|
ಜಾತೀಯತೆ ತಾಳ ಮೇಳಗಳ ಜೊತೆ ಪ್ರಕೃತಿ ಮತ್ತು ಪರಿಸ್ಥಿತಿ ಕಲಿಸುವ ಪಾಠ -ವೈಧಿಕ. |
ಮೇಲೊಂದು ಕಟ್ಟಿಗೆ ಹೊರೆ,ಕಂಕುಳಕ್ಕೆ ತೂಗು ಹಾಕಿರುವ ಕತ್ತಿ,ಅಷ್ಟಿದ್ದರು ಕೈ ಬೀಸಿ ಬಿರು ಬೀಸನೆ ನಡೆಯುತಿದ್ದ ಚೋಮನ ನಡಿಗೆಯು ಒಮ್ಮೆಲೆ ಸ್ಥಭ್ದವಾಗಿ ಗಪ್ಪನೆ ನಿಂತಿದ್ದ.ಎದುರಿಗೆ ಕಚ್ಚೆ ಉಟ್ಟುಕೊಂಡು ಹೆಗಲಿಗೆ ಶಾಲು ಹಾಕಿ ಒಂದು ಜೋಳಿಗೆ ತೂಗು ಹಾಕಿಕೊಂಡು ತನ್ನ ಜನೀವಾರವನ್ನು ನೇವರಿಸುತ್ತ ಕೋಪದಿಂದ ನಿಂತಿದ್ದ ಸುಬ್ರಾಯ ಭಟ್ಟರನ್ನು ಕಂಡು. ಸುಬ್ರಾಯ ಭಟ್ಟರು ಹೆಗಡೆ ಹಳ್ಳಿಯ ಪೌರೋಹಿತ್ಯ ಕುಟುಂಬದವರು,ಪರ ಜಾತಿಯವರು ಎದುರಿಗೆ ಸಿಕ್ಕಲ್ಲಿ ಮೈಲಿಗೆ ಅಂತ ಬೊಬ್ಬಿರುದು ಬಯ್ಯ ನಿಲ್ಲುವ ವೈಧಿಕ.ಅಂತವರ ಎದುರು ಹೊಲೇರು ಅಂತ ಕರೆಸಿಕೊಳ್ಳುವ ಚೋಮ ನಿಂತಿದ್ದ,ಇನ್ನೇನನ್ನುತ್ತಾನೊ ಈ ಬ್ರಾಹ್ಮಣ ಎಲ್ಲಿ ಶಾಪ ಹಾಕಿ ಬಿಡುತ್ತಾನೊ ಅನ್ನೊ ಭಯದಿಂದ ಸುಬ್ರಾಯ ಭಟ್ಟ ಬಾಯಿ ತೆಗೆಯುವ ಮೊದಲೆ,ಮುಬ್ಬು ಕತ್ಲಲ್ವೆ!!!!!ಹಟ್ಟಿ ಬೇಗ ಸೇರ್ಕೊಂಡ್ಬಿಡೋಣ ಅಂಬೋ ಅವಸರ್ದಾಗೆ ಗೊತ್ತಾಗ್ಲಿಲ್ಲ ಬುದ್ದಿಯೋರ ಎಂದು ಪ್ರತ್ಯುತ್ತರಕ್ಕು ಕಾಯದೆ ಮುಂದಡಿ ಇರಿಸಿದ್ದ ಆ ದಿನ ಚೋಮ.ಸುಬ್ರಾಯ ಭಟ್ಟ ಬಾಯಲ್ಲೇ ಗೊಣಗುತ್ತ ಮನೆ ಕಡೆ ಹೊಂಟಿತ್ತು.
ಹೆಗಡೆ ಹಳ್ಳಿ ಮಡಿಕೇರಿಯ ಸೋಮವಾರ ಪೇಟೆಯಿಂದ ಒಂದು 10 ಮೈಲಿ ದೂರವಿರುವ ಹಳ್ಳಿ.ಹಳ್ಳಿಯ ಹಿಂದಡಿ ಸುಂದರ ಕುಮಾರ ಪರ್ವತದ ರಮಣೀಯ ದೃಶ್ಯ.ಆ ಊರು ಹೆಚ್ಚಿನ ಬ್ರಾಹ್ಮಣ ಕುಟುಂಬಗಳನ್ನು ಹೊಂದಿದ್ದು ಆ ಕುಟುಂಬಗಳ ಅಡಿಕೆ ತೋಟ ಮುಂತಾದುವದರಲ್ಲಿ ದುಡಿಯಲು ಬಂದ ಒಂದಷ್ಟು ಸಮಾಜದಲ್ಲಿ ಕೆಳ ಜಾತಿಗಳು ಎಂದು ಕರೆಯಲ್ಪಡುವ ಕುಟುಂಬಗಳು,ಒಂದಷ್ಟು ಮುಸ್ಲಿಂ ಕುಟು೦ಬಗಳು,ಬ್ರಿಟಿಷರ ಕಾಲದಿಂದ ನೆಲೆ ನಿಂತ ಒಂದೆರಡು ಕ್ರೈಸ್ತ ಕುಟುಂಬ.ಇತರೆ ಮಧ್ಯಮ ಜಾತಿ ಕುಟುಂಬಗಳು ಹೊಂದಿದ್ದ ಒಂದು ಸಣ್ಣ ಊರು ಅದು.ಊರಿನಲ್ಲೊಂದು ದೇಗುಲ.ಅದರ ಅರ್ಚಕರೆ ಈ ಸುಬ್ರಾಯ ಭಟ್ಟರು.ಊರ ಮಂದಿಯಿಂದ ಜಾತೀಯ ಹೆದರಿಕೆಗೊ, ಭಕ್ತಿ ಭಾವಕ್ಕೊ ಏನೋ ಒಟ್ಟಿನಲ್ಲಿ ಗೌರವಕ್ಕೆ ಪಾತ್ರರಾಗಿದ್ದವರು.ಆ ಊರಿಗೊಂದು ಏಕೋಪಾಧ್ಯಯ ಕಿರಿಯ ಪ್ರಾಥಮಿಕ ಶಾಲೆ.ಅದರ ಮೆಸ್ತರೆ ದೂರದ ಸುಳ್ಯದ ನಾವಡರು. ಜಾತಿಯಲ್ಲಿ ಅವರು ಬ್ರಾಹ್ಮಣರೆ ಆದರು ಆ ತನವನ್ನು ಸಂಸ್ಕಾರದಲ್ಲಿ ತನ್ನದಾಗಿಸಿ ಅಚಾರದಲ್ಲಿ ಮಾನವತೆ ಮೆರೆಯುವವರು. ಅದಕ್ಕೆ ಕಾರಣಗಳು ಇತ್ತು. ಅವರ ತಂದೆ ಮಿಲಿಟರಿಯಲ್ಲಿ ಇದ್ದವರು ತನ್ನೊಬ್ಬಳೆ ಮಗಳನ್ನು ತನ್ನ ಆತ್ಮೀಯ ಕೊರಗಪ್ಪ ಗೌಡರ ಮಗ ವಿವೇಕನಿಗೆ ಕೈಯೇರೆದು ಮದುವೆ ಮಾಡಿದ್ದರು,ಯಾರೊ ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ನಾನು ಒಬ್ಬ ವೇದ ಪುರಾಣಗಳು ತಿಳಿದುಕೊಂಡ ನಿಮ್ಮ ಪ್ರಕಾರದ ಅಚ್ಚ ಬ್ರಾಹ್ಮಣ ಏನು ಮಾಡಬೇಕಿತ್ತೊ ಅದನ್ನೇ ಮಾಡಿದ್ದೇನೆ, ನನಗೆಂದು ನನ್ನ ಸಂಸ್ಕೃತಿ ಜಾತೀಯತೆಯನ್ನು ಎಲ್ಲೂ ಕಲಿಸಿಲ್ಲ ತಾವಿನ್ನು ತೆರಳಬಹುದು ಅಂದು ಮುಖಕ್ಕೆ ಹೊಡೆದಂತೆ ನುಡಿದಿದ್ದರು,ಇಂತವರ ಮಗನಾದ ನಾವಡರ ವಿಚಾರಗಳು ಈ ತೆರವಾಗೆ ಇದ್ದು,ಟಿ ಸಿ ಹೆಚ್ ಕಲಿಕೆಯ ನಂತರ ಆರಿಸಿ ಬಂದ ಕೆಲಸದ ನಿಮಿತ್ತ ಈ ಹೆಗಡೆ ಹಳ್ಳಿ ಬಂದು ಸೇರಿದ್ದರು.
ನಾವಡರ ಈ ಎಲ್ಲ ಕಾರ್ಯಗಳಿಂದಾಗಿ ಹೆಚ್ಚಿನ ಚಿಂತೆಗೊಳಗಾದವರು ಎಂದರೆ ಆ ಊರಿನ ಜಾತಿ ಅಧಿಪತ್ಯದ ಮೂಲಕ ಅಳುತಿದ್ದ ಬ್ರಾಹ್ಮಣ ಕುಟುಂಬಗಳು ಅದರಲ್ಲೂ ಆ ದಳದ ನಾಯಕ ಸುಬ್ರಾಯ ಭಟ್ಟರು.ಈ ಪುಡಗೊಸಿ ಬ್ರಾಹ್ಮಣ ವೇಷದಾರಿ ನಾವಡ ಶಾಲೆಯನ್ನು ಹಾಗು ನಮ್ಮ ಮಕ್ಕಳನ್ನು ಮೈಲಿಗೆ ಮಾಡ ಹೊರಟಿದ್ದಾನೆ!!!! ಎಂದು ಬಹಿರಂಗವಾಗಿಯೆ ದೇವಳದ ಅಂಗಳದಲ್ಲಿ ಸೇರಿದ್ದ ಬ್ರಾಹ್ಮಣ ಸಮುದಾಯದವರೊಡನೆ ತನ್ನ ಅಸಮಧಾನ ತೋಡಿಕೊಂಡಿದ್ದರು.ತದ ನಂತರ ಒಂದು ಅಘೋಷಿತ ಬಹಿಷ್ಕಾರ ನಾವಡರ ಮೇಲೆ ಬ್ರಾಹ್ಮಣ ಕುಟುಂಬಗಳು ಹೇರಿದ್ದವು.ಇವೆಲ್ಲವೂ ನಾವಡರಿಗೆ ವಿಧಿತವಾಗಿ ತಿಳಿದರು ಕೂಡ ಅವಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಮೌನಕ್ಕೆ ಶರಣಾಗಿದ್ದರು.ಹೀಗಿರಬೇಕಾದರೆ ಅದೇ ಊರಿನ ಗಾಣಿಗ ಸಮಾಜಕ್ಕೆ ಸೇರಿದ ಅರುಣಳನ್ನು ತನ್ನ ಮನೆಯವರ ಒಪ್ಪಿಗೆ ಪಡೆದು ಅದ್ದೂರಿಯಾಗಿಯೇ ಮದುವೆಯಾದರು.ಅರುಣಳಾ ಮನೆ ಅಂಗಳದ ಮೂಲಕವೇ ಕೊಡುಕಲ್ಲ ಮೇಲೆ ಹೋಗುವ ದಾರಿ ಇದ್ದುದರಿಂದಲೊ ಏನೊ ಅವರಲ್ಲಿ ಕೊಡು ಕಲ್ಲಿನ ಕೃಪೆ ಇಂದ ಪ್ರೀತಿ ಉಕ್ಕಿತ್ತು, ನಾವ್ಯಾಕೆ ಮದುವೆಯಾಗಬಾರದು? ಎಂಭ ಮೊದಲ ಪ್ರಸ್ತಾಪ ನಾವಡರಿಂದಲೆ ಬಂದಿತ್ತು.ಅಚ್ಚರಿಯೊಂದಿಗೆ ಹೂಂ....... ಅನ್ನೋ ಪ್ರತಿಕ್ರಿಯೆಯೊಂದಿಗೆ ಅರುಣ ನಾಚಿ ನಿಂತಿದ್ದಳು.ಇಷ್ಟೆ!! ವಿಷಯ ನಾಡಿಗರ ಮೂಲಕ ತನ್ನ ತಂದೆಗೆ ರವಾನೆ ಆಯಿತು,ಮಗನ ಇಚ್ಚೆಯ ಮುಂದೆ ಉಳಿದಿದ್ದೆಲ್ಲ ಅವರಿಗೆ ಗೌಣವಾಗಿರಬೇಕಾದರೆ ಸಂತೋಷದಿಂದಲೆ ಅವರ ಸಮ್ಮತಿ ಕೂಡ ದೊರಕಿತ್ತು,ಊರ ಜನರಿಗೆ ಅಚ್ಚರಿ ಆದರು ನಾವಡರ ಯಾವುದೇ ಕಾರ್ಯವು ಸಂತೋಷದ್ದೆ ಆಗಿರುತ್ತದೆಂಬ ಅದಮ್ಯ ವಿಶ್ವಾಸವು ಇದ್ದುದರಿಂದ ಜನ ಸಂಭ್ರಮ ಪಟ್ಟರು.ಅಸಹ್ಯ ಪಟ್ಟುಕೊಂಡವರು ಅದೆ ಬ್ರಾಹ್ಮಣ ಪಂಗಡದವರು ಹಾಗು ದೇಗುಲ ಅರ್ಚಕ ಸುಬ್ರಾಯ ಭಟ್ಟರು.ನಾವಡರ ಈ ನಿರ್ಧಾರ ಅವರಿಗೆ ಘೋಷಿತ ಬಹಿಷ್ಕಾರ ಮತ್ತು ನಾವಡರಿಗೆ ದೇಗುಲ ಪ್ರವೇಶ ನಿಷಿದ್ದ ಅನ್ನುವ ಕಟ್ಟಪ್ಪಣೆಗಳು ಸುಬ್ರಾಯ ಭಟ್ಟರಿಂದ ಬಂದಿತ್ತು.ಅದೆಲ್ಲವನ್ನು ಮೌನವಾಗಿಯೆ ಸ್ವೀಕರಿಸಿದ ಊರ ಜನ ಶಾಲಾ ಮೈದಾನದಲ್ಲೆ ಚಪ್ಪರ ಹಾಕಿ ನಾವಡರ ಮತ್ತು ಅರುಣಲ ಮದುವೆಯನ್ನು ಸುಸೂತ್ರವಾಗಿ ನೆರವೇರಿಸಿದ್ದರು,ಊರ ಬ್ರಾಹ್ಮಣರ ಹೊರತಾಗಿ, ಜನ ಜಾತ್ರೆಯೆ ನೆರೆದಿತ್ತು,ನಾವಡರ ತಂದೆ ಖುದ್ದು ಹಾಜರಿದ್ದು ಮಂಗಳ ಕಾರ್ಯ ನೆರವೇರಿಸಿದ್ದರು.ಮದುವೆ ಮುಗಿಸಿದ ಮರುದಿನದ ಬೆಳಿಗ್ಗೆ ಅರುಣ ಕೊಡುಕಲ್ಲ ಕಡೆ ಮುಖ ಮಾಡಿ ತನ್ನ ಬಾಲ್ಯ ವಿವಾಹ ,ಒಂದೆ ವರ್ಷದಲ್ಲಿ ತೀರಿಕೊಂಡ ಆ ಬಾಲ್ಯ ಗಂಡ,ಮದುವೆ ಅಂದರೇನು ಅರಿತುಕೊಳ್ಳಲಾಗದ ವಯಸಲ್ಲಿ ವಿಧವೆ ಪಟ್ಟ,ಇದೆಲ್ಲವೂ ಗೊತ್ತಿದ್ದೂ ತನ್ನ ಮತ್ತೆ ಕೈ ಹಿಡಿಯಲು ಮುಂದೆ ಬಂದ ನಾವಡರು ಈ ಎಲ್ಲವನ್ನ ಯೋಚಿಸುತಿದ್ದಳು!!,ಕೊಡುಕಲ್ಲು ಹಾಗು ಅದರ ಹಿಂದಿನ ಕುಮಾರ ಪರ್ವತದ ಮುಸುಕಿದ್ದ ಮಂಜು ಮೆಲ್ಲನೆ ಕರಗುತ್ತಾ ಸೂರ್ಯ ಕಿರಣಗಳು ಅವುಗಳ ನಡುವೆ ನಗುತಿದ್ದವು.
ಸುಬ್ರಾಯ ಭಟ್ಟರ ಮಗಳು ಕಾವ್ಯ, ತನ್ನ ಪ್ರೌಡ ಶಿಕ್ಷಣ ಮುಗಿಸಿ ಸೋಮವಾರ ಪೇಟೆಯಲ್ಲಿ ಪದವಿ ಪೂರ್ವ ಕಾಲೇಜ್ ನಲ್ಲಿ ವಿಧ್ಯಾಭ್ಯಾಸ ಮುಂದುವರಿಸಿದ್ದಳು. ಪಿ ಯು ಸಿ ಮುಗಿದ ಕೂಡಲೆ ಮಗಳಿಗೊಂದು ಮದುವೆ ಮಾಡುವ ಯೋಚನೆ ಸುಬ್ರಾಯಭಟ್ಟ ಹಾಗು ಪತ್ನಿ ಸುಶೀಲ ಅಮ್ಮನದು.ಅದಕ್ಕಾಗಿ ದೂರದ ಮೈಸೂರಿನ ಅಡಿಗರ ಮಗ ಪೌರೋಹಿತ್ಯ ವೃತ್ತಿಯಲ್ಲೇ ಇರುವ ವಾಸುದೇವ ಅನ್ನುವ ವರನನ್ನು ಗೊತ್ತು ಮಾಡಿದ್ದರು.ಆದರೆ ಪಿ ಯು ಸಿ ಮುಗಿಸಿದ ಕಾವ್ಯ ತಾನು ಪದವಿ ಶಿಕ್ಷಣ ಪಡೆಯಲೆಬೇಕೆಂದು ದುಂಬಾಲು ಬಿದ್ದಿದ್ದರಿಂದ ಅನಿವಾರ್ಯವಾಗಿ ಒಪ್ಪಿದ್ದರು ಸುಬ್ರಾಯ ಭಟ್ಟರು.ದೂರದ ಮೈಸೂರ್ ನಲ್ಲೆ ಒಂದು ವಿದ್ಯಾರ್ಥಿನಿ ನಿಲಯಕ್ಕೆ ಸೇರ್ಪಡಿಸಿ ಕಾಲೇಜ್ ಸೇರಿಸಿ ಬಂದಿದ್ದರು.ಕಾವ್ಯ ಓದಿನಲ್ಲಿ ಜಾಣೆ,ಅವಳು ಸೇರಿದ ಕಾಲೇಜ್ ಪ್ರಭಾವವೋ ಏನೋ!!! ಪ್ರಬುದ್ದಳಾಗುತ್ತ ಸಾಗಿದ್ದಳು,ಹಲವಾರು ವಿಚಾರ ಬಗ್ಗೆ ಲೇಖನಗಳನ್ನು ಬರೆಯುತ್ತ ,ಹಲವಾರು ಸಾಮಾಜಿಕ ವಿಷಯಗಳ ಗೋಷ್ಠಿಗಳಲ್ಲಿ ಭಾಗವಹಿಸುತ್ತ ಉತ್ತಮ ವಾಗ್ಮಿಯಾಗಿಯೂ ಆಗಿ ರೂಪುಗೊಂಡಿದ್ದಳು.ಪದವಿ ಶಿಕ್ಷಣ ಮುಗಿಸಿ ಅದೆ ವಾಸುದೇವನ ಪ್ರಸ್ತಾಪ ಮನೆ ಇಂದ ಬಂದರು ಕೂಡಾ ಲೆಕ್ಕಿಸದೆ ತನ್ನ ಇಷ್ಟದ ಎಂ ಎಸ್ ಡಬ್ಲು ಉನ್ನತ ಶಿಕ್ಷಣಕ್ಕೆ ಸೇರಿಕೊಂಡಳು.ಆ ಮೂಲಕ ಸಾಮಾಜಿಕವಾಗಿ ತಾನು ಗುರುತಿಸಿಕೊಳ್ಳಬೇಕೆಂಬ ಹಾಗು ಸಮಾಜಕ್ಕೆ ನೆರವಾಗಬೇಕೆಂಬ ಉತ್ಕಟ ಹಂಬಲ ಅವಳದಿತ್ತು.ಹೀಗಿರಬೇಕಾದರೆ ತನ್ನ ಈ ಹಂತದಲ್ಲಿ ಪರಿಚಯವಾದ ಪೀಟರ್ ಇವಳ ಈ ಕನಸಿಗೆ ಬೆನ್ನೆಲುಬಾಗಿ ನಿಂತ.ಪೀಟರ್ ದೂರದ ಅಮೆರಿಕೆಯ ಕ್ಯಾಲಿಫೋರ್ನಿಯದವ,ವಿಶ್ವದಾದ್ಯಂತ ಸಾಮಾಜಿಕ ಕಾರ್ಯಗಳಿಗಾಗಿ ಎನ್ ಜಿ ಓ ಗಳನ್ನೂ ಸ್ಥಾಪಿಸಿದ್ದ.ಬದುಕು ಮತ್ತು ಮಾನವತೆ ಎಂಭ ವಿಚಾರ ಗೋಷ್ಠಿಗೆ ಆ ಕಾಲೇಜ್ ನವರು ಇವನನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಹ್ವಾನಿಸಿದ್ದರು.8 ದಿನ ನಡೆದ ಆ ಗೋಷ್ಠಿಯಲ್ಲಿ ಅವನ ವಿಚಾರಗಳು ಅನುಭವಗಳು ಕಾವ್ಯಳನ್ನು ಅತಿಯಾಗಿ ಸೆಳೆಯಿತು,ಪೀಟರ್ಗೂ ಅಷ್ಟೆ ಕಾವ್ಯಳು ಗೋಷ್ಠಿಯಲ್ಲಿ ಎತ್ತುತ್ತಿದ್ದ ಪ್ರಶ್ನೆ,ಕೆಲವೊಂದು ವಿಚಾರ ಮಂಡನೆಗಳ ಶೈಲಿ ನೋಡಿ,ತಾನೆಲ್ಲು ಕಾವ್ಯಳಂತ ಪ್ರತಿಭೆಯನ್ನು ಈ ಹಿಂದೆ ಕಂಡಿಲ್ಲ ಎಂದು ಎಲ್ಲರೆದುರೆ ಹೇಳಿದ್ದ.ತದ ನಂತರ ಇವರುಗಳ ನಡುವೆ ಫೋನ್,ಇಮೇಲ್ ಮುಂತಾದವು ಸಾಮಾನ್ಯವಾಗಿತ್ತು, ಹೆಚ್ಚಿನೆಲ್ಲ ವಿಚಾರಗಳು ತಮ್ಮ ವಿಷಯಾಧಾರಿತವಾಗೆ ಇರುತಿದ್ದವು.ಹೀಗೆ ಮುಂದುವರಿದ ಕಾವ್ಯಳ ವಿದ್ಯಾಭ್ಯಾಸ ಒಂದು ದಿನ ಕೊನೆಗೊಳ್ಳುತ್ತದೆ. ಕೂಡಲೆ ಪೀಟರ್ ನಿಂದ ತನ್ನ ಸಂಸ್ಥೆಗೆ ಸಂಭಂದ ಪಟ್ಟ ಒಂದು ರಿಸರ್ಚ್ಗೆ ಸಂಬಂಧಿಸಿದಂತೆ ಮುಕ್ತ ಆಹ್ವಾನ ಬರುತ್ತದೆ.ಖುಷಿ ಇಂದಲೆ ತನ್ನ ವಿದ್ಯಾರ್ಥಿನಿ ನಿಲಯವನ್ನು ಖಾಲಿ ಮಾಡಿ ತನ್ನ ಸಹಪಾಠಿಗಳನ್ನೆಲ್ಲ ಬೀಳ್ಕೊಟ್ಟು ಹೆಗಡೆ ಹಳ್ಳಿ ತನ್ನ ಮನೆಗೆ ತಲುಪಿದ್ದಳು ಕಾವ್ಯ.
ಮನೆಯಲ್ಲಿ ಸಂಭ್ರಮವೋ ಸಂಭ್ರಮ,ಶುಶೀಲ ಅಮ್ಮನಂತೂ ಮಗಳಿಗೆ ಇಷ್ಟವಾದ ಅಡುಗೆ ತಯಾರಿಕೆಯಲ್ಲಿ ಮುಳುಗಿದ್ದರು.ಸುಬ್ರಾಯ ಭಟ್ಟರು ಅಡಿಗರ ಮನೆಗೆ ಫೋನಾಯಿಸಿದ್ದರು , ಮಗ ವಾಸುದೇವನನ್ನು ಕರಕೊಂಡು ಊರ ಕಡೆ ಬಂದು ಹೋಗಿ ಎಂಬ ಆಮಂತ್ರಣವನ್ನು ನೀಡಿದ್ದರು.ವಾಸುದೇವ ಇನ್ನು ಮದುವೆಯಾಗದೆ ಕುಂತಿದ್ದ ಕಾರಣ ಕಾವ್ಯಗಾಗಿ ಅಲ್ಲ,ಬ್ರಾಹ್ಮಣ ಅದರಲ್ಲೂ ಪೌರೋಹಿತ್ಯ ವೃತ್ತಿಯವನಿಗೆ ಹೆಣ್ಣು ಸಿಗುತ್ತಿರಲಿಲ್ಲ.ಆದರೆ ಸುಬ್ರಾಯ ಭಟ್ಟರಿಗೆ ಅದೆಲ್ಲ ಯೋಚನೆಗೆ ಬರುತ್ತಿರಲಿಲ್ಲ.ಏನಾದರಾಗಲಿ ಈ ಸಾರಿ ಮದುವೆ ಮುಗಿಸಿಯೆ ತೀರಬೇಕೆಂದು ಧೃಡ ಸಂಕಲ್ಪ ತೊಟ್ಟಿದ್ದರು ಹಾಗು ಈ ಬಗ್ಗೆ ನಿನ್ನ ಮಗಳಿಗೂ ತಿಳಿಹೇಳು ಎಂದು ಶುಶೀಲ ಅಮ್ಮನಿಗೂ ಎಚ್ಚರಿಸಿದ್ದರು.ಈ ವಿಷಯ ಕಾವ್ಯಳಿಗೆ ತನ್ನ ಅಮ್ಮನ ಮೂಲಕ ತಿಳಿದಾಗ ನಿಜವಾಗಿಯೂ ಧೃತಿ ಕೆಟ್ಟು ಕುಳಿತಿದ್ದಳು.ಅವಳ ಕಣ್ಣೆದುರು ಇದ್ದುದು ಒಂದೆ ಅದು ತಾನು ಕಟ್ಟಿಕೊಳ್ಳುವ ಭವಿಷ್ಯ,ತನ್ನ ತಂದೆ ನೋಡಿದ ವರ ಈ ನಿಟ್ಟಿನಲ್ಲಿ ಯಾವುದಕ್ಕೂ ನಿಲುಕದವನು ಆಗಿದ್ದ,ಜೀವ ಬಿಟ್ಟೆನೆಯೆ ಹೊರತಾಗಿ ಈ ಮದುವೆಗೆ ಒಪ್ಪಿಗೆ ನೀಡಲಾರೆ ಅನ್ನುವ ನಿರ್ಧಾರಕ್ಕೆ ಬಂದಿದ್ದಳು.ಆದರೆ ತನ್ನ ತಂದೆ ತಾಯಿಗೆ ಇದ ತಿಳಿಸುವದೆ೦ತು ......? ದಿಕ್ಕು ತೋಚದಾಗಿತ್ತು ಕಾವ್ಯಳಿಗೆ.ಹೀಗಿರಬೇಕಾದರೆ ಅಡಿಗರ ಆಗಮನವಾಗಿತ್ತು ಮಗ ವಾಸುದೇವನೊಂದಿಗೆ.ಹುಡುಗಿ ನೋಡುವ ಶಾಸ್ತ್ರ ನಡೆಯಿತು ತದ ನಂತರ ಅಡಿಗರು ಏನಮ್ಮ ಈ ಮದುವೆಗೆ ನಿನ್ನ ಒಪ್ಪಿಗೆಯೂ?ಎಂದು ಕಾವ್ಯಳ ಮುಂದೆ ಪ್ರಶ್ನೆ ಇಟ್ಟಿದ್ದರು.ಹೂಂ...........ಒಪ್ಪಿಗೆ ಆದರೆ ಒಂದು ಶರತ್ತಿನ ಮೇಲೆ ಅಂದು ಪ್ರತಿಕ್ರಿಯೆ ತಿಳಿಯುವದಕ್ಕಾಗಿ ಎಲ್ಲರ ಮುಖವನ್ನೊಮ್ಮೆ ನೋಡಿದಳು.ಸುಬ್ರಾಯ ಭಟ್ಟರು ಏನು ತಿಳಿಯದೆ ಮಗಳ ಈ ಮಾತನ್ನು ಕೇಳಿ ಪ್ರತಿಕ್ರಿಯಿಸಲು ಆಗದೆ ಅಡಿಗರ ಮುಖ ನೋಡಿ,ಕಷ್ಟದಿಂದ ನಗು ಮೊಗದ ನಾಟಕವನ್ನಾಡಿದರು,ಅದೇನಮ್ಮ?ಹೇಳು.................!!!!!ಅಡಿಗರು ಮಾತು ಮುಂದುವರಿಸಿದ್ದರು.ಏನಿಲ್ಲ ನನಗೊಂದು ರಿಸರ್ಚ್ ಮಾಡಬೇಕಿದೆ ಅದಕ್ಕಾಗಿ ಅಮೆರಿಕೆಗೆ ಹೋಗಬೇಕು ಒಂದೆರಡು ವರ್ಷ ಅಷ್ಟೆ.ಆಮೇಲೆ ಮದುವೆ ಇಟ್ಟುಕೊಂಡರೆ ನನ್ನದೇನು ಅಭ್ಯಂತರವಿಲ್ಲ,ನಿಮಗೆ ಭರವಸೆ ಇಲ್ಲಾಂದ್ರೆ ಈಗಲೇ ನಿಶ್ಚಿತಾರ್ಥ ಬೇಕಾದರೆ ಮುಗಿಸಿ.ತಾನು ಅದಾಗಲೆ ಈ ಬಗ್ಗೆ ಒಪ್ಪಿಗೆ ಸೂಚಿಸಿರುವದರಿಂದ ಅನಿವಾರ್ಯತೆಗೆ ಸಿಲುಕಿದ್ದೇನೆ.ದಯವಿಟ್ಟು ಒಪ್ಪಿಕೊಳ್ಳಿ ಎಂದು ಬೀಸುವ ದೊಣ್ಣೆ ಏಟು ತಪ್ಪಿಸಿಕೊಳ್ಳಲು ಒಂದು ನಾಟಕವಾಡಿದ್ದಳು ಕಾವ್ಯ.ಸುಬ್ರಾಯ ಭಟ್ಟರು ಸುಮ್ನಿರು ನೀನು.......!! ಅಮೇರಿಕೆಯು ಇಲ್ಲ ಎಂತದು ಇಲ್ಲ,ತೆಪ್ಪಗೆ ಮದುವೆ ಆಗಬೇಕು ಅಷ್ಟೇ ಅಂತ ಅಬ್ಬರಿಸಿದ್ದರು.ಅಡಿಗರು ಒಂದು ನಿಮಿಷ ತೆಪ್ಪಗಾಗಿ ಸುಬ್ರಾಯ ಭಟ್ಟರಲ್ಲಿ ಬಹಳ ಏನು ವಯಸ್ಸು ಇಬ್ಬರಿಗೂ ಆಗಿಲ್ಲ.30- 31 ವರುಷಕ್ಕೆ ಈಗ ಮದುವೆಯಾಗುವದು ಮಾಮೂಲಿ .ನಮಗೂ ನಮ್ಮ ಸೊಸೆ ಅಮೆರಿಕೆಯಲ್ಲಿ ಇದ್ದು ಬಂದವಳು ಅನ್ನೊ ಹೆಮ್ಮೆ ಇರುತ್ತದೆ.ಹಾಗೆ ಅಗಲಿ ಬಿಡಮ್ಮ.ಅಷ್ಟಕ್ಕೂ 2 ವರುಷಗಳ ಮಾತು ತಾನೆ.ಹಾಗೆ ಆಗಲಿ ಬಿಡಮ್ಮ,ನಿಶ್ಚಿತಾರ್ಥ ಈಗಲೆ ಮುಗಿಸಿ ಬಿಡೋಣ ಅಂದರು.ಬೀಗರೆ ಹೀಗನ್ನಬೇಕಾದರೆ ಸುಬ್ರಾಯ ಭಟ್ಟರು ಮೌನರಾಗಿದ್ದರು,ಹಾಗೆ ಮುಂದಿನ ಕೆಲವೆ ಘಂಟೆಯಲ್ಲಿ ಆ ಊರಿನ ಬ್ರಾಹ್ಮಣ ಸಮುದಾಯದವರ ಎದುರು ವಾಸುದೇವ ಮತ್ತು ಕಾವ್ಯರುಗಳ ನಿಶ್ಚಿತಾರ್ಥ ನೆರವೇರಿತ್ತು.ಕಾರ್ಯಕ್ರಮ ಮುಗಿಸಿ ತೆರಳಬೇಕಾದರೆ ವಾಸುದೇವ ಕಾವ್ಯಳ ಮೊಗ ನೋಡಿ ಕಿರು ನಗೆ ಬೀರಿದ್ದ,ಕಾವ್ಯಳು ನಗೆ ತಡೆಯಲಾಗದೆ ಜೋರಾಗೆ ನಕ್ಕಿದ್ದಳು.ಅವಳಿಗೆ ಹರಕೆಯ ಕುರಿಯಂತೆ ಅವನ ಮೊಗ ಕಂಡಿತ್ತು,ಒಂದು ಸಣ್ಣ ಆತಂಕದೊಂದಿಗೆ ಏನನ್ನೊ ನೆನೆಸುತ್ತ ಹಾಗೆಲ್ಲ ಆಗಲಾರದು ಎಂದು ತನಗೆ ತಾನೇ ಸಮಾಧಾನ ಪಟ್ಟಿದ್ದೆಂದರೆ ಅದು ಆ ಹೊತ್ತಿನಲ್ಲಿ ಶುಶೀಲ ಅಮ್ಮ ಮಾತ್ರ.
ಹೀಗೆ ಅಮೆರಿಕ ಸೇರಿದ ಕಾವ್ಯ ಮೊದ ಮೊದಲಿಗೆ ತಿಂಗಳಿಗೆ ಒಮ್ಮೆಯಾದರು ಮನೆಗೆ ಫೋನಾಯಿಸುತಿದ್ದಳು.ಪತ್ರ ಬರೆಯುತಿದ್ದಳು.ಶುಶೀಲ ಅಮ್ಮನಿಗೆ ಮಗಳು ದೂರದಲ್ಲಿ ಇದ್ದಾಳೆ ಅನ್ನುವದೆ ದುಃಖದ ವಿಷಯವಾಗಿತ್ತು,ಮಗಳನ್ನು ನೆನಸಿ ಒಬ್ಬರೆ ಕೂತು ಅಳುತಿದ್ದರು ಕ್ರಮೇಣ ಪರಿಸ್ಥಿತಿಗೆ ಹೊಂದಿಕೊಂಡರು.ಅಡಿಗರು ಅವಾಗಾವಾಗ ಬಂದು ಹೋಗುತಿದ್ದರು,ಸುಬ್ರಾಯ ಭಟ್ಟರ ಅದೆ ವೈದಿಕತೆ ಮುಂದುವರಿದಿತ್ತು.ತನ್ನ ಮಗಳು ಅಮೆರಿಕೆಯಲ್ಲಿರುವದು ಊರಿಗೆ ಹೆಮ್ಮೆಯ ವಿಚಾರ ಅಂತ ಅವರೆ ಹೇಳಿಕೊಳ್ಳುತಿದ್ದರು.ಅದ್ಯಾಕೋ ಅವರ ಹೀಯಾಳಿಕೆ ನುಡಿಗಳಲ್ಲಿ ನಾಡಿಗರು ಅಗತ್ಯವಾಗಿ ಬಂದು ಹೋಗುತಿದ್ದರು.ಅದೆಲ್ಲವನ್ನು ಕಿವಿಗೆ ಹಾಕಿಕೊಳ್ಳದ ನಾಡಿಗರು ಮಾತ್ರ ಅದೇ ಚೋಮ,ರಾಮಣ್ಣ,ನೋಣಯ ಮುಂತಾದವರ ಒಡಗೂಡಿ ಪ್ರಕೃತಿ ಜೊತೆ ಲೀನವಾಗಿ ಅರುಣಳೊಂದಿಗಿನ ಸುಖ ಸಂಸಾರದಲ್ಲಿ ಮುಳುಗಿದ್ದರು.ಹೀಗಿರಬೇಕಾದರೆನೆ ಒಂದು ದಿನ ಪೋಸ್ಟ್ ಮ್ಯಾನ್ ವಸಂತ ಸುಬ್ರಾಯ ಭಟ್ಟರ ಮನೆ ಬಾಗಿಲು ಬಡಿದದ್ದು ಹಾಗು ಆ ಪತ್ರ ನೀಡಿದ್ದು.ಸುಬ್ರಾಯ ಭಟ್ಟರು ಕಾರ್ಯ ನಿಮಿತ್ತ ಸೋಮವಾರ ಪೇಟೆಗೆ ಹೋದುದರಿಂದ ಪತ್ರ ಪಡೆದ ಶುಶೀಲಮ್ಮ ಅದ ಓದಲು ತಿಳಿಯದೆ ವಸಂತನಲ್ಲೇ ಓದಲು ಹೇಳಿದರು.ಪತ್ರ ಕಾವ್ಯ ಬರೆದುದಾಗಿತ್ತು...............!!!!!!!!.ಆ ದಿನದ ಮುಬ್ಬು ಕತ್ತಲ ಸಂಜೆ ಭಟ್ಟರ ಆಗಮನವಾಗಿತ್ತು,ದೀಪಗಳ ಬೆಳಗದೆ ಇದ್ದ ತನ್ನ ಮನೆಯನ್ನು ನೋಡಿ ಅಚ್ಚರಿ ಪಟ್ಟಿದ್ದರು.ಶುಶೀ ........ಎಂದು ಕೂಗುತ್ತ ದೀಪ ಬೆಳಗಿದ್ದರು ಭಟ್ಟರು,ಪಡಸಾಲೆಯ ಕಂಬದ ಬದಿ ಕುಸಿದು ಕೂತಿದ್ದ ಶುಶೀಲ ಅಮ್ಮನನ್ನು ಅವರ ಮಡುಗಟ್ಟಿದ ದುಃಖದ ಮೊಗ ನೋಡಿ ಗಾಬರಿ ಇಂದ ಏನಾಯ್ತು ಶುಶೀ.........ಅಂದಿದ್ದರು.ತಡೆಯದ ದುಃಖದೊಂದಿಗೆ ಭಟ್ಟರನ್ನು ಅಪ್ಪಿ ಹಿಡಿದು ಅವರ ಕೈಯಲ್ಲಿ ಕಾವ್ಯಳ ಪತ್ರವನ್ನು ಇರಿಸಿದ್ದರು.ಭರದಿಂದಲೆ ಪತ್ರ ಬಿಡಿಸಿ ಓದಿದ್ದರು ಭಟ್ಟರು.ಪತ್ರದ ಒಕ್ಕಣೆ ಹೀಗಿತ್ತು.
"ಅಪ್ಪಾ.........ಹೇಗಿದ್ದೀರಿ?,ಅಮ್ಮನನ್ನ ನಿಮ್ಮನ್ನು ಇನ್ನು ಮುಂದೆ ಜೀವನ ಪೂರ್ತಿ ಮಿಸ್ ಮಾಡ್ಕೊತೀನಿ. ಕಾರಣ ಇಷ್ಟೇ ನಾನು ನಿಮ್ಮ ಜಾತಿಯ ವಾದಗಳ ಹಿಡಿತಕ್ಕೆ ಸಿಕ್ಕಿ ಒದ್ದಾಡುವದಕ್ಕೆ ಮನಸಿಲ್ಲ,ಅದೆಲ್ಲವನ್ನು ಮೆಟ್ಟಿ ನಿಂತು ಬಡವರ ಹಸಿವು ನೀಗಿಸಬೇಕೂಂತ ಹೊರಟವಳು ನಾನಪ್ಪ.ನಾನಿಲ್ಲಿ ಒಂದು ಎನ್ ಜಿ ಓ ಪ್ರಾರಂಭಿಸಿದ್ದೇನೆ ಅದ ಮೂಲಕ ಹಲವು ದೇಶಗಳ ಹಳ್ಳಿಯ ಜನಕ್ಕೆ ಅನುಕೂಲ ಮಾಡಿಕೊಡಬೇಕೆಂಬುದು ನನ್ನ ಉದ್ದೇಶ.ಬೇಸರಿಸದಿರಪ್ಪ ನೀನು ನೋಡಿದ ಆ ಹುಡುಗ ನನ್ನ ಈ ನಿರ್ಧಾರಗಳಿಗೆ ಬೆಂಬಲಿಸಲಾರ,ಆ ಮಟ್ಟಿನ ತಿಳುವಳಿಕೆಗಳು ಅವನಿಗಿರದು,ಅದಕ್ಕಾಗಿ ನಾನು ಈ ದಿನ ಇಲ್ಲಿಯೆ ನನ್ನ ಗೆಳೆಯ ಪೀಟರ್ ಅನ್ನುವವನ ಜೊತೆ ವಿವಾಹವಾಗಿದ್ದೇನೆ.ನಿನ್ನ ಬ್ಯಾಂಕ್ ಖಾತೆಗೆ ೨೦ ಲಕ್ಷ ನಗದನ್ನು ಹಾಕಿರುತ್ತೇನೆ.ಮುಂದೆ ಬೇಕಾದಲ್ಲಿ ಇಷ್ಟವಿದ್ದಲ್ಲಿ ತಿಳಿಸಬಹುದು.ದುಖಿಃಸದಿರಿ,ಒಂದು ವೇಳೆ ನಿಮಗೆ ಮನಶಾಂತಿ ಬೇಕಿದ್ದಲ್ಲಿ ನನ್ನ ತಿಥಿ ನೆರವೇರಿಸಿ ನಿಮ್ಮ ಪ್ರಕಾರ ಶ್ರಾದ್ದ ಕ್ರಿಯೆಯನ್ನು ನಡೆಸಬಹುದು.ವೈಧಿಕತನದಿಂದಲೆ ನಿಮಗೆ ಸಂತೋಷ ಸಿಗುವದಾದರೆ ಹೀಗೆ ಮಾಡಲು ನನ್ನ ಅಭ್ಯಂತರವಿಲ್ಲ.ನಾನು ನಿಮ್ಮ ಮಗಳಾಗಿಯೆ ಇರುತ್ತೇನೆ.ಆದರೆ ಮತ್ತೆ ನಿಮ್ಮಲ್ಲಿಗೆ ಹಿಂದಿರುಗಲಾರೆ, ಜೀವನದ ನಿರ್ಧಾರಘಟ್ಟಗಳೆ ಹಾಗಲ್ಲವೇನಪ್ಪ?ಇತರರಿಗೆ ದುಖಃವಾದರೂ ಸೈ ಒಳ್ಳೆ ಕಾರ್ಯದಲ್ಲಿ ಮುಂದುವರಿಯಬೇಕೆಂದು ನೀನೆ ಕಲಿಸಿರುವುದು ತಾನೆ.ನಿನ್ನ ದೃಷ್ಟಿಯಲ್ಲಿ ನಿನ್ನ ವೈಧಿಕತನವೆ ದೊಡ್ಡದು ಆದರೆ ನನಗೆ ಬಡವರ ಹಸಿವ ನೀಗೀಸೋದೆ ವೈಧಿಕತನ, ನಾನು ಅಮ್ಮ ನಿನ್ನನ್ನೂ ನೆನೆದು ಬರೀಯ ಅಳುತಿದ್ದೇನೆ, ಕಣ್ಣಿರ ಒಂದೆರಡು ಹನಿ ಪತ್ರದಲ್ಲು ಕಾಣಬಹುದು,ದೇವರ ಕೋಣೆ ಅಂತ ಏನೂ ಇಲ್ಲಪ್ಪ ಇಲ್ಲಿ ,ನನ್ನ ಬೆಡ್ಡಿನ ಮೇಲೆ ನಿಮ್ಮ ಪೊಟೋ ತೂಗು ಹಾಕಿರುವೆ, ಮಲಗುವಾಗಲೆಲ್ಲ ನಿಮ್ಮಗಳ ಬೆಚ್ಚಗಿನ ಕೈ ನನ್ನ ತಟ್ಟುತ್ತಿರುವಂತೆ ಭಾಸವಾಗುತ್ತೆ, ಅದೆ ಭಾವನೆಗಳಲ್ಲಿ ಬದುಕುವೆ, ಮುಂದೆ ಬರೆಯಲಾಗುತ್ತಿಲ್ಲ ಪಪ್ಪ, ಅಮ್ಮನನ್ನೂ..................!!!ಮುಂದೆ ಪತ್ರವೂ ಏನೊಂದು ವಿಷಯಗಳಿಲ್ಲದೆ ಖಾಲಿಯಾಗಿತ್ತು, ಇದ್ದರು ಭಟ್ಟರು ಓದಲಾಗುತ್ತಿರಲಿಲ್ಲ, ಪತ್ರ ಓದಿದ ಎದೆಗೆ ಯಾರೊ ರಭಸದಿಂದ ಚಾಕು ಇರಿದಂತಾಗಿತ್ತು ಭಟ್ಟರೀಗೆ!!!!!,ಅಲ್ಲೇ ಕುಸಿದು ಕೂತಿದ್ದರು,ಆ ದಿನ ರಾತ್ರಿ ದಂಪತಿಗಳಿಬ್ಬರು ಇಹ ಲೋಕದ ಪರಿವೆಯೆ ಇಲ್ಲದೆ ಮಲಗಿದ್ದರು,ಅವರಿಂದ ನಿದ್ರೆ ಅದೆಷ್ಟೋ ಮಾರು ದೂರ ಮಲಗಿತ್ತು!!!!!!!!.ಈ ವಿಷಯ ಕಾಳ್ಗಿಚ್ಚಿನಂತೆ ಪೋಸ್ಟ್ ಮ್ಯಾನ್ ವಸಂತನಿಂದಾಗಿ ಊರಲ್ಲಿ ಹಬ್ಬಿತ್ತು.ಹೆಚ್ಚಿನವರು ಕನಿಕರಿಸತೊಡಗಿದ್ದರು.ಅದು ಹೇಗೋ ಅಡಿಗರಿಗೂ ವಿಷಯ ತಿಳಿದಿತ್ತು,ಸುಬ್ರಾಯ ಭಟ್ಟ ತನ್ನ ಮಗನ ಭವಿಷ್ಯಕ್ಕೆ ಕೊಳ್ಳಿ ಇಟ್ಟವ ಅಂತ ಜರೆದು ಊರ ದೇಗುಲದಲ್ಲಿ ಬ್ರಾಹ್ಮಣ ಸಮುದಾಯದ ಪಂಚಾಯತಿ ಸೇರಿಸಿದ್ದರು ಅಡಿಗರು.ಬ್ರಾಹ್ಮಣ ಸಮುದಾಯದ ನಿರ್ಧಾರದಂತೆ ಇಷ್ಟೆಲ್ಲಾ ನಡೆದ ಮೇಲೆ ಭಟ್ಟರು ಪೂಜೆ ನಡೆಸಲು ಯೋಗ್ಯರಲ್ಲ.ಇನ್ನು ಮುಂದೆ ಈ ದೇಗುಲದ ಅರ್ಚಕರು ಅಡಿಗರ ಮಗ ವಾಸುದೇವ ಅನ್ನುವದು ನಿರ್ಧಾರ ಆಯಿತು.ಸುಟ್ಟ ಬರೆ ಮೇಲೆ ಉಪ್ಪು ಸುರಿದಂತ ಅನುಭವ ಭಟ್ಟರದ್ದು.ಯಾಕೊ ತಾನು ಪರಕೀಯ, ಏಕಾಂಗಿ ಅನಿಸತೊಡಗಿತ್ತು.ತೀರ ಭಟ್ಟರಿಗೆ ನಾವಡರು ನೆನಪಾಗಿ ಅವರ ಮನೆ ಮುಂದೆ ಮೊತ್ತ ಮೊದಲು ನಿಂತಿದ್ದರು ಆಚಾರ್ಯ ಸುಬ್ರಾಯ ಭಟ್ಟರು.ನಾವಡರು ಅತ್ಮೀಯತೆ ಇಂದಲೆ ಸ್ವಾಗತಿಸಿದ್ದರು,ಅವರ ಅತ್ಮೀಯತೆಯನ್ನು ನೋಡಿ ದುಖಃದಿಂದ ಭಟ್ಟರ ಬಾಯಿಂದ ಹೊರಟ ಒಂದೆ ಮಾತು "ಸಾಧ್ಯವಾದರೆ ಕ್ಷಮಿಸಿ ಬಿಡು ನಾವಡ"!!!!!ಅಷ್ಟೇ .........! ಹಿಂತುರಿಗಿ ನೋಡದೆ ತನ್ನ ಮನೆ ದಾರಿ ಹಿಡಿದಿದ್ದರು ಭಟ್ಟರು.
ಇತ್ತೀಚಿಗೆ ಭಟ್ಟರು ಮನೆ ಬಿಟ್ಟು ಹೊರಬರುವದೆ ಅಪರೂಪವಾಗಿ ಬಿಟ್ಟಿತ್ತು.ಸುಶೀಲಮ್ಮ ಇದೆ ವ್ಯಥೆಯಲ್ಲಿ ಕೊರಗಿ ಕೊರಗಿ ಕೃಶರಾಗಿದ್ದರು.ನಾವಡರು ಆಗಾಗ ಬಂದು ವಿಚಾರಿಸಿಕೊಂಡು ಹೋಗುತ್ತಿದ್ದರು,ಅವರ ಮನೆಗೆ ಬೇಕಾದ ಅಗತ್ಯ ಸಾಮಾಗ್ರಿ ಎಲ್ಲವನ್ನು ರಾಮಣ್ಣ ವಾರ ವಾರ ಕೊಟ್ಟು ಹೋಗುತಿದ್ದ.ಇಷ್ಟೆಲ್ಲಾ ನಡೆದ ಒಂದು ವರುಷದ ಒಳಗಾಗಿ ಶುಶೀಲಮ್ಮ ಇದೆ ಕೊರಗಲ್ಲಿ ಪ್ರಾಣ ಬಿಟ್ಟಿದ್ದರು.ಹೆಣಕ್ಕೆ ಹೆಗಲು ಕೊಟ್ಟವರು ಇದೆ ಚೋಮ,ಮಾದ, ನೋಣಯ್ಯ ಹಾಗು ನಾವಡರು.ತೂತು ಮಡಿಕೆ ಹಿಡಿದುಕೊಂಡು ಮುಂದೆ ಸಾಗುತಿದ್ದ ಭಟ್ಟರಲ್ಲಿ ಕಾಡುತಿದ್ದುದು ಒಂದೇ ಪ್ರಶ್ನೆ,ತಾನು ದಿನ ನಿತ್ಯ ಪೂಜೆಗಯ್ಯುತಿದ್ದ ದೇವಿ ನನ್ನ ಕೈಬಿಟ್ಟಳೆ!!!!!ಇದೆಲ್ಲ ಕಳೆದ ನಂತರ ಇವರಿಗೆ ನಾವಡರ ಹೆಂಡತಿ ಅರುಣ ತಂದು ಕೊಡುವ ಎರಡು ಹೊತ್ತಿನ ಊಟವೆ ಪರಮಾನ್ನವಾಗಿತ್ತು, ಮನೆ ಕೆಲಸವನ್ನು ಇದೆ ಚೋಮನ ಹೆಂಡತಿ ಪಾರ್ವತಿ ಮಾಡಿ ಮುಗಿಸುತಿದ್ದಳು,ದಿನವು 2 ಬಾರಿ ನಾವಡರು ಬಂದು ವಿಚಾರಿಸತೊಡಗಿದರು,ಭಟ್ಟರ ತೋಟದ ಕೆಲಸವನ್ನು ನೋಣಯ ಅಚ್ಚು ಕಟ್ಟಾಗಿ ಮುಗಿಸುತಿದ್ದ.ಇಷ್ಟೆಲ್ಲಾ ಆದರು ಕೂಡ ಒಂದು ಕಾಲದ ಬ್ರಾಹ್ಮಣ ಸಮುದಾಯದ ನೇತ್ರತ್ವ ವಹಿಸಿದ್ದ ಇವರನ್ನು ಯಾವೊಬ್ಬ ಬ್ರಾಹ್ಮಣನು ಹೇಗಿದ್ದೀರಿ? ಎಂದು ವಿಚಾರಿಸಲು ಇವರತ್ತ ಸುಳಿಯಲಿಲ್ಲ.ಜಾತೀಯತೆಯ ಹುಂಬತನ ನನ್ನನ್ನು ಹೇಗೆ ಮೂಡನನನ್ನಾಗಿಸಿತ್ತು!!,ನಾನು ಎಷ್ಟೆಲ್ಲಾ ಎಲ್ಲಾ ಇದ್ದು ಕಳಕೊಂಡೆ?ನನ್ನವರು ಯಾರು?ಪರಕೀಯರು ಯಾರು? ತಿಳಿದುಕೊಳ್ಳಲು ನನ್ನ 65 ವಯಸ್ಸು ಸಾಕಾಗಲಿಲ್ಲ ಅಲ್ಲವೆ ?ಅದ್ಯಾಕೆ ಈ ಎರಡು ವರ್ಷ ಇವೆಲ್ಲವನ್ನೂ ನನಗೆ ಕಲಿಸಿಕೊಡುತ್ತಿದೆ!!!!!?ಸಾವಿರಾರು ಉತ್ತರ ದೊರಕದ ಪ್ರಶ್ನೆಗಳನ್ನ ಪ್ರಶ್ನಿಸುತ್ತಲೆ ತನ್ನ ಏಕಾಂತವನ್ನು ಕಳೆಯುತಿದ್ದರು ಭಟ್ಟರು.ಅದೇನು ಅನಿಸಿತೊ ಏನೊ ಒಂದು ದಿನ ಮುಂಜಾನೆಯೆ ಎದ್ದ ಭಟ್ಟರು ಸೋಮವಾರ ಪೇಟೆ ಕಡೆ ಬಹಳ ತಿಂಗಳುಗಳ ನಂತರ ಹೆಜ್ಜೆ ಹಾಕಿದ್ದರು.ಸಂಜೆ ವಾಪಸಾದ ಮೇಲೆ ನಾವಡರನ್ನು ಕರೆಸಿ ಒಂದು ವಿಲ್ ಬರೆದಿಟ್ಟಿದ್ದೇನೆ ನನ್ನ ಮರಣದ ನಂತರ ಇದ ಓದತಕ್ಕದ್ದು ಅಂತ ಅವ್ರ ಕೈಗೆ ಇಟ್ಟಿದ್ದರು ಭಟ್ಟರು.ಇದಾದ ಮೂರೆ ವಾರಗಳಲ್ಲಿ ಭಟ್ಟರು ಕೂಡ ಇಹ ಲೋಕದ ಯಾತ್ರೆ ಮುಗಿಸಿ ಪರ ಲೋಕದ ಕಡೆ ಹೆಜ್ಜೆ ಹಾಕಿದ್ದರು,ಯಥಾ ಪ್ರಕಾರ ನಾವಡರು ಮುಂದೆ ನಿಂತು ಮಗನಾಗಿ ಎಲ್ಲ ಕಾರ್ಯಗಳನ್ನು ಪೂರೈಸಿ ಕಷ್ಟದಿಂದ ಕಾವ್ಯಳ ವಿಳಾಸ ಪತ್ತೆ ಹಚ್ಚಿ ವಿಷಯಗಳನ್ನು ತಿಳಿಸುವ ಸಲುವಾಗಿ ಒಂದು ಪತ್ರ ಗೀಚಿ ಸುಮ್ಮನಾಗಿದ್ದರು.
ಇದೆಲ್ಲ ಆಗಿ ೬ ವರುಷ ಕಳೆದಿದೆ.ಈಗ ಹಗ್ಗಡೆ ಹಳ್ಳಿಗೆ ಒಂದು ಸುಸಜ್ಜಿತ ರಸ್ತೆ ಇದೆ ,ಕಿರಿಯ ಪ್ರಾಥಮಿಕ ಶಾಲೆ ಹಿರಿಯ ಪ್ರಾಥಮಿಕ ಶಾಲೆಯಾಗಿದೆ.ಫ್ರೌಢ ಹಾಗು ಪದವಿ ಪೂರ್ವ ಕಾಲೇಜ್ ಇದೆ.ಗ್ರಂಥಾಲಯ,ಅರೋಗ್ಯ ಕೇಂದ್ರ ,ಸಮುದಾಯ ಭವನ.ಕುಡಿಯುವ ನೀರು ಹೀಗೆ ಎಲ್ಲ ಸೌಲಭ್ಯವನ್ನು ಪಡೆದಿದೆ.ಇವೆಲ್ಲ ಕೆಲಸಗಳ ನಡುವೆ ಒಂದು ಬೋರ್ಡ್ ತಗುಲಿ ಹಾಕಿಕೊಂಡಿದೆ.ಎಲ್ಲ ಬೋರ್ಡ್ ನಲ್ಲೂ ಇರುವ ಒಂದು ಸಾಮಾನ್ಯ ಪದ "ಕೊಡುಗೆ ದಿ||ಸುಶೀಲ ಸುಬ್ರಾಯ ಭಟ್ಟರ ಸ್ಮಾರಕ ಟ್ರಷ್ಠ್ "ಎಂಬುದು. ಹೌದು ಸುಬ್ರಾಯ ಭಟ್ಟರ ವಿಲ್ ನಲ್ಲಿ ತನ್ನ ಸಕಲ ಚರಾಚರ ಅಸ್ತಿಯನ್ನು ಊರ ಜನಕ್ಕೆ ದಾನ ಮಾಡಿದ್ದರು, ಅದ ಪರಭಾರೆ ನಡೆಸುವ ಅಧಿಕಾರವನ್ನು ನಾವಡರಿಗೆ ಬಿಡಲಾಗಿತ್ತು.ಆ ಮೂಲಕ "ದಿ||ಸುಶೀಲ ಸುಬ್ರಾಯ ಭಟ್ಟರ ಸ್ಮಾರಕ ಟ್ರಷ್ಠ್" ರೂಪು ಪಡೆದು ತನ್ನ ಕೆಲಸ ಪ್ರಾರಂಭಿಸಿತ್ತು.ಮುಂದಿನ ವರ್ಷಗಳಲ್ಲಿ 15 ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ ಸಿದ್ದತೆಯಲ್ಲೂ ತೊಡಗಿತ್ತು. ಈ ಮೂಲಕ ಸುಬ್ರಾಯ ಭಟ್ಟರ ವೈಧಿಕತನ ಮೆರೆದಿತ್ತು.ಇದೆಲ್ಲದರ ಹಿಂದೆ ಬಲವಾಗಿ ನಿಂತಿದ್ದು ಇದೆ ನಾವಡರು, ಚೋಮ, ರಾಮಣ್ಣ, ನೋಣಯ ಅಲ್ಲದೆ ದೂರದ ಊರಿನಲ್ಲಿದ್ದು ಅರ್ಥಿಕ ಹಾಗು ಆಡಳಿತಾತ್ಮಕ ಬೆನ್ನೆಲುಬಾಗಿ ನಿಂತವರು ಇದೆ ಸುಬ್ರಾಯ ಭಟ್ಟರ ಮಗಳು ಕಾವ್ಯ.ಮೂಕ ಸಾಕ್ಷಿಯಾಗಿ ನಿಂತು ಮಂಜಿನಾಟದಲ್ಲಿ ತಲ್ಲಿನವಾಗಿದ್ದು ಅದೆ ಕೊಡು ಕಲ್ಲ ಗುಡ್ಡ , ಹಾಗು ಅದರ ಹಿಂದಿನ ಕುಮಾರ ಪರ್ವತ.