Friday, January 27, 2012

ಸಾಧುವಾಗಿ ಬಾಳ್ವೆ ಸಾಧ್ಯವೇ!

ಕೆಲವು ಗೊಲ್ಲರ ಹುಡುಗರು ಒಂದು ಹುಲ್ಲುಗಾವಲಿನಲ್ಲಿ ದನ ಕಾಯುತ್ತಿದ್ದರು. ಅಲ್ಲಿ ಒಂದು ಭಯಂಕರ ವಿಷಸರ್ಪ ವಾಸವಾಗಿತ್ತು. ಆ ಹಾವಿಗೆ ಹೆದರಿ ಎಲ್ಲರೂ ಬಹಳ ಎಚ್ಚರಿಕೆಯಿಂದ ಇರುತ್ತಿದ್ದರು. ಒಂದು ದಿನ ಒಬ್ಬ ಬ್ರಹ್ಮಚಾರಿ ಆ ಹುಲ್ಲುಗಾವಲ ಮಾರ್ಗವಾಗಿ ಹೋಗುತ್ತಿದ್ದ. ಹುಡುಗರು ಓಡಿಹೋಗಿ ಆತನಿಗೆ ಹೇಳಿದರು. ‘ಮಹಾಶಯರೆ, ಈ ಮಾರ್ಗವಾಗಿ ಹೋಗಬೇಡಿ. ಅಲ್ಲಿ ವಿಷಸರ್ಪವೊಂದಿದೆ.’ ಬ್ರಹ್ಮಚಾರಿ ಹೇಳಿದ. ‘ಇದ್ದರೆ ಇರಲಿ, ಗೆಳೆಯರಾ ನನಗೇನೂ ಹೆದರಿಕೆ ಇಲ್ಲ; ಮಂತ್ರ ಗೊತ್ತಿದೆ.’ ಹೀಗೆಂದು ಹೇಳಿ ಆತ ಹಾಗೇ ಮುಂದುವರಿದ. ಹೆದರಿಕೊಂಡು ಹುಡುಗರಾರೂ ಆತನನ್ನು ಹಿಂಬಾಲಿಸಲಿಲ್ಲ. ಸ್ವಲ್ಪ ದೂರ ಮುಂದುವರಿಯುವುದರೊಳಗೆ ಆ ಹಾವು ಹೆಡೆಬಿಚ್ಚಿ ಓಡಿಬರಲಾರಂಭಿಸಿತು. ಹತ್ತಿರಕ್ಕೆ ಬಂದೊಡನೆ ಆತ ಏನೊ ಒಂದು ಮಂತ್ರ ಪಠಿಸಿದ. ಹಾವು ಎರೆಹುಳುವಿನೋಪಾದಿಯಲ್ಲಿ ಆತನ ಪಾದದ ಬಳಿ ಸುಮ್ಮನೆ ಬಿದ್ದುಕೊಂಡಿತು. ಬ್ರಹ್ಮಚಾರಿ ಹೇಳಿದ: “ಕೇಳಿಲ್ಲಿ, ಪರರಿಗೆ ಹಿಂಸೆಮಾಡುತ್ತ ಏಕೆ ನೀನು ಸುತ್ತಾಡುತ್ತಿದ್ದೀಯೆ? ನಿನಗೆ ಮಂತ್ರ ಹೇಳಿಕೊಡುತ್ತೇನೆ. ಅದನ್ನು ಜಪಿಸಿದರೆ ನಿನಗೆ ಭಗವಂತನಲ್ಲಿ ಭಕ್ತಿಯುಂಟಾಗುತ್ತದೆ. ಆತನ ಸಾಕ್ಷಾತ್ಕಾರ ದೊರಕುತ್ತದೆ; ಹಿಂಸಾಪ್ರವೃತ್ತಿ ಬಿಟ್ಟು ತೊಲಗುತ್ತದೆ.’ ಹೀಗೆಂದು ಹೇಳಿ ಮಂತ್ರೋಪದೇಶ ಮಾಡಿದ. ಮಂತ್ರ ಪಡೆದ ನಂತರ ಆ ಹಾವು ಗುರುವಿಗೆ ಪ್ರಣಾಮಮಾಡಿ ಆತನನ್ನು ಕೇಳಿಕೊಂಡಿತು: ‘ಪೂಜ್ಯರೆ, ಯಾವ ರೀತಿಯಲ್ಲಿ ಸಾಧನೆಗೆ ತೊಡಗಬೇಕು, ದಯವಿಟ್ಟು ತಿಳಿಸಿ.’ ಗುರು ಹೇಳಿದ: ‘ಈ ಮಂತ್ರ ಜಪಿಸು, ಯಾರಿಗೂ ಹಿಂಸೆ ಮಾಡಬೇಡ.’ ಹೊರಡುವಾಗ ಹೇಳಿದ: ‘ಮತ್ತೆ ಬಂದು ನಿನ್ನನ್ನು ನೋಡುತ್ತೇನೆ.’


“ಹಾಗೇ ಕೆಲವು ದಿನಗಳು ಉರುಳಿದವು. ಆ ಹುಡುಗರಿಗೆ ಗೊತ್ತಾಯಿತು, ಆ ಹಾವು ಕಡಿಯುವುದಿಲ್ಲ ಎಂಬುದಾಗಿ. ಕಲ್ಲು ಹೊಡೆದರು. ಆದರೂ ಅದು ಉದ್ರೇಕಗೊಳ್ಳಲಿಲ್ಲ. ಎರೆಹುಳುವಿನಂತೆ ವರ್ತಿಸಿತು. ಒಂದು ದಿನ ಒಂದು ಹುಡುಗ ಅದರ ಹತ್ತಿರಕ್ಕೆ ಹೋಗಿ ಬಾಲ ಹಿಡಿದು ಚೆನ್ನಾಗಿ ತಿರುಗಿಸಿ ನೆಲಕ್ಕೆ ಅಪ್ಪಳಿಸಿ ಒಂದು ಕಡೆಗೆ ಬಿಸಾಡಿಬಿಟ್ಟ. ಅದರ ಬಾಯಿಂದ ರಕ್ತ ಸುರಿಯಲಾರಂಭಿಸಿತು; ಪ್ರಜ್ಞೆ ತಪ್ಪಿ ಬಿದ್ದುಕೊಂಡಿತು. ಚಲನವಲನವೆಲ್ಲ ನಿಂತುಹೋಯಿತು. ಆ ಹಾವು ಸತ್ತಿತೆಂದು ಭಾವಿಸಿ ಹುಡುಗರೆಲ್ಲರೂ ಹೊರಟುಹೋದರು.

“ರಾತ್ರಿ ಬಹಳ ಹೊತ್ತಾದ ನಂತರ ಆ ಹಾವಿಗೆ ಪ್ರಜ್ಞೆ ಬಂತು. ಬಹಳ ಕಷ್ಟಪಟ್ಟು ಮೆಲ್ಲಮೆಲ್ಲನೆ ತೆವಳಿ ತನ್ನ ಹುತ್ತವನ್ನು ಸೇರಿಕೊಂಡಿತು. ಮೈಯೆಲ್ಲಾ ನಜ್ಜುಗುಜ್ಜಾಗಿ ಬಿಟ್ಟಿತ್ತು – ಚಲಿಸಲು ಶಕ್ತಿಯೇ ಇರಲಿಲ್ಲ. ಹಾಗೇ ಕೆಲವು ದಿನಗಳು ಕಳೆದುಹೋದವು. ಅದು ಮೂಳೆಚೆಕ್ಕಳ ಆಗಿಹೋಯಿತು. ರಾತ್ರಿವೇಳೆ ತನ್ನ ಆಹಾರಕ್ಕಾಗಿ ಆಗಾಗ ಹೊರಕ್ಕೆ ಬರುತ್ತಿತ್ತು. ಹಗಲುವೇಳೆ ಹುಡುಗರಿಗೆ ಹೆದರಿ ಹುತ್ತದಿಂದ ಹೊರಕ್ಕೆ ಬರುತ್ತಲೇ ಇರಲಿಲ್ಲ. ಮಂತ್ರ ಪಡೆದಂದಿನಿಂದ ಯಾರಿಗೂ ಹಿಂಸೆ ಮಾಡುತ್ತಿರಲಿಲ್ಲ. ಕಸ, ಕಡ್ಡಿ, ಎಲೆ, ಮರದಿಂದ ಬಿದ್ದ ಹಣ್ಣು ಹಂಪಲು ಇವನ್ನೇ ತಿಂದೇ ಪ್ರಾಣಧಾರಣೆ ಮಾಡಿಕೊಳ್ಳುತ್ತಿತ್ತು.

ಸುಮಾರು ಒಂದು ವರ್ಷ ಕಳೆದ ನಂತರ ಆ ಬ್ರಹ್ಮಚಾರಿ ಅದೇ ಮಾರ್ಗವಾಗಿ ಬಂದು ಆ ಹಾವನ್ನು ಹುಡುಕಿದ. ಗೊಲ್ಲರ ಹುಡುಗರು ‘ಆ ಹಾವು ಸತ್ತುಹೋಯಿತು’ ಎಂದು ಹೇಳಿದರು. ಬ್ರಹ್ಮಚಾರಿ ನಂಬಲಿಲ್ಲ. ಆತನಿಗೆ ಗೊತ್ತಿತ್ತು. ಮಂತ್ರ ಸಿದ್ಧಿಯಾದ ಹೊರತು ಅದು ಸಾಯುವುದಿಲ್ಲ ಎಂದು. ಹಾಗೇ ಹುಡುಕಿಕೊಂಡು ಅದು ವಾಸವಾಗಿದ್ದ ಸ್ಥಳಕ್ಕೇ ಹೋಗಿ ತಾನು ಕೊಟ್ಟಿದ್ದ ಹೆಸರಿನಿಂದ ಅದನ್ನು ಕೂಗಲಾರಂಭಿಸಿದ. ಗುರುವಿನ ಧ್ವನಿಯನ್ನು ಕೇಳಿ ಅದು ಹುತ್ತದಿಂದ ಹೊರಕ್ಕೆ ಬಂದು ಅತ್ಯಂತ ಶ್ರದ್ಧಾಭಕ್ತಿಯಿಂದ ಆತನಿಗೆ ಪ್ರಣಾಮ ಮಾಡಿತು. ಬ್ರಹ್ಮಚಾರಿ ಕೇಳಿದ: ‘ಕ್ಷೇಮವೇ?’ ಅದು ಹೇಳಿತು ‘ಹೌದು ಗುರುಗಳೇ, ಕ್ಷೇಮದಿಂದಿದ್ದೇನೆ.’ ಬ್ರಹ್ಮಚಾರಿ ಹೇಳಿದ: ‘ಆದರೆ, ನೀನೇಕೆ ಇಷ್ಟು ಕಂಗೆಟ್ಟುಹೋಗಿದ್ದೀಯೆ?’ ಹಾವು ಹೇಳಿತು: ‘ಪೂಜ್ಯರೆ, ತಾವು ಉಪದೇಶವಿತ್ತಿದ್ದೀರಿ, ಯಾರಿಗೂ ಹಿಂಸೆ ಮಾಡಿಕೂಡದು ಎಂಬುದಾಗಿ. ಅದಕ್ಕಾಗಿ ಎಲೆ ಹಣ್ಣು ಹಂಪಲು ತಿನ್ನುತ್ತಿರುವುದರಿಂದ ಶರೀರ ಬಹುಷಃ ಕೃಶವಾಗಿ ತೋರುತ್ತಿರಬಹುದು.’

ಅದರ ಹೃದಯದಲ್ಲಿ ಸತ್ವಗುಣ ಬೆಳೆದುಬಿಟ್ಟಿದ್ದರಿಂದ ಅದಕ್ಕೆ ಯಾರ ಮೇಲೂ ಕ್ರೋಧವಿರಲಿಲ್ಲ. ಆ ಗೊಲ್ಲರ ಹುಡುಗರು ತನ್ನನ್ನು ಕೊಂದುಹಾಕಲು ಯತ್ನಿಸಿದ್ದನ್ನು ಅದು ಮರೆತೇಬಿಟ್ಟಿತ್ತು.

ಬ್ರಹ್ಮಚಾರಿ ಹೇಳಿದ: ‘ಕೇವಲ ಆಹಾರಾಭಾವದಿಂದಲೇ ಈ ದುರವಸ್ಥೆ ಉಂಟಾಗದು. ನಿಶ್ಚಯವಾಗಿ ಬೇರೆ ಏನೋ ಕಾರಣವಿರಬೇಕು. ಯೋಚಿಸಿ ನೋಡು.’ ಗೊಲ್ಲರ ಹುಡುಗರು ತನ್ನನ್ನು ಚೆನ್ನಾಗಿ ನೆಲಕ್ಕೆ ಅಪ್ಪಳಿಸಿದ್ದರ ಜ್ಞಾಪಕ ಅದಕ್ಕೆ ಬಂತು. ಅದು ಹೇಳಿತು ‘ಪೂಜ್ಯರೆ, ಈಗ ಜ್ಞಾಪಕಕ್ಕೆ ಬಂತು; ಒಂದು ದಿನ ಆ ಗೊಲ್ಲರ ಹುಡುಗರು ನನ್ನನ್ನು ನೆಲಕ್ಕೆ ಅಪ್ಪಳಿಸಿದರು. ಎನೆಂದರೂ ಅವರಿನ್ನೂ ಅರಿಯದ ಹುಡುಗರು. ನನ್ನ ಮನಸ್ಸಿನಲ್ಲಿ ಎಂಥ ಬದಲಾವಣೆ ಆಗಿಬಿಟ್ಟಿದೆ ಎಂಬುದು ಅವರಿಗೆ ಗೊತ್ತಾಗಲಿಲ್ಲ. ನಾನು ಯಾರನ್ನೂ ಕಚ್ಚುವುದಿಲ್ಲ, ಬೇರೆ ಯಾವ ವಿಧದಿಂದಲೂ ಹಿಂಸೆ ಮಾಡುವುದಿಲ್ಲ ಎಂಬುದು ಅವರಿಗೆ ಹೇಗೆ ಗೊತ್ತಾಗಬೇಕು?’ 

ಬ್ರಹ್ಮಚಾರಿ ಬಯ್ದು ಹೇಳಿದ” ‘ಛೆ! ನೀನು ಎಂಥಾ ತಿಳಿಗೇಡಿ! ನಿನ್ನನ್ನು ನೀನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದು ನಿನಗೆ ಗೊತ್ತಿಲ್ಲವಲ್ಲ. ನಾನು ನಿನಗೆ ಕಚ್ಚಬೇಡ ಅಂತ ಹೇಳಿದೆನೇ ವಿನಾ ಬುಸುಗುಟ್ಟಬೇಡ ಅಂತ ಹೇಳಲಿಲ್ಲವಲ್ಲ. ಬುಸುಗುಟ್ಟಿ ಅವರನ್ನು ಏಕೆ ಹೆದರಿಸಬಾರದಾಗಿತ್ತು?’

“ದುಷ್ಟರ ಕಡೆ ಬುಸುಗುಟ್ಟಬೇಕು. ಕೇಡು ತರದೆ ಇರಲೆಂದು ಅವರಿಗೆ ಭಯ ತೋರಿಸಬೇಕು. ಅವರ ಮೇಲೆ ವಿಷ ಕಾರಬಾರದು. ಅನಿಷ್ಟ ತರಬಾರದು.” 
ಸಮಾಜದ ಮಧ್ಯೆ ಇರಬೇಕಾದರೆ, ದುಷ್ಟರ ಕೈಯಿಂದ ತಪ್ಪಿಸಿಕೊಳ್ಳಲು ಮನುಷ್ಯ ಸ್ವಲ್ಪ ತಮೋಗುಣವನ್ನು ಪ್ರದರ್ಶಿಸಬೇಕಾಗುತ್ತದೆ. ಆದರೆ ಮುಯ್ಯಿಗೆ ಮುಯ್ಯಿ ತೀರಿಸಲು ಹೋಗಬಾರದು. 

ಕೃಪೆ: ಶ್ರೀರಾಮಕೃಷ್ಣ ಪರಮಹಂಸರ ವಚನವೇದ. — ಕಥಾಸಂಪದ

No comments:

Post a Comment