು ಮುಂತಾದವುಗಳಲ್ಲಿ ಪ್ರಯಾಣಿಸುತ್ತಿರಬೇಕಾದರೆ ಕಿಟಕಿ ಗಾಜುಗಳನ್ನು ತೆರೆದು ಮಾತನಾಡುವದು,ಗಾಳಿ ಶಬ್ಧ ಬರುತ್ತದೆ ಎಂದು ಹೆಚ್ಚಿನವರು ಇದರ ವಿರುದ್ದ ವಾಗಿ ನಡೆದುಕೊಳ್ಳುವದನ್ನೆ ರೂಡಿಸಿಕೊಂಡಿರುತ್ತಾರೆ.ಕಾರಿನಲ್ಲಿ ಒಂದು ಆಂಟೇನಾ ಬಳಸಿಕೊಂಡಿದ್ದರೆ ಇನ್ನೂ ಉತ್ತಮ.

5.೧೪ ವರ್ಷದ ಕೆಳಗಿನವರು ಖಂಡಿತವಾಗಿಯು ಮೊಬೈಲನ್ನು ಉಪಯೊಗಿಸದಂತೆ ಎಚ್ಚರವಹಿಸುವದು. 

ಒಂದು ಮಾತಂತೂ ಸತ್ಯ ಮೊಬೈಲ್ ಟವರ್ ನಿಂದಾಗುವಾ ಹಾನಿಗಿಂತ ನಮ್ಮ ಮೊಬೈಲ್ ಸೆಟ್ ನಿಂದಾಗುವ ನಮ್ಮ ದೇಹಕ್ಕಾಗುವ ತೊಂದರೆ ಸುಮಾರು 5 ಪಟ್ಟಿನಷ್ಟು ಹೆಚ್ಚು.ಮೊಬೈಲ್ ಟವರ್ ರೇಡಿಯೇಷನ್ ಹೆಚ್ಚಾಗಿ ಸಿಟಿ ಲೆವೆಲ್ ನಲ್ಲಿ ಮಾತ್ರ ಕಂಡರೆ ಈ ನಮ್ಮ ಮೋಬೈಲ್ ವಿಕಿರಣ ಹಾನಿ ಬಳಸುವ ಎಲ್ಲರೀಗೂ ಅನ್ವಯವಾಗುವಂತದ್ದು.ಭಾರತದಲ್ಲಿ ಮೋಬೈಲ್ ಟವರ್ ಕಾಣಸಿಗುವಷ್ಟು ಬೇರೆಲ್ಲಿಯೂ ಕಾಣಸಿಗುವದಿಲ್ಲ ಅನ್ನುವದು ಸತ್ಯವಾದಾರೂ ಒಂದು ರಾಜ್ಯಕ್ಕೆ 7 ಆಪರೇಟರ್ ಮೊಬೈಲ್ ಸೇವೆ ಒದಗಿಸಬಹುದೆಂಬ ಸರ್ಕಾರದ ನೀತಿಯೂ ಇದಕ್ಕೆ ಕಾರಣ,ಅದು ಮಾತ್ರವಲ್ಲದೆ ICNIRP (International commission on Non-Ionizing Radiation protection) ನಿರ್ದೇಶನವನ್ನು ಮೀರಿ ತರಂಗಾಂತರ ಹಂಚಿಕೆ ಆ ನಿಟ್ಟಿನಲ್ಲಿ ಸರ್ಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ಆಪರೇಟರ್ ಗಳ ಮೇಲೆ ಹೇರದೆ ಇರುವದು ಮುಂತಾದುವು ಬೇಕಾಬಿಟ್ಟಿ ಟವರ್ ಎದ್ದು ನಿಲ್ಲಲೂ ಕಾರಣವೂ ಹೌದು. ಆದರೂ 2010 ರಿಂದೀಚೆಗೆ ಎಲ್ಲಾ ಆಪರೇಟರ್ಗಳು ಸ್ವಂತ ಟವರನ್ನು ಅನಗತ್ಯವಾಗಿ ನಿರ್ಮಿಸದೆ ಶೇರಿಂಗ್ ಸಿಸ್ಟಮ್ ಗೆ ಒಲವು ತೋರಿಸುತ್ತಿರುವದು ಒಂದು ಆಶಾದಾಯಕ ಬೆಳವಣಿಗೆಯೇ ಹೌದು. ಇದು ಕೂಡ ICNIRP ನಿರ್ದೇಶನದಲ್ಲೋಂದು.ಒಂದಷ್ಟು ಕಾರ್ಮಿಕ ವರ್ಗ ಈ ಮೊಬೈಲ್ ಟವರ್ ಗಳನ್ನೆ ನೆಚ್ಚಿಕೊಂಡು ಬದುಕುತ್ತಿವೆ. ಅವುಗಳಿಗೆ ಈ ರೇಡಿಯೇಷನ್ ಪರಿವಿಲ್ಲದೆ ,ವಾರದಲ್ಲೋಂದು ರಜಾ,ಕೆಲಸಕ್ಕೊಂದು ನಿಗದಿತ ಸಮಯವೂ ಇಲ್ಲದೆ,ಛಳಿ, ಮಳೆ, ರಾತ್ರಿ ಹಗಲೆನ್ನದೆ ದುಡುಯುತ್ತಾ ಬದುಕ ಕಂಡಿದೆ. ಇಡೀಯ ಮೋಬೈಲ್ ನೆಟ್ ವರ್ಕ್ ನಿಂತಿರುವದೆ ಈ ಕೆಳವರ್ಗದ ನೌಕರರ ಮೇಲೆನ್ನುವದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ.ಆ ಮಂದಿಗಳಿಗೆ ಈ ಮೋಬೈಲ್ ಟವರ್ ಗಳ ಬಗ್ಗೆ ಎದ್ದಿರುವ ಅಪಸ್ವರ ಬಾಧಿಸದಿರಲಿ ಅನ್ನುವದೇ ನನ್ನ ಆಶಯ.

ನಿಮ್ಮವ........
ರಾಘವೇಂದ್ರ ತೆಕ್ಕಾರ್

Wednesday, January 25, 2012

ಸಿನಿಕ !!

ಬದುಕ ಕುದುರೆಯ ರಥವನೇರಿ  
ವಿಧಿಯ ಅಣತಿಯಂತೆ 
ಸಹಬಾಳ್ವೆಯ ಜೊತೆ
ಸಾಗುತ್ತಿರುವ ಚೆಂದದ ಊರಿನಲ್ಲಿ
ಕುರುಡ ಸಿನಿಕನು ಬಂದ ಕತ್ತಾಡಿಸುತ್ತಾ!!

ಧರ್ಮದ ವಿಷದ ವಿಷಯ ಬಿತ್ತಿ
ಸಾಮರಸ್ಯವ ಕದಡಿ
ಸಹೋದರತೆಯ ಬದುಕ ಮುರಿದು
ಹುಂಭ ನಮ್ಮ ಕುರಿಯಾಗಿಸ ಹೊರಟಿರುವುದು
ತನ್ನ ಲಾಭದ ಜೋಳಿಗೆಯ ತುಂಬಲು!!

ಸುಡುಗಾಡಲ್ಲ ಅದು
ಎರಡೂ ನದಿಗಳ ಸಂಗಮ ಬೀಡು
ಅಶಾಂತಿಯ ಬಿಸಿಗೆ ಅವಕಾಶವಿಲ್ಲ ಅಲ್ಲಿ
ರಕ್ತದ ಕಲೆ ವರೆಸಬಹುದಾದಷ್ಟು ನೀರಿದೆ
ಪವಿತ್ರವಾಗಿ ಶುದ್ದವಾಗಬಲ್ಲ ಬದ್ದತೆಯಿದೆ


ಕೈಯಾಡಿಸದಿರಿ ಕುಲಗೆಟ್ಟವರೆ
ಕೊಚ್ಚಿ ಹೋದೀರಿ ನದಿಯ ನೆರೆಯಲ್ಲಿ
ತೊರೆಯಿರಿ ನಿಮ್ಮ ಪಾರುಪತ್ಯದ ಹಂಗು
ನಮ್ಮಗಳ ಮಧ್ಯೆ ಕಕ್ಕದಿರಿ ನಿಮ್ಮ ರಂಗು
ಬೇಕಿಲ್ಲ ನಮಗೆ ನಿಮ್ಮಗಳ ಹಮ್ಮು ಬಿಮ್ಮು

ಯಾರದೋ ಧಾಳಕ್ಕೆ ದ್ವೇಷದ ಕಿಚ್ಚು ಹಬ್ಬದಿರಲಿ
ಮರೆಯಾಗದಿರಲಿ ಬೆಳೆದು ಬಂಧ ಬಾಂಧವ್ಯ
ಬಿಚ್ಚಿಡೋಣ ಸಿನಿಕನ ಸಿನಿಕತನ
ಮಾಗದಿರಲಿ ಮನುಷ್ಯ ಸಂಬಂಧ
ಮೆರೆಯೋಣ ಮಾನವತೆಯ ಈ ಹಿಂದಿನಂತೆ......

Monday, January 23, 2012

ದೇವ್ರೇ ಆಗ್ಬಿಡು

ದೇವ್ರು ಅಂತ ಯಾಕೆ ನಿಂಗೆ ಕೈಯ ಮುಗಿಬೇಕು
ಏನು ಕಿಸ್ದಿದ್ದೀ ಅಂತ ಆರತಿ ಬೆಳಗಬೇಕು

ಇರೋ ಕಷ್ಟ ಇದ್ದೆ ಇದೆ ,ನಮಗೇನ್ ಹೊಸದಲ್ಲ
ನೋಡ್ಕಂಡ್ ಸುಮ್ನೆ ಕುಂತ್ಕಂಡಿದ್ದೀ ನಿಂಗೆ ಕಣ್ಣಿಲ್ಲ

ನೀನು ಬರಿ ಕಲ್ಲು ಅಂತ ತಿಳಿದೋರ್ ಹೇಳ್ತಾರೆ
ಅದರೂ ಜನ ಕಷ್ಟ ಅಂದ್ರೆ, ನಿಂಗೆ ಅಡ್ಡ ಬೀಳ್ತಾರೆ

ಜಾತಿಗೊಂದು ಮಠ ಮಾಡಿ ನಿನ್ ದಯೆ ಅಂತಾರೆ
ಧರ್ಮಕ್ಕಿಷ್ಟು ವಿಷ ಬೆರಸಿ ,ಜನಗಳ್ ನೆತ್ತಿ ಸವರ್ತಾರೆ

ಅನ್ನ ಕೊಡೋನ ಬಾಯಿಗೆ ಹಿಡಿ ಮಣ್ಣು ಹಾಕ್ತಾರೆ
ಅವನ ಎದೆ ಮೇಲೆ ರಸ್ತೆ ಮಾಡಿ ನೈಸು ಅಂತಾರೆ

ಒಳಗೊಳಗೆ ದುಷ್ಟರ ಜೊತೆ ಶಾಮೀಲ್ ಆಗ್ಬಿಟ್ಯ
ಪರ್ಸ0ಟೇಜು ಲೆಕ್ಕದಲ್ಲಿ ನೀನು ಡೀಲಿಗ್ ಕುಂತಬಿಟ್ಯ


ಈ ಹಲ್ಕಟ್ ಮಂದಿ ಜೊತೆ ಸೇರಿ ಹಾಳಾಗ್ ಹೋಗ್ಬಿಟ್ಟೆ
ಗ್ರಾನೈಟ್ ಹಾಸಿದ್ ನೆಲದ ಮೇಲೆ ನಿಂತ್ಕಂಡ್ ಹೈಟೆಕ್ ಆಗ್ಬಿಟ್ಟೆ

ಹಿಂಗೆ ಮಾಡ್ತಾ ಹೋದ್ರೆ ನಿಂಗೆ ಕಷ್ಟ ಆಗ್ತದೆ
ಬಡವರ ಸಿಟ್ಟು ರಟ್ಟೆಗೆ ಬಂದ್ರೆ ನಿನ್ ಮಾನ ಹೋಯ್ತದೆ

ಛಿ ಥೂ ಅನ್ನೋಕ್ ಮುಂಚೆ ಒಳ್ಳೆರ್ಗೆ ಒಳ್ಳೇದ್ ಮಾಡ್ಬಿಡು
ಕೆಟ್ಟವರಿಗೆ ಒಂದ್ ದಾರಿ ತೋರ್ಸಿ ದೇವ್ರೇ ಆಗ್ಬಿಡು

- ಗುರುರಾಜ್ 

Sunday, January 22, 2012

ಅತ್ರಿ ಬುಕ್ ಸೆಂಟರ್ -ವಿಧಾಯದ ದಿನಗಳು

ಅಶೋಕ್ ವರ್ಧನ್ ತನ್ನ ಅತ್ರಿ ಬುಕ್ ಸೆಂಟರ್ ನಲ್ಲಿ
ಯಾಂತ್ರಿಕವಾದ ಈ ದಿನಗಳಲ್ಲಿ ಪುಸ್ತಕ ಕೋಳ್ಳುವವರು ಓದುವವರ ಸಂಖ್ಯೆ ಗಣನೀಯಾವಾಗಿ ಕುಗ್ಗಿದೆ.ಅದಕ್ಕೆ ಪುಷ್ಟಿ ನೀಡುವಂತೆ ಮಂಗಳೂರಲ್ಲಿ ಕಳೆದ 36 ವರುಷಗಳಿಂದ ತನ್ನದೇ ಆದ ಅಸ್ಥಿತ್ವವನ್ನು ಹೊಂದಿದ್ದ ಅತ್ರಿ ಬುಕ್ ಸೆಂಟರ್ ಇದೆ ಮಾರ್ಚ್ 31 ರಂದು ತನ್ನ ಸೇವೆಯನ್ನು ನಿಲ್ಲಿಸಲಿದೆ ಅನ್ನೋ ಸುದ್ದಿ ನಿನ್ನೆ ತಾನೆ ಹೊರಬಿದ್ದಿದೆ.ನನ್ನ ವಿಧ್ಯಾಭ್ಯಾಸದ ದಿನಗಳಲ್ಲಿ ನನ್ನೆಲ್ಲ ಪುಸ್ತಕ ದಾಹಗಳನ್ನು ನೀಗಿಸಿದ್ದು ಈ ಅತ್ರಿ ಬುಕ್ ಸೆಂಟರ್.ಯಾವುದೇ ಪುಸ್ತಕದ ತುರ್ತು ಅಗತ್ಯತೆಗಳನ್ನ ಪೂರೈಸುತಿದ್ದುದು ಈ ಅತ್ರಿ ಬುಕ್ ಸೆಂಟರ್.ಈಗಲೂ ಮಂಗಳೂರಿಗೆ ಭೇಟಿ ನೀಡಿದಾಗ ಮರೆಯದೆ ಭೇಟಿ ನೀಡುವ ಸ್ಥಳ ಇದು.ಮಂಗಳೂರಿನ ಜ್ಯೋತಿ ಸರ್ಕಲಿನಿಂದ ಮುಂದಕ್ಕೆ ಬಲ್ಮಠದಲ್ಲಿರುವ ಹೆಣ್ಮಕ್ಕಳ ಸರ್ಕಾರಿ ವಿದ್ಯಾಲಯದ ಎದುರು ಬಸ್ಟ್ಯಾಂಡ್ ಪಕ್ಕದಲ್ಲೆ ಇರುವದು ಭೇಟಿ ನೀಡುವದಕ್ಕೆ ಸುಲಭವಾಗಿ ಕೈಗೆಟಕುತ್ತಿದ್ದುದು ಒಂದು ಅನುಕೂಲದಾಯಕವೇ ಆಗಿತ್ತು. ಒಟ್ಟಿನಲ್ಲಿ ಪುಸ್ತಕ ಎಂದೊಡನೆ ಅತ್ರಿ ಬುಕ್ ಸೆಂಟರ್ ನೆನಪಿಗೆ ಬರುವಷ್ಟು ಅವಿನಭಾವ ಸಂಭಂದ ನನ್ನೊಂದಿಗಿದೆ.


"ವೃತ್ತಿ ಜೀವನದ ಸರಣಿಯೋಟದಲ್ಲಿ ನಾನು ತಂದೆಯಿಂದ (ಅಧ್ಯಾಪನದ) ಕೈಕೋಲು ಪಡೆದವನಲ್ಲ, ಮಗನಿಗೆ (ಸಿನಿಮಾ ನಿರ್ದೇಶಕ) ಕೊಡಬೇಕಾಗಿಯೂ ಇಲ್ಲ. ಮೂವತ್ತಾರು ವರ್ಷಗಳ ಪುಸ್ತಕೋದ್ಯಮದಲ್ಲಿ ನನ್ನ ನಿರ್ವಹಣೆ ಬಗ್ಗೆ ಧನ್ಯತೆಯಿದ್ದರೂ ನನ್ನನ್ನು ಬೆಳೆಸಿದ ಮತ್ತು ನನ್ನ ಭವಿಷ್ಯಕ್ಕೆ ಭದ್ರತೆಯನ್ನೂ ಒದಗಿಸುತ್ತಿರುವ ಈ ವೃತ್ತಿಯ ಬಗ್ಗೆ ಸಂತೋಷವಿದ್ದರೂ ಮುಖ್ಯವಾಗಿ ಕನ್ನಡ ಮತ್ತೆ ಪುಸ್ತಕೋದ್ಯಮದ ಭವಿಷ್ಯದ ಬಗ್ಗೆ ನಿರಾಶೆಯಲ್ಲಿ ನಿವೃತ್ತನಾಗುತ್ತಿದ್ದೇನೆ."ಇದು ಅತ್ರಿ ಬುಕ್ ಸೆಂಟರ್ ನ ಮಾಲೀಕ ಅಶೋಕ್ ವರ್ಧನ್ ಮಾತುಗಳು.ಈ ಮಾತುಗಳಲ್ಲೆ ಇಂದಿನ ಈ ಸ್ಥಿತಿ ಹೀಗೆ ಮುಂದುವರಿದರೆ ಭವಿಷ್ಯದ ನಿರಾಶೆಗಳ ಬಗ್ಗಿನ ಕನವರಿಕೆಗಳಿವೆ.ತಾನು ಈ ಪುಸ್ತಕ ವ್ಯಾಪಾರಕ್ಕೆ ಇಳಿದ ಬಗೆ ತಾನು ನಿವೃತ್ತಿ ಪಡೆಯ ಬಯಸುವದನ್ನ  ಅಶೋಕ್ ವರ್ಧನ್ ಹೀಗೆ ಹೇಳುತ್ತಾರೆ   "ನಾನು ಜೀವನ ನಿರ್ವಹಣೆಗೆ ಇಷ್ಟಪಟ್ಟು ಪುಸ್ತಕೋದ್ಯಮಕ್ಕೆ ಇಳಿದೆ. ಅದಿಂದು ನನ್ನ ಬಹುತೇಕ ಆರ್ಥಿಕ ಜವಾಬ್ದಾರಿಗಳನ್ನು ನೀಗಿಸಿದೆ. ಜೊತೆಗೆ ನಾನು ಬಯಸಿದ ಮತ್ತು ಧಾರಾಳ ಪಡೆದ ಸಾರ್ವಜನಿಕ ಉಪಯುಕ್ತತೆ, ಇಂದು ಕಾಲಧರ್ಮದಲ್ಲಿ ಅರ್ಥ ಕಳೆದುಕೊಳ್ಳುತ್ತಿದೆ. ಈಚೆಗೆ ದಿನದಿನವೂ ನಾನಿಲ್ಲಿ ಹನ್ನೆರಡು ಗಂಟೆ ವ್ಯರ್ಥವಾಗುತ್ತಿದ್ದೇನೆ ಎಂಬ ಭಾವ ಬಲಿಯುತ್ತಿದೆ. ಇಲ್ಲೇನಿದೆ ಎಂದು ನೋಡುವ ಕುತೂಹಲ ಮತ್ತು ಸಮಯ ಇಟ್ಟುಕೊಂಡ ಜನಗಳು ಕಳೆದುಹೋಗಿದ್ದಾರೆ. ಬರುವ ಬಹುತೇಕರೂ ಬೇರೆಲ್ಲೂ ಸಿಗದ ನಿರ್ದಿಷ್ಟ ಕೃತಿಯನ್ನಷ್ಟೇ ಅರಸುತ್ತಿರುತ್ತಾರೆ. ಅವರಲ್ಲೂ ಹಲವರು ಕೇವಲ ಚರವಾಣಿ ಹಿಡಿದ ಸೂತ್ರದ ಗೊಂಬೆಗಳು; “ಹಾಂ, ನಾ ಅತ್ರಿಯಲ್ಲಿದ್ದೇನೆ. ಯಜಮಾನರಿಗೆ ಕೊಡ್ತೇನೆ...” ಎಂಬ ಸಂಪರ್ಕ ಸೇತುಗಳು! (ನನ್ನಲ್ಲಿ ಚರವಾಣಿ ಇಲ್ಲ ಮತ್ತು ಅನ್ಯರದ್ದನ್ನು ನಾನು ಬಳಸುವುದಿಲ್ಲ) ಅಂಗಡಿಯ ನಾವು ಉಂಟು, ಇಲ್ಲ ಎಂದರೆ ಸುಲಭದಲ್ಲಿ ನಂಬುವವರಲ್ಲ. ‘ಕಂಪ್ಯೂಟರಿಗೆ ಹಾಕಿ’ (ನನ್ನ ಗಣಕದಲ್ಲಿ ಲೆಕ್ಕಾಚಾರದ ದಾಖಲೆಗಳು ಮಾತ್ರ ಇವೆ), (ಇವರ ಒಂದು ಪ್ರತಿಯ ಅಗತ್ಯಕ್ಕೆ) ‘ಮರುಮುದ್ರಣ ಮಾಡಿ’, (ಬೆಲೆ ಹೆಚ್ಚು ಎಂದನ್ನಿಸಿದಾಗ) ‘ಹಳೇ ಪ್ರಿಂಟ್ ಇಲ್ವಾ’ ಅಥವಾ ‘ಆನ್ ಲೈನ್ ದರ...’ ಉಲ್ಲೇಖಿಸುವ ಮೋಸ್ಟ್ ಮಾಡರ್ನ್‌ಗಳು! ಔಟ್ ಡೇಟೆಡ್ ವ್ಯವಸ್ಥೆಯಾಗಿ, ಕೇವಲ ಹಳಬರ ಸ್ವೀಟ್ ಮೆಮೊರೀಸ್ ಸಂಕೇತವಾಗಿ ಉಳಿಯುವ ಬದಲು, ಸಾರ್ವಜನಿಕ ವೃತ್ತಿರಂಗದಲ್ಲಿರುವ ‘ಸ್ವಯಂ ನಿವೃತ್ತಿ’ಯನ್ನು ನಾನೂ ಬಯಸಿದ್ದೇನೆ!"ಇವಿಷ್ಟೆ ಮಾತುಗಳಲ್ಲಿ ಇಂದಿನ ನಮ್ಮಗಳ ಪುಸ್ತಕ ಪ್ರೇಮ ಮುಂದಿನ ಈ ಬಗ್ಗಿನ ಪುಸ್ತಕ ವ್ಯಾಪಾರಿಗಳ ಭವಿಷ್ಯ ಎಲ್ಲವೂ ವೇದ್ಯ.



ಉಲ್ಲಾಸ ಕಾರಂತರ ಸಂಪರ್ಕ ಹೊಂದಿರುವ ಅಶೋಕ್ ವರ್ಧನ್ ಅವರು ತನ್ನ ನಿವೃತ್ತ ಜೀವನವನ್ನು ವನ್ಯ ಜೀವಿ ಸಂರಕ್ಷಣೆಯಲ್ಲಿ ತೊಡಗಿಸಬೇಕೆಂದಿದ್ದಾರೆ, ಅವರಿಗೆ ಈ ಕಾರ್ಯಗಳಲ್ಲಿ ಯಶ ಸಿಗಲೆಂದು ಅನಿವಾರ್ಯವಾಗಿ ಹಾರೈಸಲೇಬೇಕಾಗಿದೆ.ಈ ಹಿಂದೆ ಹಲವಷ್ಟು ಚಳುವಳಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಅನುಭವ ಹೊಂದಿರುವ ಇವರಿಗೆ ವಯಸ್ಸಿನ ಪರಿಧಿಯ ಧಾಟಿ ಯಶ ಪಡೆಯುವ ಸಾಮರ್ಥ್ಯ ಚೈತನ್ಯ ಎರಡೂ ಇದೆ. ನನ್ನ ನೋವೇನೆಂದರೆ ಒಂದು ಒಳ್ಳೆಯ ಪುಸ್ತಕ ತಾಣ ನನ್ನಂತೆ ಅಳಿದುಳಿದ ಪುಸ್ತಕ ಪ್ರೇಮಿಗಳಿಂದ ದೂರವಾಗುತ್ತಿದೆ ಅನ್ನೋದು.ಸಾದ್ಯವಾದರೆ ಮಾರ್ಚ್ 31 ರ ಮೊದಲು ಕೊನೆಯ ಸಲವಾಗಿ ಅತ್ರಿ ಬುಕ್ ಸೆಂಟರ್ ನ ಒಂದಷ್ಟು ಪುಸ್ತಕ ನೆನಪಿಗೋಸ್ಕರ ನನ್ನದಾಗಿಸಿಕೊಳ್ಳಬೇಕೆಂದಿರುವೆ. ಸದ್ಯಕ್ಕೆ ನಾನು ಮಾಡಬಹುದಾದ್ದು ಇಷ್ಟೆ.ಪುಸ್ತಕ ಪ್ರೇಮ ಇದ್ದವರು ಅದ ಉಳಿಸಿ ಬೆಳೆಸೋಣ.


ಅಶೋಕ್ ವರ್ಧನ್ ಈ ಬಗ್ಗೆ ಬರಕೊಂಡಿದ್ದನ್ನು ಓದಲು ಇಲ್ಲಿ ಕ್ಲಿಕ್ಕಿಸಿ

ನಿಮ್ಮವ..........
ರಾಘವೇಂದ್ರ ತೆಕ್ಕಾರು

Saturday, January 21, 2012

ನಾದವಿಲ್ಲದ ಕಂಠ

ನಾದವಿಲ್ಲದ ಕಂಠದಿಂದ
ಭಾಷೆ ಪದಗಳಿಗೆ ನಿಲುಕದ
ಭಾವನೆ ಮಾತ್ರವೇ ರಾಗವಾಗಿರುವ
ಮನಸ್ಸೀನಾಳದ ಹಾಡ ಹಾಡುವೆ

ಮನಸ್ಸು ಮಾತ್ರ ನನ್ನದು 
ಈ ದೇಹವಲ್ಲ ನನ್ನದು ಅನ್ನಲಾದೀತೆ?
ಸಕಲರ ಸಂಘವ ತೊರೆದು
ನಾನೆ ಎಲ್ಲ ಎಂದು ಬದುಕಲಾದೀತೆ?

ರಿವಾಜುಗಳಿಲ್ಲದೆ ಮನ ಒಪ್ಪಿ ಹೃದಯದಿ ಬಂದಿ
ಪ್ರೀತಿ ತುಂಬಿ ಗೆಳೆತನದ ಸವಿ ಉಣಿಸುವ ಮಂದಿ
ತಡೆಯದು ನನ್ನ....................
ಸಮಾಜ ಕಟ್ಟಲೆಗಳು ಜಾತೀಯತೆಯ ಸಂದುಗೊಂದಿ
ಮಾನವತೆಯ ತೋರಿ ನಿಲ್ಲಬೇಕಿದೆ ಇವೆಲ್ಲವ ಹಿಂಗಿ

ಮನುಷ್ಯ ಮಾತ್ರ ನಿಂದಲೆ ಎಲ್ಲರ ನೋಡಬಲ್ಲೆವೆ?
ಹುಟ್ಟು ಮಾನವಧರ್ಮವ ಮೇಳೈಸಬಲ್ಲೆವೆ?
ಹಿಗ್ಗಿ ಹಿಗ್ಗುತಾ ಕಾಣುವ ಈ ಸುಂದರ ಸ್ವಪ್ನ
ನಾದವಿಲ್ಲದ ನನ್ನ ಕಂಠ.............
ನನ್ನ ಭಾವನೆಗಳ ಹಾಡ ಹಾಡುತಾ ಸಾಗಬಲ್ಲುದೇ?

Friday, January 6, 2012

ಪ್ರೀತಿ ನೆನಪು

ನಾ ಎಂಬುದು ನಿನ್ನಿಂದಲೆ 
ನೀನೆ ಎಲ್ಲವೂ ಅಂತಾದ ಮೇಲೆ
ಜಗವ ನೋಡ ಬಯಸುವೆ ನಿನ್ನಿಂದ


ಪರಿತಾಪವಿಲ್ಲ ನೀನಿಲ್ಲದಿದ್ದರೂ
ಅನ್ನಲ್ಲ ನೀನಿಲ್ಲದೆ ವಿರಹ ನೂರು
ಅನುದಿನದ ನನ್ನ ನಡೆ ನಿನ್ನದೇ ನೆನಪಿನಿಂದ

ಬತ್ತಿರುವ ಎದೆ ನೆಲವಲ್ಲ ಇದು
ನಿನ್ನ ನೆನಪಿನೊಲವು ನನ್ನಾಗಿಸಿದೆ ಮ್ರದು
ನವಿರು ಹೊಸ ಲೋಕ ಕಾಣುತ್ತಿರುವೆ ಆ ಒಂದು ದಿನದಿಂದ

ತನುವೆಲ್ಲ ನೀ ತುಂಬಿರಲು
ಮನವೆಲ್ಲ ನೀನೆ ಸಾಗುತಿರಲು
ನೀನಿರುವೆ ನನ್ನಲ್ಲೆ ನೀನಿಲ್ಲದಿದ್ದರೂ ನೆನಪಿನಿಂದ


Thursday, January 5, 2012

ಆಸೆ ಎಂಬ ಮೂಟೆ


ಸುಖ ದುಖಃಗಳ ತೆರೆಮರೆಯಾಟ
ಕತ್ತಲು ಬೆಳಕಿನ ಚದುರಂಗದಾಟ
ಸಾಗಿದೆ ಇಹದೊಳಗೆ........
ಬಾಳೆಂಬ ಈ ವಿಧಿ-ಹಣೆಬರಹದಾಟ.

ಮನಸ್ಸೆಂಬ ಹಾರು ಹಕ್ಕಿ 
ಸಾಗುತಿದೆ ಎತ್ತರದ ನಭಕ್ಕೆ
ಆಸೆ ಎಂಬ ಮೂಟೆ ಬೆನ್ನಿಗೇರಿದೆ
ಬಾನಿಗಿಲ್ಲ ಎಲ್ಲೆ ಅಲ್ಲಿರದು ಸೂರು
ಆಸೆಗಳಿಗೆ ಮುಕ್ತಿ ಸಿಗುವದಿಲ್ಲ ಗೊತ್ತಿದೆ
ಆದರೂ ಬಾಳ ಹಾದಿಯನ್ನು ಮುಳ್ಳಾಗಿಸಿದೆ.

ಕನಸು ಕಾಣುವದೇಕೆ ಈ ಮನಸು
ಬಾನಿಗೆ ಆಸೆಗೆ ಕೊನೆ ಇಲ್ಲದಾಗ
ಆಸೆ ತೊರೆಯೋ ಮನಸೆ ನಿಜವನರಿತು
ಹರುಷ ತಾ ಮನಕೆ ನನ್ನ ನೀನರಿತು
ಮಿತಿ ಕರುಣಿಸು ನನ್ನಾಸೆಗೆ
ಸಾಗರ ಸೇರುವ ನದಿ ಹರಿವಿನಂತೆ
ಸಿಹಿಯಾಗಿಸು ಜೀವನ ಹಾದಿ ನನ್ನೊಲವಿನಂತೆ.

ನಿವೇದನೆ

ಮರೆಮಾಡುವದೇನಿಲ್ಲ ನಿನ್ನ ಮುಂದೆ
ದುಗುಡಗಳಿಲ್ಲ ನಿವೇದಿಸಲು
ಸದ್ಯದಲ್ಲಿ ಬಿಚ್ಚಿಡುವೆನೆಲ್ಲ
ನನ್ನ ಮನದೊಲವ....

ನಾನೇನೆಂಬುದ ಬಲ್ಲೆ
ಹುಟ್ಟು ಸಾವಿನ ನಡುವಲಿ
ಬಾಳೆಂಬ ಜೀವನ ದೋಣಿಯ
ದಡ ಸೇರಿಸಲು ನನ್ನ ನಲ್ಲೆ
ಸ್ವೀಕರಿಸಿ ನಡೆಸು ನೀ ನನ್ನ ಮುಂದೆ

ರವಿಯ ಬೆಳಕ ಸೂಸುವ ನಿನ್ನ ಅಕ್ಷಿ
ನನ್ನ ಪಾಪವ ತೊಳೆಯಬಲ್ಲುದಾದರೆ
ನಿನ್ನ ಸಾಮೀಪ್ಯದ ಅಗತ್ಯವಿದೆ ನನಗೀಗ
ನಿನಗಿಂತಲೂ ಹೆಚ್ಚು...........
ನಾನಗಬಹುದು ನಿನ್ನ ಅಚ್ಚು ಮೆಚ್ಚು.

ನಿನ್ನ ನೆನಪಲೆ ಕದಡಿರುವದು ಎನ್ನ ಮನ
ಪ್ರಶಾಂತತೆ ಬಯಸುತಿದೆ ಈ ಹೊಂಬನ
ಬೆಳಕ ದಾರಿ ತೋರು ಕುರುಡ ನೀತಿ ನೀಗಲು
ನಿನ್ನ ಪ್ರೀತಿಯ ಮಳೆ ಹೊಯ್ ..........
ಬತ್ತಿದೆದೆಯಲಿ ಬೆಳೆಸು ತೆನೆ ಪೈರ ಹೊನಲು.

ನುಡಿಸು ಬಾ ಇನಿದನಿ

ನುಡಿಸು ಬಾ ಇನಿದನಿ
ಸಮರಸದ ಸ್ವರವ
ನನ್ನ ಎದೆಯ ಭಾವನೆಗಳ ವೀಣೆಯ ತಂತಿ ಮೀಟಿ...!!

ಮನದ ಒಲವಿನ ತಬಲ ಬೋಲ್ ಬಾರಿಸುತ
ಹೃದಯ ಮದ್ದಲೆ ಮೃದಂಗದ ನಾದ ಹೊಮ್ಮಿಸುತ
ನುಡಿಸು ಬಾ ಇನಿದನಿ
ಉಣಿಸು ಸಂಭ್ರಮವ....!!!

ನುಡಿಸು ಬಾ ಸರಿಗಮ
ಬೆಳೆಸು ಎಲ್ಲರೊಳು ಸರಿಸಮ
ಜಾತಿ ಮತ ಹೋಗಲಾಡಿಸಿ
ನುಡಿಸು ಬಾ ಇನಿದನಿ
ಸಮಾಜಮುಖಿಯಾಗಿ ಬೆರೆತು ಬಾ..!!!

ಕೇಳುಗರ ಕಿವಿಗೆ ಇಂಪಾಗಿಸಿ
ಹೃದಯ ಮಾಧುರ್ಯವ ನುಡಿಯಾಗಿಸಿ
ಹಾಡು ಬಾ ಮನುಜ ಸಮ್ಮೇಳನದಿ
ಮಾನವತೆಯ ಮೆರೆಯು ಬಾ
ನುಡಿಸು ಬಾ ಇನಿದನಿ
ಹಾಡು ಬಾ.........!!!