Wednesday, January 25, 2012

ಸಿನಿಕ !!

ಬದುಕ ಕುದುರೆಯ ರಥವನೇರಿ  
ವಿಧಿಯ ಅಣತಿಯಂತೆ 
ಸಹಬಾಳ್ವೆಯ ಜೊತೆ
ಸಾಗುತ್ತಿರುವ ಚೆಂದದ ಊರಿನಲ್ಲಿ
ಕುರುಡ ಸಿನಿಕನು ಬಂದ ಕತ್ತಾಡಿಸುತ್ತಾ!!

ಧರ್ಮದ ವಿಷದ ವಿಷಯ ಬಿತ್ತಿ
ಸಾಮರಸ್ಯವ ಕದಡಿ
ಸಹೋದರತೆಯ ಬದುಕ ಮುರಿದು
ಹುಂಭ ನಮ್ಮ ಕುರಿಯಾಗಿಸ ಹೊರಟಿರುವುದು
ತನ್ನ ಲಾಭದ ಜೋಳಿಗೆಯ ತುಂಬಲು!!

ಸುಡುಗಾಡಲ್ಲ ಅದು
ಎರಡೂ ನದಿಗಳ ಸಂಗಮ ಬೀಡು
ಅಶಾಂತಿಯ ಬಿಸಿಗೆ ಅವಕಾಶವಿಲ್ಲ ಅಲ್ಲಿ
ರಕ್ತದ ಕಲೆ ವರೆಸಬಹುದಾದಷ್ಟು ನೀರಿದೆ
ಪವಿತ್ರವಾಗಿ ಶುದ್ದವಾಗಬಲ್ಲ ಬದ್ದತೆಯಿದೆ


ಕೈಯಾಡಿಸದಿರಿ ಕುಲಗೆಟ್ಟವರೆ
ಕೊಚ್ಚಿ ಹೋದೀರಿ ನದಿಯ ನೆರೆಯಲ್ಲಿ
ತೊರೆಯಿರಿ ನಿಮ್ಮ ಪಾರುಪತ್ಯದ ಹಂಗು
ನಮ್ಮಗಳ ಮಧ್ಯೆ ಕಕ್ಕದಿರಿ ನಿಮ್ಮ ರಂಗು
ಬೇಕಿಲ್ಲ ನಮಗೆ ನಿಮ್ಮಗಳ ಹಮ್ಮು ಬಿಮ್ಮು

ಯಾರದೋ ಧಾಳಕ್ಕೆ ದ್ವೇಷದ ಕಿಚ್ಚು ಹಬ್ಬದಿರಲಿ
ಮರೆಯಾಗದಿರಲಿ ಬೆಳೆದು ಬಂಧ ಬಾಂಧವ್ಯ
ಬಿಚ್ಚಿಡೋಣ ಸಿನಿಕನ ಸಿನಿಕತನ
ಮಾಗದಿರಲಿ ಮನುಷ್ಯ ಸಂಬಂಧ
ಮೆರೆಯೋಣ ಮಾನವತೆಯ ಈ ಹಿಂದಿನಂತೆ......

No comments:

Post a Comment