Sunday, January 22, 2012

ಅತ್ರಿ ಬುಕ್ ಸೆಂಟರ್ -ವಿಧಾಯದ ದಿನಗಳು

ಅಶೋಕ್ ವರ್ಧನ್ ತನ್ನ ಅತ್ರಿ ಬುಕ್ ಸೆಂಟರ್ ನಲ್ಲಿ
ಯಾಂತ್ರಿಕವಾದ ಈ ದಿನಗಳಲ್ಲಿ ಪುಸ್ತಕ ಕೋಳ್ಳುವವರು ಓದುವವರ ಸಂಖ್ಯೆ ಗಣನೀಯಾವಾಗಿ ಕುಗ್ಗಿದೆ.ಅದಕ್ಕೆ ಪುಷ್ಟಿ ನೀಡುವಂತೆ ಮಂಗಳೂರಲ್ಲಿ ಕಳೆದ 36 ವರುಷಗಳಿಂದ ತನ್ನದೇ ಆದ ಅಸ್ಥಿತ್ವವನ್ನು ಹೊಂದಿದ್ದ ಅತ್ರಿ ಬುಕ್ ಸೆಂಟರ್ ಇದೆ ಮಾರ್ಚ್ 31 ರಂದು ತನ್ನ ಸೇವೆಯನ್ನು ನಿಲ್ಲಿಸಲಿದೆ ಅನ್ನೋ ಸುದ್ದಿ ನಿನ್ನೆ ತಾನೆ ಹೊರಬಿದ್ದಿದೆ.ನನ್ನ ವಿಧ್ಯಾಭ್ಯಾಸದ ದಿನಗಳಲ್ಲಿ ನನ್ನೆಲ್ಲ ಪುಸ್ತಕ ದಾಹಗಳನ್ನು ನೀಗಿಸಿದ್ದು ಈ ಅತ್ರಿ ಬುಕ್ ಸೆಂಟರ್.ಯಾವುದೇ ಪುಸ್ತಕದ ತುರ್ತು ಅಗತ್ಯತೆಗಳನ್ನ ಪೂರೈಸುತಿದ್ದುದು ಈ ಅತ್ರಿ ಬುಕ್ ಸೆಂಟರ್.ಈಗಲೂ ಮಂಗಳೂರಿಗೆ ಭೇಟಿ ನೀಡಿದಾಗ ಮರೆಯದೆ ಭೇಟಿ ನೀಡುವ ಸ್ಥಳ ಇದು.ಮಂಗಳೂರಿನ ಜ್ಯೋತಿ ಸರ್ಕಲಿನಿಂದ ಮುಂದಕ್ಕೆ ಬಲ್ಮಠದಲ್ಲಿರುವ ಹೆಣ್ಮಕ್ಕಳ ಸರ್ಕಾರಿ ವಿದ್ಯಾಲಯದ ಎದುರು ಬಸ್ಟ್ಯಾಂಡ್ ಪಕ್ಕದಲ್ಲೆ ಇರುವದು ಭೇಟಿ ನೀಡುವದಕ್ಕೆ ಸುಲಭವಾಗಿ ಕೈಗೆಟಕುತ್ತಿದ್ದುದು ಒಂದು ಅನುಕೂಲದಾಯಕವೇ ಆಗಿತ್ತು. ಒಟ್ಟಿನಲ್ಲಿ ಪುಸ್ತಕ ಎಂದೊಡನೆ ಅತ್ರಿ ಬುಕ್ ಸೆಂಟರ್ ನೆನಪಿಗೆ ಬರುವಷ್ಟು ಅವಿನಭಾವ ಸಂಭಂದ ನನ್ನೊಂದಿಗಿದೆ.


"ವೃತ್ತಿ ಜೀವನದ ಸರಣಿಯೋಟದಲ್ಲಿ ನಾನು ತಂದೆಯಿಂದ (ಅಧ್ಯಾಪನದ) ಕೈಕೋಲು ಪಡೆದವನಲ್ಲ, ಮಗನಿಗೆ (ಸಿನಿಮಾ ನಿರ್ದೇಶಕ) ಕೊಡಬೇಕಾಗಿಯೂ ಇಲ್ಲ. ಮೂವತ್ತಾರು ವರ್ಷಗಳ ಪುಸ್ತಕೋದ್ಯಮದಲ್ಲಿ ನನ್ನ ನಿರ್ವಹಣೆ ಬಗ್ಗೆ ಧನ್ಯತೆಯಿದ್ದರೂ ನನ್ನನ್ನು ಬೆಳೆಸಿದ ಮತ್ತು ನನ್ನ ಭವಿಷ್ಯಕ್ಕೆ ಭದ್ರತೆಯನ್ನೂ ಒದಗಿಸುತ್ತಿರುವ ಈ ವೃತ್ತಿಯ ಬಗ್ಗೆ ಸಂತೋಷವಿದ್ದರೂ ಮುಖ್ಯವಾಗಿ ಕನ್ನಡ ಮತ್ತೆ ಪುಸ್ತಕೋದ್ಯಮದ ಭವಿಷ್ಯದ ಬಗ್ಗೆ ನಿರಾಶೆಯಲ್ಲಿ ನಿವೃತ್ತನಾಗುತ್ತಿದ್ದೇನೆ."ಇದು ಅತ್ರಿ ಬುಕ್ ಸೆಂಟರ್ ನ ಮಾಲೀಕ ಅಶೋಕ್ ವರ್ಧನ್ ಮಾತುಗಳು.ಈ ಮಾತುಗಳಲ್ಲೆ ಇಂದಿನ ಈ ಸ್ಥಿತಿ ಹೀಗೆ ಮುಂದುವರಿದರೆ ಭವಿಷ್ಯದ ನಿರಾಶೆಗಳ ಬಗ್ಗಿನ ಕನವರಿಕೆಗಳಿವೆ.ತಾನು ಈ ಪುಸ್ತಕ ವ್ಯಾಪಾರಕ್ಕೆ ಇಳಿದ ಬಗೆ ತಾನು ನಿವೃತ್ತಿ ಪಡೆಯ ಬಯಸುವದನ್ನ  ಅಶೋಕ್ ವರ್ಧನ್ ಹೀಗೆ ಹೇಳುತ್ತಾರೆ   "ನಾನು ಜೀವನ ನಿರ್ವಹಣೆಗೆ ಇಷ್ಟಪಟ್ಟು ಪುಸ್ತಕೋದ್ಯಮಕ್ಕೆ ಇಳಿದೆ. ಅದಿಂದು ನನ್ನ ಬಹುತೇಕ ಆರ್ಥಿಕ ಜವಾಬ್ದಾರಿಗಳನ್ನು ನೀಗಿಸಿದೆ. ಜೊತೆಗೆ ನಾನು ಬಯಸಿದ ಮತ್ತು ಧಾರಾಳ ಪಡೆದ ಸಾರ್ವಜನಿಕ ಉಪಯುಕ್ತತೆ, ಇಂದು ಕಾಲಧರ್ಮದಲ್ಲಿ ಅರ್ಥ ಕಳೆದುಕೊಳ್ಳುತ್ತಿದೆ. ಈಚೆಗೆ ದಿನದಿನವೂ ನಾನಿಲ್ಲಿ ಹನ್ನೆರಡು ಗಂಟೆ ವ್ಯರ್ಥವಾಗುತ್ತಿದ್ದೇನೆ ಎಂಬ ಭಾವ ಬಲಿಯುತ್ತಿದೆ. ಇಲ್ಲೇನಿದೆ ಎಂದು ನೋಡುವ ಕುತೂಹಲ ಮತ್ತು ಸಮಯ ಇಟ್ಟುಕೊಂಡ ಜನಗಳು ಕಳೆದುಹೋಗಿದ್ದಾರೆ. ಬರುವ ಬಹುತೇಕರೂ ಬೇರೆಲ್ಲೂ ಸಿಗದ ನಿರ್ದಿಷ್ಟ ಕೃತಿಯನ್ನಷ್ಟೇ ಅರಸುತ್ತಿರುತ್ತಾರೆ. ಅವರಲ್ಲೂ ಹಲವರು ಕೇವಲ ಚರವಾಣಿ ಹಿಡಿದ ಸೂತ್ರದ ಗೊಂಬೆಗಳು; “ಹಾಂ, ನಾ ಅತ್ರಿಯಲ್ಲಿದ್ದೇನೆ. ಯಜಮಾನರಿಗೆ ಕೊಡ್ತೇನೆ...” ಎಂಬ ಸಂಪರ್ಕ ಸೇತುಗಳು! (ನನ್ನಲ್ಲಿ ಚರವಾಣಿ ಇಲ್ಲ ಮತ್ತು ಅನ್ಯರದ್ದನ್ನು ನಾನು ಬಳಸುವುದಿಲ್ಲ) ಅಂಗಡಿಯ ನಾವು ಉಂಟು, ಇಲ್ಲ ಎಂದರೆ ಸುಲಭದಲ್ಲಿ ನಂಬುವವರಲ್ಲ. ‘ಕಂಪ್ಯೂಟರಿಗೆ ಹಾಕಿ’ (ನನ್ನ ಗಣಕದಲ್ಲಿ ಲೆಕ್ಕಾಚಾರದ ದಾಖಲೆಗಳು ಮಾತ್ರ ಇವೆ), (ಇವರ ಒಂದು ಪ್ರತಿಯ ಅಗತ್ಯಕ್ಕೆ) ‘ಮರುಮುದ್ರಣ ಮಾಡಿ’, (ಬೆಲೆ ಹೆಚ್ಚು ಎಂದನ್ನಿಸಿದಾಗ) ‘ಹಳೇ ಪ್ರಿಂಟ್ ಇಲ್ವಾ’ ಅಥವಾ ‘ಆನ್ ಲೈನ್ ದರ...’ ಉಲ್ಲೇಖಿಸುವ ಮೋಸ್ಟ್ ಮಾಡರ್ನ್‌ಗಳು! ಔಟ್ ಡೇಟೆಡ್ ವ್ಯವಸ್ಥೆಯಾಗಿ, ಕೇವಲ ಹಳಬರ ಸ್ವೀಟ್ ಮೆಮೊರೀಸ್ ಸಂಕೇತವಾಗಿ ಉಳಿಯುವ ಬದಲು, ಸಾರ್ವಜನಿಕ ವೃತ್ತಿರಂಗದಲ್ಲಿರುವ ‘ಸ್ವಯಂ ನಿವೃತ್ತಿ’ಯನ್ನು ನಾನೂ ಬಯಸಿದ್ದೇನೆ!"ಇವಿಷ್ಟೆ ಮಾತುಗಳಲ್ಲಿ ಇಂದಿನ ನಮ್ಮಗಳ ಪುಸ್ತಕ ಪ್ರೇಮ ಮುಂದಿನ ಈ ಬಗ್ಗಿನ ಪುಸ್ತಕ ವ್ಯಾಪಾರಿಗಳ ಭವಿಷ್ಯ ಎಲ್ಲವೂ ವೇದ್ಯ.



ಉಲ್ಲಾಸ ಕಾರಂತರ ಸಂಪರ್ಕ ಹೊಂದಿರುವ ಅಶೋಕ್ ವರ್ಧನ್ ಅವರು ತನ್ನ ನಿವೃತ್ತ ಜೀವನವನ್ನು ವನ್ಯ ಜೀವಿ ಸಂರಕ್ಷಣೆಯಲ್ಲಿ ತೊಡಗಿಸಬೇಕೆಂದಿದ್ದಾರೆ, ಅವರಿಗೆ ಈ ಕಾರ್ಯಗಳಲ್ಲಿ ಯಶ ಸಿಗಲೆಂದು ಅನಿವಾರ್ಯವಾಗಿ ಹಾರೈಸಲೇಬೇಕಾಗಿದೆ.ಈ ಹಿಂದೆ ಹಲವಷ್ಟು ಚಳುವಳಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು ಅನುಭವ ಹೊಂದಿರುವ ಇವರಿಗೆ ವಯಸ್ಸಿನ ಪರಿಧಿಯ ಧಾಟಿ ಯಶ ಪಡೆಯುವ ಸಾಮರ್ಥ್ಯ ಚೈತನ್ಯ ಎರಡೂ ಇದೆ. ನನ್ನ ನೋವೇನೆಂದರೆ ಒಂದು ಒಳ್ಳೆಯ ಪುಸ್ತಕ ತಾಣ ನನ್ನಂತೆ ಅಳಿದುಳಿದ ಪುಸ್ತಕ ಪ್ರೇಮಿಗಳಿಂದ ದೂರವಾಗುತ್ತಿದೆ ಅನ್ನೋದು.ಸಾದ್ಯವಾದರೆ ಮಾರ್ಚ್ 31 ರ ಮೊದಲು ಕೊನೆಯ ಸಲವಾಗಿ ಅತ್ರಿ ಬುಕ್ ಸೆಂಟರ್ ನ ಒಂದಷ್ಟು ಪುಸ್ತಕ ನೆನಪಿಗೋಸ್ಕರ ನನ್ನದಾಗಿಸಿಕೊಳ್ಳಬೇಕೆಂದಿರುವೆ. ಸದ್ಯಕ್ಕೆ ನಾನು ಮಾಡಬಹುದಾದ್ದು ಇಷ್ಟೆ.ಪುಸ್ತಕ ಪ್ರೇಮ ಇದ್ದವರು ಅದ ಉಳಿಸಿ ಬೆಳೆಸೋಣ.


ಅಶೋಕ್ ವರ್ಧನ್ ಈ ಬಗ್ಗೆ ಬರಕೊಂಡಿದ್ದನ್ನು ಓದಲು ಇಲ್ಲಿ ಕ್ಲಿಕ್ಕಿಸಿ

ನಿಮ್ಮವ..........
ರಾಘವೇಂದ್ರ ತೆಕ್ಕಾರು

No comments:

Post a Comment