Saturday, October 27, 2012

ಮತ್ತೆ ಮತ್ತೆ ನೆನಪಾಗೋ ಬಾಲ್ಯ.



ಅಂಬಿಗನ ಹಂಗಿಲ್ಲದ , ತೂಫಾನೆಂಬುದನ್ನೆ ಕಾಣದ ಅಷ್ಟೇ ಏಕೆ ಅಸಲಿ ದಡವೇ ಇಲ್ಲದ, ಮನಸೆಲ್ಲಾ ಸಂತಸವನ್ನೆ ಸಮುದ್ರದಂತೆ ಹೊದ್ದು ಮಲಗಿದ್ದ ಬಾಲ್ಯ ಕಳೆದಿದೆ.ಬಾಲ್ಯವೆಂಬುದು ಬದುಕಿನ ಮೊಟ್ಟ ಮೊದಲ ಮಳೆಗಾಲ,ಆ ದಿನಗಳ ಮೋಡದ ತುಂಬ ಸಂತಸವೆಂಬ ತುಂತುರ ಪನಿ, ಕೆಲವೊಮ್ಮೆ ರಭಸದಿಂದ ಸುರಿದು ಹಿಪ್ಪೆಯಾಗಿಸಿದರೆ ಕೆಲವೊಮ್ಮೆ ಹಿಡಿದಿಟ್ಟುಕೊಳಬಹುದಾದಷ್ಟೆ ಮೋಡದಿಂದ ಜಾರುವ ಹನಿ, ಅಸಲಿಗೆ ಇವೆಲ್ಲ ಗೊತ್ತಾಗಿದ್ದು ಬಾಲ್ಯವೆಂಬ ಮಳೆಗಾಲದ ಮೋಡ ಸರಿದು ನೆತ್ತಿಗೆ ಇಂಚಿಂಚೆ ಬಿಸಿಲು ತಾಕಿದ ನಂತರ.ಮಂಜು ಕವಿದ ಮುಂಜಾವೂ ನುಸುಳುವ ಸುಳಿಗಾಳಿಯ ಜೊತೆ ತುಂತುರು ಸೋನೆ ಮಳೆಯು ತಂಪೆರೆದು ನೇಸರನ ಕಿರಣಗಳಿಗೆ ಚೂರು ಚೂರೆ ಕರಗಿದಂತೆ ನಮ್ಮ ಬಾಲ್ಯವೂ ಕಳೆದಿದೆ.

ಮೂಡಣದಿ ನೇಸರನ ನಗೆ ಮೊಗದಾ ಶ್ರೀಕಾಂತಿ 
ಬಿಳಿಯಾ ಮೋಡದ ಹಿಂದೆ ಹೊಳೆಯುತಿತ್ತು 
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ

ದಡವೇ ಇಲ್ಲದ ನಮ್ಮದೆ ಸಮುದ್ರದಲ್ಲಿ ಹೊಸ ಹೊಸ ಗುರಿಯೆಂಬ ದಡಗಳು ಹುಟ್ಟಲಾರಂಬಿಸಿದವು,ಅಂಬಿಗನಂತೆ ದಾರಿ ತೋರುವ ಶಿಕ್ಷಣ ವ್ಯವಸ್ಥೆಯನ್ನ ತಬ್ಬಿಕೊಂಡು ಮುಂದುವರಿಯಲಾರಂಭಿಸಿದೆವು,ಸಂತಸದ ಜಾಗದೊಳಗೆ ಖಿನ್ನತೆ ಭಾವಗಳೂ ಒಂದಿಂಚೂ ಆಕ್ರಮಿಸಿ ಸೂರು ಪಡಕೊಂಡವೂ.ಗೊತ್ತಿದ್ದೋ ಗೊತ್ತಿಲ್ಲದೆಯೋ ಸಹನೆ,ಉನ್ಮಾದ,ಕೋಪ, ದ್ವೇಷ,ನಾನು,ಎಂಭಿತ್ಯಾದಿ ಬಿಳಿಮೋಡದೊಳಗಿನ ಕಪ್ಪು ಕಲೆಗಳನ್ನೂ ಮೈದಡವಲಾರಂಭಿಸಿದೆವು ಅದು ನಮ್ಮೊಳಗೆ ಹುಟ್ಟಿದ ಬಿಳಿ ಪದರದ ಹೊದಿಕೆ ಹೊಂದಿದ ಕಾರ್ಮುಗಿಲು.ಇವೆಲ್ಲವದರ ಮದ್ಯೆಯೂ ಆಗಾಗ ನೆನಪಾಗೊ ಆ ಮೊದಲ ಮಳೆಗಾಲ ಮುದವೆನಿಸುವ ತುಂತುರು ಸುಳಿಗಾಳಿಯೊಡಲಿನ ಮುಂಜಾವೂ ತುಂಬುತಿತ್ತು ಚೈತನ್ಯ . ಮುಂದುವರಿದಂತೆ ಇದ್ದುದರ ಬಗ್ಗೆ ಒಂತರಾ ಜಿಗುಪ್ಸೆ, ಹೊಸತೊಂದನ್ನು ನಮ್ಮದಾಗಿಸುವ ಆಸೆಗಳು.ಯಾಕೋ ತಾಯೆ ಬಂಧನದಲ್ಲಿರಿಸಿದ ಭಾವ, ಬಂಧನ ಬಿಡಿಸಿಕೊಂಡು ನಭಕ್ಕೆ ನೆಗೆಯುವ ತುಡಿತ. 

ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ, 
ಅಡಗಲಿ ಎಷ್ಟು ದಿನ..? 
ದೂಡು ಹೊರಗೆ ನನ್ನ 
ಓಟ ಕಲಿವೆ ಒಳ-ನೋಟ ಕಲಿವೆ 
ನಾ ಕಲಿವೆ ಉರ್ಧ್ವಗಮನ 
ಓ ಅಗಾಧ ಗಗನ. 

ರೆಕ್ಕೆ ಬಿಚ್ಚಿದ ಹಕ್ಕಿ ಹಾರುತ್ತದೆಯೆ ಆದರೂ ಹಾರುವ ಕಲೆ ಕರಗತವಾಗಿರುವದಿಲ್ಲ ಈ ಕ್ಷಣಗಳಲ್ಲೆ ಒಂದಷ್ಟು ಯೌವನದ ಎಡವಟ್ಟುಗಳು ನಡೆದುಬಿಡುತ್ತದೆ ಅಮ್ಮನ ಮಡಿಲು ಬಿಟ್ಟಿದ್ದು ರೂಢಿಯಿಲ್ಲದವನೀಗೆ ಒಳನೋಟ ಕಲಿಯಲು ತನ್ನವರೆನಿಸಿಕೊಂಡವರ ಹುಡುಕಾಟದಲ್ಲಿ ತೊಡಗಿರುತ್ತೇವೆ, ಯಾಕೋ ನಿಂಗಿ ಪದ ಕಿವಿಗಪ್ಪಳಿಸುತ್ತದೆ... 

ನಿಂಗಿ ನಿಂಗಿ ನಿಂಗಿ ನಿಂಗಿ 
ನಿದ್ದಿ ಕದ್ದೀಯಲ್ಲೆ ನಿಂಗಿ 
ನಿಂಗಿ ನಿಂಗಿ ನಿಂಗಿ ನಿಂಗಿ 
ಆಸಿ ಎದ್ದೀತಲ್ಲೆ ನಿಂಗಿ 
ಚಂದಾನ ಚಂದ್ರ – ಹೊಯ್ಯಾರೆ ಹೊಯ್ಯ 
ಭೂಮಿಗ ಲಾಂದ್ರ – ಹೊಯ್ಯಾರೆ ಹೊಯ್ಯ 
ಆಗ್ಯಾನ ನೋಡಲ್ಲಿ 

ಹಿಂಗೆ ಮುಂದುವರಿದೂ ಜಾಲಿ ಬಾರಿನಲ್ಲಿ ಮೂರು ಪೋಲಿ ಗೆಳೆಯರು ಗೋಪಿಯನ್ನೂ ಗೋಳು ಹೊಯ್ಕೊಳೋದು, ಹೆಂಡ ಹೆಂಡತಿ ಕನ್ನಡದ ರತ್ನನ್ ಪದಗಳೂ ನೆನಪಾದರೂ ಆದೀತೂ :) ಕಾಲಾಯೈ ತಸ್ಮೈ ನಮಃ ......(ಕಫಾಲಿ ಟಾಕೀಸ್ ನಲ್ಲಿ ನೇತಾಕಿದ್ದ ಪಿಚ್ಚರ್ ಪೋಷ್ಟರ್ ನೆನಪಿಗೆ ಬಂತು. :) ). 

ಅಮ್ಮನ ರಕ್ಷೆಯ ಗೂಡೂ ಬೇಡೆಂದು ಹೊರಬಂದಾದ ಮೇಲೂ ಮಗದೊಬ್ಬರ ಪ್ರೀತಿಯ ಕಕ್ಷೆಯೊಳಗೆ ಸೇರಿಕೊಂಡು ತಿರುಗಲಾರಂಭಿಸುತ್ತೇವೆ, ಬಾಳೆಂಬುದು ಬಂಧನದಿಂದ ಮುಕ್ತವಾದುದಲ್ಲವೆಂಬುದರ ಸತ್ಯ ಬಹಳ ಸಲ ಅರಿವಿಗೆ ಬಂದಿರುವದೆ ಇಲ್ಲ.ಈಗೀಗ ಮನಸ್ಸು ಬದುಕು ತಂದೊಡ್ಡುವ ತೂಫಾನನ್ನು ಎದುರುಗೊಳ್ಳುತ್ತದೆ ಹೆಚ್ಚಿನೆಲ್ಲಾ ಏಟು ತಿಂದು ಬಿಕ್ಕಳಿಸಿ ಸುಮ್ಮನಾಗಿ ಮಲಗಿಬಿಡುವ ಮಗುವಿನಂತೆ ಸೋಲೊಪ್ಪಿಕೊಳ್ಳುತ್ತದೆ, ರಚ್ಚೆ ಹಿಡಿದು ಹಠ ಹಿಡಿವ ಸ್ವಭಾವವನ್ನೂ ರೂಢಿಸಿಕೊಳ್ಳುತ್ತದೆ,ಎಷ್ಟೋ ಸಲ ಬದುಕಲ್ಲಿ ಮುಖ್ಯವಾದುದನ್ನೂ ಕಳೆದುಕೊಳ್ಳುತ್ತಾ ಇದ್ದೀನಿ ಎಂಭ ಭಯದಲ್ಲೆ ಹಿಡಿದಿಟ್ಟುಕೊಳ್ಳಬೇಕೆಂಬ ಛಲದಲ್ಲೆ ಎಲ್ಲವನ್ನೂ ಕಳೆದುಕೊಂಡಿರುತ್ತೇವೆ.ಮತ್ತೆ ಕಳೆದ ಸಂತಸದ ಕಡಲು ಬಾಲ್ಯ ನೆನಪಾಗಿರುತ್ತದೆ. 

ಕಾಣದ ಕಡಲಿಗೆ ಹಂಬಲಿಸಿದೆ ಮನ 
ಕಾಣಬಲ್ಲೆನೆ ಒಂದು ದಿನ 
ಕಡಲನು ಕೂಡಬಲ್ಲೆನೆ ಒಂದುದಿನ!!!! 

ಬರಬರುತ್ತಾ ಬದುಕು ಪಕ್ವವಾಗುತ್ತೆ , ಸ್ವ ಸಾಮರ್ಥ್ಯದಿಂದ ರೆಕ್ಕೆ ಬಿಚ್ಚಿ ಹಾರುವ ಕಲೆಯೂ ರೂಢಿಯಾಗುತ್ತೆ, ಏಟೂ ತಿಂದ ಮನಸ್ಸು ಹೊಸತೊಂದರತ್ತ ಹೊರಳಿರುತ್ತದೆ, ನಿಜ ಹೇಳಲಾ ಸಂಗಾತಿ ದೊರೆತ ಈ ಕಾಲದಲ್ಲೆ ಅಮ್ಮ ಮತ್ತೆ ನೆನಪಾಗ್ತಾಳೆ, ಮನಸ್ಸು ಅಮ್ಮ ಮತ್ತು ಸಂಗಾತಿ ಪ್ರೀತಿಯನ್ನೂ ಬೇಡವೆಂದರೂ ಅಳತೆ ಮಾಡಿಯೇ ಸಿದ್ದವೆಂದು ರಚ್ಚೆ ಹಿಡಿದು ನಿಲ್ಲುತ್ತೆ. ತಾಯಿ ಪ್ರೀತಿಯೆ ಗೆಲ್ಲುತ್ತೆ ಆದರೂ ಸಂಗಾತಿ ಪ್ರೀತಿಯ ಆಸರೆಯೊಂದಿಗೆ ಮತ್ತೆ ತಾಯಿ ಮಡಿಲು ನೆನಪಾಗುತ್ತೆ, ಅದಕ್ಕೆ ಇರಬೇಕು ಆಕೆಯ ಪ್ರೀತಿಯನ್ನೂ ತಾಯಿ ಪ್ರೀತಿಗೆ ಹೋಲಿಸಿಕೊಂಡು ಆಕೆಯನ್ನು ಸಂಗಾತಿಯೆಂದು ಒಪ್ಪಿಕೊಳೋದು, ಪ್ರೀತಿಯೂ ಒಂದು ಉಪಾಸನೆಯಾಗಿ ಕಾಣೋದು. 

ನಿನ್ನ ಸವಿನೆನಪೆ ಮನದಲ್ಲಿ 
ಆರಾಧನೆ............ 
ಪ್ರೀತಿಯ ಸವಿಮಾತೆ ಉಪಾಸನೆ 

ಮಡಿಲ ಬಯಸುವ ಮನ ಮತ್ತೆ ಬಾಲ್ಯದತ್ತ ಹೊರಳೋದು ಸಹಜ, ಪ್ರೌಢತೆಯ ಮದ್ಯೆ ಬಾಲ್ಯ ತುಂಟಾಟ ಅಲ್ಲಲ್ಲಿ ನುಸುಳುತ್ತದೆ,ಹುಟ್ಟು ತರಲೆ ಗುಣ ಸುಟ್ಟರೂ ಹೋಗದಂತೆ,ಮನುಷ್ಯನ ಜೀವಿತಾವಧಿ ತುಂಬಾ ಬಾಲ್ಯದ ನೆನಪುಗಳು ಎಡೆ ಬಿಡದೆ ಕಾಡುತ್ತೆ, ಹೊಸ ಚೈತನ್ಯಗಳನ್ನು ಹುದುಗಿಸಿ ಇಟ್ಟು ಕೊಂಡಿರುವ ಆ ಖಜಾನೆ ಯಾವತ್ತೂ ಬರಿದಾದುದಲ್ಲ, ಮುಪ್ಪು ಮತ್ತೊಂದು ಬಾಲ್ಯದತ್ತ ನಡೆಯೊ ಹೆಜ್ಜೆ ಎಂಬುದು ತಿಳಿದವರ ಅಂಬೋಣ, ನನ್ನ ಅಜ್ಜ -ಅಜ್ಜಿಯ ಮುಪ್ಪಿನ ದಿನಗಳನ್ನೂ ನೆನಪಿಸಿಕೊಂಡಾಗ ಈ ಮಾತನ್ನೂ ಸಾರಸಗಟಾಗಿ ತಳ್ಳಿಹಾಕುವದೂ ಕೂಡ ನನ್ನಿಂದ ಸಾಧ್ಯವಿಲ್ಲ, 

ಏ ದುನಿಯಾವಾಲೇ ಪೂಛೇಂಗೇ 
ಮುಲಾಖಾತ್ ಹುಯೀ? 
ಕ್ಯಾ ಬಾತ್ ಹುಯೀ? 

ಮುಪ್ಪು ಬಾಲ್ಯದ ತುಂತುರ ಹನಿಯ ಮೋಡವನ್ನು ಜೀವನದಲ್ಲಿ ಮತ್ತೊಮ್ಮೆ ಸಂಧಿಸುವ ಕಾಲವೆಂದಾದಲ್ಲಿ ಮುಪ್ಪೆಂಬುದು ನಮ್ಮದೆ ಜೀವನದ ಏಳೂ ಬೀಳನ್ನೂ ಅವಲೋಕಿಸಿ ಅಜ್ಜಿ ತಾತ ಎಂದೆನ್ನುವ ಮಕ್ಕಳೊಂದಿಗೆ ಮಕ್ಕಳಾಗಿ ಮಾರ್ದಗರ್ಶಿಯಾಗುವ ಕಾಲ.ಜೀವವೊಂದರ ಕೊನೆ ಮಗದೊಂದು ಜೀವದ ಹುಟ್ಟೆ ಆದರೆ ಮತ್ತದೆ ಬಾಲ್ಯ ಮರುಕಳಿಸೀತೂ ಎಂಭ ಆಸೆಯೊಂದಿಗೆ ಗುನುಗಲಡ್ಡಿಯಿಲ್ಲ ಕೆಳಗಿನ ಹಾಡು..... 

ಕರೆದು ಬಿಡು, 
ಬಂದುಬಿಡುವೆನೆಲ್ಲಿಂದಲೆ ಆಗಲಿ 
ಬೆಟ್ಟ ಹತ್ತಿ ಹೊಳೆಯ ದಾಟಿ 
ಯಾರೆ ನನ್ನ ತಡೆಯಲಿ....

2 comments:

  1. ಒಳ್ಳೆಯ ಲೇಖನ ರಾಘೂ. ಸಮಯೋಚಿತ ಹಾಡುಗಳೂ ಕೂಡ.

    ನೋಟ್ :"ನಾ ಕಲಿವೆ ಉರ್ಧ್ವಗಮನ" ಆಗಬೇಕು.

    ಐಬಿಕೆ.

    ReplyDelete
    Replies
    1. ಧನ್ಯವಾದ ಐಬಿಕೆ ಸಾರ್, ತಪ್ಪು ಸರಿ ಪಡಿಸಿರುವೆ. :)

      Delete