Saturday, September 1, 2012

ಬೇಸರಿಸದಿರಲೂ ನನ್ನ ಮುಂದು ಕಾರಣಗಳಿಲ್ಲ...

ಕೆಲವೊಮ್ಮೆ ಹಂಗಂಗೆ ಕಾಡೊ ಬೇಸರದ
ಗುಟ್ಟು ತಿಳಿಯಲೆತ್ನಿಸಿದಷ್ಟೂ ನಿಗೂಢ
ಇಂಚಿಂಚೆ ಬಿಗಿದಪ್ಪುವ ಬೇಸರ ಕಳೆಯೋಣವೆಂದು
ಸುತ್ತಲ ಜಗದ ಇಂಬು ಹಂಬಲಿಸಿ ನೋಡುತ್ತೇನೆ
ಆಸರೆ ದೊರೆಯದಾದಾಗ ನಾ ಅರಿತುಕೊಳ್ಳುತ್ತೇನೆ
ಜಗದ ಜೀವಿಗಳೆಲ್ಲವೂ ಹೊತ್ತಿದೆ ಅಗಾಧ ದುಃಖ
ಇಲ್ಲಿ ನನ್ನದಲ್ಲದ ನನ್ನ ಬೇಸರಕ್ಕೆ ತಾವಿಲ್ಲ.

ನನ್ನ ಮನ ಮಹಲಿನ ಗೋಡೆಗೆ ತಲೆಯಾನಿಸುತ್ತೇನೆ
ಅದು ತನ್ನ ತೆಕ್ಕೆಯಲ್ಲಿ ನನ್ನ ಒಪ್ಪಿಸಿಕೊಂಡು
ಬೇಸರಿಸದಿರೆಂದು ಸಂತೈಸುತ್ತದೆ, ಪಿಸುನುಡಿಯುತ್ತದೆ
ನೇವರಿಸುತ್ತಲೆ ಹೆಡೆಮುರಿಕಟ್ಟಿ ವಾಸ್ತವವದೆದುರು ನಿಲ್ಲಿಸುತ್ತದೆ
ನಿರ್ಜೀವ ಗೋಡೆಯೊಂದರ ಸ್ಪರ್ಷದೊಂದಿಗೆ ನಾನು ಸಜೀವ
ತಿಳಿಯಪಟ್ಟಿದ್ದು ನಾನೆದುರುಗೊಂಡಿದ್ದು ನನ್ನದೆ ಅತಃಶಕ್ತಿಯನ್ನ
ಮುಂದೆಂದೂ ನನ್ನೊಳಗೆ ಜಗದ ಸಂತೈಕೆಯ ಹಂಬಲವಿಲ್ಲ.

ಜಗದೆಲ್ಲವ ನೆನಪುಗಳೂ ಪೀಕಲಾಟಗಳೂ
ನನ್ನ ತಲುಪಿ ಭಾಧಿಸುತ್ತಲಿರುತ್ತದೆ
ನನ್ನ ನೇಸರ ರಂಗಿನ ಸಂಜೆಯನ್ನ ಕಪ್ಪಾಗಿಸುತ್ತದೆ
ಆವರಿಸುವ ಕತ್ತಲನ್ನೆ ಅಪ್ಪಿಕೊಳುತ್ತೇನೆ
ಬೆಳಗನ್ನೂ ಇದಿರುಗೊಳ್ಳುವದರ ಬಗ್ಗೆ ಸಿದ್ದನಾಗುತ್ತೇನೆ
ನಿರಾಕಾರವೆಂಬ ಮುಸುಕು ಆಕಾರ ನೀಡುತ್ತೆ
ಕತ್ತಲಲ್ಲಿ ಬೆಳಕನ್ನೂ ಕಾಣಬಹುದೆಂಬುದ ತಿಳಿದು
ನಿರಾಳನಾಗುತ್ತೇನೆ ಕಾರಣ ಕಪ್ಪು ಕತ್ತಲ ಭಯ ಮುಂದಿಲ್ಲ.

ಬೇಸರ, ಕಪ್ಪು, ಕತ್ತಲೂ ಜೊತೆಗಿರುವ ನನ್ನ ಮಹಲೊಳಗೆ
ಬೆಳಕೂ, ಉಸಿರೂ,ಸಂತಸವಷ್ಟೆ ಇರಬೇಕೆಂದುಕೊಂಡಿದ್ದೆ
ನನ್ನ ಮಹಲಿನ ನಿರ್ಮಾಣ ನನ್ನದಲ್ಲದ್ದಾಗಿರಬೇಕಾದರೆ
ಮಹಲೆಂಬ ತಿಜೋರಿಯೊಳಗಿಂದ ಒಳಿತನ್ನೂ ಆರಿಸಬಹುದಷ್ಟೆ
ಆಯ್ಕೆಯ ಕಲೆಯನ್ನೂ ಒಪ್ಪವಾಗಿ ಕಲಿಸಿ ನನ್ನ ರೂಪಿಸುವ
ನನ್ನ ಮಹಲಿನ ಋಣಾತ್ಮಕತೆಗೆ ಇಂಚಿಂಚೆ ಬಾಗಿ ಎದ್ದು ನಿಲ್ಲುತ್ತೇನೆ
ಜೀವನವದಲ್ಲೂ ಬಿದ್ದೆನೆಂಬಾಗ ಎದ್ದು ನಿಲ್ಲುವದನ್ನು ಅದು ಕಲಿಸಿದೆ
ಮುಂದೆ ಬೇಸರಿಸದಿರಲೂ ನನ್ನ ಮುಂದು ಕಾರಣಗಳಿಲ್ಲ.


2 comments:

  1. ನಿಲುಮೆಯಲ್ಲಿ ಈ ಕವನ ನೋಡಿದೆ ತುಂಬಾ ಇಷ್ಟ ಆಯ್ತು.. :-)

    ReplyDelete