Friday, July 20, 2012

ರಕ್ತದಾಟ...............

ಭಾರದುಸಿರು ಹಿಡಿದಿಡುವದೆಂತೆಂದೂ
ಗಂಟಲ ಸೆರೆಯ ತೆರೆದು
ಉಸಿರ ಬಿಟ್ಟೆ
ಬಾಯಿ ಮೂಗೆಲ್ಲ ಕೆಂಪು ರಕ್ತ

ಪಾಪದ ನೆತ್ತರ ಕಲೆ ಮೈಗಂಟಿದಾಗ
ಅದ ಸವರಿ ಅಂದೊಮ್ಮೆ ನಕ್ಕ
ಉಸಿರ ಕಟ್ಟಿಸಿದ
ವಿಜಯೋತ್ಸವದ
ನಗೆಯ ಫಲವೆಂಬಂತೆ
ಎದುರುಗಿದ್ದ ಕನ್ನಡಿ
ಪ್ರತಿರೂಪ ತೋರಿಸಿ
ಅಣಕಿಸಿ ನಗೆಯಾಡುತಿತ್ತು,

ಬೆಚ್ಚಿ ಬಿದ್ದೇನೂ ಒಂದು ದಿನ
ನನ್ನದೆ ರಕ್ತ ನೋಡಿದಾಗೆಂದು
ಗೊತ್ತಿರಲಿಲ್ಲ ನನಗೆ
ರಕ್ತದೋಕುಳಿ ಹರಿಸುವಾಗ
ಕೆಂಪ ನೋಡಿ
ಕೆಂಪಾಗಾಗಿ ರೋಷಗೊಳ್ಳುವಾಗ
ಆದರಿಂದು ಬೆಚ್ಚಿ ಬೆವರುತಿದ್ದೇನೆ
ಮೈಯೆಲ್ಲ ಕಮಟು ವಾಸನೆ
ಯಾರೂ ಇರಿಯದಿದ್ದರೂ
ಮೈಯೆಲ್ಲಾ ಆಳ ಸೀಳಿನ ನೋವು.

ಪಿತೂರಿಗಳು ಹೊಸದಲ್ಲ ನನಗೆ
ನರ ಮೀಟಿ ಉಸಿರು ನಿಲ್ಲಿಸಿದ್ದೆ
ಜೊತೆಗಾರರೆನಿಸಿಕೊಂಡ ನನ್ನವರನ್ನೆ
ಆಗೆಲ್ಲ ವಿಕೃತ ಅಟ್ಟಹಾಸ
ಕೈಯಲ್ಲಿ ಶೀಷೆಯ ಜೊತೆ ವಿಕಟಹಾಸ
ಆದರಿಂದೂ ನಿಮಿತ್ತ ಪಿತೂರಿಗೆ ಬಲಿ
ಗೆದ್ದು ಬಿಡುವ ಸಂಭವವೆ ಇಲ್ಲ
ಕಾರಣ ಇದು ವ್ಯಕ್ತಿ ಪಿತೂರಿಯಲ್ಲ
ನಾ ಮಾಡಿದ ಪಿತೂರಿಗಳ ಸಿಕ್ಕಿನೊಳಗೆ
ಫಲ ಉಣ್ಣೆಂಬ ವಿಧಿಯ ಆಟ-ಪಾಠ.

ಸುತ್ತಲೂ ಗಹಗಹಿಪ ನಗೂ
ಘೋರತೆ ಕಾಡಿದೆ ಇಂಚಿಂಚೂ ಮನದೊಳಗೆ
ಗಳಿಸಿದ್ದೂ ಒಂದು ಹಿಡಿಯೂ ಇಲ್ಲ
ಮಣ್ಣಲ್ಲಿ ಮಣ್ಣಾಗಿಸಲು
ನನ್ನ ಹಿಂದೂ ಮುಂದೂ ಯಾರಿಲ್ಲ
ತೊಟ್ಟು ವಿಷ ಕೂಡ ನನ್ನ ಅಮೃತ ಪಾನ
ಗಬ್ಬು ನಾರುವ ಪಾದಗಳು
ಹೆಜ್ಜೆ ಮರೆತಿದೆ, ಇನ್ನೆಲ್ಲಿಯದೂ ಅಮೃತ ಪಾನ?

ಸಾವಿನ ಅರ್ತನಾದವ ಕಂಡು
ಕುಣಿಯುತಿದ್ದೆ, ಮಚ್ಚೆತ್ತಿ ನಲಿಯುತಿದ್ದೆ
ಆದರಿಂದೂ ಸಾವಿಗಾಗಿ
ಮೊರೆಯಿಡುತಿದ್ದರೂ ಅದು ದೂರ ದೂರ
ರಕ್ತ ಮೈಯೊಳಗೆ ಕೊಳೆತು ನಾರುತ್ತಿದೆ
ಜೀವಂತವಿದ್ದೂ ಸತ್ತಂತೆ
ಸಾವಿಗೂ ವಾಕರಿಕೆ ನನ್ನ ಮೈ ಮುಟ್ಟಲೂ.

ಮೈತೊಳೆದು ಶುಚಿಯಾಗಿಸಿ
ರಕ್ತವರೆಸಿ ಕೆಂಪಡಗಿಸಿ
ಸಾವ ಸ್ವಾಗತಿಸಬೇಕಿದೆ

ಕೊನೆಯ ಸಾರಿಯೆಂದು
ಮತ್ತದೆ ಹಳೆ ಪಿತೂರಿ ಹೆಣೆದೂ
ಹೊಸ ತಯಾರಿಯೊಂದಿಗೆ!!!!

No comments:

Post a Comment