Tv9 ನೀವು ಹೇಳಿದ್ದು ನಾವು ಕೇಳಿದ್ದು.
Wednesday, August 31, 2011
Tuesday, August 30, 2011
ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಅಣ್ಣನ ನೆನಪು ಪುಸ್ತಕದಿಂದ ಆಯ್ದ ಭಾಗ
ಶಿವಮೊಗ್ಗಾದಿಂದ ಎರಡು ನಾಯಿಮರಿಗಳು ನಮ್ಮ ಮನೆಗೆ ಬಂದಾಗ ನಮ್ಮ ಬಹುದಿನಗಳ ಕನಸು ನನಸಾದುದಕ್ಕೆ ಆದ ಹಿಗ್ಗು ಅಷ್ಟಿಷ್ಟಲ್ಲ. ಮನೆಗಳಲ್ಲಿ ಸಾಕಲು ನಾಯಿಮರಿಗಳಿಲ್ಲದ ನತದೃಷ್ಟ ಸ್ಕೂಲು ಮಿತ್ರರನೇಕರು ನಮ್ಮೊಡನೆ ದಿನಾ ಸಂಜೆ ಬಂದು ನಾಯಿಮರಿಗಳನ್ನು ನೋಡಿಕೊಂಡು ಅವುಗಳನ್ನು ಪ್ರಶಂಶಿಸಿ ಹೋಗುತ್ತಿದ್ದರು. ಮನೆಯೆದುರು ಬೀದಿಗಳಲ್ಲಿ ಆಡುತ್ತಿದ್ದ ನಮ್ಮ ಆಟಗಳೆಲ್ಲಾ ತಾತ್ಕಾಲಿಕವಾಗಿ ಖೈದಾಗಿ ಸ್ಕೂಲಿನಿಂದ ಬಂದ ಕೂಡಲೆ ನಾಯಿ ಮರಿಗಳ ಜೊತೆ ಆಟವಾದಲು ಶುರುಮಾಡುತ್ತಿದ್ದೆವು, ಅವುಗಳಿಗೆ ಸತತವಾಗಿ ತಿಂಡಿ ತಿನ್ನಿಸುವುದೊಂದೇ ಪ್ರೀತಿಯನ್ನು ವ್ಯಕ್ತಪಡಿಸುವ ವಿಧಾನವೆಂದು ನಾವು ತಿಳಿದಿದ್ದುದ್ದರಿಂದ ನಮಗೆ ಕೊಟ್ಟ ತಿಂಡಿ ತೀರ್ಥಗಳಲ್ಲಿ ಸಾಕಷ್ಟು ಅವಕ್ಕೇ ವ್ಯಯವಾಗುತ್ತಿದ್ದು, ಅವುಗಳ ಹೊಟ್ಟೆ ಯಾವಾಗಲೂ ಗುಡಾಣದಂತೆ ಊದಿಕೊಂಡಿರುತ್ತಿತ್ತು. ಯಾರಾದರೂ ಹಿಡಿದೆತ್ತಿದರೆ ಅವು ಉಸಿರಾಡಲೂ ಕಷ್ಟಪಡುತ್ತಾ ತಿಣುಕುತ್ತಿದ್ದವು.
ಕಟ್ಟೆ ಮಂದಿಯ ನಾಯಿ ಮೀಮಾಂಸೆ
ಊರ ಕಟ್ಟೆಯ ಮೇಲಿನ ಚರ್ಚೆಗಳಿಗೆ ಅಂತ್ಯವೇ ಇಲ್ಲ,ಸಿದ್ದನ ವಿಚಾರ ಧಾರೆಗಳಿಗೂ ಬರವಿಲ್ಲ,ಸದಾ ಬಿಸಿ ಬಿಸಿ ಸುದ್ದಿಯನ್ನೇ ಹೊತ್ತು ತರುವ ರಾಘ್ಯ ಸಿದ್ದನ ವಿಮರ್ಶೆಗಳಿಗಾಗಿ ತಡಪಡಿಸುತ್ತಾನೆ, ಕಟ್ಟೆ ಮ್ಯಾಗೆ ಊರ ಅಜ್ಜ ಇರ್ತಾನೆ,ವೆಂಕ,ಎತ್ತಿನ ಗಾಡಿ ಓಡಿಸುವ ಬಸವ,ಬುಟ್ಟಿ ಹೆಣೆಯುವ ವಾರಿಜ, ಸೈಕಲ್ ಟಯರ ಓಡಿಸುವ ಹಳ್ಳಿ ಹೈಕಳು,ಕೆಲಸ ಮುಗಿಸಿ ಬಂದು ಹರಟೆ ಹೊಡೆಯ/ಕೇಳ ಕುಂತಿರುವ ಮಂದಿ ಎಲ್ಲ ಸೇರುತ್ತಾರೆ,ಕಟ್ಟೆಯ ಪಕ್ಕದ ಅಂಗಡಿಯ ಮಾಧವನಲ್ಲಿ ಅತಿ ಚಟುವಟಿಕೆ ಈ ಸಮಯದಲ್ಲಿ ಕಂಡುಬರುತ್ತದೆ. ಅದೇನೋ ರಾಜಕೀಯ ಮಂದಿಯೇ ಹೆಚ್ಚಿನ ಚರ್ಚಾ ವಸ್ತುವಾಗಿ ಬಳಕೆಯಾಗುವದು ಇಲ್ಲಿನ ವಿಶೇಷ.ಚರ್ಚೆಯು ಮುಗ್ದತೆ ಹಾಗು ಸ್ವಾರಸ್ಯದಿಂದ ಕೂಡಿರುವದರಲ್ಲಿ ಸಂಶಯವಿಲ್ಲ.ಇದಿಷ್ಟು ಊರ ಕಟ್ಟೆಯ ಸ್ಥೂಲ ಪರಿಚಯ.
ಮೊದಲ ಬಾರಿಗೆ ರಾಜಕೀಯದ ಹೊರತಾದ ನಾಯಿಗಳಿಗಾಗಿ ಅಂತ ಸ್ಪರ್ಧೆ ಮಡಿಕೇರಿ ಹಾಗು ಮೈಸೂರ್ ನಲ್ಲಿ ನಡೆಯಿತು ಎಂಬ ವಿಬಿನ್ನವಾದ ವಿಸಿಯ ಎತ್ತಿದ್ದ ರಾಘ್ಯ.ಅವಕ್ಕೇನು ಸ್ಪರ್ದೆ ನಿಂಗೆ ಮಾಡಕ್ಕೆ ಬದುಕಿಲ್ವೇನ್ಲ ಹೋಗೋಗಿ ಎಂಥ ವಿಸಿಯ ಹೇಳ್ತಿಯಾ ನಮ್ಬುವತದ್ದನ್ನು ಹೇಳ್ದ್ರೆ ದಿಟ ಅನ್ಬೋದು ನೋಡ್ಲ ಅಂತ ವಾರಿಜ ನಂಗೆ ಶುರುಹಚ್ಚಿ ಕೊಂಡಿದ್ದಳು.ಅವಳ ಮಾತಿನ ಟೋನಿಗೆ ಸರಿಯಾಗಿ ಗೂಟಕ್ಕೆ ಕಟ್ಟಿದ್ದ ಅವಳ ನರಪೇತಾಲ ನಾಯಿ ಊರೂ ಒಂದು ಮಾಡುವಂತೆ ಘೀಳಿಡ ಅರಂಬಿಸಿತು, ಅಜ್ಜ, ವಾರಿಜನೋ ನಾಯಿಯೋ ಕುಗುತ್ತಿರುವದು ತಿಳಿಯದೆ ಕಣ್ಣು ಮಿಟುಕಿಸುತ್ತಿರುವಾಗಲೇ ಸಿದ್ದ ವಾರಿಜಗೆ ಸುಮ್ಕಿರೆ ಅದು ನಿನ್ನ ನಾಯಿ ತರದ್ದಲ್ಲ ಸಾವಿರ ,ಲಕ್ಷ ರೂಪಾಯಿ ಕೊಟ್ಟು ಕೊಂಡ್ಕೊಂಡಿರುತ್ತಾರೆ,ಬುದ್ದಿ ಕಲ್ಸಿರುತ್ತಾರೆ,ಸಾಕಲು ಸಾವಿರಾರು ರೊಕ್ಕ ಸುರಿತಾರೆ ,ವಾರ ವಾರ ಡಾಕ್ತೋರು ತಾವ ಕರ್ಕೋ ಹೋಇತಾರೆ,ಅದಕ್ಕೆ ವಿಶೇಷ ತಿಂಡಿ ತರ್ತಾರೆ, ವಿಸಿಯ ಗೊತ್ತಿಲ್ಲ ಅಂದ್ರೆ ತಿಳ್ಕೋ ಈಗ ಬಾಯಿ ಮುಚ್ಚಿ ಕೂತ್ಕೋ ಅನ್ಬೇಕದ್ರೆ ವಾರಿಜ ಪೆಚ್ಚಾಗಿ ಅಜ್ಜನ್ ಮುಖ ನೋಡಿದಳು,ಅವಳ ನಾಯಿ ಬಾಲ ಮುದುರಿ ಮಣ್ಣು ಕೆರೆದು ಅಡ್ದಾಗಿತ್ತು.ಸಿದ್ದನ್ ಖದ್ರೆ ಅಂತದ್ದಿತ್ತು ವಿಸಿಯಕ್ಕ್ ಬಂದ ಅಂದ್ರೆ ಮಂದಿ ಕೇಳಕ್ಕೆ ಕುರ್ತಿದ್ರೆ ಹೊರತಾಗಿ ಮಾತಾಡ್ತಾ ಇರ್ಲಿಲ್ಲ,ಅದಕ್ಕೆ ಈ ರಾಘ್ಯ ಇವನ ತಾವ ಬರ್ತಿದ್ದ ವಿಸಿಯ ಹಂಚಕೊಳ್ತಿದ್ದ.
ವೆಂಕ ಆಶ್ಚರ್ಯ ಚಕಿತನಾಗಿ ಹಿಂಗು ಐತೇನ್ಲಾ? ಅಂತಕೇಳಿದ್ದ.ಹೂ ಮತ್ತೆ.......ಅಂದ ಸಿದ್ದ ಮುಂದುವರಿದು ಮಿನಿಯೇಚರ್, ಪಿನ್ಸ್ಚರ್, ಟಿಬೆಟಿಯನ್, ಟೆರಿಯರ್, ಮುಧೋಳ್, ಬ್ಯಾಸೆಟ್ ಹೌಂಡ್, ಬೀಗಲ್, ಡ್ಯಾಶಂಡ್, ಫಾಕ್ಸ್ಹೌಂಡ್, ರೋಡೆಶಿಯನ್, ರಿಡ್ಜ್ಬ್ಯಾಕ್, ಐರಿಷ್ರಿಟೈವಲ್, ಅಮೆರಿಕನ್ ಸ್ಟಾನಿಯಲ್, ವೈನರ್, ಬುಲ್ಡಾಗ್, ಫ್ರೆಂಚ್ಬುಲ್ಡಾಗ್, ಮಿನಿಯೇಚರ್ ಸ್ಕಾನಜರ್, ಶಿಷ್ಟ್ಸೂ, ಬುಲ್ ಮಾಸ್ಟಿಫ್, ಡಾಬರ್ಮ್ಯಾನ್, ಸೈಬೀರಿಯನ್ ಹಸ್ಕೀ, ಜರ್ಮನ್ ಶಫರ್ಡ್, ಗ್ರೇಟ್ಡೆನ್, ಸೆಂಟ್ ಬರ್ನಾಡ್ ಹೀಗೆ ಸಾವಿರಾರು ಜಾತಿ ನಾಯಿ ಗಳನ್ನೂ ದೊಡ್ಡ ಮಂದಿ ಸಾಕ್ತಾರೆ,ಸಿದ್ದನ್ ವಿಚಾರ ಸಾಮರ್ಥ್ಯ ಕಂಡು ಅಬ್ಬಾಬ್ಬ.........!!!!!! ಅನ್ನೋ ಉದ್ಗಾರ ಅಜ್ಜನ್ ಬಾಯಿನಲ್ಲಿ ಹೊರಟಿತ್ತು .ಅಲ್ಲಲೇ ಸಿದ್ದ ಊರಾಗೆ ಈ ಪಾಟಿ ನಾಯಿ ಅವೇ,ಎಲ್ಲಾ ಬಿಟ್ಟು ಅದ್ಯಾಕಲ ಈ ಮಂದಿಗೆ ಈ ಫಾರಿನ್ ನಾಯಿಗಳ ಉಸಾಬರಿ,ಅವಕ್ಕೆ ಡಾಕ್ಟರು ,ಬೇರೇನೆ ತಿಂಡಿ ಎಲ್ಲಾ ಯಾಕ್ಲಾ ಎಂಬ ಪ್ರಶ್ನೆ ನನ್ನದಾಗಿತ್ತು.ಯಾವತ್ತೋ ಒಮ್ಮೆ ಅಬುಬಕ್ಕರ್ ಪಂಡಿತನ ಹತ್ರ ಔಸದ ತೆಗೊಳೋ ನಿಂಗೆ ಆಸ್ಪತ್ರೆ ಬೇಡ ಅಂದ್ರೆ ಅವಕ್ಕೆ ಬೇಡ ಅಂತ ಅನ್ನಕ್ಕಾಗಲ್ಲ ಅಂತ ಸಮದಾನವಾಗೆ ಉತ್ತರಿಸ ಆರಂಬಿಸಿದ ಸಿದ್ದ, ಪೇಟೆ ಜನ ನಾಯಿ ಅಂದ್ರೆ ಮನೆ ಮಂದಿ ತರ ನೋಡ್ಕೊತಾರೋ!!!ಮನೆ ಎಲ್ಲಾ ಓಡಾಡ್ತವೆ ,ಮಂದಿ ಮಲಗೋ ಮಂಚದಾಗ ಮಂದಿ ಜೊತೆ ಮಲಗ್ತಾವೆ ,ಮಂದಿ ಜನ ನಾಯಿನ ಎತ್ತಿಕೊಳ್ಳುತ್ತಾರೆ ,ಮುದ್ದಿಸ್ತಾರೆ,ಇನ್ನೇನೇನೋ ಮಾಡ್ತಾರೆ.ಹಾಗಿರುವಾಗ ಅವೆಲ್ಲ ಉಸಾರಿರಬೇಕಲ್ಲ ಅದಕ್ಕೆ ಡಾಕ್ಟರ ತಾವ ಆಗಾಗ ಕರ್ಕೋ ಹೋಗ್ತಾರ ,ಹುಚ್ಚು ಹಿಡೀದಿರ್ಲಿ ಅಂತ ಸೂಜಿ ಚುಚ್ಚಿಸ್ತಾರೆ,ಒಟ್ಟಿನಲ್ಲಿ ನಾಯಿ ಸಾಕುವದು ಪೇಟೆ ಮಂದಿ ಫ್ಯಾಸನ್ ಕಣ್ಲ,ಇರುವೆ ನೋಡಿ ಹೆದರೋ ಪೇಟೆ ಹೆಣ್ಣು ಹೈಕಳು ನಾಯಿನ ಮಾತ್ರ ಎತ್ಕೊಂಡು ಮುದ್ದಾಡಿಸದೆ ಇರೋಲ್ಲ ಅರ್ಥ ಆಯ್ತಾ ಅಂದ.ಥೂ........ಅಂದು ಕಟ್ಟೆ ಬದಿ ಕಾಲೆತ್ತಿ ನಿಂತ ತನ್ನ ನಾಯಿಗೆ ಕಲ್ಲೆಸೆದು ತನ್ನ ಕೆಲಸದಲ್ಲಿ ತೊಡಗಿಕೊಂಡಳು ವಾರಿಜ , ನಾನು ಸಿದ್ದ ಅರ್ಥ ಆಯ್ತಾ ಅಂದಿದಕ್ಕೆ ಆಯಿತು ಅಂದು ಬೇರೇನೂ ಹೇಳ್ಬೇಕುಂತ ಗೊತ್ತಾಗದೆ ಹಲ್ಲಿಗೆ ಕಡ್ಡಿ ಎತ್ಕೊಂಡು ಚುಚ್ಚುತ್ತಾ ಕೂತೆ.
ನಾಯಿ ಸೌಬಾಗ್ಯ ನೆನೆಸುತ್ತ ಮರಕ್ಕೊರಗಿದ್ದ ಬಸವ ದಡಕ್ಕನೆ ಎದ್ದು ಅಲ್ಲಲೇ ಅವು ಬೀದಿ ತಿರ್ಗಲ್ಲ್ವೆನ್ಲಾ?ಮನೆಯೊಳಗೇ ಇರ್ತಾವ.ಇಲ್ಲಲೇ ದಿವ್ಸಕ್ಕೆರಡು ಬಾರಿ ದೊಡ್ಡವರೆಲ್ಲ ಅದೇ ವಾಕಿಂಗ್ ಅಂತ ಹೋಗಲ್ವೇನ್ಲ ಅವಾಗ ಕರ್ಕೋ ಹೋಇತಾರೆ ,ಅವಾಗ್ಲೇ ಇವು ಕೊರೋದು, ಕಾಲೆತ್ತೋ ಕೆಲಸ ಎಲ್ಲಾ ಮುಗಿಸ್ಕೊಬೇಕು,ಯಾವಾಗ್ ಬೆಕಾದ್ರಾವಾಗ ಹೋಗೋ ಹಂಗಿಲ್ಲ. ಹಾಗೆ ವರ್ಷಕ್ಕೊಮ್ಮೆ ಇವುಗಳನ್ನು ಮನೆ ಇಂದ ಹೊರ ತಂದು ಇಂತ ಸ್ಪರ್ದೆ ಏರ್ಪಡಿಸಿ ಶೋಕಿ ತೋರಿಸ್ತಾರೆ ಜನ,ಅವುಗಳ ಜೀವನ ಕೂಡ ಕಷ್ಟ ಕಣ್ಲೇ ಅಂದ ಸಿದ್ದ.ಪಾಪ ಪೇಟೆಯ ಬಗ್ಗೆ ಆಸಕ್ತಿ ಹೊಂದಿದ್ದ ವೆಂಕ ಪೇಟೆಯಾಗೆ ಬೀದಿ ಸ್ವಚ್ಛ ಮಾಡೋ ಮಂದಿ ಪಾಡು ನೆನೆಸ್ಕೊತಿದ್ದ.ಈ ನಾಯಿ ವಿಸಿಯ ಕೇಳಿದ ಅಜ್ಜ ನಮ್ಮೂರ ನಾಯಿಗಳ ಪಾಡು ನೆನೆಸಿ ಹಾಗು ಅವುಗಳ ತಳಿ ನಾಶವಾಗುತ್ತಿರುವ ಬಗ್ಗೆ ಯೋಚಿಸಿ ಬಾಯಲ್ಲಿ ಲೊಚ್........ಎಂದು ಕನಿಕರಿಸಿದ.ಕೆಲ ಮಂದಿ ನಾಯಿ ಗುಂಗಲ್ಲೇ ಬೀಡಿ ನೆನಸಿ ಮಾಧವನ ಅಂಗಡಿ ಕಡೆ ಹೆಜ್ಜೆ ಹಾಕಿದರು.
ಇಂತೂ ಸಿದ್ದನ್ ಗೆಳೆಯ ರಾಘ್ಯ.
ಬ್ಲಾಗ್ ದಾರರ ಬಗ್ಗೆ ಒಂದಿಷ್ಟು.
ಇಂಗ್ಲೀಷಿನ ಪದ 'ವೆಬ್ ಲಾಗ್' ಎಂಬುವುದರ ರೂಪಾಂತರ 'ಬ್ಲಾಗ್'. ಬ್ಲಾಗ್ ಎಂದರೆ ಎನೋ ಒಂದಷ್ಟು ಬರೆದಿಟ್ಟದ್ದು ಎಂಬರ್ಥ ಬರುವಂತೆ. ಬರೆದದ್ದು ಸಾಹಿತ್ಯವೇ ಆಗಿರಬೇಕಿಲ್ಲ. ಮನಸ್ಸಿಗೆ ತೋಚಿದ್ದು ಬರೆದಿಟ್ಟರೂ ಅದೊಂದು ಬ್ಲಾಗ್ ಆದೀತು. ದಿನ ನಿತ್ಯ ಡೈರಿಯಲ್ಲಿ ಬರೆದಿಡುವ ಹವ್ಯಾಸ ಹಲವರಿಗಿದ್ದೀತು. ಡೈರಿಯಲ್ಲಿ ಬರೆದಿಡುವುದರ ಡಿಜಿಟಲ್ ರೂಪಾಂತರ - 'ಬ್ಲಾಗ್'. ಆದರೆ ಕಾಲಕ್ರಮೇಣ ಬ್ಲಾಗ್ ಎನ್ನುವುದು ಮನಸ್ಸಿಗೆ ತೋಚಿದ್ದನ್ನು ಬರೆದಿಡುವುದಷ್ಟಕ್ಕೇ ಸೀಮಿತವಾಗದೆ ಗಂಭೀರ ಚಿಂತನೆ, ಸಾಹಿತ್ಯ, ತಂತ್ರಜ್ಞಾನ ಕುರಿತ ವಿಷಯಗಳಿಗೆ ಕೂಡ ವಿಸ್ತಾರಗೊಂಡಿದೆ. ಬ್ಲಾಗ್ ಎಂಬುದು ಬರೆಯುವದಷ್ಟಕ್ಕೆ ಸೀಮಿತವಾಗದೆ ತಮಗಿಷ್ಟವಾದ ಲೇಖನ ಕವಿತೆಗಳನ್ನು ಸಂಗ್ರಹಿಸಿ ತಮ್ಮಜೊತೆ ಇತರರಿಗೂ ತೋರಿಸುವ ತಾಣವಾಗಿ ಮಾರ್ಪಟ್ಟಿದೆ.ಇಂಟರ್ನೆಟ್ಟಿನಲ್ಲಿ ಈಗ ಎಲ್ಲೆಲ್ಲೂ ಬ್ಲಾಗುಗಳು ಕಾಣಸಿಗುವುದು. ಹುಡುಕಿದರೆ ಪ್ರತಿಯೊಂದು ವಿಷಯದ ಬಗ್ಗೆಯೂ ಒಂದೊಂದು ಬ್ಲಾಗ್ ಸಿಗುವುದು. ವಿವಿಧ ಭಾಷೆಗಳಲ್ಲೂ ಬ್ಲಾಗುಗಳಿವೆ.ಕನ್ನಡ ಭಾಷೆಯೊಂದರಲ್ಲೇ ಈಗ ಸಾವಿರಾರು ಬ್ಲಾಗು ಗಳಿವೆ. ಇಂಗ್ಲೀಷಿನಲ್ಲಿ ಮಿಲಿಯನ್ನುಗಟ್ಟಲೆ ಬ್ಲಾಗುಗಳಿವೆ.ಬ್ಲಾಗ್ ಅಂದಾಕ್ಷಣ ಬರೆದದ್ದೆಲ್ಲವೂ ಎಲ್ಲರಿಗೂ ಕಾಣಲೇಬೇಕು ಎಂದಿಲ್ಲ. ಗೆಳೆಯರೊಂದಿಗೆ ಮಾತ್ರ ಹಂಚಿಕೊಳ್ಳುವ ಸೌಲಭ್ಯ ಕೂಡ ಉಂಟು.
Monday, August 29, 2011
ನಾವು ಮೊಬೈಲನ್ನು ಸುರಕ್ಷಿತವಾಗಿ ಬಳಸುತಿದ್ದೇವ?
ಮೊಬೈಲಿನ ಮೊದಲಿಗೆ ಬರಿಯ ಮಾತಾಡುವದಕ್ಕೆ ಮತ್ತು ಮೆಸೇಜ್ ಗಾಗಿ ಮಾತ್ರ ಬಳಕೆಯಗುತಿತ್ತು, ಅದರೆ ಈಗ ಸ್ಮಾರ್ಟ್ ಫೊನ್ ಜಮಾನ.ಅಲ್ಲದೆ ಸೋಷಲ್ ನೆಟ್ ವರ್ಕ್ ಬರಾಟೆಯು ಕೂಡಾ ಜೋರಿದೆ. ಪ್ರತಿ ಒಬ್ಬನ ಕೈಗೂ ವಯಸ್ಸಿನ ಭೇದವಿಲ್ಲದೆ ಮೊಬೈಲು ಬಂದಿದೆ.ಒಂದು ಸಂಶೋದನೆಯ ಪ್ರಕಾರ ೧೦೦ ಕ್ಕೆ ೭೦ ಶೇಕಡಾ ಜನರು ತಮ್ಮ ಮೊಬೈಲ್ನಲ್ಲಿ ಇಂಟರ್ನೆಟ್ ಉಪಯೊಗಿಸುತಿದ್ದಾರೆ.ಮೊಬೈಲನ್ನು ಒಂದು ನಿಮಿಷವು ಬಿಟ್ಟಿರಲಾರದಂತೆ ಮೊಬೈಲ್ ಜೊತೆಗಿನ ಭಾಂದವ್ಯ ಈಗಿನ ತಲೆಮಾರಿನವರಲ್ಲಿ ಬೆಳೆದಿದೆ. ಈ ಮೊಬೈಲ್ ನಮಗೆಷ್ಟು ಹಿತ ಎಂಬುದನ್ನು ಅರಿಯಲು ಗೊಗಲ್ನಲ್ಲಿ ಹೀಗೆ ಕಣ್ಣಾಡಿಸಿದಾಗ ಸಿಕ್ಕ ವಿಚಾರಗಳು ನೋಡಿ ನಿಮಗೂ ತಿಳಿಸೋಣವೆಂದು,ನನಗೆ ಸಿಕ್ಕಿದ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ದಾಖಲಿಸುತಿದ್ದೇನೆ.
ಇತ್ತೀಚಿನ ಹೆಚ್ಚಿನೆಲ್ಲಾ ರಿಸರ್ಚಗಳ ಪ್ರಕಾರ ಕೆಲವು ಅರೋಗ್ಯ ಸಂಭಂದಿ ಹಾನಿಗಳು!!!!!!!! ಅತಿಯಾದ ಮೊಬೈಲು ಬಳಕೆಯಿಂದಾಗುತ್ತದೆ ಅಂತ ಹೇಳುತ್ತವೆ .ಹಾಗಾದರೆ ಆ ಹಾನಿಗಳೇನು ಎಂಬುದನ್ನು ಕೆಳಗೆ ನಮೂದಿಸಿದ್ದೇನೆ ಒಮ್ಮೆ ಓದಿಕೊಳ್ಳಿ...............
ನುಡಿ ನಮನ,ರಾಮಕೃಷ್ಣ ಹೆಗಡೆಯವರ ನೆನಪಲ್ಲಿ, ಇಂದು ಅವರ ಜನ್ಮದಿನ .
ಮಹಾಬಲೇಶ್ವರ ಹೆಗ್ಡೆ ಹಾಗು ಸರಸ್ವತಿ ಹೆಗ್ಡೆ ದಂಪತಿಗಳಿಗೆ ಆಗಸ್ಟ್ -೨೯-೧೯೨೬ ರಲ್ಲಿ ಹುಟ್ಟಿದ ಪುತ್ರ ರಾಮಕೃಷ್ಣ ಹೆಗ್ಡೆ.ರಾಜ್ಯ ಕಂಡ ಅತ್ಯಂತ ಸಜ್ಜನಿಕೆಯ ಹಾಗು ಮೌಲ್ಯಾದಾರಿತ ರಾಜಕಾರಣಿಯಲ್ಲಿ ಒಬ್ಬರು.ಉತ್ತರ ಕನ್ನಡದ ಸಿದ್ದಾಪುರ ಇವರ ಹುಟ್ಟಿದ ಊರು.ಪ್ರಾಥಮಿಕ ಶಿಕ್ಷಣ ಶಿರಸಿಯಲ್ಲಿ, ಮುಂದೆ ಇವರು ಕಾಶಿ ವಿದ್ಯಾಪೀಠ, ಬನಾರಸ್ ಹಾಗು ಲಕ್ನೋ ಯುನಿವರ್ಸಿಟಿ ಗಳಲ್ಲಿ ಓದಿ LLB ಪದವಿ ಪಡೆದಿದ್ದರು.ಅತಿ ಸಣ್ಣ ವಯಸಲ್ಲೇ ಹೋರಾಟದ ಕಡೆಗೆ ಬಾಗಿದ ಇವರು ೧೯೪೨ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಬಾಗವಹಿಸಿದ್ದರು,ತನ್ನ ೨೦ನೇ ವಯಸಲ್ಲೇ ರೈತ ಚಳುವಳಿಯನ್ನು ರಾಜ್ಯದಲ್ಲಿ ರೂಪಿಸಿದ ಕೀರ್ತಿ ರಾಮಕೃಷ್ಣ ಹೆಗಡೆಯವರಿಗೆ ಸಲ್ಲುತ್ತದೆ. ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ೧೯೫೪ ರಲ್ಲಿ ರಾಜಕೀಯಕ್ಕೆ ಪ್ರವೇಶವಾದ ಇವರು ೧೯೫೭ರಲ್ಲಿ ಮೊದಲ ಬಾರಿಗೆ ಕರ್ನಾಟಕ ವಿಧಾನ ಸಭೆಗೆ ಆಯ್ಕೆಯಾದರು. ಇ೦ದಿರಾಗಾ೦ಧಿ ೧೯೭೫ ರಲ್ಲಿ ರಾಷ್ಟ್ರದ ಮೇಲೆ ಹೇರಿದ ತುರ್ತುಪರಿಸ್ಥಿತಿಯನ್ನು ವಿರೋಧಿಸಿ, ಜೈಲುವಾಸವನ್ನು ಕ೦ಡು, ಹೊರಬಂದ ನಂತರ ಜನತಾ ಪಾರ್ಟಿಯನ್ನು ಸೇರಿದ್ದರು. ೧೯೮೩ರಲ್ಲಿ ರಾಜ್ಯಾದ ಭಾರತೀಯ ಜನತಾ ಪಾರ್ಟಿಯ ೧೮ ಶಾಸಕರ ಬೆಂಬಲದೊಂದಿಗೆ ರಾಜ್ಯದ ಮುಖ್ಯಮಂತ್ರಿಯಾದ ಇವರು ದೇಶದ ಮೊದಲ ಕಾಂಗ್ರೆಸ್ಸ್ಯೇತರ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು.೧೯೮೫ರಲ್ಲಿ ನಡೆದ ರಾಜ್ಯದ ಸ್ಥಳೀಯಾ ಸಂಸ್ಥೆಗಳ ಚುನಾವಣೆಗಳಲ್ಲಿ ತನ್ನ ಪಕ್ಷದ ಸಾಮಾನ್ಯ ಗೆಲುವನ್ನು ಕಂಡ ರಾಮಕೃಷ್ಣ ಹೆಗಡೆ ಪಕ್ಷದ ಸೋಲಿನ ನೈತಿಕ ಜವಾಬ್ದಾರಿಯನ್ನು ಹೊತ್ತು ತನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು ಹಾಗು ಆ ವರ್ಷ ನಡೆದ ವಿದಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಆರಿಸಿ ಬಂದ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕಿಸಿದರು, ಹೇಳಿ ಕುರ್ಚಿಗಾಗಿ ಬಡಿದಾಡುವ ಇಂದಿನ ರಾಜಕಾರಣಿಗಳಲ್ಲಿ ರಾಮಕೃಷ್ಣ ಹೆಗ್ಡೆ ಅವರ ಈ ನಡೆಯನ್ನು ನಿರೀಕ್ಷಿಸಲು ಸಾದ್ಯವೇ?ಪಂಚಾಯತ್ ರಾಜ್ ಕಾನೂನಿನಲ್ಲಿ ಹೆಗಡೆಯವರ ಪಾತ್ರ,ಲೋಕಾಯುಕ್ತ ವ್ಯವಸ್ಥೆಯನ್ನು ರಾಜ್ಯಕ್ಕೆ ಒದಗಿಸಿದ ರಾಮಕೃಷ್ಣ ಹೆಗಡೆಯವರ ಪಾತ್ರ, ರೈತರಿಗೆ ಸಾಲ ಮನ್ನ, ಕಡಿಮೆ ಬಡ್ಡಿ ಸಾಲ ಮುಂತಾದವು ರಾಜಕಾರಣ ಅಂದ ಕೂಡಲೇ ನನ್ನ ನೆನಪಿಗೆ ಬರುವಂತದ್ದು.
ಪತ್ರಕರ್ತ ಆಗಬಯಸಿದ್ದರು
ಹೆಗಡೆ ಅವರಿಗೆ ಪತ್ರಕರ್ತ ಆಗಬೇಕೆಂಬ ಮಹದಾಸೆ ವಿದ್ಯಾರ್ಥಿ ದೆಸೆಯಿಂದಲೂ ಇತ್ತು. ಶಿರಸಿ ಮಾರಿಕಾಂಬ ಹೈಸ್ಕೂಲ್ನಲ್ಲಿ ಕಲಿಯುತ್ತಿದ್ದಾಗ ಕೈಬರಹದ ಪತ್ರಿಕೆ ‘ಹೂವಿನ ಸರ’ಕ್ಕೆ ಲೇಖನ ಬರೆಯುತ್ತಿದ್ದರು. ಬನಾರಸ್ವಿದ್ಯಾಪೀಠದಲ್ಲಿ ಪದವಿ ವ್ಯಾಸಂಗ ಮಾಡುವಾಗಲೂ ಸ್ಥಳೀಯ ಪತ್ರಿಕೆಗಳಲ್ಲಿ ಅವರ ಲೇಖನ ಪ್ರಕಟವಾಗುತ್ತಿದ್ದವು. ಕರ್ನಾಟಕಕ್ಕೆ ಮರಳಿದ ಹೆಗಡೆ ನಂತರ ಕಾಲದ ಹೊರಳಿಗೆ ಸಿಕ್ಕು, ರಾಜಕೀಯದತ್ತ ಮುಖ ಮಾಡಿದರು. ಪತ್ರಕರ್ತನಾಗಲಿಲ್ಲ ಎಂದು ಬಹಳ ಸಾರಿ ನೊಂದುಕೊಂಡಿದ್ದೂ ಉಂಟು. ಸ್ವತ: ಲೇಖಕರಾಗಿದ್ದ ಹೆಗಡೆ ರಾಜಕೀಯ ಹಾಗೂ ಅರ್ಥಶಾಸ್ತ್ರಗಳಿಗೆ ಸ೦ಬ೦ಧಪಟ್ಟ೦ತೆ ಹಲವಾರು ಲೇಖನಗಳನ್ನು ಹಾಗೂ ಪುಸ್ತಕಗಳನ್ನು ಬರೆದವರು. “ ಎ ಕ್ಲೀನ್ ಗವರ್ನಮೆ೦ಟ್ “, “ ಪಾರ್ಲಿಮೆ೦ಟ್ ಅ೦ಡ್ ಪಿಲಿಟಿಕಲ್ ಕಲ್ಚರ್ “, “ ಅಡ್ಮಿನಿಸ್ಟ್ರೇಟಿವ್, ಸೋಶಿಯೋ, ಎಕನಾಮಿಕ್ ಛೇ೦ಜಸ್ ಇನ್ ಇ೦ಡಿಯಾ “, “ ಜುಡಿಶಿಯಲ್ ಥಿಯರಿ “, “ ಎಲೆಕ್ಟೋರಲ್ ರಿಫಾರ್ಮ್ಸ್ “ ಇನ್ನೂ ಮು೦ತಾದ ಹೊತ್ತಗೆಗಳ ಲೇಖಕರು ಹೆಗಡೆ.
ತನ್ನ ರಾಜಕೀಯ ಅವಧಿಯಲ್ಲಿ ಸರಿ ಸುಮಾರು ಎಲ್ಲಾ ಖಾತೆಗಳನ್ನೂ ನಿರ್ವಹಿಸಿದ ಅವರು,ಮೇಲೆ ಹೇಳಿದಂತೆ ಎರಡು ಬಾರಿ ಮುಖ್ಯಮ೦ತ್ರಿಯಾಗಿ ಹಾಗೂ ಕೇ೦ದ್ರ ಸಚಿವರಾಗಿ, ಕೇ೦ದ್ರ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ವಾಜಪೇಯಿ ಸರ್ಕಾರದಲ್ಲಿ ಕೇ೦ದ್ರ ವಾಣಿಜ್ಯ ಸಚಿವರಾಗಿದ್ದವರು. ಹೆಗಡೆ ಕರ್ನಾಟಕ ರಾಜ್ಯದ ಅತ್ಯ೦ತ ಉತ್ತಮ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು. ಕರ್ನಾಟಕದ ರಾಜಕೀಯದಲ್ಲಿ ೧೩ ಬಾರಿ ರಾಜ್ಯ ಆಯವ್ಯಯವನ್ನು ಮ೦ಡಿಸಿದ ಏಕೈಕ ಅರ್ಥ ಸಚಿವ!!! ರಾಜ್ಯದ ೧೯೮೩ ರ ಪ್ರಥಮ ಕಾ೦ಗ್ರೆಸ್ಸೇತರ ಸರ್ಕಾರದ ಮುಖ್ಯಮ೦ತ್ರಿಯಾಗಿದ್ದ ಹೆಗಡೆ ಅಧಿಕಾರ ವಿಕೇ೦ದ್ರೀಕರಣದ ಪ್ರಬಲ ಶಿಫಾರಸುಗಾರರಾಗಿದ್ದರು. ಕಾ೦ಗ್ರೆಸ್ ಶಾಸಕಾ೦ಗ ಪಕ್ಷದ ಸಭೆಯಲ್ಲಿ ಪ೦ಚಾಯತ್ ರಾಜ್ ಮಸೂದೆ ಕೇವಲ ಮೂರು ಮತಗಳ ಅ೦ತರದಿ೦ದ ಬಿದ್ದು ಹೋದಾಗ, ಮ೦ತ್ರಿ ಪದವಿಗೆ ರಾಜೀನಾಮೆ ನೀಡಿ, ತಾವು ಅಧಿಕಾರದಾಹಿಯಲ್ಲ ಎ೦ಬುದನ್ನು ನಿರೂಪಿಸಿದವರು. ದೇವೇಗೌಡರು ಮುಖ್ಯಮ೦ತ್ರಿಗಳಾದ ನ೦ತರ ಕರ್ನಾಟಕ ರಾಜಕೀಯದಲ್ಲಿ ಹೆಗಡೆ ಅಪ್ರಸ್ತುತರಾದದ್ದಷ್ಟೇ ಅಲ್ಲ.. ಕೇ೦ದ್ರ ದತ್ತ ತಮ್ಮ ಗಮನ ಕೇ೦ದ್ರೀಕರಿಸಿ, ವಾಜಪೇಯಿ ಯುಗದಲ್ಲಿ ವಾಣಿಜ್ಯ ಸಚಿವರಾದರು.ರಾಜಕಾರಣಿ ಆರೋಪಗಳಿಗೆ ಹೊರತಲ್ಲ ಎಂಬಂತೆ, ಟೆಲಿಫೋನ್ ಕದ್ದಾಲಿಕೆ ಮುಂತಾದ ಆರೋಪಗಳು ಕೂಡ ಹೆಗಡೆಯವರನ್ನು ಸುತ್ತುವರಿದಿತ್ತು. ಹೆಗಡೆಯವರಿಗೆ ತನ್ನ ಕೊನೆಗಾಲದಲ್ಲಿ ಅರೋಗ್ಯ ಕೆಟ್ಟಿತ್ತು.ಜನವರಿ ೧೨-೨೦೦೪ ರಲ್ಲಿ ನಿಧನರಾದರು,ಆದೆರೆ ಅವರ ರಾಜಕೀಯ ಮೌಲ್ಯಗಳು ಇಂದಿಗೂ ಹಸಿರಾಗಿದೆ,ಅದಕ್ಕೆ ಸಾವಿಲ್ಲ.
ರಾಮಕೃಷ್ಣ ಹೆಗಡೆಯವರ ಪತ್ನಿ ಶಕುಂತಲಾ ಹೆಗಡೆ
ಹೆಗಡೆಯವರ ಜನ್ಮನಕ್ಷತ್ರವನ್ನೇ ಹೆಸರಾಗಿಸಿಕೊಂಡ ‘ಕೃತ್ತಿಕಾ’ ನಿವಾಸದಲ್ಲಿ ಶಕುಂತಲಾ ಹೆಗಡೆ ಅವರದು ಈಗ ಒಬ್ಬಂಟಿ ವಾಸ. ಎಂತಹ ವಿಪರ್ಯಾಸ ನೋಡಿ ಬೆಂಗಳೂರು ಸದಾಶಿವನಗರದಲ್ಲಿರುವ ಈ ಮನೆ ಒಂದು ಕಾಲದಲ್ಲಿ ಪ್ರಮುಖ ರಾಜಕೀಯ ತೀರ್ಮಾನಗಳಿಗೆ ಸಾಕ್ಷಿಯಾಗಿತ್ತು. ಹೆಗಡೆ ಅವರಿಂದ ರಾಜಾಶ್ರಯ ಪಡೆದವರು, ನೇತಾರರಾದವರು, ಅಧಿಕಾರ-ಅಂತಸ್ತು ಗಳಿಸಿದವರು, ಇವತ್ತಿಗೂ ಅದನ್ನು ಅನುಭವಿಸುತ್ತಿರುವವರು, ಬೇರೆ-ಬೇರೆ ರೀತಿ ಉಪಕೃತರಾದವರು ಯಾರೊಬ್ಬರೂ ಇತ್ತ ಕಡೆ ಸುಳಿಯುತ್ತಿಲ್ಲ. ಅಷ್ಟಕ್ಕೂ ಹೆಗಡೆ ಅವರ ಅಧಿಕಾರ ಹೋದಾಗಲೇ ಸುಳಿಯದಿದ್ದವರು, ಇನ್ನು ಅವರು ಈ ಲೋಕ ಬಿಟ್ಟು ಹೋದ ಮೇಲೆ ಬರುತ್ತಾರೆಯೇ?
ಈ ಎಲ್ಲ ವೈರುಧ್ಯಗಳಿಗೆ ಮೌನಸಾಕ್ಷಿಯಾದ ‘ಕೃತ್ತಿಕಾ’ ನಾಮಫಲಕ ಸುತ್ತಲಿನ ಕಾಪೌಂಡ್ ಗೋಡೆ ಬಿರುಕು ಬಿಟ್ಟಿದೆ. ಸುಣ್ಣ-ಬಣ್ಣ ಕಂಡು ಬಹಳ ದಿನಗಳೇ ಆಗಿದ್ದರೂ ಮನೆ ಒಪ್ಪ-ಓರಣವಾಗಿದೆ. ಹೆಗಡೆ ಬೃಹತ್ ಫೋಟೊ ಹೊತ್ತ ವಿಶಾಲ ಹಜಾರ, ಅವರು ಬಹುವಾಗಿ ಇಷ್ಟಪಡುತ್ತಿದ್ದ ನಾಟ್ಯ ಗಣಪತಿ ವಿಗ್ರಹ, ತಿರುವು ಮೆಟ್ಟಿಲು ಒಳಗೊಂಡ ಮೇಲಿನ ಮಹಡಿಯಲ್ಲಿ ಮತ್ತೊಂದು ವಿಶಾಲ ಹಜಾರ, ಹೆಗಡೆ ಜೀವಸಮಾನ ಗ್ರಂಥಾಲಯ ಎಲ್ಲವೂ ಹಾಗೆ ಇವೆ.
ಮಾಜಿ ಮುಖ್ಯಮಂತ್ರಿಯವರ ಪತ್ನಿಗೆ ಅಗತ್ಯಾನುಸಾರ ಸರಕಾರದಿಂದಲೇ ಭದ್ರತೆ ಒದಗಿಸುವ ಪರಿಪಾಠ ಇದೆ. ಆದರೆ ಬಹಳಷ್ಟು ಮನವಿ ಸಲ್ಲಿಸಿದರೂ ಪ್ರಯೋಜನ ಆಗಿರಲಿಲ್ಲ. ಕೊನೆಗೆ ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದಾಗ, ನಾಳೆ ನಾವೂ ಮಾಜಿ ಆದಾಗ ಇದೇ ಪರಿಸ್ಥಿತಿ ಬರಬಾರದು ಎಂದು ‘ಕೃತ್ತಿಕಾ’ಗೆ ಸೆಕ್ಯುರಿಟಿ ವ್ಯವಸ್ಥೆ ಮಂಜೂರು ಮಾಡಿದರು. ತತ್ಪರಿಣಾಮ ಬೆಳಗ್ಗೆ ಎಂಟಕ್ಕೆ ಬರುವ ಪೇದೆ ಮಧ್ಯಾಹ್ನ ಮೂರಕ್ಕೆ ಮರಳುತ್ತಾರೆ. ಹೆಚ್ಚುವರಿ ಭದ್ರತೆ ಕೋರಿ ನಂತರದ ಸರಕಾರಗಳಿಗೆ ಮಾಡಿದ ಮನವಿ ಪ್ರಯೋಜನಕ್ಕೆ ಬಂದಿಲ್ಲ. ಕೊನೆಗೆ ಶಕುಂತಲಾ ಅವರೇ ಒಬ್ಬ ಖಾಸಗಿ ಸೆಕ್ಯುರಿಟಿ ನೇಮಿಸಿಕೊಂಡಿದ್ದಾರೆ.
ಹೆಗಡೆ ಅವರ ಮಕ್ಕಳ ಪೈಕಿ, ಮಮತಾ ಮತ್ತು ಸಮತಾ ಇಬ್ಬರೂ ಸೇರಿ ಸದಾಶಿವನಗರದ ಬಿಡಿಎ ಕಾಂಪ್ಸೆಕ್ಸ್ನ ಬಾಡಿಗೆ ಮಳಿಗೆಯೊಂದರಲ್ಲಿ ಯಾತ್ರಿಕ್ ನೆಟ್ವರ್ಕ್ ಎಂಬ ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದಾರೆ. ಭರತ್ ಹೆಗಡೆ ಹೆಸರುಘಟ್ಟದಲ್ಲಿರವ ಫಾರಂ ಹೌಸ್ ನೋಡಿಕೊಳ್ಳು ತ್ತಿದ್ದಾರೆ. ಮಮತಾ ಪುತ್ರಿ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಾಕ್ಟಿಸ್ ಮಾಡುತ್ತಿದ್ದರೆ, ಸಮತಾ ಮತ್ತು ಭರತ್ ಅವರ ತಲಾ ಇಬ್ಬರು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅಶ್ಚರ್ಯವೆಂದರೆ ಹೆಗಡೆ ಅವರ ಮೂವರು ಮಕ್ಕಳಿಗೂ ಬೆಂಗಳೂರಲ್ಲಿ ಒಂದು ಬಿಡಿಎ ನಿವೇಶನ ಇಲ್ಲ.
ಇವತ್ತಿನ ಮುಖ್ಯಮಂತ್ರಿಗಳು ತಾವು, ತಮ್ಮ ಪತ್ನಿ ಮತ್ತು ಮಕ್ಕಳ ಹೆಸರಲ್ಲಿ ಮಾಡಿರುವ ಆಸ್ತಿ-ಪಾಸ್ತಿಗಳಿಂದ, ಈ ಆಸ್ತಿ ಸಂಪಾದನೆ ಹಿಂದಿನ ಅವ್ಯವಹಾರಗಳಿಂದಲೇ (ಕು)ಖ್ಯಾತರಾಗಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಮುಖ್ಯಮಂತ್ರಿ ಎಂದು ಗುರುತಿಸಿಕೊಂಡಿದ್ದಾರೆ. ಹೆಗಡೆ ಅವರು ಕಟ್ಟಿಸಿದ ‘ಕೃತ್ತಿಕಾ’ ಹಾಗೂ ಹೆಸರುಘಟ್ಟದ ಫಾರಂ ಹೌಸ್ ಬಿಟ್ಟರೆ ಬೇರೆ ಆಸ್ತಿ-ಪಾಸ್ತಿ ಏನೂ ಇಲ್ಲ. ಹೆಂಡತಿ, ಮಕ್ಕಳ ಹೆಸರಲ್ಲಿ ಆಸ್ತಿ ಮಾಡುವ ವಿಷಯ ಪಕ್ಕಕ್ಕಿರಲಿ, ಒಂದೇ ಒಂದು ಕಿಲುಬು ಕಾಸನ್ನೂ ಇಡಲಿಲ್ಲ.
‘ಹೆಗಡೆಯವರು ಕೂಡ ಆಸ್ತಿ ಮಾಡಬೇಕಿತ್ತು, ಮಕ್ಕಳನ್ನು ರಾಜಕೀಯದಲ್ಲಿ ಬೆಳೆಸಬೇಕಿತ್ತು ಎಂದು ನಿಮಗೆ ಯಾವಾಗಲಾದರೂ ಅನಿಸಿದಿದ್ದೆಯೇ’ ಎಂದು ಕೇಳಿದಾಗ ಶಕುಂತಲಾ ಅವರನ್ನು ಕೇಳಿದರೆ ಸಿಗುವ ಉತ್ತರ.
‘ಹೆಗ್ಡೆ ಅವರು ಮುಖ್ಯಮಂತ್ರಿಯಾದ ಮೊದಲ ದಿನವೇ ಕುಟುಂಬ ಸದಸ್ಯರೆಲ್ಲರನ್ನೂ ಮನೆಯಲ್ಲಿ ಒಟ್ಟಿಗೆ ಸೇರಿಸಿ ಒಂದು ಮಾತು ಹೇಳಿದರು. ಇವತ್ತಿಂದ ನೀವ್ಯಾರೂ ವಿಧಾನಸೌಧದ ಕಡೆ ತಲೆ ಹಾಕುವಂತಿಲ್ಲ. ನೌಕರಿ, ವರ್ಗಾವಣೆ, ಯೋಜನೆ, ಕಾಮಗಾರಿ ಗುತ್ತಿಗೆ ಅಂತ ಶಿಫಾರಸ್ಸು ಮಾಡುವಂತಿಲ್ಲ. ಸರಕಾರಿ ಕೆಲಸದಲ್ಲಿ ಮೂಗು ತೂರಿಸುವಂತಿಲ್ಲ. ಹಾಗೇನಾದರೂ ತಲೆ ಹಾಕಿದ್ದು ಗೊತ್ತಾದರೆ ಆ ಕ್ಷಣದಿಂದ ನನಗೂ ಮತ್ತು ನಿಮಗೂ ಸಂಬಂಧ ಇರುವುದಿಲ್ಲ.’
ನೀವು ಎಷ್ಟೋ ಮಂದಿನಾ ಎಂಎಲ್ಎ, ಎಂಎಲ್ಸಿ ಮಾಡಿದ್ದೀರಿ. ಮಂತ್ರಿಗಳನ್ನಾಗಿಸಿದ್ದೀರಿ. ಬೇರೆ-ಬೇರೆ ಪದವಿ ಕೊಡಿಸಿದ್ದೀರಿ. ನನ್ನನ್ನೂ ಎಂಎಲ್ಸಿ ಮಾಡಿ ಎಂದು ಮಗಳು ಕೇಳಿದಾಗ ಹೆಗ್ಡೆ ಅವರ ಉತ್ತರ,
ಒಂದು ಕೆಲಸ ಮಾಡು. ನೀನು ಯಾವುದಾದರೂ ಹಳ್ಳಿಗೆ ಹೋಗಿ ಒಂದೆರಡು ವರ್ಷ ಅಲ್ಲಿನ ಜನರ ಸೇವೆ ಮಾಡು ಉತ್ತರ. ಆಮೇಲೆ ಚುನಾವಣೆಗೆ ಸ್ಪರ್ಧಿಸು. ನೀನು ಚನ್ನಾಗಿ ಕೆಲಸ ಮಾಡಿದ್ದರೆ ಅವರೇ ನಿನ್ನನ್ನು ಗೆಲ್ಲಿಸುತ್ತಾರೆ.
ಇವತ್ತೇ ಕೊನೆ, ಇನ್ನೆಂದಿಗೂ ನನ್ನ ನೆರಳಲ್ಲಿ ರಾಜಕೀಯ ಮಾಡುವ ಕನಸು ಕಾಣಬೇಡ. ನಾನು ಬದುಕಿರುವವರೆಗೂ ನೀವ್ಯಾರು ರಾಜಕೀಯಕ್ಕೆ ಬರುವಂತಿಲ್ಲ. ನಿಮ್ಮ ರಾಜಕೀಯ ಏನಿದ್ದರೂ ನಾನು ಸತ್ತ ನಂತರವಷ್ಟೇ.’
ಹೌದು. ಹೆಗಡೆಯವರ ಇಚ್ಛೆಯಂತೆ ಅವರು ಬದುಕಿರುವವರೆಗೂ ಪತ್ನಿ, ಮಕ್ಕಳು ರಾಜಕೀಯಕ್ಕೆ ಬರಲಿಲ್ಲ. ರಾಮಕೃಷ್ಣ ಹೆಗ್ಡೆ ಅವರ ಕುಟುಂಬ ಹೆಗಡೆ ಅವರ ಹೆಸರು ಹೇಳಿಕೊಂಡು ಏನು ಬೇಕಾ ದರೂ ಮಾಡಬಹುದಿತ್ತು. ರಾಜಕೀಯ ನೆಲೆ ಅರಸಬಹುದಿತ್ತು. ಆರ್ಥಿಕವಾಗಿ ಬೆಳೆಯಬಹುದಿತ್ತು. ಆದರೆ ಅವರೆಂದೂ ಹೆಗಡೆ ಅವರ ತತ್ವ-ಆದರ್ಶಗಳನ್ನು ಬಿಡಲಿಲ್ಲ. ‘ಯಾರಾದರೂ ಬಂದು ನಮ್ಮ ಯೋಗಕ್ಷೇವು ವಿಚಾರಿಸಬೇಕು ಎಂದು ನಾನು ಯಾವತ್ತೂ ಬಯಸಿಲ್ಲ. ಬಯಸುವುದೂ ಇಲ್ಲ. ಅಷ್ಟೇ ಅಲ್ಲ ನಾನಾಗಲಿ, ನನ್ನ ಮಕ್ಕಳಾಗಲಿ ಯಾರ ಮನೆ ಬಾಗಿಲಿಗೂ ಹೋಗಿಲ್ಲ, ಹೋಗುವುದೂ ಇಲ್ಲ’ ಎಂಬ ಶಕುಂತಲಾ ಅವರ ಹೇಳಿಕೆಯಲ್ಲೇ ಹೆಗಡೆ ಅವರ ಆದರ್ಶ ಮನೆ ಮಾಡಿದೆ.
ಈ ದಿನ ಹೆಗಡೆಯವರು ಇದ್ದಿದ್ದರೆ ಅವರಿಗೆ ೮೫ ವರ್ಷ ತುಂಬುತ್ತಿತ್ತು.ಹೆಗ್ಡೆ ಅವರ ಜನ್ಮದಿನವಾದ ಇಂದು ಈ ಲೇಖನದ ಮೂಲಕ ರಾಜಕೀಯ ಇಚ್ಚಾಶಕ್ತಿ ಹೊಂದಿದ್ದ ಹಾಗು ಮೌಲ್ಯಗಳಿಗೆ ಮಹತ್ವ ಕೊಡುತಿದ್ದ ರಾಜಕಾರಣಿಗೆ ನನ್ನ ನಮನಗಳನ್ನು ಸಲ್ಲಿಸುತ್ತಾ,ಇಂದಿನ ರಾಜಕಾರಣಿಗಳಿಗೆ ಅವರ ಮೌಲ್ಯಗಳು ಅದರ್ಶವಾಗಲೆಂದು ಆಶಿಸುವ..........
ನಿಮ್ಮಯ
ರಾಘವೇಂದ್ರ ತೆಕ್ಕಾರ್
ರಾಘವೇಂದ್ರ ತೆಕ್ಕಾರ್
Sunday, August 28, 2011
Scams of India - A Summary Of Scams from 1947 to 2010
ಅರ್ಧಾಂಬರ್ಧ ನಮಗೆಲ್ಲರಿಗೂ ಗೊತ್ತಿರುವ ದೇಶದ ಹಗರಣಗಳ ಸರಮಾಲೆಯ ಪೂರ್ಣ ಚಿತ್ರಣಕ್ಕಾಗಿ, ಕೆಳಗಿನ ಲಿಂಕ್ ಕ್ಲಿಕ್ಕಿಸಿ ಅದರಲ್ಲಿನ ವಿಡಿಯೋ ಒಮ್ಮೆ ನೋಡಿ ಕೊನೆಗೆ ಸಿಕ್ಕುವ ಸಂಖ್ಯೆಯನ್ನು ಓದಿ ಹೇಳಲು ಪ್ರಯತ್ನಿಸಿ.
Subscribe to:
Posts (Atom)







